Thursday, January 15, 2009

ಸೂತ್ರ ತಪ್ಪಿದೆ

ಸುಗ್ಗಿಯ ಬಿಡುವಿನಲ್ಲಿ
ಅಣ್ಣನು ಮಾಡಿಕೊಟ್ಟ ಬಣ್ಣದ ಹಾಳೆಯ
ಬಾಲಂಗೋಚಿಯ ತನ್ನಯ ಪಟವನ್ನು
ಹಾರಿಸುತ್ತಿದ್ದಾಗ ಆ ತಮ್ಮ, ಕಣ್ಣಲ್ಲಷ್ಟೇ ಅಲ್ಲ;
ಎದೆಯಲ್ಲೂ ನೀಲಿ ಬಾನು, ಸಂಭ್ರಮ.

ಎಷ್ಟೋ ಸಲ ಆ ಬಾನ ಕಕ್ಷೆಯಲ್ಲಿ ಬಣ್ಣಬಿಲ್ಲು ಮೂಡುತಿತ್ತು..
ಸಾಲಲಿ ಸಾಗುವ ಬಿಳಿಹಕ್ಕಿಗಳು,
ಥಳಥಳ ಹೊಳೆಯುವ ಬಾಲದ ವಿಮಾನ,
ಕನಸಿನಲ್ಲೋ, ಕೆಲವೊಮ್ಮೆ ಸಾಕ್ಷಾತ್ ದೇವರು!

ನೋಡನೋಡುತ್ತಲೇ ಚದುರಿ ಹೋಯಿತಲ್ಲ ಆ ಚಿತ್ರ..
ನಗರಕ್ಕೆಂದು ರಾತ್ರಿಬಸ್ಸು ಹತ್ತಿ ಹೊರಟುಬಿಟ್ಟನಲ್ಲ ಹುಡುಗ-
ಹರಿದು ಆ ಪಟದ ಸೂತ್ರ..

ಲಿಫ್ಟಿನ ಗುಂಡಿಯೊತ್ತಿ ಮೇಲೇರಿ ಸೇರಿಬಿಟ್ಟನಲ್ಲ
ಗಾಜು ಹೊದಿಸಿದ ಬೃಹತ್ ಕಟ್ಟದ
ಎಂಟನೇ ಮಹಡಿಯಲ್ಲಿನ ತನ್ನ ಕಛೇರಿ..
ಮೊಬೈಲಿನ ಮಾತಾಗಿ, ತಾಕಿಯೇಬಿಟ್ಟನಲ್ಲ
ಎತ್ತರದ ಟವರ್ರಿನ ಆಂಟೆನಾ ಕಡ್ಡಿ..
ಆಗಸಮುಖಿಯಾಗಿ ಹಾರಿಯೇಬಿಟ್ಟನಲ್ಲ
ಕಂಡು ಕೇಳರಿಯದ ದೇಶಕ್ಕೆ ವಿಮಾನದಲ್ಲಿ..
ಕೊನೆಗೆ ಯಾರಿಗೂ ಸಿಗದವನಾಗಿ..
ಅದೇ ಪಟದಂತೆ.. ಎತ್ತರದಲ್ಲಿ..
ತೇಲಿಸಿದ ಯಾವುದೋ ಗಾಳಿಯಲ್ಲಿ.. ಏರಿ ಏರಿ..
ಏರಿ.. ಅವನು.. ಬಿತ್ತರದಲ್ಲಿ..

ನೋಡನೋಡುತ್ತಲೇ ಚದುರಿ ಹೋಯಿತಲ್ಲ ಆ ಚಿತ್ರ..
ಹರಿದಿದ್ದು ಹೇಗೆ ಈ ಪಟದ ಸೂತ್ರ?

ಕಾಯುತ್ತಿದ್ದಾನೆ ಹುಡುಗ, ಕನಸು ಕಾಣುತ್ತಿದ್ದಾನೆ..
ಬೀಸಿ ಬಂದೀತೇ ಮತ್ತೆ ಮಾಯೆಯ ಗಾಳಿ?
ತೇಲಿಸೀತೇ, ನೆಲ ಬಿಟ್ಟು ಹಾರಿಸೀತೇ ಕರುಣಾಮಯಿ?
ಕೂಡೀತೆ ಹರಿದ ದಾರ? ಸಿಕ್ಕೀತೆ ಸೂತ್ರ?

