Tuesday, September 22, 2009

ಡಬ್ಬಿ ಪ್ರೀತಿಯ ಅಮ್ಮ

ಮೊನ್ನೆ ಬೆಂಗಳೂರಿಗೆ ಬಂದಿದ್ದ ಅಪ್ಪನನ್ನು ವಾಪಸು ಕಳುಹಿಸುವ ರಾತ್ರಿ ಅಮ್ಮನಿಗೆ ಫೋನಿನಲ್ಲಿ “ಅಪ್ಪನ್ ಹತ್ರ ಏನಾದ್ರೂ ಕೊಟ್ ಕಳ್ಸವಾ ಅಮ್ಮಾ?” ಅಂತ ಕೇಳಿದರೆ ಅವಳು ನಿರಾಳವಾಗಿ “ಏನೂ ಬ್ಯಾಡ. ಆದ್ರೆ ಹೋದ್ಸಲ ನೀನು ಉಪ್ಪಿನ್‌ಕಾಯಿ, ತುಪ್ಪ ತುಂಬಿಕೊಂಡು ಹೋಗಿದ್ದ ಡಬ್ಬಿ ವಾಪಸ್ ಕಳ್ಸು. ಹೊತ್ಗಂಬರ್ಲಿ ಅಪ್ಪ!” ಎಂದಳು. ಮೊಬೈಲಿನ ವಾಲ್ಯೂಮು ಸ್ವಲ್ಪ ಜಾಸ್ತಿಯೇ ಇದ್ದುದರಿಂದ ಅವಳು ಹೇಳಿದ್ದು ಅಪ್ಪನಿಗೂ ಕೇಳಿಸಿತಿರಬೇಕು, “ನೋಡು, ನಾನು ಆರಾಮಾಗ್ ಬರವು ಅನ್ನೋದು ಸ್ವಲ್ಪನೂ ಇಲ್ಲೆ ಅವ್ಳಿಗೆ. ಯಾವಾಗ್ ನೋಡಿದ್ರೂ ಡಬ್ಬೀದೇ ಚಿಂತೆ!” ಎಂದ ಅಪ್ಪ. ನಾನು ಜೋರಾಗಿ ನಕ್ಕೆ.

ನಾನು ಪ್ರತಿ ಸಲ ಊರಿಗೆ ಹೊರಡುವ ಹಿಂದಿನ ದಿನ ಅಮ್ಮನಿಗೆ ಫೋನ್ ಮಾಡಿ ಇಲ್ಲಿಂದ ಏನಾದ್ರೂ ತರಬೇಕಾ ಅಂತ ಕೇಳಿದರೆ ಅವಳು ಹೇಳುವುದು ಒಂದೇ: “ಡಬ್ಬಿ ವಾಪಸ್ ತಗಂಬಾ ಸಾಕು”. ನನ್ನ ಅಮ್ಮನಿಗೆ ಡಬ್ಬಿಗಳ ಮೇಲೆ ಪ್ರೇಮ! ಹಾಗೆ ನೋಡಿದರೆ ಈ ಡಬ್ಬಿಯೆಂಬುದು ಎಲ್ಲಾ ಗೃಹಿಣಿಯರ ಪ್ರೀತಿಗೆ, ಪೊಸೆಸಿವ್‌ನೆಸ್‌ಗೆ ಒಳಗಾಗಿರುವ ವಸ್ತು. ಅಡುಗೆಮನೆಯ ಶೆಲ್ಫು-ನಾಗಂದಿಗೆಯ ಮೇಲೆ ಬೆಪ್ಪಣ್ಣಗಳಂತೆ ಸಾಲಾಗಿ ಕುಳಿತುಕೊಂಡಿರುವ ಇವುಗಳಲ್ಲಿ ಅದೆಂತಹ ಆಕರ್ಷಣೆಯಿದೆಯೋ, ಯಾರಿಗೆ ಏನನ್ನೇ ತುಂಬಿ ಕಳುಹಿಸುವುದಿದ್ದರೂ ಕೊಡುವಾಗ “ಡಬ್ಬಿ ಒಂದು ವಾಪಸ್ ಕಳ್ಸೋದು ಮರೀಬೇಡಿ” ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.

ಮೊದಲೆಲ್ಲ ನಮ್ಮ ಮನೆಯಲ್ಲಿ ತಗಡಿನ ಡಬ್ಬಿಗಳಿದ್ದವು. ನಾನು ಮಗುವಾಗಿದ್ದಾಗ ತಂದಿದ್ದ ಒಂದು ನೆಸ್ಟಮ್ಮಿನ ಡಬ್ಬಿಯಂತೂ ಅದೆಷ್ಟು ವರ್ಷಗಳ ಕಾಲ ಇತ್ತು ಎಂದರೆ, ನಾನು ದೊಡ್ಡವನಾಗಿ, ಇಂಗ್ಲೀಷ್ ಓದಲು-ಬರೆಯಲು ಕಲಿತು, ಆ ಡಬ್ಬಿಯ ಮೇಲೆ ಬರೆದಿದ್ದ ‘ನೆಸ್ಟಮ್’ ಎಂಬ ಶಬ್ದವನ್ನು ಓದಿದಾಗ ಅಮ್ಮ “ಹೂಂ, ಅದು ನೀ ಪಾಪು ಆಗಿದ್ದಾಗ ತಂದಿದ್ದು. ಒಂದು ಚಮಚ ನೆಸ್ಟಮ್ ತಿನ್ಸಕ್ಕರೆ ಎಷ್ಟ್ ಕಾಟ ಕೊಡ್ತಿದ್ದೆ ಗೊತ್ತಿದಾ? ದನವಿನ್ ಕರ, ಬೆಕ್ಕಿನ್ ಮರಿ, ಚಂದ್ರ, ಪೋಲೀಸು -ಎಲ್ಲವಕ್ಕೂ ಒಂದೊಂದು ಚಮಚ ತಿನ್ಸಿದ್ ಮೇಲೇ ನೀನು ತಿಂತಿದ್ದಿದ್ದು!” ಎನ್ನುತ್ತಿದ್ದಳು. ಮಗುವಾಗಿದ್ದ ನನ್ನನ್ನೆತ್ತಿಕೊಂಡು ಅಮ್ಮ, ಒಂದು ಕೈಯಲ್ಲಿ ನೆಸ್ಟಮ್ ಖಾದ್ಯದ ಬಟ್ಟಲನ್ನು ಹಿಡಿದು, ಕೊಟ್ಟಿಗೆ, ಅಂಗಳ, ರಸ್ತೆಯನ್ನೆಲ್ಲಾ ಸುತ್ತುತ್ತಿದ್ದ ಚಿತ್ರವನ್ನು ಕಲ್ಪಿಸಿಕೊಂಡು ನಾನು ಖುಶಿ ಪಡುತ್ತಿದ್ದೆ. ಅದೇ ಚಿತ್ರದ ನೆನಪಿನ ಲಹರಿಯಲ್ಲಿರುತ್ತಿದ್ದ ಅಮ್ಮ, “ಅರ್ಧ ನೆಸ್ಟಮ್ ಡಬ್ಬಿ ನಿನ್ನ ಮುಖ-ಮುಸುಡಿಗೆ ಬಡಿಯಕ್ಕೇ ಆಯ್ದು ಬಿಡು!” ಎಂದು ನಗುತ್ತಿದ್ದಳು. ಹೀಗೆ, ನಮ್ಮನೆಯ ಅಡುಗೆ ಮನೆ ನಾಗಂದಿಗೆ ಮೇಲೆ ಕೊತ್ತುಂಬರಿ ಕಾಳನ್ನು ಅರ್ಧದವರೆಗೆ ತುಂಬಿಸಿಕೊಂಡು ಮುಗುಮ್ಮಾಗಿ ಕೂತಿದ್ದ ಆ ನೆಸ್ಟಮ್ ಡಬ್ಬಿ, ಆಗಾಗ ಅಮ್ಮನಿಗೆ ಸಿಹಿಸಿಹಿ ನೆನಪನ್ನೂ ನನಗೆ ಕಲ್ಪನೆಯನ್ನೂ ತುಂಬಿಕೊಡುವಲ್ಲಿ ಯಶಸ್ವಿಯಾಗುತ್ತಿತ್ತು.

