Tuesday, March 27, 2007

ಹೊಸ ಆಹ್ಲಾದ

"ರಾಧೇಶಾಮ ರಾಧೇ ಶಾಮ್
ರಾಧಾ ಮಾಧವ ಮೇಘಶ್ಶಾಮ್.."

ದೇವಸ್ಥಾನದಿಂದ ಮಹಿಳೆಯರ ಭಜನೆಯ ದನಿ ತೇಲಿಬರುತ್ತಿತ್ತು. ಕಟ್ಟೆಯ ಮೇಲೆ ಕುಳಿತಿದ್ದ ನಾನು ಅಂಗಳದಲ್ಲಿ ಅಕ್ಕಿ ಹೆಕ್ಕುತ್ತಿದ್ದ ಪಾರಿವಾಳಗಳನ್ನು ನೋಡುತ್ತಿದ್ದೆ. ತಾಳದ ಟಿಣ್‍ಟಿಣ್‍ನೊಂದಿಗೆ ಬೆರೆತು ಬರುತ್ತಿದ್ದ ಭಜನೆ ಕಿವಿಗಿಂಪಾಗಿತ್ತು. ನಮ್ಮೂರಿನದು ಗೋಪಾಲಕೃಷ್ಣನ ದೇವಸ್ಥಾನ. ಈ ಕೃಷ್ಣನಿಗೆ ಸಂಬಂಧಿಸಿದ ಭಜನೆಗಳು, ಭಕ್ತಿಗೀತೆಗಳೆಲ್ಲ ಪ್ರೇಮಗೀತೆಗಳೇ ಆಗಿಬಿಟ್ಟಿವೆ. ಅವನ್ನ ಆಲಿಸುತ್ತಿದ್ದರೆ ಕೃಷ್ಣ ಸಹ ನಮ್ಮ-ನಿಮ್ಮಂತೆ ಪ್ರೀತಿ-ಗೀತಿ ಮಾಡಿಕೊಂಡಿದ್ದ ಸಾಮಾನ್ಯ ಮನುಷ್ಯನಂತೆ ಭಾಸವಾಗುತ್ತಾನೆ. ಭಕ್ತಿಗಿಂತ ಹೆಚ್ಚಾಗಿ ಅವನಲ್ಲಿ ಅನುರಕ್ತಿ ಮೂಡುತ್ತದೆ: ಮೀರಾಗೆ ಆದಂತೆ.

ಅಂಗಳದಲ್ಲಿ ಬಣ್ಣ ಬಣ್ಣದ ಪಾರಿವಾಳಗಳು ಬಿಳಿಹುಲ್ಲು ಗೊಣಬೆಯ ಅಕ್ಕಪಕ್ಕ ಸಿಕ್ಕಬಹುದಾದ ಅಕ್ಕಿಕಾಳುಗಳನ್ನು ಹೆಕ್ಕುತ್ತಾ, ಪುರ್ರನೆ ಹಾರುತ್ತಾ, ಗುಟುರು ಗಲಾಟೆ ಮಾಡಿಕೊಂಡಿದ್ದವು. ಅಪ್ಪ ಅಂದ, "ಗುಂಡನ ಮನೆ ಪಾರಿವಾಳಗಳು ಇವು. ಗುಂಡ ಒಂದು ತಿಂಗಳಿಂದ ಊರಲ್ಲಿಲ್ಲ. ಎಲ್ಲಿದಾನೆ ಅಂತಾನೆ ಗೊತ್ತಿಲ್ಲ. ಕೆಲವರು 'ಮನೆಯವರು ಅಡಗಿಸಿಟ್ಟಿದಾರೆ' ಅಂತಾರೆ ಮತ್ತೆ ಕೆಲವರು 'ಏನೋ ಕೆಟ್ಟ ಖಾಯಿಲೆ ಬಂದಿದೆ ಅವಂಗೆ. ಅದ್ಕೇ ಯಾವ್ದೋ ಆಸ್ಪತ್ರೆಗೆ ಸೇರಿಸಿದಾರೆ' ಅಂತಾರೆ. ಅಂವ ಇದ್ದಿದ್ದಿದ್ರೆ ಈ ಪಾರಿವಾಳಗಳಿಗೆಲ್ಲ ಕಾಳು ಹಾಕ್ಕೊಂಡು ಇರ್ತಿದ್ದ. ಪಾಪ, ಈಗ ಅವರ ಮನೇಲಿ ಯಾರೂ ಕಾಳು ಹಾಕೋರು ಇಲ್ಲ ಅನ್ಸುತ್ತೆ ಇವಕ್ಕೆ. ಅದ್ಕೇ ಇಲ್ಲಿಗೆ ಬರ್ತಿವೆ.." ಇಷ್ಟು ಸಣ್ಣ ಹಳ್ಳಿಯಲ್ಲೂ ಸಹ ಎಷ್ಟೊಂದು ಗೌಪ್ಯಗಳು! ಗುಪ್ತ ಚಟುವಟಿಕೆಗಳು! ಗುಸುಗುಸುಗಳು! ನಾನು ಪಾರಿವಾಳಗಳನ್ನೇ ನೋಡುತ್ತಾ ಕುಳಿತೆ.

