Tuesday, May 28, 2013

ಪಲ್ಲಂಗ ಪಲ್ಲಟ

ಮಳ್ಳಿ ಯಾಕೆ ಹಾಗಂದಳೋ ನನಗೆ ಗೊತ್ತಿಲ್ಲ, ಅಂತೂ ಮಂಚದ ವಿಷಯದಲ್ಲಿ ಕೊಂಚ ಎಚ್ಚರ ತಪ್ಪಿದರೂ ನಾವೇ ಮರುಳರಾಗುವುದು ಖಚಿತ ಎಂಬುದನ್ನು ನಾನು ಅರಿತುಕೊಂಡಿದ್ದೇನೆ.  ಮಂಚಾನಾ, ಮೂರು ಮತ್ತೊಂದು ಕಾಲು, ಮಧ್ಯದಲ್ಲೊಂದು ಹಲಗೆ, ಅದರ ಮೇಲೆ ಹಾಸಿಗೆ ಹಾಕಿ ಮಲಗಿದರೆ ಆಯಿತು ಅಂತೇನಾದರೂ ನೀವು ಮಂಚದ ವಿಷಯವನ್ನು ಅಸಡ್ಡೆಯಿಂದ ಪರಿಗಣಿಸುವಿರಾದರೆ, ಕೇಳಿ, ಅದೇನು ಅಷ್ಟು ಸಿಲ್ಲಿ ಸಂಗತಿಯಲ್ಲ. ಶಯನಕ್ಕೇನು, ಹಾವಿನ ಮೈಯಾದರೂ ಆದೀತು, ಬಾಣದ ರಾಶಿಯಾದರೂ ಆದೀತು ಎನ್ನಲು ನಾವೇನು ಮಹಾವಿಷ್ಣುವೋ, ಆಚಾರ್ಯ ಭೀಷ್ಮರೋ ಅಲ್ಲವಷ್ಟೇ?  ಹುಲುಮಾನವರಾದ ನಮಗೆ, ರಾತ್ರಿ ಮಲಗಿ ಬೆಳಿಗ್ಗೆ ಏಳಲು ಹಂಸತೂಲಿಕಾತಲ್ಪವಲ್ಲದಿದ್ದರೂ ಒಂದು ಸಾಧಾರಣ ಮೆತ್ತನೆ ಹಾಸಿಗೆಯಾದರೂ ಬೇಕಲ್ಲ?

ನಮ್ಮ ಮನೆಯಲ್ಲಿ ಒಂದು ಮಂಚವಿತ್ತು. ಅಜ್ಜಿ ಮಲಗಲು ಬಳಸುತ್ತಿದ್ದ ಅದನ್ನು ‘ಅಜ್ಜೀಮಂಚ’ ಅಂತಲೇ ನಾವು ಕರೆಯುತ್ತಿದ್ದೆವು. ನಮ್ಮ ಹಳೇಮನೆಯ ಜಗುಲಿಯ ಮೂಲೆಯಲ್ಲಿ ಸ್ಥಾಪಿತವಾಗಿದ್ದ ಈ ಮಂಚ, ನಮ್ಮ ಮನೆಯಲ್ಲಿದ್ದ ಯಾವತ್ತೂ ಹಾಸಿಗೆಗಳನ್ನು ತನ್ನ ಮೇಲೆ ಹಾಸಿಕೊಂಡು ಅದರ ಮೇಲೆ ಅಜ್ಜಿಯನ್ನೂ ಮಲಗಿಸಿಕೊಳ್ಳುತ್ತಿತ್ತು. ತಯಾರಾಗಿ ಅದೆಷ್ಟು ವರ್ಷವಾಗಿತ್ತೋ, ಅದರ ಕಾಲ ಕೆತ್ತನೆಗಳು ಸಹ ಅಸ್ಪಷ್ಟವಾಗುತ್ತ ನುಣ್ಣಗಾದ ಹಾಗಿತ್ತು. ಅಜ್ಜಿಗೆ ಈ ಮಂಚದ ಮೇಲೆ ವಿಪರೀತ ಮಮಕಾರವಿತ್ತು. ಜಗುಲಿಯಲ್ಲೇ ಇದ್ದುದರಿಂದ ಮನೆಗೆ ಬಂದ ಜನ ಖುರ್ಚಿಯ ಬದಲು ಮೆತ್ತಗೆ ಹೋಗಿ ಇದರ ಮೇಲೇ ಆಸೀನರಾಗುತ್ತಿದ್ದರು. ಆಗ ಅವರು ಅಜ್ಜಿಯ ಕಟುಮಾತುಗಳಿಗೆ ಗುರಿಯಾಗಬೇಕಿತ್ತು: “ಇದು ಕೂರೋ ಮಂಚ ಅಲ್ಲ, ಮಲಗೋ ಮಂಚ” ಎಂದವಳು ದೊಡ್ಡ ದನಿಯಲ್ಲಿ ಹೇಳಿದರೆ, ಕೂತಿದ್ದವರು ಕಕ್ಕಾಬಿಕ್ಕಿಯಾಗಿ ಪಕ್ಕದ ಖುರ್ಚಿಗೆ ವರ್ಗಾವಣೆಯಾಗುತ್ತಿದ್ದರು.

