Wednesday, December 02, 2009

ಒಂದು ಹೆಸರಿಡದ ಪ್ರಬಂಧ

ಬಹುಶಃ ಈ ಕಷ್ಟವನ್ನು ಬಹಳಷ್ಟು ಜನ ಅನುಭವಿಸಿರುತ್ತಾರೆ. ಸ್ವಲ್ಪ ನಮಗೆ ಏನಾದರೂ ‘ಬರೆಯಲಿಕ್ಕೆ’ ಬರುತ್ತದೆ ಎಂದಾದರೆ ಸಾಕು, ಜನ ‘ನಮ್ಗೂ ಬರ್ಕೊಡು’ ಅಂತ ಮುತ್ತಿಕೊಂಡುಬಿಡುತ್ತಾರೆ.

ಊರಲ್ಲಿ ಅಪ್ಪನಿಗೆ ಇಂಥದೇ ಕಷ್ಟ ತಗುಲಿಹಾಕಿಕೊಳ್ಳುತ್ತಿತ್ತು. ಏನಾದರೂ ಅರ್ಜಿ ಬರೆಸುವುದಿದ್ದರೆ, ವರದಿ ಬರೆಸುವುದಿದ್ದರೆ, ಸನ್ಮಾನ ಪತ್ರ ಬರೆಸುವುದಿದ್ದರೆ ಜನ ಅಪ್ಪನ ಬಳಿ ಬರುತ್ತಿದ್ದರು. ಅಪ್ಪನ ಕೈಬರಹ ಸಹ ಅಷ್ಟೇ ಚಂದ ಇರುವುದರಿಂದ ಬರೆದದ್ದನ್ನು ಪ್ರಿಂಟ್ ಮಾಡಿಸುವ ಅವಶ್ಯಕತೆ ಸಹ ಇರುತ್ತಿರಲಿಲ್ಲ.

ಅರ್ಜಿ, ವರದಿ ಅಷ್ಟೇ ಅಲ್ಲದೇ ಅಪ್ಪನ ಬಳಿ ಬೋರ್ಡು, ಬ್ಯಾನರ್ರು, ಛತ್ರಿಯ ಮೇಲೆ ಹೆಸರು ಬರೆಸುವುದಕ್ಕೂ ಜನ ಬರುತ್ತಿದ್ದರು. ಕಪ್ಪು ಕೊಡೆಯ ಒಳಗೆ ಪೆನ್ಸಿಲ್ಲಿನಿಂದ ನೀಟಾಗೆರಡು ಗೆರೆ ಎಳೆದುಕೊಂಡು, ಜೀರೋ ಪಾಯಿಂಟ್ ಕುಂಚವನ್ನು ಪುಟ್ಟ ಆಯಿಲ್ ಪೇಯಿಂಟ್ ಡಬ್ಬಿಯೊಳಗೆ ಅದ್ದಿ ತೆಗೆದ ಬಣ್ಣದಿಂದ ‘ಜಿ. ನಾರಾಯಣರಾವ್, ದೊಡ್ಡೇರಿ’ ಅಂತಲೋ ‘ಸುಜಾತಾ ರಾಘವೇಂದ್ರ, ದೊಡ್ಡೇರಿ’ ಅಂತಲೋ ನಾಲಿಗೆ ಕಚ್ಚಿಕೊಂಡು, ತದೇಕಚಿತ್ತದಿಂದ ಬರೆಯುತ್ತಿದ್ದ ಅಪ್ಪ. ಪಕ್ಕದಲ್ಲಿ ಕೂತು ಅದನ್ನೇ ನೋಡುತ್ತಿದ್ದ ನನಗೆ ‘ಹಂದಾಡ್ಸಡ ಮತ್ತೆ.. ಅಪ್ಪ ಬೈತ’ ಅಂತ ಅಮ್ಮ ಅಡುಗೆಮನೆಯಿಂದ ಎಚ್ಚರಿಕೆ ಕೊಡುತ್ತಿದ್ದಳು. ಆದರೆ ಹಾಗೆ ನೋಡಿ ನೋಡಿಯೇ ಬಂತೋ ಅಥವಾ ಅಪ್ಪನ ಜೀನ್ಸಿನಲ್ಲೇ ಬಂದಿತ್ತೋ, ನನ್ನ ಕೈಬರಹವೂ ಮುದ್ದಾಗಿ ರೂಪುಗೊಂಡುಬಿಟ್ಟಿತು. ಶಾಲೆಯ ಪ್ರತಿವರ್ಷದ ‘ದುಂಡಕ್ಷರ ಸ್ಪರ್ಧೆ’ಯಲ್ಲೂ ನನಗೇ ಮೊದಲ ಬಹುಮಾನ ಬರುತ್ತಿದ್ದುದು. ಪರಿಣಾಮವಾಗಿ, ಈ ಬೋರ್ಡು ಬರೆಯುವ, ಛತ್ರಿ ಮೇಲೆ ಹೆಸರು ಬರೆಯುವ ಕೆಲಸ ಕೆಲವೇ ವರ್ಷಗಳಲ್ಲಿ ಅಪ್ಪನಿಂದ ನನಗೆ ವರ್ಗಾವಣೆಯಾಯ್ತು. ಅಪ್ಪನೇ ತನಗೆ ಯಾರಾದರೂ ಏನನ್ನಾದರೂ ಬರೆದುಕೊಡಲಿಕ್ಕೆಂದು ಕೊಟ್ಟದ್ದನ್ನು ನನಗೆ ವರ್ಗಾಯಿಸುತ್ತಿದ್ದ. ನಾನೂ ಖುಶಿಯಿಂದಲೇ ಅವನ್ನೆಲ್ಲ ಮಾಡುತ್ತಿದ್ದೆ.

ಆದರೆ ನಿಜವಾದ ಸಮಸ್ಯೆ ಶುರುವಾದದ್ದು ನಾನು ಕನ್ನಡದಲ್ಲಿ ಕತೆ-ಕವಿತೆ ಬೇರೆ ಬರೀತೀನಿ ಅನ್ನೋದು ಜನಕ್ಕೆ ಗೊತ್ತಾದಾಗ! ಈ ಕತೆ-ಕವಿತೆ ಬರಿಯೋರು ಇಡೀ ಪದಕೋಶವನ್ನೇ ಜಗಿದು ನುಂಗಿ ಜಠರದಲ್ಲಿಟ್ಟುಕೊಂಡಿರುತ್ತಾರೆ ಎಂದು ತಪ್ಪು ತಿಳಿದುಕೊಂಡಿರುವ ಜನ, ಅವಕಾಶ ಸಿಕ್ಕಾಗಲೆಲ್ಲ ನಮ್ಮನ್ನು ಪರೀಕ್ಷೆಗೊಡ್ಡುತ್ತಿರುತ್ತಾರೆ. ನಾವು ಯಾವುದೋ ಬ್ಯುಸಿಯಲ್ಲಿ ಮುಳುಗಿದ್ದಾಗ ಧಡಾರನೆ ಬಂದು, “ಈ ಶಬ್ದದ ಅರ್ಥ ಏನು?” ಅಂತಲೋ “ಇದಕ್ಕೆ ಕನ್ನಡದಲ್ಲಿ ಏನಂತಾರೆ?” ಅಂತಲೋ ನಾಲ್ಕು ಜನರ ಎದುರಿಗೆ ಕೇಳಿ ಅಲ್ಲೇ ನಿಂತುಬಿಡುತ್ತಾರೆ. ‘ಈ ನನ್ ಮಗನ ಮಾನ ಹರಾಜ್ ಹಾಕ್ಬೇಕು’ ಎಂದುಕೊಂಡು ಇಂತಹ ಸಂದರ್ಭಗಳನ್ನೇ ಕಾಯುತ್ತಿದ್ದ ನಮ್ಮ ನಸೀಬು ಆ ಕ್ಷಣದಲ್ಲೇ ಕೈ ಕೊಟ್ಟು, ನಾವು ಅದೆಷ್ಟೇ ಪ್ರಯತ್ನಪಟ್ಟರೂ ಆ ಶಬ್ದ ಗಂಟಲಿಂದ ಈಚೆಗೇ ಬರದೇ ಇರುವಂತೆ ಮಾಡುತ್ತದೆ. “ಹೆಹೆ, ಅದಾ.. ಹೆಹೆ..” ಎನ್ನುತ್ತಾ ನಾವು ಪೆಚ್ಚುನಗೆ ನಗುವಂತೆ ಮಾಡುತ್ತದೆ.