ಅಪ್ಪ ಅಡುಗೆಮನೆಯಿಂದ ಒಂದು ಮುಷ್ಟಿ ಅಕ್ಕಿ ತಂದ. ನನ್ನ ಪಕ್ಕದಲ್ಲೇ ಕುಳಿತು ಸ್ವಲ್ಪ ಅಕ್ಕಿಯನ್ನು ಅಂಗಳಕ್ಕೆ ಬೀರಿದ. ಬಿಳಿಹುಲ್ಲು ಗೊಣಬೆಯ ಬಳಿ ಓಡಾಡುತ್ತಿದ್ದ ಪಾರಿವಾಳಗಳು ಈಗ ನಮ್ಮ ಕಡೆಯೇ ಬಂದವು. ಅಪ್ಪ ಬೀರಿದ್ದ ಅಕ್ಕಿಕಾಳುಗಳನ್ನು ಕ್ಷಣಮಾತ್ರದಲ್ಲಿ ಹೆಕ್ಕಿಕೊಂಡು ಪುರ್ರನೆ ಮತ್ತೆ ಹುಲ್ಲು ಗೊಣಬೆ ಕಡೆ ಹಾರಿಬಿಟ್ಟವು. ಅಪ್ಪ ಮತ್ತೆ ಅಕ್ಕಿ ಬೀರಿದ. ಪಾರಿವಾಳಗಳು ಮತ್ತೆ ಬಂದವು. ಅಪ್ಪ ಅಂಗೈಯಲ್ಲಿ ಅಕ್ಕಿ ಹಾಕಿಕೊಂಡು 'ಗುಕ್' 'ಗುಕ್' 'ಗುಕ್' ಅಂತ ಪಾರಿವಾಳ ಗುಟುರು ಹಾಕುವಂತೆಯೇ ಶಬ್ದ ಮಾಡುತ್ತಾ ಕರೆದ. ಆದರೆ ಅವು ಅಂಗಳಕ್ಕೆ ಬೀರಿದ್ದ ಅಕ್ಕಿಕಾಳನ್ನು ಹೆಕ್ಕಿಕೊಂಡು ಹೋದವೇ ಹೊರತು ನಮ್ಮ ಹತ್ತಿರ ಬರಲೇ ಇಲ್ಲ.

"ಆ ಪಾರಿವಾಳ ನೋಡು.. ಏನ್ ಚನಾಗಿದೆ...!" ಅಪ್ಪ ನನಗೆ ಬೆರಳು ಮಾಡಿ ತೋರಿಸಿದ. ಮುಟ್ಟುವುದಾದರೆ ಕೈತೊಳೆದುಕೊಂಡು ಮುಟ್ಟಬೇಕೆನಿಸುವಷ್ಟು ಬಿಳಿ ಇರುವ ಆ ಪಾರಿವಾಳಕ್ಕೆ ಅಲ್ಲಲ್ಲಿ ಕಾಫಿ ಕಲರಿನ ಪೇಯಿಂಟ್ ಸ್ಪ್ರೇ ಮಾಡಿದಂತೆ ಹಚ್ಚೆ. ಗೋಣು ಕುಣಿಸುತ್ತಾ ಒಂದೊಂದೇ ಹೆಜ್ಜೆಯನ್ನು ಮೆಲ್ಲಮೆಲ್ಲನೆ ಇಡುತ್ತಿದೆ: ಪುಟ್ಟ ಕೃಷ್ಣನಂತೆ. ಊಹುಂ, ಕೃಷ್ಣನೆಡೆಗೆ ಲಜ್ಜೆಯಿಂದ ಹೆಜ್ಜೆಯಿಡುತ್ತಿರುವ ರಾಧೆಯಂತೆ. ಅಕ್ಕಿ ಕಂಡಲ್ಲಿ ಬಾಗಿ ತನ್ನ ಕೊಕ್ಕಿನಿಂದ ಹೆಕ್ಕುತ್ತಿದೆ. ಅಲ್ಲಲ್ಲಿ ನಿಂತು ಗಾಂಭೀರ್ಯದಿಂದ ತಲೆಯೆತ್ತಿ ನೋಡುತ್ತಿದೆ. ಇಡುತ್ತಿರುವ ಪ್ರತಿ ಹೆಜ್ಜೆಯಲ್ಲೂ ಬಿಂಕ-ಬಿನ್ನಾಣ. ಎಷ್ಟೊತ್ತಾಗಿತ್ತೋ ಅವನ್ನು ನೋಡುತ್ತಾ ನಾವು? ಅಪ್ಪ ತಂದಿದ್ದ ಅಕ್ಕಿಯೆಲ್ಲಾ ಖಾಲಿಯಾಗುವಷ್ಟರಲ್ಲಿ ದೇವಸ್ಥಾನದಲ್ಲಿ ಹೆಂಗಸರ ಭಜನೆ ಮುಗಿದು ಘಂಟೆ ಬಾರಿಸುವ ಶಬ್ದ ಕೇಳಿಬಂತು.

