Monday, August 28, 2006

ನಾನು ಓದಿದ ಪುಸ್ತಕ (೧)

ಪರ್ವ: ಮಹಾಭಾರತದ ಮರುಸೃಷ್ಟಿ
ಕಾದಂಬರಿಯನ್ನು ಮದ್ರದೇಶದ ಅರಮನೆಯ ದೃಶ್ಯದೊಂದಿಗೆ ಶುರು ಮಾಡುತ್ತಾರೆ ಭೈರಪ್ಪ. ರಾಜ ಶಲ್ಯ ತನ್ನ ಮೊಮ್ಮಗಳು ಹಿರಣ್ಯವತಿಯೊಂದಿಗೆ ಮಾತನಾಡುತ್ತಿದ್ದಾನೆ. ಹಿರಣ್ಯವತಿ ತಾತನ ವಯಸ್ಸನ್ನು ಕೇಳುತ್ತಾಳೆ. ಅದಕ್ಕೆ ಶಲ್ಯ ಎಂಬತ್ತನಾಲ್ಕು ಎಂದು ಉತ್ತರಿಸುತ್ತಾನೆ. ಹೇಗೆ ಲೆಕ್ಕ ಇಟ್ಟಿದ್ದೀಯ ಎಂಬ ಅವಳ ಮರುಪ್ರಶ್ನೆಗೆ 'ಭೀಷ್ಮನಿಗಿಂತ ನಾನು ಮೂವತ್ತಾರು ವರ್ಷಕ್ಕೆ ಚಿಕ್ಕವನು. ಅವನಿಗೆ ಈಗ ನೂರ ಇಪ್ಪತ್ತಂತೆ. ಅಂದರೆ ನನಗೆಷ್ಟಾಯಿತು ಹೇಳು..?' ಎನ್ನುತ್ತಾನೆ.

ಪರ್ವದಲ್ಲಿ ನಾನು ಮೊದಲು ಗಮನಿಸಿದ ಅಂಶವೆಂದರೆ, ಪಾತ್ರಗಳ ವಯಸ್ಸನ್ನು ಖಚಿತವಾಗಿ mention ಮಾಡಿದ್ದು. ಮೂಲ ಮಹಾಭಾರತದಲ್ಲಿ ಇಲ್ಲದ, ಪರ್ವವನ್ನು ಓದುವಾಗ 'ಅರೆರೆ, ಹೌದಲ್ಲ' ಅನ್ನಿಸುವ ಅತ್ಯಂತ ದೊಡ್ಡ ವಿಶೇಷ ಇದು. ಮೂಲ ಮಹಾಭಾರತವನ್ನು ಓದುವಾಗ, ಅಥವಾ ಅದರ ಕತೆಯನ್ನು ಕೇಳುವಾಗ, ಅಥವಾ ಟೀವಿ - ಯಕ್ಷಗಾನಗಳಲ್ಲಿ ನೋಡುವಾಗ ನಮ್ಮ ಗಮನಕ್ಕೇ ಬಾರದ ಅಂಶ ಇದು. ಅಲ್ಲೆಲ್ಲಾ ಧರ್ಮರಾಯನಿಗೆ ಸುಮಾರು ನಲವತ್ತು ವರ್ಷವಾದಂತೆ ಅನ್ನಿಸುತ್ತದೆ. ಭೀಮ, ಅರ್ಜುನ, ದುರ್ಯೋಧನ, ದುಶ್ಯಾಸನ, ಕರ್ಣ, ಕೃಷ್ಣರನ್ನೆಲ್ಲ ಮೂವತ್ತು - ಮೂವತ್ತೈದರ ಆಸುಪಾಸಿನವರಂತೆ ಬಿಂಬಿಸಲಾಗುತ್ತದೆ. ಭೀಷ್ಮ-ದ್ರೋಣರು ಅರವತ್ತೈದು-ಎಪ್ಪತ್ತರವರವರಂತೆ ಕಾಣಿಸುತ್ತಾರೆ. ಆದರೆ ಪರ್ವದಲ್ಲಿ ಅದು ಪೂರ್ತಿಯಾಗಿ ವಿಭಿನ್ನವಾಗಿದೆ. ಇಲ್ಲಿ ಧರ್ಮರಾಯನಿಗೆ ಅರವತ್ತು; ಭೀಮ ದುರ್ಯೋಧನರಿಗೆ ಐವತ್ನಾಲ್ಕು-ಐವತ್ತೈದು; ಅರ್ಜುನ ಕೃಷ್ಣರಿಗೆ ಐವತ್ಮೂರು; ಭೀಷ್ಮರಿಗೆ ಪೂರ್ತಿ ನೂರ ಇಪ್ಪತ್ತು!

ಪರ್ವದ ಮೊದಲ ಅಧ್ಯಾಯದ ಪೂರ್ತಿ ಶಲ್ಯಾದಿ ರಾಜರುಗಳಲ್ಲಿ ಯುದ್ಧ ಪೂರ್ವದಲ್ಲಿದ್ದ ತೊಡಕುಗಳ ಚಿತ್ರಣವಿದೆ. ಕುರುಕ್ಷೇತ್ರ ಯುದ್ಧಕ್ಕೆ ತಾವು ಹೋಗಬೇಕೆ ಬೇಡವೆ? ಹೋದರೆ ಯಾರ ಪರವಾಗಿ ಹೋಗಬೇಕು? ಧರ್ಮದ ಪರ ಹೋಗಬೇಕು. ಇಷ್ಟಕ್ಕೂ ಯಾರದು ಧರ್ಮ? ಕೌರವರದ್ದೋ ಪಾಂಡವರದ್ದೋ? ಎರಡೂ ಪಕ್ಷಗಳಿಂದ ರಾಜದೂತರು ಬಂದು ಇವರ ಮನವೊಲಿಸಲಿಕ್ಕೆ ಪ್ರಯತ್ನಿಸುತ್ತಿರುತ್ತಾರೆ. 'ಧರ್ಮಕ್ಕೆ ಗೆಲುವಾಗಬೇಕು; ಆದ್ದರಿಂದ ನೀವು ನಮ್ಮ ಕಡೆ ಬರಬೇಕು' ಎಂದು ಓಲೈಸುತ್ತಾರೆ. ಎರಡೂ ಕಡೆಯವರೂ ತಮ್ಮದೇ ಧರ್ಮ ಅನ್ನುವಂತೆ ಮಾತನಾಡುತ್ತಾರೆ. ಇವರಿಗೆ dilemma. ಅದಲ್ಲದೆ 'ಹೋಗಲಿ, ಯಾರ ಕಡೆಗೂ ಬೇಡ, ನಾವು ತಟಸ್ಥರಾಗಿದ್ದುಬಿಡೋಣ' ಎಂದರೆ, ನಡೆಯಲಿರುವುದು ಭಾರೀ ಯುದ್ಧ. ಎಲ್ಲಾ ರಾಜರೂ ಒಂದಲ್ಲಾ ಒಂದು ಕಡೆ ಹೋಗಿಯೇ ಹೋಗುತ್ತಾರೆ. ಹಾಗಿದ್ದಾಗ ನಾವು ಸುಮ್ಮನಿದ್ದರೆ ನಮ್ಮ ಗೌರವ, ಪ್ರತಿಷ್ಠೆಗಳಿಗೆ ಕುಂದು ಎಂದುಕೊಂಡು, ಇಡೀ ಆರ್ಯಾವರ್ತದ ರಾಜರೆಲ್ಲ ಯುದ್ಧದ ತಯಾರಿಯಲ್ಲಿ ತೊಡಗುತ್ತಾರೆ.