ಮಳೆಬಿಲ್ಲಿಲ್ಲದ ಬಾನಬಯಲಲ್ಲೀಗ ಹಕ್ಕಿಯಿಲ್ಲ,
ವಿಮಾನಬಾಲವಿಲ್ಲ, ದೇವರಂತೂ ಸುಳಿವಿಗೇ ಇಲ್ಲ;
ಇಲ್ಲಿ ಸೂತ್ರ ತಪ್ಪಿದೆ ಮತ್ತು-
ಹಳೆಯ ಬಾನಿನ ವಿಳಾಸ ಮರೆತು ಹೋಗಿದೆ!

22 comments:

ಶಾಂತಲಾ ಭಂಡಿ (ಸನ್ನಿಧಿ) said...

ಪುಟ್ಟಣ್ಣಾ...
"ಇಲ್ಲಿ ಸೂತ್ರ ತಪ್ಪಿದೆ ಮತ್ತು-
ಹಳೆಯ ಬಾನಿನ ವಿಳಾಸ ಮರೆತು ಹೋಗಿದೆ!"
ಇಂಥದ್ದೇ ಪ್ರತಿ ಸಾಲುಗಳೂ ಚೆಂದವೇ ಇದೆ.
ಇವತ್ತಿನ ಹಲವರ ಬದುಕು ಇದು. ಅದೆಷ್ಟೋ ಮಂದಿಯ ಇಡಿಯ ಬದುಕನ್ನೇ ಒಂದಿಷ್ಟು ಸಾಲುಗಳಲ್ಲಿ ಹಿಡಿದು ಕಡಿದಿಟ್ಟ ಹಾಗಿದೆ.
ಇಂತದೇ ಸಾಲುಗಳೊಳಗೆ ಮತ್ತೆ ನಿನ್ನ ಭಾವನೆಗಳೂ ಇಷ್ಟವಾಗುವುದು.
ಶರಣು.

Ashok Uchangi said...

ಹಳ್ಳಿ ಹುಡುಗನ ಅಂತರಾಳವಿಲ್ಲಿ ಕವನವಾಗಿದೆ.
ಹಳೆಯ ಬಾನಿನ ವಿಳಾಸ ಮತ್ತೆ ಸಿಗಲಿ ಎಂಬ ಆಶಯ ನಮ್ಮೆಲ್ಲರದಾಗಿರಲಿ.
ಅಶೋಕ ಉಚ್ಚಂಗಿ
http://mysoremallige01.blogspot.com/

sunaath said...

ಕಳೆದು ಹೋದ ಬಾಲ್ಯ ಮರಳಿ ಕೈಗೆ ಸಿಕ್ಕೀತೆ?
ನಿಮ್ಮ ಮಕ್ಕಳ, ಮೊಮ್ಮಕ್ಕಳ ಬಾಲ್ಯದಲ್ಲಿ ಅದು ಸಿಗಬಹುದು.
ಉತ್ತಮ ಕವನ.

ತೇಜಸ್ವಿನಿ ಹೆಗಡೆ said...

ಸುಶ್ರುತ,

ನಾನೂ ಆ ಕಳೇದು ಹೋದ ಬಾನಿನ ವಿಳಾಸ ಹುಡ್ಕ್ತಾ ಇದ್ದಿ.. ನಿಂಗೆಲ್ಲಾದ್ರೂ ಸಿಕ್ಕಿರೆ ದಯವಿಟ್ಟು ನಂಗೂ ತಿಳ್ಸು. ಆದರೆ ಸುತ್ರ ಕೈ ತಪ್ಪಿ ಹೋಗಿದ್ದು ಮಾತ್ರ ಈಗೀಗ ಕೈಗೆ ಸಿಗ್ತಾ ಇದ್ದು. ಅದ್ರ ವಿಳಾಸ ಬೇಕಿದ್ರೆ ನೀ ಇನ್ನೂ ಸ್ವಲ್ಪ ವರ್ಷ ಕಾಯವು :) ಕವನ ಚೆಂದ ಇದ್ದು.

Sree said...

readernalli nODidaaga sakhattt annsida saalugaLanna illi shantala haakbiTTidaaLe! hELabEkannisida maatugaLanna sunaath kaaka hELibiTTidaare! so I am back to Shreenidhi's "OdiddEne";))
hosa baaninallU paTa haarOke jaaga irutte, huDuga manassu maaDidre dEvrU sikkibiDabahudu:)
(google chrome nalli kannada type maaDodu henge - yaargoo gottillva? hELo varege naanu ellara blog'gaLalli hinge keTTdaagi kanglish'nalli trypistaa irteeni!)

