Friday, November 13, 2020
ಉರಿದು ಮುಗಿದ ರವಿಯು
ಬಹುಶಃ 1998-99ನೇ ಸಾಲು. ನಾನು ಒಂಬತ್ತನೇ ತರಗತಿಯಲ್ಲಿದ್ದೆ. ಗಂಟಲು ಒಡೆಯುವ ವಯಸ್ಸು. ಆಗ ನಮ್ಮೂರ ಭಾಗದಲ್ಲಿ ಬಹಳವಾಗಿ ಚಾಲ್ತಿಯಲ್ಲಿದ್ದ ಸ್ವಾಮೀಜಿಯೊಬ್ಬರ ಬಗ್ಗೆ 'ಹಾಯ್ ಬೆಂಗಳೂರ್'ನಲ್ಲಿ ತನಿಖಾ ವರದಿ ಬಂದಿತ್ತು. ಸಹಜವಾಗಿಯೇ ಅಪ್ಪ ಸಾಗರದಿಂದ ಬರುವಾಗ ಪತ್ರಿಕೆಯನ್ನು ತಂದಿದ್ದ. ಆಗ ಆ ಸ್ವಾಮೀಜಿಗಳಿಗೆ ಎಷ್ಟು ಅನುಯಾಯಿಗಳಿದ್ದರೆಂದರೆ, ಮನೆಗೆ ಬಂದ ಪತ್ರಿಕೆಯನ್ನು ನಾವು ಮುಚ್ಚಿಟ್ಟುಕೊಂಡು ಓದಿದ್ದೆವು. ಅದನ್ನು ಓದಿದರೆ 12 ಸಲ ಸ್ನಾನ ಮಾಡಬೇಕಂತೆ ಅಂತ ಬೇರೆ ಅವರ ಭಕ್ತರು ಹಬ್ಬಿಸಿಬಿಟ್ಟಿದ್ದರು! ಆದರೂ ನಮ್ಮ ಮನೆಗೆ ಪತ್ರಿಕೆ ಬಂದಿರುವ ಸುದ್ದಿ ತಿಳಿದು, ಆ ಸ್ವಾಮೀಜಿಯ ಬಗ್ಗೆ ಅಷ್ಟಿಷ್ಟು ಆಕ್ಷೇಪಗಳಿದ್ದ ಊರ ಕೆಲವರು, ಕದ್ದುಮುಚ್ಚಿ ಬಂದು ಓದಿ ಹೋಗಿದ್ದರು. ಆಗಷ್ಟೆ ಬಾಲಮಂಗಳದಿಂದ ಕ್ರೈಂ, ಸ್ಪ್ರೈ, ಡಿಟೆಕ್ಟಿವ್ ಥ್ರಿಲ್ಲರ್‌ಗಳಿಗೆ ಶಿಫ್ಟಾಗುತ್ತಿದ್ದ ನಾನು 'ಹಾಯ್'ನ ಒಂದೇ ಒಂದು ವರದಿಗೆ ಬಿದ್ದುಹೋಗಿದ್ದೆ. ಆ ಆರ್ಟಿಕಲ್, ಆ ಬರಹದ ಶೈಲಿ, ಆ ದಿಟ್ಟತನ, ಆ ಖದರ್ -ಒಂದೇ ಹೊಡೆತಕ್ಕೆ ನನ್ನನ್ನು ಸೆಳೆದುಕೊಂಡಿದ್ದವು. ವರದಿಯೊಂದನ್ನು ಓದಲೆಂದು ತಂದುಕೊಂಡಿದ್ದ ಪತ್ರಿಕೆಯಲ್ಲಿದ್ದ ಉಳಿದ ಕಾಲಮ್ಮುಗಳಾದ 'ಹಲೋ', 'ಖಾಸ್‌ಬಾತ್', 'ಬಾಟಮ್ ಐಟಮ್', 'ಲವ್‌ಲವಿಕೆ'ಗಳನ್ನು ಮರುದಿನ ಓದಿದೆ. ಅಷ್ಟೇ: ರವಿ ಬೆಳಗೆರೆ ಎಂಬ ಮಾಂತ್ರಿಕ ಶಕ್ತಿಗೆ ನಾನು ಶರಣಾಗಿ ಹೋಗಿದ್ದೆ!
ಅಪ್ಪ ಅದಾಗಲೇ ರವಿಯ ಹಲವು ಕಥೆಗಳನ್ನು ಓದಿದ್ದನಾದರೂ ನಾನು ಅವನ ಹೆಸರೂ ಕೇಳಿರಲಿಲ್ಲ. ಅಪ್ಪನಿಗೂ ಹಾಯ್ ಇಷ್ಡವಾಯಿತು ಅನ್ನಿಸುತ್ತೆ, ಆಗ ನಮ್ಮ ಮನೆಗೆ 'ಮಂಗಳ' ಬರುತ್ತಿತ್ತು, ಅದನ್ನು ನಿಲ್ಲಿಸಿ ಮುಂದಿನ ವಾರದಿಂದ ಈ ಕಪ್ಪು ಸುಂದರಿಯನ್ನು ಹಾಕಲು ಹೇಳಲಾಯಿತು. ಪತ್ರಿಕೆಯಲ್ಲಾಗ 'ಹೇಳಿ ಹೋಗು ಕಾರಣ'ದ ಹದಿನೈದನೆಯದೋ ಇಪ್ಪತ್ತನ್ನೆಯದೋ ಕಂತು ಬರುತ್ತಿತ್ತು. ಅದನ್ನೋದಿ ನಾನೇ ಹಿಮವಂತನಾದಂತೆ, ಕನಸಿನ ಹುಡುಗಿ ಪ್ರಾರ್ಥನಾ ಆದಂತೆ, ದೇಬಶಿಶು, ಊರ್ಮಿಳಾ, ರಸೂಲ್ ಜಮಾದಾರರೆಲ್ಲ ಎದುರಿಗೇ ಓಡಾಡಿದಂತೆಲ್ಲ ಪರಿಭಾವಿಸಿ, ಪ್ರತಿ ಬುಧವಾರಕ್ಕೆ ಪತ್ರಿಕೆ ಬರುವುದನ್ನು ತುದಿಗಾಲಲ್ಲಿ ನಿಂತು ಕಾದು... ಕಾಲೇಜಿಗೆ ಹೋಗುವ ಹೊತ್ತಿಗೆ ಅಲ್ಲೂ ಕೆಲ ಬೆಳಗೆರೆ ಅಭಿಮಾನಿಗಳು ಸಿಕ್ಕು, ಆ ಧಾರಾವಾಹಿ ಮುಂದೇನಾಗಬಹುದು ಅಂತೆಲ್ಲ ಚರ್ಚಿಸುತ್ತಾ, ಲವ್‌ಲವಿಕೆಯನ್ನು ನಕಲು ಮಾಡಿ ನಾನೂ ಪ್ರೇಮಪತ್ರಗಳ ಬರೆಯಲೆತ್ನಿಸುತ್ತಾ, ಖಾಸ್‌ಬಾತ್ ಓದಿ ನಾನೂ ಕಷ್ಟಗಳನ್ನೆಲ್ಲ ದಾಟಿ ಗೆದ್ದು ಸಾಧಿಸುವ ಕನಸು ಕಾಣುತ್ತಾ, ಬಾಟಮ್ ಐಟೆಮ್‌ನ ಹಿತವಚನಗಳನೋದಿ ಆಹಾ ಈ ರವಿಯೆಂಬ ಬೆಳಗೆರೆ ಎಷ್ಟೊಳ್ಳೆಯವನು ಎಂದುಕೊಳ್ಳುತ್ತಾ, ಹಲೋ ಓದಿ ನಾನೂ ರಾಜಕೀಯ-ಪ್ರಸ್ತುತ-ವರ್ತಮಾನಗಳನೆಲ್ಲ ತಿಳಿದುಕೊಳ್ಳುತ್ತಾ, ಇವನಷ್ಟು ಚೆನ್ನಾಗಿ ಮತ್ಯಾರೂ ಬರೆಯಲಿಕ್ಕೆ ಸಾಧ್ಯವೇ ಇಲ್ಲ ಅಂತೆಲ್ಲ ಬೇರೆಯವರ ಬಳಿ ವಾದಿಸುತ್ತಾ... 'ರವಿ ಬೆಳಗೆರೆ ಅಂದ್ರೆ ಹೆಂಗೆ ಕೇಜಿ?' ಅಂತಿದ್ದ ಕಾಲದಿಂದ ಎಂತಹ ದೊಡ್ಡ ವ್ಯಕ್ತಿಯಾಗಿ ಬೆಳೆದ ಬೆಳಗೆರೆಯ ಬಗ್ಗೆ ಅಗಾಧ ಅಭಿಮಾನವೂ, ಆರಾಧನೆಯೂ ಬೆಳೆದುಬಿಟ್ಟಿತ್ತು. ಆರ್.ಬಿ., ರವೀ, ರವಿ ಬೆಳಗೆರೆ, ಬರೀ ಬೆಳಗೆರೆ, ವೀ -ಎಲ್ಲರೂ ಅಂದರೆ ಎಲ್ಲರೂ ಇಷ್ಟವೋ ಇಷ್ಟವಾಗಿದ್ದರು.
ನಾನು ಅರೆಬರೆ ಓದಿಕೊಂಡು ಬೆಂಗಳೂರಿಗೆ ಬರುವಾಗಲೂ ರವಿ ನಿಗಿನಿಗಿ ಉರಿಯುತ್ತಿದ್ದ: ಹೊರಗೂ, ನನ್ನೊಳಗೂ. ಎಷ್ಟರ ಮಟ್ಟಿಗೆ ಎಂದರೆ, ನಾನು ಊರಿಂದ ಹೊರಡುವಾಗ, "ನಿಂಗೆ ಎಲ್ಲೂ ಕೆಲಸ ಸಿಗಲ್ಲೆ ಅಂದ್ರೆ ರವಿ ಬೆಳಗೆರೆನ ಕಾಣ್ಲಕ್ಕೇನ, ಅಂವ ಎಂಥರು ಒಂದು ಕೆಲಸ ಕೊಡುಸ್ತ" ಅಂತ ಅಮ್ಮ ಹೇಳಿದ್ದಳು. ಮಜಾ ಎಂದರೆ, ನಾನಿಲ್ಲಿ ಮೊದಲಿಗೆ ಉಳಕೊಂಡಿದ್ದ ನಮ್ಮ ನೆಂಟರ ಮನೆಯವರೂ ಬೆಳಗೆರೆ ಅಭಿಮಾನಿಗಳೇ ಆಗಿದ್ದರು. ಹೀಗಾಗಿ, ಅವರ ಮನೆಗೆ ಪತ್ರಿಕೆ ಬಂದಾಕ್ಷಣ ನಾವೆಲ್ಲ 'ನಾ ಮೊದಲು ನಾ ಮೊದಲು' ಅಂತ ಕಿತ್ತಾಡಿಕೊಂಡು, ಪತ್ರಿಕೆಯ ಒಂದೊಂದು ಪುಟವನ್ನು ಒಬ್ಬೊಬ್ಬರು ಹಂಚಿಕೊಂಡು ಓದಿ, ಅದರ ಬಗ್ಗೆಯೇ ಮಾತಾಡಿ ಮಾತಾಡಿ ಮಾತಾಡಿ... ಆಮೇಲೆ ನಾನು ಅವರ ಮನೆ ಬಿಟ್ಟು ಒಂದಿಷ್ಟು ಸಮವಯಸ್ಕರೊಂದಿಗೆ ರೂಮು-ಗೀಮು ಮಾಡಿಕೊಂಡು ಇದ್ದಾಗ, ಬರುವ ಅಲ್ಪ ಸಂಬಳದಲ್ಲಿ ಪ್ರತಿ ವಾರ ಪತ್ರಿಕೆಯನ್ನು ಕೊಳ್ಳುವುದು ದುಬಾರಿಯೆನಿಸಿ ಪಬ್ಲಿಕ್ ಲೈಬ್ರರಿಗೆ ಹೋಗಿ ಸರತಿಯಲ್ಲಿ ಕಾದು ಕುಳಿತು ಓದಿದ್ದು... ಆಮೇಲೆ ಆರ್ಕುಟ್‌ನಲ್ಲಿ ರವಿ ಬೆಳಗೆರೆ ಅಭಿಮಾನಗಳ ಸಂಘದಲ್ಲಿ ನಡೆಯುತ್ತಿದ್ದ ಭಯಂಕರ ಚರ್ಚೆಗಳಲ್ಲಿ ನಾನೂ ಭಾಗವಹಿಸುತ್ತಿದ್ದುದು, ಅಲ್ಲಿಂದಲೇ ಹಲವು ಗೆಳೆಯರನ್ನು ಪಡೆದುದು... 'ನೀ ಹಿಂಗ ನೋಡಬ್ಯಾಡ ನನ್ನ'ದ ಬಾಬ್‌ಕಟ್ ಹುಡುಗಿ ಅಲ್ಲೆಲ್ಲೋ ಸಿಗುತ್ತಾಳೆ ಅಂದುಕೊಂಡುದು... ಅವಳಿಗೆ ದೇವತೆಗಳು ಮಾತ್ರ ಕುಡಿಯುವಂತಹ ಕಾಫಿ ಕುಡಿಸಬೇಕು ಅಂದುಕೊಳ್ಳುತ್ತಿದ್ದುದು...
ಇಷ್ಟೆಲ್ಲ ಆದರೂ ನಾನು ರವಿಯನ್ನು ಮುಖತಃ ಕಾಣುವ, ಕನಿಷ್ಟ ಒಂದು ಪತ್ರ ಬರೆಯುವ ಧೈರ್ಯ ಮಾಡಲಿಲ್ಲ ಎಂದರೆ ಅದಕ್ಕೆ ನನ್ನ ಸಂಕೋಚ-ಹಿಂಜರಿಕೆಗಳೇ ಕಾರಣ. ಮೊದಲ ಸಲ ರವಿಯನ್ನು ನಾನು ನೋಡಿದ್ದು ಪ್ರಾರ್ಥನಾ ಶಾಲೆಯ ಸ್ವಾತಂತ್ರೋತ್ಸವದ ಪೆರೇಡಿನಲ್ಲಿ. ಅವತ್ತು ಆತ ಒಂದು ಕಪ್ಪು ಗಾಗಲ್ ಧರಿಸಿ ನೂರಾರು ಜನರೊಂದಿಗೆ ನಡೆದು ಬರುತ್ತಿದ್ದ. ನಂತರ ಬೆಂಗಳೂರಿನ ಸುಮಾರು ಸಾಹಿತ್ಯ ಕಾರ್ಯಕ್ರಮಗಳಲ್ಲಿ ರವಿ ಎದುರಾದರೂ ಯಾಕೋ ಹೋಗಿ ಮಾತನಾಡಿಸಬೇಕು ಅಂತ ಅನಿಸಲೇ ಇಲ್ಲ. ಪತ್ರಿಕೆಯದೇ ಹಲವು ಕಾರ್ಯಕ್ರಮಗಳಿಗೆ ಹೋದರೂ ಅವರ ಸನಿಹಕ್ಕೆ ಹೋಗಲಿಲ್ಲ.
ಈ ನಡುವೆ ರವಿ ಕಾರ್ಗಿಲ್ಲಿಗೆ ಹೋದ, ಪಾಕಿಸ್ತಾನಕ್ಕೆ ಹೋದ, ಅಫಗನಿಸ್ತಾನಕ್ಕೆ ಹೋದ, ಗುಜರಾತ್ ಭೂಕಂಪಿತ ಪ್ರದೇಶಕ್ಕೆ ಹೋಗಿಬಂದ, ರಾಜ್‌ಕುಮಾರ್ ಅಪಹರಣವಾದಾಗ ಕಾಡಿಗೇ ನುಗ್ಗಿದ. ಪ್ರಾರ್ಥನಾ ಶಾಲೆ ಮಾಡಿದ, ಓ ಮನಸೇ ಶುರುವಾಯಿತು, ವೀಣಾ ಧರಿ ಎಂಬ ಎಚ್‌ಐವಿ ಪೀಡಿತ ಹೆಣ್ಣುಮಗಳನ್ನು ಸಾಕುತ್ತಿದ್ದೀನಿ ಅಂತ ಬರೆದುಕೊಂಡ, ಟೀವಿಯಲ್ಲಿ ಕ್ರೈಂ ಡೈರಿ - ಕ್ರೈಂ ಸ್ಟೋರಿ ಅಂತೆಲ್ಲ ಶುರುವಾಗಿ ಅವನ ಕಂಠಕ್ಕೆ, ಡೈಲಾಗ್ ಡೆಲಿವರಿ ಶೈಲಿಗೆ ಮರುಳಾದ ಹೊಸ ಅಭಿಮಾನಿಗಳು ಹುಟ್ಟಿಕೊಂಡರು. ಹೆಚ್ಚುಕಮ್ಮಿ ಅಲ್ಲಿಯವರೆಗೂ ರವಿ ನನ್ನ ದೃಷ್ಟಿಯಲ್ಲಿ ಉನ್ನತ ಸ್ಥಾನದಲ್ಲೇ ಇದ್ದ.
ಆದರೆ ಅದ್ಯಾವಾಗಲೋ ರವಿಯ ಫಾಲ್ ಶುರುವಾಯಿತು: ನನ್ನ ದೃಷ್ಟಿಯಲ್ಲೂ ಮತ್ತು ಬಹುಶಃ ಆ ಕಾಲದಲ್ಲಿ ನನ್ನಂತೆಯೇ ರವಿಗೆ ಮರುಳಾಗಿದ್ದ ಹಲವರ ದೃಷ್ಟಿಯಲ್ಲೂ. ರವಿ ರಿಪಿಟಿಟೀವ್ ಅನ್ನಿಸತೊಡಗಿದ. ಅವಕಾಶವಾದಿ ಅನ್ನಿಸತೊಡಗಿದ. ತನ್ನ ಮಾತನ್ನು ತಾನೇ ಕಾಯ್ದುಕೊಳ್ಳಲಾಗದ ಚೀಟರ್ ಅನ್ನಿಸತೊಡಗಿದ. 'ಲಾರಿ ಟೈರ್ ಮಾರುವವನಿಗೆ ಪತ್ರಿಕೋದ್ಯಮದ ಬಗ್ಗೆ ಹೇಗೆ ಗೊತ್ತಾಗಬೇಕು?' ಅಂತೆಲ್ಲ ಟೀಕಿಸಿ ಬರೆದಿದ್ದ ವಿಜಯ ಸಂಕೇಶ್ವರರನ್ನ ನಂತರ 'ನನ್ನ ಗುರು' ಅಂತ ಕರೆದ. ರವಿಯನ್ನು ನಂಬಿ ಯಾರದಾದರೂ ಬಗ್ಗೆ ಒಂದು ಅಭಿಪ್ರಾಯಕ್ಕೆ ಬಂದಿದ್ದ ನಮಗೆ ಈತ ಉಲ್ಟಾ ಹೊಡೆದಾಗ ಏನು ಮಾಡಬೇಕು ತಿಳಿಯಲಿಲ್ಲ. ಅನಾವಶ್ಯಕವಾಗಿ ಯಾರ್ಯಾರನ್ನೋ ಟಾರ್ಗೆಟ್ ಮಾಡಿ ಬರೀತಿದಾನೆ ಅನ್ನಿಸಲಿಕ್ಕೆ ಶುರುವಾಯಿತು. ಕ್ರೈಂ-ಸೆಕ್ಸ್-ಆತ್ಮಪ್ರಶಂಸೆಗಳು ಬೇಸರ ತರಿಸಿದ್ದವು. ಅವನೀಗ ಅಂಡರ್‌ವರ್ಲ್ಡ್ ಡಾನುಗಳ ಬಗ್ಗೆ ಬರೆವುದು ಬಿಟ್ಟು ಸಣ್ಣಪುಟ್ಟ ರಾಜಕಾರಣಿಗಳು, ಸಿನೆಮಾ ರಂಗದವರು, ಮಠಾದೀಶರನ್ನು ಟಾರ್ಗೆಟ್ ಮಾಡಿ ಬರೆಯುತ್ತಿದ್ದ. "ಇವಳ ಲೈಫಲ್ಲಿ ಏನಾಯ್ತು ಗೊತ್ತೇ?", "ಇವನ ಅಪ್ಪ ಎಂತವ ಗೊತ್ತೇ?" ಮುಂತಾದ ಹೆಡ್ಡಿಂಗುಗಳಿಂದ ಬರುತ್ತಿದ್ದ ಹಾಯ್, ಪುಟಗಳನ್ನು ತೆರೆದು ನೋಡಿದರೆ ಆ ವರದಿಯಲ್ಲಿ ಹೂರಣವೇ ಇರುತ್ತಿರಲಿಲ್ಲ. ಅವು ಯಾರದೋ ಇಮೇಜ್ ಕೆಡಿಸಲೆಂದೇ ಬರೆದಹಾಗೆ ಕಾಣತೊಡಗಿದವು. ತನ್ನ ಬಗ್ಗೆ ಹೇಳಿಕೊಳ್ಳುವ ಮೂಲಕವೇ ಅಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಿದ್ದ ಬೆಳಗೆರೆಗೆ ಅದೇ ದೌರ್ಬಲ್ಯವೂ ಆಗಿತ್ತು. ಏನೇ ಬರೆದರೂ, ಏನೇ ಹೇಳಹೊರಟರೂ ಕೊನೆಗೆ 'ತಾನು ತಾನು ತಾನು' ಎಂಬ ಜಪದೊಂದಿಗೆ ಕೊನೆಯಾಗುತ್ತಿದ್ದ ರವಿಯ ಬರಹ-ಭಾಷಣಗಳು ರುಚಿ ಕಳೆದುಕೊಳ್ಳತೊಡಗಿದವು. ಇಡೀ ರಾಜ್ಯವೇ ಹೇವರಿಕೆಯಿಂದ ನೋಡುತ್ತಿದ್ದ ಬಳ್ಳಾರಿ ಗಣಿಧಣಿಗಳ ಪರವಾಗಿ ಪ್ರಚಾರ ಮಾಡಿದ. ಇಂವ ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾನೆ ಅನ್ನಿಸುವ ಹಾಗೆ ಆಯಿತು.
ಎಲ್ಲಕ್ಕಿಂತ ಮುಖ್ಯವಾಗಿ, ನಾನೀಗ ಹೊರಗೆ ಕಣ್ಬಿಟ್ಟು ನೋಡತೊಡಗಿದ್ದೆ. ಕನ್ನಡದ ಹಲವು ಬರಹಗಾರರನ್ನು ಓದತೊಡಗಿದ್ದೆ. ನೋಟ ವಿಶಾಲದಂತೆ, ಆಕಾಶ ದೊಡ್ಡದಾದಂತೆ ರವಿ ಚಿಕ್ಕವನೆನಿಸುತ್ತ ಹೋದ. 'ಬರೀ ಇವನನ್ನೇ ಓದುತ್ತ ಎಂತೆಂಥಾ ಸಾಹಿತ್ಯವನ್ನು ಬಿಟ್ಟುಬಿಟ್ಟಿದ್ದೆ' ಎನಿಸತೊಡಗಿತು. ಮತ್ತೆ ನಾನೂ ಈಗ ನಾಕಕ್ಷರ ಬರೆವವನಾಗಿ, ವೃತ್ತಿ-ಜವಾಬ್ದಾರಿ-ಬದುಕು ಇತ್ಯಾದಿಗಳು ಶುರುವಾಗಿ, ನನ್ನದೆಂಬ ವ್ಯಕ್ತಿತ್ವವೂ ರೂಪುಗೊಳ್ಳತೊಡಗಿತ್ತಿರಬೇಕು.
ಹೆಚ್ಚುಕಮ್ಮಿ ಇದೇ ಹೊತ್ತಿಗೆ ರವಿಯ ಕಲರ್‌ಫುಲ್ ಜೀವನದ ಬಗ್ಗೆ, ಆತನ ಇನ್ನೊಂದು ಮುಖದ ಬಗ್ಗೆ, ವಿಚಿತ್ರ ಖಯಾಲಿಗಳ ಬಗ್ಗೆ, ಹುಚ್ಚುಚ್ಚು ವರ್ತನೆಗಳ ಬಗ್ಗೆ, ದುಷ್ಟತನಗಳ ಬಗ್ಗೆ, ದೌರ್ಬಲ್ಯಗಳ ಬಗ್ಗೆ, ಹೆಣ್ಣುಮಕ್ಕಳನ್ನು ಹೇಗ್ಹೇಗೋ ನಡೆಸಿಕೊಳ್ಳುತ್ತಾನಂತೆ ಎಂಬ ಗಂಭೀರ ಆರೋಪದ ಬಗ್ಗೆ, ವೈಯಕ್ತಿಕ ಜೀವನದ ಬಗ್ಗೆ - ಕೆಲವು ಪತ್ರಿಕೆಗಳು, ಅನಾಮಧೇಯ ವ್ಯಕ್ತಿಗಳು, ಪ್ರತ್ಯಕ್ಷವಾಗಿ ಕಂಡಿದ್ದೇನೆ ಅಂತ ಹೇಳಿಕೊಳ್ಳುವವರಿಂದ ಥರಹೇವಾರಿ ಮಾತುಗಳು, ಗಾಸಿಪ್ಪುಗಳು ಶುರುವಾಗಿದ್ದವು. ಇವನ್ನೆಲ್ಲಾ ಕೇಳಿ ಕೇಳಿ, ಅರೆ, ಇಷ್ಟು ಕಾಲ 'ಗುರುವಲ್ಲದ ಗುರು, ಅಪ್ಪನಲ್ಲದ ಅಪ್ಪ' ಅಂತೆಲ್ಲ ಅಂದುಕೊಂಡಿದ್ದು ಇವನ ಬಗ್ಗೆಯೇನಾ ಅಂತಂದುಕೊಳ್ಳುವ ಮಟ್ಟಿಗೆ ರವಿಯೆಡಿಗಿನ ನನ್ನ ಅಭಿಪ್ರಾಯ ಬದಲಾಗಿಹೋಯಿತು. ಕುಡಿತ-ಸಿಗರೇಟು ಎಲ್ಲಾ ಬಿಟ್ಟು ಬಹಳ ಕಾಲವಾಯ್ತು ಅಂತ ಅವನು ಬರಕೊಂಡ ಕೆಲವೇ ಕಾಲಕ್ಕೆ ಅದೆಲ್ಲ ಸುಳ್ಳೇಸುಳ್ಳು ಅಂತ ಸಾಕ್ಷ್ಯ ಸಿಕ್ಕಿತು. ಗಳಸ್ಯ-ಕಂಠಸ್ಯ ಅಂತ ಕರೆದುಕೊಳ್ಳುತ್ತಿದ್ದ ವಿಶ್ವೇಶ್ವರ ಭಟ್ಟರ ವಿರುದ್ಧ ಬರೆದು, ಆಮೇಲೆ ಅವರೂ-ಅವರ ತಂಡದವರೂ ತಿರುಗಿ ಇವನ ಬಗ್ಗೆ ಬರೆದು, ಅವರೆಲ್ಲಾ ಬೀದಿಜಗಳ ಆಡಿದಾಗಲಂತೂ ಬೆಳಗೆರೆ ಬಹುಶಃ ಹಲವರ ದೃಷ್ಟಿಯಲ್ಲಿ ಸಣ್ಣವನಾದ. ಆಮೇಲೆ ಅದ್ಯಾರದೋ ಕೊಲೆಗೆ ಸುಪಾರಿ ಕೊಟ್ನಂತೆ ಅಂತ ಜೈಲಿಗೂ ಹೋಗಿ ಬಂದ.
ಯಾರಾದರೂ ತೀರಿಕೊಂಡಾಗ ಅವರ ಬಗ್ಗೆ ಒಳ್ಳೆಯದಷ್ಟನ್ನೇ ಬರೆಯಬೇಕು ಎನ್ನುತ್ತಾರೆ. ಬರಹಗಾರನೇ ಬೇರೆ, ಅವನ ವೈಯಕ್ತಿಕ ಬದುಕೇ ಬೇರೆ - ಅವೆರಡನ್ನು ತಳುಕು ಹಾಕಬಾರದು ಎನ್ನುತ್ತಾರೆ. ಆದರೆ ಬೆಳಗೆರೆಯ ವಿಷಯದಲ್ಲಿ ಹಾಗೆ ಮಾಡುವುದು ಕಷ್ಟ ಎನಿಸುತ್ತದೆ ನನಗೆ. ಯಾಕೆಂದರೆ, ನಾವು ಬರೀ ರವಿಯ ಕಥೆ-ಕಾದಂಬರಿಗಳನ್ನು ಓದಲಿಲ್ಲ; ಅವನ ಬಗ್ಗೆ ಅವನೇ ಬರೆದುಕೊಂಡುದನ್ನು ಓದಿದೆವು, ಅವನ್ನೆಲ್ಲ ನಿಜವೆಂದು ಭಾವಿಸಿದೆವು, ಅವನೊಬ್ಬ ಸಂಭಾವಿತ ಎಂದು ನಂಬಿದೆವು, ಪ್ರೀತಿಸಿದೆವು, ಆರಾಧಿಸಿದೆವು: ಆದರೆ ಮುಂದೊಂದು ದಿನ ಅವೆಲ್ಲ ಸುಳ್ಳು, ಆತ ಅಷ್ಟೆಲ್ಲ ಪ್ರೀತಿಗೆ, ಆರಾಧನೆಗೆ, ನಂಬುಗೆಗೆ ಅರ್ಹ ವ್ಯಕ್ತಿಯಾಗಿರಲಿಲ್ಲ ಅಂತ ಗೊತ್ತಾದಾಗ ಆಗುವ ಆಘಾತ - ನಿರಾಶೆ ದೊಡ್ಡ ಮಟ್ಟದ್ದು. ರವಿಯ 'ಫಸ್ಟ್ ಹಾಫ್' ಮಾತ್ರ ಇಷ್ಟ, ಅಥವಾ ಅವನೇ ಅಫಿಡವಿಟ್ಟಿನಲ್ಲಿ ಬರೆದುಕೊಳ್ಳುತ್ತಿದ್ದಂತೆ ಅವನ ಬರಹ-ಸಾಹಿತ್ಯಪ್ರೀತಿ-ಭಾಷಣ-ನಿರೂಪಣೆ-ಶಾಲೆ ಇತ್ಯಾದಿ ಸಾಧನೆಗಳನ್ನು ಬಿಟ್ಟು ಉಳಿದ ವಿವರಗಳೆಲ್ಲ ಅನ್-ಇಂಟರೆಸ್ಟಿಂಗ್ ಅಂತ ಬಿಟ್ಟುಬಿಡುವುದು ಹೇಗೆ ಸಾಧ್ಯ?
ರವೀ, ಸುಮಾರು ಎಂಟ್ಹತ್ತು ವರ್ಷ ನಿಮ್ಮ ಬರಹದ ಮೋಡಿಗೆ ಒಳಗಾಗಿದ್ದೆ, ಹೇಳಿ ಹೋಗು ಕಾರಣವನ್ನೂ - ಪತ್ರಿಕೆಯನ್ನೂ ಹುಚ್ಚು ಹಿಡಿಸಿಕೊಂಡು ಓದಿದ್ದೆ, ನಿಮ್ಮ ಕಥೆಗಳನ್ನು, ಕೆಲವು ಕಾದಂಬರಿಗಳನ್ನು, ಒಂದಷ್ಟು ಅನುವಾದಗಳನ್ನು ಇವತ್ತಿಗೂ ಅತ್ಯುತ್ತಮವೆಂದು ಒಪ್ಪುತ್ತೇನೆ. ನಿಮ್ಮ ಬರಹಗಳಿಂದ - ಮಾತುಗಳಿಂದ ಸ್ಫೂರ್ತಿ ಪಡೆದಿದ್ದೇನೆ. ಇವತ್ತು ನಾನೂ ಏನಾದರೂ ಬರೆಯುತ್ತಿದ್ದರೆ ಅದಕ್ಕೆ ನಿಮ್ಮನ್ನು ಓದಿದ್ದೂ ಒಂದು ಕಾರಣ ಅಂತ ನಿಸ್ಸಂಕೋಚವಾಗಿ ಒಪ್ಪಿಕೊಳ್ಳುತ್ತೇನೆ. ನಿಮ್ಮ ಪತ್ರಿಕೆ ಹಲವು ಒಳ್ಳೆಯ ಅಂಕಣಕಾರರನ್ನು - ಬರಹಗಾರರನ್ನೂ ಕನ್ನಡಕ್ಕೆ ಕೊಟ್ಟಿರುವುದೂ ನಿಜ. ಹಾಗೆಯೇ, ನಿಮ್ಮ ಪತ್ರಿಕೆಯೇ ಹತ್ತು-ಹಲವು ಶ್ರೇಷ್ಠ ಸಾಹಿತಿಗಳನ್ನು ನಾನು ಓದಲು ಬೆಳಕಿಂಡಿಯಾಯಿತು ಅಂತಲೂ ಹೇಳುತ್ತೇನೆ.
ನಿಮ್ಮ ಬರಹದ ಚುಂಬಕ ಶೈಲಿಗೆ, ಅಗಾಧ ಬರಹಗಾರಿಕೆಗೆ, ನನ್ನನ್ನು ಓದಲು-ಬರೆಯಲು ಹಚ್ಚಿದ್ದಕ್ಕೆ ಧನ್ಯವಾದ, ನಮಸ್ಕಾರ.
Tuesday, November 03, 2020
ಗೀಚು
ತನ್ನ ಪುಟ್ಟ ಬೆರಳುಗಳಲ್ಲಿ ಪೆನ್ನು ಹಿಡಿದು
ಬರೆಯುತ್ತಿದ್ದಾಳೆ ಮಗಳು ಬಿಳಿಹಾಳೆಯಲ್ಲಿ
ಹೀಗೇ ಒಂದೊಂದಕ್ಷರ ಕಲಿತು
ಆಮೇಲವನ್ನು ಜೋಡಿಸಿ ಪದಗಳಾಗಿಸಿ
ಪದಕೆ ಪದ ಪೋಣಿಸಿ ವಾಕ್ಯ ರಚಿಸಿ
ವಾಕ್ಯದ ಮುಂದೆ ವಾಕ್ಯವನಿಟ್ಟು ಮಹಾಪ್ರಬಂಧ ಬರೆದು
ಈ ನಡುವೆ ಆಕೆಗೆ ಗೀಚುವುದು ಬಿಟ್ಟು ಹೋಗಿರುತ್ತೆ
ಇಷ್ಟು ದಿನ ಗೋಡೆ ನೆಲ ಟೇಬಲು ಅಪ್ಪನ ಪುಸ್ತಕ
ಅಮ್ಮನ ಬಿಳಿಯಂಗಿ ತನ್ನದೇ ಮೈಕೈ-
ಗಳ್ಯಾವುದರಲೂ ಭೇದವೆಣಿಸದೆ
ಮನಸಿಗೆ ಬಂದುದ ಗೀಚುತ್ತಿದ್ದ ಮಗಳು
ಈಗ ಅಕ್ಷರಗಳನರಿತು
ಬರೆವುದ ಕಲಿತ ಮೇಲೆ ಗೀಚುವ ಹಾಗಿಲ್ಲ
ನಡೆವುದ ಕಲಿತ ಮೇಲೆ ಬೀಳುವ ಹಾಗಿಲ್ಲ
ಮಾತು ಕಲಿತ ಮೇಲೆ ತೊದಲುವ ಹಾಗಿಲ್ಲ
ಮುಗ್ದತೆಯ ತೊಡೆಯಲೆಂದೇ ಇರುವ
ಈ ಜಗದ ರೀತಿಗೆ ಬಲಿಯಾದ ಮಗಳು
ಒಂದೊಂದಾಗಿ ಕಲಿಯುತ್ತ ಕಲಿಯುತ್ತ
ಆಮೇಲೆ ನಾವೂ ಈ ಮನೆ ಬದಲಿಸಿ
ಮಾಲೀಕರು ಗೋಡೆಗೆ ಹೊಸ ಬಣ್ಣ ಬಳಿಸಿ
ಇನ್ನೆಂದೂ ಕಾಣಿಸದಂತೆ ನನ್ನ ಮಗಳ ಗೀಚು
ಹಳೇ ಪರಿಚಯ ಹಳೇ ನೆನಪುಗಳ
ಮೆಲುಕು ಹಾಕೋಣವೆಂದು
ಮತ್ತೆ ಆ ಮನೆಗೆ ಬಂದರೆ ಮೊಂದೊಂದು ದಿನ
ಗೋಡೆಯ ಹೊಸ ಬಣ್ಣಪದರದ ಮೇಲೆ
ಹೊಸ ಬಾಡಿಗೆದಾರರ ಮಗುವಿನ ಮುದ್ದುಗೀಚು
ಈಗಾಗಲೇ ದೊಡ್ಡವಳಾಗಿಹೋಗಿರುವ ಮಗಳು
ತನಗಿಂತ ಸಣ್ಣ ವಯಸಿನ ಆ ಮಗುವಿಗೆ
ಗೋಡೆಯ ಮೇಲೆ ಗೀಚಬಾರದೆಂದು
ತಿಳಿ ಹೇಳುತ್ತಿದ್ದಾಳೆ.
Tuesday, September 22, 2020
ಅಕ್ಷಯ ಕಾವ್ಯದ ಅಕ್ಷಯ ಓದು
ಈ ದಿನ ಹೇಳಿಯೇಬಿಡುವೆನೆಂದು ಅವಳೂ
ಎಷ್ಟೊಂದು ದೂರ ನಡೆದರು
ಅಣಬೆಗಳ ಹುಡುಕುತ್ತ
‘ಅಕ್ಷಯ ಕಾವ್ಯ’ ಎಂಬ ಈ ಹೊತ್ತಗೆಯನ್ನು ನಾನು ತಂದಿಟ್ಟುಕೊಂಡು ಎರಡು ವರ್ಷದ ಮೇಲಾಯಿತು. ಈ ದಿನ ಓದಿ ಮುಗಿಸಿಯೇಬಿಡುತ್ತೇನೆಂದು ಎಷ್ಟು ಸಲ ಅದನ್ನು ಕೈಗೆತ್ತಿಕೊಂಡಿಲ್ಲ... ಆದರೆ ಮುಗಿಸಲು ಸಾಧ್ಯವಾಗಿಯೇ ಇಲ್ಲ. ಮುಗಿಸುವುದಿರಲಿ, ಕೆಲವೊಂದು ಸಲ ಎರಡ್ಮೂರು ಪುಟದ ಮುಂದೆ ಹೋಗಲಿಕ್ಕೂ ಸಾಧ್ಯವಾಗಿಲ್ಲ. ಹಾಗಾದರೆ ಇದು ಅಷ್ಟೊಂದು ಸಂಕೀರ್ಣವಾದ ಗ್ರಂಥವೇ? ಹಾಗೂ ಅನಿಸಿಲ್ಲ. ಸರಳ ಶಬ್ದಗಳು, ಸರಳ ವಾಕ್ಯಗಳು, ಸರಳ ಪ್ರತಿಮೆಗಳು, ಎಲ್ಲೂ ಗಂಟಲಿಗೆ ಸಿಕ್ಕದ ಮೃದು ಆಹಾರವೇ. ಆದರೂ, ಈ ಎರಡು ವರ್ಷಗಳಲ್ಲಿ ಕನಿಷ್ಟ ನೂರು ಸಲ ಈ ಪುಸ್ತಕ ನನ್ನ ಕೈಗಳನ್ನಲಂಕರಿಸಿದ್ದರೂ, ‘ಓದಿ ಮುಗಿದ ಪುಸ್ತಕ’ಗಳ ಗುಂಪಿಗೆ ಇದನ್ನು ಸೇರಿಸಲಾಗುತ್ತಿಲ್ಲ ಯಾಕೆ?
ಬಹುಶಃ ಈ ಪುಸ್ತಕದ ಹೆಗ್ಗಳಿಕೆಯೇ ಅದು. ಗದ್ಯಸಾಹಿತ್ಯವನ್ನೇ ಹೆಚ್ಚು ನೆಚ್ಚಿಕೊಂಡಿದ್ದ ನಾನು ಈಗ ಏಳೆಂಟು ವರ್ಷಗಳಿಂದ ಕಾವ್ಯದ ಹುಚ್ಚಿಗೆ ಬಿದ್ದು, ‘ಹೊಸ ತರಹದ್ದು’ ಅಂತ ಕಂಡ ಕಾವ್ಯವನ್ನೆಲ್ಲ ಆಸೆ ಪಟ್ಟು ಕೊಂಡು ಓದಿ, ಕೆಲವಷ್ಟು ಸಲ ಅದರದೇ ಪ್ರಭಾವಕ್ಕೊಳಗಾಗಿ ಬರೆಯುತ್ತಿರುವವನು. ನವ್ಯದ ರುಚಿಗೆ ಮಾರುಹೋದವನು. ಆದಿಪ್ರಾಸ-ಅಂತ್ಯಪ್ರಾಸ-ಗಣ-ಪ್ರಸ್ತಾರಗಳ ಹಂಗು ಮುರಿದಮೇಲೂ ಕವಿ ಹೇಗೆ ಲಯ ಕಂಡುಕೊಂಡ ತನ್ನ ಕಾವ್ಯದಲ್ಲಿ? ಹೇಗೆ ತನ್ನ ರಚನೆ ಅಕಾವ್ಯವಾಗುವುದನ್ನು ತಪ್ಪಿಸಿದ? ಹೇಗೆ ವಸ್ತುವೊಂದು ಕವಿತೆಯಾಗಿ ರೂಪುಗೊಳ್ಳುತ್ತೆ? -ಎಂಬುದು ನನಗೆ ಇನ್ನೂ ಆಶ್ಚರ್ಯದ ವಿಷಯ. ಹೀಗಿರುವಾಗ, ಖಚಿತ ಸಂಗತಿಯಿಲ್ಲದ, ನಿಶ್ಚಿತ ವಾಹಿನಿಯಿಲ್ಲದ, ಲಿಖಿತ ಕ್ರಮವಿಲ್ಲದ, ಬದ್ಧ ರೂಪವಿಲ್ಲದ ಅಖಂಡ ಬರಹವೊಂದು ಹೇಗೆ ಕಾವ್ಯವಾಗಿ ಮೈತಳೆಯುತ್ತದೆ?
‘ಅಕ್ಷಯ ಕಾವ್ಯ’ವನ್ನು ಓದುವಾಗೆಲ್ಲ ನನ್ನನ್ನು ಕಾಡುವ ಪ್ರಶ್ನೆಗಳು ಇವು. ಇಲ್ಲಿ ಬರುವ ತೊಂಬತ್ತು ಪ್ರತಿಶತ ಕಥೆಗಳು-ಉಲ್ಲೇಖಗಳ ಪರಿಚಯ ನನಗಿಲ್ಲ. ಗೂಗಲ್ ಮಾಡಿದರೆ ತಿಳಿಯುತ್ತಿತ್ತೇನೋ, ಆದರೆ ಯಾವತ್ತೂ ಆ ಗೋಜಿಗೆ ಹೋಗಿಲ್ಲ. ತಿಳಿದುಕೊಳ್ಳಬೇಕು ಅಂತ ಅನಿಸಿಯೇ ಇಲ್ಲ. ಇಷ್ಟಕ್ಕೂ ಈ ಪುಸ್ತಕವನ್ನು ‘ಅರ್ಥ ಮಾಡಿಕೊಳ್ಳಬೇಕು’ ಅಂತಲೇ ನನಗೆ ಇದುವರೆಗೆ ಅನಿಸಿಲ್ಲ. ಆದಾಗ್ಯೂ ಇದು ನಿರರ್ಥಕ ಓದು ಎಂಬ ಭಾವನೆ ಬಂದಿಲ್ಲ!
ಕಸ ಪಿಪಾಯಿಯೊಳಗೆರಡು ನಾಯಿಗಳು
ಅಂಡ ಅಂಡಾಶಯ ಕಂಫೀಟುಗಳ ಜಾಲಾಡಿಸುತ್ತಿವೆ
ಸಕಲರೂ ಕಾಯುತ್ತ ಭಿಕ್ಷುಕರೂ ಹಾಗೇ
ಸೇಂಟ್ ಥಾಮಸ್ ಅಕ್ವಿನಾಸ್ ಹೇಳಿದ ಹಾಗೆ
ಕಾರಣ ವಿನಾ ಕಾರ್ಯವಿಲ್ಲ
ಮನುಷ್ಯರ ದೃಷ್ಟಿಗಳ ಕತ್ತರಿಸುವ ಹಾಗೆ
ಯುಗಾಂತರದ ಗಾಡಿ
-ಈ ಸಾಲುಗಳಲ್ಲಿ ಬರುವ ಸೇಂಟ್ ಥಾಮಸ್ ಅಕ್ವಿನಾಸ್ ಯಾರು? ನನಗೆ ಅದು ಮುಖ್ಯ ಅಂತ ಅನಿಸಿಯೇ ಇಲ್ಲ. ಹುಡುಕಿದರೆ ಅವನೊಬ್ಬ ಇಟಲಿ ದೇಶದ ಫಿಲಾಸಫರ್ ಅಂತ ಗೊತ್ತಾಗುತ್ತಿತ್ತು. ಅಂವ ಏನು ಬರೆದ, ಏನೇನು ಮಾಡಿದ, ಯಾಕೆ ಹಾಗೆ ಹೇಳಿದ –ಎಲ್ಲಾ ವಿಷಯ ಸಂಗ್ರಹಿಸಬಹುದಿತ್ತು. ಆದರೆ ಕವಿತೆಯ ಓದನ್ನು ಮುಂದರಿಸಿಕೊಂಡು ಹೋಗಲು ನನಗೆ ಯಾವ ತೊಡಕೂ ಆಗಲಿಲ್ಲ. ಹಾಗೆಯೇ ಈ ಪುಸ್ತಕದಲ್ಲಿ ಬರುವ ಅರಬೀ ಸಮುದ್ರವೋ, ಅರಾರತ್ ಪರ್ವತವೋ, ಮೆಡಿಟರೇನಿಯನ್ ಬಿಸಿಲೋ, ರೋಡಿನ್‌ನ ಶಿಲ್ಪವೋ, ಬಾಮಿಯಾನಿನ ಬುದ್ಧನೋ –ನಾನು ಕಂಡವಲ್ಲ. ಇದರೊಳಗೆ ಪ್ರಸ್ತಾಪ ಮಾಡಲಾಗಿರುವ ಯಾವ್ಯಾವುದೋ ದೇಶಗಳ ಯಾವ್ಯಾವುದೋ ಭಾಷೆಗಳ ಕವಿಗಳ ಸಾಲುಗಳು ನಾನೆಂದೂ ಓದಿದವಲ್ಲ. ಮೆಂಡೆಲ್‌ಸ್ಟಾಮ್ ಬರೆದ ಒಂದು ಕವಿತೆಯನ್ನೂ ನಾನು ಓದಿದಂತಿಲ್ಲ. ಹಾಗಿದ್ದೂ ನನ್ನ ಓದು ಆ ಸಾಲುಗಳಲ್ಲಿ ನಿಲ್ಲಲಿಲ್ಲ. ಯಾಕೆಂದರೆ, ಈ ಗುಚ್ಛಗಳಲ್ಲಿ ನನ್ನ ನಿಲುಕಿಗೆ ಸಿಗದ ಯಾವುದೋ ದೇಶಭಾಷೆಗಳ ದಾರ್ಶನಿಕರ ಜತೆ ನನ್ನದೇ ದೇಶದ ನನ್ನದೇ ಜನವೂ ಏಕಕಾಲದಲ್ಲಿ ಇದ್ದಾರೆ. ನನಗೆ ಅಷ್ಟೇನು ಪರಿಚಿತವಲ್ಲದ ಸೂಫಿ ಭಜನೆಯ ಕೆಳಸಾಲುಗಳಲ್ಲೇ ಡಿಸೆಂಬರ್ ಬಂದರೆ ನನ್ನ ಕಿವಿಗೆ ಬೀಳುವ ಅಯ್ಯಪ್ಪ ಭಕ್ತರ ಭಜನೆ ಸದ್ದು ಇದೆ. ಅಮೆರಿಕೆಯ ಅಪರಿಚಿತ ಓಣಿಯ ಜತೆಜತೆಗೇ ಪರ್ಕಳದ ಬೀದಿಯೂ ಇದೆ. ಜಪಾನೀ ನಾಟಕದ ದೃಶ್ಯದ ಬೆನ್ನ ಹಿಂದೆಯೇ ವಿವಿಧಭಾರತಿಯ ಗಾನವಿದೆ.
ಬಹುಶಃ ಇದೇ ಕಾರಣಕ್ಕೆ ಈ ಕೃತಿ ನನ್ನನ್ನು ಹಿಡಿದಿಟ್ಟುಕೊಂಡಿರುವುದು. ಪೂರ್ತಿ ಅರ್ಥವಾಗುವುದಿಲ್ಲ, ಆದರೆ ಇದರಲ್ಲೇನೋ ಅರ್ಥವಿದೆ ಅಂತ ಅನಿಸುತ್ತದೆ. ತಿಳಿದವರು ಹೇಳುವಂತೆ, ಕಾವ್ಯದ ಸಾರ್ಥಕತೆಯೂ ಅಷ್ಟೆಯೇ ಅಲ್ಲವೇ? ಯಾವುದೇ ಕವಿತೆ ಕಾಡಬೇಕಾದರೆ ಅದು ಪೂರ್ತಿ ಅರ್ಥವಾಗಬಾರದು: ಇದರಲ್ಲಿ ‘ಇನ್ನೇನೋ ಇದೆ, ಇನ್ನೇನೋ ಇದೆ’ ಅನ್ನಿಸುತ್ತಿರಬೇಕು!
ಒಂದು ದಿನ ನಾನೂ ಕೆಲವು ಮಹಾವಾಕ್ಯಗಳ ಬರೆಯುವೆ
ಬರೆದು ಸರ್ಕಸ್ ಡೇರೆಗಳ ಸುತ್ತ ಆಡಲು ಬಿಡುವೆ
ಅವು ಕಂಡವರ ಮನಸ್ಸುಗಳ ಸೇರಲಿ ಎನ್ನುವೆ
ಕೆಲವು ಅಲ್ಲೇ ಉಳಿದಾವು
ಕೆಲವು ವಾಪಸು ಬರುತ್ತವೆ
ಬಂದಾಗ ಅವಕ್ಕೆ ಗಾಯಗಳಾಗಿರುತ್ತವೆ
ಮಹಾವಾಕ್ಯಗಳು ಈ ಕಾವ್ಯದಲ್ಲಿ ಇಲ್ಲವೆಂದೇ ಹೇಳಬೇಕು. ಇಲ್ಲಿ ಉದುರಿದ ಹಕ್ಕಿಯ ಪುಕ್ಕವೂ ಹಾರುತ್ತದೆ. ಹಗ್ಗದ ಮೇಲೆ ಒಣಹಾಕಿದ ಅಂಗಿ ಗಾಳಿಗೆ ಅಲ್ಲಾಡುತ್ತದೆ. ಆಕಾಶ ನೋಡುತ್ತಾ ನಿಂತವಳ ಕಣ್ಣಲ್ಲಿ ನಕ್ಷತ್ರಗಳು ಮೆಲ್ಲಗೆ ತೇಲುತ್ತವೆ. ಕತ್ತಲೆ ಗಾಢವಾದಂತೆ ನೆರಳುಗಳು ಕರಗುತ್ತವೆ. ಓದುತ್ತಾ ಕುಳಿತ ನಾನು ಅದರಲ್ಲೇ ಮುಳುಗುತ್ತೇನೆ. ರಾಜಧಾನಿ ಎಕ್ಸ್‌ಪ್ರೆಸ್ ನನ್ನನ್ನು ಮತ್ತೆಲ್ಲಿಗೋ ಕರೆದೊಯ್ಯುತ್ತದೆ. ಹುಸೇನ್‌ಸಾಗರದ ಬುದ್ಧನನ್ನು ತೋರಿಸುತ್ತದೆ. ಗಜಿಬಿಜಿಯ ಸಂತೆಯಲ್ಲಿ ಮಂಡಕ್ಕಿ ಕೊಳ್ಳುತ್ತೇನೆ. ಆಸ್ಪತ್ರೆ ಪಕ್ಕದ ಕ್ಯಾಂಟೀನಿನಲ್ಲಿ ಚಹಾ ಕುಡಿಯುತ್ತೇನೆ. ಹೂಗಳು ತುಂಬಿದ ಶೀತಲ ಕೊಳದಲ್ಲಿ ಸ್ನಾನ ಮಾಡುತ್ತೇನೆ. ದಟ್ಟಾರಣ್ಯದ ನಡುವಿನ ಕಣಿವೆಯ ಪಕ್ಕದಲ್ಲಿ ನಿಂತು ಬಟ್ಟೆ ಬದಲಿಸಿಕೊಳ್ಳುತ್ತೇನೆ. ರೋಡ್‌ರೋಲರ್ ಒಂದು ಮೈಮೇಲೆ ಹರಿದಂತಾಗುತ್ತದೆ. ಎಚ್ಚರಾದರೆ ನಮ್ಮೂರ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತಿದ್ದೇನೆ.
ಈ ಕೃತಿಯ ಓದು ನನಗೆ ವಿಶಿಷ್ಟ ಅನುಭವ ನೀಡಿದೆ. ನಾನಿದನ್ನು ನಿದ್ರೆ ಬಾರದ ನಡುರಾತ್ರಿಗಳಲ್ಲಿ ಎದ್ದು ಕೂತು ಓದಿದ್ದೇನೆ, ಕುಟುಂಬದ ಜತೆ ಪ್ರವಾಸ ಹೋದಾಗ ಬ್ಯಾಗಿನಲ್ಲಿಟ್ಟುಕೊಂಡು ಹೋಗಿದ್ದೇನೆ, ಊರಿನ ಮಳೆ ನೋಡುತ್ತಾ ಇದನ್ನು ಧೇನಿಸಿದ್ದೇನೆ, ಲಾಕ್‌ಡೌನ್ ಕಾಲದ ತಳಮಳದ ದಿನಗಳಲ್ಲಿ ಕೈಗೆತ್ತಿಕೊಂಡಿದ್ದೇನೆ. ಯಾವುದೋ ಪುಟ ತೆರೆದು ಏನೂ ನಿರೀಕ್ಷೆಯಿಲ್ಲದೆ ಸುಮ್ಮನೆ ಕಣ್ಣಾಡಿಸುತ್ತಾ ಕೂತಿದ್ದೇನೆ. ಇಲ್ಲಿನ ಕೆಲ ಸಾಲುಗಳು ವಿನಾಕಾರಣ ಸುಖ ಕೊಟ್ಟಿವೆ:
ಕಾದೆ ನಾನು ಇಡೀ ವರುಷ ಒಂದು ಕಿರುನಗೆಗೆ
ಬ್ರಹ್ಮಕಮಲವಾದರೂ ಅರಳಬೇಕಿತ್ತು ಇಷ್ಟರೊಳಗೆ
ಯಾವೂರ ಕಮಲಿ ನೀನು
ಸಾವಿರ ವರುಷ ಕಾಯುವುದು ಹೇಗೆ ನಾನು
ಬಹುಶಃ ಈ ಪುಸ್ತಕವನ್ನು ನನಗೆ ಓದಿ ಮುಗಿಸಲು ಸಾಧ್ಯವಿಲ್ಲ. ಅಥವಾ ಯಾವತ್ತಾದರೂ ಇದನ್ನು ಓದಿ ಮುಗಿಸಿದ್ದೇನೆಂದು ಹೇಳುವ ಧೈರ್ಯ ಮಾಡಲಾರೆ. ಯಾರಾದರೂ ಇದರ ಬಗ್ಗೆ ಹೇಳು ಎಂದರೆ ಸರಿಯಾಗಿ ಹೇಳಲೂ ಸಾಧ್ಯವಾಗದು. ಮತ್ತು ಯಾರಾದರೂ ಇದನ್ನು ಮೊದಲ ಪುಟದಿಂದ ಕೊನೆಯ ಪುಟದವರೆಗೆ ಅವಡುಗಚ್ಚಿ ಹಿಡಿದು ಓದಿ ಮುಗಿಸಬಹುದು ಅಂತಲೂ ನನಗನಿಸುತ್ತಿಲ್ಲ. ಇದೊಂದು ಮುಗಿಯದ ಮುಂಜಾವು. ಪೂರೈಸಲಾಗದ ಅಪರಾಹ್ನ. ಸಂಪನ್ನವಾಗದ ಸಂಧ್ಯೆ. ಅಂತ್ಯವಿರದ ಇರುಳು.
ಪ್ರಯೋಗಶೀಲತೆಯ ಉತ್ತುಂಗದಂತಿರುವ ಈ ಕಾವ್ಯಧಾರೆ ನನ್ನನ್ನು ಸದಾ ಎಚ್ಚರದಲ್ಲಿಟ್ಟಿರುತ್ತದೆ ಅಂತ ನಾನು ನಂಬಿದ್ದೇನೆ. ಇಲ್ಲಿನ ಸಾಲುಗಳಿಂದ ಪ್ರೇರಿತನಾಗಿ ನಾನೂ ಏನೇನೋ ಗೀಚಿದ್ದೇನೆ. ಮತ್ತೇನನೋ ಓದುವಾಗ ಇಲ್ಲಿಯ ಸಾಲುಗಳನ್ನು ನೆನಪಿಸಿಕೊಂಡಿದ್ದೇನೆ. ಓದುವ ನನಗೇ ಇದು ಮುಗಿಯದ ತಪನೆಯಾಗಿರುವಾಗ, ಬರೆದ ಕವಿಗೆ ಇದು ಇನ್ನೆಷ್ಟು ಕಾಡಿರಬಹುದು ಅಂತ ಕಲ್ಪಿಸಿಕೊಂಡು ಅಚ್ಚರಿಯಲ್ಲಿ ಕಂಪಿಸಿದ್ದೇನೆ. ಇಂಥದ್ದೊಂದು ಪ್ರಯೋಗದ ಮೋಹಕ್ಕೆ ಸಿಲುಕಿದ ಕವಿಯ ಸ್ಥಿತಿಯನ್ನು ಊಹಿಸಿಕೊಂಡಿದ್ದೇನೆ. ಬರೆದೇ ತೀರಿಸಿಕೊಳ್ಳಬೇಕಾದ ಈ ದಾಹ ಬರೆದು ಮುಗಿಸಿದಮೇಲಾದರೂ ಅವರಿಗೆ ತೀರಿತಾ? ಗೊತ್ತಿಲ್ಲ. ಆದರೆ ಒಂದಂತೂ ಸತ್ಯ: ಇದೊಂದು ಬಗೆಹರಿಯದ ಬೇಗೆಯಂತೆ ನನ್ನೊಂದಿಗೇ ಇರಲಿದೆ ಬಹಳ ಕಾಲ ತಣ್ಣಗೆ. ಇಂಥದ್ದೊಂದು ಹೊರೆಯನ್ನು ನನಗೆ ದಾಟಿಸಿದ ಕವಿಗೆ ನಮಸ್ಕಾರ. ಆ ಕಾವ್ಯಶಕ್ತಿಗೆ ಶರಣು.
Friday, August 28, 2020
ಅಮ್ಮದಕಣ್ಣನಿಗೆ
ಸಂಜೆಯಾಗುತ್ತಿದ್ದಂತೆಯೇ ಒಂದು ಬಂಡೆಯ ಮೇಲೆ ಕೂರುತ್ತೀ-
ತುಂಗಭದ್ರೆಯ ಜುಳುಜುಳುವಿಗೆ ಕಾಲು ತಾಕಿಸಿ ಧ್ಯಾನಸ್ಥನಾಗಿ
ಕೈಯಲ್ಲಿ ಗಾಳವಿದ್ದರೂ ಪಕ್ಕದಲ್ಲಿ ಬುಟ್ಟಿಯಿಲ್ಲ
ಸಿಕ್ಕ ಮೀನುಗಳನೆಲ್ಲ ವಾಪಸು ನೀರಿಗೆ ಬಿಡುತ್ತೀ
ಊರ ಹುಡುಗರು ನಿನ್ನ ನೋಡಿ ಹೆದರಿ ಓಡುವರು
ಜನವೆಲ್ಲ ನಿನ್ನ ಬಗ್ಗೆ ಏನೇನೋ ಆಡಿಕೊಳ್ಳುವರು
ಆದರೂ ನಿನ್ನದು ನಿಷ್ಕಂಪಿತ ನಡೆ
ಕಿವಿಯಿಲ್ಲದ ನೀನು ಹೇಗೆ ಎಲ್ಲವನೂ ಕೇಳುತ್ತೀ
ಮೂಗಿಲ್ಲದ ನೀನು ಹೇಗೆ ಎಲ್ಲವನೂ ಗ್ರಹಿಸುತ್ತೀ
ತೆಂಬಕಸ್ವಾಮಿಯ ದೇಗುಲದ ಘಂಟೆನಿನಾದದ ಪ್ರತಿಧ್ವನಿಯಲಿ
ಕಂಡುಕೊಂಡೆಯೇ ನಿಮ್ಮೂರ ದೇಗುಲದ ಢಂಡಣ
ತುಂಗಭದ್ರೆಯ ಒಡಲ ತಂಪಲಿ ಸಿಕ್ಕಿತೇ
ನಿಮ್ಮೂರ ನದಿನೀರ ಸೇಚನ
ಇಲ್ಲಿ ಸುರಿಯುತ್ತಿರುವ ಧೋಮಳೆಗಿದೆಯೇ
ಕಡಲ ಮೇಲಿನ ಮಳೆಯ ಮರೆಸುವಷ್ಟು ಕಸುವು
ಹಾಗೆ ಯಾರದೋ ಕಥೆ ಕೇಳಿ ಕಣ್ಣೀರಾಗಲು
ನಮ್ಮೊಳಗೂ ಒಂದು ಕಣ್ಣೀರ ಕಥೆಯಿರಬೇಕೆ?
ಹಾಗೆ ಯಾರಿಗೋ ನಿರಪೇಕ್ಷೆಯಿಂದ ಹೆಗಲಾಗಲು
ನಮ್ಮನೂ ಹೆಗಲು ಕೊಟ್ಟು ಯಾರಾದರೂ ಎಬ್ಬಿಸಿರಬೇಕೆ?
ಹಾಗೆ ನುಡಿ ಹೊರಡದವರ ದನಿ ಅರಿಯುವಂತಾಗಲು
ನಮ್ಮೊಳಗೂ ಘನಿಗಟ್ಟಿದ ಮೌನವಿರಬೇಕೆ?
ಹೇ ವಿಜಯನಗರದ ಬಂಧುವೇ,
ಅಪರೂಪದ ಸುಂದರನೇ,
ಕೊನೆಗಾದರೂ ಸಿಕ್ಕಿತೇ ನಿನಗೆ
ನೀನು ಹುಡುಕುತ್ತಿದ್ದ ಮೀನು?
ನಿನ್ನಂತಃಕರಣಕ್ಕೊಪ್ಪುವ ಮೀನು?
[ವಸುಧೇಂದ್ರರ 'ತೇಜೋ ತುಂಗಭದ್ರಾ' ಓದಿ]
Wednesday, August 26, 2020
ಮೊಳೆಗಳು ಸಾರ್ ಮೊಳೆಗಳು
Monday, August 24, 2020
ಕೊವಿಡ್ ಕಾಲದ ಗಣಪಗೆ
ಮಾಸ್ಕು ಹಾಕ್ಕೊಂಡ್ ಮಾರ್ಕೆಟ್ಗೋಗಿ
ಬಣ್ಣಾ ಬಣ್ಣದ್ ಹೂವಾ ತಂದು
ಸೋಪಿನ್ ನೀರಾಗ್ ತಿಕ್ಕೀ ತೊಳ್ದು
ನಿನ್ನಾ ಮುಡಿಗೆ ಇಟ್ಟೀವ್ನಿ
ಎಷ್ಟೇ ಕಾಸ್ಟ್ಲೀ ಆಗಿದ್ರೂನೂ
ಹಬ್ಬಾ ಅಂದ್ರೆ ಬಿಡ್ಲಿಕ್ಕಿಲ್ಲ
ಥರಥರದ್ ಹಣ್ಣಾ ಕೊಂಡು ತಂದು
ಉಪ್ಪಿನ ನೀರಲಿ ತೊಳೆದಿವ್ನಿ
ವೈರಸ್ಸೆಲ್ಲಾ ಸತ್ತೋಗ್ಲಿ ಅಂತ
ಮೋದಕ ಚಕ್ಕುಲಿ ಪಂಚ್ಕಜ್ಜಾಯ
ಎರ್ಡೆರ್ಡ್ ಸರ್ತಿ ಹುರ್ದು ಕರ್ದು
ನೈವೇದ್ಯಕ್ಕೆ ಮಡಗೀವ್ನಿ
ಕರ್ಪೂರೇನೂ ಊದ್ಬತ್ಯೇನು
ಬತ್ತಿ ಸೈತ ಸ್ಯಾನಿಟೈಸ್ ಮಾಡಿ
ಮಂಟಪಾ ಕಟ್ವಾಗ್ ದೂರ್ದೂರ್ ನಿಂತು
ಎಲ್ಲಾ ಕ್ರಮ ತಗೊಂಡೀವಿ
ಕ್ವಾರಂಟೈನಲ್ ಇರೋ ನಾವು
ಸಂದ್‌ಸಂದ್ ಬಟ್ಟೇ ತೊಟ್ಟೂಕೊಂಡು
ಸೊಂಡ್ಲಾ ಗಣಪ್ನೇ ಕಾಯೋ ಅಂತ
ನಿನ್ ಮುಂದ್ ಬಂದು ಅಡ್ಡಾಗೀವಿ
ಕಷ್ಟಾನೆಲ್ಲಾ ಕಳೀತೀಯಂತೆ
ಯಿಘ್ನಾನೆಲ್ಲಾ ತೊಡೀತೀಯಂತೆ
ಈ ಕೊರೋನಾ ಏನು ದೊಡ್ದು ನಿಂಗೆ
ಹೊಡ್ದೋಡ್ಸದ್ನಾ ಕೈ ಮುಗಿತೀವಿ
ಜೈಜೈ ಗಣಪಾ ಜೈಜೈ ಗಣಪಾ
ಸಿವನಾ ಮಗನೇ ಹರಸೋ ಯಪ್ಪಾ
ಮೊದ್ಲೀನಂಗೆ ಎಲ್ಲಾ ಮರಳಿಸಿ
ನಗುವಿನ ಹೂವಾ ಅರಳಿಸೋ ಗಣಪಾ.
Friday, July 31, 2020
ಸಹಸ್ರಪದಿ
ಯಾವ ಉರಗಕ್ಕೂ ಕಮ್ಮಿಯಿಲ್ಲ
ಹತ್ತಿರದಿಂದ ನೋಡಿದರೆ
ಬೆಚ್ಚಿ ಬೀಳಿಸುವಂತಹ ಮೈಮಾಟ
ಕಪ್ಪು-ಕಂದು ಬಣ್ಣಗಳ ಹೊತ್ತು
ಸಾವಿರ ಪಾದಗಳ ಊರಿ
ನಡೆವೆ ನೋಡುತ್ತ ಅತ್ತ ಇತ್ತ ಸುತ್ತ ಮುತ್ತ
ಮೀಸೆಯಲ್ಲಾಡಿಸುತ್ತ ಲಯಬದ್ಧ
ಮೊಂಡಾಗಿ ಜಗತ್ತನ್ನೆದುರಿಸಲು
ಎಲ್ಲರಿಗೂ ಧೈರ್ಯವಿಲ್ಲವೈ
ಬೆಂಬಿಡದ ನಾಚಿಕೆ
ಏನು ಮಾಡಲೂ ಹಿಂಜರಿಕೆ
ಅಂತರ್ಮುಖಿಯಾಗಿ
ನೆಲವ ನೋಡುತ್ತ ನಡೆವೆ
ಸಿಕ್ಕ ಚಿಗುರು-ಸಸ್ಯಶೇಷಗಳನೇ
ಮೃಷ್ಟಾನ್ನವೆಂದು ತಿನ್ನುವೆ
ಅವರಾಗಿಯೇ ಬಂದು
ಯಾರಾದರೂ ಮೈ ಮುಟ್ಟಿದರೂ
ಚಕ್ಕುಲಿಯಂತೆ ಮುರುಟಿ
ಸುಮ್ಮನಾಗಿಬಿಡುವೆ
ನನ್ನೊಳಸರಿದುಬಿಡುವೆ
ಇಲ್ಲವೆಂದಲ್ಲ ನನಗೂ
ತಲೆಯೆತ್ತಿ ನಿಲ್ಲುವ ಹಂಬಲ
ಎಲ್ಲರೂ ತಾವೇ ಶ್ರೇಷ್ಠರೆಂದು ಬೀಗುವಾಗ
ಮೈಕೆತ್ತಿ ಭಾಷಣ ಬಿಗಿವಾಗ
ತಳುಕು ಬಳುಕು ಮೈಗೇರಿಸಿಕೊಂಡು
ನಡೆವಾಗ ವಂದಿ ಮಾಗಧರೊಡನೆ
ಒತ್ತಿ ಬರುತ್ತದೆ ಬಯಕೆ ಬಾಲದ ತುದಿಯಿಂದ:
ಭುಸುಗುಡುತ್ತ ಹೆಡೆಯೆತ್ತಿ ನಿಂತುಬಿಡಲೇ
ಯಾರಿಗೇನು ಕಮ್ಮಿ ನಾನು
ಈ ಭೂಮಿಯ ಇತಿಹಾಸವನೆಲ್ಲ ಬಲ್ಲೆ
ನೂರು ಮೊಟ್ಟೆಗಳನೊಟ್ಟಿಗೇ ಇಡಬಲ್ಲೆ
ಹೊಗದೆಯೇ ಅರಿತಿರುವೆ ಎಲ್ಲರೊಡಲ ಟೊಳ್ಳ
ಪಥ ಬದಲಿಸಲು ಎಷ್ಟು ಹೊತ್ತು
ಕ್ರಾಂತಿಯ ಬೆಂಕಿಗೆ ಸಾಕು ಸಣ್ಣ ಕಿಚ್ಚು
ಹಾಗೆಂದೇ ಮಾಡಿಕೊಳ್ಳುವೆ
ನನಗೆ ನಾನೇ ಸಮಾಧಾನ:
ನಿರ್ಮಿತಿಯ ಮಿತಿಗೆ ಮಣಿದು
ಸುಮ್ಮನಿರುವುದೇ ಸುಮ್ಮಾನ
ತಟಸ್ಥ ನಿಲುವೇ ಗೆಲುವು ಕೆಲವಕ್ಕೆ
ಸುತ್ತಿದ ದೇಹವ ಬಿಚ್ಚಿ ನಡೆವೆ-
ನನಗೆಂದೇ ಇರುವ ದಾರಿಯಲ್ಲಿ
ಇದ್ದರೆ ತಡೆಗೋಡೆ ಮುಂದೆ
Monday, July 20, 2020
ಮಡಿಲು
ಒಳಗೆ ಕಾಲಿಟ್ಟವನೇ ಡ್ರೈವರ್ ಬಳಿಗೆ ಓಡಿ
ಸರಳುಗಳ ಬಗ್ಗಿ ದಾಟಿ ಗೇರ್‌ಬಾಕ್ಸ್ ಮೇಲೇರಿ ಕೂತುಬಿಡುತ್ತಿದ್ದೆ
ಇಳಿವ ಸ್ಥಳ ಬಂದರೂ ಇಳಿಯೆನೆಂದು ಹಟ ಮಾಡುತ್ತಿದ್ದೆ
ಹಾಯುವ ಬಸ್ಸುಗಳಿಗೆಲ್ಲ ಟಾಟಾ ಮಾಡುತ್ತಿದ್ದೆ
ಊಟದ ತಟ್ಟೆಯನ್ನೇ ಸ್ಟೀರಿಂಗಿನಂತೆ ತಿರುಗಿಸುತ್ತ
ಬುರ್ರನೆ ಓಡುತ್ತಿದ್ದೆ ಜಗುಲಿ ಅಂಗಳ ಹಿತ್ತಿಲು ರಸ್ತೆ
ಅದೊಂದು ಮುಂಜಾನೆ ಮೂಡುಗಾಳಿಯ ಸೆಳೆತಕ್ಕೆ ಸಿಕ್ಕು
ಹೊರಟುಬಿಟ್ಟೆ ಇನ್ನೂ ಮೀಸೆ ಮೂಡದ ಹುಡುಗ ಮನೆ ಬಿಟ್ಟು
ಹಿಡಿದ ಪೆನ್ನು-ಪುಸ್ತಕಗಳ ಜಗಲಿಯಲ್ಲೆ ಬಿಸುಟು
ಎತ್ತ ಹೋದೆ ಎಂದು ಪತ್ತೆ ಹಚ್ಚಲು ವಾರ ಹಿಡಿಯಿತು
ತಿಳಿಯದ ಮಾರ್ಗದ ತಿಳಿಗಿಳಿ ಬಣ್ಣದ ಬಸ್ಸಿನ
ಮೆಟ್ಟಿಲಿನಲಿ ನಿಂತು ನೀನು ಹೊಸಹೊಸ ಊರುಗಳ
ಹೆಸರು ಕೂಗುತ್ತಿದ್ದೆ ಅಂತ ಯಾರೋ ಬಂದು ಹೇಳಿದರು
ಹುಡುಕುವುದ ಬಿಟ್ಟು ಕಾಯಲು ತೊಡಗಿದೆವು
ಆ ಮಾಗೀಚಳಿಯ ಗಢಗಢವ ಎಲ್ಲಿ ಕಂಬಳಿ ಹೊದ್ದು ಕಳೆದೆ
ಬೇಸಿಗೆಯಲಿ ಬಾಯಾರಿದಾಗ ಯಾವ ನಲ್ಲಿಗೆ ಕೈಯೊಡ್ಡಿದೆ
ಮಳೆಗಾಲಕೆ ಜತೆಯಾಗಲು ಛತ್ರಿಯಾದರೂ ಇದೆಯೋ
ಎಂಬ್ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸಲಿಲ್ಲ
ಬುಟ್ಟಿಯಲ್ಲಿ ಚೆಂಡುಹೂ ಹೊತ್ತು ದೊಡ್ಡಬ್ಬಕ್ಕೆಂದು ಬಂದ ನೀನು
ಕೈಗಂಟಿದ ಕರಿಯ ತೊಳೆಯಲು ಎಣ್ಣೆ ಹನಿಸಲು ಬಂದರೆ
ಇದು ಹೋಗದ ಬಣ್ಣ ಬಿಡಮ್ಮಾ ಅಂತ ಸೆಟಗೊಂಡುಬಿಟ್ಟೆ
ಆಮೇಲ್ಯಾರೋ ಅಂದರು: ದೂರದ ನಗರಕೆ ಸಾಗುವ
ರಾತ್ರಿಬಸ್ಸಿನಲ್ಲಿ ನಿನ್ನ ಪಾಳಿಯಂತೆ; ಅದು ನೀನೇ ಆಯ್ದ ದಾರಿಯಂತೆ
ತಪ್ಪಿಯೂ ಕಣ್ಣು ಮುಚ್ಚದೆ ಹೆದ್ದಾರಿಯ ಕತ್ತಲ ಸೀಳುವ
ಪ್ರಖರ ದೀಪಧಾರೆಯ ನಿರುಕಿಸುತ್ತ ನಿಂತಿರುತ್ತೀಯಂತೆ
ಹಗಲೂ ಮಲಗದೆ ವಾಹನದ ಕೊಳೆ ತೊಳೆಯುವೆಯಂತೆ
ಘಮಗುಡುವ ಅಗರಬತ್ತಿ ಹಚ್ಚಿ ಬೆಳಗುವೆಯಂತೆ
ವಾರಗೆಯ ಹುಡುಗರ ಜತೆ ಹಂಚಿಕೊಂಡು ಚಹ
ಜೋಕುಗಳಿಗೆ ನಕ್ಕು ಅವರಲ್ಲೊಬ್ಬನಾಗಿರುವೆಯಂತೆ
ನಗರಕ್ಕೆ ಹೊರಟ ಪಕ್ಕದೂರ ಶ್ಯಾಮಭಟ್ಟರನ್ನು 'ನಮ್ಮೂರೋರು'
ಅಂತ ಹೇಳಿ ಉಚಿತವಾಗಿ ಕರೆದುಕೊಂಡು ಹೋದೆಯಂತೆ
ಡ್ರೈವರಣ್ಣನ ಮನವೊಲಿಸಿ ಆಗೀಗ ನೀನೇ ಬಸ್ಸು ಓಡಿಸುವೆಯಂತೆ
ಈಗ್ಯಾಕೆ ಹೀಗೆ ಎಲ್ಲ ಕಳಕೊಂಡವನಂತೆ ಮಳೆ ನೋಡುತ್ತ ನಿಂತೆ
ನಿನ್ನ ಮಾಲೀಕರು ಬಸ್ಸು ನಿಲ್ಲಿಸಿಬಿಟ್ಟ ಸುದ್ದಿ ತಿಳಿಯಿತು
ಜಗವೇ ಹೆದರಿ ನಿಂತಿರುವಾಗ ನಿನ್ನ ಬಸ್ಸಿನದೇನು ಲೆಕ್ಕ
ಅಲ್ಲಿ ನೋಡು, ಆ ಕೆರೆಕೋಡಿಯ ಬಳಿಯಲಿ ನಿಲ್ಲು
ಹೆದ್ದಾರಿಯಲಿ ಸಾಗುವಾಗಿನ ಭರ್ರನೆ ಶಬ್ದ ಅಲ್ಲೂ ಕೇಳ್ವುದು
ಡಾಬಾದಲಿ ಸಿಗುವ ಖಡಕ್ಕು ಚಹಾ ನಾನೇ ಬತ್ತಿಸಿ ಕೊಡುವೆ
ಪಾರ್ಸೆಲ್ ಪೊಟ್ಟಣದ ಚಿತ್ರಾನ್ನವ ಇಲ್ಲೇ ಮಾಡಿ ಕೊಡುವೆ
ನಿನ್ನ ಹಳೆಯ ಗೆಳೆಯರೆಲ್ಲ ಈಗಿಲ್ಲಿ ಕ್ರಿಕೆಟ್ ಆಡುತ್ತಾರೆ,
ನೀನೂ ಅವರೊಂದಿಗೆ ಸೇರಿಕೋ
ಈ ಕಾಲವೂ ಕಳೆವುದು ಮಗನೇ ಬಲುಬೇಗ,
ಬೇಕಿದ್ದರೆ ಮತ್ತೆ ಮರಳುವೆಯಂತೆ ನಿನ್ನಾಸೆ ದಾರಿಗೆ- ಹೆದ್ದಾರಿಗೆ
ಇಕೋ, ರಾತ್ರಿಯಲಿ ನಿದ್ರೆ ಬರುವಂತೆ
ತಲೆಗೆ ಹರಳೆಣ್ಣೆ ಹಾಕಿ ತಟ್ಟುವೆ, ಹತ್ತಿರ ಬಾ.
Tuesday, May 26, 2020
ಕೊರೋನಾ ಕಾಲದ ಕನವರಿಕೆಗಳು
ಮಾಳಬೆಕ್ಕೊಂದು ಬಾಗಿಲು ತೆರೆದಿರುವ ಸಮಯ ನೋಡಿ
ಸದ್ದಿಲ್ಲದೆ ಒಳಬಂದು ಮನೆಯನ್ನೆಲ್ಲ ಸುತ್ತಾಡಿ
ಬಂದ ದಾರಿಯಿಂದಲೇ ಹೊರಟುಹೋಯಿತು
ಅಡುಗೆಮನೆಯ ಕಟ್ಟೆಯ ಮೇಲೂ
ಊಟದಮನೆಯ ಮೇಜಿನ ಮೇಲೂ
ಚೂರೇ ತೆರೆದ ಕಪಾಟಿನೊಳಗೂ
ಏನೂ ಸಿಗಲಿಲ್ಲ ಅದಕ್ಕೆ
ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ
ಅಂತೇನು ಎಂದೂ ಅದನ್ನು ನಾನು ಆದರಿಸದಿದ್ದರೂ
ಸಾಧಾರಣ ದಿನಗಳಾಗಿದ್ದರೆ ಹಸಿದ ಮುಸುಡಿ ನೋಡಿ
ಒಂದು ಕುಡ್ತೆ ಹಾಲಾದರೂ ಕೊಡುತ್ತಿದ್ದೆ
ಒಮ್ಮೆ ಎತ್ತಿ ಆಡಿಸಿ ಬಿಡುತ್ತಿದ್ದೆ ಹೊರಗೆ
ಆದರೀಗ ಕೇಡುಗಾಲ, ಬೇಕೆಂದಾಗ ಬೀದಿಗಿಳಿವ ಹಾಗಿಲ್ಲ
ಇರುವ ಅರ್ಧ ಗಿಂಡಿ ಹಾಲನ್ನೇ ಕಾಪಾಡಿಕೊಳ್ಳಬೇಕು
ಮಧ್ಯಾಹ್ನದ ಚಹಾಕ್ಕೆ ಸಂಜೆಯ ಕಾಫಿಗೆ ರಾತ್ರಿ ಮಗಳಿಗೆ
ಉಳಿಸಬೇಕು ಬೊಗಸೆ ನಾಳೆಯ ಬೆಡ್‌ಕಾಫಿಗೆ
ಈ ಕಷ್ಟಕಾಲದಲ್ಲಿ ಇರುವುದನ್ನೇ
ಹಂಚಿ ಉಣ್ಣಬೇಕು ಎನ್ನುವರು
ಆದರೆ ಈ ಕಳ್ಳಬೆಕ್ಕನ್ನು ನಂಬುವುದು ಹೇಗೆ
ಯಾರ್ಯಾರ ಮನೆ ಹೊಕ್ಕು ಬಂದಿದೆಯೋ
ಎಂತೆಂಥ ಪ್ರದೇಶಗಳ ಪ್ರವೇಶಿಸಿ ಬಂದಿದೆಯೋ
ಎಂತೆಂಥವರು ಹಿಡಿದು ಮುದ್ದಿಸಿದ್ದಾರೋ
ಎಲ್ಲಿ ಸೋಂಕಿತರು ಎಲ್ಲಿ ಶಂಕಿತರು ಎಲ್ಲಿ ಗುಣಮುಖರು
ಎಲ್ಲರನ್ನೂ ಎಲ್ಲದನ್ನೂ ಶಂಕೆಯಿಂದಲೇ
ನೋಡುವಂತಾಗಿರುವ ಜೀವಭಯದ ಈ ದಿನಗಳಲ್ಲಿ
ಇಲ್ಲಾ, ಆ ಬೆಕ್ಕು ಒಳ್ಳೆಯದೇ ಇರಬಹುದು
ದುರುದ್ಧೇಶವೊಂದೂ ಇರಲಾರದು ಅದಕ್ಕೆ
ಸೊಕ್ಕೂ ಇಳಿದಿರಬಹುದು ಹಸಿವಿನ ಈ ಋತುವಿನಲ್ಲಿ
ಆದರೂ ಹಿಡಿ ಅನ್ನವಿಕ್ಕಲು ನಾನು ಮುಂದಾಗಲಿಲ್ಲ ಯಾಕೆ
ಮನೆ ಮಗಳು ಮಡದಿ ಮುಂದಿನ ದಿನಗಳು
ಭೀಕರ ದೃಶ್ಯಗಳೆಲ್ಲ ಕಣ್ಮುಂದೆ ಬಂದು
ಕೈ ನಡುಗಿ ಮನಸು ಹಿಂಜರಿದು ಹೆಜ್ಜೆ ಮುಂದಿಡದೆ
* * *
-ಪಾಪಪ್ರಜ್ಞೆ-
ಹಸಿದು ಬಂದ ಬೆಕ್ಕು ಹಸಿದುಕೊಂಡೇ ಹೊರಗೋಡಿತು
ಹಾಗೆ ಮನೆಬಾಗಿಲಿಗೆ ಬಂದವರಿಗೆ ಇಲ್ಲಾ
ಎನ್ನುವುದು ನಮ್ಮ ಸಂಸ್ಕೃತಿಯಲ್ಲ
ಅಯ್ಯೋ ಸಂಸ್ಕೃತಿ ಗಿಂಸ್ಕೃತಿಗಳ ಮಾತು ಬಿಡಿ ಸ್ವಾಮಿ
ಬದುಕಿಕೊಂಡರೆ ಸಾಕಾಗಿದೆ
ರಸ್ತೆ ತುಂಬಾ ಜನ
ಮುಕ್ತ ಸಂಚಾರ
ಮೈಮೇಲೇ ಎರಗುವ ಮಂದಿ
ಎಲ್ಲರಿಗೂ ಏನೇನೋ ಕಾರ್ಯಕಾರಣ
ಇವರ್ಯಾರನ್ನೂ ಎಂದೂ ತಡೆದಿರಲಿಲ್ಲ ನಾವು
ಈಗ ಏನಿದು ಪಿರಿಪಿರಿ
ನನ್ನ ಪ್ರಕಾರ ಅವರದು ತಪ್ಪು
ಅವರ ಪ್ರಕಾರ ನನ್ನದು ತಪ್ಪು
ಅರೆ, ಆ ಬೆಕ್ಕು ಎಲ್ಲಿ ಹೋಯಿತು
ಬಾಗಿಲಿನಿಂದ ಹೊರಗೋಡಿದ್ದು
ಸಣ್ಣ ಕಿಟಕಿಯಿಂದ ನುಸುಳಿ
ಹಾಗೇ ಕಟಾಂಜನ ಹತ್ತಿ
ಮೆ
ಟ್ಟಿ
ಲಿ
ಳಿ
ದು
ಪ್ಯಾರಾಪಿಟ್ಟಿನ ಪುಟ್ಟ ಕಟ್ಟೆಯಮೇಲೆ
ಹೆ ಜ್ಜೆ ಯ ಮೇ ಲೊಂ ದ್ಹೆ ಜ್ಜೆ ಯ ನಿ ಕ್ಕು ತ
ಮತ್ತೊಂದು ಮನೆಗೆ ಹೋಯಿತೇ
ಅಲ್ಲದಕ್ಕೆ ಆಹಾರ ಸಿಕ್ಕಿತೇ
ಮತ್ತೆ ರಸ್ತೆಗಿಳಿಯಿತೇ
ಈ ಜನಜಂಗುಳಿಯಲ್ಲಿ
ಸಾವಿರ ಕಾಲುಗಳ ನಡುವೆ ಜಾಗ ಮಾಡಿಕೊಂಡು
ನುಸುಳಿ ನುಸುಳಿ ನುಸುಳಿ
ಒಂದು ಮಾಳಬೆಕ್ಕು
ಈಗ ಮತ್ಯಾರದೋ ಮನೆಯೊಳಗೋ
ಅಥವಾ ತಿರುಗಿ ನನ್ನದೇ ಮನೆಯೊಳಗೋ
ಅಥವಾ ನನ್ನ ಮನದೊಳಗೋ
ಟೀವಿಯಲ್ಲಿ ದೃಶ್ಯಗಳು
ಉದ್ದುದ್ದ ಕ್ಯೂ ನಿಂತ ಮಂದಿ
ಅರ್ಧ ಲೀಟರು ಉಚಿತ ಹಾಲಿಗೆ
ಜನಧನ ಖಾತೆಯ ಐನೂರು ರೂಪಾಯಿಗೆ
ತವರಿಗೆ ತೆರಳುವ ಕನಸಿಗೆ
* * *
-ಚಾರಣ-
ಅನಿವಾರ್ಯವಿರಲಿಲ್ಲ
ಅವಶ್ಯಕತೆಯಂತೂ ಅಲ್ಲವೇ ಅಲ್ಲ
ಆದರೂ ನಡೆಯುತ್ತಿದ್ದೆವು ಭಾರಬ್ಯಾಗು ಬೆನ್ನಿಗೇರಿಸಿ
ದಣಿಯಲೆಂದೇ ನಡೆದದ್ದು
ಮಣಿಯಲೆಂದೇ ಬೆಟ್ಟವೇರಿದ್ದು
ಡೆಕತ್ಲಾನಿನಲ್ಲಿ ಕೊಂಡ ಶೂ
ಅಮೆಜಾನಿನಿಂದ ತರಿಸಿದ ಹೈಕಿಂಗ್ ಬ್ಯಾಗ್
ಉಪ್ಪು ಸೇರಿಸಿ ಹುರಿದ ಗೋಡಂಬಿ
ಚಪ್ಪರಿಸಲು ಮತ್ತಷ್ಟು ಕುರುಕಲು ತಿಂಡಿ
ಸುಸ್ತು ಮರೆಸಲು ಜೋಕು ದಂಡಿದಂಡಿ
ಆದರೆ ಒಂದು ಕೊರಗು ಉಳಿದೇ ಹೋಗಿತ್ತು
ಎಡಕುಮರಿಯ ಸುರಂಗಮಾರ್ಗದಲಿ ಹಾಯುವ
ಆ ಹಳಿಗಳ ಮೇಲೊಮ್ಮೆ ನಡೆಯಬೇಕೆಂಬುದು..
ಹಾಗೆಯೇ ದೂಧ್‌ಸಾಗರ್ ಜಲಪಾತವನ್ನು
ಹಳಿಗಳ ಮೇಲೆ ನಡೆದುಹೋಗಿಯೇ ನೋಡಬೇಕೆಂದು
ಇವತ್ತು ಪೇಪರಿನಲ್ಲಿ ಹೆಣಗಳು
ಹಳಿಗಳ ಮೇಲೆ ಮಲಗಿಯೇ ಜೀವ ಬಿಟ್ಟವರು
ಪಕ್ಕದಲ್ಲೊಂದಷ್ಟು ಒಣ ರೊಟ್ಟಿಚೂರು
ಅಲ್ಲಾ ಆ ಬೆಕ್ಕು ಬಯಸಿದ್ದಾದರೂ ಏನನ್ನ
ಒಂದು ಹಿಡಿ ಹಾಲು-ಅನ್ನ
ಇಷ್ಟಕ್ಕೂ ಅದು ಆ ಬೆಕ್ಕಿನ ಹಕ್ಕು:
ಅಷ್ಟೆಲ್ಲ ದಿನ ನನ್ನ ಮಗಳನ್ನು ಆಡಿಸಿದ್ದಕ್ಕೆ
ಮೃದುಮೈಯ ಬೆಚ್ಚನೆ ಸ್ಪರ್ಶ ಕೈಗೊದಗಿಸಿದ್ದಕ್ಕೆ
ಉಗುರಿನಿಂದೊಮ್ಮೆಯೂ ಪರಚದೆ ಬಿಟ್ಟಿದ್ದಕ್ಕೆ
ಏ ಸಾಕು ಬಿಡಿ ಗುರುಗಳೇ
ಅಷ್ಟೆಲ್ಲ ತಲೆಬಿಸಿ ಮಾಡ್ಕೊಂಡ್ರೆ ಹ್ಯಾಗೆ
ಉಂಡಾಡಿ ಜೀವ, ನಮ್ಮನೇಲಿಲ್ದಿದ್ರೆ ಮತ್ತೊಂದ್ಮನೆ
ಹಿಂಗೇ ಮುಂದುವರೆದ್ರೆ ನಮ್ ಲೈಫೂ ಕಷ್ಟಾನೇ ಇದೆ
ನಾವು ಯಾರ ಮನೆ ಬಾಗಿಲಿಗೆ ಹೋಗೋಣ
ತಳುಕು ಹಾಕ್ಬೇಡಿ ಹಾಗೆಲ್ಲ ಯಾವುದನ್ನು ಯಾವುದಕ್ಕೋ
* * *
-ಪ್ರಾರ್ಥನೆ-
ಇಂದಿನಿಂದ ದೇವಾಲಯಗಳಲ್ಲಿ ಆನ್‌ಲೈನ್ ದರ್ಶನ
ಅವರವರ ಮನೆಯಿಂದಲೆ ನೈವೇದ್ಯ
ಯುಪಿಐ ಮೂಲಕ ಕಾಣಿಕೆ
ಕೊರಿಯರಿನಲ್ಲಿ ಪ್ರಸಾದ
ಮೃಗಖಗಾದಿಗಳಿಗೆಲ್ಲ ಅಲ್ಲಲ್ಲೆ ಆಹಾರವಿತ್ತ
ಕಾಗಿನೆಲೆಯಾದಿಕೇಶವರಾಯನೇ,
ಇದನೆಲ್ಲ ಬೇಗ ಮುಗಿಸು
ಆ ಬೆಕ್ಕು ಹಸಿವಿನಿಂದ ಕಂಗೆಡದಿರಲಿ
ಕಳುಹಿಸಿಕೊಡು ಶ್ರಮಿಕ ಎಕ್ಸ್‌ಪ್ರೆಸ್ಸಿನಲ್ಲಿ ಹೇಗಾದರೂ
ಕೊನೆಗೊಳಿಸು ಈ ಶಂಕಾಪ್ರವೃತ್ತಿಯ ನನ್ನಿಂದ
ಹಾರ್ದಿಕ ನಗುವ ಮರಳಿಸು ಎದೆಯೊಳಗೆ
ಹಂಚಿ ತಿನಲುಗೊಡು ಸಹಪಂಕ್ತಿಯಲಿ ಕೂತು ಇದ್ದದ್ದ.
Wednesday, April 22, 2020
ಬೇರೆ ವಿಶೇಷಗಳೇ ಇಲ್ಲದ ದಿನಗಳಲ್ಲಿ..
Friday, February 28, 2020
ಮಾರಿಜಾತ್ರೆ ಎಂಬ ಸಂಭ್ರಮ
ಜಾತ್ರೆಗೆ ಇನ್ನೂ ಒಂದು ತಿಂಗಳಿದೆ ಎನ್ನುವಾಗಲೇ ಸಾಗರ ಸಂಭ್ರಮಕ್ಕೆ ಸಿದ್ಧವಾಗುತ್ತದೆ. ಅಂಗಡಿಯವರೆಲ್ಲ ತಮ್ಮ ಸಾಮಗ್ರಿಗಳನ್ನು ಕೆಳಗಿಳಿಸಿ, ಅರೆಗಳನ್ನು ಸ್ವಚ್ಛಗೊಳಿಸಿ, ಧೂಳು ಕೂತ ಫ್ಯಾನಿನ ಪಂಕಗಳನ್ನು ಒರೆಸಿ, ಗಾಜಿನ ಬಾಟಲಿಗಳನ್ನು ತೊಳೆದೊಣಗಿಸಿ, ಬಣ್ಣ ಹೋದ ಗೋಡೆಗಳಿಗೆ ತೇಪೆ ಹಚ್ಚಿ ಸಿಂಗರಿಸುತ್ತಾರೆ. ಮುನಿಸಿಪಾಲಿಟಿಯವರೂ ಎಚ್ಚರಗೊಂಡು ಕಿತ್ತುಹೋದ ಟಾರು ರಸ್ತೆಗಳನ್ನು ಮುಚ್ಚಿ ಸಪಾಟು ಮಾಡುತ್ತಾರೆ. ಮಾರಿಗುಡಿಯ ಅರ್ಚಕರು ಹೊಸ ಮಡಿ ಕೊಳ್ಳುತ್ತಾರೆ. ಅಕ್ಕಪಕ್ಕದ ಗ್ರಂಥಿಕೆ ಅಂಗಡಿಗಳಲ್ಲಿ ತೆಂಗಿನಕಾಯಿ, ಅರಿಶಿಣ-ಕುಂಕುಮ, ಅಗರಬತ್ತಿ-ಕರ್ಪೂರಗಳ ದಾಸ್ತಾನು ಜಾಸ್ತಿಯಾಗುತ್ತದೆ. ಬರುವ ವಾಹನಗಳನ್ನೂ-ಜನಗಳನ್ನೂ ಹೇಗೆ ಸಂಬಾಳಿಸಬೇಕು, ಎಲ್ಲೆಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕು, ಎಲ್ಲೆಲ್ಲಿ ಬ್ಯಾರಿಕೇಡ್ ಹಾಕಬೇಕು ಎಂಬುದಾಗಿ ಪೋಲೀಸರು ತಾಲೀಮು ನಡೆಸುತ್ತಾರೆ. "ಈ ಸಲದ ಜಾತ್ರೆಯಲ್ಲಿ ಒಂದು ದೋಸೆ ಕೌಂಟರ್ ಮಾಡ್ಲೇಬೇಕು" ಅಂತ ಪ್ಲಾನ್ ಮಾಡಿರುವ ಶ್ರೀಧರನಾಯ್ಕ, ಸ್ಟಾಲ್ ಇಡಲು ಬಾಡಿಗೆ ಎಷ್ಟು ಅಂತ ಅವರಿವರನ್ನು ವಿಚಾರಿಸುತ್ತಾನೆ. ಈಗಾಗಲೇ ರಚನೆಯಾಗಿರುವ ಜಾತ್ರಾ ಕಮಿಟಿಯಲ್ಲಿ, ಮಾಡಬೇಕಿರುವ ವ್ಯವಸ್ಥೆಗಳ ಬಗ್ಗೆ, ರಥೋತ್ಸವದ ಸಿದ್ಧತೆಯ ಬಗ್ಗೆ ಚರ್ಚೆ ನಡೆಯುತ್ತದೆ.
ಶಾಲಾಪರೀಕ್ಷೆಗಳಿಗೆ ಇನ್ನೊಂದು ತಿಂಗಳು ಇದೆ ಎನ್ನುವಾಗ ಬರುತ್ತದೆ ಜಾತ್ರೆ. ಒಂದು ಕಡೆ ಪರೀಕ್ಷೆಗೆ ಓದಿಕೊಳ್ಳಬೇಕಾದ ಅನಿವಾರ್ಯತೆ, ಇನ್ನೊಂದು ಕಡೆ ಜಾತ್ರೆಗೆ ತಪ್ಪಿಸಲಾಗದ ಇಕ್ಕಟ್ಟು. ಗೆಳೆಯರೆಲ್ಲ ಸೇರಿ ಶನಿವಾರ ಸಂಜೆ ಹೋಗುವುದು ಅಂತ ತೀರ್ಮಾನವಾಗಿದೆ. ಅಪ್ಪ-ಅಮ್ಮರ ಬಳಿ ದುಂಬಾಲು ಬಿದ್ದು ಹತ್ತತ್ತು ರೂಪಾಯಿಯಂತೆ ಹಣ ಸಂಗ್ರಹ ಈಗಿನಿಂದಲೇ ಶುರುವಾಗಿದೆ. ಕೊನೇ ಘಳಿಗೆಯಲ್ಲಿ ಅಜ್ಜನ ಬಳಿ ಕೇಳಿದರೆ ಐವತ್ತು ರೂಪಾಯಿಯಾದರೂ ಕೊಡದೇ ಇರನು. ತೊಟ್ಟಿಲಿಗೆ ಮೂವತ್ತು, ದೋಣಿಗೆ ಇಪ್ಪತ್ತು, ಮೃತ್ಯುಕೂಪಕ್ಕೆ ಹದಿನೈದು, ಐಸ್‌ಕ್ರೀಮು-ಮಸಾಲ ಮಂಡಕ್ಕಿ-ಬತ್ತಾಸು ತಿನ್ನಲು ಇಂತಿಷ್ಟು, ನಾಟಕ ನೋಡಲು ಎಷ್ಟಿದೆಯೋ.. ಎಲ್ಲಾ ಅಂದಾಜು ಮಾಡಿ ಲೆಕ್ಕ ಹಾಕಿ, ಹಣ ಉಳಿದರೆ ಇನ್ನೊಂದು ರೌಂಡು ಪೇಟೆ ಸುತ್ತಲಾದೀತೇ ಎಂಬ ಯೋಚನೆಯೂ ಇದೆ. ಅಂಗಡಿಯಿಂದ ಸಾಮಾನು ತರಲು ಹೋದ ಪುಟ್ಟಪೋರ, ಅಮ್ಮನಿಗೆ ಸುಳ್ಳು ಲೆಕ್ಕ ತೋರಿಸಿ ಹತ್ತು ರೂಪಾಯಿ ಉಳಿಸಿದ್ದಾನೆ ಜಾತ್ರೆಯಲ್ಲಿ ಕೋನ್ ಐಸ್‌ಕ್ರೀಮ್ ಕೊಳ್ಳಲು.
ಅಂತೂ ಎಲ್ಲರೂ ಕಾಯುತ್ತಿದ್ದ ಆ ದಿನ ಬಂದೇಬಿಟ್ಟಿತು. ಜಾತ್ರೆ ನಾಳೆಯೆಂದರೆ, ಇವನಿಗೆ ಹಿಂದಿನ ರಾತ್ರಿಯಿಂದಲೇ ತವಕ. ನಾಳೆ ಏನೆಲ್ಲ ಮಾಡಬಹುದೆಂಬ ಕಲ್ಪನೆಯಲ್ಲಿ ರಾತ್ರಿಯಿಡೀ ನಿದ್ರೆಯಿಲ್ಲ. ಹೌದೂ, ಇಷ್ಟಕ್ಕೂ ಅವಳು ಬರಬಹುದಾ? ತಿಂಗಳ ಹಿಂದೆ ಸಿಕ್ಕಿದ್ದಳು. ಕೇಳಿದರೆ, ಬಟ್ಟಲುಗಂಗಳ ಮಿಟುಕಿಸುತ್ತ, "ಅಮ್ಮ ಹೋಗು ಅಂದ್ರೆ ಬರ್ತೀನಿ" ಅಂದಿದ್ಲು ನಾಚುತ್ತಾ. ಬಂದರೆ ಆ ನೂಕುನುಗ್ಗಲಿನಲ್ಲಿ ಸಿಗುತ್ತಾಳೋ ಇಲ್ಲವೋ? ಸಿಕ್ಕರೆ ಎಷ್ಟು ಚಂದ.. ಜಾತ್ರೆಪೇಟೆಯ ಜಂಗುಳಿಯಲ್ಲಿ ಕೈಕೈ ಹಿಡಿದು ನಡೆಯಬಹುದು. ತೊಟ್ಟಿಲಿನ ಗೂಡಿನಲ್ಲಿ ಇಬ್ಬರೇ ಕೂತು ಆಕಾಶಕ್ಕೇರಬಹುದು. ತೊಟ್ಟಿಲು ಧಿಗ್ಗನೆ ಕೆಳಗಿಳಿಯುವಾಗ, ಅವಳೆದೆ ಢವಗುಟ್ಟುವಾಗ, ಕೈಯದುಮಿ ಬೆಚ್ಚಗೆ ಧೈರ್ಯ ತುಂಬಬಹುದು. ಗೂಡಂಗಡಿಯಲ್ಲಿ ಅವಳಿಷ್ಟದ ಬಣ್ಣದ ಬಳೆ ಕೊಡಿಸಿ, ನೋಯುವ ಕೈ ಲೆಕ್ಕಿಸದೆ ಬಳೆಗಾರ ಬಳೆ ಅವಳಿಗೆ ತೊಡಿಸುವಾಗ, ಸಣ್ಣ ಕಣ್ಣೀರ ಹನಿಯಲ್ಲಿ ಜತೆಯಾಗಬಹುದು. ಬಂಗಾರಬಣ್ಣದ ಕಿವಿಯೋಲೆಯನ್ನವಳು ಆಸೆ ಪಟ್ಟು ಕೊಂಡಾಗ ನಾನೇ ಹಣ ಕೊಟ್ಟು ಯಜಮಾನನಂತೆ ಮೆರೆಯಬಹುದು. ಆ ರಾತ್ರಿ ಸುದೀರ್ಘವೆನಿಸುತ್ತದೆ.
ಬೆಳಿಗ್ಗೆ ಎದ್ದು ತಯಾರಾಗಿ ಹೊರಟರೆ ಬಸ್ಸುಗಳೆಲ್ಲ ತುಂಬಿ ತುಳುಕುತ್ತಿವೆ. ಟಾಪಿನಲ್ಲೂ ಜನ! ಹೊಸದಾಗಿ ಹತ್ತು 'ಜಾತ್ರಾ ವಿಶೇಷ' ಬಸ್ಸುಗಳನ್ನು ಬಿಟ್ಟಿದ್ದರೂ ಎಲ್ಲ ಬಸ್ಸುಗಳೂ ರಶ್ಶು. ಜತೆಗೆ ಒಂದರ ಹಿಂದೆ ಒಂದರಂತೆ ಹೋಗುತ್ತಿರುವ ಬೈಕುಗಳು. ಪಕ್ಕದೂರಿನ ಗೋಪಾಲ ಪೂಜಾರಿಯಂತೂ ತನ್ನ ಟ್ರಾಕ್ಟರಿನಲ್ಲಿ ಊರವರನ್ನೆಲ್ಲ ಕೂರಿಸಿಕೊಂಡು ಹೊರಟಿದ್ದಾನೆ. ಅಲ್ಲದೇ ಆ ಟ್ರಾಕ್ಟರಿನ ಇಕ್ಕೆಲಕ್ಕೂ ಬಾಳೆಕಂದಿನ ಸಿಂಗಾರ ಬೇರೆ! ಬಸ್‌ಸ್ಟಾಂಡಿನಲ್ಲಿ ನಿಂತವರಿಗೆ ಕೈ ಮಾಡುತ್ತ ಅವರೆಲ್ಲ ‘ಹೋ!’ ಎಂದು ಕೂಗುತ್ತಿದ್ದಾರೆ. ಅಂತೂ ಗುದ್ದಾಡಿಕೊಂಡು ಸಾಗರ ತಲುಪಿದ್ದಾಗಿದೆ.
ಜಾತ್ರೆಪೇಟೆಗೆ ಬಂದು ನೋಡಿದರೆ, ನಿಲ್ಲಲೆಲ್ಲಿ ಜಾಗವಿದೆ! ಸಾಗರದ ತುಂಬ ಜನಸಾಗರ! ಎಲ್ಲರೂ ತಳ್ಳಿಕೊಂಡು ಹೋಗುವವರೇ. ರಸ್ತೆಯ ಎರಡೂ ಬದಿಗೆ ಸಾಲು ಸಾಲು ಅಂಗಡಿಗಳು. ಎಲ್ಲೆಲ್ಲೂ ಝಗಮಗ ದೀಪಗಳು. ಮಕ್ಕಳ ಆಟಿಕೆಗಳ ಅಂಗಡಿಗಳು, ಅಲಂಕಾರಿಕ ವಸ್ತುಗಳ ದುಖಾನುಗಳು, ಪ್ಲಾಸ್ಟಿಕ್ ವಸ್ತುಗಳ ಮಳಿಗೆಗಳು, ತಿಂಡಿ-ತಿನಿಸುಗಳ ಮುಂಗಟ್ಟುಗಳು, ಅಲ್ಲಲ್ಲಿ ಉಚಿತ ನೀರು-ಮಜ್ಜಿಗೆ ಹಂಚುವ ಕಾರ್ಯಕರ್ತರು... ಓಹೋಹೋ! ಎಲ್ಲಿ ನೋಡಿದರೂ ಜನ ಎಲ್ಲಿ ನೋಡಿದರೂ ಜಂಗುಳಿ. ಕಿವಿಗಡಚಿಕ್ಕುವ ಪೀಪಿಯ ಶಬ್ದ. ಯಾರೋ ನೆಂಟರು ಸಿಕ್ಕರು ಅಂತ ಅಲ್ಲೇ ಮಾತಾಡಿಸುತ್ತ ನಿಂತವರು, ಎರಡು ಬಕೆಟ್ಟು ನೂರು ರೂಪಾಯಿಗೆ ಕೊಡಿ ಅಂತ ಅಂಗಡಿಯವನ ಬಳಿ ಬಗ್ಗಿ ಚೌಕಾಶಿ ಮಾಡುತ್ತಿರುವವರು, ಮಿರ್ಚಿ ತಿಂದು ಖಾರ ನೆತ್ತಿಗೇರಿ ಚಹಾ ಕುಡಿಯುತ್ತಿರುವವರು, ಹಾಕಿಸಿಕೊಂಡಿದ್ದ ತೆಳು ಕವರು ಒಡೆದು ಬೀದಿ ತುಂಬ ಮಂಡಕ್ಕಿ ಚೆಲ್ಲಿಕೊಂಡು ತಬ್ಬಿಬ್ಬಾದವರು.. ಒಬ್ಬರೇ ಇಬ್ಬರೇ! ಇವರೆಲ್ಲರ ನಡುವೆಯೇ ತೂರಿಕೊಂಡು ಹೋಗಬೇಕಿದೆ ನಾವೂ.
ಮಾರಿಕಾಂಬಾ ದೇವಸ್ಥಾನದ ಎದುರು ಸಾವಿರ ಜನಗಳ ಕ್ಯೂ ಇದೆ. ದೊಡ್ಡ ಪೆಂಡಾಲಿನ ಕೆಳಗೆ ನಿಂತ ಎಲ್ಲರ ಕೈಯಲ್ಲೂ ಹಣ್ಣು-ಕಾಯಿಯ ಕೈಚೀಲ. ಮೈತುಂಬ ಭಕ್ತಿ. ಎಲ್ಲರಿಗೂ ಅಮ್ಮನ ಕೆಂಪು ಮೊಗವ ಕಣ್ತುಂಬಿಕೊಂಡು ಕೈ ಮುಗಿದು ಬರುವ ತವಕ. ಮನೆಯಲ್ಲಿ ಯಾರಿಗೂ ಖಾಯಿಲೆ-ಕಸಾಲೆ ಬರದಂತೆ ಕಾಪಾಡಮ್ಮಾ ಅಂತ ಬೇಡಿಕೊಂಡು, ಕೈಲಾದಷ್ಟು ಕಾಣಿಕೆ ಹಾಕಬೇಕಿದೆ. ಪ್ರಸಾದದ ಹೂವನ್ನು ತಲೆಮೇಲೆ ಹಾಕಿಕೊಂಡು ಧನ್ಯತೆಯನ್ನನುಭವಿಸಬೇಕಿದೆ.
ಆಮೇಲೆ ಜಾತ್ರೆಬೀದಿಯ ಸುತ್ತುವುದು ಇದ್ದಿದ್ದೇ. ಒಂದು ಜಾತ್ರೆಯಲ್ಲಿ ಅದೆಷ್ಟು ಬಣ್ಣದ ಬಳೆಗಳು, ಎಷ್ಟು ವಿಧದ ಟಿಂಟಿಣಿ ಹೊಮ್ಮಿಸುವ ಗಿಲಗಿಚ್ಚಿಗಳು, ಎಷ್ಟು ಆಕಾರ ತಳೆವ ಬಾಂಬೆ ಮಿಠಾಯಿಗಳು, ಎಷ್ಟು ಚುಕ್ಕಿ ಎಷ್ಟು ಬಳ್ಳಿಗಳ ರಂಗೋಲಿಯಚ್ಚುಗಳು.. ಅಮ್ಮನ ಒರಟು ಕೈ ಸೇರಲೆಂದೇ ಕಾಯುತ್ತಿರುವ ಹಸಿರು ಬಳೆಗಳು, ಅಜ್ಜನ ಚಳಿಗಾಗಲು ತಯಾರಿರುವ ಕೆಂಪು ಮಂಕಿಕ್ಯಾಪು, ತಂಗಿ ವರ್ಷಗಳಿಂದ ಹುಡುಕುತ್ತಿದ್ದ ನವಿಲಿನ ಚಿತ್ರದ ಕ್ಲಿಪ್ಪು, ಅಕ್ಕನ ಮಗನಿಗೆ ಆಡಲು ಜೆಸಿಬಿ, ಹಟ ಮಾಡಿದ ಅವನ ಅಣ್ಣನಿಗೆ ಕೆಂಪು ದೀಪದ ಕೊಂಬುಗಳು.. ಆದರೆ ಅದ್ಯಾಕೋ ಅಪ್ಪ ಮಾತ್ರ ಏನನ್ನೂ ಕೊಳ್ಳುವುದೇ ಇಲ್ಲ ಜಾತ್ರೆಯಲ್ಲಿ. ಇಂತವನ್ನೆಲ್ಲ ಎಷ್ಟೋ ನೋಡಿದವನಂತೆ, ತಾನು ಇದನ್ನೆಲ್ಲ ಮೀರಿದವನಂತೆ, ಗಂಭೀರವಾಗಿ ಎಲ್ಲರನ್ನೂ ಕರೆದುಕೊಂಡು ಜಾತ್ರೆಬೀದಿ ಸುತ್ತುತ್ತಿದ್ದಾನೆ.
ಅತ್ತ ನೆಹರು ಮೈದಾನದಲ್ಲಿ ಅಷ್ಟೆತ್ತರದಲ್ಲಿ ಸುತ್ತುತ್ತಿರುವ ಜಿಯಾಂಟ್ ವೀಲು ಎಲ್ಲರನ್ನೂ ಕರೆಯುತ್ತಿದೆ. "ನಾನು ಹತ್ತೋದಿಲ್ಲ, ನಂಗೆ ತಲೆ ತಿರುಗುತ್ತೆ" ಅಂದ ಹೆಂಡತಿಯನ್ನೂ ಬಿಡದೇ ಎಳಕೊಂಡು ಹೋಗಿದ್ದಾನೆ ಹೊಸಬಿಸಿಯ ಗಂಡ. ಅತ್ತಿತ್ತ ತೂಗುತ್ತಿರುವ ದೋಣಿಯಲ್ಲಿ ಜನಗಳ ಕೇಕೆ. ಕೆಲವರಿಗೆ ಟೊರಾಟೊರಾವನ್ನು ಹತ್ತಿ ಒಂದು ಕೈ ನೋಡಿಯೇಬಿಡುವ ತಲುಬಾದರೆ, ಇನ್ನು ಕೆಲವರಿಗೆ ಆಟವಾಡುತ್ತಿರುವ ತಮ್ಮ ಮಕ್ಕಳನ್ನು ದೂರದಲ್ಲಿ ನಿಂತು ನೋಡುವುದರಲ್ಲೇ ಖುಷಿ. ಮೃತ್ಯುಕೂಪದಲ್ಲಿ ಜೀವದ ಹಂಗು ತೊರೆದು ಕೈ ಬಿಟ್ಟು ಬೈಕು ಓಡಿಸುವವರನ್ನು ನೋಡಿ ಹಲವರು ಬೆರಗಾದರೆ, ಮಿನಿ ಸರ್ಕಸ್ಸಿನಲ್ಲಿ ಹಗ್ಗ ಹಿಡಿದು ತೇಲುವ ನೀಳಕಾಯದ ಬೆಡಗಿಯರ ನೋಡಿ ಹಲವರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಶಂಕರ ಭಟ್ಟರು ಇಪ್ಪತ್ತು ರೂಪಾಯಿ ಖರ್ಚು ಮಾಡಿ ರಿಂಗ್ ಎಸೆದು ಒಂದು ಸೋಪಿನ ಡಬ್ಬಿ ಗೆದ್ದು ಸಾಧನೆ ಮಾಡಿದ್ದಾರೆ. ಮಾಯಾಕನ್ನಡಿಯೆದುರು ನಿಂತು ತನ್ನದೇ ಕುಬ್ಜರೂಪ ನೋಡಿ ಪಕ್ಕದ ಮನೆ ರಾಧಕ್ಕ ಬಿದ್ದುಬಿದ್ದು ನಕ್ಕಿದ್ದಾಳೆ. ಕೊಂಡ ಬಲೂನನ್ನು ಹತ್ತು ನಿಮಿಷದೊಳಗೆ ಒಡೆದುಕೊಂಡದ್ದಕ್ಕೆ ಪುಟ್ಟ ಅಮ್ಮನಿಂದ ಸರಿಯಾಗಿ ಬೈಸಿಕೊಂಡಿದ್ದಾನೆ.
ಕತ್ತಲಾದಂತೆ ಜಂಗುಳಿ ಇನ್ನಷ್ಟು ಜಾಸ್ತಿಯಾಗಿದೆ. ಈಗಷ್ಟೆ ಬಂದ ಕೆಲವರಿಗೆ ಜಾತ್ರೆಯನ್ನೆಲ್ಲ ನೋಡಿ ಮುಗಿಸಬೇಕಿರುವ ತರಾತುರಿಯಾದರೆ, ಮಧ್ಯಾಹ್ನವೇ ಬಂದವರಿಗೆ ಊರಿಗೆ ಹೊರಡುವ ಗಡಿಬಿಡಿ. ಆ ನೂಕಿನಲ್ಲಿ ಪಿಕ್‌ಪಾಕೆಟ್ ಮಾಡುವವರಿಂದ ಪರ್ಸು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವವರು, ಮಕ್ಕಳು ತಪ್ಪಿಸಿಕೊಂಡು ಹೋಗದಂತೆ ಗಟ್ಟಿಯಾಗಿ ಅವರ ಕೈ ಹಿಡಕೊಂಡವರು, ಇಂಥಲ್ಲಿ ಸಿಗುತ್ತೇನೆಂದು ಹೇಳಿದವರ ಕಾಯುತ್ತ ನಿಂತವರು, ರಾತ್ರಿಯ ನಾಟಕ ಶುರುವಾಗಲು ಇನ್ನೂ ಸಮಯವಿದೆಯೆಂದು ಸುಮ್ಮನೆ ಕಟ್ಟೆಯ ಮೇಲೆ ಕೂತವರು.. ಹೀಗೆ ಕಾವಳಕ್ಕೆ ಇನ್ನಷ್ಟು ಮೆರುಗು ನೀಡುತ್ತ ಜಾತ್ರೆಬೀದಿ ಜನಗಳನ್ನು ಪೊರೆಯುತ್ತಿದೆ. ಸಾವಿರ ದೀಪಗಳಿಂದ ಇರುಳನ್ನು ಬೆಳಗುತ್ತಿದೆ. ನಡುರಾತ್ರಿಯಾದರೂ ತೆರೆದಿರುವ ಅಂಗಡಿಗಳು, ಕಾವಲಿಯ ಮೇಲೆ ಸೃಷ್ಟಿಯಾಗುತ್ತಿರುವ ನೂರು ವಿಧದ ದೋಸೆಗಳ ವೃತ್ತಗಳು, ಬೆಂಡು-ಬತ್ತಾಸು ಕಟ್ಟಿಸಿಕೊಳ್ಳಲು ಮುಗಿಬಿದ್ದಿರುವ ಜನಗಳು, ಮ್ಯಾಜಿಕ್ ಶೋ ನೋಡಿ ತಲೆದೂಗುತ್ತ ಹೊರಬರುತ್ತಿರುವವರು... ಭಕ್ತಿ ಖುಷಿ ಉನ್ಮಾದ ಆತಂಕ ಎಲ್ಲವೂ ತುಂಬಿರುವ ಜಾತ್ರೆ ನಸುಕಿನವರೆಗೂ ಎಚ್ಚರಿರುತ್ತದೆ ಕಣ್ಣು ಸಹ ಮುಚ್ಚೊಡೆಯದೆ.
ಅಷ್ಟು ಸಂಭ್ರಮದ, ಅಂತಹ ಸಡಗರದ, ಆ ಪರಿ ಗದ್ದಲದ, ಎಷ್ಟೋ ದಿನಗಳ ಕಾತರದ, ಲಕ್ಷ ಲಕ್ಷ ಜನಗಳು ಪಾಲ್ಗೊಂಡ ಜಾತ್ರೆ ಎಂಟು ದಿನಗಳಲ್ಲಿ ಮುಗಿಯುತ್ತದೆ. ಜಾತ್ರೆ ಮುಗಿದಮೇಲೂ ಒಂದಷ್ಟು ದಿನ ಬೀದಿಬದಿಯ ಅಂಗಡಿಗಳು ಹಾಗೆಯೇ ಇರುತ್ತವೆ. ಈಗ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ ಎಂದು ಕೊಳ್ಳಲು ಕೆಲವರು ಪೇಟೆಗೆ ಬರುವರು. ಮೈದಾನದಲ್ಲಿನ ಮನರಂಜನಾ ಆಟಗಳು ಇನ್ನೂ ಇವೆ. ತೊಟ್ಟಿಲು ಇನ್ನೂ ತಿರುಗುತ್ತಿದೆ. ಕಾಲೇಜು ಹುಡುಗರು ಕ್ಲಾಸು ಬಂಕ್ ಮಾಡಿ ಬಿರುಬಿಸಿಲ ಮಧ್ಯಾಹ್ನವೇ ತೊಟ್ಟಿಲು ಹತ್ತಿ ಕುಣಿಯುತ್ತಿದ್ದಾರೆ. ಅತ್ತ ಅಗ್ಗಕ್ಕೆ ಸಿಕ್ಕಿತು ಅಂತ ತಂದುಕೊಂಡ ಬಕೇಟಿನ ಹಿಡಿಕೈ ಎರಡೇ ದಿನಕ್ಕೆ ಮುರಿದು ಮನೆಯೊಡತಿ ಪೆಚ್ಚುಮೋರೆ ಹಾಕಿಕೊಂಡಿದ್ದಾಳೆ. ಜಾತ್ರೆಯಿಂದ ತಂದಿದ್ದ ಆಟದ ಸಾಮಾನು ವಾರದೊಳಗೆ ಬೇಸರ ಬಂದು ಹುಡುಗರು ಕ್ರಿಕೆಟ್ಟು-ವೀಡಿಯೋ ಗೇಮುಗಳಿಗೆ ಮರಳಿದ್ದಾರೆ.
ಜಾತ್ರೆ ಮುಗಿದ ಬೀದಿಯಲ್ಲೀಗ ಮೌನ. ವ್ಯಾಪಾರಿಗಳೆಲ್ಲ ತಮ್ಮ ಗುಡಾರದೊಂದಿಗೆ ಗದ್ದಲವನ್ನೂ ಬಳುಗಿ ಕೊಂಡೊಯ್ದರೋ ಎನ್ನುವಂತೆ. ಜಾತ್ರೆ ನಡೆದಿತ್ತೆಂಬುದಕ್ಕೆ ಕುರುಹಾಗಿ ಬೀದಿಯ ತುಂಬ ಕಸ. ಅಂಗಡಿಯವರು ಮಳಿಗೆ ಹಾಕಲು ತೋಡಿದ ಸಣ್ಣ ಗುಂಡಿಗಳು, ಪಕ್ಕದಲ್ಲೆದ್ದ ಮಣ್ಣ ಹೆಂಟೆ. ಮಾರಮ್ಮನೂ ದೈನಿಕದ ಮಂಗಳರಾತಿಗೆ ನಿಧಾನಕ್ಕೆ ಒಗ್ಗಿಕೊಳ್ಳುತ್ತಿದ್ದಾಳೆ. ಅವಳ ಗುಡಿಯೆದುರು ಹಾಕಿದ್ದ ಶಾಮಿಯಾನಾ ಈಗ ತೆರವಾಗಿ ಬೀದಿಗೆ ಬಿಸಿಲು ರಾಚುತ್ತಿದೆ. ವಾಹನಗಳು ಯಾವಾಗಿನಂತೆ ರಸ್ತೆಯಲ್ಲಿ ಓಡಾಡತೊಡಗಿವೆ. ಪೇಟೆ ಮೈಮುರಿದುಕೊಂಡು ಮತ್ತೆ ನಿತ್ಯವ್ಯಾಪಾರಕ್ಕೆ ತೆರೆದುಕೊಂಡಿದೆ. ಹಕ್ಕಿಗಳು ಮರಗಳಿಗೆ ಮರಳಿವೆ. ಜಾತ್ರೆಗೆ ಸಂಭ್ರಮವನ್ನು ಹೊತ್ತುತಂದಿದ್ದ ವ್ಯಾಪಾರಿಗಳೆಲ್ಲ ಈಗ ಮತ್ತಾವುದೋ ಊರಿನಲ್ಲಿ ಡೇರೆ ಹಾಕಿದ್ದಾರೆ. ಅವರು ಮತ್ತೆ ಯಾವಾಗ ಬರುವರೋ, ಎಷ್ಟು ಬೇಗ ಮೂರು ವರ್ಷ ಕಳೆವುದೋ ಎಂದು ಸಾಗರ ಕಾಯುತ್ತದೆ.