Tuesday, June 30, 2015

ಜೂನ್ ಎಂಬ ಮಳೆಮಾಸ

ಇರುವುದು ಮೂವತ್ತೊಂದೇ ದಿನಗಳಾದರೂ ಮುನ್ನೂರು ದಿನಗಳಿವೆಯೇನೋ ಎನಿಸುವಷ್ಟು ಬಿಸಿಲು ಮೇ ತಿಂಗಳಲ್ಲಿ. ದಿನಗಳನ್ನೆಣಿಸೆಣಿಸಿ ಸುಸ್ತಾಗಿ, ಅದ್ಯಾವಾಗ ಈ ಬೇಸಿಗೆಯ ಬೃಹನ್ಮಾಸ ಮುಗಿಯುತ್ತದೋ ಎನ್ನುತ್ತಾ ಉಸ್ಸೆಂದು ಕೂತಿದ್ದೇವೆ ಕುರ್ಚಿಯಲ್ಲಿ. ಕೈಗೆ ಸಿಕ್ಕಿದ ಯಾರದೋ ಮದುವೆಯ ಇನ್ವಿಟೇಶನ್ ಕಾರ್ಡೇ ಬೀಸಣಿಗೆಯಾಗಿದೆ. ಗುಂಡಿ ತೆರೆದಂಗಿ, ಹಣೆಮೇಲೆ ಮೂಡಿದ ಬೆಮರ್ಮಣಿಗಳು, ಆಗಾಗ ಬಿಡುವ ನಿಟ್ಟುಸಿರು, ಕುಡಿದಷ್ಟೂ ಬೇಕೆನಿಸುವ ತಣ್ಣನೆ ನೀರು, ಹಾಗೇ ಕತ್ತೆತ್ತಿ ನೋಡಿದರೆ ಇನ್ನೂ ಮೇ ತಿಂಗಳನ್ನೇ ಮೇಲ್ಮೈಯಾಗಿಸಿಕೊಂಡಿರುವ ಕ್ಯಾಲೆಂಡರು. ಎಲ್ಲೋ ಋತುರಾಜನಿಗೆ ಕರುಣೆ ಬಂದು ತಣ್ಣನೆಯದೊಂದು ಗಾಳಿ ಬೀಸಿದರೆ ಆ ಕ್ಯಾಲೆಂಡರಿನ ಪುಟಗಳು ಪಟಪಟನೆ ಬಡಿದುಕೊಂಡು ಕೆಳಗಿರುವ ಜೂನು ಹಣುಕಿ ನೋಡಿ ‘ಹೇ ಬಂದೆ, ಮುಂದೆ ನನ್ನದೇ ರಾಜ್ಯಭಾರ’ ಅನ್ನುತ್ತದೆ.

ಜೂನಿನ ಬಗ್ಗೆ ಅದೆಂಥದೋ ಮಮಕಾರ. ಮಳೆಮಾಸವೆಂಬ ಮುದ್ದು. ನೋಡಿ ನೋಡಿ ಬೇಸತ್ತಿದ್ದ ಮೇಯ ಪುಟವನ್ನು ತಿರುಗಿಸಿದ್ದೇ ಮ್ಯಾಜಿಕ್ಕಿನಂತೆ ಮಳೆಗಾಲ ಶುರುವಾಗಿಬಿಡುತ್ತದೇನೋ ಎಂಬ ಭ್ರಮೆ.  ಜೂನ್ ಪುಟದ ತಾರೀಖಿನ ಅಂಕಿಗಳಿಗೆ ಬೇರೆಯದೇ ಬಣ್ಣ, ಬೇರೆಯದೇ ಶೈಲಿ, ಬೇರೆಯದೇ ಒನಪಿದ್ದಂತೆ ಭಾಸ.  ಚಾತಕ ಪಕ್ಷಿಯ ತೆರೆದ ಕೊಕ್ಕಿನೊಳಗೆ ಬಿದ್ದ ಮಳೆಹನಿ, ಬಾಯಿಯನ್ನು ಒದ್ದೆ ಮಾಡಿ, ಗಂಟಲಿನೊಳಗೆ ತಣ್ಣಗೆ ಇಳಿದು, ಹೊಟ್ಟೆ ಸೇರಿ, ಅಲ್ಲಿದ್ದ ಕಾಳು-ಹುಳ-ಹಪ್ಪಟೆಗಳನ್ನು ತೇಲಿಸಿದಂತೆ ಕಲ್ಪನೆ. ಸೋನೆಯಿಂದ ಶುರುವಾಗುವುದು ಜೂನು. ಬಾನು ಮುಂಗಾರು ಮೋಡಗಳಿಂದಾವೃತವಾದಾಗಲೇ ಬರುವುದು ಜೂನು.

ಜೂನಿನ ಚೌಕ ದಿನಗಳಲ್ಲಿ ನಡೆಯುತ್ತ ಹೋದಂತೆ ಮಳೆ ಜಾಸ್ತಿಯಾಗುತ್ತ ಹೋಗುತ್ತದೆ. ನಾಗಂದಿಗೆಯಲ್ಲಿದ್ದ ಛತ್ರಿಯನ್ನಿಳಿಸಿ, ಹೊರಬಂದು ಬಿಚ್ಚಿದರೆ ಇಡೀ ಆಕಾಶವೇ ಕಪ್ಪಾಗಿದೆ. ಛತ್ರಿಯ ದಿಗಂತಗಳು ಕೈಗೆಟುಕುವಂತಿವೆ. ಬಣ್ಣದ ಛತ್ರಿಯಲ್ಲಂತೂ ಕಾಮನಬಿಲ್ಲೇ ಇದೆ. ಮಡಿಚಿಟ್ಟಿದ್ದ ರೈನ್‌ಕೋಟುಗಳ ನೆರಿಗೆ ಮುರಿಯುವ ಹೊತ್ತು ಇದು. ಬಿಳಿಹುಲ್ಲಿನ ಗೊಣಬೆಗೆ ನೀಲಿ ಟಾರ್ಪಲಿನಂಗಿ. ಗದ್ದೆ ಬದುವಿನಲ್ಲಿ ಸಾಲಾಗಿ ನಡೆಯುತ್ತಿರುವ ಕಂಬಳಿಕೊಪ್ಪೆ ಹೊದ್ದ ರೈತರನ್ನು ಪಕ್ಕನೆ ನೋಡಿದರೆ ಕಪ್ಪು ದೇವರ ಮೂರುತಿಗಳೆಲ್ಲ ಒಟ್ಟಿಗೆ ಎಲ್ಲಿಗೋ ಹೊರಟಂತೆ ಕಾಣಿಸುತ್ತದೆ.

ಕೆರೆಗಳಿಗೆ ಹೊಸನೀರು ಬಂದಿದೆ. ಈಗಷ್ಟೆ ದೊಗರಿನಿಂದ ಹೊರಬಂದು ಈಜಿನಭ್ಯಾಸ ಶುರುಮಾಡಿರುವ ಮರಿಮೀನುಗಳ ಬಾಯೊಳಗೆ ಕೆಸರುನೀರು ಹೋಗಿ ವಾಕರಿಕೆ ಬಂದಿದೆ. ಕಪ್ಪೆಗಳಿಗಿದು ಸಂತಾನೋತ್ಪತ್ತಿಯ ಕಾಲ. ಬಸುರಿ ಕಪ್ಪೆಗೆ ನೀಲಿಹುಳ ತಿನ್ನುವ ಬಯಕೆ. ಹಡೆದ ಕಂದಗಳ ಹಾರಾಟ ಕಂಡು ಅದು ಉದುರಿಸಿದ ಆನಂದಭಾಷ್ಪಕ್ಕೆ ಜಲಾಶಯದ ನೀರಿನ ಮಟ್ಟ ಇನ್ನಷ್ಟು ಹೆಚ್ಚಿದೆ. ತೋಟದ ಹೊಟ್ಟುಗೆರೆಯಲ್ಲಿ ಜವಳಾಗಿದೆ. ಬಾವಿಗೆ ಬಂದ ಹೊಸ ನೀರು ಕೆಂಪಾಗಿದೆ.  ಅಷ್ಟುದ್ದ ಹಗ್ಗವನ್ನು ಕೆಳಗಿಳಿಸಲು ನೂರು ಸುತ್ತು ತಿರುಗಬೇಕಿದ್ದ ಗಡಗಡೆ ಇನ್ನು ಹತ್ತು ಸುತ್ತು ತಿರುಗಿದರೆ ಸಾಕಪ್ಪಾ ಅಂತ ಖುಷಿಯಾಗಿದೆ. ಮಲಗಿದಲ್ಲೇ ಮಲಗಿ ಬೇಸರವಾಗಿದ್ದ ಕಾರಿನ ವೈಪರುಗಳು ಕೆಲಸ ಸಿಕ್ಕ ಭರದಲ್ಲಿ ಗಾಜನ್ನು ವೇಗವಾಗಿ ಒರೆಸುತ್ತಿವೆ. ನಗರದ ಗುಂಡಿಬಿದ್ದ ರಸ್ತೆಯಲ್ಲಿ ದೊಡ್ಡ ಮೊಸಳೆಯೇ ಪ್ರತ್ಯಕ್ಷವಾಗಿ ಸರ್ಕಾರಕ್ಕೆ ಎಚ್ಚರಾಗಿದೆ. ಡಾಂಬರು ಸವರಿದ ಸಣ್ಣ ಜಲ್ಲಿಕಲ್ಲುಗಳಿಂದ ಗುಂಡಿಗಳನ್ನು ಮುಚ್ಚಲಾಗುತ್ತಿದೆ.

ಶಾಲೆಗಳು ಶುರುವಾಗಿವೆ. ಎಷ್ಟೊಂದು ಅಪ್ಪ-ಅಮ್ಮರ ಕನಸುಗಳು ಪುಟ್ಟ ಛತ್ರಿ ಹಿಡಿದೋ, ರೈನ್‌ಕೋಟು ತೊಟ್ಟೋ ಶಾಲೆಯತ್ತ ನಡೆದಿವೆ. ಪಾಟಿಚೀಲದೊಳಗಿನ ಸಣ್ಣ ಡಬ್ಬಿಯಲ್ಲಿನ ಚಪಾತಿ ಚೂರುಗಳಲ್ಲಿ ಕಾವಲಿ ಮೇಲಿನ ಬಿಸಿಯಲ್ಲದೇ ನಾದಿದ ಕೈಯ ಬಿಸುಪೂ ಸೇರಿಕೊಂಡಿದೆ. ಮಕ್ಕಳಷ್ಟೇ ಅಲ್ಲ, ಮೇಷ್ಟ್ರುಗಳೂ ಸ್ವೆಟರ್ ತೊಟ್ಟು ಬಂದಿದ್ದಾರೆ. ಕಪ್ಪುಹಲಗೆಯ ಮೇಲೆ ಚಾಕ್‍ಪೀಸ್ ಮೂಡಿಸುತ್ತಿರುವ ಚೀಂವ್‌ಚೀಂವ್ ಸದ್ದನ್ನು ವರ್ಷಧಾರೆಯ ಸದ್ದು ನುಂಗಿದೆ. ಜಾರುವ ನೆಲದಲ್ಲಿ ಜೂಟ್-ಮುಟ್ಟಾಟ ಆಡುವಾಗ ಬಿದ್ದು ಮಂಡಿ ತರಚಿಕೊಂಡ ಹುಡುಗನಿಗೆ ಟಿಂಚರ್ ಹಚ್ಚಲಾಗುತ್ತಿದೆ. ಆತನ ಅಳುವನ್ನು ಇಡೀ ಕ್ಲಾಸು ಕಾರಿಡಾರಿನಲ್ಲಿ ನಿಂತು ಯೂನಿಫಾರ್ಮಿನಲ್ಲಿ ನೋಡುತ್ತಿದೆ.

ಮಳೆಗಾಲದೊಂದಿಗೇ ಪಾಪಿ ಆಶಾಢವೂ ಬಂದಿದೆ. ಹೆಂಡತಿಯ ಜೊತೆ ಬೆಚ್ಚನೆ ಸಮಯವನ್ನು ಕಳೆಯುವ ಕನಸು ಕಾಣುತ್ತಿದ್ದ ನವವಿವಾಹಿತನಿಗೆ ಆಶಾಭಂಗವಾಗಿದೆ. ಒಂದೇ ಕೊಡೆಯಲ್ಲಿ ಹೆಂಡತಿಯನ್ನು ಬಸ್‌ಸ್ಟಾಂಡಿನವರೆಗೆ ಬಿಟ್ಟುಬರಲು ಹೋದವ ‘ಈಗಿನ ಕಾಲದಲ್ಲಿ ಈ ಆಶಾಢ-ಗೀಶಾಢ ಎಲ್ಲಾ ಏನೂ ಇಲ್ಲ ಕಣೇ. ಒಂದೆರ್ಡು ದಿನ ಅಮ್ಮನ ಮನೇಲಿ ಇದ್ದಂಗೆ ಮಾಡಿ ಏನಾದ್ರೂ ನೆಪ ಹೇಳಿ ವಾಪಾಸ್ ಬಂದ್ಬಿಡು’ ಅಂತ ಕಿವಿಯಲ್ಲಿ ಹೇಳಿದ್ದಾನೆ. ಹೆಂಡತಿ ಆ ಕ್ಷಣಕ್ಕೆ ತಲೆಯಾಡಿಸಿದರೂ ತವರಿನ ಬಸ್ಸು ಹತ್ತುವಾಗ ಹುಸಿನಗೆ ನಕ್ಕದ್ದು ಕಂಡಕ್ಟರಿಗೆ ಮಾತ್ರ ಕಂಡಿದೆ. ಮನೆಗೆ ಬಂದ ಪುಣ್ಯಾತ್ಮ ಎರಡು ದಿನ ಕಳೆದು, ಒಂದು ವಾರ ಕಳೆದರೂ ಹೆಂಡತಿಯ ಪತ್ತೆಯಿಲ್ಲದೇ ಕಂಗೆಟ್ಟಿದ್ದಾನೆ. ಫೋನು ಮಾಡಿ ಮಾತಾಡೋಣ ಎಂದರೆ ಮೊಬೈಲು ತಾಕುತ್ತಿಲ್ಲ.  ಗಾಳಿಮಳೆಗೆ ಎಲ್ಲೋ ಮರ ಬಿದ್ದು ಲ್ಯಾಂಡ್‌ಲೈನು ಸತ್ತುಹೋಗಿದೆ. ಸಣ್ಣಗೆ ಪ್ರತೀಕಾರದ ಸಂಚು ಹೂಡಿದ್ದಾನೆ: ‘ಅವಳು ಇಲ್ದೇ ಇದ್ರೆ ಏನು, ನಾನೇ ಇವತ್ತು ಮಜಾ ಹೊಡ್ದು ಉಡಾಯಿಸ್ತೀನಿ’ ಅಂತ ಮನಸಲ್ಲೇ ಅಂದುಕೊಂಡು, ಮಾರ್ಕೆಟ್ಟಿಗೆ ಹೋಗಿ, ಕಡಲೆಹಿಟ್ಟು-ಮೆಣಸಿನಕಾಯಿಗಳನ್ನೆಲ್ಲ ತಂದು, ಮೈಕೈಯನ್ನೆಲ್ಲಾ ಹಿಟ್ಟು ಮಾಡಿಕೊಳ್ಳುತ್ತಾ ಕಲಸಿ, ಭರ್ಜರಿ ಬಜ್ಜಿ-ಬೋಂಡಗಳನ್ನು ಕರಿದು, ಅಕ್ಕ-ಪಕ್ಕದ ಮನೆಯ ಹುಡುಗರನ್ನೂ ಕರೆದು ತಿನ್ನಿಸಿ, ತಾನೂ ತಿಂದು ಸಂಭ್ರಮಿಸಿದ್ದಾನೆ. ‘ಏನೂ, ಹೆಂಡತಿ ಊರಿಗೆ ಹೋದ್ಲು ಅಂತ ಪಾರ್ಟೀನಾ?’ ಅಂತ ಕೇಳಿದ ಪಕ್ಕದ ಮನೆಯ ಹಿರಿಯರಿಗೆ ‘ಹೆಹೆ.. ಹಂಗೇನಿಲ್ಲಾ.. ಹಿಂಗೇ, ಸುಮ್ನೇ’ ಅಂತಂದು ಜಾರಿಕೊಂಡಿದ್ದಾನೆ. ವಾಪಸು ಬಂದ ಹೆಂಡತಿಗೆ ತನ್ನ ಸಾಹಸವನ್ನೆಲ್ಲ ಹೇಳಿ ಹೇಗೆ ಉರಿಸಬಹುದು ಅಂತ ನೆನೆದುಕೊಂಡು, ಮಿರ್ಚಿಯ ಖಾರಕ್ಕೆ ಬಾಯಿ ಸೆಳೆದಿದ್ದಾನೆ.

