Showing posts with label Travelogue. Show all posts
Showing posts with label Travelogue. Show all posts

Tuesday, July 07, 2009

ಬೆಟ್ಟದಿಂದ ಬಂದ ಪತ್ರ

ಡಿಯರ್ ಫ್ರೆಂಡ್,

ಮತ್ಯಾವುದೋ ಪರ್ವತದ ಮೇಲಿದ್ದೇನೆ. ‘ಎಲ್ಲಿ? ಯಾವೂರು?’ ಅಂತೆಲ್ಲ ಹೇಳುವುದಿಲ್ಲ. ಕನಿಷ್ಟ, ಪರ್ವತದ ಶೃಂಗದಲ್ಲಿದ್ದಾಗಲಾದರೂ ಊರು-ಕೇರಿ-ಹೆಸರುಗಳನ್ನು ಮರೆಯಬೇಕು ಅಂತ ನನಗನ್ನಿಸೊತ್ತೆ. ಇಲ್ಲಿ ಈ ಕ್ಷಣದಲ್ಲಿ ನನಗೆ ಎಲ್ಲ ಪರ್ವತಗಳ ನೆತ್ತಿಯೂ ಒಂದೇ ಅನ್ನಿಸುತ್ತಿದೆ. ಊರು, ಕೇರಿ, ಹೆಸರುಗಳನ್ನೆಲ್ಲ ಒಂದೊಂದಾಗಿ ಕಳಚಿಕೊಳ್ಳುತ್ತ ಏರುತ್ತ ಏರುತ್ತ ತುತ್ತ ತುದಿಗೆ ಬಂದು ನಿಂತಿರುವ ಈ ಕ್ಷಣದಲ್ಲಿ ಕೈ ಚಾಚಿದರೆ ಆಕಾಶ, ಬಗ್ಗಿ ನೋಡಿದರೆ ಪ್ರಪಾತ, ಸುತ್ತೆಲ್ಲ ಶೂನ್ಯ ಎಂಬಂತಿರುವ ಈ ಜಾಗಕ್ಕೆ ಹೆಸರಾದರೂ ಯಾಕೆ ಬೇಕು ಹೇಳು?

ನನಗೂ ಗೊತ್ತಿಲ್ಲ ಸ್ಪಷ್ಟವಾಗಿ: ಏಕೆ ಹೀಗೆ ಚಾರಣಗಳಿಗೆ ಬರುತ್ತೇವೆ ನಾವು ಅಂತ. ಜಗದ ಜನವೆಲ್ಲ ತಮ್ತಮ್ಮ ಅಭಿವೃದ್ಧಿ ಕಾರ್ಯಗಳಲ್ಲಿ ತತ್ಪರರಾಗಿರುವಾಗ ನಾವು ಹೀಗೆ ದುಡ್ಡು ಖರ್ಚು ಮಾಡಿಕೊಂಡು, ಸಮಯ ವ್ಯಯಿಸಿ, ಸುಸ್ತು ಮಾಡಿಕೊಳ್ಳುತ್ತಾ ಬೆಟ್ಟ ಏರುವ ದರ್ದಾದರೂ ಏನಿರಬಹುದು? ಅಮ್ಮನಂತೂ ಯಾವಾಗಲೂ ಬೈಯುತ್ತಾಳೆ. ಅವಳಿಗೆ ತಿಳಿಸಿ ಹೇಳಲಿಕ್ಕಂತೂ ಇನ್ನೂ ನನಗೆ ಆಗಿಲ್ಲ. ಆದರೂ, ಸಾವನದುರ್ಗದ ಮೇಲಿನ ಮೌನ ನಂದಿಯ ಪಕ್ಕ ನಿಂತು ನೋಡಿದ ಮಳೆ, ದೇವರಾಯನದುರ್ಗದಲ್ಲಿ ಕಳೆದ ಕಾವಳದ ರಾತ್ರಿ, ಸಿದ್ದರ ಬೆಟ್ಟದ ನಿಗೂಢ ಗುಹೆಗಳು, ಕುಮಾರ ಪರ್ವತದಿಂದ ಕಂಡ ಅಮೋಘ ದೃಶ್ಯ, ದೇವಕಾರಿನ ಜಲಪಾತದ ಸೆಳೆತ, ಕೋಟೆಬೆಟ್ಟದ ಮೇಲೆ ಬೀಳುತ್ತಿದ್ದ ಹಿಮ -ಊಹುಂ, ಅವು ಮತ್ತೆಲ್ಲೂ - ಮತ್ತಿನ್ನೆಲ್ಲೂ ಸಿಗೊಲ್ಲ ಬಿಡು.

ಹಾಗೇ ಈ ಪರ್ವತದ ಶೃಂಗದಿಂದ ಕಾಣುತ್ತಿರುವ ದೃಶ್ಯ. ಇಲ್ಲಿಂದ ನೋಡುವಾಗ ಅದು ಜ್ವಾಲಾಮುಖಿಯಿಂದ ಉಕ್ಕಿ ಹರಿಯುತ್ತಿರುವ ಲಾವಾದಂತೆ ಕಾಣಿಸುತ್ತಿದೆ. ನನ್ನ ಕೆಮೆರಾದಿಂದ ಅದರ ಫೋಟೋ ತೆಗೆಯುತ್ತಿದ್ದ ಚಿನ್ಮಯ ಇನ್ನು ಸ್ವಲ್ಪ ಹೊತ್ತಿನಲ್ಲಿ ಅದು ಆಸ್ಟ್ರೇಲಿಯಾ ಮ್ಯಾಪಿನಂತೆ ಕಾಣಬಹುದು ಎಂದು ಹೇಳಿದ. ಆಸ್ಟ್ರೇಲಿಯಾ ಏನು, ಹೀಗೇ ಇನ್ನೂ ಸ್ವಲ್ಪ ಕೆಳಗಿಳಿದರೆ ಭಾರತದ ದಕ್ಷಿಣದಂಚಿನಂತೆಯೂ ಕಾಣಿಸಬಹುದು ಎನ್ನಿಸಿತು ನನಗೆ. ನಮ್ಮ ಬಟ್ಟೆ-ಆಹಾರವನ್ನೆಲ್ಲ ಸ್ವಲ್ಪ ಕೆಳಗೆ-ತಪ್ಪಲಿನಂತಹ ಜಾಗದಲ್ಲಿಟ್ಟು ಮೇಲೆ ಶೃಂಗಕ್ಕೆ ಬಂದಿದ್ದೇವೆ ನಾವು. ಶೃಂಗಕ್ಕೆ ಹತ್ತಿರದಲ್ಲೇ ಇರುವ ಮೋಡಗಳು ಕೆಳಗಿಳಿಯುತ್ತಿರುವ ಕತ್ತಲೆಯ ಪರಾಗಗಳನ್ನು ಮಧ್ಯದಲ್ಲೇ ತಡೆದು ಚಳಿಯನ್ನು ಜತೆ ಮಾಡಿ ಕಳುಹಿಸುತ್ತಿವೆ. ಆ ಪರಾಗಗಳು ನಮ್ಮ ಮೈಗೆ ತಾಕಿದ್ದೇ ತಡ, ರೋಮಗಳೆಲ್ಲ ಕುಸುಮದಂತೆ ಅರಳಿ ಎದ್ದು ನಿಂತಿವೆ.

“ಶೃಂಗದಲ್ಲಿದ್ದಾಗ ಕತ್ತಲಾದದ್ದು ಗೊತ್ತಾಗುವುದಿಲ್ಲ. ಕೆಳಗಿಳಿಯುವಾಗ ಕಷ್ಟ” ಎಂದ ಪ್ರವೀಣ. ಹೌದೆನಿಸಿತು ನನಗೆ. ಈಗಷ್ಟೇ ಮುಳುಗಿದ್ದ ಸೂರ್ಯ ಇಲ್ಲಿ. ನಮನ್ನೆಲ್ಲ ಕತ್ತಲೆಯಲ್ಲಿ ಬಿಟ್ಟು ಇಲ್ಲಿ ಹೀಗೆ ಪಶ್ಚಿಮದ ದಿಗಂತದಲ್ಲಿ ಕಣ್ಮರೆಯಾಗಿ, ಅಲ್ಲಿ ಬೇರ‍್ಯಾವುದೋ ದೇಶದ ಜನರಿಗೆ ಬೆಳಗು ಮಾಡಿ ಅಲ್ಲಿಯ ಬೆಡಗಿಯರನ್ನು ಮನೆಯಿಂದ ಹೊರ ಕರೆಸಿ ಅವರ ಸೌಂದರ್ಯವನ್ನು ಕಣ್ಮಿಟುಕಿಸದೇ ಸಂಜೆಯವರೆಗೂ ನೋಡಿಕೊಂಡು, ನಾಳೆ ಬೆಳಗಾಗುತ್ತಿದ್ದಂತೆ ಏನೂ ಆಗಿಯೇ ಇಲ್ಲವೇನೋ ಎಂಬಂತೆ ಮುಗ್ಧ ಸೋಗಿನಲ್ಲಿ ಇಲ್ಲಿ ಮತ್ತೆ ಹಾಜರಾಗುವ ಈ ಸೂರ್ಯನನ್ನು ಕಂಡಾಗಲೆಲ್ಲ ನನಗೆ ಅಸೂಯೆ. ಇರಬಹುದು ಅಂವ ದೊಡ್ಡವ. ಇರಬಹುದು ಅಂವ ಬೆಳಕಿನ ಅಧಿಪತಿ. ಇರಬಹುದು ಆತ ಜಗದೊಡೆಯ. ಆದರೆ ಆತ ಸಾಚಾ ಅಂತೂ ಅಲ್ಲ. ಒಮ್ಮೆ ಆತ ಮುಳುಗುತ್ತಿದ್ದಾಗ ಅವನ ಹಿಂದೆಯೇ ಹೋಗಿ ಅವನ ಮೋಸವನ್ನೆಲ್ಲ ಸಾಬೀತು ಮಾಡಿ ಬರಬೇಕು ಅಂತಿದೆ ನನಗೆ. ಆದರೆ ಆತ ಬುದ್ಧಿವಂತ: ಬೆಳ್ಳಿ ಚಂದಿರನನ್ನೂ ಕೋಟಿತಾರೆಗಳನ್ನೂ ನನ್ನ ಕಾವಲಿಗಿಟ್ಟೇ ಹೋಗುತ್ತಾನೆ ಪ್ರತಿದಿನ. ಇವುಗಳಿಂದ ತಪ್ಪಿಸಿಕೊಳ್ಳುವುದಿದೆಯೇ?

ಆಗಲೇ ಬೀಳತೊಡಗಿದ್ದ ಇಬ್ಬನಿಯಿಂದಾಗಿ ನೆಲ ಜಾರುತ್ತಿದೆ. “ತಪ್ಪಿ ಒಣಗಿದ ಹುಲ್ಲಿನ ಮೇಲೇನಾದರೂ ಕಾಲಿಟ್ಟರೆ ಸೀದಾ ಕೆಳಗೇ” -ಗೆಳೆಯರು ಎಚ್ಚರಿಸುತ್ತಿದ್ದಾರೆ. ಬಲು ಹುಷಾರಿನಿಂದ ಇಳಿಯುತ್ತಿದ್ದೇನೆ. ತಪ್ಪಲಿಗೆ ಮುಟ್ಟುವಷ್ಟರಲ್ಲಿ ಕತ್ತಲೆ ಪೂರ್ತಿ ಆವರಿಸಿದೆ. ಚಳಿ ತೀಕ್ಷ್ಣವಾಗುತ್ತಿದೆ. ಸರಸರನೆ ನಮ್ಮ ಜಾಕೀಟುಗಳನ್ನು ಧರಿಸಿ, ಬ್ಯಾಗುಗಳಲ್ಲಿದ್ದ ಪೆನ್‌ಟಾರ್ಚುಗಳನ್ನು ಹೊರತೆಗೆದು, ಕ್ಯಾಂಪ್‌ಫೈರ್ ಮಾಡಲಿಕ್ಕೆ ಕಟ್ಟಿಗೆ ಒಟ್ಟುಗೂಡಿಸಲಿಕ್ಕೆ ಹೊರಡುತ್ತೇವೆ ನಾವು. ನಾವು ಪಕ್ಕದ ಹಳ್ಳಿಯಿಂದ ಕರೆದುಕೊಂಡು ಬಂದಿದ್ದ ಗೈಡುಗಳು ಇನ್ನೊಂದು ತಾಸಿನೊಳಗೆ ಬರುತ್ತೇವೆ ಎಂದು ಹೇಳಿ ಎತ್ತಲೋ ಮಾಯವಾಗಿಬಿಟ್ಟಿದ್ದಾರೆ. ಅವರಾದರೂ ಇದ್ದಿದ್ದರೆ ಕಟ್ಟಿಗೆ ತರಲಿಕ್ಕೆ ಸ್ವಲ್ಪ ಸಹಾಯ ಮಾಡುತ್ತಿದ್ದರು. “ರಾತ್ರಿಯಿಡೀ ಉರೀಬೇಕು ಅಂದ್ರೆ ದೊಡ್ಡ ದೊಡ್ಡ ಕುಂಟೆಯೇ ಬೇಕು. ಈ ಸಣ್ಣ ಜಿಗ್ಗು-ಪುಡಿ ಕಟ್ಟಿಗೆಯೆಲ್ಲಾ ಹತ್ತು ನಿಮಿಷದಲ್ಲಿ ಉರಿದು ಹೋಗ್ತವೆ” ವಿನು ಹೇಳುತ್ತಿದ್ದಾನೆ. ಹೌದು, ದೊಡ್ಡ ದಿಮ್ಮಿಗಳೇ ಬೇಕು. ಇಲ್ಲಿ ಒಣಗಿದ ಮರಗಳೇನೋ ಬಹಳ ಇವೆ, ಆದರೆ ಇವನ್ನೆಲ್ಲಾ ಈ ಕತ್ತಲಿನಲ್ಲಿ ಕಡಿದು ಹೊತ್ತು ಅಲ್ಲಿಗೆ ಸಾಗಿಸುವುದೇ ತಲೆನೋವು.

ಚಳಿ ಈ ರಾತ್ರಿ ನಮಗೊಂದು ಗತಿ ಕಾಣಿಸಲಿಕ್ಕೆ ಸಂಚು ಹೂಡಿದಂತಿದೆ. ಹೊತ್ತಿಕೊಂಡ ಸಣ್ಣ ಬೆಂಕಿಯ ಬೆಳಕು ಎಲ್ಲರ ಮುಖಕ್ಕೂ ಕೆಂಪಿನ ಬಣ್ಣ ಬಳಿಯುತ್ತಿದೆ. ರವ್ಯಾ ಏನೋ ಡೈಲಾಗು ಹೊಡೆಯುತ್ತಿದ್ದಾನೆ: “ಇಷ್ಟು ದೊಡ್ಡ ಬೆಂಕಿ ಆದ್ರೂ ಶಾಖ ದೇಹದ ಎಲ್ಲಾ ಭಾಗಕ್ಕೂ ಮುಟ್ತಾನೇ ಇಲ್ಲ ಮಾರಾಯಾ..!” ಎಲ್ಲರೂ ನಗುತ್ತಿದ್ದೇವೆ. ಈ ಚಳಿಯಲ್ಲಿ ನಗೆಯ ದನಿಯೂ ಬೇರೆ ತರಹ ಕೇಳಿಸುತ್ತದೆ. ಅಥವಾ ಅದೊಂಥರಾ ಭ್ರಮೆಯಿರಬಹುದು. ಈಗ ನಮ್ಮ ಗೈಡುಗಳು ದೌಡಾಯಿಸಿದ್ದಾರೆ. ಇಬ್ಬರ ಕೈಯಲ್ಲೂ ಎರಡೆರಡು ಬಾಟಲಿಗಳು. ಬಿಳೀ ಬಣ್ಣದ ಸಾರಾಯಿ. ರಾತ್ರಿ ನಾವು ಮಲಗಿದ್ದಾಗ ಇವರು ನಿದ್ರಿಸದೇ ಬೆಂಕಿಗೆ ಕೊಳ್ಳಿ ಮುಂದೂಡುತ್ತಾ ಬೆಳಗಿನವರೆಗೂ ಕುಡಿಯುತ್ತಲೇ ಇರುತ್ತಾರಂತೆ. ಅಷ್ಟೆಲ್ಲಾ ಕುಡಿದರೂ ಇವರಿಗೆ ನಿದ್ರೆ ಬರುವುದಿಲ್ಲವಾ ಅಂತ ನನಗೆ ಆಶ್ಚರ್ಯ. ಬಹುಶಃ ನಾವು ಎದ್ದಮೇಲೆ ಇವರು ಮಲಗಬಹುದು ಅಂತ ಎಲ್ಲರೂ ತಮಾಷೆ ಮಾಡಿಕೊಂಡೆವು.

ತಂದಿದ್ದ ಚಪಾತಿಯನ್ನು ಹಂಚಿಕೊಂಡು ತಿಂದೆವು. ಸ್ವಲ್ಪ ಹೊತ್ತು ಹರಟೆಯೂ ಮುಗಿಯಿತು. ಇನ್ನೇನು ಕೆಲಸ? ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿಕೊಂಡು ಮಲಗಿ ನಿದ್ರೆ ಹೋಗುವುದು ಅಷ್ಟೇ. ಜಾಕೇಟಿನ ಸಮೇತ ಸ್ಲೀಪಿಂಗ್ ಬ್ಯಾಗಿನೊಳಗೆ ತೂರಿ ಮಲಗಿಕೊಂಡಿದ್ದೇನೆ. ಮುಖದ ಜಾಗದಷ್ಟನ್ನೇ ಜಿಪ್ ತೆರೆದು ಉಸಿರಾಡಲಿಕ್ಕೆ ಅನುಕೂಲ ಮಾಡಿಕೊಂಡಿದ್ದೇನೆ. ಗುಡ್‌ನೈಟುಗಳ ವಿನಿಮಯವೂ ಮುಗಿದು ಈಗ ಬರೀ ಬೆಂಕಿಯ ಚಟಪಟ ಸದ್ದು. ಇನ್ನು ನಿದ್ರೆ ಬರುವವರೆಗೂ ಚುಕ್ಕೆಗಳನ್ನು ಎಣಿಸಬಹುದು. ರಂಗೋಲಿಯ ಎಳೆಯಂತೆ ಕಂಡು ಮಾಯವಾಗುವ ಉಲ್ಕಾಪಾತವನ್ನು ಬೆರಗಿಲೆ ನೋಡಬಹುದು.

ಈಗ ಈ ಚುಕ್ಕೆರಾಶಿಯ ಮುನ್ನೆಲೆಯಲ್ಲಿ ನಾವು ಸಂಜೆ ನೋಡಿದ್ದ ಜ್ವಾಲಾಮುಖಿಯ ಚಿತ್ರ ಮೂಡುತ್ತಿದೆ. ಆಕಾಶಕ್ಕೇ ಬೆಂಕಿ ಬಿದ್ದಂತೆ ಭಾಸ. ಕಪ್ಪು ಪರದೆ ಹರಿದು ಇನ್ನೇನು ನಮ್ಮ ಮೈಮೇಲೇ ಬೀಳಬಹುದು ಎಂಬಂತೆ ಭ್ರಮೆ. ಭಯವಾಗಿ ಬೆಚ್ಚಿ ಕಣ್ಮಿಟುಕಿಸಿದೆ. ಚಿತ್ರ ಮಾಯವಾಯಿತು. ಸ್ವಲ್ಪ ಹೊತ್ತು ಗಟ್ಟಿಯಾಗಿ ಕಣ್ಮುಚ್ಚಿಕೊಂಡಿದ್ದೆ. ಈಗ ಚುಕ್ಕೆಗಳೂ ಇಲ್ಲದ ಕಣ್ಣೊಳಗಿನ ಕತ್ತಲೆಯ ಕಡುಕಪ್ಪು ಪರದೆಯ ಮೇಲೆ ಸಂಜೆ ನೋಡಿದ್ದ ವಿಹಂಗಮ ಸೂರ್ಯಾಸ್ತದ ದೃಶ್ಯ ಮೂಡುತ್ತಿದೆ. ಸೂರ್ಯ ನನ್ನ ಅಕ್ಷಿಪಟಲದ ಮೇಲ್ತುದಿಯಿಂದ ಕೆಳಕೆಳಗೆ ಇಷ್ಟಿಷ್ಟೇ ಇಳಿಯುತ್ತಿದ್ದಾನೆ. ಹಾಗೇ ಇಳಿದಿಳಿದು ಪೂರ್ತಿಯಾಗಿ ಅಸ್ತಂಗತನಾಗಿ ಕಣ್ಣಗುಡ್ಡೆಯನ್ನೊಮ್ಮೆ ಹಿಂದಿನಿಂದ ಬಳಸಿ ಸ್ವಲ್ಪವೇ ಹೊತ್ತಿನಲ್ಲಿ ಮತ್ತೆ ಮುಂದೆ ಮೂಡಿ ಬರುತ್ತಿದ್ದಾನೆ. ನಾನು ಬೆಳಗೇ ಆದಂತೆನಿಸಿ ಫಕ್ಕನೆ ಎದ್ದು ಕುಳಿತೆ. ಕಣ್ಬಿಟ್ಟರೆ ಸೂರ್ಯ ಮಾಯವಾಗಿ ಎದುರಿಗೆ ಉರಿಯುತ್ತಿರುವ ಚಳಿಬೆಂಕಿ. ಅದರ ಪಕ್ಕ ಕುಳಿತು, ಈ ಜಗದ ಪರಿವೆಯೇ ಇಲ್ಲದಂತೆ ಬಾಟಲಿಯನ್ನು ಬಾಯಿಗಿಟ್ಟು ಸಂಪೂರ್ಣ ಮೇಲಕ್ಕೆತ್ತಿ ಅಕ್ಷರಶಃ ನಕ್ಷತ್ರಗಳನ್ನೆಣೆಸುತ್ತಿದ್ದಾರೆ ನಮ್ಮ ಗೈಡುಗಳು. ನಾನು ದಿಗ್ಗನೆ ಎದ್ದು ಕೂತದ್ದು ನೋಡಿ ಇನ್ನೂ ನಿದ್ದೆ ಬಂದಿರದ ನಿಧಿ “ಏನಾಯ್ತೋ ದೋಸ್ತಾ?” ಎಂದು ಕೇಳುತ್ತಿದ್ದಾನೆ. ಏನಿಲ್ಲ ಅಂತಂದು ನಾನು ಮತ್ತೆ ಮಲಗಿಕೊಳ್ಳುತ್ತಿದ್ದೇನೆ. ಈಗ ಹಟ ತೊಟ್ಟು, ಚುಕ್ಕಿಪರದೆ ಮೇಲೆ ಮೊದಲು ಬೆಟ್ಟ ಮೂಡಿ ಆ ನಂತರ ಅದರ ಮೇಲೆ ಲಾವಾ ಇಳಿಯುತ್ತಿರುವಂತೆ ಕಲ್ಪಿಸಿಕೊಳ್ಳಬೇಕು. ನನ್ನ ಕಲ್ಪನೆಯಂತೆಯೇ ಚಿತ್ರ ಆವಿರ್ಭವಿಸುತ್ತಿದೆ..

ನಾವು ಶೃಂಗದಲ್ಲಿದ್ದಾಗ ನೋಡಿದ್ದು ಪಕ್ಕದ ಚಿಕ್ಕ ಬೆಟ್ಟದ ಮೇಲೆ ಉರಿಯುತ್ತಿದ್ದ ಕಾಡಿನ ಬೆಂಕಿಯ ಚಿತ್ರ. ಮಧ್ಯದಿಂದೆಲ್ಲೋ ಹೊತ್ತಿಕೊಂಡು, ಒಣಗಿದ ಹುಲ್ಲನ್ನು ತನ್ನ ಸುತ್ತಲಿಂದಲೂ ಆವರಿಸುತ್ತಾ ಕೆಳಗಿಳಿಯುತ್ತಿದ್ದ ಅದು, ದೂರದಿಂದ ನಮಗೆ ಲಾವಾದ ಹಾಗೆಯೇ ಕಾಣುತ್ತಿತ್ತು. ಬಹುಶಃ ಯಾರೋ ಹಳ್ಳಿಗರು ಸೇದಿ ಎಸೆದ ಬೀಡಿಯಿಂದ ಹೊತ್ತಿದ್ದೋ ಅಥವಾ ಯಾರೋ ಬೇಕೆಂದೇ ಹಚ್ಚಿ ಹೋದದ್ದೋ ಇರಬೇಕು. ಹುಲ್ಲು ಒಣಗಿರುವ ಈ ಶಿಶಿರದ ಕಾಲದಲ್ಲಿ ಜನ ಹೀಗೆ ಬೇಕೆಂದೇ ಬೆಂಕಿ ಹಾಕುವುದುಂಟು. ಆಗ ಒಣಹುಲ್ಲೆಲ್ಲ ಉರಿದುಹೋಗಿ, ಬರುವ ಮಳೆಗಾಲದಲ್ಲಿ ಹೊಸ ಹುಲ್ಲು ಪುಷ್ಕಳವಾಗಿ ಮೊಳೆತು ಚಿಗುರಿ ಬೆಳೆಯುವುದಕ್ಕೆ ಅನುಕೂಲವಾಗುತ್ತದೆ. ಮುಂದಿನ ವರ್ಷ ದನಕರುಗಳಿಗೆ ಒಳ್ಳೆಯ ಮೇವು ದೊರೆಯುತ್ತದೆ.

ನಮ್ಮ ಮನೆಯ ಹುಲ್ಲಿನ ಹಿತ್ತಿಲಿಗೆ ಪ್ರತಿವರ್ಷ ಅಪ್ಪ ಮಳೆಗಾಲ ಹಿಡಿಯುವುದಕ್ಕೂ ಮುನ್ನ ಒಮ್ಮೆ ಹೀಗೇ ಬೆಂಕಿ ಹಾಕಿ ಸುಡುತ್ತಿದ್ದುದು ನೆನಪಾಗುತ್ತಿದೆ... ಬೆಂಕಿ ಹಾಕಿದಾಗ, ಅದು ಅಲ್ಲಲ್ಲಿದ್ದ ಗೇರುಗಿಡಗಳ ಬಳಿ ಹೋಗದಂತೆ, ಹಿತ್ತಿಲ ಬೇಲಿಗೆ ಹೊತ್ತಿಕೊಳ್ಳದಂತೆ ಮತ್ತು ಪಕ್ಕದ ಮನೆಯ ಹಿತ್ತಿಲಿಗೆ ಹಾಯದಂತೆ, ಹಸಿರು ಸೊಪ್ಪಿನ ಚಂಡೆ ಹಿಡಿದು ಸಂರಕ್ಷಿಸುವ ಕೆಲಸ ನನ್ನದಾಗಿತ್ತು. ಸಿಕ್ಕಿರುವ ಈ ಜವಾಬ್ದಾರಿಯಿಂದಾಗಿ ನನಗೆ ಖುಶಿಯೋ ಖುಶಿ. ಬೆಂಕಿ ಮೈಗೆ ತಾಗೀತು, ಹುಷಾರು ಅಂತ ಅಮ್ಮ ಮನೆಯಿಂದ ನೂರು ಸಲ ಹೇಳಿ ಕಳುಹಿಸಿರುತ್ತಿದ್ದಳು. ಅಪ್ಪನೂ ಕೂಗಿ ಕೂಗಿ ಎಚ್ಚರಿಸುತ್ತಿದ್ದ. ನಾನು ಮಾತ್ರ ಆವೇಶ ಬಂದವನಂತೆ ಹಸಿರು ಚಂಡೆಯನ್ನು ಹಿಡಿದು ಬೆಂಕಿಯ ಹಿಂದೆಯೇ ಓಡುತ್ತಾ ಬಡಿದು ಬಡಿದು ನಂದಿಸುತ್ತಿದ್ದೆ.

ಕೆಲವೊಮ್ಮೆ, ಇಂತಹ ಬಿರುಬೇಸಗೆ ಕಾಲದ ರಾತ್ರಿಯಲ್ಲಿ, ಇದ್ದಕ್ಕಿದ್ದಂತೆ ನಮ್ಮ ತೋಟದ ಮೇಲಣ ಕಾಡಿಗೆ ಬೆಂಕಿ ಹೊತ್ತಿಕೊಂಡುಬಿಡುತ್ತಿತ್ತು. ಆ ಕಾಡಿನ ಬೆಂಕಿಯನ್ನು ನಾವು ‘ಗುಡ್ಡೆ ಗರಕು’ ಅಂತ ಕರೆಯುತ್ತಿದ್ದೆವು. ಆಗ ಮೈಲುಗಳವರೆಗೂ ತೇಲಿಬರುತ್ತಿದ್ದ ಆ ಒಣಗಿದ ಹುಲ್ಲು-ಸೊಪ್ಪುಗಳು ಸುಟ್ಟ ವಾಸನೆಗೆ ಊರವರೆಲ್ಲ ಎಚ್ಚೆತ್ತುಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ “ಹೋಯ್, ಸೊಪ್ಪಿನ್ ಬೆಟ್ಟಕ್ಕೆ ಬೆಂಕಿ ಬಿದ್ದಿದು. ನೋಡಿ ಅಲ್ಲಿ, ಆಚೆ ದಿಂಬದಲ್ಲಿ ಹೆಂಗೆ ಕೆಂಪಗೆ ಕಾಣ್ತಾ ಇದ್ದು.. ಎಲ್ಲಾ ನೀರು ತಗಂಡು ಹೊರಡಿ” ಎಂದು ಊರವರೆಲ್ಲ ಕೂಗುತ್ತ-ಕಿರುಚಾಡುತ್ತಾ, ಗುಡ್ಡದ ಕಡೆ ಓಡುತ್ತಿದ್ದರು. ನಾವೂ ಕೊಡಪಾನದ ತುಂಬ ನೀರು ಹಿಡಿದು, ಕೈಗೊಂದು ಕತ್ತಿ ತೆಗೆದುಕೊಂಡು ಓಡುತ್ತಿದ್ದೆವು. ಬೆಂಕಿ ಬೆಟ್ಟದಿಂದ ಕೆಳಗಿಳಿದು ನಮ್ಮ ಅಡಕೆ ತೋಟಗಳ ಬಳಿ ಬರುವುದರೊಳಗೆ ಆರಿಸಬೇಕಿರುತ್ತಿತ್ತು. ಜೋರಾಗಿ ಗಾಳಿಯೇನಾದರೂ ಬೀಸುತ್ತಿದ್ದರೆ ಬೆಂಕಿ ಅತಿ ವೇಗವಾಗಿ ಹಬ್ಬುತ್ತಿತ್ತು. ಕತ್ತಲೆಯಲ್ಲಿನ ಬೆಂಕಿಯ ಜತೆಗಿನ ಹೋರಾಟದ ಆ ನೋಟ ಭೀಷಣವಾಗಿರುತ್ತಿತ್ತು.

ನನಗೆ ನಿದ್ರೆ ಬರುತ್ತಿರುವುದರಿಂದಲೋ ಏನೋ, ಆಕಾಶಪರದೆಯ ಮೇಲೆ ಮೂಡಿದ್ದ ಬೆಟ್ಟದ ಬೆಂಕಿ, ಬೀಳುತ್ತಿರುವ ಭಾರೀ ಇಬ್ಬನಿಗೆ ಆರಿ ತಣ್ಣಗಾಗುತ್ತಿದೆ. ಈಗ ಬರೀ ನಕ್ಷತ್ರಗಳಿಗೆ ಹೊತ್ತಿಕೊಂಡಿರುವ ಬೆಂಕಿ ಉಳಿದಿದ್ದು, ಅವೆಲ್ಲ ಕೆಂಪಕೆಂಪಗೆ ಹೊಳೆಯುತ್ತಿವೆ. ಯಾವಾಗ ಆರುತ್ತವೋ ಅವು, ನೋಡಿ ನೋಡಿ ನನ್ನ ಕಣ್ಣು ಉರಿಯುತ್ತಿದೆ. ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಬೀಳಲಿರುವ- ನನ್ನ ಕಣ್ಣಿಗೇ ಬೆಂಕಿ ಹೊತ್ತಿ ಧಗಧಗಿಸುತ್ತಿರುವ ಕನಸಿಗಾಗಿ -ನಾನೀಗ ನಿದ್ರೆ ಮಾಡಲೇಬೇಕಿದೆ.

ಎಷ್ಟೋ ಸಮಯ ಕಳೆದಿರಬಹುದು. ಎಷ್ಟೆಂದರೆ, ಚಾರಣದ ಸುಸ್ತೆಲ್ಲ ಕಳೆದು ಹೋಗುವಷ್ಟು ಸಮಯ. ಮೈಮರೆತು ನಿದ್ರೆ ಮಾಡಿಬಿಟ್ಟಿದ್ದೇನೆ. “ದೋಸ್ತಾ, ದೋಸ್ತಾ” ಪಕ್ಕದ ಗೆಳೆಯ ತಟ್ಟಿ ಎಬ್ಬಿಸುತ್ತಿದ್ದಾನೆ. ಕಣ್ಬಿಡುತ್ತಿದ್ದೇನೆ. ಎದುರಿನ ಆಕಾಶದ ಬಣ್ಣವೇ ಬದಲಾಗಿದೆ ಈಗ. ಯಾರೋ ಕಲೆಗಾರ ಮೂಡಣ ದಿಕ್ಕಿಗೆ ನೇತುಬಿಟ್ಟಿರುವ ಕೆಂಪು-ಹಳದಿ ಬಣ್ಣಗಳ ಜವನಿಕೆಯಲ್ಲಿ ಮೂಡಿ ಬರುತ್ತಿದ್ದಾನೆ ಅಂವ: ಖದೀಮ ಸೂರ್ಯ. ಶುದ್ಧ ಗುಂಡಗಿದ್ದಾನೆ. ಪರದೇಶದ ಚೆಂದುಳ್ಳಿ ಚೆಲುವೆಯರ ಸಂಗಡ ಚೆಲ್ಲಾಟವಾಡಿ ಬಂದವ ಬೆಳ್ಳಗೆ ಪ್ರಕಾಶಮಾನವಾಗಿ ಪ್ರಜ್ವಲಿಸುತ್ತಿದ್ದಾನೆ. ಪಕ್ಕದ ಬೆಟ್ಟವನ್ನು ನೋಡಿದರೆ ಅಲ್ಲಿ ಬೆಂಕಿಯಿಲ್ಲ. ಎದುರಿಗೆ ನಾವು ಮಾಡಿದ್ದ ಕ್ಯಾಂಪ್‌ಫೈರ್ ಇಲ್ಲ. ಮೇಲೆ ಕೆಂಪಗೆ ಉರಿಯುತ್ತಿದ್ದ ತಾರೆಗಳಿಲ್ಲ. ನನ್ನ ಕಣ್ಣಲ್ಲೀಗ ಉರಿಯಿಲ್ಲ. ನಾನು ನಿದ್ರಿಸಿದ್ದಾಗ ಎಲ್ಲವನ್ನೂ ನುಂಗಿಬಿಟ್ಟನೇ ಈ ಜಾದೂಗಾರ? ಇಂತಹ ಸೂರ್ಯೋದಯವನ್ನು ಕಣ್ಣಾರೆ ಕಾಣದೆ ಯಾವ ಕುವೆಂಪು ತಾನೇ ಬರೆದಾರು ಹಾಗೆ ನಾಯಿಗುತ್ತಿ ಮತ್ತು ತಿಮ್ಮಿ ಕಂಡ ದೃಶ್ಯದ ವರ್ಣನೆಯನ್ನು ‘ಮಲೆಗಳಲ್ಲಿ ಮದುಮಗಳು’ ಎಂಬ ಕಾದಂಬರಿಯಲ್ಲಿ? ಅಥವಾ ಕಾಣದೆಯೂ ಬರೆಯಬಲ್ಲವರಾಗಿದ್ದರು ಎಂತಲೇ ಅವರು ರಸ‌ಋಷಿಯೇ?

