Thursday, November 22, 2007

ಸಿಡಿಯಲಿರುವ ಪಟಾಕಿ

ಅಪ್ಪ ಪ್ರತಿ ಕವಳವನ್ನೂ ತುಂಬಾ ಅಚ್ಚುಕಟ್ಟಾಗಿ, ಕ್ರಮಬದ್ಧವಾಗಿ ಹಾಕುತ್ತಿದ್ದ. ಅದು ಅವನ ಬಾಯಲ್ಲಿರುವುದು ಐದೇ ನಿಮಿಷವಿರಬಹುದು, ಆದರೆ ಮೊದಲು ಒಂದಿಡೀ ಕೆಂಪಡಿಕೆ ಕತ್ತರಿಸಿ ನಾಲ್ಕು ಹೋಳು ಮಾಡಿ ಬಾಯಿಗೆ ಹಾಕಿಕೊಂಡು, ಅದು ಹಲ್ಲ ಮಿಕ್ಸರಿಗೆ ಸಿಕ್ಕು ನಲವತ್ನಾಲ್ಕು ಹೋಳಾಗಿ, ನಂತರ ಲೆಕ್ಕಕ್ಕೇ ಸಿಗದಷ್ಟು ಸಂಖ್ಯೆಯಲ್ಲಿ ಪುಡಿಪುಡಿಯಾಗುತ್ತಿರುವಾಗ ಅಪ್ಪ ಒಂದು ಸುಂದರ ಅಂಬಡೆ ಎಲೆಯ ತೊಟ್ಟು ಮುರಿದು, ನಂತರ ಅದರ ಕೆಳತುದಿಯನ್ನು ಮುರಿದು ತಲೆ ಮೇಲೆಸೆದುಕೊಂಡು, ಎಲೆಯ ಹಿಂಬದಿಯ ದಪ್ಪ ಗೀರುಗಳನ್ನು ನಾಜೂಕಾಗಿ ಚರ್ಮದಂತೆ ಬಿಡಿಸಿ ಎಳೆದು ತೆಗೆದು, ನಂತರ ಸುಣ್ಣದ ಕರಡಿಗೆಯಿಂದ ಸುಣ್ಣ ತೆಗೆದು ಎಲೆಯ ಬೆನ್ನಿಗೆ ನೀಟಾಗಿ ಸವರಿ, ಸಾಲಂಕೃತ ಎಲೆಯನ್ನು ಮಡಿಚಿ ಮಡಿಚಿ ಮಡಿಚಿ ಬಾಯಿಗಿಟ್ಟುಕೊಳ್ಳುತ್ತಿದ್ದ. ಅಡಿಕೆಯ ಕೆಂಪು ರಸ ತುಂಬಿದ್ದ ಬಾಯೊಳಗೆ ಈ ಅಂಬಡೆ ಎಲೆ ತನ್ನ ಹಸಿರು ಕಂಪಿನೊಂದಿಗೆ ಬೆರೆತು ಸಾಮ್ರಾಜ್ಯ ಸ್ಥಾಪಿಸುವ ವೇಳೆಯಲ್ಲಿ ಅಪ್ಪ ಕಪ್ಪು ತಂಬಾಕಿನ ಎಸಳಿನಿಂದ ಚೂರೇ ಚೂರನ್ನು ಚಿವುಟಿ ಮುರಿದು, ಅದನ್ನು ಅಂಗೈಯಲ್ಲಿ ಸ್ವಲ್ಪ ಸುಣ್ಣದೊಂದಿಗೆ ತಿಕ್ಕಿ ಸಣ್ಣ ಉಂಡೆ ಮಾಡಿ ಬಾಯಿಗೆಸೆದುಕೊಳ್ಳುತ್ತಿದ್ದ. ಅಪ್ಪನ ಈ ಕವಳ ತಯಾರಿಕಾ ಕ್ರಮವನ್ನೂ, ನಂತರ ಆ ಕವಳ ಅಪ್ಪನನ್ನು ಅನಿರ್ವಚನೀಯ ಬ್ರಹ್ಮಾನಂದದಲ್ಲಿ ಐದಾರು ನಿಮಿಷಗಳ ಕಾಲ ತೇಲಿಸುತ್ತಿದ್ದ ವಿಸ್ಮಯವನ್ನೂ ಕಣ್ಣು ಮಿಟುಕಿಸದೇ ನೋಡುತ್ತಾ ಪಕ್ಕದಲ್ಲಿ ಕೂತಿರುತ್ತಿದ್ದ ನನಗೂ ಅಪ್ಪ ಒಮ್ಮೊಮ್ಮೆ ಪುಟ್ಟ ಸಿಹಿಗವಳ ಮಾಡಿಕೊಡುತ್ತಿದ್ದ. 'ಅವಂಗೆಂತಕೆ ಕವಳ ಮಾಡ್ಕೊಡ್ತಿ? ಕವಳ ಹಾಕಿರೆ ನಾಲ್ಗೆ ದಪ್ಪ ಆಗ್ತು. ಕೊನಿಗೆ ಶಾಲೆಲಿ ಮಗ್ಗಿ ಹೇಳಕ್ಕರೆ ತೊದಲೋ ಹಂಗೆ ಆಗ್ತು ಅಷ್ಟೆ' ಎಂಬ ಅಮ್ಮನ ಅಸಹನೆಯ ಕಿಸಿಮಾತನ್ನು ಅಪ್ಪ ಕವಳ ತುಂಬಿದ ಮುಚ್ಚಿದ ಬಾಯಿಂದಲೇ, ಅದರಿಂದಲೇ ಮೂಡಿಸುತ್ತಿದ್ದ ಮುಗುಳ್ನಗೆ ಬೆರೆತ ಅನೇಕ ಭಾವಸಂಜ್ಞೆಗಳಿಂದಲೇ ಸಂಭಾಳಿಸುತ್ತಿದ್ದ. ಅಪ್ಪ ಮಾಡಿಕೊಟ್ಟ ಸಿಹಿಗವಳ ಹದವಾಗಿರುತ್ತಿತ್ತು, ನನ್ನ ಮೈಯನ್ನು ಬಿಸಿ ಬಿಸಿ ಮಾಡುತ್ತಿತ್ತು.

ಅಪ್ಪ ಸದಾ ನನ್ನನ್ನು ಬೆಚ್ಚಗಿಟ್ಟಿರಲು ಪ್ರಯತ್ನಿಸುತ್ತಿದ್ದ. ಅಥವಾ, ಅಪ್ಪನೊಂದಿಗೆ ನಾನಿರುತ್ತಿದ್ದ ಸಂದರ್ಭವೆಲ್ಲ ಬೆಚ್ಚನೆಯ ಹವೆಯೇ ಸುತ್ತ ಇರುತ್ತಿತ್ತು. ಅಪ್ಪ ನನ್ನ ಚಳಿಗೊಂದು ಕೌದಿಯಂತಿದ್ದ.

ಮಲೆನಾಡಿನ - ಹೊಳೆಯಾಚೆಗಿನ ಊರು ನಮ್ಮದು. ದಟ್ಟ ಕಾಡು - ಬೆಟ್ಟಗಳ ನಡುವಿನ, ಎಂಟೇ ಎಂಟು ಮನೆಗಳ ಪುಟ್ಟ ಊರು. ಒಂದು ಮನೆಗೂ ಮತ್ತೊಂದು ಮನೆಗೂ ಕೂಗಳತೆಯ ಅಂತರ. ಸದಾ ಮಳೆ, ಇಲ್ಲವೇ ಇಬ್ಬನಿ, ಅಪರೂಪಕೊಮ್ಮೆ ಉರಿಬಿಸಿಲು. ದೊಡ್ಡ ಭವಂತಿ ಮನೆಯ ಆಚೆ ಕಡೆ ಕೊಟ್ಟಿಗೆ, ಅದರ ಪಕ್ಕದಲ್ಲೇ ಬಚ್ಚಲುಮನೆ, ನಡುವೆ ಹಾವಸೆಗಟ್ಟಿದ - ಜಾರುವ ಅಂಗಳ. ಅಪ್ಪ-ನಾನು ಕವಳದ ತಬಕು, ಚಿಮಣಿ ಬುರುಡೆಯೊಂದಿಗೆ ಬೆಳಗ್ಗೆ ಎದ್ದಕೂಡಲೇ ಬಚ್ಚಲು ಒಲೆಗೆ ಬೆಂಕಿ ಒಟ್ಟಲು ಹೋಗುತ್ತಿದ್ದೆವು. ಒಟ್ಟು ಕುಟುಂಬವೆಂದಮೇಲೆ ಸ್ನಾನಕ್ಕೆ ಎಷ್ಟು ಬಿಸಿ ನೀರಿದ್ದರೂ ಬೇಕು. ಹಂಡೆಯ ನೀರನ್ನು ಸದಾ ಬಿಸಿಯಾಗಿಡುವ ಕೆಲಸ ಸಾಮಾನ್ಯವಾಗಿ ಅಪ್ಪನದ್ದೇ. ಜಂಬೆಮರದ ಚಕ್ಕೆಯನ್ನು ಒಲೆಯೊಳಗೆ ಕೂಡಿ, ಚಿಮಣಿ ಬುರುಡೆಯಿಂದ ಹಾಳೆಭಾಗ ಅಥವಾ ತೆಂಗಿನ ಗರಿಯ ತುದಿಗೆ ಬೆಂಕಿ ಹತ್ತಿಸಿಕೊಂಡು ಒಲೆಯೊಳಗೆ ಕೂಡುತ್ತಿದ್ದೆವು. ಹಂಡೆಯ ಅಂಡಿನಿಂದ ವಿಸ್ತರಿಸುತ್ತಿದ್ದ ಶಾಖಕ್ಕೆ ಅದರೊಡಲ ನೀರೆಲ್ಲ ಬಿಸಿ ಬಿಸಿ ಬಿಸಿಯಾಗಿ ಕಾಲು ಗಂಟೆಯೊಳಗೆ ಕೊತ ಕೊತ! ಬೆಂಕಿ ಒಟ್ಟಲು ಕೂತ ನನ್ನ ಚಳಿ ಹಾರಿಹೋಗಿ, ಅಡುಗೆಮನೆಗೆ ಓಡಿಬಂದು ತಿಂಡಿ ತಿಂದು ಸ್ನಾನ ಮಾಡಿ ಶಾಲೆಗೆ ಹೊರಡಲು ತಯಾರಾಗುತ್ತಿದ್ದೆ.