ಶಾಲೆ, ಮಳೆ, ಆಶಾಢವಷ್ಟೇ ಅಲ್ಲ, ರಂಜಾನ್ ಮಾಸ ಸಹ ಬಂದಿದೆ ಜೂನಿನೊಂದಿಗೆ. ಮಳೆಗಾಲದಲ್ಲಿ ಏಕೋ ಹಸಿವೂ ಸ್ವಲ್ಪ ಜಾಸ್ತಿ. ಉಪವಾಸ ಆಚರಿಸುತ್ತಿರುವವರು ಸಂಜೆಯ ಹೊತ್ತಿಗೆ ಇಫ್ತಾರಿಗಾಗಿ ಕಾಯುತ್ತಿದ್ದಾರೆ. ರಂಜಾನ್ ಮಾಸದ ಇಫ್ತಾರ್ ಭೋಜನಕ್ಕಾಗಿಯೇ ತೆರೆದಿರುವ ವಿಶೇಷ ಖಾದ್ಯದಂಗಡಿ-ಹೋಟೆಲುಗಳು ಘಮಘಮಿಸುತ್ತ ಹಸಿದವರನ್ನು ಸ್ವಾಗತಿಸಿವೆ. ತೂಗುಬಿಟ್ಟ ನೂರು ಕ್ಯಾಂಡಲ್ ಬಲ್ಬಿನ ಸಾಲುಸಾಲು ತಿಂಡಿಯಂಗಡಿಗಳು ಚಳಿರಾತ್ರಿಗೆ ವಿಚಿತ್ರ ಮಾದಕತೆಯನ್ನೇ ತಂದಿವೆ. ತಡರಾತ್ರಿಯವರೆಗೆ ನಡೆಯುವ ಈ ಬಗೆಬಗೆಯ ತಿನಿಸುಗಳ-ಮಾಂಸದಡುಗೆಗಳ ಮೇಳ ಮಳೆಗಾಲದ ಜಾತ್ರೆಯಂತೆ ಆಕರ್ಷಕವಾಗಿದೆ.

