Monday, January 24, 2011

ರಾಯರು ಮತ್ತು ಪದುಮ

ಜರ್ಮನ್ ಗ್ರಾಸ್ ಎಂಬುದು ಹಸಿರಲ್ಲ
ಎಂದರೆ ಒಪ್ಪುವದೇ ಇಲ್ಲ ಇವಳು..
ಹಸಿರು ಎಂದರೆ ಕಳೆ, ಲಂಟಾನ, ಚದುರಂಗ,
ಹೂಗಿಡ, ತಬ್ಬುಬಳ್ಳಿ, ಅಡ್ಡಮರ,
ಪೊಟರೆಯಿಂದಿಣುಕುವ ಹಕ್ಕಿಮರಿ,
ಬೆಟ್ಟದ ಮೇಲೆ ಮೇಯುತ್ತಿರುವ ಗಿಡ್ಡ ದನ,
ತರಗೆಲೆಗಳ ಜೊತೆ ಕೊಳೆಯುತ್ತಿರುವ
ಯಾರೂ ತಿನ್ನದ ಹಣ್ಣು, ಅದರೊಡಲ
ಬೀಜದ ಕನಸು ಎಂದೆಲ್ಲ ಹೇಳಿದರೆ
ಹೋಗೆಲೋ ಎನ್ನುತ್ತಾಳೆ;
ಹೆಸರು ಮರೆತು ಮೊರೆತೆದ್ದದ್ದೇ ಹಸಿರು
ಎಂದರೆ ವಾದ ಮಾಡುತ್ತಾಳೆ.
ಕನಸು ಕಾಣದ ನೀನೊಂದು ಪುತ್ಥಳಿ
ಎಂದರೆ ಮೂಗು ಮುರಿಯುವಷ್ಟು ಮುನಿಸು.

ಅಂಚು ಒದ್ದೆಯಾದ ಲಂಗ ಹಿಂಡುತ್ತ ಲೋಭಾನದ
ಹೊಗೆ ಹರಿಸುತ್ತಿರುವ ತಾಯಿಯ ಬಳೆಯ ಕಿಂಕಿಣಿ
ಸದ್ದಿಗೇ ಮಗು ನಿದ್ದೆ ಹೋದ ಕತೆ ಹೇಳಿದರೆ
ಸಿಲ್ಲಿ ಅನ್ನುತ್ತಾಳೆ.
ಹಗ್ಗ ಬಿಗಿಯಲು ಮರೆತ ದಡಕ್ಕೆಳೆದಿಟ್ಟ ದೋಣಿ
ಅಲೆಯೊಂದಿಗೆ ತೇಲಿ ಹೋಯಿತು ಎಂದರೆ
ನಿರ್ಭಾವುಕವಾಗಿ ಆಕಳಿಸುತ್ತಾಳೆ.

ನಾನು ಪಾಸಾದದ್ದೆಲ್ಲ ಥಿಯರಿಯಲ್ಲೇ,
ಪ್ರಾಕ್ಟಿಕಲ್ಲಿನಲ್ಲಿ ಸೊನ್ನೆ ಎಂದರೆ
ಥಟ್ಟನೆ ಈರುಳ್ಳಿಯ ರೇಟು ಹೇಳಿ ನನ್ನನ್ನು
ತಬ್ಬಿಬ್ಬು ಮಾಡಿ ತಾನು ಹೊಟ್ಟೆ ಹಿಡಿದುಕೊಂಡು
ನಗುತ್ತಾಳೆ.

ಇನ್ನೂ ಮಾವನ ಮನೆಯಲಿ ತುಂಬಿದ
ಮಲ್ಲಿಗೆ ಹೂಗಳ ಪರಿಮಳದ ಲಯದಲ್ಲೇ
ತೇಲುತ್ತಿರುವ ರಾಯರು;
ತಾನೇ ಬಂದು ಕಾಫಿ ಕೊಟ್ಟು ಸಕ್ಕರೆ
ಕರಗಿಸಿಕೊಳ್ಳಲು ಸ್ಪೂನು ಕೊಡುವ ಪದುಮ;
ನೀರಾಯಿತು ಅಂತ ಹೇಳಲು ನಾದಿನಿಯೂ ಇಲ್ಲ,
ಅಲ್ಲಿ ಒಳಮನೆಯೂ ಇಲ್ಲ.

ಈಗ ರಾಯರ ಕವಿತೆಗೆ ಪದುಮಳ ಟ್ವೀಟು
ಆಯುರ್ವೇದ ವೈದ್ಯರಿಗೆ ಅಲೋಪತಿಯ ಟ್ರೀಟು
ಅದೇನರ್ಥವಾಗುತ್ತೋ, ಮಾವನಿಗೆ ಇದಕ್ಕೂ ನಗು.

Thursday, January 13, 2011

ಹಕ್ಕಿ ಸಾಕುವುದು...

ಹಕ್ಕಿ ಸಾಕುವುದು ಹೇಗೆ ಅಂತ ನನಗೆಲ್ಲಿ ಗೊತ್ತಿತ್ತು?
ಅಪ್ಪನ ಜೊತೆ ಹೋಗಿದ್ದಾಗ ತೋಟಕ್ಕೆ,
ಪುಟ್ಟಗೆ ಕೂತಿತ್ತು ಸ್ವಾಂಗೆ ಅಟ್ಲಿನ ಮಡಿಲಲ್ಲಿ
ಪೆಟ್ಟಾದ ಹಕ್ಕಿ. ಚಿಂವಿಚಿಂವಿ ಗುಟ್ಟುತ್ತಿದ್ದದರ ಆರ್ತಕ್ಕೆ
ಮನ ಕರಗಿ, ಕೊಕ್ಕ ಕೆಂಪು - ಮೈಯ ಹಸುರಿಗೆ ಪ್ರೀತಿಯುಕ್ಕಿ
ಎತ್ತಿ ಹೊಂಬಾಳೆಯಲ್ಲಿಟ್ಟುಕೊಂಡು ತಂದೇಬಿಟ್ಟೆ
ಮನೆಗೆ.

ಹಕ್ಕಿಯ ಬೇಕುಬೇಡಗಳೊಂದೂ ಗೊತ್ತಿರಲಿಲ್ಲ..
ಚಿಂವಿಚಿಂವಿ ಗದ್ದಲ ಮೂರು ದಿನಕ್ಕೆ ಬೇಸರ ಬಂದು,
ವಿಚಾರಿಸಲು ಸಮಯ ವಿಳಂಬ; ಗಾಯಕ್ಕೆ ನನಗೆ ತಿಳಿಯದ ಮುಲಾಮು;
ಸಮಾಧಾನಕ್ಕೆ ಶಬ್ದಗಳು ಸಿಗದೇ ಪರಿತಾಪ.

ಕರೆದುತಂದದ್ದಕ್ಕೆ ಸಾಕುವುದೇ ಶಿಕ್ಷೆ ಎಂದಿತು ಹಕ್ಕಿ.
ಅಪ್ಪ ಗುರುಗುಟ್ಟಿದ; ಅಮ್ಮ ಕಾಳಿಗೆ ಕಾಸು ಕೊಡಲಿಲ್ಲ.
ಹೊರಲಾರದ, ಹೊರಹಾಕಲಾರದ ಇಬ್ಬಂದಿಯಲ್ಲಿ
ತಪ್ಪು ಯಾರದು ಅಂತ ತಿಳಿಯದೇ ಕಂಗಾಲು ನಾನು.

ಒಂದು ಹಕ್ಕಿ ಸಾಕುವುದು ಇಷ್ಟೆಲ್ಲ ಕಷ್ಟ ಅಂತ ನನಗೆಲ್ಲಿ ಗೊತ್ತಿತ್ತು..?
“ಚೆಲುವು ಚೆಂದ, ಒಲವಿಗರ್ತಿ, ಆಟಕ್ಕಾದರ, ಸ್ಪರ್ಷಕ್ಕೆ ಪುಳಕ,
ರೆಕ್ಕೆ ಬೀಸಿದರೆ ಭಾವರೋಮಾಂಚ, ಚಿಲಿಪಿಲಿಯೋ- ಉಪಮಾತೀತ;
...ಆದರೆ,” ಅಜ್ಜ ತಡೆದು ಹೇಳಿದ,
“..ಹಿಡಿದು ಸಾಕಿದ ದಿನದಿಂದ ನಿನಗಿಲ್ಲ ಹಾರಾಟ; ವಿಹಂಗಮ ನೋಟ.”

ಹಕ್ಕಿ ಸಾಕುವ ಕಷ್ಟ ನನಗೆ ಗೊತ್ತೇ ಇರಲಿಲ್ಲ.