Friday, August 17, 2007

ನಾಗರ ಪಂಚಮಿ ಮತ್ತು ಮದರಂಗಿ ಸಂಭ್ರಮ

ನಾಗರ ಪಂಚಮಿಗೆ ನಮ್ಮನೆಯಲ್ಲಿ ಯಾವಾಗಲೂ ಎಳ್ಳುಂಡೆಯನ್ನೇ ಮಾಡುವುದು. ಬೆಳಗ್ಗೆ ಬೇಗ ಸ್ನಾನ ಮಾಡಿ, ಮಡಿಯಲ್ಲೇ ಬೆಲ್ಲದ ಪಾಕ ಮಾಡಿ, ಅದರಲ್ಲಿ ಹುರಿದ ಎಳ್ಳು ಸೇರಿಸಿ, ಮತ್ತೊಂದಷ್ಟು ಶೇಂಗ ಅದೂ ಇದೂ ಬೆರೆಸಿ, ಪಾಕ ಬಂದಮೇಲೆ ಇಳಿಸಿ, ಇನ್ನೂ ಬಿಸಿ ಬಿಸಿ ಇರುವಾಗಲೇ ಉಂಡೆ ಕಟ್ಟುತ್ತಿದ್ದ ಅಮ್ಮ... ಸ್ನಾನವಾಗಿದ್ದರೆ ಉಂಡೆ ಕಟ್ಟಲು ಸಹಾಯ ಮಾಡುತ್ತಿದ್ದ ನಾನು... ಬಿಸಿಗೆ ಕೈ ಉರಿಹುಟ್ಟಿ, ಉಂಡೆ ಕಟ್ಟಲಾಗದೇ, 'ಉಫ್ ಉಫ್' ಎನ್ನುತ್ತಾ ಕೈ ನೋಡಿಕೊಳ್ಳುತ್ತಿದ್ದ ನನಗೆ 'ಸಾಕು, ನಿಂಗೆ ಬರಿಯಕ್ಕಾಗದಿಲ್ಲೆ ಕೊನಿಗೆ.. ಗುಳ್ಳೆ ಬರ್ತು.. ನಂಗಾದ್ರೆ ಅಡಿಕೆ ಸುಲ್ದೂ ಸುಲ್ದೂ ಕೈ ಜಡ್ಡುಗಟ್ಟಿದ್ದು..' ಎನ್ನುತ್ತಿದ್ದ ಅಮ್ಮ... ಅಮ್ಮ ಆಚೆ ತಿರುಗಿದ್ದಾಗ ಒಂದು ಪುಟ್ಟ ಉಂಡೆಯನ್ನು ಬಾಯಿಗೆ ಸೇರಿಸುತ್ತಿದ್ದ ನಾನು... ಫಕ್ಕನೆ ಇತ್ತ ತಿರುಗಿದ ಅಮ್ಮ 'ಏಯ್ ಇನ್ನೂ ನೈವೇದ್ಯ ಆಗಲ್ಲೆ.. ನಾಗರ ಹಾವಿಗೆ ಸಿಕ್ಕಾಪಟ್ಟೆ ಮಡಿ..' ಎಂದು ಹೆದರಿಸುತ್ತಿದ್ದ ಅಮ್ಮ... ಹೊರಗೋಡಿಹೋಗುತ್ತಿದ್ದ ನಾನು...

ಆಗ ಭಾಗ್ಯತ್ಗೆಯೂ ನಮ್ಮನೆಯಲ್ಲೇ ಓದಲಿಕ್ಕಿದ್ದಳು. ಅಜ್ಜ, ಅಜ್ಜಿ ಮತ್ತು ಭಾಗ್ಯತ್ಗೆಯರನ್ನು ಮನೆಯಲ್ಲಿ ಬಿಟ್ಟು ಮಧ್ಯಾಹ್ನ ಹನ್ನೆರಡೂವರೆ ಹೊತ್ತಿಗೆ ಮಡಿ ಉಟ್ಟ ಅಪ್ಪ, ಅಮ್ಮ, ನಾನು ಅರಳೀಕಟ್ಟೆ ಬಳಿಯಿರುವ ನಾಗರ ಕಲ್ಲಿಗೆ ಪೂಜೆ ಮಾಡಲು ಹೊರಡುತ್ತಿದ್ದೆವು. ಒಂದು ದೊಡ್ಡ ಹರಿವಾಣದಲ್ಲಿ ದೀಪದ ಗಿಣಗಲು, ಕುಂಕುಮ ಪಂಚವಾಳ, ಊದುಬತ್ತಿ, ಕರ್ಪೂರ, ತೆಂಗಿನಕಾಯಿ, ಪುಟ್ಟ ಘಂಟೆ, ತಾಳಿಸೌಟು ಹಿಡಿದು ಮುಂದೆ ನಡೆಯುತ್ತಿದ್ದ ಅಪ್ಪ; ಝಾಂಗ್ಟೆ, ಮಣೆ, ಬಾಳೆ ಎಲೆ ಹಿಡಿದು ಅಪ್ಪನ ಹಿಂದೆ ನಡೆಯುತ್ತಿದ್ದ ನಾನು; ದಾರಿಯಲಿ ಸಿಕ್ಕ ಗಂಗಕ್ಕನಿಗೆ 'ನಿಮ್ಮನೆ ಪೂಜ್ಯಾತನೇ?' ಎಂದು ಕೇಳುತ್ತಾ ನೈವೇದ್ಯಕ್ಕೆ ಹಾಲು, ಎಳ್ಳುಂಡೆ, ಸಕ್ಕರೆ ಹಿಡಿದು ಹಿಂದಿನಿಂದ ಬರುತ್ತಿದ್ದ ಅಮ್ಮ...

