Tuesday, November 17, 2009

ಇದು ಬರೀ ಮಕ್ಕಳಾಟವಲ್ಲ!

ದಿನವಿಡೀ ಚಡಪಡಿಕೆ. ಕಣ್ಮುಚ್ಚಿದರೂ ಅವವೇ ಚಿತ್ರಗಳು. ಆಫೀಸಿನ ಬಿಝಿಯಲ್ಲೂ ಅದೇ ಧ್ಯಾನ. ದಿನಕ್ಕೆರಡು ಬಾರಿ ಹೋಗಿ ನೋಡದಿದ್ದರೆ ಸಮಾಧಾನವಿಲ್ಲ. ನಿಮ್ಮ ಕಂಪ್ಯೂಟರಿನ ಹತ್ತಿರವೇ ಸುಳಿದಾಡುತ್ತಿರುವ ಮ್ಯಾನೇಜರಿನ ಬಗ್ಗೆ ಕೋಪ. ಮಧ್ಯರಾತ್ರಿಯ ಗಾಢ ನಿದ್ರೆಯಲ್ಲಿ ಏನೋ ಕನಸು ಬಿದ್ದಂತಾಗಿ ಎಚ್ಚರಾಗಿ ದಿಗ್ಗನೆ ಎದ್ದು ಕೂರುತ್ತೀರಿ.

ಇದ್ಯಾವುದಪ್ಪಾ ಹೊಸ ಕಾಯಿಲೆ ಅಂತ ಗಾಭರಿಯಾದಿರಾ? ಹೌದು, ವಿಶ್ವಾದ್ಯಂತ ಕೋಟ್ಯಂತರ ಜನರ ನಿದ್ದೆ ಕೆಡಿಸಿರುವ ಈ ಕಾಯಿಲೆಯ ಹೆಸರು ಫಾರ್ಮ್‌ವಿಲ್ಲೆ ಎಂಬ ಆಟದ ಅಡಿಕ್ಷನ್ನು! ಅಂತರ್ಜಾಲದ ಜನಪ್ರಿಯ ಸ್ನೇಹಸಂವಹನ ತಾಣವಾದ ಫೇಸ್‌ಬುಕ್‌ನಲ್ಲಿರುವ ಈ ಆಟದ ಮೋಡಿಗೆ ಒಳಗಾದಿರಾದರೆ ಈ ಕಾಯಿಲೆ ನಿಮಗೂ ತಗುಲಿಕೊಂಡಿತು ಅಂತಲೇ ಅರ್ಥ!

ಏನಿದು ಫಾರ್ಮ್‌ವಿಲ್ಲೆ? ಫೇಸ್‌ಬುಕ್ಕಿನಲ್ಲಿ ನಿಮ್ಮದೊಂದು ಖಾತೆ ಇದೆಯಾದರೆ ಈ ಆಟ ಆಡಬಹುದು. ಈ ಆಟಕ್ಕೆ ಸೇರಿಕೊಂಡ ತಕ್ಷಣ ನಿಮಗೆ ಒಂದಷ್ಟು ಜಮೀನನ್ನು ಕೊಡಲಾಗುತ್ತದೆ. ಈ ಜಮೀನಿನಲ್ಲಿ ನೀವು ಕೃಷಿ ಕಾರ್ಯ ಕೈಗೊಳ್ಳಬಹುದು. ಮೊದಲಿಗೆ ನೆಲವನ್ನು ಉಳುಮೆ ಮಾಡಬೇಕು. ನಂತರ ಮಾರುಕಟ್ಟೆಗೆ ಹೋಗಿ, ಅಲ್ಲಿ ಲಭ್ಯವಿರುವ ವಿವಿಧ ಬಗೆಯ ಬೀಜಗಳಲ್ಲಿ ನಿಮಗೆ ಬೇಕಾದ್ದನ್ನು ಕೊಂಡು ತಂದು ಉಳುಮೆ ಮಾಡಿದ ಜಾಗದಲ್ಲಿ ಬಿತ್ತಬೇಕು. ಹೀಗೆ ಬಿತ್ತಲ್ಪಟ್ಟ ಬೀಜ, ಒಂದು ನಿರ್ಧಿಷ್ಟ ಕಾಲಾವಧಿಯಲ್ಲಿ ಗಿಡವಾಗಿ ಬೆಳೆದು ಕೊಯ್ಲಿಗೆ ಅಣಿಯಾಗುತ್ತದೆ. ಸುಗ್ಗಿಯಿಂದ ಬಂದ ಹಣದಿಂದ ಮತ್ತೆ ಉಳುಮೆ ಮಾಡಿ ಬೀಜಗಳನ್ನು ಬಿತ್ತಬಹುದು. ಮಾರುಕಟ್ಟೆಯಲ್ಲಿ ಸ್ಟ್ರಾಬೆರಿ, ಬದನೆ, ಕುಂಬಳ, ಸೀತಾಫಲ, ಭತ್ತ, ಮುಂತಾದ ಬೀಜಗಳಿರುತ್ತವೆ. ಅವಕ್ಕೆ ನಿರ್ಧಿಷ್ಟ ಬೆಲೆಯೂ ನಿಗಧಿಯಾಗಿರುತ್ತದೆ. ಸ್ಟ್ರಾಬೆರಿಗೆ ಹತ್ತು ರೂಪಾಯಿಯಾದರೆ ಗೋಧಿಗೆ ಮೂವತ್ತೈದು ರೂಪಾಯಿ. ಸ್ಟ್ರಾಬೆರಿ ಕೇವಲ ನಾಲ್ಕು ತಾಸುಗಳಲ್ಲಿ ಬೆಳೆದು ಕೊಯ್ಲಿಗೆ ತಯಾರಾಗುತ್ತದೆ. ಗೋಧಿ ಬೆಳೆಯಲು ಮೂರು ದಿವಸ ಬೇಕು. ಬೆಳೆದ ಸ್ಟ್ರಾಬೆರಿಯ ಬೆಲೆ ಮೂವತ್ತೈದು ರೂಪಾಯಿಯಾದರೆ ಗೋಧಿಗೆ ನೂರಾ ಹದಿನೈದು ರೂಪಾಯಿ. ನಿರ್ಧಿಷ್ಟ ಸಮಯದೊಳಗೆ ಸುಗ್ಗಿ ಮಾಡದಿದ್ದರೆ ಬೆಳೆ ಒಣಗಿಹೋಗುತ್ತದೆ.

ನಿಮ್ಮ ಜಮೀನಿನಲ್ಲಿ ಬಾಳೆ, ಸೇಬು, ನಿಂಬೆ, ದಾಳಿಂಬೆ ಇತ್ಯಾದಿ ಮರಗಳನ್ನೂ ಬೆಳೆಸಬಹುದು. ಇವೂ ಮೂರ್ನಾಲ್ಕು ದಿನಗಳಿಗೊಮ್ಮೆ ಫಲ ಕೊಡುತ್ತವೆ. ಕತ್ತರಿಸಿ ಮಾರಾಟ ಮಾಡಿದ ಮೇಲೆ ಮತ್ತೆ ಮೂರ್ನಾಲ್ಕು ದಿನದಲ್ಲಿ ಹಣ್ಣು ಬಿಡುತ್ತದೆ. ಕೃಷಿಯಷ್ಟೇ ಅಲ್ಲದೆ, ಫಾರ್ಮ್‌ವಿಲ್ಲೆಯಲ್ಲಿ ಹೈನುಗಾರಿಕೆಯನ್ನೂ ಮಾಡಬಹುದು. ಹಸು, ಮೇಕೆ, ಕುದುರೆ, ಕೋಳಿ ಇತ್ಯಾದಿ ಪ್ರಾಣಿಗಳನ್ನು ಸಾಕಬಹುದು. ಹಸುವಿನಿಂದ ಹಾಲು ಸಿಕ್ಕರೆ ಕೋಳಿಯಿಂದ ಮೊಟ್ಟೆ ಸಿಗುತ್ತದೆ.

ನೀವು ಕೃಷಿಯಲ್ಲಿ ನೈಪುಣ್ಯತೆ ಹೊಂದುತ್ತ ಹೋದಂತೆ ಹೆಚ್ಚು ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯಲಿಕ್ಕೆ ಮಾರುಕಟ್ಟೆಯಲ್ಲಿ ಬೀಜಗಳು ದೊರೆಯತೊಡಗುತ್ತವೆ. ಅವಶ್ಯಕತೆ ಜಾಸ್ತಿಯಾದಂತೆ ನೀವು ಟ್ರಾಕ್ಟರ್, ಸೀಡರ್, ಹಾರ್ವೆಸ್ಟರ್ ಇತ್ಯಾದಿ ಯಂತ್ರೋಪಕರಣಗಳನ್ನು ಕೊಳ್ಳಬಹುದು. ಇವುಗಳಿಂದಾಗಿ ಉಳುಮೆ, ಬಿತ್ತನೆ, ಕೊಯ್ಲುಗಳು ತ್ವರಿತ ಗತಿಯಲ್ಲಿ ಆಗುತ್ತವೆ. ಹಣ ಸಂಪಾದಿಸುತ್ತ ಹೋದಂತೆ ನೀವು ಜಮೀನನ್ನು ವಿಸ್ತರಿಸಬಹುದು, ಫಾರ್ಮ್‌ಹೌಸ್ ಕಟ್ಟಿಕೊಳ್ಳಬಹುದು, ಬಾವಿ ತೆಗೆಸಬಹುದು, ಕಾಂಪೌಂಡ್ ವಾಲ್ ಕಟ್ಟಿಸಬಹುದು, ತೋರಣಬಾಗಿಲು-ಏರ್‌ಬಲೂನುಗಳಂತಹ ವಸ್ತುಗಳಿಂದ ಜಮೀನನ್ನು ಅಲಂಕರಿಸಬಹುದು, ಹಸುಗಳು ಜಾಸ್ತಿಯಾದರೆ ಡೇರಿ ಕಟ್ಟಿಸಬಹುದು. ಅಷ್ಟೇ ಅಲ್ಲ, ನಿಮ್ಮ ಪಕ್ಕದ ಜಮೀನಿಗೆ ಹೋಗಿ ಅವರಿಗೆ ಸಹಾಯ ಮಾಡಬಹುದು (ಉದಾ: ಕಳೆ ಕಿತ್ತುಕೊಡುವುದು, ಕಾಟ ಕೊಡುವ ಕಾಗೆ-ನರಿಗಳನ್ನು ಓಡಿಸುವುದು, ಕೀಟನಾಶಕ ಸಿಂಪಡಿಸುವುದು, ಯಾವುದಾದರೂ ಸಸಿ ಅಥವಾ ಪ್ರಾಣಿಯನ್ನು ಉಡುಗೊರೆಯಾಗಿ ಕೊಡುವುದು). ಇದರಿಂದಾಗಿ ನಿಮಗೆ ಅನುಭವ ಜಾಸ್ತಿಯಾಗುತ್ತದಲ್ಲದೇ ಸ್ವಲ್ಪ ಹಣವೂ ಸಿಗುತ್ತದೆ. ಕೃಷಿಯಲ್ಲಿ ಸಾಧನೆ ಮಾಡುತ್ತ ಹೋದಂತೆ ನಿಮಗೆ ಹಲವು ಅವಾರ್ಡುಗಳು, ಬಿರುದುಗಳು ದೊರೆಯುತ್ತ ಹೋಗುತ್ತವೆ.

ಕೆಲವೇ ವರ್ಷಗಳ ಹಿಂದಿನ ನೆನಪು: ನಾನು ಯಾವುದೋ ಪತ್ರಿಕೆಯಲ್ಲಿ ಬಂದಿದ್ದ ಹೊಸರುಚಿಯ ಪುಟವನ್ನು ಹಿಡಿದು ಅಡುಗೆಮನೆಯಲ್ಲಿ ಅಮ್ಮನಿಗೆ ಅದನ್ನು ಮಾಡಿಕೊಡುವಂತೆ ಹಟ ಮಾಡುತ್ತಿದ್ದೆ. ಆಗ ಅಲ್ಲಿಗೆ ಬಂದ ಅಜ್ಜಿ, "ಅಪ್ಪೀ, ನೀ ಸುಮ್ನಿರು. ಪುಸ್ತಕದ ಬದನೇಕಾಯಿ ತಿನ್ನಕ್ಕೆ ಬರದಿಲ್ಲೆ" ಅಂತ ಹೇಳಿದ್ದಳು. ಅಂದರೆ, ಅಜ್ಜಿಯ ಪ್ರಕಾರ, ಭೌತಿಕವಲ್ಲದ, ಅನುಭವಜನ್ಯವಲ್ಲದ, ಕೈಯಾರೆ ಮಾಡದ ಯಾವ ಕೆಲಸ / ತಯಾರಾದ ವಸ್ತುವೂ ಉಪಯೋಗಕ್ಕೆ ಬಾರದ್ದು ಅಂತ. ಹಾಗಾದರೆ, ಇಲ್ಲಿ ನಾವೆಲ್ಲ ಹುಚ್ಚಿಗೆ ಬಿದ್ದವರಂತೆ ಮಾಡುತ್ತಿರುವುದು ಏನು? ಬಾಳೆಗಿಡದಲ್ಲಿ ಗೊನೆ ತೂಗಿದಾಗ ಬೀಗಿದ್ದು, ಸರಿಯಾದ ಸಮಯಕ್ಕೆ ಕೊಯ್ಲು ಮಾಡದಿದ್ದರೆ ಬೆಳೆ ಎಲ್ಲಿ ಹಾಳಾಗುತ್ತದೋ ಅಂತ ಟೆನ್ಷನ್ ಮಾಡಿಕೊಂಡದ್ದು, ಟ್ರಾಕ್ಟರ್ ಬಳಸಲಿಕ್ಕೆ ಇಂಧನ ಖಾಲಿಯಾಯ್ತಲ್ಲ ಅಂತ ಖಿನ್ನಗೊಂಡದ್ದು, ಕಲ್ಲಂಗಡಿ ಮಾರಿದಾಗ ಬಂದ ದುಪ್ಪಟ್ಟು ಹಣ ಕಂಡು ಖುಶಿಯಾದದ್ದು, ದಾರಿ ತಪ್ಪಿ ಬಂದಿದ್ದ ಆಮೆಗೆ ಮನೆ ಕಲ್ಪಿಸಿ ತೃಪ್ತಿ ಪಟ್ಟುಕೊಂಡದ್ದು, ಯಾವುದೋ ಕಾಡುಪ್ರಾಣಿ ಹೊಲಕ್ಕೆ ನುಗ್ಗಿದಂತೆ ಕನಸು ಕಂಡು ನಿದ್ದೆಯಿಂದ ಎಚ್ಚೆತ್ತದ್ದು.... ಇವಕ್ಕೆಲ್ಲ ಏನರ್ಥ? ಕೇವಲ ಕಂಪ್ಯೂಟರ್ ಪರದೆಯ ಮೇಲಣ ಹುಸಿ ಚಿತ್ರಗಳನ್ನು ನಿಜವೆಂದೇ ಭಾವಿಸಿ ಶ್ರದ್ಧೆಯಿಂದ, ಖಂಡಿತ ಮನಃಪೂರ್ವಕವಾಗಿ ಈ ಆಟದಂತಹ ಆಟದಲ್ಲಿ ನಮ್ಮನ್ನು ತೊಡಗಿಸಿಕೊಂಡಿರುವುದು ಇದ್ಯಾವ ಸೀಮೆಯ ಮರುಳು? ಊರಿನಲ್ಲಿರುವ ತೋಟ-ಗದ್ದೆಗಳಲ್ಲಿ ವ್ಯವಸಾಯ ಮಾಡುವುದು ಬಿಟ್ಟು, ನಗರಗಳಲ್ಲಿ ನೆಲೆಸಿರುವ ನಾವು ಕಂಪ್ಯೂಟರ್ ಮುಂದೆ ಕೂತು ಥೇಟ್ ರೈತನ ರೀತಿ ಆಲೋಚಿಸುತ್ತಿರುವುದು-ವರ್ತಿಸುತ್ತಿರುವುದು ವ್ಯಂಗ್ಯದ ಪರಾಕಾಷ್ಠೆಯೇ, ವಿಪರ್ಯಾಸದ ಪರಮಾವಧಿಯೇ ಅಥವಾ ಮೂರ್ಖತನದ ತುರೀಯ ಸ್ಥಿತಿಯೇ?

ಗೊತ್ತಿಲ್ಲ! ಆದರೆ, ಅಂತರ್ಜಾಲ ವಿಶ್ವಕೋಶ ವಿಕಿಪೀಡಿಯಾ ಪ್ರಕಾರ, ವಿಶ್ವದಾದ್ಯಂತ ಇದುವರೆಗೆ ಸುಮಾರು ಆರೂವರೆ ಕೋಟಿ ಜನ ಈ ಹುಚ್ಚಿಗೆ ಬಲಿಯಾಗಿದ್ದಾರೆ. ಸಧ್ಯದ ಫೇಸ್‌ಬುಕ್ಕಿನ ಅತ್ಯಂತ ಜನಪ್ರಿಯ ಆಟವೂ ಇದಾಗಿದೆ. ಇದಕ್ಕೆ ಬಲಿಯಾಗಿರುವ ವಿದ್ಯಾರ್ಥಿಗಳು ಪಠ್ಯಪುಸ್ತಕ ಬದಿಗಿಟ್ಟು ಬಂದು ಹಸುವಿನ ಹಾಲು ಕರೆಯುತ್ತಿದ್ದರೆ ಮುದುಕರು ಬೆನ್ನು ಬಗ್ಗಿಸಿಕೊಂಡು ಉಳುಮೆ ಮಾಡುತ್ತಿದ್ದಾರೆ. ಅಷ್ಟೂ ಗಿಡಗಳಲ್ಲೂ ಹಣ್ಣು ಬಿಟ್ಟಿದ್ದು ನೋಡಿ ಹಿರಿಹಿರಿ ಹಿಗ್ಗುತ್ತಿದ್ದಾರೆ. ಕೆಲ ಗಂಡಸರು ಲಕ್ಷಗಟ್ಟಲೆ ಹಣ ಮಾಡಿ ಖುಶಿ ಪಡುತ್ತಿದ್ದರೆ, ಗೃಹಿಣಿಯರಿಗೆ ಹಣಕ್ಕಿಂತ ತಮ್ಮ ಜಮೀನನ್ನು ಅಲಂಕರಿಸುವುದರಲ್ಲೇ ಆನಂದ. ಜಮೀನಿನ ತುಂಬ ದ್ರಾಕ್ಷಿ ಬೆಳೆದಿದ್ದೇವೆ; ತಿನ್ನಲಿಕ್ಕೆ ಬರುತ್ತಿಲ್ಲ, ಕೆಚ್ಚಲ ತುಂಬ ಹಾಲು ತುಂಬಿ ನಿಂತಿದೆ ಹಸು; ಕುಡಿಯಲಿಕ್ಕೆ ಸಿಗುತ್ತಿಲ್ಲ, ಮನೆಯೆದುರಿನ ಅಂಗಳದ ತುಂಬ ಗುಲಾಬಿಯಿದೆ; ಮುಡಿಯಲಿಕ್ಕೆ ಆಗುತ್ತಿಲ್ಲ, ಜೇಬಿನ ತುಂಬ ಹಣವಿದೆ; ಕಂಪ್ಯೂಟರಿನ ಮುಂದಿಂದ ಎದ್ದು ಬಂದರೆ ಬಳಸಲಿಕ್ಕೆ ಬರುವುದಿಲ್ಲ!

ಕನ್ನಡಿಯೊಳಗಿನ ಗಂಟು ಎಂದರೆ ಇದೇನಾ?!

[ವಿಜಯ ಕರ್ನಾಟಕದ ಸಾಪ್ತಾಹಿಕ ಲವಲvkಗಾಗಿ ಬರೆದದ್ದು]