ಅಪ್ಪ-ಅಮ್ಮನ ಮದುವೆಯ ಸಮಯದಲ್ಲಿ ನನ್ನ ಅಜ್ಜಿಯ ತಮ್ಮ ರಾಘವೇಂದ್ರಜ್ಜ ಒಂದು ಡಬಲ್ ಕಾಟ್ ಉಡುಗೆರೆಯಾಗಿ ಕೊಟ್ಟ. ಫಾರೆಸ್ಟರ್ ಹುದ್ದೆಯಲ್ಲಿದ್ದು ರಿಟೈರ್ಡ್ ಆಗಿದ್ದ ಆತ ಎಲ್ಲೋ ಅಷ್ಟಿಷ್ಟು ಉಳಿಸಿಟ್ಟಿದ್ದ ಮರಮಟ್ಟು ಬಳಸಿ ತಾನೇ ತಯಾರಿಸಿದ ಮಂಚವಾಗಿತ್ತದು.  ಸರ್ಕಾರಿ ಹುದ್ದೆಯಲ್ಲಿದ್ದೂ ಒಂದು ಬಿಡಿಗಾಸೂ ಮಾಡಿಕೊಳ್ಳದೆ ಪ್ರಾಮಾಣಿಕವಾಗಿ ಸರ್ವೀಸ್ ಮುಗಿಸಿ ನಿವೃತ್ತನಾಗಿದ್ದ ಅವನು, ತನ್ನ ಮನೆಗೆಂದು ಒಂದಷ್ಟು ಪೀಟೋಪಕರಣಗಳನ್ನೂ, ಹೀಗೆ ಅವರಿವರಿಗೆ ಒಂದೆರಡು ಮಂಚಗಳನ್ನೂ ಮಾಡಿಕೊಟ್ಟದ್ದೇ ದೊಡ್ಡ ಸಂಗತಿಯಾಗಿತ್ತು. ಈ ಮಂಚ ಅಪ್ಪ-ಅಮ್ಮನ ರೂಮಿನಲ್ಲಿ ಪ್ರತಿಷ್ಟಾಪಿತವಾಯಿತು. ಈ ಮಂಚದ ಕೆಳಗೆ ನಾವು ಮಳೆಗಾಲದಲ್ಲಿ ಕೊಯ್ದು ಮಾಗಿಸಿ ಇಟ್ಟಿದ್ದ ಚೀನಿ ಕಾಯಿ, ಕುಂಬಳ ಕಾಯಿ, ಸೌತೆಕಾಯಿಗಳು ಸದಾ ಇರುತ್ತಿದ್ದವು.

ನಾವು ಹೊಸ ಮನೆ ಕಟ್ಟಿಸುವ ಹೊತ್ತಿಗೆ ಅಜ್ಜಿಯ ಮಂಚ ಪೂರ್ತಿ ಲಡ್ಡಾಗಿತ್ತು. ಕಾಲಿನಿಂದ ಶುರು ಮಾಡಿಕೊಂಡ ವರ್ಲೆ ಹುಳಗಳು, ಅದರ ಚೌಕಟ್ಟು ಮುಗಿಸಿ, ಹಲಗೆಯನ್ನು ಕೊರೆದು ಈಗ ಹಾಸಿಗೆಯನ್ನೂ ಹಾಳುಮಾಡತೊಡಗಿದ್ದವು.  ಜಾಸ್ತಿ ತೂಕವಿರುವವರು ಮಲಗಿದರೆ ಮಂಚವೇ ಮುರಿದುಹೋಗುವ ಸಾಧ್ಯತೆ ಇತ್ತು. ಹೀಗಾಗಿ ನಾವು, ಹೊಸ ಮನೆಯ ಕಿಟಕಿ-ಬಾಗಿಲು ಇತ್ಯಾದಿ ಕಾಮಗಾರಿಗೆ ಬಂದಿದ್ದ ಆಚಾರಿಯಿಂದ ಅಜ್ಜಿಗೆಂದು ಒಂದು ಹೊಸ ಮಂಚ ಮಾಡಿಸಿದೆವು. ಮನೆಯ ಕಿಟಕಿ-ಬಾಗಿಲಿಗೆ ಸಾಕಾಗಿ ಉಳಿದ ಮರದಿಂದಲೇ ಆ ಮಂಚವನ್ನು ನಾವು ಮಾಡಿಸಿದ್ದರೂ, ಹಲಸಿನ ಬಣ್ಣವನ್ನು ಹಚ್ಚಿ ಪಾಲಿಶ್ ಮಾಡಿಸಿದ್ದರಿಂದ ಹಲಸಿನ ನಾಟಾದಿಂದಲೇ ತಯಾರಿಸಿದಂತೆ ಅದು ಕಾಣುತ್ತಿತ್ತು. ಹಲಸಿನ ಮರದ ತುಂಡು ಸಿಗುವುದೇ ದುರ್ಲಭವಾದ ದಿನಗಳಲ್ಲಿ ಇಂತಹ ಮಂಚ ನಾವು ಮಾಡಿಸಿದ್ದಾದರೂ ಹೇಗೆ ಅಂತ ಊರ ಕೆಲವರು ಬಂದು ನೋಡಿ ‘ಅರೇರೆರೆರೆ! ಭಾರಿ ಲಾಯ್ಕಾಯ್ದಲೋ! ಎಷ್ಟು ಬಿತ್ತೋ?’ ಅಂತೆಲ್ಲ ವಿಚಾರಿಸಿಕೊಂಡು ಹೋದರು.  ಈ ಹೊಸ ಮಂಚ ನಮ್ಮ ಹೊಸ ಮನೆಯ ಅಜ್ಜಿಯ ರೂಮು ಸೇರಿಕೊಂಡಿತು.  ಅಜ್ಜಿ ಬದುಕಿರುವವರೆಗೂ ಯಾರಿಗೂ ಮಲಗಲು ಆ ಮಂಚ ಬಿಟ್ಟುಕೊಡಲಿಲ್ಲ. ‘ಹೊಸ ಮನೆಯಲ್ಲಿ ಅಪ್ಪ-ಅಮ್ಮನಿಗೆ ಮಂಚವಿದೆ, ಅಜ್ಜಿಗೂ ಮಂಚವಿದೆ, ನನಗೆ ಮಾತ್ರ ಇಲ್ಲ, ನೆಲಕ್ಕೇ ಮಲಗಬೇಕು’ ಅಂತ ನಾನು ಆಗ ಮನಸಿನಲ್ಲೇ ಅಂದುಕೊಂಡಿದ್ದೆ. ಅದು ಅರ್ಥವಾದಂತೆ ಕಂಡ ಅಮ್ಮ, ‘ನಿಂಗೂ ಒಂದು ಮಂಚ ಮಾಡಿಸ್ಲಾಗಿತ್ತು. ಆದ್ರೆ ನಿಂಗೆ ನಿದ್ರೇಲಿ ಗೊತ್ತಾಗ್ತಲ್ಲೆ. ಹೊಳ್ಳಿ ಬಿದ್ದೋಗ್ತೆ. ಅದಕ್ಕೇ ಮಾಡ್ಸಲ್ಲೆ’ ಅಂತ ಸಮಾಧಾನ ಮಾಡಿದ್ದಳು.