ನಮ್ಮೂರಿನ ಹೆಂಗಸರೆಲ್ಲಾ ಪ್ರತಿ ಶನಿವಾರ ಸೇರಿ ಇಲ್ಲಿ ಭಜನೆ ಮಾಡುತ್ತಾರೆ. ನಮ್ಮ ಮನೆಯ ಎದುರಿಗೇ ದೇವಸ್ಥಾನ. ಹೀಗಾಗಿ, ನಮ್ಮ ಮನೆಯಲ್ಲಿ ತುಂಬಿರುವ ಟೀವಿ, ಮಿಕ್ಸಿ, ಪಂಪ್ಸೆಟ್ಟು, ಫೋನಿನ ರಿಂಗು, ಮನೆಮಂದಿಯ ಮಾತು-ಕತೆ, ಜಾನುವಾರುಗಳ 'ಅಂಬಾ', ಇತ್ಯಾದಿ ಶಬ್ದಗಳ ಜೊತೆಗೆ ದೇವಸ್ಥಾನದಿಂದ ಆಗಾಗ ತೇಲಿಬರುವ ಘಂಟೆಗಳ ನಿನಾದವೂ ಸೇರಿರುತ್ತೆ. ನಮಗೆ ಗೊತ್ತು: ಯಾರ್‍ಯಾರು ಯಾವಾಗ್ಯಾವಾಗ ದೇವಸ್ಥಾನಕ್ಕೆ ಬರುತ್ತಾರೆ ಅಂತ. ಘಂಟೆ ಶಬ್ದದಿಂದಲೇ ಪತ್ತೆ ಮಾಡುತ್ತೇವೆ ಅದನ್ನು! ದೊಡ್ಡ ಘಂಟೆ ಎರಡು ಸಲ ಬಡಿದು ಸಣ್ಣ ಘಂಟೆ ಮೂರು ಸಲ ಬಡಿದ ಶಬ್ದ ಬಂತೆಂದರೆ, ಈಗ ದೇವಸ್ಥಾನಕ್ಕೆ ಬಂದಿರುವವರು ಸುಧಣ್ಣ! ಸಣ್ಣ ಘಂಟೆಯನ್ನು ಕೇವಲ ಎರಡು ಸಲ ಬಡಿದ ಸದ್ದಾದರೆ, ಈಗ ಬಂದಿರುವುದು ಲಕ್ಷ್ಮಕ್ಕ! ಇವತ್ತು ಬೆಳಗ್ಗೆ ಎಷ್ಟೊತ್ತಿಗೆ ಗಣೇಶಣ್ಣ ಬಂದು ಪೂಜೆ ಮಾಡಿಕೊಂಡು ಹೋದ ಅಂತ ನಮಗೆ ಗೊತ್ತು. ಸಂಜೆ ಬಂದು ದೀಪ ಹಚ್ಚಿ ಹೋದ ಗಳಿಗೆಯೂ ಗೊತ್ತು!

ಲಾಂಗ್ ಬೆಲ್ ಹೊಡೆದ ಕೂಡಲೆ ಮಕ್ಕಳೆಲ್ಲ ಶಾಲೆಯಿಂದ ಹೊರಬೀಳುವಂತೆ ಭಜನೆ ಮುಗಿದ ಕೂಡಲೆ ಹೆಂಗಸರೆಲ್ಲ ದೇವಸ್ಥಾನದಿಂದ ಮನೆ ಕಡೆ ಹೊರಟರು. ನಮ್ಮ ಮನೆ ಹಾದು ಹೋಗುವಾಗ ಕಟ್ಟೆಯ ಮೇಲೆ ಕುಳಿತಿದ್ದ ನನ್ನನ್ನು 'ಯಾವಾಗ ಬಂದಿದೀಯ?' 'ಅರಾಮಿದೀಯಾ?' 'ಬೆಂಗ್ಳೂರಲ್ಲೂ ಸೆಖೇನಾ?' ಇತ್ಯಾದಿ ಪ್ರಶ್ನೆಗಳ ಮೂಲಕ ಕುಶಲ ವಿಚಾರಿಸಿದರು. 'ಬನ್ರೇ, ಆಸರಿಗೆ ಕುಡಿದು ಹೋಗ್ಬಹುದು' ಎಂಬ ಅಮ್ಮನ ಕರೆಗೆ ಯಾರೂ ಸೊಪ್ಪು ಹಾಕಲಿಲ್ಲ. ಅಮ್ಮ ಬಂದದ್ದೇ ಹೂವಿನ ಗಿಡಗಳಿಗೆ ನೀರು ಹಾಕಲಿಕ್ಕೆಂದು ಬಚ್ಚಲು ಮನೆಯಿಂದ ಕೊಡಪಾನ ತಂದು ನಲ್ಲಿಯ ಕೆಳಗಿಟ್ಟಳು. ಅಮ್ಮನ ಈ ಕೆಲಸದಲ್ಲಿ ನೆರವಾಗಲು ನಾನು ಕಟ್ಟೆಯಿಳಿದು ಬಂದೆ.