ಎರಡನೇ ಅಧ್ಯಾಯ ವಿದುರನ ಮನೆಯ ಎದುರಿಗೆ ಹರಿಯುವ ಗಂಗಾನದಿಯ ದಡದಲ್ಲಿ ಯೋಚನಾಮಗ್ನಳಾಗಿ ಕುಳಿತ ಮುದುಕಿ ಕುಂತಿಯ ಚಿತ್ರಣದೊಂದಿಗೆ ಆರಂಭವಾಗುತ್ತದೆ. ವಿದುರ ಬಂದು ಕುಂತಿಗೆ ಹೇಳುತ್ತಾನೆ: 'ಸಂಧಾನಕ್ಕೇಂತ ಇಂದು ಕೃಷ್ಣ ಕೌರವನ ಆಸ್ಥಾನಕ್ಕೆ ಬಂದಿದ್ದ. ಆಗ ಎಲ್ಲರೂ ನಿಬ್ಬೆರಗಾಗುವಂತಹ ಒಂದು ಮಾತನ್ನು ದುರ್ಯೋಧನ ಆಡಿದ. ಪಾಂಡವರ್‍ಯಾರೂ ಅಪ್ಪನಿಗೆ ಹುಟ್ಟಿದವರಲ್ಲ. ಅವರಿಗೆ ನಾವ್ಯಾಕೆ ಪಾಲು ಕೊಡಬೇಕು. ಅವರು ಕುಂತಿಯ ಮಕ್ಕಳು ಅಷ್ಟೆ. ನಿಯೋಗದಿಂದ ಹುಟ್ಟಿದ ಮಕ್ಕಳು ಧರ್ಮದ ಸಂತತಿಯಲ್ಲ -ಎಂದುಬಿಟ್ಟ.' ಕುಂತಿ ಮತ್ತೆ ಯೋಚನಾಲಹರಿಗೆ ಬೀಳುತ್ತಾಳೆ.

ಪರ್ವದ ವೈಶಿಷ್ಟ್ಯವೇನೆಂದರೆ, ಮೂಲ ಮಹಾಭಾರತದಲ್ಲಿನ ಯಾವತ್ತೂ ಅಲೌಕಿಕ ಅಂಶಗಳಿಂದ ಪಾರಾಗಿರುವುದು. ಇಲ್ಲಿ ಕೃಷ್ಣ ದೇವರಲ್ಲ, ಪಾಂಡವರು ವರದಿಂದ ಜನಿಸಿದವರಲ್ಲ, ನೂರೂ ಜನ ಕೌರವರು ಗಾಂಧಾರಿಯ ಪಿಂಡದಿಂದ ಹುಟ್ಟಿದವರಲ್ಲ, ಕರ್ಣ ಸೂರ್ಯಪುತ್ರನಲ್ಲ, ಅಭಿಮನ್ಯು ಹೊಟ್ಟೆಯಲ್ಲಿದ್ದಾಗಲೇ ಚಕ್ರವ್ಯೂಹದ ಗುಟ್ಟು ತಿಳಿದದ್ದು ಸುಳ್ಳು. ಒಂದೊಮ್ಮೆ ಮಹಾಭಾರತ ನಡೆದಿದ್ದರೂ ನಡೆದಿದ್ದಿರಬಹುದೇನೋ ಅನ್ನಿಸುವಂತೆ ಬರೆದಿದ್ದಾರೆ ಭೈರಪ್ಪ. ಪ್ರತಿ ವಿವರವೂ ಓದುಗನಿಗೆ ಆಪ್ತವೆನಿಸುವಂತೆ, ಕಣ್ಣಿಗೆ ಕಟ್ಟಿದಂತೆ, ಇಲ್ಲೇ ಎದುರಿಗೆ ನಡುಯುತ್ತಿದೆಯೇನೋ ಅನ್ನಿಸುವಂತ ಚಿತ್ರಕ ಶಕ್ತಿಯಿಂದ ಕೂಡಿದೆ ಇಡೀ ಪರ್ವ. ಅದಕ್ಕಾಗಿ ಭೈರಪ್ಪ ವರ್ಷಾನುಗಟ್ಟಲೆ study ಮಾಡಿದ್ದೇನು ಸುಳ್ಳಲ್ಲವಲ್ಲ?

ಕುಂತಿ ಯೋಚಿಸುತ್ತಾಳೆ. ನೆನಪುಗಳು ತೂರಿ ಬರುತ್ತವೆ. ಪಾಂಡುವಿನೊಂದಿಗೆ ತನ್ನ ಮದುವೆಯಾದದ್ದು.... ಎಂತಹ ವೈಭವದ ಮದುವೆ! ಎಲ್ಲಾ ನೆನಪಾಗುತ್ತದೆ ಕುಂತಿಗೆ... ಮದುವೆಯ ರಾತ್ರಿಯೇ ಅವಳಿಗೆ ಅರಿವಾಗುತ್ತದೆ: ಪಾಂಡುರಾಜ ನಿರ್ವೀರ್ಯ ಎಂದು. ಆದರೆ ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ. ಪಾಂಡು ಮತ್ತೊಂದು ಮದುವೆಯಾಗುತ್ತಾನೆ. ಮಾದ್ರಿ ಅವನ ಹೆಂಡತಿಯಾಗಿ ಬರುತ್ತಾಳೆ. ಆದರೆ ಅವಳಲ್ಲಿಯೂ ಮಕ್ಕಳಾಗದಿದ್ದಾಗ ದೋಷ ಪಾಂಡುವಿನದೇ ಎಂದು ಸಾಬೀತಾಗುತ್ತದೆ. ಆತ ಹಿಮಾಲಯಕ್ಕೆ ಹೋಗಿ ತನ್ನ ದೌರ್ಬಲ್ಯಕ್ಕೆ ಚಿಕಿತ್ಸೆ ಪಡೆದು ಬರುವುದಾಗಿ ಹೊರಡುತ್ತಾನೆ. ಅವನ ಇಬ್ಬರು ಮಡದಿಯರೂ ಅವನನ್ನು ಹಿಂಬಾಲಿಸುತ್ತಾರೆ. ಅವರು ಹೋಗಿ ಪರ್ವತವೊಂದರ ತಪ್ಪಲಿನಲ್ಲಿ ನೆಲೆಸುತ್ತಾರೆ. 'ಆ ಪರ್ವತದಾಚೆಗಿನದೇ ದೇವಲೋಕ' ಎಂದು ಪಾಂಡು ಪರಿಚಯಿಸುತ್ತಾನೆ. 'ಅಲ್ಲಿ ನಾನಾ ಔಷಧಿ, ಗಿಡಮೂಲಿಕೆಗಳನ್ನು ತಿಳಿದವರಿದ್ದಾರೆ. ಅವರ ಸಹಾಯದಿಂದ ನಾನು ದೌರ್ಬಲ್ಯಮುಕ್ತನಾಗುತ್ತೇನೆ' ಎಂದು ಅರುಹುತ್ತಾನೆ. ಪರ್ವತಗಳು ಕುಂತಿಗೆ ಕರ್ಣನ ಹುಟ್ಟಿನ ನೆನಪನ್ನು ಮರುಕಳಿಸುತ್ತವೆ.

