Friday, February 23, 2007

ಇರುವೆ... ನೀ ಎಲ್ಲಿರುವೆ?

ನನಗೊಂಥರಾ ತಿಕ್ಕಲು ಅಂತ ಈ ಮೊದಲೇ ಹೇಳಿದ್ದೆ ಅನ್ಸುತ್ತೆ ಅಲ್ವಾ? ಹೂಂ ಹೇಳಿದ್ದೆ. ಅದೇ ದೀಪಾವಳಿ ಸಮಯದಲ್ಲಿ... ನಿಮಗೊಂದು ಗ್ರೀಟಿಂಗ್ ಕಳ್ಸಿದ್ನಲ್ಲ, ಅವಾಗ ಹೇಳಿದ್ದೆ. ಈಗ ಅದ್ನೇ ಇನ್ನೊಂದ್ ಸ್ವಲ್ಪ ಡೀಟೇಲಾಗಿ ಹೇಳ್ತೀನಿ ಕೇಳಿ..! ಏನ್ಗೊತ್ತಾ? ಕೆಲವೊಮ್ಮೆ ರೂಮಿನಲ್ಲಿ ಏನೂ ಮಾಡದೇ ಸುಮ್ಮನೆ ಕುಳಿತಿರುತ್ತೇನೆ. ಬೇಕಷ್ಟು ಓದಲಿಕ್ಕಿರುತ್ತದೆ; ಆದರೆ ಓದುತ್ತಿರುವುದಿಲ್ಲ. ಬರೆಯುವುದಿರುತ್ತದೆ; ಬರೆಯುತ್ತಿರುವುದಿಲ್ಲ. ಮಾಡಬೇಕಾದ ಕೆಲಸವೂ ಇರುತ್ತದೆ; ಮಾಡುತ್ತಿರುವುದಿಲ್ಲ. ಮೂಡ್‍ಲೆಸ್‍ನೆಸ್ ಏನಲ್ಲ ಅದು; ಒಂಥರಾ ಏನೂ ಮಾಡಲಿಕ್ಕೆ ಬಾರದ ಮೂಡು. ಅಥವಾ ಸುಮ್ಮನೆ ಕೂರಬೇಕೆನಿಸುವ ಮೂಡು!

ನಿನ್ನೆ ರಾತ್ರೀನೂ ಹಾಗೇ. ಏನನ್ನೋ ಯೋಚಿಸುತ್ತಾ ಕೂತಿದ್ದೆ. ನನ್ನ ಎದಿರುಗಡೆ ಗೋಡೆಯ ಅಂಚಿನಲ್ಲಿ ಒಂದು ಇರುವೆಯ ಸಾಲು. ನೂರಾರು ಪುಟ್ಟ ಪುಟ್ಟ ಇರುವೆಗಳು ತರಾತುರಿಯಿಂದ ಓಡಾಡುತ್ತಿವೆ. ಸುಮ್ಮನೆ ತಮ್ಮ ಪಾಡಿಗೆ ತಾವು ಓಡಾಡಿಕೊಂಡಿವೆ. ಸಾಲಾಗಿ ಓಡುತ್ತಿವೆ. ಕೆಲವೊಂದು ಇರುವೆಗಳು ನಡೆದುಕೊಂಡು ಹೋಗುತ್ತಿವೆ. ಕೆಲವೊಂದು ಬಾಯಲ್ಲಿ ಏನನ್ನೋ ಕಚ್ಚಿ ಹೊತ್ತುಕೊಂಡು ಹೋಗುತ್ತಿವೆ. ಏನದು ಬಾಯಲ್ಲಿ? ನಾನು ಗಮನವಿಟ್ಟು ನೊಡಿದೆ. ಎಲ್ಲಿಂದ ಬರುತ್ತಿವೆ ಇವು ಅಂತ ಹುಡುಕುತ್ತಾ ಇರುವೆಯ ಸಾಲನ್ನೇ ಹಿಂಬಾಲಿಸುತ್ತಾ ಹೋದೆ. ಕೊನೆಗೂ ಪತ್ತೆಯಾಯಿತು: ಮೊನ್ನೆ ರಾತ್ರಿ ನಾನು ತಿನ್ನುತ್ತಾ ಅಲ್ಲೇ ಮರೆತಿದ್ದ ಬಿಸ್ಕೆಟ್ ಪ್ಯಾಕ್ ಒಂದಕ್ಕೆ ಮುತ್ತಿಕೊಂಡಿವೆ ಇರುವೆಗಳು. ಕೊನೆಯ ನಾಲ್ಕು ಬಿಸ್ಕೆಟ್ಟುಗಳು ಪ್ಯಾಕಿನಲ್ಲಿದ್ದವು ಕಣ್ರೀ. ಈ ಇರುವೆಗಳು ಅವನ್ನು ಕಥಂ ಮಾಡಲು ಬಂದಿದ್ದವು. ಚೂರು ಚೂರೇ ಬಿಸ್ಕೆಟ್ಟು ಮುರಿದುಕೊಂಡು ತಮ್ಮ ಗೂಡಿಗೆ ಸಾಗಿಸುತ್ತಿದ್ದವು. ಎದಿರುಗಡೆ ಸಿಕ್ಕ ತಮ್ಮ ಗೆಳೆಯರಿಗೆ 'ಮುತ್ತು' ಕೊಟ್ಟುಕೊಳ್ಳುತ್ತಾ, ಮುತ್ತಿನಲ್ಲೇ ಸಂದೇಶ ಹೇಳಿಕೊಳ್ಳುತ್ತಾ ಸಾಗುತ್ತಿದ್ದವು. ತುಟಿಗಳಿಗೆ ತುಟಿ ಸೇರಿಸುವುದೇ ಸಂದೇಶ ತಲುಪಿಸಲಿಕ್ಕೆ ಉತ್ತಮ ವಿಧಾನ ಎಂಬ ಅರಿವು ಇರುವೆಗಳಿಗೂ ಆಗಿದೆಯಲ್ಲಾ ಎಂದು ನಾನು ಸಂತಸಗೊಂಡೆ. ಕೆಲವೊಂದು ಇರುವೆಗಳು 'ಜಸ್ಟ್ ಕಿಸ್' ಕೊಟ್ಟು ಮುಂದಾಗುತ್ತಿದ್ದರೆ ಮತ್ತೆ ಕೆಲವು ಸುದೀರ್ಘ ಚುಂಬನದಲ್ಲಿ ತೊಡಗುತ್ತಿದ್ದವು. ಅವುಗಳ 'ಸ್ಮೂಚಿಂಗ್' ನೋಡುತ್ತಾ ನಾನು ಒಂದು ಕ್ಷಣ ಮೈಮರೆತೆ.

ಇರುವೆಗಳು ಕಷ್ಟ ಪಟ್ಟು ಎಷ್ಟೊಂದು ದೂರದಿಂದ ಈ ಬಿಸ್ಕೆಟ್‍ಗಾಗಿ ಬರುತ್ತಿವೆ. ನನಗೆ ಅವುಗಳ ಕಷ್ಟ ಕಂಡು ಕನಿಕರವಾಯಿತು. ಆ ಬಿಸ್ಕೆಟ್ ಪ್ಯಾಕನ್ನು ಅವುಗಳ ಗೂಡಿನ ಬಳಿಯೇ ಒಯ್ದು ಇಟ್ಟುಬಿಟ್ಟೆ. ನಂತರ ನನ್ನ 'ಬದುಕಿನ ಪುಟಗಳ'ನ್ನು ತಿರುವಿ ಹಾಕುತ್ತಾ ಕುಳಿತೆ.

ಈ 'ಬದುಕಿನ ಪುಟಗಳು' ಎಂಬುದು, ನಾನು ಬರೆದ ಹಾಳೆಗಳನ್ನೆಲ್ಲಾ ಜೋಡಿಸಿಟ್ಟ ಒಂದು ಫೈಲು. ಈ ಫೈಲಿನಲ್ಲಿ ನಾನು ಇದುವರೆಗೆ ಬರೆದ ಯಾವತ್ತೂ ಕವನ, ಚುಟುಕು, ಲಹರಿ, ಹನಿ, ಹಾಯಿಕು, ಮಿನಿ ಕಥೆ, ಅರ್ಧ ಬರೆದಿಟ್ಟ ಅದೆಷ್ಟೋ ಕತೆಗಳು, ಯಾರ ಬಳಿಯೂ ಹೇಳಿಕೊಳ್ಳಲಾಗದ ನನ್ನ ಖಾಸಗಿ ಮೌನದ ಮಾತುಗಳು ...ಎಲ್ಲಾ ಇವೆ. ಒಂದರ್ಥದಲ್ಲಿ ಇದು ನನ್ನ ಡೈರಿ. ಏಕೆಂದರೆ ಇಲ್ಲಿಯ ಎಲ್ಲಾ ಬರಹಗಳಲ್ಲಿ -ಒಂದಲ್ಲಾ ಒಂದು ರೂಪದಲ್ಲಿ- ನಾನಿದ್ದೇನೆ. ಅದಕ್ಕೇ ಈ ಫೈಲಿಗೆ 'ಬದುಕಿನ ಹಾಳೆಗಳು' ಅಂತ ಹೆಸರಿಟ್ಟಿದ್ದು. ಹಿಂದೆಂದೋ ಬರೆದಿಟ್ಟಿದ್ದನ್ನು ಇಂದು ಮತ್ತೆ ಓದುವಾಗ 'ಇದು ನಾನೇ ಬರೆದದ್ದಾ?' ಅಂತ ಅದೆಷ್ಟೋ ಬಾರಿ ನನಗನ್ನಿಸಿದ್ದುಂಟು.

ಬ್ಲಾಗಿನ ಬುಟ್ಟಿಗೆ ತುಂಬಬಹುದಾದ್ದಂತದ್ದು ಏನಾದರೂ ಇದೆಯೇ ಎಂಬ ಸದು(?)ದ್ಧೇಶದಿಂದ ನಿನ್ನೆ ಆ ಫೈಲಿನ ಪುಟಗಳನ್ನು ತಿರುವುತ್ತಿದ್ದಾಗ ಸಿಕ್ಕಿಬಿದ್ದವೇ ಈ ಮೂರು ಕವನಗಳು. ಅದರಲ್ಲೊಂದು ಪ್ರಕಟಿತ ಕವನ. ವಿಶೇಷ ಏನಪ್ಪಾ ಅಂದ್ರೆ, ಈ ಮೂರೂ ಕವನಗಳ ಪಾತ್ರಧಾರಿಯೂ 'ಇರುವೆ'! ನಿಮ್ಮ ಖುಷಿಗಲ್ಲ; ನನ್ನ ಖುಷಿಗಾಗಿ (ಮತ್ತೊಮ್ಮೆ!) ಇವನ್ನು ಇಲ್ಲಿ ಪಬ್ಲಿಷ್ ಮಾಡುತ್ತಿದ್ದೇನೆ.

ಇರುವೆ ಕಾಟ

ಇವತ್ತು ನಮ್ಮನೆ ಅಡುಗೆ ಮನೆಗೆ ಇರುವೆಗಳ ದಾಳಿ
ಹೀಗಾಗಿ ಅಮ್ಮನಿಗೆ ಲಕ್ಷ್ಮಣರೇಖೆ ಎಳೆಯುವ ಪಾಳಿ!

ಛೇ! ಹಬ್ಬಕ್ಕೇಂತ ಮಾವ ಬೇರೆ ಬಂದಿದ್ದಾನೆ, ನಾಚಿಕೆ
ಏನು ಮಾಡಿದ್ರೂ ಹೋಗೋಲ್ವೇ ಇವು ಸಾಯೋಕೆ!

ಮಾವ ಬಂದಿದ್ದಕ್ಕೆ ಇವತ್ತು ಅಮ್ಮ ಮಾಡಿದ್ದಾಳೆ ಹಲ್ವಾ
ಅದಕ್ಕೂ ಮುತ್ತಿಕೊಂಡಿವೆ ಇವು; ಇವಕ್ಕೇನು ಸತಾತರ ಇಲ್ವಾ?

ನಾನೆಂದೆ: 'ಅಮ್ಮಾ ಬೇಗ ಮಾವನಿಗೆ ಊಟಕ್ಕೆ ಬಡಿಸು'
ಅಮ್ಮ ಅಂದ್ಲು: 'ಮೊದ್ಲು ನೀನು ಈ ಇರುವೆಗಳನ್ನೆಲ್ಲ ಹೊರಗೆ ಓಡಿಸು'!

ಅಯ್ಯೋ! ಅಪ್ಪಾ, ಅಜ್ಜೀ ಅರಿಶಿಣ ಪುಡಿನಾದ್ರೂ ಹಾಕಿ
ಇನ್ನುಳಿದಿರೋದು ಅದೊಂದೇ ಬಾಕಿ!

ಮನೆ ಎಂದಮೇಲೆ ತಪ್ಪಿದ್ದಲ್ಲ ಇರುವೆ ಕಾಟ
ಆದರೆ ಅದಕ್ಕಾಗಿ ತಡವಾಗಬಾರದಿತ್ತು ಇವತ್ತಿನ ಊಟ!

[ಈ ಪದ್ಯ ಬರೆದಾಗ ನಾನು ಬಹುಶಃ ಒಂಭತ್ತನೇ ತರಗತಿಯಲ್ಲಿದ್ದೆ ಅನ್ಸುತ್ತೆ. ಯಾಕೇಂದ್ರೆ ಇದು ನಮ್ಮ 'ಹಳೇ ಮನೆ'ಯಲ್ಲಿ ನಡೆದ ಘಟನೆ. ನಾನು ಹತ್ತನೇ ತರಗತಿಯಲ್ಲಿದ್ದಾಗ ನಾವು ನಮ್ಮ ಈಗಿರುವ ಹೊಸ ಮನೆಗೆ ಬಂದದ್ದು. ಹಾಗಾಗಿ ಇದನ್ನು 'ಶಿಶುಪದ್ಯ'ಗಳ ಲಿಸ್ಟಿಗೆ ಸೇರಿಸಬಹುದು!]

* * *

ಶ್ರದ್ಧೆ

ಈಗ ರಾತ್ರಿ ಹನ್ನೆರಡು ಗಂಟೆ
ಓದುತ್ತಾ ಕುಳಿತಿದ್ದೇನೆ.
ಎದುರಿನ ಗೋಡೆಯಲ್ಲಿ
ಇರುವೆಯೊಂದು ಮೇಲೇರುತ್ತಿದೆ...
ಛೆ! ಅದು ಕೆಳಗೆ ಬಿದ್ದುಬಿಟ್ಟಿತು!
ನಾನಿನ್ನೂ ಓದುತ್ತಿದ್ದೇನೆ; ತೂಕಡಿಸುತ್ತಿದ್ದೇನೆ
ಅರೆ! ಇರುವೆ ಮತ್ತೆ ಮೇಲೇರುತ್ತಿದೆ...
ಥೂ! ಈ ಸಲವೂ ಬಿತ್ತು.
ಜೋರಾಗಿ ನಿದ್ರೆ ಬರುತ್ತಿದೆ ನನಗೆ...
ಆ ಇರುವೆ ಮತ್ತೆ ಮೇಲೇರುತ್ತಿದೆಯಲ್ಲಾ..?
ಊಹುಂ, ನನಗಿನ್ನು ಓದಲಾಗುವುದಿಲ್ಲ;
ಹೋಗಿ ಮಲಗಿಕೊಳ್ಳುತ್ತೇನೆ.

[ಈ ಕವಿತೆ 'ವಿಜಯ ಕರ್ನಾಟಕ' ಪತ್ರಿಕೆಯ 'ಯುವ ವಿಜಯ' ಪುರವಣಿಯಲ್ಲಿ ಆಗಸ್ಟ್ ೩೧, ೨೦೦೧ ರಂದು ಪ್ರಕಟಗೊಂಡಿತ್ತು.]