ಅರಳೀಕಟ್ಟೆಯ ಬಳಿ ಬೀಸುತ್ತಿದ್ದ ಗಾಳಿಯಲ್ಲಿ ದೀಪ ಹಚ್ಚುವುದು ಪ್ರಯಾಸದ ಕೆಲಸವಾಗಿರುತ್ತಿತ್ತು. ಹಚ್ಚಿದ ದೀಪ ನಿಲ್ಲುತ್ತಲೇ ಇರಲಿಲ್ಲ. 'ಹಾವೇನಾದ್ರೂ ಬೈಂದಾ ನೋಡು.. ಒಂದೊಂದ್ಸಲ ನಾವು ಪೂಜೆ ಸರಿಯಾಗಿ ಮಾಡ್ತ್ವಾ ಇಲ್ಯಾ ಅಂತ ನೋಡಕ್ಕೆ ಬರ್ತಡ..' ಎಂದು ಪ್ರತಿವರ್ಷವೂ ಹೇಳುತ್ತಿದ್ದ ಅಮ್ಮ, ಕಾತರಿಸಿ ನೋಡುತ್ತಿದ್ದ ನಾನು, ಒಂದು ವರ್ಷವೂ ಪ್ರತ್ಯಕ್ಷವಾಗದ ಹಾವು.. ಅದಾಗಲೇ ಊರವರನೇಕರು ಪೂಜೆ ಮಾಡಿ ಹೋಗಿರುತ್ತಿದ್ದರು. ಕಲ್ಲಿನ ಮೇಲೆ ಸುರಿದಿರುತ್ತಿದ್ದ ಅರಿಶಿಣ, ಕುಂಕುಮ.. ಕೆಂಪು ದಾಸವಾಳದ ಹೂಗಳು, ಪುಟ್ಟ ತುಂಬೆ ಹೂಗಳು.. ಕಲ್ಲಿನ ಬುಡದಲ್ಲಿಟ್ಟಿರುತ್ತಿದ್ದ ನೈವೇದ್ಯದ ಸಿಹಿ.. ಅದಕ್ಕೆ ಮುತ್ತಲು ಸಾಲುಗಟ್ಟಿ ಬರುತ್ತಿದ್ದ ಕಟ್ಟಿರುವೆಗಳು.. ಯಾರೋ ಹಚ್ಚಿಟ್ಟುಹೋಗಿದ್ದ ಊದುಬತ್ತಿ ಹೊಗೆಯ ಪರಿಮಳದೊಂದಿಗೆ ಬೆರೆಯುತ್ತಿದ್ದ ನಮ್ಮನೆ ಊದುಬತ್ತಿಯ ಪರಿಮಳ.. ಅಪ್ಪ ಚುಟುಕಾಗಿ ಪೂಜೆ ಮುಗಿಸಿ, ನಾವು ಅರಳೀಕಟ್ಟೆ ಸುತ್ತಿ ಸಾಷ್ಟಾಂಗ ನಮಸ್ಕಾರ ಮಾಡಿ, ದಾರಿಯಲ್ಲಿ ಸಿಕ್ಕವರಿಗೆಲ್ಲ ಪ್ರಸಾದ ಕೊಟ್ಟು, ಮನೆಗೆ ಮರಳುವಷ್ಟರಲ್ಲಿ ಹೊಟ್ಟೆ ತಾಳ ಹಾಕುತ್ತಿರುತ್ತಿತ್ತು. ಅಷ್ಟರಲ್ಲಾಗಲೇ ಅಜ್ಜಿ-ಭಾಗ್ಯತ್ಗೆ ಸೇರಿ ಊಟಕ್ಕೆ ರೆಡಿ ಮಾಡಿಟ್ಟಿರುತ್ತಿದ್ದರು. ಮನೆ ದೇವರಿಗೆ ಪೂಜೆ ಮಾಡಿ, ಮಡಿ ಬಿಚ್ಚಿಹಾಕಿ ಅಪ್ಪ ಊಟಕ್ಕೆ ಬಂದಮೇಲೆ ಬಾಳೆಯ ಮೇಲೆ ಅನ್ನ ಬೀಳುತ್ತಿತ್ತು. ಬಿಸಿ ಬಿಸಿ ಗಮ್ಮತ್ ಊಟ. ಸಿಹಿ ಊಟ ಮಾಡಿದಮೇಲೆ ಕವಳ ಹಾಕಲೇಬೇಕು. ಅಜ್ಜನ ಬಳಿ ಕಾಡಿ, ಒಂದೊಳ್ಳೆ ಕವಳ ಮಾಡಿಸಿಕೊಂಡು, ಅದಕ್ಕೆ ಸಕ್ಕರೆ, ಕೊಬ್ರಿ ಹಾಕಿಸಿಕೊಂಡು, ನಾನು ಭಾಗ್ಯತ್ಗೆ ಬಾಯಿಗಿಟ್ಟುಕೊಳ್ಳುತ್ತಿದ್ದೆವು. ಆಮೇಲೆ ಕನಿಷ್ಟ ಎರಡು ತಾಸು ನಿದ್ರೆ.

ನಾಗರ ಪಂಚಮಿಯ ದಿನ, ಸಂಭ್ರಮವೆಂಬುದು ಬೆಳಗಿನಿಂದ ಮಧ್ಯಾಹ್ನದ ವರೆಗೆ ರಾಕ್ ಮ್ಯೂಸಿಕ್ಕಿನಂತೆ ಸಾಗಿ, ಮಧ್ಯಾಹ್ನದ ನಂತರ ಕನ್ನಡ ಚಿತ್ರಗೀತೆಯಂತೆ ಮುಂದುವರೆದು, ಸಂಜೆಯ ಮೇಲೆ ಭಾವಗೀತೆಯಾಗಿ, ರಾತ್ರಿಯಾಗುವಷ್ಟರಲ್ಲಿ ಅಮ್ಮನ ಮೆಲುದನಿಯ ಹಾಡಿನಂತೆ ಆಗಿಬಿಡುತ್ತಿತ್ತು. ಏಕೆಂದರೆ, ನಾಗರ ಪಂಚಮಿಯ ರಾತ್ರಿ ಮನೆಯವರೆಲ್ಲರಿಗೂ ಬೆರಳುಗಳಿಗೆ ಮದರಂಗಿ ಕಟ್ಟಿಸಿಕೊಳ್ಳುವ ರಾತ್ರಿ.. ಅಂದು ಸಂಜೆ ನಾಲ್ಕರ ಹೊತ್ತಿಗೇ ಶೆಟ್ಟಿ ಮಾಬ್ಲನ ಮನೆಗೆ ಮದರಂಗಿ ಸೊಪ್ಪು ಕೊಯ್ಯಲು ನಾವು ಹುಡುಗರು ಹೋಗುತ್ತಿದ್ದೆವು. ಅವರ ಮನೆ ಅಂಗಳದಲ್ಲಿ ದೊಡ್ಡವೆರಡು ಮದರಂಗಿ ಗಿಡಗಳಿದ್ದವು. ನಾನು, ಗುಂಡ, ಮಧು, ಭಾವನ, ಶ್ವೇತ.. ಹೀಗೆ ಮಕ್ಕಳೆಲ್ಲ ಕವರು ಹಿಡಿದು ಹೋಗುತ್ತಿದ್ದುದು. ಸಾಕೆನಿಸುವಷ್ಟು ಕೊಯ್ದು, ಮನೆಗೆ ಓಡೋಡಿ ಬಂದು ಅಮ್ಮನಿಗೋ ಅಜ್ಜಿಗೋ ಬೀಸಲು ಕೊಟ್ಟು ನಾವು ಹಾಲವಾಣದ ಮರ ಹುಡುಕಿಕೊಂಡು ಬ್ಯಾಣಕ್ಕೆ ಹೋಗುತ್ತಿದ್ದೆವು. ದೊಡ್ಡದೊಡ್ಡ ಎಲೆಗಳನ್ನು ನಾವು ಕೊಯ್ದು ತರುವಷ್ಟರಲ್ಲಿ ಒಳ್ಳುಕಲ್ಲ ಮುಂದಿಂದ ಅಮ್ಮ ಅಥವಾ ಅಜ್ಜಿ ಮದರಂಗಿ ಚಟ್ನಿಯೊಂದಿಗೆ ನಿಧಾನಕ್ಕೆ ಏಳುತ್ತಿರುತ್ತಿದ್ದರು. ಬೀಸಿದ್ದಕ್ಕೇ ಅವರ ಕೈ ಎಷ್ಟು ಕೆಂಪಾಗುತ್ತಿತ್ತು..! ಅವತ್ತು ಸ್ವಲ್ಪ ಬೇಗನೇ ಊಟ ಮಾಡಿ, ಎಲ್ಲಾ ಕೆಲಸಗಳನ್ನೂ ಮುಗಿಸಿ, ಉಚ್ಚೆ-ಗಿಚ್ಚೆ ಮಾಡಿ ಬಂದು, ಹಾಸಿಗೆ ಸಹ ಹಾಸಿಟ್ಟುಕೊಂಡು, ಮದರಂಗಿ ಕಟ್ಟಿಸಿಕೊಳ್ಳಲಿಕ್ಕೆ ಅಣಿಯಾಗುತ್ತಿದ್ದೆವು ಎಲ್ಲರೂ..