ಏನೂಂತ ತಿಳಿಯುವ ಮೊದಲೇ ಹುಟ್ಟಿದ ಮಗು. ಕುಂತೀಭೋಜನ ಮಗಳು ಕುಂತಿಗೆ ಹದಿನೈದು ವರ್ಷ ವಯಸ್ಸಾಗಿದ್ದ ಸಂದರ್ಭದಲ್ಲಿ, ಒಂದು ದಿನ ದುರ್ವಾಸ ಮುನಿಗಳು ಅರಮನೆಗೆ ಬರುತ್ತಾರೆ. ಅವರ ಸೇವೆಗೆಂದು ನಿಯೋಜಿತಳಾಗಿದ್ದ ಕುಂತಿ ಅವರ ಬಳಿ ಕುತೂಹಲಕ್ಕೆಂದು 'ತಾಯಿಯಾಗುವುದು ಎಂದರೇನು?' ಅಂತ ಕೇಳುತ್ತಾಳೆ. 'ಮಗು ಅಂದರೆ ತುಂಬ ಆಸೆಯೇ?' ದುರ್ವಾಸರು ಕೇಳುತ್ತಾರೆ. ಕುಂತಿ ಹೂಂಗುಡುತ್ತಾಳೆ. ದುರ್ವಾಸರು ಕುಂತಿಯನ್ನು ಕೂಡುತ್ತಾರೆ. ಮಗು ಹುಟ್ಟುತ್ತದೆ. ಆದರೆ ಅದು ಕಾನೀನ (ಮದುವೆಗೆ ಮುಂಚೆ ಹುಟ್ಟಿದ ಮಗು) ವಾದ್ದರಿಂದ, ಅದಾಗಲೇ ಆರ್ಯಜಗತ್ತು ಮುಂದುವರೆದು, ಇಂಥದ್ದನ್ನು ಗೌರವಿಸುತ್ತಿರಲಿಲ್ಲವಾದ್ದರಿಂದ, ವಿಷಯವನ್ನು ಮುಚ್ಚಿಟ್ಟು, ಹುಟ್ಟಿದ ಮಗುವನ್ನು ದಾಸಿ ರಾಧೆಗೆ ಸಾಕಿಕೊಳ್ಳಲು ಕೊಟ್ಟುಕಳುಹಿಸುತ್ತಾರೆ. ಕರ್ಣ ರಾಧೆಯ ಮನೆಯಲ್ಲಿ ಸೂತಪುತ್ರನಂತೆ ಬೆಳೆಯುತ್ತಾನೆ.

ಕುಂತಿ ನೆನಪುಗಳಲ್ಲಿ ತೋಯುತ್ತಿರುವಾಗ ಇತ್ತ ಹಸ್ತಿನಾವತಿಯಿಂದ ಧೃತರಾಷ್ಟ್ರನ ಮದುವೆಯಾದ ಸುದ್ದಿ ಬರುತ್ತದೆ. ಪಾಂಡುವಿಗೆ ಯೋಚನೆಯಾಗುತ್ತದೆ. ತನಗಿಂತ ಮೊದಲು ಧೃತರಾಷ್ಟ್ರನಿಗೆ ಮಕ್ಕಳಾದರೆ ಕುರು ಸಿಂಹಾಸನ ಅವರದೇ ಪಾಲಾಗಿ ನಾವು ಇಲ್ಲೇ ಪರ್ವತದ ತಪ್ಪಲಿನಲ್ಲೇ ಉಳಿಯುವಂತಾಗಿಬಿಡುತ್ತದೇನೋ ಎಂದು ಯೋಚಿಸುತ್ತಾನೆ. ಮತ್ತು ಕುಂತಿಯನ್ನು 'ನಿಯೋಗ'ದಿಂದ ತನಗೊಂದು ಮಗುವನ್ನು ಹೆತ್ತುಕೊಡುವಂತೆ ಪುಸಲಾಯಿಸುತ್ತಾನೆ. ಅವಳಿಗೆ ವೀರ್ಯದಾನ ಮಾಡಲು ದೇವಲೋಕದವರಲ್ಲಿ ಬೇಡಿಕೊಳ್ಳುತ್ತಾನೆ. ಅಲ್ಲಿನ ಧರ್ಮಾಧಿಕಾರಿ ಮುಂದೆ ಬರುತ್ತಾನೆ. ಪಾಂಡುವಿನೊಂದಿಗೆ ಒಪ್ಪಂದದ ನಂತರ ಆತ ಕುಂತಿಯೊಂದಿಗೆ ಕೂಡುತ್ತಾನೆ. ಅವನಿಂದಾಗಿ ಕುಂತಿಗೆ ಮಗು ಜನಿಸುತ್ತದೆ. ಆ ಮಗುವೇ ಧರ್ಮರಾಜ. ಸಣ್ಣ ಮೈಕಟ್ಟಿನ, ಶಾಂತ ಸ್ವಭಾವದ ಮಗು. ಅದರಿಂದ ಪಾಂಡುವಿಗೆ ತೃಪ್ತಿಯಾಗುವುದಿಲ್ಲ. ತನಗೆ ಇನ್ನೊಂದು ಮಗುವನ್ನು ಹೆತ್ತುಕೊಡುವಂತೆ ಕೇಳಿಕೊಳ್ಳುತ್ತಾನೆ. ಈ ಭಾರಿ ದೇವಲೋಕದ ಸೇನಾಪತಿ ಮರುತ್ ಬರುತ್ತಾನೆ. ಅವನಿಂದ ಕುಂತಿಗೆ ಭೀಮ ಜನಿಸುತ್ತಾನೆ; ಬಲಭೀಮ. ತದನಂತರ, ಒಂದು ದಿನ ಕುಂತಿ ನದಿಯಲ್ಲಿ ಭೀಮನಿಗೆ ಸ್ನಾನ ಮಾಡಿಸುತ್ತಿರುವಾಗ ದೇವಲೋಕದಿಂದ ಬಂದ ಅಲ್ಲಿನ ಮುಖ್ಯಸ್ಥ ಇಂದ್ರ ಇವಳ ರೂಪವನ್ನು ಕಂಡು ಮನಸೋತು ತಾನೇ ಅವಳಲ್ಲಿ ಒಂದಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಕುಂತಿ ಹೆದರಿದರೂ ಇಂದ್ರನೇ ಪಾಂಡುವನ್ನು 'ತಾನೂ ಕುಂತಿಗೆ ನಿಯೋಗದಲ್ಲಿ ಒಬ್ಬ ಪುತ್ರನನ್ನು ಕರುಣಿಸುವುದಾಗಿ' ಹೇಳಿ ಒಪ್ಪಿಸುತ್ತಾನೆ. ಕುಂತಿಗೆ ಇಂದ್ರನಿಂದ ಹುಟ್ಟಿದ ಮಗುವೇ ಅರ್ಜುನ.