ಅಣ್ಣ ಮಹೇಶನನ್ನು ದೊಡ್ಡಪ್ಪ ಸೈಕಲ್ಲಿನಲ್ಲಿ ಕೂರಿಸಿಕೊಂಡು ಬಂದು ಶಾಲೆಗೆ ಬಿಟ್ಟು ಹೋಗುತ್ತಿದ್ದ. ನಾನು ಮಾತ್ರ ರೈತರ ಕೇರಿಯ ಹುಡುಗರೊಂದಿಗೆ ನಡೆದೇ ಹೋಗುತ್ತಿದ್ದೆ. ಮಹೇಶನಿಗೆ ಪ್ರತಿವರ್ಷವೂ ಹೊಸ ಯುನಿಫಾರಂ ಹೊಲಿಸುತ್ತಿದ್ದ ದೊಡ್ಡಪ್ಪ. ನನಗೆ ಎರಡು ವರ್ಷಕ್ಕೊಮ್ಮೆ. 'ನಿನ್ ಯುನಿಫಾರ್ಂ ಹೊಸದರಂಗೆ ಚನಾಗೇ ಇದ್ದಲಾ.. ನಮ್ಮನೆ ಮಾಣಿಗೆ ಒಂದು ಬಟ್ಟೆಯೂ ತಡಿಯದಿಲ್ಲೆ.. ಹರಕೈಂದ ನೋಡು' ಎನ್ನುತ್ತ ನನ್ನ ಬಳಿ ಮಹೇಶನ ಬಗ್ಗೆ ಸುಳ್ಳೇ ಸಿಟ್ಟು ವ್ಯಕ್ತಪಡಿಸುತ್ತಿದ್ದ. ಮಹೇಶನ ಈ ವರ್ಷದ ಪಠ್ಯ ಪುಸ್ತಕಗಳೇ ನನಗೆ ಮುಂದಿನ ವರ್ಷಕ್ಕೆ. ಪೇಟೆಯಿಂದ ತಂದ ಬಿಸ್ಕೇಟ್ ಪ್ಯಾಕನ್ನು ಮಹೇಶ ಜಗಲಿ ಬಾಗಿಲಿನಲ್ಲೇ ಕಸಿದುಕೊಂಡು ನನಗೆ ಎರಡೇ ಎರಡು ಕೊಟ್ಟು ಉಳಿದಿದ್ದನ್ನು ಅವನೇ ಗುಳುಂ ಮಾಡುತ್ತಿದ್ದ. ಹಾಗಂತ ನನಗೇನು ಮಹೇಶನ ಮೇಲೆ ಯಾವುದೇ ತರಹದ ದ್ವೇಷವಿರಲಿಲ್ಲ. ದಿನಾ ಸಂಜೆ ಒಟ್ಟಿಗೇ ಆಡಿಕೊಳ್ಳುತ್ತಿದ್ದೆವು. ಆದರೆ ಎಲ್ಲಾದರೊಮ್ಮೆ ದೊಡ್ಡಪ್ಪ-ದೊಡ್ಡಮ್ಮ ಹೀಗೆ ನನಗೂ-ಅವನಿಗೂ ಮಾಡುತ್ತಿದ್ದ ಆರೈಕೆಯಲ್ಲಿನ ವ್ಯತ್ಯಾಸ ನನ್ನ ಅರಿವಿಗೆ ಬೇಡವೆಂದರೂ ಬರುತ್ತಿತ್ತು.

ಅಮ್ಮ ಪ್ರತಿ ರಾತ್ರಿ ಕೋಣೆಯಲ್ಲಿ ಅಪ್ಪನೊಂದಿಗೆ ಗುಸುಗುಸು ಮಾಡುತ್ತಿದ್ದಳು. 'ಅಕ್ಕಯ್ಯ ಹಂಗೆ ಹಿಂಗೆ. ನಿಮಗೆ ಏನೂ ಗೊತ್ತಾಗ್ತಲ್ಲೆ, ಅಣ್ಣ ಅಂದ್ರೆ ದೇವ್ರು, ಅವ್ರು ಒಳಗಿಂದೊಳಗೇ ದುಡ್ಡು ಮಾಡಿಟ್ಕಳ್ತಿದ್ದ, ಅತ್ತೆಮ್ಮನೂ ಅವ್ರಿಗೇ ಸಪೋರ್ಟು, ಒಂದು ದಿನ ಹಿಸೆ ಮಾಡಿ ನಮ್ಮುನ್ನ ಬರಿಗೈಯಲ್ಲಿ ಹೊರಡುಸ್ತ ಅಷ್ಟೆ' ಇತ್ಯಾದಿ. ನನಗೆ ಪೂರ್ತಿ ಅರ್ಥವಾಗುತ್ತಿರಲಿಲ್ಲ. ಆದರೆ ಎಲ್ಲರ ಕಿವಿ ತಪ್ಪಿಸಿ ಅಪ್ಪನ ಬಳಿ ಅಮ್ಮ ಆಡುತ್ತಿದ್ದ ಈ ಗುಸುಗುಸು-ಪಿಸಪಿಸಗಳೇ ನನಗೆ ದೊಡ್ಡಪ್ಪ-ದೊಡ್ಡಮ್ಮ ನಮಗೇನೋ ಮೋಸ ಮಾಡುತ್ತಿದ್ದಾರೆ ಎಂಬಂತಹ ಸೂಚನೆ ಕೊಟ್ಟು, ಅವರೆಡೆಗಿನ ನನ್ನ ನೋಟಕ್ಕೆ ಗುಮಾನಿಯ ಕನ್ನಡಕ ತೊಡಿಸುತ್ತಿತ್ತು. ಅಪ್ಪ ಮಾತ್ರ ಸದಾ ಮೌನಮೂರ್ತಿ. ಅಮ್ಮನ ಈ ರಾತ್ರಿಯ ಗುಸುಗುಸುಗಳಿಗೆ 'ಥೋ ಸಾಕು ಸುಮ್ನಿರೇ. ನಂಗೆಲ್ಲ ಗೊತ್ತಿದ್ದು' ಎಂದು ಸಿಡುಕಿದಂತೆ ಉತ್ತರಿಸಿ ಅತ್ತ ತಿರುಗಿ ಮಲಗುತ್ತಿದ್ದ. ಅಮ್ಮ ಇತ್ತ ತಿರುಗಿ ಮಲಗುತ್ತಿದ್ದಳು. ನಾನು ಕಣ್ಮುಚ್ಚಿ ನಿದ್ರೆ ಹೋಗುತ್ತಿದ್ದೆ.

ಅಪ್ಪ, ಈ ರಾತ್ರಿಯ ಗುಸುಗುಸುಗಳಿಂದ ತಪ್ಪಿಸಿಕೊಂಡಿರಲೇನೋ ಎಂಬಂತೆ, ಅವಕಾಶ ಸಿಕ್ಕಿದಾಗಲೆಲ್ಲ, ಯಕ್ಷಗಾನ - ತಾಳಮದ್ದಲೆ ಎಂದು ಹೋಗಿಬಿಡುತ್ತಿದ್ದ. ನಮ್ಮ ಸೀಮೆಯದೇ ಆದ 'ಶ್ರೀ ಮೂಕಾಂಬಿಕಾ ಯಕ್ಷಗಾನ ಮಂಡಲಿ'ಯಲ್ಲಿ ಅಪ್ಪನೊಬ್ಬ ಮುಖ್ಯ ಭಾಗವತ. ಮರುದಿನ ರಜಾದಿನವಾಗಿದ್ದರೆ ನಾನೂ ಅಪ್ಪನೊಟ್ಟಿಗೆ ಹೋಗುತ್ತಿದ್ದೆ. ತುಮರಿ, ಬ್ಯಾಕೋಡು, ಸುಳ್ಳಳ್ಳಿ, ನಿಟ್ಟೂರು, ಸಂಪೆಕಟ್ಟೆ ಹೀಗೆ ತಿಂಗಳಿಕೆ ನಾಲ್ಕು ಬಯಲಾಟವೋ ತಾಳಮದ್ದಲೆಯೋ ಇದ್ದೇ ಇರುತ್ತಿತ್ತು. ಅಪ್ಪ ತಾಳ ಹಿಡಿದು ಮೈಕಿನ ಮುಂದೆ ಕೂತರೆ ಹಾರ್ಮೋನಿಯಂ ಎದುರು ನಾನು. ಕೈ ಸೋಲುವವರೆಗೆ ಅಥವಾ ನಿದ್ರೆ ಬರುವವರೆಗೆ ಹಾರ್ಮೋನಿಯಂನ ಬಾಟಿ ಎಳೆಯುವುದು. ನನಗೇನು ಯಕ್ಷಗಾನದ ಪದ್ಯಗಳಾಗಲೀ, ಪೂರ್ತಿ ಪ್ರಸಂಗವಾಗಲೀ ಅರ್ಥವಾಗುತ್ತಿತ್ತೆಂದಲ್ಲ, ಆದರೆ ಎಲ್ಲ ಕತೆಯೂ ಗೊತ್ತಿತ್ತು ಮತ್ತು, ಹಾಗೆ ಅಪ್ಪನ ಪಕ್ಕ ಸ್ವೆಟರು - ಜುಬ್ಬ ಹಾಕಿ ಕೂತಾಗ ತುಂಬಾ ಬೆಚ್ಚನೆ ಹಿತಾನುಭವವಾಗುತ್ತಿತ್ತು. ನಾಗೇಶಣ್ಣ ಚಂಡೆಯ ಮೇಲೆ ಆ ಎರಡು ಕಡ್ಡಿಗಳಿಂದ ಆಡುತ್ತಿದ್ದ ಆಟ, ಗಣಪಣ್ಣ ಮೃದಂಗದೊಂದಿಗೆ ತನ್ನ ಬೆರಳುಗಳಲ್ಲೇ ಮೂಡಿಸುತ್ತಿದ್ದ ಮಾಟ, ಸುರೇಶ ಶೆಟ್ಟಿ - ಮಂಜಪ್ಪಣ್ಣರ ಚಕ್ರಮಂಡಿ ಕುಣಿತಗಳೆಡೆಗೆ, ಆಟದ ಮಧ್ಯೆ ಮಧ್ಯೆ ನಮಗೆ ತಂದುಕೊಡುತ್ತಿದ್ದ ಬಿಸಿಬಿಸಿ ಚಹಾದಷ್ಟೇ ವಿಚಿತ್ರ ಸೆಳೆತವಿತ್ತು.

