Wednesday, August 19, 2009

ಬಾರಯ್ಯ ಲಂಬೋದರ

ಬಿದ್ದ ಮೊದಲ ಮಳೆಗೇ ಚಿಗಿತು ಬೆಳೆದು ಚಪ್ಪರವನ್ನೆಲ್ಲ ಹರಡಿ ಹೂವರಳಿಸಿಕೊಂಡು ಪರಾಗಸ್ಪರ್ಶಕ್ಕೆ ಚಿಟ್ಟೆ ಬರುವದನ್ನೇ ಕಾಯುತ್ತಿರುವ ಅವರೆಯ ಬಳ್ಳಿಯ ಅಸಹನೆಯ ಕ್ಷಣ ಇದು. ರಿಸೆಷನ್ನಿನ ಪರಿಣಾಮದಿಂದಾಗಿ ಊರಿಂದ ಬಂದು ಮೂರು ತಿಂಗಳಾದರೂ ಕೆಲಸವೊಂದು ಸಿಗದೇ ಕಂಗಾಲಾಗಿರುವಾಗ, ಮನೆಯಿಂದ ಫೋನಿಸಿದ ಅಪ್ಪ 'ಸಾಕು, ಹಬ್ಬಕ್ಕೆ ಬರಕ್ಕರೆ ಬಟ್ಟೆ ಎಲ್ಲಾ ವಾಪಾಸ್ ತಗಂಡ್ ಬಂದ್ಬಿಡು. ಯಾಕೋ ಗ್ರಹಬಲ ಇದ್ದಂಗಿಲ್ಲೆ ಈಗ. ಇನ್ನೊಂದು ಆರು ತಿಂಗ್ಳು ಬಿಟ್ಟು ಮತ್ತೆ ಟ್ರೈ ಮಾಡ್ಲಕ್ಕಡ' ಎಂದದ್ದಕ್ಕೆ ಬಿಕ್ಕಿ ಬಿಕ್ಕಿ ಅಳುತ್ತಿರುವ ತರುಣನ ಕಣ್ಣೀರಿನ ಹತಾಶ ಕ್ಷಣ ಇದು. ಹೇಳದೇ ಕೇಳದೇ ಮಧ್ಯರಾತ್ರಿಯಲ್ಲಿ ಸುರಿಯಲು ಶುರುವಾದ ಹುಚ್ಚುಮಳೆಗೆ ತೇಲಿಸಿಕೊಂಡು ಹೋದ ತಗ್ಗು ಪ್ರದೇಶದಲ್ಲಿನ ಜೋಪಡಿಯ ಕುಟುಂಬದ ಮಕ್ಕಳ ನಿರ್ಭಾವುಕ ಕಣ್ಣುಗಳಲ್ಲಿ ನಿಂತಿರುವ ಕತ್ತಲೆಯ ಕ್ಷಣ ಇದು. ಮೊದಲು ಸಾಧಾರಣ ನೆಗಡಿ, ಕೆಮ್ಮು ಅಂತ ಅಲಕ್ಷ್ಯ ಮಾಡಿ ಆಮೇಲೆ ಜ್ವರ ಬಂದಾಗ ಮಾತ್ರೆ ನುಂಗಿಸಿ ಆಗಲೂ ವಾಸಿಯಾಗದೇ ಆಸ್ಪತ್ರೆಗೆ ಕರೆದುಕೊಂಡು ಹೋದಾಗ 'ಸಧ್ಯಕ್ಕೆ ಫೀವರ್ ಕೇಸಸ್ ತಗೊಳ್ತಿಲ್ಲ ನಾವು' ಎಂದು ಮುಖವಾಡ ಧರಿಸಿದ ನರ್ಸು ಕೈಚೆಲ್ಲಿದಾಗ ಒಮ್ಮೆ ಗಂಡನನ್ನೂ ಮತ್ತೊಮ್ಮೆ ತನ್ನ ಮಾಂಗಲ್ಯವನ್ನೂ ನೋಡಿಕೊಂಡು ಬೆಚ್ಚಿದ ಗೃಹಿಣಿಯ ಕ್ಷಣ ಇದೂ,

-ಭಾದೃಪದ ಬಂದಿದೆ! ದೇವಲೋಕದಲ್ಲೂ ಆತಂಕದ, ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಭುವಿಯೆಡೆಗೆ ಹೊರಟು ನಿಂತಿರುವ ಗೌರಿ-ಗಣೇಶರನ್ನು ಶಿವ ತಡೆದು ನಿಲ್ಲಿಸಿದ್ದಾನೆ: "ನಿಲ್ಲಿ, ಭೂಲೋಕಕ್ಕೆ ಮಾತ್ರ ಹೋಗಬೇಡಿ. ಅಲ್ಲಿ ಎಚ್ವನ್ ಎನ್ವನ್ ಇದೆ! ನಿಮಗೂ ಬಂದೀತು. ತೀರಾ ಹೋಗಲೇಬೇಕೆಂದಿದ್ದರೆ ಮುಖವಾಡ ಧರಿಸಿ ಹೋಗಿ. ಅದಕ್ಕೆ ಒಂದೇ ತೊಟ್ಟು ನೀಲಗಿರಿ ಎಣ್ಣೆ ಹಾಕಿಕೊಳ್ಳಿ. ಇಲ್ಲದಿದ್ದರೆ ವಾಪಸು ಬರುವಾಗ ಸೋಂಕು ನಿಮ್ಮೊಂದಿಗೇ ದೇವಲೋಕಕ್ಕೂ ಬಂದೀತು!" ತಂದೆ ಎಚ್ಚರಿಸಿದರೂ ವಿನಾಯಕನಿಗೆ ಯೋಚನೆ: ವಿಘ್ನವಿನಾಶಕನಾದ ನಾನೇ ಹೆದರಿ ಕುಳಿತರೆ ಇನ್ನು ಭೂಲೋಕದಲ್ಲಿಹ ಸಾಮಾನ್ಯ ಜನರ ಪಾಡೇನು? ಏನಾದರಾಗಲಿ, ನಾನು ಹೋಗಿಯೇ ತೀರುತ್ತೇನೆ. ಅಲ್ಲದೇ ಮೋದಕ, ಚಕ್ಕುಲಿ ತಿನ್ನದೇ ವರ್ಷವಾಯಿತು. ಭಕ್ತರು ಮಾಡಿಟ್ಟುಕೊಂಡದ್ದು ವೇಸ್ಟಾಗಿ ಡಸ್ಟ್‌ಬಿನ್ನು ಸೇರುವುದು ತರವಲ್ಲ. ಆದರೂ ಈ ಎಚ್1ಎನ್1 ಬಗ್ಗೆ ಗೂಗಲ್ಲಿನಲ್ಲಿ ಹುಡುಕಿ ತಿಳಿದುಕೊಂಡೇ ಹೋಗೋಣವೆಂದು ಕಂಪ್ಯೂಟರ್ ಮುಂದೆ ಕುಳಿತರೆ, ರಾಕ್ಷಸ ಲೋಕದವರು ಗಣೇಶನ ಸಿಸ್ಟಮ್ಮನ್ನು ಹ್ಯಾಕ್ ಮಾಡಿಬಿಟ್ಟಿದ್ದಾರೆ! ಇದೊಳ್ಳೆ ಫಜೀತಿಗೆ ಬಂತಲ್ಲಪ್ಪಾಂತ ಗಣೇಶ ಛಕ್ಕನೆ ತನ್ನ ಐಫೋನ್ ತೆಗೆದು ಅಶ್ವಿನೀದೇವತೆಗಳಿಗೆ ಫೋನಿಸಿ ಬೇಗನೆ ಬಂದು ಸಿಸ್ಟಮ್ ಸರಿ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದಾನೆ.