ಇಷ್ಟೆಲ್ಲಾ ಆದಮೇಲೆ ಮಾದ್ರಿಗೆ ಅಕ್ಕನ ಮೇಲೆ ಅಸೂಯೆಯಾಗುತ್ತದೆ. ಆಕೆ ತನಗೂ ಮಕ್ಕಳು ಬೇಕು ಎಂಬ ಆಸೆಯನ್ನು ಪಾಂಡುವಿನಲ್ಲಿ ಅರುಹುತ್ತಾಳೆ. ಕುಂತಿಯೂ ಸಮ್ಮತಿಸುತ್ತಾಳೆ. ಪಾಂಡುವಿನ ಚಿಕಿತ್ಸೆಗೆಂದು ಬರುತ್ತಿದ್ದ ಇಬ್ಬರು ವೈದ್ಯರು ಮಾದ್ರಿಯನ್ನು ಕೂಡುತ್ತಾರೆ. ಮಾದ್ರಿಗೆ ಅವಳಿ ಮಕ್ಕಳಾಗುತ್ತವೆ. ಅವರಿಗೆ ನಕುಲ-ಸಹದೇವರೆಂದು ನಾಮಕರಣವಾಗುತ್ತದೆ. ಇಷ್ಟರಲ್ಲಿ ಪಾಂಡುವಿಗೆ ತನ್ನ ಮೇಲೆ ಔಷಧಿಗಳು ಬೀರುತ್ತಿರುವ ಪ್ರಭಾವದ ಮೇಲೆ ವಿಶ್ವಾಸ ಬಂದಿರುತ್ತದೆ. ಒಂದು ದಿನ ಅವನೇ ಬಲವಂತದಿಂದ ಮಾದ್ರಿಯನ್ನು ಕೂಡಲು ಹೋಗಿ, ಆಘಾತವಾಗಿ, ಸಾವನ್ನಪ್ಪುತ್ತಾನೆ. ಮಾದ್ರಿಗೆ ಪಾಪಪ್ರಜ್ನೆ ಕಾಡಿ, ಯಾರು ಎಷ್ಟೇ ತಡೆದರೂ, ಗಂಡನ ಚಿತೆಯಲ್ಲಿ ತಾನೂ ಸಹಗಮನ ಮಾಡಿಬಿಡುತ್ತಾಳೆ. ಕುಂತಿ ಐದೂ ಮಕ್ಕಳೊಂದಿಗೆ ಹಸ್ತಿನಾವತಿಗೆ ಮರಳಿ ಮಕ್ಕಳನ್ನು ಬೆಳೆಸುತ್ತಾಳೆ.

ಪರ್ವದ ಮೂರನೇ ಅಧ್ಯಾಯ ಭೀಮನ ಮನಸ್ಸಿನ ತುಮುಲಗಳನ್ನು ಚಿತ್ರಿಸುತ್ತದೆ. ಇಡೀ ಪರ್ವ ಕಾದಂಬರಿಯೇ ಪಾತ್ರಗಳ ಮನಸ್ಸಿನ ತಾಕಲಾಟಗಳಿಂದ ತುಂಬಿದುದು. ಭೀಮ, ರಾಕ್ಷಸಜನರ ಸಾಲಕಟಂಕಟಿ (ಹಿಡಿಂಬೆ)ಯಿಂದ ತನಗೆ ಜನಿಸಿದ ಪುತ್ರ ಘಟೋತ್ಕಜನನ್ನು ತನ್ನ ಸೈನ್ಯ ಸಮೇತ ಬಂದು ಯುದ್ಧದಲ್ಲಿ ತನ್ನನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳಲು ಕಾಡಿಗೆ ಹೊರಟಿದ್ದಾನೆ. ಅವನಿಗೆ ಹಿಂದಿನದೆಲ್ಲಾ ನೆನಪಾಗುತ್ತಾ ಹೋಗುತ್ತದೆ. ಅಣ್ಣ ಧರ್ಮಜನ ಯುವರಾಜ ಪಟ್ಟದ ಆಳ್ವಿಕೆಯ ಕಾಲದಿಂದ. ಅಣ್ಣ ಚೆನ್ನಾಗಿಯೇ ಆಳ್ವಿಕೆ ನಡೆಸುತ್ತಿದ್ದ. ಕೀರ್ತಿ ಸಂಪಾದಿಸಿದ್ದ. ಹೀಗೆಯೇ ಮುಂದುವರೆದರೆ ಇವನನ್ನೇ ರಾಜಪದವಿಗೇರಿಸಬೇಕಾಗುತ್ತದೆ ಎಂದರಿತ ಧೃತರಾಷ್ಟ್ರ, ಧರ್ಮಜನ ಬಳಿ ನಯವಾಗಿ 'ವಾರಣಾವತದಲ್ಲಿ ನಿಮಗಾಗಿ ಹೊಸ ಅರಮನೆಯೊಂದನ್ನು ಕಟ್ಟಿಸಿದ್ದೀನಿ. ನೀವೆಲ್ಲ ಅದನ್ನೇ ಉಪರಾಜಧಾನಿಯೆಂದು ಭಾವಿಸಿ ಅಲ್ಲೇ ವಾಸಿಸಿದರೆ ರಾಜ್ಯಕ್ಕೆ ಒಳಿತಾಗುತ್ತದೆ, ರಾಜ್ಯ ವಿಸ್ಥರಣೆಗೂ ಅನುಕೂಲವಾಗುತ್ತದೆ' ಎಂದು ಮರುಳು ಮಾಡಿ ಒಪ್ಪಿಸಿ, ತಮ್ಮನ್ನು ಅರಗಿನ ಅರಮನೆಗೆ ಸ್ಥಳಾಂತರಿಸಿದ್ದ. ವಿದುರನ ಸಹಾಯದಿಂದ ಕುತಂತ್ರ ಬಯಲಾಗಿತ್ತು. ಅರಗಿನ ಅರಮನೆ ಉರಿದುಹೋಗಿ, ಅಲ್ಲಿ ಅಂದು ತಂಗಿದ್ದ ಭೀಲರ ಹೆಂಗಸು ಮತ್ತವಳ ಐವರು ಮಕ್ಕಳ ಸುಟ್ಟ ಶವವನ್ನು ನೋಡಿ, ಪಾಂಡವರು ಸತ್ತೇ ಹೋದರೆಂದು ಭಾವಿಸಿ ಖುಷಿ ಪಟ್ಟಿದ್ದರಂತೆ ದುರ್ಯೋಧನಾದಿಗಳು. ಸುರಂಗದಿಂದ ತಪ್ಪಿಸಿಕೊಂಡು, ತಾಯಿ ಮತ್ತು ನಾಲ್ಕು ಜನ ಸಹೋದರರನ್ನು ತಾನು ಹೊತ್ತು ಕಾಡಿನ ಕತ್ತಲೆಯಲ್ಲಿ ದಿಕ್ಕು ದೆಸೆಯನ್ನದೆ ಓಡಿ ಓಡಿ ಓಡಿ....