ಚಿತ್ರಾ said...

ಸುಶ್ರುತ ,

ಭಾವಪೂರ್ಣ ಕವಿತೆಯಿದು.
ಮೇಲೆ, ಇನ್ನೂ ಮೇಲೆ ಹಾರುವ ಭರದಲ್ಲಿ ಪಟದ ಸೂತ್ರವೇ ತಪ್ಪಿಹೋಗುವುದು ನೋವಿನ ವಿಷಯ ಅಲ್ಲವೆ?
" ಮಳೆಬಿಲ್ಲಿಲ್ಲದ ಬಾನಬಯಲಲ್ಲೀಗ ಹಕ್ಕಿಯಿಲ್ಲ,
ವಿಮಾನಬಾಲವಿಲ್ಲ, ದೇವರಂತೂ ಸುಳಿವಿಗೇ ಇಲ್ಲ;
ಇಲ್ಲಿ ಸೂತ್ರ ತಪ್ಪಿದೆ ಮತ್ತು-
ಹಳೆಯ ಬಾನಿನ ವಿಳಾಸ ಮರೆತು ಹೋಗಿದೆ! "

ಹೃದಯ ತಟ್ಟಿದ ಸಾಲುಗಳು.

Parisarapremi said...

ninge alzheimer's irbeku... ;-)

Keshav.Kulkarni said...

ಸುಶ್ರುತ,

"ಕಣ್ಣಲ್ಲಷ್ಟೇ ಅಲ್ಲ;
ಎದೆಯಲ್ಲೂ ನೀಲಿ ಬಾನು, ಸಂಭ್ರಮ."

ಮತ್ತು

"ನೋಡನೋಡುತ್ತಲೇ ಚದುರಿ ಹೋಯಿತಲ್ಲ ಆ ಚಿತ್ರ..
ಹರಿದಿದ್ದು ಹೇಗೆ ಈ ಪಟದ ಸೂತ್ರ?"

ಎಂಬ ಎರಡು ಸಾಲು ಬಿಟ್ಟರೆ ಬಾಕಿಯೆಲ್ಲ ಹಳತೇ ಅನಿಸಿತು, ವಸ್ತುವಂತೂ ತುಂಬ ಹಳತು..ಸಾರಿ, ಬರೆಯಬಾರದು ಎಂದುಕೊಂಡಿದ್ದೆ, ಆದರೆ ಹೇಳಲೇಬೇಕೆನಿಸಿತು.

-ಕೇಶವ

Sushrutha Dodderi said...

ಶಾಂತಲಕ್ಕ, ಅಶೋಕ್, ಸುನಾಥ್, ತೇಜಕ್ಕ, ಚಿತ್ರಕ್ಕ,

ಧನ್ಯವಾದಗಳು. :-)

ಶ್ರೀಮಾತಾ,
ಗೂಗಲ್ ಕ್ರೋಮಲ್ಲಿ ಕನ್ನಡ ಬರೋಲ್ವಾ? ನಾನು install ಮಾಡಿದಾಗ ಬರ್ತಿತ್ತಪ್ಪ.. ಆಮೇಲೆ ನಂಗ್ಯಾಕೋ ಅದು ಇಷ್ಟ ಆಗ್ಲಿಲ್ಲ, ಅದ್ಕೇ uninstall ಮಾಡ್ಬಿಟ್ಟೆ. ಇನ್ನೂ BETA version ಅಲ್ವಾ? ಮುಂದೆ ಸರಿ ಆಗಬಹುದು..

ಅರುಣ್,
alzheimer's ಅಂದ್ರೆ? :O

ಕೇಶವ್,
’ಸಾರಿ’ ಯಾಕೆ? ನಿಮ್ಮ ಅನಿಸಿಕೇನ ಸದಾ ಮುಕ್ತವಾಗಿ ಹೇಳಿ ನನ್ನ ಬ್ಲಾಗಲ್ಲಿ. :-)
ನಿಜ ಹೇಳಬೇಕೆಂದರೆ, ಇಲ್ಲಿ ಪ್ರತಿಕ್ರಿಯಿಸಿರುವವರು ಬೇರೆ ಬೇರೆ ಭಾವದಲ್ಲಿ ಕವನವನ್ನು ಅರ್ಥ ಮಾಡಿಕೊಂಡಂತಿದೆ.. ನಾನು ಬರೆದದ್ದೇ ಬೇರೆ ಸಂದರ್ಭದಲ್ಲಿ..