ಜೂನು ಪ್ರವರ್ಧಮಾನಕ್ಕೆ ಬರವಷ್ಟರಲ್ಲಿ ಮಳೆಯೂ ಪ್ರಬಲವಾಗಿದೆ. ರಾತ್ರಿಯಿಡೀ ಸುರಿವ ಮಳೆ ನೋಡುತ್ತಾ ಕೂಗೀಕೂಗೀ ಜೀರುಂಡೆಗೆ ಗಂಟಲುನೋವು ಬಂದಿದೆ. ಕೋಡಿಯಲ್ಲೀಗ ಪ್ರವಾಹದೋಪಾದಿಯಲ್ಲಿ ನೀರು ಹರಿಯುತ್ತಿದೆ. ಬಾವಿಯ ನೀರು ಕೈಗೆ ಸಿಗುವಷ್ಟು ಮೇಲೆ ಬಂದಿದೆ. ಕರೆಂಟು ಹೋಗಿ ಮೂರು ದಿನವಾಗಿದೆ. ಜಲಪಾತಗಳು ಭೋರ್ಗರೆಯುತ್ತಿವೆ. ಅಂಗಳದ ತುಂಬ ಚುಪುರು ಕಳೆ ಬೆಳೆದು ಎಲ್ಲೆಲ್ಲೂ ಹಸಿರೇ ಕಾಣುತ್ತಿದೆ. ‘ಈ ಸೀಸನ್ನಿನ ಲಾಸ್ಟ್ ಟೈಮು’ ಅಂದುಕೊಂಡು ತಂದ ಮಾವಿನಹಣ್ಣಿನಲ್ಲಿ ಹುಳುಗಳು ಸಿಕ್ಕಿವೆ.  ಪಕ್ಕದ ಮನೆಯ ಬಚ್ಚಲೊಲೆಯಿಂದ ಹಲಸಿನ ಬೀಜ ಸುಟ್ಟ ವಾಸನೆ ಬರುತ್ತಿದೆ.

ನಗರದಲ್ಲಿ ಟಿಕಾಣಿ ಹೂಡಿರುವ ಯಕ್ಷಗಾನ ಮೇಳದ ಕಲಾವಿದರು ಆಟ ಮುಗಿದ ಜಾವ ನ್ಯೂಸ್‌ಪೇಪರ್ ಓದಿ ಮಲಗಿದ್ದಾರೆ. ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿ ಆದ ಅವಾಂತರ, ಮರ ಬಿದ್ದು ಆದ ತೊಂದರೆಗಳ ಸುದ್ದಿ ಅವರಿಗೆ ಊರ ನೆನಪು ತಂದು ಕಳವಳವಾಗಿದೆ. ರಸ್ತೆಗಳಲ್ಲಿ ನಿಂತ ನೀರು ಆರುವಷ್ಟರಲ್ಲಿ ಮತ್ತೆ ಮಳೆ ಬಂದಿದೆ. ಫ್ಲೈ‌ಓವರಿನ ಕಟಾಂಜನಕ್ಕೆ ಅಂಟಿನಿಂತಿದ್ದ, ಎಂಥಾ ಭಾರೀ ಲಾರಿ ಹಾಯ್ದರೂ ಜಗ್ಗದ ಮಳೆನೀರಹನಿಗಳು, ಸುಂದರ ಹುಡುಗಿಯ ಸ್ಕೂಟಿ ಸಾಗಿದ್ದೇ ಸಳಸಳನೆ ಉದುರಿವೆ. ಹಾಗೆ ಉದುರಿದ ಹನಿಗಳು ಕೆಳಗೆ ನಡೆದುಕೊಂಡು ಹೋಗುತ್ತಿದ್ದ ಯುವಕನ ಮೈಮೇಲೆ ಬಿದ್ದು, ಅವನಿಗೆ ಪುಳಕವಾಗಿ ಕತ್ತೆತ್ತಿ ಮೇಲೆ ನೋಡಿದರೆ, ಓಡುತ್ತಿರುವ ಪಿಂಕ್ ಸ್ಕೂಟಿಯ ಹುಡುಗಿಯ ಹಾರುತ್ತಿರುವ ವೇಲು ಹಾಯ್ ಎಂದಿದೆ.

ಮಾಗುತ್ತಿರುವ ಜೂನಿನೊಂದಿಗೆ ಮಳೆಗಾಲಕ್ಕೂ ಜನ ಹೊಂದಿಕೊಂಡಿದ್ದಾರೆ. ಗದ್ದೆಗಳಲ್ಲಿ ಚಟುವಟಿಕೆ ಜೋರಾಗಿದೆ. ತೋಟದ ಕಾದಿಗೆಗಳಲ್ಲಿ ನೀರು ಸರಿಯಾಗಿಯೇ ನಿಂತಿದೆ. ಅಡಿಕೆ ಮರಗಳಿಗೆ ಬಂದ ಕೊಳೆರೋಗಕ್ಕೆ ಔಷಧಿ ಹೊಡೆಸಲು ತಯಾರಿ ನಡೆದಿದೆ. ಒಂದು ದಿನ ಹೊಳವು ಕೊಟ್ಟರೆ ಸಾಕು, ಸ್ಲಾಬ್ ಹಾಕಿ ಮುಗಿಸಬಹುದಿತ್ತು ಅಂತ ಮೇಸ್ತ್ರಿಗಳು ಅರ್ಧ ಕಟ್ಟಿದ ಮನೆಯ ಹೊರಗೆ ನಿಂತು ಮಾತಾಡಿಕೊಳ್ಳುತ್ತಿದ್ದಾರೆ. ಮರದಡಿಯಲಿ ನಿಂತ ಪ್ರೇಮಿ ತನ್ನ ಹುಡುಗಿಗೆ ಜರ್ಕಿನ್ ತೊಡಿಸಿ ತಾನು ತೋಯುತ್ತಲೇ ಉಳಿದು ಸಿನೆಮಾ ಹೀರೋ ಥರ ಮಿಂಚಿದ್ದಾನೆ.

ಜೂನ್ ತಿಂಗಳು ಮುಗಿಯಲು ಬಂದಿದೆ. ತನ್ನ ಕೊಡಪಾನದಲ್ಲಿದ್ದ ಚೂರುಪಾರು ನೀರನ್ನೆಲ್ಲ ಅದು ಈಗ ಕೊಡವಿ ಕೊಡವಿ ಚೆಲ್ಲುತ್ತಿದೆ. ಜುಲಾಯಿ ತನ್ನ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದೆ. ಮಳೆಗಾಲದ ಮಾಂತ್ರಿಕ ಕೋಲನ್ನು ಕೈಯಲ್ಲಿ ಹಿಡಿದು ರಿಲೇ ಓಡುತ್ತಿರುವ ಜೂನು ಅಗೋ ಅಲ್ಲಿ ನಿಂತು ತನ್ನನ್ನೇ ಕಾಯುತ್ತಿರುವ ಜುಲಾಯಿಗೆ ಅದನ್ನು ವರ್ಗಾಯಿಸಿ ಜವಾಬ್ದಾರಿ ಕಳೆದುಕೊಳ್ಳುವ ತವಕದಲ್ಲಿದೆ. ಕ್ಯಾಲೆಂಡರಿನ ಹಾಳೆಗಳು ಮತ್ತೆ ಪಟಪಟನೆ ಹಾರುತ್ತಿವೆ. ಜುಲಾಯಿ ನಿಂತಲ್ಲೇ ಚಡಪಡಿಸುತ್ತ ಜೂನು ತರುವ ಮಳೆಗಾಲದ ಮಂತ್ರದಂಡಕ್ಕಾಗಿ ಕಾಯುತ್ತಿದೆ.


[ಈ ಲಹರಿಯು, ಒಂದಷ್ಟು ಬದಲಾವಣೆಗಳೊಂದಿಗೆ, 28.06.2015ರ 'ವಿಜಯ ಕರ್ನಾಟಕ' ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಗೊಂಡಿದೆ.]