ಹಗಲೊಂದು ಶುಷ್ಕ ಗದ್ಯ
ಅಲ್ಲಿ ಬರೀ ಓಡು ಗದ್ದಲ ಶೆಖೆ
ಕೆಂಪು ದೀಪಗಳು ದಮ್ ಬಿರಿಯಾನಿ
ನೂರು ಭಿನ್ನ ಚಿತ್ರಗಳ ತೋರುವ
ನೂರು ಭಿನ್ನ ಸದ್ದುಗಳ ಚೀರುವ
ನೂರು ಟೀವಿಗಳ ಶೋರೂಂ
ಇರುಳೊಂದು ನವಿರು ಕವಿತೆ
ನೀರವದ ಕೋಣೆಯಲಿ ಬಿಚ್ಚಿಟ್ಟ ಹಾಸಿಗೆ
ನಿದ್ದೆ ಸಮೀಪದಲ್ಲಿರುವ ಮಗಳು
ಲಾಲಿಯ ಕಂಠಕೆ ಮೆಲುದನಿಯ ನಂಟು
ತಟ್ಟುವ ಚುಕ್ಕಿಗೂ ಹದವರಿತ ಲಯ
ಅಂಗಡಿಯ ಶಟರ್ ಎಳೆಯುತ್ತಿರುವ ಶೆಟ್ಟಿಯೂ
ಹೆಚ್ಚು ಸದ್ದಾಗದಂತೆ ಎಚ್ಚರ ವಹಿಸುತ್ತಾನೆ
ದೋಸೆಗೆ ಅಕ್ಕಿ ನೆನೆಸಿಟ್ಟು ಮರೆತಿದ್ದ ಗೃಹಿಣಿ
ಈಗ ಮಿಕ್ಸರು ಹಚ್ಚಲು ಹಿಂಜರಿಯುತ್ತಾಳೆ
ಈಗಲೇ ನೋಡಬೇಕಿರುವ ವೈರಲ್ ವೀಡಿಯೋಗೆ
ಇಯರ್ಫೋನಿನ ಮೊರೆ ಹೋಗುತ್ತಾನೆ ತರುಣ
ಸೂರಿನೋಣಿಯೊಳಗಿಂದ ಜಾರಿದ ಅಳಿದುಳಿದ
ಮಳೆಹನಿಗಳು ನೆಲಕೆ ತಾಕುವಾಗ ನಿಧಾನಿಸುತ್ತವೆ
ಈಗ ಹಗಲಿನ ರಾಚುವ ಬೆಳಕಲಿ ಕಂಡ
ರಕ್ತಸಿಕ್ತ ಚಿತ್ರಗಳನ್ನೆಲ್ಲ ಮರೆಯುವ ಸಮಯ
ಕೇಳಿದ ಸಾವಿರ ಸದ್ದುಗಳನು ಜರಡಿಯಲಿ ಸಾಣಿಸಿ
ಹಿತವಾದ ಹಾಡನ್ನಷ್ಟೆ ಉಳಿಸಿಕೊಳ್ಳುವ ದರ್ದು
ಚುಚ್ಚಿದ ಮುಳ್ಳುಗಳನು ಚಿಮ್ಮಟದಿಂದೆತ್ತಿ
ಮುಲಾಮು ಹಚ್ಚಿ ಸರಿಪಡಿಸಿಕೊಳ್ಳಬೇಕು ಅಂಗಾಲು
ಶೂನ್ಯವೇಳೆಯಲಿ ಆದ ಗದ್ದಲಗಳ ಕೊಡವಿಕೊಂಡು
ತಯಾರಾಗಬೇಕು ನಾಳೆಯ ಕಲಾಪಕ್ಕೆ
ಇಳಿಯೆಣಿಕೆಯಲಿರುವ ಇರುಳಿನೀ ಕ್ಷಣಗಳಲಿ
ಮಗಳಿಗೆ ಹೇಳುವ ಕಥೆಯಲೂ ಕವಿತೆಯ ಲಯ
ಹಾಗೆಯೇ ಈ ಕವಿತೆಯಲಿ
ಮಗಳ ಸವಿನಿದ್ರೆ.
1 comment:
ಆಹಾ, ಇದೇ ಕಾವ್ಯಮಯ ಜೀವನ!
Post a Comment