Ultrafast laser said...

ಈ ಕವನ ನನ್ನ ಬಗ್ಗೆಯೇ ಬರೆದಂತಿದೆ!. ಅಡಿಕೆ ಆರಿಸುವುದರಿಂದ ಹಿಡಿದು Quantum dot spectroscopy ವರೆಗಿನ ಖಂಡಾಂತರ ಕಾಲಘಟ್ಟಗಳನ್ನು ಕಂಡ ನನಗೆ ಈ ಪದ್ಯ ಹೆಚ್ಚು ಅನ್ವಯವಾಗುತ್ತದೆ ಎನ್ನುವುದಕ್ಕಿಂತ, ಈ ಪದ್ಯವನ್ನೇ ನಾನು ಬದುಕಿದೆ ಎನ್ನುವುದು ಹೆಚ್ಚು ಸೂಕ್ತ.

ನಾನು ಕವನವನ್ನು technically analyze ಮಾಡುವುದಿಲ್ಲ, ಆದರೆ , ಗದ್ಯದ ಮೇಲಿನ ನಿನ್ನ ಹಿಡಿತ ಚೆನ್ನಾಗಿದೆ ಎಂದಷ್ಟೇ ಹೇಳಬಲ್ಲೆ.

"ಇಲ್ಲಿ ಪ್ರತಿಕ್ರಿಯಿಸಿರುವವರು ಬೇರೆ ಬೇರೆ ಭಾವದಲ್ಲಿ ಕವನವನ್ನು ಅರ್ಥ ಮಾಡಿಕೊಂಡಂತಿದೆ.. ನಾನು ಬರೆದದ್ದೇ ಬೇರೆ ಸಂದರ್ಭದಲ್ಲಿ" - ಇದು ಎಲ್ಲ ಕವನಗಳಿಗೂ ಅನ್ವಯಿಸುತ್ತದೆ. ಕವನಗಳನ್ನು ಅರ್ಥೈಸಲು ಹಾಗು ಅಪಾರ್ಥೈಸಲು ಇಂಗ್ಲಿಷ್ ಸಾಹಿತ್ಯದಲ್ಲಿ deconstruction ಎನ್ನುವ ಯುರೋಪಿಯನ್ ಥಿಯರಿ ಇದೆ. ಅವಕಾಶವಾದರೆ ಅದನ್ನು ಓದು. -D.M.Sagar(Original)

Vijaya said...

nange Kite Runner book nenpaaytu ... :-)

ವಿನುತ said...

ಮರೆತಿರಬಹುದು ವಿಳಾಸ, ಮರೆಯಾಗಿಲ್ಲ ಆಗಸ
ಚದುರಿರಬಹುದು ಚಿತ್ರ, ಮಾಸಿಲ್ಲ ಬಣ್ಣಗಳು
ತಪ್ಪಿರಬಹುದು ಸೂತ್ರ, ಮರೆತಿಲ್ಲ ತಂತ್ರ
ಹರಿದಿದ್ದರೂ ಪಟ, ಮತ್ತೆ ರೂಪಿಸಬಹುದು, ಇದು ದಿಟ

ಮೂಡುತ್ತಿರಲಿ ನಾಳೆಯ ಕನಸುಗಳು
ಅರಿವಿನಲ್ಲಿರಲಿ ನೆನ್ನೆಯ ನೆನಪುಗಳು
ಸುಂದರವಾಗಲಿ ಇಂದಿನ ಅನುಭವಗಳು
ಇವೇ ಬಾಳಬಂಡಿಯ ಚಕ್ರ್‍ಅಗಳು

ಚಿತ್ರಾ ಸಂತೋಷ್ said...

"ಮಳೆಬಿಲ್ಲಿಲ್ಲದ ಬಾನಬಯಲಲ್ಲೀಗ ಹಕ್ಕಿಯಿಲ್ಲ,
ವಿಮಾನಬಾಲವಿಲ್ಲ, ದೇವರಂತೂ ಸುಳಿವಿಗೇ ಇಲ್ಲ;
ಇಲ್ಲಿ ಸೂತ್ರ ತಪ್ಪಿದೆ ಮತ್ತು-
ಹಳೆಯ ಬಾನಿನ ವಿಳಾಸ ಮರೆತು ಹೋಗಿದೆ!" ನಂಗೂ ಹೀಗೇ ಅನಿಸುತ್ತೆ ಹವಾನಿಯಂತ್ರಿತ ಕೋಣೆಯೊಳಗೆ ಕೂತಾಗ. ನಿನ್ನ ಕವನದ ಪ್ರತಿ ಸಾಲುಗಳನ್ನು ಖುಷಿಖುಷಿಯಾಗಿ ಆಸ್ವಾದಿದ್ದೇನೆ..ಅಷ್ಟೇ ಹೇಳಬಲ್ಲೇ..ಬಾಲ್ಯ, ಹಳ್ಳಿ-ಆಗಸ, ಹೊಲ-ಗದ್ದೆ, ಹಸಿರು, ಗಾಳಿಪಟ ಎಲ್ಲವನ್ನೂ ಕಣ್ಣಪರೆದೆ ಮೇಲೆ ಮೂಡಿಸಿತ್ತು. ಅಕ್ಕರೆ, ಮುಗ್ಧತೆಯ ಬಾಲ್ಯದ ಬದುಕನ್ನು ನೆನಪಿಸಿಕೊಟ್ಟಿದ್ದಕ್ಕೆ ಪ್ರೀತಿಯಿಂದ ನಿಂಗೆ ಥ್ಯಾಂಕ್ಸ್ ಅಣ್ಣಯ್ಯ.
-ಚಿತ್ರಾ

Ashok Uchangi said...

Alzheimer ಅಂದ್ರೆ ಮರೆವಿನ ಕಾಯಿಲೆ!ಭಯಂಕರವಾದದ್ದು. ಅವರು ಜೋಕ್ ಮಾಡಿದ್ದಾರೆ.ಅದನ್ನೂ ಮರೆತುಬಿಡಿ!
ಅಶೋಕ ಉಚ್ಚಂಗಿ
http://mysoremallige01.blogspot.com/

shivu.k said...

ಸುಶ್ರುತ,

ಕವನದ ಪ್ರತಿಸಾಲುಗಳು ಖುಷಿ ತರುತ್ತವೆ....ಬಾಲ್ಯದ ನೆನಪು ಮಾಡಿದ್ದಕ್ಕೆ ಥ್ಯಾಂಕ್ಸ್.....


"ಕಣ್ಣಲ್ಲಷ್ಟೇ ಅಲ್ಲ;
ಎದೆಯಲ್ಲೂ ನೀಲಿ ಬಾನು, ಸಂಭ್ರಮ."

ಬಲು ಇಷ್ಟವಾಯಿತು.......ಥ್ಯಾಂಕ್ಸ್.....

Anonymous said...

ಚೆನ್ನಾಗಿದೆ ಕವಿತೆ... ಇಷ್ಟವಾಯಿತು..

Santhosh Rao said...

tumba eshta aayitu nim kavana..

ವಿನಾಯಕ ಕೆ.ಎಸ್ said...

ನಮಸ್ಕಾರ ಸಾರ್,
ಏನು ಬರೆಯದೇ ತುಂಬಾ ದಿನಗಳು ಕಳೆದು ಹೋಗಿದೆ ಯಾಕೆ? ಬರವಣಿಗೆ ಸೂತ್ರ ತಪ್ಪಿಹೋದಂತಿದೆ!!!
ಕೋಡ್ಸರ

ಶ್ರೀನಿಧಿ.ಡಿ.ಎಸ್ said...

ಏನಯ್ಯಾ, ಬ್ಲಾಗ್ ಅಪ್ಡೇಟ್ ಮಾಡಕೆ ಏನ್ ರೋಗ?

Anonymous said...

ನಮಸ್ತೆ.. ಸುಶ್ರುತ .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟ

ತೇಜಸ್ವಿನಿ ಹೆಗಡೆ said...

ಮೌನಗಾಳ ತೀರಾ ಮೌನವಾಗಿದೆ. ಗಾಳ ಹಾಕಿದ್ದು ಸಾಕ್ರಪ್ಪೋ.. ಇನ್ನು ಮೌನವಾಗಿ ಇಷ್ಟು ದಿನ ಹಾಕಿದ ಗಾಳದಲ್ಲಿ ಸಿಕ್ಕಿರುವ ಮೀನುಗಳನ್ನೆಲ್ಲಾ ಹೊರಹಾಕ್ ನೋಡು..:-P

Anonymous said...

yaavudo theevra mana kalakida vastu matthe kaaditu.. nenapisiddakke thanks.