to be continued...

Saturday, August 26, 2006

ವಿಮರ್ಶೆಗೆ ಮುನ್ನ..

ನಾನು ಚಿಕ್ಕವನಿದ್ದಾಗ ಅಪ್ಪ ನನಗಾಗಿ ‘ಬಾಲಮಂಗಳ’ ಎಂಬ ಮಕ್ಕಳ ಪಾಕ್ಷಿಕವನ್ನು ತರಿಸುತ್ತಿದ್ದ. ಬಹುಶಃ ನನಗೆ ಓದಿನ ಹುಚ್ಚು ಶುರುವಾದದ್ದು ಆಗಿನಿಂದಲೇ ಇರಬೇಕು. ಅಪ್ಪ ನನಗಿಂತ ಒಳ್ಳೇ reader. ನಮ್ಮ ಮನೆಗೆ ಅನೇಕ ಒಳ್ಳೆಯ magazine ಗಳು ಬರುತ್ತಿದ್ದವು. ಸಾಗರದ ಲೈಬ್ರರಿಯಲ್ಲಿ ಅಪ್ಪನ membership ಇತ್ತು. ಅಪ್ಪ ಸಾಗರಕ್ಕೆ ಹೋದಾಗ ಪುಸ್ತಕ change ಮಾಡಿಸಿಕೊಂಡು ಬರುತ್ತಿದ್ದ. ಹೀಗಾಗಿ, ನಮ್ಮ ಮನೆ ಯಾವಾಗಲೂ ಪುಸ್ತಕಗಳ ಆಗರದಂತಿರುತ್ತಿತ್ತು. ಅಮ್ಮ, ಅಜ್ಜಿಯರೂ ಸಹ ಸದಾ ಏನನ್ನೋ ಓದುತ್ತಿರುತ್ತಿದ್ದರು.

ಇಂತಹ ಪರಿಸರದಲ್ಲಿದ್ದ ನನಗೆ ಸಹಜವಾಗಿಯೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆಯಿತು. ಬಾಲಮಂಗಳದಿಂದ ನಿಧಾನಕ್ಕೆ ‘ಮಂಗಳ’ಕ್ಕೆ shift ಆದೆ. ಸಣ್ಣಪುಟ್ಟ ಕತೆಗಳನ್ನು ಓದಲಿಕ್ಕೆ ಶುರು ಮಾಡಿದೆ. ಚುಟುಕು, ಕವಿತೆಗಳು ಇಷ್ಟವಾಗತೊಡಗಿದವು. ಕಾದಂಬರಿಯ ಕಡೆಗೂ ಕಣ್ಣಾಡಿಸುತ್ತಿದ್ದೆ. ಆದರೆ ಅಪ್ಪ ತರುತ್ತಿದ್ದ ಕಾದಂಬರಿಯನ್ನು ಮೊದಲು ಅವನು ಓದುತ್ತಿದ್ದ, ಆಮೇಲೆ ಅಮ್ಮ ಓದುತ್ತಿದ್ದಳು, ಆಮೇಲೆ ಅಜ್ಜಿ... ಅಷ್ಟರಲ್ಲಿ ಒಂದು ವಾರ ಕಳೆದುಹೋಗಿರುತ್ತಿತ್ತು ಮತ್ತು ಅಪ್ಪ ಸಾಗರಕ್ಕೆ ಹೋಗುವ ದಿನ ಬಂದುಬಿಡುತ್ತಿತ್ತು. ಹಾಗಾಗಿ ನನಗೆ ಓದಲಿಕ್ಕೆ ಪುಸ್ತಕ ಸಿಗುತ್ತಲೇ ಇರಲಿಲ್ಲ. ಅಲ್ಲದೇ ನನಗೆ ಓದಲಿಕ್ಕೆ ಮನೆಯಲ್ಲಿ support ಕೂಡ ಇರಲಿಲ್ಲ. ಎಲ್ಲರೂ ನನಗೆ ‘ನಿನ್ನ education material ಓದ್ಕೋ’ ಅಂತ ತಾಕೀತು ಮಾಡುವವರೇ. ಹೀಗಾಗಿ ನಾನೂ ಹೆಚ್ಚು ಬಯ್ಯಿಸಿಕೊಳ್ಳುವ ಇಷ್ಟವಿಲ್ಲದೆ ಸುಮ್ಮನಾಗುತ್ತಿದ್ದೆ. ಅಲ್ಲದೇ school / college ಗೆ ಹೋಗಿ ಬಂದು, ಆಮೇಲೆ cricket ಆಡಿ ಬಂದು, ಆಮೇಲೆ ಸಂಧ್ಯಾ (ನನ್ನ ಎಕ್ಸ್-ಡವ್ವು!) ವಂದನೆ ಮಾಡಿ, ಆಮೇಲೆ ಊಟ ಮಾಡಿ, ಆಮೇಲೆ ಹೋಮ್‌ವರ್ಕ್ಸ್ ಮಾಡಿ.... ಅಷ್ಟರಲ್ಲಿ ನನಗೆ ನಿದ್ದೆ ಬಂದುಬಿಟ್ಟಿರುತ್ತಿತ್ತು; ಓದೋದು ಬೇಡ ಏನೂ ಬೇಡ ಅನ್ನಿಸುವಂತಾಗುತ್ತಿತ್ತು.

