ನಮಸ್ಕಾರ. ಹೇಗಿದ್ದೀರಿ?
ನಿನ್ನೆ ರಾತ್ರಿ ಹನ್ನೆರಡಕ್ಕೆ ನಿಮ್ಮ ಕಾದಂಬರಿ 'ದ್ವೀಪವ ಬಯಸಿ' ಓದಿ ಮುಗಿಸಿದೆ. ಇನ್ನೂ ಹೊರಬರಬೇಕಿದೆ. ಅದೆಷ್ಟ್ ಚನಾಗ್ ಬರ್ದಿದೀರಾ! ಗೊಲ್ಲರಹಳ್ಳಿಯಿಂದ ಲಾಸ್ ಏಂಜಲೀಸ್ವರೆಗೆ, ಲಾಸ್ ಏಂಜಲೀಸಿನಿಂದ ಅಮೂರ್ತದೆಡೆಗೆ -ಪ್ರತಿ ಪುಟದಲ್ಲೂ ಮುಂದಿನ ಪುಟದಲ್ಲೇನಾಗುತ್ತೋ ಅನ್ನೋ ಕುತೂಹಲ ಹುಟ್ಟಿಸ್ತಾ, ಸಸ್ಪೆನ್ಸನ್ನು ಬೆಳೆಸ್ತಾ, ಹೊಸ ರೂಪಕಗಳೊಂದಿಗೆ ಹೊಸ ರಾಗಗಳೊಂದಿಗೆ ಹೊಸ ಹೊಳಹುಗಳೊಂದಿಗೆ ಸಾಗುವ ನಿಮ್ಮ ಕಾದಂಬರಿ ಓದಿದ್ದು ನನಗೆ ತುಂಬಾ ಖುಶಿ ನೀಡಿತು. ಮುಕ್ತವಾಗಿ, ತುಂಬ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ: ಇತ್ತೀಚೆಗೆ ನಾನು ಓದಿದ ಅತ್ಯುತ್ತಮ ಕಾದಂಬರಿ ಇದು.
ಶುರುವಿನಲ್ಲೇ ಕಾರ್ಪೋರೇಟ್ ಜಗತ್ತಿನ ಪರಿಮಳ ಚೆಲ್ಲಿ ನನಗೆ 'ಶಿಕಾರಿ'ಯನ್ನು ನೆನಪಿಸಿದ ನಿಮ್ಮ ಕಾದಂಬರಿ, ಆಮೇಲೆ ತಮ್ಮನನ್ನು ಹುಡುಕುವ ಶ್ರೀಕಾಂತನ ನಿರೂಪಣೆ ಓದುವಾಗ 'ಅರೆ, ಅದ್ರಲ್ಲೂ ಹೀಗೇ ಇತ್ತು' ಅನ್ನಿಸಿಬಿಟ್ಟಿತು. ಆದರೆ ಶಿಕಾರಿಯಷ್ಟು ಕ್ಲಿಷ್ಟ ಭಾಷೆಯಲ್ಲಿಲ್ಲದೇ, ಶಿಕಾರಿಗಿಂತ ಆಧುನಿಕವಾಗಿ, ಶಿಕಾರಿಗಿಂತ ಕುತೂಹಲಕಾರಿಯಾಗಿ, ಶಿಕಾರಿಗಿಂತ ಆಪ್ತವಾಗಿ ಓದಿಸಿಕೊಂಡುಹೋಯಿತು. ಮೊದಲ ಪುಟದ ಅಕ್ಷರಗಳಲ್ಲೇ ಪುಟಿದೇಳುವ ಉತ್ಸಾಹ ಮಧ್ಯದಲ್ಲೆಲ್ಲೂ 'ಡಲ್' ಎನಿಸಲಿಲ್ಲ. ನಗರ, ವಿಮಾನ, ವೇಗ, ಕಂಪನಿ, ಸಾಫ್ಟ್ವೇರ್, ಪ್ರಾಜೆಕ್ಟ್, ಟ್ರಾಫಿಕ್, ಪೆಟ್ರೋಲ್, ಹಣ, ಅಮೆರಿಕಾ -ಇಂತಹ ಕಾವ್ಯಕ್ಕೆ ದಕ್ಕದ ಪರಿಸರದಲ್ಲಿನ ಕತೆಯಿಟ್ಟುಕೊಂಡೂ ಇಷ್ಟು ನವಿರಾದ ಕಾದಂಬರಿ ಬರೆದ ನಿಮಗೆ ಹ್ಯಾಟ್ಸಾಫ್! ಮತ್ತು, ವಿಮಾನ ನಿಲ್ದಾಣವಿರಬಹುದು, ಕಾನ್ಫರೆನ್ಸ್ ರೂಮ್ ಇರಬಹುದು, ಫೋಟೋ ಎಗ್ಜಿಬಿಷನ್ ಇರಬಹುದು, ಯುದ್ಧವಿರಬಹುದು, ಮನಃಶಾಸ್ತ್ರಜ್ಞರ ಕ್ಲಿನಿಕ್ಕಿರಬಹುದು, ಕೊನೆಗೆ ಗಲಾಟೆಯ ಆರ್ಬಿಟ್ರೇಶನ್ ಹಾಲ್ ಇರಬಹುದು -ಎಲ್ಲೆಡೆ ಉದ್ಭವಿಸುವ ಬುದ್ಧರು ಅಥವಾ ಬುದ್ಧರಂತ ಅವಧೂತರನ್ನು ತೋರಿಸಿದ ನಿಮಗೆ ಶರಣು. ನಿಮ್ಮ ಕಾದಂಬರಿ ಓದುತ್ತಾ, ಪ್ರತಿಯೊಬ್ಬನಲ್ಲೂ ಇರುವ ಒಬ್ಬ ಬಿಕ್ಕಳಿಸುವ ಮನುಷ್ಯನನ್ನು ಕಂಡು ನಾನು ಕಣ್ತುಂಬಿಕೊಂಡಿದ್ದೇನೆ.
ಪ್ರತಿ ಅಧ್ಯಾಯವೂ ಬೇರೆಬೇರೆ ಕತೆಗಳನ್ನು ಹೇಳುವ -ಆದರೂ ಅವೆಲ್ಲ ಸೇರಿ ಒಂದೇ ಕತೆಯಾಗಿರುವ- ಎಲ್ಲರ ಕತೆಯಲ್ಲೂ ಎಲ್ಲರೂ ಇರುವ ಪರಿಗೆ ಬೆರಗಾಗಿದ್ದೇನೆ. ಜೋಳದಿಂದ ಇಂಧನ ತಯಾರಿಸುವ ಹಿಂದಿರುವ ಲಾಭ ಮತ್ತು ತೊಂದರೆಗಳ ಬಗೆಗೆ ಶ್ರೀಕಾಂತ್ ಮಾಡಿಕೊಳ್ಳುವ, ಸುಮಾರು ಮೂರ್ನಾಲ್ಕು ಪುಟಗಳಿರುವ, ನ್ಯೂಸ್ಪೇಪರಿನಲ್ಲೋ ಅಥವಾ ಬೇರ್ಯಾವುದೋ ಮಾಧ್ಯಮದಲ್ಲೋ ಬಂದಿದ್ದರೆ ಕಣ್ಣು ಹಾಯಿಸಲೂ ಸಹ ಸಹ್ಯವಾಗದಿದ್ದ, ನೋಟ್ಸ್ ಸಹ ನಮ್ಮಿಂದ ಸಹನೆಯಿಂದ ಓದಿಸಿಕೊಳ್ಳುತ್ತದೆ ಎಂದರೆ, ಬರೆದ ನಿಮ್ಮ ಕಲೆ ನಿಜಕ್ಕೂ ದೊಡ್ಡದು. ಲೇಆಫ್ ಡೇ-ಯ ಅಧ್ಯಾಯ ಓದುವಾಗ ಭಯದಿಂದ ನಮ್ಮೆದೆಯ ಢವವೇ ಏರುತ್ತ ಹೋದರೆ, ಯೊಸಿಮಿಟಿಯ ಸ್ವರ್ಗದ ವರ್ಣನೆಯಲ್ಲಿ ಕಾವ್ಯದ ಝರಿಯೇ ಎದೆಯಲ್ಲಿ ಹರಿಯುತ್ತದೆ. ನಿಮ್ಮ ಬರವಣಿಗೆಯ ಶೈಲಿ ಅದೆಷ್ಟು ಆಪ್ತವಾಗಿದೆಯಂದರೆ, ಪ್ರತಿ ಪಾತ್ರದ ತಲ್ಲಣವೂ ನಮ್ಮದಾಗುತ್ತದೆ. ಹಾರ್ವರ್ಡ್ ಬ್ರಿಜ್ಜಿನ ಮೇಲೆ ಶ್ರೀಕಾಂತ್ ಸೈಕಲ್ ತುಳಿಯುವಾಗ ಕಾಣುವ ದೃಶ್ಯಗಳನ್ನೆಲ್ಲಾ ನಾವೇ ಕಾಣುತ್ತ ಸಾಗಿದಂತೆ ಭಾಸವಾದರೆ, ಸಾಂಟಾ ಆಣಾ ಗಾಳಿಯಲ್ಲಿನ ಬೆಂಕಿಯ ಝಳ ನಮ್ಮನ್ನೇ ತಾಕುತ್ತದೆ. ಮರ್ಲಿನ್ ಮನ್ರೋಳ ಎದೆಯೆಡೆಗೆ ಹೋಗುವ ರಸ್ತೆ, ಬುದ್ಧನ ಚೂರಿನ ನುಣುಪು, ಶ್ರೀಲಂಕಾದ ಯೋಧ ಹಿಡಿದ ಫೋಟೋ, ಫ್ರಾಂಕೋನ ಹೆಂಡತಿಯ ಮನೆತುಂಬಿದ ವಸ್ತುಗಳು -ಎಲ್ಲವನ್ನೂ ನಾವೂ ಸವರಿದ್ದೇವೆ, ಸವಿದಿದ್ದೇವೆ.
ಈ ಕಾದಂಬರಿ ನನಗೆ ಅನೇಕ ಹೊಸ ರೂಪಕಗಳನ್ನು ಕಟ್ಟಿಕೊಟ್ಟಿದೆ, ಪ್ರತಿಮೆಗಳಿಗೆ ನೆಲೆಯಾಗಿದೆ, ಕತೆಗಳಿಗೆ ಸ್ಫೂರ್ತಿಯಾಗಿದೆ, ಅರಿವುಗಳನ್ನು ತೆರೆದಿದೆ, ವಿಷಯಗಳನ್ನು ಸ್ಪಷ್ಟಪಡಿಸಿದೆ, ಪ್ರಶ್ನೆಗಳನ್ನು ಎತ್ತಿದೆ. ಕೊನೆಗೂ ತಿಳಿಯಲಾಗದ ಭೂಷಣ ರಾವ್ ಎಂಬ ನಿಗೂಢ, ಮುಗಿಯದ ಕೃಷ್ಣನ ಹುಡುಕಾಟ, ಅರ್ಥವಾಗದ ನಮ್ಮದೇ ಮನಸುಗಳ ತಾಕಲಾಟ, ದಾರಿತಪ್ಪಿದ ಎಲ್ಲರ ಪರದಾಟ, ಜಗತ್ತು ಸಧ್ಯಕ್ಕಿರುವ ಪರಿಪಾಠ -ಎಲ್ಲವೂ ನಿಮ್ಮ ಕಾದಂಬರಿ ಓದುತ್ತ ನನಗೆ ಹೃದ್ಯವಾಗಿವೆ. ನನ್ನ ಗೊಂದಲಗಳು ಎಲ್ಲರಿಗೂ ಇವೆಯಲ್ಲಾ ಎಂಬ ಸಮಾಧಾನವಾಗಿದೆ.