ಎಲ್ಲ ಸರಿಯಾಗಿ, ಈ ಹಂದಿಜ್ವರವೆಂಬುದು ಒಂದು ಮಾರಣಾಂತಿಕ ಕಾಯಿಲೆಯೆಂಬುದು ಪಕ್ಕಾ ಆಗಿ, ಗಣೇಶ ಮಾಸ್ಕ್ ಧರಿಸಿ ಇಲಿಯನ್ನೇರಿ ಭುವಿಯತ್ತ ಹೊರಟಿದ್ದಾನೆ. ಯಾವುದೋ ಹಳ್ಳಿಯ ಗದ್ದೆಯ ಬದಿಯಲ್ಲಿ ಬಿದ್ದುಕೊಂಡಿದ್ದ ಜೇಡಿಮಣ್ಣು, ಕಲಾವಿದನ ಸ್ಪರ್ಶದಿಂದ ಒಂದು ರೂಪ ಪಡೆದು ಬಣ್ಣ ಬಳಿಸಿಕೊಂಡು ಶಹರಕ್ಕೆ ಬಂದು ಬೀದಿಬದಿಯಲ್ಲಿ ನೀಟಾಗಿ ಸಾಲಿನಲ್ಲಿ ಕುಳಿತು, ಬಿಕರಿಯಾಗಿ ಯಾರದೋ ಮನೆಗೆ ಹೋಗಿ ದೇವರಾಗಿಬಿಡುವ ಪವಿತ್ರ ಕ್ಷಣವನ್ನು ಕಲ್ಪಿಸಿಕೊಳ್ಳುತ್ತಾ ರೋಮಾಂಚಿತವಾಗಿದೆ. ಬೇಳೆಯ ಬೆಲೆ ನೂರು, ಅಕ್ಕಿಯ ಬೆಲೆ ನಲವತ್ತು, ಸಕ್ಕರೆಯ ಬೆಲೆ ಮೂವತ್ತೈದು ಅಂತೆಲ್ಲ ಏರಿದ್ದರೂ ಗ್ರಾಹಕ ಬೆವರುತ್ತಾ ತನ್ನ ಕೈಚೀಲದಲ್ಲಿ ಪುಟ್ಟ ಪುಟ್ಟ ಪೊಟ್ಟಣಗಳಲ್ಲಿ ಎಲ್ಲವನ್ನೂ ಹೊತ್ತು ಮನೆಯ ಕಡೆ ಹೊರಟಿದ್ದಾನೆ. ಕಾಗದಗಳಿಂದ ತನ್ನನ್ನು ಸುತ್ತಿ ಸುತ್ತಿ ಸುತ್ತಿಸಿಕೊಂಡು ಕೂತಿರುವ ಪಟಾಕಿಯ ಮದ್ದು, ಕಿಡಿಯೊಂದು ತಾಕಿದರೆ ಸಾಕು ಸಿಡಿದು ಹೊರಬಂದು ಮುಕ್ತವಾಗಲಿಕ್ಕೆ ಕಾಯುತ್ತಿದೆ. ತಿಂಗಳಿಂದ ಜನರ ಹೊಸಬಟ್ಟೆಗಳನ್ನು ಹೊಲಿಯುವುದರಲ್ಲೇ ಗರ್ಕನಾಗಿರುವ ದರ್ಜಿಗೆ ತನ್ನ ಹೊಲಿಗೆ ಬಿಟ್ಟಿರುವ ಹಳೇ ಪಜಾಮವನ್ನು ಸರಿ ಮಾಡಿಕೊಳ್ಳುವುದಕ್ಕೂ ಬಿಡುವಿಲ್ಲ. ಆರ್ಕೆಸ್ಟ್ರಾಗಳಲ್ಲಿ ಕಿರುಚಲು ಬೃಹತ್ ಧ್ವನಿವರ್ದಕಗಳು ಗಂಟಲು ಸರಿ ಮಾಡಿಕೊಳ್ಳುತ್ತಿವೆ. ಅಕ್ಕಿಹಿಟ್ಟು ನಾದಲ್ಪಟ್ಟು ಮುಟ್ಟಿನಿಂದ ಅಷ್ಟಕೋನ ಹೊಂದಿ ಹೊರಬಂದು ಚಕ್ರಾಕಾರದಲ್ಲಿ ಸುತ್ತಲ್ಪಟ್ಟು ಕುದಿವ ಎಣ್ಣೆಯಲಿ ಕರಿದು ಗರಿಗರಿಯಾಗಿ ಚಕ್ಕುಲಿಯಾಗಿ ಹೊರಹೊಮ್ಮಿ ತಟ್ಟೆಯಲಿ ಜೋಡಿಸಿ ನೈವೇದ್ಯಗಲೆಂದು ಎದುರು ನೋಡುತ್ತಿದೆ. ಬಣ್ಣದ ಕಾಗದಗಳಿಗೆ ಮಂಟಪದ ಕಂಬವನಪ್ಪುವ ಕನಸು, ಗಿಡದಲರಳಿರುವ ಹೂವು-ನೆಲದಿ ಹಬ್ಬಿರುವ ದೂರ್ವೆಗಳಿಗೆ ಬಾಡುವ ಮುನ್ನ ಕರಿವದನನ ಚರಣದಲ್ಲಿರುವ ತವಕ, ಕರ್ಪೂರಕ್ಕೆ ಮಂಗಳಾರತಿ ತಟ್ಟೆಯ ಪ್ರದಕ್ಷಿಣೆಯಲ್ಲೇ ಕರಗಿಹೋಗುವ ಕಾತರ. ಹೇಗೆ ಉಳಿದಾನು ಬಾರದೇ ವಿಘ್ನೇಶ್ವರ?

ಬಾರಿನ ಹುಡುಗನಿಗೆ ವಾರ ರಜೆ ಸಿಕ್ಕಿದೆ. ಊರಿಗೆ ಹೋಗುವ ಮುನ್ನ ಅಪ್ಪನಿಗೊಂದು ಪಂಚೆ, ಅಮ್ಮನಿಗೆ ಸೀರೆ, ತಂಗಿಗೆ ಮಿಡಿ ಕೊಳ್ಳಬೇಕಿದೆ. ಯಾವ ಅಂಗಡಿ ನೋಡಿದರೂ ಡಿಸ್ಕೌಂಟು ಹಾಕಿದ್ದಾರೆ. ಗಾಜಿನ ಬಾಗಿಲನ್ನು ತಳ್ಳಿಕೊಂಡು ಒಳಗೆ ಹೋದರೆ ಒಟ್ಟೊಟ್ಟಿಗೇ ಮುತ್ತಿಕೊಳ್ಳುವ ಸೇಲ್ಸ್‌ಬಾಯ್ಸ್ 'ಯೆಸ್, ಏನ್ ಬೇಕು ಸರ್?' ಅಂತ ಕೇಳಿದ್ದಾರೆ. ಬೆವರಲೂ ಬಿಡದ ಏಸಿ, ಕಣ್ತಪ್ಪಿಸಲೂ ಬಿಡದ ಕನ್ನಡಿ, ನೆಪಗಳಿಗೂ ಅವಕಾಶ ಕೊಡದಂತೆ ಕಾಡುತ್ತಿರುವ ಸೇಲ್ಸ್‌ಬಾಯ್ಸ್, ಎಷ್ಟೇ ಡಿಸ್ಕೌಂಟಿದ್ದರೂ ಕೊಳ್ಳಲಾಗದಷ್ಟು ಬೆಲೆ ಕಂಡು ಹುಡುಗ ಕಕ್ಕಾಬಿಕ್ಕಿಯಾಗಿದ್ದಾನೆ. ಕೂಡಿಸಿದ ಹಣವೆಲ್ಲ ಹಬ್ಬವೊಂದಕ್ಕೇ ಖಾಲಿಯಾಗುತ್ತಿರುವುದಕ್ಕೆ ವ್ಯಥೆ ಪಡುತ್ತಿದ್ದಾನೆ. ವಿಘ್ನೇಶ್ವರ ಈಗ ಕಣ್ಣು-ಕಿವಿಗಳಿಗೂ ಮಾಸ್ಕ್ ಏರಿಸಿಕೊಂಡಿದ್ದಾನೆ.