ಕೊನೆಗೆ ಓದು ಮುಗಿಸಿ(?) ಈ ಬೆಂಗಳೂರು ಎಂಬ ಕನಸಿನ ಊರಿಗೆ ಬಂದಾಯಿತು. ಇಲ್ಲಿ ಓದುವುದಕ್ಕಿರಲಿ, ಊಟ ಮಾಡುವುದಕ್ಕಿರಲಿ, ಕುಂಡೆ ತುರಿಸುವುದಕ್ಕೂ ಪುರುಸೊತ್ತಿಲ್ಲ! ಆಫೀಸಿಗೆ ಹೋಗಿ ಬರುವಷ್ಟರಲ್ಲಿ ಸಾಕು-ಬೇಕು ಅನ್ನುವಷ್ಟಾಗಿರುತ್ತೆ. ಇನ್ನೇನು ಓದೋದು? ಹಾಸಿಗೆ ಹಾಸಿ ಮಲಗುವುದಕ್ಕೊಂದು ಮನಸಾಗುತ್ತದೆ. ಆದಾಗ್ಯೂ, ಖುಷಿಯ ಸಂಗತಿಯೆಂದರೆ, ಈಗ ಎರಡು ವರ್ಷದಿಂದ ಪ್ರತಿ ತಿಂಗಳು ಎರಡು ಪುಸ್ತಕದಂತೆ ಖರೀದಿಸಿ ತರುತ್ತಿದ್ದೇನೆ. ನನ್ನ ಕಪಾಟು ಮಿನಿ ಲೈಬ್ರರಿಯಾಗುತ್ತಿದೆ. ನೋಡಿಕೊಂಡರೆ ನನಗೇ ಒಂಥರಾ ಸಂತಸವಾಗುತ್ತದೆ. ಎಷ್ಟೇ ನಿದ್ರೆ ಬಂದರೂ, ರಾತ್ರಿ ಹನ್ನೆರಡರವರೆಗೆ ಕೂತು ಓದುತ್ತೇನೆ. ಈಗ roomನಲ್ಲಿ ನಾನು ಒಬ್ಬನೇ ಇರುವುದರಿಂದ ನಾನು ಬಯಸುವ privacy ಸಿಕ್ಕಿದೆ. I’m happy nowadays.

ಸಧ್ಯಕ್ಕೆ ಎಸ್.ಎಲ್. ಭೈರಪ್ಪನವರ ಎಲ್ಲಾ ಕಾದಂಬರಿಗಳನ್ನೂ collect ಮಾಡುತ್ತಿದ್ದೇನೆ. ನಿನ್ನೆ ರಾತ್ರಿ ‘ಪರ್ವ’ ಓದಿ ಮುಗಿಸಿದೆ. It’s a great experience reading it. ಆ ಕಾದಂಬರಿಯನ್ನು ಓದುತ್ತಿದ್ದಾಗ ಮತ್ತು ಓದಿದ ನಂತರ ಹೊಳೆದ ಕೆಲವು ಅಂಶಗಳನ್ನು -ವಿಮರ್ಶೆ ಅಂತ ಕರೆಯಬಹುದೇನೋ- ಇಲ್ಲಿ publish ಮಾಡುತ್ತಿದ್ದೇನೆ. ಈ ಹಿಂದೆ ಓದಿದ ಕೃತಿಗಳ ಬಗ್ಗೆಯೂ ಬರೆದಿಟ್ಟಿದ್ದೇನೆ, type ಮಾಡಿ upload ಮಾಡಬೇಕು time ಸಿಕ್ಕಾಗ. ಅದ್ಯಾವಾಗ ಸಿಗುತ್ತದೋ ಹಾಳು ಟೈಮು....?

Monday, August 21, 2006

After many days....

ನಾನೂ ಒಂದು ಬ್ಲಾಗ್ ನ ಓನರ್ರು ಅನ್ನುವುದು ಮರೆತೇ ಹೋಗಿತ್ತೇನೋ ಎಂಬಂತೆ ಇಷ್ಟು ದಿನ ತಟಸ್ಥನಾಗಿದ್ದುಬಿಟ್ಟಿದ್ದೆ! ಪ್ರತಿವರ್ಷ, ಪ್ರತಿ ಹಬ್ಬಕ್ಕೂ, ನನ್ನ ಸ್ನೇಹಿತರಿಗೆ, ನೆಂಟರಿಷ್ಟರಿಗೆ, ಹಳೆಯ ಗುರುಗಳಿಗೆ... ಎಲ್ಲಾ greetings ಕಳುಹಿಸುವುದು ನಾನು ರೂಡಿಸಿಕೊಂಡು ಬಂದಿರುವ ಪದ್ಧತಿ. ಆದರೆ ನಾನು ಎಲ್ಲರಂತೆ, ಅಂಗಡಿಯಿಂದ ready-made ಗ್ರೀಟಿಂಗ್ ತರದೇ, ನಾನೇ ಕುಳಿತು, ಹೊಸ ಹೊಸ ರೀತಿಯಲ್ಲಿ greeting ಪ್ರಿಪೇರ್ ಮಾಡಿ ಕಳುಹಿಸುತ್ತಿದ್ದೆ. ಬಹುಶಃ ಈ ಬೆಂಗಳೂರಿಗೆ ಬಂದಮೇಲೆ active ಇಟ್ಟುಕೊಂಡಿರುವ ನನ್ನ ಹವ್ಯಾಸ ಎಂದರೆ ಇದೊಂದೇ ಇರಬೇಕು. ಉಳಿದೆಲ್ಲವೂ ಬೆಂಗಳೂರಿನ ಬ್ಯುಸಿ ಲೈಫ್ ನ ದಾಳಿಯ ಮುಂದೆ nil ಆಗಿಹೋಗಿವೆ.

ಇಲ್ಲೂ ಆಗಿದ್ದು ಹೀಗೆಯೇ. ತುಂಬಾ ಉತ್ಸಾಹದಿಂದ ಬ್ಲಾಗ್ open ಏನೋ ಮಾಡಿದೆ. ಮೊದಲೆರೆಡು postings ಸಹ ಸರಿಯಾಗಿಯೇ ಆಯಿತು. ಆದರೆ ಅದನ್ನು continue ಮಾಡಲಿಕ್ಕೆ ಮಾತ್ರ ಆಗಲೇ ಇಲ್ಲ. Actually, ಈ blog ನ open ಮಾಡಿದ್ದರ ಉದ್ದೇಶ ನನ್ನ ಕವನಗಳನ್ನ upload ಮಾಡಬೇಕೂಂತ. ಆದರೆ ಬರೆದಿಟ್ಟಿರುವ ನೂರಾರು ಕವನಗಳನ್ನ ಇಲ್ಲಿಗೆ ತಂದು, type ಮಾಡಿ, publish ಮಾಡುವಷ್ಟು ವ್ಯವದಾನ ಇಲ್ಲವಾಗಿ, ಅವು ಎಲ್ಲಿದ್ದವೋ ಅಲ್ಲೇ ಉಳಿದವು.