ಅಪ್ಪ ಈ ಯಕ್ಷಗಾನ - ತಾಳಮದ್ದಲೆಗಳಲ್ಲಿ ಸಿಗುತ್ತಿದ್ದ ನೂರು - ಇನ್ನೂರು ರೂಪಾಯಿ ಸಂಭಾವನೆಗಳಿಂದಾಗಿಯೋ ಏನೋ ತನ್ನ ಪಾಡಿಗೆ ತಾನು ನಿರುಮ್ಮಳವಾಗಿದ್ದುಬಿಡುತ್ತಿದ್ದ. ದೊಡ್ಡಪ್ಪ ಒಂದು ಕಡೆಯಿಂದ ಒಪ್ಪವಾಗಿ ನಮ್ಮೆಡೆಗೆ ಹೂಡುತ್ತಿದ್ದ ಸಂಚುಗಳು ಅವನಿಗೆ ತಿಳಿಯುತ್ತಲೇ ಇರಲಿಲ್ಲವೆನಿಸುತ್ತೆ. ಅಮ್ಮನಿಗೆ ತಿಳಿಯುತ್ತಿತ್ತು. ಆದರೆ ನನಗೆ ಮಾತ್ರ ಸದಾ ಅಪ್ಪನ ಮೇಲೆ ಸಿಡುಕುವ ಅವಳ ಬಗ್ಗೆ ಕೋಪವಿತ್ತು. ಅಪ್ಪ ತುಂಬಾ ಪಾಪ ಎನಿಸುತ್ತಿದ್ದ.

ಆ ವರ್ಷ ಜೋರು ಚಳಿಯಿತ್ತು. ಪ್ರತಿವರ್ಷಕ್ಕಿಂತ ಜಾಸ್ತಿಯೇ ಇದೆ ಅಂತ ಜನ ಮಾತಾಡಿಕೊಳ್ಳುತ್ತಿದ್ದರು. ಕಾರ್ತೀಕ ಮಾಸ. ಊರಲ್ಲೆಲ್ಲಾ ಅಡಿಕೆ ಸುಗ್ಗಿಯ ಭರಾಟೆ. 'ಮುಂದಿನ ವಾರ ನಮ್ಮನೇಲಿ ಕೊಯ್ಸವು. ಕೊನೆಕಾರಂಗೆ ಹೇಳಿಕ್ ಬೈಂದಿ' ಅಂತ ದೊಡ್ಡಪ್ಪ ಹೇಳುತ್ತಿದ್ದ. ಅವತ್ತು ತುಳಸೀಕಟ್ಟೆ ಕಾರ್ತೀಕವಿತ್ತು. ನಾನು-ಮಹೇಶ-ಅಮ್ಮ-ದೊಡ್ಡಮ್ಮ ಮನೆಮನೆಗೂ ಹೋಗಿ, ತುಳಸೀಕಟ್ಟೆ ಪೂಜೆಯಲ್ಲಿ ಪಾಲ್ಗೊಂಡು, ಮಂಗಳರಾತಿ ಸಮಯದಲ್ಲಿ ಝಾಂಗ್ಟೆ ಬಡಿದು, ಹಣತೆ ದೀಪಗಳ ಬೆಳಕಲ್ಲಿ ಕೋಸಂಬರಿ - ಚೀನಿಕಾಯಿ ಶೀಂಗಳ ಪನಿವಾರ ತಿಂದು, ರಾತ್ರಿ ಒಂಭತ್ತರ ಹೊತ್ತಿಗೆ ಮನೆ ತಲುಪುವಷ್ಟರಲ್ಲಿ ನಮಗೊಂದು ಆಘಾತ ಕಾದಿತ್ತು.

ಅಪ್ಪ ಎದೆನೋವು, ಹೊಟ್ಟೆಲೆಲ್ಲಾ ಸಂಕಟ, ಕರುಳು ಉರೀತಾ ಇದ್ದು ಎಂದೇನೇನೋ ಹೇಳುತ್ತಾ ಕೋಣೆಯಲ್ಲಿ ಮಲಗಿಕೊಂಡಿದ್ದ. ಅಮ್ಮ ಆತಂಕಗೊಂಡು ದೊಡ್ಡಪ್ಪನಿಗೆ ಹೇಳಿ, ಮನೆಯವರೆಲ್ಲಾ ಕೋಣೆಯಲ್ಲಿ ಸೇರಿದ್ದಾಯ್ತು. 'ಗ್ಯಾಸು ಆಗಿಕ್ಕು, ಸುಮ್ನೆ ಹೊಟ್ಟೆ ಮುರ್ವು ಕಾಣ್ತು, ಅದಾಗಿಕ್ಕು ಇದಾಗಿಕ್ಕು' ಅಂತೆಲ್ಲಾ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ, ಏನೇನೋ ಕಷಾಯ ಅದೂ ಇದೂ ಕಾಸಿ ಬೀಸಿ ಅಪ್ಪನಿಗೆ ಕುಡಿಸಿದರು. ಕೊಲ್ಲೂರು ಮೂಕಾಂಬಿಕೆಗೆ ಕಾಯಿ ತೆಗೆದಿಟ್ಟದ್ದಾಯ್ತು. ಆದರೆ ರಾತ್ರಿ ಹನ್ನೊಂದರ ಹೊತ್ತಿಗೆ ಅಪ್ಪನ ನೋವು-ನರಳಾಟಗಳು ಜಾಸ್ತಿಯಾದವು. ದಡಬಡಾಯಿಸಿ, ಹೊಸಕೊಪ್ಪದಿಂದ ಸುಬ್ಬಣ್ಣನ ಜೀಪು ತರಿಸಿ, ಬ್ಯಾಕೋಡಿನ ಸರ್ಕಾರಿ ಆಸ್ಪತ್ರೆ ಕಾಂಪೌಂಡರಿನ ಬಳಿ ಅಪ್ಪನನ್ನು ಕರೆದೊಯ್ದದ್ದಾಯ್ತು. ದೊಡ್ಡಪ್ಪ, ಪಕ್ಕದಮನೆ ನಾಗೇಶಣ್ಣ, ಅಮ್ಮ, ಅಮ್ಮನನ್ನು ಬಿಟ್ಟಿರದ ನಾನೂ ಜೊತೆಗೆ. ಕಾಂಪೌಂಡರು ಅಲ್ಸರು, ಅಪೆಂಡಿಕ್ಸು ಎಂದೇನೇನೋ ಅಂದರು. ಇಲ್ಲಿ ಆಗುವುದಿಲ್ಲ, ಸಾಗರಕ್ಕೇ ಕರೆದೊಯ್ಯಬೇಕು ಎಂದರು. ಆಪರೇಶನ್ ಆಗಬೇಕು ಎಂದರು. ಸರಿ, ಬೆಳಗಿನ ಮೊದಲ ಲಾಂಚಿಗೇ ಹೋಗುವುದು ಎಂದಾಯಿತು. ಆದರೆ ರಾತ್ರಿ ಮೂರರ ಹೊತ್ತಿಗೆ, ಏನಾಯಿತು ಎಂತಾಯಿತು ಎಂಬುದು ಯಾರಿಗೂ ಸರಿಯಾಗಿ ಅರ್ಥವಾಗುವ ಮೊದಲೇ ಅಪ್ಪ ನರಳಾಡುವುದನ್ನೂ ಹೊರಳಾಡುವುದನ್ನೂ ನಿಲ್ಲಿಸಿ, ಕೊನೆಗೆ ಉಸಿರಾಡುವುದನ್ನೂ ನಿಲ್ಲಿಸಿಬಿಟ್ಟ. ಅಪ್ಪನ ಬಿಸಿ ದೇಹ ತಣ್ಣಗಾಗುತ್ತಾ ಆಗುತ್ತಾ, ಅಳು, ದಿಗ್ಭ್ರಮೆ, ಹೇಳಲಾರದ ನೋವು, ಮುಂದೇನೆಂದೇ ತಿಳಿಯದ ಮುಗ್ಧ-ಮೂಢತೆಯ ಸೂತಕ ನಮ್ಮನ್ನಾವರಿಸಿ, ಘೋರ ಚಳಿಯಂತೆ ಮೈ ಮರಗಟ್ಟಿಸಿಬಿಟ್ಟಿತು. ಅಪ್ಪನ ನಿಶ್ಚೇಷ್ಟಿತ ತಣ್ಣನೆ ದೇಹವನ್ನು ಜೀಪಿನ ಸದ್ದು ಬೆರೆತ ಮೌನದಲ್ಲಿ ಮನೆಗೆ ತಂದಾಗ, ತುಳಸೀಕಟ್ಟೆಯ ಸುತ್ತ ಹಚ್ಚಿಟ್ಟಿದ್ದ ದೀಪಗಳು ಆಗ ತಾನೇ ಆರಿದ್ದವು.

ನಂತರ ದೊಡ್ಡಪ್ಪನ ಯಜಮಾನಿಕೆ ಮತ್ತೂ ಜೋರಾಗಿದ್ದು, ವಿಧವೆ ಅಮ್ಮ ಬಾಯಿ ಬಿಡಲೂ ಆಗದಂತೆ ಕಟ್ಟಿ ಹಾಕಲ್ಪಟ್ಟಿದ್ದು, ಅದೇ ಕಲಕಿದ ವಾತಾವರಣದಲ್ಲೇ ನಾನು ಎಸ್ಸೆಸ್ಸೆಲ್ಸಿಯವರೆಗೆ ಓದಿದ್ದು, ಇನ್ನು ಅಲ್ಲಿರಲಾಗದೇ ಈ ಬೆಂಗಳೂರಿಗೆ -ಚಿಕ್ಕ ಮಾವನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಲಿಕ್ಕೆ ಬಂದದ್ದು ...ಏನೆಲ್ಲ ಆಗಿ ಹೋಯಿತು! ಅಮ್ಮ ಮೊನ್ನೆ ಫೋನ್ ಮಾಡಿದ್ದಳು. 'ನಿನಗೆ ಮುಂದಿನ ತಿಂಗಳಿಗೆ ಹದಿನೆಂಟು ವರ್ಷ ತುಂಬುತ್ತದೆ. ಊರಿಗೆ ಬಾ. ದೊಡ್ಡಪ್ಪನ ಬಳಿ ಮಾತಾಡು. ಒಪ್ಪಲಿಲ್ಲ ಎಂದರೆ ಅವನ ಮೇಲೆ ದಾವೆ ಹೂಡೋಣ. ನಿನ್ನ ದೊಡ್ಡ ಮಾವ ಲಾಯರ್ ಹತ್ರ ಎಲ್ಲಾ ಮಾತಾಡಿದಾನಂತೆ. ಲಾಯರು ಕೇಸು ಗೆದ್ದುಕೋಡೋಣ ಎಂದಿದಾರಂತೆ. ಅಲ್ಲಿ ಇದ್ದು ನೀನು ಸಾಧಿಸೋದು ಅಷ್ಟರಲ್ಲೇ ಇದೆ. ನಮಗೆ ಸೇರಬೇಕಾದ ಆಸ್ತೀನ ನಾವು ಪಡೆದುಕೊಂಡು, ಒಂದು ಮನೆ-ಗಿನೆ ಕಟ್ಟಿಕೊಂಡು ಆರಾಮಾಗಿರೋಣ. ನಮಗೆ ಯಾರ ಹಂಗೂ ಬ್ಯಾಡ...' ಅಮ್ಮ ನಾನಾಗೇ ಫೋನಿಡುವವರೆಗೂ ಮಾತಾಡುತ್ತಲೇ ಇದ್ದಳು.

ಇಲ್ಲಿ ಇವತ್ತು ಮತ್ತೆ ತುಳಸೀಕಟ್ಟೆ ಕಾರ್ತೀಕ. ಅಂದರೆ ಅಪ್ಪ ಸತ್ತು ಇವತ್ತಿಗೆ ಹತ್ತು ವರ್ಷವಾಯ್ತು. ಹೊರಗಿನಿಂದ ಒಂದೇ ಸಮನೆ ಪಟಾಕಿಗಳ ಶಬ್ದ ಕೇಳಿಬರುತ್ತಿದೆ. ಪ್ರತಿ ಮನೆಯ ಎದುರೂ ಬಿರುಸಿನಕುಡಿಕೆಯ ಹೂಕುಂಡಗಳು. ತುಳಸೀಪಾಟಿನ ಸುತ್ತ ದೀಪಗಳು. ಒಂದು ನೆಲ್ಲಿರೆಂಬೆ. ಸುರುಸುರುಬತ್ತಿ ಹಿಡಿದ ಪುಟ್ಟ ಮಕ್ಕಳು... ಸಂಭ್ರಮವೋ ಸಂಭ್ರಮ.

ನಾನು ಯೋಚಿಸುತ್ತಿದ್ದೇನೆ: ಬೆಂಗಳೂರಿಗೆ ಬಂದು ಎರಡು ವರ್ಷವಾಯಿತು. ಇಷ್ಟಿಷ್ಟೇ ದುಡ್ದು ಮಾಡಿಕೊಳ್ಳುತ್ತಾ, ಇಲ್ಲಿ ನನ್ನದೇ ಆದ ಬದುಕೊಂದನ್ನು ರೂಪಿಸಿಕೊಳ್ಳುವ ಛಲ ಮೈದಾಳುತ್ತಿದೆ. ಬೆಂಗಳೂರು ಬದುಕುವುದನ್ನು ಕಲಿಸಿಬಿಟ್ಟಿದೆ. ಇಷ್ಟೆಲ್ಲ ಪ್ರಬುದ್ಧವಾಗಿ ಯೋಚಿಸುವಷ್ಟು ದೊಡ್ಡವ ನಾನಾದದ್ದಾದರೂ ಹೇಗೆ ಎಂದು ನನಗೇ ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಈ ಇಂತಹ ಸಂದರ್ಭದಲ್ಲಿ ಮತ್ತೆ ಊರಿಗೆ ಹೋಗಿ, ದೊಡ್ಡಪ್ಪನೆದುರು ಮಂಡಿಯೂರಿ ಕೂತು ಹಿಸೆ ಕೇಳುವುದು, ಅವನು ಒಪ್ಪದಿದ್ದರೆ ಅವನ ಮೇಲೇ ದಾವೆ ಹೂಡುವುದು ಎಲ್ಲಾ ಬೇಕಾ? ಜೊತೆಗೇ ಆಟವಾಡುತ್ತಿದ್ದ ಮಹೇಶನ ಜೊತೆಗೂ ಹಲ್ಲು ಮಸೆಯುವಂತಹ ದ್ವೇಷ ಕಟ್ಟಿಕೊಳ್ಳುವುದು ಬೇಕಾ? ಬೇಡವೆಂದು ಬಿಟ್ಟುಬಿಟ್ಟರೆ ಅಮ್ಮನ ಈ ಬೇಗುದಿಗೆ ಬಿಡುಗಡೆಯೆಂದು? ನಾನು ದುಡಿದು ದುಡ್ದು ಮಾಡಿ, ನನ್ನ ಕಾಲಮೇಲೆ ನಾನು ನಿಂತು, ಅಮ್ಮನನ್ನೂ ಸಾಕುವ, ಸಂಸಾರ ಸಂಭಾಳಿಸುವ ಹಂತ ತಲುಪಲಿಕ್ಕೆ ಇನ್ನೂ ಎಷ್ಟು ವರ್ಷ ಬೇಕಾಗಬಹುದು? ಇಷ್ಟೆಲ್ಲ ಸ್ವಾಭಿಮಾನ ಮೆರೆದು ಸಾಧಿಸುವುದಾದರೂ ಏನಿದೆ? ನ್ಯಾಯಯುತವಾಗಿ ನನಗೆ ಬರಬೇಕಾದ ಪಾಲನ್ನು ನಾನು ಕೇಳಿ ಪಡೆಯುವುದರಲ್ಲಿ ತಪ್ಪೇನಿದೆ? ಅದಿಲ್ಲದಿದ್ದರೆ ಜನರಿಂದ 'ಮಗನೂ ಅಪ್ಪನಂತೆ ದಡ್ಡ' ಎಂಬ ಹೀಯಾಳಿಕೆಗೆ ಗುರಿಯಾಗಬೇಕಾಗುತ್ತದಲ್ಲವೇ? ಹಾಗಾದರೆ ಈಗ ಊರಿಗೆ ಹೋಗಿ ದೊಡ್ಡಪ್ಪನೆದುರು ಪಟಾಕಿ ಸಿಡಿಸಿಯೇ ಬಿಡಲೇ?

ನಾನು ಸುಮ್ಮನೆ ನಿಂತಿರುವುದನ್ನು ನೋಡಿದ ನಮ್ಮನೆ ಓನರ್ರಿನ ಮೊಮ್ಮಗ ನಿಶಾಂತ್ ಓಡಿ ಬಂದು 'ಅಣ್ಣಾ ನೀನೂ ಪಟಾಕಿ ಹಚ್ಚು ಬಾ' ಎಂದು ಕೈ ಹಿಡಿದು ಎಳೆಯುತ್ತಿದ್ದಾನೆ. 'ನಾನು ಬರಲೊಲ್ಲೆ; ಇವತ್ತು ನನ್ನ ಅಪ್ಪನ ತಿ..' ಎಂದೇನೋ ಹೇಳಹೊರಟವನು ಅಲ್ಲಿಗೇ ತಡೆದು ಸುಮ್ಮನೆ ನಿಶಾಂತ್ ಜೊತೆ ಹೋಗುತ್ತೇನೆ. ಪಟಾಕಿಯ ಬತ್ತಿಯನ್ನು ಚೂರೇ ಸುಲಿದು, ಊದುಬತ್ತಿಯಿಂದ ಕಿಡಿ ತಾಕಿಸುತ್ತೇನೆ. ದೂರ ಬಂದು ನಿಶಾಂತ್ ಜೊತೆ ನಿಲ್ಲುತ್ತೇನೆ. ನಿಶಾಂತ್ ಎರಡೂ ಕೈಗಳಿಂದ ಕಿವಿ ಮುಚ್ಚಿಕೊಂಡು ಇನ್ನೇನು ಸಿಡಿಯಲಿರುವ ಆ ಪಟಾಕಿಯನ್ನೇ, ಅದರ ಬತ್ತಿಗುಂಟ ಸಾಗುತ್ತಿರುವ ಬೆಂಕಿಯ ಕಿಡಿಯನ್ನೇ ನೋಡುತ್ತಿದ್ದಾನೆ... ನನಗೆ ಹತ್ತು ವರ್ಷಗಳ ಹಿಂದೆ ಅಪ್ಪನ ಪಕ್ಕ ಹೀಗೇ ನಿಂತಿರುತ್ತಿದ್ದ ನನ್ನ ಚಿತ್ರದ ಕಲ್ಪನೆ ಕಣ್ಣಮುಂದೆ ಬರುತ್ತದೆ...

[ಈ ಕತೆ 'ಮಯೂರ' ಮಾಸಿಕದ ಮೇ 2008ರ ಸಂಚಿಕೆಯಲ್ಲಿ ಪ್ರಕಟವಾಗಿದೆ.]

Wednesday, November 14, 2007

ಆಮೆ-ಮೊಲ

ಮೂರನೇ ಕ್ಲಾಸಿನಲ್ಲೋ ನಾಲ್ಕನೇ ಕ್ಲಾಸಿನಲ್ಲೋ ಇದ್ದ ಈ ನೀತಿಕತೆಯನ್ನು ನಿಮ್ಮ ಕನ್ನಡ ಮೇಷ್ಟ್ರು ತುಂಬಾ ಚೆನ್ನಾಗಿ ಪಾಠ ಮಾಡಿ ಹೇಳಿರುತ್ತಾರೆ. ಮಾಡಿರದಿದ್ದರೂ, ಆ ಪಾಠದೊಂದಿಗಿದ್ದ ಓಡುತ್ತಿದ್ದ ಮೊಲ-ಚಿಪ್ಪಿನೊಳಗಿಂದ ಕತ್ತು ಹೊರಹಾಕಿ ಹಿಂದೆ ನೋಡುತ್ತಿದ್ದ ಆಮೆಯ ಬಣ್ಣ ಬಣ್ಣದ ಚಿತ್ರಗಳು ನಿಮಗೆ ನೆನಪಿರುತ್ತವೆ. ಮರೆತು ಹೋಗಿದ್ದಿದ್ದರೂ ನಾನೀಗ ಹೇಳಿದಮೇಲೆ ನೆನಪಾಗಿರುತ್ತದೆ. ನೀವಿದನ್ನು ಓದಿರದಿದ್ದರೂ ನಿಮ್ಮ ಮಗನೋ, ಪಕ್ಕದ ಮನೆ ಪುಟ್ಟಿಯೋ ಶಾಲೆಯಿಂದ ಬಂದೊಡನೆ 'ಇವತ್ತು ಮಿಸ್ಸು ಆಮೆ-ಮೊಲದ ಕಥೆ ಹೇಳಿದ್ರು.. ಎಷ್ಟು ಚೆನ್ನಾಗಿತ್ತು.. ನಿಂಗೊತ್ತಾ ಅದು?' ಎನ್ನುತ್ತಾ ಮೊಲದಂತೆಯೇ ಮುದ್ದಾಗಿ-ಪೆದ್ದಾಗಿ ಪಿಳಿಪಿಳಿ ಕಣ್ಣು ಬಿಡುತ್ತಾ ಕೇಳಿದಾಗ ನೆನಪಾಗುತ್ತಿತ್ತು. ಮರೆತು ಹೋಗಿದ್ದರೂ, ನಿನಪಿದ್ದರೂ, ಹಿಂದೆಲ್ಲೂ ಕೇಳಿರದಿದ್ದರೂ, ಓದಿರದಿದ್ದರೂ ನೀವೀ ಕತೆಯನ್ನು ಮತ್ತೊಮ್ಮೆ ಓದಲಿಕ್ಕೇನು ಅಡ್ಡಿಯಿಲ್ಲ. ಏಕೆಂದರೆ, ಈ ಕತೆ ತುಂಬಾ ಚೆನ್ನಾಗಿದೆ.

ಆಮೆ ಮತ್ತು ಮೊಲದ ಮಧ್ಯೆ ಒಮ್ಮೆ ಓಟದ ಸ್ಪರ್ಧೆ ಏರ್ಪಟ್ಟಿತ್ತು. ಎಲ್ಲರಿಗೂ ಗೊತ್ತಿರುವಂತೆಯೇ ಮೊಲದ ಓಟಕ್ಕೆ ವೇಗ ಹೆಚ್ಚು. ಆಮೆ ಅಂಗುಲ ಸಾಗಲೂ ಗಂಟೆ ಬೇಕು. ಕಾಡಿನ ಪ್ರಾಣಿಗಳೆಲ್ಲ ಈ ತಮಾಷೆಯನ್ನು ನೋಡಲು ಸೇರಿದ್ದವು. ಸಿಂಹರಾಜನೂ ಬಂದಿದ್ದ. ಮಂತ್ರಿ ನರಿ ಶಿಳ್ಳೆ ಊದುತ್ತಿದ್ದಂತೆಯೇ ಓಟ ಶುರುವಾಯಿತು.

ಮೊಲ ಜೋರಾಗಿ ಓಡಿತು. ಸುಮಾರು ದೂರ ಓಡಿಯಾದ ಮೇಲೆ ಹಿಂದೆ ತಿರುಗಿ ನೋಡಿದರೆ ಆಮೆ ಇನ್ನೂ ಎಷ್ಟೋ ಹಿಂದಕ್ಕೆ ನಿಧಾನವಾಗಿ ಬರುತ್ತಿದೆ. ಮೊಲ ಮುಖದಲ್ಲಿ ಗರ್ವದ ಗಹಗಹ ನಗುವನ್ನು ತಂದುಕೊಂಡು, ಒಮ್ಮೆ ಆಕಳಿಸಿ, 'ಅದು ಇಲ್ಲಿಗೆ ಬರುವುದರೊಳಗೆ ಒಂದು ನಿದ್ರೆ ಮಾಡಿ ತೆಗೆಯುವಾ' ಅಂದುಕೊಂಡು, ಅಲ್ಲೇ ಮರದ ಬುಡದಲ್ಲಿ ಮಲಗಿಬಿಟ್ಟಿತು. ಬಿಸಿಲಿನ ಜಳಕ್ಕೋ ಏನೋ, ಆಲಸಿ ಮೊಲಕ್ಕೆ ಜೋರು ನಿದ್ರೆ ಬಂದುಬಿಟ್ಟಿತು.

ಸುಮಾರು ಹೊತ್ತಿನ ಮೇಲೆ ಚಪ್ಪಾಳೆ, ಶಿಳ್ಳೆಗಳ ಶಬ್ದ ಕೇಳಿದಂತಾಗಿ ಮೊಲಕ್ಕೆ ಎಚ್ಚರಾಗಿ ಕಣ್ತೆರೆದು ನೋಡಿದರೆ ಆಮೆ ಹಾಗೇ ನಿಧಾನವಾಗಿ ನಡೆಯುತ್ತ ಓಡುತ್ತ ಮಲಗಿದ್ದ ಮೊಲವನ್ನು ದಾಟಿ ಮುಂದೆ ಹೋಗಿ ಆಗಲೇ ಗುರಿಯ ಸಮೀಪ ತಲುಪಿಬಿಟ್ಟಿದೆ...! ಮೊಲ ಹೌಹಾರಿ ಎದ್ದೆನೋ ಬಿದ್ದೆನೋ ಎಂಬಂತೆ ಓಡತೊಡಗಿತು. ಆದರೆ ಅದು ಏದುಸಿರು ಬಿಡುತ್ತಾ ಗುರಿ ತಲುಪುವುದರೊಳಗೆ ಆಮೆ ಗೆರೆ ದಾಟಿ ಪಂದ್ಯದಲ್ಲಿ ಗೆದ್ದಾಗಿತ್ತು.

ಈ ಕತೆಯ ನೀತಿ ನಿಮಗೆ ಗೊತ್ತಿದ್ದದ್ದೇ. ಸೋಮಾರಿತನ ಒಳ್ಳೇದಲ್ಲ; ಯಾರನ್ನೂ ಕಡೆಗಣಿಸಬಾರದು; ಕಷ್ಟ ಪಟ್ಟರೆ ಎಂಥವರನ್ನು ಬೇಕಾದರೂ ಸೋಲಿಸಬಹುದು; ಇತ್ಯಾದಿ.

ಈ ಕತೆ ಇಲ್ಲಿಗೇ ನಿಲ್ಲುವುದಿಲ್ಲ; ಮುಂದುವರೆಯುತ್ತದೆ. ಈ ಮುಂದುವರಿಕೆಯನ್ನು ನಾನು ಓದಿದ್ದು ವಿಶ್ವೇಶ್ವರ ಭಟ್ಟರ 'ನೂರೆಂಟು ಮಾತು' ಅಂಕಣದಲ್ಲಿ, ನಾಲ್ಕಾರು ವರ್ಷಗಳ ಹಿಂದೆ. ಇಂಗ್ಲೆಂಡಿನಲ್ಲಿ ಬೆಕರ್(?) ಅಂತ ಒಬ್ಬನಿದ್ದಾರಂತೆ. ಬೆಕರ್‌ನ ಕೆಲಸವೆಂದರೆ ಕತೆ ಹೇಳುವುದು. ಜಗತ್ತಿನ ಅತಿರಥ ಮಹಾರಥರೆಲ್ಲ ಈತನ ಸ್ಪೂರ್ತಿ ನೀಡುವ ಕತೆ ಕೇಳಲು ಬರುತ್ತಾರಂತೆ. ಕತೆ ಕೇಳಿ, ಕೇಳಿದಷ್ಟು ಡಾಲರ್ ದುಡ್ಡು ಕೊಟ್ಟು ಹೋಗುತ್ತಾರಂತೆ.

ಬೆಕರ್‌ನ ಬಳಿ ಅಂದು ಲಂಡನ್ನಿನ ದೊಡ್ಡ ಉದ್ಯಮಿಯೊಬ್ಬ ಬಂದಿದ್ದ. ತನ್ನದೇ ಉದ್ಯಮದಲ್ಲಿನ ಮತ್ತೊಂದು ಕಂಪನಿ ತನಗೆ ಕೊಡುತ್ತಿರುವ ಪೈಪೋಟಿಯನ್ನು ಎದುರಿಸಲು ಅವನಿಗೆ ನಾಲ್ಕು ಸ್ಪೂರ್ತಿಭರಿತ ಮಾತು ಬೇಕಿತ್ತು. ಬೆಕರ್ ಇದೇ ಆಮೆ-ಮೊಲದ ಕತೆ ಹೇಳಲು ಶುರು ಮಾಡಿದ. ಈ ಕತೆ ಆ ಉದ್ಯಮಿಗೂ ಗೊತ್ತಿತ್ತು. 'ಅಯ್ಯೋ, ಇದೇನು ಗೊತ್ತಿರೋ ಕತೆಯನ್ನೇ ಹೇಳುತ್ತಿದ್ದಾನಲ್ಲ..' ಅಂದುಕೊಂಡ. ಬೆಕರ್ ಕತೆಯನ್ನು ಮುಂದುವರೆಸಿದ:

ಅವಮಾನಿತ ಮೊಲ ಆಮೆಯನ್ನು ಮತ್ತೊಮ್ಮೆ ಪಂದ್ಯಕ್ಕೆ ಆಹ್ವಾನಿಸುತ್ತದೆ. ಆಮೆ ಒಪ್ಪಿಕೊಳ್ಳುತ್ತದೆ. ಪ್ರಾಣಿಗಳೆಲ್ಲವೂ ಸೇರುತ್ತವೆ. ನರಿ ಶಿಳ್ಳೆ ಊದುತ್ತದೆ. ಓಟ ಶುರುವಾಗುತ್ತದೆ. ಈ ಬಾರಿ ಮೊಲ ಸ್ವಲ್ಪವೂ ಆಲಸ್ಯ ತೋರದೆ, ಯಾವುದೇ 'ಛಾನ್ಸ್' ತೆಗೆದುಕೊಳ್ಳದೆ ಜೋ..ರಾಗಿ ಓಡಿ ಗುರಿ ತಲುಪಿ ಕಿಲೋಮೀಟರುಗಟ್ಟಲೆ ಅಂತರದಿಂದ ಆಮೆಯನ್ನು ಸೋಲಿಸುತ್ತದೆ.

ಈ ಕತೆಯ ನೀತಿಯೆಂದರೆ, ನಮಗಿರುವ ಸಾಮರ್ಥ್ಯವನ್ನು ನಾವು ಸಂಪೂರ್ಣವಾಗಿ ಬಳಸಿಕೊಂಡರೆ ಗೆಲುವು ನಮ್ಮದೇ.

ಕತೆ ಅಷ್ಟಕ್ಕೇ ನಿಲ್ಲುವುದಿಲ್ಲ; ಮುಂದುವರೆಯುತ್ತದೆ:

ಆಮೆಗೆ ತನ್ನ ಸೋಲನ್ನು ಒಪ್ಪಿಕೊಂಡು ಸುಮ್ಮನಿರುವ ಮನಸ್ಸಿಲ್ಲ. ಅದಕ್ಕೆ ಹೇಗಾದರೂ ಮಾಡಿ ಮೊಲವನ್ನು ಸೋಲಿಸಲೇಬೇಕೆಂಬ ತುಡಿತ. ಅದೊಂದು ಪ್ಲಾನ್ ಮಾಡುತ್ತದೆ. ಮೊಲವನ್ನು ಮತ್ತೆ ಸ್ಪರ್ಧೆಗೆ ಆಹ್ವಾನಿಸುತ್ತದೆ.

ಕಾಡಿನ ಪ್ರಾಣಿಗಳಿಗೆಲ್ಲ ಇದೆಂಥಾ ತಮಾಷೆಯಪ್ಪಾ, ಈ ಆಮೆಗೆ ಬುದ್ಧಿಯಿಲ್ಲ ಅಂತ ಅಪಹಾಸ್ಯ. ಆದರೂ ಎಲ್ಲವೂ ಸೇರುತ್ತವೆ. ಸ್ಪರ್ಧೆ ಶುರುವಾಗುತ್ತದೆ. ಮೊಲ ಓಡತೊಡಗುತ್ತದೆ. ಓಡಿ ಓಡಿ ಓಡಿ ಸುಮಾರು ದೂರ ಬಂದಮೇಲೆ ಅದಕ್ಕೆ ಅರಿವಾಗುತ್ತದೆ: ಓಟದ 'ಟ್ರಾಕ್' ಬದಲಾಗಿಬಿಟ್ಟಿದೆ! ಮಧ್ಯದಲ್ಲೊಂದು ಹೊಳೆ ಅಡ್ಡ ಬಂದುಬಿಟ್ಟಿದೆ! ಈ ಹಿಂದಿನ ಸ್ಪರ್ಧೆಗಳಲ್ಲಿ ಬರೀ ನೆಲದ ಮೇಲೆ ಓಟವಿರುತ್ತಿತ್ತು. ತಾನು ಮೋಸ ಹೋದದ್ದು ಮೊಲಕ್ಕೆ ಅರಿವಾಗುತ್ತದೆ. ಅದು ಇಡೀ ಹೊಳೆಯನ್ನು ದಡದಗುಂಟ ಸುತ್ತುವರೆದು ಓಡಿ ಬಂದು ಗುರಿಯನ್ನು ತಲುಪುವುದರೊಳಗೆ ಆಮೆ ಸಲೀಸಾಗಿ ಹೊಳೆಯನ್ನು ಈಜಿ ಆಚೆ ದಡ ಸೇರಿ ಗುರಿಯನ್ನು ತಲುಪುತ್ತದೆ. ವನ್ಯಮೃಗಗಳೆಲ್ಲ ಆಮೆಯ ಬುದ್ಧಿವಂತಿಕೆಯನ್ನು ಮೆಚ್ಚಿ ಹರ್ಷೋದ್ಗಾರ ಮಾಡುತ್ತವೆ.

ಈ ಕತೆಯ ನೀತಿಯೆಂದರೆ ಗೆಲ್ಲಲೇಬೇಕು ಎಂದಾದರೆ ಹೇಗಾದರೂ ಗೆಲ್ಲಬಹುದು. ಆಟದಲ್ಲಿ ಮೋಸ ಸಾಮಾನ್ಯ ಮತ್ತು ಕ್ಷಮ್ಯ! ಪ್ರತೀ ಆಟಕ್ಕೂ ಮುಂಚೆ ಅದರ ನಿಯಮಾವಳಿಗಳನ್ನು ಸ್ಪರ್ಧಿಗಳು ಚರ್ಚಿಸಿ ಮನದಟ್ಟು ಮಾಡಿಕೊಂಡಿರಬೇಕು. ಇತ್ಯಾದಿ.

ಕತೆ ಇಲ್ಲಿಗೂ ನಿಲ್ಲುವುದಿಲ್ಲ! ಮತ್ತೂ ಮುಂದುವರೆಯುತ್ತದೆ:

ಮೊಲಕ್ಕೆ ಅರಿವಾಗುತ್ತದೆ, ನಮ್ಮಿಬ್ಬರಿಗೂ ಅವರವರದ್ದೇ ಆದ ಸಾಮರ್ಥ್ಯಗಳಿವೆ. ನಾವಿಬ್ಬರೂ ಹೀಗೆ ಸ್ಪರ್ಧೆ ಮಾಡಿಕೊಂಡು ಇದ್ದರೆ ಒಮ್ಮೆ ನಾನು ಸೋಲುತ್ತೇನೆ, ಇನ್ನೊಮ್ಮೆ ಆಮೆ ಸೋಲುತ್ತದೆ. ಅಷ್ಟೇ ವಿನಃ ಮತ್ತೇನೂ ಪ್ರಯೋಜನವಿಲ್ಲ. ಹೀಗೆ ಯೋಚಿಸಿದ ಮೊಲ ಆಮೆಯ ಮನೆಗೆ ಹೋಗಿ ಒಪ್ಪಂದ ಮಾಡಿಕೊಳ್ಳುತ್ತದೆ. ಇಬ್ಬರೂ ಫ್ರೆಂಡ್ಸ್ ಆಗುತ್ತವೆ. ಮತ್ತೆ ತಮ್ಮ ಮಧ್ಯೆ ಸ್ಪರ್ಧೆ ನಡೆಯುತ್ತಿರುವುದಾಗಿ ಕಾಡಿನಲ್ಲಿ ಡಂಗುರ ಸಾರುತ್ತವೆ.

ಇಷ್ಟೊತ್ತಿಗಾಗಲೇ ಆಮೆ-ಮೊಲದ ಓಟದ ಸ್ಪರ್ಧೆ ಕಾಡಿನಲ್ಲೆಲ್ಲಾ ಜನಪ್ರಿಯ (ಪ್ರಾಣಿಪ್ರಿಯ?)ವಾಗಿರುತ್ತದೆ. ಎಲ್ಲಾ ಕಡೆ ಬ್ಯಾನರ್ರು ಕಟ್ಟಲಾಗುತ್ತದೆ. ರಾಜ ಸಿಂಹ ತನ್ನ ಹೆಂಡತಿ ಮಕ್ಕಳ ಸಮೇತ ಬಂದು ಗ್ಯಾಲರಿಯಲ್ಲಿ ಕೂರುತ್ತದೆ. ಟ್ರಾಕಿನ ಇಕ್ಕೆಲಗಳಲ್ಲೂ ಪ್ರಾಣಿಗಳು ಓಟವನ್ನು ವೀಕ್ಷಿಸಲು ನಿಂತಿರುತ್ತವೆ. ಕ್ಷಣಗಣನೆ ಆರಂಭವಾಗುತ್ತದೆ. ನರಿ ವಿಶಲ್ ಊದುತ್ತದೆ.

ಮೊದಲೇ ಗುಪ್ತವಾಗಿ ಮಾತಾಡಿಕೊಂಡಿದ್ದಂತೆ, ಶಿಳ್ಳೆ ಶಬ್ದ ಕೇಳುತ್ತಿದ್ದಂತೆಯೇ ಆಮೆ ಮೊಲದ ಬೆನ್ನೇರಿ ಕೂರುತ್ತದೆ. ಆಮೆ ಜೋರಾಗಿ ಓಡುತ್ತದೆ. ಮಧ್ಯದಲ್ಲಿ ಹೊಳೆ ಬರುತ್ತದೆ. ಆಗ ಆಮೆ ಕೆಳಗಿಳಿದು ತನ್ನ ಬೆನ್ನ ಮೇಲೆ ಮೊಲವನ್ನು ಕೂರಿಸಿಕೊಳ್ಳುತ್ತದೆ. ಹೊಳೆ ದಾಟಿಯಾದ ಮೇಲೆ ಮತ್ತೆ ಮೊಲದ ಬೆನ್ನಮೇಲೆ ಆಮೆ ಕೂರುತ್ತದೆ. ಜೋರಾಗಿ ಓಡಿ, ವೀಕ್ಷಕರೆಲ್ಲ ಬೆಕ್ಕಸ ಬೆರಗಾಗುವಂತೆ, ಸ್ಪರ್ಧೆ ಶುರುವಾದ ಕೆಲವೇ ನಿಮಿಷಗಳಲ್ಲಿ ಆಮೆ-ಮೊಲ ಎರಡೂ ಒಟ್ಟಿಗೇ ಗುರಿ ತಲುಪುತ್ತವೆ.

ಕತೆಯ ನೀತಿಯನ್ನು ಅರಿತ ಲಂಡನ್ನಿನ ಆ ವ್ಯಾಪಾರಿ ವಾಪಸು ತೆರಳಿ ಆ ಮತ್ತೊಂದು ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತಾನೆ. ಎರಡೂ ಕಂಪನಿಗಳೂ ವಿಲೀನವಾಗಿ, ಮುಂದಿನ ವರ್ಷ ದುಪ್ಪಟ್ಟು ಲಾಭ ಗಳಿಸಿ, ಲಂಡನ್ನಿನ ವಿಖ್ಯಾತ ಕಂಪನಿಗಳಾಗುತ್ತವೆ.

ಕತೆ, ಯಕ್ಚುವಲಿ ಇಲ್ಲಿಗೆ ಮುಗಿಯಿತು. ಆದರೆ ನನಗೆ ಇತ್ತೀಚೆಗೊಂದು ಎಸ್ಸೆಮ್ಮೆಸ್ ಬಂದಿತ್ತು. ಈಗ ನೀವು ಈ ಸೀಕ್ವೆಲ್ಲುಗಳನ್ನೆಲ್ಲ ಒಂದು ಕ್ಷಣ ಮರೆತು, ಒರಿಜಿನಲ್ ಆಮೆ-ಮೊಲದ ಕತೆಯನ್ನಷ್ಟೇ ನೆನಪಿಟ್ಟುಕೊಳ್ಳಿ. ನನಗೆ ಬಂದ ಎಸ್ಸೆಮ್ಮೆಸ್ಸು ಹೀಗಿದೆ:

ಆಮೆ ಮತ್ತು ಮೊಲ ಸಿಇಟಿ ಪರೀಕ್ಷೆಗೆ ಕಟ್ಟಿದ್ದವು. ಇಬ್ಬರೂ ಸಮಾನ ಬುದ್ಧಿವಂತರು, ಇಬ್ಬರ ಕೈಯಲ್ಲೂ ಸಮಾನ ಅಂಕಗಳಿದ್ದ ಅಂಕಪಟ್ಟಿಗಳಿದ್ದವು. ಆದರೆ ಕೊನೆಯಲ್ಲಿ, ಆಮೆಗೆ ಸಿಇಟಿಯಲ್ಲಿ ಸೀಟು ಸಿಗುತ್ತದೆ; ಮೊಲಕ್ಕೆ ಸಿಗುವುದಿಲ್ಲ. ಯಾಕೆ?

ಉ: ಯಾಕೇಂದ್ರೆ, ಆಮೆಗೆ ಸ್ಪೋರ್ಟ್ಸ್ ಕೋಟಾದಲ್ಲಿ ಸೀಟ್ ಸಿಕ್ತು! (ಹಿಂದೆ ಆಮೆ ಓಟದ ಸ್ಪರ್ಧೇಲಿ ಗೆದ್ದಿದ್ದು ನೆನಪಿದೆಯಲ್ವಾ?) :-)

ನನಗೆ ಈ ಎಸ್ಸೆಮ್ಮೆಸ್ಸು ಇಷ್ಟವಾಗಿ ನನ್ನೊಂದಿಷ್ಟು ಗೆಳೆಯ-ಗೆಳತಿಯರಿಗೆ ಫಾರ್ವರ್ಡ್ ಮಾಡಿದೆ. ಅವರಲ್ಲಿ ಒಬ್ಬ ಗೆಳತಿ ರಿಪ್ಲೇ ಮಾಡಿದ್ದಳು:

ಓಹ್ ಅದಕ್ಕೇನಾ ಮೊಲ ಬೇಜಾರಾಗಿ 'ಮುಂಗಾರು ಮಳೆ' ಫಿಲ್ಮಲ್ಲಿ ದೇವದಾಸ್ ಆಗಿ ಗಣೇಶನ ಜೊತೆ ಸೇರಿಕೊಂಡಿದ್ದು..? ಅಂತ!

ಕತೆಯೊಂದು ಮುಂದುವರೆಯುವ ಬಗೆ ಕಂಡು ನನಗೆ ಅಚ್ಚರಿ!

(ಈ 'ಕತೆಗಳ ಕತೆ'ಯನ್ನು ಓದುವಾಗ ನೀವೂ ಮಗುವಾಗಿದ್ದಿರಿ ಅಂತ ನಂಗೊತ್ತು. ನಿಮಗೆ ಮಕ್ಕಳ ದಿನಾಚರಣೆಯ ಶುಭಾಷಯಗಳು!)

Tuesday, November 06, 2007

ದೀಪವಾಗಬೇಕಿದೆ...

ಜನಿಯ ನೆರವಿಗೆ ಅದೆಷ್ಟೊಂದು ಚಿಕ್ಕೆಗಳು..! ದಿಟ್ಟಿ ಹಾಯಿಸಿದಷ್ಟೂ ವಿಸ್ತರಿಸಿರುವ, ದಿಗಂತದಂತೆ ಕಂಡರೂ ಅಂತ್ಯವಲ್ಲದ ಈ ಅಗಾಧ ನಭದ ಅಧಿಪತಿ ಚಂದಿರನ ಒಡ್ಡೋಲಗದಲ್ಲಿ ಅದೆಷ್ಟು ಕೋಟಿ ಕೋಟಿ ತಾರೆಗಳ ಒಟ್ಟಿಲು..! ಸುತ್ತ ಕವಿದಿರುವ ತಿಮಿರದ ಕಣಗಳ ಅಪ್ಪುಗೆಗೆ ಸಿಲುಕಿ ಕುಳಿತಿರುವ ನನ್ನ ನೆರವಿಗೆ ಬರುವ ಯಾವ ಕರುಣೆಯನ್ನೂ ತೋರದೇ ಅಲ್ಲಲ್ಲೇ ತಮ್ಮ ತಮ್ಮ ಗ್ರಹಗಳಿಗೆ ಬೆಳಕು ನೀಡುತ್ತಾ ನಿಶ್ಚಿಂತೆಯಿಂದಿರುವ ನಕ್ಷತ್ರಗಳು..! ಚಂದ ತುಂಬಿದ ಚಂದ್ರಮ, ಚಿಕ್ಕೆ ತುಂಬಿದ ಗಗನ, ಕನಸು ತುಂಬಿದ ನಿದ್ರೆ ...ಎಂದೇನೇನೋ ಸುಳ್ಳೇ ಭರವಸೆಗಳನಿತ್ತು ಸಂಜೆಯಾಗುತ್ತಿದ್ದಂತೆಯೇ ಮತ್ಯಾವುದೋ ದೇಶದವರಿಗೆ ಬೆಳಗು ಮಾಡಲು, ಅಲ್ಲಿಯ ಹಕ್ಕಿಗಳನ್ನು ಗೂಡಿನಿಂದ ಪುರ್ರನೆ ಹಾರಿಸಲು ಓಡಿ ಹೋದ ಸೂರ್ಯ... ಬೇಗ ಬಾ ಭೂಪಾ, ಈ ಅಂಧಃಕಾರವ ಕಳೆ...

ಹತ್ತಿರದಲ್ಲೊಂದು ಹಣತೆ... ಈ ನಿಶೆಯ ಮೌನದಲ್ಲಿ ಏನೋ ಗೊಣಗುತ್ತಿದೆಯಲ್ಲ.. ಏನದು..? ನಾನು ಕಿವಿಗೊಟ್ಟು ಕೇಳುತ್ತೇನೆ: ಸೂರ್ಯನಿಗಾಗಿ ಕಾಯಬೇಡ. ಅವನ ಬೆಳಕನ್ನೇ ಪ್ರತಿಫಲಿಸುತ್ತಾ, ನಾಲ್ಕು ದಿನ ನಿನ್ನ ಮನಸೂರೆಗೊಳ್ಳುವಂತೆ ಕಂಗೊಳಿಸುತ್ತಾ, ಕೊನೆಗೆ ಅಮಾವಾಸ್ಯೆಯ ನೆಪವೊಡ್ಡಿ ಮಾಯವಾಗಿಬಿಡುವ ಚಂದ್ರನನ್ನು ನಂಬಬೇಡ. ಮಿನುಗು ತಾರೆಗಳ ಕಣ್ಮಿಣುಕನ್ನು ದೃಷ್ಟಿಸುತ್ತಾ ಏನನ್ನೋ ಹುಡುಕುತ್ತಾ ಹಂಬಲಿಸಬೇಡ. ಬಾ, ನನ್ನೊಡಲಿಗೆ ಒಂದೇ ಒಂದು ಮಿಳ್ಳೆ ಎಣ್ಣೆಯೆರೆ.. ಬತ್ತಿಯ ತುದಿಗೆ ಬೆಂಕಿ ಸೋಕಿಸು ಸಾಕು.. ನಿನ್ನ ಸುತ್ತ ಕವಿದಿರುವ ಈ ತಮಕ್ಕೆ ನಾನು ಬುದ್ಧಿ ಹೇಳುತ್ತೇನೆ.. ರಾತ್ರಿಯಿಡೀ ನಿನ್ನ ಮನೆಯನ್ನು ಬೆಳಗುತ್ತೇನೆ.. ದಾರಿ ತೋರುತ್ತೇನೆ.. ನಾಳೆಯೆಂಬ ಹೊಸ ಜಗತ್ತಿಗೆ ಕರೆದೊಯ್ಯುತ್ತೇನೆ...

ದೀಪದ ಸ್ಪೂರ್ತಿಭರಿತ ಮಾತುಗಳು ನನ್ನಲ್ಲೊಂದು ಅಂತಃಶಕ್ತಿಯನ್ನು ತುಂಬುತ್ತವೆ... ನಾನು ಎದ್ದುಹೋಗಿ ಎಣ್ಣೆ ತಂದೆರೆದು, ಬತ್ತಿಯ ಕುಡಿಗೆ ಬೆಂಕಿ ತಾಕಿಸುತ್ತೇನೆ.. ಮಂದ್ರದ ಸ್ವರದಂತೆ ಕೋಣೆಯನ್ನೆಲ್ಲಾ ತುಂಬಿಕೊಳ್ಳುತ್ತದೆ ಬೆಳಕು... ನನ್ನ ಕಣ್ಗಳಲ್ಲಿ ಉಲ್ಲಾಸದ ಲಾಸ್ಯ ಮಿನುಗಿದ್ದು ದೀಪದ ಎಣ್ಣೆಯಲ್ಲಿ ಪ್ರತಿಫಲಿಸುತ್ತದೆ... ಧನ್ಯತಾ ಭಾವದಿಂದ ದೀಪದೆಡೆಗೊಂದು ಮುಗುಳ್ನಗೆಯನ್ನು ಚೆಲ್ಲುತ್ತೇನೆ.

ಥಟ್ಟನೆ ಹಣತೆಯ ಬುಡ ಕಣ್ಣಿಗೆ ಬಿದ್ದರೆ ಅಲ್ಲಿ ಕತ್ತಲೆ! "ಏನಿದು ದೀಪಾ, ನಿನ್ನ ಬುಡದಲ್ಲೇ ಕತ್ತಲೆ?!" ನಾನು ಆತಂಕಗೊಂಡು ಕೇಳುತ್ತೇನೆ. ದೀಪದ್ದು ನಿರುಮ್ಮಳ ಉತ್ತರ: "ಹ್ಮ್..! ಅದರ ಬಗ್ಗೆ ನನಗೆ ಕಾಳಜಿಯಿಲ್ಲ. ನನ್ನ ತಳದ ತಮದ ಬಗ್ಗೆ ಚಿಂತಿಸುತ್ತಾ ಕೂರುವುದು ನನ್ನ ಕೆಲಸವಲ್ಲ. ಒಡಲಿನ ಎಣ್ಣೆ ಬತ್ತುವವರೆಗೆ, ಬತ್ತಿ ಸುಟ್ಟು ಭಸ್ಮವಾಗುವವರೆಗೆ ಪರರ ಮನೆಯನ್ನು ಬೆಳಗುವುದಷ್ಟೇ ನನ್ನ ಕರ್ತವ್ಯ... ನನ್ನ ಬೆಳಕಿನ ದೆಸೆಯಿಂದ ಯಾರೋ ನಲಿದಾಡುವುದನ್ನು ನೋಡುವುದೇ ನನ್ನ ಜ್ವಾಲೆಯ ಬಳುಕಿಗೆ ಹಿತದ ಆಮ್ಲಜನಕದ ಸೇಚನ... ಅಷ್ಟು ಸಾಕು ನನಗೆ... ನನ್ನ ಬಗ್ಗೆ ನಿನಗೆ ಚಿಂತೆ ಬೇಡ. ಹೋಗು, ನಿನ್ನ ಕೆಲಸ ಮಾಡಿಕೋ."

ಅಲ್ಲಿಂದ ಕದಲದೇ ನನ್ನನ್ನೇ ನಾನು ನೋಡಿಕೊಳ್ಳುತ್ತೇನೆ: ಸದಾ ನನಗೆ ಯಾರಾದರೂ ಬೆಳಕು ನೀಡುತ್ತಿರಬೇಕು. ಹಗಲಿಡೀ ಬೆಳಕಾಗಿದ್ದರೂ ಸಂಜೆ ಹೊರಟು ನಿಂತಾಗ ಸೂರ್ಯನೆಡೆಗೆ ಕೋಪ.. ಆಗಾಗ ಮರೆಯಾಗುತ್ತಾನೆಂದು ಚಂದ್ರನ ಮೇಲೆ ಆರೋಪ.. ಬೆಳಕನ್ನೇ ಕೊಡುವುದಿಲ್ಲವೆಂದು ನಕ್ಷತ್ರಗಳ ಬಗ್ಗೆ ಅಸಮಾಧಾನ.. ಎಲ್ಲಾ ಮುಗಿದಮೇಲೆ ಹಣತೆಯೆದುರು ನನ್ನ ದುಮ್ಮಾನ.. ಹೌದೂ, ನಾನ್ಯಾರಿಗೆ ಬೆಳಕಾಗಿದ್ದೇನೆ?

ಎಷ್ಟೊತ್ತಿಗೂ ನನ್ನ ಬಗ್ಗೆಯೇ ಚಿಂತೆ ನನಗೆ. ಎಲ್ಲಿ ಯಾರು ಅಳುತ್ತಿದ್ದರೂ ನನ್ನ ಮನೆಯಲ್ಲಿ ನಗುವಿರಬೇಕು. ಎಲ್ಲಿ ಯಾರು ಹಸಿವಿನಿಂದ ಸಾಯುತ್ತಿದ್ದರೂ ನನ್ನ ಬಾಳೆಯಲ್ಲಿ ಮೃಷ್ಟಾನ್ನವಿರಬೇಕು. ಎಲ್ಲಿ ಚಂಡಮಾರುತ ಬೀಸಿ ಎಲ್ಲಾ ನಿರಾಶ್ರಿತರಾಗಿದ್ದರೂ ನನ್ನ ಮನೆಯ ಫ್ಯಾನು ತಿರುಗುತ್ತಿರಬೇಕು. ಎಲ್ಲಿ ಯಾರು ಸತ್ತು ಉಳಿದವರ ಬದುಕು ಅಂಧಃಕಾರದಲ್ಲಿ ನರಳುತ್ತಿದ್ದರೂ ನನ್ನ ಸುತ್ತ ಬೆಳಕಿರಬೇಕು... ನಾನು ನನ್ನ ಸ್ವಾರ್ಥ ಬಿಟ್ಟು ಈ ದೀಪದಂತೆ ಬೇರೆ ಯಾರಿಗಾಗಿಯೋ ಬೆಳಗುವುದು ಯಾವಾಗ? ಜೋಪಡಿಯ ಮಕ್ಕಳೆಯಲ್ಲ ಕತ್ತಲ ಬಾಗಿಲಲ್ಲಿ ನಿಂತು ಮಿಕಮಿಕನೆ ನೋಡುತ್ತಿರುವಾಗ ನಾನು ಸುರುಸುರುಬತ್ತಿಯಿಂದ ಬಿರುಸಿನಕುಡಿಕೆಗೆ ಬೆಂಕಿ ತಾಗಿಸಿ ಗೆಳೆಯರೊಟ್ಟಿಗೆ ಕೇಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ?

ದೀಪಾವಳಿಯ ಎದುರಿನಲ್ಲಿ ಒಂದು ಹೊಸ ಸಂಕಲ್ಪ ಮಾಡಬೇಕಿದೆ. ಆರಿಹೋದ ಮನೆಗಳ ದೀಪಗಳನ್ನು ಬೆಳಗಬೇಕಿದೆ. ಕತ್ತಲೆ ತುಂಬಿದ್ದಲ್ಲಿ ಹಣತೆ ಒಯ್ದು ಹಚ್ಚಿಡಬೇಕಿದೆ. ಯಾರದೋ ಬಾಳಿನ ಕತ್ತಲೆಗೆ ನಾನೇ ದೀಪವಾಗುವ ಪ್ರಯತ್ನ ಮಾಡಬೇಕಿದೆ. ಕನಿಷ್ಟ, ಆ ಜೋಪಡಿಯ ಮಗುವಿನ ಕೈಗೊಂದು ಸುರುಸುರುಬತ್ತಿ ಕೊಟ್ಟು ಅದರ ಕಂಗಳಲ್ಲಾಗುವ ಭೀತ-ಸಂಭ್ರಮದ ನಕ್ಷತ್ರಪಾತವನ್ನು ಕತ್ತಲಲ್ಲಿ ನಿಂತು ನೋಡುತ್ತಾ ನಾನು ಕಳೆದುಹೋಗಬೇಕಿದೆ...

ನಿಮಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಷಯಗಳು...