Tuesday, June 30, 2009

ಬಾರದ ಮಳೆಯ ದಿನದಲ್ಲಿ ನನ್ನದೊಂದಿಷ್ಟು ಬಡಬಡಿಕೆ

ಮೌಸ್ ಅಲ್ಲಾಡಿಸಿದರೆ ಸಾಕು, ಇದೆಲ್ಲ ತನ್ನದೇ ಎಂಬಂತೆ ಕಂಪ್ಯೂಟರ್ ಸ್ಕ್ರೀನಿನ ತುಂಬ ಓಡಾಡುವ ಈ ಬಿಳೀ ಹೊಟ್ಟೆಯ ಕಪ್ಪು ಅಲಗುಗಳ ಪುಟ್ಟ ಬಾಣವನ್ನು ಸ್ಕ್ರೀನಿನ ಕೆಳಾಗಡೆ ಬಲಮೂಲೆಗೆ ಒಯ್ದು ಒಂದು ಕ್ಷಣ ಬಿಟ್ಟರೆ ಪುಟ್ಟ ಅಸಿಸ್ಟೆಂಟ್ ಬಾಕ್ಸೊಂದು ಮೂಡಿ Tuesday, June 30, 2009 ಎಂದು ತೋರಿಸುತ್ತಿದೆ ಮುದ್ದಾಗಿ. ಅಂದರೆ ಜುಲೈ ತಿಂಗಳು ಬರಲಿಕ್ಕೆ ಇನ್ನು ಕೇವಲ ಒಂದು ದಿವಸ ಬಾಕಿ.

ನಾನು ಕಳೆದ ತಿಂಗಳ 26ನೇ ತಾರೀಖಿನ ಬೆಳಗ್ಗೆ ಎದ್ದು ಮುಂಬಾಗಿಲು ತೆರೆದಾಗ 'ಈ ವರ್ಷ ಮಳೆ ಜಾಸ್ತಿ. ಮೇ 28ರಿಂದಲೇ ಮಾನ್ಸೂನ್ ಶುರುವಾಗಲಿದೆ. ಆಗಲೇ ಕೇರಳಕ್ಕೆ ಬಂದಿದೆ' ಅಂತೆಲ್ಲ ದೊಡ್ಡಕ್ಷರಗಳಲ್ಲಿ ಬರೆದುಕೊಂಡಿದ್ದ ನ್ಯೂಸ್‍ಪೇಪರು ಬಾಗಿಲಲ್ಲಿ ಬಿದ್ದಿತ್ತು. ನನಗೆ ಖುಶಿಯಾಯಿತು. ದೇಶದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂದರೆ ಯಾರಿಗೆ ತಾನೆ ಸಂತಸವಾಗುವುದಿಲ್ಲ? ನಾನು ತಕ್ಷಣವೇ ಮನೆಗೆ ಫೋನ್ ಮಾಡಿ ಅಪ್ಪನ ಬಳಿ 'ಅಮ್ಮನ ಹತ್ರ ಸೌತೆ ಬೀಜ ಎಲ್ಲ ರೆಡಿ ಮಾಡಿ ಇಟ್ಕಳಕ್ಕೆ ಹೇಳು, ಇನ್ನು ಎರಡು ದಿನದಲ್ಲಿ ಮಳೆಗಾಲ ಶುರು ಆಗ್ತಡ. ಹವಾಮಾನ ತಜ್ಞರು ಹೇಳಿಕೆ ಕೊಟ್ಟಿದ ಪೇಪರಲ್ಲಿ. ಕಟ್ಟಿಗೆ ಎಲ್ಲಾ ಸೇರುವೆ ಆಯ್ದಾ ಹೆಂಗೆ? ಹಿತ್ಲಿನ ಬೇಲಿ ಗಟ್ಟಿ ಮಾಡ್ಸಿ ಆತಾ?' ಅಂತೆಲ್ಲ ಕೇಳಿದೆ. ಬೆಳಬೆಳಗ್ಗೆ ಫೋನ್ ಮಾಡಿ ಮನೆಯ ಬಗ್ಗೆ ಕಾಳಜಿ ತೋರಿಸುತ್ತಿರುವ ಮಗನ ಬಗ್ಗೆ ಅಭಿಮಾನ ಬಂದು ಅಪ್ಪ 'ಮಗನೇ, ನಮಗೂ ಗೊತ್ತಾಯ್ದು ವಿಷಯ. ಟಿವಿ9 ಬ್ರೇಕಿಂಗ್ ನ್ಯೂಸಲ್ಲಿ ನಿನ್ನೇನೆ ತೋರ್ಸಿದ್ದ. ನೀನೇನು ತಲೆಬಿಸಿ ಮಾಡ್‍ಕ್ಯಳಡ. ನಾವು ಮಳೆಗಾಲಕ್ಕೆ ರೆಡಿ ಆಯಿದ್ಯ' ಎಂದ. ನಾನು ರೂಮಿನಲ್ಲಿ ಟಿವಿ ಇಟ್ಟುಕೊಂಡಿಲ್ಲವಾದ್ದರಿಂದ ಟಿವಿ9ಅಲ್ಲಿ ನಿನ್ನೆಯೇ ತೋರಿಸಿರುವುದು ನನಗೆ ಗೊತ್ತಿರಲಿಲ್ಲ. ಅಪ್ಪ ನನಗಿಂತ ಫಾಸ್ಟ್ ಆಗಿರುವುದು ಗೊತ್ತಾಗಿ ಬೆಪ್ಪಾದೆ. ಮುಂದುವರೆದಿರುವ ತಂತ್ರಜ್ಞಾನ, ಶ್ರೀಘ್ರ ಮತ್ತು ವೇಗದ ಮಾಹಿತಿ ಸಂವಹನ, ಮುಂಬರುವ ಮಳೆಯನ್ನು ಇಂದೇ-ಈಗಲೇ ಹೇಳುವ ವಿಜ್ಞಾನಿಗಳ ಚಾಕಚಕ್ಯತೆ ಎಲ್ಲವೂ ಆ ಬೆಳಗಿನ ಜಾವದಲ್ಲಿ ನನಗೆ ಆಪ್ಯಾಯಮಾನವಾಗಿ ಕಂಡಿತು.

ಹವಾಮಾನ ತಜ್ಞರು ಹೇಳಿದಂತೆ ಅಂದು ಸಂಜೆಯೇ ಬೆಂಗಳೂರಿಗೆ ಮೋಡಗಳ ಆಗಮನವಾಯಿತು. ರಾತ್ರಿ ಹೊತ್ತಿಗೆ ಅವೆಲ್ಲಾ ಧಡಬಡಾಂತ ಗುಡುಗು-ಸಿಡಿಲುಗಳಾಗಿ ಶಬ್ದ ಮಾಡುತ್ತಾ ಧೋ ಮಳೆ ಸುರಿಸತೊಡಗಿದವು. ಬೆಂಗಳೂರಿನ ರಸ್ತೆಗಳ ಮೇಲೆ ಬಿದ್ದ ಮಳೆನೀರು, ಪಕ್ಕಕ್ಕೆ ಹರಿದು ಇಂಗೋಣವೆಂದರೆ ಬರೀ ಕಾಂಕ್ರೀಟು-ಚಪ್ಪಡಿ ಹಾಸಿಕೊಂಡ ಫುಟ್‌ಪಾತೇ ಇದ್ದು ಎಲ್ಲೂ ಮಣ್ಣುನೆಲ ಕಾಣದೆ, ಹಾಗೇ ಟಾರ್ ರಸ್ತೆಯ ಮೇಲೆ ಸುಮಾರು ಹೊತ್ತು ಹರಿದು, ತಗ್ಗಿದ್ದಲ್ಲೆಲ್ಲ ನಿಂತು ಯೋಚಿಸಿತು. ಕೊನೆಗೆ ಬೇರೆ ದಾರಿ ಕಾಣದೆ, ಮೋರಿಗೆ ಹಾರಿ ಕೊಳಚೆ ನೀರಿನೊಂದಿಗೆ ಬೆರೆತು ಸಾಗರಮುಖಿಯಾಗುವುದೇ ತನಗುಳಿದಿರುವ ಮಾರ್ಗ ಎಂದದು ತೀರ್ಮಾನಿಸಿತು. ಪುಣ್ಯಕ್ಕೆ ಅದಕ್ಕೆ ಸುಮಾರೆಲ್ಲ ತೆರೆದ ಪಾಟ್‌ಹೋಲುಗಳು ಸಿಕ್ಕಿದ್ದರಿಂದ, ಬೇಗ ಬೇಗನೆ ಮೋರಿ ಸೇರಲಿಕ್ಕೆ ಅನುಕೂಲವಾಯಿತು. ಮೋರಿ ಸೇರುವ ರಭಸದಲ್ಲಿ ಅದು ಮನುಷ್ಯರನ್ನೂ, ಪ್ರಾಣಿಗಳನ್ನೂ, ಸಾಮಾನು-ಸರಂಜಾಮುಗಳನ್ನೂ ಜತೆಗೆ ಸೇರಿಸಿಕೊಂಡಿತು.

ಆಮೇಲೆ ಅಪ್ಪ ಫೋನ್ ಮಾಡಿದಾಗ 'ಬೆಂಗಳೂರಲ್ಲಿ ಭಾರೀ ಮಳೆಯಂತೆ. ಟಿವಿ9ಅಲ್ಲಿ ತೋರಿಸ್ತಿದ್ದ. ಒಬ್ಬ ಹುಡುಗ ಕೊಚ್ಚಿಕೊಂಡು ಹೋಯ್‍ದ್ನಡ. ನೀನು ಓಡಾಡಕ್ಕರೆ ಹುಷಾರಿ' ಅಂತೆಲ್ಲ ಎಚ್ಚರಿಸಿದ. ಬೆಂಗಳೂರಿನಲ್ಲಿ ಹುಷಾರಾಗಿರಬೇಕು ಎಂಬುದು ನನಗೂ ಗೊತ್ತಿತ್ತು. ನಿನ್ನೆಯಷ್ಟೇ ನನ್ನ ಫ್ರೆಂಡು ಅಲ್ಲೆಲ್ಲೋ ಬೈಕು ನಿಲ್ಲಿಸಿದ್ದಾಗ ಮರದ ಕೊಂಬೆ ಮುರಿದುಕೊಂಡು ಬಿದ್ದು, ಪಾಪ ಬೈಕಿನ ಮುಂಭಾಗ ಫಡ್ಚ ಆಗಿ ಹೋಗಿತ್ತಂತೆ. 'ಈಗಷ್ಟೇ ಗ್ಯಾರೇಜಲ್ಲಿ ಬಿಟ್ಟು ಬಂದೆ ಮಾರಾಯಾ. ಐದಾರು ಸಾವಿರ ಖರ್ಚು ಇದೆ ಅಂದ್ರು. ಇನ್ಷೂರೆನ್ಸ್ ಕ್ಲೇಮ್ ಮಾಡ್ಲಿಕ್ಕೆ ಆಗತ್ತಾ ನೋಡ್ಬೇಕು' ಅಂತ ಹೇಳ್ತಿದ್ದ. ನಾವು ಎಷ್ಟೇ ಹುಷಾರಾಗಿದ್ದರೂ ಹೀಗೆಲ್ಲ ತಲೆ ಮೇಲೆ ಮುರಕೊಂಡು ಬೀಳುವ ಕೊಂಬೆಗಳಿಂದ ತಪ್ಪಿಸಿಕೊಳ್ಳಲಿಕ್ಕೆ ಆಗುತ್ತಾ? ಮೇಲೆ ನೋಡುತ್ತ ನಡೆದರೆ ಚರಂಡಿಗೆ ಬೀಳ್ತೀವಿ ಅಥವಾ ಯಾವುದಾದರೂ ಆಂಟಿಗೆ ಡಿಕ್ಕಿ ಹೊಡೆದು ಕಪಾಳಮೋಕ್ಷಕ್ಕೆ ಗುರಿಯಾಗುತ್ತೀವಿ. ಇದನ್ನೆಲ್ಲ ಹೇಳಿದರೆ ಅಪ್ಪ ಇನ್ನಷ್ಟು ಗಾಭರಿಯಾದಾನು ಅಂತ ಸುಮ್ಮನಾದೆ. ಬೆಳೆದ ಮಗ ಯಾರೋ ಅಪರಿಚಿತ ಹೆಂಗಸಿಂದ ಸಾರ್ವಜನಿಕರ ಎದುರು ಕೆನ್ನೆ ಏಟು ತಿನ್ನುವುದನ್ನು ಯಾವ ತಂದೆಯೂ ಸಹಿಸಿಕೊಳ್ಳಲಾರ.

ನಾಲ್ಕಾರು ದಿನ ಹೊಡೆದ ಮಳೆ ಆಮೇಲೆ ವಾಪಸು ಹೋಗಿಬಿಟ್ಟಿತು. ಕೊನೆಗೆ ಗೊತ್ತಾಯಿತು, ಅದು ಬಂದಿದ್ದು ಮುಂಗಾರೇ ಅಲ್ಲ; ಕಳೆದ ವರ್ಷದ ಹಳೇಮೋಡಗಳ ಪೆಂಡಿಂಗ್ ಮಳೆ ಅಥವಾ ಅಲ್ಲೆಲ್ಲೋ ಸಾಗರದಲ್ಲೆದ್ದ ಚಂಡಮಾರುತದ ಪರಿಣಾಮ ಅಂತ. ಕಾರ್ಪೋರೇಶನ್ ಕೆಲಸಗಾರರು ಮೂರ್ನಾಲ್ಕು ದಿನ ಕೊಳಚೆಯನ್ನು ಶೋಧಿಸಿದರೂ ಕೊಚ್ಚಿ ಹೋಗಿದ್ದ ಹುಡುಗನ ಶವ ಸಿಗಲಿಲ್ಲ. ಆಮೇಲೆ ಬಂದ ದೇಶದ ಸೈನಿಕರಿಗೂ ಅಪಜಯವಾಯಿತು. ಅಪ್ಪ ಫೋನಿನಲ್ಲೂ, ಪತ್ರಕರ್ತರು ಪೇಪರಿನಲ್ಲೂ ನನಗೆ ಆಗಾಗ ಈ ಮಾಹಿತಿಗಳನ್ನು ಕೊಡುತ್ತಿದ್ದರು. ಅಂದು ಬೆಳಗ್ಗೆ ನನ್ನ ಕಲೀಗು 'ಸೆಕ್ಯೂರಿಟೀನೇ ಇಲ್ಲ ಕಣಯ್ಯಾ ಈ ಬೆಂಗಳೂರಲ್ಲಿ. ನೋಡು, ಇಷ್ಟೆಲ್ಲ ಅವ್ಯವಸ್ಥೆ ಆಗ್ತಿದೆ ಇಲ್ಲಿ. ಆದ್ರೆ ಸರ್ಕಾರ ಸ್ವಲ್ಪಾನಾದ್ರೂ ಸೀರಿಯಸ್ಸಾಗಿದೆಯಾ ಅಂತ? ಅವರವರಲ್ಲೇ ಕಿತ್ತಾಟ ಮಾಡಿಕೊಳ್ತಾ ಹೆಂಗೆ ನಾಚಿಕೆ ಇಲ್ಲದವರ ಥರ ಇದಾರೆ' ಅಂತ, ಟೈಮ್ಸಾಫಿಂಡಿಯಾದ ಪೇಜುಗಳನ್ನು ತಿರುಗಿಸುತ್ತಾ ಕೆಂಪು ಮುಖ ಮಾಡಿಕೊಂಡು ಉಗಿದ. ವರ್ಲ್ಡ್‌ಕಪ್ಪಿನಿಂದ ಹೊರಬಂದ ಭಾರತದ ಆಟಗಾರರೊಂದಿಗೇ ಮುಖ್ಯ ಪೇಪರಿನ ಪುಟಗಳೂ ಮುಗಿದು, ಕೊನೆಗೆ ಬ್ಯಾಂಗಲೂರ್ ಟೈಮ್ಸ್‌ನಲ್ಲಿನ ಒಂದಷ್ಟು ಚಿತ್ರಗಳನ್ನು ನೋಡಿದ ಮೇಲೆ ಅವನ ಮುಖ ಸ್ವಲ್ಪ ಪ್ರಶಾಂತವಾದಂತೆ ಕಂಡಿತು.

ಈ ಮಧ್ಯೆ, ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ವಿದ್ಯುತ್ ಕೊರತೆ ಆಗುವುದಿಲ್ಲ, ಮಳೆ ಇನ್ನೇನು ಶುರುವಾಗಲಿದೆ, ಈ ವರ್ಷ ಜಾಸ್ತಿಯೇ ಆಗಲಿರುವುದಾಗಿ ಹವಾಮಾನ ತಜ್ಞರು ಧೃಡಪಡಿಸಿರುವುದಾಗಿ ಇಂಧನ ಸಚಿವರು ಹೇಳಿಕೆ ಕೊಟ್ಟರು ಅಂತ ಗೊತ್ತಾಯಿತು. ಇಂಧನ ಸಚಿವರೇ ಹೇಳಿದ ಮೇಲೆ ಎಲ್ಲಾ ಸರಿಯಾಗುತ್ತೆ ಬಿಡು ಅಂತ ನಾನೂ ಸಮಾಧಾನ ಮಾಡಿಕೊಂಡೆ. ಅಪ್ಪ ಫೋನ್ ಮಾಡಿ ಊರ ಕಡೆ ಏನೇನೋ ಗಲಾಟಿಗಳೆಲ್ಲ ಆಗುತ್ತಿದೆ ಅಂತ ಹೇಳಿದ. ಊರಿನ ಮಹಿಳಾ ಮಂಡಳಿಗೆ ಸರ್ಕಾರದಿಂದ ಸ್ಯಾಂಕ್ಷನ್ ಆಗಿದ್ದ ಹಣವನ್ನು ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಂದಿದ್ದು ಗೊತ್ತಾಗಿದೆಯಂತಲೂ, ಆತ ಕಾಂಗ್ರೆಸ್ ಪರ ಕಾರ್ಯಕರ್ತನಾದ್ದರಿಂದ, ಜನರೆಲ್ಲ ಸಭೆ ಸೇರಿ, ಸಧ್ಯದ ಬಿಜೆಪಿ ಸರ್ಕಾರದ ಸಹಾಯ ಪಡೆದು ಆತನಿಗೊಂದು ಗತಿ ಕಾಣಿಸಲಿಕ್ಕೆ ತೀರ್ಮಾನಿಸಿದ್ದಾರೆ ಅಂತ ಅಪ್ಪ ಹೇಳಿದ. 'ಇಲ್ಲಿನ ಪೇಪರ್ರಲ್ಲೆಲ್ಲಾ ಬರ್ತಾ ಇದೆ, ಟಿವಿ9ಅಲ್ಲೂ ಬಂದ್ರೂ ಬರಬಹುದು, ನೋಡು' ಅಂದ. ಛೇ, ಈ ನೆಪದಲ್ಲಾದರೂ ಟಿವಿಯಲ್ಲಿ ನಮ್ಮೂರನ್ನೆಲ್ಲ ನೋಡುವ ಅವಕಾಶ ಸಿಗುತ್ತಿತ್ತು, ನನ್ನ ರೂಮಿನಲ್ಲೂ ಟಿವಿ ಇರಬೇಕಿತ್ತು ಅಂತ ಅಲವತ್ತುಕೊಂಡೆ. ಕೊನೆಗೆ ಅಪ್ಪನೇ ದನಿ ತಗ್ಗಿಸಿ 'ಈ ಜನಕ್ಕೆ ಬೇರೆ ಕೆಲಸ ಇಲ್ಲೆ. ಅದಕ್ಕೇ ಸುಮ್ನೆ ಏನಾದ್ರೂ ತಕರಾರು ಎತ್ತತಾ ಇದ್ದ. ಮಳೇನಾದ್ರೂ ಶುರು ಆಗಿದ್ರೆ ಎಲ್ರೂ ಗದ್ದೆ-ತೋಟ ಅಂತ ಹೋಗಿ ಬ್ಯುಸಿ ಆಗ್ತಿದ್ದ' ಅಂದ. ನನಗೆ ಅದೂ ಸರಿ ಎನ್ನಿಸಿತು.

ನನ್ನ ರೂಂಮೇಟು ಅದ್ಯಾವುದೋ ವೆಬ್‌ಸೈಟು ಓಪನ್ ಮಾಡಿಕೊಂಡು 'ನೋಡು, ಇದರಲ್ಲಿ ವೆದರ್ ಫೋರ್‌ಕಾಸ್ಟ್ ತೋರಿಸ್ತಾರೆ. ಆಲ್‌ಮೋಸ್ಟ್ ಅಕ್ಯುರೇಟಾಗಿರತ್ತೆ' ಅಂತ ಹೇಳಿದ. ನಾನೂ ನೋಡಿದೆ. ವಿಶ್ವದ ಭೂಪಟದಂತಿದ್ದ ಚಿತ್ರದ ಮೇಲ್ಮೈಯಲ್ಲಿ ತೆರೆಗಳಂತೆ ಬೆಳ್ಳಬೆಳ್ಳಗೆ ಅಲ್ಲಲ್ಲಿ ಕಾಣುತ್ತಿತ್ತು. 'ಇವು ಮೋಡಗಳು. ನೋಡು, ಹೇಗೆ ನಿಧಾನಕ್ಕೆ ಮೂವ್ ಆಗ್ತಿವೆ ಅಂತ.. ಈಗ ಇಂಡಿಯಾದ ಹತ್ರಾನೇ ಬಂದಿದೆ ಅಲ್ವಾ? ಇನ್ನೇನು ನಾಲ್ಕು ದಿವಸದಲ್ಲಿ ಶುರು ಆಗಿಬಿಡತ್ತೆ ಮಾನ್ಸೂನು' ಅಂದ ರೂಂಮೇಟು. ನನಗೆ ಮತ್ತೆ ಖುಶಿಯಾಯಿತು. ಬಾನಲ್ಲಿ ಓಡೋ ಮೇಘದ ಚಲನೆಯನ್ನೂ ತೋರಿಸುವ ವಿಜ್ಞಾನಿಗಳ ಜಾಣ್ಮೆಯ ಬಗ್ಗೆ ಮನಸ್ಸಿನಲ್ಲಿಯೇ ಶ್ಲಾಘಿಸಿದೆ.

ಆದರೆ ಈಗ ಎರಡ್ಮೂರು ದಿನಗಳ ಪೇಪರಿನಲ್ಲಿನ ದೊಡ್ಡಕ್ಷರಗಳು ಬೇರೇನೋ ಹೇಳುತ್ತಿವೆ. 'ಬರ'-ವಂತೆ! ಬರಮಾಡಿಕೊಳ್ಳಲಿಕ್ಕೆ ದೇಶದ ಜನತೆ ತಯಾರಾಗಬೇಕು ಅಂತೆಲ್ಲ ಹೇಳಿಕೆ ಕೊಟ್ಟಿದ್ದಾರೆ ಮಂತ್ರಿಗಳು. ಮಳೆಗಾಲ ಬರುತ್ತದೆ ಎಂದಾದರೆ ತಯಾರಿ ಬೇಕು, ಬರಕ್ಕೆ ಏನು ತಯಾರಿ ಮಾಡಿಕೊಳ್ಳುವುದು? ಕಡಿಮೆ ನೀರು ಕುಡಿಯಬೇಕೇ, ದಿನವೂ ಸ್ನಾನ ಮಾಡುವುದನ್ನು ಬಿಡಬೇಕೇ, ಟಿಶ್ಯೂ ಪೇಪರ್ ಬಳಸಬೇಕೇ? ಅರ್ಥವೇ ಆಗದೇ ಕಕ್ಕಾಬಿಕ್ಕಿಯಾಗುತ್ತೇನೆ ನಾನು. ವಿದ್ಯುತ್ತಂತೂ ಇಲ್ಲವೇ ಇಲ್ಲವಂತೆ. ಇನ್ನು ಹನ್ನೊಂದು ದಿನಗಳಲ್ಲಿ ಜಲಾಶಯಗಳೆಲ್ಲ ಖಾಲಿಯಾಗುತ್ತವೆಯಂತೆ. ಆಮೇಲೆ ಎಲ್ಲೆಲ್ಲೂ ಕತ್ತಲೆ ಆವರಿಸುತ್ತದಂತೆ. ಪೇಪರ್ರೋದಿ 'ವಾರೆವ್ಹಾ!' ಎಂದೆ ನಾನು.

ಕೆಲ ವರ್ಷಗಳ ಹಿಂದೆ ಹೀಗೇ ಮಳೆ ಶುರುವಾಗದೇ ಇದ್ದಾಗ ನಾವೆಲ್ಲಾ ನಮ್ಮ ಸೀಮೆಯ ದೇವರಿಗೆ ಪರ್ಜನ್ಯ ಮಾಡಿದ್ದೆವು. ನೂರಾರು ಜನ ಸೇರಿ, ಹತ್ತಿರದಲ್ಲಿದ್ದ ಕೆರೆಯಿಂದ ಕೊಡಪಾನಗಳಲ್ಲಿ ನೀರನ್ನು ತುಂಬಿ ತುಂಬಿ ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸುತ್ತ ಗರ್ಭಗುಡಿಯ ತುಂಬ ನೀರು ತುಂಬಿ ದೇವರನ್ನು ಮುಳುಗಿಸಿಬಿಟ್ಟಿದ್ದೆವು! ಹಾಗೆ ಮುಳುಗಿಸುತ್ತಿದ್ದಂತೆಯೇ ಮಳೆಹನಿಗಳು ಬೀಳತೊಡಗಿ ಜನಗಳೆಲ್ಲ ಹರ್ಷೋದ್ಘಾರ ಮಾಡಿದ್ದೆವು. ಕೋಡನಕಟ್ಟೆಯ ಸಿದ್ಧಿವಿನಾಯಕನ ಮಹಿಮೆಗೆ ಬೆರಗಾಗಿದ್ದೆವು. ಈಗಲೂ ಹಾಗೇ ಮಾಡೋಣವಾ ಅಂದರೆ ಹಿರೇಭಟ್ಟರು ಹೇಳುತ್ತಿದ್ದಾರೆ, 'ಈಗ ಮಾಡಿದ್ರೆ ಏನೂ ಉಪಯೋಗ ಇಲ್ಲೆ.. ಜನಗಳಲ್ಲಿ ಭಕ್ತಿ, ಶ್ರದ್ಧೆಯೇ ಇಲ್ಲೆ. ಪರ್ಜನ್ಯ ಮಾಡೋಣ ಅಂದ್ರೆ ಕೊಡಪಾನದಲ್ಲಿ ಯಾಕೆ ನೀರು ಒಯ್ಯಬೇಕು, ಡೈರೆಕ್ಟಾಗಿ ಒಂದು ಪೈಪ್ ಎಳೆದು ಪಂಪ್‌ಸೆಟ್ಟಲ್ಲಿ ಎತ್ತಿ ಸೀದಾ ದೇವರ ನೆತ್ತಿ ಮೇಲೇ ನೀರು ಬೀಳಹಂಗೆ ಮಾಡ್ಲಕ್ಕಲಾ ಅಂತ ಹೇಳ್ತಾರೆ ಈಗಿನ್ ಹುಡುಗ್ರು..! ದೇಶದ ತುಂಬ ಅನಾಚಾರ. ಹಿಂಗಾದ್ರೆ ಮಳೆಯೂ ಇಲ್ಲೆ ಬೆಳೆಯೂ ಇಲ್ಲೆ.' ನನಗೆ ಹತಾಶೆಯಾಗುತ್ತದೆ.

ಮಂತ್ರಿಗಳೆಲ್ಲ ರೆಸಾರ್ಟಿನಲ್ಲಿ ಕುಳಿತು ಇದಕ್ಕೆ ಪರಿಹಾರವೇನು ಅಂತ ಮಂಥನ ಮಾಡುತ್ತಿದ್ದಾರೆ. ನ್ಯೂಸ್‌ಪೇಪರ್ರು, ಟಿವಿ9 ಎಲ್ಲಾ ಕಡೆ ಬರಲಿರುವ ಬರದ ಬಗ್ಗೆ ಚರ್ಚೆ. ನಾನೂ ಇಲ್ಲೇ ಕೂತು ಯೋಚಿಸುತ್ತಿದ್ದೇನೆ: ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಹೇಗೆ ಅಂತ. ಆದರೆ ಕಲ್ಲುಬಂಡೆಗಳ ಸಂದಿಯೊಳಗೆಲ್ಲೋ ಅಡಗಿ ಕುಳಿತುಕೊಂಡಿರುವ ಅವನ್ನು ಹುಡುಕುವುದೇ ಕಷ್ಟದ ಕೆಲಸ. ಮಳೆ ಬಂದಮೇಲೆಯೇ ಅವು ಹೊರಗೆ ಬರುವುದು. ಇಲ್ಯಾರೋ ಹೇಳುತ್ತಿದ್ದಾರೆ, 'ಅದು ಕಪ್ಪೆ ಅಲ್ಲ; ಕತ್ತೆ. ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಆಗುತ್ತೆ' ಅಂತ. ಹಾಗಾದರೆ ಕೆಲಸ ಸುಲಭ. ಬೆಂಗಳೂರಿನಲ್ಲಿ ಕತ್ತೆಗಳಿಗೇನು ಬರವಿಲ್ಲ. 'ಆಫೀಸಿನಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ದೇಶಕ್ಕೆ ಒಳಿತಾಗುವಂಥದ್ದೇನಾದರೂ ಮಾಡುವುದು ಒಳ್ಳೆಯದು, ಕತ್ತೆ ಹುಡುಕಲಿಕ್ಕೆ ಹೋಗೋಣ ಬನ್ನಿ' ಅಂತ ನನ್ನ ಕಲೀಗುಗಳಿಗೆ ಹೇಳಿದರೆ, 'ನೀನೀಗ ಮಾಡ್ತಿರೋದು ಕತ್ತೆ ಕಾಯೋ ಕೆಲಸವೇ ಅಲ್ಲವೇನೋ' ಅಂತ ಅವರೆಲ್ಲಾ ಬಿದ್ದೂ ಬಿದ್ದು ನಗುತ್ತಿದ್ದಾರೆ. ನಾನು ಹ್ಯಾಪ ಮೋರೆ ಹಾಕಿಕೊಂಡು ಕುಳಿತಿದ್ದೇನೆ.

ಹೊರಗೆ ನೋಡಿದರೆ ಕಣ್ಣು ಕುಕ್ಕುವ ಬಿಸಿಲು. ನನ್ನೊಳಗೆ ಶುಷ್ಕ ಕತ್ತಲೆ.

Monday, June 22, 2009

ಒಂದು ಸ್ನೇಹ; ಒಂದು ಮೋಹ

ಅಲ್ಲೇ, ಮಂಟಪದ ಪಕ್ಕದಲ್ಲೇ ನಿಂತಿದ್ದೆ ನಾನು. ಯಾರೋ ಅಕ್ಷತೆಯ ಕಾಳುಗಳನ್ನು ಹಂಚಿ ಹೋದರು. ಮೊಳಗತೊಡಗಿದ ಗಟ್ಟಿಮೇಳದಲ್ಲಿ ಪುರೋಹಿತರ ‘ಮಾಂಗಲ್ಯಂ ತಂತು ನಾನೇನಾ..’ ಮುಳುಗುತ್ತಿದ್ದಹಾಗೇ ನಾನು ಅಕ್ಷತೆಯನ್ನು ಅವರತ್ತ ತೂರಿದೆ. ಪಟಪಟನೆ ಸದ್ದಾಯಿತು. ತಗ್ಗಿಸಿದ ಮೊಗದಲ್ಲಿನ ಅವಳ ಮುಗುಳ್ನಗೆಯನ್ನು ಕದ್ದು ನೋಡುತ್ತಾ ಅವನು ತಾಳಿ ಕಟ್ಟಿದ. ನನ್ನ ಅತ್ಯಾಪ್ತ ಗೆಳತಿ ಭಾವನಾ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಳು.

ಹಂಚಿದ ಸಿಹಿಯನ್ನು ಬಾಯಿಗಿಟ್ಟುಕೊಳ್ಳುತ್ತಾ ನಾನು ಕಲ್ಯಾಣ ಮಂಟಪದ ಸಭಾಂಗಣದ ಸಾಲು ಖುರ್ಚಿಗಳೆಡೆ ನಡೆದೆ. ಇದೇನು ಸೆಖೆ! ಹಹ್! ಬಾಗಿಲ ಬಳಿ ಪಾನಕ ಇಟ್ಟಿರಬೇಕು, ಕುಡಿಯಬೇಕೆಂದುಕೊಂಡೆ. ನಾನು ಪಾನಕ ತೆಗೆದುಕೊಳ್ಳುತ್ತಿರಬೇಕಾದರೆ ಯಾರೋ ಹೆಗಲಿನ ಮೇಲೆ ಕೈ ಹಾಕಿದಂತಾಗಿ ತಿರುಗಿ ನೋಡಿದರೆ ಚಂದ್ರು! ಚಂದ್ರು ಅಂದ್ರೆ ಚಂದ್ರಶೇಖರ, ನನ್ನ ಎಕ್ಸ್-ಕಲೀಗು. "ಅರೆ ವ್ಹಾ, ಈಗ ಬರ್ತಿದಿಯೇನೋ ದೇವ್ರೂ?" ಎನ್ನುತ್ತಾ ಅವನಿಗೊಂದು ಪಾನಕದ ಗ್ಲಾಸ್ ಕೊಟ್ಟು, ಇಬ್ಬರೂ ದೂರದ ಖುರ್ಚಿಯೊಂದರೆಡೆಗೆ ಹೋಗಿ ಕುಳಿತೆವು. ಮಂಟಪದಲ್ಲಿದ್ದ ಭಾವನಾ ಚಂದ್ರುವನ್ನು ನೋಡಿ ಮುಗುಳ್ನಕ್ಕಳು. ಚಂದ್ರು ಕೈ ಮಾಡಿದ.

"ಇದು ಹೇಗಯ್ಯಾ ಆಯ್ತು? ಆದ್ರೂ ನೀನು ಹೇಗೋ ಇಷ್ಟೊಂದು ಖುಶಿಯಿಂದ ಇದೀಯಾ? ನಾನೇನೋ ನೀನು ಮದುವೆಗೆ ಬರೋದೇ ಇಲ್ಲ ಅಂದ್ಕೊಂಡಿದ್ದೆ.. ರೂಮಲ್ಲಿ ಒಬ್ನೇ ದೇವದಾಸ್ ಥರ ಕುಡೀತಾ ಕೂತಿರೋ ಚಿತ್ರಾನಾ ಕಲ್ಪಿಸಿಕೊಂಡು ಬಂದಿದ್ದೆ" ಸಣ್ಣ ದನಿಯಲ್ಲಿ ಹೇಳಿದ ಚಂದ್ರು. ಚಂದ್ರುವಿನಿಂದ ನಿರೀಕ್ಷಿಸದ ಪ್ರತಿಕ್ರಿಯೆಯೇನು ಅಲ್ಲ ಇದು.. ಚಂದ್ರುವೇನು, ಬಹುಶಃ ನನ್ನ ಸ್ನೇಹಿತರೆಲ್ಲರನ್ನೂ ಕಾಡ್ತಿರೋ ಪ್ರಶ್ನೇನೂ ಹೌದು: "ಭಾವನಾ ಮತ್ತು ಅಂಶು ಲವರ‍್ಸ್ ಆಗಿರ್ಲಿಲ್ವಾ? ಅಷ್ಟೊಂದು ಕ್ಲೋಸ್ ಇದ್ರು ಮತ್ತೆ? ಯಾವಾಗ ನೋಡಿದ್ರೂ ಒಟ್ಟೊಟ್ಟಿಗೆ ಇರ್ತಿದ್ರು.. ಈಗ ಭಾವನಾ ಯಾರನ್ನೋ ಮದುವೆ ಆಗ್ತಿದಾಳೆ.. ಮತ್ತೆ ಅಂಶು ತಮ್ಮ ಮನೆಯದೇ ಮದುವೆಯೇನೋ ಅನ್ನೋ ಹಾಗೆ ಸಂಭ್ರಮದಿಂದ ಓಡಾಡ್ತಿದಾನೆ.. ಇದು ಹ್ಯಾಗೆ ಸಾಧ್ಯ?"

ಹೇಳಬೇಕು ಎಲ್ಲರಿಗೂ ಒಂದು ತಂಪು ಸಂಜೆಯಲ್ಲಿ ಕೂರಿಸಿಕೊಂಡು: ಭಾವನಾ ಎಂಬ ನನ್ನ ಪ್ರೀತಿಯ ಗೆಳತಿಯ ಬಗ್ಗೆ. ಭಾವನಾ ಎಂಬ ಪ್ರವಾದಿಯ ಬಗ್ಗೆ. ನನ್ನ ಭಾವಕೋಶದ ಶಕ್ತಿಯ ಬಗ್ಗೆ. ನನ್ನನ್ನು ಇಲ್ಲಿಯವರೆಗೆ ಕರೆತಂದ ಮಾಯಾಯುಕ್ತಿಯ ಬಗ್ಗೆ. ಧೃತಿಯ ಮತ್ತೊಂದಾವೃತಿಯ ಬಗ್ಗೆ. ಭಾವನಾ ಮತ್ತು ಅಂಶು ಪ್ರೇಮಿಗಳಾಗಿರಲಿಲ್ಲ. ಅವರು ಅಪ್ಪಟ ಸ್ನೇಹಿತರಾಗಿದ್ದರು. ಸ್ನೇಹವೆಂಬ ಶಬ್ದದ ಅರ್ಥವನ್ನು ಹೊಸ ಬಣ್ಣಗಳಲ್ಲಿ ಬರೆದಿದ್ದರು ಅಂತ.

ಕವಿಸಮಯ ಜಾರಿಗೆ ಬಂದ ಯಾವುದೋ ಕವಿ ‘ಕಾರಿರುಳ ಖಿನ್ನತೆಯಲ್ಲಿ ಬೆಳುದಿಂಗಳಿಳಿದಂತೆ, ಮುಂಗಾರು ಮೂಡಿದಂತೆ, ತಂಗಾಳಿ ತೀಡಿದಂತೆ...’ ಎಂದೆಲ್ಲ ಬರೆಯುತ್ತಿದ್ದ ಘಳಿಗೆಯಲ್ಲೇ ಇತ್ತ ನನ್ನ ಸ್ನೇಹಕ್ಷೇತ್ರದಲ್ಲಿ ಕಾಲಿಟ್ಟವಳು ಭಾವನಾ. ಇಂಟರ್‌ವ್ಯೂಗೆಂದು ನನ್ನ ಸರದಿಗಾಗಿ ಕಾಯುತ್ತ ಕೂತಿದ್ದ ಆ ರಿಸೆಪ್ಷನ್ ಹಾಲಿನ ಏಸಿಯ ಗಾಳಿಯ ಮೌನವನ್ನು ಒಮ್ಮೆಲೇ ಕಲಕುವಂತೆ "ನೀವೂ ಮಲ್ಲೇಶ್ವರಮ್ಮಾ?" ಅಂತ ಕೇಳಿದ್ದಳು. "ಹೂಂ, ನಿಮಗೆ ಹೇಗೆ ಗೊತ್ತಾಯ್ತು?" ಅವಳ ಮುಖವನ್ನು ನೇರವಾಗಿ ನೋಡದೇ ಕೇಳಿದೆ. "ನಿಮ್ಮ ಕೈಯಲ್ಲಿರೋ ರೆಸ್ಯೂಮ್‌ನಿಂದ ಗೊತ್ತಾಯ್ತು" ಉತ್ತರಿಸಿದಳು. ನನಗಿಂತ ಮೊದಲು ಅವಳಿಗೆ ಕರೆ ಬಂತು. ನನ್ನೆದುರಿಂದ ಎದ್ದು ಹೋಗುವಾಗ ಕಂಡ ಅವಳ ರೆಸ್ಯೂಮಿನಿಂದ ಹೆಸರು ಭಾವನಾ ಅಂತ ಗೊತ್ತಾಯ್ತು. ಹತ್ತು ನಿಮಿಷದ ನಂತರ ಹೊರಬಂದ ಭಾವನಾ, ಹೆದರಿಕೆಯಿಂದ ಚಡಪಡಿಸುತ್ತಾ ಕೂತಿದ್ದ ನನ್ನ ಬಳಿ ಬಂದು ಸಣ್ಣ ದನಿಯಲ್ಲಿ "ಏನೂ ನರ್ವಸ್ ಆಗ್ಬೇಡಿ.. ಇಂಟರ್‌ವ್ಯೂವರ್ ಇಸ್ ಟೂ ಕೂಲ್. ಸ್ವಲ್ಪಾನೂ ಟೆನ್ಷನ್ ಮಾಡಿಕೊಳ್ಳದೇ ಅಟೆಂಡ್ ಮಾಡಿ. ಆಲ್ ದಿ ಬೆಸ್ಟ್!" ಅಂದು ನಗೆಹೂವಿನೊಂದಿಗೆ ಹೊರಟು ಹೋಗಿದ್ದಳು.

ಆಮೇಲೆ ಆ ಕಂಪನಿಯಲ್ಲಿ ಇಬ್ಬರಿಗೂ ಕೆಲಸ ಸಿಕ್ಕಿದ್ದು, ಕೆಲಸದ ಮೊದಲ ದಿನ ರಿಸೆಪ್ಷನ್‌ನಲ್ಲಿ ಮತ್ತೆ ಸಿಕ್ಕಿದ್ದು, ತೀರಾ ಹಳೆಯ ಪರಿಚಿತರಂತೆ ಒಬ್ಬರಿಗೊಬ್ಬರು ಕೈ ಕುಲುಕಿ ಪರಸ್ಪರ ‘ಕಂಗ್ರಾಟ್ಸ್’ ಹೇಳಿಕೊಂಡಿದ್ದು ...ಆಹ್, ಎಲ್ಲಾ ನಮ್ಮ ಸ್ನೇಹದ ಡಾಕ್ಯುಮೆಂಟರಿಯ ಅಡಿಯಲ್ಲಿ ನೆನಪಾಗಿ ಬೆಚ್ಚಗಿವೆ. ಮಧ್ಯಾಹ್ನ ಒಟ್ಟಿಗೇ ಕಾಫಿ ಕುಡಿಯುವಾಗ ಹೇಳಿದ್ದೆ: "ನೀವವತ್ತು ಹಾಗೆ ಹುರಿದುಂಬಿಸಿ ಹೋಗಿರದಿದ್ದರೆ ನಾನು ಇಂಟರ್‌ವ್ಯೂನ ಅಷ್ಟೊಂದು ನಿರ್ಭಯವಾಗಿ ಫೇಸ್ ಮಾಡ್ಲಿಕ್ಕೆ ಆಗ್ತಾನೇ ಇರ್ಲಿಲ್ಲ, ಇಲ್ಲಿವತ್ತು ಹೀಗೆ ಮತ್ತೆ ಸಿಗ್ತಾನೂ ಇರ್ಲಿಲ್ಲ" -ಅಂತ.

ಭಾವನಾ ಅತ್ಯಂತ ಚಟುವಟಿಕೆಯ, ಆತ್ಮವಿಶ್ವಾಸದ ಹುಡುಗಿ. ಆಕೆಯ ಚುರುಕು ನಡಿಗೆ, ಸೆಳೆಯುವ ಕಣ್ಣು, ಅಸ್ಖಲಿತ ಭಾಷೆ ಮತ್ತು ಯಾರೊಂದಿಗಾದರೂ ಅಷ್ಟು ಬೇಗನೆ ಬೆರೆಯುವ ರೀತಿ -ಎಲ್ಲಾ ಕೆಲವೇ ತಿಂಗಳಲ್ಲಿ ಕಂಪನಿಯ ಪ್ರಶಂಸೆಗೆ ಒಳಗಾದವು. ಹಾಗೆಯೇ ನನ್ನ ಸಂಕೋಚ, ಸೋಮಾರಿತನ, ಕೀಳರಿಮೆಯ ಸ್ವಭಾವ ಮತ್ತು ಹಳ್ಳಿಯಿಂದ ಬಂದ ಭಾಷೆಯ ದುರ್ಬಲತೆ -ಅಲ್ಲೇ ಉಳಿಯುವಂತೆ ಮಾಡಿದವು. ಭಾವನಾ ಸೀನಿಯರ್ ಆದಳು; ನಾನು ಹಿಂದೆಯೇ ಉಳಿದೆ.

ಅದೊಮ್ಮೆ ನಾನು ಮಾಡಿದ ಪುಟ್ಟ ತಪ್ಪಿನಿಂದಾಗಿ ಅನಾಹುತವೊಂದು ಆಗುವುದಿತ್ತು. ಎಮ್.ಡಿ. ಕೆಂಡಾಮಂಡಲವಾಗಿದ್ದರು. ಆದರೆ ಭಾವನಾ ಅದರ ಸಂಪೂರ್ಣ ಹೊಣೆಗಾರಿಕೆ ಹೊತ್ತು, ಜಾಣ್ಮೆಯಿಂದ ನಿರ್ವಹಿಸಿ, ನನ್ನನ್ನು ಸಂಕಷ್ಟದಿಂದ ಪಾರು ಮಾಡಿದಳು. ನನಗೆ ಒಂದೇ ಪ್ರಶ್ನೆ: ಇದ್ಯಾಕೆ ಈ ಪರಿ ನನ್ನನ್ನು ಹಚ್ಚಿಕೊಳ್ಳುತ್ತಾಳೆ ಈ ಹುಡುಗಿ? ಭಾವನಾ ಮತ್ತು ನಾನು ಪ್ರತಿದಿನ ಒಟ್ಟಿಗೇ ಊಟ ಮಾಡುವುದು, ಕಂಪನಿಯ ಬಸ್ಸಿನಲ್ಲಿ ಓಡಾಡುವಾಗ ಒಟ್ಟಿಗೇ ಕೂರುವುದು, ಇಬ್ಬರ ಮನೆಯೂ ಇರುವುದು ಒಂದೇ ಏರಿಯಾದಲ್ಲಾದ್ದರಿಂದ ಭಾನುವಾರಗಳಲ್ಲಿ ಸಹ ಸಿಗುವುದು. ಅವಳ ನನ್ನನ್ನು ತನ್ನ ಮನೆಗೆ ಕರೆಯುತ್ತಾಳೆ. ಮನೆಯಲ್ಲೆಲ್ಲರಿಗೂ ‘ಮೈ ಕಲೀಗ್ ಅಂಡ್ ಬೆಸ್ಟ್ ಫ್ರೆಂಡ್’ ಅಂತ ಪರಿಚಯಿಸಿದ್ದಾಳೆ. ನನ್ನ ರೂಮಿಗೆ ಬರುತ್ತಾಳೆ. ಪ್ರಪಂಚದ ಎಲ್ಲ ವಿಷಯವನ್ನೂ ಮಾತಾಡುತ್ತಾಳೆ. ನನ್ನಂತಹ ಮೌನಿಯನ್ನೂ ಮಾತಾಡುವಂತೆ ಮಾಡುತ್ತಾಳೆ. ಒಳ್ಳೆಯ ಪುಸ್ತಕಗಳನ್ನು ರೆಫರ್ ಮಾಡುತ್ತಾಳೆ. ಎಲ್ಲಾ ತರಹದ ಎಸ್ಸೆಮ್ಮೆಸ್ಸುಗಳನ್ನೂ ಫಾರ್ವರ್ಡ್ ಮಾಡುತ್ತಾಳೆ. ನಾನು ಒಬ್ಬ ಹುಡುಗಿಯೊಂದಿಗೆ ಇಷ್ಟು ಸಲಿಗೆಯಿಂದ ಬೆರೆಯುತ್ತಿದ್ದುದು ಇದೇ ಮೊದಲು... ಕೇಳಿಕೊಳ್ಳುತ್ತೇನೆ ಮತ್ತೆ: ಇದು ಪ್ರೀತಿಯಾ? ಅವಳೊಂದಿಗೆ ಶಾಪಿಂಗ್-ಗೀಪಿಂಗ್ ಅಂತ ಹೋದಾಗ ಎದುರಾಗುವ ಚಂದ ಹುಡುಗಿಯರನ್ನು ನನಗೆ ತೋರಿಸಿ ಕಿಚಾಯಿಸುವುದು.. "ಒಂದು ಗರ್ಲ್‌ಫ್ರೆಂಡ್ ಮಾಡ್ಕೊಳೋ ಬೇಗ" ಅನ್ನೋದು... ಏನು ಇವೆಲ್ಲಾ? ಏಕಾಂತದ ಕ್ಷಣಗಳಲ್ಲಿ ಕಾಡುತ್ತದೆ ತುಮುಲ: ಒಬ್ಬ ಹುಡುಗನೊಂದಿಗೆ ಒಬ್ಬ ಹುಡುಗಿ ಇಷ್ಟೊಂದು ಕ್ಲೋಸ್ ಆಗಿ ಇರಬಹುದಾ? ಇದು ಕೇವಲ ಸ್ನೇಹವಾ? ಕಲೀಗುಗಳ ಮಧ್ಯೆಯಂತೂ ನಮ್ಮ ಒಡನಾಟ ದೊಡ್ಡ ಗಾಸಿಪ್ಪು. ಹಾಗಾದರೆ ಅವರು ಹೇಳುವಂತೆ ಇದು ಪ್ರೇಮವಾ?

ಆದರೆ ಹಾಗಂದುಕೊಳ್ಳಲಿಕ್ಕೇ ನನಗೆ ಧೈರ್ಯವಾಗುತ್ತಿರಲಿಲ್ಲ.. ಬಹುಶಃ ಭಾವನಾಳ ಆ ಆತ್ಮವಿಶ್ವಾಸದ ಗಟ್ಟಿತನವೇ ನನಗೆ ಆಕೆಯನ್ನು ನನ್ನ ಪ್ರೇಯಸಿಯೆಂದು ಕಲ್ಪಿಸಿಕೊಳ್ಳಲಿಕ್ಕೆ ಹಿಂಜರಿಯುವಂತೆ ಮಾಡುತ್ತಿತ್ತು. ನನಗೆ ಭಾವನಾಳನ್ನು ಒಬ್ಬ ಫ್ರೆಂಡ್ ಅಂತ ಅಂದುಕೊಂಡರೇನೇ ಹೆಚ್ಚು ಹಿತವೆನಿಸುತ್ತಿತ್ತು. ನನ್ನ ದುಃಖಗಳನ್ನು ತನ್ನೊಂದಿಗೆ ಹಂಚಿಕೊಳ್ಳಬಲ್ಲವಳು, ನನ್ನ ಅಸಹಾಯಕತೆಯನ್ನು ಅರ್ಥ ಮಾಡಿಕೊಳ್ಳಬಲ್ಲವಳು, ನಾನು ಮೂಡಿನಲ್ಲಿಲ್ಲದಿದ್ದಾಗ ಹುರಿದೊಂಬಿಸಿ ನಗಿಸುವವಳು, ನನ್ನ ಸಣ್ಣ ಗೆಲುವುಗಳನ್ನು ತುಂಬು ಪ್ರೀತಿಯಿಂದ ಅಭಿನಂದಿಸುವವಳು ಮತ್ತು ನನ್ನಲ್ಲಿ ಹೊಸ ಕನಸುಗಳನ್ನು ಚಿಗುರಿಸಿ ಅವುಗಳನ್ನು ನನ್ನವಾಗಿಸಿಕೊಳ್ಳುವಂತೆ ಪ್ರೇರೇಪಿಸುವವಳು -ಇಂತಹ ಗೆಳತಿಯೊಬ್ಬಳು ನನಗೆ ಬೇಕಿದ್ದಳು. ಮತ್ತು ಭಾವನಾ ಅವೆಲ್ಲವೂ ಆಗಿದ್ದಳು. ನಾನೂ ಕಂಪನಿಯ ಕೆಲಸಗಳಲ್ಲಿ ಸಾಧನೆಗೈದಿದ್ದು, ನನಗೊಂದು ರೆಕಗ್ನಿಷನ್ ಸಿಗುವಂತಾದದ್ದು -ಎಲ್ಲಾ ಭಾವನಾಳ ಕೃಪೆಯಿಂದಲೇ. ಅದ್ಯಾವುದೋ ಮುಹೂರ್ತದಲ್ಲಿ ನಿರ್ಧರಿಸಿಬಿಟ್ಟಿದ್ದೆ: ನನಗೆ ಇದಕ್ಕಿಂತ ಹೆಚ್ಚಿನದೇನೂ ಬೇಡ ಭಾವನಾಳಿಂದ. ಇದನ್ನು ಯಾವುದೇ ಕಾರಣಕ್ಕೂ ನಾನು ಕಳೆದುಕೊಳ್ಳುವುದಿಲ್ಲ. ಇದು ಪ್ರೀತಿಯಾಗಿರಬೇಕಾದ ಅವಶ್ಯಕತೆಯೇ ಇಲ್ಲ. ಆಕೆ ನನ್ನ ಗೆಳತಿಯಾಗೇ ಇರಲಿ.

ಪ್ರಾಜೆಕ್ಟೊಂದನ್ನು ಮುಗಿಸಲಿಕ್ಕಾಗಿ ಭಾವನಾ ಡೆಲ್ಲಿಗೆ ಹೋಗಬೇಕಾಗಿ ಬಂತು. ಆಕೆ ತನ್ನೊಬ್ಬಳಿಂದ ಡೆಡ್‌ಲೈನ್ ಒಳಗೆ ಇದನ್ನು ಮುಗಿಸಲು ಸಾಧ್ಯವೇ ಇಲ್ಲ ಅಂತ ನನ್ನನ್ನೂ ಜತೆಗೆ ಕರೆದೊಯ್ದಳು. ರೂಮ್ ಬುಕ್ ಮಾಡುವಾಗ ಒಂದೇ ರೂಮ್ ಸಾಕು ಎಂದಳು. ಐದು ದಿನಗಳ ಪ್ರಾಜೆಕ್ಟ್ ಮುಗಿಸಿ ವಾಪಸಾಗುವಾಗ ವಿಮಾನದ ಸೀಟಿಗೊರಗಿ ಮಾತಾಡಿದಳು ಭಾವನಾ:

"ನಿಂಗೆ ಆಶ್ಚರ್ಯ ಅಲ್ವಾ ನಾನು ನಿಂಜೊತೆ ಯಾಕೆ ಇಷ್ಟೊಂದು ಕ್ಲೋಸಾಗಿ ಇರ್ತೀನಿ ಅಂತ? ಅದರ ಜೊತೆಗೇ ಮನಸ್ಸಿನಲ್ಲಿ ನೂರಾರು ಅನುಮಾನದ ಪ್ರಶ್ನೆಗಳು ಅಲ್ವಾ? ಬಾಯಿಬಿಟ್ಟು ಕೇಳಲಿಕ್ಕೆ ಸಾಧ್ಯವೇ ಇಲ್ಲದಷ್ಟು ಹಿಂಜರಿಕೆ ಅಲ್ವಾ? ಹೂಂ..?" ಮಾತು ಬೆಳೆಯುವ ಮುನ್ನವೇ ಹೇಳಿಬಿಟ್ಟೆ: "ನೀನು ‘ಮೈ ಆಟೋಗ್ರಾಫ್’ ಸಿನಿಮಾ ನೋಡಿದೀಯಾ ಭಾವನಾ? ಅದರಲ್ಲಿನ ಮೀನಾಳ ಪಾತ್ರ ನಂಗೆ ತುಂಬಾ ಇಷ್ಟ.. ಆಕೆ ಸುದೀಪ್‌ನನ್ನು ಕೇವಲ ಸ್ನೇಹದ ಬಲದಿಂದ ಬೆಳೆಸೋ ರೀತಿ, ಫೆಂಟಾಸ್ಟಿಕ್! ಅವಳ ಬಿಹೇವಿಯರ್, ಅವಳ ಮ್ಯಾನರಿಸಂ, ಅವಳ ವ್ಯಕ್ತಿತ್ವದ ಉನ್ನತಿ... ಓಹ್! ಯು ನೋ ವ್ಹಾಟ್? ನಂಗೆ ನಿನ್ನಲ್ಲಿ ಮೀನಾ ಕಾಣ್ತಾಳೆ.. ನೀನು ಕೇಳಿದ ಪ್ರಶ್ನೆಗಳೆಲ್ಲಾ ಸತ್ಯ. ಆದರೆ ನಂಗೆ ಅದ್ಯಾವುದಕ್ಕೂ ಉತ್ತರ ಬೇಡ. ನೀನು ಕೇವಲ ನನ್ನ ಗೆಳತಿಯಾಗಿದ್ದರೆ ಸಾಕು.. ಮೈ ಬೆಸ್ಟ್ ಫ್ರೆಂಡ್, ಲೈಕ್ ನೌ!"

ಭಾವನಾಳಿಗಾದ ಖುಶಿಯನ್ನು ವ್ಯಕ್ತಪಡಿಸಲು ಅವಳ ಇಷ್ಟಗಲ ಅರಳಿದ ಮುಖಕ್ಕೂ ಸಾಧ್ಯವಾಗಲಿಲ್ಲ. "ಥ್ಯಾಂಕ್ಯೂ ಡಿಯರ್.. ಥ್ಯಾಂಕ್ಯೂ ವೆರಿ ಮಚ್! ನನ್ನ ಭಾರ ಕಡಿಮೆ ಮಾಡಿದೆ. ಜಗತ್ತು ಏನೇ ಆದ್ರೂ ನಾವಿಬ್ಬರೂ ಫ್ರೆಂಡ್ಸ್. ಮುಂದಿನ ತಿಂಗಳು ನನ್ನ ಮದುವೆ. ನಿನ್ನ ಬಳಿ ಹೇಳಿಕೊಳ್ಳದೇ ಮುಚ್ಚಿಟ್ಟಿದ್ದ ಸಂಗತಿ ಅಂದ್ರೆ ಇದೊಂದೇ, ಸಾರಿ.." ಅಂದು ಬ್ಯಾಗಿನಿಂದ ಇನ್ವಿಟೇಶನ್ ತೆಗೆದು ಕೊಟ್ಟಳು. ವಿಮಾನದ ಕಿಟಕಿಯಿಂದ ನೋಡಿದವನಿಗೆ ಮುಗಿಲು ಮುಗಿಯುವುದೇ ಇಲ್ಲವೇನೋ ಅನ್ನಿಸಿತು.

* * *

ಇಡೀ ಕಲ್ಯಾಣ ಮಂಟಪ ಸುತ್ತಾಡಿಕೊಂಡು ಬಂದ ಚಂದ್ರು ಯೋಚನಾಮಗ್ನನಾಗಿ ಕೂತಿದ್ದ ನನ್ನನ್ನು ತಟ್ಟಿ ಎಬ್ಬಿಸಿ ಕೇಳಿದ: "ಅಂತೂ ಈಗ ಶುರುವಾಯ್ತಾ ಡಿಪ್ರೆಶನ್ನು? ಎಲ್ಲಾ ಮುಗಿದ ಮೇಲೆ? ಆವಾಗ್ಲೇ ಒಂದು ಪ್ರಪೋಸ್ ಮಾಡೋ ಅಂದ್ರೆ ಕೇಳಲಿಲ್ಲ... ಇನ್ನು ಅವಳನ್ನೇ ಮನಸ್ಸಿನಲ್ಲಿಟ್ಟುಕೊಂಡು ಕೊರಗೀ ಕೊರಗೀ.. .." ಚಂದ್ರುವಿನ ಅಭಿನಯಕ್ಕೆ ನಕ್ಕೆ ನಾನು. ಇವರಿಗೆ ನಂಬಿಕೆ ಬರುವಂತೆ ತಿಳಿಸಿ ಹೇಳಲಿಕ್ಕಾದರೂ ಆಗುತ್ತಾ ಇದನ್ನೆಲ್ಲಾ? ಸಾಧ್ಯವೇ ಇಲ್ಲವೆನಿಸಿತು.. ಮಂಟಪದತ್ತ ನೋಡಿದೆ. ಗಂಡನೊಂದಿಗೆ ಇನ್ನೂ ಏನೇನೋ ಪೂಜೆ, ಹವನಗಳಲ್ಲಿ ಮುಳುಗಿದ್ದಳು ಭಾವನಾ. ಅವಳು ಸೆಖೆಯಲ್ಲಿ ಬೆವರುತ್ತಾ ಕಷ್ಟ ಪಡುತ್ತಿದ್ದುದನ್ನು ಕಂಡು ಈ ಬೇಸಿಗೆ ಕಾಲದಲ್ಲೇ ಯಾಕೆ ಎಲ್ಲರೂ ಮದುವೆಯಾಗುತ್ತಾರೋ ಅನ್ನಿಸಿತು.

[ಪ್ರಕಟ: ಕನ್ನಡ ಪ್ರಭದ 'ಸಖಿ' ಪಾಕ್ಷಿಕ . ಟಾಪಿಕ್: Intimate friendship between a boy n girl]

^^^^^^^^^^^^

"..ಅವಳ ಸೌಂದರ್ಯಕ್ಕೆ ಆ ಅಪರಾತ್ರಿ ಕೂಡ ಬೆರಗಾದಂತಿತ್ತು. ಹಚ್ಚಿಟ್ಟ ದೀಪಕ್ಕೆ ಹಾಲು ಬೆರೆಸಿದಂಥ ಬಣ್ಣ. ತನಗಿರುವ ಶ್ರದ್ಧೆಯನ್ನೆಲ್ಲ ಬಳಸಿ ಅವಳ ರೂಪು ತಿದ್ದಿರಬೇಕು ಭಗವಂತ. ಅವಳ ಕಣ್ಣುಗಳಲ್ಲಿದ್ದುದು ಸಾತ್ವಿಕ ಚೆಲುವು. ನಕ್ಕರೆ ಅದೆಂಥದೋ ಸೌಮ್ಯ ಕಳೆ. ಒಂದು ಕೆನ್ನೆಯ ಮೇಲೆ ಮಾತ್ರ ಗುಳಿ ನೆಗ್ಗುತ್ತದೆ. ಮುಂದಲೆಯಲ್ಲಿ ಸುಳಿದಿರುಗಿದ ಮಿನ್ನಾಗರಗಳಂತಹ ದಟ್ಟ ಗುಂಗುರು ಕೂದಲು. ಅವಳ ಹುಬ್ಬುಗಳಲ್ಲಿ ಒಂದು ಕಾನ್ಫಿಡೆನ್ಸು ಸರಿದಾಡುತ್ತದೆ. ಕೆಳ ತುಟಿಗೆ ಮೆತ್ತಿಕೊಂಡಂತಿರುವ ಪುಟ್ಟ ಮಚ್ಚೆಯಲ್ಲಿ ಅದೆಂಥದೋ ಅಮಾಯಕತೆ..."

ನಾನು ಮೊದಲ ವರುಷದ ಕಾಲೇಜು ಹುಡುಗನಾಗಿದ್ದಾಗ 'ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ‘ಹೇಳಿ ಹೋಗು ಕಾರಣ’ ಧಾರಾವಾಹಿ ಬರುತ್ತಿತ್ತು. ಡಾಕ್ಟರಾಗಬೇಕೆಂದು ಬೀದಿಯಲ್ಲಿ ನಿಂತು ಕನಸು ಕಂಡ ಹುಡುಗಿ ಪ್ರಾರ್ಥನಾಳನ್ನು ಮಿಠಾಯಿ ಅಂಗಡಿ ಹುಡುಗ ಹಿಮವಂತ ಚನ್ನರಾಯಪಟ್ಟಣದಿಂದ ಶಿವಮೊಗ್ಗದವರೆಗೆ ನಡೆಸಿಕೊಂಡು ಬಂದಿದ್ದ. ಮನೆಯನ್ನು ತಿರಸ್ಕರಿಸಿ, ಹಿಮವಂತನೆಂಬ ಹುಡುಗನೆಡೆಗೆ ಅದ್ಯಾವುದೋ ನಂಬಿಕೆ ಇರಿಸಿ ಬರಿಗೈಯಲ್ಲಿ ಹೊರಟ ಅವಳ ಬಲಗಾಲ ಹೆಬ್ಬೆರಳಿಗೆ ಎಡವಿ ಗಾಯವಾಗಿತ್ತು. ಶಿವಮೂರ್ತಿ ಸರ್ಕಲ್ಲಿನ ಬಳಿಯ ಒಂದೇ ಕೋಣೆಯ ಹಿಮವಂತನ ಗೂಡಿನೊಳಗೆ ದಾಖಲಾದ ಹುಡುಗಿ ಬೆಳಗ್ಗೆ ಎದ್ದು, ಸ್ನಾನ ಮಾಡಿ ಬಂದು, ಪದ್ಮಾಸನ ಹಾಕಿ ಕುಳಿತು ‘ಯಾಕುಂದೇಂದು ತುಷಾರ ಹಾರ ಧವಳಾ..’ ಅಂತ ಪ್ರಾರ್ಥನೆ ಮಾಡುತ್ತಿದ್ದಳು. ಹಿಮವಂತನೆಡೆಗೆ ಅವಳಿಗೊಂದು ದೈವೀಕ ಪ್ರೀತಿಯಿತ್ತು. ಆರಾಧನೆಯಿತ್ತು. ನಿಷ್ಠೆಯಿತ್ತು.

ಮತ್ತು ನನಗದು ಇಷ್ಟವಾಗಿತ್ತು! ಕಾಲೇಜಿನ ಹುಡುಗಿಯರಲ್ಲೆಲ್ಲಾ ಪ್ರಾರ್ಥನಾಳನ್ನು ಹುಡುಕುತ್ತಿದ್ದೆ. ಮನೆಗೆ ಬಂದು ಮತ್ತೆ ಪತ್ರಿಕೆ ತೆರೆದು ‘ಆ ಹುಡುಗಿ ಪ್ರಾರ್ಥನಾಳೊಂದಿಗೆ ಮ್ಯಾಚ್ ಆಗುತ್ತಾಳಾ?’ ಅಂತ ನೋಡುತ್ತಿದ್ದೆ. ಕಣ್ಣಲ್ಲಿ ಸಾತ್ವಿಕ ಚೆಲುವು, ನಗುವಿನಲ್ಲಿ ಸೌಮ್ಯ ಕಳೆ, ಒಂದೇ ಕೆನ್ನೆ ಮೇಲೆ ಗುಳಿ, ಹುಬ್ಬಿನಲ್ಲಿ ಕಾನ್ಫಿಡೆನ್ಸು, ಕೆಳತುಟಿ ಕೆಳಗಿನ ಮಚ್ಚೇಲಿ ಅಮಾಯಕತೆ! ಹಹ್! ಕೆನ್ನೆ ಮೇಲೆ ಗುಳಿ ಬೀಳೋ ಹುಡುಗಿಯರೇನೂ ಬಹಳ ಇದ್ದರು; ಆದರೆ ಈ ಮಚ್ಚೆ ಮಾತ್ರ ನಂಗೆ ಸಿಗಲೇ ಇಲ್ಲ! ಮತ್ತೆ ಇನ್ನುಳಿದ ಗುಣವಿಶೇಷಣಗಳನ್ನೆಲ್ಲಾ ಗುರುತಿಸುವುದು ಹೇಗೆಂದೇ ನನಗಾಗ ಗೊತ್ತಿರಲಿಲ್ಲ. ಹೀಗಾಗಿ, ನನ್ನ ಪ್ರಾರ್ಥನಾಳಂತಹ ಹುಡುಗಿಯ ಹುಡುಕಾಟ ಅವಿರತವಾಗಿಬಿಟ್ಟಿತು.

ಆದರೆ, ಅಂತಹ-ಹಾಗಿದ್ದ ಪ್ರಾರ್ಥನಾ, ದಾವಣಗೆರೆಗೆ ಮೆಡಿಕಲ್ ಓದಲಿಕ್ಕೆಂದು ಹೋಗಿ, ಅವಳಿಗೆ ಹೊರ ಪ್ರಪಂಚದ ಪರಿಚಯ ಆಗಿ, ಮನಸು ಹಕ್ಕಿಯಾಗಿ, ದೇಬಶಿಶು ಎಂಬ ಬುದ್ಧಿವಂತ ಫ್ಲರ್ಟ್‌ನ ಮೋಹಕ್ಕೆ ಬೀಳುತ್ತಾಳೆ. ತನ್ನನ್ನೇ ಪ್ರಪಂಚವೆಂದು ಭಾವಿಸಿದ್ದ, ಕೇವಲ ತನಗಾಗಿಯೇ-ತನ್ನ ಕನಸುಗಳನ್ನು ಸಾಕಾರಗೊಳಿಸುವುದಕ್ಕಾಗಿಯೇ ದೂರದೂರಿನಲ್ಲಿ ಹಗಲೂ-ರಾತ್ರಿ ದುಡಿಯುತ್ತಿದ್ದ ಹಿಮವಂತನಿಗೆ ವ್ಯವಸ್ಥಿತವಾಗಿ ಮೋಸ ಮಾಡುವ ಸಂಚು ಹೂಡುತ್ತಾಳೆ. ದೇಬುವಿನ ರೂಪ, ಬುದ್ಧಿ, ಶ್ರೀಮಂತಿಕೆಗಳ ಮುಂದೆ ಹಿಮವಂತ ಏನೂ ಅಲ್ಲ ಅಂತ ಅನ್ನಿಸುತ್ತದೆ. ‘ಹಿಮವಂತ ದೇವರಂಥವನು, ನಿಜ. ಆದರೆ ದೇವರನ್ನು ಯಾರಾದರೂ ಪ್ರೀತಿಸಲಿಕ್ಕೆ-ಮದುವೆಯಾಗಲಿಕ್ಕೆ ಆಗುತ್ತದಾ?’ ಅಂತ ತನ್ನ ತೀರ್ಮಾನವನ್ನು ಸಮರ್ಥಿಸಿಕೊಳ್ಳುತ್ತಾಳೆ. ಕೊನೆಗೆ ಕಾದಂಬರಿ ಏನೇನೋ ಆಗಿ ಮುಗಿಯುತ್ತದೆ.

ಈ ಮಧ್ಯೆ, ನನ್ನ ರಾತ್ರಿಯ ಕನಸುಗಳ ರ್ಯಾಂಪಿನ ಮೇಲೆ, ಕಾಲೇಜಿನ ಒಬ್ಬೊಬ್ಬ ಹುಡುಗಿಯೂ ತುಟಿ ಕೆಳಗೆ ಕಾಡಿಗೆಯಿಂದ ಕಪ್ಪು ಚುಕ್ಕಿ ಇಟ್ಟುಕೊಂಡು, ಮುಖಕ್ಕೆ ಫೇರೆಂಡ್ ಲವ್ಲೀ ಹಚ್ಚಿ ತಿಕ್ಕಿ ‘ಕಳೆ’, ‘ಸಾತ್ವಿಕ ಚೆಲುವು’ ಎಲ್ಲಾ ಹೆಚ್ಚಿಸಿಕೊಂದು, ಹುಬ್ಬಿನಲ್ಲಿ ಕಾನ್ಫಿಡೆನ್ಸಿನಂತಹದೇ ಏನನ್ನೋ ಕುಣಿಸುತ್ತಾ ಬಂದು ‘ಯಾಕುಂದೇಂದು..’ ಹೇಳಿ ಹೋಗುತ್ತಿದ್ದಳು. ಬಹುಶಃ ಆ ದಿನಗಳಲ್ಲಿ ನನ್ನನ್ನು ನಾನು ಹಿಮವಂತ ಅಂತ ಬಲವಾಗಿ ಕಲ್ಪಿಸಿಕೊಂಡಿದ್ದೆನಿರಬೇಕು! ಯಾವಾಗ ಪ್ರಾರ್ಥನಾ ಹಿಮವಂತನಿಗೆ ಮೋಸ ಮಾಡುವುದು ಖಚಿತ ಆಯಿತೋ, ಆ ಕನಸುಗಳೆಲ್ಲಾ ಸಡನ್ನಾಗಿ ಬಂದ್ ಆಗಿ ನಿದ್ರೆ ಖಾಲಿ ಹೊಡೆಯತೊಡಗಿತು.

[ಪ್ರಕಟ: ವಿಜಯ ಕರ್ನಾಟಕ ಸಾಪ್ತಾಹಿಕ. ಟಾಪಿಕ್: Crush at a novel character.]

Thursday, June 04, 2009

ನೀತಿ

ಮೊಟ್ಟೆಯೊಡೆದು ಹೊರಬಂದರೂ
ಚಿಪ್ಪಿನೊಳಗೆ ತೂರಿಕೊಳ್ಳುವ ಸವಲತ್ತು
ಸುಸ್ತಾದರೆ, ನಾಚಿಕೆಯಾದರೆ,
ನಿದ್ರೆ ಬಂದರೆ ಅಥವಾ ಬಂದರೆ ಆಪತ್ತು.

ಏಕೆ ಅರ್ಥವೇ ಆಗುವುದಿಲ್ಲ ನಿನಗೆ..?
ನನ್ನ ಕನಸುಗಳನ್ನು ನೀನೂ
ಕಾಣಬಲ್ಲೆಯಾದರೆ ಮಾತ್ರ
ನೀನು ನನ್ನವನು. ನಾವು ಒಂದು.

ಇಷ್ಟಕ್ಕೂ ಮೊಲದೊಂದಿಗೆ ನನಗೀಗ
ಸ್ಪರ್ಧೆಯೇ ಇಲ್ಲ. ಗೆದ್ದಾಗಿದೆ ಎಂದೋ.
ಮೊಲಕ್ಕೂ ಈಗ ಬುದ್ಧಿ ಬಂದಿದೆ;
ಹಾಗೆಲ್ಲ ನಿದ್ದೆ ಮಾಡುವುದಿಲ್ಲ.

ಇಬ್ಬರ ಭಾವವೂ ಒಂದಾಗಿದ್ದಾಗಷ್ಟೇ
ಸಂಯೋಜಿಸಬಲ್ಲೆ ನನ್ನ ಹಾಡಿಗೆ ನೀನು
ಸರಿ ಹೊಂದುವ ರಾಗ. ಎಲ್ಲೋ,
ಅಪರೂಪಕ್ಕೆ ಸಿಗುತ್ತದೆ ಇಂತಹ ಯೋಗ.

ಆಕಾಶದಲ್ಲಿದ್ದಾಗ ನೀನು
ಜನ ನಕ್ಕರೆಂದು ಸಿಡುಕಿ
ಕೆಳಗುರುಳಿದರೆ ಬಿಟ್ಟು ಕಚ್ಚಿದ ಕೊಕ್ಕೆ-
ಪಾಪ, ತಪ್ಪು ಹೊತ್ತೊಯ್ದ ಹಕ್ಕಿಗಳದಲ್ಲ.

ಎರಡು ಚಿಪ್ಪುಗಳನ್ನು ಒಂದಾಗಿಸಿದರೆ
ಅದೊಂದು ಗೋಲ. ಇರಬಹುದು ಒಳಗೆ ಸೆಖೆ.
ಸಹಿಸಬೇಕು ಮುತ್ತಾಗುವಾಗ ಹನಿ;
ಕಾಯಬೇಕು ಜೀವ ಬರುವವರೆಗೂ ಹೊರಗೆ.