ಆದರೆ ನನಗೂ ಒಂದು ಮಂಚ ಮಾಡಿಸುವ ಸಂದರ್ಭ ಬಹಳ ವರ್ಷಗಳ ನಂತರ ಅವರಿಗೆ ಬಂದೊದಗಿತು.  ಪ್ರೀತಿಸಿದೆ ಎನ್ನುವ ಒಂದೇ ಒಂದು ಕಾರಣಕ್ಕೆ ನನಗೂ ನನ್ನ ಹುಡುಗಿಗೂ ಮದುವೆ ಗೊತ್ತಾಗಿಹೋಯಿತು. ಇನ್ನೂ ಮೂರು ವರ್ಷ ತಡ, ಎರಡು ವರ್ಷ ತಡ ಅಂತೆಲ್ಲ ಅಂದುಕೊಂಡು ಹಾಯಾಗಿರಬೇಕಾದರೆ, ಇನ್ನು ಆರೇ ತಿಂಗಳಲ್ಲಿ ನನ್ನ ಮದುವೆ ಅಂತ ಆಗಿಹೋಯಿತು. ಮದುವೆ ಎಂದರೇನು ಸಾಮಾನ್ಯವೇ, ಅಡ್ನಾಡಿಯಾಗಿ ಓಡಾಡಿಕೊಂಡಿದ್ದ ನಾನು ಅನೇಕ ಜವಾಬ್ದಾರಿಗಳನ್ನು ಹೊರಲಿಕ್ಕೆ ಸಿದ್ಧವಾಗಬೇಕಾಯಿತು. ನನ್ನ ಬ್ಯಾಚುಲರ್ ಮನೆಯನ್ನು ಬದಲಿಸಿ ಬೇರೆ ಮನೆ ಮಾಡಬೇಕಾಯಿತು. ಸಂಸಾರಕ್ಕೆ ಬೇಕಾದ ಸಾಮಗ್ರಿಗಳನ್ನೆಲ್ಲ ಕೊಳ್ಳಬೇಕಾಯಿತು.

“ಏನೇನ್ ಬೇಕಾಗ್ಬೋದು ಗುರು?” ಅಂತ ನನ್ನ ಫ್ರೆಂಡಿನ ಬಳಿ ಕೇಳಿದ್ದಕ್ಕೆ ಅವನು ದೊಡ್ಡ ಪಟ್ಟಿಯನ್ನೇ ಕೊಟ್ಟ: “ನೋಡೋ, ಮನೆ ಅಂದ್ಮೇಲೆ ಒಂದು ಟೀವಿ, ಫ್ರಿಜ್ಜು, ವಾಶಿಂಗ್ ಮಶೀನು, ಗೀಜರು, ಅಡುಗೆ ಮನೆಗೆ ಮಿಕ್ಸರು, ಕುಕ್ಕರ್ರು, ಫಿಲ್ಟರು, ಹಾಲ್‌ನಲ್ಲಿ ಒಂದು ದೀವಾನ್.. ಹಾಂ, ನಿಮ್ ಬೆಡ್‌ರೂಮಿಗೆ ಒಂದು ಡಬಲ್ ಕಾಟ್..” ಇವನ ಪಟ್ಟಿ ನೋಡಿ ತಲೆತಿರುಗಿ ನಾನು ಇವುಗಳಲ್ಲಿ ಯಾವ್ಯಾವುದನ್ನು ಬಿಡಲು ಸಾಧ್ಯ ಅಂತ ಯೋಚಿಸಿದೆ. “ಕಾಟ್ ಬೇಕೇಬೇಕಾ ಗುರು? ನೆಲದ ಮೇಲೇ ಮಲಗಿದ್ರೆ ಆಗಲ್ವಾ?” ಕೇಳಿದೆ. ಅದಕ್ಕವನು, “ಯೋಯ್, ನೆಲದ ಮೇಲೆ ಮಲಗಿದ್ರೆ ಚನಾಗಿರಲ್ಲ ಕಣೋ, ಚೀಪ್ ಅನ್ಸುತ್ತೆ. ಮಂಚ ಇರ್ಲೇಬೇಕು. ನಿಮಗೇನು, ಒಂದು ಫೋರ್ ಬೈ ಸಿಕ್ಸ್ ತಗೊಂಡ್ರೆ ಸಾಕಪ್ಪ” ಎಂದು, ಸಂಸಾರಿಗರಿಗೆ ಮಂಚವೊಂದು ಮೂಲಭೂತ ಅವಶ್ಯಕತೆ ಎಂಬಂತೆ ಹೇಳಿದ.

