Saturday, March 26, 2011

ಪ್ರತೀಕ್ಷೆ

ಕಾಯುವುದು ಎಂದರೆ ಹೀಗೇ ಮತ್ತೆ
ದರೋಜಿ ಕರಡಿಧಾಮದಲ್ಲಿ
ಒಣತರುಗಳ ನಡುವಿನ ಕಾದಬಂಡೆಗಳಿಗೆ
ಕಾಕಂಬಿ ಸವರಿ ಬಂದು
ಕೆಮೆರಾದ ಮೂತಿಗೆ ಜೂಮ್‌ಲೆನ್ಸ್ ಇಟ್ಟು
ಕಣ್ಣು ನೆಟ್ಟು ಕೂರುವುದು

ಸದ್ದು ಮಾಡಬೇಡಿ ಅಂತ ಎಚ್ಚರಿಸುತ್ತಾನೆ ಕಾವಲುಗಾರ..
ನವಿಲುಗಳು ದಾಹದಿಂದ ಕೇಕೆ ಹಾಕುವಾಗ
ನರ್ತನದ ಭಂಗಿಗಳ ಉನ್ಮತ್ತ ಮೆಲುಕು
ರೆಂಬಿಯಿಂದಿಳಿದೋಡೋಡಿ ಬರುತ್ತಿರುವ ಅಳಿಲೇ,
ನಿನ್ನ ಚುರುಕು ಕಣ್ಗಳಿಗೆ ಏನಾಹಾರ ಕಂಡಿತು?

ಅಕೋ, ಆ ಅಲ್ಲಿ ಒಂದಷ್ಟು ದೊಡ್ಡಕಲ್ಲುಗಳಿವೆಯಲ್ಲ,
ಅದರ ಹಿಂದೆಯೇ ಇದೆ ಮರಿಗಳಿಗೆ ಹಾಲೂಡಿಸುತ್ತಿರುವ
ಅಮ್ಮ ಕರಡಿ. ಸ್ವಲ್ಪ ತಡಿ, ಕಂದಮ್ಮನಿಗೆ ಕಣ್ಣು ಹತ್ತಲಿ.
ಆಮೇಲೆ ನೋಡಿ ಮಜ - ಮಜಲು

ಹೌದಲ್ಲಾ, ಉಬ್ಬೆಯಲ್ಲಿಟ್ಟು ಬಂದಿದ್ದ ಆ
ಕಾಯಿಗಳು ಹಣ್ಣಾದವೇ?
ಒಲೆಯ ಮೇಲಿಟ್ಟ ಹಾಲು
ಇತ್ತ ಬಂದಾಕ್ಷಣ ಉಕ್ಕಿತೇ?
ಬರುತ್ತೇನೆ ಎಂದು ಕೈಕೊಟ್ಟ ನಿನಗೇನು ಗೊತ್ತು
ಎರಡು ಮೆಟ್ಟಿಲು ಹತ್ತಿದರೂ ಸುಸ್ತಾಗುತ್ತ,
ಬಿಸಿಲ ಬೀದಿಯಲ್ಲಿ ಕಣ್ಕತ್ತಲಾಗಿ ಕೂರುತ್ತ,
ಹೊರುವ ಕಷ್ಟ ಒಂಭತ್ತು ತಿಂಗಳು ಹಾಳುಹೊಟ್ಟೆ?

ಕಾಯುವುದು ಎಂದಾಗಲೆಲ್ಲ ಅದ್ಯಾಕೋ
ಶಬರಿಯ ನೆನಪು..
ಇದ್ಯಾವ ಹಾಳು ಭಲ್ಲೂಕ-
ಹೊರಬರಲು ಎಷ್ಟು ಹೊತ್ತು?

ಬಂಡೆಗೆ ಸವರಿದ ಕಾಕಂಬಿ ಒಣಗುತ್ತಿದೆ..
ಸಹನೆಯ ಗುಳ್ಳೆಗಳನ್ನು ಒಡೆಯುತ್ತಿರುವ
ಟಿಕ್ ಟಿಕ್ ಕ್ಷಣಗಳೇ, ಶ್..!
ಸದ್ದು ಮಾಡಬೇಡಿ.. ಇನ್ನೆರಡು ಗಳಿಗೆ ಕಾಯಿರಿ.
ತೆರೆ ಸರಿದರಾಯಿತು, ಮೂಡಿಬರುವುದು ಕರಿಕರಡಿ
ನಾಲಿಗೆ ಚಾಚಿ ಮೆಲ್ಲುವುದು ಕಲ್ಲ ಮೇಲಿನ ಸಿಹಿ

ತಯಾರಿರಿ, ಶಟರ್ ಗುಂಡಿಯ ಮೇಲೆ ಬೆರಳಿಟ್ಟು
ಕೊಡಲು ಭಂಗುರ ಚಿತ್ರಕೊಂದು ಶಾಶ್ವತ ಚೌಕಟ್ಟು

9 comments:

ಸುಧೇಶ್ ಶೆಟ್ಟಿ said...

ಕ್ಲಾಸಿಕ್ ಸುಶ್ರುತ!

ಆದಿತ್ಯವಾರ ಬೆಳಗನ್ನು ಒ೦ದು ಸು೦ದರ ಕವನ ಓದುವುದರೊ೦ದಿಗೆ ಶುರು ಮಾಡಿದ ಸ೦ತಸ ನನ್ನದು :)

Gubbachchi Sathish said...

Nice Poem.

Dr.D.T.Krishna Murthy. said...

nice.liked it.

Shweta said...

Yes it is a classic!

ಸುಧನ್ವಾ ದೇರಾಜೆ. said...

ತುಂಬ ಹಿತವಾಗಿದೆ ಮಾರಾಯಾ :)

Unknown said...

Very well... done. Nice reading. Thanks.

Sushrutha Dodderi said...

Thank you all!

Radhika Nadahalli said...

ಕವನ ತುಂಬಾ ತುಂಬಾ ಇಷ್ಟ ಆತು,ಅದರಲ್ಲೂ ಕೊನೆ ಸಾಲು 'ಕೊಡಲು ಭಂಗುರ ಚಿತ್ರಕ್ಕೊಂದು ಶಾಶ್ವತ ಚೌಕಟ್ಟು'

ಅನಿಕೇತನ ಸುನಿಲ್ said...

Superb Sush.....adhbhuta maraya!!!!
Sunil.