“ಬಿಸಿಲು ಏರುವುದರೊಳಗೆ ಕೆಳಗಿಳಿದುಕೊಳ್ಳಬೇಕು. ಅದಿಲ್ಲದಿದ್ದರೆ ಆಗುವುದೇ ಇಲ್ಲ ಆಮೇಲೆ” ಪ್ರವೀಣ ಹೆದರಿಸಿದ. ಬೆಳಗಿನ ತಿಂಡಿಗೆಂದೇ ತಂದಿದ್ದ ಕುಟ್ಟವಲಕ್ಕಿಯನ್ನು ತಿಂದು ನಾವು ನೀರು ಕುಡಿದೆವು. ಇನ್ನೂ ಸಾರಾಯಿಯ ಅಮೃತಲೋಕದಲ್ಲಿ ತೇಲುತ್ತ ನಿದ್ದೆ ಹೊಡೆಯುತ್ತಿದ್ದ ಗೈಡುಗಳು ಮೈ ಮುರಿಯುತ್ತಾ ಎದ್ದರು. ಸ್ಲೀಪಿಂಗ್ ಬ್ಯಾಗುಗಳನ್ನು ಮಡಿಸಿ, ದೊಡ್ಡ ಬ್ಯಾಗುಗಳನ್ನು ಹೆಗಲಿಗೇರಿಸಿ ನಾವು ಅವರೋಹಣಕ್ಕಣಿಯಾದೆವು.

ಕ್ಯಾಂಪ್‌ಫೈರು ಸೃಷ್ಟಿಸಿದ್ದ ಬೂದಿಯ ಗುಡ್ಡೆಯನ್ನೊಮ್ಮೆ ಕಣ್ತುಂಬ ನೋಡಿ, ಸುಟ್ಟು ಕಪ್ಪಗಾಗಿದ್ದ ಪಕ್ಕದ ಬೆಟ್ಟದ ಮೇಲ್ಮೈಯನ್ನೊಮ್ಮೆ ಕಡೆಗಣ್ಣಿನಿಂದ ನಿರುಕಿಸಿ, ತಾರೆಗಳಿಲ್ಲದ ಆಕಾಶದ ದಿಗಂತದೆಡೆಗೆ ನಡೆಯುವವನಂತೆ, ಬೆಟ್ಟದ ಇಳಿಜಾರಿನಲ್ಲಿ ಹೆಜ್ಜೆ ಎತ್ತಿಡುತ್ತಿದ್ದೇನೆ. ಬೆಂಕಿಯುಂಡೆಯಂತಾಗುತ್ತಿರುವ ಪಾಪಿ ಸೂರ್ಯ ಹಿಂದಿನಿಂದ ಗಹಗಹಿಸಿ ನಗುತ್ತಿದ್ದಾನೆ. ಇನ್ನೇನು, ಮೂರ್ನಾಲ್ಕು ತಾಸುಗಳಲ್ಲಿ ನಾವು ಕೆಳಗಿರುತ್ತೇವೆ. ಮತ್ತೆ ನಮ್ಮ ಊರು, ಕೇರಿ, ಹೆಸರು, ಮರೆತುಹೋಗಿದ್ದ ಅದೆಷ್ಟೋ ಕೊಸರುಗಳು. ಆದರೂ ಇಷ್ಟು ಹೊತ್ತಾದರೂ ಇವನ್ನೆಲ್ಲ ಮರೆತಿದ್ದೆನಲ್ಲ ಮಾರಾಯ, ಚಾರಣದ ಹಾದಿಗೊಂದು ನಮಸ್ಕಾರ!

ಮತ್ತೆ ಹೇಗಿದ್ದೀ? ಯಾವಾಗ ಸಿಗುತ್ತೀ? ಪತ್ರ ಬರೆ. ಸಧ್ಯಕ್ಕೆ, ಟಾಟಾ...

(೨೬ನೇ ಜನವರಿ ೨೦೦೯)

ಗಯ್ಸ್, ಲಾಸ್ಟ್ ಟ್ರೆಕ್ ಹೋಗ್ಬಂದು ಆರ್ ತಿಂಗ್ಳ ಮೇಲಾತು. ಎಂತ ಮಾಡ್ತಾ ಇದ್ದಿ? ವೈನಾಟ್ ಅ ಮಾನ್ಸೂನ್ ಟ್ರೆಕ್? ;)

Monday, July 21, 2008

ಚರಣಗಳ ಮಧ್ಯದ ಮೌನಚಣ..

ಗಿಜಿಗುಡುವ ದಿನಗಳು. ಮಳೆಗಾಲವಾದರೂ ಬಾರದ ಮಳೆ - ಧಗೆಯ ದಿನಗಳು. ದಿನಬೆಳಗಾದರೆ ಆಫೀಸು, ಶೆಡ್ಯೂಲು, ಟೆನ್ಷನ್ನು, ಟ್ರಾಫಿಕ್ಕು, ಒಂದಲ್ಲಾ ಒಂದು ಕಿರಿಕ್ಕು. ಕೋರಮಂಗಲದಲ್ಲೆಲ್ಲೋ ಹುಡುಗ, ರಾಜಾಜಿನಗರದಲ್ಲೆಲ್ಲೋ ಹುಡುಗಿ; ಎಸ್ಸೆಮ್ಮೆಸ್ಸಿನ ತುಂಬ ಬರೀ ಮಿಸ್ಯೂ; ಅದೂ ಬಾರದ ದಿನ ಬದುಕೆಂಬುದು ಕರೆಂಟಿಲ್ಲದ ಬೆಂಗಳೂರು. ಸಾಯಿಬಾಬಾ ಕಣ್ಣು ಬಿಟ್ಟರೂ ಮುಗಿಯದ ಹಣದುಬ್ಬರ; ಬಿಜೆಪಿ ಬಂದರೂ ಅಷ್ಟೇ, ಯಡಿಯೂರಪ್ಪ ಗೆದ್ದರೂ ಅಷ್ಟೇ, ಅದೇ ಹೊಲಸು ರಾಜಕೀಯ; ಬದಲಾಗದ ಜೀವನ ಕ್ರಮ; ದಿನವೂ ಕರ್ಮಕಾಂಡ. ಇದನ್ನೆಲ್ಲಾ ಬಿಟ್ಟು ಎಲ್ಲಿಗಾದರೂ ಓಡಿ ಹೋಗಿಬಿಡಬೇಕೆಂಬ ತಪನೆ; ಸಾಧ್ಯವಾಗದ ಅಸಹಾಯಕತೆ; ಬದುಕು ಮಾಯೆಯ ಆಟ.

ಸರಿ. ಹಾಗಾದರೆ ಏನು ಮಾಡಬೇಕು? ಈ ಏಕತಾನತೆಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಬದುಕಿಗೂ ಬೆಂಗಳೂರಿಗೂ ನಡುವೆ ಫರಕು ಕಲ್ಪಿಸುವ ಬಗೆಯೆಂತು?

ಊರಲ್ಲಾದರೂ ಮಳೆ ಬರುತ್ತಿದ್ದಿದ್ದರೆ ಗಂಟು ಮೂಟೆ ಕಟ್ಟಿಕೊಂಡು, ಕನಿಷ್ಟ ಒಂದು ವಾರ ರಜ ಹಾಕಿ ಹೋಗಿಬಿಡಬಹುದಿತ್ತು. ದಟ್ಟ ಮೋಡಕಟ್ಟಿದ ಮುಗಿಲು ನೋಡುತ್ತ ಬೆಳಗಾ ಮುಂಚೆ ಬಸ್‍ಸ್ಟಾಂಡಿನಲ್ಲಿ ಇಳಿಯಬಹುದಿತ್ತು. ಕಂಬಳಿ ಕೊಪ್ಪೆ ಹೊದ್ದು - ಉಗ್ಗ ಹಿಡಿದು ಗದ್ದೆಗೆ ಹೊರಟ ಆಳುಗಳು 'ಓಹ್ ಹೆಗ್ಡೇರು ಬೆಂಗ್ಳೂರಿಂದ ಬಂದ್ರಾ?' ಎಂದು ಕೇಳುವಾಗ 'ಹೌದು, ನೀ ಅರಾಮಿದೀಯಾ?' ಎನ್ನುತ್ತಾ ಮಣ್ಣು ರಸ್ತೆಯಲ್ಲಿ ಜಾರುತ್ತಾ ಮನೆ ಕಡೆ ಹೆಜ್ಜೆ ಹಾಕಬಹುದಿತ್ತು. ಕಟ್ಟೆ ಮೇಲೆ ತನ್ನ ದಿನದ ಮೊದಲ ಕವಳದ ತಯಾರಿಕೆಯಲ್ಲಿ ತೊಡಗಿದ್ದ ಕನ್ನಡಕ ಹಾಕಿಕೊಳ್ಳದ ಮಂಜುಗಣ್ಣಿನ ಅಜ್ಜನ ಎದುರು ನಿಂತು 'ಯಾರು ಬಂದಿದ್ದು ಹೇಳು ನೋಡನ?' ಎಂದು ಕೇಳಬಹುದಿತ್ತು. ದನಿಯಿಂದಲೇ ಮೊಮ್ಮಗನನ್ನು ಗುರುತಿಸಿದ ಅವನು 'ಓಹೊಹೋ, ಮಾಣಿ! ಇದೇನೋ ಇದ್ದಕ್ಕಿದ್ದಂಗೆ?' ಎಂದು ಆನಂದಾಶ್ಚರ್ಯದಿಂದ ಕೇಳುವಾಗ 'ನಿನ್ನ ನೋಡವು ಅನ್‍ಸ್ಚು; ಹಂಗೇ ಬಂದಿ' ಎಂದು ಅವನ ಖುಷಿಯನ್ನು ಇನ್ನಷ್ಟು ಹೆಚ್ಚಿಸಬಹುದಿತ್ತು. ಅಮ್ಮ ದೋಸೆಯನ್ನು ಎರೆದೆರೆದು ಹಾಕುವಾಗ ಬಾಳೆಲೆಯಲ್ಲಿ ಜೋನಿ ಬೆಲ್ಲ, ಹೆರೆಗಟ್ಟಿದ ತುಪ್ಪ, ಚೂರೇ ಉಪ್ಪಿನಕಾಯಿ, ಗಟ್ಟಿ ಮೊಸರು ಹಾಕಿಕೊಂಡು ಹೊಟ್ಟೆ ತುಂಬ ತಿನ್ನಬಹುದಿತ್ತು; ಕುಕ್ಕರಗಾಲಲ್ಲಿ ಕೂತ ಅಪ್ಪನಿಗೆ ಬೆಂಗಳೂರಿನ ಕತೆ ಹೇಳಬಹುದಿತ್ತು. ಕೊಟ್ಟಿಗೆಗೆ ಹೋಗಿ ಶಂಕ್ರಿ ಹಾಕಿದ ಹೊಸ ಕರುವಿಗೆ ಹಿಂಡಿಯ ಚೂರು ಕೊಟ್ಟು 'ಫ್ರೆಂಡ್' ಮಾಡಿಕೊಳ್ಳಬಹುದಿತ್ತು; ಬೆದರಿದಂತಾಡುವ ಅದರ ಕಣ್ಣು ನೋಡುತ್ತಾ ಯಾರನ್ನೋ ನೆನಪು ಮಾಡಿಕೊಳ್ಳಬಹುದಿತ್ತು.

ಅಮ್ಮ ಅಂಗಳದಲ್ಲಿ ಹಾಕಿದ ಸೌತೆಬೀಜ ಮಳೆನೀರು ಕುಡಿದು ದಪ್ಪಗಾಗಿ, ಮೊಳಕೆಯೊಡೆದು, ತಾನು ಹುದುಗಿದ್ದ ನೆಲವನ್ನು ತಳ್ಳಿಕೊಂಡು ಹೊರಬಂದು, ರವಿಕಿರಣ ಉಂಡು ಮೊಳಕೆ ಬಲಿತು ಸಣ್ಣ ಎಲೆಗಳು ಮೂಡಿ, ಹರಿತ್ತು ಹರಿದು ಬಳ್ಳಿ ಬೆಳೆದು ಇಡೀ ಅಂಗಳವನ್ನಾವರಿಸಿ... ದೊಡ್ಡ ದೊಡ್ಡ ಎಲೆಗಳ ಬಳ್ಳಿಯಲ್ಲಿ ಪುಟ್ಟ ಪುಟ್ಟ ಬಿಳಿ ಹೂಗಳು ಅರಳಿ, ಬಣ್ಣ ಬಣ್ಣದ ಚಿಟ್ಟೆಗಳು ಆ ಹೂವನರಸಿ ಬಂದು, ಮಕರಂದ ಹೀರಿ, ಊಹೂಂ ದಾಹ ತೀರದೇ ಮತ್ತೊಂದು ಹೂವಿಗೆ ಹೋಗಿ ಕುಳಿತದ್ದೇ ಪರಾಗಸ್ಪರ್ಶವೇರ್ಪಟ್ಟು, ಹೂವ ತಾಯಿಯಾಗುವ-ಕಾಯಿಯಾಗುವ ಕನಸು ನನಸಾಗಿ... ಹೂವ ಅಂಡಿನಲ್ಲೇ ಕಿರಿದಾದೊಂದು ಮಿಡಿ ಮೂಡಿ, ಆ ಮಿಡಿಯೇ ದೊಡ್ಡ ಸೌತೆಕಾಯಿಯಾಗಿ, ತಿಂಗಳೊಳಗೆ ಅದು ಹಣ್ಣಾಗಿ, ಆ ಹಣ್ಣೊಡಲ ತುಂಬ ನೂರಾರು ಬೀಜಗಳು; ಆ ಬೀಜಗಳ ತುಂಬ ಮತ್ತೆ ಧರೆಯೊಡಲು ಸೇರಿ ಮೊಳಕೆಯಾಗಿ ಬಳ್ಳಿಯಾಗಿ ಹೂವಾಗಿ ಕಾಯಾಗುವ ಕನಸುಗಳು... ಈ ಪ್ರಕೃತಿ ಎಷ್ಟೊಂದು ಸುಂದರ ಮತ್ತು ಸಹಜ..! ಅದರಲ್ಲೇ ಮುಳುಗಿಹೋಗುವ ಆನಂದಕಿಂತ ಮಿಗಿಲು ಮತ್ತೇನಿದೆ? -ಎಂದುಕೊಳ್ಳುತ್ತ ನಾನು ಅಂಗಳ - ಹಿತ್ತಿಲು - ತೋಟ ಎಂದೆಲ್ಲ ಓಡಾಡುತ್ತಾ...

ಆದರೆ ಈ ಬಾರಿ ಮಳೆಯೇ ಇಲ್ಲ. ಬರೀ ಅಪ್ಪನ ನಿಟ್ಟುಸಿರನ್ನೇ ಕೇಳಿಸುವ ಮೊಬೈಲಿನ ಸ್ಪೀಕರು. ಮೋಡಗಳ ಸುಳಿವೇ ಇಲ್ಲವಂತೆ. ಹೋರಾಡಿ ಪಡೆದ ಗೊಬ್ಬರ ಚೀಲದಲ್ಲೇ ಉಳಿದಿದೆಯಂತೆ. ಊರಲ್ಲೂ ಬವಣೆ, ದಾಹ, ನೀರು ತಳಕಂಡಿರುವ ಬಾವಿ, ಬರದ ಭಯ. ಅಂದರೆ, ಈಗ ಅಲ್ಲಿಗೆ ಹೋದರೆ ಪ್ರಯೋಜನವಿಲ್ಲ. ಹಾಗಾದರೆ ಏನು ಮಾಡಬೇಕು?

ಏನಿಲ್ಲ, ಒಂದಷ್ಟು ಗೆಳೆಯರನ್ನು ಕರೆದುಕೊಂಡು, ಬುತ್ತಿ ಕಟ್ಟಿಕೊಂಡು, ಚಾರಣ ಹೊರಟುಬಿಡಬೇಕು. ಮಡಿಕೇರಿಯ ಬಸ್‍ಸ್ಟಾಂಡ್ ಹೋಟೆಲು ತೆರೆಯುವುದನ್ನೇ ಕಾದು ಬಿಸಿಬಿಸಿ ಕಾಫಿ ಕುಡಿಯಬೇಕು. ಒತ್ತುಶಾವಿಗೆಗೆ ಸಿಹಿಹಾಲು ಹಾಕಿಕೊಂಡು ತಿನ್ನಬೇಕು. ಅಲ್ಲಿಂದ ಒಂದು ಜೀಪು ಮಾಡಿಸಿಕೊಂಡು 'ಕೋಟೆ ಬೆಟ್ಟ'ದ ಬುಡದವರೆಗೆ ಹೋಗಬೇಕು. ಅಲ್ಲಿಂದ ಆರೋಹಣ.

ಮೊದಲರ್ಧ ತಂಪು ಬಂಡಿಹಾದಿ; ಇಕ್ಕೆಲಗಳಲ್ಲಿ ಎಸ್ಟೇಟು. ದಾರಿಯುದ್ದಕ್ಕೂ ಅಲ್ಲಲ್ಲಿ ಅಡ್ಡ ಸಿಗುವ ಹರಿವ ತೊರೆಗಳು. ತಣ್ಣಗೆ ಕೊರೆವ ಶುದ್ಧಜಲ. ಬಾಟಲಿಗೆ ತುಂಬಿಸಿಕೊಳ್ಳಬೇಕು. ಕಾಲಿಗೆ ಹತ್ತಿಕೊಂಡ ಇಂಬಳವನ್ನು ಪ್ರೀತಿಯಿಂದ ಕಿತ್ತು ತೆಗೆಯಬೇಕು. ಸೋರುವ ರಕ್ತವನ್ನು ಕಡೆಗಣಿಸಿ, ಏದುಸಿರು ಬಿಡುತ್ತಾ ಬೆಟ್ಟ ಹತ್ತಬೇಕು. ಹಾದಿಯಲ್ಲಿ ಆನೆ ಹೆಜ್ಜೆ ಕಂಡು ಬೆಚ್ಚಬೇಕು. ಹಸಿರೆಲೆಗಳ ನಡುವೆ ಮಿಡತೆ ಮರಿಗಳೆರಡು ಆಟವಾಡುವುದನ್ನು ಕೆಮೆರಾದ ಮ್ಯಾಕ್ರೋ ಮೋಡಿನಲ್ಲಿ ಸೆರೆಹಿಡಿಯಬೇಕು. ಕಾಡುಹರಟೆ ಹೊಡೆಯುತ್ತ ಮೇಲೇರುತ್ತ ಏರುತ್ತ ಹೋದಂತೆಲ್ಲ ಬದುಕು-ಬ್ಯುಸಿ-ಬೆಂಗಳೂರು ಎಲ್ಲಾ ಮರೆತು ದೂರವಾಗುವುದನ್ನು, ಜಗತ್ತು ವಿಶಾಲವಾಗುವುದನ್ನು ಅರಿತುಕೊಳ್ಳುತ್ತ, ತಿನ್ನುವ ಚಾಕಲೇಟಿನಲ್ಲಿ ಕರಗಬೇಕು. ಮುಕ್ಕಾಲು ಬೆಟ್ಟ ಹತ್ತಿದ ನಂತರ ನಿಂತರೆ ಕಾಣುವ ಬೆಟ್ಟದ ಅಪೂರ್ವ ದೃಶ್ಯವನ್ನು ಕಣ್ತುಂಬ ಉಣ್ಣಬೇಕು. 'ಕುಹೂಊ' ಎಂದು ಕೂಗಬೇಕು. ಆ ಕೂಗು ಮಾರ್ದನಿಯಾಗಿ 'ಕುಹೂಊ' 'ಕುಹೂಊ' 'ಕುಹೂಊ' ಆಗುವುದನ್ನು ಕೇಳುತ್ತಾ ಮೈಮರೆಯಬೇಕು.

'ಇನ್ನೇನು, ಒಂದು ತಾಸು ಅಷ್ಟೇ. ಅದೋ, ಅಲ್ಲಿ ಕಾಣ್ತಿದೆಯಲ್ಲಾ, ಅದೇ ಶೃಂಗ' ಎಂದು ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ, ಪರಸ್ಪರ ಹುರಿದುಂಬಿಸುತ್ತಾ, ಹಸಿದ ಹೊಟ್ಟೆಯಲ್ಲಿ ದಡದಡನೆ ನಡೆಯಬೇಕು. ಜೋಕಿಗೆ ಹೊಟ್ಟೆ ಹುಣ್ಣಾಗುವಂತೆ ನಗಬೇಕು. ಮಧ್ಯಾಹ್ನವಾಯಿತು ಎನ್ನುವಾಗ ತುದಿಯಲ್ಲಿರಬೇಕು.

ಅಲ್ಲೊಂದು ಗುಡಿ. ಗುಡಿಯೊಳಗ್ಯಾವುದೋ ದೇವರು ಕತ್ತಲೆಯಲ್ಲಿ. ಮರದ ಬಾಗಿಲಿಗೆ ಬೀಗ. ಬಡಿದರೆ ಮೌನಕ್ಕೆ ಢಂಡಣ ಬೆರೆಸುವ ಘಂಟೆಗಳು ಅಕ್ಕ-ಪಕ್ಕ. ಗುಡಿಯೆದುರು ಸುಮ್ಮನೆ ನೋಡುತ್ತ ಕೂತಿರುವ ಮೂರ್ನಾಲ್ಕು ಕಲ್ಲ ನಂದಿಗಳು. ಗುಡಿಯ ಕಟ್ಟೆಯ ಮೇಲೆ ಕೂತು, ಕಟ್ಟಿಕೊಂಡು ಹೋಗಿದ್ದ ಬುತ್ತಿಯನ್ನು ತಿನ್ನಬೇಕು. ಚಟ್ನಿಯ ಖಾರಕ್ಕೆ ಬಾಯಿ ಸೆಳೆದುಕೊಳ್ಳಬೇಕು. ನೀರು ಕುಡಿಯಬೇಕು. ಹೊಟ್ಟೆ ತುಂಬಿದ ಹಿಗ್ಗಿನಲ್ಲಿ ಮತ್ತೆ ಎಲ್ಲರೂ ಹೊರಬಂದು ಶೃಂಗದ ತುದಿಯ ಬಂಡೆಗಳ ಮೇಲೆ ಒಬ್ಬರಿಗೊಬ್ಬರು ಒರಗಿ ಕುಳಿತುಕೊಳ್ಳಬೇಕು.

'ಯಾರಾದರೂ ಹಾಡು ಹೇಳಿ..?'
'ಹ್ಮ್, ಶ್ರೀಕಾಂತ್?'
'ಊಹುಂ, ನನಗಿಂತ ಶ್ರೀನಿವಾಸ್ ಚನಾಗ್ ಹಾಡ್ತಾನೆ'
'ಹೂಂ, ಶ್ರೀನಿವಾಸ್, ಹಾಡಿ'

ಬೀಸುತ್ತಿರುವ ತಂಗಾಳಿ. ಶ್ರೀನಿವಾಸ್ ಹಾಡತೊಡಗುತ್ತಾನೆ: 'ವ್ಯಥೆಗಳ ಕಳೆಯುವ ಕತೆಗಾರ.. ನಿನ್ನ ಕಲೆಗೆ ಯಾವುದು ಭಾರ..' ಅಶ್ವತ್ಥ್, ಬೆಟ್ಟದ ಮೇಲೆ ಅನುರಣಿಸುತ್ತಾರೆ. ಆ ಹಾಡಿನ ಚರಣಗಳ ಮಧ್ಯೆ, ಅಲ್ಲಲ್ಲಿ, ಚೂರೂ ಅಡಚಣೆಯಿಲ್ಲದ ಮೌನ... ಶ್ರೀನಿವಾಸ್ ನಂತರ ಅರುಣ್. ಆಮೇಲೆ ಶ್ರೀಕಲಾ. ಹಾಗೇ ವಿಜಯಾ. 'ಸುಶ್, ನೀನೂ ಹಾಡೋ' ಎನ್ನುವ ಶ್ರೀನಿಧಿ. ಫೋಟೋ ತೆಗೆಯುವ ಅಮರ್. ಅಷ್ಟರಲ್ಲಿ, ಬೀಸುವ ಗಾಳಿಯಲ್ಲಿ ಚಳಿಯ ಕಣಗಳು ಜಾಸ್ತಿಯಾಗಿ, ಎಲ್ಲರಿಗೂ ಮೈ ನಡುಗಿ, ಗುಡಿಯಲ್ಲಿ ಬಿಟ್ಟು ಬಂದಿದ್ದ ಜಾಕೆಟ್ಟುಗಳೆಡೆಗೆ ಓಟ.

ಮೈ-ಕೈ-ತಲೆ-ಮುಖ ಎಲ್ಲಾ ಮುಚ್ಚುವಂತೆ ಹೊದ್ದುಕೊಂಡು, ಮುದುಮುದುಡಿಕೊಂಡು ಹೊರಬಂದರೆ, ಬೆಳ್ಳಗೆ ಸುರಿಯತೊಡಗಿರುವ ಹಿಮ. ಎದುರಿಗಿರುವವರು ಯಾರು? ಊಹುಂ, ಕಾಣುತ್ತಿಲ್ಲ. ಮೋಡದ ಮೊಟ್ಟೆಯೊಳಗೆ ಅವಿತಿರುವ ನಾವು, ಆ ಹಿಮಕಣಗಳು ಪದರ ಪದರವಾಗಿ ಗಾಳಿಯಲ್ಲಿ ತೇಲಿ ತೇಲಿ ಬಂದು ಮೈಗಪ್ಪಳಿಸುವುದನ್ನು, ಗಿಡಗಳೆಲೆಗಳಿಂದ ನೀರು ತೊಟ್ಟಿಕ್ಕುವುದನ್ನು ನೋಡುತ್ತಾ, 'ಸ್ವರ್ಗ ಅಂದರೆ ಇದೇ ಇರಬೇಕು ಅಲ್ವೇನೋ ದೋಸ್ತಾ?' ಎಂದುಸುರುತ್ತಾ, ಸಮಯ ಉರುಳುತ್ತಿರುವುದೇ ತಿಳಿಯದಾಗಿ, ಹಾಗೇ ಸಂಜೆಯಾಗಿ.

ಕೆಳಗೆ ಕಾಯುತ್ತಿರುವ ಜೀಪಿನವನಿಲ್ಲದಿದ್ದರೆ ನಾವು ಅಲ್ಲೇ ಇರುತ್ತಿರಲಿಲ್ಲವೇ ಅವತ್ತು? ಯಾರಿಗೆ ಬೇಕಿತ್ತು ಈ ಜಗತ್ತು? ಮಂಜುಮುಚ್ಚಿದ ಬೆಟ್ಟದ ಮೇಲಿಂದ ಇಳಿಯುವ ದರ್ದಾದರೂ ಏನಿತ್ತು? ನಾಳೆ ಬೆಳಗಾದರೆ ಬೆಂಗಳೂರು, ಮತ್ತೆ ಟ್ರಾಫಿಕ್ಕು, ಅದೇ ಆಫೀಸು, ಹಾಳು ಮೊಬೈಲು, ಚೆಕ್ ಮಾಡಲೇಬೇಕಿರುವ ಈಮೇಲು, ಒಟ್ಟಿನಲ್ಲಿ ಬ್ಯುಸಿ, ತೈತೈ ಕುಣಿದಾಟ.

ಯಾಕೆ ಅಲ್ಲೇ ಉಳಿದುಬಿಡಲಿಲ್ಲ ನಾವು ಅವತ್ತು? ಆ ಬೆಟ್ಟ, ಆ ಹಸಿರು, ಆ ಕುಕಿಲು, ಆ ಹಾಡು, ಆ ಮಂಜು... ಯಾಕಾಗಬಾರದು ನಿರಂತರ? ಇಲ್ಲೆಲ್ಲಿ ಕ್ರೆಡಿಟ್ ಕಾರ್ಡುಜ್ಜಿದರೆ ಸಿಕ್ಕೀತು ಆ ಹಾಡಿನ ಮಧ್ಯದ ಮೌನ? ಇಲ್ಯಾವ ಪಾರ್ಕಿನ ಹೂವಿನ ಗಿಡದಲ್ಲಿ ಕಾಣಸಿಕ್ಕೀತು ಆ ಮಿಡತೆಯಾಟ? ಇಲ್ಲೆಷ್ಟೆತ್ತರದ ಬಿಲ್ಡಿಂಗು ಹತ್ತಿದರೆ ಕಂಡೀತು ಆ ಬೆಟ್ಟದ ಮೇಲಣ ರಮಣೀಯ ದೃಶ್ಯ?

ಗೊತ್ತು ನಮಗೂ, ಸಿಗುವುದಿಲ್ಲವೆಂದು. ಈ ಬೆಂಗಳೂರ ಬದುಕಿನ ಹಾಡೇ ಹೀಗೇ. ಈ ಹಾಡ ನಡುನಡುವೆ ಬೇಕು ಸಣ್ಣ ಸಣ್ಣ ಮೌನದ ಕ್ಷಣಗಳು. ಅದಕ್ಕೇ, ನಾವು ಹೊರಡುತ್ತೇವೆ ಚಾರಣ. ಈ ಸಲ ಕೋಟೆಬೆಟ್ಟ. ಮಳೆ ಬರಲಿ ಸಾಕು, ಸೀದಾ ಊರು. ಸೌತೆ ಬಳ್ಳಿಯ ನಡುವೆ ಎಳೇಕಾಯಿಗಾಗಿ ಹುಡುಕಾಟ. ಉಪ್ಪು-ಕಾರ.

Monday, February 04, 2008

ಕಮಲ ಹೇಳಿದ ಕತೆ

ನಮಸ್ಕಾರ. ನನ್ನ ಹೆಸರು ಕಮಲ. 'ಇವರು' ನನ್ನನ್ನು 'ಕಮಲು' ಅಂತ ಕರೀತಾರೆ. ಆಗ ನನಗೆ ಒಂಥರಾ ನಾಚಿಕೆಯಾಗುತ್ತೆ. ಯಾಕೆಂದರೆ, ಎಲ್ಲರೆದುರಿಗೆ ಇವರು 'ಕಮಲಾ..' ಅಂತಲೇ ಕೂಗುವುದು; ಆದರೆ ಯಾರೂ ಇಲ್ಲವೆಂದಾಗ, ನಾವಿಬ್ಬರೇ ಇರುವ ಏಕಾಂತ ಸಮಯಗಳಲ್ಲಿ ಮಾತ್ರ, ಒಲುಮೆ ದೇವತೆ ನದಿಯಾಗಿ ಮೈಯಲ್ಲಿ ಸಂಚರಿಸುವಂತೆ 'ಕಮಲೂ..' ಎಂದು ಕೂಗುತ್ತಾರೆ. ಈ ಅಡುಗೆ ಮನೆಯ ಅಗ್ಗಿಷ್ಟಿಕೆಗೂ ಗೊತ್ತು: ಆ ಕರೆಗೂ ಪ್ರೀತಿಗೂ ವ್ಯತ್ಯಾಸವಿಲ್ಲವೆಂದು. ಅದಕ್ಕೇ, ಒಲೆಯ ಮೇಲಿಂದ ಅನ್ನದ ಚರಿಗೆಯನ್ನು ಇಳಿಸುವಾಗಲೂ, ಆ ಹಬೆಯ ದಗೆಯಲ್ಲೂ ರೋಮಾಂಚಿತಳಾಗುತ್ತೇನೆ ನಾನು. ಸಾರಿನಲ್ಲಿ ತೇಲುತ್ತಿರುವ ಈ ಸಣ್ಣ ಮೀನುಗಳು ಹೊಟ್ಟೆ ಸೇರಿಬಿಟ್ಟರೆ ಆಯಿತು: ಚಿಮಣಿ ದೀಪ ಆರಿಸಿ ನಾವು ಮಲಗಿಬಿಡುತ್ತೇವೆ. ಹೊದ್ದ ಕಂಬಳಿಯಡಿಯಲ್ಲಿ ದೊಡ್ಡ ಮೀನೊಂದು ಎಚ್ಚರಗೊಳ್ಳುತ್ತದೆ.

ಪೇಟೆಗೆ ಹೋಗಿ ನಾಲ್ಕು ದಿವಸವಾಗಿದ್ದ ಇವರು ಇವತ್ತು ತಾನೇ ವಾಪಸಾಗಿದ್ದಾರೆ. ಬರುವಾಗ ಇನ್ನು ಮೂರ್‍ನಾಲ್ಕು ತಿಂಗಳಿಗೆ ಸಾಕಾಗುವಷ್ಟು ಸಾಮಾನುಗಳನ್ನು ತಂದಿದ್ದಾರೆ. ಈ ಊರಿನವರೆಲ್ಲ ಹೀಗೇ. ಪೇಟೆಗೆ ಹೋಗುವುದೇ ಎರಡೋ-ಮೂರೋ ತಿಂಗಳಿಗೊಮ್ಮೆ. ಮೈಲಿ ನಡೆದು, ಹೊಳೆದಂಡೆ ತಲುಪಿ, ದೋಣಿ ಆಚೆ ದಡದಲ್ಲಿದ್ದರೆ 'ಕೂಹೂಯ್..' ಎಂದು ಕೂಗಿ-ಕಿರುಚಿ ಕರೆದು ಈಚೆ ದಡಕ್ಕೆ, ಅದರಲ್ಲಿ ಕೂತು ಹೊಳೆ ದಾಟಿ, ಮತ್ತೆ ಮೈಲಿ ನಡೆದು.... ದಿನಕ್ಕೊಂದೇ ಬಸ್ಸು ನಮ್ಮೂರಿಗೆ ಇರುವುದು.. ಅದು ತಪ್ಪಿದರೆ ಪೂರ್ತಿ ಹನ್ನೆರಡು ಮೈಲಿ ನಡೆಯಬೇಕು.. ಸುತ್ತ ಗುಡ್ಡ; ಮಧ್ಯೆ ಈ ಊರು..

