Saturday, December 02, 2017

ಕಾಫಿ ನೆಪ ಅಷ್ಟೇ

ಬಿಸ್ಕತ್ತೆಂದರೆ ಇರಬೇಕು ಹೀಗೆಯೇ:
ಪೊಟ್ಟಣದಿಂದ‌ ತೆಗೆಯುವಾಗ ಗರಿಗರಿ
ಕೈಯಲ್ಲಿ ಹಿಡಿದು ಮುರಿಯುವಾಗೊಂದು ಟಕ್ಕನೆ ಸದ್ದು
ಬಾಯಿಗಿಟ್ಟು ಅಗೆದರೆ ಕರುಂಕುರುಂ
ನಾಲಿಗೆಯ ಮೇಲಿಟ್ಟರೆ ಕರಗಬೇಕು ಹಿಟ್ಟಿಟ್ಟಾಗಿ ಆಹಾ!
ಇಳಿಯಬೇಕು ಗಂಟಲಲಿ ಸರಾಗ
ಸಿಗಬೇಕಲ್ಲಲ್ಲೊಂದು ಚಾಕೋಚಿಪ್ಪು
ಹೆಪ್ಪುಗಟ್ಟಿ ನಿಂತ ಸಕ್ಕರೆ ಕಾಳು
ಲೋಟದಲಿಳಿಯಲು ಒಲ್ಲೆನೆಂಬ ಮಾರಿ ಹೆಮ್ಮಾರಿ
ಎಷ್ಟೆಲ್ಲ ನೆನಪ ತರುವ ಆಪ್ತ ಪಾರ್ಲೇಜಿ
ಸಿಹಿ ಬೇಡವೆಂದವರಿಗೆ ಚಸ್ಕಾ ಮಸ್ಕಾ

ಕಾಫಿ ನೆಪ ಅಷ್ಟೇ ಎನ್ನುವರು ಜಾಹೀರಾತಿನಲ್ಲಿ
ನಿಜ ಹೇಳಬೇಕೆಂದರೆ, ಬಿಸ್ಕತ್ತೂ ನೆಪವೇ
ಮುಖ್ಯ ಆಗಬೇಕಿರುವುದು ಸಮಾಲೋಚನೆ. ತೀರ್ಮಾನ.
ಹಿಡಿದ ಕಪ್ಪಿನಿಂದ ನಿರಂತರ ಹೊರಬರುತ್ತಿರುವ ಹಬೆ.
ಕೇಳುತ್ತಾನವನು: ’ಸ್ವಲ್ಪ ಸಕ್ಕರೆ ಹಾಕಲಾ?’
ಬರುತ್ತದೆ ಅತ್ತ ದಿಕ್ಕಿನಿಂದ ಮಾರುತ್ತರ:
’ಇಲ್ಲ, ನನಗೆ ಕಹಿಕಾಫಿ ಅಭ್ಯಾಸವಾಗಿದೆ’

ಬಿಸಿಯ ಗಮನಿಸದೆ ಗುಟುಕರಿಸಿದರೆ ಚುರ್ರೆನ್ನುವ ನಾಲಿಗೆ
ಮಬ್ಬು ಮೌನ ಏಸಿ ಗಾಜುಕೋಣೆ ಏಕಾಂತ
ಇಂತಲ್ಲೆಲ್ಲಾ ಪ್ರತಿ ಮಾತನೂ ಅಳೆದು ತೂಗಿ ಆಡಬೇಕು
ಬಿಸ್ಕತ್ತನ್ನು ಕಾಫಿಯಲ್ಲದ್ದುವ ಮುನ್ನ ತಿಳಿದಿರಬೇಕು:
ಕಾಫಿಯಿರುವ ಬಿಸಿ, ಬಿಸ್ಕತ್ತಿಗಿರುವ ತ್ರಾಣ,
ಎಷ್ಟು ಸೆಕೆಂಡು ಹಿಡಿದಿರಬೇಕೆಂಬ ಪಕ್ಕಾಲೆಕ್ಕ,
ಮತ್ತು ಇಡೀ ಜಗತ್ತೇ ಆತಂಕದ ಕಣ್ಣಿಂದ ನೋಡುತ್ತಿರುವಾಗ

ದೇವರೇ, ಆಡುವ ಮಾತೇನಿದ್ದರೂ ಈಗಲೇ ಆಡಿಬಿಡು
ಆಗಲೇ ಮೆತ್ತಗಾದದ್ದು ಬೀಳಲಿ ಕಪ್ಪಿನಲ್ಲೇ
ಗೊತ್ತಾದರೆ ನನಗೂ ನಿನಗೂ ಗೊತ್ತಾಗುತ್ತದಷ್ಟೇ
ಸುರಳೀತ ತಳ ಸೇರಿಕೊಳ್ಳುತ್ತದೆ
ಅಲ್ಲೊಂದು ಸಣ್ಣ ಸದ್ದು - ಹೃದಯಕ್ಕೆ ಬಡಿದಂತೆ.

ಇರಲಿ, ಆದರೆ ಕಪ್ಪಿನಿಂದೆತ್ತಿದ ಆ ಮೃದುಮಧುರ ಚೂರನ್ನು
ಸಾವಿರ ಮೈಲಿ ದೂರದ ಬಾಯಿಯವರೆಗೆ ಒಯ್ದು
ಬಿಡುವ ದಾರಿಯಲ್ಲಿ ಮಾತು ಬೇಡ.
ಬಹುಜನರೆದುರಿನ ಅತಿ ಸೂಕ್ಷ್ಮದ ಅತಿ ನಾಜೂಕಿನ
ಕ್ಷಣದಲ್ಲಿ ಅವಮಾನವಾದರೆ ಏನು ಚಂದ?
ಬೀಳುವುದಿದ್ದರೆ ಇಲ್ಲೇ ಬೀಳಲಿ
ತಳ ಕಲಕದೆ ಉಳಿದ ಕಾಫಿ ಕುಡಿದು ಹೊರಟುಬಿಡೋಣ
ಹೊರಗೆ ಕಾಲಿಟ್ಟರೆ ಟ್ರಾಫಿಕ್ಕಿದೆ
ಕರೆದರೆ ಬರುವ ಟ್ಯಾಕ್ಸಿಯಿದೆ
ಹೋಗಿಬಿಡೋಣ ಅವರವರ ದಿಕ್ಕು ಹಿಡಿದು ದೇಶಾಂತರ.

ನಡುಗುಬೆರಳುಗಳ ನಡುವೆಯಿರುವ ಬಿಸ್ಕತ್ತು
ಹನಿಗಣ್ಣ ಹುಡುಗಿಯ ಕೇಳುತ್ತಿದೆ:
ಹೇಳಿಬಿಡು, ನಿನ್ನ‌ ನಿರ್ಧಾರವ ಹೇಳಿಬಿಡು ಈಗಲೇ.

Tuesday, November 14, 2017

ಮಗಳಿಗೆ ಗೊಂಬೆ ಕೊಳ್ಳುವುದು

ಮಗಳಿಗೆ ಗೊಂಬೆ ಕೊಳ್ಳುವುದು ಎಂಬುದು
ನನಗಾಗಿ ಹೊಸ ಗ್ಯಾಜೆಟ್ ಖರೀದಿಸಿದಷ್ಟು ಸುಲಭವಲ್ಲ
ಮೊದಲು ಗೋಡೆಯ ಕ್ಯಾಲೆಂಡರ್ ಕೆಳಗಿಳಿಸಿ
ನಾಡಿನಾದ್ಯಂತ ಎಂದೆಂದು ಎಲ್ಲೆಲ್ಲಿ ಜಾತ್ರೆಯಿದೆಯೆಂದು
ಕಣ್ಣು ಕಿರಿದಾಗಿಸಿ ಮನೆಮನೆಗಳಲ್ಲಿ ಹುಡುಕಾಡಬೇಕು
ಪತ್ತೆಯಾದ ದಿನವ ಗುರುತು ಹಾಕಿ ನೆನಪಿಟ್ಟುಕೊಳ್ಳಬೇಕು
ಇಕೋ ಈ ವರ್ಷ ಶಿರಸಿಯಲ್ಲಿ ಮಾರಿಜಾತ್ರೆ
ಇಂತಹ ದಿನವೇ ಹೇರೂರಿನ ತೇರು
ಇದು ಕಡಲೆಕಾಯಿ ಪರಿಷೆಯ ತಾರೀಖು

ಬಿಡುವು ಮಾಡಿಕೊಳ್ಳಬೇಕು ನೂರು ಜಂಜಡಗಳ ಸರಿಸಿ ಬದಿಗೆ
ತಯಾರಾಗಬೇಕು ನುಗ್ಗಲು ಜಂಗುಳಿಯ ನಡುವೆ,
ಸಹಿಸಿಕೊಳ್ಳಲು ಕಿವಿಗಡಚಿಕ್ಕುವ ಪೀಪಿ ಸದ್ದಿನ ಹಾವಳಿ
ಇರುತ್ತಾರಲ್ಲಿ ಕಿಸೆಗಳ್ಳರು: ತಪ್ಪಬಾರದು ಎಚ್ಚರ

ತರಿಕೆರೆ ಮುದುಕ ಮುದುಕನ ಹೆಂಡತಿ ಹೆಂಡತಿಯ ಮಗಳು
ಯಾರಿಲ್ಲ ಯಾರಿದ್ದಾರೆ ಎಂಬಂತಹ ಜಾತುರೆಯಲ್ಲಿ
ಖುಷಿ ಉನ್ಮಾದ ಭಕ್ತಿ ತುಂಬಿರುವ ಜನಗಳೊಡನೆ ಹೆಜ್ಜೆ ಹಾಕಿ
ಚೌಕಾಶಿಗೊಗ್ಗುವ ಗೂಡಂಗಡಿಯಲಿ ನಿಂತು ಕಣ್ಣರಳಿಸಿದರೆ

ತಾರೇ ಜಮೀನ್ ಪರ್ ಆಗಿರುವ ರಾಶಿಯಲ್ಲಿ
ಡೋರೆಮಾನು ಶಕ್ತಿಮಾನು ಸೂಪರ್‌ಮ್ಯಾನು ದೊಡ್ಡ ಬಲೂನು
ಗಾಳಿ ತುಂಬಿದ ಮೀನು ಬೇಕಿದ್ದರೆ ಸಲ್ಮಾನ್ ಖಾನೂ
ಇರುವ ಈ ಸಮೂಹಸಿರಿಯಲ್ಲಿ ಏನನಾಯುವುದು ಏನ ಬಿಡುವುದು..
ಎಲ್ಲಿದೆಯದು ಮೊನಚಿನಂಚಿರದ ತೀರಗಡಸಿರದ ಅಲ್ಪಭಾರದ
ಬಣ್ಣ ಹೆಚ್ಚಿರುವ ಕಣ್ಸೆಳೆವ ಚಂದದೊಂದು ಗೊಂಬೆ?
ನನ್ನ ಮಗಳಿಗಾಗಿಯೇ ಮಾಡಿರುವ ಅಂದದೊಂದು ಬೊಂಬೆ?

ಜೇಬಿನಿಂದ ಕಾಸು ತೆಗೆದುಕೊಡುವಾಗ ನೆನಪಾಗುವುದು:
ಅಪ್ಪನೊಂದಿಗೆ ಸಾಗರದ ಜಾತ್ರೆಗೆ ಹೋಗುತ್ತಿದ್ದುದು
ಕಂಡಿದ್ದೆಲ್ಲ ಕೊಳ್ಳಬೇಕೆನಿಸುತ್ತಿದ್ದುದು
ಅಪ್ಪನ ಬಳಿ ಕೇಳಲು ಭಯ ಪಟ್ಟುಕೊಂಡಿದ್ದು
ಮನೆಯಲಿ ಕೊಟ್ಟ ಸ್ವಲ್ಪ ಹಣದಲ್ಲೇ ಇಡೀ ಜಾತ್ರೆ ಸುತ್ತಿದ್ದು
ಪೈಸೆಪೈಸೆ ಎಣಿಸಿ ಲೆಕ್ಕಾಚಾರ ಹಾಕಿ
ತಿಂದದ್ದು ಕೊಂಡದ್ದು ತೊಟ್ಟಿಲೇರಿ ಕೇಕೆ ಹಾಕಿದ್ದು
ಅಹೋರಾತ್ರಿ ಯಕ್ಷಾಗನ ನೋಡಿದ್ದು
ಕೊಂಡ ಆಟಿಕೆ ಮನೆಗೆ ಬರುವುದರೊಳಗೇ ಹಾಳಾಗಿ
ಎಲ್ಲರಿಂದ ಬೈಸಿಕೊಂಡದ್ದು

ಸುಲಭವಲ್ಲ ನೆನಪುಗಳುಕ್ಕಿ ಬರುವಾಗ
ಹಿಂದೋಡಿದ ಚಿತ್ತವ ಮರಳಿ ಸರಿದಾರಿಗೆ ತರುವುದು
ಅಂಗಡಿಯ ಮುಂದೆ ದಿಗ್ಮೂಢನಾಗಿ ನಿಂತಿರುವಾಗ
ಲಕ್ಷಜನಗಳ ನಡುವೆಯೂ ಏಕಾಂಗಿಯಂತನಿಸುವಾಗ
ಸುಲಭವಲ್ಲ ಸಂಭಾಳಿಸಿಕೊಳ್ಳುವುದು
ಸುಲಭವಲ್ಲ ಮಗಳಿಗೊಂದು ಗೊಂಬೆ ಕೊಳ್ಳುವುದು

Wednesday, November 08, 2017

ಹೇರ್‌ಬ್ಯಾಂಡ್

ನಿನಗೊಂದು ಹೇರ್‌ಬ್ಯಾಂಡ್ ಹಾಕಿಬಿಡೋಣ ಎಂದರೆ ಅದು ಅಸಾಧ್ಯ
ತಲೆಗೇರಿಸಿದ ಮರುಕ್ಷಣವೇ ನೀನದನ್ನು ನಿನ್ನ ಪುಟ್ಟ ಕೈಯಿಂದ ಕಿತ್ತು
ಕೆಲಕ್ಷಣ ಅದರೊಂದಿಗೆ ಆಟವಾಡಿ ಆಮೇಲೆ ಕಣ್ಣಿಗೆ ಕುಕ್ಕಿಕೊಂಡು
ಅತ್ತು ಕರೆದು ರಂಪ ಮಾಡಿ ಅಯ್ಯೋ ತಪ್ಪೆಲ್ಲಾ ನಮ್ಮದೇ
ಎನಿಸುವಂತೆ ಮಾಡುತ್ತೀ. ನಿನಗಿಷ್ಟವಾಗದ ಯಾವುದನ್ನೂ
ನಮ್ಮಿಂದ ಮಾಡಲಾಗಿಲ್ಲ ಇದುವರೆಗೂ.
ನಿನಗೆ ಹಸಿವಾದಾಗಲೇ ಉಣ್ಣುತ್ತೀ,
ನಿದ್ರೆ ಬಂದಾಗಲೇ ನಿದ್ರಿಸುತ್ತೀ,
ನಗು ಬಂದರೆ ಮಾತ್ರ ನಗುತ್ತೀ,
ನೋವಾದ ಕ್ಷಣ ಹಿಂದೆಮುಂದೆ ನೋಡದೇ ಅಳುತ್ತೀ.

ನಾವೆಷ್ಟು ಕಷ್ಟ ಪಟ್ಟಿಲ್ಲ ನಮ್ಮ ಸಮಯಕ್ಕೆ ನಿನಗೂ ಉಣಿಸಲು,
ನಾವು ನಿದ್ರಿಸುವಾಗಲೇ ನಿನ್ನನ್ನೂ ಮಲಗಿಸಲು,
ನಮಗೆ ಖುಷಿಯಾಗಬೇಕೆಂದಾಗ ನಿನ್ನ ನಗಿಸಲು,
ಗದ್ದಲವಾಗಬಾರದೆಂದು ನಿನ್ನನ್ನು ಸುಮ್ಮನಿರಿಸಲು...
ಊಹುಂ. ನೀನು ಯಾರ ಸೋಗಿಗೂ ಸೊಪ್ಪು ಹಾಕದ ಸೊಕ್ಕಿನ ಮೂಟೆ.

ಅನಿಸುತ್ತದೆ ಎಷ್ಟೋ ಸಲ ನಿನ್ನಂತೆಯೇ ಇರಬೇಕೆಂದು
ಹೇಳಬೇಕೆನಿಸಿದ್ದನ್ನು ಆ ಕ್ಷಣವೇ ಉಸುರಿಬಿಡಬೇಕೆಂದು
ಮಾಡಬೇಕೆನಿಸಿದ್ದನ್ನು ಮಣಿಯದೆ ಮುಗಿಸಿಬಿಡಬೇಕೆಂದು
ಉಕ್ಕಿ ಬರುವ ನಗೆಯ ಬಾಯ್ಬಿಟ್ಟು ಹರಡಬೇಕೆಂದು
ಅಂಚಿಗೆ ಬಂದ ಕಣ್ಣೀರ ತಡೆಹಿಡಿಯಬಾರದೆಂದು

ಸಂಸ್ಕಾರದುಪದೇಶಗಳು ಅಡ್ಡಿಯಾಗುತ್ತವೆ ಮಾರಾಯ್ತಿ...
ಕಾಣದ ಕೈಗಳು ಅದೃಶ್ಯ ಅಲಗುಗಳು ಮರ್ಯಾದೆ ಮೊಗಗಳು
ಮುಂದೆ ಬರುತ್ತವೆ, ಹೆದರಿಸುತ್ತವೆ, ಹಿಮ್ಮೆಟ್ಟಿಸುತ್ತವೆ
ಮುಗ್ಧತೆಯ ಕಳೆವ ತಿಳುವಳಿಕೆಯ ಹೆಜ್ಜೆಗಳಿಗೆ ಅಡಿಗಡಿಗೂ ತೊಡರು.
ಲೆಕ್ಕಿಸದೆ ದಾಟಿದರೆ ಮೊಂಡನೆಂಬ ಬಿರುದು.

ಅಗತ್ಯವೋ ಅನಗತ್ಯವೋ ತಥ್ಯವೋ ಪಥ್ಯವೋ-
ಸಿಕ್ಕಿದ್ದನ್ನೆಲ್ಲ ಆರೋಪಿಸಿಕೊಂಡು ತಲೆಗೇರಿಸಿಕೊಂಡು
ತಲೆಭಾರವಾಗಿ ಕಣ್ಣು ಮಂಜಾಗಿ ಬುದ್ಧಿ ಮಂಕಾಗಿ 
ಸರಿ-ತಪ್ಪುಗಳ ಲೆಕ್ಕಾಚಾರದಲ್ಲೇ ದಿನ ಕಳೆದು
ಅಧೀನನಾಗುತ್ತ ಆಸೆಗಳ ಹಿಂಡಿನ ತುಳಿತಕ್ಕೆ
ಅಧೀರನಾಗುತ್ತ ಮುಂಬರುವ ಅಂತರಾಯಗಳ ಶಂಕೆಯಲ್ಲಿ
ಸರಳ ಪ್ರಕ್ರಮಗಳನೂ ಕಠಿಣಗೊಳಿಸಿಕೊಂಡು
ಗೊಂದಲಪುರಿಯಲಿ ಸಿಲುಕಿ ಒದ್ದಾಡುತ್ತಾ ನಿನ್ನತ್ತ ನೋಡಿದರೆ 

ಹೇರ್‌ಬ್ಯಾಂಡ್ ಏನು, ಚಳಿಯಾಗುತ್ತದೆಂದು ಅಮ್ಮ ತೊಡಿಸಹೊರಟ
ಟೊಪ್ಪಿಯನ್ನೂ ಕಿತ್ತೆಸೆದು ತಂಗಾಳಿಯನಾಸ್ವಾದಿಸುತ್ತ
ಸ್ವಚ್ಛಂದ ಆಡುತ್ತಿರುವೆ ನೀನು.
ಮಲಗಿದಲ್ಲೇ ತೇಲುತ್ತಿರುವೆ ಹಗುರನನುಭವಿಸುತ್ತ.
ನೆಲದಲ್ಲೇ ಈಜುತ್ತಿರುವ ನಿನ್ನ ಕಲ್ಪನೆಯೊಳಗಿನ ಸರೋವರ-
ಅದೆಷ್ಟು ಶಾಂತವಿರಬಹುದು

-ಎಂದೆನಿಸಿ, ನಿನ್ನೆಡೆಗೆ ಮುದ್ದುಕ್ಕಿ ಬಂದು,
ಎತ್ತಿ ತಲೆ ಮೇಲೆ ಕೂರಿಸಿಕೊಂಡರೆ-
ಅಪ್ಪಾ, ನನ್ನನ್ನೂ ತಲೆಗೇರಿಸಿಕೊಳ್ಳಬೇಡ,
ಕೆಳಗಿಳಿಸು ಅಂತ‌ ಕೂದಲೆಳೆದು ಹೇಳುತ್ತಿರುವೆ;
ನಾನು ಕಣ್ಕಣ್ಬಿಟ್ಟು ನೋಡುತ್ತಿರುವೆ.

Saturday, October 07, 2017

ಮಳೆ

ಈ ಮಳೆ ನಿಲ್ಲುವುದೇ ಇಲ್ಲ
ಹೀಗೇ ಇನ್ನೂ ನೂರಾರು ದಿವಸ ಮಾಸ
ಸಂವತ್ಸರಗಳವರೆಗೆ ಎಡಬಿಡದೆ ಸುರಿವುದು
ಋತುಗಳು ಲೆಕ್ಕ ತಪ್ಪಿ ಮಳೆನಕ್ಷತ್ರಗಳು ದಿಕ್ಕಾಪಾಲಾಗಿ
ಹಗಲು ರಾತ್ರಿ ಬಿಸಿಲು ಚಳಿ ಇಬ್ಬನಿ ಗಾಳಿಗಳೆಲ್ಲ
ಮಳೆಯೊಡಲೊಳಗೆ ಹುದುಗಿ ಕಳೆದುಹೋಗಿ

ನಗರದ ನೆಲಕ್ಕಂಟಿದ ಟಾರು-ಕಾಂಕ್ರೀಟೆಲ್ಲ ಸಂಪೂರ್ಣ ಕಿತ್ತುಬಂದು
ಮಣ್ಣಿನೆಷ್ಟೋ ಅಡಿಯಾಳದಲ್ಲಿ ಅದೆಷ್ಟೋ ವರ್ಷದ ಹಿಂದೆ
ಹುದುಗಿದ್ದ ಸಜೀವ ಬೀಜಗಳು ಮೊಳಕೆಯೊಡೆದು ಮೇಲೆದ್ದು
ಉದ್ಯಾನನಗರಿಯ ತುಂಬೆಲ್ಲ ಹಸಿರು ಮೇಳಯಿಸಿ
ನೀರಲ್ಲಿ ನಿಂತು ನಿಂತು ಫ್ಲೈ‌ಓವರಿನ ಕಾಲುಗಳು ಗ್ಯಾಂಗ್ರಿನ್ನಿಗೊಳಗಾಗಿ
ವಾಹನಗಳ ಟಯರುಗಳು ಜಲಪಾದಗಳಾಗಿ ಬದಲಾಗಿ
ಎತ್ತರದ ಕಟ್ಟಡಗಳು ಗುಡ್ಡಗಳೆಂದೂ
ಅಗಲ ಕಟ್ಟಡಗಳು ದ್ವೀಪಗಳೆಂದೂ ಹೆಸರು ಮಾಡಿ
ನೀರು ನಗರದೊಳಗೋ ನಗರ ನೀರೊಳಗೋ ಎಂಬಂತಾಗಿ

ಮನುಷ್ಯನೆಂಬ ಜೀವಿ ನೀರಲ್ಲೂ ದಡದಲ್ಲೂ ಬದುಕಬಲ್ಲ
ಉಭಯಚರವಾಗಿ ಪರಿವರ್ತಿತಗೊಂಡು
ಆಗೀಗ ತೇಲಿಬರುವ ನೋಟಿನ ಕಂತೆಗಳನ್ನೇ ತಿಂದು ಬದುಕುತ್ತ
ಹೊಟ್ಟೆ ಡೊಳ್ಳಾಗಿ ದೇಹ ತಿಮಿಂಗಿಲವಾಗಿ ಬೆಳೆದು
ಸಣ್ಣಪುಟ್ಟ ಜೀವಿಗಳ ಬೆದರಿಸಿ ಮೆರೆದು
ನೀರಲ್ಲು ಬಡಾವಣೆಗಳ ರಚಿಸಿ, ಜಾಗ ಸಿಕ್ಕಲ್ಲೆಲ್ಲ ದೊರಗು ಕೊರೆದು
ಗುಡ್ಡಬೆಟ್ಟಗಳನೊಂದೊಂದಾಗಾಕ್ರಮಿಸಿ ಹಕ್ಕು ಸ್ಥಾಪಿಸಿ
ಗದ್ದುಗೆಯ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕೂತು
ತಿರುವಿ ಒದ್ದೆ ಮೀಸೆಯ, ಕಪ್ಪು ಕನ್ನಡಕದೊಳಗಿಂದ ಮೇಲೆ ನೋಡುವನು

ಆಗ ಕೇಳುವುದು ಅಶರೀರವಾಣಿ, ಮೋಡದೊಳಗಿಂದ ಹೊರಟ
ಕಿರಣದಂತೆ: ಯದಾ ಯದಾಹಿ ಧರ್...

ದನಿ ಕೇಳಿದ್ದೇ ಥರಥರ ನಡುಗಿ
ನೀರೊಳಗೆ ಮುಳುಗಿ ತಲೆಮರೆಸಿಕೊಂಡು
ಬೆಮರುವನು ನೀರೊಳಗು ನೆನಪಾದಂತೆ ಹಳೆಯದೆಲ್ಲ
ಸುರಿವುದಾಗ ಸಂತಾಪ-ಪಶ್ಚಾತ್ತಾಪಗಳು ಥೇಟು ಮಳೆಯಂತೆ.