* * *

ಇರುವೆ

ಹ್ಯಾಂಗಾಶಿ ಬಂತೋ ಏನೋ, ಆಗಲಿಂದ
ಮೇಜಿನ ಮೇಲೆ ಓಡಾಡುತ್ತಲೇ ಇರುವ ಗೊದ್ದ
ಈಗ ನನಗೆ ಅತ್ಯಾಕರ್ಷಕ ವಸ್ತುವಾಗಿಬಿಟ್ಟಿದೆ.
ಎಷ್ಟೇ ಪುಸ್ತಕದ ಮೇಲೆ ಗಮನ ಹರಿಸಬೇಕೆಂದರೂ
ಮತ್ತೆ ಮತ್ತೆ ಕಣ್ಣು ಗೊದ್ದದ ಮೇಲೇ ಹೋಗುತ್ತದೆ.

ಕೆಂಪು-ಕಪ್ಪು-ಕಂದು ಬಣ್ಣಗಳಿಂದ ಕೂಡಿರುವ
ಈ ಸುಂದರ ಗೊದ್ದಕ್ಕೆ ಆರು ಕಾಲಿದೆ -ನನಗಿಂತ ನಾಲ್ಕು ಜಾಸ್ತಿ!
ಮೀಸೆಯ ಕೂದಲು ನನ್ನವುಗಳಿಗಿಂತ ಉದ್ದಕಿದೆ
ತಲೆ, ತಲೆಗಿಂತ ಚಿಕ್ಕದಾದ ದೇಹ, ಎಲ್ಲಕ್ಕಿಂತ ದೊಡ್ಡದಾದ
ಹಿಂದುಗಡೆ ಪಾರ್ಟು.

ನಾನು ಕಷ್ಟ ಪಟ್ಟು ಮುಖವನ್ನು ಪುಸ್ತಕದಲ್ಲಿ ನೆಟ್ಟು ಕೂತರೆ
ಗೊದ್ದ ಪುಸ್ತಕವನ್ನೇ ಹತ್ತಿ ಬಂದು
ಅಕ್ಷರಗಳ ಮೇಲೆಲ್ಲಾ ಓಡಾಡುತ್ತಾ, ಅಲ್ಲಲ್ಲಿ ನಿಲ್ಲುತ್ತಾ,
ತಲೆಯೆತ್ತಿ ನೋಡುತ್ತಾ, ವಯ್ಯಾರ ಮಾಡುತ್ತಾ,
ಮೀಸೆ ಅಲ್ಲಾಡಿಸುತ್ತಾ, ಘನಗಾಂಭೀರ್ಯದಿಂದ ರಾರಾಜಿಸುತ್ತಿದೆ.

ಒಂದು ನಿಮಿಷ ಸ್ಟ್ರಕ್ಕಾಯಿತೇನೋ ಎಂಬಂತೆ ನಿಂತೇ ಇದ್ದ ಗೊದ್ದ ಇದ್ದಕ್ಕಿದ್ದಂತೆ
ಯಾರಿಂದಲೋ ಕಾಲ್ ಬಂತೇನೋ ಎಂಬಂತೆ ಜೋರಾಗಿ ಓಡತೊಡಗುತ್ತದೆ.
ಸರಸರನೆ ನನ್ನ ದಪ್ಪಗಾತ್ರದ ಪುಸ್ತಕದಿಂದ ಇಳಿದು
ಪಕ್ಕದಲ್ಲಿರುವ ಟೇಬಲ್-ಫ್ಯಾನಿನ ಕಾಲುಗಳ ಮೂಲಕ ಏರುತ್ತಾ,
ಕವಚದ ತಂತಿಗಳ ಮೇಲೆ ಸರ್ಕಸ್‍ಮ್ಯಾನ್‍ನಂತೆ ನರ್ತಿಸುತ್ತಾ,
ಫ್ಯಾನಿನ ಶೃಂಗವನ್ನೇರಿದ ಇರುವೆ 'ಏಯ್ ನೋಡಿಲ್ಲಿ..
ನಾನೇ ನಿನಗಿಂತ ಮೇಲೆ' ಎಂಬಂತೆ ನನ್ನನ್ನೇ ನೋಡುತ್ತಿದೆ...!

ಅದು ಹೇಗೋ ಮಾಡಿ ಫ್ಯಾನಿನ ಪಂಕಗಳಿಗಿಳಿದ ಗೊದ್ದವನ್ನು ನೋಡಿದ ನನಗೆ
'ಫ್ಯಾನ್ ಆನ್ ಮಾಡಿದ್ರೆ ಹ್ಯಾಗೆ?' ಅನ್ನುವ
ದುಷ್ಟ ಆಲೋಚನೆ ಬಂತು.

[ನನ್ನ ಡಿಪ್ಲೋಮಾ ಕೊನೆಯ ವರ್ಷ (೨೦೦೩)ದಲ್ಲಿ ಬರೆದದ್ದು ಇದನ್ನು. ಹ್ಯಾಗೆ ಒಂದು ಇರುವೆ ಸಹ ಮನುಷ್ಯನ ತಾಳ್ಮೆಯನ್ನು ಪರೀಕ್ಷಿಸಬಲ್ಲದು, ಅದರ ಸಹಜ 'ಓಡಾಡುವಿಕೆ' ಸಹ ನನಗೆ ಹೇಗೆ 'ಸವಾಲ್'ನಂತೆ ಭಾಸವಾಯಿತು, ಕೊನೆಗೆ ಅದು ನನ್ನನ್ನು ಅಣಕಿಸಿದಂತೆ ಕಂಡು, ಅದನ್ನು ಕೊಂದುಬಿಡಬೇಕೆನ್ನುವ ದುರಂತಮಯ ಆಲೋಚನೆ ಬಂತು ಎಂಬುದನ್ನು ಈ ಕವಿತೆ ಹೇಳುತ್ತಿದೆ ಎಂಬ ಎಕ್ಸ್‍ಪ್ಲನೇಷನ್ನು ಇಲ್ಲಿ ಅಗತ್ಯವೇನು ಇರಲಿಲ್ಲವೇನೋ?]

ವಿಜ್ಞಾನ ಹೇಳುತ್ತೆ: ಇರುವೆ ತನ್ನ ತೂಕಕ್ಕಿಂತ ಎಪ್ಪತ್ತು ಪಟ್ಟು ಭಾರವನ್ನು ಎಳೆದುಕೊಂಡು ಸಾಗಿಸಬಲ್ಲದಂತೆ! ಆದರೆ ಮನುಷ್ಯ ತನ್ನ ತೂಕಕ್ಕಿಂತ ಏಳುನೂರು ಪಟ್ಟು ಹೆಚ್ಚು ಭಾರವನ್ನು ಕೇವಲ ತನ್ನ ಬುದ್ಧಿಶಕ್ತಿಯಿಂದ ಸಾಗಿಸಬಲ್ಲ ಅಂತೀರಾ? ನೀವು ಬಿಡಿ ಸ್ವಾಮಿ, ಬುದ್ಧಿವಂತರು. ನಿಮಗೇನು ಗೊತ್ತು ಇರುವೆ ಕಷ್ಟ? ಪಾಪ, ಅದರ ಕಷ್ಟ ಅದಕ್ಕೆ!

ಹೋಗ್ಲಿ ಬಿಡಿ, ಮತ್ತೇನು ವಿಶೇಷ?

Tuesday, February 13, 2007

ಒಂದು ಪ್ರೇಮಪತ್ರವು...

ಬೊಗಸೆ ಕಣ್ಗಳ ಹುಡುಗೀ,

ನಿನಗೆ ಸಾವಿರ ಸಿಹಿಮುತ್ತುಗಳು.

ಇಲ್ಲೊಂದು ಸುಂದರ ಸಂಜೆ. ಇವತ್ತು ಬೆಂಗಳೂರಿಗೆ ಬಂದ್. ಬೆಳಗ್ಗೆಯಿಂದ ಮುಚ್ಚಿದ್ದ ಅಂಗಡಿಗಳು ಇದೀಗ ತಾನೆ ಕಣ್ಣು ಬಿಡುತ್ತಿವೆ.. ಹೋಟೆಲುಗಳ ಸ್ಟೋವ್ ಹೊತ್ತಿಕೊಳ್ಳುತ್ತಿವೆ.. ಸಿಗ್ನಲ್ ದೀಪಗಳು ತಮ್ಮ ಬಣ್ಣಗಳನ್ನು ಮತ್ತೆ ನೆನಪು ಮಾಡಿಕೊಳ್ಳುತ್ತಿವೆ.. ಯೋಚಿಸುತ್ತಿದ್ದೆ ನಾನು: ಹೀಗೆ ನಾನು ನಿನ್ನನ್ನು ನೆನಪಿಸಿಕೊಳ್ಳುವ ಪ್ರಸಂಗ ಬರದೇ ಎಷ್ಟು ದಿನಗಳಾದವು..? ಯಾಕೆಂದರೆ ನಾನು ನಿನ್ನನ್ನು ಮರೆತಿದ್ದೇ ಇಲ್ಲ! ನನ್ನ ಹೃದಯದ ಬೀದಿಗಳಲ್ಲಿ ನಿನ್ನ ಸವಿನೆನಪುಗಳ ಅಂಗಡಿಗಳು ಯಾವಾಗ ಮುಚ್ಚಿದ್ದವು ಹೇಳು? ನೀನು ಹಚ್ಚಿಟ್ಟು ಹೋದ ಪ್ರೀತಿಯ ಹಣತೆ ಎಂದು ಆರಿತ್ತು ಹೇಳು? ಆದರೂ ನಿನಗೆ ಹುಸಿಕೋಪ. ಪತ್ರ ಬರೆಯದೇ ಎಷ್ಟು ದಿನಗಳಾದವು ಎಂದಾ? ಹೌದು ಕಣೆ, ಟೈಮೇ ಸಿಗಲಿಲ್ಲ. ನಿನ್ನ ಬಳಿ ಹೇಳಿಕೊಳ್ಳಲು ಸಾಕಷ್ಟು ವಿಷಯಗಳಿವೆ ಎಂಬುದಂತೂ ನಿಜ.

ಕಳೆದ ಭಾನುವಾರ ಒಂದು ಟೂರ್ ಹೋಗಿದ್ದೆ. 'ಹವ್ಯಕ-ಸಾಗರ' ಮತ್ತು 'ಆರ್ಕುಟ್-ಹವ್ಯಕ' ಬಳಗಗಳು ಸಂಯೋಜಿಸಿದ್ದ ಪ್ರವಾಸ. ಬಲಮುರಿ ಜಲಪಾತ ಮತ್ತು ರಂಗನತಿಟ್ಟು ಪಕ್ಷಿಧಾಮಗಳಿಗೆ ಹೋಗಿದ್ದೆವು. ಪೂರ್ತಿ ನೂರಾ ಮೂವತ್ತು ಜನ! ಮೂರು ಬಸ್‍ಗಳಲ್ಲಿ ಹೋಗಿದ್ದು. ಸುಮಾರು ಮೂವತ್ತು ಹುಡುಗಿಯರೂ ಬಂದಿದ್ದರು. (ಅವರ ಬಗ್ಗೆ ಬರೆಯುವುದಿಲ್ಲ ನಾನು; ಯಾಕೆಂದರೆ ನೀನು ಕೋಪಿಸಿಕೊಳ್ಳುತ್ತೀ!) ಪ್ರವಾಸ ತುಂಬಾ ಚೆನ್ನಾಗಿತ್ತು. ಬಸ್ಸಿನಲ್ಲಿ ವಿಪರೀತ ಗಲಾಟೆಯಿತ್ತು. ಹಾಡುಗಳು, ಅಂತ್ಯಾಕ್ಷರಿ, ಯಾವ್ಯಾವುದೋ ಆಟಗಳು... ಓಹ್! ಫುಲ್ ಮಸ್ತ್! ಬಲಮುರಿಯಲ್ಲಿ ಬೀಳುತ್ತಿದ್ದ ನೀರಿನಲ್ಲಿ ನಿನ್ನದೇ ಲಹರಿಯಿತ್ತು.

ಜುಳುಜುಳು ನೀರಿಲ್ಲಿ ತಿಲ್ಲಾನ ಹಾಡಿತ್ತು ನೋಡೋಕೆ ನಾ ಬಂದರೆ:
ನಿನ್ನದೇ ತಕತೈ ಕಂಡಿತು.. ತಕದಿಮಿ ಹೆಚ್ಚಿತು..





ಬಹಳ ಹೊತ್ತು ನೀರಿನಲ್ಲಿ ಆಟವಾಡಿ ನಾವು ರಂಗನತಿಟ್ಟಿಗೆ ಬಂದೆವು. ಅದೆಷ್ಟೊಂದು ಬಿಳಿ ಬಿಳಿ ಹಕ್ಕಿಗಳು ಅಲ್ಲಿ... ಹತ್ತು-ಹನ್ನೆರಡು ಜನ ಒಂದು ದೋಣಿಯಲ್ಲಿ ಕುಳಿತು ಕೊಳದಲ್ಲಿ ತೇಲುತ್ತಾ ಪಕ್ಷಿಗಳನ್ನು ನೋಡುವುದು. ಎಲ್ಲೆಲ್ಲಿಂದಲೋ ಬಂದ ಹಕ್ಕಿಗಳು. ದೋಣಿಯವ ಹೇಳುತ್ತಿದ್ದ: "ಇವು ಸ್ನಿಕ್ಕರ್ ಅಂತ. ಗ್ರೀಸ್ ದೇಶದಿಂದ ಬಂದವು.." "ಇವು ಫೆದರ್‌ಸ್ಟೋನ್ ಅಂತ, ಮಲೇಷಿಯಾದಿಂದ ಬರ್ತಾವೆ.." ಯಾವುದೋ ದೇಶದಿಂದ ಇಲ್ಲಿಗೆ ಬಂದು, ಮರದ ಎಲೆಗಳ ಮರೆಯಲ್ಲಿ ಗೂಡು ಕಟ್ಟಿಕೊಂಡು, ಮೊಟ್ಟೆ ಇಟ್ಟು ಮರಿ ಮಾಡಿ, ಮರಿಹಕ್ಕಿಯ ರೆಕ್ಕೆ ಬಲಿಯುತ್ತಿದ್ದಂತೆಯೇ ಮತ್ತೆ ಹಾರಿಹೋಗುತ್ತವಂತೆ. ಹಕ್ಕಿಗಳನ್ನು ನೋಡುತ್ತಾ ಅಲೆಗಳ ಮೇಲೆ ತೇಲುತ್ತಾ ನಾನು ಮೈಮರೆತಿದ್ದೆ. ಯಾವುದೋ ಹಕ್ಕಿ ಮರಿಗೆ ಗುಟುಕು ನೀಡುತ್ತಿತ್ತು.. ಮತ್ಯಾವುದೋ ಹಕ್ಕಿ ತನ್ನ ಸಂಗಾತಿಗೆ ಗುಟ್ಟು ಹೇಳುತ್ತಿತ್ತು..


ದೂರ ನಾಡಿನ ಹಕ್ಕಿ
ಹಾರಿ ಬಾ ಗೂಡಿಗೆ..
ಗೂಡು ತೂಗ್ಯಾವ ಗಾಳೀಗೆ..
ಸುವ್ವಿ ಸುವ್ವಾಲೆ ಸುವ್ವಿ..

ಪಯಣದುದ್ದಕ್ಕೂ ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡೆ.