ಈ ಬಾರಿ ಪೇಟೆಯಿಂದ ಬರುವಾಗ ಇವರು ನನಗೊಂದು ಹೊಸ ಸೀರೆ ತಂದಿದ್ದಾರೆ. ಹೊರಡುವಾಗಲೇ ಕೇಳಿದ್ದರು: 'ಪ್ಯಾಟಿಂದ ನಿಂಗೇನು ತರ್‍ಬೇಕೇ ಕಮಲೂ?' ಅಂತ. 'ನಂಗೇನೂ ಬ್ಯಾಡ' ಅಂದಿದ್ದೆ. ಆದರೂ ತಂದಿದ್ದಾರೆ. ಗೊತ್ತಿತ್ತು ನನಗೆ -ಮೊನ್ನೆ ಅಡುಗೆ ಮಾಡುತ್ತಿದ್ದ ನಾನು ಇದ್ದಕ್ಕಿದ್ದಂತೆ ಎದ್ದು ಗದ್ದೆ ಹಳುವಿಗೆ ಓಡಿ ಬಗ್ಗಿ ಕಾರಿಕೊಂಡ ಮೇಲೆ, ಮತ್ತೆ ನಾಲ್ಕೈದು ಬಾರಿ ವಾಂತಿಯಾದದ್ದು ನೋಡಿದ ಮೇಲೆ ರಾಯರ ಮುಖದಲ್ಲಿ ಮೂಡಿ ಸ್ಥಾಪಿತವಾಗಿದ್ದ ಮುಗುಳ್ನಗೆಯ ರಾಜ್ಯಭಾರ ಗಮನಿಸಿದಾಗಲೇ ಅಂದುಕೊಂಡಿದ್ದೆ- ತಂದೇ ತರುತ್ತಾರೆ ಪೇಟೆಯಿಂದ ನನಗಾಗಿ ಏನಾದರೂ ಅಂತ. ನಾನು ಚೊಚ್ಚಿಲ ಬಸುರಿ.. ಮದುವೆಯಾಗಿ ನಾಲ್ಕು ತಿಂಗಳಾಯಿತು.

ಇವರು ಹೀಗೆ ಪೇಟೆಗೆ ಹೋದಾಗಲೆಲ್ಲ ನಾನು ಇವರ ಅಣ್ಣ -ನನ್ನ ಭಾವಮೈದುನ- ನ ಮನೆಯಲ್ಲಿ ತಂಗಿರುತ್ತೇನೆ. ಅಕ್ಕ ಒಳ್ಳೆಯವಳು. ಅವಳಿಗೆ ಎರಡು ಮಕ್ಕಳು. ಮೊನ್ನೆ ಅಲ್ಲಿಗೆ ಬೆಂಗಳೂರಿನಿಂದ ಆರು ಜನ ಹುಡುಗರು ಬಂದಿದ್ದರು. ಎಲ್ಲಾ ಸಾಗರ-ಶಿರಸಿ-ಶಿವಮೊಗ್ಗದ ಕಡೆಯವರಂತೆ. ಬೆಂಗಳೂರಿನಲ್ಲಿ ಕೆಲಸದಲ್ಲಿರುವುದಂತೆ. ಅವರಲ್ಲೊಬ್ಬಾತ ಕಳೆದ ವರ್ಷ ಇಲ್ಲಿಗೆ ಬಂದಿದ್ದನಂತೆ. ನಮ್ಮೂರು ಎಂದರೆ ಅವನಿಗೇನೋ ಆಕರ್ಷಣೆಯಂತೆ. ತನ್ನ ಸ್ನೇಹಿತರನ್ನೆಲ್ಲಾ ಕರೆದುಕೊಂಡು ಬಂದಿದ್ದ.

ನಮ್ಮೂರಿಗೆ ಹೀಗೆ ಪ್ರವಾಸಿಗರು ಬಂದುಹೋಗುವುದು ಹೊಸದಾಗಿಯೇನು ಉಳಿದಿಲ್ಲ. "ಈಗ ನಾಲ್ಕು ವರ್ಷವಾಯ್ತು, ತಿಂಗಳಾ ಎರಡ್ಮೂರು ತಂಡ ಬರ್ತದೆ ಹೀಂಗೆ.." ಅನ್ನುತ್ತಿದ್ದರು ಭಾವ. ನಮ್ಮೂರಿನ ಹಿಂದೆ, ಇದೇ ಹೀಗೇ ನಮ್ಮ ಮನೆಯ ಹಿಂದಿನಿಂದ ಗುಡ್ಡ ಹತ್ತಿ, ಮೂರ್ನಾಕು ಮೈಲಿ ನಡೆದು ಹೋದರೆ, ಅಲ್ಲೊಂದು ಜಲಪಾತವಿದೆಯಂತೆ. ನಾನಿನ್ನೂ ನೋಡಿಲ್ಲ. ನನ್ನ ಮದುವೆಯಾಗಿ ಇನ್ನೂ ನಾಲ್ಕು ತಿಂಗಳಾಯಿತು ಅಷ್ಟೇ ಅಂತ ಹೇಳಿದೆನಲ್ಲವೇ? ಇವರ ಬಳಿ ಸುಮಾರು ಸಲ ಕೇಳಿದೆ; ಆದರೆ ಒಮ್ಮೆಯೂ ನನ್ನನ್ನು ಕರೆದುಕೊಂಡು ಹೋಗುವ ಮನಸು ಮಾಡಲಿಲ್ಲ. ನನಗೆ ಒಬ್ಬಳೇ ಹೋಗಲಿಕ್ಕೆ ಭಯ. ಅಕ್ಕನನ್ನು ಕರೆದರೆ ಅವಳು ಯಾವಾಗಲೂ ಏನಾದರೂ ಕೆಲಸವಿದೆ ಅನ್ನುತ್ತಾಳೆ. ಕಾಡಿನಲ್ಲಿ ಹುಲಿ, ಕಾಡೆಮ್ಮೆಗಳು ಬೇರೆ ಇವೆಯಂತೆ. ಹೌದು, ಈಗೊಂದು ಹದಿನೈದು ದಿನದ ಹಿಂದೆ -ರಾತ್ರಿ ಹನ್ನೆರಡರ ಜಾವ- ಹುಲಿ ಗುರುಗುಡುತ್ತಿದ್ದುದನ್ನು ನಾನೇ ಕೇಳಿದ್ದೇನೆ.. ಬೆಚ್ಚಿ ಇವರನ್ನು ತಬ್ಬಿದ್ದೇನೆ...

ನಮ್ಮೂರಿಗೆ ಜಲಪಾತ ನೋಡಲಿಕ್ಕೆ ಮಾತ್ರವಲ್ಲ ಹೀಗೆ ಪ್ರವಾಸಿಗರು ಬರುವುದು.. ಅವರಿಗೆ ಈ ಊರೊಂದು ಶಾಪಗ್ರಸ್ತ ಗಂಧರ್ವರ ಸ್ವರ್ಗದಂತೆ ಭಾಸವಾಗುತ್ತದಂತೆ. ಶಾಪವೇ? ಏನು ಶಾಪ ಎಂದಿರಾ? ಈ ಊರೆಂಬ ಊರು ಇನ್ನು ಕೆಲವೇ ತಿಂಗಳಲ್ಲಿ ನಾಮಾವಶೇಷವಾಗಲಿದೆ. ಸರ್ಕಾರದವರು ಇದನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಇಗೋ, ಇಲ್ಲೇ ಪಕ್ಕದಲ್ಲೇ ಎದ್ದು ನಿಂತಿದೆಯಲ್ಲಾ ಅಣು ವಿದ್ಯುತ್ ಸ್ಥಾವರ, ಆಚೆ ಪಕ್ಕ ದೊಡ್ಡದೊಂದು ಡ್ಯಾಮ್, ಅದಕ್ಕಾಗಿ ಈ ಊರೂ, ಅಕ್ಕಪಕ್ಕದ ಹಳ್ಳಿಗಳೂ ಬಲಿಯಾಗುತ್ತಿವೆ.

ಬೆಂಗಳೂರಿನಿಂದ ಬಂದ ಹುಡುಗರಿಗೆ ಭಾವ ಹೇಳುತ್ತಿದ್ದರು "ಈ ಊರಲ್ಲಿ ಮೊದಲು ನೂರ್-ನೂರೈವತ್ತು ಮನೆಗಳಿದ್ವು.. ಈಗ ಒಂದೊಂದೆ ಮನೆಗಳವರು ಬಿಟ್ ಹೋಗ್ತಾ, ನಿಧಾನಕ್ಕೆ ಊರು ಖಾಲಿಯಾಗ್ತಿದೆ.. ಸಧ್ಯಕ್ಕೆ ಒಂದು ನಲ್ವತ್ತು ಮನೆಗಳಿಗೆ ಜೀವ ಇರ್ಬವ್ದು.. ಅವೂ ಇನ್ನೊಂದು ನಾಕೈದು ತಿಂಗ್ಳೊಳಗೆ ಖಾಲಿಯಾಗ್ತಾವೆ.. ಎಲ್ಲಾ ಖಾಲಿ ಮನೆಗ್ಳು.. ನಮ್ಗೆ ನಾಟ್ಕ ಪ್ರಾಕ್ಟೀಸ್ ಮಾಡಕ್ಕೆ ಚೊಲೋ ಆಗಿದೆ.. ಹಹ್ಹ!"

"ಗೌರ್ಮೆಂಟು ಪರಿಹಾರ ಸಿಗ್ತಾ?" ಕೇಳಿದರು ಅವರಲ್ಯಾರೋ.

"ಹುಂ! ಎಕರೆಗೆ ಇಪ್ಪತ್ನಾಕು ಸಾವ್ರ ಅಂತ ಪಿಕ್ಸ್ ಮಾಡಿದಾರೆ. ನಮ್ದು ಗದ್ದೆ, ಈ ಮನೆ ಜಾಗ ಎಲ್ಲಾ ಕೊಟ್ರೆ ಒಂದು ಐವತ್ ಸಾವ್ರ ಸಿಗ್ಬಹುದೇನೋ.. ಅದನ್ನ ತಗೊಂಡು ಊರು ಬಿಡ್ಬೇಕಂತೆ. ಹುಂ! ಐವತ್ ಸಾವ್ರ ಇಟ್ಕೊಂಡು ಏನ್ ಮಾಡ್ಲಿಕ್ಕಾಗ್ತದೆ ಈಗಿನ ಕಾಲದಲ್ಲಿ..? ನಮ್ ತಾತ-ಮುತ್ತಾತನ ಕಾಲದಿಂದಲೂ ವಾಸವಾಗಿರೋ ಊರು ಇದು.. ಇದನ್ನ ಬಿಟ್ಟು ಈಗ ಏಕಾಏಕಿ ಎಲ್ಲಿಗೇಂತ ಹೋಗೋದು?"

ಹುಡುಗರು ಭಾವನ ಮಾತಿಗೆ ಹೌದೌದೆಂದು ಹೇಳಿ, ನಾಲ್ಕು ಸಮಾಧಾನದ ಮಾತು ಸೇರಿಸುತ್ತಿದ್ದರು: "ನಿಮ್ಗೆಲ್ಲ ಅಲ್ಲಿ ಕೆಲಸನಾದ್ರೂ ಕೊಡಬಹುದಿತ್ತು.." "ಅಯ್ಯೋ..! ಅಲ್ಲಿರೋರೆಲ್ಲ ತಮಿಳ್‍ನಾಡು, ಕೇರ್‍ಅಳ ಕಡ್ಯೋರು.. ಇಲ್ಲಿಯೋರಿಗೆ ಏನೂ ಕೆಲ್ಸ ಕೊಡಲ್ಲ.."

ರಾತ್ರಿ ಅವರೆಲ್ಲ ಭಾವನ ಮನೆಯ ಜಗುಲಿಯಲ್ಲೇ ಮಲಗಿದ್ದರು. ಈ ಊರಿನ ಕೊನೆಕೊನೆಯ ನೆಂಟರಂತೆ ಕಾಣಿಸುವ ಅವರಿಗೆ ನಾನು-ಅಕ್ಕ ಸೇರಿ ಅಡುಗೆ ಮಾಡಿ ಹಾಕಿದೆವು. ನಮ್ಮ ಮನೆಯ ಕುಚ್ಚುಲಕ್ಕಿ ಅನ್ನವನ್ನೇ, ಬೇಳೆಯಿಲ್ಲದೇ ಬರೀ ಕಾಯಿ ಬೀಸಿ ಹಾಕಿ ಮಾಡಿದ್ದ ಹುಳಿಯನ್ನೇ, ರುಚಿರುಚಿಯೆಂದುಕೊಂಡು ಉಂಡರು.

ನಿನ್ನೆ ಬೆಳಗ್ಗೆ ಅವರೆಲ್ಲ ಜಲಪಾತ ನೋಡಲಿಕ್ಕೆಂದು ಹೊರಟರು. ಮಧ್ಯಾಹ್ನ ಒಂದರ ಒಳಗೆ ಬರುತ್ತೇವೆ ಎಂದಿದ್ದವರು ಮೂರಾದರೂ ಬಾರದ್ದು ನೋಡಿ ಭಾವ ಆತಂಕ ಮಾಡಿಕೊಂಡಿದ್ದರು. ಅಂತೂ ಮೂರೂವರೆ ಹೊತ್ತಿಗೆ ಅವರೆಲ್ಲ ವಾಪಸು ಬಂದರು. ದಾರಿಯಲ್ಲಿ ಎರಡ್ಮೂರು ಕಡೆ ದೊಡ್ಡ ದೊಡ್ಡ ಬಂಡೆಗಳನ್ನು ಹತ್ತುವುದು ತುಂಬಾ ಕಷ್ಟವಾಯಿತೆಂದು ಹೇಳಿದರು ಭಾವನ ಬಳಿ. ಜಲಪಾತ ಅದ್ಭುತ, ಅಮರಾವತಿಯ ಸದೃಶ ಎಂದೆಲ್ಲ ಹೊಗಳಿದರು. ತಮ್ಮ ಕ್ಯಾಮೆರಾದಲ್ಲಿ ತೆಗೆದಿದ್ದ ಫೋಟೋಗಳನ್ನು ನಮಗೆಲ್ಲ ತೋರಿಸಿದರು. ಟೀವಿಯಲ್ಲಿ ಕಾಣುವಂತೆ ನೀರು ಬೀಳುವುದನ್ನೂ ತೋರಿಸಿದರು. ನನಗಂತೂ ಅದನ್ನು ನೋಡಿದ ಮೇಲೆ, ಈ ಊರು ಬಿಡುವುದರೊಳಗೆ ಒಮ್ಮೆ ಆ ಜಲಪಾತವನ್ನು ನೋಡಲೇಬೇಕೆಂಬ ಆಸೆಯಾಗಿದೆ. ಹೇಳಬೇಕು ಇವರ ಬಳಿ...

ಬಿಗಿಯಪ್ಪುಗೆಯಿಂದ ಕೊಂಚ ಸಡಿಲಿಸಿಕೊಂಡು ಹೇಳುತ್ತೇನೆ: "ಹೋಯ್.. ಮೊನ್ನೆ ಬೆಂಗ್ಳೂರಿಂದ ಆರು ಜನ ಹುಡುಗ್ರು ಬಂದಿದ್ರು.. ಭಾವನ್ ಮನೇಲಿ ಉಳ್ಕೊಂಡಿದ್ರು.. ಅವ್ರು ಜಲಪಾತದ ಫೋಟ ಎಲ್ಲ ತೋರ್ಸಿದ್ರು.. ಎಷ್ಟು ಚನಾಗದೆ! ಅಲ್ಲಾ, ಎಲ್ಲೆಲ್ಲಿಂದೆಲ್ಲ ಇದ್ನ ನೋಡಕ್ಕೇಂತ ಬರ್ತಾರೆ; ಇನ್ನೂ ನಾವೇ ನೋಡಿಲ್ಲಾಂದ್ರೆ ಹೇಗೆ?"

ಇವರು ಸಿಡುಕುತ್ತಾರೆ "ಥೋ ನಿಂದೊಳ್ಳೆ ಕಾಟ ಮಾರಾಯ್ತಿ..! ಅಲ್ಲಿ ಏನಿದೆ ಅಂತ? ಸುಮ್ನೆ ಎತ್ರದಿಂದ ನೀರು ಬೀಳ್ತದೆ ಅಷ್ಟೆ. ಅದ್ನ ನೋಡಕ್ಕೆ ಅಲ್ಲಿಗೆ ಹೋಗ್ಬೇಕಾ? ನೋಡು, ಅದೇ ನೀರೇ ಇಲ್ಲಿಗೆ ಹರಿದು ಬರೋದು.. ನೀನು ದಿನಾ ಕುಡಿಯೋದು ಅದೇ ನೀರು.. ಅಲ್ದೇ ನೀವು ಹೆಂಗಸ್ರೆಲ್ಲ ಹೋಗೋಂತ ದಾರೀನೇ ಅಲ್ಲ ಅದು.. ಆ ದೊಡ್‍ದೊಡ್ ಬಂಡೇನೆಲ್ಲ ಹತ್ತಿಳ್ದು ನೀನು ಹೋಗ್ಯಾತು ಉದ್ಧಾರ.. ಅದೂ ಅಲ್ದೇ ಈ ಸ್ಥಿತೀಲಿ.." ಎನ್ನುತ್ತಾ ನನ್ನ ಹೊಟ್ಟೆಯ ಮೇಲೆ ಕೈಯಾಡಿಸಿದರು. ನಾನು ಮಗ್ಗುಲಾದೆ.

ನನಗ್ಯಾಕೋ ಇವತ್ತು ನಿದ್ರೆಯೇ ಬರುತ್ತಿಲ್ಲ.. ಆ ಹುಡುಗರೇನೋ ಸರಿಯಾಗಿ ಉಂಡು, ಇಲ್ಲಿಯ ಎಲ್ಲವನ್ನೂ ಹೊಗಳಿ, ನಮ್ಮ ಪರಿಸ್ಥಿತಿ-ಭವಿಷ್ಯದ ಬಗ್ಗೆ ಎರಡು ವಿಷಾದದ ಮಾತಾಡಿ, ನಮ್ಮ ಫೋಟೋಗಳನ್ನೂ ತೆಗೆದುಕೊಂಡು, ಟಾಟಾ ಮಾಡಿ, ದೋಣಿ ಹತ್ತಿ ನಡೆದುಬಿಟ್ಟರು. ಇಷ್ಟು ಹೊತ್ತಿಗೆ ನಮ್ಮೂರು ಅವರಿಗೆ ಮರೆತೇ ಹೋಗಿರಬಹುದು. ಅಥವಾ ಗೆಳೆಯರ ಬಳಿ ಹೇಳಿಕೊಂಡು ನೆನಪನ್ನೇ ಕಮ್ಮಗೆ ಮೆಲ್ಲುತ್ತಿರಬಹುದು. ಅಥವಾ ನಿದ್ರೆ ಹೋಗಿರಬಹುದು. ಅವರ್‍ಯಾರಿಗೂ ಭವಿಷ್ಯದ ಬಗ್ಗೆ, ನೆಲೆಯ ಬಗ್ಗೆ ಚಿಂತೆಯಿಲ್ಲ.. ಈ ಊರು ಅವರಿಗೊಂದು ಪ್ರವಾಸೀ ಸ್ಥಳ; ಅಷ್ಟೇ. ಊಟ ಮಾಡುವಾಗ ಅವರಲ್ಲೊಬ್ಬ ಹೇಳುತ್ತಿದ್ದ, ಪಕ್ಕದವನಿಗೆ: "ಬದುಕು ಸುಂದರ, ಅಲ್ಲವೇ ದೋಸ್ತಾ?" ಆದರೆ.... ನಮ್ಮ ಬದುಕು?

ಅಷ್ಟಿಷ್ಟು ಓದಿಕೊಂಡಿರುವ, ತೀರಾ ದೊಡ್ಡದಲ್ಲದಿದ್ದರೂ ಸಣ್ಣ ಪೇಟೆಯಲ್ಲಿ ಹುಟ್ಟಿ ಬೆಳೆದಿರುವ ನನ್ನನ್ನು, ಇಂತಹ ಮುಳುಗುತ್ತಿರುವ ಹಳ್ಳಿಯೊಂದಕ್ಕೆ ಮದುವೆ ಮಾಡಿಕೊಡುವ ಮುನ್ನ ಅಪ್ಪ ಯೋಚಿಸಿರಲಿಲ್ಲವೆಂದಲ್ಲ.. ಒಂದು ಬೆಂಕಿಪೊಟ್ಟಣ ಬೇಕೆಂದರೂ ಹನ್ನೆರಡು ಮೈಲಿ ಸಾಗಬೇಕು ಇಲ್ಲಿ. ಕರೆಂಟೇ ಇಲ್ಲ; ಚಿಮಣಿ ದೀಪ. ಆದರೆ ಅಪ್ಪನ ಯೋಜನೆಯೇ ಬೇರೆಯಿತ್ತು: "ಹೆಂಗಿದ್ರೂ ನಮ್ಮೊಬ್ಳೇ ಮಗಳು ನೀನು.. ಮನೆಯಾಳ್ತನ.. ಇನ್ನು ಮೂರ್ನಾಕು ತಿಂಗಳು ಅಷ್ಟೇ. ಆಮೇಲೆ ಎಲ್ಲಾ ಆ ಹಳ್ಳೀನ ಬಿಟ್ಟು ಹೊರಡ್ತಾರೆ. ನೀನೂ-ನಿನ್ ಗಂಡ ಇಲ್ಲೇ ಬಂದು ಇರುವಂತ್ರಿ. ಪರಿಹಾರದ ದುಡ್ಡಲ್ಲಿ ನಿನ್ ಗಂಡ ಒಂದು ಅಂಗಡಿ ಹಾಕ್ಕೊಳ್ಲಿ. ಜೀವನಕ್ಕೇನೂ ತೊಂದ್ರೆ ಇಲ್ಲ" ನನಗೂ ಈ ಯೋಜನೆ ಸರಿಯೆನಿಸಿತ್ತು. ದೂರದ ನೆಂಟರದೇ ಸಂಬಂಧ. ಅಲ್ಲದೇ ನಾನು ಹುಟ್ಟಿದ ಮನೆಯಲ್ಲೇ, ಅಪ್ಪ-ಅಮ್ಮರ ಜೊತೆಯಲ್ಲೇ ಇರಬಹುದಲ್ಲಾ ಎಂಬ ಖುಷಿ ಬೇರೆ.

ಆದರೆ ಇವರ ಸ್ವಾಭಿಮಾನವೇ ಅದಕ್ಕೀಗ ಅಡ್ಡಿಯಾಗಿದೆ. ಹೆಂಡತಿಯ ಮನೆಯಲ್ಲಿರುವುದಕ್ಕೆ ಇವರಿಗೆ ಅವಮಾನವಂತೆ. ಬೇರೆಲ್ಲಿಗಾದರೂ ಹೋಗಿ ಹೇಗಾದರೂ ಬದುಕೋಣ ಎನ್ನುತ್ತಿದ್ದಾರೆ. ಈ ಊರವರೆಲ್ಲ ಸೇರಿ ಆಗೀಗ ನಾಟಕ ಆಡುತ್ತಾರೆ. ಅದರಲ್ಲಿ ಇವರೂ ಪಾತ್ರ ಮಾಡುತ್ತಾರೆ. ಆ ನಾಟಕಗಳಲ್ಲಿ ಆಡುವ ನಾಯಕನ ಆದರ್ಶದ ಮಾತುಗಳನ್ನೇ ತಮಗೂ ಆರೋಪಿಸಿಕೊಂಡುಬಿಟ್ಟಿದ್ದಾರೆ ಇವರು.. ನೆಲೆಯೇ ನಾಶವಾಗುತ್ತಿದ್ದರೂ ಸ್ವಾಭಿಮಾನ ಬಿಡದು. ಎಲ್ಲಿಗಾದರೂ ಎಂದರೆ ಎಲ್ಲಿಗೆ ಹೋಗುವುದು? ಹೋಗಿ ಏನು ಮಾಡುವುದು? ಪುಸಲಾಯಿಸಿ ಕೇಳಿದರೆ ಸುಮ್ಮನೆ ಸಿಡುಕುತ್ತಾರೆ.

ಯಾವುದೋ ಊರುಗಳವರಿಗೆ ಕರೆಂಟು ಕೊಡುವ ಭರದಲ್ಲಿ ನಾವು ನಮ್ಮ ಊರನ್ನು ಕಳೆದುಕೊಳ್ಳುತ್ತಿದ್ದೇವೆ... ನಮ್ಮ ಮನೆಗಳ ಚಿಮಣಿ ದೀಪಗಳನ್ನು ನಂದಿಸಿ, ಅದನ್ನೂ ಚೀಲದೊಳಗೆ ತುಂಬಿಕೊಂಡು ಹೊರಡಬೇಕಿದೆ ನಾವು... ಎಲ್ಲಿಗೆ? ಯೋಚಿಸಿದಷ್ಟೂ ಕತ್ತಲೆ ದಟ್ಟವಾಗುತ್ತದೆ.. ಇವರು ನನ್ನನ್ನು ತಮ್ಮ ತೆಕ್ಕೆಯೊಳಗೆ ಸೆಳೆದುಕೊಳ್ಳುತ್ತಾರೆ.. ನಾನು ಕಳೆದುಹೋಗುತ್ತೇನೆ.

Wednesday, January 09, 2008

ಬೆಟ್ಟ, ಚಿಟ್ಟೆ..

"ಶೆಡ್ತಿಕೆರೆಯಾ?" ಉದ್ಘರಿಸಿದರು ಭಟ್ಟರು.
"ಹೌದು. ಯಾಕೆ ಅಲ್ಲಿ ಯಾರಾದ್ರೂ ಗೊತ್ತಾ ನಿಮಗೆ?" ಕೇಳಿದೆ.
"ಹಾಂ! ನಮ್ಮನೆಯವಳಿಗೆ ಅಲ್ಲೇ ವರದಾಮೂಲ! ಏಯ್ ಏನೇ, ನಿಮ್ಮೂರು ಕಡೆಯೋರು ಬಂದಿಯಾರೆ ನೋಡು.." ಭಟ್ಟರು ಅಡುಗೆಮನೆಯಲ್ಲಿದ್ದ ಹೆಂಡತಿಯನ್ನು ಕೂಗಿದರು.
ಒಳಗಿನಿಂದ ಬಂದ ಭಟ್ರ ಹೆಂಡತಿಯನ್ನು ಅಡುಗೆ ಒಲೆಯ ಮಶಿ ಬಡಿದು ಬಡಿದೇ ಹೀಗಾಗಿದೆಯೇನೋ ಎನಿಸುವಷ್ಟು ಕಪ್ಪು ಬಣ್ಣದ ಸೀರೆಯೊಂದು ಸುತ್ತಿತ್ತು. ಆ ಸೀರೆಗೆ ಹೊಳೆಯುವ ಹಸಿರು ಗೆರೆಗಳಿದ್ದವು. ಕೈಯ ಬಳೆಗಳಿಗೆ ಅದು ಮ್ಯಾಚಿಂಗ್ ಆಗುತ್ತಿತ್ತು.
"ಶೆಡ್ತಿಕೆರೆಯಾ? ಯಾರ ಮನೆ?" ಕೇಳಿದರು ಭಟ್ರ ಹೆಂಡತಿ.
"ಹೊಸೊಕ್ಲೋರ ಮನೆ ಅಂತಾರೆ. ನನ್ನ ಅಪ್ಪನ ಹೆಸರು ಅನಂತರಾವ್ ಅಂತ"
"ನಿನ್ನ ಅಮ್ಮಂಗೆ ಯಾವೂರು ಹೇಳು? ತುಮರಿ ಅಲ್ದಾ?"
"ಹಾಂ, ತುಮರಿಯೇ"
"ಗೊತ್ತಾತು ಬಿಡು.. ವನಮಾಲ ಅಲ್ದಾ ಹೆಸರು? ನಂಗೆ ವರದಾಮೂಲ. ಶಂಕರ ಭಟ್ರ ಮನೆ.. ನೀವು ಈಗಿನ ಹುಡುಗ್ರಿಗೆ ಗೊತ್ತಿರೂದಿಲ್ಲ ಬಿಡು.."

ನನಗೆ ನಿಜಕ್ಕೂ ಗೊತ್ತಿರಲಿಲ್ಲ. ಪೆಚ್ಚು ನಗೆ ನಕ್ಕೆ. ಇವರು ಹವಿಗನ್ನಡ, ಮಂಗಳೂರು ಕನ್ನಡ ಮಿಕ್ಸ್ ಮಾಡಿ ಮಾತಾಡುತ್ತಿದ್ದರು. ಅದಕ್ಕಾಗಿ ನಾನು ಪೂರ್ತಿ ಪೇಟೆ ಭಾಷೆಯಲ್ಲೇ ಮಾತಾಡುತ್ತಿದ್ದೆ. ಹೊರಗೆ ಇಳಿಯುತ್ತಿದ್ದ ಸಂಜೆಗತ್ತಲೆ, ಜಗುಲಿಯಲ್ಲಿದ್ದ ಅಲ್ಪ ಬೆಳಕನ್ನೂ ಆಹುತಿ ತೆಗೆದುಕೊಳ್ಳುತ್ತಿತ್ತು. ಜಗುಲಿಯ ಬಲಮೂಲೆಯಲ್ಲಿದ್ದ ಕಿಟಕಿಯಿಂದ ಭಟ್ಟರ ಮನೆಯ ಧರೆ ಕಾಣುತ್ತಿತ್ತು. ಬಳಿಯೇ ಹೋಗಿ ಬಗ್ಗಿ ನೋಡಿದರೆ ಇಡೀ ಬೆಟ್ಟ ಕಾಣಬಹುದೆಂದು ನಾನು ಊಹಿಸಿದೆ. "ಇನ್ನು ನೀನು ಕೆಳಗಿಳೀಲಿಕ್ಕೆ ಆಗೂದಿಲ್ಲ. ನಮ್ಮಲ್ಲೇ ಉಳ್ದು ಬೆಳಗ್ಗೆ ಮುಂಚೆ ಹೊರಡು" ಎಂದರು ಭಟ್ಟರು. ಸುಸ್ತಾಗಿದ್ದ ನನಗೂ ಗತ್ಯಂತರವಿರಲಿಲ್ಲ. ಭಟ್ಟರ ಹೆಂಡತಿ ಜಗುಲಿಯ ಲೈಟಿನ ಸ್ವಿಚ್ಚು ಒತ್ತಿ ಕಾಫಿ ತರುವುದಾಗಿ ಹೇಳಿ ಒಳಹೋದರು. ನಾನು ಬಟ್ಟೆ ಬದಲಿಸಲೆಂದು ಎದ್ದೆ. ಟ್ಯೂಬ್‍ಲೈಟು ಫಕಫಕನೆ ಹೊತ್ತಿಕೊಂಡಿತು.

ಇಲ್ಲಿಗೆ ಚಾರಣಕ್ಕೆ ಹೊರಡುವ ಮೊದಲೇ 'ಒಂದೇ ದಿನದಲ್ಲಿ ಕುಮಾರ ಪರ್ವತ ಹತ್ತಿ ಇಳಿಯಲಿಕ್ಕೆ ಸಾಧ್ಯವೇ ಇಲ್ಲ, ನೀನು ಭಟ್ಟರ ಮನೆಯಲ್ಲಿ ಪರಿಚಯ ಹೇಳಿಕೊಂಡು ಇರು, ಕತ್ತಲಾದಮೇಲೂ ಮುಂದುವರೆಯುವ ಸಾಹಸ ಮಾಡಬೇಡ, ಒಬ್ಬನೇ ಬೇರೆ ಹೋಗುತ್ತಿದ್ದೀಯಾ, ತುಂಬಾ ದಟ್ಟ ಕಾಡಿದೆ, ಆನೆ ಹಿಂಡೂ ಇದೆಯಂತೆ' ಎಂದೆಲ್ಲ ನನ್ನ ಸ್ನೇಹಿತರು ಹೆದರಿಸಿದ್ದರು. ಅವರು ಅಷ್ಟೆಲ್ಲಾ ಅಂದಿದ್ದರೂ ನನಗೆ ನಾವು ಹಿಂದೊಮ್ಮೆ ಮಾಡಿದ ಸಾಹಸದ ನೆನಪಿದ್ದಿದ್ದರಿಂದ 'ಏಯ್ ಅವ್ಕೆಲ್ಲ ನಾನು ಕೇರ್ ಮಾಡಲ್ಲ. ಒಂದೇ ದಿನದಲ್ಲಿ ಹತ್ತಿಳಿದು ತೋರಿಸ್ತೇನೆ ನೋಡ್ತಿರಿ' ಅಂದು ಬಂದಿದ್ದೆ.

ಆದರೆ ಕಳೆದ ಬಾರಿಯಂತೆ ಈ ಬಾರಿ ಹತ್ತಿಳಿಯುವುದು ಸುಲಭವಿರಲಿಲ್ಲ. ನನ್ನ ಸ್ಪೋರ್ಟ್ಸ್ ಶೂ ಹೊಸದಾಗಿದ್ದರಿಂದ ಅದಿನ್ನೂ ಕಾಲಿಗೆ ಹೊಂದಿಕೊಂಡಿರಲಿಲ್ಲ. ಬೆಟ್ಟದ ಕಲ್ಲು ಹಾದಿಯಲ್ಲಿ ಇಳಿಯುವಾಗ ಪಾದಕ್ಕೆ, ಹೆಬ್ಬೆರಳುಗಳಿಗೆ ಒತ್ತೀ ಒತ್ತಿ ತುಂಬಾ ನೋಯುತ್ತಿತ್ತು. ಹೆಜ್ಜೆ ಎತ್ತಿಡುವುದೆಂದರೆ ಜೀವ ಹೋದಂತಾಗುತ್ತಿತ್ತು. ಭಟ್ಟರ ಮನೆ ಬಳಿ ಬರುವುದರೊಳಗೆ ನಾನು ಪೂರ್ತಿ ಬಸವಳಿದುಹೋಗಿದ್ದೆ. ನನ್ನ ಜೊತೆ ತಾನೂ ಇಳಿಯುತ್ತಿದ್ದ ಸೂರ್ಯ, ನಾನು ಭಟ್ಟರ ಮನೆ ಬಳಿ ಬರುವಷ್ಟರಲ್ಲಿ ತಾನಿನ್ನು ಮರೆಯಾಗುವುದಾಗಿ ಹೇಳಿ ಟಾಟಾ ಮಾಡುತ್ತಿದ್ದ. ನನ್ನ ಬ್ಯಾಗಿನೊಳಗಿದ್ದ ಪೆನ್-ಟಾರ್ಚನ್ನು ಒಮ್ಮೆ ತಡವಿಕೊಂಡೆ. ಅದು ತಾನು ಬೇಕಾದರೆ ಒಂದೆರೆಡು ತಾಸು ಉರಿಯಬಲ್ಲೆ ಎಂದು ಅಭಯ ನೀಡಿತು. ಆದರೆ ಪೂರ್ತಿ ಬೆಟ್ಟ ಇಳಿಯುವುದಕ್ಕೆ ಇನ್ನೂ ಮೂರು ತಾಸಾದರೂ ಬೇಕೆಂದು ನನ್ನ ಹಿಂದಿನ ಅನುಭವ ಹೇಳುತ್ತಿತ್ತು. ಆನೆಯ ಹಿಂಡಿನ ನೆನಪಾಯಿತು. ಧೈರ್ಯ ಸಾಲಲಿಲ್ಲ. ಭಟ್ಟರ ಮನೆಯಲ್ಲೇ ಉಳಿದು ನಾಳೆ ಬೆಳಗ್ಗೆ ಅವರೋಹಣ ಮುಂದುವರೆಸುವುದೇ ಸರಿಯಿಂದು ನಿಶ್ಚಯಿಸಿದೆ. ಅಲ್ಲದೇ ಭಟ್ಟರ ಹೆಂಡತಿಯ ಊರಿನವನೇ ಅಂತ ಹೇಳಿಕೊಂಡಿದ್ದರಿಂದ ನನಗೆ ಇವತ್ತು ಇಲ್ಲಿ ಉಳಕೊಳ್ಳಲಿಕ್ಕೆ ಮುಕ್ತ ಅವಕಾಶ ಸಿಕ್ಕಂತಾಗಿತ್ತು. ಅದನ್ನು ನಿರಾಕರಿಸುವ ಗೋಜಿಗೆ ಹೋಗದೇ, ಬಟ್ಟೆ ಬದಲಿಸಿದವನು ಕೈಕಾಲು ತೊಳೆದು ಬರುವುದಾಗಿ ಹೇಳಿ, ಬಚ್ಚಲು ಮನೆ ಕೇಳಿಕೊಂಡು ಮನೆಯ ಒಳಹೊಕ್ಕೆ.

ಮೊದಲಿನದು ಜಗುಲಿ. ನಂತರ ಕತ್ತಲ ಒಳಮನೆ. ಆಮೇಲೆ ಕೈಸಾಲೆ. ಅದರ ಪಕ್ಕದಲ್ಲೇ ಅಡುಗೆಮನೆ. ಕೈಸಾಲೆಯಿಂದ ಹೊರಗೆ ನಡೆದರೆ ಅಲ್ಲೇ ಬಚ್ಚಲುಮನೆ. "ಬಿಸೀ ನೀರಿದ್ದು. ಬೇಕಾದ್ರೆ ಸ್ನಾನ ಮಾಡೋದಿದ್ರೆ ಮಾಡು" ಎಂದರು ಭಟ್ಟರ ಹೆಂಡತಿ. ಬಿಂದಿಗೆ ಬಿಂದಿಗೆ ಹೊಯ್ದುಕೊಂಡೆ. ಗೂಡಿನಲ್ಲಿದ್ದ ಅವರ ಲೈಫ್‍ಬಾಯ್ ಸೋಪನ್ನೇ ಬಳಸಿಕೊಂಡೆ. ಘಮಘಮ ಪರಿಮಳ. ಹಬೆ. ಹಿತಾನುಭವ. ನಾನು ಸ್ನಾನ ಮುಗಿಸಿ, ಬರೀ ಟವಲು ಸುತ್ತಿಕೊಂಡು ಕೈಸಾಲೆಗೆ ಬಂದೆ.

ಕೈಸಾಲೆಯ ಮೂಲೆಯಲ್ಲಿ ಒಂದು ಹುಡುಗಿ ಕೂತಿತ್ತು. ಬರೀ ಮೈಯಲ್ಲಿ ಬಂದ ನನ್ನನ್ನು ನೋಡಿದ ಅದು ನಾಚಿದಂತೆ ಮುಖವನ್ನು ಗೋಡೆಯ ಕಡೆ ತಿರುಗಿಸಿಕೊಂಡಿತು. ನೆಲ್ಲಿಕಾಯಿಯನ್ನೋ ಏನನ್ನೋ ತಿನ್ನುತ್ತಿದ್ದಂತಿತ್ತು. ಓರೆಗಣ್ಣಿನಿಂದ ನೋಡುತ್ತಾ ನಾನು ಒಳಮನೆ ದಾಟಿ ಜಗುಲಿಗೆ ಹೋಗಿ ಒಂದು ತೆಳು ಬನೀನು, ಬರ್ಮುಡಾ ಧರಿಸಿ, ತಲೆ ಬಾಚಿ ರೆಡಿಯಾಗುವಷ್ಟರಲ್ಲಿ ಭಟ್ಟರ ಹೆಂಡತಿ ಒಳಗೆ ಕರೆದರು. ಅಡುಗೆ ಮನೆಯಲ್ಲಿ ಮಣೆ ಹಾಕಿ ಕೂರಿಸಿ ನನಗೆ ಮಸಾಲೆ ಅವಲಕ್ಕಿ, ಒಂದು ದೊಡ್ಡ ಲೋಟದ ತುಂಬ ಕಾಫಿ ಕೊಟ್ಟರು. ಹಸಿವಾಗಿದ್ದ ನನ್ನ ಹೊಟ್ಟೆಗೆ ಖುಷಿಯಾಯಿತು. ಕೈ ತೊಳೆಯಲು ಬಚ್ಚಲಿಗೆ ಹೋಗುವಾಗ ಕೈಸಾಲೆಯ ಮೂಲೆ ನೋಡಿದರೆ ಅಲ್ಲಿ ಆ ಹುಡುಗಿ ಇರಲಿಲ್ಲ.

ಜಗುಲಿಗೆ ಬಂದು ಕೂತೆ. ಭಟ್ಟರು ಟೀವಿ ನೋಡುತ್ತಿದ್ದರು. ದೂರದರ್ಶನದ ಏಳು ಗಂಟೆ ವಾರ್ತೆ ಬರುತ್ತಿತ್ತು. ನನ್ನ ಅರೆತೆರೆದ ಕಣ್ಗಳು ನಿದ್ರೆಯನ್ನು ಬಯಸುತ್ತಿದ್ದವು. ಆದರೆ ವಾರ್ತೆ ಮುಗಿಯುತ್ತಿದ್ದಂತೆಯೇ ಭಟ್ಟರು ನನ್ನ ಬಗ್ಗೆಯೆಲ್ಲಾ ವಿಚಾರ ಮಾಡಲು ಶುರು ಮಾಡಿದ್ದರಿಂದ ನಾನು ಕಷ್ಟಪಟ್ಟು ನಿದ್ರೆಯನ್ನು ತಡೆಹಿಡಿಯಲೇ ಬೇಕಾಯಿತು. ಊರು, ಕೇರಿ, ಅಪ್ಪ, ಕೆಲಸ... ಎಲ್ಲಾ ವಿಚಾರಿಸಿದ ಅವರು, ತಮ್ಮ ಬಗ್ಗೆಯೂ ಹೇಳಿಕೊಂಡರು. ಇಲ್ಲಿಗೆ ತಾವು ಬಂದದ್ದು, ಹೀಗೆ ಒಂಟಿ ಮನೆ ಮಾಡಿಕೊಂಡು ಸಂಸಾರ ಮಾಡುತ್ತಿರುವುದು, ಈ ಪಾಳುಗುಡಿಯ ಪೂಜೆ... ಎಲ್ಲಾ ಕಾರಣ, ಕತೆ, ಹಿನ್ನೆಲೆಗಳನ್ನು ಹೇಳಿದರು. "ಕುಮಾರ ಪರ್ವತವನ್ನು ಒಂದೇ ದಿನದಲ್ಲಿ ಹತ್ತಿಳಿಯೋದಕ್ಕೆ ಗಂಡೆದೆ ಬೇಕು" ಎಂದರು. ಇಲ್ಲಿಗೆ ಬರುವವರೆಲ್ಲರು ಅಡುಗೆ-ಆಹಾರವನ್ನೆಲ್ಲ ತಂದುಕೊಂಡು, ಮೇಲ್ಗಡೆ ಟೆಂಟು ಹಾಕಿ ಉಳಿದು ಮರುದಿನ ಕೆಳಗಿಳಿಯುತ್ತಾರಂತೆ. ಆದರೆ ಹಿಂದೊಮ್ಮೆ ನಾವು ಆರು ಜನ ಹುಡುಗರು ಸಾಹಸ ಮಾಡಿ ಒಂದೇ ದಿನದಲ್ಲಿ ಹತ್ತಿಳಿದ ಕತೆಯನ್ನು ನಾನು ಅವರಿಗೆ ಹೇಳಿದೆ. ಭಟ್ಟರು "ಭಯಂಕರ ಬಿಡ್ರಪ್ಪ.. ಅದೂ ಪುಳಿಚಾರು ತಿನ್ನೋ ಬ್ರಾಮಣ್ರ ಹುಡುಗ್ರಾಗಿ.. ಆಂ?" ಎಂದು ನಕ್ಕರು. ಆ ಹಿಂದಿನ ಬಾರಿಯ ಚಾರಣವನ್ನು ನೆನೆಸಿಕೊಳ್ಳುತ್ತಾ ನಾನೂ ನಕ್ಕೆ.

ಬೆಂಗಳೂರಿನಿಂದ ರಾತ್ರಿ ಹನ್ನೊಂದರ ಹೊತ್ತಿಗೆ ರಾಜಹಂಸ ಬಸ್ಸಿಗೆ ಹೊರಟ ನಾವು ಆರು ಜನ ಹುಡುಗರು ಸೋಮವಾರಪೇಟೆಯಲ್ಲಿ ಇಳಿದಾಗ ಮೂಲೆ ಹೋಟಿಲಿನ ಕಾಫಿಯೋ ಚಹಾವೋ ಗೊತ್ತಾಗದಂತಹ ಬಣ್ಣದ ದ್ರವವೊಂದು ಸ್ವಾಗತ ಕೋರಿತ್ತು. ಅಲ್ಲೇ ನಾವೆಲ್ಲ ಮುಖ ತೊಳೆದು, ಹಲ್ಲುಜ್ಜಿ, ಮೈಮುರಿದು ತಯಾರಾದೆವು. ನೀರಿಗಿಂತಲೂ ತೆಳ್ಳಗಿದ್ದ ಸಾರಿನಲ್ಲಿ ಇಡ್ಲಿಯ ಚೂರುಗಳನ್ನು ಮುಳುಗಿಸಿ ಎತ್ತಿ ಬಾಯಿಗೆಸೆದುಕೊಂಡು ಅಗಿಯದೇ ನುಂಗಿ ಬೆಳಗಿನ ತಿಂಡಿ ಮುಗಿಸಿದ್ದೆವು. ಅಲ್ಲಿಂದ ಬೆಟ್ಟದ ಬುಡದವರೆಗೆ ಒಂದು ಕಾರು. ನಂತರ ಒಂದೇ ಸಮನೆ ಆರೋಹಣ.

ಕರ್ನಾಟಕದ ಅತ್ಯಂತ ದುರ್ಗಮ ಚಾರಣದ ಹಾದಿಯೂ ಮತ್ತು ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರವೂ ಆಗಿರುವ ಕುಮಾರ ಪರ್ವತವನ್ನು ಹತ್ತಲಿಕ್ಕೆ ಎರಡು ದಾರಿಗಳಿವೆ. ಒಂದು, ಸೋಮವಾರಪೇಟೆಯಿಂದ ಶುರುವಾಗುವುದು. ಇನ್ನೊಂದು, ಸುಬ್ರಹ್ಮಣ್ಯದಿಂದ ಶುರುವಾಗುವುದು. ನಾವು ಸೋಮವಾರಪೇಟೆಯಿಂದ ಹತ್ತಿ ಸುಬ್ರಹ್ಮಣ್ಯದಲ್ಲಿ ಇಳಿಯುವ ಯೋಜನೆ ಹಾಕಿಕೊಂಡಿದ್ದೆವು. ಬೆಟ್ಟ ಹತ್ತಲಿಕ್ಕೆ ಮುಂಚೆ ಅರಣ್ಯ ಮಂಡಲಿಯವರದೊಂದು ಆಫೀಸಿದೆ. ಅಲ್ಲಿ ಒಂದು ಡಿಕ್ಲರೇಶನ್ ಬರೆದುಕೊಡಬೇಕು. ಪ್ರತಿ ಚಾರಣಿಗನಿಗೆ ೧೧೫ ರೂಪಾಯಿ ಫೀಸು. ಸುಮಾರು ಮುಕ್ಕಾಲು ಬೆಟ್ಟ ಹತ್ತುವವರೆಗೆ ಬೆಟ್ಟವೇ ಕಾಣುವುದಿಲ್ಲ. ಸುಮ್ಮನೆ ಕಾಡ ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವುದು: ಹಕ್ಕಿ ಹಾಡು ಕೇಳುತ್ತಾ. ತುಂಬಾ ಕಡಿದಾಗಿಯೂ ಇಲ್ಲದ, ಅಲ್ಲಲ್ಲಿ ಏರು ಅಲ್ಲಲ್ಲಿ ಇಳುಕಲಿನ ದಾರಿ: ನಾವು ಬೆಟ್ಟವನ್ನೇ ಹತ್ತುತ್ತಿದ್ದೇವೋ ಇಲ್ಲಾ ತಪ್ಪು ದಾರಿ ಹಿಡಿದು ಯಾವುದೋ ಊರ ಕಡೆ ಹೋಗುತ್ತಿದ್ದೇವೋ ಎಂದು ಅನುಮಾನ ಬರುವಂತೆ. ನಾವು ಅಲ್ಲಲ್ಲಿ ನಿಂತು ನೀರು ಕುಡಿಯುತ್ತಾ, ಫೋಟೋ ತೆಗೆಸಿಕೊಳ್ಳುತ್ತಾ, ಕತೆ ಹೇಳುತ್ತಾ, ಚೆರ್ರಿ ಹಣ್ಣು ತಿನ್ನುತ್ತಾ ನಡೆಯುತ್ತಿದ್ದೆವು. ಯಾರಿಗೂ ಸುಸ್ತೇನು ಆದಂತೆ ಕಾಣುತ್ತಿರಲಿಲ್ಲ. ಮಧ್ಯೆ ಮಧ್ಯೆ ಸುಮಾರು ಜನ ಬೆಟ್ಟ ಇಳಿಯುತ್ತಿದ್ದವರು ಸಿಗುತ್ತಿದ್ದರು. ಅವರ ಬಳಿ 'ಇನ್ನೆಷ್ಟು ದೂರ?' ಅಂತ ಕೇಳುವುದು. ಅವರು 'ಇನ್ನೂ ಒಂದು-ಒಂದೂ ವರೆ ತಾಸು ಬೇಕು ತುದಿ ಮುಟ್ಟಲಿಕ್ಕೆ' ಎನ್ನುವುದು. ನಂತರ ಅವರು ನಮ್ಮ ಬಳಿ 'ಕೆಳಗಿಳಿಯಲಿಕ್ಕೆ ಇನ್ನೂ ಎಷ್ಟು ದೂರ?' ಅಂತ ಕೇಳುವುದು. ನಾವು 'ಇನ್ನೂ ಎರಡು ತಾಸು ಬೇಕು' ಎನ್ನುವುದು. ಮಧ್ಯೆ ಎರಡ್ಮೂರು ದೊಡ್ಡ ಬಂಡೆಗಳಿವೆ. ಹತ್ತಬೇಕಾದರೆ ಸ್ವಲ್ಪ ಹುಷಾರಾಗಿರಬೇಕು. ಉಳಿದಂತೆ ಕುಮಾರ ಪರ್ವತವನ್ನು ಸೋಮವಾರಪೇಟೆಯ ಕಡೆಯಿಂದ ಹತ್ತುವುದು ಕಷ್ಟದ ವಿಷಯವೇನಲ್ಲ.

ನಾವು ಶೃಂಗವನ್ನು ಮುಟ್ಟಿದಾಗ ಮಧ್ಯಾಹ್ನ ಒಂದೂ ವರೆ. ಸುಡು ಬಿಸಿಲು. ಬಿಸಿ ಗಾಳಿ. ಅಲ್ಲಲ್ಲಿ ಟೆಂಟು ಹಾಕಿ ಅಡುಗೆ ಮಾಡಿಕೊಳ್ಳುತ್ತಿದ್ದ ಗುಂಪುಗಳು. ನಾವೂ ಅಲ್ಲೇ ಒಂದು ಕಡೆ ತಂಪಲು ಅರಸಿ ಕೂತು, ಕಟ್ಟಿಕೊಂಡು ಹೋಗಿದ್ದ ಚಪಾತಿ ತಿಂದು ಮುಗಿಸಿದೆವು. ಕತ್ತಲಾಗುವುದರೊಳಗೆ ಕೆಳಗಿಳಿಯಲೇಬೇಕಿದ್ದರಿಂದ, ಹೆಚ್ಚು ಹೊತ್ತು ಅಲ್ಲಿ ನಿಲ್ಲದೆ ಅವರೋಹಣವನ್ನು ಶುರುಮಾಡಿಯೇ ಬಿಟ್ಟೆವು. ಶೃಂಗದಿಂದ ಸ್ವಲ್ಪ ಇಳಿದ ಮೇಲೆ ಎಡಕ್ಕೊಮ್ಮೆ ತಿರುಗಿ ನೋಡಬೇಕು. ಅಲ್ಲಿಂದ ಕಾಣುತ್ತದೆ ಕುಮಾರ ಪರ್ವತದ ರುದ್ರ ರಮಣೀಯ ದೃಶ್ಯ... ಇದೇ ಬೆಟ್ಟವನ್ನಾ ನಾವು ಹತ್ತಿ ಬಂದಿದ್ದು ಎನಿಸುವಂತೆ ದಂಗುಬಡಿಸುವ ದೃಶ್ಯ. ತೇಜಸ್ವಿಯವರ ಕರ್ವಾಲೊ ಕಾದಂಬರಿಯ ಕೊನೆಯ ಅಧ್ಯಾಯವನ್ನು ಸಟ್ಟನೆ ನೆನಪಿಸುವಂತಹ ದೃಶ್ಯ. ಇಲ್ಲೇ, ಹೀಗೇ, ಆ ಓತಿ ತನ್ನ ರೆಕ್ಕೆಗಳನ್ನು ಪವಾಡದಂತೆ ಬಿಚ್ಚಿ ದಿಗಂತದತ್ತ ಸ್ವಚ್ಚಂದ ಪಯಣ ಹೋದದ್ದು.. ಇದೇ, ಇಲ್ಲೇ, ಕರ್ವಾಲೊ, ತೇಜಸ್ವಿ, ಕರಿಯಪ್ಪ, ಮಂದಣ್ಣ, ಯೆಂಗ್ಟ, ಕಿವಿ... ದಿಗ್ಭ್ರಮೆಗೊಂಡು ಶೂನ್ಯದತ್ತ ನೋಡಿದ್ದುದು.. ಕುಮಾರ ಪರ್ವತವನ್ನು ಹತ್ತಿದ್ದು ಸಾರ್ಥಕವಾಯ್ತೆಂದೆನಿಸುತ್ತದೆ ಇಲ್ಲಿಗೆ ಬಂದಾಗ. ಅದನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವೇ ಇಲ್ಲ.

ಭಟ್ಟರ ಜೊತೆ ಮಾತಾಡುತ್ತಲೇ ಯೋಚಿಸುತ್ತಿದ್ದ ನನಗೆ ಹಳೆಯದೆಲ್ಲ ತುಂಬಾ ಆಪ್ಯಾಯಮಾನವಾಗಿ ಕಾಣತೊಡಗಿದ್ದವು. ಭಟ್ಟರ ಹೆಂಡತಿ ಊಟಕ್ಕೆ ಕರೆದರು. ನಾನೂ ಭಟ್ಟರೂ ಒಳಹೋದೆವು. "ಇವಳು ನನ್ನ ಮಗಳು. ಶ್ಯಾಮಲಾ ಅಂತ. ಫಸ್ಟ್ ಇಯರ್ ಡಿಗ್ರೀ. ಮಂಗಳೂರಿನಲ್ಲಿ ಹಾಸ್ಟೆಲ್ಲಿನಲ್ಲಿ ಇದ್ಕಂಡು ಓದ್ತಾ ಇದ್ದು.." ಭಟ್ಟರು ಕೈಸಾಲೆಯ ಮೂಲೆಯಲ್ಲಿ ಕೂತಿದ್ದ ಹುಡುಗಿಯನ್ನು ಪರಿಚಯಿಸಿಕೊಟ್ಟರು. ಹುಡುಗಿ ನನ್ನೆಡೆಗೆ ನೋಡಿ ಮುಗುಳ್ನಕ್ಕಳು. "ಡಿಗ್ರಿ, ಯಾವುದ್ರಲ್ಲಿ?" ನಾನು ಕೇಳಿದೆ. "ಬಿಎಸ್ಸಿ" ಅವಳೆಂದಳು. ನಾನು ಭಟ್ಟರ ಹಿಂದೆ ಅಡುಗೆ ಮನೆಗೆ ಹೋದೆ. ನಮ್ಮಿಬ್ಬರಿಗೂ ಅಡುಗೆಮನೆಯಲ್ಲೇ ಬಾಳೆ ಹಾಕಿದ ಭಟ್ಟರ ಹೆಂಡತಿ, ಮಗಳಿಗೆ ಕೈಸಾಲೆಯ ಮೂಲೆಯಲ್ಲೇ ಬಾಳೆ ಹಾಕಿದರು. ಇದೇನು ಹೀಗೆ ಅಂತ ನಾನು ಯೋಚಿಸುತ್ತಿರುವಾಗಲೇ "ಅವ್ಳು ಒಳಗೆ ಬರೂಹಂಗಿಲ್ಲೆ ಇವತ್ತು.. ಹಹ್ಹ!" ಎಂದರು ಭಟ್ಟರ ಹೆಂಡತಿ. ಹುಡುಗಿ ಸಿಟ್ಟು ಮಾಡಿಕೊಂಡವಳಂತೆ ಅಮ್ಮನೆಡೆಗೆ ಒಮ್ಮೆ ಬಿರುಗಣ್ಣು ಬಿಟ್ಟು ತಲೆತಗ್ಗಿಸಿ ಅನ್ನ ಕಲಸತೊಡಗಿದಳು. "ನಿಧಾನ ಊಟ ಮಾಡು" ಎಂದರು ನನ್ನ ಬಳಿ ಭಟ್ಟರ ಹೆಂಡತಿ. ಶ್ಯಾಮಲಾಳ ಮುಗುಳ್ನಗೆ, ಬಿರುಗಣ್ಣು, ನೆಲ್ಲಿಕಾಯಿ ಹಿಡಿದಿದ್ದ ಚಿಗುರು ಬೆರಳುಗಳು ನನಗೆ ಬಾಳೆ ಎಲೆಯ ಮೇಲೆಲ್ಲ ಕಾಣಿಸಿ ಕಾಡತೊಡಗಿದ್ದರಿಂದ ಊಟ ತನ್ನಿಂತಾನೇ ನಿಧಾನವಾಗಿತ್ತು.

"ಕವಳ ಹಾಕ್ತೀಯೇನು?" ಭಟ್ಟರು ತಬಕನ್ನು ನನ್ನ ಮುಂದೆ ದೂಡಿದರು. ನಾನು ಬರೀ ಎರಡು ಅಡಿಕೆಯ ಹೋಳುಗಳನ್ನು ಬಾಯಿಗೆಸೆದುಕೊಂಡೆ. "ಸುಸ್ತಾಯ್ದು ನಿಂಗೆ. ಮೆತ್ತಿನ ಮೇಲೆ ಹಾಸಿಗೆ ಹಾಸ್ತಿ. ಮಲಗೂವಂತೆ" ಭಟ್ಟರು ಬಾಯೊಳಗಿನ ಕವಳದ ರಸವನ್ನು ಕುಲುಕಿಸುತ್ತ ಒಳನಡೆದರು. ನನಗೆ ಕಣ್ಣು ಎಳೆಯುತ್ತಿದ್ದವು.

ಅಷ್ಟೊತ್ತಿಗೆ ಕರೆಂಟು ಹೋಯಿತು! ಭಟ್ಟರ ಹೆಂಡತಿ ಇನ್ನೂ ಊಟ ಮಾಡುತ್ತಿದ್ದರು ಅನ್ನಿಸೊತ್ತೆ. "ಥೋ! ಕರೆಂಟ್ ಹೋಯ್ತಲ್ಲಪ್ಪ.. ಹೋಯ್, ಒಂಚೂರು ಲಾಟೀನ್ ಹಚ್ಚಿ ಬನ್ನಿ.." ಗಂಡನನ್ನು ಕೂಗಿದರು. ಭಟ್ಟರು ನನ್ನ ಹಾಸಿಗೆ ತಯಾರು ಮಾಡುವುದಕ್ಕೆ ಮಹಡಿಯ ಮೇಲಿದ್ದರು. ಅವರು ಮೆಟ್ಟಿಲಿಳಿದು ಬರುವುದಕ್ಕೆ ಸಮಯವಾಗಬಹುದೆಂದು ಬಗೆದು ನಾನೇ ಎದ್ದು, "ಎಲ್ಲಿದ್ದು ಅಕ್ಕಾ ಲಾಟೀನು..? ನಾನೇ ಹಚ್ತಿ.." ಎನ್ನುತ್ತಾ, ತಡಕಾಡುತ್ತಾ ಒಳಮನೆ ದಾಟಿ, ಅಡುಗೆ ಮನೆ ಇಲ್ಲೇ ಇರಬೇಕೆಂದು ಕೈಸಾಲೆ ಬಳಿ ಅತ್ತಿತ್ತ ಕೈಚಾಚುತ್ತಾ ಹುಡುಕಾಡುತ್ತಿರಬೇಕಾದರೆ, ಯಾರಿಗೋ ಕೈ ತಾಕಿದಂತಾಗಿ, ಅವರು ಸರಕ್ಕನೆ ಅತ್ತ ಸರಿದು, ಅದು ಯಾರೆಂದು ಕ್ಷಣದಲ್ಲಿ ಮೆದುಳಿಗೆ ಗೊತ್ತಾಗಿ, ಮೈಯಲ್ಲಿ ರೋಮಾಂಚನವಾಗಿ, ಕತ್ತಲಲ್ಲದು ಯಾರಿಗೂ ತಿಳಿಯದೇ ಹೋಗಿ, ನಾನು "ಎಲ್ಲಿದೆ ಲಾಟೀನು?" ಎಂದು ಮತ್ತೊಮ್ಮೆ ಕೇಳುವಷ್ಟರಲ್ಲಿ ಕರೆಂಟೇ ಬಂದುಬಿಟ್ಟಿತು. "ಹಾಳು ಕರೆಂಟು.. ಒಂದು ನಿಮಿಷಕ್ಕೆ ಹೋಗ್ತು, ಮತ್ತೊಂದು ನಿಮಿಷಕ್ಕೆ ಬರ್ತು!" ಗೊಣಗಿದರು ಭಟ್ಟರ ಹೆಂಡತಿ. ಸ್ಪರ್ಶವನ್ನಷ್ಟೇ ನನ್ನ ಕೈಗೆ ದಾಟಿಸಿದ ಆ ಚಿಟ್ಟೆ ಹಾರಿ ಆಗಲೇ ಕೈಸಾಲೆಯ ಮೂಲೆ ಸೇರಿತ್ತು. ನಾನು ಒಂದು ನಿಮಿಷ ಅಡುಗೆಮನೆಯ ಬಾಗಿಲಲ್ಲಿ ನಿಂತಿದ್ದು, ನಂತರ ಸೀದಾ ಮೆತ್ತಿಗೆ ಹೋಗಿ, ಭಟ್ಟರು ಹಾಸಿಕೊಟ್ಟ ಹಾಸಿಗೆಯಲ್ಲಿ ಪವಡಿಸಿಬಿಟ್ಟೆ: ಅಷ್ಟೆಲ್ಲ ಸುಸ್ತಾಗಿದ್ದರೂ ನಿದ್ರೆ ಬರದಿರುವಂತೆ ಮಾಡಿದ ಆ ಚಿಟ್ಟೆಯ ಸ್ಪರ್ಶಕ್ಕೆ ಮನಸಿನಲ್ಲೇ ಶಾಪ ಹಾಕುತ್ತಾ.

ಬೆಳಗ್ಗೆ ಭಟ್ಟರ ಮನೆಯಲ್ಲಿ ದೋಸೆ ತಿಂದು, ಊರಿಗೆ ಹೋದಾಗ ಶೆಡ್ತಿಕೆರೆಗೆ-ನಮ್ಮ ಮನೆಗೆ ಹೋಗಿಬರುವಂತೆ ಭಟ್ಟರ ಹೆಂಡತಿಗೆ ಹೇಳಿ, ನನ್ನ ಸ್ಪೋರ್ಟ್ಸ್ ಶೂಗೆ ಲೇಸ್ ಬಿಗಿಯುತ್ತಿದ್ದಾಗ, ಚಿಟ್ಟೆ ಶ್ಯಾಮಲಾ ಒಳಮನೆಯ ಬಾಗಿಲ ಹಿಂದೆ ನಿಂತಿದ್ದಳು. ಆಗತಾನೆ ಮಿಂದು ಬಂದಿದ್ದ ಅವಳ ಹೆರಳು ವಾಸ್ತುಬಾಗಿಲಿಗೆ ಇಳಿಬಿಟ್ಟ ತೋರಣವಾಗಿತ್ತು. ಜಿಂಕೆ ಕಣ್ಣು ಕಳ್ಳ ಕಣ್ಣಾಗಿದ್ದವು. "ಮತ್ತೆ ಸಿಗೋಣ?" ಮುಗುಳ್ನಗುತ್ತಾ ನಾನು ಕೈ ಚಾಚಿದೆ: ಇನ್ನು ಸಿಗುತ್ತದೋ ಇಲ್ಲವೋ ಎಂಬ ಸ್ಪರ್ಶ ಇದೊಮ್ಮೆ ದೊರಕಿಬಿಡಲಿ ಎಂಬಾಸೆಯಿಂದ. ಮೃದು ಬೆರಳುಗಳು ನನ್ನ ಹಸ್ತದೊಳಗೆ ಅರೆಕ್ಷಣವಿದ್ದು ಮರೆಯಲಾಗದಂತಹ ಬೆಚ್ಚನೆ ರಹಸ್ಯಕ್ಕೆ ಒಪ್ಪಂದವೆಂಬಂತೆ ಲಾಘವ ಮಾಡಿಕೊಂಡವು.

ಚುರುಕು ಬಿಸಿಲಲ್ಲಿ ಬೆಟ್ಟ ಇಳಿಯುವಾಗ ಹಿಂದಿನ ಬಾರಿ ಇಳಿದ ಘೋರ ನೆನಪುಗಳು.. 'ಕರ್ವಾಲೋ ಪಾಯಿಂಟಿ'ನಿಂದ ಒಂದೇ ಸಮನೆ ಇಳಿಜಾರು. ಇಳಿ ಇಳಿ ಇಳಿ. ಒತ್ತುವ ಕಲ್ಲುಗಳು. ಜಾರಿದರೆ ಪ್ರಪಾತ. ಸುಮಾರು ಒಂದು ತಾಸು ಇಳಿದ ಮೇಲೆ ಕಾಣಿಸತೊಡಗುವ ಭಟ್ಟರ ಮನೆ. ಅದೇ ಭಟ್ಟರ ಮನೆಯಾ ಎಂಬ ಅನುಮಾನ. ಇಳಿದು ಇಳಿದು ಇಳಿದು... ಕಾಲುಗಳಿಗೆ ಕೆಳಕೆಳಗೆ ಹೆಜ್ಜೆಯಿಡುವುದೊಂದು ಯಾಂತ್ರಿಕ ಕ್ರಿಯೆಯಂತಾಗಿ, ನಮಗಿನ್ನು ಸಮತಟ್ಟು ನೆಲದಲ್ಲಿ ನಡೆಯಲಿಕ್ಕೇ ಬರುವುದಿಲ್ಲವೇನೋ ಎಂದು ಭಯ ಹುಟ್ಟಿ... ಇನ್ನೇನು ಬಂದೇ ಬಿಟ್ಟಿತು ಎಂಬಂತೆ ತೋರಿದರೂ ಮತ್ತೆ ದೂರ ದೂರ ಹೋಗುವ 'ಭಟ್ಟರ ಮನೆ' ಎಂಬ ಮರೀಚಿಕೆ... ಭಟ್ಟರ ಮನೆಗಿಂತಲೂ ಮುಂಚೆ ಅರಣ್ಯ ಇಲಾಖೆಯವರ ಕಛೇರಿ. ಸುಸ್ತಾಗಿದ್ದ ನಾವೆಲ್ಲ ಅಲ್ಲೇ ಉಳಿದಿದ್ದ ತಿಂಡಿ ತಿಂದು, 'ಇಲ್ಲಿಂದ ದಾರಿ ಚೆನ್ನಾಗಿದೆ.. ಎರಡು ತಾಸಿನಲ್ಲಿ ಸುಬ್ರಹ್ಮಣ್ಯ ಮುಟ್ಟಬಹುದು' ಎಂಬ ಫಾರೆಸ್ಟರಿನ ಮಾತು ನಂಬಿ, ಭಟ್ಟರ ಮನೆಯಲ್ಲಿ ಅರ್ಧ ತಾಸು ರೆಸ್ಟ್ ತಗೊಂಡು ಹೋಗಬೇಕೆಂದಿದ್ದ ನಮ್ಮ ಯೋಜನೆಯನ್ನು ರದ್ದು ಮಾಡಿ, ದಢದಢನೆ ಇಳಿಯತೊಡಗಿದ್ದು. ಕತ್ತಲು.. ಕಾಡು.. ಕಲ್ಲು.. ಜೀವ ಹೋಗುವಂತೆ ನೋಯುತ್ತಿದ್ದ ಕಾಲು.. ಸುಸ್ತು.. ಆನೆ ಭಯ..

ಈಗ ಯೋಚಿಸಿದರೂ ಭಯವಾಗುತ್ತದೆ.. ಅಂಥದ್ದೊಂದು ದುಸ್ಸಾಹಸಕ್ಕೆ ಮುಂದಾಗಿದ್ದ ನಮ್ಮ ಹುಂಬತನದ ಬಗ್ಗೆ.. ಆದರೆ ಜೀವನದ ಅತ್ಯದ್ಭುತ ಚಾರಣಾನುಭವವನ್ನು ಕಲ್ಪಿಸಿದ ಆ ದಿನದ ಬಗ್ಗೆ ಖುಷಿಯಿದೆ. ಮಾಡಿದ ಸಾಹಸದ ಬಗ್ಗೆ ಏನೋ ಹೆಮ್ಮೆಯಿದೆ.

ಚಿಟ್ಟೆ ಸ್ಪರ್ಶದ ಗುಂಗಿನಲ್ಲಿ ನಾನು ಸುಮ್ಮನೆ ಇಳಿಯುತ್ತೇನೆ.. ದೂರದಲ್ಲಿ ಸುಬ್ರಹ್ಮಣ್ಯದ ದೇವಸ್ಥಾನದ ಘಂಟೆಯ ಶಬ್ದ ಕೇಳಿಸುತ್ತದೆ.. ಇನ್ನೇನು ಸ್ವಲ್ಪ ದೂರ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ.. ಕಾಡ ನೆರಳು, ಇಣುಕು ಬಿಸಿಲು, ಹಕ್ಕಿ ಕುಕಿಲು, ನೆನಪ ಹೊನಲು... ಕುಮಾರ ಪರ್ವತದ ಎತ್ತರಕ್ಕೆ ಶರಣು.

Tuesday, March 13, 2007

ಸಿದ್ದರ ಬೆಟ್ಟದ ಮೇಲೆ ಸಿದ್ದರು



ರಾಷ್ಠ್ರೀಯ ಹೆದ್ದಾರಿ ಸಂಖ್ಯೆ ನಾಲ್ಕರಲ್ಲಿ ಆ ಏಳೂ ಬೈಕುಗಳು ರೊಂಯ್ಯರೊಂಯನೆ ಸಾಗುತ್ತಿದ್ದವು. ಭಾನುವಾರ ಬೆಳಗ್ಗೆ ಎಂಟು ಗಂಟೆಗೆ ಬೆಂಗಳೂರಿನ ನವರಂಗ್ ಬಳಿಯಿಂದ ಶುರುವಾಗಿದ್ದ ಅವುಗಳ ಪಯಣ ತುಮಕೂರು ಬೈಪಾಸ್ ರಸ್ತೆಯಲ್ಲಿ ಸಾಗಿ ಅಲ್ಲೆಲ್ಲೋ ರೈಟಿಗೆ ತಗೊಂಡು ಮುಂದೆಲ್ಲೋ ಲೆಫ್ಟಿಗೆ ತಗೊಂಡು ಸಾಗಿ ಸಾಗಿ ಸಿದ್ದರ ಬೆಟ್ಟದ ತಪ್ಪಲಿಗೆ ಬಂದು ಮುಟ್ಟಿದಾಗ ಸೂರ್ಯನಿಗೆ ಹನ್ನೊಂದರ ಚಹ ಸಹ ಆಗಿಹೋಗಿತ್ತು. ಈ ಬೆಂಕಿ ಬಿಸಿಲಿನಲ್ಲಿ ಬೆಟ್ಟ ಹತ್ತಲೆಂದು ಬಂದ ಹದಿನಾಲ್ಕು ಜನ ಸಿದ್ದರನ್ನು ಅವನು ತನ್ನ ಉರಿಗಣ್ಣಿನಿಂದ ನೋಡಿದ. ಅವನಿಗೆ ಗುರುತು ಸಿಕ್ಕಿತು. ಆ ಸಿದ್ದರಲ್ಲೇ ಒಬ್ಬನನ್ನು ಕೇಳಿದ: 'ಶಿವನ ಸಮುದ್ರಕ್ಕೆ ಬಂದಿದ್ರಲ್ಲ, ನೀವೇನಾ?' ಸಿದ್ದ ಉತ್ತರಿಸಿದ: 'ಹೌದು.' 'ಮತ್ತೆ ಸಾವನದುರ್ಗಕ್ಕೆ?' 'ನಾವೇ!' 'ಓಹೋ! ಗೊತ್ತಾಯ್ತು ಬಿಡಿ, ನೀವು ಆರ್ಕುಟ್ ಹವ್ಯಕ ಗ್ರೂಪಿನವರು!' ಇವನಿಗೆ ಖುಷಿಯಾಯಿತು 'ಹಾಂ, ಹೌದು ಹೌದು!' 'ಸರಿ, ಒಳ್ಳೆಯದಾಗಲಿ, ಹತ್ತಿ ಬೆಟ್ಟ' ಅಂತಂದು ಸೂರ್ಯ ತನ್ನ ಬಿಸಿಲು ಸೂಸುವಿಕೆಯನ್ನು ಮುಂದುವರೆಸಿದ. ಅವನು ವಿಶ್ವಾಸ ತೋರಿಸಿದ್ದು ನೋಡಿ ಬಿಸಿಲು ಕಮ್ಮಿ ಮಾಡಬಹುದೇನೋ ಅಂದುಕೊಂಡಿದ್ದ ಸಿದ್ದರಿಗೆ ನಿರಾಶೆಯಾಯಿತು. ಅವರ ನಿರಾಶೆ ಸೂರ್ಯನಿಗೂ ಅರ್ಥವಾಗಿರಬೇಕು. ಅವನೆಂದ: 'ಏನ್ಮಾಡ್ಲಿ ಫ್ರೆಂಡ್ಸ್? ನಾನು ತಂಪಾಗಬೇಕಿದ್ದರೆ ಮೋಡ ಬರಬೇಕು. ಅವಳಿಲ್ಲದಿದ್ದರೆ ನಾನು ಹೆಲ್ಪ್‍ಲೆಸ್. ಮೋಡ ಇದ್ದಿದ್ದರೆ ನಾನು ಅವಳ ಸೀರೆ ಸೆರಗಿನಡಿ ಮರೆಯಾಗಿ ನಿಮಗೆ ತಂಪನ್ನೀಯುತ್ತಿದ್ದೆ. ಹ್ಮ್, ನಿಮ್ಮ ಬ್ಯಾಡ್‍ಲಕ್!'



ಸರಿ, ಸಿದ್ದರು ಬೆವರು ಒರೆಸಿಕೊಳ್ಳುತ್ತಾ ಬೆಟ್ಟ ಹತ್ತತೊಡಗಿದರು. ನೀರು ಕುಡಿದರು, ಗ್ಲುಕೋಸ್ ತಿಂದರು, ಬಟ್ಟೆ ಬಿಚ್ಚಿ ಬರೀ ಬನಿಯನ್ನು-ಚಡ್ಡಿಯಲ್ಲಿ ನಡೆಯತೊಡಗಿದರು... ಓಹ್! ಇದೆಂಥಾ ಬೆಟ್ಟ! ಇದ್ಯಾಕೆ ಇಷ್ಟೆತ್ತರ ಬೆಳೆದು ನಿಂತಿದೆ? ಇದಕ್ಕೆ ಮೆಟ್ಟಿಲುಗಳನ್ನು ಕೊರೆದವರು ಯಾರು? ಇಗೋ ಇಲ್ಲಿ ಬೆಳೆದು ನಿಂತಿರುವ ಪುಟ್ಟ ಗಿಡ, ಇದ್ಯಾವ ಬೀಜದ ಫಲ? ನಾವು ಈ ಬೆಟ್ಟವನ್ನು ಇಷ್ಟು ಕಷ್ಟಪಟ್ಟು ಹತ್ತಿ ಬರುತ್ತಿರುವುದು ದೊಡ್ಡದೋ ಅಥವಾ ಈ ಬೀಜ ಬಲಿತು ಗಿಡವಾಗಲು ಪಟ್ಟ ಪರಿಶ್ರಮ ದೊಡ್ಡದೋ? ಸಿದ್ದರಿಗೊಂದೂ ಅರ್ಥವಾಗುತ್ತಿಲ್ಲ... ಯಾರೋ ಜೋಕು ಮಾಡುತ್ತಿದ್ದಾರೆ, ಮತ್ಯಾರೋ ಸುಸ್ತಾಗಿ ಅರ್ಧದಾರಿಯಲ್ಲೇ ಕುಳಿತಿದ್ದಾರೆ, ಇನ್ಯಾರೋ ಫೋಟೋ ತೆಗೆಯುತ್ತಿದ್ದಾರೆ... ಹತ್ತುತ್ತಾ ಹತ್ತುತ್ತಾ ಗುಹೆಯ ಬಾಗಿಲಿಗೆ ಬಂದು ಮುಟ್ಟಿದ್ದಾರೆ.



ಗುಹೆಗಳೊಳಗೆ ದಾರಿ ತಪ್ಪದಂತೆ ಕರೆದೊಯ್ಯಲು ಒಬ್ಬ ಗೈಡ್ ಮುಂದೆ ಬಂದ. ಸಿದ್ದರು ಅವನ ಹಿಂದ್‍ಹಿಂದೆ ಹೊರಟರು. ಗುಹೆಯೊಳಗೆ ಕಾಲಿಡುತ್ತಿದ್ದಂತೆಯೆ ಎಂಥಾ ತಂಪು! ಮಾಡು ಮುಚ್ಚಿದ ಮನೆಯಂತೆ! ಒಳಒಳಗೆ ಹೋಗುತ್ತಿದ್ದಂತೆ ಕಗ್ಗತ್ತಲು. 'ಏಯ್ ಬ್ಯಾಟ್ರಿ ಯಾರ ಹತ್ರ ಇದ್ರೋ?' 'ನನ್ ಹತ್ರ ಇದ್ದು. ತಡಿ, ಬಂದಿ..' 'ಹುಷಾರಿ, ನಿಧಾನ..' 'ಗಿರೀ, ನೀನು ಈ ಕಿಂಡಿ ಒಳಗೆ ತೂರೋದು ಡೌಟು!' ....ಇತ್ಯಾದಿ ಮಾತುಗಳು ಅಲ್ಲಿ ಸಣ್ಣಕೆ ಪ್ರತಿಧ್ವನಿಸುತ್ತಿದ್ದವು. ಜೊತೆಗೆ ಬಂದಿದ್ದ ಗೈಡ್ ಬಾಟಲಿಗಳಲ್ಲಿ ನೀರು ತುಂಬಿಸಿಕೊಟ್ಟ. ಆ ನೀರು ತಣ್ಣಗಿತ್ತೂ ತಣ್ಣಗಿತ್ತೂ, ಫ್ರಿಜ್ ವಾಟರ್‌ಗಿಂತ ತಣ್ಣಗಿತ್ತು. ಕುಡಿದರೆ ಆರಿದ್ದ ಗಂಟಲಿಗೆ ನೀರಿನ ತಂಪು ತಾಗಿ ಮೈಯೆಲ್ಲಾ ರೋಮಾಂಚನ. ಆ ನೀರಿನ ಗುಟುಕು ಗಂಟಲಿನಿಂದ ಕೆಳಗಿಳಿದು ಅನ್ನನಾಳದ ಮೂಲಕ ಜಟರವೆಂಬ ಗುಹೆಯೊಳಗೆ ಬಿದ್ದಾಗ ಎದ್ದ ಸಣ್ಣ ಶಬ್ದ ಪ್ರತಿಧ್ವನಿಸಲೇ ಇಲ್ಲ.



ಕಿಂಡಿಯಿಂದ ಕಾಣುತ್ತಿದ್ದ ಬೆಳಕು. ಜಾಗ ಸಿಕ್ಕಲ್ಲೆಲ್ಲ ತೂರಿಬರುತ್ತಿದ್ದ ಸೂರ್ಯರಶ್ಮಿ. ಸಣ್ಣ ಬಂಡೆಯ ಮೇಲೆ ದೊಡ್ಡ ಬಂಡೆ. ದೊಡ್ಡ ಬಂಡೆಯ ಮೇಲೆ ಸಣ್ಣ ಬಂಡೆ. ಬಂಡೆಯ ಮೇಲೆ ಬಂಡೆ. ಈ ಬಂಡೆಗಳು ಹೀಗ್ಯಾಕೆ ರಚಿತವಾಗಿವೆ? ಮಧ್ಯದಲ್ಲೊಂದು 'ಗ್ಯಾಪ್' ಬಿಟ್ಟಿದ್ಯಾಕೆ? ಆ ಗ್ಯಾಪನ್ನು ಒಂದು ಪುಟ್ಟ ಬಂಡೆ ಮುಚ್ಚಿದ್ದರೂ ಇದು ಗುಹೆಯಾಗುತ್ತಿರಲಿಲ್ಲ. ತೆರೆದಿದ್ದರೆ ಮಾತ್ರ ಅದು ಗುಹೆ. ಒಳಗೆ ತೂರಲು ಬರುವಂತಿದ್ದರೆ ಮಾತ್ರ ಅದು ಗುಹೆ. ಸಿದ್ದರು ಗುಹೆಯ ಒಳಒಳಗೆ ನಡೆದರು.



ಯಾವ ಬಂಡೆಯ ಯಾವ ಪದರದಲ್ಲಿ ಒಡೆದ ಜಲವೋ ಏನೋ, ಇಲ್ಲಿ ನೀರಾಗಿ ಚಿಮ್ಮುತ್ತಿದೆ. ಒಂದು ಪುಟ್ಟ ಬಾವಿ. ಬರುವ ಯಾತ್ರಿಕರ ಬಾಯಾರಿಕೆಯನ್ನೆಲ್ಲಾ ನೀಗುತ್ತಿದೆ. ಗುಹೆಯ ಒಳಗೆ ಒಂದು ಗುಡಿ. ಗುರುತು ಸಿಗದ ಕಲ್ಲು ದೇವರು. ಅಲ್ಲಲ್ಲಿ ಚೆಲ್ಲಿದ ಕುಂಕುಮ. ಕಗ್ಗತ್ತಿಲಿನಷ್ಟೇ ಕಪ್ಪಗಿನ ಅರ್ಚಕನೊಬ್ಬ ಬೆಳಗುತ್ತಿರುವ ಮಂಗಳಾರತಿ. ಗಂಟೆಯ ಶಬ್ದ. ದಾಟಿ ಹೊರಬಂದರೆ ಅಲ್ಲೊಂದು ಮನೆ. ಗುಹೆಯೊಳಗೊಂದು ಮನೆ. ಇಹ-ಪರಗಳ ಕಲ್ಪನೆಯೇ ಬಾರದಂತಹ, ಹೊರಜಗತ್ತಿನ ಗಾಳಿ-ಗಂಧವೊಂದೂ ಸುಳಿಯದ, ಸೂರ್ಯನ ಬೆಳಕೂ ಫಿಲ್ಟರ್ ಆಗಿ ಬರುವ ಈ ಜಾಗದಲ್ಲಿ ಒಂದು ಮನೆ. ಆಹಾ! ಕವಿಕಲ್ಪನೆಯಲ್ಲೂ ಮೂಡಲಾರದಂತಹ ಜಾಗ! ಎಷ್ಟಿರಬಹುದು ಇಲ್ಲಿ ಒಂದು ಸೈಟಿಗೆ? ಕೊಟ್ಟಿದ್ದರೆ ನಾವೂ ಇಲ್ಲೇ ಇರಬಹುದಾಗಿತ್ತಲ್ಲ? ಯಾಕೆ ಬೇಕು ಆ ಹಾಳು ಬೆಂಗಳೂರು? ಯಾಕೆ ಬೇಕು ಆ ಕಂಪ್ಯೂಟರು, ಇಂಟರ್ನೆಟ್ಟು, ಟಾರ್ಗೆಟ್ಟು, ಪ್ಯಾಕೇಜು? ಹೀಗೇ, ಇಲ್ಲೇ, ಇದ್ದೂ ಇಲ್ಲದಂತೆ ಇರಬಾರದೇಕೆ? ಸಿದ್ದರ ಮನಸ್ಸಿನಲ್ಲಿ ಆಲೋಚನೆಗಳು ಏಳುತ್ತಿದ್ದಂತೆಯೇ ಆ ಪುಟ್ಟ ಮನೆಯ ಇಳಿಬಿಟ್ಟ ಪರದೆಗಳು ತೆರೆಗಳಂತೆ ಎದ್ದೆದ್ದು ಬಿದ್ದವು. ಹುಡುಗಿಯೊಂದು ಯಾರಿಗೂ ಕಾಣದಂತೆ ಕಿಟಕಿಯಲ್ಲಿ ಇಣುಕಿ ಮರೆಯಾದಳು.



ಬೆಟ್ಟ ಹತ್ತುವುದಕ್ಕಿಂತ ಇಳಿಯುವುದು ಸುಲಭ. ದಡದಡನೆ ಕೆಳಗಿಳಿದು, ದಾಸೋಹದಲ್ಲಿ 'ಸಹನಾ ಭವತು...' ಹೇಳಿಕೊಂಡು ಉಂಡು, 'ಅನ್ನದಾತೋ ಸುಖೀಭವ' ಎಂದು ಹರಸಿ, ಬೈಕು ಹತ್ತಿ ವಾಪಸು ಹೊರಟರೆ ಸಿದ್ದರ ಬೆಟ್ಟ ತಾನು ಹಿಂದುಳಿದಿತ್ತು: ಇನ್ನೂ ಎಷ್ಟೋ ಸಿದ್ದರಿಗೆ, ಪ್ರಸಿದ್ಧರಿಗೆ, ಪ್ರವಾಸಿಗರಿಗೆ ತಾಣವಾಗಲು; ಆಕರ್ಷಣೆಯಾಗಲು; ಅಚ್ಚರಿಯಾಗಲು.

* * *

ಇದು, ಮೊನ್ನೆ ಮಾರ್ಚ್ ಹನ್ನೊಂದರ ಭಾನುವಾರ ನಾವು ಹೊಗಿದ್ದ ಪ್ರವಾಸದ 'ಕಥನ'. ಆ ಸಿದ್ದರು ನಾವೇ. ಸಿದ್ದರ ಬೆಟ್ಟಕ್ಕೆ ಹೋಗಲು ಸಿದ್ದತೆಯನ್ನೇನೂ ನಡೆಸಿರಲಿಲ್ಲ. ಶನಿವಾರ ಹೋಗಬೇಕು ಅಂತಾಯಿತು, ಭಾನುವಾರ ಬೆಳಗ್ಗೆ ಹೊರಟೆವು! ಹೊರಡುವುದು ಲೇಟಾಗಿದ್ದು, ಕಾಮತ್ತಲ್ಲಿ ತಿಂಡಿ ತಿಂದಿದ್ದು, ಮಧ್ಯೆ ಒಂದು ಗಾಡಿ ಪಂಕ್ಚರ್ ಆಗಿದ್ದು, ಅದನ್ನು ಅಲ್ಲಿಯೇ ಬಿಟ್ಟು, ಟ್ರಿಬಲ್ ಡ್ರೈವ್ ಮಾಡಿಕೊಂಡು ಹೋಗಿದ್ದು, ಊಟ ಮಾಡಿದ್ದು, ಬಾಳೆ ಹಣ್ಣು ತಿಂದಿದ್ದು, ವಾಪಸು ಬರುತ್ತಾ ಪಂಕ್ಚರ್ ಕಟ್ಟಿಸಿದ್ದು, ಮತ್ತೆ ಅದು ಪಂಕ್ಚರ್ ಆಗಿದ್ದು, ಅಲ್ಲೇ ನಿಲ್ಲಿಸಿಕೊಂಡು ಮೆಕ್ಯಾನಿಕ್ಕನ್ನು ಕರೆಸಿದ್ದು, ಹೊಸ ಟ್ಯೂಬು ತಂದದ್ದು, ತರುವವರೆಗೆ ಉಳಿದವರು ಆಟ ಆಡಿದ್ದು, ಮತ್ತೆ ಕಾಮತ್ತಲ್ಲಿ ದೋಸೆ-ಐಸ್‍ಕ್ರೀಮ್ ತಿಂದಿದ್ದು........ ಎಲ್ಲಾ ಬರೆಯುತ್ತಾ ಹೋದರೆ ಭಾಳಾ ಉದ್ದವಾದೀತೆನ್ನಿಸಿ, ಸ್ವಲ್ಪ ಭಟ್ಟಿ ಇಳಿಸಿದೆ.

ಬೆಟ್ಟ ಹತ್ತಿಳಿದ, ಅಷ್ಟು ದೂರ ಬೈಕಿನಲ್ಲಿ ಪಯಣಿಸಿದ ಸುಸ್ತು ಇನ್ನೂ ಪೂರ್ತಿ ಹೋಗಿಲ್ಲ. ಉಳಿದಂತೆ ಎಲ್ಲಾ ಅರಾಂ.

- - - - - - - -
ಫೋಟೋಸ್: ಸಂದೀಪ ನಡಹಳ್ಳಿ / ಸುಬ್ಬು ||| ಮತ್ತಷ್ಟು ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Monday, February 05, 2007

ಹೊಳೆ ಬಾಗಿಲು

ಬಾಗಿಲೆಂದರೆ ಬಾಗಿಲೇ ಆಗಿರಬೇಕೆಂದಿಲ್ಲ. ಅದು ಮರ ಅಥವಾ ಕಬ್ಬಿಣ ಅಥವಾ ತಗಡು ಅಥವಾ ಫೈಬರ್ ಅಥವಾ ಗಾಜಿನಿಂದಲೇ ತಯಾರಾಗಿರಬೇಕೆಂದಿಲ್ಲ. ಅದಕ್ಕೆ ಅಗುಳಿ, ಚಿಲಕ, ಹಿಡಿಕೆ, ಬೀಗ ಇತ್ಯಾದಿಗಳು ಇರಲೇಬೇಕೆಂದಿಲ್ಲ. ಅದನ್ನು ತೆರೆಯಲು - ಮುಚ್ಚಲು ಬರಲೇ ಬೇಕೆಂದಿಲ್ಲ. ಬಾಗಿಲೆಂದರೆ ದ್ವಾರ. ಬಾಗಿಲೆಂದರೆ ಪ್ರವೇಶಸ್ಥಾನ; ಅಷ್ಟೆ. ಉದಾಹರಣೆಗೆ: ಹೊಳೆಬಾಗಿಲು.

ಮೊನ್ನೆ ಊರಿಗೆ ಹೋಗಿದ್ದಾಗ ಅತ್ತೆ ಮನೆಗೆ ಹೋಗಿದ್ದೆ. ಅತ್ತೆ ಎಂದರೆ ಅಪ್ಪನ ತಂಗಿ. ಅತ್ತೆ ಮನೆಗೆ ಹೋಗದೆ ಸುಮಾರು ಮೂರು ವರ್ಷಕ್ಕೆ ಬಂದಿತ್ತು. ಅವರಂತೂ ತುಂಬಾ ಬೇಸರ ಮಾಡಿಕೊಂಡಿದ್ದರು. 'ಒಂದ್ಸಲ ಬಂದುಹೋಗೋ, ದಾರಿ ಮರ್ತುಹೋಗ್ತು ಕೊನಿಗೇ..' ಅಂತ ಅಜ್ಜ ಹೆದರಿಸಿದ್ದ ಕೂಡ. ಹಾಗಾಗಿ ಈ ಸಲದ ಷೆಡ್ಯೂಲಿನಲ್ಲಿ ತಪ್ಪದೇ ಅತ್ತೆಯ ಮನೆಯ ಪ್ರವಾಸವನ್ನು ಸೇರಿಸಿದ್ದೆ. ಅತ್ತೆಯ ಮನೆ ಇರುವುದು ತುಮರಿ-ಸುಳ್ಳಳ್ಳಿಯ ಹತ್ತಿರ. ಸಾಗರದಿಂದ ಸುಮಾರು ಎಂಭತ್ತು ಕಿಲೋಮೀಟರ್ ಆಗುತ್ತದೆ. ಸಾಗರದಿಂದ ಹೊರಟರೆ ಅಲ್ಲಿಗೆ ಮುಟ್ಟಲಿಕ್ಕೆ ಐದು ಗಂಟೆ ತೆಗೆದುಕೊಳ್ಳುತ್ತದೆ ಬಸ್ಸು. ದಿನಕ್ಕೆ ಕೇವಲ ಎರಡೇ ಬಸ್ಸು ಇರುವುದು. ಅತ್ತೆ ಮನೆಗೆ ಹೋಗಬೇಕಾದರೆ ಹೊಳೆ ದಾಟಿ ಹೋಗಬೇಕು. ಹೊಳೆಯೆಂದರೆ ಶರಾವತಿ ನದಿಯ ಹಿನ್ನೀರು. ಸಾಗರದಿಂದ ಹೊರಟ ಬಸ್ಸು ಒಂದು ಗಂಟೆ ಸಮಯದಲ್ಲಿ ಹೊಳೆಬಾಗಿಲಿಗೆ ಬರುತ್ತದೆ.

ಹೊಳೆಬಾಗಿಲು. ಬಾಗಿಲೆಂದರೆ ಇಲ್ಲೇನು ಹೊಳೆಯ ಸುತ್ತ ಗೋಡೆ ಕಟ್ಟಿ ಕದವನ್ನಿಟ್ಟಿಲ್ಲ. ಹಾಗಂತ ಗೋಡೆಗಳಿದ್ದರೆ ಮಾತ್ರ ಬಾಗಿಲು ಇರಬೇಕು ಎಂದೇನಿಲ್ಲವಲ್ಲ? ಹೊಳೆಗೆಂಥಾ ಬಾಗಿಲು? ಇಲ್ಲಿ ಹೊಳೆಗೆ ಹೊಳೆಯೇ ಬಾಗಿಲು. ಅತ್ತೆಯ ಮನೆಗೆ ಹೋಗಬೇಕು ಎಂದರೆ ಹೊಳೆಯನ್ನು ದಾಟಿಯೇ ಹೋಗಬೇಕು. ಎಷ್ಟೇ ವೇಗವಾಗಿ ಬನ್ನಿ ನೀವು, ಇಲ್ಲಿಗೆ ಬಂದಾಕ್ಷಣ ಹೊಳೆ ನಿಮ್ಮನ್ನು ತಡೆದು ನಿಲ್ಲಿಸುತ್ತದೆ. ಅವಸರ ಸಲ್ಲ. ತಾಳ್ಮೆಯೇ ಎಲ್ಲ. ಲಾಂಚು ಇನ್ನೂ ಆಚೆಯ ದಡವನ್ನೇ ಬಿಟ್ಟಿಲ್ಲ. ಅಗೋ, ಹಾಂ, ಅಲ್ಲಿ, ಒಂದು ಬೆಂಕಿಪೊಟ್ಟಣದಂತೆ ಕಾಣಿಸುತ್ತಿದೆಯಲ್ಲ, ಅದೇ ಲಾಂಚು. ಅದು ಅಲ್ಲಿಂದ ಜನ, ವಾಹನಗಳನ್ನೆಲ್ಲಾ ಹತ್ತಿಸಿಕೊಂಡು ನಿಧನಿಧಾನವಾಗಿ ಈಚೆ ದಡಕ್ಕೆ ಬರಬೇಕು. ಅಲ್ಲಿಯವರೆಗೆ ನೀವು ಏನು ಹಾರಾಡಿದರೂ ನಡೆಯುವುದಿಲ್ಲ.

ಬೇಕಿದ್ದರೆ ಈ ದಂಡೆಗುಂಟ ಅಡ್ಡಾಡುತ್ತಾ ಕಪ್ಪೆ ಚಿಪ್ಪು, ನುಣ್ಣನೆ ಉರೂಟು ಕಲ್ಲುಗಳನ್ನು ಹೆಕ್ಕಬಹುದು. ಹೆಕ್ಕಿದ ಕಲ್ಲನ್ನು ಹೊಳೆಗೆ ಎಸೆಯಬಹುದು. ಕಲ್ಲು ಬಿದ್ದ ಜಾಗದಲ್ಲಿ ಎದ್ದ ಅಲೆ, ಅಲೆ ಅಲೆಯಾಗಿ ನಿಮ್ಮತ್ತಲೇ ತೇಲಿ ಬರುವುದನ್ನು ನೋಡುತ್ತಾ ಮೈಮರೆಯಬಹುದು. ಹೊಳೆಯಲ್ಲಿ ಸಾಕಷ್ಟು ಮೀನುಗಳಿವೆ. 'ಗೊಜಮಂಡೆ' ಎಂದು ಕರೆಯಲಾಗುವ ಕಪ್ಪೆಯ ಪೂರ್ವಜ ಜೀವಿಗಳಿವೆ. ಅವು ಆಗೀಗ ಗುಂಪಾಗಿ ಬಂದು ನೀರಿನ ಮೇಲ್ಗಡೆ ಒಮ್ಮೆ ಕತ್ತು ತೂರಿಸಿ ಮಾಯವಾಗುತ್ತವೆ. ಅತ್ತಿತ್ತ ಒಂದೇ ಸಮನೆ ಈಜಾಡುತ್ತಿರುವ ಮೀನುಗಳಂತೂ ಒಮ್ಮೊಮ್ಮೆ ಪೆದ್ದಣ್ಣಗಳಂತೆ, ಒಮ್ಮೊಮ್ಮೆ ಅತ್ಯಂತ ಕ್ರಿಯಾಶೀಲ ಜೀವಿಗಳಂತೆ, ಒಮ್ಮೊಮ್ಮೆ ಭಯಗ್ರಸ್ತ ಗಂಧರ್ವರಂತೆ ಭಾಸವಾಗುತ್ತವೆ. ನಿಮ್ಮ ಬಳಿ ಏನಾದರೂ ತಿಂಡಿಯಿದ್ದರೆ ಈ ಮೀನುಗಳಿಗೆ ಎಸೆಯಬಹುದು. ನೀವು ಎಸೆದ ತಿಂಡಿ ನೀರಿನೊಳಗೆ ಮುಳುಗುವುದರೊಳಗೆ ಅವು ಗುಂಪಾಗಿ ಬಂದು ಅಷ್ಟನ್ನೂ ಕಬಳಿಸಿಬಿಡುತ್ತವೆ. ಮೀನುಗಳ ಜೊತೆ ಆಟವಾಡುತ್ತಾ ನೀವು ಮತ್ಸ್ಯಲೋಕದಲ್ಲಿ ಒಂದಾಗುತ್ತೀರಿ.

ಲಾಂಚು ಈಗ ದಡಕ್ಕೆ ಸನಿಹವಾಗುತ್ತಿದೆ. ಮೊದಲ ಸಲ ಲಾಂಚು ಹತ್ತುವವರ ಸಂಭ್ರಮ, ಕುತೂಹಲಗಳಂತೂ ಹೇಳತೀರದ್ದು. ಅವರು ನೀರಿನ ಸಮೀಪಕ್ಕೆ ಹೋಗಿ ನಿಂತಿದ್ದಾರೆ. ಬಸ್ಸನ್ನೂ ಅದರೊಳಗೆ ಹಾಕುತ್ತಾರಾ? ಅದು ಹೇಗೆ? ಲಾಂಚು ಮಧ್ಯದಲ್ಲಿ ಕೆಟ್ಟುಹೋದರೆ ಗತಿಯೇನು? ಮುಳುಗಿ ಹೋಗುತ್ತಾ? ಅಯ್ಯಯ್ಯೋ! ನಂಗೆ ಈಜು ಬೇರೆ ಬರಲ್ವಲ್ಲಪ್ಪ... ಲಾಂಚಿನ ಡ್ರೈವರ್ ಎಲ್ಲಿ ಕುಳಿತಿರುತ್ತಾನೆ? ಇದೇ ಲಾಂಚನ್ನು ಇದೇ ಇದೇ ರೂಟಿನಲ್ಲಿ ಪ್ರತಿದಿನವೂ ಓಡಿಸಿಕೊಂಡಿರಲಿಕ್ಕೆ ಅವನಿಗೆ ಬೇಸರವಾಗುವುದಿಲ್ಲವಾ? ಪ್ರಶ್ನೆಗಳು ಜೇನ್ನೊಣದಂತೆ ಕಾಡುತ್ತಿರಲು.. ಅಗೋ ಲಾಂಚು ಹತ್ತಿರಾಗುತ್ತಿದೆ.. ದಾರಿ ಬಿಡಿ, ಇಲ್ಲಿಗೇ ಬರುತ್ತದೆ ಲಾಂಚು..

ಲಾಂಚು ಬಂದು ನಿಂತದ್ದೇ ಮೊದಲು ಜನರೆಲ್ಲ ಓಡಿ ಹೋಗಿ ಹತ್ತಿದ್ದಾರೆ. ಆಮೇಲೆ ವಾಹನಗಳೆಲ್ಲ ಒಂದೊಂದೊಂದಾಗಿ ಬರುತ್ತಿವೆ. ಎಲ್ಲಾ ವಾಹನಗಳೂ ಹಿಡಿಸುವುದಿಲ್ಲ. ಒಂದು ಕಾರಿಗೆ ಮಾತ್ರ ಜಾಗ ಸಿಕ್ಕಿಲ್ಲ. ಸಿನಿಮಾಕ್ಕೆ ಟಿಕೇಟು ಸಿಗದಿರುವವನ ಪರಿಸ್ಥಿತಿ ಈ ಕಾರಿನದ್ದು. ಪಾಪ, ಮುಂದಿನ ಟ್ರಿಪ್ಪಿನವರೆಗೂ ಕಾಯಬೇಕು. ಲಾಂಚು ಇನ್ನೇನು ಹೊರಟಿತು ಅನ್ನುವಷ್ಟರಲ್ಲಿ ಒಂದು ಬೈಕು ಹಾರನ್ನು ಮಾಡಿಕೊಂಡು ಬಂದಿದೆ. ಅದನ್ನು ಸಹ ಹತ್ತಿಸಿಕೊಳ್ಳಲಾಗಿದೆ. ಬಂದವನು ಬೈಕಿನಲ್ಲೇ ಬಂದಿದ್ದರೂ ಓಡಿ ಬಂದು ಬಸ್ಸು ಹತ್ತಿದವನಂತೆ ಏದುಸಿರು ಬಿಡುತ್ತಿದ್ದಾನೆ.

ಲಾಂಚು ಹೊರಟಿದೆ ಈಗ. ಲಾಂಚಿನ ಸಿಬ್ಭಂದಿಯೊಬ್ಬ ಟಿಕೀಟು ಕೇಳುತ್ತಾ ಬರುತ್ತಿದ್ದಾನೆ. ಲಾಂಚಿನ ಪರಿಚಯವಿದ್ದವರೆಲ್ಲ ಧೀರರಂತೆ ಅಂಚಿಗೆ ಹೋಗಿ ಸರಳಿಗೆ ಒರಗಿ ನಿಂತಿದ್ದಾರೆ. ಮೊದಲ ಬಾರಿ ಲಾಂಚ್ ಪಯಣಕ್ಕೆ ಬಂದವರು ಒಳಗೆ ಹೋಗಿ ಕುಳಿತಿದ್ದಾರೆ. ಅವರಿಗೆ ಲಾಂಚು ಚಲಿಸುತ್ತಿದ್ದರೂ ನಿಂತಿದ್ದಂತೆ ಭಾಸವಾಗುತ್ತಿದೆ. ಅಜ್ಜಿಯೊಂದು ಕೈಮುಗಿದು ಕಣ್ಮುಚ್ಚಿ ಕುಳಿತಿದೆ: 'ದೇವರೇ, ಸುಖವಾಗಿ ಆಚೆ ದಡ ತಲುಪಿಸಪ್ಪಾ..' ಲಾಂಚು ಸ್ವಲ್ಪ ದೂರ ಹೋಗುತ್ತಿದ್ದಂತೆ ಒಳಗೆ ಕುಳಿತಿದ್ದ ಗಂಡಸರಿಗೆ ಸ್ವಲ್ಪ ಧೈರ್ಯ ಬಂದು, ಅಲ್ಲೇ ಕುಳಿತಿರಲು ಬೇಸರವಾಗಿ ಅವರು ಹೊರಬಂದಿದ್ದಾರೆ. ಕಂಬಿಗಳನ್ನು ಹಿಡಿದುಕೊಳ್ಳುತ್ತಾ ಓಡಾಡುತ್ತಿದ್ದಾರೆ. ಅರೆ! ಲಾಂಚಿನಲ್ಲಿ 'ಜಂಪ್ಸ್' ಆಗುವುದೇ ಇಲ್ಲ! ಈಗ ಅವರು ಕೈ ಬಿಟ್ಟು ನಡೆದಿದ್ದಾರೆ. ಅಪ್ಪನೊಂದಿಗೆ ಹೊರಬಂದ ಹುಡುಗನೊಬ್ಬ ಕೇಳುತ್ತಿದ್ದಾನೆ: "ಅಪ್ಪಾ ಇಷ್ಟು ದೊಡ್ಡ ಲಾಂಚನ್ನು ಇಲ್ಲಿಗೆ ಹೇಗೆ ತಂದರು? ಲಾರಿಯಲ್ಲೂ ಹಿಡಿಯುವುದಿಲ್ಲ..." ಅಪ್ಪನಿಗೂ ಈಗ ಯೋಚನೆಯಾಗಿದೆ: 'ಅರೆ! ಹೌದಲ್ಲಾ ಇಷ್ಟು ದೊಡ್ಡ ಲಾಂಚನ್ನು....' ಆದರೂ ಆತ ಎಲ್ಲಾ ತಿಳಿದವನಂತೆ "ಇದನ್ನು ದೂರದ ಸಮುದ್ರದಿಂದ ಡ್ರೈವ್ ಮಾಡಿಕೊಂಡು ಬಂದದ್ದು. ಈ ಹೊಳೆ ಹೋಗಿ ಸಮುದ್ರಕ್ಕೆ ಸೇರುತ್ತಲ್ಲ, ಅಲ್ಲಿಂದ ಬಂದದ್ದು ಇದು.." ಎಂದು ಏನೋ ಒಂದು ಸಮಜಾಯಿಷಿ ಕೊಟ್ಟಿದ್ದಾನೆ. ಆದರೂ ಅವನನ್ನು ಆ ಪ್ರಶ್ನೆ ಕಾಡುತ್ತಲೇ ಇದೆ: ಹ್ಯಾಗೆ ತಂದರು ಇದನ್ನು...? ಯಾರನ್ನಾದರೂ ಕೇಳೋಣವೆಂದರೆ, ಮುಜುಗರವಾಗಿ ಸುಮ್ಮನಾಗಿದ್ದಾನೆ.

ಪ್ರಶಾಂತ ಸಾಗರದಂತಹ ಹೊಳೆಯಲ್ಲಿ ನಿಧಾನವಾಗಿ ಸಾಗುತ್ತಿದೆ ಲಾಂಚು. ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಅಲೆಗಳ ಮೇಲೆ ತೇಲುತ್ತಾ ಸಾಗುತ್ತಿರಲು ಅಯಾಚಿತವಾಗಿ ನಿಮ್ಮ ನೆನಪಿನ ಕೋಶದಿಂದ ಹೊರಬರುತ್ತದೆ ಆ ಹಾಡು:

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ ||

ಹೊಳೆಬಾಗಿಲಿನಲ್ಲಿ ನಿಮ್ಮ ಮನದ ಬಾಗಿಲು ತೆರೆದುಕೊಳ್ಳುತ್ತದೆ. ಈ ಹೊಳೆಯ ಆಚೆ ದಡದಲ್ಲಿ ಒಂದು ಹೋಟೆಲ್ಲಿದೆ. 'ಹೋಟೆಲ್ ಶರಾವತಿ' ಅಂತ. ಸಾಗರಕ್ಕೆ ಹೋಗುವಾಗ-ಬರುವಾಗ ಪ್ರತಿ ಬಸ್ಸೂ ಇಲ್ಲಿ ಹತ್ತು ನಿಮಿಷ ನಿಲ್ಲುತ್ತದೆ. ಉಪ್ಪಿಟ್ಟು, ಚಿತ್ರಾನ್ನ, ಮೊಸರನ್ನ, ಭಜ್ಜಿ, ಬಿಸ್ಸಿಬಿಸಿ ಕಾಫಿ-ಟೀ-ಕಷಾಯ... ಎಲ್ಲಾ ಸಿಗುತ್ತದೆ. ಸುಮಾರು ಹದಿನೈದು ವರ್ಷಗಳಿಂದಲೂ ಇದೆ ಈ ಹೋಟೆಲ್ಲು. ಇದರ ಮಾಲೀಕರ ನಿಜವಾದ ಹೆಸರೇನೆಂಬುದು ಯಾರಿಗೂ ನೆನಪಿಲ್ಲ. ಎಲ್ಲರೂ ಅವರನ್ನು 'ಹೊಳೆ ಭಟ್ರು' ಅಂತಲೇ ಕರೆಯುವುದು. ಈ ಹೊಳೆಭಟ್ರು ಸುಮಾರು ಅರವತ್ತರ ಪ್ರಾಯದ ಬಲು ಗಟ್ಟಿ ಮನುಷ್ಯ. ಹತ್ತಿರದ ಯಾವುದೇ ಊರಿನಲ್ಲಿ ಕಾರ್ಯವಿದ್ದರೂ ಇವರಿಗೆ ಕರೆ ಬರುತ್ತದೆ. ಭಟ್ರು ತಪ್ಪದೇ ಹೋಗುತ್ತಾರೆ. ಊಟದ ನಂತರದ ಇಸ್ಪೀಟು ಕಂಬಳದಲ್ಲಿ ಹೊಳೆಭಟ್ರು ಇರಲೇಬೇಕು. ಯಾರ ಮನೆಯಲ್ಲಾದರೂ ತಿಥಿಯಿದ್ದರೆ ಇವರನ್ನು ವೈದಿಕರನ್ನಾಗಿ ಕರೆಯುತ್ತಾರೆ. ಹೆಚ್ಚಿಗೆ ಮಾತಾಡದ, ಮಿತಭಾಷಿ ಎಂದೇ ಜನಜನಿತರಾಗಿರುವ ಹೊಳೆಭಟ್ರು ಹಾಗಾಗುವುದಕ್ಕೆ ಕಾರಣ ಅವರ ಬಾಯಲ್ಲಿ ಸದಾ ಇರುವ ಕವಳವೇ ಹೌದಾ ಎಂಬುದು ಕೆಲವರ ಅನುಮಾನ.

ದಡ ಈಗ ಸಮೀಪಿಸುತ್ತಿದೆ. ಹೊಳೆಯ ಅಂಚು ದಡದ ಅಂಚಿಗೆ ಸೇರಿದ ಜಾಗ ಅಗೋ ಕಾಣುತ್ತಿದೆ. ಪಯಣ ಮುಗಿದಿದೆ. ಲಾಂಚು ತನ್ನ ಬಾಹುಗಳನ್ನು ದಡದತ್ತ ಹೊರಳಿಸುತ್ತಿದೆ. ದಡದಲ್ಲಿ ಲಾಂಚಿಗಾಗಿ ಕಾಯುತ್ತಾ ನಿಂತಿರುವ ಜೀವಿಗಳ ಮೊಗದಲ್ಲಿ ಹೊಮ್ಮಿದ ಮುಗುಳ್ನಗೆ ಇಲ್ಲಿಂದಲೇ ಕಾಣುತ್ತಿದೆ. ಬೈಕು, ಕಾರುಗಳು ಸ್ಟಾರ್ಟ್ ಆಗುತ್ತಿವೆ. ಲಾಂಚು ನಿಂತಿದ್ದೇ ಎಲ್ಲಾ ಆಚೆ ದಡಕ್ಕೆ ಜಿಗಿದಿದ್ದಾರೆ. ಬಸ್ಸು, ಕಾರು, ಬೈಕುಗಳು ಬುರಬುರನೆ ದಡ ಸೇರಿವೆ.

ಎಲ್ಲರೂ ಹೋಟೆಲ್ಲಿಗೆ ನುಗ್ಗಿದ್ದಾರೆ. 'ಮಾಣಿ, ಇವತ್ತು ಏನು ವಿಶೇಷ ಮಾಡಿದ್ರಾ?' ಕೇಳುತ್ತಿದ್ದಾರೆ ಭಟ್ಟರ ಮಗನ ಬಳಿ. ತಿಂಡಿ ತಿಂದು ಕಾಫಿ ಕುಡಿದು ಎಲ್ಲರೂ ಮತ್ತೆ ಬಸ್ಸು ಹತ್ತಿದ್ದಾರೆ. ಕಂಡಕ್ಟರ್ ಬಳಿ 'ಉಚ್ಚೆ ಹೊಯ್ದು ಬರ್ತೀನಿ' ಎಂದು ಹೇಳಿ ಹೋದ ಕಳಸವಳ್ಳಿ ಮಾಬ್ಲಣ್ಣ ಇನ್ನೂ ಬಂದಿಲ್ಲ. ಅಗೋ ಪಂಚೆ ಸುತ್ತಿಕೊಳ್ಳುತ್ತಾ ಓಡಿ ಬರುತ್ತಿದ್ದಾರೆ ಮಾಬ್ಲಣ್ಣ.. ಬಸ್ಸು ಹೊರಟಿದೆ.. ಹೊಳೆ ದಾಟಿದ ಖುಷಿಯಲ್ಲಿ ಓಡತೊಡಗಿದೆ ನಾಗಾಲೋಟದಲ್ಲಿ.

Saturday, January 06, 2007

ಭಯ, ತಳಮಳಗಳ ನಡುವೆ ಬಂದ ಹೊಸವರ್ಷ

ಜಾಲಾಟ
ಎರಡುಸಾವಿರದ ಐದನೇ ಇಸವಿಯ ಇಯರೆಂಡಿಗೆ ನಾವು ಹೊಗೆನಕ್ಕಲ್ ಫಾಲ್ಸ್‌ಗೆ ಹೋಗಿದ್ದೆವು. ಅಲ್ಲಿ ಹೋಗಿದ್ದಾಗ ಮಾತಾಡಿಕೊಂಡಿದ್ದೆವು: ಪ್ರತಿವರ್ಷವೂ ಇಯರೆಂಡಿನ ದಿನ ಬೆಂಗಳೂರಿನಿಂದ ಹೊರಗಡೆ ಎಲ್ಲಿಗಾದರೂ ಟೂರ್ ಹೋಗಬೇಕು ಅಂತ. ಹಾಗಾಗಿ ಈ ವರ್ಷ, ಅಂದರೆ ಎರಡುಸಾವಿರದ ಆರನೇ ಇಸವಿಯ ಡಿಸೆಂಬರ್ ಹತ್ತಿರಾಗುತ್ತಿದ್ದಂತೆಯೇ ನನ್ನಿಬ್ಬರೂ ಗೆಳೆಯರೂ ಒಂದೇ ಸಮನೆ ಪೀಡಿಸಹತ್ತಿದ್ದರು: 'ಎಲ್ಲಿಗೆ ಹೋಗೋಣ ಈ ವರ್ಷ?' ಅಂತ. ಈ ಇಬ್ಬರು ಗೆಳೆಯರು -ರಾಘವೇಂದ್ರ ಮತ್ತು ಸಂತೋಷ ಅಂತ- ನನ್ನ ಕಾಲೇಜ್ ಕ್ಲಾಸ್‌ಮೇಟುಗಳು. ಅದಕ್ಕಿಂತ ಹೆಚ್ಚಾಗಿ, ನನ್ನ ಜೀವದ ಗೆಳೆಯರು. ನಾವು ಮೂವರೇ ಪ್ರತಿವರ್ಷವೂ ವರ್ಷದ ಕೊನೆಯ ದಿನ ಎಲ್ಲಿಗಾದರೂ ಟ್ರಿಪ್ ಹೋಗಬೇಕು ಎಂದು ತೀರ್ಮಾನಿಸಿದ್ದೆವು.

ಅಂತರ್ಜಾಲದಲ್ಲಿ ಬೆಂಗಳೂರಿನ ಸುತ್ತಮುತ್ತಲ ಪ್ರವಾಸೀ ತಾಣಗಳಿಗಾಗಿ ಜಾಲಾಡಿದಾಗ ದೇವರಾಯನದುರ್ಗ ಸಿಕ್ಕಿತು. ವಿವರಗಳೂ ಸಿಕ್ಕವು. ಎಲ್ಲರಿಗೂ ಇಷ್ಟವೂ ಆಯಿತು. ನಾವು ಪಯಣಕ್ಕೆ ತಯಾರಾಗತೊಡಗಿದೆವು.

ತಯಾರಿ
ಮಲ್ಲೇಶ್ವರಂನಲ್ಲಿ ಒಂದು ಕಡೆ ಚಪಾತಿ ಮಾಡಿ ಕೊಡ್ತಾರೆ ಅಂತ ಗೊತ್ತಾಯ್ತು. ಹುಡುಕಿಕೊಂಡು ಹೋಗಿ ಆರ್ಡರ್ ಕೊಟ್ಟು ಬಂದೆವು. ದೇವರಾಯನದುರ್ಗದಲ್ಲಿರುವ ಹೋಟೆಲ್ಲು, ಗೆಸ್ಟ್‍ಹೌಸ್‍ಗಳಲ್ಲಿ ರೂಮ್ ಬುಕ್ ಮಾಡಲಿಕ್ಕೆ ಪ್ರಯತ್ನಿಸಿದೆವಾದರೂ ಸಫಲವಾಗಲಿಲ್ಲ. ಹಾಗಾಗಿ, ಅಲ್ಲಿಗೆ ಹೋಗಿಯೇ ನೋಡೋದು ಎಂದಾಯಿತು. ಅಕಸ್ಮಾತಾಗಿ ರೂಮ್ ಸಿಗಲಿಲ್ಲ ಅಂದ್ರೆ ಇಡೀ ರಾತ್ರಿ ಹೊರಗಡೆಯೇ ಇರಲಿಕ್ಕೂ ಸೈ ಎಂದಾಯಿತು. ಜೈ ಎಂದೆವು. ಕಾರು ಮಾಡಿಸಿಕೊಂಡು ಹೋಗೋಣ ಎಂದುಕೊಂಡೆವು. ಮತ್ತೆ ನಾವು ಮೂವರಿಗೆ ಏನಕ್ಕೆ ಕಾರು; ಬಸ್ಸಿಗೆ ಹೋಗೋಣ, ಮಜಾ ಇರೊತ್ತೆ ಅಂತ ತೀರ್ಮಾನಿಸಿದೆವು.

ಪಯಣ

ಮೆಜೆಸ್ಟಿಕ್ಕಿಗೆ ಹೋಗಿ ರೂಟು ವಿಚಾರಿಸಿ ಕೆ.ಎಸ್.ಆರ್.ಟಿ.ಸಿ. ಬಸ್ಸು ಹತ್ತಿದಾಗ ಮೂವತ್ತೊಂದನೇ ತಾರೀಖಿನ ಮಧ್ಯಾಹ್ನ ೩.೩೦. ಡಾಬಸ್‍ಪೇಟೆ (ದಬ್ಬಾಸ್‍ಪೇಟ್) ಎಂಬಲ್ಲಿಗೆ ಟಿಕೇಟ್ ತಗೊಂಡೆವು. ಕೊನೆಗೆ ಬಸ್ಸಿನಲ್ಲಿದ್ದವರಲ್ಲಿ ವಿಚಾರಿಸಿದಾಗ 'ಊರ್ಡಿಗೆರೆ'ಯಲ್ಲಿ ಇಳಕೊಂಡ್ರೆ ಹತ್ತಿರ ಅಂತ ಗೊತ್ತಾಯಿತು. ಹಾಗಾಗಿ ದಬ್ಬಾಸ್‍ಪೇಟೆಯಿಂದ ಮತ್ತೆ ಊರ್ಡಿಗೆರೆಗೆ ಟಿಕೀಟು ತಗೊಂಡೆವು. ಬಸ್ಸು ಊರ್ಡಿಗೆರೆ ತಲುಪಿದಾಗ ಐದೂ ವರೆಯಾಗಿತ್ತು. ಊರ್ಡಿಗೆರೆ ಒಂದಷ್ಟು ಅಂಗಡಿಗಳಿರುವ ಪುಟ್ಟ ಊರು. ಒಂದು ಮಿನಿ ಹೋಟೆಲಿತ್ತು. ಅಲ್ಲಿ ಮೂವರೂ ಕಾಫಿ ಕುಡಿದೆವು. 'ಇಲ್ಲಿಂದ ಐದು ಕಿಲೋಮೀಟರಾಗೊತ್ತೆ ದೇವರಾಯನದುರ್ಗದ ಬೆಟ್ಟ' ಎಂಬ ವಿವರ ಸಿಕ್ಕಿತು ಹೋಟಿಲಿನವನಿಂದ. ಬೆಟ್ಟ ಕಣ್ಣಿಗೆ ಹತ್ತಿರದಲ್ಲೇ ಇದ್ದಂತೆ ಕಾಣಿಸುತ್ತಿತ್ತಾದಾರೂ ನಡೆದುಕೊಂಡು ಹೋಗಲಿಕ್ಕೆ ದೂರ ಅನ್ನಿಸಿ, ಆಟೋ ಮಾಡಿಸಿಕೊಂಡು ಹೊರಟೆವು. ದೇವರಾಯನದುರ್ಗ ತಲುಪಿದಾಗ ಆರೂ ವರೆ. ಅದಾಗಲೇ ಕತ್ತಲಾಗುತ್ತಿತ್ತು.

ರೂಮಿಗಾಗಿ ಪರದಾಟ
ಹೋಗಿ ಮುಟ್ಟಿದಾಕ್ಷಣ ಅಲ್ಲಿದ್ದ ಪ್ರವಾಸಿ ಮಂದಿರಗಳಲ್ಲಿ ತಂಗಲು ರೂಮಿದೆಯಾ ಎಂದು ವಿಚಾರಿಸಿದೆವು. 'ಇಲ್ಲ' ಎಂಬ ಉತ್ತರ ರೆಡಿಮೇಡೇನೋ ಎಂಬಂತೆ ಬಂತು. 'ಬೆಟ್ಟದ ಮೇಲೂ ಒಂದು ಗೆಸ್ಟ್‍ಹೌಸ್‍ ಇದೆ; ಆದರೆ ಅಲ್ಲೂ ರೂಮು ಸಿಗುವುದು ಡೌಟು' ಎಂಬ ಮಾಹಿತಿ ಸಿಕ್ಕಿತು. ನಾವು ಹೊರಗಡೆ ತಂಗಲಿಕ್ಕೂ ತಯಾರಾಗಿಯೇ ಬಂದಿದ್ದರಿಂದ 'ಏನಾದರಾಗಲಿ' ಎಂದುಕೊಂಡು ಬೆಟ್ಟದ ಆರೋಹಣಕ್ಕೆ ಮುಂದಾದೆವು. ಹೊರಡುವಷ್ಟರಲ್ಲಿ ಯಾರನ್ನೋ ವಿಚಾರಿಸಿದಾಗ ಆ ಮೇಲ್ಗಡೆಯ ಗೆಸ್ಟ್‍ಹೌಸಿನವರೇ ಆದ ರಮೇಶ್ ಎಂಬುವವರೊಬ್ಬರ ಪರಿಚಯ ಆಯಿತು. ಅವರೆಂದರು, 'ನಿಮಗೆ ರೂಮ್ ಕೊಡಲಿಕ್ಕೆ ಆಗುವುದಿಲ್ಲ. ಆದರೆ ನಮ್ಮ ಆಫೀಸಿನಲ್ಲೇ ಬೇಕಾದರೆ ಮಲಗಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಡಬಹುದು' ಅಂತ. ಅಷ್ಟಾದರೆ ಸಾಕಾಗಿತ್ತು ನಮಗೆ. 'ಥ್ಯಾಂಕ್ಯೂ ಸರ್!' ಎಂದೆವು.


ದೇವರಾಯನದುರ್ಗ
ದೇವರಾಯನದುರ್ಗ ತುಮಕೂರು-ಬೆಂಗಳೂರುಗಳ ನಡುವೆ ಇರುವ ಒಂದು ಬೆಟ್ಟ. ಬೆಂಗಳೂರಿನಿಂದ ಸುಮಾರು ೭೦ ಕಿಲೋಮೀಟರ್ ದೂರದಲ್ಲಿದೆ. ಈ ಬೆಟ್ಟ ಸುಮಾರು ೪೦೦೦ ಅಡಿಗಳ ಎತ್ತರವಿದೆ. ಇಲ್ಲಿ ಯೋಗನರಸಿಂಹ ಮತ್ತು ಭೋಗನರಸಿಂಹ ಎಂಬೆರಡು ದೇವಸ್ಥಾನಗಳು ಇವೆ. ಇಲ್ಲಿ ವಾಸವಾಗಿದ್ದ ಅಂಧಕ (ಲಿಂಗಕ) ಎಂಬ ಹೆಸರಿನ ದರೋಡೆಕೋರನನ್ನು ಮೈಸೂರಿನ ದೊರೆ ಹೇಮಚಂದ್ರನ ಪುತ್ರ ಸುಮತಿ ಕೊಂದುಹಾಕಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು ಎಂಬ ಪ್ರತೀತಿಯಿದೆ. ಹಳೆಯ ಕೋಟೆಯ ಅಳಿದುಳಿದ ಅವಶೇಷಗಳನ್ನೂ ಇಲ್ಲಿ ಕಾಣಬಹುದು. 'ನಾಮದ ಚಿಲುಮೆ' ಎಂಬ ಹೆಸರಿನ ಒಂದು ಪುಷ್ಕರಿಣಿ ಸಹ ಇಲ್ಲಿದೆ. ಶ್ರೀರಾಮ ಸೀತೆಯನ್ನು ಹುಡುಕಿಕೊಂಡು ಲಂಕೆಗೆ ತೆರಳುತ್ತಿದ್ದಾಗ ಇಲ್ಲಿಗೆ ಬಂದಿದ್ದ. ಆಗ ಅವನಿಗೆ 'ನಾಮ' ಹಚ್ಚಿಕೊಳ್ಳಲಿಕ್ಕೆ ಇಲ್ಲಿ ನೀರು ಸಿಗದಿದ್ದರಿಂದ, ನೆಲಕ್ಕೆ ಒಂದು ಬಾಣ ಬಿಟ್ಟು ನೀರು ತರಿಸಿದ ಎಂದು ನಂಬಲಾಗಿದೆ. ಆ ಕೊಳದ ಪಕ್ಕ ಇರುವ ಒಂದು ಪುಟ್ಟ ಗುಂಡಿಯೇ ರಾಮನ ಪಾದದ ಗುರುತು ಎಂದು ಸಹ ಗುರುತಿಸಿದ್ದಾರೆ ಜನ!

ದೇವರಾಯನದುರ್ಗದಲ್ಲಿ ಅರಣ್ಯ ಇಲಾಖೆ ನಡೆಸುವ ಒಂದು ವಸತಿ ಮಂದಿರವಿದೆ. ದೇವಸ್ಥಾನದವರ ಒಂದು ಪ್ರವಾಸೀ ಮಂದಿರವಿದೆ. ಬೆಟ್ಟದ ಮೇಲ್ಗಡೆ ಪೋಲೀಸ್ ಇಲಾಖೆಯವರ ಒಂದು ಗೆಸ್ಟ್‍ಹೌಸ್ ಇದೆ.

ಆ ಅಜ್ಜಿ..
ಬೆಟ್ಟ ಹತ್ತಲಿಕ್ಕೆ ಅಲ್ಲಲ್ಲಿ ಟಾರು - ಅಲ್ಲಲ್ಲಿ ಮಣ್ಣಿನ ಒಳ್ಳೆಯ ರಸ್ತೆಯೇ ಇತ್ತು. ತಿಂಗಳ ಬೆಳಕಂತೂ ಬೇಕಾದಷ್ಟಿತ್ತು. ಬ್ಯಾಗೇರಿಸಿ, ಶೇಂಗ ತಿನ್ನುತ್ತಾ ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಒಂದು ಅಜ್ಜಿ ನಡೆದುಬರುತ್ತಿರುವುದು ಕಾಣಿಸಿತು. ಅಜ್ಜಿ ನಮ್ಮ ಬಳಿ ಬಂದದ್ದೇ, "ಈಗ ಮೇಲಕ್ಕೆ ಹೊಂಟೀರೇನಪ್ಪ? ನಾನು ಹೇಳ್ತಿದೀನಿ, ಹೋಗಬ್ಯಾಡ್ರಿ ಮೇಲಕ್ಕೆ. ಅಲ್ಲಿ ನರಹುಳಾನೂ ಇಲ್ಲ. ಉಳಕೊಳ್ಳಲಿಕ್ಕೆ ಅಲ್ಲಿ ನಿಮಗೇನೂ ಇಲ್ಲ. ಕಳ್ಳರು-ಕಾಕರು ಇದಾರೆ. ನೀವು ಹೋದದ್ದೇ ಆದ್ರೆ, ನಾನು ಹೇಳ್ತಿದೀನಿ, ವಾಪಸು ಬರಂಗಿಲ್ಲ ನೋಡ್ರಿ!" ಅಂತು. ನಾವು ಕಕ್ಕಾಬಿಕ್ಕಿಯಾದೆವು. ಇದೇನು ಹೊಸ ವರಾತ ಬಂತಲ್ಲ ಅನ್ನಿಸಿತು. ಅಜ್ಜಿ ತಮಾಷೆಗೆ ಹೇಳುತ್ತಿದೆಯೇ ಅನ್ನಿಸಿತು. ಆದರೆ ಮತ್ತೆ ಅಜ್ಜಿ, "ನೋಡ್ರಿ, ನಾನು ಹೇಳ್ತಿದೀನಿ, ಈಗ ಮೇಲಕ್ಕೆ ಹೋಗಬ್ಯಾಡ್ರಿ. ಇಲ್ಲೇ ಕೆಳಗಡೆ ದೇವಸ್ಥಾನದಾಗೆ ಉಳಕೊಂಡು ಬೆಳಗ್ಗೆ ಬೇಕಾದ್ರೆ ಹೋಗ್ರಿ" ಅಂದಿತು. ನಮಗೆ ಅಷ್ಟೊಂದು ಭಯವೇನಿರಲಿಲ್ಲ. ಅಲ್ಲದೇ ತುಂಬಾ ಜನ, ವೆಹಿಕಲ್ಲುಗಳು ಬೆಟ್ಟದಿಂದ ಇಳಿದುಬರುತ್ತಿದ್ದುದರಿಂದ ಹೆದರಬೇಕಾದ ಅವಶ್ಯಕತೆಯಿಲ್ಲ ಅನ್ನಿಸಿತು. ಆದರೂ ಅಜ್ಜಿ ಹಾಗೆ ಹೇಳಿದಮೇಲೆ ಹುಂಬತನ ಮಾಡಿ ಮುನ್ನುಗ್ಗುವುದಕ್ಕೆ ಮನಸ್ಸಾಗಲಿಲ್ಲ. ಹಾಗಾಗಿ, ಅಜ್ಜಿಯ ಜೊತೆಯೇ ನಾಲ್ಕು ಹೆಜ್ಜೆ ವಾಪಸು ಬಂದೆವು. ಅಜ್ಜಿಯ ಬಳಿ ಅವಳ ಬಗ್ಗೆ ವಿಚಾರಿಸಿದೆವು. ಅಜ್ಜಿ ಭಿಕ್ಷೆ ಬೇಡಲಿಕ್ಕೆ ಅಲ್ಲಿಗೆ ಹೋಗಿದ್ದು ಅಂತ ಗೊತ್ತಾಯಿತು. ಹಾಗಾದರೆ ಈ ಅಜ್ಜಿಗೆ ಬುದ್ಧಿಭ್ರಮಣೆಯಾಗಿರಲಿಕ್ಕೂ ಸಾಕು ಅನ್ನಿಸಿ, 'ಏ.. ಏನಾಗಲ್ಲ ಬರ್ರೋ..' ಅಂದುಕೊಂಡು ಮತ್ತೆ ಬೆಟ್ಟದತ್ತ ಮುಖ ಮಾಡಿದೆವು.

ಬೆಟ್ಟವೆಂದರೆ...
ದೇವರಾಯನದುರ್ಗದ ಈ ಬೆಟ್ಟ ಚಾರಣಪ್ರಿಯರಿಗೇನು ಅಷ್ಟೊಂದು ಇಷ್ಟವಾಗಲಾರದು. ಏಕೆಂದರೆ ಇಲ್ಲಿ ಚಾರಣ ಮಾಡಲಿಕ್ಕೆ ಅವಕಾಶವೇ ಇಲ್ಲ. ಬೆಟ್ಟದ ಮೇಲ್ತುದಿಯವರೆಗೂ ಒಳ್ಳೆಯ ರಸ್ತೆಯೇ ಇದೆ. ಅಷ್ಟಷ್ಟು ಕಲ್ಲು, ಅಷ್ಟಷ್ಟು ಮಣ್ಣು, ಅಷ್ಟಷ್ಟು ಗಿಡ-ಮರ-ಪೊದೆ ಬೆಟ್ಟವನ್ನಾವರಿಸಿವೆ.

ನಾವು ಹೊರಡುವಷ್ಟರಲ್ಲೇ ಕತ್ತಲಾಗಿತ್ತಾದರೂ ಚೆನ್ನಾಗಿ ಬೆಳದಿಂಗಳಿತ್ತು. ಕೈಯಲ್ಲಿ ಟಾರ್ಚನ್ನೂ ಹಿಡಿದಿದ್ದೆವು. ಸಾಕಷ್ಟು ಹೋಗುವ-ಬರುವ ವಾಹನಗಳಿದ್ದವು. ಹೀಗಾಗಿ, ನಮ್ಮ ಚಾರಣಕ್ಕೆ ಯಾವ ತೊಂದರೆಯೂ ಆಗಲಿಲ್ಲ.

ಮೇಲೆ
ತುದಿಯನ್ನು ಮುಟ್ಟಿದಮೇಲೆ ಅಲ್ಲಿನ ಗೆಸ್ಟ್‍ಹೌಸನ್ನು ಒಮ್ಮೆ ನೋಡಿ ಬಂದೆವು. ಸಣ್ಣದಾಗಿ ತೆರೆದಿದ್ದ ಬಾಗಿಲಿಂದ ಒಳಗಡೆ ಗುಂಡು ಹಾಕುತ್ತಾ ಕುಳಿತಿದ್ದ ಜನಗಳ ಪರಿವಾರ ಕಾಣಿಸಿತು. ಇಲ್ಲಿ ಪಬ್ಲಿಕ್‍ಗೆ ರೂಮುಗಳನ್ನು ಕೊಡುವುದೇ ಇಲ್ಲವಂತೆ. ಎಲ್ಲಾ ರೂಮುಗಳೂ ಪಿ.ಡಬ್ಲ್ಯೂ.ಡಿ. ಆಫೀಸರುಗಳಿಗೆ, ವಿ.ಐ.ಪಿ.ಗಳಿಗೆ, ಸರ್ಕಾರೀ ಅಧಿಕಾರಿಗಳಿಗೆ ಮೀಸಲಿರುತ್ತದೆ. ಅವರು ಹೀಗೆ ಆಗಾಗ ಬಂದು ಗುಂಡು ಹಾಕುತ್ತಾ, ಇಸ್ಪೀಟು ಆಡುತ್ತಾ ಕಾಲ ಕಳೆಯುತ್ತಾರೆ. ನಮಗಂತೂ ಅಲ್ಲಿನ ಆ ಗೆಸ್ಟ್‍ಹೌಸು ಅನೈತಿಕ ಚಟುವಟಿಕೆಗಳಿಗೆ ಆಶ್ರಯವಿತ್ತಂತೆಯೂ ಅನ್ನಿಸಿತು. ನಾವು ಅಲ್ಲಿ ತಂಗುವ ಆಸೆಯನ್ನು ಬಿಟ್ಟುಬಿಟ್ಟೆವು. ಹೊರಗಡೆಯೇ ಕಾಲ ಕಳೆಯೋಣ ಎಂದು ತೀರ್ಮಾನಿಸಿದೆವು.

ಫೈರ್‌ಕ್ಯಾಂಪ್!
ಇಯರೆಂಡಾದ್ದರಿಂದ, ಬೆಟ್ಟದ ಮೇಲೆ ಸಿಕ್ಕಾಪಟ್ಟೆ ಜನ ಇದ್ದರು. ಬೆಟ್ಟದಲ್ಲಿ ಅಲ್ಲಲ್ಲಿ ಒಲೆ ಹೂಡಿಕೊಂಡು, ಸಾಮಾನು-ಸರಂಜಾಮುಗಳನ್ನೆಲ್ಲಾ ತಂದುಕೊಂಡು, ಅಡುಗೆ ಮಾಡಿಕೊಂಡು, ಗುಂಡು ಹಾಕುತ್ತಾ ಕುಳಿತಿದ್ದ ಗುಂಪುಗಳಿದ್ದವು. ತುಂಬಾ ಗಲಾಟೆಯಿತ್ತು. ನಾವು ಇವರೆಲ್ಲರಿಂದ ಸ್ವಲ್ಪ ದೂರ ಇರಬೇಕು ಅನ್ನಿಸಿತು. ಪ್ರಶಾಂತ ಸ್ಥಳವನ್ನರಸಿ ಹೊರಟೆವು. ಒಂದು ಕಡೆ ಅಂತಹ ಜಾಗ ಸಿಕ್ಕಿತು. ಅಲ್ಲೇ ನಮ್ಮ ಬ್ಯಾಗುಗಳನ್ನು ಇಟ್ಟು, ಕಟ್ಟಿಗೆ ಒಟ್ಟುಮಾಡಿ ಬೆಂಕಿ ಹಚ್ಚಿ, ಫೈರ್‌ಕ್ಯಾಂಪ್ ಮಾಡಿದೆವು. ನಿಧಾನಕ್ಕೆ ಹೊತ್ತಿಕೊಂಡ ಬೆಂಕಿ ತನ್ನ ಶಾಖವನ್ನು ಸುತ್ತಲೂ ಸೂಸಲಾರಂಭಿಸಿತು. ಅದರ ಕೆಂಬಣ್ಣ ಬೆಳದಿಂಗಳ ಬಿಳುಪಿನೊಂದಿಗೆ ಗೊತ್ತೇ ಆಗದಂತೆ ಬೆರೆಯಲಾರಂಭಿಸಿತು. ಸುತ್ತಲೂ ಕುಳಿತು ಹರಟೆ ಶುರುಹಚ್ಚಿದೆವು.

ಹರಟೆ ಹರಟೆ ಹರಟೆ
ಪ್ಯಾಂಟು ಬಿಚ್ಚಿ, ಚಡ್ಡಿ ಧರಿಸಿ, ಮೈತುಂಬ ಕೋಟು/ಸ್ವೆಟರು ತೊಟ್ಟು, ಕಟ್ಟಿಕೊಂಡು ಹೋಗಿದ್ದ ಶೇಂಗ, ಬಟಾಣಿ, ಅದೂ-ಇದುಗಳನ್ನು ತಿನ್ನುತ್ತಾ ಕುಳಿತೆವು. ಉದ್ದುದ್ದ ಹರಟೆಯಲ್ಲಿ ತೊಡಗಿದೆವು. ಎರಡುಸಾವಿರದ ಆರು ಹೇಗಿತ್ತು? ಎರಡುಸಾವಿರದ ಏಳರಲ್ಲಿ ಸಾಧಿಸಬೇಕೆಂದಿರುವ ಗುರಿಗಳೇನು? -ಇತ್ಯಾದಿ ಚರ್ಚಿಸಬೇಕು ಎಂದುಕೊಂಡಿದ್ದೆವಾದರೂ ಅದು ಸಾಧ್ಯವಾಗಲಿಲ್ಲ. ಆ ವಿಷಯವನ್ನು ಎತ್ತಿಕೊಂಡಕೂಡಲೇ ಚರ್ಚೆ ಎತ್ತಲೋ ಸಾಗುತ್ತಿತ್ತು.

ಸಮಯ ಉರುಳುತ್ತಿತ್ತು. ಸುಮಾರು ಹತ್ತೂ ವರೆ ಆಗಿತ್ತು. ಬೆಳದಿಂಗಳ ಮಳೆ ಅವಿರತವಾಗಿ ಮುಂದುವರೆದಿತ್ತು. ಆಗಸದಲ್ಲಿ ಚಂದಿರ ತೇಲುತ್ತಿದ್ದ. ಇಬ್ಬನಿ ಬೀಳುತ್ತಿತ್ತು. ಬೆಂಕಿ ಉರಿಯುತ್ತಿತ್ತು. ಚರ್ಚೆ ಮುಂದುವರೆದಿತ್ತು.... ಆಗ ಬಂದ ಆತ!

ಮಂಜ ಬಂದ!
ಹರಟೆಯಲ್ಲೇ ಮುಳಿಗಿದ್ದ ನಮಗೆ ಹೊರಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದು ಬೇಕಿರಲಿಲ್ಲ. ಆದರೆ ನಾವು ಸಡನ್ನಾಗಿ ಎಚ್ಚರಾಗುವಂತೆ ಮಾಡುವಂತಹ ಘಟನೆ ಆಗ ನಡೆಯಿತು. ಕೈಯಲ್ಲಿ ಕತ್ತಿ ಹಿಡಿದಿದ್ದ ಒಬ್ಬ ವ್ಯಕ್ತಿ ನಮ್ಮೆದುರು ಪ್ರತ್ಯಕ್ಷನಾದ! 'ಏನಣ್ಣಾ.. ಎಲ್ಲಿಂದ ಬಂದಿದೀರಿ...? ಮೂವರೇನಾ..?' ಎನ್ನುತ್ತಾ ಬಂದವನು ತನ್ನ ಕತ್ತಿಯನ್ನು ನಮ್ಮ ಪಕ್ಕದಲ್ಲಿ ಬೀಳಿಸಿದಂತೆ ಇಟ್ಟು ತಾನೂ ಬೆಂಕಿ ಕಾಯಿಸಲಿಕ್ಕೆ ಕುಳಿತುಬಿಟ್ಟ! ಅವನ ರೂಪ, ಇದ್ದಕ್ಕಿದ್ದಂತೆ ಎರಗಿಬಂದ ಅವನ ರೀತಿ, ಕೈಯಲ್ಲಿದ್ದ ಕತ್ತಿ, ಕೇಳಿದ ಪ್ರಶ್ನೆ ಎಲ್ಲಾ ನೋಡಿದ ನಾವು ತಕ್ಷಣ ಅಲರ್ಟ್ ಆದೆವು. ಅಜ್ಜಿ ಹೇಳಿದ್ದು ಥಟ್ಟನೆ ನೆನಪಾಯಿತು.

ಸಣ್ಣಕೆ ಭಯವಾಗಲು ಶುರುವಾಯಿತು... ಆದರೂ ಧೃತಿಗೆಡಲಿಲ್ಲ. 'ಇಲ್ಲೇ ತುಮಕೂರಿನಿಂದ ಬಂದದ್ದು. ಮೂರಲ್ಲ; ಇನ್ನೂ ನಾಲ್ಕು ಜನ ಇದಾರೆ, ಇಲ್ಲೇ ಮೇಲ್ಗಡೆ ಹೋಗಿದಾರೆ...' ಎಂಬುದಾಗಿ ಸುಳ್ಳಿನ ಕಂತೆಯನ್ನು ಕಟ್ಟಲಾರಂಭಿಸಿದೆವು. 'ನಿಮ್ಮ ಹೆಸರೇನಣ್ಣ?' ಅಂದ ಅಂವ. 'ನನ್ನ ಹೆಸರು ಸುರೇಶ' 'ನಾನು ರಾಜು' 'ನಾನು ರಮೇಶ್' ಎಂಬುದಾಗಿ ಸುಳ್ಳು ಹೆಸರುಗಳನ್ನು ಹೇಳಿದೆವು. ಅವನ ಕಣ್ಣುಗಳು ನಮ್ಮೆಲ್ಲರನ್ನೂ ಗಮನಿಸುತ್ತಿದ್ದವು. 'ರೂಮ್ ಬುಕ್ ಮಾಡಿದೀರಾ ಸುರೇಶಣ್ಣ?' -ಕೇಳಿದ. ನಮ್ಮಲ್ಲಿ ಯಾರು ಸುರೇಶಣ್ಣ ಎಂಬುದು ಕನ್‍ಫ್ಯೂಸ್ ಆಯಿತು ಒಂದು ಕ್ಷಣ! ಆದರೂ ತಡವರಿಸದೆ, 'ಹೂಂ. ಮೇಲ್ಗಡೆ ಡಿ.ಐ.ಜಿ. ರಮೇಶ್ ಇದಾರಲ್ಲ, ಅವರು ನಮಗೆ ಪರಿಚಯ. ನಾವೂನೂ ಪೋಲೀಸ್ ಡಿಪಾರ್ಟ್‌ಮೆಂಟಿನವರೇ. ಹೀಗಾಗಿ ರೂಮ್ ಸಿಕ್ಕಿದೆ' ಎಂದೆವು -ಅವನಿಗೆ ಭಯ ಹುಟ್ಟಿಸಲೋಸುಗ.

ಆದರೆ ಅವನಿಗೆ ನಾವು ಅಲರ್ಟ್ ಆಗಿರುವುದು ಗೊತ್ತಾಗಿಹೋಯಿತು. ಇವರ ಹತ್ತಿರ ತನ್ನ ಆಟ ನಡೆಯಲಾರದು ಎನ್ನಿಸಿತೇನೋ. ಅವನು ಕೂಲ್ ಆಗತೊಡಗಿದ. ನಾವೂ ಅವನ ಬಳಿ ಅವನ ಬಗ್ಗೆ ವಿಚಾರಿಸಿದೆವು. ತನ್ನ ಹೆಸರು ಮಂಜು ಎಂದ. ಬೆಟ್ಟದ ಕೆಳಗಡೆ ತಾನೂ ಮತ್ತು ತನ್ನ ಅಣ್ಣನ ಅಂಗಡಿಯಿದೆ ಎಂದು ಹೇಳಿದ. 'ಎಣ್ಣೆ-ಗಿಣ್ಣೆ ಬೇಕಾ ಸಾರ್, ತಂದುಕೊಡ್ತೀನಿ' ಅಂದ. 'ಏನೂ ಬ್ಯಾಡಪ್ಪ' ಎಂದೆವು.

ನಮಗೆ ತುಂಬಾ ಭಯವೇನೂ ಆಗುತ್ತಿರಲಿಲ್ಲ. ಆದರೆ ಇವನನ್ನು ಹೀಗೆ ನಮ್ಮ ಜೊತೆ ಕೂರಿಸಿಕೊಂಡಿರುವುದು ಕ್ಷೇಮವಲ್ಲ ಅಂತ ಮಾತ್ರ ಅನ್ನಿಸುತಿತ್ತು. 'ಏನು ತಾನೇ ಮಾಡಿಯಾನು? ನಾವು ಮೂವರಿದ್ದೇವೆ, ಇವನು ಒಬ್ಬನೇ' ಎಂಬ ಧೈರ್ಯದ ಜೊತೆಗೇ 'ಇವನ ಜೊತೆ ಇನ್ನೂ ಎಷ್ಟು ಜನ ಇದ್ದಾರೋ ಏನೋ' ಅಂತಲೂ ಯೋಚನೆಯಾಯಿತು. ಹೇಗಾದರೂ ಮಾಡಿ ಇವನನ್ನು ಸಾಗಹಾಕಬೇಕು ಎಂದಾಲಾಚೋಸಿದೆವು.

'ಸರಿ, ಮೇಲ್ಗಡೆ ಹೋಗಿ ಊಟ ಮಾಡ್ಕೊಂಡು ಆಮೇಲೆ ಬರೋಣ ಬನ್ರೋ' ಅಂತ ನಮನಮಗೇ ಹೇಳಿಕೊಂಡು ಎದ್ದುನಿಂತೆವು. ನಮ್ಮ ಬ್ಯಾಗುಗಳನ್ನೆತ್ತಿಕೊಂಡು ಹೊರಟೇಬಿಟ್ಟೆವು. ಅವನನ್ನು ಪರಿಕಿಸಲೋಸುಗ, 'ನೀವೂ ಬನ್ನಿ ಮಂಜು, ನಮ್ಮ ಜೊತೇನೇ ಊಟ ಮಾಡುವಂತ್ರಿ' ಅಂತ ಕರೆದೆವು. ಆದರೆ ಆತ ಬರಲಿಕ್ಕೆ ಒಪ್ಪಲಿಲ್ಲ. 'ಇಲ್ಲ ಸುರೇಶಣ್ಣ, ನಾನು ಹೋಗ್ತೀನಿ ಸುರೇಶಣ್ಣ. ಕೆಳಗಡೆ ನಮ್ಮನೆ ಐತಣ್ಣ. ನಾನು ಹೋಗ್ತೀನಣ್ಣ' ಎಂದವನೇ ಅಲ್ಲಿಂದ ಕಾಲ್ಕಿತ್ತ.

ಕಳ್ಳನಿಗೇ ಚಳ್ಳೆಹಣ್ಣು!
ನಾವು ಕುಳಿತಿದ್ದ ಜಾಗ ಎಂಥದಿತ್ತೆಂದರೆ ಅವನೇನಾದರೂ ನಮ್ಮ ಮೇಲೆ ಎರಗಿ ಬಂದಿದ್ದರೆ ನಾವು ಓಡಿ ತಪ್ಪಿಸಿಕೊಳ್ಳಲಿಕ್ಕೂ ಆಗುತ್ತಿರಲಿಲ್ಲ. ಜನರ ಗೌಜಿನಿಂದ ದೂರವಿರಬೇಕು ಎಂದುಕೊಂಡು ನಾವು ಅರಸಿ ಆರಿಸಿದ್ದ ಈ ಸ್ಥಳ ನಮಗೇ ಕಂಟಕಕಾರಿಯಾಗಿತ್ತು. ಅವನು ಅತ್ತ ಹೋದದ್ದೇ ನಾವು ಜನಗಳು ಜಾಸ್ತಿ ಇರುವ ಕಡೆಗೆ ಧಾವಿಸಿದೆವು.

ನಾವು ಕೇಳಿದ ಪ್ರಶ್ನೆಗಳಿಗೆ ಅವನು ಹೇಳುತ್ತಿದ್ದ ಉತ್ತರಗಳು ಒಂದಕ್ಕೊಂದಕ್ಕೆ ಸಂಭಂದವಿರುತ್ತಿರಲಿಲ್ಲ. ಅಲ್ಲದೇ ಅವನ ಚಲನವಲನಗಳು, ಓರೆಗಣ್ಣಿನಿಂದ ನಮ್ಮನ್ನು ಗಮನಿಸುತ್ತಿದ್ದ ರೀತಿ, ಅವನ ಕತ್ತಿ... ಎಲ್ಲಾ ಕಂಡಿದ್ದ ನಾವು ನಿಸ್ಸಂಶಯವಾಗಿ ಅವನೊಬ್ಬ ದರೋಡೆಕೋರ ಎಂಬ ತೀರ್ಮಾನಕ್ಕೆ ಬಂದಿದ್ದೆವು. ಕಳ್ಳನಿಗೇ ಚಳ್ಳೆಹಣ್ಣು ತಿನ್ನಿಸಿದ ಖುಷಿಯಲ್ಲಿ ಹಿಗ್ಗಿದೆವು. ಆದರೆ 'ಅವನು ತನ್ನ ಮತ್ತಷ್ಟು ಸಂಗಡಿಗರನ್ನು ಕಟ್ಟಿಕೊಂಡು ಮತ್ತೆ ಬಂದುಬಿಟ್ಟರೆ?' ಎಂಬ ಭಯ ಮಾತ್ರ ಹಾಗೆಯೇ ಇತ್ತು.

ಮುಗಿಯದ ರಾತ್ರಿ
ಹೊಸ ವರ್ಷವನ್ನು ಹೊಸ ರೀತಿಯಲ್ಲಿ, ಸಂಭ್ರಮದಿಂದ ಸ್ವಾಗತಿಸಬೇಕೆಂದುಕೊಂಡು ಇಲ್ಲಿಗೆ ಬಂದಿದ್ದ ನಾವು ಭಯ, ತಳಮಳಗಳಲ್ಲಿ ತೊಳಲಾಡುವಂತಾಯಿತು. ಇನ್ನೂ ರಾತ್ರಿ ಹನ್ನೊಂದಾಗಿತ್ತು. ಹೊಸ ವರ್ಷ ಬರುವುದಕ್ಕೆ ಇನ್ನೂ ಒಂದು ಗಂಟೆ ಕಾಯಬೇಕಿತ್ತು. ಆದಷ್ಟು ಬೇಗ ಗಂಟೆ ಹನ್ನೆರಡಾಗಿ, ಹೊಸ ವರ್ಷ ಬಂದು, ಈ ಕಾವಳದ ರಾತ್ರಿ ಮುಗಿದು, ನಿಚ್ಛಳ ಬೆಳಕಿನ ಬೆಳಗು ಬಂದರೆ ಸಾಕಿತ್ತು. ನಾವು ಅಲ್ಲೇ ಬದಿಯಲ್ಲಿ ಕುಂತು, ಕಟ್ಟಿಕೊಂಡು ಹೋಗಿದ್ದ ಚಪಾತಿಯನ್ನು ತಿಂದು ಮುಗಿಸಿದೆವು. ಮತ್ತೆ ಒಂದಷ್ಟು ಕಟ್ಟಿಗೆಯನ್ನು ಒಟ್ಟುಹಾಕಿ ಸಮೀಪದಲ್ಲೇ ಬೆಂಕಿ ಮಾಡಿದೆವು. ಬೆಂಕಿ ಇಲ್ಲದೇ ಆ ಚಳಿಯ ರಾತ್ರಿಯನ್ನು ನಾವು ಕಳೆಯುವುದೂ ಕಷ್ಟವಿತ್ತು. ಅದೂ ಇದೂ ಮಾತನಾಡುತ್ತಾ ಹೊಸವರುಷದ ಆಗಮನಕ್ಕೆ ಚಾತಕದಂತೆ ಕಾಯತೊಡಗಿದೆವು.

ಬಂತು ೨೦೦೭
ವಾಚಿನ ಮುಳ್ಳು ಓಡುತ್ತೋಡುತ್ತ... ಹನ್ನೊಂದೂ ಕಾಲು..ಹನ್ನೊಂದೂ ವರೆ..ಹನ್ನೊಂದೂ ಮುಕ್ಕಾಲು.. ಹನ್ನೆರಡು.. ಹಾ! ಬಂದೇ ಬಿಟ್ಟಿತು ಹೊಸ ವರುಷ! ನೋಡನೋಡುತ್ತಿದ್ದಂತೆಯೇ ಗಂಟೆ ಹನ್ನೆರಡಾಗಿ ಎರಡು ಸಾವಿರದ ಆರನೇ ಇಸವಿಯಲ್ಲಿದ್ದ ನಮ್ಮನ್ನು ಎರಡು ಸಾವಿರದ ಏಳನೇ ಇಸವಿಯಲ್ಲಿ ಕೂರಿಸಿಬಿಟ್ಟಿತ್ತು. ಇಡೀ ಬೆಟ್ಟಕ್ಕೆ ಬೆಟ್ಟವೇ 'ಹೋ..' 'ಹ್ಯಾಪಿ ನ್ಯೂ ಇಯರ್..' ಎಂಬ ಚೀರಾಟದಿಂದ ತುಂಬಿಕೊಂಡಿತು. ಏನು ಮಾಡಬೇಕೆಂದು ತಿಳಿಯದೇ ನಾವೂ ಕೂಗಿಕೊಂಡೆವು. 'ಹ್ಯಾಪಿ ನಿವ್ವಿಯರ್.. ಹ್ಯಾಪಿ ನಿವ್ವಿಯರ್..!' ಒಬ್ಬರನ್ನೊಬ್ಬರು ಆಲಂಗಿಸಿಕೊಂಡೆವು, ಶೇಕ್-ಹ್ಯಾಂಡ್ ಮಾಡಿಕೊಂಡೆವು, ಸಿಗುತ್ತಿದ್ದ ಚೂರುಪಾರು ನೆಟ್‍ವರ್ಕ್‍ ಬಳಸಿಯೇ ಗೆಳೆಯರಿಗೆ ಮೆಸೇಜು ಕಳಿಸಿದೆವು. ಕೆಲವರಿಗೆ ಕಾಲ್ ಮಾಡಿದೆವು. ಓಹೋ... ಹೊಸ ವರ್ಷ... ಎರಡ್ಸಾವ್ರದೇಳು ಬಂದೇ ಬಿಟ್ಟಿತ್ತು!

ಕೋಳಿ ನಿದ್ರೆ
ರಾತ್ರಿ ಸುಮಾರು ಎರಡೂ ವರೆಯ ವರೆಗೆ ಹಾಗೇ ಬೆಂಕಿ ಕಾಯಿಸುತ್ತಾ ಕುಳಿತಿದ್ದ ನಾವು ಆಮೇಲೆ, ನಮಗೆ ಮಲಗಿಕೊಳ್ಳಲಿಕ್ಕೆ ಜಾಗ ಕೊಡುತ್ತೀನಿ ಎಂದಿದ್ದ ಆಸಾಮಿಯನ್ನು ಹುಡುಕಿಕೊಂಡು ಅವನ ಆಫೀಸಿನ ಕಡೆಗೆ ಹೊರಟೆವು. ಕನಿಷ್ಟ ಮೂರು ತಾಸಾದರೂ ನಿದ್ರೆ ಮಾಡದಿದ್ದರೆ ನಾಳೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ, ಒಂದು ಕೋಳಿ ನಿದ್ರೆ ತೆಗೆಯಲೇಬೇಕೆಂದು ತೀರ್ಮಾನಿಸಿದೆವು. ಅಲ್ಲದೇ ಬೆಳಗ್ಗೆ ಸೂರ್ಯೋದಯವನ್ನು ನೋಡಲು ಬೇಗನೆ ಏಳಬೇಕಿತ್ತು ನಾವು. ಆದರೆ ಆ ಮನುಷ್ಯ ತನ್ನ ಸ್ನೇಹಿತರೊಂದಿಗೆ ಕುಡಿಯುತ್ತಾ ಕುಳಿತಿರುವುದು ಕಾಣಿಸಿತು. ಅವನನ್ನು ಡಿಸ್ಟರ್ಬ್ ಮಾಡುವುದು ಬೇಡ ಅನ್ನಿಸಿತು. ಪಕ್ಕದಲ್ಲೇ ಇದ್ದ ಮತ್ತೊಂದು ಆಫೀಸಿಗೆ ವಿಶಾಲವಾದ ಕಟ್ಟೆಯಿತ್ತು. ಅನೇಕರು ಅಲ್ಲಿಯೇ ಮಲಗಿದ್ದರು. ನಾವೂ ಅಲ್ಲೇ, ನಮ್ಮ ಚಾಪೆ ಹಾಸಿ, ರಗ್ಗು ಬೆಡ್‍ಶೀಟುಗಳನ್ನು ಹೊದ್ದು ಮಲಗಿಬಿಟ್ಟೆವು. ಸುಸ್ತಿಗೆ ನಿದ್ರೆಯೂ ಬಂತು.

ಹೊಸ ಬೆಳಗು
ಆರು ಗಂಟೆಗೆ ಸರಿಯಾಗಿ ನಮ್ಮ ಮೊಬೈಲಿನ ಅಲಾರಾಂ ಹೊಡೆದುಕೊಂಡಿತು. ಕಣ್ಣುಬಿಟ್ಟು ನೋಡಿದರೆ ಇನ್ನೂ ಕತ್ತಲಿತ್ತು. ದಟ್ಟವಾಗಿ ಇಬ್ಬನಿ ಬೀಳುತ್ತಿತ್ತು. 'ಏಯ್, ಇಷ್ಟು ಮುಂಚೆ ಎದ್ದು ಏನ್ರೋ ಮಾಡೋದು? ಮಲಕ್ಕೊಳ್ರೋ' ಎಂದೆ ನಾನು ಗೆಳೆಯರ ಬಳಿ. ಆದರೆ ಅವರು ಬಿಡಲಿಲ್ಲ. ನಾನು ಹೊದ್ದಿದ್ದ ಬೆಡ್‍ಶೀಟನ್ನು ಕಿತ್ತುಹಾಕಿ 'ಏಳು ಸಾಕು, ಇನ್ನೇನು ಸ್ವಲ್ಪ ಹೊತ್ತಿಗೆ ಸೂರ್ಯ ಹುಟ್ಟುತ್ತಾನೆ. ಬೆಟ್ಟದ ತುದಿಗೆ ಹೋಗಬೇಕು. ಅಲ್ಲಿಗೆ ಹೋಗುವಷ್ಟರಲ್ಲಿ ಸರಿಯಾಗೊತ್ತೆ' ಅಂತಂದು ತಾವು ಬ್ಯಾಗು ರೆಡಿ ಮಾಡಲು ಶುರು ಮಾಡಿದರು. ನಿರುಪಾಯನಾಗಿ ನಾನೂ ಎದ್ದೆ. ಚಳಿಗೆ ಮೈ ಗಡಗುಟ್ಟುತ್ತಿತ್ತು. ತೊಟ್ಟಿದ್ದ ಜಾಕೀಟು ಏನಕ್ಕೂ ಸಾಲುತ್ತಿರಲಿಲ್ಲ. ಬೆಡ್‍ಶೀಟು, ರಗ್ಗುಗಳನ್ನು ಬ್ಯಾಗಿಗೆ ತುರುಕಿ ಅಲ್ಲಿಂದ ಹೊರಟೆವು.

ನಾವಿದ್ದ ಜಾಗದ ಪಕ್ಕದ ಬೆಟ್ಟದಲ್ಲಿ ಆ ದೇವಸ್ಥಾನವಿರುವುದು. ಪಕ್ಕದ ಬೆಟ್ಟವೆಂದರೆ ಇದೇ ಬೆಟ್ಟ; ಆದರೆ ಒಮ್ಮೆ ಇಳಿದು ಹತ್ತಬೇಕು. ಆ ದೇವಸ್ಥಾನದಿಂದಲೂ ಮೇಲೆ ಹೋದರೆ ಅಲ್ಲಿ 'ಸನ್‍ರೈಸ್‍ ವ್ಯೂ ಪಾಯಿಂಟ್' ಅಂತಲೇ ಇದೆ.

ನಾವು ಅಲ್ಲಿಗೆ ಮುಟ್ಟುವಷ್ಟರಲ್ಲೇ ಆಗಸದ ಪೂರ್ವ ದಿಗಂತದಲ್ಲಿ ಬಣ್ಣಗಳ ಓಕುಳಿ ಪ್ರಾರಂಭವಾಗಿತ್ತು. ಮೋಡಗಳ ಮೇಲಿನ ಕೆಂಬಣ್ಣ 'ದಿನಕರ ಸಧ್ಯದಲ್ಲೇ ಬರುತ್ತಿದ್ದಾನೆ' ಎನ್ನುತ್ತಿತ್ತು. ನಾವೆಲ್ಲಾ ಪೂರ್ವ ದಿಕ್ಕನ್ನೇ ನಿರುಕಿಸುತ್ತಾ ರವಿಯ ಆಗಮನಕ್ಕಾಗಿ ನಿರೀಕ್ಷಿಸತೊಡಗಿದೆವು. ಕೆಲವೇ ಕ್ಷಣಗಳಲ್ಲಿ ಸೂರ್ಯ ಮೂಡಿಬಂದ. ಇಷ್ಟಿಷ್ಟೇ ಇಷ್ಟಿಷ್ಟೇ ತನ್ನ ಮುಖವನ್ನು ತೋರಿಸುತ್ತಾ ಮೇಲೇರೇ ಬರುತ್ತಿದ್ದ. ಹೊಸ ವರುಷದ ಹೊಸ ಬೆಳಗಿನ ಹೊಸ ಸೂರ್ಯನ ಹೊಸ ಕಿರಣಗಳು ನಮ್ಮ ಮೈಮೇಲೆ ಬಿದ್ದು ಹೊಸದೇ ಆದ ಪುಳಕವುಂಟಾಯಿತು. ಮೊಬೈಲ್ ಕೆಮೆರಾದಿಂದ ಫೋಟೋ ಕ್ಲಿಕ್ಕಿಸಿಕೊಂಡೆವು. ಅದೆಷ್ಟೋ ಹೊತ್ತು ಅಲ್ಲೇ ಇದ್ದೆವು. ನಂತರ ನಿಧನಿಧಾನವಾಗಿ ಬೆಟ್ಟದಿಂದ ಕೆಳಗಿಳಿಯತೊಡಗಿದೆವು.

ಮತ್ತೆ ಮಂಜ!
ಭಕ್ತಿಯಿದ್ದವರು ಗುಡಿಗೆ ಹೋಗಿ ದೇವರ ದರುಶನ ಪಡೆದು ಬಂದರು. ಗುಡಿಯ ಎದುರಿನ ಪುಷ್ಕರಿಣಿಯಲ್ಲಿನ ನೀರು ಹಿಮದಷ್ಟು ತಣ್ಣಗಿತ್ತು. ಮಧ್ಯೆ ಒಂದು ಕಡೆ ನಲ್ಲಿ ಸಿಕ್ಕಿತು. ಮುಖ ತೊಳೆದು, ಹಲ್ಲುಜ್ಜಿ 'ಫ್ರೆಶ್' ಆದೆವು. ಮತ್ತೆ ಕೆಳಗಿಳಿಯತೊಡಗಿದೆವು. ಬೆಟ್ಟದ ತಪ್ಪಲನ್ನು ಮುಟ್ಟಿದೆವು. ಆಗ ಕಂಡ ಮಂಜ!

ಮತ್ತೆ ಮಂಜ! ಅದೇ ಮಂಜ! ನಿನ್ನೆ ರಾತ್ರಿ ನಮ್ಮನ್ನು ಭಯದ ಕೂಪದೊಳಕ್ಕೆ ನೂಕಿದ್ದ ಮಂಜ! ತನ್ನ ಅಣ್ಣನೊಂದಿಗೆ ಎಳನೀರಿನ ವ್ಯಾಪಾರದಲ್ಲಿ ತೊಡಗಿದ್ದ್. ನಮ್ಮನ್ನು ಕಂಡೊಡನೆ 'ಓ ಸುರೇಶಣ್ಣ... ಬನ್ನಿ ಸುರೇಶಣ್ಣ..' ಎಂದ. ನಮಗೋ ಪರಮಾಶ್ಚರ್ಯ! ಅದೇ ಮಂಜ, ರಾತ್ರಿ ನಮಗೆ ಅಷ್ಟೆಲ್ಲ ಟೆನ್ಶನ್ ಕೊಟ್ಟಿದ್ದ ಅದೇ ಮಂಜ, ಇಂದು ಈ ಮುಂಜಾವಿನಲ್ಲಿ ಹೊಸಬನೇ ಆಗಿ ಕಾಣುತ್ತಿದ್ದ. ಅವನ ಬಗ್ಗೆ ನಾವು ಕಲ್ಪಿಸಿಕೊಂಡಿದ್ದೆಲ್ಲವನ್ನೂ ನಮ್ಮ ಮನಸ್ಸು ಒಂದೇ ಕ್ಷಣದಲ್ಲಿ ತಳ್ಳಿಹಾಕಿಬಿಟ್ಟಿತು. 'ಎಳ್ನೀರು ಕುಡಿತೀರಾ ಅಣ್ಣಾ?' ಕೇಳಿದ. ಮಾತೇ ತೋಚದೆ ಬರೀ ಹೂಂಗುಟ್ಟಿದೆವು. ನಮಗೆ ತುಂಬಾ ಪ್ರೀತಿಯಿಂದ ಎಳನೀರು ಕೆತ್ತಿಕೊಟ್ಟ. ಕುಡಿಯುತ್ತಿದ್ದರೆ ಅಮೃತವನ್ನು ಕುಡಿದಂತೆನಿಸುತ್ತಿತ್ತು. ದುಡ್ಡುಕೊಟ್ಟು ಹೊರಟೆವು. 'ಮತ್ತೆ ಬನ್ರಣ್ಣ' ಎಂದು ಕೈಬೀಸಿದ ಮಂಜ.



ಹೊಸ ಆಶಾವಾದದೊಂದಿಗೆ ವಾಪಸ್
'ಸುಮ್‍ಸುಮ್ನೇ ಏನೇನೋ ಅಂದ್ಕೋಂಡ್ವಲ್ರೋ ಅವನ ಬಗ್ಗೆ ರಾತ್ರಿ' ಎಂದೆ ಗೆಳೆಯರ ಬಳಿ. 'ನಿಂಗೊತ್ತಿಲ್ಲ, ಇವ್ರು ಬೆಳಗ್ಗೆ ಹಿಂಗೆ ವ್ಯಾಪಾರ ಮಾಡ್ತಾರೆ. ರಾತ್ರಿ ಆ ಕೆಲಸಾನೂ ಮಾಡ್ತಾರೆ!' ಎಂದ ಸಂತೋಷ. 'ಸುಮ್ನಿರಪ್ಪ, ಹಾಗೆಲ್ಲಾ ಗೊತ್ತಿಲ್ಲದವರ ಬಗ್ಗೆ ಸುಳ್ಳು ಅಪಾದನೆ ಮಾಡಬಾರದು' ಎಂದೆ. 'ಆದ್ರೂ ಅವನು ನಿನ್ನೆ ರಾತ್ರಿ....' ಗೆಳೆಯನ ಅನುಮಾನ ಇನ್ನೂ ಹೋಗಿರಲಿಲ್ಲ. ಅದಕ್ಕೆ ನಾನು, 'ಇರಲಿ ಬಿಡ್ರೋ, ಅವನು ನಿಜವಾಗಿಯೂ ಏನಾಗಿದ್ರೆ ನಮಗೇನು? ನಾವು ಅವನನ್ನು ಒಳ್ಳೆಯವನು ಅಂತಲೇ ತೀರ್ಮಾನಿಸೋಣ. ಹೊಸವರ್ಷದಲ್ಲಿ ಮತ್ತಷ್ಟು ಹೆಚ್ಚು ಆಶಾವಾದಿಗಳಾಗೋಣ' ಎಂದೆ.

ಸ್ವಲ್ಪ ಮುಂದೆ ಬರುತ್ತಿದ್ದಂತೆಯೇ ನಿನ್ನೆ ಕಂಡಿದ್ದ ಅಜ್ಜಿ ಕಾಣಿಸಿತು. ಅಜ್ಜಿ ನಮ್ಮನ್ನು ಕಂಡದ್ದೇ ಕೈ ಮುಗಿಯಿತು. ನಾವು ಅಜ್ಜಿಯ ಬಳಿ 'ನೀನ್ಯಾಕೆ ಕೈ ಮುಗಿತೀಯಾ ಅಜ್ಜಿ.. ನಾವು ಮುಗೀಬೇಕು ನಿಂಗೆ' ಎಂದೆವು. ಅಜ್ಜಿಗೆ ಒಂದಷ್ಟು ದುಡ್ಡು ಕೊಟ್ಟೆವು. ಹೊಸ ಆಶಾವಾದದೊಂದಿಗೆ, ಹೊಸ ಹುರುಪಿನೊಂದಿಗೆ ಬೆಂಗಳೂರಿನ ಬಸ್ಸು ಹತ್ತಿದೆವು.

Monday, November 20, 2006

ಸಾವನದುರ್ಗದ ಬೆಟ್ಟದ ಮೇಲೊಂದು ನಂದಿ.. (A trip to Savandurga)

ಆ ನಂದಿ ಸುಮ್ಮನಿತ್ತು.

ಕಲ್ಗಾರ್ ಗಿರಿಯ ಕಿರುಚಾಟ - ಫೋಟೋ ಹುಚ್ಚು, ಸಂದೀಪನ ಶೇರು ಹಗರಣ, ಬಪ್ಪನ ಐರಿಷ್ ಸಂಭಾಷಣೆ.... ಎಲ್ಲವನ್ನೂ ಕೇಳಿಕೊಂಡೂ ಸುಮ್ಮನೇ ಇತ್ತು. ಬೆಳಗ್ಗೆ ಯಾರೋ ಪೂಜೆ ಮಾಡಿಹೋದ ಕುರುಹಾಗಿ ಅದರ ಕೊರಳಲ್ಲಿ ಇನ್ನೂ ಬಾಡದ ಹೂವಿನ ಹಾರ, ಹಣೆಯಲ್ಲಿ ಕುಂಕುಮ ಇದ್ದವು. ಗೆಳೆಯರು ಹೇಳಿದ ಪೋಲಿ ಜೋಕುಗಳಿಗೊಂದಕ್ಕೂ ಅದು ನಗಲಿಲ್ಲ. ಬಹುಶಃ ಆ ಜೋಕುಗಳನ್ನೆಲ್ಲಾ ಅದು ಮೊದಲೇ ಕೇಳಿತ್ತೇನೋ? ಇವೆಲ್ಲಾ 'ಓಲ್ಡ್ ಜೋಕ್ಸ್' ಆಗಿದ್ದವೇನೋ ಅದಕ್ಕೆ... ನಾವು ಅಷ್ಟೆಲ್ಲಾ ಮಾತನಾಡುತ್ತಿದ್ದರೂ ತಾನು ಒಂದೂ ಮಾತಾಡದೆ ಸುಮ್ಮನೆ ಕುಳಿತಿತ್ತು.. ಬೀಸುಗಾಳಿಗೆ ಮೈಯೊಡ್ಡಿ..


***


ಈಗ ಮೂರು ದಿನಗಳ ಹಿಂದೆ ಸಂದೀಪ ಫೋನ್ ಮಾಡಿ 'ಈ ಭಾನುವಾರ ಏನೂ ಪ್ರೋಗ್ರಾಮ್ ಫಿಕ್ಸ್ ಮಾಡ್ಕೋಬೇಡ. ಸಾವನದುರ್ಗಕ್ಕೆ ಹೋಗೋಣ. ಹಿಂದೆ ಶಿವನಸಮುದ್ರಕ್ಕೆ ಹೋದದ್ದೇ ಟೀಮು; ಪ್ಲಸ್ ಇನ್ನೊಂದಷ್ಟು ಜನ' ಅಂತ ಹೇಳಿದಾಗ, ನಾನು ಮರುಯೋಚನೆ ಮಾಡದೆ 'ಓಕೆ' ಅಂದುಬಿಟ್ಟೆ. ನಂತರ googleನಲ್ಲಿ ಸಾವನದುರ್ಗದ ಬಗ್ಗೆ search ಮಾಡಿದಾಗ ಅದೊಂದು ಏಕಶಿಲೆಯ ಪರ್ವತ, ಅಲ್ಲಿ ಸಾಮಂತರಾಯನ ಕೋಟೆಯ ಅಳಿದುಳಿದ ಅವಶೇಷಗಳು ಇವೆ ಅಂತಲೂ, ಅದು ಕೆಂಪೇಗೌಡನ ಉಪ-ರಾಜಧಾನಿಯಾಗಿತ್ತು ಅಂತಲೂ, ಆ ಬೆಟ್ಟ ಕಾಡಿನಿಂದ ಆವರಿಸಲ್ಪಟ್ಟಿದೆ, ಕಾಡಿನಲ್ಲಿ ಕ್ರೂರ ಮೃಗಗಳು ಇವೆ ಅಂತಲೂ ಮಾಹಿತಿಗಳು ದೊರೆತವು.

ಭಾನುವಾರ ಬೆಳಗ್ಗೆ ಆರೂ ಮುಕ್ಕಾಲಿಗೆಲ್ಲಾ ರೆಡಿಯಾಗಿ ಸಂದೀಪನಿಗಾಗಿ ಕಾಯುತ್ತಿದ್ದಾಗ ಚಾರಣಿಗ ಶ್ರೀನಿಧಿಯಿಂದ ಮೆಸೇಜು ಬಂತು: "ಬೆಳಗಿನೆಳೆ ಕಿರಣಗಳ ಜೊತೆ ಸಾಗೋದು ಅಂದರೆ, ಏನೋ ಸಂತಸ.. ಬದುಕು ಸುಂದರವಾಗಿದೆ..!" ನಾನು reply ಒತ್ತಿ: "ನೇಸರನು ಮೀಸೆ ತಿರುವುತ ನುಸುಳುತ್ತಿರಲು, ಸಾವನದುರ್ಗದ ಹೆಸರರಿಯದ ದೇವರು ಕರೆಯುತ್ತಿರಲು, ನಸುಕಿಗೇ ಹೊಸ ಬಣ್ಣ ಬಂದಿರಲು.." ಅಂತ type ಮಾಡಿದೆ; ಅಷ್ಟರಲ್ಲಿ ಸಂದೀಪ ಬಂದ. ಅರ್ಧ ಟೈಪಿಸಿದ್ದ ಮೆಸೇಜನ್ನು ಹಾಗೆಯೇ ಚಾರಣಿಗನಿಗೆ ಕಳಿಸಿ ಮನೆಯ ಮೆಟ್ಟಿಲಿಳಿಯತೊಡಗಿದೆ.

ಗಿರಿಯ ಮನೆಯಿಂದ ನಮ್ಮ ಪಯಣ 'ಅಧಿಕೃತವಾಗಿ' ಶುರುವಾಯಿತು. ಒಟ್ಟು ಹದಿನೇಳು ಹುಡುಗರು. ಒಂಬತ್ತು ಬೈಕುಗಳ ಗಾಲಿಗಳಲ್ಲೂ ಹುಮ್ಮಸ್ಸಿನ ಗಾಳಿ ತುಂಬಿತ್ತು. ಮಾಗಡಿ ರಸ್ತೆಯಲ್ಲಿ ಸ್ವಲ್ಪ ದೂರ ಚಲಿಸುತ್ತಿದ್ದಂತೆಯೇ ಸಾವನದುರ್ಗ ಬೆಟ್ಟ ಕಾಣಲಾರಂಭಿಸಿತು: ಗಮ್ಯದಂತೆ. ಅದನ್ನೇ ನೋಡುತ್ತಾ, ಮಧ್ಯದಲ್ಲೊಮ್ಮೆ ಚಹ ಕುಡಿದು, 'ದುಸ್ಥಿತಿ'ಯಲ್ಲಿದ್ದ ರಸ್ತೆಯಲ್ಲಿ ಸಾಗಿದೆವು...


ಸಾವನದುರ್ಗ ತಲುಪಿದಾಗ ಹತ್ತು ಗಂಟೆ. ಬೈಕು ಪಾರ್ಕ್ ಮಾಡಿ, ಅಲ್ಲೇ ಮಾರುತ್ತಿದ್ದ ನೀರಾ ಕೊಂಡುಕೊಂಡು, ಬ್ಯಾಗೇರಿಸಿ ಬೆಟ್ಟ ಹತ್ತತೊಡಗಿದೆವು. ಏದುಸಿರು ಬಂದು ಅಲ್ಲಲ್ಲಿ ಕುಂತು ಸುಧಾರಿಸಿಕೊಂಡೆವು. ಸುಮಾರು ಅರ್ಧ ಹತ್ತಿದೆವು ಅನ್ನಿಸಿದಾಗ, ಒಂದು ಕಡೆ 'ಕೂರಬಹುದಾದಂತಹ ಜಾಗ' ಕಂಡಾಗ ಕುಂತು, ಕಟ್ಟಿಸಿಕೊಂಡು ಹೋಗಿದ್ದ ಚಪಾತಿ-ಪಲ್ಯ ತಿಂದೆವು. ನೀರು ಕುಡಿದೆವು. ಮತ್ತೆ ಹತ್ತತೊಡಗಿದೆವು. ಹತ್ತಿದಷ್ಟೂ ಬೆಟ್ಟ; ಮುಗಿಯದ ದಾರಿ; ದಾರಿಯಲ್ಲದ ದಾರಿ; ಎಲ್ಲೆಲ್ಲೂ ಕಲ್ಲುಬಂಡೆ; ಒಂದಷ್ಟು ಹಸಿರು ಚಿಗುರು, ಪಾಪಸು ಕಳ್ಳಿ, ನಿಂತ ನೀರು ಅಲ್ಲಲ್ಲಿ.... ಬೆಟ್ಟ ಅದೆಷ್ಟು ಕಡಿದಾಗಿದೆಯೆಂದರೆ... ಹೆಚ್ಚುಕಮ್ಮಿಯಾಗಿ ಜಾರಿ ಬಿದ್ದರೆ ಪುಡಿಪುಡಿ; ಹೆಣ ಸಿಗುವುದೂ ಡೌಟು.. ಕೆಲವೊಂದೆಡೆ ತೆವಳಿಕೊಂಡು ಸಾಗಬೇಕು.


ಬೆಟ್ಟದ ಮೇಲೆ ತಲುಪಿದಾಗ ಹನ್ನೆರಡೂ ಕಾಲು. ಅಲ್ಲೊಂದು ಮಂಟಪದಲ್ಲಿ ನಂದಿ. ತಣ್ಣಗೆ ಬೀಸುವ ಗಾಳಿ. ಒಂದು ತಾಸು ಅಲ್ಲೇ ಕುಳಿತು, ಮಲಗಿ, ಫೋಟೋ ತೆಗಿಸಿಕೊಂಡು, ಜೋಕ್ಸ್ ಹೇಳಿಕೊಂಡು, ನಕ್ಕು, ಹಗುರಾದೆವು. ನಂತರ ಊಟ ಮಾಡಿದೆವು. 'ಮಿತವಾಗಿ' ನೀರು ಕುಡಿದೆವು. ಎರಡೂ ವರೆ ಹೊತ್ತಿಗೆ ಗುಂಪುಗುಂಪಾಗಿ ಅವರೋಹಣ ಶುರುಮಾಡಿದೆವು.


ನಿಧಾನಕ್ಕೆ ಇಳಿದು 'ಭೂಮಿ'ಯನ್ನು ತಲುಪಿದೆವು. ಎಳನೀರು ಕುಡಿದೆವು. ಮಳೆ ಬರುವ ಸಾಧ್ಯತೆ ಇತ್ತು. ಬೇಗ ಮನೆ ಮುಟ್ಟಿಕೊಳ್ಳೋಣ ಎಂದುಕೊಂಡು ಹೊರಟೆವು. ಮಧ್ಯದಲ್ಲೊಮ್ಮೆ ನಿಲ್ಲಿಸಿ, ಉಳಿದಿದ್ದ ಚಪಾತಿ ತಿಂದು ಖಾಲಿ ಮಾಡಿದೆವು. ಮತ್ತೆ ಮುಂದೆ ನಿಲ್ಲಿಸಿ ಕಾಫಿ ಕುಡಿದೆವು. 'ಮತ್ತೆ ಸಿಗೋಣ' ಅಂತಂದು ಎಲ್ಲರೂ ಬೇರಾದೆವು.

***

ರಾತ್ರಿ ಲೈಟಾರಿಸಿ ಮಲಗಿದರೆ ಕಣ್ಣಿನಲ್ಲಿ ಅದೇ ಬಿಂಬ: ಸಾವನದುರ್ಗ ಬೆಟ್ಟದ ಮೇಲಿನ ನಂದಿ ಚಳಿ, ಗಾಳಿ, ಮಳೆಗಳಿಗೆ ಹೆದರದೇ ಮೌನವಾಗಿ ನಿಂತಿದೆ. ಇಲ್ಲ, ಕುಳಿತಿದೆ. ಇಲ್ಲ, ಮಲಗಿದೆ. ಗಂಭೀರವಾಗಿ ಮಲಗಿದೆ. ಬಹುಶಃ ಅದಕ್ಕೆ ಭ್ರಮೆ: ಬರುವ ಜನರೆಲ್ಲಾ ಇಷ್ಟೆತ್ತರದ ಬೆಟ್ಟ ಹತ್ತಿ ತನ್ನನ್ನು ನೋಡಲೇ ಬರುತ್ತಾರೆ ಅಂತ! ಅದಕ್ಕೇ ಅಷ್ಟೊಂದು ಗತ್ತು. ಗೋಣು ಸಹ ಅಲ್ಲಾಡಿಸುವುದಿಲ್ಲ. ಅದರ ಪೂಜಾರಿಯ ಮನೆ ಎಲ್ಲಿದೆ? ಆತ ದಿನವೂ ಬೆಳಗ್ಗೆ ಎದ್ದು, ಬೆಟ್ಟ ಹತ್ತಿ ಬಂದು ಪೂಜೆ ಮಾಡಿ ಹೋಗುತ್ತಾನೆಯೇ?

ಉತ್ತರ ಗೊತ್ತಿರದ ಪ್ರಶ್ನೆಗಳು ಕಾಡುತ್ತಿರಲು, ಸುಸ್ತಿಗೇ ನಿದ್ದೆ ಹತ್ತಿತು.

(For more photos, click here / here)

Monday, October 09, 2006

ಪ್ರವಾಸ ಕಥನ: ಚುಕ್ಕಿಗಳ ಊರು ಶಿವನಸಮುದ್ರ

ಅಕ್ಟೋಬರ್ ಎರಡು, ಎರಡ್ಸಾವ್ರದ ಆರರ ಶುಭ್ರ ಮುಂಜಾನೆ ಬೆಂಗಳೂರಿನ ಯಾವ್ಯಾವುದೋ ಬಡಾವಣೆಗಳ ಯಾವ್ಯಾವುದೋ ಬೀದಿಗಳಲ್ಲಿನ ಮನೆಗಳಲ್ಲಿ ಕನಸುಗಳೊಂದಿಗೆ ನಿದ್ರಾಲೋಕದಲ್ಲಿ ಮುಳುಗಿಹೋಗಿದ್ದ ಎಂಟು ಜನ ಗೆಳೆಯರು ಅಲಾರಾಂ ಸದ್ದಿಗೆ ಎಚ್ಚೆತ್ತಾಗ ಆಕಾಶದಲ್ಲಿನ್ನೂ ಚುಕ್ಕಿಗಳ ಸರಭರ ಮುಗಿದಿರಲಿಲ್ಲ. ಆದರೆ ಆಗಲೇ ಚುಕ್ಕಿಗಳ ಊರು ಶಿವನಸಮುದ್ರ ಕರೆಯುತ್ತಿತ್ತು. ಇನ್ನೂ ಹುಟ್ಟಿರದ ಸೂರ್ಯ ದೊಡ್ಡ ಟೆರೇಸು ಮನೆಗಳ ಹಿಂಬದಿಯಿಂದ ಎದ್ದು ಬರಲು ಹೊಂಚು ಹಾಕಿ ಕುಳಿತಿದ್ದ. ಹಕ್ಕಿಗಳೆಲ್ಲಾ 'ತಮಗೆ ಇವತ್ತೂ ಆಫೀಸಿದೆ' ಎಂಬಂತೆ ಆಗಲೇ ಚಿಲಿಪಿಲಿಗುಡುತ್ತಾ ತಮ್ಮ ಗೂಡು ಬಿಟ್ಟು ಸ್ನೇಹಿತರೊಡಗೂಡಿ ಹಾರಟ ಹೊರಟಿದ್ದವು. ನೈಟ್‍ಶಿಫ್ಟ್ ಮುಗಿಸಿದ ನೌಕರರು ನಿದ್ದೆಗಣ್ಣಿನಲ್ಲಿ ಕ್ಯಾಬಿನಿಂದ ಇಳಿಯುತ್ತಿದ್ದರು. ಪೇಪರ್ ಹುಡುಗರು ಆಯುಧಪೂಜೆಯ ಮರುದಿನವಾದ್ದರಿಂದ ಯಾವ ಪೇಪರೂ ಹಂಚುವುದಿರಲಿಲ್ಲವಾದರೂ ಬೆಳಗ್ಗೆ ಮುಂಚೆಯೇ ಎಚ್ಚರಾಗಿ, 'ಥೋ, ಇವತ್ತು ರಜ!' ಅಂತ ಗೊಣಗಿಕೊಂಡು, ಮತ್ತೆ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದರು.

ಸ್ನಾನ ಗೀನ ಮಾಡಿ ರೆಡಿಯಾಗಿ, ಬಟ್ಟೆ ಗಿಟ್ಟೆ ತೊಟ್ಟು ತಲೆ ಬಾಚಿ, ನಿನ್ನೆ ತೊಳೆದಿದ್ದ ಬೈಕೆಳೆದುಕೊಂಡು, ತಮ್ಮ ಗೆಳೆಯನೊಬ್ಬನನ್ನು ಕೂರಿಸಿಕೊಂಡು, 'ಜೈ ಭಜಿರಂಗಬಲಿ!' ಅಂತ ಕಿಕ್ ಹೊಡೆದು ಸ್ಟಾರ್ಟ್ ಮಾಡಿ ಹೊರಟು, ನಾವು ಎಂಟು ಹುಡುಗರು ಬಿಎಚ್‍ಇಎಲ್ ಗೇಟ್ ಬಳಿ ಸೇರಿದಾಗ ಏಳು ಗಂಟೆ ಹತ್ತು ನಿಮಿಷ. ಅಲ್ಲೇ ಬದಿಯ ಚಾ-ದುಖಾನ್‍ನಲ್ಲಿ ಕಟಿಂಗ್ ಚಾಯ್ ಕುಡಿದು, ಬೈಕಿಗೆ ಪೆಟ್ರೋಲು ಕುಡಿಸಿ, ಮೈಸೂರು ರಸ್ತೆಯಲ್ಲಿ ಬೈಕು ಚಲಿಸತೊಡಗಿದರೆ, ಉಲ್ಲಾಸ-ಉತ್ಸಾಹ-ಉನ್ಮಾದಗಳು ಚಕ್ರದ ಪ್ರತಿ ಉರುಳುವಿಕೆಯಲ್ಲೂ ಇಮ್ಮಡಿಯಾಗಿದ್ದವು.


ಇಂಟರ್‍ನೆಟ್ಟಿನಲ್ಲಿ Orkut ಅಂತ ಒಂದು friendship building network. ಅದರಲ್ಲಿ 'ಹವ್ಯಕ' ಅಂತ ಒಂದು community. ಆ community ಯಿಂದ ಒಂದುಗೂಡಿದ, ಹತ್ತಿರಾದ ನಾವು ಎಂಟು ಜನ ಹುಡುಗರೇ ಈ ಟೂರಿಗೆ ಹೊರಟಿದ್ದ ಟ್ರೂಪು. ಮೊದಲೇ ಮಾತಾಡಿಕೊಂಡಿದ್ದಂತೆ ಕಾಮತ್ ರೆಸ್ಟುರಾದಲ್ಲಿ ಬೆಳಗಿನ ತಿಂಡಿಗೆ ನಿಲ್ಲಿಸಿದೆವು. ವಡೆ, ಮಸಾಲೆ ದೋಸೆ ಮತ್ತು ಕಾಫಿಯ ಜೊತೆಗೆ ಒಂದೊಂದು ಕೊಟ್ಟೆ ಇಡ್ಲಿಯೂ ಬಿದ್ದಾಗ ಹೊಟ್ಟೆ ಫುಲ್ಲಾಗಿತ್ತು. ತಿಂಡಿಗಿಂತಾ ಚೆನ್ನಾಗಿದ್ದದ್ದು ಕಾಮತ್ ರೆಸ್ಟುರಾ ಮತ್ತು ಅದಕ್ಕಿಂತಾ ಚೆನ್ನಾಗಿದ್ದದ್ದು ಪಕ್ಕದ ಕೊಳದಲ್ಲಿ ಈಜಾಡುತ್ತಿದ್ದ ಹಂಸಪಕ್ಷಿ.

ಅಲ್ಲಲ್ಲಿ ನಿಲ್ಲಿಸುತ್ತಾ, ಡ್ರೈವರ್ ಬದಲಿಸುತ್ತಾ, ದಾರಿ ವಿಚಾರಿಸುತ್ತಾ, ಕೆಟ್ಟ ರಸ್ತೆಯನ್ನು ಬೈದುಕೊಳ್ಳುತ್ತಾ ನಾವು ಶಿವನ ಸಮುದ್ರ ಮುಟ್ಟುವಷ್ಟರಲ್ಲಿ ಹನ್ನೊಂದೂ ಕಾಲು. ಕಾವೇರಿ ನದಿ ಇಲ್ಲಿ ಕವಲಾಗಿ ಒಡೆದು, ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಎರಡು ಜಲಪಾತಗಳನ್ನು ಉಂಟುಮಾಡಿದೆ. ಎರಡೂ ಜಲಪಾತಗಳೂ ಒಂದಕ್ಕೊಂದು ಎದುರು-ಬದುರು ಇವೆ. ಬೆಂಗಳೂರಿನಿಂದ ಮೈಸೂರು ರಸ್ತೆಯಲ್ಲಿ ಸಾಗಿ, ಮದ್ದೂರಿನಿಂದ ಎಡಕ್ಕೆ ಕೊಳ್ಳೇಗಾಲ ರಸ್ತೆಯಲ್ಲಿ ಸುಮಾರು ಎಪ್ಪತ್ತು ಕಿ.ಮೀ. ಚಲಿಸಿದರೆ, ನಿಮಗೆ ಮೊದಲು ಸಿಗುವುದು ಭರಚುಕ್ಕಿ ಜಲಪಾತ. ಅಲ್ಲಿಂದ ಐದು ಕಿ.ಮೀ. ಸುತ್ತುವರಿದುಕೊಂಡು ಬಂದರೆ ಗಗನಚುಕ್ಕಿ ಕಾಣುತ್ತದೆ. ಭರಚುಕ್ಕಿಯನ್ನು ನೋಡುವಾಗ ಗಗನಚುಕ್ಕಿ ನಿಮ್ಮ ಕಾಲಡಿಗೇ ಇರುತ್ತದೆ; ಆದರೆ ನೋಡಲಾಗುವುದಿಲ್ಲ. ಹಾಗೆಯೇ ಇಲ್ಲಿಂದ ಭರಚುಕ್ಕಿಯನ್ನು ನೋಡುವಾಗ ಅದರ ಭಾರೀ ಪ್ರಮಾಣದ ಅರಿವು ಆಗುವುದೇ ಇಲ್ಲ. ಇಲ್ಲಿದ್ದಾಗ ಗಮನ ಸೆಳೆಯುವುದು ದೂರದಲ್ಲಿನ ಮುದಿ ಒಂಟಿ ಮರ. ಈ ಮರ ಅದೆಷ್ಟೋ ವರ್ಷಗಳಿಂದ ಜಲಪಾತದ ಭೋರ್ಗರೆತವನ್ನು ಕೇಳುತ್ತಾ ಕೇಳುತ್ತಾ ಸರ್ವಸಂಗಪರಿತ್ಯಾಗಿಯಾದಂತೆ ತನ್ನ ಎಲೆಗಳನ್ನೆಲ್ಲಾ ಉದುರಿಸಿ ಬೋಳಾಗಿ ನಿಂತಿದೆ. ಪಕ್ಕದಲ್ಲಿನ ಚಿಕ್ಕಪುಟ್ಟ ಗಿಡ-ಮರಗಳ್ಯಾವೂ ಇದರ ಕಷ್ಟ ವಿಚಾರಿಸುವುದಿಲ್ಲ. ಅದು ಪ್ರವಾಸಿಗರಿಗೆಲ್ಲಾ ತನ್ನ ಕತೆಯನ್ನು ಹೇಳುತ್ತದೆ. ಈ ಮರ ಕಾವೇರಿ ವಿವಾದವಾದಾಗ ಸಹ ಇಲ್ಲೇ ಇತ್ತು. ಆಗ ಕಾವೇರಿ ಬೇಸರದಿಂದ ಇಲ್ಲಿ ಧುಮ್ಮಿಕ್ಕುವುದನ್ನು ಕಣ್ಣಾರೆ ಕಂಡನಂತರ, ಅದಕ್ಕೆ ಈ ಇಹಲೋಕದ ಬಗ್ಗೆ ಬೇಸರ ಮೂಡಿ, ಪ್ರತಿಭಟನೆ ವ್ಯಕ್ತಪಡಿಸಲೆಂದು ತನ್ನೆಲ್ಲಾ ಎಲೆಗಳನ್ನು ಉದುರಿಸಿದ್ದಂತೆ. ಆದರೆ ಮತ್ತೆ ಎಲೆಗಳು ಚಿಗುರಲೇ ಇಲ್ಲ.



ಭರಚುಕ್ಕಿಯನ್ನು ನೋಡಿ, ಮನಸಾರೆ ದಣಿದು, ಪೆಪ್ಸಿ ಕುಡಿದು, ಫೋಟೋ ಕ್ಲಿಕ್ಕಿಸಿಕೊಂಡು ನಾವು ಮತ್ತೆ ಬೈಕು ಹತ್ತಿ ಗಗನಚುಕ್ಕಿಯತ್ತ ಹೊರಟೆವು. ದಾರಿ ಮಧ್ಯೆ ಒಂದು ಕಡೆ ನಿಲ್ಲಿಸಿದೆವು. ಅಲ್ಲಿ ಕಾವೇರಿಯ ನೀರು backwaterನಂತೆ ನಿಂತಿದೆ. ಇಲ್ಲ, ನಿಂತಿಲ್ಲ, (ನದಿ ನಿಲ್ಲುವುದುಂಟೆ?), ಹರಿಯುತ್ತಿದೆ, ನಿಧಾನವಾಗಿ ಹರಿಯುತ್ತಿದೆ. ನಿಂತಲ್ಲೇ ಹರಿಯುತ್ತಿದೆ. ಅದರಲ್ಲೊಂದು ಬಕಪಕ್ಷಿ. ಕತ್ತನ್ನಷ್ಟೇ ಎತ್ತಿ ಸುತ್ತ ನೋಡಿ ಮತ್ತೆ ಮುಳುಗಿಬಿಡುತ್ತೆ ಗತ್ತಿನಲ್ಲಿ. ಇಲ್ಲಿ ಮುಳುಗಿ ಎಲ್ಲೋ ಏಳುತ್ತದೆ. ಅದರ ಫೋಟೊ ತೆಗೆಯುವಷ್ಟರಲ್ಲಿ ಸಾಕುಬೇಕಾಗಿತ್ತು ನಮಗೆ!

ಗಗನಚುಕ್ಕಿಯ ವೀಕ್ಷಣಾಸ್ಥಳವನ್ನು ನಾವು ಮುಟ್ಟಿದಾಗ ಮಧ್ಯಾಹ್ನದ ಒಂದೂ ವರೆ. ಹೋದಮೇಲೇ ಗೊತ್ತಾದದ್ದು: ನಾವು ಭರಚುಕ್ಕಿಯನ್ನು ನೋಡಲು ನಿಂತ ಜಾಗದ ಕೆಳಗೇ ಗಗನಚುಕ್ಕಿ ಇತ್ತು ಎಂಬುದು! ಭರಚುಕ್ಕಿಯ ಎದುರುಮನೆಯಲ್ಲೇ ಗಗನಚುಕ್ಕಿಯ ಭೋರ್ಗರೆತ. ಗಗನಚುಕ್ಕಿ ಸ್ಲಿಮ್ಮಾಗಿ ಆದರೆ ಬಲು ಎತ್ತರದಿಂದ ಧುಮುಕುತ್ತಾಳಾದರೆ, ಭರಚುಕ್ಕಿ ಅಗಾಧ ಪ್ರಮಾಣದ ನೀರಿನೊಂದಿಗೆ ಕಂದಕಕ್ಕಿಳಿಯುತ್ತಾಳೆ. ಕೆಳಗಿಳಿದ ಮೇಲೆ ಇಬ್ಬರೂ ಮತ್ತೆ ಒಂದಾಗಿ ಮುಂದೆ ಸಾಗುತ್ತಾರೆ. ಮುಸ್ಲಿಮರ ದರ್ಗಾ ಇರುವ ಪ್ರದೇಶವಾದ್ದರಿಂದಲೋ ಏನೋ, ಇಲ್ಲಿ ಸ್ವಲ್ಪವೂ cleanness ಇಲ್ಲ. ಕಾಲಿಡುವಾಗ ನೋಡಿಕೊಂಡು ಇಡಬೇಕು. ಅಲ್ಲೇ ದರ್ಗಾದ ಪಕ್ಕದಲ್ಲಿ ಹಾದುಹೋದರೆ, ಕೆಳಗಿಳಿಯಲಿಕ್ಕೆ ಒಂದು ಕಾಲ್ದಾರಿ ಇದೆ. ನಾವು ಅಲ್ಲೇ ನಿಂತು ಸ್ವಲ್ಪ ಹೊತ್ತು ವೀಕ್ಷಿಸಿ, ಕೆಳಗಿಳಿದು ಹೋದೆವು. ಮೊದಲು ಸ್ನಾನ ಮಾಡಬೇಕು ಎಂದಾಯಿತು. ಎಲ್ಲಿ ಸ್ನಾನ ಮಾಡುವುದು ಅಂತ ಹುಡುಕಿ ಹುಡುಕಿ, ಕೊನೆಗೆ ಸರ್ವಾನುಮತದಿಂದ ಒಂದು ಜಾಗಕ್ಕೆ ಹೋಗಿ, ಬಟ್ಟೆ ಬಿಚ್ಚಿ, ಬರ್ಮುಡಾ ತೊಟ್ಟು, ನೀರಿಗಿಳಿದರೆ.... ನೀರಿನ ತಂಪಿಗೆ ಆಹಾ! ಸ್ವರ್ಗಸುಖ! ನಾವು ನೀರಿನಲ್ಲೇ ಸುಮಾರು ಮೂರು ತಾಸು ಇದ್ದೆವು. ಮಧ್ಯೆ ಒಮ್ಮೆ ಹೊರಬಂದು ಚಕ್ಲಿ ಕಂಬಳದಲ್ಲಿ ಉಳಿದಿದ್ದ ಚಕ್ಲಿಯನ್ನೆಲ್ಲಾ ತಿಂದೆವು. ಪೆಪ್ಸಿ ಕುಡಿದೆವು. ಕತೆ ಹೊಡೆದೆವು. ಮತ್ತೆ ನೀರಿಗಿಳಿದೆವು. ಫೋಟೋ ತೆಗೆಸಿಕೊಂಡೆವು. ಒಬ್ಬರು ಮತ್ತೊಬ್ಬರಿಗೆ ನೀರು ಸೋಕಿಕೊಂಡೆವು. ಜೋಕು ಮಾಡಿಕೊಂಡೆವು.... ಹಾಗೆಯೇ ಸಮಯ ಕಳೆಯಿತು.



ವಾಪಸು ಹೊರಟೆವು. ಬಟ್ಟೆ ಧರಿಸಿ ಮೇಲೆ ಹತ್ತಿ ಬಂದೆವು. ಬಂದಮೇಲೆ ಕೆಳಗೆ ನೋಡಿದರೆ, ಬಹಳಷ್ಟು ಜನ ಭರಚುಕ್ಕಿ ಜಲಪಾತದ ಸಮೀಪದಲ್ಲೇ ನಿಂತು ವೀಕ್ಷಿಸುತ್ತಿರುವುದು ಕಂಡುಬಂತು. ನಾವೂ ಅಲ್ಲಿಗೆ ಹೋಗಬೇಕು ಅನ್ನಿಸಿತು. ತುಂಬಾ ಸುಸ್ತಾಗಿತ್ತಾದರೂ ಮತ್ತೆ ಕೆಳಗಿಳಿದೆವು. ಸಾಹಸ ಮಾಡಿ, 'ಜಂಪ್' ಮಾಡಿ, ಧೈರ್ಯವಿಲ್ಲದವರಿಗೂ ಧೈರ್ಯ ತುಂಬಿ, ಭರಚುಕ್ಕಿಯ ಸಮೀಪ ಹೋಗಿ ನಿಂತು ನೋಡುತ್ತೇವೆ: ಏನದು ಜಲರಾಶಿ.. ಅಲ್ಲಿ ನೀರಲ್ಲ, ಸಮುದ್ರವೇ ಧುಮ್ಮಿಕ್ಕುತ್ತಿತ್ತು. ನಾನಂತೂ ಒಂದು ಕ್ಷಣ ಮೂಕವಿಸ್ಮಿತನಾಗಿ ನಿಂತುಬಿಟ್ಟೆ. ಕಾವೇರಿ ಉನ್ಮತ್ತಳಂತೆ ಭರದಿಂದ ಎದುರಿಗಿನ ಗಗನಚುಕ್ಕಿ ನಾಚುವಂತೆ ರುದ್ರಾವತಾರ ತಾಳಿ ಧುಮುಕುತ್ತಿದ್ದಳು. ಕಿವಿಗಡಚಿಕ್ಕುವಂತಹ ಭೋರ್ಗರೆತ. ನೀರು ಕೆಳಗೆ ಬಿದ್ದು ಸಿಡಿದ ಹನಿಗಳು ಮೋಡದಂತೆ ಗಗನವನ್ನೇ ಮುಟ್ಟಿದ್ದವು.


ನಾನು ಯೋಚಿಸುತ್ತಿದ್ದೆ: ಅದೆಲ್ಲೋ ತಲಕಾವೇರಿಯಲ್ಲಿ ಹುಟ್ಟಿದ ಕಾವೇರಿ ಹರಿಯುತ್ತಾ ಹರಿಯುತ್ತ ಇಲ್ಲಿಗೆ ಬಂದು ಹೀಗೆ ಧುಮ್ಮಿಕ್ಕುವ ಪರಿ... ಇದ್ಯಾವ ಸಂಕಲ್ಪ? ಅಷ್ಟು ದೂರದಿಂದ ಜೊತೆಯಾಗಿ, ಒಂದಾಗಿ (ಒಂದೇ ಆಗಿ) ಬಂದು ಇಲ್ಲಿ ಸ್ವಲ್ಪ ದೂರ ಬೇರ್ಪಟ್ಟು, ಬೇರ್ಪಟ್ಟಿದ್ದಕ್ಕೇ ಬೇಸರಗೊಂಡು, ಇಷ್ಟೆತ್ತರದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡು, ಆದರೂ ಸಾಯದೆ, ಮತ್ತೆ ಒಂದಾಗಿ ಮುಂದೆ ಸಾಗುವ ವಿಸ್ಮಯ... ಇದ್ಯಾವ ಮಾಯೆ? ಏನು ಮರ್ಮ? ಪ್ರಕೃತಿಯ ಈ ರಮಣೀಯ ಸೌಂದರ್ಯಕ್ಕೆ ಎಣೆ ಎಲ್ಲಿದೆ? ಇದರ ಮುಂದೆ ನಾವೆಲ್ಲಾ ಚುಕ್ಕಿಗಳೇ ಅಲ್ಲವೆ?


ತುಂಬಾ ಹೊತ್ತು ಅಲ್ಲೇ ಇದ್ದು ನಾವು ಹೊರಟೆವು. ಅಷ್ಟು ಹೊತ್ತೂ ಇರದಿದ್ದ ಹಸಿವು ಆಗ ಕಾಣಿಸಿಕೊಂಡಿತ್ತು. ಏನನ್ನಾದರೂ ತಿನ್ನಬೇಕಿತ್ತು. ಮದ್ದೂರಿನವರೆಗೂ ಯಾವುದೇ ಒಳ್ಳೆಯ ಹೋಟಿಲಿರಲಿಲ್ಲವಾದ್ದರಿಂದ, ಮದ್ದೂರ್ ಟಿಫಾನೀಸ್‍ಗಾಗಿಯೇ ಕಾಯಬೇಕಾಯಿತು. ಜನಪ್ರಿಯ ಮದ್ದೂರು ವಡೆ ತಿಂದು, ಈರುಳ್ಳಿ ದೋಸೆ ತಿಂದು, ಕಾಫಿ ಕುಡಿದು, ಸಂಜೆ ಐದೂವರೆಗೆ 'ಮಧ್ಯಾಹ್ನದ ಊಟ' ಮುಗಿಸಿದೆವು. ಮತ್ತೆ ಬೈಕು ಹತ್ತುವಷ್ಟರಲ್ಲಿ ಕತ್ತಲಾವರಿಸುತ್ತಿತ್ತು.

ಹೆಡ್‍ಲೈಟ್ ಆನ್ ಮಾಡಿ ಹೊರಟರೆ ರಸ್ತೆಯ ತುಂಬಾ ಚುಕ್ಕಿಗಳೋ ಚುಕ್ಕಿಗಳು. ದೂರದ ರಸ್ತೆ ದೀಪಗಳೂ ಚುಕ್ಕಿಗಳು. ಕತ್ತೆತ್ತಿ ಮೇಲೆ ನೋಡಿದರೆ ಆಗಸದಲ್ಲೂ ಚುಕ್ಕಿಗಳು. ಮಧ್ಯೆ ಮಧ್ಯೆ ನಿಲ್ಲಿಸುತ್ತಾ, ಹಿಂದಿದ್ದವರು ಬರುವತನಕ ಕಾಯುತ್ತಾ, ಶರವೇಗದಲ್ಲಿ ಸಾಗುತ್ತಿದ್ದರೆ, ಮಧ್ಯೆ ಬಂದ ಸಣ್ಣ ಮಳೆ ಯಾವ ಲೆಕ್ಕ? ಬೆಂಗಳೂರಿನ ದೀಪಗಳು ಚುಕ್ಕಿಗಳಾಗಿ ಕಾಣುತ್ತಿತ್ತು. ಬೆಂಗಳೂರಿಗೆ ಪ್ರವೇಶಿಸುತ್ತಿದ್ದಂತೆಯೇ, ರಸ್ತೆಬದಿಯ ಟೀ ಅಂಗಡಿಯೊಂದರಲ್ಲಿ ಎಲ್ಲರೂ ಟೀ ಕುಡಿದು, ಅಲ್ಲೇ ಎಲ್ಲರಿಗೂ ಬೈಬೈ ಹೇಳಿ ಹೊರಟೆವು. ಮತ್ತು ಸಿಗ್ನಲ್ಲುಗಳ ಊರಿನ ಟ್ರಾಫಿಕ್ಕಿನಲ್ಲಿ ಕಳೆದುಹೋದೆವು.