ಅಡಾಪ್ಟರಿಗೆ ಕನೆಕ್ಟಾಗಿರುವ ಯಾರದೋ ಮೊಬೈಲು ಸದ್ದಿಲ್ಲದೇ ಛಾರ್ಜ್ ಆಗುತ್ತಿದೆ. ಯಾರೋ ಹಾಡಿರುವ ಸಿಡಿಗಳು ಡ್ರೈವಿನಲ್ಲಿ ನಿಶ್ಯಬ್ದ ರಿಪ್ ಆಗುತ್ತಿವೆ. ಸಕ್ಕರೆಪಾಕ ಕುಡಿದು ಕುಡಿದು ಜಾಮೂನು ಗರ್ಲ್‌ಫ್ರೆಂಡಿಗಿಂತ ಸಿಹಿಯಾಗುತ್ತಿದೆ. ಕವಿಯ ಲೇಖನಿಯೊಡಲ ನೀಲಿ ಇಂಕು ಬಿಳೀ ಕಾಗದದ ಮೇಲೆ ಅಚ್ಚಾಗುತ್ತ ಹೋದಹಾಗೇ ಸುಂದರ ಕವಿತೆಯೊಂದು ಪಡಿಮೂಡಿದೆ. ಕಾಡಿನ ಕತ್ತಲಲ್ಲಿ ವ್ಯರ್ಥವಾಗುತ್ತಿರುವ ಮಿಣುಕುಹುಳಗಳ ಬೆಳಕು ನಿದ್ದೆಹೋದ ಮಗುವಿನ ಮುಗುಳ್ನಗೆಯಾಗಿ ಹೊಮ್ಮಿ ತೊಟ್ಟಿಲೆಲ್ಲ ತುಂಬಿಕೊಂಡಿದೆ. ಹುಡುಗಿಯ ಕನಸಿನಲ್ಲಿ ಬಂದ ಹುಡುಗ ಕೈಹಿಡಿದು ಲಾಲ್‌ಭಾಗಿನ ಕ್ಯಾಮೆರಾಗಳಿಂದಲೂ ತಪ್ಪಿಸಿ ಎಲ್ಲಿಗೋ ಕರೆದೊಯ್ಯುತ್ತಿದ್ದಾನೆ. ಕಲಾಸಿಪಾಳ್ಯದ ಬೀದಿನಾಯಿಗೆ ಯಾರೋ ಸುಳಿದಂತಾಗಿ ಎಚ್ಚರಾಗಿ ಅತ್ತಿತ್ತ ನೋಡುತ್ತಿದೆ. ವಿಘ್ನೇಶ್ವರನನ್ನು ಹೊತ್ತ ಇಲಿಗೆ ಓಡಿ ಓಡಿ ಸುಸ್ತಾಗಿದೆ. "ಇನ್ನೇನು ಸ್ವಲ್ಪ ದೂರ.. ಬಂದೇಬಿಡ್ತು ಭೂಮಿ" ಅಂತ ಆತ ಸಮಾಧಾನ ಮಾಡುತ್ತಿದ್ದಾನೆ.

ಹಬ್ಬದ ಸಂಭ್ರಮ ಎಲ್ಲ ಜೀವಿಗಳಿಗೂ ಹಬ್ಬಲಿ. ಬಂದ ವಿಘ್ನೇಶ್ವರ ಭವದ ಭೀತಿಗಳನ್ನೆಲ್ಲ ಕಳೆಯಲಿ. ಬದುಕುಗಳಿಗೆ ಸಂತಸ ಬೆರೆಯಲಿ.

ಶುಭಾಶಯಗಳು.

Monday, August 10, 2009

Thank you!












ಇನ್ನಷ್ಟು ಚಿತ್ರಗಳು: ಇಲ್ಲಿ, ಇಲ್ಲಿ ಮತ್ತು ಇಲ್ಲಿ.

ಈ ಖುಶಿಯ ಕ್ಷಣಗಳಲ್ಲಿ ನಮ್ಮೊಂದಿಗಿದ್ದ, ಶುಭಾಶಯ ಹೇಳಿದ ಎಲ್ಲರಿಗೂ ತುಂಬಾ ತುಂಬಾ ಥ್ಯಾಂಕ್ಸ್!

Monday, August 03, 2009

ಖುಶಿಯ ಕರೆಯೋಲೆ



ಒಟ್ನಲ್ಲಿ, ಹೀಗೆಲ್ಲ ಆಗಿ ಹೀಗೆಲ್ಲ ಆಗಿದೆ. ಮತ್ತು, ನಂಗೆ ಖುಶಿಯಾಗಿದೆ! :-)

ಯಾಕೇಂದ್ರೆ, ನನ್ನದೊಂದು ಲಲಿತ ಪ್ರಬಂಧಗಳ ಸಂಕಲನ ಹೊರಬರುತ್ತಿದೆ. 'ಹೊಳೆಬಾಗಿಲು' ಅಂತ ಹೆಸರಿಟ್ಟಿದ್ದೇನೆ. ನಮ್ಮೆಲ್ಲರ ಪ್ರೀತಿಯ ಜೋಗಿ, ಇದಕ್ಕೆ ಮುನ್ನುಡಿ ಬರೆದು ಕೊಟ್ಟಿದಾರೆ. 'ಪ್ರೀತಿಯ ಹುಡುಗಿ'ಯ ಪ್ರೀತಿಯ ಹುಡುಗ ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತಾಡ್ತಾರೆ. ಪುಸ್ತಕದೊಳಗೆ ಗೆಳೆಯ ಕಲಾಕಾರ ರಾಘು ಬಿಡಿಸಿದ ರೇಖಾಚಿತ್ರಗಳಿವೆ. ನನ್ನ ಕಾಟ ಎಲ್ಲಾ ಸಹಿಸಿಕೊಂಡು ಮುಖಪುಟ ರೂಪಿಸಿಕೊಟ್ಟದ್ದು ನೆಂಟ ರವೀಶ. ನಮ್ಮದೇ ಸಂಸ್ಥೆ ಪ್ರಣತಿ ಪ್ರಕಟಿಸ್ತಿರೋ ಈ ಪುಸ್ತಕ, ಈ ವರ್ಷದ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಪ್ರೋತ್ಸಾಹ ಪ್ರಕಟಣೆ ಯೋಜನೆಯಲ್ಲಿ ಆಯ್ಕೆಯಾಗಿತ್ತು.