Thursday, September 21, 2017

ಆ ಹಕ್ಕಿಯಾಗಬೇಕೆಂದರೆ

ಮುಂದಿನ ಜನ್ಮವೊಂದಿದ್ದರೆ ನಾನು ಅಮೆಜಾನ್ ಮಳೆಕಾಡಿನಲ್ಲಿ
ನೇರಳೆ ಬಣ್ಣದ ರೆಕ್ಕೆಗಳ ಪಾರಿವಾಳವಾಗಿ ಹುಟ್ಟುವೆ
ಬಿಸಿಲಿನ ಕುಡಿಯೂ ತಲುಪದ ದಟ್ಟಾರಣ್ಯದ ನಡುವೆ ಹಬ್ಬಿದ
ಬಿದಿರುಮೆಳೆಗಳ ನಡುವೆ ಪರ್ಣಪಾತಕ್ಕಭಿಮುಖವಾಗಿ
ನನ್ನ ರೆಕ್ಕೆಗಳ ಪುಟುರ್ರನೆ ಬಡಿದು ಮೇಲೆ ಹಾರುವೆ
ನೆಲಕಾಣದ ಪರಿ ಎಲೆಹಾಸಿದ ಮೆತ್ತೆಯಲಿ ಕೂತು
ರಾಗವಾಗಿ ಗುಟುರು ಹಾಕಿ ಸಂಗಾತಿಯ ಕರೆವೆ
ಇಳಿಸಂಜೆಗೆ ಕಳೆಕಟ್ಟುವ ಜೀರುಂಡೆಯ ಸಂಗೀತಕೆ
ತುಸುನಾಚಿದ ಅವಳೆದೆಯಲಿ ಪ್ರೇಮದುಸಿರು ತುಂಬುವೆ
ದೊಡ್ಡ ಮರದ ಬುಡದಲಿ ಗೂಡೊಂದು ಕಟ್ಟಿ
ಅವಳಿಟ್ಟ ಮೊಟ್ಟೆಗಳ ಜತನದಿಂದ ಕಾಯುವೆ
ರೆಕ್ಕೆ ಬಲಿಯದ ಮರಿಗಳಿಗೆ ತೊದಲುಹೆಜ್ಜೆ ಕಲಿಸುವೆ
ಅಳಿವಿನಂಚಿನ ನಮ್ಮ ಸಂತತಿ ಮತ್ತೆ ಬೆಳೆವುದ ನೋಡುವೆ

ಇಂದಿನಿಂದಲೇ ದುಡಿಯಬೇಕಿದೆ ಅಂಥ ಕನಸಿನ ತುಡಿತಕೆ
ಬಿದಿರ ಹೂವನೆಲ್ಲ ಆಯ್ದು, ಒಡಲ ಬೀಜ ಸೋಸಿ ತೆಗೆದು
ಆ ಪಾರಿವಾಳದ ಗುಂಪನು ಹುಡುಕಿ ಹೊರಡಬೇಕಿದೆ
ಕಾಡ ಕಡಿವ ಕೊಡಲಿ ಹಿಡಿದ ಕೈಯ ತಡೆಯಬೇಕಿದೆ
ಮಾಡಬೇಕಿದೆ ಋಜುತ್ವದಿಂದ ಆ ಕಪೋತದಳಿವು
ನಮ್ಮ ಲೋಭದಿಂದ ಆಗದಂತೆ ತಡೆವ ನಿರ್ಧಾರ
ಪುನರವತರಿಸಲು ಹಕ್ಕಿಯಾಗಿ ಆಗಬೇಕೀಗಲೇ ನಿರ್ಭಾರ.

[ನೇರಳೆ ಬಣ್ಣದ ರೆಕ್ಕೆಗಳ ಪಾರಿವಾಳ (Purple-winged ground dove) ಎಂಬುದು ಅಮೆಜಾನ್ ಕಾಡಿನಲ್ಲಿ ವಿರಳವಾಗಿ ಕಾಣಸಿಗುವ, ಈಗ ಅಳಿವಿನಂಚಿನಲ್ಲಿರುವ ಒಂದು ಪಕ್ಷಿ. ಸಾಮಾನ್ಯವಾಗಿ ಬಿದಿರಿನ ಮೆಳೆಯಲ್ಲಿ ವಾಸಿಸುವ ಇವು, ಹೆಚ್ಚಾಗಿ ಬಿದಿರಿನ ಬೀಜವನ್ನು ತಿಂದು ಬದುಕುತ್ತವೆ. ಬಿದಿರು ಹೂ ಬಿಡುವುದು-ಬೀಜವಾಗುವುದು ಎಷ್ಟೋ ವರ್ಷಗಳಿಗೆ ಒಮ್ಮೆಯಾದ್ದರಿಂದ ಮತ್ತು ಅರಣ್ಯನಾಶದಿಂದ ಬಿದಿರು ವಿರಳವಾಗುತ್ತಿರುವುದರಿಂದ ಈ ಹಕ್ಕಿಗಳು ವಿನಾಶದಂಚಿನಲ್ಲಿವೆ ಎನ್ನಲಾಗಿದೆ.]

Friday, August 18, 2017

ಅಣಿಮಾ

ಟೆರೇಸಿನ ಮೇಲೊಂದು ಚಾಪೆ ಹಾಸಿ
ನಕ್ಷತ್ರಾಚ್ಛಾದಿತ ಆಕಾಶವನ್ನು ನೋಡುವುದು ಒಂದು ಕ್ರಮ
ಅದಕ್ಕೆ‌ ಎರಡು ಕಣ್ಣು ಸಾಕು
ಆದರೆ ಆಸ್ವಾದಿಸಲು ಹೃದಯ ಬೇಕು
ಮತ್ತದು ಆಕಾಶದಷ್ಟೇ ವಿಶಾಲವಿರಬೇಕು
ಪುಂಜಗಳ ಗುರುತು ನೆನಪಿಟ್ಟುಕೊಂಡು
ಅವು ರಾತ್ರಿ ಬೆಳಗಾಗುವುದರೊಳಗೆ ದಿಗ್ಪರ್ಯಟನ ಮಾಡುವಾಗ
ಬೆಂಬಿಡದೆ ಹಿಂಬಾಲಿಸಲು ಸಿದ್ಧವಿರಬೇಕು
ಉಲ್ಕೆಗಳು ಜಾರಿ ಬೀಳುವಾಗ ಅಂಗೈ ಚಾಚಿ
ಮುಷ್ಟಿಯೊಳಗೆ ಹಿಡಿವುದೂ ಒಂದು ಕಲೆ
ಇಲ್ಲದಿರೆ, ಅವು ಎದೆ ಹೊಕ್ಕು ದೊಡ್ಡ ರಂಧ್ರ ಮಾಡಿ,
ಅಯ್ಯೋ! ರಕ್ತ ರಾಮಾಯಣ!

'ಫೋಕಸ್! ಫೋಕಸ್ ಮುಖ್ಯ' ಅನ್ನುವರು ತಿಳಿದವರು.
ದಿಟವೇ. ಲೆನ್ಸಿನ ಮೂತಿಯನೆತ್ತ ತಿರುಗಿಸುತ್ತಿದ್ದೇನೆ,
ಹಿಂದೆರೆ ಮುಖ್ಯವೋ, ಹತ್ತಿರದ ವಸ್ತು ಮುಖ್ಯವೋ
ಎಂಬುದರ ಸ್ಪಷ್ಟ ಪರಿಕಲ್ಪನೆಯಿರದಿದ್ದರೆ ನೀನು
ಕೆಮೆರಾ ಹಿಡಿದಿದ್ದೂ ದಂಡ.
ದಂಡ ಕದಲದಂತೆ ಬಿಗಿಹಿಡಿದಿರುವುದೇ
ಇಲ್ಲಿ ಉತ್ಕೃಷ್ಟತೆಗೆ ಮಾನದಂಡ.

ಜೂಮ್ ಮಾಡಬೇಕು ಬೇಕಾದ್ದರೆಡೆಗೆ ಮಾತ್ರ.
ಹಾಂ, ಹಾಗೆ ಲಕ್ಷನಕ್ಷತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಾಗ
ಜ್ಯೋತಿರ್ವರ್ಷಗಳ ಬಗ್ಗೆಯೂ ಅರಿವಿರಬೇಕು.
ಲೆಕ್ಕಾಚಾರವಿಲ್ಲದೆ ಬರಿಕಾಂತಿಯ ಹಿಂಬಾಲಿಸಿ ಹೊರಟ
ಎಷ್ಟು ರಾಕೆಟ್ಟುಗಳು ಅಂತರಿಕ್ಷದಲ್ಲಿ ಕಳೆದುಹೋಗಿವೆಯೋ,
ಲೆಕ್ಕಕ್ಕಿಲ್ಲ!

ಅದಕ್ಕೇ ಹೇಳುತ್ತಿದ್ದೇನೆ, ಮೃದುಮನದ ಹುಡುಗನೇ, ಕೇಳು:
ನಕ್ಷತ್ರಗಳ ಅನುಸರಿಸುವುದು ಸುಲಭವಲ್ಲ.
ಇಕೋ, ಇಲ್ಲಿದೆ ಒಂದು ಅಮೀಬಾ. ಏಕಕೋಶ ಜೀವಿ.
ಈ ಸೂಕ್ಷ್ಮದರ್ಶಕವ ತೆಗೆದುಕೋ.
ತಲೆ ತಗ್ಗಿಸು. ಕಣ್ಣು ಕಿರಿದಾಗಿಸಿ ನೋಡು.
ಹೇಗದು ತನ್ನ ಕೈಕಾಲುಗಳನ್ನು ಚಾಚಿ ನಿನ್ನತ್ತಲೇ ಬರುತ್ತಿದೆ ಗಮನಿಸು.
ಉಸಿರು ಬಿಗಿಹಿಡಿ. ಅಂತರಂಗ ಬಹಿರಂಗಗಳ ಶುದ್ಧಿಗೊಳಿಸಿ
ಸೆಟೆದು ನಿಲ್ಲು. ತನ್ನ ಚಲನಕ್ರಮದಿಂದಲೇ ಅದು
ಹೊರಡಿಸುವ ಕಾಕಲಿಗೆ ಕಿವಿಯಾಗು.
ನವೀನ ನವಿರೋದಯವನನುಭವಿಸು.
ನಿಧಾನಕ್ಕದರಲೆ ಲೀನವಾಗು.

Tuesday, August 15, 2017

ನೆಪ್ಚೂನ್

ನಿಂತ ಗಡಿಯಾರ ತೋರಿಸಿದ ಸಮಯವೇ ಸರಿ
ಎಂದುಕೊಂಡರೂ ನೀನು ಬಂದಿದ್ದು ತಡವಾಗಿಯೇ.
ಹಾಗೆ ಇದ್ದಕ್ಕಿದ್ದಂತೆ ಕನ್ನಡಿಯಿಂದ ಹೊರಬಂದು
ಮುಖಕ್ಕೆ ಮೈಕು ಹಿಡಿದು ನಿಮ್ಮ ಟೂತ್‌ಪೇಸ್ಟಿನಲ್ಲಿ ಉಪ್ಪು ಇದೆಯೇ
ಎಂದು ಕೇಳಿದರೆ ಏನು ಹೇಳುವುದು?
ಉತ್ತರಿಸಲು ತಯಾರಾಗಿ ಬಂದ ಪ್ರಶ್ನೆಗಳನ್ನು ಎದುರಿಸುವುದೇ
ದುಸ್ತರವಾಗಿರುವಾಗ ಹೀಗೆ ಧುತ್ತನೆ ಎರಗಿದರೆ?
ಹಲ್ಲುಜ್ಜಿ ಯಾವ ಕಾಲವಾಯಿತೋ ಎನಿಸುತ್ತಿರುವ ಈ ಮುಂಜಾನೆ,
ಎಂದೋ ಕಾಡಿದ್ದ ಹಲ್ಲುನೋವು, ಮಾಡಿಸಿದ್ದ ರೂಟ್‌ಕೆನಾಲು,
ನುಂಗಿದ್ದ ಮಾತ್ರೆಗಳು, ನಿರ್ನಿದ್ರೆ ರಾತ್ರಿಗಳು
ಎಲ್ಲಾ ಒಟ್ಟಿಗೇ ನೆನಪಾಗಿ, ಇಡೀ ಜಗತ್ತೇ ಹಳದಿಗಟ್ಟಿದಂತೆನಿಸಿ..

ಅದು ನಿಜವೇ. ಅರ್ಧ ತುಂಬಿದ ನೀರೋ, ಮಣ್ಣೊಳಗಿಳಿದ ಬೇರೋ
ಇದ್ದರಷ್ಟೇ ಅದಕೊಂದರ್ಥವೆಂದುಕೊಂಡಿದ್ದವಗೆ
ಬೆರಳಿಂದ ಬಡಿದರೆ ಠಣ್ಣೆನ್ನುವ ಪಿಂಗಾಣಿಯು
ತಾನು ಸ್ವಯಂಸುಂದರಿಯೆಂದು ಶೋಕೇಸಿನಿಂದ
ಪೋಸು ಕೊಡುವವರೆಗೆ ನನಗೂ ಗೊತ್ತಿರಲಿಲ್ಲ:
ಹೂಜಿ-ಹೂದಾನಿಗಳು ಬರಿ ಚಂದಕ್ಕೆಂದು.

ರ್ಯಾಪಿಡ್ ಫೈರ್ ರೌಂಡಿನ ಪ್ರಶ್ನೆಗಳಿಗೆ ಸೆಲೆಬ್ರಿಟಿಗಳು ಕೊಡುವ
ತಮಾಷೆಯ ಉತ್ತರಗಳೇ ವಿವಾದಗಳನ್ನೆಬ್ಬಿಸುವಾಗ,
ಕರೆ ಮಾಡಿ ಬಂದವರ ಉಪಚರಿಸುವ ಮುನ್ನ ಫ್ರಿಜ್ಜಿನಲ್ಲಿ
ಹಾಲಿದೆಯೇ ಇಲ್ಲವೇ ಎಂದು ಯೋಚಿಸಿ ನಂತರ
ಆಯ್ಕೆಗಳನಿಡುವ ಜಾಗರೂಕ ಸ್ಥಿತಿಗೆ ತಲುಪಿರುವ
ನನ್ನ ಮೇಲೆ ಹೀಗೆ ಏಕಾಏಕಿ ಎರಗಿದರೆ ಹೇಗೆ?

ಕಾದಿದ್ದಾಗ ಬಾರದೆ ಎಡಹೊತ್ತಿಗೆ ಬಂದು
ಆಗಲಿಂದ ಒಂದೇ ಸಮನೆ ಮಾತಾಡುತ್ತಿದ್ದೀ,
ಇಲ್ಲಸಲ್ಲದ ಪ್ರಶ್ನೆ ಕೇಳುತ್ತಿದ್ದೀ.
ಎಲ್ಲ ತಿಳಿದವ ನಾನಾಗಿದ್ದರೆ ಇನ್ನೆಲ್ಲೋ ಇರುತ್ತಿದ್ದೆ.
ಹೊರಡು ಸಾಕು. ಇದೇ ಸೌರಮಂಡಲದಲ್ಲಿ ನೆಪ್ಚೂನ್ ಎಂಬುದೊಂದು
ಗ್ರಹವಿದೆಯಂತೆ, ನಾನಿನ್ನೂ ಅದನ್ನು ನೋಡಿಯೇ ಇಲ್ಲ.

[ಕನ್ನಡ ಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ]

Tuesday, August 08, 2017

ಗುಡ್ಡೆಗರಕು

ಕ್ಯಾಲೆಂಡರಿನ ಮೇ ತಿಂಗಳ ಹಾಳೆ
ಅದೊಂದು ಧಗಧಗಗುಟ್ಟುವ ಉರಿಪುಳ್ಳೆ
ತೋಟ-ಗದ್ದೆಗಳಿಂದ ವಾಪಸಾಗುತ್ತಿರುವ ಜನರು
ರಜೆಯ ಮಜದಲಿ ಅಂಗಳದಲ್ಲಾಡುತ್ತಿರುವ ಚಿಣ್ಣರು
ಸಂಜೆಯಾದರೂ ಇಳಿಯುತ್ತಿರುವ ಬೆಮರು
ಜತೆಗೆ, ಎತ್ತಲಿಂದಲೋ ಮೂಗಿಗಡರುತ್ತಿರುವ ಬೆಂಕಿಯ ಕಮರು...

ಎಲ್ಲಿಂದ ಎಲ್ಲಿಂದ? ತೋಟದ ಆಚೆದಿಂಬದಿಂದಲೇ?
ಮೇಲುಹಿತ್ತಿಲ ಹಿಂದಣ ಬಂಡಿಹಾದಿಯ ಬಳಿಯಿಂದಲೇ?
ಮೈಲು ದೂರದ ಕರಡದ ಬ್ಯಾಣದಿಂದಲೇ?
ಇಳಿಸಂಜೆಗೆ ಆತಂಕವ ತುಂಬುತ್ತಿರುವ ಈ ಘಮದ ಗಮನವೆಲ್ಲಿಂದ?

ಕತ್ತು ಸುತ್ತ ತಿರುಗಿಸಿ ಮೂಗರಳಿಸಿ ಗ್ರಹಿಸಬೇಕು..
ಎತ್ತರದ ದಿಣ್ಣೆಯನ್ನೇರಿ ತುದಿಗಾಲಲ್ಲಿ ನಿಂತು ನೋಡಬೇಕು
ಸೂರ್ಯ ಮುಳುಗಿ ತಾಸು ಕಳೆದರೂ
ಪಡುವಣವಲ್ಲದ ಅಕೋ ಆ ದಿಗಂತದಲ್ಲೇನದು ಕೆಂಪುಕೆಂಪು?
ಓಹೋ, ಅಲ್ಲೇ ಅಲ್ಲೇ ಅಲ್ಲಿಂದಲೇ
ಗಾಳಿಯಲ್ಲಿ ಹಾರಿ ಬರುತ್ತಿರುವ ಬೂದಿಚೂರುಗಳು
ಹಿಡಿದರೆ ಅಪ್ಪಚ್ಚಿ, ಆದರಿನ್ನೂ ಇದೆ ಒಡಲಲ್ಲಿ ಸ್ವಲ್ಪ ಬಿಸಿ

ಕಂಡುಹಿಡಿದಾದಮೇಲೆ ಮೂಲ, ಇನ್ನು ಓಟ ಜರೂರು
ಊರವರೆಲ್ಲ ಹೌಹಾರಿ ಗದ್ದಲವೆಬ್ಬಿಸಿ ಕೈಗೆ ಸಿಕ್ಕಿದ
ಕೊಡ ಬಕೇಟು ಕೌಳಿಗೆ ಚೊಂಬು ಕ್ಯಾನು ದೊಡ್ಡ ಉಗ್ಗ ಹಿಡಿದು..
ತೊಟ್ಟಬಟ್ಟೆಯಲ್ಲೇ ಆತುರಾತುರವಾಗಿ ಓಡುವ ಗಂಡಸರು;
ತಾವೂ ನೆರವಿಗೆ ಬರುವೆವೆನ್ನುವ ಹೆಂಗಸರು
ಅಲ್ಲೇ ದಾರಿ ಬದಿ‌ ಬಗ್ಗಿದ ಮರದ ಹಸಿಹಸಿ ಸೊಪ್ಪಿನ ಚಂಡೆ
ಕತ್ತಿಯಿಂದ ಕಡಿದು, ಊರಿಗೂರೇ ವೀರಾವೇಷದಿಂದ
ಸೇನೆಯಂತೆ ನುಗ್ಗಿ ಆಕ್ರಮಿಸಿ ರಣರಂಗ

ಬ್ಯಾಣದ ಆಚೆತುದಿಯಿಂದ ಹಬ್ಬುತ್ತಿರುವ ಬೆಂಕಿ..
ಗಾಳಿಗೆ ಚುರುಕುಗೊಳ್ಳುತ್ತ ಪೊದೆಯಿದ್ದಲ್ಲಿ ಆಕಾಶದೆತ್ತರಕ್ಕೆದ್ದು
ನಡುವೆಲ್ಲೋ ಗುಪ್ತಗಾಮಿನಿಯಂತೆ ನೆಲಮಟ್ಟದಲಿ ಹರಿದು
ಬುಕ್ಕೆಗಿಡ-ಕೌಳಿಮಟ್ಟಿಗಳ ಹಸಿರೆಲೆಗಳ ದಳದಳ ಕೆಂಪಾಗಿಸುತ್ತ
ಊರತ್ತಲೇ ಧಾವಿಸುತ್ತಿರುವಂತೆನಿಸುತ್ತಿರುವ ಅಗ್ನಿಯಟ್ಟಹಾಸ

ಯಾರು ಬೀಡಿ ಹಚ್ಚಿ ಎಸೆದ ಕಡ್ಡಿಯೋ
ಯಾರು ಬೇಕಂತಲೇ ಎಸಗಿದ ದುಷ್ಕೃತ್ಯವೋ
ತಾನಾಗಿಯೇ ಹೊತ್ತಿಕೊಂಡ ಪ್ರಕೃತಿಮಾಯೆಯೋ
ಬೈದುಕೊಳ್ಳುತ್ತಲೇ ಕಾಣದ ಕೈಗಳ, ಶಪಿಸುತ್ತಲೇ ವಿಧಿಯ
ಹರಕೆ ಹೊರುತ್ತಲೇ ಆಗದಿರಲೆಂದು ಯಾವುದೇ ಅನಾಹುತ
ಪ್ರಾರ್ಥಿಸುತ್ತ ಅಗ್ನಿದೇವನ ಶಮನವಾಗಲೆಂದು ಕೋಪ

ಕೊಡ ಬಕೇಟು ಬಿಂದಿಗೆಗಳಿಂದ ಎರಚಿ ಎರಚಿ ನೀರು
ಹಸಿಸೊಪ್ಪ ಹೆಣಿಕೆಯಿಂದ ಬಡಿಬಡಿದು ಬೆಂಕಿಮೈಗೆ
ದೊಡ್ಡಮರಗಳಿಗೆ ತಗುಲದಂತೆ ಬುಡ ಬಿಡಿಸಿಕೊಡುತ
ಮಸಿಮೆತ್ತಿದ ಲುಂಗಿ-ಬನೀನುಗಳ ವೀರರು;
ಒದ್ದೆನೈಟಿ-ಸೀರೆಗಳ ರಣಚಂಡಿಯರು
ತಾಕುವ ಬಿಸಿಯ ಲೆಕ್ಕಿಸದೆ
ಸುಡುವ ಅಂಗಾಲುರಿಯ ನಿರ್ಲಕ್ಷಿಸಿ
ಅಪ್ಪಳಿಸುವ ಝಳಕ್ಕೆ ಬೆದರದೆ
ಸಮರೋಪಾದಿಯಲ್ಲಿ ಇಡೀ ಊರ ಜನ ಒಂದಾಗಿ
ಪರಸ್ಪರ ನೆರವಾಗುತ್ತ, ದಾರಿಹೋಕರೂ ಸೇರಿಕೊಳ್ಳುತ್ತ...

ಯಜ್ಞವನ್ನು ನಿಲ್ಲಿಸುವುದೂ ಒಂದು ಯಜ್ಞ.
ಬೇಕದಕ್ಕೆ ರಾಕ್ಷಸಬಲ. ನೂರಾರು ಕೈ.
ದೂರದ ಬಾವಿಯಿಂದ ನೀರ ಹೊತ್ತುತರಲು ಗಟ್ಟಿರಟ್ಟೆ.
ಏದುಸಿರು ಬಿಡುತ್ತಲೇ ಓಡಲು ಕಾಲಲ್ಲಿ ನೆಣ.
ಬಿಂದಿಗೆಯನು ಒಬ್ಬರಿಂದೊಬ್ಬರಿಗೆ ದಾಟಿಸಲು ಒಕ್ಕೂಟ ವ್ಯವಸ್ಥೆ.
ಎತ್ತಲಿಂದ ಎರಗಿದರೆ ಆಕ್ರಮಣವ ತಡೆಯಬಹುದೆಂಬುದ
ಅಂದಾಜಿಸಲು ಸಮರ್ಥ ತಂತ್ರ.
ಜ್ವಾಲೆಯ ಹೊಡೆತವನ್ನೆದುರಿಸಿ ನುಗ್ಗಲು ದಿಟ್ಟ ಗುಂಡಿಗೆ.

ಹಾಗೆಂದೇ, ಅಲ್ಲೀಗ ಯುದ್ಧ ಗೆದ್ದ ನಿರಾಳ..
ಗಂಟೆಗಟ್ಟಲೆ ಹೋರಾಟದ ತರುವಾಯ
ಕಪ್ಪುಬಯಲ ಹಿಂದೆಬಿಟ್ಟು ವಾಪಸಾಗುವಾಗ ನಿಟ್ಟುಸಿರು
ಊರನುಳಿಸಿಕೊಂಡ, ಹೊಲ-ಗದ್ದೆ-ತೋಟ-ಮನೆಗಳ
ಸುಡಗೊಡದೆ ಹೋರಾಡಿ ಜಯಿಸಿದ ನಿರುಮ್ಮಳ
ಮನೆಮನೆಗಳ ನಡುವಿನ ಸಣ್ಣಪುಟ್ಟ ಜಗಳಗಳ
ವೈಮನಸ್ಸುಗಳ ಮರೆತು ಒಂದಾಗಿ ಆಪತ್ತನೆದುರಿಸಿದ ಖುಷಿ
ತಬ್ಬಿಕೊಳ್ಳುತ್ತಿದ್ದಾರೆ ಒಬ್ಬರನ್ನೊಬ್ಬರು
ಬಾಷ್ಪಕೆ ಕಾರಣ ಕಣ್ಣಿಗೆ ಹೊಕ್ಕ ಹೊಗೆ ಎಂದು ಸುಳ್ಳೇ ಹೇಳುತ್ತಿದ್ದಾರೆ
ಎಂದೂ ಹೊಗದ ಮನೆ ಹೊಕ್ಕು ಹದಮಜ್ಜಿಗೆ ಬೆರೆಸಿ ಕುಡಿಯುತ್ತಿದ್ದಾರೆ
ಸುಮ್ಮಸುಮ್ಮನೆ ನಗುತ್ತಿದ್ದಾರೆ
ಮುಂದಿನ ವರ್ಷ ಬೇಸಿಗೆಗೂ ಮುನ್ನವೇ ಗುಡ್ಡೆಗರಕು
ತೆಗೆದುಬಿಡಬೇಕೆಂದು ಮಾತಾಡಿಕೊಳ್ಳುತ್ತಿದ್ದಾರೆ.

ಇನ್ನೂ ಸಣ್ಣಗೆ ಹೊಗೆಯಾಡುತ್ತಿರುವ ಬ್ಯಾಣದ
ಕಪ್ಪು ನೆಲದ ಮೇಲೀಗ ಸುರಿಯುತ್ತಿರುವ ಇಬ್ಬನಿ...
ನಾಲಿಗೆ ಚಾಚಿದರೆ ಅದಕ್ಕೆ ಸಕ್ಕರೆಯ ಸಿಹಿ
ಬೂರುಗದ ಮರದ ಪೊಟರೆಯಲ್ಲಿದ್ದ ಹಕ್ಕಿಯೊಂದು
ಈ ಅಪರಾತ್ರಿ ಹೊರಬಂದು ಹಾಡಲು ಶುರುಮಾಡಿದೆ:
ತಾನಿಟ್ಟ ಮೊಟ್ಟೆಗಳೊಡಲ ಮರಿಗಳಿಗಷ್ಟೇ ಅಲ್ಲ,
ಸಲುಹಿದ ಗ್ರಾಮಸ್ಥರಿಗೆಲ್ಲ ತಲುಪುವಂತಿದೆ ಈ ಕೂಜನ
ಗುಡಿಸಿದಂತಿದೆ ತರಗು ಚೆಲ್ಲಿ ಕೀರ್ಣವಾಗಿದ್ದ ಮನ.

Saturday, July 01, 2017

ಗೋಷ್ಠಿ

ಅದೆಲ್ಲ ಯಾರಿಗೂ ತಿಳಿಯದ್ದೇನಲ್ಲ
ಒಂದು ಬಟ್ಟಲು ಕಾಫಿಯಲೆಷ್ಟು ನೊರೆಯಿರಬೇಕು
ಅದು ಎಷ್ಟು ಬಿಸಿ, ಎಷ್ಟು ಸಿಹಿ, ಎಷ್ಟು ಕರಿ, ಎಷ್ಟು ಕಹಿ,
ಮತ್ತು ಒಂದು ಕಪ್ಪಿನಲ್ಲೆಷ್ಟು ಕಾಫಿಯಿರಬೇಕೆಂಬ ಲೆಕ್ಕಾಚಾರ
ಆದಿಪುರಾಣಗಳಿಗಿಂತ ಹಳೆಯದು
ಯಾವ ಆಧುನಿಕ ಸಂಶೋಧನೆಯೂ ಕಾಫಿಯ ಕಪ್ಪು ಹಿಡಿದು
ಬಾಗಿಲಿಗೊರಗಿ ನಿಂತು ಆವಿ ಬೆರೆತ ಹೊಗೆತೆರೆಯ ಮೂಲಕ ಹೊರ-
ನೋಡುತ್ತ ಮೈಮರೆಯಬಾರದು ಅಂತ ಹೇಳಿಲ್ಲ ಸದ್ಯ.
ಸಂಶೋಧಕರಿಗೂ ಬೇಕಲ್ಲ ಸ್ವಲ್ಪವಾದರೂ ಮೈಮರೆವು:
ನಾಲಿಗೆಯ ಮೇಲೊಂದು ರುಚಿಯ ಲೇಯರು?

ಆದರೆ ಮಾತ್ರ, ಡಿಕಾಕ್ಷನ್ನಿಗೆಂದು ನೀರು ಕುದಿಯಲಿಟ್ಟು
ಮೈಮರೆಯುವಂತಿಲ್ಲ. ನೀರು ಕುದ್ದು ಕುದ್ದು ಆವಿಯಾಗಿ
ತಳಕಂಡ ಪಾತ್ರೆ ಬರದ ವಾತಾವರಣವ ಸೃಷ್ಟಿಸಿ
ಪರಿಹಾರ ಪಡೆಯಲು ನೂರಾರು ಅರ್ಜಿ ನಮೂನೆ
ಭರ್ತಿ ಮಾಡಿ ಅಲೆದಲೆದು... ಅಯ್ಯೋ, ಎಷ್ಟೆಲ್ಲ ತಲೆಬಿಸಿ!
ನೀರಿನ ಕುದಿವ ಬಿಂದುವ ಕಣ್ಣಲ್ಲೇ ಗ್ರಹಿಸುವುದೂ
ಒಂದು ಕಲೆ ಕಾಣಾ ಎಂದು ದಾಸರು ಬರೆದ ಪದ
ಯಾಕೋ ಯಾರಿಗೂ ಸಿಗುತ್ತಿಲ್ಲ ಈ ಕ್ಷಣಕ್ಕೆ

ಹಾಗೆಂದೇ, ಸಮಶೀತೋಷ್ಣ ವಲಯದಲ್ಲಿ ನೀರು ಕುದಿ
ಬರುವ ಮೊದಲೇ ಹುಡುಕಬೇಕಿದೆ ಕಾಫಿಪುಡಿ ಡಬ್ಬಿ.
ಯಾವುದೇ ವಿಧೇಯಕ ಪಾಸಾಗಲೂ ತೊಳೆದ ಫಿಲ್ಟರಿನ
ಕೆಳಮನೆ ಮೇಲ್ಮನೆಗಳು ಒಂದಾಗಲೇ ಬೇಕು.
ಸಾವಿರ ಕಿಂಡಿಗಳ ತಳ ಮುಚ್ಚುವಂತೆ
ಸುರಿಯಬೇಕು ಕಾಫಿಪುಡಿ ಇಟ್ಟು ಚಮಚದ ಲೆಕ್ಕ.
ಕುದ್ದ ನೀರಿನ ಪಾತ್ರೆಯನಿಕ್ಕಳದಿಂದೆತ್ತಿ
ಮೈಕೈ ಸುಟ್ಟುಕೊಳ್ಳದಂತೆ ಹುಷಾರಾಗಿ ಹೊಯ್ದು
ಪರಿಮಳ ಸಮೇತ ಮುಚ್ಚುವಷ್ಟರಲ್ಲಿ ಬಾಗಿಲು,

ಕಣ್ಣಿಗೆ ನಿದ್ರೆಮಂಪರನೆರಚುವುದು ಉರುಳುವಿರುಳ
ಗಳಿಗೆಗಳನಳೆಯುತ್ತಿರುವ ಗಡಿಯಾರದ ಮುಳ್ಳು.
ಬೆಳಗಾದಮೇಲೆ ಕವಿತೆ ಆರಂಭಕ್ಕೇ ಮರಳುವುದು:
ಎಷ್ಟು ನೊರೆ, ಎಷ್ಟು ಬಿಸಿ, ಎಷ್ಟು ಸಿಹಿ, ಎಷ್ಟು ಕರಿ, ಎಷ್ಟು ಕಹಿ..

ಎಲ್ಲ ಸರಿಯೇ. ತಪ್ಪಾದದ್ದೆಲ್ಲೆಂದರೆ,
ಮೇಲ್ಮನೆಯಿಂದ ಕೆಳಮನೆಗಿಳಿವ ಕಪ್ಪುಹನಿಗಳು
ಅಹೋರಾತ್ರಿ ನಡೆಸಿದ ಥಟ್ತಟ ಥಟ್ತಟ ಲಯವಾದ್ಯಗೋಷ್ಠಿಯಲಿ
ಒಬ್ಬರಾದರೂ ಜಾಗರ ಮಾಡಿ ಭಾಗವಹಿಸದೇ ಇದ್ದುದು.


[ಫೇಸ್‌ಬುಕ್ಕಿನಲ್ಲಿ ನಡೆದ ಕಾಫಿ-ಚಹಾ ಕಾವ್ಯಸರಣಿಗೆ ಸಂವಾದಿಯಾಗಿ ಬರೆದದ್ದು.]

Monday, June 26, 2017

ಮಗಳು ನೋಡಿದ ಮಳೆ

ಹುಟ್ಟಿ ನಾಲ್ಕು ತಿಂಗಳಾಗಿ ತನ್ನಮ್ಮನ ಊರಿನಲ್ಲಿರುವ ನನ್ನ ಮಗಳಿಗೆ ಇದು ಮೊದಲ ಮಳೆಗಾಲ. ಕಡುನೀಲಿ ಸ್ವೆಟರು, ತಲೆ-ಕಿವಿ ಮುಚ್ಚುವಂತೆ ಟೋಪಿ, ಕೈ-ಕಾಲುಗಳಿಗೆ ಸಾಕ್ಸು ತೊಡಿಸಿ ಬಾಗಿಲ ಬಳಿ ಒಂದು ಮೆತ್ತನೆ ಹಾಸು ಹಾಸಿ ಅವಳನ್ನು ಮಲಗಿಸಿದರೆ, ಹೊರಗೆ ಹೊಯ್ಯುತ್ತಿರುವ ಮಳೆಯನ್ನು ತನ್ನ ಅಚ್ಚರಿಯ ಕಣ್ಣುಗಳಿಂದ ಪಿಳಿಪಿಳಿ ನೋಡುತ್ತಾಳೆ. ಆಕಾಶ ಎಂದರೇನು, ಭೂಮಿ ಎಂದರೇನು, ಮೋಡ ಎಂದರೇನು, ಮಳೆ ಎಂದರೇನು -ಯಾವುದೂ ಗೊತ್ತಿಲ್ಲದ ಮಗಳು, ಹನಿಗಳು ಮನೆಯ ಮೇಲೆ ಉಂಟುಮಾಡುತ್ತಿರುವ ತಟ್ತಟ ತಟ್ತಟ ಸದ್ದನ್ನು ಕುತೂಹಲದಿಂದ ಆಲಿಸುತ್ತಾಳೆ. ಬೇಸಿಗೆ ಮಳೆಯ ಗುಡುಗು-ಸಿಡಿಲುಗಳಿಗೆ ಬೆಚ್ಚಿಬೀಳುತ್ತಿದ್ದವಳು ಈಗ ಶಾಂತಸ್ವರದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಗೆ ಹೀಗೆ ಕಣ್ಣಾಗಿ-ಕಿವಿಯಾಗಿ ನಮ್ರ ಪುಳಕವನ್ನನುಭವಿಸುತ್ತಿರುವಾಗ, ಅವಳ ಪಕ್ಕ ಕೂತ ನನಗೆ, ಕಳೆದ ಮಳೆಗಾಲಗಳ ನೆನಪುಗಳು.. ನಾನಾದರೂ ನೂರಾರು ಮಳೆಗಾಲಗಳ ಕಂಡವನೇ? ಅಲ್ಲ. ಆದರೆ, ಹೀಗೆ ಮೊದಲ ಮಳೆಗಾಲದ ಅನುಭವಕ್ಕೆ ಒಳಗಾಗುತ್ತಿರುವ ಮಗಳ ಬಳಿ ಕುಳಿತಾಗ, ನಾನು ಕಂಡ ಮೂವತ್ತು-ಚಿಲ್ಲರೆ ಮಳೆಗಾಲಗಳು, ತುಳಿದ ಕೆಸರು, ತೊಯ್ದ ಛತ್ರಿಗಳು, ಮಳೆ ನೋಡಲೆಂದೇ ನಾನು ಮಾಡಿದ ಪ್ರವಾಸಗಳು, ಅಲ್ಲಿ ಕಂಡ ಚಿತ್ರಗಳೆಲ್ಲ ಯಾಕೋ ಒಂದೊಂದೆ ಕಣ್ಮುಂದೆ ಬರುತ್ತಿವೆ..

ಅದೇ ಬಾನು, ಅದೇ ಭೂಮಿ, ಆದರೆ ಪ್ರತಿ ಊರಿನ ಮಳೆಯೂ ಬೇರೆಯೇ. ಪ್ರತಿ ಮಳೆಗಾಲವೂ ಭಿನ್ನವೇ. “ನಮ್ ಕಾಲದ್ ಮಳೆ ಈಗೆಲ್ಲಿ? ನಾವ್ ನೋಡಿದಂಥಾ ಮಳೆಗಾಲ ನೀವು ಒಂದು ವರ್ಷಾನೂ ನೋಡಿಲ್ಲ” –ಅಂತ ಅಜ್ಜ ಆಗಾಗ ಹೇಳುತ್ತಲೇ ಇರುತ್ತಿದ್ದ. ಹಾಗಾತ ಹೇಳುವಾಗ ಆಗಿನ ದಟ್ಟ ಕಾನನ, ತುಂಬುಬೆಟ್ಟಗಳು, ಒಂಟೊಂಟಿ ಮನೆ, ಬಿಡದೆ ಧೋ ಎಂದು ಸುರಿಯುತ್ತಿರುವ ಮಳೆಯ ಕಲ್ಪನೆಯೇ ಮೈ ಜುಮ್ಮೆನಿಸುತ್ತಿತ್ತು. ಹಾಗಂತ ನಾನೇನು ಮಳೆಯನ್ನೇ ಕಾಣದವನಲ್ಲ. ಮಲೆನಾಡಿನಲ್ಲಿ ಹುಟ್ಟಿ ಬೆಳೆದವನಿಗೆ, ಜೂನ್ ತಿಂಗಳು ಬಂತು ಎಂದೊಡನೆ ಶುರುವಾಗುತ್ತಿದ್ದ ಮಳೆಗಾಲವನ್ನು ಸೆಪ್ಟೆಂಬರಿನ ಅಂತ್ಯದವರೆಗೂ ಅನುಭವಿಸಲು ಸಿಕ್ಕೇ ಸಿಗುತ್ತಿತ್ತು. ಮಳೆ ನೋಡಲು ನಾನು ಯಾವುದೇ ಊರಿಗೆ ಹೋಗಬೇಕಿರಲಿಲ್ಲ. ಕೆಲ ವರ್ಷಗಳಂತೂ ಹನಿ ಕಡಿಯದಂತೆ ಮಳೆಯಾಗುತ್ತಿತ್ತು. ಶಾಲೆಗೆ ಹೋಗುವಾಗ ಅಲ್ಲಿಲ್ಲಿ ಗುಂಡಿಯಲ್ಲಿ ನಿಂತ ನೀರನ್ನು ಪಚಕ್ಕನೆ ಹಾರಿಸುತ್ತ ಹೋಗುವುದು ನಿತ್ಯದ ಖುಷಿಯ ಆಟವಾಗಿತ್ತು. ಸಂಜೆಯಾಯಿತೆಂದರೆ ವಟರುಗಪ್ಪೆಗಳ ಗಾಯನ. ಎಂದು ಬರುವುದೆಂದು ಹೇಳಲಾಗದಂತೆ ಹೋಗಿರುವ ಕರೆಂಟು. ಲಾಟೀನಿನ ಚುಟುಕು ಬೆಳಕು. ಕರಿದ ಹಲಸಿನ ಹಪ್ಪಳ. ಸೂರಂಚಿಂದ ಸುರಿಯುತ್ತಲೇ ಇರುತ್ತಿದ್ದ ಧಾರೆಧಾರೆ ನೀರು. ಕೈಯೊಡ್ಡಿದರೆ ಹಿಮಾನುಭವ.

ಕೂತುಬಿಡಬಹುದಿತ್ತು ಬೇಕಿದ್ದರೆ ಹಾಗೆಯೇ ಮಳೆಯ ನೋಡುತ್ತ. ರಸ್ತೆಯಲ್ಲಿ ಕಂಬಳಿಕೊಪ್ಪೆ ಹೊದ್ದು ಸಾಗುತ್ತಿದ್ದ ರೈತರನ್ನು ಮಾತಾಡಿಸುತ್ತ. ಗದ್ದೆಯ ಬದುವಿನಲ್ಲಿ ಜಾರುತ್ತ. ಪೈರಿನ ಗಾಳಿ ಅನುಭವಿಸುತ್ತ. ಗೇರುಬೀಜವ ಸುಟ್ಟು ತಿನ್ನುತ್ತ. ಜಲವೊಡೆದು ತುಂಬಿ ಬರುವ ಬಾವಿಯನ್ನಾಗಾಗ ಬಗ್ಗಿ ನೋಡುತ್ತ. ಆದರೆ ಭಯಂಕರ ಜರೂರಿತ್ತೇನೋ ಎಂಬಂತೆ ನಗರಕ್ಕೆ ಬಂದುಬಿಟ್ಟೆ. ಇಲ್ಲಿ ಮಳೆ ಬಂದರೆ ಜನ ಬೈದುಕೊಳ್ಳುವರು. ಜೋರು ಮಳೆಯಾದರೆ ರಸ್ತೆಯೇ ಕೆರೆಯಾಗುತ್ತಿತ್ತು. ನಮ್ಮೂರಲ್ಲಿ ಕೋಡಿ ಬಿದ್ದಾಗ ಹರಿವಂತೆ ಇಲ್ಲಿನ ಚರಂಡಿಯಲ್ಲೂ ಭರಪೂರ ನೀರು ಹರಿಯುತ್ತಿತ್ತು. ಜನಗಳು ಅದರಲ್ಲಿ ಬಿದ್ದು ತೇಲಿಹೋದರಂತೆ ಎಂದೆಲ್ಲ ಸುದ್ದಿ ಬರುತ್ತಿತ್ತು. ನಗರದ ಮಳೆ ಭಯ ಹುಟ್ಟಿಸುವಂತಾಗಿಹೋಗಿತ್ತು. ಜನ ಮಳೆಗೆ ಶಾಪ ಹಾಕುತ್ತಿದ್ದರು. ಆದರದು ಮಳೆಯ ತಪ್ಪಾಗಿರಲಿಲ್ಲ. ಗಾಂಧಿ ಬಜಾರಿನಲ್ಲಿ ಸುರಿದರೆ ಕವಿತೆಯಾದೇನು ಎಂಬಾಸೆಯಲ್ಲಿ ಮಳೆ ಸುರಿಯುತ್ತಿದ್ದರೂ ಕೊನೆಗೂ ಅದು ಅಚ್ಚಾಗುತ್ತಿದ್ದುದು ದುರಂತ ಕತೆಯಾಗಿ.

ನಗರದ ಮಳೆಯೊಂದಿಗೆ ದೋಸ್ತಿ ಸಾಧ್ಯವೇ ಆಗಲಿಲ್ಲ. ಇಲ್ಲೇ ಹೀಗೇ ಇದ್ದರೆ ನಾನೂ ಮಳೆಯನ್ನು ಬೈಯುವ ನಾಗರೀಕನಾಗುತ್ತೀನೇನೋ ಎಂಬ ಭಯ ಕಾಡಿದ್ದೇ, ಒಂದಷ್ಟು ಗೆಳೆಯರನ್ನು ಒಟ್ಟು ಮಾಡಿಕೊಂಡು, ರಾತ್ರೋರಾತ್ರಿ ಹೊರಟು, ಕುರಿಂಜಾಲು ಬೆಟ್ಟದ ತಪ್ಪಲು ಸೇರಿದೆ. ಮಾನ್ಸೂನ್ ಟ್ರೆಕ್ಕಿನ ಮಜವೇ ಬೇರೆ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಹುಟ್ಟಿ ಆಗಷ್ಟೆ ತೆವಳಲು ಶುರುವಿಟ್ಟುಕೊಳ್ಳುತ್ತಿರುವ ಇಂಬಳಗಳ ತುಳಿಯುತ್ತ ಬೆಟ್ಟವನ್ನೇರುತ್ತಿದ್ದರೆ, ತೊಟ್ಟ ರೈನ್‌ಕೋಟಿನ ಅಂಚಿನಿಂದ ತೊಟ್ಟಿಕ್ಕುತ್ತಿದ್ದ ಹನಿಗಳಿಗೆ ನಮ್ಮ ಮೇಲೆ ಅದೆಂತು ಪ್ರೀತಿ..! ಅಡ್ಡಗಾಳಿಗೆ ಮುಖಕ್ಕೆ ಬಡಿಯುತ್ತಿರುವ ನೀರಪದರಕ್ಕೆ ಎಲ್ಲ ಜಂಜಡಗಳನ್ನೂ ಕಳಚಿ ನಿರ್ಭಾರಗೊಳಿಸುವ ತಾಕತ್ತು. ಚಿಗುರಲಣಿಯಾಗುತ್ತಿರುವ ಚುಪುರು ಹುಲ್ಲು ಕಾಲಿಗೆ ತಾಕುವಾಗ ಎಂಥವರನ್ನೂ ಮೈಮರೆಸುವ ಶಕ್ತಿ ಎಲ್ಲಿಂದ ಬಂತು?  ಮೇಲೇರುತ್ತ ಏರುತ್ತ ಹೋದಂತೆ ದೇಹ ಹಗುರಗೊಳ್ಳುತ್ತ, ಅಕ್ಕಪಕ್ಕದ ಪರ್ವತಶ್ರೇಣಿಗಳೆಲ್ಲ ಸೌಂದರ್ಯದ ಖನಿಗಳಾಗಿ ರೂಪುಗೊಂಡು, ದೃಶ್ಯವೈಭವವ ಕಣ್ಮುಂದೆ ಜಾಹೀರು ಮಾಡುವಾಗ, ಎರಡೂ ಕೈ ಚಾಚಿ ನಾನೇ ಹಕ್ಕಿಯಂತಾಗಿ ತೇಲುತ್ತಿರುವ ಅನುಭವ. ಶೃಂಗ ತಲುಪಿಯಾಯಿತೋ, ನಾನೇ ಮೋಡದೊಳಗೆ! ನಾಲ್ಕಡಿ ದೂರದಲ್ಲಿರುವ ಗೆಳೆಯರೂ ಈಗ ಕಾಣರು. ಬಿಳಿಯ ತಿಳಿಯೊಳಗೆ ಸೇರಿಕೊಂಡಿರುವ ನಮಗೀಗ ಈ ಇಳೆಯಲ್ಲಿ ಹೆಸರಿಲ್ಲ.

ಸ್ವಲ್ಪ ಹೊಳವಾದಂತೆ ಕಂಡ ಕ್ಷಣ, ಒದ್ದೆ ಬಂಡೆಯೊಂದರ ಮೇಲೆ ಕುಳಿತು ಬುತ್ತಿಯ ಗಂಟು ಬಿಚ್ಚಿ ಹೊಟ್ಟೆ ತುಂಬಿಸಿಕೊಳ್ಳುವಾಗ, ಅದೋ ದೂರದ ಬೆಟ್ಟವನ್ನೊಮ್ಮೆ ನೋಡಬೇಕು.. ಇಲ್ಲಿ ಬಿಡುವು ಕೊಟ್ಟ ಮಳೆಯೀಗ ಅಲ್ಲಿ ಸುರಿಯುತ್ತಿದೆ. ಹೇಗೆ ಕರಿಮೋಡ ಕರಗಿ ಕರಗಿ ಬೀಳುವುದು ಸ್ಫುಟವಾಗಿ ಕಾಣುತ್ತಿದೆ.. ಯಾವಾಗದು ಖಾಲಿಯಾಗುವುದು? ಜತೆಗೆ ಬಂದ ಗೆಳೆಯ ಈಗ ಹಾಡಲು ಶುರುವಿಡುತ್ತಾನೆ. ಎಂದೋ ಕೇಳಿ ಮರೆತಿದ್ದ ಹಾಡು ಇಂದು ಇಲ್ಲಿ ಹೇಗೆ ಆಪ್ತವಾಗುತ್ತಿದೆ.. ಘಳಿಗೆಗಳ್ಯಾಕೆ ಸರಿಯಬೇಕು ಇಂತಲ್ಲಿ? ಬೆಟ್ಟದಂಚಿಗೆ ಬಂದು ಬಗ್ಗಿ ನೋಡಿದರೆ ಇಡೀ ಕಂದರವೇ ಹಾಲಾಗಿದೆ. ರುದ್ರರಮಣೀಯ ಎಂಬ ಪದಪುಂಜ ಪೋಣಿಸಿದ ವ್ಯಕ್ತಿ ಇಲ್ಲಿಗೆ ಬಂದೇಬಂದಿರುತ್ತಾನೆ.

ಎಂಥ ಬೆಟ್ಟವೇರಿದವನೂ ಮತ್ತೆ ಕೆಳಗಿಳಿಯಲೇಬೇಕು ಎಂಬಂತೆ, ಬ್ಯಾಚುಲರ್ ದಿನಗಳಲ್ಲಿ ಗೆಳೆಯರೊಂದಿಗೆ ಹುಚ್ಚಾಪಟ್ಟೆ ಟ್ರೆಕಿಂಗ್ ಹೋಗುತ್ತಿದ್ದವನು ಸಂಸಾರಸ್ಥನಾದಮೇಲೆ ಆ ಪರಿಯ ತಿರುಗಾಟ ಕಮ್ಮಿಯಾಗಿಹೋಯಿತು. ಆದರೆ ಮಳೆಯ ನಾಡಿನ ಸೆಳೆತವೇನು ಕಳೆಯಲಿಲ್ಲ. ಹೆಂಡತಿಯೊಡಗೂಡಿ ಮಡಿಕೇರಿಗೋ ಚಿಕ್ಕಮಗಳೂರಿಗೋ ಮಳೆಗಾಲದಲ್ಲೊಮ್ಮೆ ಭೇಟಿ ಕೊಡುವುದು ಸಂಪ್ರದಾಯವಾಯಿತು. ಮಡಿಕೇರಿಯ ಮಳೆ ಮತ್ತೆ ಬೇರೆಯೇ. ಇಲ್ಲಿನ ಗೆಸ್ಟ್‌ಹೌಸುಗಳ ಗೋಡೆಗಳಿಗೂ ಬೆವರು. ಎಲ್ಲೆಲ್ಲು ತಣಸು. ಸಂಜೆಯಾಯಿತೆಂದರೆ ಹಕ್ಕಿಗಳಂತೆ ಎಲ್ಲರೂ ಗೂಡು ಸೇರಿಕೊಳ್ಳುವರು. ರಾತ್ರಿಯ ಚಳಿಗಾಳಿಯೋಡಿಸಲು ಎಲ್ಲ ರೆಸಾರ್ಟುಗಳ ಮಗ್ಗುಲಲ್ಲರಳುವ ಕ್ಯಾಂಪ್‌ಫೈರುಗಳು. ಅದರ ಸುತ್ತ ಮೈಮರೆತು ಕುಣಿಯುವ ಮತ್ತ-ಉನ್ಮತ್ತ ಮಂದಿ. ಇದು ಒಗ್ಗದ ಜೀವಗಳೋ, ಬಿಸಿಬಿಸಿ ಕಾಫಿಯ ಬಟ್ಟಲು ಹಿಡಿದು ಅಕೋ ತಮ್ಮ ರೂಮಿನ ಕಿಟಕಿಯ ಬಳಿ ಆರಾಮಕುರ್ಚಿ ಹಾಕಿ ಆಸೀನರು. ಸುರಿಮಳೆಯ ಮುಂದೆರೆಯಲ್ಲಿ ಹಬೆಯಾಡುವ ಕಾಫಿಗೂ ಇಲ್ಲಿ ನಶೆಯೇರುವ ಮಾಯೆ. ಮಡಿಕೇರಿ-ಮಳೆ-ಮಂಜು-ಮತ್ತು  –ಎಲ್ಲವೂ ಇಲ್ಲಿ ಸಮಾನಾರ್ಥಕ ಪದಗಳು.

ಈ ತಂಬೆಲರಿನಲ್ಲಿ ಕಾಫಿತೋಟಗಳನ್ನು ಸುತ್ತುವುದೂ ಒಂದು ರಸಾನುಭವ. ಅದೂ ಜತೆಗಾತಿಯೊಡನೆ ಒಂದೇ ಛತ್ರಿಯಡಿ ಹೆಜ್ಜೆಯಿಡುವಾಗ ಸಣ್ಣ ಬಿಸಿಲಿಗೂ ಮೂಡುವ ಕಾಮನಬಿಲ್ಲು. ಅಲ್ಲೇ ತೋಟದ ಮಗ್ಗುಲಲ್ಲಿರುವ ಕೆರೆಯಲ್ಲೀಗ ಕೆನ್ನೀರಿನ ಭರಾಟೆ. ಎಲ್ಲೆಡೆಯಿಂದಲೂ ಬಂದು ಧುಮ್ಮಿಕ್ಕುತ್ತಿರುವ ನೀರು. ಹೀಗೆ ಕೆರೆಯ ಮೇಲೆ ಬೀಳುತ್ತಿರುವ ಮಳೆಹನಿಗಳು ಈ ಕೆನ್ನೀರಿನೊಂದಿಗೆ ಬೆರೆತು ತಾವೂ ಕೆಂಪಾಗಲು ಎಷ್ಟು ಕ್ಷಣ ಬೇಕು? ಮಳೆ ತೆರವಾದಾಗ ಉಳಿದ ತುಂಬುಕೆರೆಯ ನೀರು ತಿಳಿಯಾಗಲು ಎಷ್ಟು ದಿನ ಬೇಕು? ಕೆರೆ ತುಂಬಿ ಕಟ್ಟೆಯೊಡೆದು ಸಣ್ಣ ಅವಳೆಗಳಲ್ಲಿ ಸಾಗಿ ದೊಡ್ಡ ಧಾರೆಯೊಂದಿಗೆ ಬೆರೆತು ನದಿಯಾಗಿ ಚಿಮ್ಮುತ್ತ ಸಾಗಿ ಸಮುದ್ರ ಸೇರಲು ಎಷ್ಟು ಕಾಲ ಬೇಕು? ಸಮುದ್ರದ ದಾರಿಯಲ್ಲದು ಎಷ್ಟು ಜಲಪಾತಗಳ ಸೃಷ್ಟಿಸಿತು? ಎಷ್ಟು ಕೆಮೆರಾಗಳಲ್ಲಿ ಸೆರೆಯಾಯಿತು? ಪ್ರತಿ ಹನಿಯ ಹಣೆಯಲ್ಲೂ ಬರೆದಿರುತ್ತದಂತೆ ಅದು ಸಾಗಬೇಕಾದ ದಾರಿ, ಸೇರಬೇಕಾದ ಗಮ್ಯ. ಆದರೆ ಅದರ ಹಣೆ ನೋಡಿ ಭವಿಷ್ಯ ಹೇಳುವವರಾರು? ಕೆರೆಯ ಕಟ್ಟೆಯ ಮೇಲೆ ನಿಂತು ಒಂದೇ ಸಮನೆ ನೋಡುತ್ತಿದ್ದರೆ ಎಲ್ಲ ಕಲಸಿದಂತಾಗಿ ಕಣ್ಮಂಜು.

ಮಳೆಗಾಲವೀಗ ಕಮ್ಮಿಯಾಗಿದೆ. ಋತುವಿಡೀ ಸುರಿಯಬೇಕಿದ್ದ ಮಳೆಯೀಗ ಮಿತವಾಗಿದೆ. ಯಾವ್ಯಾವಾಗಲೋ ಬರುವಷ್ಟು ಅನಿಯಮಿತವಾಗಿದೆ. ಊರಿನಿಂದ ಬರುವ ಫೋನಿನಲ್ಲಿ ಬರದ ಗೋಳಿನ ಕತೆಯೇ ಜಾಸ್ತಿ. ಎಲ್ಲರ ಮನೆಯಲ್ಲೂ ಖಾಲಿ ಬಾವಿಗಳು. ನಾವು ಮಾಡಿದ ತಪ್ಪಿಗೆ ನಾವೇ ಅನುಭವಿಸುತ್ತಿದ್ದೇವೆ.

ಆದರೂ ಭರವಸೆ ಹೋಗಿಲ್ಲ. ನಾವು ಹತಾಶರಾಗಿಲ್ಲ. ಕ್ಯಾಲೆಂಡರಿನ ಪುಟ ತಿರುಗಿಸುತ್ತಲೇ ಆಕಾಶದೆಡೆಗೆ ನೋಡುತ್ತೇವೆ ತಲೆಯೆತ್ತಿ. ಕಾರ್ಮೋಡಗಳು ಮೇಳೈಸುವುದನ್ನು ಕಾತರಿಸಿ ಈಕ್ಷಿಸುತ್ತೇವೆ. ಬಿಸಿಲಿನ ಝಳದ ನಡುವೆ ಸಣ್ಣದೊಂದು ತಂಗಾಳಿ ಬಂದರೂ ಇವತ್ತು ಮಳೆಯಾಗಿಯೇ ಆಗುತ್ತದೆ ಅಂತ ದೇವರ ಮುಂದೆ ಕಾಯಿಯಿಟ್ಟು ಕಾಯುತ್ತೇವೆ. ವರುಣನಿನ್ನೂ ನಿಷ್ಕರುಣಿಯಾಗಿಲ್ಲ. ಸಂಜೆಯಾಗುತ್ತಿದ್ದಂತೆಯೇ ಶುರುವಾಗಿದೆ ಥಟಥಟ ಹನಿಗಳ ಲೀಲೆ. ಜೋರಾಗಿದೆ ನೋಡನೋಡುತ್ತಿದ್ದಂತೆಯೇ. ಅಂಗಳದಲ್ಲಿ ಒಣಹಾಕಿದ್ದ ಬಟ್ಟೆಗಳನ್ನೆಲ್ಲ ಒಳ ತಂದಿದ್ದೇವೆ. ಕಟ್ಟೆಯ ಮೇಲೆ ನಿಂತು ಹೃನ್ಮನಗಳನೆಲ್ಲ ತೆರೆದು ಮುಂಗಾರಿನ ಮೊದಲ ಮಳೆಗೆ ಒಡ್ಡಿಕೊಂಡಿದ್ದೇವೆ. ಒಳಮನೆಯ ನಾಗಂದಿಗೆಯಲ್ಲಿದ್ದ ಛತ್ರಿಯನ್ನು ಕೆಳಗಿಳಿಸಿ ತಂದು ಧೂಳು ಕೊಡವಿ ಬಿಡಿಸಿ ಹೊರಟುಬಿಟ್ಟಿದ್ದೇವೆ ತೋಟ-ಗದ್ದೆಗಳೆಡೆಗೆ. ಹೊಂಡದ ಮೀನಿಗೂ ಈಗ ಹೊಸನೀರ ಸಹವಾಸ. ಗೂಡೊಳಗಿನ ಗೀಜಗದ ಮರಿಗೀಗ ಎಲ್ಲಿಲ್ಲದ ಆತಂಕ. ಮಣ್ಣ ಪದರದ ಕೆಳಗೆಲ್ಲೋ ಹುದುಗಿರುವ ಹೂಗಿಡದ ಬೀಜಕ್ಕೂ ತಲುಪಿದೆ ಮಳೆಬಂದ ಸುದ್ದಿ: ಅದರ ಮೊಳಕೆಯೊಡೆವ ಸಂಭ್ರಮಕ್ಕೆ ತರಾತುರಿಯಲಿ ಸಾಗುತ್ತಿರುವ ಇರುವೆಗಳು ಸಾಕ್ಷಿಯಾಗಿವೆ. ಈ ಸಲ ಮುಂಗಾರು ಜೋರು ಎನ್ನುತ್ತಿದ್ದಾರೆ ಹವಾಮಾನ ತಜ್ಞರು. ಈ ಒಳ್ಳೆಯ ವರ್ತಮಾನ ಅಡಕೆಯ ಮರಗಳ ತುದಿಯ ಒಣಗಿದ ಸುಳಿಗೂ ಮುಟ್ಟಿದಂತಿದೆ: ಉಲ್ಲಾಸದಿಂದ ತೂಗುತ್ತಿವೆ ಅವು ತಲೆ -ಒಂದಕ್ಕೊಂದು ತಾಕುವಂತೆ.

ಮಗಳ ಪಕ್ಕ ಕುಳಿತು ಮಳೆಯ ಲೋಕದೊಳಗೆ ಮುಳುಗಿ ತೋಯುತ್ತಿದ್ದರೆ ಊರಿನಿಂದ ಅಮ್ಮನ ಫೋನು: ಒಂದು ವಾರದಿಂದ ಮಳೆ ಪರವಾಗಿಲ್ಲ ಅಂತಲೂ, ನಿನ್ನೆಯಷ್ಟೇ ಸೌತೆಬೀಜ ಹಾಕಿದೆ ಅಂತಲೂ, ಬಾವಿಗೆ ಸ್ವಲ್ಪಸ್ವಲ್ಪವೇ ನೀರು ಬರುತ್ತಿದೆ ಅಂತಲೂ ಹೇಳಿದಳು. ಮೊಮ್ಮಗಳು ಅಲ್ಲಿಗೆ ಬರುವಷ್ಟರಲ್ಲಿ ನೀರಿನ ಸಮೃದ್ಧಿಯಾಗಿರುತ್ತದೆ ಅಂತ ಹೇಳಿದವಳ ದನಿಯಲ್ಲಿ ಖುಷಿಯಿತ್ತು.

ಮಳೆಯ ನೋಡುತ್ತ ಆಟವಾಡುತ್ತಿದ್ದ ಮಗಳು ಈಗ ನಿದ್ದೆ ಹೋಗಿದ್ದಾಳೆ. ವರ್ಷಧಾರೆ ಮಾತ್ರ ಹೊರಗೆ ಮುಂದುವರೆದಿದೆ. ಮಗಳಿಗೆ ನಿದ್ದೆ ಬಂದಿದ್ದು ಈ ಮಳೆಯ ಜೋಗುಳದಿಂದಲೋ ಅಥವಾ ನನ್ನ ಮಳೆಗಾಲದ ಕತೆಗಳ ಮೌನಾಖ್ಯಾನ ಕೇಳಿಯೋ ತಿಳಿಯದಾಗಿದೆ. ಹೆಂಡತಿ ಮಗಳನ್ನು ಎತ್ತಿಕೊಂಡು ಹೋಗಿ ತೊಟ್ಟಿಲಲ್ಲಿ ಮಲಗಿಸಿದ್ದಾಳೆ. ಅತ್ತೆ ಬಿಸಿಬಿಸಿ ಕಷಾಯ ತಂದುಕೊಟ್ಟಿದ್ದಾರೆ. ಬಾಗಿಲ ಬಳಿ ನಿಂತು ಒಂದು ಕೈಯಲ್ಲಿ ಕಷಾಯದ ಬಟ್ಟಲು ಹಿಡಿದು ಇನ್ನೊಂದು ಕೈಯನ್ನು ಸುರಿಮಳೆಗೊಡ್ಡಿದ್ದೇನೆ. ಬೊಗಸೆ ತುಂಬಿ ತುಂಬಿ ಹರಿಯುತ್ತಿದೆ ನಿಷ್ಕಲ್ಮಶ ಸಲಿಲ ಸಳಸಳ.

[ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ]

Wednesday, June 14, 2017

ಸೀರಿಯಲ್ ಲೈಟ್ಸ್

ಹಳೆಯ ಪ್ಲಾಸ್ಟಿಕ್ ಚೀಲದಲ್ಲಿ
ಸುತ್ತಿಸುತ್ತಿ ಇಟ್ಟ ಮಿಣುಕುದೀಪಗಳ ಮಾಲೆ
ಹುಷಾರಾಗಿ ಬಿಚ್ಚಬೇಕು ಸಾರ್
ಗಂಟಾಗಲು ಬಿಡಬಾರದು
ಹೀಗೆ ಒಂದೊಂದೆ ವಯರು ಬಿಚ್ಚುತ್ತ
ತುದಿಯ ಹುಡುಕುವುದೇ ಒಂದು ಸಾಹಸ
ಇಕೋ ಸಿಕ್ಕಿತು ನೋಡಿ
ಇನ್ನು ನೀವು ಆ ತುದಿ ಹಿಡಿದು ಅತ್ತ ಸಾಗಿರಿ
ನಾನು ಈ ತುದಿ ಹಿಡಿದು ಇತ್ತ ಸಾಗುವೆ
ಹೇಗೆ ಬಿಡಿಸಿಕೊಳ್ಳುವುದು ನೋಡಿ ಸಾರ್
ಪರಸ್ಪರ ತಬ್ಬಿ ಹಿಡಿದಿದ್ದ ಮೊಗ್ಗುಗಳೆಲ್ಲ ಬೇರ್ಪಟ್ಟು
ಹೇಗೆ ಕೈಕಾಲು ಚಾಚಿ ನಿಂತಿವೆಯೀಗ
ವ್ಯಾಯಾಮಭಂಗಿಯಲಿ

ಟೆರೇಸಿನಿಂದ ಇಳಿಬಿಡಬೇಕು ಸಾರ್, ನೆಲಮುಟ್ಟುವವರೆಗೂ
ಓಹೋ, ಎಳೆದಷ್ಟೂ ಬೆಳೆವ ಬಳ್ಳಿ
ಗೇಣುಗೇಣಿಗೊಂದು ಮೊಗ್ಗು
ಮುಚ್ಚಿಬಿಡುವಂತೆ ತೊಗಟೆಯ ಮೇಲಿನ ಸಣ್ಣಪುಟ್ಟ ತೊಡರು
ಕೇಳುವರು ಅತ್ತಿತ್ತ ಓಡುತ್ತಿರುವ ಚಿಣ್ಣರು
ಈ ಮೊಗ್ಗುಗಳರಳುವುದ್ಯಾವಾಗ?
ಪ್ರಶ್ನೆಗುತ್ತರಿಸದೆ ತೆರಳಿದ್ದಾನೆ ಅಲಂಕಾರಗಾರ
ಇಡೀ ಮನೆಗೆ ಹೊದಿಸಿ ಬಳ್ಳಿ

ಸಂಜೆಯಾಗುತ್ತಿದ್ದಂತೆ ಶುರುವಾಗಿದೆ ನೆಂಟರ ಸರಭರ
ರೇಶಿಮೆಸೀರೆ ಹೂಬೊಕೆ ಉಡುಗೊರೆ ಅತ್ತರುಗಂಪು
ಸಂಭ್ರಮವೊಂದು ಸೂರೆಯಾಗುತ್ತಿರುವಾಗ ಹಾಗೆ

ಫಕ್ಕನೆ ಅರಳಿವೆ ಮೊಗ್ಗುಗಳೆಲ್ಲ
ಸ್ವಿಚ್ಚದುಮಿದ್ದೇ ಆದಂತೆ ಹರಿತ್ತಿನ ಸಂಚಾರ
ಕೇಕೆ ಹಾಕಿದ್ದಾರೆ ಮಕ್ಕಳೆಲ್ಲ ಚಪ್ಪಾಳೆ ತಟ್ಟಿ
ಮನೆಗೀಗ ಹೊಸದೇ ಮೆರುಗು
ಬೀದಿಗೂ ಕಳೆ - ರಸ್ತೆಯಲಿ ಚೆಲ್ಲಿದ ಬಣ್ಣ
ಹಾಯುವ ಚಪ್ಪಲಿಗಳ ತುಳಿತಕ್ಕೆ ಈ ಬೆಳಕಬಿಂಬಗಳ
ಘಾಸಿಗೊಳುಸುವ ತಾಕತ್ತೆಂದೂ ಬಂದಿಲ್ಲ, ಸದ್ಯ

ಮನೆಯೊಳಗೀಗ ಸಂಭ್ರಮದ ಉತ್ತುಂಗ
ಸಣ್ಣ ಜೋಕಿಗೂ ದೊಡ್ಡಕೆ ನಗುವ ಜನ
ತುಟಿಗಳ ರಂಗನ್ನು ಕಾಪಾಡುತ್ತಿರುವ ಲಿಪ್‍ಸ್ಟಿಕ್ಕುಗಳು
ಕೇಕು ಕತ್ತರಿಸುತ್ತಿರುವ ಹರಿತ ಚಾಕು
ಖುಷಿಯ ಹಾಡಿಗೆ ರಾಗದ ಹಂಗಿಲ್ಲ
ರುಚಿಯ ಊಟಕ್ಕೆ ದಾಕ್ಷಿಣ್ಯದ ತಡೆಯಿಲ್ಲ
ಹೊರಟಿದ್ದಾರೆ ಜನರೆಲ್ಲ ತಾಂಬೂಲದ ಕೈಚೀಲ ಹಿಡಿದು
ತೇಗು ಜೋರಾಗಿ ಬರದಂತೆ ಜಗಿಯುತ್ತ ಪಾನು
ತೆಗಳುತ್ತ ರುಚಿಯಾಗದ ಪಲಾವು

ಬೀದಿಯಲ್ಲೀಗ ಬಣಗುಡುತ್ತಿರುವ ನಡುರಾತ್ರಿ
ನಿದ್ರಿಸುತ್ತಿವೆ ಕಿಟಕಿಗಳೂ ಕಣ್ಮುಚ್ಚಿ
ಗೇಟಿನ ಬಳಿ ಕೂತ ಗೂರ್ಕನ ತೂಕಡಿಕೆಗೆ
ಭಂಗ ಬಾರದಂತೆ ಕಾಯುತ್ತಿದೆ ಮುಖ್ಯರಸ್ತೆಯ ಸದ್ದುಗಳ
ಇಲ್ಲಿಗೆ ತಲುಪಗೊಡದ ಗಾಳಿ

ನಿರ್ವಾತವೊಂದೇ ಚಲಾವಣೆಯಲ್ಲಿರುವ ಈ ಘಳಿಗೆಯಲ್ಲೂ
ಮನೆಗೆ ಹೊದಿಸಿದ ಮಿನುಗುದೀಪಗಳು ಮಾತ್ರ
ಇನ್ನೂ ಉರಿಯುತ್ತಿವೆ ಝಗಮಗ ಝಗಮಗ
ತಮ್ಮದೇ ಪ್ರತಿಬಿಂಬದಂತಿರುವ ಈ
ಪುಟ್ಪುಟ್ಟ ಮಿಂಚುವಚ್ಚರಿಹಿಂಡ ಧರೆಯಲಿ ಕಂಡು
ಆಗಸದ ತಾರೆಗಳಿಗೆ ಬಗೆಹರಿಯದ ತಲೆಬಿಸಿಯಾಗಿದೆ
ಸಮಯ ಹೊಂಚಿ ನೋಡಿ, ಚಂದ್ರನಿಗೆ ತಿಳಿಯದಂತೆ,
ಪುಂಜಗಳ ಮುಂದೆ ಬಿಟ್ಟು ಮಾತಾಡುತ್ತಿವೆ
ಮಿನುಗುದೀಪಗಳೊಂದಿಗೆ ಕಷ್ಟ-ಸುಖ
ಬೆಳಕ ಭಾಷೆಯಲ್ಲಿ

Monday, May 29, 2017

ಕವಿತೆಯಲ್ಲಿ ಎಲ್ಲವನ್ನೂ ಹೇಳಲಾಗುವುದಿಲ್ಲ

ಚಂದ್ರ ಬೆಳದಿಂಗಳಲ್ಲಿ ಓಡಾಡುತ್ತಾನೆ ಎಂದೆ
ಚಂದ್ರನಿರುವುದರಿಂದಲೇ ಬೆಳದಿಂಗಳು ಎಂದಳು
ಟೆರೇಸಿನಲ್ಲಿ ವಾದ ಬೇಡ, ಹುಣ್ಣಿಮೆಯ ರಾತ್ರಿ,
ಉಬ್ಬರದ ದನಿ ಕಾದ ಕಿವಿಗಳಿಗೆ ತಂಗಾಳಿಯಲ್ಲಿ ತಲುಪುತ್ತದೆ
ಎಂದು ಮನೆಯೊಳಗೆ ಕರೆತಂದೆ
ಚಂದ್ರ ಬಾನಲ್ಲೆ ಉಳಿದ

ನಮ್ಮ ಮನೆ ಹೆಂಚಿನ ಮನೆಯಾಗಿರಬೇಕಿತ್ತು
ಅಲ್ಲೊಂದು ಬೆಳಕಿಂಡಿಯಿರಬೇಕಿತ್ತು ಎಂದಳು
ತನ್ನ ಕನಸಿನ ಮನೆಯ ಚಿತ್ರ ಬಿಡಿಸಿದಳು
ಹೇಗೆ ಸಣ್ಣ ಕಿಂಡಿಯಲ್ಲಿ ಬೆಳದಿಂಗಳು ಕೋಲಾಗಿ ಇಳಿಯುವುದು
ಒಂಟಿತಾರೆ ನೇರ ಬಂದಾಗ ಆ ಕಿಂಡಿ ಕಣ್ಣಂತೆ ಕಾಣುವುದು
ನಿಶಾಚರಿ ಹಕ್ಕಿ ಹಾದುಹೋದರೆ ರೆಪ್ಪೆ ಮಿಡಿಯುವುದು
ಎಂದೆಲ್ಲ ಹೇಳಿ ತಾರಸಿಯ ಶಪಿಸುತ್ತ ಭಾವುಕಳಾದಳು

ಆಮೇಲೆ ನಾನು ನಮ್ಮೂರ ಕತೆ ಹೇಳಿದೆ
ಒಮ್ಮೆ ಊರವರೆಲ್ಲ ಕೂಡಿ ಹೊಳೆಯ ಬಳಿ ಬೆಳದಿಂಗಳೂಟಕ್ಕೆ ಹೋದದ್ದು
ಎಲ್ಲರೂ ತಂತಮ್ಮ ಮನೆಯಿಂದ ತಂದ ಬುತ್ತಿ ಹಂಚಿ ತಿಂದದ್ದು
ಅಂತ್ಯಾಕ್ಷರಿ ಹಾಡಿ ನಕ್ಕಿದ್ದು
ಹೊಳೆಯ ಮೀನುಗಳು ಅಂದು ತಡವಾಗಿ ಮಲಗಿದ್ದು
ಬ್ರಹ್ಮಕಮಲವೊಂದು ಮೊದಲ ಸಲ ಮನುಷ್ಯರನ್ನು
ನಡುರಾತ್ರಿ ನೋಡಿ ಆಶ್ಚರ್ಯಗೊಂಡದ್ದು

ಆಕೆ ನಿದ್ರೆ ಬಂದು ಮಲಗಿದಳು
ಟೆರೇಸಿಗೆ ಬಂದು ಕತ್ತೆತ್ತಿದರೆ ಆಕಾಶದಲ್ಲಿ ಚಂದ್ರನಿಲ್ಲ
ಮೋಡಗಳೊಡಲಲಿ ಮರೆಯಾಗಿರಬೇಕೆಂದುಕೊಂಡು
ವಾಪಸು ರೂಮಿಗೆ ಬಂದರೆ ಚಂದ್ರ ಹಾಸಿಗೆಯಲ್ಲಿ
ವಿಶೇಷವೆಂದರೆ ಅವನಿಗೊಂದು ಜಡೆ
ಕುಂಕುಮಬೊಟ್ಟು ಫಳಫಳ ಹೊಳೆವ ಮೂಗುತಿ

ಕವಿತೆಗೆ ಮೀರಿದ ವಿಷಯವೆಂದರೆ
ನಾನು ರಾತ್ರಿಯಿಡೀ ನಿರ್ನಿದ್ರೆ ಕುಳಿತು
ಆ ಚಂದ್ರನ ಚಂದವ ನೋಡುತ್ತಿದ್ದುದು.

Saturday, May 20, 2017

ನಿನ್ನಂತೆ ನಿದ್ರಿಸಲು

ನಿದ್ರಿಸಿದರೆ ನಿನ್ನ ಹಾಗೆ ನಿದ್ರಿಸಬೇಕು ಮಗಳೇ
ಎಣ್ಣೆ ಹಚ್ಚಿ ಸ್ನಾನ ಮಾಡಿಸಿಕೊಂಡು ಲೋಬಾನಗಂಧಗ್ರಹಿಸಿ
ಗೊಬ್ಬೆ ಕಟ್ಟಿಸಿಕೊಂಡು ಕೈಕಾಲಾಡದಂತೆ
ಕತ್ತಲೆಕೋಣೆಯ ಬೆಚ್ಚನೆ ಹಾಸಿಗೆಯಲ್ಲಿ
ಅಮ್ಮನ ಮಡಿಲಲ್ಲಿ ಮಲಗಿ

ಎಚ್ಚರಾಗಬಾರದು ಮಗಳೇ
ಅಡುಗೆಮನೆಯಲ್ಲಿ ಮಿಕ್ಸಿ ಸದ್ದು
ದೇವರಮನೆಯಲ್ಲಿ ಘಂಟೆ ಸದ್ದು
ಜಗಲಿಯಲ್ಲಿ ಪಟ್ಟಾಂಗದ ಸದ್ದು
ರಸ್ತೆಯಲ್ಲಿ ತಳ್ಳುಗಾಡಿಯವರ ಸದ್ದು
ಯಾರೋ ಬಂದು ಬಾಗಿಲು ತಟ್ಟಿದ ಸದ್ದು
ಏಳಬಾರದು ಮಗಳೇ, ಯಾವ ಸದ್ದೂ
ನಿದ್ರೆಯ ಕೆಡಿಸಬಾರದು

ಎದ್ದರಿದೆ ತರಹೇವಾರಿ ತಲೆಬಿಸಿ
ಓಡಬೇಕಿದೆ ಯಾರದೋ ಏಳಿಗೆಗೆ ಬೆಳ್ಳಂಬೆಳಿಗ್ಗೆ
ನಡುಮಧ್ಯಾಹ್ನಕ್ಕೆ ಕರೆದಿದ್ದಾರೆ ಮೀಟಿಂಗು
ಸಂಜೆಯೊಳಗೆ ಮುಗಿಸಬೇಕಿರುವ ಅಸೈನ್‌ಮೆಂಟು
ಈಮೇಲು ಎಸ್ಸೆಮ್ಮೆಸ್ಸು ವಾಟ್ಸಾಪು ಇಂಟರ್ಕಾಮು
ಎಲ್ಲ ಕಡೆಯಿಂದಲೂ ಅಲರ್ಟುಗಳು
ಹೊರಡಿ ಹೊರಡಿ ತ್ವರಿತಗೊಳಿಸಿ ಇನ್ನೇನು ಕೆಲವೇ ನಿಮಿಷ
ಬೇಗ ಮುಗಿಸಲೂ ಇಟ್ಟಿದ್ದಾರೆ ವಿಧವಿಧ ಆಮಿಷ
ಎಚ್ಚರ: ಮುಗಿಸದಿರೆ ಅದು ಮತ್ಯಾರದೋ ಕೈವಶ

ನಿದ್ರೆಯ ಅಮಲಿನಲ್ಲಿ ಕನಸಿನ ಅಂಬಲದಲ್ಲಿ
ಚಲಿಸುವಾಗ ನಗಬೇಕು ಮಗಳೇ ನಿನ್ನ ಹಾಗೆ
ನಿನಗೆ ಮಾತ್ರ ಗೊತ್ತಿರುವ ಕಾರಣಕ್ಕೆ
ಭುಜ ಹಿಡಿದು ಅಲ್ಲಾಡಿಸಿ ಎಚ್ಚರಗೊಳಿಸಲೆತ್ನೆಸುವವರ
ಧಿಕ್ಕರಿಸಿ ಜಾರಬೇಕು ಸುಷುಪ್ತಿಗೆ ಮತ್ತೆ ಮತ್ತೆ
ನಿದ್ರಿಸಬೇಕು ಹಾಗೆ ಗಡಿಯಾರದ ಮುಳ್ಳುಗಳಿಗೆ ಹೆದರದೆ

ಏನು ಮಾಡಲಿ
ಸೋಮಾರಿಯೆನ್ನುವರು
ಬೇಜವಾಬ್ದಾರನೆನ್ನುವರು
ಹುಚ್ಚನೆನ್ನುವರು ವಿಷಯ ತಿಳಿಸದೆ ನಕ್ಕರೆ

ಅದಕ್ಕೇ, ರಾತ್ರಿ ಮಲಗುವ ಮುನ್ನ
ಸರಿಯಾಗಿಟ್ಟಿರುವೆನೋ ಎಂದು
ಪರಿಕಿಸುವೆ ಅಲಾರ್ಮು ಮೂರ್ಮೂರು ಬಾರಿ
ಎದ್ದುಬಿಡುವೆ ಸಣ್ಣ ಸದ್ದಿಗೂ ಬೆಚ್ಚಿ
ಬಿರಬಿರನೆ ನಡೆಯುವೆ ಧಾವಂತದಲ್ಲಿ
ತಿಳಿದ ತಿಳಿಯದ ಹಾದಿಗಳಲ್ಲಿ
ಸಣ್ಣ ಜೋಕುಗಳ ಕಡೆಗಣಿಸುವೆ
ಈ ಮೊದಲೇ ಕೇಳಿರುವವನಂತೆ
ಯಾವ ಕೆಲಸ ಬಂದರೂ ಬಿಡದೆ
ಓಹೋ ಓಕೇ ನಾಟೆಟಾಲ್ ಎಂದು
ಒಪ್ಪಿಕೊಳ್ಳುವೆ ಜರೂರತ್ತಿನಲ್ಲಿ
ಎಂಜಲು ಹಚ್ಚಿ ಎಣಿಸುವೆ ನೋಟುಗಳ
ಮಿಸ್ಸಾದರೆ ಈಗ, ಎರಡು ಸಾವಿರವೇ ಇಲ್ಲ

ಸುಸ್ತಾಗಿರುವೆ ಮಗಳೇ
ಬಂದಿರುವೆ ನಿನ್ನ ಬಳಿ
ಕರೆದೊಯ್ಯಿ ನಿನ್ನ ನಿದ್ರಾಲೋಕದೊಳಗೆ
ನಡೆಸು ನಿಬಿಡವಿಲ್ಲದ ಖಾಲಿಗುಡ್ಡಗಳಲಿ
ತಾಕಿಸು ಚಾಚಿದ ಕೈ ಚಂದ್ರತಾರೆಯರಿಗೆ
ಎಂದೂ ಕೇಳಿರದ ನಗೆಹನಿಯ ಸಿಂಪಡಿಸು
ಮುಚ್ಚು ಕಿವಿಗಳ ಜಗದೆಲ್ಲ ಗದ್ದಲಗಳಿಗೆ
ಕೇಳಿಸು ನೀನಾಲಿಸುವ ಲಾಲಿ ನನಗೂ.

Wednesday, May 10, 2017

ಬುದ್ಧಪೂರ್ಣಿಮೆ

ಬೋರು ಕೊರೆಯುವ ಲಾರಿ
ರಾತ್ರಿಯಾದದ್ದರಿತು ಸದ್ದು ನಿಲ್ಲಿಸಿದೆ
ಇಡೀ ರಸ್ತೆಗೆ ಮೌನವಪ್ಪಳಿಸಿದೆ ಒಡನೆ
ಕಬ್ಬಿಣದ ಭಾರಕೊಳವೆಗಳ ಜತೆ ದಿನಪೂರ್ತಿ
ಕೆಲಸ ಮಾಡಿರುವ ಹುಡುಗರು
ಮಲಗಿಬಿಟ್ಟಿದ್ದಾರೀಗ ಲಾರಿಯ ಬ್ಯಾನೆಟ್ಟೇರಿ
ತೆಳ್ಳನೆ ಚಾದರ ಹೊದ್ದು.

ದೂರದಲ್ಲೆಲ್ಲೋ ಮಿಂಚು
ಮಳೆಯಾಗುತ್ತಿರಬಹುದು ಅವಳೂರಿನಲ್ಲಿ
ಆಕಾಶಕ್ಕೆ ಕೈಚಾಚಿ ನಿಂತ ಕ್ರೇನು
ತಾಕುತ್ತಿದೆ ಬುದ್ಧನಂದದ ಚಂದ್ರನ
ರಿವರ್ಸ್ ಗೇರಿನಲ್ಲಿರುವ ಕಾರು
ಜೋಗುಳಗೀತೆ ಹಾಡುತ್ತಿದೆ
ತಿರುಗುವ ವೇಗಕ್ಕೆ ಮಾಯವಾಗುವ
ಫ್ಯಾನಿನ ರೆಕ್ಕೆಯ ಮೇಲೇಕೆ ಚಂದಚಿತ್ತಾರ?

ಫ್ರಿಜ್ಜಿನಲ್ಲಿಟ್ಟಿದ್ದ ನುಗ್ಗೆಕಾಯಿ ಹುಳಿ
ಮತ್ತೂ ರುಚಿಯಾಗಿದೆ ಮರುದಿನಕ್ಕೆ.
ಗೊತ್ತಿತ್ತದು ಮುನ್ನಾದಿನವೇ:
ಕೆಲ ಸಾರುಗಳು ಸಾರವತ್ತಾಗುವುದು
ಮಾರನೇದಿನವೇ ಎಂದು.
ಹಾಗಂತ ಮಾಡಿದ ದಿನ ಅದನ್ನುಣ್ಣದೇ
ಫ್ರಿಜ್ಜಿನಲ್ಲಿಡಲಾಗುವುದೇ ಹಾಗೇ?
ಅಳಿದುಳಿದ ಹುಳಿಗಷ್ಟೇ ಲಭ್ಯ
ನಾಲಿಗೆಯ ಚಪ್ಪರಿಕೆಯ ಸದ್ದು ಕೇಳುತ್ತ
ಗಂಟಲೊಳಗಿಳಿವ ಭಾಗ್ಯ.

ದುಃಖಕ್ಕೆ ಅಭೀಪ್ಸೆಯೇ ಮೂಲ;
ಆದರೆ ಆಶಯಗಳಿಗಿಲ್ಲ ಯಾವುದೇ ವಿತಾಳ.
ಅವಳೂರ ಮಳೆ ಧಾವಿಸಲಿ ಇಲ್ಲಿಗೂ
ತೋಯಿಸಲಿ ಬೋರಿನ ಲಾರಿಯನುಳಿದು ಮತ್ತೆಲ್ಲ.
ಒತ್ತರಿಸಿ ಬರಲಿ ಮೋಡ ತುಂಬುವಂತೆ ಆಕಾಶ
ಆದರೂ ಮುಚ್ಚದಿರಲಿ ಸ್ಮಿತವದನ ಚಂದಿರನ.
ಸದೃಶವಾಗಲಿ ಪಂಕದ ಮೇಲಿನ ಚಿತ್ರ
ಖುಷಿಯಾಗುವಂತೆ ನಯನಗಳಿಗೆ.
ಉಲಿಯುತಿರಲಿ ಲಾಲಿಹಾಡು ತೊಟ್ಟಿಲುಗಳಲಿ
ಆವರಿಸುವಂತೆ ನಿದ್ರೆ ಎಲ್ಲ ಶಿಶುಗಳಿಗೆ.
ಮಿಗಲಿ ರುಚಿಯ ಪದಾರ್ಥ ನಾಳೆಗೂ
ಕೆಡದಿರಲಿ ಸದಭಿರುಚಿ ಯಾರಲೂ.

Monday, April 24, 2017

ಅಣ್ಣನೆಂಬ ಅಭಯರಾಗ

ಎಲ್ಲ ದಿಕ್ಕಿನಿಂದಲೂ ಸುತ್ತುವರೆದಿರುವ ಕೇಡಿಗಳು. ನಿಗೂಢವೆನಿಸುವ ಬಣ್ಣಬಣ್ಣದ ಗೋಡೆಗಳ ಕೋಣೆಯೊಳಗೆ ನುಗ್ಗಿರುವ ಹೀರೋ. ಸರಕ್ಕನೆ ತಂತಾನೆ ಮುಚ್ಚಿಕೊಳ್ಳುವ ಬಾಗಿಲುಗಳು. ಅಕ್ಕಪಕ್ಕ ಮೂಲೆಯನ್ನೆಲ್ಲ ನೋಡಿದರೂ ಯಾರೂ ಕಾಣದ ನಿರ್ವಾತ. ಫಕ್ಕನೆ ತುಸು ಮೇಲೆ ನೋಡಿದರೆ, ಅಲ್ಲಿ ತನ್ನನ್ನು ಕಟ್ಟಿದ ಹಗ್ಗಗಳಿಂದ ಬಿಡಿಸಿಕೊಳ್ಳಲು ಹೆಣಗುತ್ತಾ, ಹೆಲ್ಪ್ ಹೆಲ್ಪ್ ಎಂದು ಕೂಗುತ್ತಾ, ಕೊಸರಾಡುತ್ತಿರುವ ನಾಯಕಿ. ನಮ್ಮ ಹೀರೋ ಇನ್ನೇನು ಅತ್ತ ಧಾವಿಸಬೇಕು, ಅಷ್ಟೊತ್ತಿಗೆ ಬೆಚ್ಚಿಬೀಳುವಂತೆ ಕೇಳಿಬರುವ ಖಳನ ಅಟ್ಟಹಾಸ. ಗೋಡೆಗೆ ಅಂಟಿಸಿದ ಪಿಕಿಪಿಕಿ ಕೆಂಪು ದೀಪದಿಂದ ಬರುತ್ತಿರುವ ಸ್ವರ.  ಯಾರು ವಜ್ರಮುನಿಯೇ? ಧ್ವನಿ ಕೇಳಿದರೆ ಅಲ್ಲ. ಎಲ್ಲ ದಿಕ್ಕಿನಿಂದಲೂ ಬಂಧಿಯಾದಂತೆನಿಸುತ್ತಿರುವ ನಮ್ಮ ನಾಯಕ ಈಗ ಹೇಗೆ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ? ಹೇಗೆ ತನ್ನವರನ್ನು ರಕ್ಷಿಸುತ್ತಾನೆ? ಹೇಗೆ ಆ ಗೂಂಡಾಗಳಿಗೆಲ್ಲ ಮಣ್ಣು ಮುಕ್ಕಿಸುತ್ತಾನೆ?

ನಮ್ಮೂರಿಗೆ ಟೀವಿ ಬಂದಿದ್ದ ಹೊಸದರಲ್ಲಿ, ಪಟೇಲರ ಮನೆಯ ಜಗಲಿಯಲ್ಲಿ, ಭಾನುವಾರದ ಸಂಜೆಗಳಲ್ಲಿ ಕಂಡುಬರುತ್ತಿದ್ದ ಸಾಮಾನ್ಯ ದೃಶ್ಯ. ವೃದ್ಧರು-ಕಿರಿಯರು-ಮಕ್ಕಳೆನ್ನದೆ ಎಲ್ಲರೂ ಜಮಾಯಿಸಿ ನೋಡುತ್ತಿದ್ದ ಈ ಸಿನೆಮಾಗಳಲ್ಲಿ ಮಿಂಚುತ್ತಿದ್ದ, ಪತ್ತೇದಾರಿ ಮಾಡಿ ತಪ್ಪಿತಸ್ಥರನ್ನು ಪತ್ತೆ ಹಚ್ಚುತ್ತಿದ್ದ, ಖಳನಾಯಕರಿಗೆ ಬಿಸಿಬಿಸಿ ಕಜ್ಜಾಯವುಣಿಸುತ್ತಿದ್ದ, ಚಂದದ ನಟಿಯರೊಡನೆ ಕುಣಿಯುತ್ತಿದ್ದ, ಸಂಪತ್ತಿಗೆ ಸವಾಲ್ ಹಾಕುತ್ತಿದ್ದ, ಚಪ್ಪಾಳೆ ತಟ್ಟುವಂತಹ ಮಾತುಗಳನ್ನಾಡುತ್ತಿದ್ದ, ಮೈಕನ್ನು ಎಡಗೈಯಿಂದ ಬಲಗೈಗೆ ಹಾರಿಸಿ ಹಿಡಿದು ಹೊಸಬೆಳಕೂ ಎಂದು ಹಾಡುತ್ತಿದ್ದ, ಅತ್ತ ಇತ್ತ ಸುತ್ತ ಮುತ್ತ ಕಾಂತಿಯನ್ನು ಚೆಲ್ಲುತ್ತಿದ್ದ, ನಟಸಾರ್ವಭೌಮನೇ ಆಗಿದ್ದ ನಾಯಕ: ಡಾಕ್ಟರ್ ರಾಜ್‌ಕುಮಾರ್! ಟೀವಿ ನಮ್ಮೂರಿಗೆ ಲಗ್ಗೆಯಿಡುವ ಹೊತ್ತಿಗೆ, ಎಳೆಯರಾಗಿದ್ದ ನಮಗೆ, ಅದಾಗಲೇ ಆಯ್ಕೆಗಳಿದ್ದವು. ಬಹಳಷ್ಟು ಹೊಸ ಹೀರೋಗಳು ಬಂದಿದ್ದರು. ಯಾರು ಚೆನ್ನಾಗಿ ಫೈಟ್ ಮಾಡುವರೋ ಅವರೇ ನಮ್ಮ ನೆಚ್ಚಿನ ಹೀರೋ ಆಗುತ್ತಿದ್ದರು. ಆದರೆ ರಾಜ್ ಬಿಟ್ಟುಕೊಡಲಿಲ್ಲ: ಗೋವಾದಲ್ಲಿ ಸಿ‌ಐಡಿಯಾಗಿ ಮ್ಯಾಜಿಕ್ ಮಾಡಿ ಮೋಡಿ ಮಾಡಿದರು. ಜೇಡರಬಲೆಯಲ್ಲಿ ಸಿಲುಕಿದರೂ ಗನ್ ಹಿಡಿದು ಡಿಶೂಂ ಮಾಡಿದರು. ತೂಗುದೀಪ ಶ್ರೀನಿವಾಸ್ ವಿಕಟ ನಗೆಗೈದರೆ ಮುಗುಳ್ನಗೆಯಲ್ಲೇ ಆತನ ಜಯಿಸಿದರು. ನರಸಿಂಹರಾಜು ಜತೆಗೆ ತಾವೂ ನಗಿಸಿದರು. ಪಂಡರೀಬಾಯಿ ‘ಏನೂಂದ್ರೆ’ ಅಂತ ಕರೆದರೆ ಮುದ್ದು ಬರುವಂತೆ ತಿರುಗಿ ನೋಡಿದರು. ಮನೆಗೆ ಬಂದ ನಾವು, ‘ನೀನೂ ಅಪ್ಪನನ್ನ ಹಾಗೇ ಕರೀಬೇಕು’ ಅಂತ ಅಮ್ಮನನ್ನು ಪೀಡಿಸಿ ಮಜಾ ತಗೊಂಡೆವು.

ಬೆಳಿಗ್ಗೆಯ ವಾರ್ತೆಯ ನಂತರ, ಮಧ್ಯಾಹ್ನದ ಊಟದ ಸಮಯದಲ್ಲಿ, ರಾತ್ರಿ ಕರೆಂಟು ಹೋದಾಗ –ರೇಡಿಯೋ ಹಚ್ಚಿದರೆ ಸಾಕು, ರಾಜ್ ಹಾಡುತ್ತಿದ್ದರು: ಖುದ್ದು ನಮಗೇ ಎಂಬಂತೆ. ಬಾನಿಗೊಂದು ಎಲ್ಲೆ ಎಲ್ಲಿದೇ... ಪೇಟೆಗೆ ಹೋದರೆ, ಬಸ್‌ಸ್ಟಾಂಡ್ ಗೋಡೆಯ ಮೇಲೆ, ದೊಡ್ಡ ಮರದ ಕಾಂಡದ ಮೇಲೆ, ವಾಹನಗಳ ಬೆನ್ನಮೇಲೆ, ಎಲ್ಲಿ ನೋಡಿದರೂ ಅಣ್ಣನೇ. ನಾಟಕಕ್ಕೆಂದು ಹೋದರೆ ಅಲ್ಲೂ ಜ್ಯೂನಿಯರ್ ರಾಜ್‌ಕುಮಾರ್! ಭರಪೂರ ಶಿಳ್ಳೆ.

ರಾಜ್‌ಹೊಸ ಸಿನೆಮಾ ಬಂದಾಗಲೆಲ್ಲ ಅಪ್ಪ ನೆನಪು ಮಾಡಿಕೊಂಡು ಹೇಳುತ್ತಿದ್ದ: ‘ಮಯೂರ’ ಸಿನೆಮಾವನ್ನು ತಾನು ಹನ್ನೆರಡು ಸಲ ಟಾಕೀಸಿಗೆ ಹೋಗಿ ನೋಡಿದ್ದನ್ನು. ತನ್ನ ಗೆಳೆಯನೊಬ್ಬ ಆ ಸಿನೆಮಾವನ್ನು ನೋಡಲೆಂದೇ ನೂರು ದಿನ ಸಾಗರಕ್ಕೆ ಬಸ್ ಹಿಡಿದು ಹೋಗಿತ್ತಿದ್ದುದನ್ನು. ‘ಸಂಪತ್ತಿಗೆ ಸವಾಲ್’ ಚಿತ್ರದ ಯಶಸ್ಸಿನ ಸಮಾರಂಭಕ್ಕೆಂದು ದಾವಣಗೆರೆಗೆ ಅಣ್ಣಾವ್ರು ಬಂದಾಗ ಹೂವಿನ ಹಾಸಿನ ಮೇಲೆ ಅವರನ್ನು ನಡೆಸಿದ್ದನ್ನು. ಆತ ಅದೆಷ್ಟು ಸಿಂಪಲ್ ಮನುಷ್ಯ, ಹೇಗೆ ಯಾರ ಜೊತೆಗಾದರೂ ಖುಷಿಖುಷಿಯಿಂದ ಮಾತಾಡುತ್ತಿದ್ದರು, ಬಿಳಿ ಅಂಗಿ-ಬಿಳಿ ಪಂಚೆ ತೊಟ್ಟು, ತಮ್ಮ ಹೆಸರಿಗೆ ಅನ್ವರ್ಥವಾಗುವಂತೆ ಬದುಕಿದರು, ಗೋಕಾಕ್ ಚಳವಳಿಯನ್ನು ತಾವೇ ಮುನ್ನಡೆಸಿದರು, ಹೇಗೆ ಎಲ್ಲರಿಗೂ ಆದರ್ಶವಾದರು ಎಂಬುದನ್ನು. ‘ಬಂಗಾರದ ಮನುಷ್ಯ’ ಬಿಡುಗಡೆಯಾಗಿ ವರ್ಷಗಟ್ಟಲೆ ಥಿಯೇಟರುಗಳಲ್ಲಿ ಓಡಿದಾಗ ಪತ್ರಿಕೆಯೊಂದರಲ್ಲಿ ಬಂದಿತ್ತಂತೆ: ಇನ್ನೂ ಈ ಸಿನೆಮಾ ನೋಡದವರು ಕನ್ನಡಿಗರೇ ಅಲ್ಲ ಎಂದು.

ರಾಜ್ ಅಪಹರಣವಾದಾಗ ನಾವು ಕಾಲೇಜಿಗೆ ಹೋಗುತ್ತಿದ್ದೆವು. ಎಲ್ಲೆಲ್ಲು ಆವರಿಸಿದ ಮೌನ. ಪ್ರತಿದಿನ ಪತ್ರಿಕೆಗಳಲ್ಲಿ-ಟೀವಿಗಳಲ್ಲಿ ಅದೇ ಸುದ್ದಿ. ಇನ್ನೂ ನ್ಯೂಸ್‌ಛಾನೆಲ್ಲುಗಳ ಆರ್ಭಟ ಶುರುವಾಗಿರದ ಆ ದಿನಗಳಲ್ಲಿ ಸಂಜೆಯ ಟೀವಿ ವಾರ್ತೆ ನೋಡಲು ಎಲ್ಲರ ಮನೆಗಳಲ್ಲೂ ನುಗ್ಗು. ಎಲ್ಲರಿಗೂ ಆತಂಕ, ತಣಿಯದ ಬಾಧಕ. ಕಾಡಿಗೆ ನುಗ್ಗುವ ಧೀರರು, ಇಳಿಸಂಜೆಯ ರೇಡಿಯೋ ಸಂದೇಶಗಳು, ಇಲ್ಲಸಲ್ಲದ ಗಾಳಿಸುದ್ದಿಗಳು. ನೂರೆಂಟು ದಿನಗಳ ನಂತರ ಅವರು ಬಿಡುಗಡೆಯಾಗಿ ಬಂದಮೇಲೆಯೇ ಎಲ್ಲರೂ ನಿಟ್ಟುಸಿರಾದದ್ದು.  ರಾಜ್ ಆಮೇಲೆ ಸಿನೆಮಾ ಮಾಡಲೇ ಇಲ್ಲ. ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾಗ ಇಡೀ ನಾಡೇ ಕಣ್ಣೀರಾಯಿತು.

ರಾಜ್ ಇಲ್ಲವಾಗಿ ಹತ್ತು ವರ್ಷಗಳೇ ಕಳೆದಿವೆ ಈಗ. ಹೊಸಹೊಸ ಹೀರೋಗಳು, ಥರಥರದ ಪ್ರಯೋಗಗಳು, ಯಾವ್ಯಾವುದೋ ದೇಶಗಳಲ್ಲಿ ನಡೆವ ಚಿತ್ರೀಕರಣಗಳು, ಬಿಡುಗಡೆಗೂ ನಾನಾ ವಿಶೇಷಗಳು. ಚಿತ್ರರಂಗ ಏನೆಲ್ಲ ಮಾಡಿದೆ, ನಾವು ಏನೆಲ್ಲ ನೋಡಿದ್ದೇವೆ. ಈ ಎಲ್ಲದರ ನಡುವೆ, ಅಣ್ಣಾವ್ರ ಹಳೆಯ ಸಿನೆಮಾವೊಂದು ಬಣ್ಣ ಹಚ್ಚಿಕೊಂಡು ಮತ್ತೆ ಬರುತ್ತಿದೆ ಎಂದಾದರೆ ಕುತೂಹಲದಿಂದ ಎದುರು ನೋಡುತ್ತೇವೆ.  ಯುಟ್ಯೂಬಿನಲ್ಲಿ ಆರ್‌ಎಜೆಕೆ ಎಂದು ಟೈಪ್ ಮಾಡಿದರೆ ಸಾಕು, ಅವರ ಸಿನೆಮಾಗಳನ್ನೂ, ಹಾಡುಗಳನ್ನೂ, ಡೈಲಾಗುಗಳನ್ನೂ ಸೂಚಿಸುತ್ತದೆ ತಂತ್ರಾಂಶ. ಸುಮ್ಮನೆ ಕ್ಲಿಕ್ ಮಾಡಿ: ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು -ರಾಜ್ ಹಾಡತೊಡಗುತ್ತಾರೆ ನಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ. ರಾಜ್ ಡೈಲಾಗುಗಳ ಡಬ್‌ಸ್ಮಾಶ್‌ಗಳು ಸೂಪರ್‌ಹಿಟ್. ಹಾರ್ಡ್‌ಡಿಸ್ಕ್ ಹೊಕ್ಕು ಭಾಗ್ಯದ ಲಕ್ಷ್ಮೀ ಬಾರಮ್ಮಾ ಎಂದು ಕರೆದರೆ, ರಾಜ್ ಬಂದು ‘ಏನು ಮಾಯವೋ ಏನು ಮರ್ಮವೋ’ ಎನ್ನುತ್ತಾ ನಮ್ಮನ್ನು ನಗಿಸುತ್ತಾರೆ. ‘...ಆ‌ಆ‌ಆ ಜಾರಿಣಿಯ ಮಗ’ –ಎಂದವರು ಅವುಡು ಕಚ್ಚಿ ಇತ್ತ ತಿರುಗಿದರೆ ನಮ್ಮ ಮೈ ರೋಮಾಂಚಗೊಳ್ಳುತ್ತದೆ.

ನಮಗೂ ಅದೇ ಬೇಕಾಗಿದೆ. ಆಫೀಸು ಮುಗಿಸಿ ಮನೆಗೆ ಬಂದು ಟೀವಿ ಹಾಕಿದರೆ ದೇವತಾ ಮನುಷ್ಯನೊಬ್ಬ ಬರಬಾರದೇ ಎನಿಸುತ್ತದೆ. ಕೆಂಪಂಗಿ ತೊಟ್ಟು ನಗುನಗುತಾ ನಲೀ ಎಂದು ಉತ್ಸಾಹದ ಬುಗ್ಗೆಯಂತೆ ಯಾರಾದರೂ ಸಕ್ಕರೆ ಹಂಚಲಿ ಎನಿಸುತ್ತದೆ. ಸುಸ್ತಾಗಿ ಬಂದ ಹೆಂಡತಿಯ ಬಯಕೆಯೂ ಅದೇ: ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ ಅಂತ ಹಾಡಬಾರದೇ ಗಂಡ! ಸಿಟ್ಟಾದ ಈ ಸತ್ಯಭಾಮೆಯನ್ನು ಅನುನಯಿಸುವುದಾದರೂ ಹೇಗೆ? ರಾಜ್ ಹೇಳಿಕೊಟ್ಟಿದ್ದಾರೆ. ಒಡಹುಟ್ಟಿದವರೊಂದಿಗೆ ಹೇಗೆ ಬಾಳಬೇಕೆಂಬುದಕ್ಕೆ ರಾಜ್ ಬಳಿಯಿದೆ ಸೂತ್ರ. ಸಜ್ಜನಿಕೆ ಬಿಟ್ಟುಕೊಡದೆಯೂ ಅನ್ಯಾಯದ ವಿರುದ್ಧ ಹೋರಾಡುವುದು ಹೇಗೆ? ರಾಜ್ ಸಿನೆಮಾ ನೋಡಿ ಸಾಕು. ಅದಕ್ಕೇ ಅವರು ಅಂದೂ, ಇಂದೂ, ಮುಂದೂ ಪ್ರಸ್ತುತ. ಸದಾ ಮಿನುಗಬಲ್ಲ ಧ್ರುವತಾರೆ. ಯಾವಾಗ ಬಯಸಿದರೂ ಬರುವ ಶ್ರಾವಣ. ಬಿಸಿಲುಮಳೆಯಿಲ್ಲದಿದ್ದರೂ ಮೂಡಬಲ್ಲ ಕಾಮನಬಿಲ್ಲು.

[ಡಾ। ರಾಜಕುಮಾರ್  ಹುಟ್ಟುಹಬ್ಬಕ್ಕಾಗಿ ಬರೆದದ್ದು . ವಿಶ್ವವಾಣಿಯ ವಿರಾಮದಲ್ಲಿ ಪ್ರಕಟಿತ. ]

Monday, April 10, 2017

ಭೇದನ

ಬಾಗಿಲಿಗೆ ಅಡ್ಡವಾಗಿ ಬಲೆಯೊಂದ ಕಟ್ಟಿದೆ ಜೇಡ
ನಾನು ಹೋಗಲೇಬೇಕಿರುವ ದಾರಿ
ಬಾಗಿಲಾಚೆ ಕಾಯುತ್ತಿರುವವರು ಬಹಳ
ಸಮಯ ಪರಿಪಾಲನೆಗೆ ಈಗ ಎಂದಿಲ್ಲದ ಮಹತ್ವ
ಹೊತ್ತಿಗೆ ಸರಿಯಾಗಿ ತಲುಪುವುದು ಅತ್ಯಗತ್ಯ

ಜೇಡರಬಲೆಯನ್ನು ಭೇದಿಸಿ ನುಗ್ಗುವುದೇನು ಕಷ್ಟದ ಮಾತಲ್ಲ
ಮೈಗೆ ತಾಕಿಸಿಕೊಳ್ಳದಂತೆ ಒಮ್ಮೆ ಕೈಯಾಡಿಸಿದರೆ ಸಾಕು,
ಬಿಳಿಬಿಳಿಯೆಳೆಗಳು ಮುದ್ದೆಯಾಗಿ ಕಸಸಮಾನ; ದಾರಿ ಸುಗಮ

ಆದರೆ ಎತ್ತಿದ ಕೈಯ ಹಿಂತೆಗೆದುಕೊಳ್ಳುವಂತೆ ಮಾಡುತ್ತಿದೆ
ಬಲೆಯ ಮಧ್ಯೆ ಹೊಂಚಿ ಕುಳಿತಿರುವ ಜೇಡಾಧಿಪತಿ
ಇಲ್ಲ, ನನ್ನಂಥ ದಡೂತಿ ಜೀವಿಯ ಬಲಿಗಾಗಿಯೇನು ಅದು ಕಾದಿಲ್ಲ
ದಾರಿ ತಪ್ಪಿ ಬಂದ ನೊಣ, ರಕ್ತವನ್ನರಸಿ ಬರುತ್ತಿರುವ ನುಸಿ,
ಗುಂಯ್ಗುಡುತ್ತ ಹಾರುವ ನೊರ್ಜು, ಕಪ್ಪು ಹಾತೆ, ಆಯಸ್ಸು ಮುಗಿದ ಹುಳ:
ಹೀಗೇ ಸಾಯಬೇಕೆಂದು ಹಣೆಮೇಲೆ ಬರೆದಿದ್ದರೆ
ಯಾರು ತಾನೇ ತಡೆದಾರು ಕೀಟವ- ಬಲೆಯ ವಿನಹ

ಜೇಡರಬಲೆಗೆ ಆಹುತಿಯಾಗುವ ಆಸಾಮಿ ನಾನಲ್ಲವೆಂಬ
ವಿಶ್ವಾಸದಲ್ಲಿ, ಅತ್ಯಾಕರ್ಷಕವೆನಿಸುತ್ತಿರುವ ಬಲೆಯ
ಹೆಣಿಕೆಯ ಚಂದ ನೋಡುತ್ತ ನಿಂತ ಈ ಘಳಿಗೆ,
ನನ್ನನ್ನು ತಡೆದು ನಿಲ್ಲಿಸಿದ ಶಕ್ತಿ ತನ್ನದೇ ಎಂಬಂತೆ
ಬಾಗಿಲ ಆಚೀಚೆ ಚೌಕಟ್ಟಿಗೆ ಬಿಗಿದ ಎಳೆಗಳನೊಮ್ಮೆಲೇ
ಎಳೆದು ಜಗ್ಗಿ ಇಡೀ ಬಲೆಯೇ ಜೇಡವಾಗಿ ಹೂಂಕರಿಸಿ
ಅಟ್ಟಹಾಸಗೈದಂತೆ ಭಾಸವಾಗಿ ಮೈ ನಡುಗಿ

ಶತ್ರು ಯಾವ ರೂಪದಲ್ಲಿ ಬರುವನೋ ಬಲ್ಲವರಾರು
ಸಮಯದ ಮುಳ್ಳುಗಳು ಸರಸರ ಸರಿವ ಈ ಕಾಲದಲ್ಲಿ
ಯಾರನ್ನೂ ನಂಬುವಂತಿಲ್ಲ. ಕ್ಷಣಕ್ಷಣವೂ
ಬಹಳ ದುಬಾರಿಯಾಗಿರುವಾಗ ಈ ಜಂತು
ರಾತ್ರೋರಾತ್ರಿ ಹೀಗೆ ನನ್ನ ದಾರಿಗಡ್ಡವಾಗಿ ಬಲೆ ಹೆಣೆವ
ಜರೂರತ್ತಾದರೂ ಏನಿತ್ತು? ವಿಳಂಬಸೂತ್ರದಿಂದ
ನನ್ನನ್ನು ಸೋಲಿಸಿ, ಗೆದ್ದ ನಿಲುವಿನಲ್ಲಿ ಅದು ಬೀಗುವಾಗ
ಮೊಸದ ವಾಸನೆಯರಿತು ನಾನಿನ್ನೇನು ಬಲೆತೊಡೆದು
ಮುನ್ನುಗ್ಗಬೇಕೆಂದುಕೊಳ್ಳುತ್ತಿರುವಾಗ

ಹಿಂದಿನಿಂದ ಶರವೇಗದಲ್ಲಿ ಬಂದ ಅಪರಿಚಿತ
ನನ್ನನ್ನೂ ಬಾಗಿಲನ್ನೂ ದಾಟಿ ಬೆನ್ನಿಕ್ಕಿ ಹೋಗಿ
ಕೆಲವೇ ನಿಮಿಷಗಳಲ್ಲಿ ಚಪ್ಪಾಳೆ-ಶಿಳ್ಳೆಗಳ ಸದ್ದೂ
ವಿಜೇತರಿಗೆ ಹಾಕಿದ ಜೈಕಾರ ಘೋಷವೂ ತೇಲಿಬಂದು
ತುಂಡುತುಂಡಾಗಿ ಮುದುಡಿ ಚದುರಿದ ಬಿಂದಿಲು
ನನ್ನ ಮುಖಕ್ಕೆ ಬಂದು ಮೆತ್ತಿದಂತಾಗಿ
ಅಕೋ, ಅವಸರವಸರದಿ ಗೋಡೆಯಲ್ಲಿ ಸರಿಯುತ್ತಿರುವ ಜೇಡ
ಹಾಗೂ ಹಾರಿ ಹಾರಿ ಅದನ್ನು ಹಿಡಿಯಲೆತ್ನಿಸುತ್ತಿರುವ ನಾನು.

Friday, April 07, 2017

ಇರಿಕೆ

ಕಂಕುಳ ಕೂಸಿನೊಡದೆ ದೂರದ ಸರ್ಕಾರಿ ಬಾವಿಯಿಂದ
ದಿನಕೆ ಹತ್ತು ಬಾರಿ ಪ್ಲಾಸ್ಟಿಕ್ ಕೊಡದಲಿ ನೀರೊಯ್ಯುವಾಗ
ಕೊಡ ವಾಲಿ ಬೀಳದಂತೆ, ಜೀವಜಲ ಭೂಮಿಪಾಲಾಗದಂತೆ,
ಶ್ರಮ ವ್ಯರ್ಥವಾಗದಂತೆ ನೀಲವ್ವನಿಗೆ ನೆರವಾಗುವ ಇರಿಕೆ

ಸಿಲಾವರದ ಪಾತ್ರೆ ಮಾರಲು ಬರುವ ದೊಡ್ಡದನಿಯ
ಆ ಹೆಂಗಸು ಒಂದರ ಮೇಲೊಂದರಂತೆ ಪೇರಿಸಿದ
ಪಾತ್ರೆ-ಪಡಗಗಳನು ತಲೆಮೇಲೆಯೇ ನಿಲ್ಲಿಸುವ
ಸೆಣಬಿನ ದಾರ ಸುತ್ತಿ ಸುತ್ತಿ ಮಾಡಿದ ಇರಿಕೆ

ಗೊಬ್ಬರದ ಹೆಡಿಗೆ ತಲೆಮೇಲಿಟ್ಟು ತೋಟದ ಕೊರಕಲಿಳಿಯುವ
ಆಳುಮಕ್ಕಳು ನಿರಾತಂಕ ಕೈ ಬೀಸುವಂತೆ ಮಾಡುವ ಇರಿಕೆ
ಗದ್ದೆ ನೆಟ್ಟಿಗೆ ಹೊರಟ ಸಾಲುಸಾಲು ರೈತ ಮಹಿಳೆಯರ
ತಲೆ ಮೇಲಿನ ಬುತ್ತಿಬಟ್ಟಲು ಸ್ಥಿರವಾಗಿರುವಂತೆ ಕಾಯುವ ಇರಿಕೆ
ತಾರಕ್ಕಾ ಬಿಂದೀಗೆ ಹಾಡಿಗೆ ನರ್ತಿಸುವ ಚಿಣ್ಣರು ಹೊತ್ತ ಬಿಂದಿಗೆ
ಜಾರಿ ಮುಜುಗರವಾಗದಂತೆ ಕಾಪಾಡುವ ಇರಿಕೆ

ಮಷಿನ್ನು ಬರುವ ಮೊದಲು, ಗೂಟದ ಮುಂದೆ ಕಾಲುಗಳ
ಆ ಕಡೆ ಈ ಕಡೆ ಹಾಕಿ ಕೂತ ಬೆಳ್ಳಿಗೂದಲ ನನ್ನಜ್ಜಿ
ಹಗ್ಗಗಳನೆಳೆಯುತ್ತ ಗಂಟೆಗಟ್ಟಲೆ ಮಜ್ಜಿಗೆ ಕಡೆಯುವಾಗ,
ಒಡಲಲಿ ಬೆಣ್ಣೆಯಾವಿರ್ಭವಿಸುತ್ತಿದ್ದ ಕಡಾಮಡಿಕೆ
ಅತ್ತಿತ್ತ ಜಾರದಂತೆ ತಡೆಯುತ್ತಿದ್ದ ಇರಿಕೆ

ಇನ್ನೂ ಕತ್ತು ಗಟ್ಟಿಯಾಗದ ಮಗಳು
ಒಂದೇ ದಿಕ್ಕಿಗೆ ಮುಖ ಮಾಡಿ ಮಲಗದಂತೆ,
ತಲೆ ಯಾವೆಡೆಗೂ ಹೊರಳದಂತೆ ಹಿಡಿದಿಡುವ
ಮೆದುಬಟ್ಟೆಯಿಂದ ಮಾಡಿದ ಪುಟ್ಟ ಇರಿಕೆ

ಹುಡುಕುತ್ತಿದ್ದೇನೆ ನಾನೂ ಒಂದು ಇರಿಕೆ...
ಯಾವ ಸಿದ್ಧಾಂತದೆಡೆಗೂ ವಾಲದಂತೆ
ವಾಸನೆಗಳಿಗೆ ಥಳಥಳಗಳಿಗೆ ಪೂರ್ವಾಗ್ರಹಗಳಿಗೆ
ಬಲಿಯಾಗದಂತೆ ನನ್ನನ್ನು ಸಂಬಾಳಿಸುವ ಇರಿಕೆ
ದಿಟ್ಟಿ ಚದುರಿಸದೆ ಲಯ ತಪ್ಪಿಸದೆ ಹೆಜ್ಜೆಯಿಡುವಂತೆ
ತಲೆಯ ನೆಟ್ಟಗಿರಿಸುವಂತಹ ಇರಿಕೆ
ನೇರ ನಡಿಗೆಯಲೂ ಸರಿಗ್ರಹಿಕೆಗೆ ಮುಳುವಾಗದಂತೆ
ಕಣ್ಣ ತೆರೆದೇ ಇಟ್ಟಿರುವಂತಹ ಇರಿಕೆ
ಬೀಳುತ್ತಿರುವವನ ಕೈ ಹಿಡಿದೆಳೆದೆತ್ತುವಾಗಲೂ
ನನ್ನ ವಜನು ತಪ್ಪದಂತೆ ಕಾಯುವ ಇರಿಕೆ

ಹುಡುಕುತ್ತಿದ್ದೇನೆ ಒಂದು ಇರಿಕೆ,
ನನ್ನ ನಾ ಹಿಡಿದಿಟ್ಟುಕೊಳ್ಳಬಹುದಾದ ಇರಿಕೆ.

Monday, April 03, 2017

ಗಿಲಗಿಚ್ಚಿ

ಅತಿಸಣ್ಣ ಸದ್ದಿಗೂ ಬೆಚ್ಚಿಬೀಳುವ ಮಗಳು
ಅತಿಸಣ್ಣ ಚಲನೆಗೂ ಸ್ಪಂದಿಸುವ ಗಿಲಗಿಚ್ಚಿ

ಮಗಳಿಗೂ ಗಿಲಗಿಚ್ಚಿಗೂ ಸಖತ್ ದೋಸ್ತಿ
ಆಕೆ ಅತ್ತಾಗಲೆಲ್ಲ ಸದ್ದು ಹೊಮ್ಮಿಸಿ ಸುಮ್ಮನಾಗಿಸುವುದು
ಆಕೆ ನಕ್ಕಾಗಲೆಲ್ಲ ತಾನೇ ಕಾರಣವೆಂದು ಕುಣಿಯುವುದು
ಆಕೆ ಕೈಚಾಚಿದಾಗ ಪುಟ್ಟ ಬೆರಳುಗಳೊಳಗೆ ಸೇರಿಕೊಳ್ಳುವುದು
ಹಗಲು ನಿದ್ರಿಸಿ ರಾತ್ರಿ ಅಮ್ಮನಿಗೆ ಜಾಗರವಾಗದಂತೆ
ಅವಳನ್ನೆಚ್ಚರಿರಿಸುವುದು- ಎಲ್ಲಾ ಗಿಲಗಿಚ್ಚಿಗೆ ಇಷ್ಟದ ಕೆಲಸ.

ಯಾವ ಕುಶಲಕರ್ಮಿಯ ಕೈಯಲ್ಲಿ ಹದಗೊಂಡಿದ್ದೋ,
ಸಾಗರದ ಜಾತ್ರೆಯಲಿ ಬಿಕರಿಗೊಂಡು
ಅಲ್ಲಿಂದ ಜಾತ್ರಾ ಸ್ಪೆಶಲ್ ಬಸ್ಸಲ್ಲಿ ಊರಿಗೆ ಹೋಗಿ
ಊರಿಂದ ಮೊಮ್ಮಗಳಿರುವಲ್ಲಿಗೆ ಅಜ್ಜನ ಕೈಚೀಲದಲ್ಲಿ
ಕುಳಿತು ದೂರದಾರಿ ಪಯಣಿಸಿ ಬರುವ ಗಿಲಗಿಚ್ಚಿಗೆ

ಗುಟ್ಟು ಕಾಯ್ದಿಡಲು ಬರುವುದಿಲ್ಲ
ಬಸ್‌ಸ್ಟಾಂಡಲ್ಲಿ ಸಿಕ್ಕವರು, ಬಸ್ಸಲ್ಲಿದ್ದವರು,
ದಾರಿ ನಡುವಿನ ಡಾಬಾದಣ್ಣ -ಎಲ್ಲರಿಗೂ ತಿಳಿದಿದೆಯೀಗ
ಹೊಸ ಅಜ್ಜ ಹೊರಟಿರುವುದು ಮೊಮ್ಮಗಳ ನೋಡಲು ಎಂದು
ಗಾಡಿಯೆತ್ತಿಗೆ ಕಟ್ಟಿದ ಗಂಟೆಯಂತೆ ದಾರಿಯುದ್ದಕ್ಕೂ ಜಿಲ್‌ಜಿಲ್ ಸಂಭ್ರಮ
ಪೇಪರಿನಲ್ಲಿ ಸುತ್ತಿ ಬಟ್ಟೆಗಂಟಿನೊಳಗಿಟ್ಟರೂ ನಿಲ್ಲದ ಅನುರಣನ

ನಗಿಸುವ, ಅಳಿಸುವ, ಕುಣಿಸುವ, ಜೋಗುಳವಾಗುವ
ಗಿಲಗಿಚ್ಚಿ ಎಲ್ಲ ರಾಗಗಳ ಬಲ್ಲ ಸಮೃದ್ಧ ಗಾಯಕಿ
ಬಣ್ಣ ಮೈಯ ಸಣ್ಣ ಹಿಡಿಕೆಯ ಚಿಮ್ಮುವುತ್ಸಾಹದಿಂದ
ನನ್ನ ಮಗಳ ಕಣ್ಣ ಗೊಂಬೆಯಲ್ಲಿ ಕುಣಿವ ನರ್ತಕಿ
ಹಟ ಹಿಡಿದ ಕಂದನ ಕ್ಷಣದಿ ಮರುಳು ಮಾಡುವ ಯಕ್ಷಿಣಿ
ಸ್ವನಮಾತ್ರದಿಂದ ಸಡಗರ ಹಂಚುವ ಮಾಟಗಾತಿ
ತೊಟ್ಟಿಲಲ್ಲಿ ಹಾಸಿಗೆಯಲ್ಲಿ ಮಗ್ಗುಲಲ್ಲಿ ಮಗಳ ಜತೆಗಾತಿ

ಮನೆಯವರನೆಲ್ಲ ನಿದ್ರೆಯಾವರಿಸಿದ ಮಧ್ಯರಾತ್ರಿಯೂ
ತಾನು ಎಚ್ಚರಿದ್ದು ಪುಟ್ಟಮಗುವ ಕಾಯುವುದು
ಬೊಮ್ಮಟೆಗೆ ಹಸಿವಾಗಿ ಎಚ್ಚರಾಗಿ ಕೈಕಾಲಾಡಿಸಿದ್ದೇ
ಗಿಲಗಿಚ್ಚಿ ಸದ್ದು ಮಾಡಿ ಅಮ್ಮನನ್ನೆಬ್ಬಿಸುವುದು
ತುಟಿಯಿಂದ ಅಳು ಹೊರಬರುವ ಮೊದಲೆ
ಕೂಸಿನ ಹೊಟ್ಟೆ ತುಂಬುವಂತೆ ಮಾಡಿ ಲಾಲಿ ಹಾಡುವುದು
ಈ ಜಗತ್ತಲ್ಲಿ ಗಿಲಗಿಚ್ಚಿ ಸೃಷ್ಟಿಯಾದ ದಿನವೇ
ಮಕ್ಕಳೆಲ್ಲ ರಚ್ಚೆ ನಿಲ್ಲಿಸಿ ಆಡಲು ಕಲಿತದ್ದು ಎಂಬಂತೆ
ಎಲ್ಲ ಮಕ್ಕಳ ಮೊದಲ ಆಟಿಕೆ ತಾನೇ ಎಂಬಂತೆ
ಬಿಂಕದಿಂದ ಬಿನ್ನಾಣದಿಂದ ಗಿಲಿಗುಟ್ಟುವುದು.

Wednesday, March 29, 2017

ಹೇಮಲಂಬಿಯಲಡಿಯಿಡುತ...

ಮಾವಿನ ಸೀಸನ್ನಿಗೆ ಕಾಯದ ಜಾಹೀರಾತಿನ
ನಟಿ ತಲೆಯೆತ್ತಿ ಕುಡಿಯುತ್ತಿದ್ದಾಳೆ ಮಾಜಾ
ಹೂದಾನಿಯಲ್ಲಿನ ಪ್ಲಾಸ್ಟಿಕ್ ಹೂವಿಗೆ ಬಂದಿದೆ
ದಿಕ್ಕು ತಪ್ಪಿದ ಒಂದು ಮರಿದುಂಬಿ
ಟೆರೇಸ್ ಗಾರ್ಡನಿನ ಪುಟ್ಟ ಪಾಟಲ್ಲಿ ಬೆಳೆದ
ಮಲ್ಲಿಗೆ ನರುಗಂಪ ಬೀರುತ್ತಿದೆ
ಫ್ಲೈಓವರಿನ ಕಂಬಗಳಿಗೆ ಹಬ್ಬಿಸಿದ
ಬಳ್ಳಿಗಳು ಹಸಿರ ಸೂಸುತ್ತಿವೆ
ಸ್ಪ್ರಿಂಕ್ಲರಿನಿಂದ ಚಿಮ್ಮಿದ ನೀರನ್ನೇ ಮಳೆಯೆಂದು
ಭಾವಿಸಿದ ವಸುಂಧರೆ ಗಂಧ ಹೊಮ್ಮಿಸುತ್ತಿದೆ
ಟೋನು ಬದಲಿಸಿದ ಅಲಾರ್ಮು ಬೆಳಬೆಳಗ್ಗೆ
ಕೋಗಿಲೆಯಂತೆಯೇ ಕೂಗುತ್ತಿದೆ ಪಂಚಮದಲ್ಲಿ
ಹಬ್ಬಕ್ಕೆಂದು ತೊಳೆದು ಹಾಕಿದ ಪ್ಲಾಸ್ಟಿಕ್ ತೋರಣ
ಮನೆಯ ಬಾಗಿಲಲ್ಲಿ ನಳನಳಿಸುತ್ತಿದೆ
ಸನ್‌ಸ್ಕ್ರೀನ್ ಲೇಪಿಸಿಕೊಳ್ಳುತ್ತ ಹೊಸ್ತಿಲಲ್ಲಿ ನಿಂತಿರುವ
ಹೊಸ ಸಂವತ್ಸರ ಮುದ್ದಾಗಿದೆ.

ಹೇಮಲಂಬ ವರ್ಷದಲ್ಲಿ ನಿಮಗೆ ಬಾಯಾರಿದಾಗೆಲ್ಲ ಕುಡಿಯಲು ಸಬ್ಸೇ ಶುದ್ಧ ಪಾನಿಯೇ ಸಿಗಲಿ. ಸಂತೂರ್ ಮಮ್ಮಿ ಗೋದ್ರೇಜ್ ಹೇರ್‌ಡೈ ಹಾಕಿದ ಅಪ್ಪನನ್ನು ಕಂಡು ನಾಚಿಕೊಳ್ಳಲಿ. ಸೋಪಿನ ನೀರಲ್ಲಿ ಮುಳುಗೆದ್ದ ಅಂಗಿಯ ಕಲೆ ಮಾಯವಾಗಲಿ. ಟೀ ಕುಡಿಯುತ್ತಿದ್ದಂತೆಯೇ ಜ್ವರ ಇಳಿಯಲಿ. ಕತ್ತಲಲ್ಲಿ ತೆಗೆಯಲೆಣಿಸಿದ ಸೆಲ್ಫಿಗೂ ನಿಮ್ಮ ಮೊಬೈಲು ಬೆಳಕು ತೋರಲಿ. ದಿನಗಳು ಮತ್ತಷ್ಟು ಚಂದವಾಗಲಿ. ಶುಭಾಶಯಗಳು.

Tuesday, March 21, 2017

ನಿವೇದನೆ

ಸೀದಾ ಹೆದ್ದಾರಿಯ ಮೇಲೇ ಸಾಗುತ್ತವೆ ರಾತ್ರಿಯ ಬಸ್ಸುಗಳು
ಆದರೆ ಹಗಲಿನ ಬಸ್ಸುಗಳಿಗೆ ಪ್ರತಿ ನಗರ ಬಂದಾಗಲೂ
ಹೆದ್ದಾರಿಯಿಂದ ಕೆಳಗಿಳಿದು ನಗರದ ಒಳಹೊಕ್ಕು
ಮುಖ್ಯನಿಲ್ದಾಣಕ್ಕೆ ಭೇಟಿಯಿತ್ತೇ ಬರುವ ದರ್ದು
ರಾತ್ರಿಯಲ್ಲಿ ಕಣ್ಣು ಕುಕ್ಕುವ ವಾಹನಗಳು
ಹಗಲಲ್ಲಿ ಮೈಮೇಲೇ ಬರುತ್ತವೆ ಓತಪ್ರೋತ
ದಿಗಿಲು ಹುಟ್ಟಿಸುತ್ತವೆ ಅಪ್ಪಳಿಸುವ ಬಿಸಿಲ ಝಳದಂತೆ

ಹಗಲ ಪಯಣದಲ್ಲಿ ಮೈಮರೆವಿನ ನಿದ್ರೆಯಿಲ್ಲ
ತಾನಿಳಿವ ನಿಲ್ದಾಣ ಬಂತೇ ಬಂತೇ ಬಂತೇ
ಎಂಬ ಆತಂಕದಲ್ಲೇ ಕಿಟಕಿಯಿಂದ ಹೊರಗೆ ನೋಡುತ್ತ
ಚಲಿಸುವ ಬೋರ್ಡುಗಳಲ್ಲಿನ ವಿಳಾಸ ಓದಲು ಯತ್ನಿಸುತ್ತ
ಸಣ್ಣ ಚೀಟಿಯಲ್ಲಿ ಕಾಕಲಿಪಿಯಲ್ಲಿ ಬರೆದ ಪದಗಳಿಗೆ
ಹೊಂದಾಣಿಕೆಯಾಗುವ ಯಾವ ಶಬ್ದ ಕಂಡರೂ
ಹೌಹಾರಿ ಪಕ್ಕ ಕುಳಿತವನ ಬಳಿ ವಿಚಾರಿಸಿ
ವಿಶ್ವಾಸ ಸಾಕಾಗದೆ ಕಂಡಕ್ಟರ್ ಬಳಿಯೂ ಕೇಳಿ

ಆದರೂ ಗಡಿಬಿಡಿಯಲ್ಲಿ ತಪ್ಪು ನಿಲ್ದಾಣದಲ್ಲೇ ಇಳಿದಿದ್ದಾನೆ
ಮಹಾನಗರದ ಹೊಸಾ ಗಲಿಬಿಲಿ ಅತಿಥಿ
ಬ್ಯಾಟರಿ ಮುಗಿದ ಮೊಬೈಲು, ನೆನಪಿಲ್ಲದ ಗೆಳೆಯನ ನಂಬರು
ಭ್ರಮಿತನಂತೆ ನೋಡುತ್ತಿದ್ದಾನೆ ಅತ್ತ ಇತ್ತ ಸುತ್ತ ಮುತ್ತ
ಚೀಟಿಯ ಮಡಿಕೆಗಳ ಮತ್ತೆಮತ್ತೆ ಬಿಡಿಸುತ್ತಾ
ಗೂಡಂಗಡಿಗಳ ದಾರಿಹೋಕರ ಸೆಕ್ಯುರಿಟಿ ಗಾರ್ಡುಗಳ
ಬಳಿ ಹೋಗಿ ಆತಂಕದ ಕಣ್ಣಲ್ಲಿ ಒಣಗಿದ ದನಿಯಲ್ಲಿ
ಯಾಚಿಸುತ್ತಿದ್ದಾನೆ ಅತಂತ್ರ ವಿಧಾನಸಭೆಯ ಮತಾಕಾಂಕ್ಷಿ
ಆಟೋವಾಲಾಗಳಿಗೋ ಇವನ ನಡಿಗೆಯಲ್ಲೇ ಪತ್ತೆಯಾಗಿದೆ
ಕುರಿಗೆ ಯದ್ವಾತದ್ವಾ ರೇಟು ಹೇಳಿ ಇನ್ನಷ್ಟು ದಿಕ್ಕು ತಪ್ಪಿಸಿ

ಕಟ್ಟಡಗಳ ಮಧ್ಯದ ಸಣ್ಣ ಒಣಿಯಲ್ಲಿಳಿಯುತ್ತಿದ್ದಾನೆ ಸಂಜೆಸೂರ್ಯ
ಎತ್ತಲೋ ಸಾಗುತ್ತಿರುವ ಕವಿತೆಯ ರಕ್ಷಿಸಲು ಬರುವ
ತಿರುವಿನಂತೆ ಎದುರಾಗುತ್ತಿದ್ದಾರೆ ಒಬ್ಬ ವಾಕಿಂಗ್ ಅಂಕಲ್
ಕನ್ನಡದಲ್ಲಿ ಉತ್ತರಿಸುತ್ತಿದ್ದಾರೆ ಕಳವಳದ ಕಂದನಿಗೆ
ಸುಲಭಗೊಳಿಸುತ್ತಿದ್ದಾರೆ ತಿಳಿಯಾಗಿ ಬಿಡಿಸಿ ದಾರಿಯ ಚಿತ್ರ
ಕುಲುಕುತ್ತಿದ್ದಾರೆ ಕೈ, ನಗುಮೊಗದಿಂದ ಚೆಲ್ಲಿ ಬೆಳಕು

ನಡೆದಿದ್ದಾನೆ ಅಭ್ಯಾಗತ ಆ ಬೆಳಕ ಬಲದಲ್ಲಿ
ನಕ್ಷೆಯ ದೆಸೆಯಿಂದ ಸುಲಭವಾದ ತಿರುವುಗಳು
ಅಕ್ಷಯವೆನಿಸುವ ಟ್ರಾಫಿಕ್ಕಿನ ಪಕ್ಕದ ಕಾಲುದಾರಿಯೀಗ
ಸುರಕ್ಷಿತವೆನಿಸುತ್ತಿರುವಾಗ, ಅವರು ಹೇಳಿದ್ದ ಗುರುತುಗಳು
ತತ್ತಕ್ಷಣ ಕಣ್ಣಿಗೆ ಬೀಳುತ್ತಿರುವಾಗ, ಅತ್ತ ದಿಕ್ಕಿಂದ ತನ್ನನ್ನೇ
ಹುಡುಕಿಕೊಂಡು ಬರುತ್ತಿರುವ ಗೆಳೆಯನ ಕಂಡು
ಹೃದಯ ತುಂಬಿಬಂದು ಓಡಿ ಬಿಗಿದಪ್ಪಿಕೊಂಡು

ಕಥೆಗಳಿಗಷ್ಟೇ ಏಕೆ, ಕವಿತೆಗಳಿಗೂ ಸಿಗಲಿ ಸುಖಾಂತ್ಯ
ಅನಾಥ ಸಾಲುಗಳಿಗೆ ಸಿಗಲಿ ಸೋಗೆಯದಾದರೂ ಸೂರು
ದೊರೆಯಲಿ ಸಹಾಯಹಸ್ತ ಕಳೆದು ಹೋದ ಶಬ್ದಗಳಿಗೆ
ನಗಲಿ ಕವಿತೆ ನಿಸೂರಿನ ಲಘುವಲ್ಲಿ, ನೆರಳಲ್ಲಿನ ಹೂವಂತೆ.