ಆ ರಾತ್ರಿ ಮನೆಯಲ್ಲೊಂದು ಹದವಾದ ಆಪ್ತ ವಾತಾವರಣವಿರುತ್ತಿತ್ತು.. ಅಪ್ಪನೇ ಎಲ್ಲರಿಗೂ ಮದರಂಗಿ ಚಟ್ನಿ ಕಟ್ಟುತ್ತಿದ್ದುದು.. ಮೊದಲು ನನ್ನ ಪುಟ್ಟ ಪುಟ್ಟ ಬೆರಳುಗಳಿಗೆ, ಉಗುರಿನ ಮೇಲೆ ಚಟ್ನಿಯನ್ನು ಮೆತ್ತಿ, ಹಾಲವಾಣದ ಎಲೆಯಿಂದ ಅದನ್ನು ಮುಚ್ಚಿ, ದಾರ ಕಟ್ಟುತ್ತಾ 'ಬಿಗಿ ಸಾಕಾ?' ಕೇಳುತ್ತಿದ್ದ. ನಾನು 'ಸಾಕು' ಎಂದಾಕ್ಷಣ ಅಲ್ಲಿಗೇ ನಿಲ್ಲಿಸಿ ಗಂಟು ಹಾಕುತ್ತಿದ್ದ. ನನ್ನೆಲ್ಲಾ ಕೈಬೆರಳುಗಳಿಗೆ ಕಟ್ಟಿಯಾದಮೇಲೆ ಭಾಗ್ಯತ್ಗೆಗೆ. ಅವಳು ಸಾಮಾನ್ಯವಾಗಿ ಒಂದೇ ಕೈಗೆ ಕಟ್ಟಿಸಿಕೊಳ್ಳುತ್ತಿದ್ದುದ್ದು. ಏಕೆಂದರೆ ಇನ್ನೊಂದು ಕೈಯಲ್ಲಿ ಹಿಂದಿನ ದಿನ ತಾನೆ ಹಚ್ಚಿದ ನೈಲ್‍ಪಾಲಿಶ್ ಇರುತ್ತಿತ್ತು! ಆಮೇಲೆ ಅಮ್ಮನಿಗೆ. ಅಮ್ಮ ಹಾಗೆ ಕಟ್ಟಿಸಿಕೊಳ್ಳುವಾಗ ಅಪ್ಪನ ಮುಖವನ್ನೇ ನೋಡುತ್ತಿರಲಿಲ್ಲ. ಬರೀ ನನ್ನನ್ನು ನೋಡುತ್ತಿದ್ದಳು. ನಾನು ಅಮ್ಮನ ಕೈಬೆರಳನ್ನು ಅಪ್ಪ ಕಟ್ಟುತ್ತಿದ್ದ ಹಗ್ಗ ಸುತ್ತಿ ಸುತ್ತಿ ಬರುವುದನ್ನೇ ತದೇಕಚಿತ್ತದಿಂದ ನೋಡುತ್ತಿದ್ದೆ. ಆಮೇಲೆ, ಕವಳ ತುಪ್ಪಿ ಬಂದ ಅಜ್ಜಿಯೂ 'ಯಂಗೂ ಒಂದು ಬೆಟ್ಟಿಗೆ ಕಟ್ಟಾ ಮಾಣಿ' ಎಂದು ಕೈ ಒಡ್ಡುತ್ತಿದ್ದಳು. ಮನೆಯಲ್ಲಿದ್ದಿದ್ದರೆ ಅಜ್ಜನೂ ಒಂದು ಬೆರಳಿಗೆ ಕಟ್ಟಿಸಿಕೊಳ್ಳುತ್ತಿದ್ದ. ಆದರೆ ಎಲ್ಲರ ಬೆರಳಿಗೂ ಕಟ್ಟುತ್ತಿದ್ದ ಅಪ್ಪನಿಗೆ ಮಾತ್ರ ಮದರಂಗಿ ಇಲ್ಲ! ಅಪ್ಪನಿಗೆ ಅದರ ಬಗ್ಗೆ ಹೆಚ್ಚು ಆಸಕ್ತಿಯೂ ಇರಲಿಲ್ಲವಾದ್ದರಿಂದ ಅವನೇನು ಇದರಿಂದ ಬೇಸರಿಸಿಕೊಳ್ಳುತ್ತಿರಲಿಲ್ಲ. ಕೆಲ ವರ್ಷ ನಾನು ಕೈಬೆರಳುಗಳಿಗಷ್ಟೇ ಅಲ್ಲದೇ ಕಾಲ್ಬೆರಳುಗಳಿಗೂ ಮದರಂಗಿ ಕಟ್ಟಿಸಿಕೊಂಡದ್ದಿದೆ! ಆಗ ಅಜ್ಜ "ಆ 'ಇನ್ನೊಂದ್ ಬೆರಳು' ಎಂಥಕ್ ಬಿಡ್ತ್ಯಾ ಮಾಣಿ.. ಅದ್ಕೂ ಕಟ್ಟಕ್ಕೆ ಹೇಳಾ!" ಎನ್ನುತ್ತಾ ದೊಡ್ಡಕೆ ನಗೆಯಾಡುತ್ತಿದ್ದ. ನಾನು ಮುಸಿಮುಸಿ ನಗುತ್ತಿದ್ದೆ. ಭಾಗ್ಯತ್ಗೆ 'ಇಶಿಶೀ..!' ಎನ್ನುತ್ತಿದ್ದಳು.

ಹೀಗೆ ಬೆರಳುಗಳಿಗೆಲ್ಲ ಮದರಂಗಿಯ ಬ್ಯಾಂಡೇಜ್ ಕಟ್ಟಿಸಿಕೊಂಡು ಹಾಸಿಗೆ ಮೇಲೆ ಮಲಗುತ್ತಿದ್ದ ನಮಗೆ ಅಪ್ಪ ಹೊದಿಕೆ ಹೊಚ್ಚುತ್ತಿದ್ದ. ಆ ರಾತ್ರಿ ಸೊಳ್ಳೆಗಳಿಗಂತೂ ಸುಗ್ಗಿ! ಏಕೆಂದರೆ ಸೊಳ್ಳೆ ನಮ್ಮ ಕಾಲ ಮೇಲೋ ಮುಖದ ಮೇಲೋ ಕೂತು ಕಚ್ಚುತ್ತಿದ್ದರೆ ಅಲ್ಲಾಡಿಸಿ ಓಡಿಸಬಹುದೇ ಹೊರತು ಹೊಡೆಯುವಂತಿಲ್ಲ! ಅದೆಂತಹ ಪರಾಧೀನ ಪರಿಸ್ಥಿತಿ ಎಂದರೆ, ತುರಿಸಿದರೂ ನಾವಾಗೇ ತುರಿಸಿಕೊಳ್ಳುವಂತಿಲ್ಲ! ಅಪ್ಪ ನನಗೆ 'ಎಲ್ಲಿ ತುರುಸ್ತು?' ಎಂದು ಕೇಳುತ್ತಾ ತುರುಸಿಕೊಟ್ಟದ್ದೂ ಇದೆ. ಎಲ್ಲಿ ಈ ಬ್ಯಾಂಡೇಜ್ ಕಳಚಿ ಹೋಗಿಬಿಡುತ್ತದೋ ಎಂಬ ಚಿಂತೆಯಲ್ಲಿ ನನಗೆ ಬಹಳ ಹೊತ್ತಾದ ಮೇಲೆ ನಿದ್ರೆ ಬರುತ್ತಿತ್ತು. ಆ ನಿದ್ರೆಯಲ್ಲಿ ಕನಸೇನಾದರೂ ಬಿದ್ದಿದ್ದರೆ ಅದು ಕೆಂಪು ಕೆಂಪು ಕೆಂಪಾಗಿರುತ್ತಿತ್ತು.