ವಿಷಯ ಎಂದರೆ, ನನ್ನ ಮದುವೆಗೆ ತಯಾರಿ ಎಂಬುದು ಕೇವಲ ನಾನು ಇಲ್ಲಿ ಬೆಂಗಳೂರಿನಲ್ಲಿ ಮಾಡಿಕೊಳ್ಳುವುದಷ್ಟೇ ಆಗಿರಲಿಲ್ಲ. ಊರಿನಲ್ಲೂ ಅನೇಕ ಕೆಲಸಗಳಿದ್ದವು. ಮನೆಯನ್ನು ನವೀಕರಿಸಿ ಸುಣ್ಣ-ಬಣ್ಣ ಮಾಡಿಸುವುದರಿಂದ ಹಿಡಿದು ಅಂಗಳ ಸಮ ಮಾಡಿ ಚಪ್ಪರ ಹಾಕಿಸುವುದರವರೆಗೆ. ಅದರ ಜತೆಗೇ ಅಪ್ಪ-ಅಮ್ಮರಿಗೆ ಮತ್ತೊಂದು ಸಮಸ್ಯೆಯೂ ಹೊಳೆಯಿತು: ನವದಂಪತಿಗಳನ್ನು ಮಲಗಿಸುವುದು ಎಲ್ಲಿ? ಈಗ ತಾವು ಮಲಗುವ ಮಂಚವನ್ನೇ ಬಿಟ್ಟುಕೊಡುವುದೋ ಅಥವಾ ಮತ್ತೊಂದು ರೂಮಿನಲ್ಲಿ ಹೊಸ ಮಂಚ ಮಾಡಿಸಿ ಹಾಕುವುದೋ?  ಆದರೆ ಹಾಗೆ ಹೊಸದನ್ನು ಮಾಡಿಸುವುದಿದ್ದರೂ ಈಗ ತರಾತುರಿಯಲ್ಲಿ ಮಾಡಿಸಿವುದು ಸುಲಭದ ವಿಷಯವಾಗಿರಲಿಲ್ಲ. ಮರ ಮತ್ತಿತ್ಯಾದಿ ಸಾಮಗ್ರಿ ತಂದು, ಆಚಾರಿಯನ್ನು ಕರೆದುಕೊಂಡು ಬಂದು, ಎಲ್ಲಾ ಸರಿಯಾಗಿ ಮಾಡಿಸುವುದು ಕಷ್ಟವಿತ್ತು.  ಅಪ್ಪ ನನಗೆ ಫೋನ್ ಮಾಡಿ ಕೇಳಿದ: “ಮಂಚ ಬೇಕೇಬೇಕನಾ ಅಪ್ಪಿ? ನಿಂಗ ಎಲ್ಲೋ ವರ್ಷದಲ್ಲಿ ನಾಲ್ಕೈದು ದಿನ ಬಂದು ಇದ್ಕಂಡು ಹೋಪೋರು..”

ನನಗೆ ಇದಕ್ಕೂ ಮೊದಲೇ ನನ್ನ ಕಲೀಗೊಬ್ಬ ಅವನ ಮದುವೆ ಸಂದರ್ಭದಲ್ಲಿ ಹೇಳಿದ್ದು ನೆನಪಾಯ್ತು: “ಇನ್ನೂ ಮೂರು ತಿಂಗಳು ಮೊದಲೇ ಆಗ್ತಿತ್ತು ಕಣೋ ಮದುವೆ, ಆದ್ರೆ ನಮ್ಮ ಮನೆ ಆಲ್ಟರೇಶನ್ ಮಾಡಿಸ್ಲೇಬೇಕು ಅಂತ ನಾನು ಹಟ ಹಿಡಿದಿದ್ರಿಂದ ಲೇಟಾಯ್ತು. ನಮಗೆ ಅಂತ ಮಹಡಿ ಮೇಲೆ ಒಂದು ರೂಮ್ ಕಟ್ಟಿಸಿದೆ. ಅದಕ್ಕೆ ಮತ್ತೆ ಅಟಾಚ್ಡ್ ಬಾತು, ವಾರ್ಡ್‌ರೋಬು, ಡ್ರೆಸ್ಸಿಂಗ್ ಟೇಬಲ್ಲು, ಡಬಲ್ ಕಾಟು.. ಎಲ್ಲಾ ಮಾಡಿಸ್ಬೇಕಾಯ್ತು. ಎಷ್ಟೇ ಅಂದ್ರೂ ಅಪ್ಪ-ಅಮ್ಮರ ರೂಮಿನಲ್ಲಿ, ಅವರದೇ ಮಂಚದಲ್ಲಿ ಮಲಗೋಕೆ ಸರಿಯಾಗಲ್ಲ ಅಲ್ವಾ? ಏನೋ ಒಂಥರಾ ಕಷ್ಟವಾಗುತ್ತೆ..”

ಅವನು ಹೇಳುವವರೆಗೆ ನನಗಿದು ಹೊಳೆದಿರಲೇ ಇಲ್ಲ! ಈಗ ಅಪ್ಪ ಹೀಗೆ ಕೇಳಿದಾಗ ಏನು ಹೇಳಬೇಕೋ ಗೊತ್ತಾಗದೇ, “ನೋಡಿ, ಆದ್ರೆ ಮಾಡ್ಸಿ. ಇಲ್ಲೇಂದ್ರೆ ಪರವಾಗಿಲ್ಲೆ” ಅಂತ ಹೇಳಿದೆ. ಅಪ್ಪ, ಆಚಾರಿ ಬಂದರೆ ಮಾಡಿಸುವುದಾಗಿಯೂ, ಇಲ್ಲದಿದ್ದರೆ ತಮ್ಮ ಮಂಚವನ್ನೇ ಮತ್ತೊಂದು ರೂಮಿಗೆ ಶಿಫ್ಟ್ ಮಾಡಿಕೊಡುವುದಾಗಿಯೂ ಹೇಳಿದ.