(World Poetry Day ನೆಪದಲ್ಲಿ ಬರೆದದ್ದು)

Sunday, March 05, 2017

ಲಿಫ್ಟು

ಗೆಲುವಿಗೆ ಒಳಹಾದಿಗಳಿಲ್ಲ ಎಂದವರೆಲ್ಲ ಅದಾಗಲೇ ಗೆದ್ದವರೇ.
ತಾವು ಹೇಗೆ ಕಷ್ಟ ಪಟ್ಟು ಮೇಲೆ ಬಂದೆವು, ಹಾದಿಯಲ್ಲೆಂತೆಂಥ
ಮುಳ್ಳಿತ್ತು ಎಂದೆಲ್ಲ ಅವರು ರೋಚಕವಾಗಿ ವಿವರಿಸುವರು.
ಆದರೆ ಲಿಫ್ಟೊಂದು ಕಾಯುತ್ತಿರುವಾಗ ಅದನ್ನಲಕ್ಷಿಸಿ
ಮೆಟ್ಟಿಲಲ್ಲೇ ನಡೆದು ಬರುತ್ತೇನೆನ್ನುವವರು ವಿರಳ.

ಅದಿರಲಿ, ನೀವು ಯಾವತ್ತಾದರೂ ಬೆಂಗಳೂರಿನ ಯುಟಿಲಿಟಿ ಬಿಲ್ಡಿಂಗಿನ
ಲಿಫ್ಟಿನಲ್ಲಿ ನಿಂತು ಸಾಗಿದ್ದೀರೋ?
ಇಲ್ಲವೆಂದಾದರೆ ನೀವೊಮ್ಮೆ ಈ ಅನುಭವ ಪಡೆಯಲೇಬೇಕು
ಮೊದಲಿಗೆ ತಳುಕುಬಳುಕಿನ ಎಂಜಿ ರಸ್ತೆಯ
ಮೇಲ್ದರ್ಜೆಯ ಟ್ರಾಫಿಕ್ಕಿನಲ್ಲಿ ಒಂದಾಗಿ ಬೆರೆತು
ಅತ್ಲಾಗೆ ನುಗ್ಗಿ ಇತ್ಲಾಗೆ ತಿರುಗಿ ಈ ಕಟ್ಟಡದ ಸಮೀಪ
ತಲುಪಬೇಕು. ಕಟ್ಟಡ ಎಂದೂ ನಿಮ್ಮ ಬಳಿ ಬರುವುದಿಲ್ಲ.
ಅನುಭವಕ್ಕೆ ಗುರಿಯಾಗಬೇಕೆಂದರೆ
ನೀವೇ ಆಕರದ ಬಳಿ ಹೋಗಬೇಕು.
ಏಳು ಸಮುದ್ರ ದಾಟಿ ಏಳು ಬೆಟ್ಟ ಹತ್ತಿಳಿದು
ಏಕೆ ಕಲ್ಲ ಮೂರುತಿ ನೋಡಲು ಹೋಗುವರು ಭಕ್ತರು?
ಅಲೌಕಿಕ ಗಾಳಿ ತಾಕಿದಂತಾಗಿ ನಡುಗುತ್ತದೇಕೆ
ಕಣ್ಮುಚ್ಚಿ ಕೈಮುಗಿದು ನಿಂತ ಭಕ್ತನ ಮೈ?

ನೀವೀಗ ಕಟ್ಟಡದ ಅತಿಸನಿಹಕ್ಕೆ ಬಂದು ನಿಂತಿದ್ದೀರಿ.
ಎಷ್ಟು ಹತ್ತಿರವೆಂದರೆ, ನಿಮ್ಮುಸಿರು ಅದರುಸಿರಿಗೆ ತಾಕುವಷ್ಟು.
ನಗರವಾಸಿಯಾದ ನಿಮಗೆ
ಕಟ್ಟಡಗಳು ಉಸಿರಾಡುವ ವಿಷಯ ತಿಳಿದಿದೆ ಎಂದೇ ಭಾವಿಸುವೆ.
ಆದರೆ ಗೊಮ್ಮಟೇಶನ ಪೂರಶರೀರ ನೋಡಬಯಸುವ ನೀವು
ತುಸುದೂರವೇ ನಿಲ್ಲಬೇಕು. ಇಷ್ಟು ಸಮೀಪದಲ್ಲಿ
ನಿಂತರೆ ಆತನ ಪಾದದರುಶನ ಮಾತ್ರ ಶಕ್ಯ.

ಹಾಗೆ ಅನತಿದೂರದಲ್ಲಿ ನಿಂತು,
ಅದೇ ನಿಲುವಿನಿಂದ, ಹಾಗೇ ತಲೆಯೆತ್ತಿ ನೋಡಿ..
ಅದೆಷ್ಟೋ ವರ್ಷದಿಂದ ಒಂದೇ ಆಕಾಶದಲ್ಲಿ
ನಿಶ್ಚಲ ನೀರವದಲ್ಲಿ ತಲೆ ತಗ್ಗಿಸದೆ ನಿಂತ ಈ ಕಟ್ಟಡದ ಮೇಲ್ತುದಿ,
ಸೂರ್ಯ-ಚಂದ್ರರಿಗೆ ಏನು ಹೇಳುತ್ತಿದೆ?
ತನ್ನ ಪದಬದಿಯ ರಸ್ತೆಯಲಿ ರತಿಯರತಿ ಹಾಯುವಾಗಲೂ
ಒಮ್ಮೆಯೂ ಬಗ್ಗಿ ನೋಡದಷ್ಟು ಗಂಭೀರ ನಿಂತು
ಏನು ಸಾಧಿಸಲು ಹೊರಟಿದೆ?

ಇದೀಗ ಒಳಹೋಗುವ ಸಮಯ
ಕಛೇರಿಗಳಿಗೆ ರಜೆಯಿರುವ ಭಾನುವಾರವಲ್ಲವೇ
ನೀವಿಲ್ಲಿಗೆ ಬಂದಿದ್ದು? ಬಿಕೋ ಎನ್ನುತ್ತಿರುವ
ಈ ನೀಳಕಾಯದ ಕಟ್ಟಡದ ಲಿಫ್ಟ್ ಲಾಬಿಯಲ್ಲಿ
ಮೌನವೇ ನಿಂತು ನಿಮ್ಮನ್ನು ಸ್ವಾಗತಿಸುವುದು
ಗುಂಡಿಯದುಮಿದ್ದೇ ವ್ಯೋಮದಿಂದ ಧರೆಗಿಳಿದು ಬಂದು
ದಢದಢಾರನೆ ಸದ್ದೊಡನೆ ನಿಮ್ಮೆದುರು ನಿಲ್ಲುವುದು ಲಿಫ್ಟು
ಅವಕಾಶ ಬಾಗಿಲ ಬಳಿ ನಿಂತಾಗ ನೀವೇನು ಮಾಡುವಿರಿ?
ಕಬ್ಬಿಣದ ಗೇಟನ್ನು ಕೈಯಿಂದ ಸರಿಸಿ ಒಳತೂರಿಕೊಳ್ಳುವಿರಿ.
ಆ ಲಿಫ್ಟಿನೊಳಗಿನ ನಿಶ್ಶಬ್ದವನ್ನು
ನಿಮ್ಮ ಪ್ರವೇಶಮಾತ್ರದಿಂದ ಕಲಕಿದಂತೆನಿಸಿತೆ?
ಅದು ಸಹಜ.
ಈ ಲಿಫ್ಟಿನೊಳಗೊಬ್ಬ ಅದೃಶ್ಯ ವ್ಯಕ್ತಿಯಿದ್ದಾನೆ ಎನಿಸಿತೇ?
ಅದು ಸಹಜ.
ಮೂಗಿಗಡರುವ ಆ ಅಸಹಜ ಪರಿಮಳ ಸಹ-
ಸಹಜ.

ಈಗ ನೀವು ಇಪ್ಪತ್ನಾಲ್ಕನೇ ನಂಬರೊತ್ತಿ
ಎದೆಯ ಮೇಲೆ ಕೈಯಿಟ್ಟುಕೊಂಡು ಗಟ್ಟಿಯಾಗಿ ನಿಲ್ಲಿ

ಸೂಪರ್‌ಸಾನಿಕ್ ವಿಮಾನಗಳ ಕುರಿತು ನೀವು ಕೇಳಿ ಬಲ್ಲಿರಿ
ಎಸ್ಕೇಪ್ ವೆಲಾಸಿಟಿ ಬಗ್ಗೆ ರಾಹುಲ್ ಗಾಂಧಿಗೂ ಗೊತ್ತು
ಕುಮುಟಿ ಬಿದ್ದ ವ್ಯಕ್ತಿ ಸರಕ್ಕನೆ ಕೈ ಹಿಂದೆ ತೆಗೆದುಕೊಳ್ಳುವುದಿಲ್ಲವೇ?
ಅಂಥದೇ ವೇಗದಲ್ಲಿ ಚಿಮ್ಮಿ ಸಾಗುತ್ತದೆ ಈ ಲಿಫ್ಟು
ಮಹಡಿಯಿಂದ ಮಹಡಿ ದಾಟುತ್ತ ಕ್ಷಣಾರ್ಧದಲ್ಲಿ
ನಿಮ್ಮನ್ನು ಮುಗಿಲೆತ್ತರಕ್ಕೆ ಮುಟ್ಟಿಸುತ್ತದೆ ಈ ಲಿಫ್ಟು
ಅಡ್ರಿನಲಿನ್ ರಶ್ -ಅದಕ್ಕೆ ಕನ್ನಡ ಪದವಿಲ್ಲ- ನುಗ್ಗಿ ಬರುವ ರಕ್ತ
ನರನರನಾಡಿಗಳಲ್ಲಿ ಶರವೇಗದಲ್ಲಿ ಸಂಚರಿಸಿ
ಕೈಕಾಲೆಲ್ಲ ನಡುಗಿ ಎದೆ ಝಲ್ಲೆಂದು
ಮೈ ರೋಮಾಂಚನಗೊಂಡು ಗುಳ್ಳೆಗಳೆದ್ದು...

ಮೇಲೇರುವಾಗ ಮೇಲೇರುತ್ತಿರುವ ಅರಿವಿರಬೇಕು
ಏರಲು ಹೊರಡುವ ಮುನ್ನ ಪಥದ ನಿಚ್ಚಳ ಪರಿಚಯವಿರಬೇಕು
ಉಡ್ಡಕವ ಹೊಗುವಾಗ ಅದರ ಒಳಹೊರಮೈಗಳ ಬಗ್ಗೆ ತಿಳಿದಿರಬೇಕು
ಜತೆಗೆ,
ಅಭಯಕ್ಕೊಂದು ಪ್ಯಾರಷೂಟ್ ಇರಬೇಕು.
ಆಗಷ್ಟೇ ಏರುದಾರಿಯ ಇಕ್ಕೆಲದ ದೃಶ್ಯಗಳ ಆಸ್ವಾದದಾನಂದ
ಇಲ್ಲದಿರೆ, ಜಿಯಂಟ್ ವ್ಹೀಲಿನ ಬುಟ್ಟಿಯಲ್ಲಿ ಸೆಟೆದು ಕುಳಿತು
ಸರಳುಗಳ ಹಿಡಿದು ಬಿಗಿಯಾಗಿ ಜೀವಭಯದಲ್ಲಿ..

ನಿಮ್ಮ ಡವಗುಟ್ಟುವೆದೆ ತಹಬಂದಿಗೆ ಬರುವುದರೊಳಗೇ
ಗಕ್ಕನೆ ನಿಲ್ಲುವುದು ಲಿಫ್ಟು- ಪಯಣ ಮುಗಿದ ಸೂಚನೆಯಂತೆ
ಇಲ್ಲಿಂದ ಒಂದು ನಿರ್ವಾತ ಬಯಲಿಗೆ ಹೊರಬೀಳುತ್ತೀರಿ ನೀವು
ಆಕಾಶಕ್ಕೆ ಕೊನೆಯಿಲ್ಲ. ಶೂನ್ಯಕ್ಕಂಚಿಲ್ಲ. ವಿಸ್ತಾರಕ್ಕೆ ತುದಿಯಿಲ್ಲ.
ಅನಂತ ತಾನ್ ಅನಂತವಾಗಿ
ಈ ಮಹಾನಗರವೊಂದು ವಿಶಾಲ ಮೈದಾನದಂತೆ
ಗೋಚರ ಕಟ್ಟಡಗಳೆಲ್ಲ ಅಲ್ಲಲ್ಲೆದ್ದ ಗುಡ್ಡಗಳಂತೆ
ಹೊಗೆಯುಗುಳುತ್ತಿರುವ ಕೊಳವೆಗಳು ಜ್ವಾಲಾಮುಖಿಗಳಂತೆ
ಮತ್ತು, ಬಗ್ಗಿ ನೋಡಿದರೆ,
ಕಪ್ಪು ದಾರಿಯಲ್ಲಿ ಸರಸರ ಚಲಿಸುತ್ತಿರುವ
ಮಹಾಮಹಾಮನುಷ್ಯರೆಲ್ಲ ಯಕಃಶ್ಚಿತ್ ಕ್ರಿಮಿಗಳಂತೆ
ಓಡುತ್ತಿರುವ ಕೆಂಪು ಬಿಳಿ ಹಳದಿ ವಾಹನಗಳೆಲ್ಲ
ತರಾತುರಿಯಲಿ ದಿಕ್ಕೆಟ್ಟ ಇರುವೆ ಸಾಲಿನಂತೆ ಗೋಚರಿಸಿ,
ಒಮ್ಮೆಲೆ ಬೀಸಿಬರುವ ದಬ್ಬುಗಾಳಿ ಹೆಜ್ಜೆಲಯ ತಪ್ಪಿಸಿ
ಬೀಳುವಂತಾಗಿ ಬಾಗಿ ಬೆಚ್ಚಿ ಸಾವರಿಸಿಕೊಂಡು

ಒರಗಲೊಂದು ಆಸರೆ, ಹಿಡಿದುಕೊಳ್ಳಲೊಂದು ಆಕರ,
ಜೋಪಾನಾ ಎಂದು ಕೂಗಲು ಯಾರೋ ಪೊರೆವವರು
ಇಲ್ಲದಿದ್ದಾಗ ಹೀಗೆ ಬಟಾಬಯಲಲ್ಲಿ ನಿಂತುಕೊಳ್ಳುವುದು ದುಸ್ಸಹ
ರಾಚುವ ಬಿಸಿಲು, ತಳ್ಳುಗಾಳಿ ಮತ್ತು ಏಕಾಂತದ ಭಯ
ಕಣ್ಣು ಕತ್ತಲಾಗಿಸಿ ತಲೆ ತಿರುಗಿದಂತಾಗಿ ಇನ್ನಲ್ಲಿ ನಿಲ್ಲಲಾಗದೆ
ದಡದಡನೆ ವಾಪಸು ಲಿಫ್ಟಿನ ಬಳಿ ಬಂದು ಒಳತೂರಿ

ಮೇಲೇರುವಾಗಿನ ತವಕ ಮೇಲಿಲ್ಲ
ಮೇಲೇರುವಾಗಿನ ಆಕರ್ಷಣೆ ಮೇಲಿಲ್ಲ
ಮೇಲೇರಬೇಕೆಂದು ಅಷ್ಟು ದೂರದಿಂದ
ಕೈಚೀಲ, ಚಾಪೆ, ಹೊದಿಕೆ, ಉಪ್ಪಿನಕಾಯಿ,
ದಾರಿಯಲಿ ಮೆಲ್ಲಲು ಅವಲಕ್ಕಿ, ಖರ್ಚಿಗಿಷ್ಟು ಕಾಸು
ತುಂಬಿಕೊಂಡು ಓಡೋಡಿ ಬಂದು ಬಸ್ಸೇರಿ
ಕನಸುಗಳನೇ ಜಪಿಸುತ್ತ ಚಡಪಡಿಸುತ್ತ
ಮಲಗಲೂ ಮರೆತು ತಿನ್ನಲೂ ಮರೆತು
ಹಾದಿಬದಿಯ ದೃಶ್ಯಗಳ ಸವಿಯಲೂ ಮರೆತು
ಲಿಫ್ಟು ಸಿಕ್ಕಿದ್ದೇ ಸಾಧನೆಯೆಂಬಂತೆ ಅದನ್ನೇರಿ
ಏಕಾ‌ಏಕಿ ಮೇಲೆ ತಲುಪಿ, ಮುಂದಿನ ದಾರಿ ತಿಳಿಯದೆ
ದಿಕ್ಕೆಟ್ಟು ಕಂಗಾಲಾಗಿ

ಕೆಳಗಿಳಿದಮೇಲೆ ಅನಿಸಿದ್ದುಂಟು:
ಇರಬಹುದಿತ್ತು ಇನ್ನೂ ಸ್ವಲ್ಪ ಹೊತ್ತು ಅಲ್ಲೇ
ಅಷ್ಟು ಅಸಹನೀಯವೇನಾಗಿರಲಿಲ್ಲ
ಸಂಬಾಳಿಸುವ ಕಷ್ಟ ಕೆಳಗೂ ಇದ್ದಿದ್ದೇ
ಇನ್ನಷ್ಟು ಗಳಿಗೆ ಕಾದಿದ್ದರೆ ಬರುತ್ತಿದ್ದರೇನೋ ಯಾರಾದರೂ
ಜತೆಯಾಗಲು, ಜತೆಗಿರಲು, ಕೈಯದುಮಿ
ವಿಶ್ವಾಸ ತುಂಬಲು, ಪ್ರೀತಿಯೆರೆಯಲು
ದೊರೆಯುತ್ತಿತ್ತೇನೋ ಅದೇ ಬಯಲಲ್ಲೇ
ಡೇರೆ ಕಟ್ಟಲೊಂದು ಪ್ರಶಸ್ತ ಸ್ಥಳ
ಕಾಣುತ್ತಿತ್ತೇನೋ ಮತ್ತೊಂದು ಮೆಟ್ಟಿಲು
ಜೀವಂತವಿರಿಸುವಂತೆ ಇನ್ನೂ ಮೇಲೇರುವ ಹಂಬಲು

ಆದರೂ ಕೆಳಗಿಳಿರುವ ನಿರಾಳ ಮೇಲಿಲ್ಲ
ಕಿವಿಗಡಚಿಕ್ಕುವ ಎಂಜಿ ರಸ್ತೆಯ ವಿಧವಿಧ ಸದ್ದು
ಅಪರಿಚಿತರ ನಡುವೆ ಅಲ್ಲಲ್ಲಿ ಕಾಣುವ ನಮ್ಮವರದಂತೆನಿಸುವ
ಮುಖಗಳು, ಸಹಜ ದನಿ ಕಾರಂಜಿ
ಮೈಗೆ ತಾಕಿ ಪುಳಕವಾಗಿ ಪುನರ್ಜೀವ ಪಡೆದಂತೆನಿಸಿ
ಇದೇ ಇದೇ ಸರಿ, ಅದಲ್ಲ, ಅದು ನನಗಲ್ಲವೆನಿಸಿ
ಟ್ರಾಫಿಕ್ಕಿನೊಳಗೆ ಬೆರೆತು ಮರುಸಿಗ್ನಲ್ಲಿಗೆ ಬರುವಷ್ಟರಲ್ಲಿ
ನೀವು ನೀವಾಗಿ ಅತ್ತಿತ್ತ ನೋಡಿ ಮುಗುಳ್ನಕ್ಕು

ಕನ್ನಡಿಯಲ್ಲೊಮ್ಮೆ ನೋಡಿದರೆ ಯುಟಿಲಿಟಿ ಬಿಲ್ಡಿಂಗು
ಅಷ್ಟೆತ್ತರ ನಿಂತಿದೆ ಸಾರ್ವಭೌಮನಂತೆ
ತಿರುಗಿ ಹೋಗಲೇ ವಾಪಸು? ಒಮ್ಮೆ ಸವೆಸಿದ ದಾರಿಯಲ್ಲಿ
ಮತ್ತೆ ಪಯಣಿಸಲೇನು ಭಯವಿಲ್ಲ
ಆದರೂ ಅನುಮಾನ: ಲಿಫ್ಟು ಮಧ್ಯದಲ್ಲೇ ಕೆಟ್ಟು ನಿಂತರೆ?
ಜೋರಾಗಿ ಕೂಗಿಕೊಂಡರೂ ಕಿರುಚಿದರೂ
ಭೂತಬಂಗಲೆಯಲ್ಲಿ ಯಾರಿಗೂ ಕೇಳದೆ ಹೋದರೆ?
ನಡುದಾರಿಯಲ್ಲಿ ಸ್ವರ್ಗ ಸೃಷ್ಟಿಸಲು ವಿಶ್ವಾಮಿತ್ರನಿಹನೇ?

ಸಿಗ್ನಲ್ ಹಸಿರಾಗುತ್ತಿದೆ...
ಸುಷುಪ್ತಿಯಿಂದಲೂ, ಸ್ವಪ್ನದಿಂದಲೂ ಹೊರಬಂದು ಜಾಗೃತಾವಸ್ಥೆಗೆ,
ಮೈ ಕೊಡವಿಕೊಂಡು ಕಣ್ಣಗಲಿಸಿ ಮುಂದೆ ನೋಡುತ್ತಾ,
ಸಪಾಟು ನೆಲದಲ್ಲಿ ಎಲ್ಲರೊಳಗೊಂದಾಗಿ ಸಾಗುವುದೇ
ಬದುಕಿನ ನಿಜರೂಹೆಂದುಕೊಳ್ಳುತ್ತಾ
ಬೀಸುಗಾಳಿಯನ್ನನುಭವಿಸುತ್ತಾ
ನಿರುಮ್ಮಳ ಉಸಿರಾಡುತ್ತಾ.

Thursday, February 23, 2017

ಮಗಳಿಗೆ

ನೀನು ಹುಟ್ಟಿದ ಕಾಲಕ್ಕೆ ಸಾಗರದಲ್ಲಿ ಮಾರಮ್ಮನ ಜಾತ್ರೆ.
ದೊಡ್ದೊಡ್ಡ ಪೆಂಡಾಲು, ಭರ್ಜರಿ ಅಲಂಕಾರ, ರಾಶಿಹೂ
ತೋರಣ, ಎಲ್ಲೆಲ್ಲೂ ದೀಪಗಳ ಝಗಮಗ.
ಆಕಾಶದೆತ್ತರದಲ್ಲಿ ತಿರುಗುವ ತೊಟ್ಟಿಲು, ದಿಗಂತಗಳನಳೆವ ದೋಣಿ,
ಮ್ಯಾಜಿಕ್ಕು, ಮ್ಯೂಜಿಕ್ಕು, ತರಹೇವಾರಿ ಜಿಂಕ್‌ಚಾಕು,
ಬೆಂಡು ಬತ್ತಾಸು ಮಿರ್ಚಿಮಾಲೆ, ತಿನ್ನಲು ಊದ್ದ ಕ್ಯೂ.

ನೀನು ಕಣ್ಬಿಟ್ಟ ಘಳಿಗೆ ಮಹಾನಗರ ಟ್ರಾಫಿಕ್ಕಿನಲ್ಲಿ ಸಿಲುಕಿತ್ತು.
ಪ್ರತಿ ಅಂಗಡಿಯ ಮುಂದೂ ಡಿಸ್‌ಕೌಂಟ್ ಸೇಲಿನ ಬೋರ್ಡಿತ್ತು.
ಊದುಬತ್ತಿ ಫ್ಯಾಕ್ಟರಿಯ ಮುಂದೆ ಪರಿಮಳ ಸುಳಿಯುತ್ತಿತ್ತು.
ಕ್ಯಾಬುಗಳು ಮ್ಯಾಪು ತೋರಿದ ದಾರಿಯಲ್ಲಿ ಚಲಿಸುತ್ತಿದ್ದವು.
ರಿಹರ್ಸಲ್ಲು ಮುಗಿಸಿದ ನಾಟಕ ತಂಡ ಸಂಜೆಯ ಶೋಗೆ ರೆಡಿಯಾಗುತ್ತಿತ್ತು.

ನೀನು ಮೊದಲ ಸಲ ಅತ್ತಾಗ ಜಗತ್ತು ನಿತ್ಯವ್ಯಾಪಾರದಲ್ಲಿ ಗರ್ಕ.
ಪಿಂಕು ನೋಟುಗಳೂ, ಟ್ರಂಪ ಆಟಗಳೂ, ತಂಟೆಕೋರರ
ಕಾಟಗಳೂ ಪಂಟರುಗಳ ಬಾಯಲ್ಲಿ ಚರ್ಚೆಯಾಗುತ್ತಿದ್ದವು.
ರಾಕೆಟ್ಟುಗಳು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೊಯ್ದು ಬಿಡುತ್ತಿದ್ದವು.
ಪಾತಾಳದಿಂದೆತ್ತಿದ ಕಚ್ಛಾ ತೈಲ ವಿದೇಶಗಳಿಗೆ ರಫ್ತಾಗುತ್ತಿತ್ತು.
ಅಳವೆಯ ಬಳಿಯ ಬಳ್ಳಿಯಲ್ಲಿ ಅರಳಿದ ಹೂಗಳು
ಜುಳುಜುಳು ಹಾಡಿಗೆ ತಲೆಯಾಡಿಸುವುದನ್ನು ಅಲ್ಲೇ
ಕುಳಿತ ಗಿಳಿಯೊಂದು ವೀಕ್ಷಿಸುತ್ತಿತ್ತು.

ನಿನಗಿದನ್ನೆಲ್ಲ ತೋರಿಸಬೇಕೂ, ನೀನಿದನ್ನೆಲ್ಲಾ ನೋಡುವುದ್ಯಾವಾಗಾ
ಅಂತ ಆಸ್ಪತ್ರೆಯ ಕಾರಿಡಾರಿನಲ್ಲಿ ನಾನು ಶತಪಥ ಮಾಡುತ್ತಿದ್ದರೆ,
ಮಗಳೇ, ನೀನು ಮಾತ್ರ ಎಲ್ಲ ತಿಳಿದವಳ ಕಾಂತಿಯಲ್ಲಿ
ಅಮ್ಮನ ಮಡಿಲಲ್ಲಿ ನಿದ್ರಿಸುತ್ತಿದ್ದೆ.
ಇಡೀ ಬ್ರಹ್ಮಾಂಡವನ್ನೇ ಮುಚ್ಚಿಟ್ಟುಕೊಂಡಿರುವಂತೆ ನಿನ್ನ ಬಿಗಿಮುಷ್ಟಿ.
ನೀನು ಕೈಕಾಲು ಆಡಿಸಿದರೆ ವಿಶ್ವವನ್ನೆಲ್ಲ ಸುತ್ತಿಬಂದ ಹಗುರ.
ನಿನ್ನ ನಗುವೊಂದಕ್ಕೇ ಎಲ್ಲ ಜಾತ್ರೆಗಳ ತೇರನೆಳೆವ ಶಕ್ತಿ.
ಆ ಕಂಗಳ ಪಿಳಿಪಿಳಿಯಲ್ಲೇ ಎಲ್ಲರನ್ನೂ ಎಲ್ಲವನ್ನೂ ಸ್ಪಂದಿಸುವ ತಾಕತ್ತಿದ್ದಂತಿತ್ತು.

ಶತಮೂರ್ಖನಂತೆ ಪೇಪರು ಟೀವಿ ಟ್ವಿಟರು ನ್ಯೂಸ್‌ಹಂಟು
ಫೇಸ್‌ಬುಕ್ಕು ಅರಳಿಕಟ್ಟೆ ಜಾತ್ರೆ ಜಂಗುಳಿಗಳಲ್ಲಿ
ಸುದ್ದಿ ಚರ್ಚೆ ಪರಿಹಾರ ಮನರಂಜನೆ ಖುಷಿ ನೆಮ್ಮದಿ
ಅಂತ ಹುಡುಕುತ್ತಿದ್ದ ನನ್ನನ್ನು ಪುಟ್ಟ ಕಿರುಬೆರಳಿಂದ
ಸ್ಪರ್ಶಿಸಿ ನೀನು ಹೇಳಿದೆ: ಅಪ್ಪಾ, ನನ್ನನ್ನೆತ್ತಿಕೋ.

Thursday, February 09, 2017

ಲಾಡ್ಜ್

ಕವಿತೆಯಲ್ಲಿ ಹೀಗೆ ನೇರವಾಗಿ ವಿಷಯಕ್ಕೆ ಬರಬಾರದು ಎನ್ನುವುದುಂಟು
ಆದರೆ ಲಾಡ್ಜಿನ ಕೋಣೆಯ ಬಾಗಿಲು ತರೆದುಕೊಳ್ಳುವುದೇ ಹಾಗೆ:
ಸದಾ ಅಲಕ್ಷ್ಯಾವಸ್ಥೆಯಲ್ಲೇ ಇರುವ ರೂಮ್‌ಬಾಯ್
ತನ್ನ ಪರಿಣಿತ ಕೈಗಳಿಂದ ಚಕಾಚಕ್ಕೆಂದು ಕೀಲಿ ತಿರುಗಿಸಿ
ಕದ ತೆರೆದು ನಿಮಿಷದಲ್ಲಿ ಕೋಣೆಯನ್ನು ಪರಿಚಯಿಸಿ
ಕೊಡಬೇಕಾದುದನೆಲ್ಲ ಕೊಟ್ಟು ನಿರ್ಗಮಿಸಿಬಿಡುತ್ತಾನೆ

ಆಗಲೇ ಅಪ್ಪಳಿಸುವುದು ಮೈಗೆ ನಿರ್ವಾತದ ಹಸಿಹಸಿ ರಾಚು
ಅಪರಿಚಿತ ಮುಖಗಳ ಅಪರಿಚಿತ ಊರಿನ ನಡುವೆಲ್ಲೋ ಇರುವ ಈ ಲಾಡ್ಜು
ತನ್ನ ಖಾಲಿತನದ ಇಂಚಿಂಚನ್ನೂ ಬಯಲುಗೊಳಿಸಿ ತೋರಿಸುವಾಗ
ಮೌನದ ರೇಣುಗಳೊಡನೆ ತೇಲಿಬರುವವು ನಿಕಟ ವಾಸನೆಗಳು

ಆ ಗಂಧ ಕೊಟ್ಟ ಸುಳುಹೇ ಬೆರಳಾಗುವುದು ಕಲ್ಪನೆಯ ನೇಯ್ಗೆಗೆ:
ಸ್ನಾನ ಮುಗಿಸಿದ ಪಿಯರ್ಸ್ ಪರಿಮಳದ ಹುಡುಗಿ
ಒದ್ದೆ ಹೆಜ್ಜೆಗಳನ್ನಿಡುತ್ತ ಬಾತ್ರೂಮಿನಿಂದ ಹೊರಬಂದಂತೆ
ಹಾಲಿನಲ್ಲಿ ಕೂತಿದ್ದ ವ್ಯಕ್ತಿ ವಿಚಲಿತಗೊಂಡು ಸಿಗರೇಟು ಆರಿಸಿ
ಸ್ಥವಿರದಿಟ್ಟಿಯಿಂದ ಅವಳ ತಬ್ಬಲು ಅತ್ತ ಧಾವಿಸಿದಂತೆ

ಗೋಡೆ ಹೊದ್ದಿಗಿರಿಸಿದ ಕೆಂಪು ಸೋಫಾದ ಸವೆದ ಫ್ಯಾಬ್ರಿಕ್
ಹೇಳುವುದು ಕತೆ, ಇಲ್ಲಸಲ್ಲದ ಇಲ್ಲಿಗೊಗ್ಗದ ಹಳೆಯ ಕಲಾಪ
ಕಿಟಕಿಯ ಅಪಾರದರ್ಶಕ ಗಾಜು ಹೊಳೆಸುವುದು ಮಾಸಲು ಚಿತ್ರ
ಟೇಬಲ್ಲಿನ ಮೇಲಿನ ಹೂಜಿಯೊಳಗಿನ ನೀರು ಕುಡಿಯಲೂ ಭಯ
ಸೀಲಿಂಗಿಗಂಟಿಸಿದ ಕನ್ನಡಿಯ ಹಿಂದೆ ಇರಬಹುದೆ ರಹಸ್ಯ ಕೆಮೆರಾ

ಲಾಡ್ಜಿನ ಕೋಣೆಗಳಲ್ಲಿ ಒಂಟಿಯಾಗಿ ತಂಗಬಾರದು...
ನಮಗಿಂತ ದೈನೇಸಿಯಿಲ್ಲಾ, ಈ ಏಕಾಂತಕ್ಕಿಂತ ಕಟುವಾದ್ದಿಲ್ಲ
ಎಂದೆನಿಸಿ ನಮ್ಮ ಬಗ್ಗೆ ನಮಗೇ ಕರುಣೆ ಉಕ್ಕಿಸಿ
ಸಣ್ಣ ಸದ್ದಿಗೂ ಬೆಚ್ಚಿಬೀಳುವಂತೆ ಮಾಡುವುದು ರವರಹಿತರಾತ್ರಿ
ಎಂದೋ ಕಾಲೇಜಿನ ಹಾಸ್ಟೆಲಿನಲ್ಲಿ ಒಬ್ಬನೇ ಕಳೆದ ಇರುಳು,
ಯಾರದೋ ಮನೆಯ ಕಾವಲಿಗೆಂದು ಉಳಿದಿದ್ದ ನಿಶೆ,
ಅವಳು ಬಿಟ್ಟುಹೋದ ದಿನ ಕೋಣೆಯ ಬಾಗಿಲು ಹಾಕಿ
ಬಿಕ್ಕಿಬಿಕ್ಕಿ ಅತ್ತಿದ್ದ ನೆನಪೆಲ್ಲ ಒಟ್ಟೊಟ್ಟಿಗೆ ಧುಮುಕಿ
ಸೂರ್ಯನ ಮೊದಲ ಕಿರಣಗಳಿಗೆ ಇನ್ನಿಲ್ಲದಂತೆ ಕಾಯುತ್ತ
ವಿಚಿತ್ರ ವಾಸನೆಯ ಇಷ್ಟಗಲ ಮಂಚದಲ್ಲಿ ನಿರ್ನಿದ್ರೆ ಹೊರಳುತ್ತ...

ಬೆಳಕು ಮೂಡುತ್ತಿದ್ದಂತೆಯೇ ಎದ್ದು, ಬಿಲ್ಲು ಚುಕ್ತಾ ಮಾಡಿ,
ನಿನ್ನೆ ರಾತ್ರಿ ತಪ್ಪಿಸಿಕೊಂಡ ಬಸ್ಸು ಈಗ ಊರು ಸೇರಿರಬಹುದೇನೋ
ಎಂದುಕೊಳ್ಳುತ್ತ ನಿಲ್ದಾಣ ತಲುಪಿ, ಲಗುಬಗೆಯಿಂದ ಮೊದಲ ಬಸ್ಸೇರಿ
ಕುಳಿತು, ಆ ಲಾಡ್ಜಿನತ್ತ ಒಮ್ಮೆ ನೋಟ ಹರಿಸಬೇಕು...
ನಾನು ಉಳಿದಿದ್ದ ಕುರುಹೂ ಗೊತ್ತಿಲ್ಲವೆಂಬ ಸೋಗಿನಲ್ಲಿ
ಹೊಸದಿನದ ರಶ್ಮಿಗೆ ಹೊಳೆಯುತ್ತ ಮತ್ಯಾರನ್ನೋ ತನ್ನೊಳಗೆ
ಸೇರಿಸಿಕೊಳ್ಳುತ್ತ ನಿತ್ಯನೂತನೆಯಂತೆ ಕಂಗೊಳಿಸುವಾಗ ಲಾಡ್ಜು,
ಕಂಡಕ್ಟರ್ ಟಿಕೆಟ್ ಕೇಳುತ್ತಾನೆ.. ಟಿಪ್ಪು ಕೊಟ್ಟ ಖುಷಿಗೆಂಬಂತೆ
ಲಾಡ್ಜಿನ ಬಾಗಿಲಲ್ಲಿ ನಿಂತ ರೂಮ್‌ಬಾಯ್ ಕೈ ಬೀಸುತ್ತಾನೆ.

Friday, January 27, 2017

ಜೇನಹನಿ

ಸೌತೆಯ ಹೂವನ್ನು ನೀನು ಮುಡಿಯುವುದೇ ಇಲ್ಲ
ಸೌತೆಯಷ್ಟೇ ಏಕೆ- ಹಾಗಲ, ಕುಂಬಳ, ತೊಂಡೆ, ಚೀನಿ
ಚಪ್ಪರ - ಅಂಗಳಗಳ ಹಬ್ಬಿ ತುಂಬಿದ ಬಳ್ಳಿಗಳಲ್ಲರಳಿದ
ಹೂರಾಶಿ ಅಲಂಕಾರಕ್ಕೆಂದೆಂದೂ ಅನಿಸಿದ್ದಿಲ್ಲ ನಿನಗೆ.
ನಿರೀಕ್ಷೆಯೇನಿದ್ದರೂ ಅವುಗಳಡಿಯಿಂದ ಮೂಡುವ ಮಿಡಿಗಳೆಡೆಗೆ
ಮಿಡಿ ಬೆಳೆದು ಮೈದುಂಬಿ ಎಳೆಕಾಯಾಗಿ ಜೋತಾಡಿ
ಯಾವುದೋ ಕಾದಂಬರಿಯೋದುತ್ತ ಕಟ್ಟೆಯ ಮೇಲೆ ಕೂತ
ನಿನ್ನರಳುಕಂಗಳ ಸೆಳೆದು ಕೊಯ್ದು ಕತ್ತರಿಸಲ್ಪಟ್ಟು
ಉಪ್ಪು-ಖಾರದೊಂದಿಗೆ ಬೆರೆತು ರುಚಿರುಚಿಯಾಗಿ
ಹಸಿಹಸಿಯಾಗಿ ತಿನ್ನಲ್ಪಟ್ಟು ಭಲೇ ಭಲೇ ಎಂದು
ನಿನ್ನಿಂದ ಹೊಗಳಿಸಿಕೊಂಡು ಚಪ್ಪರಿಸಿದ ನಾಲಿಗೆಯಿಂದ

ಈ ನಡುವೆ ಆ ಸೌತೆಹೂ ಬಾಡಿ ಮುದುರಿ ಉದುರಿದ್ದು
ನಿನಗೆ ತಿಳಿಯಲೇ ಇಲ್ಲ. ನಿಲ್ಲಿಸಿದ್ದ ಪುಟವನ್ನು
ಬುಕ್‌ಮಾರ್ಕ್ ಮೂಲಕ ಗುರುತಿಸಿ ಕಾದಂಬರಿ ಮುಂದುವರೆಸಿದೆ.
ಈಗ ಕೆದಕಿದರೆ ಮಣ್ಣೊಳಗೆ ಮಣ್ಣಾಗಿರುವ ಪಕಳೆಗಳ ಗುರುತೂ ಸಿಗದು.
ಆ ಹೂವೊಳಗಿದ್ದ ಬಂಡು ಹೀರಿ ಮತ್ತೊಂದು ಹೂವಿಗೆ ಹಾರಿದ್ದ
ದುಂಬಿಯೂ ಈಗ ಕಾಣಸಿಗದು:
ಪುಟದಿಂದ ಪುಟಕ್ಕೆ ಚಲಿಸುವ ಬುಕ್‌ಮಾರ್ಕಿನಂತೆ
ಅದೀಗ ಮತ್ಯಾವುದೋ ಹೂದೋಟದಲ್ಲಿರಬಹುದು.
ಅಥವಾ ಈ ಪ್ರದೇಶವನ್ನೇ ತೊರೆದಿರಬಹುದು:
ತನ್ನಿಂದಲೇ ಆದ ಪರಾಗಸ್ಪರ್ಶದ ಅರಿವೇ ಇಲ್ಲದೆ.
ಕಾದಂಬರಿ ಮುಗಿದ ಮೇಲಿನ ಅನಗತ್ಯ ಬುಕ್‌ಮಾರ್ಕಿನಂತೆ.

ಆದರೆ ಆ ದುಂಬಿ ಹೀರಿದ ಜೇನಹನಿ ಅದೋ ಆ ಎತ್ತರದ ಮರದ
ಟೊಂಗೆಗೆ ಕಟ್ಟಿದ ಜೇನುತಟ್ಟಿಯಲ್ಲಿ ಇನ್ನೂ ಇದೆ ಬೆಚ್ಚಗೆ.
ಸಾವಿರ ಕಣ್ಗಳ ನೀರಲ್ಲಿ ನೀರಾಗಿ, ನೆನೆಯುತ್ತ ಅಮ್ಮನ ಮಡಿಲು:
ಹೂವಮ್ಮನ ಒಡಲು.

Wednesday, January 04, 2017

ನನ್ನೊಳಗಿನ ಶಿಮ್ಲಾ

ಶಿಮ್ಲಾದ ಮಾಲ್ ರೋಡಿನಲ್ಲಿದ್ದಾಗ
ಮಳೆ ಬರಬೇಕು ಎಂಬುದೊಂದು ವಿಲಕ್ಷಣ ಆಸೆ.
ಇಲ್ಲಿ ಹಾಗೆಲ್ಲ ಬೇಕೆಂದಾಗ ಮಳೆ ಬರುವುದಿಲ್ಲ,
ಬೇಕಿದ್ದರೆ ಹಿಮಪಾತದ ವ್ಯವಸ್ತೆ ಮಾಡಬಹುದು
ಎಂದರು ಸ್ಥಳೀಯರು. ವ್ಯವಸ್ತೆ ಮಾಡಬಹುದು
ಎಂತಲೇ ಅವರೆಂದರು ಅಂತಲ್ಲ, ಅರೆಬರೆ
ಹಿಂದಿ ಬಲ್ಲ ನಾನು ಹಾಗೆ ಅರ್ಥೈಸಿಕೊಂಡೆ. 

ಆದರೆ ವರುಷಗಳ ಹಿಂದೆ ನೋಡಿದ್ದ ಶಿಮ್ಲಾ
ಮತ್ತು ನನ್ನ ಮಳೆ ನೋಡುವ ಬಯಕೆ
ಮತ್ತೆ ನೆನಪಾಗಿದ್ದು ಧರ್ಮಸ್ಥಳ ದೇವಸ್ಥಾನದ ಎದುರಿನ
ವಿಶಾಲ ಅಂಗಣದ ಬದಿಯ ಗೂಡುಗೂಡು ಅಂಗಡಿಗಳ
ಜಂಗುಳಿಯಲ್ಲಿರುವಾಗ ದಿಢೀರ್ ಮಳೆ ಬಂದಾಗ.
ಕೊಂಡ ಗಿಲೀಟು ವಸ್ತುಗಳ ಪುಟ್ಟ ಕವರನ್ನು
ಈಗಷ್ಟೆ ಸಂಪಾದಿಸಿದ್ದ ಪುಣ್ಯದ ಸಮೇತ ಹಿಡಿದುಕೊಂಡು
ಪುಟ್ಟ ನೀಲಿ ತಗಡಿನ ಕೆಳಗಿನ ತಾತ್ಕಾಲಿಕ ಆಸರೆಯಲ್ಲಿ
ದೇಹವನ್ನಿನ್ನಷ್ಟು ಚಿಕ್ಕದು ಮಾಡಿಕೊಂಡು ನಿಂತಿದ್ದಾಗ.

ಆಮೇಲೆ ಹಾಗೆ ತುಂಬಾ ಸಲ ಆಗಿದ್ದುಂಟು:
ದಾಂಡೇಲಪ್ಪನ ಜಾತ್ರೆಯಲ್ಲಿ, ಸಾಗರದ ತೇರಿನಲ್ಲಿ,
ಅಷ್ಟೇ ಏಕೆ, ಇಲ್ಲೇ ನಮ್ಮ ಗಾಂಧಿ ಬಜಾರಿನಲ್ಲಿ.
ಸಂಭ್ರಮ ತುಂಬಿದ ಬೀದಿಯಲ್ಲಿ
ಜನವೆಲ್ಲ ತಮ್ಮದೇ ಬಿಡಿಬಿಡಿ ಖುಷಿಯಲ್ಲಿ
ವ್ಯಾಪಾರಿಗಳು ಅಂಗಡಿಯೊಳಗಿನ ಧಗೆಯಲ್ಲಿ
ಮುಳುಗಿದ್ದಾಗ ಇದ್ದಕ್ಕಿದ್ದಂತೆ ಸುರಿಯತೊಡಗುವ ಮಳೆ
ನನಗೆ ಶಿಮ್ಲಾದ ಮಾಲ್ ರೋಡ್ ನೆನಪಿಸುವುದು;
ಪರ್ವತನಗರಿಯ ಅಂಚುರಸ್ತೆಗಳ ಇಕ್ಕೆಲದ
ಪೈನ್ ಮರಗಳು ಇನ್ನಷ್ಟು ಮುದುಡಿ
ಮಳೆಹನಿಗಳ ಜೋರಿಸುತ್ತ ನಿಂತಂತೆ ಭಾಸವಾಗುವುದು.

ಅದಕ್ಕೇ ನನಗೆ ಮತ್ತೊಮ್ಮೆ ಶಿಮ್ಲಾಕ್ಕೆ ಹೋಗಲು ಭಯ:
ಅಕಸ್ಮಾತ್ ನಾನು ಹೋದಾಗಲೇ ಅಲ್ಲಿ ಮಳೆ ಬಂದರೆ?
ನನ್ನೊಳಗಿನ ಈ ಬಯಕೆ ತೀರಿಹೋದರೆ?
ಮತ್ತೆ ಇಲ್ಲಿದ್ದಾಗ ಶಿಮ್ಲಾ ನೆನಪಾಗದಿದ್ದರೆ?

Sunday, January 01, 2017

ಒಡೆದ ಹಿಮ್ಮಡಿಯೊಂದಿಗೆ ಬಂದ ಹೊಸವರ್ಷಕ್ಕೆ...


ಗೂರಲು ಕೆಮ್ಮಿನ ಅಜ್ಜ ಚಳಿ ಕಾಯಿಸಲು ಒದ್ದೆ ಕಟ್ಟಿಗೆಗೆ ಸೀಮೆ‌ಎಣ್ಣೆ ಸುರುವಿ ಬೆಂಕಿ ಹಚ್ಚಲು ಒದ್ದಾಡುತ್ತಿರುವಾಗ, ಬೆಳ್ಳಂಬೆಳಗ್ಗೆ ಅರಳಬೇಕೆಂಬ ಬೇಸರದೊಂದಿಗೆ ಇಬ್ಬನಿ ಹನಿಗಳ ತಂಪಿಗೆ ಮೊಗ್ಗುಗಳು ನಡುಗುತ್ತಿರುವಾಗ, ಜಾಗಿಂಗ್ ಹೊರಟ ಹುರುಪಿನ ಶೂಗಳ ಬಿಗಿಯಲು ಲೇಸಿನ ದಾರದ ಅಂಚುಗಳು ತಯಾರಾಗುತ್ತಿರುವಾಗ, ಪ್ರತಿಸಲದಂತೆ ಚಳಿಗಾಲದಲ್ಲೇ ಬಂದಿದೆ ಹೊಸವರ್ಷ -ತನ್ನ ಒಡೆದ ಹಿಮ್ಮಡಿಯೊಂದಿಗೆ.. ಮೊದಲ ಹಾರಯಿಕೆ ಅದಕ್ಕೇ ಬೇಕಿದೆ; ಮೊದಲ ಆರಯಿಕೆ ಅದಕ್ಕೇ ಆಗಬೇಕಿದೆ.   ಸರಿಯಾದ ಮುಲಾಮು ಹಚ್ಚಿ ಮಾಲೀಶು ಮಾಡಬೇಕಿದೆ, ಖುಷಿಯ ಹಾಡು ಹೇಳಿ ನೋವ ತೊಲಗಿಸಬೇಕಿದೆ, ಅದರ ಹೆಜ್ಜೆಯೊಡನೆ ನಮ್ಮ ಹೆಜ್ಜೆ ಬೆರೆಸಿ ನಡೆಸಬೇಕಿದೆ ಮುನ್ನೂರರವತ್ತೈದು ದಿನಗಳ ದೂರದಾರಿ... ಅದಕೇ, ಗುನುಗಿಕೊಳ್ಳೋಣ ಒಂದಷ್ಟು ಆಶಯದ ನುಡಿ: ಹಾರೈಸಿಕೊಳ್ಳೋಣ ಒಳ್ಳೊಳ್ಳೆ ಚಿತ್ರಗಳ ದೃಶ್ಯಾವಳಿ:


ನಮ್ಮ ಬಟ್ಟಲಿಗೆ ಬಿದ್ದ ಪಾಯಸದಲ್ಲಿ ಇರಲೆಂದು ಯಥೇಚ್ಛ ಗೋಡಂಬಿ-ದ್ರಾಕ್ಷಿಗಳು
ಬೋರು ತರಿಸುವ ಮೊದಲೇ ಮುಗಿಯಲೆಂದು ಧಾರಾವಾಹಿಗಳು
ಮಳೆ ಬರುವ ಮೊದಲೇ ಒಣಗಲೆಂದು ತಂತಿಯ ಮೇಲಿನ ಬಟ್ಟೆಗಳು
ಸಂಜೆ ಸಂತೆಗೆ ಹೋದವರಿಗೂ ಸಿಗಲೆಂದು ತಾಜಾ ಟೊಮೆಟೊಗಳು
ಅಲಾರ್ಮಿನ ಸ್ನೂಸುಗಳ ನಡುವಿನ ಕಿರುನಿದ್ರೆಯಲೂ ಸಿಹಿಗನಸೇ ಇರಲೆಂದು
ಆಸ್ಪತ್ರೆಯ ಕಿಟಕಿ ಬಳಿ ಕೂತ ರೋಗಿಗೆ ಪುಟ್ಟಮಗು ಹಣ್ಣು ತಂದು ಕೊಡಲೆಂದು
ನಾವು ಹೊಕ್ಕ ಎಟಿ‌ಎಮ್ಮಿನಲಿ ಬೇಕಾದಷ್ಟು ದುಡ್ಡಿರಲೆಂದು
ಟ್ರಾಫಿಕ್ಕಿನಲಿ ಸಿಲುಕಿದ ಆಂಬುಲೆನ್ಸಿಗೆ ಸುಲಭ ದಾರಿ ಕಾಣಲೆಂದು
ಸರ್ಕಸ್ಸಿನ ಗಿಳಿ ಹೊಡೆದ ಪಟಾಕಿ ಡೇರೆಯೊಳಗಿನ ಮಗುವ ಎಚ್ಚರಗೊಳಿಸದಿರಲೆಂದು
ಮಚ್ಚು-ಲಾಂಗಿಲ್ಲದ ಸಿನೆಮಾಯುಗ ಬಂದರೂ ಕುಲುಮೆಗಳಿಗೆ ಆದಾಯವಿರಲೆಂದು
ಪೆಡಲು ತುಳಿಯದೆಯೆ ಲೂನಾ ಏರು ಹತ್ತಲೆಂದು
ಪ್ರೇಮಿಗಳೇ ತುಂಬಿದ ಪಾರ್ಕಿನಲ್ಲಿ ಸುಸ್ತಾದ ಅಜ್ಜನಿಗೊಂದು ಬೆಂಚಿರಲೆಂದು
ಳಕ್ಷಜ್ಞದೊಂದಿಗೆ ಮುಗಿದ ಅಕ್ಷರಮಾಲೆಯ ಪಠಣ ಮತ್ತೆ ಶುರುವಾಗಲೆಂದು-
ಅಕಾರದಿಂದ.

ನಿಮಗೆಲ್ಲಾ ಹೊಸ ವರ್ಷದ ಶುಭಾಶಯಗಳು.

-ಸುಶ್ರುತ ದೊಡ್ಡೇರಿ