ಕಾದಂಬರಿ ಓದುತ್ತಿರುವ ಅಪ್ಪ, ಬತ್ತಿ ಹೊಸೆಯುತ್ತಿರುವ ಅಮ್ಮ, ಟೀವಿ ನೋಡುತ್ತಿರುವ ಅಜ್ಜಿ, ಹೋಮ್ವರ್ಕ್ ಮಾಡುತ್ತಿರುವ ನಾನು -ಎಲ್ಲರೂ ಪ್ರತಿದಿನ ರಾತ್ರಿ ಹತ್ತು ಗಂಟೆಗೆ ಸ್ಥಬ್ಧವಾಗುತ್ತಿದ್ದೆವು. ಸರಿಯಾಗಿ ಹತ್ತು ಗಂಟೆಗೆ ಕರೆಂಟ್ ಹೋಗುತ್ತಿತ್ತು ನಮ್ಮಲ್ಲಿ! ಅದು ಹಾಗೆ ಹೋದಕೂಡಲೇ "ಓಹ್! ಹತ್ ಗಂಟೆ ಕರೆಂಟು.. ಎಲ್ಲಾ ಕೂತಲ್ಲೇ ಕೂತಿರಿ.. ಇನ್ನೊಂದು ನಿಮ್ಷಕ್ಕೆ ಬರ್ತು!" ಅಂತ ಅಜ್ಜಿ ಹೇಳುತ್ತಿದ್ದಳು. ಹೋದ ಕರೆಂಟು ಒಂದರಿಂದ ಎರಡು ನಿಮಿಷಗಳಲ್ಲಿ ವಾಪಸು ಬರುತ್ತಿತ್ತು. ಅಷ್ಟು ಬೇಗ ಅದೆಲ್ಲಿಗೆ ಹೋಗಿ ಬರುತ್ತಿತ್ತೋ ಅದು, ದೇವರೇ ಬಲ್ಲ! ಆದರೆ ಆ ಒಂದು ನಿಮಿಷದ ಅವಧಿಯಲ್ಲಿ, ನನಗೆ ನೆನಪಿದ್ದಂತೆ, ನಾವೆಲ್ಲಾ ಒಂದು ತೀರಾ ಆಪ್ತ ವಾತಾವರಣದಲ್ಲಿರುತ್ತಿದ್ದೆವು.
ಮನೆಯನ್ನೆಲ್ಲಾ ಧುತ್ ಎಂದು ಆವರಿಸಿರುವ ಕತ್ತಲೆ. ಓದುತ್ತಿದ್ದ ಕಾದಂಬರಿ ಆಗತಾನೇ ಪಡೆದುಕೊಳ್ಳ ಹೊರಟಿದ್ದ ಹೊಸ ತಿರುವು, ಹೊಸೆಯುತ್ತಿದ್ದ ಬತ್ತಿಯಲ್ಲಿದ್ದ ದೇವರೆಡೆಗಿನ ಭಕ್ತಿ, ಉರಿಯುತ್ತಿದ್ದ ಟೀವಿಯಲ್ಲಿ ಬರುತ್ತಿದ್ದ ಧಾರಾವಾಹಿ, ಮಾಡುತ್ತಿದ್ದ ಹೋಮ್ವರ್ಕ್ನೆಡೆಗಿನ ನನ್ನ ಶ್ರದ್ಧೆ -ಎಲ್ಲವೂ ಮಾಯವಾಗಿ ಸೀದಾ ವಾಸ್ತವಕ್ಕೆ ಬಂದಿಳಿಯುತ್ತಿದ್ದೆವು ನಾವೆಲ್ಲರೂ. ಇನ್ನೆರೆಡು ನಿಮಿಷಗಳಲ್ಲಿ ಕರೆಂಟು ಬಂದೇ ಬರುತ್ತದೆಂಬ ವಿಶ್ವಾಸ. ಲಾಟೀನು ಹಚ್ಚಲು ಏಳಲಿಕ್ಕೆ ಎಲ್ಲರಿಗೂ ಸೋಮಾರಿತನ. ಆ ಎರಡು ನಿಮಿಷ ನಾವು ಕತ್ತಲೆಯಲ್ಲಿ, ನಮ್ಮ ನಮ್ಮ ಜೊತೆ ಮಾತಾಡಿಕೊಳ್ಳುತ್ತಾ, ಏನೆಂದರೆ ಏನೂ ಮಾಡದೆ, ಶಪಿತ ಗಂಧರ್ವರಂತೆ ಸುಮ್ಮನೆ ಕುಳಿತಿರುತ್ತಿದ್ದೆವು.
ನನಗೆ ಆಗಲೇ ನಿದ್ರೆ ಬರುತ್ತಿರುತ್ತಿತ್ತು. ಬೇಗ ಕರೆಂಟ್ ಬಂದು ಬೇಗ ಹೋಮ್ವರ್ಕ್ ಮುಗಿಸಿ ಮಲಗುವ ಆತುರದಲ್ಲಿರುತ್ತಿದ್ದೆ. ಅಪ್ಪನಿಗೆ ಕತೆ ಮುಂದೇನಾಗುವುದೋ ಎಂಬ ಕುತೂಹಲ. ಅಮ್ಮನ ಕೈಗಳಿಗೆ ಬತ್ತಿ ಹೊಸೆದೂ ಹೊಸೆದೂ ಅಭ್ಯಾಸವಾಗಿಬಿಟ್ಟಿದ್ದರಿಂದ, ಹತ್ತಿಯನ್ನು ಬಿಡಿಸುವುದಕ್ಕಾಗಲೀ, ಮಣೆಯ ಮೇಲಿಟ್ಟು ಹೊಸೆಯುವುದಕ್ಕಾಗಲೀ ಬೆಳಕಿನ ಅಗತ್ಯವೇ ಇರಲಿಲ್ಲ. ಅವಳು ತನ್ನ ಪಾಡಿಗೆ ತಾನು ತನ್ನ ಕಾಯಕವನ್ನು ಮುಂದುವರೆಸಿರುತ್ತಿದ್ದಳಾದರೂ ಅಳತೆ ಸರಿಯಾಗಿ ಬರುತ್ತಿದೆಯಾ ಇಲ್ಲವಾ ಎಂಬ ಆತಂಕ. ಅಜ್ಜಿಗೆ ಕರೆಂಟ್ ಹೋದ ಸಂದರ್ಭದಲ್ಲಿ ಧಾರಾವಾಹಿ ಮುಂದೆ ಹೋಗಿಬಿಡುತ್ತದಲ್ಲಾ ಎಂಬ ಚಿಂತೆ: ಯಾರೋ ಬಾಗಿಲು ತಟ್ತಾ ಇದ್ದಿದ್ರು... ಇವಳು 'ಬಂದೇ' ಎನ್ನುತ್ತಾ ಬಾಗಿಲಿನತ್ತ ಧಾವಿಸುತ್ತಿದ್ದಳು... ಸರಿಯಾಗಿ ಅಷ್ಟೊತ್ತಿಗೆ ಹೋಗಬೇಕಾ ಕರೆಂಟು! ಇನ್ನು ಕರೆಂಟು ಬರುವುದರೊಳಗೆ ಏನೇನಾಗಿ ಹೋಗಿರುತ್ತದೋ ಏನೋ? ಛೇ!
ಆದರೆ ಅಜ್ಜಿಯ ಈ ಚಿಂತೆ ಅರ್ಥವಿಲ್ಲದ್ದಾಗಿ ಕಾಣುತ್ತಿತ್ತು ನನಗೆ. ನನ್ನ ಅಜ್ಜಿಗೆ ಟೀವಿ ಹುಚ್ಚು. ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಅರ್ಥವಾಗುತ್ತಿರಲಿಲ್ಲವಾದರೂ ಅವಳು ಎಲ್ಲಾ ಭಾಷೆಯ ಕಾರ್ಯಕ್ರಮಗಳನ್ನೂ ನೋಡುತ್ತಿದ್ದಳು. ಆಕೆಗೆ ಛಾನೆಲ್ ಬದಲಿಸಲಿಕ್ಕಾಗಲೀ, ರಿಮೋಟ್ ಬಳಸಲಿಕ್ಕಾಗಲೀ ಗೊತ್ತಾಗುತ್ತಿರಲಿಲ್ಲ. ಟೀವಿ ಹಾಕಿಕೊಳ್ಳಲಿಕ್ಕೆ ಮಾತ್ರ ಬರುತ್ತಿತ್ತು. ಹೀಗಾಗಿ, ಟೀವಿ ಹಾಕಿದಾಗ ಯಾವ ಛಾನಲ್ ಬರುತ್ತಿರುತ್ತದೋ ಅದನ್ನೇ ನೋಡುತ್ತಾ ಕೂರುತ್ತಿದ್ದಳು. ಈ ಧಾರಾವಾಹಿಗಳ ವಿಷಯದಲ್ಲಂತೂ ಅವಳು ಸಾಕಷ್ಟು ಕನ್ಫ್ಯೂಶನ್ನುಗಳಿಗೆ ಒಳಗಾಗುತ್ತಿದ್ದಳು. ಈ ಛಾನಲ್ಲುಗಳವರು ಒಂದಾದ ನಂತರ ಒಂದು ಧಾರಾವಾಹಿ ಹಾಕುತ್ತಾರೆ. ಅಲ್ಲದೇ ಒಂದು ಧಾರಾವಾಹಿಯಲ್ಲಿನ ತಾರೆಗಳೇ ಮತ್ತೊಂದು ಧಾರಾವಾಹಿಯಲ್ಲೂ ಇರುತ್ತಾರೆ. ಹೀಗಾಗಿ, ಒಟ್ಟೊಟ್ಟಿಗೆ ಮೂರ್ನಾಲ್ಕು ಧಾರಾವಾಹಿಗಳನ್ನು ನೋಡುತ್ತಿದ್ದ ನನ್ನ ಅಜ್ಜಿ, ಅವೆಲ್ಲವನ್ನೂ ಸೇರಿಸಿ ಏನೋ ಒಂದು ಅರ್ಥ ಮಾಡಿಕೊಳ್ಳುತ್ತಿದ್ದಳು. ಹೀಗಾಗಿ, ಕರೆಂಟ್ ಹೋದಾಗ ಧಾರಾವಾಹಿ ಮುಂದುವರೆದುದಕ್ಕೆ ಅಜ್ಜಿ ಹೆಚ್ಚಿನ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರಲಿಲ್ಲ. ಅವಳಿಗೆ ಸಿನಿಮಾಗಳಲ್ಲಿ ಬರುವ ಫ್ಲಾಶ್ಬ್ಯಾಕುಗಳಂತೂ ದೇವರಾಣೆ ಅರ್ಥವಾಗುತ್ತಿರಲಿಲ್ಲ. 'ಈಗ ವಿಷ್ಣುವರ್ಧನ್ ಇದ್ದಿದ್ನಲ, ಅವ ಸಣ್ಣಕಿದ್ದಾಗ ಹೆಂಗಿದ್ದಿದ್ದ ಅಂತ ತೋರುಸ್ತಾ ಇದ್ದ' ಎಂದು ನಾವು ಎಕ್ಸ್ಪ್ಲನೇಶನ್ ಕೊಟ್ಟರೆ, 'ಹೂಂ ಸುಮ್ನಿರು! ಅಷ್ಟು ದೊಡ್ಡಕಿದ್ದ ಅಂವ ಅದು ಹೆಂಗೆ ಅಷ್ಟು ಸಣ್ಣಕಾಗಕ್ಕೆ ಸಾಧ್ಯ?' ಎನ್ನುತ್ತಿದ್ದಳು. ಅವಳ ಪ್ರಕಾರ ಆ ಹುಡುಗ ಬೇರೆಯವನು, ವಿಷ್ಣುವರ್ಧನ್ ಅಲ್ಲ! ಎಲ್ಲಾದರೂ ಮದುವೆಯ ಸೀನ್ ಬಂದರೆ ಅಡುಗೆಮನೆಯಲ್ಲಿರುತ್ತಿದ್ದ ನನ್ನ ಅಮ್ಮನನ್ನು ಕರೆಯುತ್ತಿದ್ದಳು: 'ಗೌರೀ ಬಾರೇ, ಮದ್ವೆ ತೋರುಸ್ತಾ ಇದ್ದ...!' ಅಂತ. ಅವಳಿಗೆ ಟೀವಿಯಲ್ಲಿ ಮದುವೆ-ಗಿದುವೆ ನೋಡುವುದೆಂದರೆ ಇನ್ನಿಲ್ಲದ ಸಂಭ್ರಮ. ಪುಣ್ಯಕ್ಷೇತ್ರಗಳನ್ನಾಗಲೀ, ವಿದೇಶವನ್ನಾಗಲೀ, ಬೆಂಗಳೂರಿನ ಟ್ರಾಫಿಕ್ಕನ್ನಾಗಲೀ ನೋಡಿ ತಾನೇ ಅಲ್ಲಿಗೆ ಹೋಗಿಬಂದಷ್ಟು ಖುಷಿ ಪಡುತ್ತಿದ್ದಳು. 'ಕಾಶಿಯೂ ಬ್ಯಾಡ ಏನೂ ಬ್ಯಾಡ. ಎಲ್ಲಾ ಇಲ್ಲೇ ಕೂತ್ಕಂಡು ನೋಡ್ಯಾತು ತಗ!' ಎನ್ನುತ್ತಿದ್ದಳು ಅಪ್ಪನ ಬಳಿ.
ನಾವು ಈ ಹತ್ತು ಗಂಟೆ ಕರೆಂಟಿಗೆ ಅದೆಷ್ಟು ಅಡಿಕ್ಟ್ ಆಗಿದ್ದೆವು ಅಂದ್ರೆ, ಒಂದು ದಿನ ಹತ್ತು ಗಂಟೆಗೆ ಕರೆಂಟ್ ಹೋಗಲಿಲ್ಲವೆಂದರೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆವು. ಪ್ರತಿ ಮುಂಜಾನೆಯೂ ಬರುವ ಪೇಪರು ಒಂದು ದಿನ ಬಾರದೇ ಹೋದರೆ ಹೇಗಾಗುತ್ತದೋ ಹಾಗೆ, ಅಥವಾ ದಿನವೂ ಬರುವ ಹಾಲಿನವಳು ಇಂದು ಬಾರದಿದ್ದರೆ ಹೇಗಾಗುತ್ತದೋ ಹಾಗೆ, ಅಥವಾ ಪ್ರತಿದಿನ ಊಟದ ಸಮಯಕ್ಕೆ ಸರಿಯಾಗಿ 'ಮ್ಯಾಂವ್ ಮ್ಯಾಂವ್' ಎನ್ನುತ್ತಾ ಹಾಜರಾಗುತ್ತಿದ್ದ ಬೆಕ್ಕು ಇಂದು ಕಾಣಿಸಿಕೊಳ್ಳದಿದ್ದರೆ ಹೇಗಾಗುತ್ತದೋ ಹಾಗೆ -ನಾವು ಹತ್ ಗಂಟೆಗೆ ಕರೆಂಟ್ ಹೋಗದಿದ್ದರೆ ಏನನ್ನೋ ಕಳೆದುಕೊಂಡಂತೆ ವ್ಯಥೆ ಪಡುತ್ತಿದ್ದೆವು.
ಬಹುಶಃ ಈ ಕರೆಂಟು ಹೋದ ಘಳಿಗೆಯಲ್ಲಿ ಆವರಿಸಿಕೊಳ್ಳೂತ್ತಿದ್ದ ಕತ್ತಲೆಯಲ್ಲಿ ನಮಗೇ ತಿಳಿಯದಂಥ ಅದೇನೋ ಮೋಡಿಯಿರುತ್ತಿತ್ತು. ಆಗ ಚಂದ್ರ ಬೆಳದಿಂಗಳಾಗಿ ಮನೆಯೊಳಗೆ ಬರುತ್ತಿದ್ದ. ಆ ಹಿತವಾದ ಮಂದ ತಿಂಗಳ ಬೆಳಕು ಕಿಟಕಿಯ ಸರಳುಗಳ ಚಿತ್ರವನ್ನು ನೆಲದ ಮೇಲೆ ಮೂಡಿಸುತ್ತಿತ್ತು. ನೆಲದ ಮೇಲೆ ಮೂಡಿದ ಆ ಬೆಳಕ ಚಿತ್ತಾರವೇ ಇಡೀ ಮನೆಗೆ ದೀಪವಾಗುತ್ತಿತ್ತು. ಆ ಬೆಳಕಿನಲ್ಲಿ ಅಮ್ಮನ ಮಂದಹಾಸಮಯ ಮುಖದಲ್ಲಿನ ಭಕ್ತಿ, ಅಜ್ಜಿಯ ಸುಕ್ಕುಗಟ್ಟಿದ ಮುಖದಲ್ಲಿನ ಚಡಪಡಿಕೆ, ಅಪ್ಪನ ಶೇವ್ ಮಾಡದ ಮುಖದಲ್ಲಿನ ಕುತೂಹಲ ನನಗೆ ಕಾಣಿಸುತ್ತಿತ್ತು.
ಒಮ್ಮೊಮ್ಮೆ, ತೀರಾ ಒಮ್ಮೊಮ್ಮೆ, ಹೀಗೆ ಹತ್ತು ಗಂಟೆಗೆ ಹೋದ ಕರೆಂಟು ಎಷ್ಟು ಹೊತ್ತಾದರೂ ಬರುತ್ತಲೇ ಇರಲಿಲ್ಲ. ಆಗ ನಮ್ಮಲ್ಲಿ ಯಾರಾದರೂ ಒಬ್ಬರು ಲಾಟೀನು ಹಚ್ಚಲಿಕ್ಕೆ ಏಳುವುದು ಅನಿವಾರ್ಯವಾಗುತ್ತಿತ್ತು. ತಡಕಾಡಿಕೊಂಡು ಹೋಗಿ ಲಾಟೀನು ತಂದು, ಬೆಂಕಿಪೊಟ್ಟಣ ಹುಡುಕಿ, ಕಡ್ಡಿ ಗೀರಿ, ಗ್ಲಾಸೇರಿಸಿ, ಬತ್ತಿಯ ಕಿಟ್ಟ ತೆಗೆದು... ಹಚ್ಚಿ ಗ್ಲಾಸು ಇಳಿಸಿದರೆ ಮನೆಯನ್ನೆಲ್ಲಾ ತುಂಬಿಕೊಳ್ಳುತ್ತಿದ್ದ ಹಳದಿ ಬೆಳಕು... ಬೆಳದಿಂಗಳ ಬೆಳ್ಳಿ ಬೆಳಕಿನೊಂದಿಗೆ ಬೆರೆಯುತ್ತಿದ್ದ ಈ ಸ್ವರ್ಣವರ್ಣದ ಬೆಳಕು ಅಮ್ಮನ ಮೂಗುತಿಯನ್ನೂ ಅಜ್ಜಿಯ ಕೈಬಳೆಯನ್ನೂ ಹೊಳೆಸುತ್ತಿತ್ತು.
ಇನ್ನು ಮಾಡಲಿಕ್ಕೇನೂ ಕೆಲಸವಿಲ್ಲ. ಎಲ್ಲಾ ಹಾಸಿಗೆ ಬಿಚ್ಚಿ ಮಲಗಿದರಾಯಿತು. ಮಲಗುವ ಮುನ್ನ ಅಮ್ಮ ಹಾಲಿಗೆ ಹೆಪ್ಪು ಹಾಕಬೇಕಿದೆ, ಅಜ್ಜಿ ಲ್ಯಾಟ್ರೀನಿಗೆ ಹೋಗಿ ಬರಬೇಕಿದೆ, ಅಪ್ಪ ಉಚ್ಚೆ ಹೊಯ್ದು ಬರಬೇಕು ಮತ್ತು ನಾನು ಅಮ್ಮ ತಂದುಕೊಟ್ಟ ಹಾಲನ್ನು ಕುಡಿಯಬೇಕು. ಆದಷ್ಟೂ ವೇಗದಲ್ಲಿ ಮಾಡುತ್ತಿದ್ದೆವು ನಾವು ಆ ಕೆಲಸಗಳನ್ನು... ಎಲ್ಲಾ ಮಾಡಿ ಮುಗಿಸಿ, ನಾನು ಪುಸ್ತಕವನ್ನೆಲ್ಲಾ ಮುಚ್ಚಿಟ್ಟು, ಇನ್ನೇನು ಮಲಗಲು ಹೊರಡಬೇಕು; ಅಷ್ಟರಲ್ಲಿ ಬರುತ್ತಿತ್ತು ಹಾಳು ಕರೆಂಟು! ಆಗ ಕರೆಂಟು ಹೋದುದಕ್ಕೆ ಬೈದುಕೊಂಡಿದ್ದ ನಾವು ಈಗ ಕರೆಂಟು ಬಂದುದಕ್ಕೆ ಶಪಿಸುತ್ತಿದ್ದೆವು ಮನಸಿನಲ್ಲೇ. ಏಕೆಂದರೆ, ಕರೆಂಟು ಬಾರದೇ ಇದ್ದರೆ ನಾವೆಲ್ಲಾ ಹಾಸಿಗೆ ಬಿಚ್ಚಿ ಹಾಯಾಗಿ ಮಲಗಿರುತ್ತಿದ್ದೆವು. ಆದರೆ ಈಗ ಕರೆಂಟು ಬಂದುಬಿಟ್ಟಿದ್ದರಿಂದ ಮತ್ತೆ ನಮ್ಮ ನಮ್ಮ 'ಕೆಲಸ'ಗಳಿಗೆ ವಾಪಸಾಗುವುದು ಅನಿವಾರ್ಯವಾಗಿತ್ತು. ಬಂದ ಕರೆಂಟನ್ನು ಮನದಲ್ಲೇ ಶಪಿಸುತ್ತಾ ಆದರೂ ಬಾಯಲ್ಲಿ 'ಅಬ್ಬ ಸಧ್ಯ! ಬಂತು!' ಎನ್ನುತ್ತಾ ಹುಸಿನಗೆಯಾಡುತ್ತಿದ್ದೆವು. ಮತ್ತೆ ಎಲ್ಲವೂ ಮುಂದುವರೆಯುತ್ತಿದ್ದವು: ಕಾದಂಬರಿ, ಧಾರಾವಾಹಿ, ಬತ್ತಿ ಹೊಸೆಯುವಿಕೆ ಮತ್ತು ಹೋಮ್ವರ್ಕ್!
[ನನ್ನ ಬ್ಲಾಗಿನ ಹಿಟ್ಟನ್ನು ಹತ್ತು ಸಾವಿರದ ಗಡಿ ಮುಟ್ಟಿಸುವಲ್ಲಿ ಪಾತ್ರ ವಹಿಸಿದ ಎಲ್ಲರಿಗೂ ತುಂಬಾ ಪ್ರೀತಿಯ ಧನ್ಯವಾದಗಳು.]
Thursday, June 21, 2007
Tuesday, June 19, 2007
ಬದುಕು ಸುಂದರವಾಗಿದೆಯೇ??
ಲಹರಿಯ ಝರಿಯಲಿ ಮಿಂದವರು ಎಂದರು:
ಬದುಕು ಸುಂದರವಾಗಿದೆ; ಎಲ್ಲಾ ನೋಡುವ ಕಣ್ಣಿನಲ್ಲಿದೆ.
ನಾನೂ ಹೌದೆಂದುಕೊಂಡುಬಿಟ್ಟೆ.
ದೃಷ್ಟಿದೋಷ ಬಂದಿರಬೇಕೆಂದುಕೊಂಡು
ಕನ್ನಡಕದಂಗಡಿಯತ್ತ ತೆರಳಿದೆ.
'ಹೂ ಕೂತಿದೆ, ಪಾಯಿಂಟು ಬಂದಿದೆ, ಅದಾಗಿದೆ, ಇದಾಗಿದೆ'
ಎಂದಿತ್ಯಾದಿ ಪಾಯಿಂಟು ಹಾಕಿದ ಅಂಗಡಿಯವ
ಸರಿಯಾಗಿ ದುಡ್ಡಿಸಕೊಂಡು, ದಪ್ಪ ಗಾಜಿನ,
ತೆಳು-ಚಂದ ಫ್ರೇಮಿನ ಮಸೂರ ತೊಡಿಸಿ
ನನ್ನನ್ನು ಕಳುಹಿಸಿದ.
ಪರಿಣಾಮವೂ ಆಯಿತು; ಆದರೆ ಉಲ್ಟಾ ಅಷ್ಟೇ!
ಇಷ್ಟು ಹೊತ್ತು ಮಂಜುಮಂಜಾಗಿ ಕಾಣುತ್ತಿದ್ದ ಚಿತ್ರಗಳೆಲ್ಲ
ಈಗ ಸ್ಪಷ್ಟವಾಗಿ ಕಾಣಿಸತೊಡಗಿದವು:
ದಾರಿಯಲೊಂದು ಭಿಕ್ಷುಕನ ಮಗು.
ಯಾರೋ ತಿನ್ನುತ್ತಿದ್ದ, ಅರ್ಧ ಮುಗಿದಿದ್ದ ಐಸ್ಕ್ಯಾಂಡಿಯನ್ನು
ತಾನು ಬೇಡಿ ಪಡೆದು ಚೀಪತೊಡಗಿತು.
ಚೀಪಿ ಮುಗಿಯುವ ಮೊದಲೇ,
ಐಸು ಕರಗಿ ಖಾಲಿಯಾಗುವ ಮೊದಲೇ
ಕಡ್ಡಿಯಿಂದ ಜಾರಿದ ಕ್ಯಾಂಡಿಯ ತುಂಡು
ಫುಟ್ಪಾತಿನ ಸಣ್ಣ ಕಿಂಡಿಯಿಂದಲೂ ತೂರಿ
ಚರಂಡಿ ಸೇರಿಬಿಟ್ಟಿತು.
ಭಿಕ್ಷುಕನ ಮಗುವಿನ ದಾಹವನ್ನೂ ತಣಿಸಲಾಗದ
ಆ ಕೆಂಪು ಐಸ್ಕ್ಯಾಂಡಿಯ ತುಂಡು
ಮುಂದೆ ನನ್ನ ಮನಸಿನಲ್ಲಿ ಕರಗತೊಡಗಿತು.
ಮುಂದೊಂಡು ಪ್ರತಿಭಟನೆ.
ಸುಮಾರು ಮೂವತ್ತು-ನಲವತ್ತು ಜನ ರೈತರು
ತಾವು ಬೆಳದ, ರೇಟಿಲ್ಲವಾದ ಟೊಮಾಟೋ ತಂದು
ರಸ್ತೆಯಲ್ಲಿ ಸುರಿದು ಧಿಕ್ಕಾರ ಕೂಗುತ್ತಿದ್ದರು.
ಜನರೆಲ್ಲಾ ನೋಡನೋಡುತ್ತಿದ್ದಂತೆಯೇ
ಅವರಲ್ಲೊಬ್ಬ ಒಂದು ಕ್ಯಾನು ಪೆಟ್ರೋಲನ್ನು ಮೈಗೆಲ್ಲಾ ಸುರಿದುಕೊಂಡು,
ಕಡ್ಡಿ ಗೀರಿ ಬೆಂಕಿಯಿಟ್ಟುಕೊಂಡುಬಿಟ್ಟ.
ಏನಾಗುತ್ತಿದೆಯೆಂದು ಮಂದಿಗೆ ಸರಿಯಾಗಿ ಅರ್ಥವಾಗುವ ಮೊದಲೇ
ಹೊತ್ತಿ ಉರಿಯತೊಡಗಿದ ಬೆಂಕಿಯಲ್ಲಿ ಆತ ಭೂತದಂತೆ
ತೂರಾಡುತ್ತಿರಲು, ಜನರೆಲ್ಲಾ ಹೆದರಿ ದೂರ ಸರಿದರು.
ವಿಕಾರ ಶಬ್ದ ಮಾಡುತ್ತಾ ಬಂದ ಫಯರ್ ಎಂಜಿನ್
ಬೆಂಕಿ ನಂದಿಸಿ, ತನ್ನ ಹಿಂದೆಯೇ ಬಂದ ಕುರೂಪಿ
ಆಂಬುಲೆನ್ಸಿನಲ್ಲಿ ಕಪ್ಪು-ಕೆಂಪು ಮಾಂಸದ ತುಂಡುಗಳನ್ನು
ಹೇರಿ ಕಳುಹಿಸಿತು.
ಬೆಂಕಿ ಉರಿಯುವ ಚಿತ್ರ ಮಾತ್ರ ನನ್ನ ಮನಸಿನೊಳಗೆ ಸೇರಿಕೊಂಡು
ಈಗಾಗಲೇ ಅಲ್ಲಿ ಕರಗಿದ್ದ ಐಸಿನ ನೀರನ್ನು ಕುದಿಸತೊಡಗಿತು.
ಮನೆ ಬಾಗಿಲು ಮುಟ್ಟಿದಾಗ ಸಂಜೆ ಐದು.
ನಮ್ಮ ಮನೆಯ ಓನರ್ರಿನ ಹೆಂಡತಿ ವಾಕಿಂಗಿಗೆ
ಹೋಗಲೆಂದು ಮಲಗಿದ್ದ ಗಂಡನನ್ನು ಎಬ್ಬಿಸಲು ನೋಡಿದಾಗ
'ಅವರಿನ್ನು ಏಳುವುದೇ ಇಲ್ಲ' ಎಂಬ ಸತ್ಯದ ಅರಿವಾಗಿ
ಕಿಟಾರನೆ ಕಿರುಚಿಕೊಂಡ ಸದ್ದಿಗೆ
ಮೆಟ್ಟಿಲು ಹತ್ತುತ್ತಿದ್ದ ನಾನು ಬೆಚ್ಚಿಬಿದ್ದು,
ನನ್ನ ಕನ್ನಡಕ ಜಾರಿಬಿದ್ದು, ಗಾಜು ಒಡೆದುಹೋಗಿ,
ನಾನದನ್ನು ಮೆಟ್ಟಿ, ಅಂಗಾಲಿನಿಂದ ರಕ್ತ ಒಸರತೊಡಗಿತು.
ಆ ಕೆಂಪು-ಉಪ್ಪು ರಕ್ತವನ್ನು ನನ್ನ ಮನಸಿನಲ್ಲಿ ಕುದ್ದು
ತಯಾರಾಗಿದ್ದ ಐಸಿನ ನೀರಿನೊಂದಿಗೆ ಬೆರೆಸಿ
'ರುಚಿ ನೋಡಿರೆಂದು' ಹಂಚಲು ಹೋದರೆ
ಲಹರಿಯ ಝರಿಯಲಿ ಕೊಚ್ಚಿ ಹೋದವರಾದಿಯಾಗಿ
ಯಾರೂ ನನ್ನ ಹತ್ತಿರ ಬರಲೇ ಇಲ್ಲ...!!!

Friday, June 01, 2007
ಈ ಮಳೆಯೊಳಗೆ...
ಮಳೆ ಮಳೆ ಮಳೆ ಮಳೆ ಮಳೆ... ಎಷ್ಟು ಮಳೆ..? ಹನಿ ಹನಿ ಹನಿ ಹನಿ ಹನಿ ಹನಿ... ಎಷ್ಟು ಹನಿ..? ಸುರಿ ಸುರಿ ಸುರಿ ಸುರಿ ಸುರಿ... ಅರೆ ಅರೆ, ಇದೇನಿದು ಸುರಿಯುತ್ತಲೇ ಇದೆಯಲ್ಲ? ಮಳೆಗಾಲ ಶುರುವಾಗಿ ಹೋಯಿತಾ? ಹೌದಲ್ಲಾ, ಬಿಸಿಲೇ ಇಲ್ಲ.. ರಜೆ ತೆಗೆದುಕೊಂಡಿತಾ ಹೇಗೆ? ರಸ್ತೆಯ ಮೇಲೆ ಹರಿಯುತ್ತಿರುವುದೇನದು ನದಿಯಾ? ಮನೆಯ ಸೂರಿನಿಂದ, ಕಾರಿನ ವೈಪರಿನಿಂದ, ಸ್ಕೂಟರ್ವಾಲಾನ ರೈನ್ಕೋಟಿನಿಂದ, ಅಜ್ಜನ ಛತ್ರಿಯಿಂದ, ಮರದ ಎಲೆಯಿಂದ... ಎಲ್ಲೆಲ್ಲಿಂದಿಲೂ ತೊಟ್ಟಿಕ್ಕುತ್ತಿದೆಯಲ್ಲ ಹನಿ ಹನಿ ಹನಿ ಹನಿ... ಇದ್ಯಾವ ಮೋಡದ ಮಾಯೆ? ಮುಂಗಾರು ಮಳೆಯ ಹನಿಗಳ ಲೀಲೆ?
ಒಳಗೆಲ್ಲೋ ನಾಗಂದಿಗೆಯ ಮೇಲೆ ಮಡಚಿಟ್ಟಿದ್ದ ಛತ್ರಿಯನ್ನು ನಾನು ಕೆಳಗಿಳಿಸುತ್ತೇನೆ. ಧೂಳು ಕೊಡವಿ ಅದನ್ನು ಬಿಡಿಸಿದರೆ ಮೇಲೆ ನನ್ನ ನೀಲಾಕಾಶ ಮುಚ್ಚಿಹೋಗಿದೆ. ಮೇಲೇನು ನಡೆಯುತ್ತಿದೆ? ನನಗೆ ತಿಳಿಯುತ್ತಿಲ್ಲ... ಮೇಲಿನ ಕತೆ ಹಾಳಾಯ್ತು; ಮುಂದೇನು ಎಂದು ಸಹ ಕಾಣುತ್ತಿಲ್ಲ. ಅಷ್ಟು ಜೋರು ಮಳೆ. ಮೋಡ ಕವಿದ ದಿಗಂತ. ಕೇವಲ ಹತಾಶೆಯ ಕೆಸರನ್ನಷ್ಟೇ ಎರಚುತ್ತಿರುವ ರಸ್ತೆಯ ವಾಹನಗಳು. ಏಕೆ ಹೀಗಾಯ್ತು? ನನ್ನ ಮುಂದಿನ ದಾರಿಯೇನು?
ಇವತ್ತು ನನಗೆ ಕೆಲಸಕ್ಕೆ ಹೋಗಲು ಮನಸಿಲ್ಲ. ಮನೆಯಲ್ಲೇ ಕುಳಿತಿದ್ದೇನೆ. ಏಕೆಂದರೆ, ಇವತ್ತು ಜೂನ್ ೧. ಶಾಲೆಗಳು ಶುರುವಾಗುತ್ತಿವೆ. ನನ್ನೆಲ್ಲ ಗೆಳೆಯರೂ ಪಾಟಿಚೀಲ ಬೆನ್ನಿಗೇರಿಸಿ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ನಾನು ಮಾತ್ರ ಹೋಗುವಂತಿಲ್ಲ. ನನ್ನ ಏಳನೇ ತರಗತಿಯ ಪರೀಕ್ಷೆಯ ಫಲಿತಾಂಶ ಕೈಕೊಟ್ಟುಬಿಟ್ಟಿತು. ನಾನೇನು ಪರೀಕ್ಷೆಗೆ ಓದಿರಲಿಲ್ಲವೆಂದಲ್ಲ. ಚೆನ್ನಾಗಿಯೇ ಓದಿದ್ದೆ. ಆದರೆ ಪರೀಕ್ಷೆಗೆ ನಾಲ್ಕು ದಿನ ಮುಂಚೆ ಬಂದು ಒಕ್ಕರಿಸಿದ ಜ್ವರ ನನ್ನ ಭವಿಷ್ಯವನ್ನೇ ಹಾಳು ಮಾಡಿಬಿಟ್ಟಿತು. ಮೊದಲೆರಡು ಪರೀಕ್ಷೆಗಳಿಗೆ ಹೋಗಲಿಕ್ಕೇ ಆಗಲಿಲ್ಲ. ಹಾಗಂತ ನಾನು ಪರೀಕ್ಷೆಯನ್ನು ಬರೆದು ಪಾಸಾಗಿದ್ದರೂ ನನ್ನ ಅಪ್ಪ ನನ್ನನ್ನು ಮುಂದೆ ಓದಿಸುತ್ತಿದ್ದುದು ಸಂದೇಹ. ಅದಕ್ಕೇ ಅವನು ನನ್ನನ್ನು ಈ ಬೇಸಿಗೆ ರಜೆಯಲ್ಲೇ ಗ್ಯಾರೇಜಿಗೆ ಸೇರಿಸಿಬಿಟ್ಟ. ಒಂದು ವಾರದಲ್ಲಿ ಅಜ್ಜನ ಮನೆ, ಅತ್ತೆ ಮನೆ, ಎಲ್ಲಾ ಸುತ್ತಿಕೊಂಡು ಬಂದು ಆಮೇಲೆ ಗ್ಯಾರೇಜಿಗೆ ಸೇರಿದ್ದು. ಮೊದಮೊದಲು ದೊಡ್ಡ ಬೈಕಿನ ಟೈರು ಕಳಚಲು ಶಕ್ತಿಯೇ ಸಾಲುತ್ತಿರಲಿಲ್ಲ. ಈಗೀಗ ಎಲ್ಲಾ ಸಲೀಸಾಗಿದೆ. ನನ್ನ ಕೈಗಳು ತಾವೇ ತಾವಾಗಿ ಸ್ಪ್ಯಾನರಿನಿಂದ ನಟ್ಟು ಬೋಲ್ಟುಗಳನ್ನು ತಿರುಗಿಸುತ್ತವೆ. ಎರಡು ತಿಂಗಳಲ್ಲೇ ಎಲ್ಲವನ್ನೂ ಕಲಿತಿದ್ದೇನೆ.
ನನ್ನ ಕೈಗೆ ಬಳಿದಿರುವ ಮಶಿ, ಕವಿದಿರುವ ಮುಂಗಾರು ಮಳೆಯ ಮೋಡಕ್ಕಿಂತ ಕಪ್ಪಿದೆ. ಊಟ ಮಾಡುವ ಮುನ್ನ ಎಷ್ಟು ತೊಳೆದರೂ ಹೋಗುವುದಿಲ್ಲ. ಮೊದಮೊದಲು ಇದೇ ಕೈಯಲ್ಲಿ ಊಟ ಮಾಡುವುದಕ್ಕೆ ಹೇಸಿಗೆಯಾಗುತ್ತಿತ್ತು. ಗ್ರೀಸಿನ ಕಂಪಿಗೆ ವಾಂತಿ ಬಂದಂತಾಗುತ್ತಿತ್ತು. ಈಗ ಎಲ್ಲವೂ ಅಭ್ಯಾಸವಾಗಿದೆ. ಹಸಿದ ಹೊಟ್ಟೆಗೆ ತನ್ನೊಳಗೆ ಆಹಾರವನ್ನು ತುರುಕುತ್ತಿರುವ ಕೈಯ ಬಣ್ಣದ ಪರಿಚಯವೇ ಇರುವುದಿಲ್ಲ. ಹೀಗಾಗಿ, ಅದು ಏನನ್ನು ಹಾಕಿದರೂ ಜೀರ್ಣ ಮಾಡುತ್ತದೆ.
ಈಗ ಹೊರಗೆ ಮಳೆ ಸ್ವಲ್ಪ ತೆರವು ಮಾಡಿಕೊಟ್ಟಿದೆ. ಸುಮ್ಮನೇ ಮನೆಯಲ್ಲಿ ಕುಳಿತಿರಲು ಬೇಸರವಾಗಿ ನಾನು ನಮ್ಮೂರ ಪ್ರೈಮರಿ ಶಾಲೆಯತ್ತ ಹೆಜ್ಜೆ ಹಾಕುತ್ತೇನೆ. ಇಲ್ಲ, ನನಗೆ ನಮ್ಮೂರ ಮುಖ್ಯದಾರಿಯಲ್ಲಿ ಓಡಾಡುವಷ್ಟು ಧೈರ್ಯವಿಲ್ಲ. ಕಟ್ಟೆಯ ಮೇಲೆ ಕುಳಿತ ಜನ ಕೇಳುತ್ತಾರೆ: 'ಏನೋ, ಇವತ್ತು ಕೆಲಸಕ್ಕೆ ಹೋಗಿಲ್ಲವೇನೋ? ಯಾಕೋ?' ಈ ಜನಗಳ ನಿಜವಾದ ಬಣ್ಣ ಗೊತ್ತಾಗುವುದು ನಾವು ಸೋತಾಗಲೇ ನೋಡಿ. ಕಟ್ಟೆಯ ಮೇಲೆ ಕುಳುತು ಕುಳಿತೇ ಇವರ ಅಂಡು ಸವೆದಿದ್ದರೂ ರಸ್ತೆಯ ಮೇಲೆ ಹೋಗಿಬರುವ ಜನಗಳನ್ನು ಹೀಯಾಳಿಸುವುದು ಬಿಡುವುದಿಲ್ಲ. ಅವರಿಗೆ ಅದರಲ್ಲೇ ಮನಸ್ಸಂತೋಷ. ಯಾರ್ಯಾರ ಮನೆಯಲ್ಲಿ ಏನೇನಾಯಿತು? ಯಾರ ಮನೆಯ ಹೆಣ್ಣು ಮಗಳು ತೌರಿಗೆ ವಾಪಸು ಬಂದಳು? ಯಾರ ಮನೆಯಲ್ಲಿ ಹಿಸೆ ಪಂಚಾಯಿತಿ? ಅತ್ತೆ-ಸೊಸೆ ಜಗಳ? ಇಸ್ಪೀಟಿನಲ್ಲಿ ಸೋತು ಪಾಪರ್ ಆದ್ನಂತೆ ಅವ್ನು ಹೌದಾ? ಛೇ! ಇವರಿಗೆ ತಮ್ಮ ಅಡುಗೆ ಮನೆಯಲ್ಲಿನ ಗ್ಯಾಸ್ ಸ್ಟೋವ್ ತುಕ್ಕು ಹಿಡಿದಿದ್ದರೂ ಪರವಾಗಿಲ್ಲ; ಬೇರೆಯವರ ಮನೆಯ ಪಾತ್ರೆ ಕಂದಿದರೂ ಅದು ಹಾಸ್ಯಕ್ಕೆ ವಸ್ತು. ನನಗೆ ಇಂಥವರ ಪ್ರಶ್ನೆಗಳಿಗೆ ಆಹಾರವಾಗಲಿಕ್ಕೆ ಇಷ್ಟವಿಲ್ಲ. ಅದಕ್ಕೇ ನಾನು ಹಿತ್ತಿಲ ದಾರಿ ಹಿಡಿದು, ಬೇಲಿ ಹಾರುತ್ತಾ ಶಾಲೆಯ ಹಿಂಭಾಗವನ್ನು ಸೇರುತ್ತೇನೆ.
ಈಗ ತಾನೇ ಮೇಷ್ಟ್ರು ಬಂದಿದ್ದಾರೆ. ಹುಡುಗನೊಬ್ಬನನ್ನು ಕರೆದು ಬೆಲ್ ಹೊಡೆಸಿದ್ದಾರೆ. ಟಿಣ್ ಟಿಣ್ ಟಿಣ್ ಟಿಣ್ ಟಿಣ್... ಮಕ್ಕಳೆಲ್ಲಾ ಹೊರಗೆ ಬಂದು ಕಟ್ಟೆಯ ಮೇಲೆ ಸಾಲಾಗಿ 'ಹೈಟ್ ಪ್ರಕಾರ' ನಿಂತಿದ್ದಾರೆ. 'ಸಾವಧಾನ್! ನಾಡಗೀತೆ ಶುರೂಕರ್!' ಈಗ ಪ್ರಾರ್ಥನೆ ಪ್ರಾರಂಭವಾಗಿದೆ... 'ಜೈ ಭಾರತ ಜನನಿಯ ತನುಜಾತೆ.. ಜಯಹೇ ಕರ್ನಾಟಕ ಮಾತೆ.. ಜೈ ಸುಂದರ ನದಿವನಗಳ ನಾಡೇ.. ಜಯಹೇ...' ಶಾಲೆಯ ಹಿಂದಿನ ಬೇಲಿಯ ಮರೆಯಲ್ಲಿ ನಿಂತ ನಾನೂ ಇಲ್ಲೇ ನೇರವಾಗಿ ನಿಂತು ಸಣ್ಣಗೆ ನಾಡಗೀತೆಯನ್ನು ಗುನುಗುತ್ತೇನೆ.. 'ಭೂದೇವಿಯ ಮಕುಟದ ನವಮಣಿಯೇ...' ಸಾಲಿನಲ್ಲಿ ನಿಂತ ಹುಡುಗರಲ್ಲಿ ಇನ್ನೂ ರಜೆಯ ತೂಕಡಿಕೆ ಇದೆ. ಅಗೋ, ಮೂರನೇ ಸಾಲಿನ ನಾಲ್ಕನೇ ಹುಡುಗ ಶಶಾಂಕ ಆಕಳಿಸುತ್ತಿದ್ದಾನೆ.. ನನಗೆ ನಗು ಬರುತ್ತಿದೆ.. ಈ ವರ್ಷ ಹೊಸದಾಗಿ ಒಂದನೇ ಕ್ಲಾಸಿಗೆ ಸೇರಿದ ಮಕ್ಕಳಿಗೆ ಪ್ರಾರ್ಥನೆ ಸರಿಯಾಗಿ ಬರುವುದಿಲ್ಲ. ಅವರು ಅಕ್ಕಪಕ್ಕದವರ ಬಾಯಿ ನೋಡುತ್ತಿದ್ದಾರೆ. ಮೇಷ್ಟ್ರು ಕಣ್ಣಲ್ಲೇ 'ನೀವೂ ಹಾಡಿ' ಎನ್ನುತ್ತಿದ್ದಾರೆ. ಕೆಲ ಮಕ್ಕಳು ಸುಮ್ಮನೇ ಬಾಯಿ ಪಿಟಿಗುಡುಸಿತ್ತಿದ್ದಾರೆ. ಎದಿರುಗಡೆ ಹುಡುಗಿಯ ತಲೆಯಲ್ಲಿ ಹೇನು ಹುಡುಕುತ್ತಿದ್ದಾಳೆ ಕಲ್ಪನ.. ಹೊರಡುವುದು ತಡವಾದ್ದರಿಂದ ತನ್ನ ಜೊತೆ ಅಪ್ಪನನ್ನೂ ಕರೆದುಕೊಂಡು ಬಂದಿರುವ ನಟರಾಜ ಆಗಲೇ ಶುರುವಾಗಿರುವ ಪ್ರಾರ್ಥನೆಯಲ್ಲಿ ಸೇರಿಕೊಳ್ಳುವುದೋ ಬಿಡುವುದೋ ಅರ್ಥವಾಗದೇ ಹಾಗೇ ದೂರದಲ್ಲಿ ನಿಂತಿದ್ದಾನೆ... ಪ್ರಾರ್ಥನೆ ಮುಗಿಯುತ್ತಿದೆ: '...ಕನ್ನಡ ತಾಯಿಯ ಮಕ್ಕಳ ಗೇಹ'.. ಕೊನೆಯಲ್ಲಿ ಎಲ್ಲರೂ 'ಜೈಹಿಂದ್' ಹೇಳಿ ಶಾಲೆಯ ಒಳನಡೆದಿದ್ದಾರೆ. ಈಗ ಆಗಸದಲ್ಲಿ ಮತ್ತೆ ಮಳೆಮೋಡಗಳು ಒಟ್ಟಾಗುತ್ತಿವೆ... ನಾನು ಕೈಯಲ್ಲಿರುವ ಛತ್ರಿಯ ಬಟ್ಟೆಯನ್ನೊಮ್ಮೆ ಸವರುತ್ತೇನೆ... ನನ್ನ ಮೆಡ್ಲಿಸ್ಕೂಲಿನ ದಿನಗಳ ನೆನಪಿಗೆ ಜಾರುತ್ತೇನೆ...
ನಾನು ನಾಲ್ಕನೇ ಕ್ಲಾಸು ಮುಗಿಸಿದ ಮೇಲೆ ಮುಂದೆ ಯಾವ ಶಾಲೆ ಎಂಬ ಗೊಂದಲವೇ ಇರಲಿಲ್ಲ ನಮ್ಮ ಮನೆಯಲ್ಲಿ. ಸೀದಾ ಹೋಗಿ ಉಳವಿಯ ಸರ್ಕಾರೀ ಶಾಲೆಗೆ ಸೇರಿಸಿದ್ದು ಅಪ್ಪ. ಸ್ವಲ್ಪ ಭಯವಿತ್ತು: ಹೊಸ ಶಾಲೆ, ಹೊಸ ಮೇಷ್ಟ್ರುಗಳು, ಹೊಸ ಗೆಳೆಯರು... ಈ ವರ್ಷದಿಂದ ಇಂಗ್ಲೀಷು ಬೇರೆ ಕಲಿಯಬೇಕಲ್ಲಪ್ಪಾ ಅಂತ.. ಒಂದು ತಿಂಗಳಲ್ಲಿ ಹೊಂದಿಕೊಂಡೆ. ಗೆಳೆಯರೆಲ್ಲರೂ ಒಳ್ಳೆಯವರಿದ್ದರು. ಒಳ್ಳೆಯವರು ಎಂದರೇನು? ನನ್ನಷ್ಟೇ ದಡ್ಡರೂ ನನ್ನಷ್ಟೇ ಬುದ್ಧಿವಂತರೂ ಆಗಿದ್ದರು ಅಂತ! ನಮಗಿಂತ ದಡ್ಡರು ನಮ್ಮ ಜೊತೆ ಸೇರುವುದೇ ಇಲ್ಲ; ನಮಗಿಂತ ಬುದ್ಧಿವಂತರು ನಮ್ಮನ್ನು ಸೇರಿಸಿಕೊಳ್ಳಲಿಕ್ಕೇ ಹಿಂಜರಿಯುತ್ತಾರೆ.. ಇಲ್ಲಿ ಹಾಗಿರಲಿಲ್ಲ. ಟೆಸ್ಟಿನಲ್ಲಿ ಒಬ್ಬರಿಗೊಬ್ಬರು ತೋರಿಸಿಕೊಂಡು, ಸನ್ನೆ-ಗಿನ್ನೆ ಮಾಡಿಕೊಂಡು, ಕಾಪಿಚೀಟಿ ವರ್ಗಾಯಿಸಿಕೊಂಡು ನಾವು ಅನ್ಯೋನ್ಯವಾಗಿದ್ದೆವು.
ಊರಿನಿಂದ ಎರಡು ಮೈಲು ನಡೆದೇ ಹೋಗುತ್ತಿದ್ದುದು ನಾನು. ನನ್ನ ಜೊತೆ ಅಣ್ಣಪ್ಪ, ಭೈರಪ್ಪ, ಗಿರೀಶ ಇತ್ಯಾದಿ ಗೆಳೆಯರು ಇರುತ್ತಿದ್ದರು. ಹೊರಬೈಲು ಬೋರ್ಡ್ಗಲ್ಲಿನಲ್ಲಿ ನಾಗಶ್ರೀ, ಹಾಲಮ್ಮರೂ ಸೇರಿಕೊಳ್ಳುತ್ತಿದ್ದರು. ಸುರಿಯುವ ಮಳೆಯಲ್ಲಿ ಛತ್ರಿ ಹಿಡಿದ ನಾವು ಒಬ್ಬರಿಗೊಬ್ಬರು ನೀರು ಹಾರಿಸಿಕೊಳ್ಳುತ್ತಾ, ರಸ್ತೆ ಪಕ್ಕದ ಬುಕ್ಕೆ ಮಟ್ಟಿಗಳನ್ನು ಶೋಧಿಸುತ್ತಾ, ಸಿಕ್ಕ ಕಲ್ಲುಗಳನ್ನು ಲೈಟುಕಂಬಗಳಿಗೆ ಎಸೆಯುತ್ತಾ ಸಾಗುತ್ತಿದ್ದೆವು. ಎದುರಿಗೆ ಬಂದ ಮಲ್ಲಿಕಾರ್ಜುನ ಬಸ್ಸಿನ ಡ್ರೈವರ್ರಿಗೆ ಕೈ ಮಾಡುತ್ತಿದ್ದೆವು. ಅದಕ್ಕೆ ಪ್ರತಿಯಾಗಿ ಡ್ರೈವರು ಹಾರನ್ನು ಮಾಡಿದರೆ ನಮಗೆ ಖುಷಿಯಾಗುತ್ತಿತ್ತು. ಏನೇನೋ ಮಾತು ಏನೇನೋ ಮಾತು... ದಾರಿ ಖರ್ಚಿಗೆ ಇಂಥದ್ದೇ ಬೇಕೆಂದೇನಿಲ್ಲವಲ್ಲ? ಮಾತಾಡುತ್ತಿದ್ದರೆ ಶಾಲೆ ಬೇಗ ಬರುತ್ತದೆ ಅಷ್ಟೆ.
ಶಾಲೆಯಲ್ಲಿ ಛತ್ರಿ ನೇತುಹಾಕಲಿಕ್ಕೆಂದೇ ಹೊರಗಡೆ ಒಂದು ಊದ್ದ ದಬ್ಬೆಯನ್ನು ಹೊಡೆದಿದ್ದರು. ನಾವೆಲ್ಲಾ ನಮ್ಮ ಛತ್ರಿಯನ್ನು ಮಡಚಿ, ಕೊಡವಿ ಅದಕ್ಕೇ ನೇತುಹಾಕುತ್ತಿದ್ದುದು. ಮೇಷ್ಟ್ರುಗಳೂ ತಮ್ಮ ಛತ್ರಿಯನ್ನು ಇಲ್ಲೇ ಇಡುತ್ತಿದ್ದುದು. ನಮ್ಮ ಕನ್ನಡ ಮೇಷ್ಟ್ರ ಉದ್ದ ಕೋಲಿನ ಛತ್ರಿ ಮಾತ್ರ ಯಾವಾಗಲೂ ನ್ಯಾಲೆಯ ಮೊದಲನೆಯದಾಗಿರುತ್ತಿತ್ತು. ನಮ್ಮ ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿವರೆಗೂ ಇತ್ತು. ಒಂದನೇ ತರಗತಿಗೆ ಪಾಠ ಮಾಡಲು ಬರುತ್ತಿದ್ದುದು ಒಬ್ಬ ಮೇಡಂ. ಅನಿತಾ ಮೇಡಂ ಅಂತ. ಅವರು ಮಾತ್ರ ತಮ್ಮ ಛತ್ರಿಯನ್ನು ಇಲ್ಲಿ ನೇತುಹಾಕುತ್ತಿರಲಿಲ್ಲ. ಅವರ ಛತ್ರಿಗೆ ಮೂರು ಫೋಲ್ಡುಗಳು! ಅದನ್ನು ಅವರು ಒದ್ದೆಯಿದ್ದರೂ ತಮ್ಮ ವ್ಯಾನಿಟಿ ಬ್ಯಾಗಿನಲ್ಲಿಯೇ ಇಟ್ಟುಕೊಳ್ಳುತ್ತಿದ್ದುದು. ಅದೆಷ್ಟು ಒಳ್ಳೇ ಮೇಡಂ ಅಂತೀರಾ ಅವರು? ಒಮ್ಮೆ ನಾವು ಐದನೇ ತರಗತಿಯ ಹುಡುಗರಿಗೆ ಅವರು ಕ್ಲಾಸು ತೆಗೆದುಕೊಂಡಿದ್ದರು. ಪಾಠ ಇಲ್ಲವೇ ಇಲ್ಲ! ಬರೀ ಹಾಡು, ಕಥೆ, ಆಟ... ಏನೇನೋ ಆಡಿಸಿದ್ದು... ಅವರ ಕಂಠ ಎಷ್ಟು ಚೆನ್ನಾಗಿದೆ ಅಂತೀರಾ? ನನ್ನ ಅಮ್ಮನನ್ನು ಬಿಟ್ಟರೆ ಅಷ್ಟು ಚಂದ ಹಾಡುವವರು ಅನಿತಾ ಮೇಡಮ್ಮೇ ಸರಿ ಅಂತ ನಾನು ತೀರ್ಮಾನಿಸಿದ್ದೆ.
ಈಗ ಮಳೆಹನಿ ಬೀಳತೊಡಗಿದೆ... ಜೋರಾಗುತ್ತಿದೆ... ಶಾಲೆಯಿಂದ ಬರುತ್ತಿರುವ 'ಎರಡೊಂದ್ಲೆ ಎರಡು, ಎರಡೆರಡ್ಲೆ ನಾಕು, ಎರಡ್ಮೂರ್ಲೆ ಆರು..' ಮಗ್ಗಿಯ ಪ್ರಾಕ್ಟೀಸ್, ಮಳೆಯ ಹಾಡಿನೊಂದಿಗೆ ಬೆರೆಯುತ್ತಿದೆ... 'ಇನ್ನೂ ಜೋರಾಗಿ ಹೇಳ್ರೋ' ಮೇಷ್ಟ್ರು ಕೂಗಿದ್ದು ಕೇಳಿಸುತ್ತಿದೆ... ಛತ್ರಿ ಅಗಲಿಸಿ ನಿಂತಿರುವ ನಾನು ನಿಧಾನಕ್ಕೆ ಮನೆಯತ್ತ ವಾಪಸು ಹೆಜ್ಜೆ ಹಾಕುತ್ತೇನೆ...
ಮೆಡ್ಲಿಸ್ಕೂಲಿನ ದಿನಗಳು ತುಂಬಾ ಚೆನ್ನಾಗಿದ್ದವು. ಐದು-ಆರನೇ ಕ್ಲಾಸಿನ ಪರೀಕ್ಷೆಗಳನ್ನು ಪಾಸು ಮಾಡುವುದು ನಮಗೆ ತಲೆನೋವೇ ಆಗಲಿಲ್ಲ. ಪ್ರಶ್ನೆಪತ್ರಿಕೆಗಳು ಬಹಳ ಸುಲಭ ಇದ್ದವು. ಆರನೇ ಕ್ಲಾಸಿನಲ್ಲಿ ಕನ್ನಡ ಮತ್ತು ಸಮಾಜ ವಿಷಯಗಳಲ್ಲಿ ನನಗೇ ಹೈಯೆಸ್ಟ್ ಮಾರ್ಕ್ಸ್! ನನಗೆ ಅವು ಇಷ್ಟದ ವಿಷಯಗಳಾಗಿದ್ದವು. ಮತ್ತೇನಪ್ಪ ಅಂದ್ರೆ, ಕನ್ನಡ ಮತ್ತು ಸಮಾಜ -ಎರಡೂ ವಿಷಯಕ್ಕೆ ಪಾಠಕ್ಕೆ ಬರುತ್ತಿದ್ದವರು ಶಂಕ್ರಪ್ಪ ಮೇಷ್ಟ್ರು. ಎಷ್ಟು ಚೆನ್ನಾಗಿ ಪಾಠ ಮಾಡುತ್ತಿದ್ದರೆಂದರೆ ನನಗೆ ಮನೆಗೆ ಹೋಗಿ ಓದುವ ಪ್ರಮೇಯವೇ ಬರುತ್ತಿರಲಿಲ್ಲ. ಅವರಿಗೂ ನನ್ನನ್ನು ಕಂಡರೆ ಏನೋ ಅಕ್ಕರೆ. 'ಬಡವರ ಮನೆ ಹುಡುಗ... ನೀನು ಓದಿ ಹೆಸರು ಮಾಡಬೇಕು... ಎಷ್ಟು ಖರ್ಚಾದರೂ ಸರಿ, ನಿನ್ನ ಅಪ್ಪನಿಗೆ ಓದಿಸಲಿಕ್ಕೆ ನಾನು ಹೇಳುತ್ತೇನೆ...' ಎಂದಿದ್ದರು. ನಮ್ಮ ಆರನೇ ಕ್ಲಾಸು ಮುಗಿಯುವಷ್ಟರಲ್ಲಿ ವರ್ಗವಾಗಿ ಹೋದರು. ಈಗ ಎಲ್ಲಿದ್ದಾರೋ? ಇಲ್ಲೇ ಇದ್ದಿದ್ದರೆ ನಾನು ಮತ್ತೊಮ್ಮೆ ಏಳನೇ ಕ್ಲಾಸಿನ ಪರೀಕ್ಷೆಗೆ ಕಟ್ಟಿ, ಪಾಸು ಮಾಡಿಕೊಂಡು, ಹೈಸ್ಕೂಲಿಗೆ...... ಹುಂ! ಎಲ್ಲಾ ಭ್ರಮೆಯಷ್ಟೆ.
ಹಿತ್ತಿಲ ಹಾದಿಯಲ್ಲಿ ನಡೆಯುವಾಗ ಎಲ್ಲಾ ನೆನಪಾಗುತ್ತದೆ... ಈ ಮಳೆಯೇ ಹಾಗೆ: ಮಧುರ ಸ್ಮೃತಿಗಳನ್ನು ಸುರಿಸುತ್ತದೆ... ಏನೇನೋ ಭಾವನೆಗಳನ್ನು ಸ್ಪುರಿಸುತ್ತದೆ... ಹೊಸ ಸ್ವಪ್ನಲೋಕದ ತೆರೆಯನ್ನು ಸರಿಸುತ್ತದೆ... ನನ್ನನ್ನು ಹೊಸ ಕನಸುಗಳು ಆವರಿಸುತ್ತವೆ: ಇದೇ ಗ್ಯಾರೇಜಿನಲ್ಲಿ ನಾಳೆಯಿಂದ ಇನ್ನೂ ಜಾಸ್ತಿ ಕೆಲಸ ಮಾಡಿ, ಎಲ್ಲವನ್ನೂ ಕಲಿತು, ಮುಂದೊಂದು ದಿನ ನಾನೇ ಗ್ಯಾರೇಜು ತೆರೆಯುತ್ತೇನೆ.. ದುಡ್ಡು ಮಾಡುತ್ತೇನೆ.. ಊರ ಜನರೆದುರು ತಲೆಯಿತ್ತಿ ನಿಲ್ಲುತ್ತೇನೆ.. ಶಾಲೆ ಬಿಡಿಸಿದ ಅಪ್ಪನಿಗೇ ಅಚ್ಚರಿಯಾಗುವಂತೆ ಬೆಳೆದು ನಿಲ್ಲುತ್ತೇನೆ...
ಮನೆ ಸಮೀಪಿಸುತ್ತಿದೆ. ಅಮ್ಮ ಒಲೆಯ ಬುಡದಲ್ಲಿ ಕುಳಿತು ಇವತ್ತು ಮನೆಯಲ್ಲೇ ಇರುವ ಮಗನಿಗಾಗಿ ಹಪ್ಪಳ ಕರಿಯುತ್ತಿದ್ದಾಳೆ. ಈ ಮಳೆಯ ಜೊತೆ ಹಲಸಿನ ಕಾಯಿ ಹಪ್ಪಳ, ಅದರಲ್ಲೂ ನನ್ನಲ್ಲಿ ಸದಾ ಹೊಸ ಸ್ಪೂರ್ತಿ ತುಂಬುವ ಅಮ್ಮ ಕರಿದುಕೊಟ್ಟ ಹಪ್ಪಳ.. ಆಹ್! ಅದರ ರುಚಿಯೇ ರುಚಿ! ಛತ್ರಿಯನ್ನು ಕಟ್ಟೆಯ ಬದಿಯಲ್ಲಿ ಸಾಚಿ, ಸೂರಿನ ಒಗದಿಯಿಂದ ಬೀಳುತ್ತಿರುವ ನೀರಿಗೆ ನನ್ನ ಕಪ್ಪು ಬಳಿದ ಕೈಯೊಡ್ಡುತ್ತೇನೆ. ಬೊಗಸೆ ತುಂಬಾ ಶುದ್ದ, ಬಣ್ಣರಹಿತ, ಅಹಂಕಾರರಹಿತ, ಸ್ವಾಧಭರಿತ, ಭಾವಸಹಿತ ನೀರು ತುಂಬಿಕೊಳ್ಳುತ್ತದೆ... ನಾನು ಆ ನೀರಿನಲ್ಲಿ ನನ್ನ ಮುಖವನ್ನೇ ನೋಡಿಕೊಳ್ಳುತ್ತೇನೆ... ಹಿಂದಿನಿಂದ ಬಂದ ಅಮ್ಮ 'ಒಳಗಡೆ ಕನ್ನಡಿ ಇದೆ ಬಾ... ಹಪ್ಪಳ ತಿಂತಾ ನೋಡ್ತಾ ಕೂರುವಂತೆ..!' ಎಂದು ನಗುತ್ತಾಳೆ. ನಾನೂ ನಗುತ್ತಾ ಅಮ್ಮನ ಜೊತೆ ಒಳನಡೆಯುತ್ತೇನೆ.
ಸುರಿ ಸುರಿ ಸುರಿ ಸುರಿ ಸುರಿ ಮಳೆ... ಗರಿ ಗರಿ ಗರಿ ಗರಿ ಗರಿ ಹಪ್ಪಳ...

Subscribe to:
Posts (Atom)