ಈ ತಗಡಿನ ಡಬ್ಬಿಗಳ ಸಮಸ್ಯೆಯೆಂದರೆ, ಇವುಗಳ ಒಡಲಲ್ಲಿ ಏನಿದೆ ಅಂತ ಪ್ರತಿ ಸಲ ಮುಚ್ಚಳ ತೆಗೆದೇ ನೋಡಬೇಕು. ಹೀಗಾಗಿ ನಾನು, ಆಯಾ ಡಬ್ಬಿಗಳ ಮೇಲೆ ಆಯಾ ವಸ್ತುವಿನ ಹೆಸರನ್ನು ಬರೆದ ಪಟ್ಟಿ ಅಂಟಿಸಿರುತ್ತಿದ್ದೆ. ಆದರೆ ಪಟ್ಟಿ ಕಿತ್ತು ಹೋದ ಡಬ್ಬಿಗಳದೇ ಸಮಸ್ಯೆ. ಅಮ್ಮನಾದರೆ ಕೈಯಲ್ಲಿ ಹಿಡಿದು ಕುಲುಕಿದಾಗ ಬರುವ ಶಬ್ದದಿಂದಲೇ ಒಳಗಿರುವುದು ಕಡಲೆ ಬೇಳೆಯೋ ಉದ್ದಿನ ಬೇಳೆಯೋ ಅಂತ ಪತ್ತೆ ಮಾಡುತ್ತಿದ್ದಳು. ಆದರೆ ಅಮ್ಮ ‘ರಜೆ’ಯಲ್ಲಿದ್ದಾಗ ಅಡುಗೆ ಮಾಡುವ ಪಾಳಿಯನ್ನು ವಹಿಸಿಕೊಳ್ಳುತ್ತಿದ್ದ ಅಪ್ಪನಿಗೆ ಇದು ಗೊತ್ತಾಗುತ್ತಿರಲಿಲ್ಲ. ಸಾಸಿವೆ ಕಾಳಿಗೂ ತೊಗರಿ ಬೇಳೆಗೂ ವ್ಯತ್ಯಾಸ ಗುರುತಿಸುವುದು ಸುಲಭ; ಆದರೆ ಒಂದೇ ಸೈಜಿನ - ಒಂದೇ ತೂಕದ ಬೇಳೆಗಳ ನಡುವಿನ ಶಬ್ದವ್ಯತ್ಯಾಸ ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ಹೆಚ್ಚುಕಮ್ಮಿ ಶಬ್ದವೇದಿ ಕಲಿತವರಷ್ಟೇ ಜಾಣ್ಮೆ ಬೇಕು.

ಈ ಸಮಸ್ಯೆ ದೂರವಾದದ್ದು ಪಾರದರ್ಶಕ ಪ್ಲಾಸ್ಟಿಕ್ ಡಬ್ಬಿಗಳು ಬಂದಮೇಲೆ. “ಎಲ್ಲಾರ್ ಮನೇಲೂ ಈಗ ಪ್ಲಾಸ್ಟಿಕ್ ಡಬ್ಬಿ. ಬೇಳೆ-ಕಾಳು ತುಂಬಿಸಿ ನಾಗಂದಿಗೆ ಮೇಲೆ ಇಟ್ರೆ ನೀಟಾಗಿ ಎಲ್ಲಾ ಕಾಣ್ತು. ಈ ಸಲ ಸಾಗರಕ್ಕೆ ಹೋದಾಗ ನಮ್ಮನಿಗೂ ಐದಾರು ಡಬ್ಬಿ ತಗಂಬನ್ನಿ” ಎಂಬ ಅಮ್ಮನ ಚಿತಾವಣೆಯನ್ನು ಪಾಲಿಸಿದ ಅಪ್ಪ, ಆ ಸಲ ಸಾಗರದಿಂದ ಬರುವಾಗ ವಿನಾಯಕ ರಾಯರ ಅಂಗಡಿಯಿಂದ ಆರು ಚಾಕ್ಲೇಟ್ ಡಬ್ಬಿ ತಂದ. ಈ ಚಾಕ್ಲೇಟ್ ಡಬ್ಬಿಗಳ ಮೇಲಿದ್ದ ಆಲ್ಫೆನ್ಲೀಬೇ, ಇಕ್ಲೇರ್ಸ್, ಹಾಜ್‌ಮುಲಾ ಇತ್ಯಾದಿ ಸ್ಟಿಕ್ಕರುಗಳನ್ನು ಕಿತ್ತು ತೆಗೆಯುವ ಕೆಲಸ ನನಗೆ ಬಂತು. ಮತ್ತೆ ಇವುಗಳಲ್ಲಿ ಇನ್ನೂ ಆಯಾ ಚಾಕ್ಲೇಟಿನ ಫ್ಲೇವರಿನ ಪರಿಮಳ ಇರುತ್ತಿತ್ತು. ಮುಚ್ಚಳ ತೆರೆದರೆ ಸಾಕು, ಆ ಚಾಕ್ಲೇಟಿನ ರುಚಿಯೇ ನೆನಪಾಗಿ ಬಾಯಲ್ಲಿ ನೀರು ಬರುತ್ತಿತ್ತು. ಅದಕ್ಕೇ, ತುಂಬಾ ಬೇಜಾರಾಗಿ ನಾನು, “ಖಾಲಿ ಡಬ್ಬಿ ತರೋದಕ್ಕಿಂತ ತುಂಬಿದ್ದೇ ತರ್ಲಾಗಿತ್ತು” ಅಂತ ಅಪ್ಪನಿಗೆ ಹೇಳಿದೆ. ಅಪ್ಪನಿಗೆ ಇದ್ಯಾಕೋ ದುಬಾರಿ ವ್ಯವಹಾರ ಆಯ್ತಲ್ಲಾ ಅನಿಸಿರಬೇಕು, “ವಿನಾಯಕ ರಾಯರ ಅಂಗಡೀಲಿ ಇದ್ದಿದ್ದು ಅಷ್ಟೂ ಖಾಲಿ ಚಾಕ್ಲೇಟ್ ಡಬ್ಬಿ! ಇದೇ, ಇದೊಂದರಲ್ಲಿ ಎರಡು ಉಳಿದಿತ್ತು, ಜೇಬಲ್ ಇಟ್ಕಂಡ್ ಬೈಂದಿ” ಎನ್ನುತ್ತಾ, ಎರಡು ಚಾಕ್ಲೇಟ್ ತೆಗೆದು ಕೊಟ್ಟ. ಅವನು ಸುಳ್ಳು ಹೇಳುತ್ತಿದ್ದಾನೆ ಅಂತ ಗೊತ್ತಾದರೂ ನಾನು ಅದನ್ನು ಇಸಕೊಂಡು, ಖುಶಿಯಿಂದ ಸ್ಟಿಕರ್ ಕೀಳುವುದನ್ನು ಮುಂದುವರೆಸಿದೆ. ಈಗ ಬೇಡವಾದ ಹಳೆಯ ತಗಡಿನ ರೌಂಡು ಡಬ್ಬಿಗಳಿಗೆ ತೂತು ಮಾಡಿ, ಮಧ್ಯೆ ದಾರ ಪೋಣಿಸಿ ಬುಲ್ಡೇಜರ್ ಮಾಡಿ ಮನೆ ತುಂಬಾ ಶಬ್ದ ಮಾಡುತ್ತಾ ಓಡಾಡಿಸಿದೆ.

ಆ ಚಾಕ್ಲೇಟ್ ಡಬ್ಬಿಗಳು ನಮ್ಮ ಮನೆಯಲ್ಲಿ ಸುಮಾರು ವರ್ಷ ಕಾಲ ಚಲಾವಣೆಯಲ್ಲಿದ್ದವು. ಉದ್ದು, ಹೆಸರು, ತೊಗರಿ, ಕಡಲೆ, ಕೊತ್ತಂಬರಿಯಾದಿಯಾಗಿ ಅನೇಕ ಬಣ್ಣಬಣ್ಣದ ದವಸ ಧಾನ್ಯಗಳನ್ನು ಇವು ತಮ್ಮೊಡಲಲ್ಲಿಟ್ಟುಕೊಂಡು ಸಂರಕ್ಷಿಸುತ್ತಿದ್ದವು. ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ವರ್ಷಕ್ಕೊಮ್ಮೆ, ಮಳೆಗಾಲಕ್ಕೆ ಮುನ್ನ, ಕಾಳು-ಬೇಳೆಗಳನ್ನು ತರಿಸಿ, ಹಸನು ಮಾಡಿ ಡಬ್ಬಿಗಳಲ್ಲಿ ತುಂಬಿಡುತ್ತಿದ್ದೆವು. ಹಾಗೆ ತುಂಬಿಡುವ ಮುನ್ನ ಡಬ್ಬಿಯನ್ನು ತೊಳೆದು, ಬಿಸಿಲಲ್ಲಿ ಒಣಗಿಸಿ, ಒರೆಸಿ ಇಡಬೇಕಿತ್ತು. ಪ್ರತಿ ವರ್ಷವೂ ಮೆಂತೆಕಾಳನ್ನೇ ತುಂಬಿಸಿಕೊಂಡಿರಬೇಕೆಂದು ಸಣ್ಣ ಡಬ್ಬಿಯ ಮುಖ ಕಹಿಯಾಗುವುದನ್ನೂ, ಪ್ರತಿ ವರ್ಷವೂ ಒಣಮೆಣಸಿನ ಕಾಯಿ ತುಂಬಿಸಿಕೊಂಡಿರಬೇಕೆಂದು ದೊಡ್ಡ ಡಬ್ಬಿ ಮಾಡಿದ ಸಿಟ್ಟಿಗೆ ಅದರ ಮುಖ ಕೆಂಪಾಗುವುದನ್ನೂ ನಾನು ಗಮನಿಸುತ್ತಿದ್ದೆ. ಇವೆಲ್ಲವುಗಳಿಗಿಂತ ಭಿನ್ನವಾಗಿದ್ದು ತಮ್ಮದೇ ಗತ್ತಿನಿಂದ ಮೆರೆಯುತ್ತಿದ್ದುದು ಉಪ್ಪಿನಕಾಯಿಯ ಪಿಂಗಾಣಿ ಜಾಡಿ ಮತ್ತೆ ತನ್ನೊಳಗೆ ಅಮ್ಮನ ಚಿಲ್ಲರೆ ಕಾಸನ್ನು ಅಡಗಿಸಿಟ್ಟುಕೊಂಡಿರುತ್ತಿದ್ದ ಸಾಸಿವೆಕಾಳಿನ ಡಬ್ಬಿ -ಎರಡೇ.

ನಮ್ಮ ಮನೆಯಲ್ಲಿ ಒಂದಷ್ಟು ಗಾಜಿನ ಡಬ್ಬಿಗಳೂ ಇದ್ದವು. ಕಡಗಾಯಿ, ಕುಚ್ಚುಮಾವಿನಕಾಯಿ, ಸಕ್ಕರೆ, ಇತ್ಯಾದಿ ವಸ್ತುಗಳನ್ನು ಅವುಗಳಲ್ಲಿ ತುಂಬಿಸಿ ಅಡುಗೆಮನೆ ಪಕ್ಕದ ಚಿಕ್ಕ ಕಾಲುದಾರಿಯಲ್ಲಿದ್ದ ಕಪಾಟಿನಲ್ಲಿ ಅಮ್ಮ ಅವನ್ನು ಇಟ್ಟಿರುತ್ತಿದ್ದಳು. ಒಮ್ಮೆ ನನ್ನ ಅತ್ತಿಗೆ ಅದರ ಮೇಲ್ಗಡೆ ಅರೆಯಲ್ಲಿ ತಾನೇ ಅಡಗಿಸಿಟ್ಟುಕೊಂಡಿದ್ದ ಚಾಕ್ಲೇಟುಗಳನ್ನು ತೆಗೆದುಕೊಳ್ಳಲೆಂದು ಕಪಾಟಿನ ಕೆಳಾಗಡೆ ಅರೆಯ ಮೇಲೆ ಕಾಲಿಡುತ್ತಿದ್ದಂತೆಯೇ ಇಡೀ ಕಪಾಟೇ ಅವಳ ಮೇಲೆ ಮಗುಚಿ ಬಿದ್ದು, ಗಾಜಿನ ಡಬ್ಬಿಗಳೆಲ್ಲ ಒಡೆದುಹೋದವು. ಸದ್ದು ಕೇಳಿ ಓಡಿ ಬಂದ ನಾನು, ಆವರಣದ ತುಂಬಾ ಚೆಲ್ಲಿದ್ದ ಬಣ್ಣಬಣ್ಣದ ದ್ರವದ ಮಧ್ಯೆ ಅತ್ತಿಗೆ ಬಿದ್ದುಕೊಂಡಿರುವ ದೃಶ್ಯ ಕಂಡು, ಹೆದರಿ ಕಿಟಾರನೆ ಕಿರುಚಿಕೊಂಡಿದ್ದೆ. ಪುಣ್ಯಕ್ಕೆ ಸ್ವಲ್ಪ ಕೈಗೆ ಗಾಯವಾಗಿದ್ದು ಬಿಟ್ಟರೆ ಮತ್ತಿನ್ನೇನೂ ಆಗಿರಲಿಲ್ಲ ಅವಳಿಗೆ. ಸ್ಥಳಕ್ಕೆ ಧಾವಿಸಿದ ಅಮ್ಮ ವರ್ಷಕ್ಕಾಗುವಷ್ಟು ಸಂಗ್ರಹಿಸಿಟ್ಟುಕೊಂಡಿದ್ದ ಕುಚ್ಚುಮಾವಿನಕಾಯಿ ನೆಲದ ಪಾಲಾದುದಕ್ಕೆ ತೀವ್ರವಾಗಿ ಬೇಸರ ಪಟ್ಟುಕೊಂಡಳು. ವಾರದವರೆಗೂ ಆ ವಾತಾವರಣದಲ್ಲಿ ಕುಚ್ಚುಮಾವಿನಕಾಯಿಯ ಪರಿಮಳ ಸುಳಿದಾಡುತ್ತಿತ್ತು.

