ನಿನ್ನೆ ರಾತ್ರಿ ಹೀಗಾಯಿತು:
ಆಸೆಪಟ್ಟು ಕಾಯಿಸಿಟ್ಟಿದ್ದ ಹಾಲು ಒಡೆದು ಹೋಯಿತು.
ಸ್ವಲ್ಪ ಮೊದಲೇ ಹೆಪ್ಪು ಬಿಟ್ಟಿದ್ದರೆ
ಬೆಳಗಾಗುವಷ್ಟರಲ್ಲಿ ಗಟ್ಟಿ ಮೊಸರಾಗಿರುತ್ತಿತ್ತು.
ಮೊಸರನ್ನು ಕಡೆದಿದ್ದರೆ ಬೆಣ್ಣೆ ಸಿಗುತ್ತಿತ್ತು.
ಬೆಣ್ಣೆಯನ್ನು ಕಾಯಿಸಿದ್ದರೆ 'ಇದು ಹಾಲಿನಿಂದ ಬಂದದ್ದು'
ಎಂಬುದನ್ನೇ ಮರೆಸಬಹುದಾದಷ್ಟು ತಾಜಾ
ತುಪ್ಪವಾಗಿಬಿಡುತ್ತಿತ್ತು.
ತಿಂಗಳುಗಟ್ಟಲೆ ಇಟ್ಟುಕೊಂಡು,
ಇಷ್ಟಿಷ್ಟೇ ಹಚ್ಚಿಕೊಂಡು ತಿನ್ನಬಹುದಿತ್ತು.
ಬಯಕೆಗಳು ಬಹಳವಿದ್ದವು.
ಒಡೆದ ಹಾಲಿನ ದಬರಿಯನ್ನಿಟ್ಟುಕೊಂಡು
ರಾತ್ರಿಯಿಡೀ ಯೋಚಿಸಿದೆ:
ಏನು ಮಾಡಬಹುದು ಇದರಿಂದ ಅಂತ.
ಬೆಳಗಿನ ಹೊತ್ತಿಗೆ ನೆನಪಾಯಿತು:
'ಒಡೆದ ಹಾಲನ್ನು ಕೆನ್ನೆಗೆ ಸವರಿಕೊಂಡರೆ
ಮೊಡವೆಗಳೇಳುವುದಿಲ್ಲ' ಎಂದು ಹಿಂದೆ
ಯಾರೋ ಹೇಳಿದ್ದುದು.
ದಢಕ್ಕನೆ ಹಾಸಿಗೆಯಿಂದೆದ್ದು ಕನ್ನಡಿಯಲ್ಲಿ
ಮುಖವನ್ನು ನೋಡಿಕೊಂಡೆ:
ಒಂದೇ ಒಂದು ಮೊಡವೆಯೂ ಇಲ್ಲ!
'ಹ್ಮ್! ಬಯಕೆಗಳಿದ್ದರೆ ತಾನೇ ಮೊಡವೆಗಳೇಳುವುದು!'
ಎಂಬ ಗೊಣಗು ನನ್ನ ಬಾಯಿಂದ ಹೊರಬೀಳುವ ಮೊದಲೇ
ಹಾಲಿನ ಹುಡುಗ ಹೊಸ ಹಾಲಿನ ಪ್ಯಾಕೆಟ್ಟಿನೊಂದಿಗೆ
ಬಾಗಿಲು ತಟ್ಟುತ್ತಾ 'ಹಾಲು ಬೇಕಾ ಅಣ್ಣಾ?' ಎಂದದ್ದು ಕೇಳಿಸಿತು.
ಕೊಳ್ಳಲೋ ಬೇಡವೋ ಎಂಬ ಗೊಂದಲದೊಂದಿಗೇ
ಬಾಗಿಲಿನತ್ತ ಚಲಿಸಿದೆ.
9 comments:
ಸುಶ್,
ಈ ಕವನಕ್ಕೆ ಒಂದೇ ಅರ್ಥ ಇದೆಯೋ? ಅಥವಾ ಒಳಾರ್ಥ ಬೇರೆ ಇದೆಯೋ confuse ಆಕ್ತಾ ಇದೆ.
ಒಡೆದ ಹಾಲು ಒಡೆದ ಮನಸ್ಸನ್ನಾ indicate ಮಾಡ್ತಾ ಇದೆಯಾ?
ತುಂಬಾ ಆಸೆ ಪಟ್ಟಿದ್ದು ಹಾಳಾಗಿ ಹೋದ್ರೆ, ಕಳೆದು ಹೋದ್ರೆ ಮತ್ತೆ ಕೊಂಡುಕೊಳ್ಳುವಾಗ ಅನುಮಾನ ಆಗುತ್ತೆ.
ಚನ್ನಾಗಿ ಇದೆ ಕವನ.
ಏನ್ರೀ ಇದು? ಕೂತಲ್ಲೇ ಬಂದ ಯೋಚನೆಯನ್ನು ಗೀಚಿದಂತಿದೆ. ಹಾಲು ಒಡೆದದ್ದು ಒಳ್ಳೇದೇ ಆಯಿತೆನ್ನಿ. ಒಂದು ಚೆನ್ನಾದ ಬರಹವನ್ನು (ಕವನವೋ/ಲೇಖನವೋ) ಓದಲು ಸಿಕ್ಕಿತು.
ಒಟ್ಟಿನ್ ತಲೆಮೇಲೆ...
ಒಬ್ಬೊಬ್ರಿಗೆ ಒಂದೊಂದ್ ಚಿಂತೆ.
ನಿಂಗೆ ಹಾಲ್ ಒಡ್ದೋತು ಅಂತ,
ಇನ್ ಕೆಲ್ವ್ರಿಗೆ ಹಾಲ್ ಕಮ್ಮಿ ಆಗೋತು ಅಂತ ಚಿಂತೆ..
ಎನಿವೇ!
ನೀನಾಗೆ ಏನು ಒಡಿಯಲ್ಯಲ..
ಇರ್ಲಿ ಬಿಡು..:)
ಸುಶ್ರುತ...
ಹಾಲು ಒಡೆದದ್ದನ್ನೂ ಅಭಿವ್ಯಕ್ತಪಡಿಸಿರುವ ರೀತಿ ತುಂಬ ಚೆನ್ನಾಗಿದೆ,ಒಬ್ರು ಬರೆದಿರೋ ಕವಿತೆನ ಇನ್ನೊಬ್ರು ಅರ್ಥ ಮಾಡ್ಕೊಳ್ಳೋದು ಕಷ್ಟ ಅಲ್ವ?
ಆದ್ರೂ ಚೆನ್ನಾಗಿದೆ.
ಅಯ್ಯಯ್ಯಪ್ಪೊ!
ನಿಮ್ಮ ಹಾಲು ಒಡೆದಿದ್ದಕ್ಕೆ ನಮ್ಮ ವಿಶಾದವಿದೆ..
ಅಂತೂ ಅಲ್ಲಿಂದಲೂ ಅದನ್ನು ಏನಾದ್ರೂ ಮಾಡಬಹುದೋ ಅಂತ ಯೋಚನೆ ಮಾಡಿದ್ದು ಚೆನ್ನಾಗಿದೆ
B Positive..
super !
ಸುಶ್ರುತ,
ತುಂಬಾ ಚೆನ್ನಾಗಿದೆ.
ಮೇಲ್ನೋಟಕ್ಕೆ ಸರಳ ಎನಿಸಿದರೂ ಒಳಗಡೆ ಏನೆಲ್ಲಾ ಅಡಗಿಸಿಟ್ಟಿದ್ದೀರಿ.
ಆ ಹಾಲು ಹೋದರೆ ಹೋಗಲಿ ಬಿಡಿ, ಇನ್ನೂ ಚೆನ್ನಾಗಿರೋ ಹಾಲು ಸಿಗತ್ತೆ :)
ರಂಜನಾ,
ನಿನ್ನ ಕನ್ಫ್ಯೂಶನ್ನುಗಳು ಕನ್ಫ್ಯೂಶನ್ನುಗಳಾಗಿಯೇ ಇದ್ದರೆ ಚೆನ್ನ ಅನ್ಸುತ್ತೆ.
ರಾಜೇಶ್,
ಅದು ಹಂಗಲ್ಲ.. ಹ್ಮ್.. ಇರ್ಲಿ ಬಿಡಿ..
alpazna,
ಅಲ್ದಾ? ;)
ಶಾಂತಕ್ಕ,
ನೀ ಹೇಳೋದೂ ಕರೆಕ್ಟಿದ್ದು ನೋಡು!
ಅಯ್ಯಪ್ಪ ಭಕ್ತ,
?!
la..na..,
Yes, I'm always positive!
jagdish,
Thanx
seema,
ನಿಜ ಸೀಮಾ. ನಂಗೆ ಸಧಕ್ಕೆ ಇರೋದು ಅದೊಂದೇ ಕಾನ್ಫಿಡೆನ್ಸು! :-)
Post a Comment