ಈ ಸಲ ಚೌತಿಗೆ ಊರಿಗೆ ಹೋಗುವುದು cancel ಅಂತ ತೀರ್ಮಾನವಾದಾಗ, 'ಹಾಗಾದ್ರೆ greetings ಮರೆಯದೇ ಕಳುಸ್ಬೇಕಲ್ಲ' ಅಂದುಕೊಂಡು, ಅಂತೂ ಪುರುಸೊತ್ತು ಮಾಡಿಕೊಂಡು, ಏನೋ ತೋಚಿದ್ದನ್ನು ಬರೆದು, type ಮಾಡಿ, printout ತಗೊಂಡು, ಎಲ್ಲರಿಗೂ ಕಳುಹಿಸುವ ವ್ಯವಸ್ಥೆ ಮಾಡಿಕೊಂಡ ಮೇಲೆ ನೆನಪಾಯಿತು: 'ಅರೆ, ಇದನ್ಯಾಕೆ ನಾನು ನನ್ನ blogನಲ್ಲಿ publish ಮಾಡಬಾರದು' ಅಂತ! So, ನನ್ನ ಬ್ಲಾಗ್, after a long time, ಹೊಸ ಪೈರಿನಿಂದ ನಳನಳಿಸುತ್ತಿದೆ. ಹಾಗೆಯೇ, ಇಷ್ಟು ಮಾಡಿದ ಮೇಲೆ 'ಇನ್ನು ಮೇಲೆ ಸರಿಯಾಗಿ maintain ಮಾಡಬೇಕು' ಅನ್ನೋ ಮನಸ್ಸೂ ಬರುತ್ತಿದೆ.. ನೋಡುವ, ಏನಾಗುತ್ತೋ..

ಚೌತಿಯ ಶುಭಾಷಯಗಳು, once again...

Chouthiya Shubhashayagalu

ಚೌತಿ ಹತ್ತಿರಾಗುತ್ತಿದೆ. ಶಾಪಿಂಗ್ ಮಾಲ್‌ಗಳಲ್ಲಿ, ಸಣ್ಣಪುಟ್ಟ ಅಂಗಡಿಗಳಲ್ಲಿ, ಕೊನೆಗೆ ಫೂಟ್‌ಪಾತ್‌ನ ಮೇಲೂ ಸಾಲಾಗಿ ಇರಿಸಿರುವ ಗಣೇಶನ ಮೂರುತಿಗಳು! ದಾರಿಯ ಮೇಲೆ ಹೋಗುವ ಬರುವ ಮಂದಿಯೆಲ್ಲಾ ನೋಡಿಯೇ ನೋಡುತ್ತಾರೆ ಇವನ್ನು. ದೊಡ್ಡ ದೊಡ್ಡ ಮೂರ್ತಿಗಳು ಹಿಂದಿನ ಸಾಲಿನಲ್ಲಿ; ಸಣ್ಣವು ಮುಂದೆ. ಸಡನ್ನಾಗಿ ನೋಡಿದರೆ, ಶಾಲೆಯಲ್ಲಿ ಪಾಠ ಕೇಳಲು ಕುಳಿತ ಮಕ್ಕಳಂತೆ ಭಾಸವಾಗುತ್ತದೆ. ಅಥವಾ ಗ್ರೂಪ್ ಫೋಟೋ ತೆಗೆಯಲು ಕೂರಿಸಿದಂತೆ.

ಖರೀದಿ ಮಾಡಲಿಕ್ಕೆಂದು ಹೋದ ಇವನು ಮೂಕವಿಸ್ಮಿತನಾಗಿ ನೋಡುತ್ತಾ ನಿಂತುಬಿಟ್ಟಿದ್ದಾನೆ. ಎಲ್ಲಾ ಗಣೇಶರೂ ‘ನನ್ನನ್ನೇ ಕೊಂಡುಕೋ’ ಅನ್ನುತ್ತಿದ್ದಾರೆ. ಹಿಂದಿನ ಸಾಲಿನಲ್ಲಿನ ಒಬ್ಬ ಗಣೇಶನಂತೂ ಕತ್ತಿ ಬೀಸಿ ನಿಂತಿದ್ದಾನೆ. ಆತ ರುದ್ರ ಗಣಪನಂತೆ. ಆತನ ನೆರಳು ಮುಂದಿನ ಸಾಲಿನ ಪುಟ್ಟ ಗಣೇಶರವರೆಗೂ ಬಿದ್ದಿದೆ. ಅಂತೂ ಇವನು ಹುಡುಕೀ ಹುಡುಕಿ, ಚೌಕಾಶಿ ಮಾಡಿ, ಒಂದು ಕೆಂಪು ಮಡಿ ಉಟ್ಟ ಗಣೇಶನನ್ನು ಖರೀದಿಸಿ ಅಕ್ಕಿ ತುಂಬಿದ ಚೀಲದೊಳಗೆ ಇಳಿಸುವಾಗ ಉಳಿದ ಗಣೇಶರೆಲ್ಲಾ ಟಾಟಾ ಮಾಡಿದ್ದಾರೆ.

ಚೀಲದೊಳಗಿನ ಕತ್ತಲೆಯಲ್ಲಿ ಕುಳಿತಿರುವ ಗಣೇಶನಿಗೆ ಬಸ್ಸಿನ ರಶ್ಶಿನಲ್ಲಿ ಶೆಖೆಯಾಗುತ್ತಿದೆ. ಸುತ್ತಲಿನ ಅಕ್ಕಿ ಕಾಳಿನಿಂದಾಗಿ ಒಂಥರಾ ಕಚಗುಳಿಯಾಗುತ್ತಿದೆ. ಮನೆ ಮುಟ್ಟುತ್ತಲೇ ಮಕ್ಕಳಿಬ್ಬರು ಓಡಿ ಬಂದು ‘ಅಪ್ಪಾ, ಗಣ್ಪತಿ ತಂದ್ಯಾ? ಎಲ್ಲಿ ಎಲ್ಲಿ ತೋರ್‍ಸು..’ ಅನ್ನುತ್ತಾ ಚೀಲವನ್ನು ಕೆಳಗಿಳಿಸಿದ್ದಾರೆ. ಚೀಲದೊಳಗಿನಿಂದ ಹೊರತೆಗದ ಗಣೇಶನನ್ನು ಎತ್ತರದ ಮೇಜಿನ ಮೇಲೆ ಯಾರಿಗೂ ಸಿಗದಂತೆ ಇಡಲಾಗಿದೆ. ಮನೆಗೆ ಬಂದ ಹೊಸ ಅತಿಥಿಯನ್ನು ಎಲ್ಲರೂ ಬಂದು ನೋಡುತ್ತಿದ್ದಾರೆ: ಅಡುಗೆಮನೆಯಲ್ಲಿ ಬತ್ತಿ ಹೊಸೆಯುತ್ತಿದ್ದ ಅಮ್ಮ, ಹಿತ್ತಿಲಕಡೆ ಬಾಳೆ ಸೋಚುತ್ತಿದ್ದ ಅಜ್ಜಿ, ದೇವರ ಮುಂದೆ ಮಂಟಪ ಕಟ್ಟುತ್ತಿದ್ದ ಪಕ್ಕದ್ಮನೆ ಅಣ್ಣಯ್ಯ... ಎಲ್ಲಾ.

ಮರುದಿನ ಭಟ್ಟರು ಬಂದಿದ್ದಾರೆ. ಅಲಂಕೃತ ಮಂಟಪದಲ್ಲಿ ವಿರಾಜಮಾನನಾಗಿರುವ ಗಣೇಶ ತನಗೆ ಸಲ್ಲಿಸಲ್ಪಡುತ್ತಿರುವ ಭರ್ಜರಿ ಪೂಜೆ, ನೈವೇದ್ಯಗಳಿಂದ ಸಂಪ್ರೀತನಾಗುತ್ತಿದ್ದಾನೆ. ಪಟಾಕಿ ಸದ್ದಿಗೆ ಅವನ ಇಲಿ ಬೆಚ್ಚಿಬಿದ್ದಿದೆ. ಹಾವಿಗೋ, ಈ ಡೊಳ್ಳುಹೊಟ್ಟೆಯನ್ನು ಸದಾ ಸುತ್ತಿಕೊಂಡೇ ಇರಬೇಕಲ್ಲ ಎಂಬ ಸಂಕಟ.

ಪೂಜೆಯೆಲ್ಲಾ ಮುಗಿದು, ನೆಂಟರು-ಮನೆಮಂದಿಗೆಲ್ಲಾ ಊಟ ಆಗಿ, ಇಲ್ಲಿ ಗಣೇಶನನ್ನೊಬ್ಬನನ್ನೇ ಬಿಟ್ಟು, ಎಲ್ಲಾ ಹೊರಗೆ ಜಗುಲಿಯಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದಾರೆ. ಗಣೇಶನಿಗೆ ಈಗ ಏಕಾಂತ. ಆತ ಸುಸ್ತಾರಿಸಿಕೊಳ್ಳುತ್ತಾ ಯೋಚಿಸುತ್ತಿದ್ದಾನೆ:

ಯಾರ್‍ಯಾರು ಏನೇನು ಬೇಡಿಕೊಂಡರು ಮಂಗಳಾರತಿ ಸಮಯದಲ್ಲಿ... ಮನೆಯ ಯಜಮಾನ ಕೇಳಿಕೊಂಡ: ಅಡಿಕೆಗೆ ಇನ್ನೂ ರೇಟ್ ಬರೋ ಹಂಗೆ ಮಾಡಪ್ಪ. ಅವನ ಹೆಂಡತಿ ಬೇಡಿಕೊಂಡಳು: ಹಬ್ಬದ ಮರುದಿನವೇ ಹಿಸೆ ಪಂಚಾಯ್ತಿ ಇದೆ, ಯಾರಿಗೆ ಏನು ಹೋಗುತ್ತೊ ಏನೋ, ನಮಗಂತೂ ‘ಸರಿಯಾಗಿ’ ಬರೋಹಂಗೆ ಮಾಡಪ್ಪ! ಅಜ್ಜಿ ಬೇಡಿಕೊಂಡಳು: ಸುಖವಾದ ಸಾವು ಕೊಡಪ್ಪ. ಪುಟ್ಟಿ ಬೇಡಿಕೊಂಡಳು: ಓದದಿದ್ದರೂ ಎಕ್ಸಾಮಲ್ಲಿ ಪಾಸಾಗೋಹಂಗೆ ಮಾಡಪ್ಪ. ಅಜ್ಜ ಯೋಚಿಸುತ್ತಿದ್ದ: ಕಾಶಿಯಾತ್ರೆ ಒಂದು ಪೆಂಡಿಂಗ್ ಉಳಿದುಹೋಯ್ತಲ್ಲ.. ಕಿರೀಮಗನಿಗೆ ಇನ್ನೂ ತನಗೆ ಮದುವೆಯಾಗದ್ದರ ಬಗ್ಗೆ ಚಿಂತೆ. ಅಳಿಯನಿಗೆ ಮುಂದಿನ ವರ್ಷದೊಳಗೆ ಒಂದು ಕಾರ್ ಕೊಂಡುಕೊಳ್ಳಲೇ ಬೇಕೆಂಬ ಕನಸು. ಪುಟ್ಟನಿಗೋ ಚಿಂತೆ: ಹಬ್ಬಕ್ಕೆ ಬಂದಿರುವ ಮಾವ ಚಾಕ್ಲೇಟ್ ತಂದೇ ಇಲ್ಲ ಯಾಕೆ? ಅಥವಾ ತಂದಿದ್ದರೂ ಕೊಡುವುದಕ್ಕೆ ಮರೆತನೇ? ...ಪಕ್ಕದ್ಮನೆ ಅಣ್ಣಯ್ಯನೂ ಏನೋ ಬೇಡಿಕೊಂಡನಲ್ಲ, ಏನು?

ಗಣೇಶನಿಗೆ ಲೆಕ್ಕ ತಪ್ಪುತ್ತಿದೆ... ಮರೆವಾಗುತ್ತಿದೆ.. ತನ್ನನ್ನು ಇಷ್ಟೆಲ್ಲಾ ಭಕ್ತಿಯಿಂದ ಪೂಜಿಸಿದ್ದರ ಹಿಂದಿನ ಮರ್ಮ ಈಗ ಅರ್ಥವಾಗುತ್ತಿದೆ... ಹೌದು, ಎಲ್ಲರ ಆಸೆಗಳನ್ನೂ ಪೂರೈಸಬೇಕು ಅಂದುಕೊಳ್ಳುತ್ತಾನೆ....

ಚೌತಿಯ ಹಾರ್ದಿಕ ಶುಭಾಷಯಗಳನ್ನು ಹೇಳುತ್ತಾ, ಗಣೇಶನೆದುರಿನ ನಿಮ್ಮ ಪ್ರಾರ್ಥನೆಗಳಿಗೆ ಫಲ ಸಿಗಲಿ ಅಂತ ಹಾರೈಸುತ್ತೇನೆ.