ಇರಲಿ, ಏನೋ ತಮಗೆ ಗೊತ್ತಿಲ್ಲದ್ದು ನಮಗೆ ಗೊತ್ತಿರಬಹುದು ಅಂತ ನಮ್ಮ ಬಳಿ ಬರುವ ಜನ ಇವರು. ಆದರೆ ನನಗೆ ವಿಪರೀತ ಕೋಪ ಬರುವುದು “ನನ್ ಹೆಂಡತಿಗೆ ಡೆಲಿವರಿ ಆಯ್ತು ಇವತ್ತು.. ಗಂಡು ಮಗು.. ‘ಸ’ ಅಕ್ಷರದಿಂದ ಶುರು ಆಗೋ ಒಂದು ಚಂದದ ಹೆಸರು ಹುಡುಕ್ಕೊಡು ಪ್ಲೀಸ್..” ಎನ್ನುತ್ತಾ ಯಾರಾದರೂ ಬಂದಾಗ. ಅಲ್ಲಾ ಸಾರ್, ಡೆಲಿವರಿ ಆಗಿರೋದು ಅವನ ಹೆಂಡತಿಗೆ, ಡೆಲಿವರಿ ಆಗೋಹಾಗೆ ಮಾಡಿರೋದು ಅವನು, ಈಗ ‘ಸ’ ಅಕ್ಷರದಿಂದ ಶುರುವಾಗೋ ಹೆಸರು ಹುಡುಕೋ ಕೆಲಸ ಮಾತ್ರ ನನಗೆ ವಹಿಸೋದು ಯಾವ ರೀತೀಲಿ ಸರಿ? ಅಲ್ಲಾ, ಅದರ ಅರ್ಥ ಬೇರೆ ಯಾವುದಾದರೂ ಕೆಲಸ ನಂಗೆ ವಹಿಸ್ಬೇಕಿತ್ತು ಅಂತ ಅಲ್ಲ, ಡೋಂಟ್ ಮಿಸ್ಟೇಕ್ ಮಿ, ನಾ ಹೇಳಿದ್ದು, ಈ ಜವಾಬ್ದಾರಿ-ತಲೆಬಿಸಿ ನನಗ್ಯಾಕೆ ಅಂತ? ಅದನ್ನೆಲ್ಲಾ ಅವನ ಬಳಿ ಹೇಳೋ ಹಾಗಿಲ್ಲ, ಏನೋ ಪಾಪ, ಅಪರೂಪಕ್ಕೆ ಅಪ್ಪ ಆಗಿದಾನೆ, ಫುಲ್ ಜೋಶಲ್ಲಿ ಇದಾನೆ, ನಾನು ಕನ್ನಡ ರತ್ನಕೋಶ ತೆರೆದಾದರೂ, ಗೂಗಲ್ ಸರ್ಚ್ ಮಾಡಿಯಾದರೂ ಅವನು ಹೇಳಿದ ಅಕ್ಷರದಿಂದ ಶುರು ಆಗೋ ಹೆಸರು ಹುಡುಕಿ ಹೇಳಬೇಕು.

ಇದೂ ಓಕೆ. ಮುಂದ್ಯಾವತ್ತೋ ‘ಅಂಕಲ್’ ಅಂತ ಮುದ್ದು ದನಿಯಿಂದ ನನ್ನನ್ನು ಕರೆಯಬಹುದಾದ ಮಗುವೊಂದಕ್ಕೆ ಹೆಸರು ಕೊಟ್ಟೆನಲ್ಲಾ ಅಂತ ಸಮಾಧಾನ ಮಾಡಿಕೊಳ್ಳಬಹುದು. ಆದರೆ ಕೆಲ ಗೆಳೆಯರು ಅದೆಂತಹ ಕೆಳ ಮಟ್ಟಕ್ಕೆ ಇಳಿಯುತ್ತಾರೆ ಅಂದ್ರೆ, ‘ನನ್ ಗರ್ಲ್‌ಫ್ರೆಂಡಿಗೆ ಕಳ್ಸೋಕೆ ಒಂದು ಒಳ್ಳೇ ಎಸ್ಸೆಮ್ಮೆಸ್ ಬರ್ಕೊಡೋ’ ಅಂತೆಲ್ಲ ಕೇಳುತ್ತಾರೆ. ಸ್ವಾಮೀ, ನಮ್ ನಮ್ ಗರ್ಲ್‌ಫ್ರೆಂಡ್ಸಿಗೆ ಎಸ್ಸೆಮ್ಮೆಸ್ ಕಳುಹಿಸ್ಕೊಂಡು ಇದ್ರೆ ಸಾಕಾಗಿರತ್ತೆ, ಇನ್ನು ಬೇರೆಯವರ ಗರ್ಲ್‌ಫ್ರೆಂಡ್ಸಿಗೆ ಎಸ್ಸೆಮ್ಮೆಸ್ ಬರೆದುಕೊಡುವ ಕಷ್ಟವನ್ನೂ ನಾವೇ ತೆಗೆದುಕೊಳ್ಳಬೇಕು ಎಂದರೆ! ‘ಒಬ್ಳಿಗೆ ಕಳ್ಸಿದ್ನೇ ಮತ್ತೊಬ್ಳಿಗೆ ಕಳುಹಿಸಿದ್ರೆ ಆಯ್ತು, ಅವ್ರಿಗ್ ಹೆಂಗ್ ಗೊತ್ತಾಗತ್ತೆ?’ಅಂತ ನೀವು ಕೇಳಬಹುದು, ಇಲ್ಲಾ ಗುರುಗಳೇ, ಅದು ಸಿಕ್ಕಾಪಟ್ಟೆ ಡೇಂಜರಸ್ಸು! “ನೋಡೇ, ನನ್ ಬಾಯ್‌ಫ್ರೆಂಡ್ ಎಷ್ಟ್ ಚಂದ ಎಸ್ಸೆಮ್ಮೆಸ್ ಕಳ್ಸಿದಾನೆ.. ಹಿ ಲವ್ಸ್ ಮಿ ಲೈಕ್ ಎನಿಥಿಂಗ್” ಎನ್ನುತ್ತಾ ತನ್ನ ರೂಮ್‌ಮೇಟಿನ ಮುಖಕ್ಕೆ ಮೊಬೈಲಿನ ಪರದೆಯನ್ನು ಇವಳು ಒಡ್ಡಿದ್ದೇ ತಡ, “ಹೆಹ್! ನಂಗೂ ಬಂದಿದೆ ಆ ಎಸ್ಸೆಮ್ಮೆಸ್. ನನ್ ಬಾಯ್‌ಫ್ರೆಂಡ್ ಕಳ್ಸಿರೋದು” ಎಂದವಳು ಮೂಗು ಮುರಿಯುತ್ತಾಳೆ. ಯು ಅಂಡರ್‌ಸ್ಟೂಡ್ ದ ಕೇಸ್ ರೈಟ್? ನಾನು ನನ್ ಗರ್ಲ್‌ಫ್ರೆಂಡಿಗೆ ಕಳುಹಿಸಿದ್ದ ಎಸ್ಸೆಮ್ಮೆಸ್ಸನ್ನೇ ಗೆಳೆಯನಿಗೂ ‘ಪಾಪ, ಅವನ್ ಗರ್ಲ್‌ಫ್ರೆಂಡಿಗೂ ಕಳುಹಿಸಿಕೊಳ್ಳಲಿ’ ಅಂತ ಫಾರ್ವರ್ಡ್ ಮಾಡಿದ್ದೇ ಆಗಿದ್ದು ತಪ್ಪು! ನೀತಿಯೆಂದರೆ, ಒಂದೇ ಹಾಸ್ಟೆಲ್ಲಿನಲ್ಲಿರೋ ಹುಡುಗಿಯರನ್ನು ಲವ್ ಮಾಡುತ್ತಿರುವ ಇಬ್ಬರು ಗೆಳೆಯರು ಹುಷಾರಾಗಿರಬೇಕು.

ಸರಿ, ಇವೆಲ್ಲ ಟೆಕ್ನಿಕಲ್ ಆಸ್ಪೆಕ್ಟ್ಸ್ ಆಯ್ತು. ಹೇಗೋ, ಸಂಭಾಳಿಸಬಹುದು ಅಂದುಕೊಳ್ಳೋಣ. ಈಗ ಕೆಲ ತಿಂಗಳ ಹಿಂದೆ ನನ್ನ ಎಕ್ಸ್-ಕಲೀಗೊಬ್ಬ ಫೋನ್ ಮಾಡಿದ್ದ. “ಸುಶ್ರುತ್, ನಮ್ಮನೆಗೊಂದು ಹೊಸ ನಾಯಿಮರಿ ತಂದ್ವಿ. ಅದಕ್ಕೆ ಇಡ್ಲಿಕ್ಕೆ ಒಂದು ಹೆಸರು ಹೇಳ್ತೀರಾ ಪ್ಲೀಸ್? ಕನ್ನಡದ್ದು ಬೇಕು. ಇಂಗ್ಲೀಷಿಂದ್ರ ಥರ ಇರ್ಬೇಕು. ಹೊಸಾ ಥರಾ ಇರ್ಬೇಕು. ಪ್ರಕೃತಿಗೆ ಸಂಬಂಧಿಸಿದ್ದಾಗಿರ್ಬೇಕು. ಕರೀಲಿಕ್ಕೆ ಈಜಿ ಇರ್ಬೇಕು. ಹೆಣ್ಣು ನಾಯಿ” ಅಂತ ಅರ್ಜಿಯಿಟ್ಟ. ನಾಯಿಗೆ ಹೆಸರಿಡುವುದು ಎಷ್ಟು ಕಷ್ಟದ ವಿಷಯ ಅಂತ ನನಗೆ ಅರಿವಾದದ್ದು ಆಗಲೇ. ನೋಡಿ, ಮೊದಲನೆಯದಾಗಿ ಅದು ಕನ್ನಡದ ಶಬ್ದ ಆಗಿರಬೇಕು, ಆದರೂ ಇಂಗ್ಲೀಷಿನದರಂತೆ ಧ್ವನಿಸಬೇಕು, ಹಿಂದೆಲ್ಲೂ ಕೇಳಿಲ್ಲ ಎನಿಸಬೇಕು, ಪರಿಸರಕ್ಕೆ ಸಂಬಂಧಿಸಿರಬೇಕು, ಎರಡ್ಮೂರು ಅಕ್ಷರಗಳಲ್ಲಿರಬೇಕು, ಸ್ತ್ರೀಲಿಂಗವಾಗಿರಬೇಕು -ಇಷ್ಟೆಲ್ಲಾ ಆಗಿದ್ದೂ ಅದು ನಾಯಿ ಹೆಸರು ಅಂತ ಗೊತ್ತಾಗಬೇಕು! ನಾಯಿಗೆ ಕವಿತಾ, ಕಾವೇರಿ, ಕನಕಮ್ಮ, ಕರುಮಾರಿಯಮ್ಮ ಅಂತೆಲ್ಲ ಹೆಸರಿಡಲಿಕ್ಕೆ ಆಗುವುದಿಲ್ಲ. ಮನುಷ್ಯರ ಹೆಸರೇ ಬೇರೆ ನಾಯಿನೇಮೇ ಬೇರೆ. ಬುದ್ದೀನೆಲ್ಲಾ ಖರ್ಚು ಮಾಡಿ, ಮಿನ್ನು, ಸರು, ಕೀಚು, ಬಾನು, ವರ್ಣಿ, ವೀಚಿ, ಸಿಂಪಿ -ಇತ್ಯಾದಿ ಹೆಸರುಗಳನ್ನು ಟೈಪಿಸಿ ಕಳುಹಿಸಿದೆ. ಆಮೇಲೊಮ್ಮೆ ಅವರ ಮನೆಗೆ ಹೋದಾಗ ಪೋರ್ಟಿಕೋದಲ್ಲಿ ಕಟ್ಟಿಹಾಕಿದ್ದ ನಾಯಿಯ ಬಳಿಗೆ ಕರೆದೊಯ್ದ ಅವನು, “ಸಿಂಪೀ, ಇವರೇ ನೋಡು, ನಿಂಗೆ ಹೆಸರು ಕೊಟ್ಟವರು” ಅಂತ ನನ್ನನ್ನು ನಾಯಿಗೆ ಪರಿಚಯಿಸಿಕೊಟ್ಟ. ಸಿಂಪಿ ಕೆಕ್ಕರಿಸಿಕೊಂಡು ನೋಡುತ್ತಿತ್ತು.

ಅದಾಗಿ ಕೆಲ ದಿವಸಕ್ಕೇ, ಮೈಸೂರಿನ ಗೆಳೆಯನೊಬ್ಬ ಫೋನಿಸಿ “ಗುರೂ, ಫ್ರೀ ಇದೀಯಾ?” ಅಂತ ಕೇಳಿದ. “ಹೂಂ, ಹೇಳು ಗುರು” ಎಂದೆ. “ಒಂದು ಶವವಾಹನಕ್ಕೆ ಹೆಸರು ಹೇಳಯ್ಯಾ” ಅಂತ ಕೇಳಿದ. ಕೂತಿದ್ದ ಜಾಗದಿಂದೊಮ್ಮೆ ಜಿಗಿದು ಕೂತೆ! “ಏನಂದೇ?” ಅಂತ ಮತ್ತೊಮ್ಮೆ ಕೇಳಿದೆ. “ಹೂಂ ಗುರು. ನಮ್ಮ ಟ್ರಸ್ಟ್ ಹೆಸರಲ್ಲಿ ಮೈಸೂರಿಗೆ ಒಂದು ಉಚಿತ ಶವವಾಹನ ವ್ಯವಸ್ಥೆ ಮಾಡ್ಬೇಕು ಅಂತ ನಮ್ ತಂದೆ ಡಿಸೈಡ್ ಮಾಡಿದಾರೆ. ಅದಕ್ಕೊಂದು ಚಂದದ ಹೆಸರು ಬೇಕಾಗಿತ್ತು. ನಿನ್ ನೆನಪಾಯ್ತು, ಹಾಗೇ ಕಾಲ್ ಮಾಡ್ದೆ” ಅಂದ. ನಾನು ಕನ್ನಡಪ್ರೇಮಿಯೂ ಬರಹಗಾರನೂ ಆದುದರ ಬಗ್ಗೆ ಮೊದಲ ಬಾರಿ ವಿಷಾದ ಪಟ್ಟುಕೊಂಡದ್ದೇ ಆವಾಗ! ಹೋಗೀ ಹೋಗಿ ಶವವಾಹನಕ್ಕೆ ಹೆಸರಿಡಬೇಕಾದರೆ ಜನಕ್ಕೆ ನನ್ನ ನೆನಪಾಗುವ ಹಾಗೆ ಆಯ್ತಲ್ಲಾ, ಛೇ ಅನ್ನಿಸಿತು. ಉರಿದು ಉಕ್ಕಿ ಬರುತ್ತಿದ್ದ ದುಃಖ-ಸಿಟ್ಟುಗಳನ್ನು ತಡೆಹಿಡಿದು, ‘ಕೈಲಾಸಮುಖಿ’, ‘ವೈಕುಂಟಯಾತ್ರೆ’, ‘ಮುಕ್ತಿಬಂಡಿ’, ‘ಸಮಾಧಿಯೆಡೆಗೆ’ ಅಂತೆಲ್ಲ ಏನೇನೋ ಅವನಿಗೆ ಸೂಚಿಸಿದೆ. ಎಲ್ಲಾ ಕೇಳಿಸಿಕೊಂಡಾದಮೇಲೆ, “ಅವೆಲ್ಲಾ ಆಲ್ರೆಡಿ ಇದಾವೆ ಗುರೂ, ಏನಾದ್ರೂ ಕ್ರಿಯೇಟಿವ್ವಾಗಿ ಹೇಳೋ” ಅಂದ. ದುಃಖ-ಸಿಟ್ಟು ಉಕ್ಕಿ ಬಿದ್ದೇಬಿಟ್ಟಿತು: “ಹೆಣ ಒಯ್ಯೋ ಗಾಡಿಯಲ್ಲೂ ಎಂಥಾ ಕ್ರಿಯೇಟಿವಿಟಿನಯ್ಯಾ? ನಂಗೇನೂ ಹೊಳೀತಿಲ್ಲ. ಏನಾದ್ರೂ ಇಟ್ಕೊಂಡು ಸಾಯಿ” ಅಂತ ಕಿರುಚಿ ಫೋನಿಟ್ಟಿದ್ದೆ.

ಅವತ್ತಿಡೀ ಮೂಡು ಹಾಳಾಗಿಯೇ ಇತ್ತು. ಇನ್ನು ಮೇಲೆ ಯಾರೇ ಇಂತಹ ಸಹಾಯ ಕೇಳಿದರೂ ಮಾಡಿಕೊಡಬಾರದು ಅಂತ ತೀರ್ಮಾನಿಸಿದೆ. ಮಾಡಿಕೊಡುವುದಿದ್ದರೂ ‘ಛಾರ್ಜ್’ ಮಾಡಬೇಕು ಅಂತ ಅಂದುಕೊಂಡೆ. ಈ ತರಹದ ಸಲಹೆ ನೀಡುವುದನ್ನೇ ನನ್ನ ವೃತ್ತಿಯಾಗಿ ಮಾಡಿಕೊಂಡರೆ ಹೇಗೆ ಅಂತಲೂ ಯೋಚಿಸಿದೆ. ಕೊನೆಗೆ, ಉಕ್ಕಿಬಿದ್ದಿದ್ದ ದುಃಖ-ಸಿಟ್ಟುಗಳು ತಣ್ಣಗಾದಮೇಲೆ, ‘ಇವೆಲ್ಲಾ ಏನು ಬಹಳ ದೊಡ್ಡ ಕೆಲಸಗಳಾ? ಅಥವಾ ಹೀಗೆ ಕೊಡುವ ಸಣ್ಣಪುಟ್ಟ ಸಲಹೆಗಳಿಂದ ನಾನೇನಾದರೂ ಕಳೆದುಕೊಳ್ಳುತ್ತೇನಾ? ಇವೇನು ಮಹದುಪಕಾರಗಳಾ?’ ಅಂತೆಲ್ಲ ನನಗೆ ನಾನೇ ಪ್ರಶ್ನಿಸಿಕೊಂಡು, ಸಿಕ್ಕ ಉತ್ತರ ಕಂಡು ನಾಚಿಕೊಂಡು, ‘ನಾನು ಮಾಡುತ್ತಿರುವ ಸಾವಿರಾರು ಪಾಪಕಾರ್ಯಗಳಿಂದಾಗಿ ನರಕದಲ್ಲಿ ನನಗೆ ವಿಧಿಸಬಹುದಾದ ಶಿಕ್ಷೆಯಲ್ಲಿ ಸ್ವಲ್ಪವಾದರೂ ಕನ್ಸಿಷನ್ ದೊರೆತೀತು ಬಿಡು’ ಅಂತ ಸಮಾಧಾನ ಮಾಡಿಕೊಂಡಿದ್ದೆ.

ಇವೆಲ್ಲ ನೆನಪಾದದ್ದು ಮೊನ್ನೆ ದುಬಾಯಿಯಲ್ಲಿರುವ ಗೆಳೆಯನೊಬ್ಬ ತನ್ನ ಮಗುವಿನ ಫೋಟೋ ಮೇಯ್ಲ್ ಮಾಡಿ ‘ಇದನ್ನ ತರಂಗಕ್ಕೆ ಕಳುಹಿಸ್ತಾ ಇದೀನಿ. ಇದಕ್ಕೊಂದು ಕ್ಯಾಪ್ಷನ್ ಲೈನು ಕೊಡು’ ಅಂತ ಕೇಳಿದಾಗ. ಆದರೆ ಈ ಸಲ ನಾನು ಹೆಚ್ಚಿಗೆ ರಿಸ್ಕ್ ತೆಗೆದುಕೊಳ್ಳದೇ ಆ ಮೇಯ್ಲನ್ನು ನನ್ನ ಕೆಲ ಕನ್ನಡ ಬಲ್ಲ ಗೆಳತಿಯರಿಗೆ ಫಾರ್ವರ್ಡ್ ಮಾಡಿದೆ. ‘ಇಂತಹ’ ಕೆಲಸಗಳಲ್ಲಿ ಹುಡುಗಿಯರು -ಅದರಲ್ಲೂ ಗೃಹಿಣಿಯರು- ಬಹಳ ಚುರುಕಿರುತ್ತಾರೆ ಎಂಬುದು ನನ್ನ ನಂಬುಗೆಯಾಗಿತ್ತು. ನಂಬುಗೆ ಉಳಿಯಿತು ಕೂಡಾ, ಅವರ ರಿಪ್ಲೇಗಳನ್ನು ನೋಡಿ. ಆ ಎಲ್ಲ ಪ್ರತಿಕ್ರಿಯೆಗಳನ್ನೂ ಒಟ್ಟಿಗೆ ಹಾಕಿ ದುಬಾಯಿ ಗೆಳೆಯನಿಗೆ ಕಳುಹಿಸಿದೆ. ಕೊನೆಗವನು ಅದರಲ್ಲಿ ಯಾವ ಸಾಲು ಆಯ್ದು ಕಳುಹಿಸಿದನೋ, ಅದು ತರಂಗದಲ್ಲಿ ಪ್ರಕಟವಾಯ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ನಾನು ಮಾತ್ರ ಇದನ್ನೇ ಬಂಡವಾಳವಾಗಿಸಿಕೊಂಡು ಬರೆದ ಈ ಪ್ರಬಂಧವನ್ನು, ಹೆಸರಿಡದೇ, ತರಂಗಕ್ಕೇ ಕಳುಹಿಸುತ್ತಿದ್ದೇನೆ. ಇನ್ನೆಲ್ಲಾ ಸಂಪಾದಕರ ಕಷ್ಟ.

[ಇದನ್ನ ಹೀಗೇ ತರಂಗಕ್ಕೆ ಕಳುಹಿಸಿದ್ದೆ. ಆದ್ರೆ ಉದಯವಾಣಿಯವರು ಇದನ್ನು ಅಪಹರಿಸಿ ತಮ್ಮ ಸಾಪ್ತಾಹಿಕ ಸಂಪದದಲ್ಲಿ ಹಾಕಿಕೊಂಡಿದ್ದಾರೆ (of course, ಹೆಸರಿಡದೆ; ಕೊನೆಯ ಪ್ಯಾರಾ ಕಿತ್ತುಹಾಕಿ!). ಅವರೆಡೆಗೆ ನಂದೊಂದು ಕೇಜಿ ಕೋಪ. :x ;) ]

24 comments:

ತೇಜಸ್ವಿನಿ ಹೆಗಡೆ said...

ಆಹಾ.. ಅದ್ಕೇನಾ ನೀನಾವತ್ತು ನಂಗೊಂದು ಕೆಪ್ಷನ್ ಕೊಡೆ ಅಂತ ಮೈಲ್ ಮಾಡಿ ನನ್ನ ಪ್ರಾಣ ತಿಂದಿದ್ದು! ಛೇ ಮೊದ್ಲೇ ಗೊತ್ತಿದ್ದಿದ್ರೆ ನಾನೂ ಛಾರ್ಜ್ ಹಾಕ್ತಿದ್ದೆ ನಿನ್ನ ಹತ್ರ. ಮೌನವಾಗಿ ಗಾಳ ಹಾಕೋದ್ರಲ್ಲಿ ನಿಸ್ಸೀಮ ಬಿಡು ನೀನು :)

ನಿನ್ನ ಹೆಸರಿಡದ ಲೇಖನ ಓದಿ ನಕ್ಕೂ ನಕ್ಕೂ ಸಾಕಾಯ್ತು. ನಗ್ಸಿದ್ದಕ್ಕೆ ಥ್ಯಾಕ್ಸು. (ಇದ್ಕೆ ಮಾತ್ರ ಛಾರ್ಜ ಹಾಕಡ ಮತ್ತೆ :-p :))

ಅಂದ ಹಾಗೆ ನಿನ್ನೀ ಕಷ್ಟದ ಅನುಭವ ನನಗೂ ಸಾಕಷ್ಟು ಬಾರಿ ಆಜು. "ಕನ್ನಡದಲ್ಲಿ ಎಂ.ಎ. ಮಾಡಿದ್ದೀಯ ಇಷ್ಟೂ ಹೇಳಲಾಗದೇ.." ಎಂದೇ ಶುರು ಮಾಡ್ತಾರೆ ಹೆಚ್ಚಿನವರು :( ನಾನು ಅದ್ರಲ್ಲಿ ಎಂ.ಎ. ಮಾಡಿದ್ದೇ ತಪ್ಪೇ ಎಂದೆನಿಸಲು ಶುರುವಾಗುತ್ತಿದೆ ಈಗೀಗ :( :)

ದಿವ್ಯಾ ಮಲ್ಯ ಕಾಮತ್ said...

ಸುಶ್ರುತ,
ಬರಹ ಚೆನ್ನಾಗಿದೆ - ಎಂದಿನಂತೆ :) ಮೊನ್ನೆ ಉದಯವಾಣಿಯಲ್ಲಿ ಓದಿದ್ದೆ.. ನಿಮ್ಮ ಬ್ಲಾಗ್ ನಲ್ಲೂ ನಿರೀಕ್ಷಿಸುತ್ತಿದ್ದೆ..ಈಗ ಕೊನೆಯ ಪ್ಯಾರಾದ ಕುರಿತು ಹಾಗೂ ನಿಮ್ಮ ಕೆ.ಜಿ. ಕೋಪದ ಬಗ್ಗೆ ಓದಿ ನಗು ಬಂತು :) ಇರ್ಲಿ ಬಿಡಿ.. ತರಂಗ ಉದಯವಾಣಿ ಎಲ್ಲಾ ಅಣ್ಣ ತಮ್ಮ ಪತ್ರಿಕೆಗಳು ;-) ಯಾವುದರಲ್ಲಿ ಬಂದರೇನಂತೆ? ಅಲ್ವಾ :-)

ಚಿತ್ರಾ said...

ಸುಶ್ರುತ,
ಸುಸ್ತಾಗೋತು ಮಾರಾಯ ! ಆಫೀಸ್ ನಲ್ಲಿ ಅಕ್ಕ ಪಕ್ಕದವೆಲ್ಲ ಹುಬ್ಬೇರಿಸಿ ಪ್ರಶ್ನಾರ್ಥಕವಾಗಿ , ಇವಳಿಗೆ ಏನಾತಪ ಅಂತ ನೋಡದೆ ಇರಹಂಗೆ ಕಷ್ಟ ಪಟ್ಟು ನಗು ತಡ್ಕಳಕಾದ್ರೆ , ಸುಸ್ತೇ ಆಗೋತು !
ಮಜಾ ಅಂದ್ರೆ , ಇಂಥಾ ಪ್ರಸಂಗ ನಂಗೂ ಬತ್ತು . ಮುಂಚೆ ಕೆಲವರು ' ಕನ್ನಡ ಮೇಷ್ಟ್ರ ' ಮಗಳಿಗೆ ಕನ್ನಡ ಶಬ್ದಕೋಶ ಬಾಯಿಪಾಠ ಆಗಿರವು ಹೇಳಿ ತಿಳ್ಕಂಡು ಅರ್ಥ ಕೇಳ್ತಾ ಬತ್ತಿದ್ದ . ಕಡೆಗೆ ಒಂದು ದಿನ ನಾನೇ ಬೇಜಾರಾಗಿ , ' ಮೇಷ್ಟ್ರು ' ನನ್ನ ಅಪ್ಪ , ನಾನಲ್ಲ ಹೇಳಿ ಹೇಳಕಾತು.
ಈಗ ನನ್ನ ಮಗಳಿಗೆ ಒಂದೊಂದು ಸಲ ಕನ್ನಡದ ಮೇಲೆ ಭಾಳ ಪ್ರೀತಿ ಬಂದು ಯಾವುದೋ ಶಬ್ದ ಹಿಡ್ಕಂಡು ಬಂದು ನನ್ನತ್ರ ಅರ್ಥ ಕೇಳದು. ಆಗ ಖಂಡಿತವಾಗೂ ನಂಗೆ ಅದರ ಅರ್ಥ ನೆನಪಾಗದೆ ಮಗಳ ಹತ್ರ " ನೀನು ಕನ್ನಡ ಮೀಡಿಯಂ ನಲ್ಲಿ ಕಲ್ತು ಎಂತಾ ಪ್ರಯೋಜನ ' ಹೇಳಿಸಿ ಕೊಳ್ಳ ಪ್ರಸಂಗ !!!
ಏನೇ ಅಂದ್ರೂ , ನೀನು ನಾಯಿಗೆ ಹೆಸರು ಹುಡುಕಿದ್ದು ಮಸ್ತ್ ಇದ್ದು ಬಿಡು ! ಒಂದು ಬೋರ್ಡ್ ಹಾಕ್ಯ . ಇಲ್ಲಿ ಹೆಸರು ಹುಡುಕಿ ಕೊಡಲಾಗುತ್ತದೆ ಅಂತ. ಚಾರ್ಜ್ ಎಷ್ಟು ಅಂತನೂ ಬರೆದು ಬಿಡು ( ಇಂತಿಷ್ಟು ಅಕ್ಷರದ್ದಾದರೆ ಇಷ್ಟು , ಅರ್ಥವುಳ್ಳ ಹೆಸರಿಗೆ ಇಷ್ಟು , ಅಪರೂಪದ್ದಾದರೆ ಷ್ಟು, ನಾಯಿಗಾದರೆ , ಮನುಷ್ಯರಿಗಾದರೆ ... ಇತ್ಯಾದಿ ) . ಚಾರ್ಜ್ ಮಾಡ ಬಗ್ಗೆ idea ಬೇಕಾದ್ರೆ , ನನ್ನ ಬ್ಲಾಗ್ ನ ಪುಣೆ ಫಲಕಗಳನ್ನು ನೋಡು .

Vijaya said...

hey ... keechu pullinga pa ... :-)

sunaath said...

ಸುಶ್ರುತ,
ಒಳ್ಳೇದಾಯ್ತ್ರೀ ಮಾರಾಯ್ರೆ. ಇನ್ನು ಮೇಲೆ, ಯಾವಾಗಲಾದರೂ ಹೆಸರು ಬೇಕಾದರೆ, ನಿಮ್ಮನ್ನೇ contact
ಮಾಡ್ತೀನಿ!

ಸಾಗರದಾಚೆಯ ಇಂಚರ said...

ತುಂಬಾ ನಗು ಬಂತು ನಿಮ್ಮ ಹೆಸರಿಡದ ಪ್ರಭಂಧ ಓದಿ
ತುಂಬಾ ಕ್ರಿಯೇಟಿವಿಟಿ ಇದ್ರೆ ಅದೇ ಕಷ್ಟ

ಎಲ್ಲದಕ್ಕೂ ಜನ ಬರ್ತಾರೆ :)
ಸುಂದರ ಬರಹ

sunaath said...

ಸುಶ್ರುತ,
ನನ್ನ ಹೆಂಡ್ತಿ ಶಟಗೊಂಡು ತವರು ಮನೆಗೆ ಹೋಗ್ಯಾಳಪಾ. ದಯವಿಟ್ಟು ಒಂದು ಪ್ರೇಮಪತ್ರ ಬರದುಕೊಡೋ ಮಾರಾಯಾ. ಆಕಿ ವಿಳಾಸ ಕೊಡ್ತೀನಿ; ಅಲ್ಲಿಗೇ ಕಳಸಿ ಬಿಡು. ಹ್ಞಾ, ಸಹಿ ಮಾತ್ರ ಸುನಾಥ ಅಂತ ಮಾಡಪಾ, ಸುಶ್ರುತ ಅಂತ ಅಲ್ಲ.
(ಇದರಿಂದ ನಿನಗೂ ಛಲೋ practice ಆಗ್ತದ, ನೋಡು!)

Sushrutha Dodderi said...

ತೇಜಕ್ಸ್,
ನಿಂಗೆ ಹಂಗೇ ಆಗವು. :P

ದಿವ್ಯಾ,
ಅದು ಹಂಗಲ್ರೀ.. ಅವ್ರು ಹೇಳ್ದೇ ಕೇಳ್ದೇ ಹಾಕ್ಕೊಂಡ್ರಲ್ಲಾ ಅಂತ ಕೋಪ. ನಂಗೆ ಉದಯವಾಣೀಲಿ ಬಂದಿದ್ದೇ ಗೊತ್ತಿರ್ಲಿಲ್ಲ. ಮರುದಿನ ಯಾರೋ mail ಮಾಡಿ 'ನಿಮ್ article ನಿನ್ನೆಯ ಉದಯವಾಣಿಯಲ್ಲಿ ಓದಿದೆ' ಅಂದಾಗ್ಲೇ ಗೊತ್ತಾಗಿದ್ದು! :(

ಚಿತ್ರಕ್ಕ,
ಹೆಹೆ.. ಒಳ್ಳೇ ಚನಾಗಿದ್ದು ನಿನ್ ಕತೆ! :D
ನೋಡವು, ಬೋರ್ಡ್ ಬರ್ಸೋ (ಅಥವಾ ನಾನೇ ಬರ್ಕೊಳ್ಳೋ) ಆಲೋಚನೆ ಇದ್ದು. ;)

Vijaya,
ಇಲ್ಲ ಮೇಡಂ.. 'ಕೀಚು' ಅಂದ್ರೆ ಹಕ್ಕಿಗಳ ಕೂಗು (twitter) ಅಂತ ಅರ್ಥ. ಸ್ತ್ರೀಲಿಂಗ - ಪುಲ್ಲಿಂಗ ಎರಡಕ್ಕೂ ಬಳಸಬಹುದು.

sunaath 1 & 2,
ಕಾಕಾ.. ದಿಸಿಸ್ ಟೂಮಚ್ಚು! ನಾನು ಆಂಟಿಗೆ ಹೇಳ್ತೀನಿ ಈಗ್ಲೇ. :x :P

ಇಂಚರ,
ಹೂಂ ಮಾರಾಯಾ! :O

ಮೃತ್ಯುಂಜಯ ಹೊಸಮನೆ said...

ನರಕದಲ್ಲಿ ಶಿಕ್ಷೆ ತುಸು ಕಡಿಮೆಯಾಗಬಹುದು ಎಂದು ನಿರೀಕ್ಷಿಸಿದ್ದೀರಿ. ನಂಗನುಮಾನ! ಅಲ್ಲಿ ಚಿತ್ರಗುಪ್ತ ಅಥವಾ ಸ್ವತಃ ಯಮಧರ್ಮರಾಯ ಈ ಲೇಖನ ಓದಿ ಅಲ್ಲಿ ಕೊಡುವ ನಾನಾ ರೀತಿಯ ಕಷ್ಟಗಳಿಗೆ ಹೆಸರಿಡುವ ಕೆಲಸ ಕೊಡಬಹುದು-ಬೇಕಿದ್ದರೆ ಆ ಕಷ್ಟಗಳನ್ನು ಒಮ್ಮೆ ಅನುಭವಿಸಿ ಹೆಸರಿಡಿ ಅಂದರೆ ಇನ್ನೂ ಕಷ್ಟ! ಜೋಪಾನ!

ಸುಮ said...

ಹ..ಹ.. ಹ ನಕ್ಕು ನಕ್ಕು ಸುಸ್ತು. ನನ್ನ ಅನುಭವ ಸ್ವಲ್ಪ ಬೇರೆ . ಚಿಕ್ಕವಳಿದ್ದಾಗಿನಿಂದ ಹೆಸರಿಡುವುದೆಂದರೆ ನನಗೆ ಮತ್ತು ನನ್ನ ತಂಗಿಗೆ ತುಂಬ ಇಷ್ಟವಾಗಿತ್ತು. ಮನೆಯಲ್ಲಿ ಚಿಕ್ಕಮ್ಮಂದಿರು ಅತ್ತೆಯರು ತಾಯಾಗಲಿದ್ದಾರೆ ಎಂದರೆ ಸಾಕು , ನಮ್ಮ ಲಿಸ್ಟ್ ತಯಾರಿರುತ್ತಿತ್ತು. ಅವರಗೆ ಇಷ್ಟ ಇದೆಯೋ ಇಲ್ಲವೋ ನಾವು ಸೂಚಿಸಿದ ಹೆಸರೇ ಇಡಬೇಕು ಎಂದು ಒತ್ತಾಯಿಸುತ್ತಿದ್ದೆವು. ಅದೂ ನನ್ನ ಹೆಸರು ಸುಮ ಎಂದಿರುವುದರಿಂದ "ಸು" ಕಾರದಿಂದ ಪ್ರಾರಂಭವಾಗುವ ಹೆಸರನ್ನೇ ಸೂಚಿಸುತ್ತಿದ್ದೆವು!! ಪಾಪ ಅವರೆಲ್ಲ ಅದನ್ನು ಬೇಸರವಿಲ್ಲದೆ ಪಾಲಿಸುತ್ತಿದ್ದರು .ನನ್ನ ಚಿಕ್ಕಪ್ಪಂದಿರು , ಮಾವಂದಿರ ಮಕ್ಕಳ ಹೆಸರೆಲ್ಲವೂ "ಸು" ಕಾರದಿಂದಲೇ ಪ್ರಾರಂಭವಾಗುತ್ತದೆ.
"ಸುಶ್ರುತ" ಎಂಬ ಹೆಸರನ್ನು ಚಿಕ್ಕಪ್ಪನ ಮಗನಿಗೆ ಸೂಚಿಸಿದ್ದೆವು ಆದರೆ ಅವರು ಯಾಕೋ "ಸುಮಂತ " ಎಂದು ಹೆಸರಿಟ್ಟದ್ದಕ್ಕೆ ತುಂಬ ಸಿಟ್ಟು ಬಂದಿತ್ತು.
ಇನ್ನು ಮನೆಯ ನಾಯಿ , ಬೆಕ್ಕು , ಹಸುಗಳಿಗೆಲ್ಲ ಹೆಸರಿಡುವ ಹಕ್ಕು ಕೇವಲ ನನಗೆ ಮಾತ್ರ ಅಂತಲೇ ತಿಳಿದಿದ್ದೆ.
ನಿಮ್ಮ ಲೇಖನ ಓದಿ ಇದೆಲ್ಲವೂ ನೆನಪಾಯಿತು.ದನ್ಯವಾದಗಳು.

shridhar said...

ಸುಶ್ ...
ಹೆ ಹೆ ಹೆ ... ಒಳ್ಳೆ ಪಜೀತಿ ನೋಡು. ನಾನು ಬಿ ಎಸ್ಸಿ ಮಾಡಕಾದ್ರೆ ಹೀಂಗೆ ಸುಮಾರು ಜನ ಬರ್ತಿದ್ದ.
ಈ ಸಲ ವಾಲ್ ಮಾಗ್ಜಿನಗೆ ಅರ್ಟಿಕಲ್ ಬರಿಬೇಕು ನಾನು , ಎನಾದ್ರು ಬರ್ಕೊಡೊ. ಒಂದು ದೂದ್ ಕೊಲ್ಡ್
ಕೊಡ್ಸತಿನಿ ಅಂತಾ ಲಂಚ ಬೇರೆ. ಹೆ ಹೆ ಹೆ ಅದೆಲ್ಲ ನೆನಪಾತು .. ಮಸ್ತ್ ಬರಹ ..ಒಳ್ಳೆ ಹಾಸ್ಯ ..
ನಂಗು ಒಮೆ ಹೀಗೆ ಪತ್ರಿಕೆ .. ಪೆಪರ್ ಗೆಲ್ಲ ಬರೆಯವು ಅಂತ ಆಸೆ .. ಎನ ಮಾಡವು ಅದ್ಕೆ.... :) :)

ಚುಕ್ಕಿಚಿತ್ತಾರ said...

ಎಲ್ಲರಿಗೂ ಹೆಸರು ಹುಡುಕಿಕೊಟ್ಟೂ...ಕೊಟ್ಟೂ ಇಡಲು ಹೆಸರೇ ಸಿಗದೆ ಬರೆದ ” ಒ೦ದು ಹೆಸರಿಡದ ಪ್ರಬ೦ಧ ” ತು೦ಬಾ ಚೆನ್ನಾಗಿದೆ . ನಗಿಸಿದ್ದಕ್ಕೆ ಧನ್ಯವಾದಗಳು.

Anonymous said...

ee tara biiti sahaya keluva jana nammalli tumbaa. Avarigalla enu tiluvalike ella antha alla adru swalpa hottu kulitu yochisuva patiance avarigilla,yelladu instant aagi kaige sikkabeku hegandre MTR instant ready mix thara.Obba manushya pratidina ondiadu nimisha yavudadaru vishayada bagge kulitu yochisidare swalpanandru tiluvalike sigatte. nimma ee lekana nanu ee bagge yoochisyvante maditu.thanks.

ಆನಂದ said...

ಹ್ಮ್... ಕನ್ನಡ ಸೇವೆ ಮಾಡ್ಲಿಕ್ಕೆ ಎಷ್ಟೆಲ್ಲಾ ಅವಕಾಶ!
ಚೆನ್ನಾಗಿದೆ ಕಣ್ರೀ..... :)
ಅಂದ್ಹಾಗೆ, ಹುಟ್ಟಿದ ಮಕ್ಳಿಗೆ ಹೆಸರು ಕೊಡೀ ಅಂತ ಕಾಡೋರ ಬಗ್ಗೆ ತೇಜಸ್ವಿ ಎಲ್ಲೋ ಬರೆದ ಹಾಗೆ ನೆನಪು... ಅಯ್ಯೋ ಸರಿಯಾಗಿ ಈಗ್ಲೇ ನೆನಪಾಗ್ತಿಲ್ವೇ... :)

Dileep Hegde said...

Mast.. :)

Keshav.Kulkarni said...

ಓದಿ ತುಂಬ ನಗು ಬಂತು, ತುಂಬ ಖುಷಿನೂ ಆತು. ಹೀಗೆ ವಾರಕ್ಕೊಂದು ಪ್ರಬಂಧ ಬರೆದು ಕೊಡಪ್ಪ!

- ಕೇಶವ

umesh desai said...

ಸುಶ್ರುತ ಸೊಗಸಾಗಿದೆ ಲೇಖನ ಅನುಭವ ನಂಗೂ ಆಗಿದ್ವು ಹುಬ್ಬಳ್ಳಿ ಅರ್ಬನ್ ಬ್ಯಾಂಕ್ ನಲ್ಲಿ ನಾ ಕೆಲಸಕ್ಕಿದ್ದೆ ಅಲ್ಲಿ ಕಟ್ಟಿ ಅಂತ
ಒಬ್ಬ ಅಟೆಂಡರ್ರು ನಾ ಊರಾಗಇಲ್ಲದಾಗ ನಮ್ಮ ಮನಿಗೆಬಂದಿದ್ದ ನನ್ನ ಹೆಂಡತಿ ನಾ ಕವಿ ಅಂತ ಹೇಳ್ಯಾಳ ಅವಾಗಿಂದ ಅವ
ನಂಗ ಕಾಡತಿದ್ದ ಅವನ ಸಾಲದ ಅರ್ಜಿ, ಲೀವ್ ಅರ್ಜಿ ಬರದುಕೊಡತಿದ್ದೆ. ಬೆಂಗಳೂರಿಗ ಬಂದ್ರೂ ಕಾಟ ಹೊಸರೂಪದಾಗ ಇತ್ತು
ನನ್ನ ಅಳಿಯನ(ಯಾರು ಅಂತ ನಿಮಗೂ ಗೊತ್ತು) ಹೊಸಾ ಮನಿಗೆ ಹೆಸರು ಸೂಚಸಬೇಕಾತು. ನಿಮ್ಮ ಹೆಸರಿರದ ಲೇಖನ ಸೊಗಸಾಗಿದೆ

PARAANJAPE K.N. said...

ಸುಶ್,
ಚೆನ್ನಾಗಿದೆ ಹೆಸರಿಲ್ಲದ ಪ್ರಬಂಧ. ನನಗೂ ಕೆಲವರು ಹೆಸರು ಕೇಳಿ ತಲೆ ತಿನ್ನುತ್ತಿರುತ್ತಾರೆ, ಇನ್ನು ಮು೦ದೆ ನಿಮ್ಮನ್ನು ಸ೦ಪರ್ಕಿಸಲು ಹೇಳುವುದೆ೦ದು ತೀರ್ಮಾನಿಸಿದ್ದೇನೆ.

ಸುಪ್ತವರ್ಣ said...

ಚೆನ್ನಾಗಿ ಬರೆದಿದ್ದೀರಿ. ತೇಜಸ್ವಿಯವರ ಪಾಕಶಾಸ್ತ್ರದ ಒಂದು ಭಾಗ ನೆನಪಾಯಿತು!

sughosh s. nigale said...

ಸೂಪರ್ ಲೇಖನ...ಕೀಪ್ ರೈಟಿಂಗ್....

ಸಂದೀಪ್ ಕಾಮತ್ said...

ಸೂಪರ್ ಲೇಖನ!

ಸಿಂಧು sindhu said...

ಸು,
ಎಲ್ಲರ ಆಶಯಕ್ಕೆ ಮತ್ತು ಅನುಕೂಲಕ್ಕೆ ಸ್ಪಂದಿಸಿ ತಲೆಕೆಡಿಸಿಕೊಂಡ ಮೇಲೂ ಪ್ರಬಂಧ ಬರೆಯಲು ಆಗುವಷ್ಟು ಮಂಡೆ ತಣ್ಣಗಿರಿಸಿಕೊಂಡಿರುವುದು ಸಂತಸದ ವಿಷಯ.
ಪ್ರಾಬ್ಲಂ ಏನೂ ಅಂದ್ರೆ ಬರ್ಕೊಡುವುದಲ್ಲ. ಒಂದೆರಡು ಬರ್ಕೊಟ್ಟಾದ್ಮೇಲೆ ನಾನ್ಯಾಕೆ ಬರ್ಕೊಡ್ಬೇಕು ಅಂತ ಯೋಚನೆ ಮಾಡೋದು.

ಏನೇ ಆಗ್ಲಿ ನಿನ್ ಮಕ್ಳು ಮುಂದೊಂದು ದಿನ ಎಸ್.ಎಂ.ಎಸ್ ಪ್ರಬಂಧ ಬರಿಯುವಾಗ ಈ ಟಾಪಿಕ್ಕಿಗೆ ಲಿಂಕ್ ಮಾಡೇ ಮಾಡ್ತ ನೋಡ್ತಿರು. :)

ದುಂಡಕ್ಷರ ಸ್ಪರ್ಧೆಯಲ್ಲಿ ಫಸ್ಟ್ ಬರುವುದೇನೂ ಸಣ್ಣದಲ್ಲ ಮತ್ತೆ.
ದುಂಡಗೆ ಬರೆಯಬೇಕಲ್ಲ. :)

ಅಕ್ಷರದಷ್ಟೇ ಚಂದಾಗಿ ಗಾಳವನ್ನೂ ಹಾಕುತ್ತಿದೀಯ.

ಪ್ರೀತಿಯಿಂದ
ಸಿಂಧು

Sushrutha Dodderi said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಚಿಂದಕ್ಕ,
U r going naughty! ;)

Anonymous,

ಅಷ್ಟೆಲ್ಲ ಸೀರಿಯಸ್ ಆಗ್ಬೇಡ್ರೀ! :O

ಗೋಪಾಲ್ ಮಾ ಕುಲಕರ್ಣಿ said...

super ... :):)