ಅವತ್ತೇ ಡಾರ್ಲಿಂಗ್ ಶ್ರೀನಿಧಿಯ ಕವನಗುಚ್ಛ 'ಹೂವು ಹೆಕ್ಕುವ ಸಮಯ'ವೂ ಬಿಡುಗಡೆಯಾಗ್ತಿದೆ. ಅದರ ಬಗ್ಗೆ ಮಾತಾಡೋರು ರಾಧಾ-ಮಾಧವರು ಹರಸಿಹರೇನೋ ಎಂಬಂತೆ ಬರೆವ ಕವಿ ಎಚ್ಚೆಸ್ವಿ. ಜೋಗಿ ಸರ್ ಆಗೋದೇ ಇಲ್ಲ ಅಂದ್ರೂನೂ "ನೀವು ವೇದಿಕೆ ಮೇಲೆ ಇರಲೇಬೇಕು" ಅಂತ ನಾವು ಹಟ ಮಾಡಿ ಒಪ್ಪಿಸಿದ್ದೇವೆ. ಅವರು ಒಪ್ಪಿಕೊಂಡಿದಾರೆ.

ಮನೆಗೆ ಫೋನ್ ಮಾಡಿ ಅಪ್ಪ-ಅಮ್ಮ ಇಬ್ರೂ ಬನ್ನಿ ಅಂತ ಹೇಳಿದ್ರೆ "ಮಗನೇ ಮಳೇ ಅಂದ್ರೆ ಮಳೆ. ತ್ವಾಟಕ್ಕೆ ಕೊಳೆ ಔಷಧಿ ಹೊಡೆಸ್ತಾ ಇದ್ದಿ. ಅಲ್ದೇ ಅಜ್ಜನ್ನ ಒಬ್ಬವನ್ನೇ ಬಿಟ್ಟಿಕ್ ಬರಕ್ಕೆ ಆಗದಿಲ್ಲೆ. ಯಾರಾದ್ರೂ ಒಬ್ಬರಾದ್ರೂ ಬರಕ್ಕೆ ಟ್ರೈ ಮಾಡ್ತ್ಯ" ಅಂತ ಹೇಳಿದ್ದಾರೆ.

ಇನ್ನೇನು ಉಳೀತು? ಈ ಖುಶಿಯೆಲ್ಲ ಡಬಲ್ ಆಗಲಿಕ್ಕೆ ನೀವು ಬರಬೇಕು. ಈ ಅಕ್ಷರಗಳನ್ನೇ ಅಕ್ಷತೆ ಅಂದ್ಕೊಂಡು ಸ್ವೀಕರಿಸಿ. ನಾನು, ನಿಧಿ ಮತ್ತು ಪ್ರಣತಿಯ ಗೆಳೆಯರೆಲ್ಲ ನಿಮ್ಮನ್ನ ಎದುರುಗೊಳ್ಳಲಿಕ್ಕೆ ಕಾಫಿ ಸಮೇತ ಕಾಯ್ತಿರ್ತೀವಿ. ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ ಹಾಲ್‌ನಲ್ಲಿ ಬರೋ ಭಾನುವಾರ, 9ನೇ ತಾರೀಖು ಬೆಳಗ್ಗೆ 10.30ಕ್ಕೆ. ಇನ್ವಿಟೇಶನ್ ಇಲ್ಲಿದೆ.

ತಪ್ಪಿಸಿದ್ರೆ ನಮಗೆ ಬೇಜಾರಾಗತ್ತೆ. ಹಾಗೆ ಮಾಡ್ಬೇಡಿ.

ಕಾಯುತ್ತಾ,

ಪ್ರೀತಿಯಿಂದ,

-ಸು