ನಾವು ಹೊಸ ಮನೆಗೆ ಬಂದಮೇಲೆ, ಅಲ್ಲಿಯ ಶೆಲ್ಫಿನಲ್ಲಿ ಈ ಚಾಕ್ಲೇಟ್ ಡಬ್ಬಿಗಳು ತುಂಬಾ ಹಳತಿನಂತೆ ಕಾಣತೊಡಗಿದವು. ಇವು ಒಂದೊಂದೂ ಬೇರೆ ಬೇರೆ ಸೈಜು, ಬೇರೆ ಬೇರೆ ಆಕಾರದಲ್ಲಿದ್ದವು. ಆಗಲೇ ಪಾಲಿಶ್ ಕಳೆದುಕೊಂಡು, ಒಂಥರಾ ಬೆಳ್ಳಬೆಳ್ಳಗಾಗಿ ಮುದುಕಿಯರಂತೆ ಕಾಣುತ್ತಿದ್ದವು. ಮತ್ತೆ ಊರಲ್ಲಿ ಈಗ ಎಲ್ಲರ ಮನೆಗೂ ಬಂದುಬಿಟ್ಟಿದ್ದ ಟಪ್ಪರ್‌ವೇರಿನ ಆಕರ್ಷಕ ಪೆಟ್-ಜಾರ್‌ಗಳು ಅಮ್ಮನ ಕಣ್ಣನ್ನು ಕುಕ್ಕುತ್ತಿದ್ದವು. ಫೇಶಿಯಲ್ ಮಾಡಿಸಿಕೊಂಡ ಸ್ಲೀವ್‌ಲೆಸ್ ನಟಿಯರಂತೆ ಥಳಥಳಿಸುತ್ತ, ಒಂದೇ ಬಣ್ಣದ ಮುಚ್ಚಳಗಳನ್ನು ಹೊಂದಿ ಚಂದಗೆ ನಳನಳಿಸುತ್ತಿದ್ದ ಇವನ್ನು ನಮ್ಮ ಮನೆಯ ಶೆಲ್ಫಿನ ಮೇಲೆ ಕಲ್ಪಿಸಿಕೊಂಡು ಅಮ್ಮ ಹಿರಿಹಿಗ್ಗಿದಳು. ಅದಾಗಲೇ ಬೆಂಗಳೂರಿಗೆ ಸೇರಿಕೊಂಡಿದ್ದ ನನ್ನ ಬಳಿ ಫೋನಿನಲ್ಲಿ “ಅಪ್ಪೀ, ಈ ಸಲ ಬರಕ್ಕರೆ ಒಂದು ಕೆಜಿ ಸೈಜಿಂದು ಒಂದಷ್ಟ್ ಬಾಕ್ಸ್ ತಗಂಬಾ” ಅಂತ ಸಣ್ಣಗೆ ಹೇಳಿದಳು. ನಾನು ಅಮ್ಮನಿಗೆ ಖುಶಿಯಾಗಲಿ ಅಂತ, ಮೂರು ಸೈಜಿನ ಆರರಂತೆ ಒಟ್ಟು ಹದಿನೆಂಟು ಟಪ್ಪರ್‌ವೇರ್ ಡಬ್ಬಿ ಒಯ್ದು ಕೊಟ್ಟೆ. ಅಷ್ಟೇ ಅಲ್ಲ, ಅವಳನ್ನು ಸಾಗರಕ್ಕೆ ಕರೆದುಕೊಂಡು ಹೋಗಿ ಐದಾರು ದೊಡ್ಡ ದೊಡ್ಡ ಸ್ಟೀಲ್ ಡಬ್ಬಿಗಳನ್ನೂ ಕೊಡಿಸಿದೆ. ಅಷ್ಟನ್ನೆಲ್ಲಾ ಒಟ್ಟಿಗೆ ಮನೆಗೆ ತಂದುಕೊಂಡ ಅಮ್ಮ ಮುಗ್ದವಾಗಿ ಕೇಳಿದ್ದು ಒಂದೇ ಪ್ರಶ್ನೆ: “ಈಗ ಈ ಚಾಕ್ಲೇಟ್ ಡಬ್ಬೀನೆಲ್ಲ ಎಂಥ ಮಾಡದು?!”

ಅಷ್ಟೆಲ್ಲಾ ಡಬ್ಬಿ ಮನೆಯಲ್ಲಿದ್ದರೂ ಪ್ರತಿ ಸಲ ಮನೆಗೆ ಹೊರಟಾಗಲೂ ‘ಡಬ್ಬಿ ತಗಂಬಾ’ ಎಂದು ನೆನಪಿಸುವ ಅಮ್ಮನ ಬಗ್ಗೆ ನನಗೆ ಪ್ರೀತಿಲೇಪಿತ ಕೋಪ ಬಂದು ಕೊನೆಗದು ಮುದ್ದಾಗಿ ಪರಿವರ್ತಿತವಾಗಿ “ಅಯ್ಯೋ ಅಡ್ಡಿಲ್ಲೆ ಮಾರಾಯ್ತೀ” ಎಂದು ನಗುತ್ತಾ ಫೋನಿಡುವಂತೆ ಮಾಡುತ್ತದೆ. ಬೆಂಗಳೂರಿನ ಪುಟ್ಟ ಮನೆಯ ಪುಟ್ಟ ಕಿಚನ್ನಿನ ಪುಟ್ಟ ನಾಗಂದಿಗೆಯ ಮೇಲೆ ಬಿದ್ದುಕೊಂಡಿರುವ ಖಾಲಿ ಡಬ್ಬಿಗಳನ್ನು ಚೀಲದೊಳಗೆ ತುಂಬಿ ಊರಿನ ಬಸ್ಸಿನ ರಶ್ಶಿನೊಳಗೆ ತೂರಿಸುವಾಗ ರೂಮ್‌ಮೇಟ್ ರೇಗಿಸುತ್ತಾನೆ: ‘ಥೂ, ಡಬ್ಬಾ ನನ್ ಮಗನೇ!’. ನಾನು ತಕ್ಷಣ ಸರಿ ಮಾಡುತ್ತೇನೆ: ‘ಡಬ್ಬಾ ನನ್ ಮಗ ಅಲ್ಲ; ಡಬ್ಬಿಪ್ರೀತಿಯ ಅಮ್ಮನ ಮಗ’ ಅಂತ.

[ಉದಯವಾಣಿ ಸಾಪ್ತಾಹಿಕ ಸಂಪದದಲ್ಲಿ ಪ್ರಕಟಿತ.]

Wednesday, September 09, 2009

ಹಾರು

ಪಾರಿವಾಳಕ್ಕಿಂತ ಬಿಳಿಯ ಬಣ್ಣದ ಹಕ್ಕಿಗಳು
ಬಂದು ಒಳ ಸೇರಿಕೊಂಡುಬಿಟ್ಟಿವೆ...
ಹೊತ್ತೊತ್ತಿಗೆ ಕಾಳೊಂದು ಸಿಕ್ಕುತ್ತಿರುವಾಗ
ಹೊರ ಹಾರುವುದಾದರೂ ಏಕೆ ಎಂಬಂತ
ನಿಶ್ಚಿಂತೆಯಲ್ಲಿ ಸ್ಥಿರವಾಗಿಬಿಟ್ಟಿವೆ ಇಲ್ಲೇ.

ಕೆಲ ಹಕ್ಕಿಗಳಿಗೆ ಇದು ಗೂಡು;
ಕೆಲವಕ್ಕೆ ಪಂಜರ.

ಇಲ್ಲಿ ಹೊಸ ಕನಸುಗಳು ಗರ್ಭ ಕಟ್ಟುವುದಿಲ್ಲ;
ಗುಂಪಲ್ಲಿ ಅನುರಣಿಸುವ ಕಚ್ಚಾಟದ ಕಿಚಿಪಿಚಿಗಳು
ತೀರ್ಮಾನವಾಗುವುದಿಲ್ಲ;
ಅನಾವೃತಗೊಳ್ಳುವ ಹೃದಯದ ಚಿಲಿಪಿಲಿಗಳಿಗೆ
ಕಿವಿಯೇ ಇಲ್ಲ.

ಇಂತಹ ನೆಲೆಯಲ್ಲಿ ಅದ್ಯಾಕೆ ಅದೊಂದು ಹಕ್ಕಿ
ಹಾಗೆ ಕುಳಿತಿದೆ ಮೌನದಲ್ಲಿ?
ಗೂಡಿನೊಳಗೂ ಗೂಡು ರಚಿಸಿಕೊಂಡು ನಿ-
ಗೂಢವಾಗಿದೆ?
ಬಂದ ಹೊಸ-ಅಸಭ್ಯ ಹಕ್ಕಿಗೂ ಅಚ್ಚರಿ:
ಏಕೆ ತನ್ನ 'ತಾದಿಂ ತರಿಕಿಟ ತಾ'ಗಳನ್ನು ಮೆಚ್ಚುಗೆಯ
ಕಣ್ಣಿಂದ ಈಕ್ಷಿಸುತ್ತಿದೆ?
ಸಾವಕಾಶ ಎತ್ತುತ್ತಿದೆ ಕೈ- ಒಪ್ಪಿಗೆಯ ಮತಕ್ಕೆ-
ಬರುವಂತೆ ಆಮೆ ಚಿಪ್ಪಿಂದ ಹೊರಗೆ?
ನಿಬದ್ಧಗಳ ಹರಿದು ಹಾರುವ ತನ್ನಾಲೋಚನೆಗೆ
ಹೇಗೆ ಅರಳಿಸುತ್ತಿದೆ ಮಂದಸ್ಮಿತ ಕಣ್ಣಲ್ಲೇ..

ಸುತ್ತ ನಿಶ್ಯಬ್ದವಿದ್ದಾಗ ಪಿಸುಮಾತೇ ಗದ್ದಲವಾಗುತ್ತದೆ.
"ಹಾರಿ ಹೋಗುವುದು ಎಂದರೆ
ನೀನಂದುಕೊಂಡಿರುವುದಕ್ಕಿಂತ ಸುಲಭ ಚೀಫ್..
ರೆಕ್ಕೆಗಳನ್ನು ಬಿಚ್ಚಿ ವಿಹಂಗಮ
ತೂರಿ ಸರಳುಗಳ ನಡುವಿನ ಪುಟ್ಟ ಅವಕಾಶದಲ್ಲಿ
ಸೇರಿಬಿಡಬಹುದು ಗಗನ..
ಬಚ್ಚಿಟ್ಟುಕೊಳ್ಳಬಹುದು ಬೇಕಿದ್ದರೆ,
ಚಿಕ್ಕೆಗಳ ಹಿಂದೆ.. ಬಾ,
ಹೊರಡು"

-ಎಂದೆಲ್ಲ ಹೇಳಿದ್ದ ನೀನು
ಈಗ ಹೀಗ್ಯಾಕೆ ಅಲ್ಲಾಡದೇ ಮಲಗಿರುವೆ?
ಹೊರಗೆ ಬೆಚ್ಚಗೆ ಮಲಗಿದೆ ಲೋಕ..
ಅರೆ ಎಚ್ಚರದಲ್ಲಿ ತಾಯಿ ಕೊಟ್ಟ ಮೊಲೆಯಿಂದ
ಮಗು ಹೀರುತ್ತಿರುವ ಹಾಲಿನಲ್ಲಿ
ನಾಳೆ ಬೆಳಿಗ್ಗೆ ಅರಳಲಿರುವ ಮೊಗ್ಗುಗಳೊಡಲ
ಮಕರಂದವೆಲ್ಲ ಕರಗಿದೆ..
ಚಂದಿರನ ಬೆಳಕನ್ನು ಹೊತ್ತ ದೊಡ್ಡ ಮೋಡಗಳು
ಎತ್ತಲೋ ಹೋಗುತ್ತಿವೆ..
ಗಂಟೆಯ ಮುಳ್ಳಿನ ನಿಧಾನಗತಿಯನ್ನು
ಸೆಕೆಂಡಿನ ಮುಳ್ಳು ಹಾಸ್ಯ ಮಾಡುತ್ತಿದೆ..

ಇಂಥಲ್ಲಿ,
ನೀನ್ಯಾಕೆ ಮಲಗಿದ್ದೀಯ ಹೀಗೆ ರೆಕ್ಕೆಗಳ ಮಡಚಿ?
ದುಂಬಿಗೆ ಮೋಸದ ಅರಿವಾಗುವ ಮುನ್ನ,
ಮೋಡ ಕರಗಿ ಸುರಿಯುವ ಮುನ್ನ,
ಚಿಕ್ಕ ಮುಳ್ಳು ಸೂರ್ಯನಿಗೆ ಪುಕಾರು ಹೇಳುವ ಮುನ್ನ,

ಸೇರಿ ಬಿಡೋಣ ಗೌಪ್ಯದ ಗರ್ಭ.
ಬಾ ಮ್ಯಾಕ್, ಹೊರಡು.

[One Flew over the Cuckoo's Nest ಸಿನೆಮಾ ನೋಡಿ..]

Saturday, September 05, 2009

ನೆನೆ ನೆನೆ ಈ ದಿನ

ನಾವು ಹೈಸ್ಕೂಲಿಂದ ಕಾಲೇಜಿಗೆ ಸೇರ್ತಿದ್ದ ಹಾಗೇ ಮೇಷ್ಟ್ರುಗಳೆಲ್ಲ ಲೆಕ್ಚರರುಗಳಾಗಿಬಿಟ್ಟಿದ್ದರು. ಆದರೆ ನಮಗೆ ಮಾತ್ರ ಇನ್ನೂ ಅವರನ್ನು ಲೆಕ್ಚರರ್ ಅಂತ ಕರೀಲಿಕ್ಕೆ ಮನಸು ಒಪ್ತಿರ್ಲಿಲ್ಲ. ಹಿಂದಿನವರ ಹಾಗೆ ಇವರೂ ಕಪ್ಪು ಬೋರ್ಡಿನ ಪಕ್ಕ ನಿಂತು ಏನೇನೋ ಹೇಳಿ ನಮ್ಮಂತ ಮುಗ್ಧ ಹುಡುಗರನ್ನು ಮರುಳು ಮಾಡಿ ನಿದ್ದೆಗೆ ನೂಕುತಿದ್ದರು. ಹಾಗಿದ್ದಾಗ, ನಾವು ಮಾತ್ರ ‘ಶಾಲೆ’ ಅಂತ ಹೋಗಲು ಶುರು ಮಾಡಿದಾಗಿಂದ ಸ್ಟುಡೆಂಟ್ಸು; ಇವರು ಹೇಗೆ ಮೇಷ್ಟ್ರಿಂದ ಹೆಡ್ ಮೇಷ್ಟ್ರಾಗಿ ಲೆಕ್ಚರರ್ರಾಗಿ ಪ್ರೊಫೆಸರ್ರಾಗಿ ಪ್ರಿನ್ಸಿಪಾಲಾಗಿ ಏನೇನೆಲ್ಲಾ ಆಗೋದು? ಓಹೋ, ಅದಕ್ಕೇ ನಾವು ಅವರನ್ನು ಮೇಷ್ಟ್ರು ಅಂತಲೇ ಕನ್ಸಿಡರ್ ಮಾಡ್ತಿದ್ವು. ವಯಸ್ಸಾಗಿದ್ದಕ್ಕೋ ಕಾಲ ಕಾಲದಿಂದ ಬೋಧಿಸುತ್ತಲೇ ಬಂದಿದ್ದಕ್ಕೋ ಏನೋ, ಅವರಿಗೂ ಬೋಧನೆಯಲ್ಲಿ ಅಂತಹ ಉತ್ಸಾಹ ಇರಲಿಲ್ಲ. ನಾವು ಕಪಿಚೇಷ್ಟೆ ಮಾಡಿದಾಗೆಲ್ಲ ಅವರು ಎಚ್ಚರಿಸ್ತಿದ್ರು: "ನೀವೀಗ ಮೊದ್ಲಿನಂಗೆ ಹೈಸ್ಕೂಲ್ ಸ್ಟುಡೆಂಟ್ಸ್ ಅಲ್ಲ, ಕಾಲೇಜು ಇದು. ಸೀರಿಯಸ್ಸಾಗಿರೋದನ್ನ ಕಲೀರಿ" ಅಂತ. ನಿದ್ದೇನಲ್ಲೂ ಸೀರಿಯಸ್‌ನೆಸ್ಸು ಅಂದ್ರೆ ಹ್ಯಾಗೆ ಸಾರ್? ಆದರೆ, ಹೈಸ್ಕೂಲಿನವರಿಗೂ ಇವರಿಗೂ ಇರ್ತಿದ್ದ ಒಂದೇ ವ್ಯತ್ಯಾಸ ಅಂದ್ರೆ, ಅವರು ಬರೀ ಕನ್ನಡದಲ್ಲಿ ಪಾಠ ಮಾಡೋರು; ಇವರು ಇಂಗ್ಲೀಷ್ ಬಳಸೋರು. ಹಳೆಯ ಜನ್ಮದಲ್ಲಿ ಮಾಡಿದ್ದ ಕರ್ಮಗಳಿಂದಾಗಿ ಇಂಗ್ಲೀಷು ನಮಗೆ ಅರ್ಥ ಆಗ್ತಿರಲಿಲ್ಲ. ಹೀಗಾಗಿ ನಿದ್ದೆ ಇನ್ನೂ ಸಲೀಸಾಗಿ ಬರ್ತಿತ್ತು.

ನನ್ನ ಹಾಗೇ ನನ್ನ ಸಹಪಾಠಿಗಳೂ ಸಹ ಸೈನ್ಸು ಸಿಗಲಿಲ್ಲ ಅಂತ ಕಾಮರ್ಸಿಗೆ ಸೇರಿದವರೇ ಆಗಿದ್ರು. ಸೇರಿದ ಮೇಲೆ, "ಇದೇ ಅರ್ಥ ಆಗ್ತಿಲ್ಲ, ಇನ್ನು ಅದು ಸಿಕ್ಕಿದ್ರೆ ಅಧೋಗತಿ" ಅಂತ ನಮಗೆ ನಾವೇ ಸಮಾಧಾನಾನೂ ಮಾಡ್ಕೊಂಡಿದ್ವಿ. ಓದು, ಪರೀಕ್ಷೆ, ಗುರುನಿಷ್ಠೆ, ಭವಿಷ್ಯ ಇತ್ಯಾದಿಯೆಲ್ಲವನ್ನೂ ಕಸದ ತೊಟ್ಟಿಯೊಳಗಿನ ಕಾಗದದ ಚೂರಿನೊಂದಿಗೆ ಮಲಗಿಸಿ ನಾವೂ ನಿರರ್ಗಳ ತೂಕಡಿಸುತ್ತಿದ್ದೆವು, ಎಚ್ಚರದಲ್ಲಿ ಕೀಟಲೆ ಮಾಡ್ತಾ ಇದ್ದೆವು. ಇಂತಹ ನಮ್ಮನ್ನು ನಿದ್ದೆಯಿಂದ ಬಡಿದೆಬ್ಬಿಸಿದ್ದು ಅಲೋಕ್ ಎಂಬ ಲೆಕ್ಚರರು.

ಬೋರು ಹೊಡೆಸ್ತಿದ್ದ ಸಿನಿಮಾದಲ್ಲಿ ಇದ್ದಕ್ಕಿದ್ದಂಗೆ ಹೀರೋ ಎಂಟ್ರಿ ಆಗೋ ಹಾಗೆ ಈ ಪಾರ್ಟ್-ಟೈಮ್ ಲೆಕ್ಚರರು ಬಂದದ್ದು ಕಾಲೇಜು ಶುರುವಾಗಿ ಹದಿನೈದು ದಿವಸಗಳ ನಂತರ. ಕಾಮರ್ಸ್ ವಿಷಯವನ್ನು ತೆಗೆದುಕೊಳ್ಳುತ್ತಿದ್ದೀನಿ ಅಂತ ಹೇಳಿದ ಅವರನ್ನು ನಾವು ಪಿಳಿಪಿಳಿ ಕಣ್ಣಿಂದ ನೋಡಿದೆವು. ಈ ಲೆಕ್ಚರರು ಇನ್ನೂ ಯುವಕರಿದ್ದರು, ಜೀನ್ಸ್ ಹಾಕಿಕೊಂಡಿದ್ದರು, ರಾಷ್ಟ್ರಗೀತೆ ಹಾಡುವವರಂತೆ ಬರೀ ಬ್ಲಾಕ್‌ಬೋರ್ಡಿನ ಬಳಿ ಅಟೆನ್ಷನ್ ಪೊಸಿಷನ್ನಿನಲ್ಲಿ ನಿಂತಿರದೆ ಇಡೀ ಕ್ಲಾಸ್‌ರೂಮ್ ತುಂಬಾ ಚಕಚಕನೆ ಓಡಾಡುತ್ತಿದ್ದರು. ಅವರ ಕಂಠದ ಮೋಡಿ ಎಂಥದಿತ್ತೆಂದರೆ, ನಮ್ಮಂಥಾ ನಮಗೂ ಇಂಗ್ಲೀಷು ಭಾಷೆಯ ಪಾಠ ಅರ್ಥವಾಗತೊಡಗಿ, ನಮ್ಮ ತಲೆಯ ಬಗ್ಗೆಯೇ ನಮಗೆ ಅಚ್ಚರಿ ಮೂಡಿ, ತೂಕಡಿಕೆಯಲ್ಲದ ಕಾರಣವೊಂದಕ್ಕೆ ಮೊದಲ ಬಾರಿ ತಲೆದೂಗುವಂತಾಯಿತು.

ಅಲೋಕ್, ನಮಗೆ ಸುಲಭವಾಗಿ ಅರ್ಥವಾಗಲಿ ಎಂಬುದ್ಧೇಶದಿಂದ ಪಾಠವನ್ನೆಲ್ಲಾ ಉದಾಹರಣೆಗಳ ಮೂಲಕವೇ ತೂಗಿಸುತ್ತಿದ್ದರು. ಒಂದು ದಿನ, ನಾವೆಲ್ಲ ವಿದ್ಯಾರ್ಥಿಗಳನ್ನೂ ಪಾರ್ಟ್‌ನರುಗಳನ್ನಾಗಿ ಮಾಡಿ ಒಂದು ಕಾಲ್ಪನಿಕ ಪಾರ್ಟ್‌ನರ್‌ಶಿಪ್ ಫರ್ಮ್ ಸ್ಥಾಪಿಸಿಸಿದರು. ನಾವೆಲ್ಲಾ ತಲಾ ಹತ್ತು ರೂಪಾಯಿ ಹಾಕಿದೆವು. ಹಾಗೆ ಕೂಡಿಸಿದ ಹಣ ಒಟ್ಟಾಗಿ ಸಂಸ್ಥೆಯ ‘ಕ್ಯಾಪಿಟಲ್’ ಆಯಿತು. ನಂತರ ಆ ಹಣದಿಂದ ನಾವು ಹೊಸದೊಂದು ಉದ್ಯೋಗ ಶುರು ಮಾಡುವುದು ಅಂತ ತೀರ್ಮಾನಿಸಿದೆವು. ನಮಗೆಲ್ಲ ಮನೆಯಲ್ಲಿ ಮಾಡುವುದನ್ನು ನೋಡಿ ಗೊತ್ತಿದ್ದ ಹಲಸಿನಕಾಯಿ ಹಪ್ಪಳ ಮತ್ತು ಸಂಡಿಗೆ ಮಾಡುವುದೇ ಆ ಉದ್ಯೋಗ! ಕ್ಯಾಪಿಟಲ್ಲಿಗೆ ಹಣ ಕೊಟ್ಟಿರದ ಸಹಪಾಠಿಯೊಬ್ಬ ತಾನು ಹಲಸಿನಕಾಯಿಯನ್ನೇ ತನ್ನ ‘ಶೇರ್’ ಆಗಿ ತರುವುದಾಗಿ ಹೇಳಿದ. ಮರುದಿನ ಆತ ಬ್ಯಾಗ್ ಬದಲು ದೊಡ್ಡದೆರಡು ಹಲಿಸಿನಕಾಯಿ ಹೆಗಲಿನ ಮೇಲೆ ಹೊತ್ತುಕೊಂಡು ಬರುವ ಅಮೋಘ ದೃಶ್ಯವನ್ನು ಕಾರಿಡಾರಿನಲ್ಲಿ ನಿಂತ ನಾವೆಲ್ಲ ಕಣ್ತುಂಬ ನೋಡಿದೆವು. ಬೇರೆ ಡಿಪಾರ್ಟ್‌ಮೆಂಟಿನ ಹುಡುಗರು ಚಪ್ಪಾಳೆ ತಟ್ಟಿ ನಗಾಡಿದರು.

ನಂತರ ಆ ಹಲಸಿನಕಾಯಿ ಕಡಿದು, ಮೈಕೈಯೆಲ್ಲ ಅಂಟು ಮಾಡಿಕೊಳ್ಳುತ್ತ ನಾವು ತೊಳೆ ಬಿಡಿಸಿದೆವು. ಕಾಲೇಜಿನ ಕ್ಯಾಂಟೀನ್ ಮ್ಯಾನೇಜರ್ ಸಮ್ಮತಿ ಪಡೆದು, ಅಡುಗೆ ಭಟ್ಟನಿಗೆ ಸ್ವಲ್ಪ ದುಡ್ಡು ಕೊಟ್ಟು, ಬಿಡಿಸಿದ ತೊಳೆಗಳನ್ನು ಗ್ರೈಂಡರಿಗೆ ಹಾಕಿ, ಉಪ್ಪು-ಹುಳಿ-ಖಾರ ಎಲ್ಲಾ ಬೆರೆಸಿ ಬೀಸಿದ್ದಾಯ್ತು. ಹದ ಹೇಳಲು ಹೋಗಿ ದೊಡ್ಡಸ್ತಿಕೆ ತೋರಿದ ಕೆಲ ಹುಡುಗರನ್ನು ಹುಡುಗಿಯರು ಬೆದರಿಸಿ ಓಡಿಸಿದರು. ಹಾಗೇ ಅಕ್ಕಿಯಿಂದ ಸಂಡಿಗೆ ಹಿಟ್ಟೂ ತಯಾರಿಸಿದೆವು. ನಂತರ ನಾಲ್ಕು ಮೀಟರ್ ಬಟ್ಟೆ ಖರೀದಿಸಿ ತಂದು, ತಯಾರಾದ ಖಾದ್ಯವನ್ನು ಹುಡುಗರೂ-ಹುಡುಗಿಯರೂ ಸೇರಿ, ಬಾಳೆಲೆಯಲ್ಲಿ ತಟ್ಟಿ ತಟ್ಟಿ ಆ ಬಟ್ಟೆಯ ಮೇಲೆ ಒಣಗಿಸಿದೆವು. ಒಣಗುವವರೆಗೆ ಕಾಗೆ, ನಾಯಿಗಳು ಅವನ್ನು ಹೊತ್ತೊಯ್ಯದಂತೆ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಪೀರಿಯಡ್ಡಿಗೊಬ್ಬರಂತೆ ಹೊತ್ತುಕೊಂಡೆವು. ಎರಡು ದಿನದಲ್ಲಿ ಹಪ್ಪಳ ಒಣಗಿ ತಯಾರಾಯಿತು.

ಸರಿ, ಈಗ ತಯಾರಾದ ಉತ್ಪನ್ನಗಳನ್ನು ಮಾರಾಟ ಮಾಡಬೇಕಲ್ಲ? ಕಾಲೇಜಿನಲ್ಲೇ ನಾಳೆ ಸಂಜೆ ಒಂದು ಕೌಂಟರ್ ತೆರೆದು, ಹಪ್ಪಳ-ಸಂಡಿಗೆಗಳನ್ನು ಕರಿದು ಮಾರುವುದು ಅಂತ ತೀರ್ಮಾನವಾಯ್ತು. "ಬರೀ ಹಪ್ಳ-ಸಂಡಿಗಿ ಅಂದ್ರ ಯಾರ್ ತಗೋಂತಾರ? ಜತೀಗೆ ಮಿರ್ಚಿ-ಭಜಿನೂ ಇರ್ಬೇಕು" ಅಂತ ಧಾರವಾಡದ ಬಸವರಾಜ್ ಹೇಳಿದ. ಸರಿ, ಕರಿಯೋದೇ ಕರೀತಿದ್ದೇವೆ, ಅದೇ ಎಣ್ಣೇಲಿ ಇದ್ನೂ ಕರಿಯೋಣ ಅಂತ ಅವನ ಸಲಹೆ ಅಂಗೀಕರಿಸಿದೆವು. ಅಷ್ಟರಲ್ಲಿ ನಮ್ಮ ಅಕೌಂಟ್ಸ್ ನೋಡಿಕೊಳ್ಳುತ್ತಿದ್ದ ರಶ್ಮಿ "ಮಿರ್ಚಿ ಮಾಡೋಕೆ ಸಂಸ್ಥೆಯಲ್ಲಿ ಹಣ ಇಲ್ಲ" ಅಂದಳು. ಸಾಲ ಮಾಡುವುದು ಅನಿವಾರ್ಯವಾಯಿತು. ನಮಗಾದರೂ ಯಾರಿದ್ದಾರೆ? "ಪ್ರಿನ್ಸಿಪಾಲರನ್ನೇ ಕೇಳೋಣ ನಡೀರಿ" ಅಂತ ಅಲೋಕ್ ಸರ್ ಹೇಳಿದರು. ಪ್ರಿನ್ಸಿಪಾಲರ ಬಳಿ ಹೋಗಿ "ನೀವೇ ಬ್ಯಾಂಕು, ಸಾಲ ಕೊಡಿ" ಅಂತ ಕೇಳಿದೆವು. ಮೊದಲು ಅವರು ಕಕ್ಕಾಬಿಕ್ಕಿಯಾದರೂ ವಿಷಯ ತಿಳಿದ ಮೇಲೆ ನಗುತ್ತಾ ಐನೂರು ರೂಪಾಯಿ ಕೊಟ್ಟರು.

ಮರುದಿನ ಇದ್ದಕ್ಕಿದ್ದಂತೆ ಒಂದು ಸಣ್ಣ ಮಳೆ ಬಂದು ನಮ್ಮ ವ್ಯಾಪಾರಕ್ಕೆ ಶುಭ ಮುಹೂರ್ತ ಕಲ್ಪಿಸಿಕೊಟ್ಟಿತು. ಕ್ಯಾಂಟೀನಿನ ಅಡುಗೆ ಭಟ್ಟರು ಕಾರಿಡಾರಿನ ಮೂಲೆಯಲ್ಲೊಂದು ಒಲೆ ಹೂಡಿ, ದೊಡ್ಡ ಬಾಣಲಿ ಇಟ್ಟು ಎಣ್ಣೆ ಹೊಯ್ದು, ಹಪ್ಪಳ-ಸಂಡಿಗೆ-ಮಿರ್ಚಿ ಕರಿಯಲು ಶುರುವಿಟ್ಟೇಬಿಟ್ಟರು! ಅದರ ಪರಿಮಳವೆಂಬುದು ಎರಡು ಫ್ಲೋರುಗಳಲ್ಲಿದ್ದ ವಿವಿಧ ಡಿಪಾರ್ಟ್‌ಮೆಂಟಿನ ಮುನ್ನೂರೂ ಚಿಲ್ಲರೆ ಮೂಗುಗಳಿಗೆ ತಲುಪಿ, ಕ್ಲಾಸುಗಳಲ್ಲಿ ಸಂಚಲನ ಉಂಟುಮಾಡಿತು. ಲೆಕ್ಚರರುಗಳೂ ವಿಚಲಿತಗೊಂಡು ಬೇಗ ಬೇಗ ತರಗತಿ ಮುಗಿಸಿದರು. ಎಲ್ಲಾ ಧಡಧಡನೆ ಕೆಳಗಿಳಿದು ಬಂದು ನಾವು ಮಾಡಿಕೊಂಡಿದ್ದ ಕೌಂಟರಿಗೆ ಮುತ್ತಿಗೆ ಹಾಕಿದರು. ಈ ನೂಕಿನಲ್ಲಿ ನುಗ್ಗುವುದಕ್ಕಾಗದೇ ಹುಡುಗಿಯರು ಹೊರಗೇ ಉಳಿದದ್ದರಿಂದ ಅವರಿಗಾಗಿ ನಾವು ವಿಶೇಷ ಕೌಂಟರ್ ತೆರೆಯಬೇಕಾಯಿತು. ಲೆಕ್ಚರರುಗಳಿಗೆ ಸ್ಟಾಫ್ ರೂಮಿಗೇ ಸಪ್ಲೈ ಮಾಡಿದೆವು. ಎಲ್ಲರೂ ದುಡ್ಡು ಕೊಟ್ಟು ಖರೀದಿಸಿ, ನಂತರ ಕ್ಯಾಂಟೀನಿನಲ್ಲಿ ಟೀ ಕುಡಿದರು. ಅರ್ಧ ಗಂಟೆಯೊಳಗೆ, ನಮಗೆ ಸ್ವಲ್ಪವೂ ಉಳಿಯದಂತೆ ಎಲ್ಲ ಐಟೆಮ್ಮುಗಳೂ ಮಾರಾಟವಾಗಿಹೋದವು. ಮಿರ್ಚಿ ಸಿಗದಿದ್ದುದಕ್ಕೆ ಬಸವರಾಜನ ಮುಖವಂತೂ ಮೆಣಸಿನಕಾಯಿಯಷ್ಟೇ ಸಣ್ಣಗಾಯಿತು. ಕೊನೆಗೆ ಪಾತ್ರೆಯ ತಳದಲ್ಲಿದ್ದ ಚೂರುಗಳನ್ನೇ ಅವನಿಗೆ ತಿನ್ನಿಸಿ ಸಮಾಧಾನ ಮಾಡಿದೆವು.

ಅಂತೂ ಈ ಮಾರಾಟದಿಂದಾಗಿ ನಮಗೆ ದುಪ್ಪಟ್ಟು ಲಾಭವಾಯಿತು. ಲಾಭದ ಹಣದಲ್ಲಿ ಮೊದಲು ತೀರಿಸಿದ್ದು ಪ್ರಿನ್ಸಿಪಾಲರಿಂದ ಪಡೆದಿದ್ದ ಸಾಲ! ಅವರಂತೂ ಬ್ಯಾಂಕಿನ ನಿಯಮಗಳಿಗೆ ವಿರುದ್ಧವಾಗಿ, ಸಂಕೋಚದ ಪರಮಾವಧಿಯಂತೆ "ಪರ್ವಾಗಿಲ್ಲ ನೀವೇ ಇಟ್ಕೊಳಿ" ಅಂದುಬಿಟ್ಟರು! ಆಮೇಲೆ ಉಳಿದ ಹಣವನ್ನು ನಾವೆಲ್ಲ ನಮ್ಮ ನಮ್ಮ ಹೂಡಿಕೆಯ ಅನುಪಾತದಲ್ಲೇ ಹಂಚಿಕೊಂಡೆವು. ಅಂದಿನ ಕಾಲೇಜು ಮುಚ್ಚುವುದರೊಳಗೆ ಎಲ್ಲಾ ನಿಯಮಗಳನ್ನೂ ಪಾಲಿಸಿ ಸಂಸ್ಥೆಯನ್ನು ‘ವೈಂಡಪ್’ ಸಹ ಮಾಡಿದೆವು.

ಅಲೋಕ್ ಸರ್, ಇಂತಹ ಪ್ರಯೋಗಗಳನ್ನು ಮಾಡಿಸುವುದರೊಂದಿಗೆ, ನಮ್ಮೆಲ್ಲರ ಪ್ರೀತಿಗೆ ಪಾತ್ರರಾದರು. ಅವರ ಕ್ಲಾಸಿಗೆ ಒಬ್ಬರೂ ತಪ್ಪಿಸಿಕೊಳ್ಳುತ್ತಿರಲಿಲ್ಲ, ಕ್ಲಾಸಿನಲ್ಲಿ ಯಾರೂ ನಿದ್ದೆ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲ, ಜಗದಚ್ಚರಿಯಂತೆ ಎರಡು ತಿಂಗಳಲ್ಲಿ ನಮ್ಮಲ್ಲನೇಕರಿಗೆ ನಮ್ಮ ಕೋರ್ಸಿನ ಬಗ್ಗೆ ಆಸಕ್ತಿ, ಆದರ, ಅಭಿಮಾನಗಳು ಮೂಡತೊಡಗಿ, ಕಾಲೇಜು, ಪ್ರಿನ್ಸಿಪಾಲರು ಮತ್ತು ಎಲ್ಲ ಲೆಕ್ಚರರುಗಳ ಬಗ್ಗೆಯೂ ಗೌರವ ಭಾವ ಬೆಳೆಯಿತು. ಅದು ವರ್ಷದ ಕೊನೆಯ ಪರೀಕ್ಷೆಯ ಫಲಿತಾಂಶದಲ್ಲೂ ಪ್ರತಿಫಲಿಸಿದ್ದು ಸುಳ್ಳಲ್ಲ.

[ವಿಜಯ ಕರ್ನಾಟಕ ಸಾಪ್ತಾಹಿಕ - ಶಿಕ್ಷಕರ ದಿನ ವಿಶೇಷ ಸಂಚಿಕೆಗಾಗಿ ಬರೆದದ್ದು]