Thursday, March 26, 2009

ಹಾರಯಿಕೆ

ಫಾಲ್ಗುಣದ ಕೊನೆ ಸಂಜೆ, ಹೊತ್ತು ಮುಳುಗುವ ಸಮಯ,
ರವಿ ಕಂಡು ಕುಂಕುಮಕೆ ಹೊಟ್ಟೆಕಿಚ್ಚು;
ತನ್ನ ಕೊಕ್ಕಿನ ಕೆಂಪೆ ಹೆಚ್ಚೆಂಬ ಭ್ರಮೆ ಕಳೆದು,
ಗೂಡ ದಾರಿಯಲಿರ್ದ ಗಿಳಿಮೊಗವು ಪೆಚ್ಚು ||

ಇರುಳು ಇಳಿಯಲೆಬೇಕು, ಹಗಲು ಅಳಿಯಲೆಬೇಕು,
ಇಲ್ಲದಿರೆ ಇಳೆಗಿಲ್ಲ ನಾಳೆಯಾ ನಲಿವು;
ಮುಗಿದು ಚಂದ್ರನ ಪಾಳಿ, ತಾರೆ ತೆರೆಮರೆ ಸರಿದು
ಅರಳಿದರೆ ಅರುಣಪ್ರಭೆ ಮಧುಮಾಸವು ||

ಚೈತ್ರವೆಂದರೆ ಹಸಿರು, ನಭದಲ್ಲಿ ಮೇಘಗಳು,
ಝರಿನೀರು ಜರಿದು ಧರೆ ಧುಮುಕುವಾ ಸದ್ದು;
ಎಲ್ಲೊ ತಪ್ಪಲಿನಲ್ಲಿ ನಾಟ್ಯವಾಡಲು ನವಿಲು,
ಸೆಟೆದು ನೂಪುರ ಸೆರಿಗೆ ಮೈಕೊಡವಿ ಸಜ್ಜು ||

ಸಿರಿಸೂರೆಯಾಗಿರುವ ಮಾಮರದ ಎಲೆಮರೆಯೇ
ಪರಪುಟ್ಟ ಹಕ್ಕಿಗೆ ಸರಿಯಾದ ಗೊತ್ತು;
ಕುಹುಕುಹುವೆ ಹಾಡಿಲ್ಲಿ, ಪಕ್ಕವಾದ್ಯವೇ ಬೇಡ
ಶ್ರವಣಸ್ವರ್ಗದಿ ಸರಿದು ಸರಸರನೆ ಹೊತ್ತು ||

ಋತುರಾಜನಾರ್ಭಟದಿ ಕಳೆದು ಕಹಿಯೆಲ್ಲ
ಹಿತಭಾವ ಹೃದಯದಲಿ ನೆಲೆಯೂರಲಿ;
ಜೀವಜೀವಪ್ರೀತಿ ಎಂದೂ ಮುಗಿಯದೆ ಇರಲಿ
ವರುಷವಿಡೀ 'ವಿರೋಧಿ' ಬರಿ ಹೆಸರಿಗಿರಲಿ ||

16 comments:

ಅಮರ said...

ಹೊಸ ವರುಷಕೆ ನನ್ನದೊಂದು ಬೆಚ್ಚನೆಯ ಹಾರೈಕೆ ಮಿತ್ರ.
-ಅಮರ

shivu.k said...

ಕವನ ಚೆನ್ನಾಗಿದೆ....

ಯುಗಾದಿಯ ಶುಭಾಶಯಗಳು...

sunaath said...

ಸುಶ್ರುತ,
ಸರ್ವಧಾರಿ ಸಂವತ್ಸರಕ್ಕೆ ಸುಂದರವಾದ ಬೀಳ್ಕೊಡುಗೆ ಬರೆದಿದ್ದೀರಿ. ವಿರೋಧಿಗೆ ತೆರೆದ ತೋಳ್ಗಳ ಸ್ವಾಗತ ನೀಡಿದ್ದೀರಿ.
ನಿಮ್ಮ ಕವನ ತುಂಬಾ ಮೆಚ್ಚಿಗೆಯಾಯ್ತು.
ಯುಗಾದಿಯು ನಿಮಗೆ ಒಳಿತನ್ನು ತರಲಿ.

Ittigecement said...

ಸುಶ್ರುತ..

ಕವನವೆಂದರೆ ಹೀಗಿರಬೇಕು...

ಉಗಾದಿ ಹಬ್ಬದ ಶುಭಾಶಯಗಳು..

ಚಂದದ ಕವನಕ್ಕಾಗಿ

ಅಭಿನಂದನೆಗಳು...

ಭಾರ್ಗವಿ said...

ಚಂದದ ಕವನ. ನಿಮಗೂ ನಿಮ್ಮ ಮನೆಯವರೆಲ್ಲರಿಗೂ ಯುಗಾದಿ ಶುಭಾಷಯಗಳು.

Parisarapremi said...

ಹೌದು. ;-)

ಸುಪ್ತದೀಪ್ತಿ suptadeepti said...

ಹಳೆಯ ಹೊಸದರ ಸರಳ ಋತುಚಕ್ರದಲಿ
ನಮಗೊಂದು ದಿನವಿಹುದು ಖುಷಿ ಹಂಚಲು
ಆ ದಿನದ ಸಂತಸವೆ ಸಂತತವು ಹರಡಿರಲಿ
ನಿಮ್ಮೆಲ್ಲರ ಬಾಳಹಾದಿಗೆ ನಗು ತುಂಬಲು.

Shweta said...

" ಝರಿನೀರು ಜರಿದು ಧರೆ ಧುಮುಕುವಾ ಸದ್ದು;"
ಧಾರೆ ಯೆಂದಾಗಬೇಕಿತ್ತೇನೋ ಅಲ್ಲವೇ?
-ಇದು ನನಗನ್ನಿಸಿದ್ದು .
ಬದುಕು ಕಟ್ಟಿ ಕೊಟ್ಟ ನೆನಪಿನ ಮೂಟೆಯೊಂದಿಗೆ ಹೊಸ ವರುಷ ಶುಭ ತರಲಿ !!
-ಶ್ವೇತಾ

ವಿ.ರಾ.ಹೆ. said...

ಚಂದದ ಕವನ ಸುಶ್ರುತ :)

Karthik CS said...

Sushrutha, tumba tumba chennagide..

Almost ella lineu bahala ishta aaytu.. tumba jana padya bareetaare.. ee nadve antu hanigavithe anta bayige bandaddu gechtaare... aadre neevu nijavaada kavana baredu namagella kottiddakke bahala Dhanyavaada galu.

Prasabadha haagu laya badha haagu chando baddhavaagiru ee haaraike nimagoo irali..

ವರುಷವಿಡೀ 'ವಿರೋಧಿ' ಬರಿ ಹೆಸರಿಗಿರಲಿ || ee line superr

ಧರಿತ್ರಿ said...

ಅಣ್ಣಯ್ಯ ನಂಗೆ ಹೊಟ್ಟೆಗಿಚ್ಚಾಗುತ್ತಿದೆ. ಎಷ್ಟು ಚೆನ್ನಾಗ್ ಬರೇದಿಯಾ.
-ಧರಿತ್ರಿ

Annapoorna Daithota said...

Chennagide :-)

btw, eega nange comment haakovaga word verification nalli sikkid word kooda `VIRHOAD', virodhi thara :-)

Anonymous said...

ತನ್ನ ಕೊಕ್ಕಿನ ಕೆಂಪೆ ಹೆಚ್ಚೆಂಬ ಭ್ರಮೆ ಕಳೆದು,
ಗೂಡ ದಾರಿಯಲಿರ್ದ ಗಿಳಿಮೊಗವು ಪೆಚ್ಚು... Waahh

Tumbaa ಚಂದದ ಕವನ Sushrutha...

ಅಭಿನಂದನೆಗಳು...

Anonymous said...

ನಮಸ್ತೆ,

ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/

PrashanthKannadaBlog said...

ಆತ್ಮೀಯ ಸುಶ್ರುತ
ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ. ಮನಸ್ಸಿಗೆ ಮುದ ನೀಡಿತು.
ಹಾಗೆ ಸಮಯ ಸಿಕ್ಕಿದಾಗ ನನ್ನ ಬ್ಲಾಗ್ ಗೆ ಭೇಟಿ ಕೊಡಿ.
ಪ್ರೀತಿಯಿಂದ
ಪ್ರಶಾಂತ
http://prashanthkannada.blogspot.com/

ಆಲಾಪಿನಿ said...

ಅಲ್ಟಿಮೇಟೋ....