Friday, January 10, 2014

ಮಖ್ನಾ ಆನೆಯ ವಿರಹ

ಸಿನೆಮಾ ಮುಗಿದಮೇಲೆ ಎದ್ದು ಹೊರಗೆ ಬರಲೇಬೇಕು
ಕೊನೆಯ ಸೀಟಿನಲ್ಲಿ ಕೂತು ನಿದ್ದೆ ಹೋಗಿದ್ದವನನ್ನೂ
ಎಬ್ಬಿಸಿ ಕಳುಹಿಸುತ್ತಾನೆ ಕಸ ಗುಡಿಸುವ ಹುಡುಗ

ಹೊರಗೆ ನೋಡಿದರೆ ಜ್ವರ ಬಿಟ್ಟ ಬೆಳಗಿನಂತೆ ಎಲ್ಲ ಹೊಸದಿದೆ
ನಿಲ್ಲಬಹುದು ಅಂಗಳದಲ್ಲಿ ದಿಗ್ಮೂಢತೆಯಲ್ಲಿ ಐದು ನಿಮಿಷ
ಆಮೇಲೆ ಹೊರಡಲೇಬೇಕು: ಮಳೆ ಬರುತ್ತಿದ್ದರೆ ತೊಯ್ದುಕೊಂಡೋ,
ಚಳಿಯಾಗುತ್ತಿದ್ದರೆ ಒದ್ದುಕೊಂಡೋ, ಬಿಸಿಲಿದ್ದರೆ ಬೈದುಕೊಂಡೋ.

ಫರ್ಲಾಂಗು ಕಳೆದಮೇಲೆ ಅವರೆಲ್ಲ ಮತ್ತೆ ಮೂಡುವರು:
ಕಪ್ಪು ಸೂಟಿನ ಹೀರೋ ಬಂದು ತನ್ನ ರಿವಾಲ್ವರಿನಿಂದ
ಟ್ರಾಫಿಕ್ಕಿನಲ್ಲಿ ನಿಂತಿದ್ದವರನ್ನೆಲ್ಲ ಸರಿಸಿ ದಾರಿ ಮಾಡಿಕೊಡುವನು.
ಚಂದಕ್ಕೆ ಪುಟವಿಟ್ಟ ಚೆಲುವಿ ನಾಯಕಿ ಕೈ ಹಿಡಿದು
ಪಾರ್ಕಿಗೆ ಕರೆದೊಯ್ಯುವಳು. ಹುಟ್ಟಿನಿಂದಲೇ ತೊಟ್ಟಿದ್ದಾರೇನೋ
ಎನಿಸುವ ಕನ್ನಡಕದ ತಂದೆ ಬನಿಯನ್ನಿನಲ್ಲೇ ಬಂದು
ಬೆಂಚಿನಲ್ಲಿ ಕೂತು ಸಂತೈಸುವನು. ತಾಯಿ ಕೈತುತ್ತು ತಿನಿಸುವಳು.
ಐಟೆಮ್ ಸಾಂಗಿನ ಹುಡುಗಿ ನರ್ತಿಸಿ ರಂಜಿಸುವಳು.

ರಾತ್ರಿಯಾಗುತ್ತಿದ್ದಂತೆ ಆವರಿಸುವ ಕತ್ತಲೆ
ಕಂಬಳಿಯಂತೆ ಬೆಚ್ಚಗೆ ಮೈಗಂಟಿದ ಸಿನಿಮಾ ಕಣಗಳನ್ನೆಲ್ಲ ಉದುರಿಸಿ
ಥರಥರ ನಡುಗಿಸುವುದು. ರಸ್ತೆಬದಿಯ ಪ್ಲಾಸ್ಟಿಕ್ ರಾಶಿ
ಸುಡುತ್ತಿರುವ ಅಗ್ಗಿಷ್ಟಿಕೆ ಚಳಿಯ ನೀಗಿಸಬಲ್ಲುದೆ?
ಪೆಟ್ರೋಲು ಕುಡಿದ ಮತ್ತ ವಾಹನಗಳು ಹಾಯ್ವ ರಭಸದಿ
ಕಾವು ಮೂಡಬಹುದೇ? ಒಂದು ಕಣ್ಣಾದರೂ ಇತ್ತ ನೋಡಬಹುದೇ?

ನಿದ್ರೆ ಆವರಿಸುತ್ತಿದ್ದಂತೆ ಎಲ್ಲ ಮನೆ ಬಂಗಲೆ ಕೋಟೆ ಉದ್ಯಾನ
ನೀಲಿಯೀಜುಕೊಳ ಥಳಥಳ ಗಾಜಿನಂಗಡಿ
ಪ್ರಸೂತಿಯಾಸ್ಪತ್ರೆಗೂ ಗೇಟು ಹಾಕಲಾಗುವ ಈ ಭೂಮಿಯಲ್ಲಿ
ರಸ್ತೆಗಳೊಂದೇ ಮುಗಿಯದ ರತ್ನಗಂಬಳಿ
ಸ್ವಾಗತಿಸಲ್ಯಾರೂ ಇರದಿದ್ದರೂ ಮುಂದೆ
ಮಖ್ನಾ ಆನೆಯಂತೆ ಒಬ್ಬನೆ ನಡೆಯುತ್ತಾನೆ ವಿರಹಿ:
ಕತ್ತಲೆ ಚಳಿ ಭಯಕ್ಕೆ ಥೇಟರಿನ ಪರದೆ ಸಹ ಗಡಗುಟ್ಟುವಾಗ.