'ಎಲ್ಲೀ, ಸುಶ್ರುತನ್ ಕೈ ಎಷ್ಟು ಕೆಂಪಗಾಯ್ದು ನೋಡನ..?' ಎನ್ನುತ್ತಾ ಬೆಳಗ್ಗೆ ನನ್ನನ್ನು ಎಬ್ಬಿಸುತ್ತಿದ್ದುದು ಭಾಗ್ಯತ್ಗೆಯೇ. ಅವಳು ಅದಾಗಲೇ ಎದ್ದು ಕೈ ತೊಳೆದುಕೊಂಡು ಬಂದಿರುತ್ತಿದ್ದಳು. ಪಿಳಿಪಿಳಿ ಕಣ್ಣು ಬಿಡುತ್ತಾ ನನ್ನ ಕೈಯ ಬ್ಯಾಂಡೇಜುಗಳನ್ನು ಕೀಳುತ್ತಿದ್ದೆ. ಕೆಲ ಬೆರಳುಗಳದು ನಿದ್ರೆಯಲ್ಲೇ ಕಿತ್ತುಹೋಗಿರುತ್ತಿತ್ತು. ಆದರೂ ಅವು ಕೆಂಪಾಗಿರುತ್ತಿದ್ದವು. ನನಗೆ 'ಕೆಂಪೆಲ್ಲಾ ಅಳಿಸಿಹೋದರೇ?' ಅಂತ ಕೈ ತೊಳೆಯಲಿಕ್ಕೆ ಅಂಜಿಕೆ.. 'ಏ ಅಳ್ಸದಿಲ್ಲೆ ಮರಾಯ.. ನನ್ ಕೈ ನೋಡು..' ಎನ್ನುತ್ತಾ ಭಾಗ್ಯತ್ಗೆ ಒತ್ತಾಯ ಮಾಡಿ ಕೈ ತೊಳೆಸುತ್ತಿದ್ದಳು. ಪುಟ್ಟ ಪುಟ್ಟ ಬೆರಳುಗಳ ತುದಿ ಕೆಂಪಕೆಂಪಗೆ ಆಗಿರುವುದು ನೋಡಿ ಕಣ್ಣ ತುಂಬಾ ಸಡಗರ.. ಆದರೆ ಅತ್ತಿಗೆಯದು ಇನ್ನೂ ಕೆಂಪಾಗಿರುವುದು ನೋಡಿ ಹೊಟ್ಟೆಕಿಚ್ಚು.. 'ಹುಡುಗ್ರಿಗೆ ಇಷ್ಟೇ ಕೆಂಪಾಗದು' ಎಂದವಳಂದಾಗ ಸುಪ್ತ ಸಮಾಧಾನ..

ಶಾಲೆಗೆ ಹೊರಟಾಗ ಒಟ್ಟಿಗೆ ಸಿಗುತ್ತಿದ್ದ ಮಧು, ಗುಂಡ, ಭಾವನಾ ಎಲ್ಲರಿಗೂ ನನ್ನ ಕೈ ತೋರಿಸಿ, ಅವರ ಕೈ ನೋಡಿ, ಅವರದು ನನಗಿಂತ ಕೆಂಪಗಾಗಿದ್ದರೆ ಹೊಟ್ಟೆ ಉರಿದುಕೊಳ್ಳುತ್ತಾ, ನನ್ನದೇ ಹೆಚ್ಚು ಕೆಂಪಿದ್ದರೆ ಖುಷಿ ಪಡುತ್ತಾ ನಡೆಯುತ್ತಿದ್ದರೆ ಸೀತಾರಾಮಣ್ಣನ ಮನೆ ದಾಟಿದ್ದೂ, ಡಾಕ್ಟ್ರು ಮನೆ ದಾಟಿದ್ದೂ ಗೊತ್ತಾಗದಷ್ಟು ಬೇಗ ಶಾಲೆ ಬರುತ್ತಿತ್ತು. ಶಾಲೆಯಲ್ಲೂ ಅವತ್ತಿಡೀ 'ನಿಮ್ಮನೆಲಿ ಯಾರು ಬೀಸಿದ್ದು?' 'ಸುಣ್ಣ ಹಾಕಿ ಬೀಸಿದ್ದಿದ್ರಾ?' 'ಶ್ರೀಮತತ್ತೆ ಬೀಸಿರೆ ಇನ್ನೂ ಕೆಂಪಗಾಗ್ತಿತ್ತು' ಇತ್ಯಾದಿ ಸಂಭಾಷಣೆ ಮುಂದುವರೆಯುತ್ತಿತ್ತು. ಕೈ ಬೆರಳ ತುದಿಯ ಮದರಂಗಿಯ ಕೆಂಪು, ಉಗುರು ತೆಗೆಯುತ್ತ ತೆಗೆಯುತ್ತ ಹೋದಂತೆ, ಒಂದೆರಡು ತಿಂಗಳಿನಲ್ಲಿ ಅರ್ಧಚಂದ್ರನಾಗಿ, ಬಿದಿಗೆ ಚಂದ್ರನಾಗಿ, ಕೊನೆಗೆ ಮಾಯವಾಗಿಬಿಡುತ್ತಿತ್ತು.

ಅದೇ ಸಮಯಕ್ಕೆ ಮಾಬ್ಲನ ಮನೆ ಮದರಂಗಿ ಗಿಡದ ರೆಂಬೆಗಳು ಮತ್ತೆ ಎಲೆಯಂಗಿ ತೊಡುವ, ಹಸಿರಾಗುವ, ನಾಗರ ಪಂಚಮಿಯ ದಿನ ಎಲೆ ಉರುಬಿಸಿಕೊಂಡು ಚಟ್ನಿಯಾಗಿ ನಮ್ಮ ಪುಟ್ಟ ಬೆರಳುಗಳ ಕೆಂಬಣ್ಣವಾಗುವ ಕನಸು ಕಾಣಲು ಅಣಿಯಾಗುತ್ತಿದ್ದವು.

26 comments:

Ranju said...

ಹಃ ಹಃ.......ಸಕತ್ ಮಜವಾಗಿ present ಮಾಡಿದ್ದೆ ಸುಶ್. ಮತ್ತೆ ಟ್ರಾಕ್ ಗೆ ಬಂದಿದಿಯಾ ಸುಶ್.

ನಂಗೂ ಹಳೆ ನಾಗರ ಪಂಚಮಿ ಸಂಭ್ರಮ ನೆನಪಾಯಿತು.
ಆಗೆಲ್ಲ ಮದರಂಗಿ ಅಂದ್ರೆ ತುಂಬಾ ಇಷ್ಟ ಆಗ್ತಾ ಇತ್ತು, ಆದ್ರೆ ಈಗ ಯಾಕೋ ಅವೆಲ್ಲ ಇಷ್ಟ ಆಗಲ್ಲಪ್ಪ.

ಈಗ ರೆಡಿಮೆಡ್ ಕೋನ್ ಮದರಂಗಿ ಬಂದಿದ್ದರಿಂದ ಆ ಸೊಪ್ಪು ಕೊಯ್ದು ಚಟ್ನಿ ಮಾಡುವ ಕಾಲ ಮರೆಯಾಗುತ್ತಿರುವುದು ವಿಷಾದದ ಸಂಗತಿ.
ಚನ್ನಾಗಿ ಬರದ್ದೆ keep it up.

Sushrutha Dodderi said...

@ ranju

ಥ್ಯಾಂಕ್ಸ್ ತಂಗೂ.. ಇವತ್ ರಾತ್ರಿ ಊರಿಗೆ ಹೋಗ್ತಿದೀನಿ.. ನಾಳೇನೆ ನಾಗರ ಪಂಚಮಿ.. ಈ ಎಲ್ಲಾ ಸಂಭ್ರಮಗಳೂ ನನಗಾಗಿ ಕಾಯ್ತಾ ಇವೆ ಊರಲ್ಲಿ.. ಅಹ್! ನೀನು ಹೊಟ್ಟೆ ಉರ್ಕೋಳ್ಳೋಕೆ ಏನೂ ಅಡ್ಡಿಯಿಲ್ಲ! :)

>"ಈಗ ರೆಡಿಮೆಡ್ ಕೋನ್ ಮದರಂಗಿ ಬಂದಿದ್ದರಿಂದ ಆ ಸೊಪ್ಪು ಕೊಯ್ದು ಚಟ್ನಿ ಮಾಡುವ ಕಾಲ ಮರೆಯಾಗುತ್ತಿದೆ" ಎಂಬ ನಿನ್ನ ಕಾಳಜಿ ಸಹ ಚಿಂತನಾರ್ಹ.. ಏನನ್ನೋ ಪಡೆಯಲಿಕ್ಕಾಗಿ ಏನನ್ನೋ ಕಳ್ಕೊಳ್ಳೋದು.. ಹ್ಮ್.. :(

ಸಿಂಧು sindhu said...

ಸು,

ತುಂಬ ಚೆನಾಗಿದೆ. ನಾನು ಓದುತ್ತ ಓದುತ್ತ ನಾಗರಪಂಚಮಿ ಮಾಡಿ, ಬೆರಳತುದಿಯೆಲ್ಲ ಕೆಂಪಾಗಿದೆ. ಭಾಗ್ಯತ್ಗೆಯ ಕೆಂಪಿಗಿಂತಲೂ.. :)

ನೀವೆಲ್ಲ ಪೂಜೆಗೆ ಹೋಗುತ್ತಿರುವಾಗ, ನಾನು ಹಾದಿಬದಿಯಲ್ಲಿಯ ಸಾಲುಮರಗಳ ನೆರಳಾಸಿ ಅಲ್ಲಿ ಕಟ್ಟೆಯ ಹತ್ತಿರಕ್ಕೆ ಬಂದು ನೋಡಿದೆ. ಹಾವು ನನಗೂ ಕಾಣಿಸಲಿಲ್ಲ, ಜನರ ನಂಬಿಕೆ ಮತ್ತು ಶ್ರದ್ಢೆಯ ಹರಿದಾಟ ನೋಡಿ ಮೈ ಜುಮ್ಮೆಂದಿತು.

ನಿಮ್ಮನೆಯ ರಾತ್ರೆಯ ಮದರಂಗಿಯ ವಾಸನೆ ಇಲ್ಲಿ ಏರ್ ಕಂಡೀಷನ್ ಆಫೀಸಿನ ತಂಪುಗಾಳಿಯಲ್ಲಿ ಗಾಢವಾಗಿ ಹಬ್ಬಿದೆ. ಇನ್ನೊಂದ್ಸಲ್ಪ ಹೊತ್ತಿದ್ರೆ ಎಲ್ಲರ ಬೆರಳೂ ವಾಸನೆಗೇ ಕೆಂಪಗಾಗಿಬಿಡಬಹುದು.

ತುಂಬ ಇಷ್ಟವಾಯಿತು ಬರಹ. ಪ್ರೀತಿಯ ಮುತ್ತುಗಳು ನಿನಗೆ. ಊರಿಗೆ ಹೋದವನು ಅಪ್ಪನಿಗೆ ನನ್ನ ನೆನಪು ನೀಡು.

(ದಿನದ ಘಟನೆಗಳನ್ನು ನಮಗೆ ಗೊತ್ತಿರುವ ಸಂಗೀತದ/ರಾಗದ/ಹಾಡಿನ ಜೊತೆ ಸೇರಿಸಿ ಹೆಣೆಯುವುದು ಆ ರಾಗ/ಹಾಡಿ ನಲ್ಲಿ ಅದ್ದಿ ತೆಗೆದಷ್ಟೇ ಖುಷಿ. ನಿನ್ನ ಪ್ರಯೋಗ ಚೆನ್ನಾಗಿದೆ)

Sushrutha Dodderi said...

@ ಸಿಂಧು

ನೋಡು ನೋಡು, ಭಾಗ್ಯತ್ಗೆಗಿಂತ ಅಂತ ಹೇಳಿ ಮತ್ತೆ ಹೊಟ್ಟೆ ಉರುಸ್ತಾ ಇದ್ದೆ.. ;)

ಜನರ ನಂಬಿಕೆ ಮತ್ತು ಶ್ರದ್ಢೆಯ ಬಗ್ಗೆ ಮತ್ತಿನ್ಯಾವಾಗಾದರೂ ಬರೆಯುವ..

ಥ್ಯಾಂಕ್ಸ್ ಅಕ್ಕಾ.. ಅಪ್ಪಂಗೆ ಹೇಳ್ತೀನಿ ನೀನು ಕೇಳಿದ್ದಾಗಿ..

Ranju said...

ಶೆ! ಶೆ! ಮರೆತು ಹೋಯ್ತು.
ಅಣ್ಣ ನಾನು ನಿನ್ನ ತಂಗಿ ಅಲ್ದಾ?
ನಂಗೆ ಮೊದಲು ಶ್ರೀಧರಣ್ಣ ಮದರಂಗಿ ಹಚ್ಚಿ ಕೊಡ್ತಾ ಇದ್ದಿದ್ದಾ .
ಅದನ್ನೆಲ್ಲಾ ಇಲ್ಲಿ ಬರೆಲೇ ಇಲ್ಲೆ. ಅನ್ಯಾಯ ಇದು ಅಕ್ರಮ.
ನಾನು ಶ್ರೀಧರಣ್ಣನ್ನ ಕೇಳಿದ್ದಿ ಹೇಳು.

ನಿಜಕ್ಕು ನೀನು ಊರಿಗೆ ಹೊಕ್ತಾ ಇರದು ಹೊಟ್ಟೆಲಿ ಊರಿತಾ ಇದ್ದು. ಹ್ಮ್ ಇರಲಿ ಇನ್ನೊಂದು ಸಾರಿ ನಾನು ನಿಂಗೆ ಹೊಟ್ಟೆಲಿ ಊರಸ್ತಿ.

Sushrutha Dodderi said...

@ ranju

ಮುಂದಿನ್ ಸಲ ಹಬ್ಬಕ್ಕೆ ನಿನ್ನೂ ಕರ್ಕಂಡ್ ಹೋಗ್ತಿ. ಅವಾಗ ಅಪ್ಪ ನಿನ್ ಕೈಬೆರಳಿಗೂ ಕಟ್ತ ಮದರಂಗ, ಅಕಾ? :-) ಬೇಜಾರ್ ಮಾಡ್ಕ್ಯಳಡ.. ಶ್ರೀಧರಣ್ಣಂಗೆ ನೀ ಕೇಳಿದ್ದೆ ಹೇಳ್ತಿ.. ;-)

Anonymous said...

Brilliant!!!

The intricate details and the your mesmerizing story telling skills were....oh well, I've lost words.

Very very very content after reading this.

Anonymous said...

ಭಾಳಾ ಛಲೋ ಬರದ್ದೆ. ಕಡೀಗೂ ಸರ್ಪ ಕಂಡಿದ್ದಿಲ್ಲೇ ಹೇಳಿ ಆತು. ಪೂಜೆ ಮಾಡಕಾದ್ರೆ ಜವಟೆ ಬಾರ್ಸಾ ಬದ್ಲಿ ಪುಂಗಿ ಊದಿದ್ದ್ರೆ ಬತ್ತಿತ್ತ ಯೆನ್ತದ?

Supreeth.K.S said...

ಮದರಂಗಿಯ ರಂಗು ಮನಸ್ಸಲ್ಲೂ ಮೂಡಿದೆ...
ತುಂಬಿದ ಮನೆಯ ಇಂತಹ ಆಚರಣೆಗಳು, ಚಿಕ್ಕ ಚಿಕ್ಕ ಸಂತೋಷ, ನೆಮ್ಮದಿಗಳು ಯಶಸ್ವೀ ಬದುಕಿನ ಅಂಶಗಳಲ್ವಾ? ಯಾರೋ ಎ.ಸಿ ರೂಮಿನಲ್ಲಿ ಕುಳಿತು ಹೇಳಿಕೊಟ್ಟದ್ದೇ ‘ಆರ್ಟ್ ಆಫ್ ಲಿವಿಂಗ್’ ಆಗುತ್ತದಾ?
ಜಾಗತೀಕರಣವೆಂಬ ದರ್ಜಿ ಎಲ್ಲರಿಗೂ ಒಂದೇ ಅಳತೆಯ ಬಟ್ಟೆ ಹೊಲೆದುಕೊಡುತ್ತಿದ್ದಾನೆ, ನಮ್ಮ ಎತ್ತರ, ಕುಗ್ಗು, ಊನ, ಚೆಲುವು ಎಲ್ಲವೂ ಆತನ ಅಳತೆಯ ಮರ್ಜಿಗೆ ಕಾದು ಕುಳಿತುಕೊಳ್ಳಬೇಕೇನೋ...

Archu said...

nanage namma maneyalli aacharisuttidda naagarapanchami nenpaaayitu..aa dina tambittu maaduttiddaru..naaganige haaleredu, baaLe eleyalli arishinadalli naagana chitra bidisi poojisuttidda nenapu innoo hasiru..

naagabanagaLemba hesarinalli parisara saMrakshaNeya prJne namma hiriyalli iddaddu nijakkoo mecchatakka vishaya..

Archu said...

nimma lekhanada shaili bahaLa sogasaagide..
chandada baraha..

Anonymous said...

Lovely! I was lost somewhere.

ಆ ಪುಟ್ಟ ಸುಶ್ರುತನ ಕೆಂಪು ಬೆರಳುಗಳಿಗೆ ಮುತ್ತು ಕೊಡೋಣ ಅನ್ನಿಸುತ್ತಿದೆ. ನಂಗೆ ಇದೆಲ್ಲ ಗೊತ್ತೇ ಇರಲಿಲ್ಲ ಸಕತ್ ಸಕತ್ ಸಕತ್ ಚೆನ್ನಾಗಿದೆ. ನನಗೆ ನೈಲ್ ಪಾಲಿಶಿಗಿಂತ ಮದರಂಗಿಯ ಬಣ್ಣವೇ ಇಷ್ಟ. ನೆಕ್ಸ್ಟ್ ಟೈಮೆ ನಾನೂ ರಂಜು ಜೊತೆ ನಿಮ್ಮನೆಗೆ ಬರೋದೆ...

Sushrutha Dodderi said...

@ ds

Thank you very much boss!

@ anon

ಹಹ್ಹ! ಪುಂಗಿ ಊದಿರೆ ಸರ್ಪ ಬರ್ತು ಅನ್ನೋದೇ ಒಂದು ಮೂಡನಂಬಿಕೆ ಅಲ್ದಾ? :O

@ ಸುಪ್ರೀತ್

ಜಾಗತೀಕರಣದ ರಂಗಿನ ಬಟ್ಟೆ ಇಂತಹ ಎಷ್ಟೋ ಪುಟ್ಟ ಪುಟ್ಟ ಸಂಭ್ರಮಗಳಿಗೆ 'ಮುಸುಕು' ಆಗುತ್ತಿರುವುದು ನಿಜಕ್ಕೂ ವಿಷಾದದ ವಿಷಯ. ನಮ್ಮ ಹಿಂದಿನವರೆಲ್ಲ 'ಆರ್ಟ್ ಆಫ್ ಲಿವಿಂಗ್' ಕೋರ್ಸಿಗೆ ಹೋಗದೇನೂ ಎಷ್ಟೊಳ್ಳೆ ಬದುಕು ಬದುಕುತ್ತಿದ್ದರು ಅಲ್ವಾ? ನಿಜ ನಿಜ..

ಹಬ್ಬಗಳು, ಸಂಪ್ರದಾಯಗಳು, ಆಚರಣೆಗಳು ಎಲ್ಲಾ ಅಪ್ರಸ್ಥುತ ಎಂದು ಪರಿಗಣಿಸಲ್ಪಡುತ್ತಿರುವ ಈ ದಿನಗಳಲ್ಲಿ, ನಮ್ಮಿಂದ ಅವುಗಳಲ್ಲಿರುವ ಅವೈಜ್ಞಾನಿಕ/ಮೌಢ್ಯ ಅಂಶಗಳನ್ನಷ್ಟೇ ಮೀರಿ ಈ ಖುಷಿಗಳನ್ನೆಲ್ಲಾ ಹಾಗೆಯೇ ಉಳಿಸಿಕೊಂಡು ಮುಂದುವರೆಯಲಿಕ್ಕೆ ಸಾಧ್ಯವಿಲ್ಲವೇ? ಚಿಂತನಾರ್ಹ ವಿಷಯ.

ಥ್ಯಾಂಕ್ಸ್ ಸುಪ್ರೀತ್...

Sushrutha Dodderi said...

@ ಅರ್ಚನಾ

ನಿಮ್ಮ ಮನೆಯಲ್ಲಿನ ನಾಗರ ಪಂಚಮಿ ಆಚರಣೆಯ ವಿವರ ಚೆನ್ನಾಗಿದೆ.

'ನಾಗಬಣಗಳೆಂಬ ಹೆಸರಿನಲ್ಲಿ ಪರಿಸರ ಸಂರಕ್ಷಣೆಯ ಪ್ರಜ್ಞೆ ನಮ್ಮ ಹಿರಿಯರಲ್ಲಿ ಇತ್ತು' (?) ..Hmm.. Point to be noted! ;)

ಥ್ಯಾಂಕ್ಸ್ ಫಾರ್ದಿ ಕಮೆಂಟ್ ಅರ್ಚನಾಜೀ.. :-)

@ ಮಲ್ನಾಡ್ ಹುಡುಗಿ

ಕೊಡಬೇಕೆಂದುಕೊಂಡ ಮುತ್ತನ್ನ 'ಪುಟ್ಟ ಸುಶ್ರುತ' ಸ್ವೀಕರಿಸಿದ್ದಾನೆ. ;) ಥ್ಯಾಂಕ್ಸ್..

ಯಾಕೋ ಮುಂದಿನ್ ವರ್ಷ ಮಾಬ್ಲ ಶೆಟ್ಟಿ ಮನೆ ಮದರಂಗಿ ಗಿಡವನ್ನ ನಾನೇ ಗುತ್ತಿಗೆ ತಗೋಳೋದು ಒಳ್ಳೇದಿದೆ ಅನ್ಸುತ್ತೆ! ಚಟ್ನಿ ಬೀಸೀ ಬೀಸೀ ನನ್ನಮ್ಮನ ಕೈ ನೋವು ಬಂದು, ದಾರ ಕಟ್ಟೀ ಕಟ್ಟೀ ನನ್ನಪ್ಪನ ಕೈಯೂ ನೋವು ಬಂದು, ಇದನ್ನೆಲ್ಲಾ ಸಂಭ್ರಮದಿಂದ ನೋಡ್ತಾ ನೋಡ್ತಾ ನನ್ನ ಕಣ್ಣೂ ನೋವು ಬಂದು... ... ಓಹೋಹೋಹೋ! ಏನೇನು ಆಗ್ಬೇಕಿದ್ಯೋ!

ಹಹ್ಹ, ಆಗ್ಲಿ ಬಿಡಿ!

Anonymous said...

ನಮ್ಮ ಮನೇಲಿ ರುಬ್ಬುವ ಬೆರಳುಗಳಿಗೆ ಕಟ್ಟುವ ಎರಡೂ ಕೆಲಸವನ್ನೂ ಅಮ್ಮನೇ ಮಾಡುತ್ತಿದ್ದಳು. ತುಂಬ ಚೆನ್ನಾಗಿ ಬರೆದಿದ್ದೀರ. ಮೊದಲನೇ ಬಾರಿಗೆ ನಿಮ್ಮ ಬರಹ ಒದಿದ್ದು.
feeling nogalastic...

Sushrutha Dodderi said...

@ Sushma

ಥ್ಯಾಂಕ್ಸ್ ಸುಶ್ಮಾ.. ಬರ್ತಿರಿ..

VENU VINOD said...

sushrutha,
nangu chikkoniddaga madrangi hako aase iththu adre hudgiyaru hako madrangi ningyake endu ajji baithidru. Ene irli nimma madrangi sambhrama odi khushiyaythu :)

Anonymous said...

ಎಲ್ಲದರಲ್ಲೂ ವೈಜ್ಞಾನಿಕತೆ ನೋಡುತ್ತಾ ಹೋದರೆ ಖುಷಿ, ಸಂಬ್ರಮ ಎಲ್ಲಿಂದ ಉಳಿಬೇಕು ?! ನಮ್ಮಲ್ಲಿಯ ಹಬ್ಬಗಳಲ್ಲಿ ಮುಖ್ಯ ಉದ್ದೇಶವನ್ನು ಬಿಟ್ಟು ಉಳಿದ ಎಷ್ಟೋ ಆಚರಣೆಗಳು ಮೇಲಿನಿಂದ ಮೌಢ್ಯದಂತೆಯೇ ಕಾಣುತ್ತವೆ. ಒಂದು ಕಡೆ ಎಲ್ಲಾ ಹಬ್ಬಗಳು ಅಪ್ರಸ್ತುತವೆನಿಸುತ್ತವೆ ಎಂದು ನೀವೆ ತೀರ್ಮಾನ ಕೊಡುತ್ತೀರಿ, ಇನ್ನೊಂದು ಕಡೆ ಎಲ್ಲಾ ಖುಷಿ, ಸಂಭ್ರಮ, ಆಚರಣೆ ಉಳಿಯಬೇಕು ಅನ್ನುತ್ತೀರಿ. ನೀವು ಹೇಳಿದುದಕ್ಕೂ ನಿಮ್ಮ ಬ್ಲಾಗಿಗೂ ವೈರುಧ್ಯ ಎದ್ದು ಕಾಣುತ್ತದೆ. ಏಕೆಂದರೆ ನಾಗರಪಂಚಮಿ ಅನ್ನು ಹಬ್ಬವೇ ಒಂದು ಮೌಢ್ಯ ಎಂದು ಅನಿಸುವುದಿಲ್ಲವೇ? ಇನ್ನೆಂಲ್ಲಿಂದ ಬಂತು ಅದರಲ್ಲಿನ ಮೌಢ್ಯ/ಅವೈಜ್ಞಾನಿಕತೆಗಳನ್ನು ಕೈಬಿಡುವುದು? ಕೈಗೆ ಮದರಂಗಿ ಹಚ್ಚುವುದರಲ್ಲಿ ವೈಜ್ಞಾನಿಕತೆ ಇದೆಯೆ? ಇದ್ದರೂ ಅದನ್ನು ತಿಳಿದುಕೊಳ್ಳುವ/ ಆಚರಿಸುವ ಅವಶ್ಯಕತೆ ಯಾರಿಗಿದೆ? ಇಂದಿನ ಯುವಜನಾಂಗದ ಮನಃಸ್ಥಿತಿಯೇ ಹಾಗಾಗಿದೆ, ಎಲ್ಲ ಖುಷಿಗಳೂ ಬೇಕು ಆದರೆ ಯಾವುದನ್ನು ತಾವಾಗಿ ಮಾಡಲು ತಯಾರಿಲ್ಲ. ಅದಕ್ಕೆಲ್ಲಾ ತಮ್ಮ socalled modern ವಿಚಾರಗಳ ಕಟ್ಟಳೆಗಳು ಬೇರೆ. ಹಳೆಯದನ್ನು ನೆನೆಸಿಕೊಂಡು ಕಥೆ ಹೇಳುವದೇನು/ಬ್ಲಾಗ್ ಬರೆಯುವುದೇನು , ಹ್ಮ್...

Sushrutha Dodderi said...

@ Venu

Che! Then u missed it Venu!

Sushrutha Dodderi said...

@ shrikanth anchimani

ಪ್ರಿಯ ಶ್ರೀಕಾಂತ್,

ನಮಸ್ಕಾರ. ಸಮಾಧಾನ.

ಈ ವರ್ಷದ ನಾಗರ ಪಂಚಮಿ ಹಬ್ಬಕ್ಕೆ ನಾನು ಊರಿಗೆ ಹೋಗಿದ್ದೆ. ಊರಿಗೆ ಹೋದಮೇಲೆ ಗೊತ್ತಾಯ್ತು, ನಮ್ಮ ದೂರದ ದಾಯವಾದಿಗಳ್ಯಾರೋ ತೀರಿಕೊಂಡು ಸೂತಕ ಬಂದಿರುವುದರಿಂದ ನಮಗೆ ಹಬ್ಬ ಇಲ್ಲ ಅಂತ. ಅಮ್ಮನ ಹತ್ರ ಕೇಳಿದೆ: 'ಹಾಗಾದ್ರೆ ಎಳ್ಳುಂಡೆ ಮಾಡೋಹಂಗೂ ಇಲ್ವೇನಮ್ಮಾ?'. ಅಮ್ಮ ಅಂದ್ಲು, 'ಎಲ್ಲಾ ಮಾಡ್ಬೋದು ಮಾರಾಯಾ, ದೇವರಿಗೆ ನೈವೇದ್ಯ ಮಾಡೋಹಂಗಿಲ್ಲ ಅಷ್ಟೇ' ಅಂತ. 'ಸರಿ ಹಾಗಾದ್ರೆ, ನಂಗೇ ನೈವೇದ್ಯ ಮಾಡಿದ್ರಾಯ್ತು ಬಿಡು' ಎಂದೆ!

ಪ್ರತಿವರ್ಷದಂತೆ ಈ ವರ್ಷವೂ ಸಹ ನಮ್ಮ ಮನೆಯಲ್ಲಿ ನಾಗರ ಪಂಚಮಿಯ ಸಡಗರ ತುಂಬಿಕೊಂಡೇ ಇತ್ತು. ಮನೆಗೆ ನೆಂಟರು ಬಂದಿದ್ದರು. ಎಳ್ಳುಂಡೆ ಮಾಡಿಕೊಂಡು ತಿಂದೆವು, ಒಟ್ಟಿಗೇ ಕೂತು ಸಿಹಿಯೂಟ ಮಾಡಿದೆವು, ಕವಳ ಹಾಕಿದೆವು, ಮದರಂಗಿ ಬೀಸಿ ಹಚ್ಚಿಕೊಂಡೆವು, ಹರಟೆ ಹೊಡೆದೆವು, ಹಾಡಿಕೊಂಡೆವು, ನಕ್ಕೆವು, ಎಲ್ಲಾ -ಎಲ್ಲಾ ಹಾಗೇ ಇತ್ತು; ಎಕ್ಸೆಪ್ಟ್ : ಕೆಂಪು ಮಡಿ ಉಟ್ಟುಕೊಂಡು ಹೋಗಿ, ನಾಗರ ಹಾವಿನ ಚಿತ್ರ ಕೊರೆದಿರುವ ಕಲ್ಲಿಗೆ ಹಾಲೆರೆದು, ಬಾರದ ಹಾವಿಗೆ ಹುಡುಕುತ್ತಾ ಮರ ಸುತ್ತಿ ಸುತ್ತಿ, ಅಡ್ಡಬಿದ್ದು ಎದ್ದು ಬರುವ ಪ್ರಕ್ರಿಯೆ.

>>""..ಎಲ್ಲಾ ಹಬ್ಬಗಳು ಅಪ್ರಸ್ತುತವೆನಿಸುತ್ತವೆ ಎಂದು ನೀವೆ ತೀರ್ಮಾನ ಕೊಡುತ್ತೀರಿ,.." ಇಲ್ಲ, ಇಲ್ಲ ಸಾರ್.. ನಾನು ಹಾಗೆ ಹೇಳ್ಲಿಲ್ಲ. ತೀರ್ಮಾನ ಕೊಡ್ಲಿಕ್ಕೆ ನಾನ್ಯಾರು? ನಾನಂದಿದ್ದು: "ಹಬ್ಬಗಳು, ಸಂಪ್ರದಾಯಗಳು, ಆಚರಣೆಗಳು ಎಲ್ಲಾ ಅಪ್ರಸ್ಥುತ ಎಂದು ಪರಿಗಣಿಸಲ್ಪಡುತ್ತಿರುವ ಈ ದಿನಗಳಲ್ಲಿ.." ಅಂತ. ಈ ಯಾವ ನಿರುಪದ್ರವೀ ಆಚರಣೆಗಳೆಡೆಗೂ ನನ್ನ ಆಕ್ಷೇಪವಿಲ್ಲ. ಅವು ತರುವ ಸಂಭ್ರಮಗಳಿಗಾಗಿಯಾದರೂ ನಾನು ಕೃತಜ್ಞ.

>>"ಇಂದಿನ ಯುವಜನಾಂಗದ ಮನಃಸ್ಥಿತಿಯೇ ಹಾಗಾಗಿದೆ, ಎಲ್ಲ ಖುಷಿಗಳೂ ಬೇಕು ಆದರೆ ಯಾವುದನ್ನು ತಾವಾಗಿ ಮಾಡಲು ತಯಾರಿಲ್ಲ. " ವಿಷ್ಯ ಕರೆಕ್ಟು ಸರ್.. ಆದ್ರೆ ಇದಕ್ಕೆ ಪರಿಹಾರ ಏನು ಸರ್? ವಿಜ್ಞಾನ, ತಂತ್ರಜ್ಞಾನ, ಕಂಪ್ಯೂಟರು, ರಾಕೆಟ್ಟು, ಲಕ್ಷಗಟ್ಟಲೆ ಹಣ ತರುವ ಕೆಲಸಗಳು, ಗ್ಲೋಬಲ್ ವಿಲೇಜೆಂಬ ಕನಸು, ಮತ್ತೂ ಇನ್ನೇನೋ -ಎಲ್ಲದರ ನಡುವೆ ಮುಳುಗಿ ಹೋಗಿರುವ ಯುವಜನರನ್ನು "ಮಡಿಯುಟ್ಟು ನಾಗರ ಕಲ್ಲಿಗೆ ಹಾಲೆರೆಯುವ ಕಾಯಕಕ್ಕೆ ಬನ್ನಿ" ಎಂದರೆ ಒಪ್ಪುತ್ತಾರಾ? ಹಾಂ, ಇನ್‍ಕ್ಲೂಡಿಂಗ್ ಮಿ? ಕಷ್ಟ ಅನ್ಸುತ್ತೆ ಸರ್..

ಇಂತಹ ಸಂದರ್ಭದಲ್ಲಿ, ಕನಿಷ್ಟ ಆ ಹಬ್ಬ,ಸಂಪ್ರದಾಯಗಳ ಒಡಗೂಡಿ ಬರುತ್ತಿದ್ದ ಸಂಭ್ರಮಗಳನ್ನಾದರೂ ಉಳಿಸಿಕೊಳ್ಳಲು ಸಾಧ್ಯವಾದರೆ ಚೆನ್ನಾಗಿತ್ತು ಎಂಬುದಷ್ಟೇ ನನ್ನ ಆಶಯ..

>>"ಹಳೆಯದನ್ನು ನೆನೆಸಿಕೊಂಡು ಕಥೆ ಹೇಳುವದೇನು/ಬ್ಲಾಗ್ ಬರೆಯುವುದೇನು " -ಅಂದರೆ ಹಳೆಯದನ್ನು ನೆನೆದು ಪಡುವ ಖುಷಿಯಿಂದಲೂ ಯುವಜನಾಂಗ ವಂಚಿತರಾಗಬೇಕೇ? ಮೇಲೆ ಇಷ್ಟೆಲ್ಲ ಜನಕ್ಕೆ ಈ ಬರಹವೇ ಖುಷಿ ಕೊಟ್ಟಿರಬೇಕಾದರೆ, ನಾನಾದರೂ ಬರೆಯದೇ ಹೇಗಿರಲಿ? ಸಾರಿ, ನಿಮಗೆ ಬೇಜಾರಾಗಿದ್ದರೆ..

ಆದರೆ ಒಂದು ಮಾತು ಹೇಳಲಾ? ಇಷ್ಟನ್ನೆಲ್ಲ ನಿಮ್ಮ ಸಮಾಧಾನಕ್ಕೆ ಹೇಳಿದೆನಾದರೂ ಹಾವಿನ ಚಿತ್ರ ಕೆತ್ತಿದ ಕಲ್ಲಿನ ಮೇಲೆ ಹಾಲು ಒಯ್ದು ಚೆಲ್ಲುವ ಪ್ರಕ್ರಿಯೆಯಾಗಲೀ, ಜೀವಂತ ಹಾವು ನೋಡಲು ಬರುತ್ತದೆ ಎಂದು ಹೆದರುವುದಾಗಲೀ ಮೌಢ್ಯವಲ್ಲ ಎನ್ನಲು ಯಾಕೋ ಸಾಧ್ಯವಾಗು-ತ್ತಿ-ಲ್ಲ. :( ಸಾರಿ ಅಗೈನ್!

Anonymous said...

Hi, Sushruta,
Aaneega ee lekhana odkyandu Khushi mattu bejaru erdannu anubhavista iddi.
khushi entakke andre madhyahnada ee ontitanada bejarnalli, nagarapanchami kaledu hannondu dina aadmelu... saha, nange U.S.A yavaregu nimmane ellunde sihi siguvanthagiddakke. Thumba Dhanyavaada.

Innu bejaragiddu, nanna huttoorina nagarakallina pooje, matte madarangi iveradara savinenapu ella habbagala nenapondige haridu,ooralliruva tammange ivattu raakhi kattallu ajille helallivaregu bandu kannallina haniyagi roopa tagalta iddu.

Nagarapanchami kathe odi nangu sannakkiddagindella nenpathu. rashi kushi aathu. Nenapugalanna nenapu madkyandaga sigantha kushi estondu alda? A nenapu baravanige adaga kushi innastu. Realy i enjoyed this article. Thank you very much.

Keshav.Kulkarni said...

ತುಂಬ ಚೆನ್ನಾಗಿ ಬರೆದಿದ್ದೀರಾ, ಓದಿ ತುಂಬ ಖುಷಿಯಾಯಿತು. ನಮ್ಮ ಉತ್ತರ ಕರ್ನಾಟಕದ ಕಡೆ ಇದೆಲ್ಲ ಇಲ್ಲ, ಅಲ್ಲಿ ಬೇರೇ ತರಹ. ಓದುತ್ತಾ ಓದುತ್ತಾ ಮಲೆನಾಡಲ್ಲಿ ಮಕ್ಕಳ ಹಾಗೆ ಆಡುತ್ತಿರುವಂತೆ ಭಾಸವಾಯಿತು, ಥ್ಯಾಂಕ್ಸ್.

ಕೇಶವ (www.kannada-nudi.blogspot.com)

Sushrutha Dodderi said...

@ anonymous

Thank you very much for your long comment. ಆದ್ರೆ ನೀವ್ಯಾರು ಅಂತ ಗೊತ್ತಾಗಲ್ಲೆ. ಹೆಸ್ರು ಹಾಕಿದ್ದಿದ್ರೆ ಚನಾಗಿತ್ತು. ಇರ್ಲಿ.
>>"Nenapugalanna nenapu madkyandaga sigantha kushi estondu alda?" ಹ್ಮ್.. :-)

@ keshav kulkarni

Thanks sir..

Anonymous said...

ಸುಶ್ರುತ..
sorry, comment ಜೊತೆ ನನ್ನ ಹೆಸ್ರು ಹಾಕಲೆ ಮರ್ತಿದ್ದಿ.
‘ನೆನಪುಗಳನ್ನ ನೆನಪು ಮಡ್ಕ್ಯಂಡಾಗ ಸಿಗಂತ ಖುಷಿ ಎಷ್ಟೊಂದು ಅಲ್ದಾ?’ ಆ comment ಬರ್ದಿದ್ದು....

-ಶಾಂತಲಾ ಭಂಡಿ.

Anonymous said...

ಸುಶ್ರುತ...
sorry, comment ಜೊತೆ ನನ್ನ ಹೆಸರು ಹಾಕಲ್ಲೆ ಮರ್ತಿ. ‘ನೆನಪುಗಳನ್ನ ನೆನಪು ಮಾಡ್ಕ್ಯಂಡಾಗ ಸಿಗಂತ ಖುಷಿ ಎಷ್ಟೊಂದು ಅಲ್ದಾ?’ ಆ comment ಬರ್ದಿದ್ದು ನಾನು.

- ಶಾಂತಲಾ ಭಂಡಿ.

Shashi Dodderi said...

Rest of the blog is Dodderi!! but this line "ಒಂದೆರಡು ತಿಂಗಳಿನಲ್ಲಿ ಅರ್ಧಚಂದ್ರನಾಗಿ, ಬಿದಿಗೆ ಚಂದ್ರನಾಗಿ, ಕೊನೆಗೆ ಮಾಯವಾಗಿಬಿಡುತ್ತಿತ್ತು" is fine work of art.