ಮೊನ್ನೆ ಶುಕ್ರವಾರ ಏರ್‌ಶೋ ನೋಡಲಿಕ್ಕೆ ಹೋಗಿದ್ದೆ: ಆಫೀಸಿಗೆ ರಜೆ ಹಾಕಿ. ಇವೂ ಹಕ್ಕಿಗಳು. ಲೋಹದ ಹಕ್ಕಿಗಳು. ಮೊಟ್ಟೆ ಇಡದ ಹಕ್ಕಿಗಳು. ಇವೂ ಆಗಸದಲ್ಲಿ ತನ್ಮಯತೆಯಿಂದ ಹಾರಾಡುತ್ತವೆ. ಪಲ್ಟಿ ಹೊಡೆಯುತ್ತವೆ. ನಿಂತಂತೆ ತೇಲುತ್ತವೆ. ರೆಕ್ಕೆ ಅಗಲಿಸುತ್ತವೆ... ಯಾವ್ಯಾವುದೋ ದೇಶಗಳಿಂದ ಬಂದ ವಿಮಾನಗಳು, ಜೆಟ್‍ಗಳು ನಡೆಸಿದ ತರಹೇವಾರಿ ಕಸರತ್ತು ನೋಡುವಂತಿತ್ತು. ಜೆಟ್‍ಗಳ ಆರ್ಭಟವೇ ಒಂದು ತೂಕವಾದರೆ ನಮ್ಮ ಭಾರತದ 'ಸೂರ್ಯಕಿರಣ್' ಹೆಸರಿನ ಮಿನಿ ವಿಮಾನಗಳದ್ದೇ ಒಂದು ತೂಕ. ಪುಟ್ಟ ಪುಟ್ಟ ಒಂಭತ್ತು ವಿಮಾನಗಳು ಆಗಸದಲ್ಲಿ ಅದೇನೇನು ಆಟವಾಡಿದೆವು ಅನ್ನುತ್ತೀ..? ಆಗಸದಲ್ಲಿ ತ್ರಿವರ್ಣಗಳ ಓಕುಳಿ ನಿರ್ಮಿಸಿ ಅವು ಗಿಟ್ಟಿಸಿದ ಸಿಳ್ಳೆ-ಚಪ್ಪಾಳೆಗಳು ಅದೆಷ್ಟೋ? ಚುಕ್ಕಿಗಳೇ ಇಲ್ಲದೆ ಅವು ಎಳೆದ ರಂಗೋಲಿಗಳೆಷ್ಟೋ? ಕೊನೆಗೊಮ್ಮೆ, ಅವುಗಳಲ್ಲೇ ಎರಡು ವಿಮಾನಗಳು ವಿರುದ್ಧ ದಿಕ್ಕಿನಿಂದ ಹಾರಿಬಂದು ಒಂದು ದೊಡ್ಡ ಹಾರ್ಟು ಸೃಷ್ಟಿಸಿದವು. ಮತ್ತೊಂದು ವಿಮಾನ ಬಂದು ಒಂದು ಬಾಣವನ್ನೂ ಸೇರಿಸಿತು ಆ ಹೃದಯಕ್ಕೆ... ಜನರಿಂದ ವಿಮಾನದ ಸಪ್ಪಳವನ್ನೂ ಮೀರಿಸುವಂತಹ ಕರತಾಡನ. ನೀನು ಇರಬೇಕಿತ್ತು ಅನ್ನಿಸಿತು. ಆದರೆ ಆ ಬಿಸಿಲಿಗೆ ನಿನ್ನ ಮುಖ ಬಾಡಿಹೋಗುತ್ತಿತ್ತು; ಬಾರದಿದ್ದುದೇ ಒಳ್ಳೆಯದಾಯಿತು ಅನ್ನಿಸಿತು ಕೊನೆಗೆ.

ನಿನ್ನೆ ರಾತ್ರಿಯಿಡೀ ಕುಳಿತು ಎಸ್.ಎಲ್. ಭೈರಪ್ಪನವರ ಹೊಸ ಕಾದಂಬರಿ 'ಆವರಣ' ಓದಿ ಮುಗಿಸಿದೆ. ಅದ್ಭುತ ಕಾದಂಬರಿ ಕಣೇ. ಕತೆ ಹೇಳಿ ನಿಂಗೆ ಬೇಜಾರ ಮಾಡೊಲ್ಲ; ನೀನೇ ಕೊಂಡು ಓದು. ಮೊದಲ ಮುದ್ರಣದ ಪ್ರತಿಗಳು ಎರಡೇ ದಿವಸಗಳಲ್ಲಿ ಖಾಲಿಯಾಗಿ ಈಗ ರಿಪ್ರಿಂಟ್ ಆಗಿ ಬಂದಿದೆ ಮತ್ತೆ. ಬೇಗ ಹೋಗಿ ಒಂದು ಕಾಪಿ ಎತ್ತಿಕೊಂಡು ಬಂದುಬಿಡು. ಓದಿಯಾದಮೇಲೆ ಹೇಳು: ಕುಳಿತು ಚರ್ಚಿಸೋಣ.

ಸರಿ, ಮತ್ತೇನು ವಿಶೇಷ? 'ಏನೇನೋ ಕತೆ ಹೇಳುತ್ತಾ ಮುಖ್ಯ ವಿಷಯವನ್ನೇ ಮರೆಸುತ್ತಿದ್ದೀಯಾ' ಅನ್ನುತ್ತೀಯಾ? ಗೊತ್ತು, ವ್ಯಾಲೆಂಟೈನ್ಸ್ ಡೇಗೆ ಗಿಫ್ಟ್ ಎಲ್ಲಿ ಎಂಬುದು ನಿನ್ನನ್ನು ಆಗಿನಿಂದಲೂ ಕಾಡುತ್ತಿರುವ ಪ್ರಶ್ನೆ. ಏನು ಕೊಡಲಿ ನಲ್ಲೆ ನಿನಗೆ...?

ನನ್ನದೆಲ್ಲವನೂ ನಿನಗೆ ಕೊಟ್ಟಿರುವಾಗ ಉಳಿದಿರುವುದೇನು?
ನಾನೇ ನಿನ್ನವನಾಗಿರುವಾಗ ಬೇಕಿನ್ನೇನು?

ನೀನೇನು ಕೊಡುತ್ತೀ ನಂಗೆ? ಹೇ ಕಳ್ಳೀ, ನಾಚುತ್ತೀ ಏಕೆ? ಸಪ್ರೈಸಾ? ಇರಲಿ ಇರಲಿ... ರಾಗಿಗುಡ್ಡದ ಮಧ್ಯದಲ್ಲಿರುವ ಗುಲ್‍ಮೊಹರ್ ಮರ ನಮಗಾಗಿಯೇ ನೆರಳು ಹಾಯಿಸುತ್ತಾ ಕಾಯುತ್ತಿದೆಯಂತೆ. ಮಲ್ಲೇಶ್ವರಂ ಎಯ್ತ್ ಕ್ರಾಸಿನಲ್ಲಿ ಹೂಮಾರುವ ಮಹಿಳೆಯ ಬುಟ್ಟಿಯಲ್ಲಿ ನಿನಗೆಂದೇ ಅರಳಿರುವ ಕೆಂಪು ಗುಲಾಬಿ ಇದೆಯಂತೆ. ಗ್ಯಾಸ್‍ಲೈಟಿನ ಬೆಳಕಿನಲ್ಲಿ ಕಾಯುತ್ತಿರುತ್ತಾನಂತೆ ಪಾನಿಪುರಿ ಮಾಡಿಕೊಡಲು ಅಂಗಡಿಯವ... ಸಿಗುತ್ತೀ ತಾನೇ?

ಹ್ಯಾಪಿ ವ್ಯಾಲೆಂಟೈನ್ಸ್ ಡೇ...!

-ನಿನ್ನವನು

[12.02.2007]

Monday, February 05, 2007

ಹೊಳೆ ಬಾಗಿಲು

ಬಾಗಿಲೆಂದರೆ ಬಾಗಿಲೇ ಆಗಿರಬೇಕೆಂದಿಲ್ಲ. ಅದು ಮರ ಅಥವಾ ಕಬ್ಬಿಣ ಅಥವಾ ತಗಡು ಅಥವಾ ಫೈಬರ್ ಅಥವಾ ಗಾಜಿನಿಂದಲೇ ತಯಾರಾಗಿರಬೇಕೆಂದಿಲ್ಲ. ಅದಕ್ಕೆ ಅಗುಳಿ, ಚಿಲಕ, ಹಿಡಿಕೆ, ಬೀಗ ಇತ್ಯಾದಿಗಳು ಇರಲೇಬೇಕೆಂದಿಲ್ಲ. ಅದನ್ನು ತೆರೆಯಲು - ಮುಚ್ಚಲು ಬರಲೇ ಬೇಕೆಂದಿಲ್ಲ. ಬಾಗಿಲೆಂದರೆ ದ್ವಾರ. ಬಾಗಿಲೆಂದರೆ ಪ್ರವೇಶಸ್ಥಾನ; ಅಷ್ಟೆ. ಉದಾಹರಣೆಗೆ: ಹೊಳೆಬಾಗಿಲು.