ಐದು ದಿನಗಳಲ್ಲಿ, ದಿನಕ್ಕೆ ಐವತ್ತು ಪುಟಗಳಂತೆ 'ದ್ವೀಪವ ಬಯಸಿ' ಓದಿದ್ದು, ಮೈಮರೆತಿದ್ದು ನನಗೆ ದಿವ್ಯಾನುಭವ. ಇಂಥದೊಂದು ಕಾದಂಬರಿ ಕೊಟ್ಟ ನಿಮಗೆ ಧನ್ಯವಾದ. ನಿಮ್ಮ ಹೆಂಡತಿ ಹಣ್ಣನ್ನು ಟ್ರಾಷ್ಕ್ಯಾನಿಗಾದರೂ ಹಾಕಲಿ, ಸಿಪ್ಪೆಯನ್ನು ಫ್ರಿಜ್ಜಿನಲ್ಲಾದರೂ ಇಡಲಿ -ಇಷ್ಟೊಳ್ಳೆಯ ಮಾವಿನ ಹಣ್ಣು ತಿನ್ನಿಸಿದ ನಿಮಗೆ ನಾನಂತೂ ಆಭಾರಿ! ನಿಮ್ಮ ಮುಂದಿನ ಕಾದಂಬರಿಗೆ ಈಗಿನಿಂದಲೇ ಕಾಯುವಷ್ಟು ಉತ್ಸಾಹ ಸೃಷ್ಟಿಸಿದ್ದಕ್ಕೆ ಅಭಿನಂದನೆಯೂ!
ಪ್ರೀತಿಯಿಂದ,
ನಿಮ್ಮ,
-ಸುಶ್ರುತ ದೊಡ್ಡೇರಿ
---
ಇನ್ನೂ ಓದದವರಿಗೆ, ಪುಸ್ತಕ ವಿವರ:
ದ್ವೀಪವ ಬಯಸಿ (ಕಾದಂಬರಿ)
ಲೇಖಕರು: ಎಂ.ಆರ್. ದತ್ತಾತ್ರಿ
ಪ್ರಕಾಶನ: ಛಂದ ಪುಸ್ತಕ
ಪುಟಗಳು: 264; ಬೆಲೆ: 150/-
8 comments:
ಒದ್ಬೇಕಾಯ್ತು ಹಂಗಿದ್ರೆ
ಸುಶ್, ಎಷ್ಟೊಂದು ಪ್ರೀತಿಯಿಂದ ಪತ್ರ ಬರೆದಿದ್ದೀಯಾ ಮಾರಾಯ! ನಿನ್ ಪ್ರೀತಿ ನೋಡಿ ಹೊಟ್ಟೆಕಿಚ್ಚಾಗ್ತಿದೆ ಕಣೋ. ಹೀಗೇ ಪ್ರೀತಿಸುತ್ತಿರು... ಬರೆಯುತ್ತಿರು.
ಇಂಟ್ರೆಸ್ಟಿಂಗ್! ಓದಬೇಕು .
ಕಾದಂಬರಿಯ ತಿರುಳನ್ನು, ಕಾದಂಬರಿಯ ವೈಭವವನ್ನು ಇಷ್ಟು ಸೊಗಸಾಗಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು,ಸುಶ್ರುತ!
ಶ್ರೀ ದತ್ತಾತ್ರಿ ಅವರಿಗೆ ನಿಮ್ಮ ಸೊಗಸಾದ ಪತ್ರ 'ದ್ವೀಪವ ಬಯಸಿ' ಕಾದಂಬರಿಯನ್ನು ಓದಲು ಉತ್ತೇಜಿಸುತ್ತಿದೆ.
Avadhiyalli nimma abhiprayavannu odhi nanoo shaha modala bari flipkart Moolaka pustaka kareedisidhe. Thanks for recommending this book. thumba chennagittu.
Veda
Hi Sushruta nimma recommendation merege+ modala bari flip kart nalli pustaka karidisuva anubhavakke antha pustaka kareedisidhe. Thanks nijakku olle pusthaka.
Veda
ನಾನು ಇಂದು ಓದಿ ಮುಗಿಸಿದೆ...ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಂಡು ಹೋಗುತ್ತದೆ.
Post a Comment