ಇನ್ನು ನಾನು ಇಲ್ಲಿ ಮಂಚ ಖರೀದಿಸುವುದು ಬಾಕಿಯಿತ್ತು. ಹೊಸ ಮನೆಗೆ ಹೋದಮೇಲೇ ಕೊಳ್ಳೋಣ, ಈಗಲೇ ಕೊಂಡರೆ ಮತ್ತೆ ವರ್ಗಾಯಿಸುವುದು ಕಷ್ಟ ಅಂತ ತೀರ್ಮಾನಿಸಿದೆ.  ಹೀಗಿರುವಾಗಲೇ, ನನ್ನ ದೂರದ ನೆಂಟರೊಬ್ಬರ ಮನೆಗೆ ಮದುವೆಗೆ ಕರೆಯಲು ಹೋದಾಗ ಅವರು ಸಂಸಾರಕ್ಕೆ ಬೇಕಾದ್ದನ್ನೆಲ್ಲಾ ತಗೊಂಡೆಯಾ ಅಂತೆಲ್ಲ ಕೇಳುತ್ತ, ತುಂಬಾ ಮುಜುಗರ ಪಟ್ಟುಕೊಂಡೇ, “ನೋಡು, ಹಿಂಗೆ ಕೇಳಿದೆ ಅಂದ್ಕೋಬೇಡ. ನಮ್ಮನೇಲಿ ಒಂದು ಮಂಚ ಇದೆ.  ನನ್ನ ಹೆಂಡತಿ ಬಾಣಂತನದ ಸಮಯದಲ್ಲಿ ತಂದಿದ್ದು, ಆಮೇಲೆ ಬಳಸಲೇ ಇಲ್ಲ.  ನಿಂಗೆ ಈಗಲೇ ದುಬಾರಿ ಬೆಲೆಯ ಮಂಚ ಕೊಳ್ಳುವ ಯೋಚನೆ ಇಲ್ಲದಿದ್ರೆ ಮತ್ತು ನಮ್ಮನೆಯಿಂದ ತಗೊಂಡು ಹೋಗಲಿಕ್ಕೆ ಅಡ್ಡಿಯಿಲ್ಲದಿದ್ರೆ ತಗೊಂಡು ಹೋಗಬಹುದು” ಅಂತ ಹೇಳಿದರು. ನಾನೂ ಸ್ವಲ್ಪ ಮೇಲೆ-ಕೆಳಗೆ ನೋಡಿ, “ಅಯ್ಯೋ, ಅದಕ್ಯಾಕೆ ಅಷ್ಟು ಮುಜುಗರ ಮಾಡ್ಕೋತೀರಿ? ನೋಡೋಣ, ಮನೆ ಮಾಡಿದಮೇಲೆ ರೂಮ್ ಹೇಗಿರುತ್ತೆ ನೋಡ್ಕೊಂಡು ತಗೊಂಡು ಹೋಗ್ತೀನಿ. ಮದುವೆ ಆದ್ಮೇಲೆ ತಗೊಂಡು ಹೋದರೂ ನಡೆಯುತ್ತೆ” ಅಂತ ಹೇಳಿದ್ದೆ.

ಅಪ್ಪ ಊರಿನಲ್ಲಿ ಅದು ಹೇಗೋ ಮತ್ತೊಂದು ಸಿಂಗಲ್ ಕಾಟ್ ತಂದು ಇರುವ ಅಜ್ಜಿಯ ಕಾಟ್‌ಗೆ ಅದನ್ನು ಜೋಡಿಸಿ ಡಬಲ್ ಕಾಟ್ ಮಾಡಿಸಿದ. ನಮ್ಮ ಮದುವೆಯೂ, ಮಧುರಾತ್ರಿಯೂ ಆಯಿತು. ಬೆಂಗಳೂರಿಗೆ ವಾಪಸಾದಮೇಲೆ ಒಂದು ದಿನ ನಮ್ಮ ನೆಂಟರ ಮನೆಗೆ ಹೋಗಿ ಲಗೇಜ್ ಆಟೋವೊಂದರಲ್ಲಿ ಅವರ ಮಂಚ ತಂದು ಹೊಸ ಮನೆಯಲ್ಲಿ ಹಾಕಿದೆ. ಅದು ಕಬ್ಬಿಣದ ಫೋಲ್ಡೆಬಲ್ ಮಂಚವಾದ್ದರಿಂದ ತರಲಿಕ್ಕೂ ಸುಲಭವಾಯಿತು. ಎಷ್ಟೇ ದುಡ್ಡು ತಗೊಳ್ಳಿ ಅಂದರೂ ಅವರು ತೆಗೆದುಕೊಳ್ಳಲಿಲ್ಲ.  ನನ್ನ ಹೆಂಡತಿ ತವರಿಗೆ ಫೋನ್ ಮಾಡಿ ಮಂಚ ತಂದ ವಿಷಯ ಹೇಳಿದಾಗ ಅವರು, “ಅಯ್ಯೋ! ಕಬ್ಬಿಣದ ವಸ್ತುವನ್ನ ಹಾಗೆ ದುಡ್ಡು ಕೊಡದೇ ತರಬಾರದು. ಒಂದು ನೂರು ರೂಪಾಯಿಯನ್ನಾದ್ರೂ ಕೊಟ್ಟು ತರಬೇಕಿತ್ತು. ಮತ್ತೆ ಯಾವಾಗಾದ್ರೂ ಅವರ ಮನೆಗೆ ಹೋದಾಗ ಕೊಡಿ” ಅಂತ ಹೇಳಿದರಂತೆ.  ಇಂತವುಗಳಲ್ಲಿ ಚೂರೂ ನಂಬಿಕೆಯಿಲ್ಲದ ನಾನೂ-ನನ್ನ ಹೆಂಡತಿಯೂ ಆ ವಿಷಯವನ್ನು ಅಲ್ಲಿಗೇ ಮರೆತೆವು.

ಮನೆಗೆ ಬಂದ ಗೆಳೆಯರೂ ನೆಂಟರೂ ಮಂಚವನ್ನು ನೋಡಿ “ಓಹ್, ಮಂಚಾನೂ ತಗೊಂಡ್ರಾ? ನೈಸ್! ಎಷ್ಟ್ ರೂಪಾಯ್ ಕೊಟ್ರಿ?” ಅಂತೆಲ್ಲ ಕೇಳಿದರು. ನಾನು ಒಬ್ಬೊಬ್ಬರಿಗೆ ಒಂದೊಂದು ರೇಟ್ ಹೇಳಿದೆ. ನನ್ನ ಗೆಳೆಯನೊಬ್ಬ “ಈ ಕಬ್ಬಿಣದ ಮಂಚ ಸೌಂಡ್ ಮಾಡಲ್ಲೇನೋ? ಕೆಳಗಿನ ಮನೆಯವರು ಕಂಪ್ಲೇಂಟ್ ಮಾಡಿಲ್ವಾ?” ಅಂತ ಕಣ್ಣು ಮಿಟುಕಿಸಿ ಸಣ್ಣ ದನಿಯಲ್ಲಿ ಕೇಳಿದ. ಅದಕ್ಕೆ ನಾನು “ಹಾಗೇನಿಲ್ಲಪ್ಪ. ಕೆಲವೊಂದು ಮಂಚ ಮಾಡ್ತಾವಂತೆ. ಆದ್ರೆ ನಮ್ದೇನು ತೊಂದರೆ ಕೊಟ್ಟಿಲ್ಲ” ಅಂತಂದು, ನಮ್ಮ ಮಂಚವೇ ಜಗತ್ತಿನ ಶ್ರೇಷ್ಟ ಮಂಚ ಎಂಬಂತೆ ಪೋಸು ಕೊಟ್ಟೆ.

ಹಾಗೆ ಹೇಳಿದ್ದೇ ಅದಕ್ಕೆ ದೃಷ್ಟಿ ತಾಕೊತೋ ಏನೋ, ಮೊನ್ನೆ ಆಫೀಸಿನಿಂದ ಸುಸ್ತಾಗಿ ಬಂದವನು ಫೋನಿನಲ್ಲಿ ಮಾತಾಡುತ್ತ ಈ ಮಂಚದ ಮೇಲೆ ‘ದೊಪ್’ ಅಂತ ಕೂತೆ.  ಕೂತಿದ್ದಷ್ಟೇ, ಅದು ‘ಲಟ್’ ಅಂತ ಸದ್ದು ಮಾಡಿತು. ಏನಾಯಿತು ಅಂತ ಬಗ್ಗಿ ನೋಡಿದರೆ ಮಂಚ ನಾನು ಕೂತ ಜಾಗದಲ್ಲೇ ನೆಗ್ಗಿ ಸಣ್ಣಗೆ ಸೀಳು ಬಂದಿತ್ತು.  ಇದೇನಾಯ್ತಪ್ಪ ಗ್ರಹಚಾರ ಅಂತ ನಾನು ಅದರ ಪ್ಲೇಟಿಗೆ ಕೆಳಗಿನಿಂದ ಕೈಯಲ್ಲೇ ಕುಟ್ಟಿ ಸರಿ ಮಾಡಲು ನೋಡಿದೆ. ಕೈ ನೋವಾಯಿತೇ ವಿನಹ ಪ್ರಯೋಜನ ಆಗಲಿಲ್ಲ. ಕೊನೆಗೆ ಸುತ್ತಿಗೆ ತಂದು ಒಂದಷ್ಟು ಪೆಟ್ಟು ಕೊಟ್ಟೆ: ಬೀದಿಗೆಲ್ಲ ಕೇಳಿಸುವಂತೆ ಸದ್ದು ಬಂದರೂ ನೆಗ್ಗಿದ ಜಾಗದಲ್ಲಿ ಬದಲಾವಣೆಯಾಗಲಿಲ್ಲ. ಆಫೀಸಿನಿಂದ ಬಂದ ನನ್ನ ಹೆಂಡತಿ “ಇದು ಹ್ಯಾಗ್ರೀ ಆಯ್ತು?” ಅಂತ ದೊಡ್ಡ ದನಿಯಲ್ಲಿ ಕೇಳಿದಳು. ಪಕ್ಕದಲ್ಲಿ ಸುತ್ತಿಗೆ ಬೇರೆ ಇತ್ತಲ್ಲ, ಅವಳಿಗೆ ನಾನೇ ಎಲ್ಲೋ ಕುಟ್ಟಿ ನೆಗ್ಗಿಸಿದ್ದೀನಿ ಎನಿಸಿರಬೇಕು! ನಾನವಳಿಗೆ ನಡೆದ ಸಂಗತಿ ಹೇಳಿದೆ.

ಈ ಕಬ್ಬಿಣದ ಮಂಚದ್ದು -ಅದೂ ಸಾಧಾರಣ ಗೇಜಿನದ್ದಾಗಿದ್ದರೆ- ಒಂದು ಸಮಸ್ಯೆಯಿದೆಯಂತೆ. ಇದರ ಮಧ್ಯದಲ್ಲಿ ನಾಲ್ಕು ಜನ ಕೂತರೂ ಏನೂ ಆಗುವುದಿಲ್ಲವಂತೆ. ಅದೇ ಹೀಗೆ ಅಂಚಿಗೆ ಜಾಸ್ತಿ ಭಾರ ಹಾಕಿದರೆ ನೆಗ್ಗಿ ಹೋಗುತ್ತದಂತೆ. ಇದು ನನಗೆ ತಿಳಿದದ್ದು ಹಾಳಾದ ಮಂಚವನ್ನು ರಿಪೇರಿ ಮಾಡಿಸಲು ಸಾಧ್ಯವಾ ಅಂತ ಕೇಳಿಕೊಂಡು ಪೀಟೋಪಕರಣಗಳ ಅಂಗಡಿಗೆ ಹೋದಾಗ. “ನೀವು ವೆಲ್ಡಿಂಗ್ ಶಾಪ್‌ಗೆ ಹೋಗಿ ಸರಿ ಮಾಡಿಸಬಹುದು. ಆದ್ರೆ ಎಷ್ಟೇ ರಿಪೇರಿ ಮಾಡಿಸಿದರೂ ಅದು ಮತ್ತೆ ಹಂಗೇ ಆಗತ್ತೆ ಸಾರ್. ಅದನ್ನ ನೀವು ಇನ್ನೇನೂ ಮಾಡಕ್ಕೆ ಆಗಲ್ಲ, ಸ್ಕ್ರಾಪ್ ಅಂತ ತೂಕಕ್ಕೆ ಹಾಕಿಬಿಡಿ” ಅಂತ ಅಂಗಡಿಯವ ಹೇಳಿದ.

ಸರಿ, ಈಗ ಮುಂದೇನು ಮಾಡುವುದು ಅಂತ ನಾನೂ-ಹೆಂಡತಿಯೂ ಯೋಚಿಸಿದೆವು. ಮಂಚ ಒಂದು ಕಡೆ ಏರು ಒಂದು ಕಡೆ ತಗ್ಗು ಆಗಿದ್ದರಿಂದ ಅದರ ಮೇಲೇ ಮಲಗುವ ಹಾಗಂತೂ ಇರಲಿಲ್ಲ. ಹೋಗಲಿ ಇದನ್ನು ತೆಗೆದಿಟ್ಟು ನೆಲದ ಮೇಲೇ ಮಲಗೋಣ ಎಂದರೆ, ಇಷ್ಟು ದಿನ ಮಂಚದ ಮೇಲೆ ಮಲಗಿ ಅಭ್ಯಾಸವಾಗಿದ್ದ ಮನಸಿಗೆ ಯಾಕೋ ಸರಿ ಕಾಣಲಿಲ್ಲ. ಅಲ್ಲದೇ ಈಗಾಗಲೇ ಈ ಮಂಚದ ಕೆಳಗೆ ಸ್ಥಾನ ಪಡೆದುಕೊಂಡಿದ್ದ ನಮ್ಮ ಮದುವೆಗೆ ದಂಡಿಯಾಗಿ ಉಡುಗೊರೆ ಬಂದಿದ್ದ ಡಿನ್ನರ್ ಸೆಟ್ಟುಗಳೇ ಮೊದಲಾದ ನಿರುಪಯೋಗಿ ವಸ್ತುಗಳನ್ನು ಇಡಲು ಒಂದು ಬೇರೆ ಜಾಗ ಹುಡುಕುವುದೂ ಕಷ್ಟವಿತ್ತು. ಹೀಗಾಗಿ, ನಾವು ಒಂದು ಹೊಸ ಮಂಚ ತರುವುದೇ ಸರಿ ಅಂತ ತೀರ್ಮಾನಿಸಿದೆವು. ಮತ್ತೆ ಕಬ್ಬಿಣದ ಮಂಚ ತರುವುದು ಬೇಡ, ಮರದ್ದೇ ತರೋಣ ಅಂತಲೂ ನಿರ್ಧರಿಸಿದೆವು.

ಹೊಸ ಮಂಚ ಕೊಳ್ಳಲು ಮೂರ್ನಾಲ್ಕು ಅಂಗಡಿಗಳನ್ನು ಹತ್ತಿಳಿದರೆ ಒಬ್ಬೊಬ್ಬರೂ ಒಂದೊಂದು ಬೆಲೆ, ಒಂದೊಂದು ಕತೆ ಹೇಳಿದರು. “ಸಿಲ್ವರ್ ವುಡ್ಡು ಸಾರ್, ಬೇರೇವ್ರೆಲ್ಲ ಲೋಕಲ್ ವುಡ್ ಹಾಕ್ತಾರೆ” ಅಂತ ಒಂದು ಅಂಗಡಿಯವರು ಹೇಳಿದರೆ, “ಟೀಕು ಸಾರ್.. ಅಸ್ಸಾಂ ಟೀಕು. ತಗೊಂಡ್ ಹೋಗಿ ಹಾಕಿದ್ರೆ ಇನ್ನು ಹತ್ತು ವರ್ಷ ಚಿಂತೆಯಿಲ್ಲ” ಅಂತ ಮತ್ತೊಂದು ಅಂಗಡಿಯವರು ಹೇಳಿದರು. ನನಗೆ ಯಾವುದು ಟೀಕೋ ಯಾವುದು ಫೇಕೋ ತಿಳಿಯದೇ ಒದ್ದಾಡಿದೆ. ಕೊನೆಗೆ ಯಾರಾದರೂ ತಿಳಿದಿರುವವರನ್ನು ಕೇಳುವುದೇ ಒಳಿತು ಎಂದೆನಿಸಿ “ಮನೆಗೆ ಫೋನ್ ಮಾಡಿ ಅಪ್ಪನ ಹತ್ರ ಒಂದು ಮಾತು ಕೇಳ್ತೀನಿ” ಅಂತ ಹೆಂಡತಿಗೆ ಹೇಳಿದೆ.

ಆದರೆ ಅವಳು ಅದನ್ನು ಖಡಾಖಂಡಿತ ನಿರಾಕರಿಸಿದಳು. “ಹೊಸ ದಂಪತಿ, ಹೊಸ ಮಂಚ, ಅದು ಹೀಗೆ ಹಾಳಾಗಿದೆ ಅಂದ್ರೆ ಜನ ಕಲ್ಪಿಸುವ ಅರ್ಥವೇ ಬೇರೆ. ಮರ್ಯಾದೆ ಪ್ರಶ್ನೆ! ನಾವು ಯಾರಿಗೂ ಹೇಳೋದು ಬೇಡ. ಸುಮ್ಮನೆ ಹೋಗಿ ಯಾವುದೋ ನಮಗೆ ತಿಳಿದ ಮಂಚ ಕೊಂಡು ತರೋಣ” ಅಂತ ಅವಳು ಆಲ್‌ಮೋಸ್ಟ್ ನಾಚಿಕೊಂಡೇ ಹೇಳಿದಳು.  ಈಗ ನಡೆಯಬಾರದ ಅಚಾತುರ್ಯವೊಂದು ನಡೆದುಹೋಗಿದೆ, ಇನ್ನು ನಾವು ಕ್ರೈಂ ಸ್ಟೋರಿಯಲ್ಲಿ ಕೊಲೆ ಮಾಡಿದವರು ಹೇಗೆ ಹೆಣವನ್ನು ಗೌಪ್ಯವಾಗಿ ಸಾಗಿಸಿ ದಫನ್ ಮಾಡುತ್ತಾರೋ ಹಾಗೇ ಕಾರ್ಯಾಚರಣೆ ಮಾಡಬೇಕು ಎಂಬುದವಳ ವಾದವಾಗಿತ್ತು.  ಇದು ನಾನೇನು ಯೋಚಿಸದ ವಿಷಯವಲ್ಲ. ಎಲ್ಲರ ಬಳಿ ಹೇಳಿಕೊಂಡರೆ ಅನವಶ್ಯಕವಾಗಿ ನಗೆಪಾಟಲಿಗೀಡಾಗುವುದು ಖಚಿತವಿತ್ತು. ಆದರೆ ಅಪ್ಪ ಈಗಾಗಲೇ ಈ ಮಂಚವನ್ನ ನೋಡಿಕೊಂಡು ಹೋಗಿದ್ದರಿಂದ ಮುಂದಿನ ಸಲ ಬಂದಾಗ ಅವನಿಗೆ ಮಂಚ ಬದಲಾದುದು ಗೊತ್ತಾಗೇ ಆಗುತ್ತಿತ್ತು.  ಅಲ್ಲದೇ ಹೇಳುವ ಹಾಗೆ ಹೇಳಿದರೆ ಅವರೇನು ಅಪಾರ್ಥ ಮಾಡಿಕೊಳ್ಳಲಾರರು ಅಂತ ನನಗನ್ನಿಸಿ ಅಪ್ಪನಿಗೆ ಫೋನ್ ಮಾಡಿಯೇಬಿಟ್ಟೆ.