ನಮ್ಮ ಮನೆಯ ಅಂಗಳವೆಂಬ ಗಾರ್ಡನ್ನಿನ್ನಲ್ಲಿ ಎಷ್ಟೊಂದು ಬಣ್ಣದ ಹೂಗಳು. ಯಾವುದಕ್ಕೆ ಹೋಲಿಸುವುದು ಇದನ್ನು? 'ಅವಳ' ಚೂಡಿಗೆ? ಊರಲ್ಲಿದ್ದಾಗ ನಾನೂ ಅಮ್ಮನೂ ಸೇರಿ ಅದೆಷ್ಟೋ ಹೂವಿನ ಗಿಡಗಳನ್ನು ನೆಡುತ್ತಿದ್ದವು. ಮಳೆಗಾಲ ಶುರುವಾಯಿತೆಂದರೆ ನಮಗೆ ಅದೇ ಕೆಲಸ. ಸುಜಾತಕ್ಕನ ಮನೆಯ ಅಂಗಳದಲ್ಲಿ ಹೊಸ ಬಣ್ಣದ ದಾಸಾಳ ಹೂವು ಕಂಡರೆ ಸಾಕು, ಅಮ್ಮ ಹೋಗಿ 'ನಂಗೊಂದು ಹೆಣಿಕೆ ಕೊಡೇ' ಅಂತಂದು ಇಸಕೊಂಡು ಬರುತ್ತಿದ್ದಳು. ಕೊನೆಗೆ ನಾನೂ ಅಮ್ಮನೂ ಸೇರಿ, ಅಂಗಳದಲ್ಲಿ ಗುದ್ದು ತೋಡಿ, ಸ್ವಲ್ಪೇ ಸ್ವಲ್ಪ ಗೊಬ್ಬರ - ಹೊಸ ಮಣ್ಣು ಹಾಕಿ ಆ ರೆಂಬೆಯನ್ನು ಊರುವುದು. ಅಮ್ಮನ ಕೈಗುಣದ ಬಗ್ಗೆ ಎರಡು ಮಾತಿಲ್ಲ. ಅವಳು ನೆಟ್ಟಮೇಲೆ ಅದು ಚಿಗುರಲೇಬೇಕು: ಉಲ್ಟಾ ನೆಟ್ಟಿದ್ದರೂ! ಎಷ್ಟು ಗಿಡ ನೆಡುತ್ತಿದ್ದೆವು ನಾವು... ನೆಂಟರ ಮನೆಗೆ ಹೋದಾಗ ಬಿಳಿ ಬಿಳಿ ಎಸಳಿನ ಶ್ಯಾವಂತ್ಗೆ ಹೂವು ಕಣ್ಣಿಗೆ ಬಿತ್ತೋ, ಅಮ್ಮ ಅವರ ಬಳಿ ಗೋಗರೆದು ಒಂದು ಹಿಳ್ಳು ಪಡೆದು ತಂದು ನಮ್ಮನೆಯ ಶ್ಯಾವಂತಿಗೆ ಪಟ್ಟೆಯಲ್ಲಿ ಸೇರಿಸುತ್ತಿದ್ದಳು. ನಾನಾದರೂ ಅಷ್ಟೆ: ಮೆಡ್ಲಿಸ್ಕೂಲಿಗೆ ಹೋಗಬೇಕಾದರೆ ಯಾವ ಹುಡುಗಿಯರ ಮುಡಿಯಲ್ಲಿ ನಮ್ಮನೆಯಲ್ಲಿ ಇಲ್ಲದ ಬಣ್ಣದ ಡೇರೇ ಹೂವು ಕಂಡರೂ 'ಇದರ ಗಿಡದ ಒಂದು ಕೊಂಬೆ ತಂದ್ಕೊಡ್ರೇ, ನಮ್ಮಮ್ಮಂಗೆ...' ಅಂತ ದುಂಬಾಲು ಬೀಳುತ್ತಿದ್ದೆ. ಆ ಹುಡುಗಿಯರಿಗೂ ನನ್ನ ಮೇಲೆ ಎಂಥದೋ ಪ್ರೀತಿ; ತಪ್ಪದೇ ತಂದುಕೊಡುತ್ತಿದ್ದರು! ಹಾಲಮ್ಮನಂತೂ ಪಿಂಡಿಗಟ್ಟಲೆ ತಂದು ಕೊಟ್ಟಿದ್ದಳು ಒಮ್ಮೆ! ಆದರೆ ಹೈಸ್ಕೂಲಿಗೆ ಹೋಗಲು ಶುರುಮಾಡಿದ ಮೇಲೆ ಹಾಗೆ ಹುಡುಗಿಯರನ್ನು ಕೇಳುತ್ತಿರಲಿಲ್ಲ. ಏಕೆಂದರೆ ನಮ್ಮ ಹೈಸ್ಕೂಲಿನಲ್ಲಿ ಹುಡುಗರೂ-ಹುಡುಗಿಯರೂ ಪರಸ್ಪರ ಮಾತಾಡಿಕೊಳ್ಳುವಂತೆಯೇ ಇರಲಿಲ್ಲ, ಇನ್ನು ನಾನು ಹೂವಿನ ಗಿಡ ಕೇಳುವುದೆಲ್ಲಿಂದ ಬಂತು? ಅಮ್ಮ 'ನಿಮ್ ಶಾಲೆ ಹುಡುಗಿಯರ ಮನೇಲಿ ಒಳ್ಳೊಳ್ಳೇ ಹೂವಿನ ಗಿಡ ಇದ್ರೆ ತಂದುಕೊಡಕ್ಕೆ ಹೇಳಾ' ಅಂತ ನನ್ನ ಬಳಿ ಹೇಳಿದಾಗ ನಾನು 'ಹಂಗೆಲ್ಲ ಕೇಳಕ್ಕೆ ಆಗೊಲ್ಲಮ್ಮ, ನಾನು ಹೈಸ್ಕೂಲು ಈಗ' ಅನ್ನುತ್ತಿದ್ದೆ. ಅಮ್ಮನಿಗೆ ನನ್ನ ಪರಿಸ್ಥಿತಿಯ ಅರಿವಾಗಿಯೋ, ಮಗ ದೊಡ್ಡವನಾಗಿದ್ದಾನೆ ಎಂಬ ಸುಳಿವು ಸಿಕ್ಕೋ ಅಥವಾ ತನ್ನ ಹೈಸ್ಕೂಲು ದಿನಗಳ ನೆನಪಾಗಿಯೋ, ಸಣ್ಣಗೆ ನಾಚುತ್ತಿದ್ದಳು: ಶಂಖಪುಷ್ಪದ ಹೂವಿನಂತೆ.

ಅಮ್ಮನೊಂದಿಗೆ ನಾನೂ ಬಣ್ಣಬಣ್ಣದ ಗುಲಾಬಿ ಗಿಡಗಳಿಗೆ ನೀರು ಹನಿಸಿದೆ. ಬೇಲಿಗೂಟವನ್ನು ತಬ್ಬಿದ್ದ ಮಲ್ಲಿಗೆ ಬಳ್ಳಿ, ತೆಂಗಿನ ಮರದ ತಂಪಿನಲ್ಲಿದ್ದ ಗೊಲ್ಟೆ ಹೂವಿನ ಗಿಡ, ಅದರ ಪಕ್ಕದಲ್ಲೇ ನವಿಲುನೀಲಿ ಹೂಗಳನ್ನು ತೂಗುತ್ತಿರುವ ಶಂಖಪುಷ್ಪ, ಚಿಕ್ಕ ಮಕ್ಕಳಂತೆ ನಗುತ್ತಿರುವ ತುಂಬೆ ಹೂವು, ಮನೆಯ ಪಕ್ಕ ನೆರಳಿನಲ್ಲಿರುವ ಶ್ಯಾವಂತಿಗೆ ಪಟ್ಟೆ... ಎಲ್ಲಕ್ಕೂ ನೀರು ಹಾಕಿದೆವು. ತುಂತುರು ತಾಕಿದ್ದೇ ಖುಷಿಯೋ ಖುಷಿ ಹೂವುಗಳಿಗೆ! ತಣ್ಣೀರಿನಿಂದ ಮೈಪುಳಕಗೊಂಡು ಗಾಳಿಗೆ ತೂಗತೊಡಗಿದವು. ಈ ಹೂವುಗಳು ಸಾಮಾನ್ಯ ಅಂದುಕೊಳ್ಳಬೇಡಿ, ಸಿಕ್ಕಾಪಟ್ಟೆ ಕಿಲಾಡಿ ಇದಾವೆ... ನೋಡಿದ ಗೃಹಿಣಿಯ ಕಣ್ಣಲ್ಲಿ ಆಕರ್ಷಣೆ ಹುಟ್ಟಿಸಿ, ಆಕೆಯ ಮುಡಿಯೇರಿ, ರಾತ್ರಿ ಮಲಗುವಾಗ ಅವಳು ಹೇರ್‌ಕ್ಲಿಪ್ಪಿನಿಂದ ಬಿಡಿಸಿಕೊಳ್ಳುವ ಮುನ್ನ ಅವಳ ಹೆರಳ ತುಂಬಾ ತಮ್ಮ ಘಮವನ್ನು ಉಳಿಸಿಯೇ ಇಳಿಯುತ್ತವೆ ಇವು. ಆ ರಾತ್ರಿ ಆ ಪರಿಮಳದಿಂದಲೇ ಅವನು ಇನ್ನಷ್ಟು ಉನ್ಮತ್ತನಾಗುತ್ತಾನೆ...

ಹಿತ್ತಿಲ ಹಲಸಿನ ಮರದ ಹಿಂದೆಲ್ಲೋ ಸೂರ್ಯ ಮುಳುಗುತ್ತಿದ್ದ. ಆಗಸದ ಹೂದೋಟದಲ್ಲಿ ಚುಕ್ಕಿಗಳು ಒಂದೊಂದಾಗಿ ಅರಳುತ್ತಿದ್ದವು. ಪಾರಿವಾಳಗಳೆಲ್ಲ ಆಗಲೇ ಗೂಡು ಸೇರಿದ್ದವಿರಬೇಕು. 'ಸಾಕು, ಕಪ್ಪಾಯ್ತು, ಒಳಗೆ ಹೋಗೋಣ ಬಾ. ಅವಲಕ್ಕಿ-ಮೊಸರು ತಿನ್ನುವಂತೆ' ಅಮ್ಮ ಕರೆದಳು. ಹೊಸ ಆಹ್ಲಾದದೊಂದಿಗೆ ನಾನು ಮನೆಯ ಒಳನಡೆದೆ.

23 comments:

Sandeepa said...

ಸಕ್ಕತ್ ಬರದ್ದೆ!!

Sushrutha Dodderi said...

@ alpazna

ಹೂಂ? ಥ್ಯಾಂಕ್ಸ್ ದೆನ್!

Anonymous said...

ಹೆಯ್ ಸುಶ್ರುತಾ,
ನಿಂಗೆ ಈ comparision ಮಾಡದು ಯಾರು ಹೇಳಿ ಕೊಟ್ಟಿದ್ದ ಮಾರಾಯಾ. comparision ತುಂಬಾ ಚನ್ನಾಗಿ ಮಾಡಿದ್ದೆ.
ನಾನು ಎಲ್ಲಾ ಲೇಖನ ಚನ್ನಾಗಿ ಬರದ್ದೆ ದೄಷ್ಠಿ ತೆಗಿಸ್ಕ್ಯ ಅಂಥಾ ಹೇಳಿ ಹೇಳಿ ಸಾಕಾತು. ಒಂದು ಕೆಲಸ ಮಾಡು ನಿನ್ನ article ಗೆ ಒಂದು ದೄಷ್ಠಿ ಬೊಟ್ಟು ಇಟ್ಬಿಡು ಸರಿಯಾಕ್ತು. ಏನ್ ಹೇಳ್ತೆ?

Sushrutha Dodderi said...

@ ranju

ನಿಂದೊಳ್ಳೆ ಕತೆ ಆತು ಮಾರಾಯ್ತಿ... ಈಗ ದೃಷ್ಠಿ ತೆಗಿಯಕ್ಕೆ ಯಾರೂ ಸಿಗದಿಲ್ಲೆ ಬೇರೆ.. ನೀ ಹೇಳ್ದಂಗೆ ಒಂದು ಬೆರ್ಚಪ್ಪನ್ನ ನೇತುಹಾಕದೇ ಸೈಯೇನಪ..! ಆದ್ರೆ ಅಷ್ಟೆಲ್ಲಾ, ದೃಷ್ಠಿಯಾಗೋಷ್ಟು ಚನಾಗ್ ಬರದ್ದಿ ಅಂತ ನಂಗೆ ಯಾವತ್ತೂ ಅನ್ಸ್ಲೇ ಇಲ್ಲೆ..ನೀ ಅಂದಿದ್ದಕ್ಕೆ ಥ್ಯಾಂಕ್ಸ್..

ಸಿಂಧು sindhu said...

ಸು, ಒಳ್ಳೆಯ ಬರಹ,
ನಂಗೆ ತುಂಬ ಮೆಚ್ಚಿದ್ದು.. "ಅವಳು ನೆಟ್ಟಮೇಲೆ ಅದು ಚಿಗುರಲೇಬೇಕು: ಉಲ್ಟಾ ನೆಟ್ಟಿದ್ದರೂ!" ಅಮ್ಮಂದಿರೇ ಹಾಗೆ...
ಓದುತ್ತ ಓದುತ್ತ ನಾನು ನಿಮ್ಮನೆಯ ಮುಂದೆ ಇದ್ದೆ.. ದೇವಸ್ಥಾನದ ಗಂಟೆ ದನಿಯೂ ಕೇಳಿತು...ಯಾರು ಬಡಿದದ್ದು ಅಂತ ಗೊತ್ತಾಗಿಲ್ಲ.. ದಿನಾ ಕೇಳಿಲ್ಲವಲ್ಲ... ;) ನಿನ್ನ ಅಪ್ಪನ ಬರಹವನ್ನೇನಾದರೂ ನಿರೀಕ್ಷೆ ಮಾಡಬಹುದಾ ಮುಂದಿನ ಬ್ಲಾಗಿನಲ್ಲಿ..?

Sushrutha Dodderi said...

@ ಸಿಂಧು

ಥ್ಯಾಂಕ್ಸ್ ಅಕ್ಕ.

>'ಅಮ್ಮಂದಿರೇ ಹಾಗೆ': ಹೌದೌದು. ಕರೆಕ್ಟಾಗಿ ಹೇಳ್ದೆ.

ಅಪ್ಪನ ಬರಹಾ...., ಯಾ, ಇನ್ನೊಂದು ತಿಂಗಳೊಳಗೆ ಖಂಡಿತ ಪ್ರಕಟಿಸುವ. ಅಪ್ಪನ ಮೇಲೆ 'ಪ್ರೆಶರ್' ಹಾಕ್ತಾ ಇದೀನಿ: 'ಬರ್ಕೊಡು ಬರ್ಕೊಡು' ಅಂತ!

Sushrutha Dodderi said...

@ raghuuu

Ohh, thanx a lot bro. nimage khushi aagutthe andre sumne irokkagattha? bariyonanthe...

ಶ್ರೀನಿಧಿ.ಡಿ.ಎಸ್ said...

ಅಮ್ಮಂದಿರೇ ಹೀಗೆ!

ಮೊನ್ನೆ ಮನೆಗೆ ಹೋದಾಗಲೂ ನೋಡಿದೆ, ಬಚ್ಚಲು ನೀರು ಹೋಗೋ ಜಾಗದಲ್ಲಿ ಅಮ್ಮ ಒಂದಿಷ್ಟು ಹೂ ಗಿಡಗಳ ರೆಂಬೆ ನೆಟ್ಟು ಉಪಚಾರ ಮಾಡುತ್ತಿದ್ದಳು. ಅವುಗಳನ್ನು ಎಲ್ಲಿಂದ ತಂದೆ, ಯಾವ ಜಾತಿಯ ಗಿಡ ಇತ್ಯಾದಿ ಇತ್ಯಾದಿ ಎಲ್ಲ ವಿವರಿಸಿದ್ದಳು..

ಉಪಮಾಲೋಲ:) ಚೆನ್ನಾಗಿದೆ ಬರಹ.

Sushrutha Dodderi said...

@ ಶ್ರೀನಿಧಿ...

ಢಿಶ್ಕುಂ!! ಹೌದಪ್ಪಾ ಹೌದು. ಅಮ್ಮಂದ್ರೇ ಹೀಗೆ.

ಉಪಮಾಲೋಲ?? ಇರ್ಲಿ ಇರ್ಲಿ ಸಿಗ್ತಿ ಮತ್ತೆ....

ಸುಪ್ತದೀಪ್ತಿ suptadeepti said...

ಸುಶ್ರುತ, ಚೆನ್ನಾಗಿ ಬರ್ದಿದ್ದೀ. ಹಳ್ಳಿ ಮನೆಯ ಹೂತೋಟದ ಆಪ್ತ ಚಿತ್ರಣ. ನಾನು ಶಾಲೆಗೆ ಹೋಗುವಾಗಲೂ ಹೀಗೇ, ಎಲ್ಲರ ಮನೆಯಿಂದಲೂ ಹೊಸ ಗಿಡಗಳ ಗೆಲ್ಲು ಕೇಳಿ ತಂದು ನೆಡುತ್ತಿದ್ದೆ. ಆ ನೆನಪುಗಳೇ.... ಚಂದ. ಶ್ರೀನಿಧಿಯ ಮಾತಿಗೆ ನನ್ನ ಸಪೋರ್ಟ್ ಇದೆ, ಉಪಮಾಲೋಲ ಹೌದು.

ಯಜ್ಞೇಶ್ (yajnesh) said...

Super ಕಣೋ.

ಅಮ್ಮ ಅಂದ ತಕ್ಷಣ ನೆನಪಾಯ್ತು.

"ಅಮ್ಮ ಏಂದರೇ ಏನೋ ಹರುಷವೂ,
ನಮ್ಮಾ ಬಾಳಿಗೇ ಅವಳೇ ದೈವವೂ..."

ಅಮ್ಮನ ಜೊತೆ ಹೆಚ್ಚು ಕಾಲ ಕಳೆದ ನೀನೇ lucky.

-ಯಜ್ಙೇಶ್

Sushrutha Dodderi said...

@ suptadeepti

ನೀವೂ ನೆಡ್ತಿದ್ರಿ? ನೋಡಿ, ಮುಂಚೇನೆ ಗೊತ್ತಾಗಿದ್ರೆ ಒಂದು ಕಿಲ್ಲು ನಿಮ್ಮಿಂದಾನೂ ಪಡೀತಿದ್ದೆ ನಾನು :)

ಆ ಶ್ರೀನಿಧಿ ಏನೋ ಹೇಳ್ದ ಅಂತ ನೀವೂ ಅದ್ನೇ ಹೇಳೋದಾ? ಇರ್ಲಿ ಇರ್ಲಿ, ಇಬ್ರುನ್ನೂ ವಿಚಾರಿಸ್ಕೋತೀನಿ ಸಧ್ಯದಲ್ಲೇ :)

ಥ್ಯಾಂಕ್ಸ್ ಕಣವ್ವ ಪ್ರತಿಕ್ರಿಯಿಸಿದ್ದಕ್ಕೆ..

Sushrutha Dodderi said...

@ ಹುಡುಕಾಟ

ಥ್ಯಾಂಕ್ಸ್ ಯಜ್ಞೇಶಣ್ಣ. ಖಂಡಿತ, ಅಂಥಾ ಅಮ್ಮಂದಿರ ಬ್ಲೆಸ್ಸಿಂಗ್ ಪಡೆದವರೆಲ್ಲರೂ ಅದೃಷ್ಟವಂತರೇ ಸರಿ.

ಅಂದ್‍ಹಾಗೆ, ನಿನ್ ಬ್ಲಾಗು ನೋಡೇ ಇರ್ಲೆ. ಈಗ ನೋಡ್ತಾ ಇದ್ದಿ.. ಚನಾಗಿದ್ದು..

Enigma said...

:-) naanu beladidu bengalurinalli aadru nanna amma appata sagardavlu, bengalurina badige maneyalli avlu sumaru hovina gida tahndu nettidlu. elli yara manege hodru ondu gia togondu barthaidaa. adu bus nalli baro asthhothige badi baddi bekakna agirthithu adru ondu dina thampu neerinalli itta mele jeeva barthith adke. raja diandalli. week ends nalli neeru hako pali nandagithu :-)
i miss them now

Sushrutha Dodderi said...

@ enigma

ನಾನು ನೆಟ್ಟ ಗಿಡಗಳಿಗೆಲ್ಲ ನೀರು ಹನಿಸಿದಂತಿದೆ ನಿಮ್ಮ ಕಾಮೆಂಟು. ಬಾಡಿ ಬೆಕ್ಕಾಗಿದ್ದ ಗಿಡಕ್ಕೆ ಹನಿ ನೀರಿನ ಸೇಚನ. ಆಹ್ಲಾದಕ್ಕೇ ಆಹ್ಲಾದ. thanx a lot man.

ರಾಜೇಶ್ ನಾಯ್ಕ said...

ಸುಶ್ರುತ,
ಚೆನ್ನಾಗಿದೆ 'ಹೂ ತೋಟ' ಮತ್ತು 'ಅಮ್ಮ'ನ ಬೆಸುಗೆ. ನಿಮ್ಮ ಬ್ಲಾಗಿಗೆ 'ಎಡಿಕ್ಟ್' ಆಗ್ತಾ ಇದ್ದೀನಿ.

Shiv said...

ಸುಶ್ರುತ,

ನಿಜಕ್ಕೂ ಆಹ್ಲಾದಕರವಾಗಿತ್ತು..
ನಿನ್ನ ಮನೆದೋಟದಲ್ಲಿ ನಿನ್ನ ಜೊತೆ ಗಿಡಗಳ ಮಧ್ಯೆ ಓಡಾಡಿದಂಗೆ ಅನಿಸ್ತು..

ಹಂಗೆ ಅಮ್ಮನ ಗಿಡ ಸಂಗ್ರಹಿಸುವ ಹವ್ಯಾಸ ಓದಿ ನನ್ನ ಅತ್ತೆ ಒಬ್ಬರು ನೆನಪಾದರು.ಅವರು ಹಾಗೇ ಎಲ್ಲಾದರೂ ಹೋದರೆ ಮುಗಿತು.ಬರಬೇಕಾದರೆ ಕಂಕುಳಲ್ಲಿ ಸಂಗ್ರಹಿಸಿದ ಗಿಡದ ಬೇರು,ಗಡ್ಡೆ..

>>'ನಿಮ್ ಶಾಲೆ ಹುಡುಗಿಯರ ಮನೇಲಿ ಒಳ್ಳೊಳ್ಳೇ ಹೂವಿನ ಗಿಡ ಇದ್ರೆ ತಂದುಕೊಡಕ್ಕೆ ಹೇಳಾ'
ಅಂತಾ ಅಮ್ಮ ಹೇಳಿದರೂ ನೀನು ಯಾಕೇ ಹೋಗಲಿಲ್ಲ..ಆ ಹುಡುಗೀರ ಮನೆಯಿಂದ ಗಿಡ ತಂದಿದ್ದರೆ ಅದೇ ಗಿಡ ಬೆಳಸಿ ಆ ಗಿಡದ್ದೇ ಹೂವು ತಗೊಂಡೂ ಹೋಗಿ ಅದೇ ಹುಡುಗಿಗೆ(ಆಥವಾ ಬೇರೆ ಇನ್ನಾವುದೋ ಹುಡುಗಿಗೇ) ಕೊಡಬಹುದಿತ್ತು :)

Sushrutha Dodderi said...

@ ರಾಜೇಶ್ ನಾಯ್ಕ

ಜೋಪಾನಾರೀ... ಅಡಿಕ್ಟ್ ಆಗೋಕಿಂತ ಮುಂಚೆ ಎರಡ್ಸಲ ಯೋಚ್ನೆ ಮಾಡಿ...

ಹಿಹ್ಹಿ, ಸುಮ್ನೆ ಹೇಳ್ದೆ; ಮಜಾ ಮಾಡಿ; ಚಿಲ್ ಔಟ್.. ಥ್ಯಾಂಕ್ಸ್..

Sushrutha Dodderi said...

@ shiv

ಆವಾಗ ಇಷ್ಟೆಲ್ಲಾ ಧೈರ್ಯ ಇರ್ಲಿಲ್ಲ ಗುರೂ.. ಇನ್ ಫ್ಯಾಕ್ಟ್, ಈಗ್ಲೂನೂ ಇಲ್ಲ; ಹಿಂಗೆ ಕಂಪ್ಯೂಟರ್ ಮುಂದೆ ಕೂತ್ಕೊಂಡು ಭಾರೀ ಧೈರ್ಯವಂತನ ಥರ ಬ್ಲಾಗ್ ಬರೀತೀನಿ ಬೇಕಾದ್ರೆ.. ಆದ್ರೆ ಹೂವು ಕೊಡ್ಲಿಕ್ಕೆ ನಂಗೆ ಈಗ್ಲೂನೂ ಪುಕ್ಲು... :)

ಆದ್ರೂ ನಿಮ್ ಐಡಿಯಾ ಚನಾಗಿದೆ.. ;)

Vijendra ( ವಿಜೇಂದ್ರ ರಾವ್ ) said...

ಚಿಕ್ಕ ಮಕ್ಕಳಂತೆ ನಗುತ್ತಿರುವ ತುಂಬೆ ಹೂವು, ಮನೆಯ ಪಕ್ಕ ನೆರಳಿನಲ್ಲಿರುವ ಶ್ಯಾವಂತಿಗೆ ಪಟ್ಟೆ... ಎಲ್ಲಕ್ಕೂ ನೀರು ಹಾಕಿದೆವು. ತುಂತುರು ತಾಕಿದ್ದೇ ಖುಷಿಯೋ ಖುಷಿ ಹೂವುಗಳಿಗೆ!

ಈ ಸಾಲುಗಳಂತೂ ತುಂಬಾ ತುಂಬಾ ತುಂಬಾ ಕುಶಿ ಕೊಟ್ಟಿತು..
ತುಂಬಾ ಚೆನ್ನಾಗಿದೆ.
ಹೀಗೆ ಬರೀತಾ ಇರಿ

Sushrutha Dodderi said...

@ vijendra

ನೀವು 'ಕುಶಿ' ಅಂತ ಸಣ್ಣಕೆ ಹೇಳಿದ್ನೋಡಿ ಅನುಮಾನ ಆಯ್ತು. ಆದ್ರೆ ಅದರ ಹಿಂದೇನೇ 'ತುಂಬಾ ತುಂಬಾ ತುಂಬಾ' ಅಂತ ಮೂರ್ಮೂರು ಸಲ ಬರ್ದಿದ್ದು ನೋಡಿ ನಂಗೂ ಖುಷಿ ಆಯ್ತು. ಥ್ಯಾಂಕ್ಸ್ ಕಣ್ರೀ :)

ಗುಹೆ said...

ತುಂಬಾ ಚೆನ್ನಾಗಿ ಬರೆದ್ಯೋ........

Sushrutha Dodderi said...

@ ಗುಹೆ

ಗುಹೆಯಿಂದ ಹೊರಬಿದ್ದು ಮೌನಗಾಳಕ್ಕೆ ಸಿಕ್ಕಿ ಕೊಸರಾಡಿ ಪ್ರತಿಕ್ರಿಯಿಸಿದ ಗುರುಗಣೇಶನಿಗೆ ಥ್ಯಾಂಕ್ಸ್ :)