ಮೊನ್ನೆ ಊರಿಗೆ ಹೋಗಿದ್ದಾಗ ಅತ್ತೆ ಮನೆಗೆ ಹೋಗಿದ್ದೆ. ಅತ್ತೆ ಎಂದರೆ ಅಪ್ಪನ ತಂಗಿ. ಅತ್ತೆ ಮನೆಗೆ ಹೋಗದೆ ಸುಮಾರು ಮೂರು ವರ್ಷಕ್ಕೆ ಬಂದಿತ್ತು. ಅವರಂತೂ ತುಂಬಾ ಬೇಸರ ಮಾಡಿಕೊಂಡಿದ್ದರು. 'ಒಂದ್ಸಲ ಬಂದುಹೋಗೋ, ದಾರಿ ಮರ್ತುಹೋಗ್ತು ಕೊನಿಗೇ..' ಅಂತ ಅಜ್ಜ ಹೆದರಿಸಿದ್ದ ಕೂಡ. ಹಾಗಾಗಿ ಈ ಸಲದ ಷೆಡ್ಯೂಲಿನಲ್ಲಿ ತಪ್ಪದೇ ಅತ್ತೆಯ ಮನೆಯ ಪ್ರವಾಸವನ್ನು ಸೇರಿಸಿದ್ದೆ. ಅತ್ತೆಯ ಮನೆ ಇರುವುದು ತುಮರಿ-ಸುಳ್ಳಳ್ಳಿಯ ಹತ್ತಿರ. ಸಾಗರದಿಂದ ಸುಮಾರು ಎಂಭತ್ತು ಕಿಲೋಮೀಟರ್ ಆಗುತ್ತದೆ. ಸಾಗರದಿಂದ ಹೊರಟರೆ ಅಲ್ಲಿಗೆ ಮುಟ್ಟಲಿಕ್ಕೆ ಐದು ಗಂಟೆ ತೆಗೆದುಕೊಳ್ಳುತ್ತದೆ ಬಸ್ಸು. ದಿನಕ್ಕೆ ಕೇವಲ ಎರಡೇ ಬಸ್ಸು ಇರುವುದು. ಅತ್ತೆ ಮನೆಗೆ ಹೋಗಬೇಕಾದರೆ ಹೊಳೆ ದಾಟಿ ಹೋಗಬೇಕು. ಹೊಳೆಯೆಂದರೆ ಶರಾವತಿ ನದಿಯ ಹಿನ್ನೀರು. ಸಾಗರದಿಂದ ಹೊರಟ ಬಸ್ಸು ಒಂದು ಗಂಟೆ ಸಮಯದಲ್ಲಿ ಹೊಳೆಬಾಗಿಲಿಗೆ ಬರುತ್ತದೆ.

ಹೊಳೆಬಾಗಿಲು. ಬಾಗಿಲೆಂದರೆ ಇಲ್ಲೇನು ಹೊಳೆಯ ಸುತ್ತ ಗೋಡೆ ಕಟ್ಟಿ ಕದವನ್ನಿಟ್ಟಿಲ್ಲ. ಹಾಗಂತ ಗೋಡೆಗಳಿದ್ದರೆ ಮಾತ್ರ ಬಾಗಿಲು ಇರಬೇಕು ಎಂದೇನಿಲ್ಲವಲ್ಲ? ಹೊಳೆಗೆಂಥಾ ಬಾಗಿಲು? ಇಲ್ಲಿ ಹೊಳೆಗೆ ಹೊಳೆಯೇ ಬಾಗಿಲು. ಅತ್ತೆಯ ಮನೆಗೆ ಹೋಗಬೇಕು ಎಂದರೆ ಹೊಳೆಯನ್ನು ದಾಟಿಯೇ ಹೋಗಬೇಕು. ಎಷ್ಟೇ ವೇಗವಾಗಿ ಬನ್ನಿ ನೀವು, ಇಲ್ಲಿಗೆ ಬಂದಾಕ್ಷಣ ಹೊಳೆ ನಿಮ್ಮನ್ನು ತಡೆದು ನಿಲ್ಲಿಸುತ್ತದೆ. ಅವಸರ ಸಲ್ಲ. ತಾಳ್ಮೆಯೇ ಎಲ್ಲ. ಲಾಂಚು ಇನ್ನೂ ಆಚೆಯ ದಡವನ್ನೇ ಬಿಟ್ಟಿಲ್ಲ. ಅಗೋ, ಹಾಂ, ಅಲ್ಲಿ, ಒಂದು ಬೆಂಕಿಪೊಟ್ಟಣದಂತೆ ಕಾಣಿಸುತ್ತಿದೆಯಲ್ಲ, ಅದೇ ಲಾಂಚು. ಅದು ಅಲ್ಲಿಂದ ಜನ, ವಾಹನಗಳನ್ನೆಲ್ಲಾ ಹತ್ತಿಸಿಕೊಂಡು ನಿಧನಿಧಾನವಾಗಿ ಈಚೆ ದಡಕ್ಕೆ ಬರಬೇಕು. ಅಲ್ಲಿಯವರೆಗೆ ನೀವು ಏನು ಹಾರಾಡಿದರೂ ನಡೆಯುವುದಿಲ್ಲ.

ಬೇಕಿದ್ದರೆ ಈ ದಂಡೆಗುಂಟ ಅಡ್ಡಾಡುತ್ತಾ ಕಪ್ಪೆ ಚಿಪ್ಪು, ನುಣ್ಣನೆ ಉರೂಟು ಕಲ್ಲುಗಳನ್ನು ಹೆಕ್ಕಬಹುದು. ಹೆಕ್ಕಿದ ಕಲ್ಲನ್ನು ಹೊಳೆಗೆ ಎಸೆಯಬಹುದು. ಕಲ್ಲು ಬಿದ್ದ ಜಾಗದಲ್ಲಿ ಎದ್ದ ಅಲೆ, ಅಲೆ ಅಲೆಯಾಗಿ ನಿಮ್ಮತ್ತಲೇ ತೇಲಿ ಬರುವುದನ್ನು ನೋಡುತ್ತಾ ಮೈಮರೆಯಬಹುದು. ಹೊಳೆಯಲ್ಲಿ ಸಾಕಷ್ಟು ಮೀನುಗಳಿವೆ. 'ಗೊಜಮಂಡೆ' ಎಂದು ಕರೆಯಲಾಗುವ ಕಪ್ಪೆಯ ಪೂರ್ವಜ ಜೀವಿಗಳಿವೆ. ಅವು ಆಗೀಗ ಗುಂಪಾಗಿ ಬಂದು ನೀರಿನ ಮೇಲ್ಗಡೆ ಒಮ್ಮೆ ಕತ್ತು ತೂರಿಸಿ ಮಾಯವಾಗುತ್ತವೆ. ಅತ್ತಿತ್ತ ಒಂದೇ ಸಮನೆ ಈಜಾಡುತ್ತಿರುವ ಮೀನುಗಳಂತೂ ಒಮ್ಮೊಮ್ಮೆ ಪೆದ್ದಣ್ಣಗಳಂತೆ, ಒಮ್ಮೊಮ್ಮೆ ಅತ್ಯಂತ ಕ್ರಿಯಾಶೀಲ ಜೀವಿಗಳಂತೆ, ಒಮ್ಮೊಮ್ಮೆ ಭಯಗ್ರಸ್ತ ಗಂಧರ್ವರಂತೆ ಭಾಸವಾಗುತ್ತವೆ. ನಿಮ್ಮ ಬಳಿ ಏನಾದರೂ ತಿಂಡಿಯಿದ್ದರೆ ಈ ಮೀನುಗಳಿಗೆ ಎಸೆಯಬಹುದು. ನೀವು ಎಸೆದ ತಿಂಡಿ ನೀರಿನೊಳಗೆ ಮುಳುಗುವುದರೊಳಗೆ ಅವು ಗುಂಪಾಗಿ ಬಂದು ಅಷ್ಟನ್ನೂ ಕಬಳಿಸಿಬಿಡುತ್ತವೆ. ಮೀನುಗಳ ಜೊತೆ ಆಟವಾಡುತ್ತಾ ನೀವು ಮತ್ಸ್ಯಲೋಕದಲ್ಲಿ ಒಂದಾಗುತ್ತೀರಿ.

ಲಾಂಚು ಈಗ ದಡಕ್ಕೆ ಸನಿಹವಾಗುತ್ತಿದೆ. ಮೊದಲ ಸಲ ಲಾಂಚು ಹತ್ತುವವರ ಸಂಭ್ರಮ, ಕುತೂಹಲಗಳಂತೂ ಹೇಳತೀರದ್ದು. ಅವರು ನೀರಿನ ಸಮೀಪಕ್ಕೆ ಹೋಗಿ ನಿಂತಿದ್ದಾರೆ. ಬಸ್ಸನ್ನೂ ಅದರೊಳಗೆ ಹಾಕುತ್ತಾರಾ? ಅದು ಹೇಗೆ? ಲಾಂಚು ಮಧ್ಯದಲ್ಲಿ ಕೆಟ್ಟುಹೋದರೆ ಗತಿಯೇನು? ಮುಳುಗಿ ಹೋಗುತ್ತಾ? ಅಯ್ಯಯ್ಯೋ! ನಂಗೆ ಈಜು ಬೇರೆ ಬರಲ್ವಲ್ಲಪ್ಪ... ಲಾಂಚಿನ ಡ್ರೈವರ್ ಎಲ್ಲಿ ಕುಳಿತಿರುತ್ತಾನೆ? ಇದೇ ಲಾಂಚನ್ನು ಇದೇ ಇದೇ ರೂಟಿನಲ್ಲಿ ಪ್ರತಿದಿನವೂ ಓಡಿಸಿಕೊಂಡಿರಲಿಕ್ಕೆ ಅವನಿಗೆ ಬೇಸರವಾಗುವುದಿಲ್ಲವಾ? ಪ್ರಶ್ನೆಗಳು ಜೇನ್ನೊಣದಂತೆ ಕಾಡುತ್ತಿರಲು.. ಅಗೋ ಲಾಂಚು ಹತ್ತಿರಾಗುತ್ತಿದೆ.. ದಾರಿ ಬಿಡಿ, ಇಲ್ಲಿಗೇ ಬರುತ್ತದೆ ಲಾಂಚು..

ಲಾಂಚು ಬಂದು ನಿಂತದ್ದೇ ಮೊದಲು ಜನರೆಲ್ಲ ಓಡಿ ಹೋಗಿ ಹತ್ತಿದ್ದಾರೆ. ಆಮೇಲೆ ವಾಹನಗಳೆಲ್ಲ ಒಂದೊಂದೊಂದಾಗಿ ಬರುತ್ತಿವೆ. ಎಲ್ಲಾ ವಾಹನಗಳೂ ಹಿಡಿಸುವುದಿಲ್ಲ. ಒಂದು ಕಾರಿಗೆ ಮಾತ್ರ ಜಾಗ ಸಿಕ್ಕಿಲ್ಲ. ಸಿನಿಮಾಕ್ಕೆ ಟಿಕೇಟು ಸಿಗದಿರುವವನ ಪರಿಸ್ಥಿತಿ ಈ ಕಾರಿನದ್ದು. ಪಾಪ, ಮುಂದಿನ ಟ್ರಿಪ್ಪಿನವರೆಗೂ ಕಾಯಬೇಕು. ಲಾಂಚು ಇನ್ನೇನು ಹೊರಟಿತು ಅನ್ನುವಷ್ಟರಲ್ಲಿ ಒಂದು ಬೈಕು ಹಾರನ್ನು ಮಾಡಿಕೊಂಡು ಬಂದಿದೆ. ಅದನ್ನು ಸಹ ಹತ್ತಿಸಿಕೊಳ್ಳಲಾಗಿದೆ. ಬಂದವನು ಬೈಕಿನಲ್ಲೇ ಬಂದಿದ್ದರೂ ಓಡಿ ಬಂದು ಬಸ್ಸು ಹತ್ತಿದವನಂತೆ ಏದುಸಿರು ಬಿಡುತ್ತಿದ್ದಾನೆ.

ಲಾಂಚು ಹೊರಟಿದೆ ಈಗ. ಲಾಂಚಿನ ಸಿಬ್ಭಂದಿಯೊಬ್ಬ ಟಿಕೀಟು ಕೇಳುತ್ತಾ ಬರುತ್ತಿದ್ದಾನೆ. ಲಾಂಚಿನ ಪರಿಚಯವಿದ್ದವರೆಲ್ಲ ಧೀರರಂತೆ ಅಂಚಿಗೆ ಹೋಗಿ ಸರಳಿಗೆ ಒರಗಿ ನಿಂತಿದ್ದಾರೆ. ಮೊದಲ ಬಾರಿ ಲಾಂಚ್ ಪಯಣಕ್ಕೆ ಬಂದವರು ಒಳಗೆ ಹೋಗಿ ಕುಳಿತಿದ್ದಾರೆ. ಅವರಿಗೆ ಲಾಂಚು ಚಲಿಸುತ್ತಿದ್ದರೂ ನಿಂತಿದ್ದಂತೆ ಭಾಸವಾಗುತ್ತಿದೆ. ಅಜ್ಜಿಯೊಂದು ಕೈಮುಗಿದು ಕಣ್ಮುಚ್ಚಿ ಕುಳಿತಿದೆ: 'ದೇವರೇ, ಸುಖವಾಗಿ ಆಚೆ ದಡ ತಲುಪಿಸಪ್ಪಾ..' ಲಾಂಚು ಸ್ವಲ್ಪ ದೂರ ಹೋಗುತ್ತಿದ್ದಂತೆ ಒಳಗೆ ಕುಳಿತಿದ್ದ ಗಂಡಸರಿಗೆ ಸ್ವಲ್ಪ ಧೈರ್ಯ ಬಂದು, ಅಲ್ಲೇ ಕುಳಿತಿರಲು ಬೇಸರವಾಗಿ ಅವರು ಹೊರಬಂದಿದ್ದಾರೆ. ಕಂಬಿಗಳನ್ನು ಹಿಡಿದುಕೊಳ್ಳುತ್ತಾ ಓಡಾಡುತ್ತಿದ್ದಾರೆ. ಅರೆ! ಲಾಂಚಿನಲ್ಲಿ 'ಜಂಪ್ಸ್' ಆಗುವುದೇ ಇಲ್ಲ! ಈಗ ಅವರು ಕೈ ಬಿಟ್ಟು ನಡೆದಿದ್ದಾರೆ. ಅಪ್ಪನೊಂದಿಗೆ ಹೊರಬಂದ ಹುಡುಗನೊಬ್ಬ ಕೇಳುತ್ತಿದ್ದಾನೆ: "ಅಪ್ಪಾ ಇಷ್ಟು ದೊಡ್ಡ ಲಾಂಚನ್ನು ಇಲ್ಲಿಗೆ ಹೇಗೆ ತಂದರು? ಲಾರಿಯಲ್ಲೂ ಹಿಡಿಯುವುದಿಲ್ಲ..." ಅಪ್ಪನಿಗೂ ಈಗ ಯೋಚನೆಯಾಗಿದೆ: 'ಅರೆ! ಹೌದಲ್ಲಾ ಇಷ್ಟು ದೊಡ್ಡ ಲಾಂಚನ್ನು....' ಆದರೂ ಆತ ಎಲ್ಲಾ ತಿಳಿದವನಂತೆ "ಇದನ್ನು ದೂರದ ಸಮುದ್ರದಿಂದ ಡ್ರೈವ್ ಮಾಡಿಕೊಂಡು ಬಂದದ್ದು. ಈ ಹೊಳೆ ಹೋಗಿ ಸಮುದ್ರಕ್ಕೆ ಸೇರುತ್ತಲ್ಲ, ಅಲ್ಲಿಂದ ಬಂದದ್ದು ಇದು.." ಎಂದು ಏನೋ ಒಂದು ಸಮಜಾಯಿಷಿ ಕೊಟ್ಟಿದ್ದಾನೆ. ಆದರೂ ಅವನನ್ನು ಆ ಪ್ರಶ್ನೆ ಕಾಡುತ್ತಲೇ ಇದೆ: ಹ್ಯಾಗೆ ತಂದರು ಇದನ್ನು...? ಯಾರನ್ನಾದರೂ ಕೇಳೋಣವೆಂದರೆ, ಮುಜುಗರವಾಗಿ ಸುಮ್ಮನಾಗಿದ್ದಾನೆ.

ಪ್ರಶಾಂತ ಸಾಗರದಂತಹ ಹೊಳೆಯಲ್ಲಿ ನಿಧಾನವಾಗಿ ಸಾಗುತ್ತಿದೆ ಲಾಂಚು. ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಅಲೆಗಳ ಮೇಲೆ ತೇಲುತ್ತಾ ಸಾಗುತ್ತಿರಲು ಅಯಾಚಿತವಾಗಿ ನಿಮ್ಮ ನೆನಪಿನ ಕೋಶದಿಂದ ಹೊರಬರುತ್ತದೆ ಆ ಹಾಡು:

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ ||

ಹೊಳೆಬಾಗಿಲಿನಲ್ಲಿ ನಿಮ್ಮ ಮನದ ಬಾಗಿಲು ತೆರೆದುಕೊಳ್ಳುತ್ತದೆ. ಈ ಹೊಳೆಯ ಆಚೆ ದಡದಲ್ಲಿ ಒಂದು ಹೋಟೆಲ್ಲಿದೆ. 'ಹೋಟೆಲ್ ಶರಾವತಿ' ಅಂತ. ಸಾಗರಕ್ಕೆ ಹೋಗುವಾಗ-ಬರುವಾಗ ಪ್ರತಿ ಬಸ್ಸೂ ಇಲ್ಲಿ ಹತ್ತು ನಿಮಿಷ ನಿಲ್ಲುತ್ತದೆ. ಉಪ್ಪಿಟ್ಟು, ಚಿತ್ರಾನ್ನ, ಮೊಸರನ್ನ, ಭಜ್ಜಿ, ಬಿಸ್ಸಿಬಿಸಿ ಕಾಫಿ-ಟೀ-ಕಷಾಯ... ಎಲ್ಲಾ ಸಿಗುತ್ತದೆ. ಸುಮಾರು ಹದಿನೈದು ವರ್ಷಗಳಿಂದಲೂ ಇದೆ ಈ ಹೋಟೆಲ್ಲು. ಇದರ ಮಾಲೀಕರ ನಿಜವಾದ ಹೆಸರೇನೆಂಬುದು ಯಾರಿಗೂ ನೆನಪಿಲ್ಲ. ಎಲ್ಲರೂ ಅವರನ್ನು 'ಹೊಳೆ ಭಟ್ರು' ಅಂತಲೇ ಕರೆಯುವುದು. ಈ ಹೊಳೆಭಟ್ರು ಸುಮಾರು ಅರವತ್ತರ ಪ್ರಾಯದ ಬಲು ಗಟ್ಟಿ ಮನುಷ್ಯ. ಹತ್ತಿರದ ಯಾವುದೇ ಊರಿನಲ್ಲಿ ಕಾರ್ಯವಿದ್ದರೂ ಇವರಿಗೆ ಕರೆ ಬರುತ್ತದೆ. ಭಟ್ರು ತಪ್ಪದೇ ಹೋಗುತ್ತಾರೆ. ಊಟದ ನಂತರದ ಇಸ್ಪೀಟು ಕಂಬಳದಲ್ಲಿ ಹೊಳೆಭಟ್ರು ಇರಲೇಬೇಕು. ಯಾರ ಮನೆಯಲ್ಲಾದರೂ ತಿಥಿಯಿದ್ದರೆ ಇವರನ್ನು ವೈದಿಕರನ್ನಾಗಿ ಕರೆಯುತ್ತಾರೆ. ಹೆಚ್ಚಿಗೆ ಮಾತಾಡದ, ಮಿತಭಾಷಿ ಎಂದೇ ಜನಜನಿತರಾಗಿರುವ ಹೊಳೆಭಟ್ರು ಹಾಗಾಗುವುದಕ್ಕೆ ಕಾರಣ ಅವರ ಬಾಯಲ್ಲಿ ಸದಾ ಇರುವ ಕವಳವೇ ಹೌದಾ ಎಂಬುದು ಕೆಲವರ ಅನುಮಾನ.

ದಡ ಈಗ ಸಮೀಪಿಸುತ್ತಿದೆ. ಹೊಳೆಯ ಅಂಚು ದಡದ ಅಂಚಿಗೆ ಸೇರಿದ ಜಾಗ ಅಗೋ ಕಾಣುತ್ತಿದೆ. ಪಯಣ ಮುಗಿದಿದೆ. ಲಾಂಚು ತನ್ನ ಬಾಹುಗಳನ್ನು ದಡದತ್ತ ಹೊರಳಿಸುತ್ತಿದೆ. ದಡದಲ್ಲಿ ಲಾಂಚಿಗಾಗಿ ಕಾಯುತ್ತಾ ನಿಂತಿರುವ ಜೀವಿಗಳ ಮೊಗದಲ್ಲಿ ಹೊಮ್ಮಿದ ಮುಗುಳ್ನಗೆ ಇಲ್ಲಿಂದಲೇ ಕಾಣುತ್ತಿದೆ. ಬೈಕು, ಕಾರುಗಳು ಸ್ಟಾರ್ಟ್ ಆಗುತ್ತಿವೆ. ಲಾಂಚು ನಿಂತಿದ್ದೇ ಎಲ್ಲಾ ಆಚೆ ದಡಕ್ಕೆ ಜಿಗಿದಿದ್ದಾರೆ. ಬಸ್ಸು, ಕಾರು, ಬೈಕುಗಳು ಬುರಬುರನೆ ದಡ ಸೇರಿವೆ.

ಎಲ್ಲರೂ ಹೋಟೆಲ್ಲಿಗೆ ನುಗ್ಗಿದ್ದಾರೆ. 'ಮಾಣಿ, ಇವತ್ತು ಏನು ವಿಶೇಷ ಮಾಡಿದ್ರಾ?' ಕೇಳುತ್ತಿದ್ದಾರೆ ಭಟ್ಟರ ಮಗನ ಬಳಿ. ತಿಂಡಿ ತಿಂದು ಕಾಫಿ ಕುಡಿದು ಎಲ್ಲರೂ ಮತ್ತೆ ಬಸ್ಸು ಹತ್ತಿದ್ದಾರೆ. ಕಂಡಕ್ಟರ್ ಬಳಿ 'ಉಚ್ಚೆ ಹೊಯ್ದು ಬರ್ತೀನಿ' ಎಂದು ಹೇಳಿ ಹೋದ ಕಳಸವಳ್ಳಿ ಮಾಬ್ಲಣ್ಣ ಇನ್ನೂ ಬಂದಿಲ್ಲ. ಅಗೋ ಪಂಚೆ ಸುತ್ತಿಕೊಳ್ಳುತ್ತಾ ಓಡಿ ಬರುತ್ತಿದ್ದಾರೆ ಮಾಬ್ಲಣ್ಣ.. ಬಸ್ಸು ಹೊರಟಿದೆ.. ಹೊಳೆ ದಾಟಿದ ಖುಷಿಯಲ್ಲಿ ಓಡತೊಡಗಿದೆ ನಾಗಾಲೋಟದಲ್ಲಿ.