ಅಪ್ಪ, ಮಂಚದ ಬಗ್ಗೆ ತನಗೆ ತಿಳಿದದ್ದನ್ನೆಲ್ಲ ಹೇಳಿದ. “ಇಲ್ಲಿಂದ್ಲೇ ಮಾಡ್ಸಿ ಕಳುಸ್ಲಾಗಿತ್ತು. ಆದ್ರೆ ಈಗ ಕಳ್ಳನಾಟವಂತೂ ಎಲ್ಲೂ ಸಿಗದಿಲ್ಲೆ. ಸಾಮಿಲ್ಲಿಂದನೇ ತರವು. ಆ ಆಚಾರಿ ಕರ್ಕಂಡುಬಂದು ಮಾಡ್ಸಕ್ಕೆ ಒಂದು ತಿಂಗಳಾದ್ರೂ ಬೇಕು. ಅಲ್ಲದೇ ಇಲ್ಲಿಂದ ಅಲ್ಲಿಗೆ ಕಳ್ಸದು ದೊಡ್ಡ ರಗಳೆ, ದುಬಾರಿಯೂ ಆಗ್ತು. ಮತ್ತೆ ನಿಂಗ ಅಲ್ಲಿ ನಿಮ್ಮ ಮೂರನೇ ಮಹಡಿಗೆ ಏರಿಸಿ, ಫಿಟಿಂಗ್ ಎಲ್ಲಾ ಮಾಡಿಕೊಳ್ಳೋದು ಇನ್ನೂ ಕಷ್ಟ. ಅದಕ್ಕಿಂತ ಅಲ್ಲೇ ಎಲ್ಲಾದ್ರೂ ಒಳ್ಳೇ ಕ್ವಾಲಿಟಿ ಮಂಚ ನೋಡಿ ತಗಳಿ” ಅಂತ ಅಪ್ಪ ಹೇಳಿದ. ಅಪ್ಪ ಹೇಳಿದಂತೆ ನಾನು ಮತ್ತೆ ಮೂರ್ನಾಲ್ಕು ಅಂಗಡಿ ಸುತ್ತಾಡಿ, ಸಿಕ್ಕಾಪಟ್ಟೆ ವಿಚಾರಣೆ ಮಾಡಿ, ‘ಹಂಡ್ರೆಡ್ ಪರ್ಸೆಂಟ್ ಟೀಕು ಸಾರ್’ ಅಂದವನ ಬಳಿ ‘ಟೀಕ್ ಹೈ’ ಅಂತ ಮನಮೋಹನ್ ಸಿಂಗ್ ದಾಟಿಯಲ್ಲಿ ತಲೆಯಾಡಿಸಿ, ಅಂತೂ ಒಂದು ಮಂಚಕ್ಕೆ ಆರ್ಡರ್ ಕೊಟ್ಟು ಬಂದೆ.

ಇವತ್ತು ಹೊಸ ಮಂಚ ಮನೆಗೆ ಬಂತು. ಹಳೆಯ ಮಂಚವನ್ನು ಎತ್ತಿ ಅದರ ಜಾಗದಲ್ಲಿ ಇದನ್ನು ಜೋಡಿಸಿಕೊಟ್ಟು ಹೋದರು. ಹೊಸ ಮಂಚದ ಮೇಲೆ ಹಾಸಿಗೆ ಹರವಿ ಕೂತು ಉದ್ಘಾಟನಾ ರೂಪವಾಗಿ ಇದನ್ನು ಬರೆಯುತ್ತಿರುವ ಹೊತ್ತಿಗೆ, ಪಾಪ ಹಳೆಯ ಮಂಚ ಸೇವೆ ಮುಗಿಸಿದ ಗುಮಾಸ್ತನಂತೆ ಬಾಗಿ ಕೈಕಾಲು ಮಡಿಚಿಕೊಂಡು ಅಗೋ ಗೋಡೆಯ ಬಳಿ ನಿಂತು ನನ್ನನ್ನೇ ನೋಡುತ್ತಿದೆ. ಪುಕ್ಕಟೆಯಾಗಿ ಬಂದಿರುವ ಈ ಮಂಚವನ್ನು ತೂಕಕ್ಕೆ ಹಾಕಿ ಈಗ ನಾನು ದುಡ್ಡು ತೆಗೆದುಕೊಳ್ಳುವ ಆಲೋಚನೆ ಯಾಕೋ ಸರಿ ಕಾಣುತ್ತಿಲ್ಲ. ನಮ್ಮ ನೆಂಟರಿಗೆ ಫೋನ್ ಮಾಡಿ ‘ನೀವು ಕೊಟ್ಟಿದ್ದ ಮಂಚ ಮುರಿದುಹೋಯಿತು, ವಾಪಸು ತಗೊಳ್ಳಿ’ ಎಂದರೆ? ಛೇ! ಅವರೇನೆಂದುಕೊಂಡಾರು! ಹೀಗಾಗಿ, ಬೇರೆ ದಾರಿಯಿಲ್ಲದೇ ಗುಜರಿ ಅಂಗಡಿಯವನನ್ನು ಕಾಣಲು ಹೋಗುತ್ತಿದ್ದೇನೆ.  ಹಳೆಯ ಮಂಚದ ಕೈಕಾಲನ್ನೆಲ್ಲ ಒಮ್ಮೆ ಸವರಿ ಗುಡ್‌ಬೈ ಹೇಳುವ ಸಮಯ ಬಂದಿದೆ. ಹೊಸ ಮಂಚ ಹೊಸ ಮನೆ ಸೇರಿದ ಖುಶಿಯಲ್ಲಿ ಮಳ್ಳಿಯಂತೆ ಕಳ್ಳನಗೆ ಬೀರುತ್ತಿದೆ.

[ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟಿತ]