ಒಟ್ನಲ್ಲಿ, ಹೀಗೆಲ್ಲ ಆಗಿ ಹೀಗೆಲ್ಲ ಆಗಿದೆ. ಮತ್ತು, ನಂಗೆ ಖುಶಿಯಾಗಿದೆ! :-)
ಯಾಕೇಂದ್ರೆ, ನನ್ನದೊಂದು ಲಲಿತ ಪ್ರಬಂಧಗಳ ಸಂಕಲನ ಹೊರಬರುತ್ತಿದೆ. 'ಹೊಳೆಬಾಗಿಲು' ಅಂತ ಹೆಸರಿಟ್ಟಿದ್ದೇನೆ. ನಮ್ಮೆಲ್ಲರ ಪ್ರೀತಿಯ ಜೋಗಿ, ಇದಕ್ಕೆ ಮುನ್ನುಡಿ ಬರೆದು ಕೊಟ್ಟಿದಾರೆ. 'ಪ್ರೀತಿಯ ಹುಡುಗಿ'ಯ ಪ್ರೀತಿಯ ಹುಡುಗ ನಾಗತಿಹಳ್ಳಿ ಚಂದ್ರಶೇಖರ್ ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ಮಾತಾಡ್ತಾರೆ. ಪುಸ್ತಕದೊಳಗೆ ಗೆಳೆಯ ಕಲಾಕಾರ ರಾಘು ಬಿಡಿಸಿದ ರೇಖಾಚಿತ್ರಗಳಿವೆ. ನನ್ನ ಕಾಟ ಎಲ್ಲಾ ಸಹಿಸಿಕೊಂಡು ಮುಖಪುಟ ರೂಪಿಸಿಕೊಟ್ಟದ್ದು ನೆಂಟ ರವೀಶ. ನಮ್ಮದೇ ಸಂಸ್ಥೆ ಪ್ರಣತಿ ಪ್ರಕಟಿಸ್ತಿರೋ ಈ ಪುಸ್ತಕ, ಈ ವರ್ಷದ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರ ಪ್ರೋತ್ಸಾಹ ಪ್ರಕಟಣೆ ಯೋಜನೆಯಲ್ಲಿ ಆಯ್ಕೆಯಾಗಿತ್ತು.
ಅವತ್ತೇ ಡಾರ್ಲಿಂಗ್ ಶ್ರೀನಿಧಿಯ ಕವನಗುಚ್ಛ 'ಹೂವು ಹೆಕ್ಕುವ ಸಮಯ'ವೂ ಬಿಡುಗಡೆಯಾಗ್ತಿದೆ. ಅದರ ಬಗ್ಗೆ ಮಾತಾಡೋರು ರಾಧಾ-ಮಾಧವರು ಹರಸಿಹರೇನೋ ಎಂಬಂತೆ ಬರೆವ ಕವಿ ಎಚ್ಚೆಸ್ವಿ. ಜೋಗಿ ಸರ್ ಆಗೋದೇ ಇಲ್ಲ ಅಂದ್ರೂನೂ "ನೀವು ವೇದಿಕೆ ಮೇಲೆ ಇರಲೇಬೇಕು" ಅಂತ ನಾವು ಹಟ ಮಾಡಿ ಒಪ್ಪಿಸಿದ್ದೇವೆ. ಅವರು ಒಪ್ಪಿಕೊಂಡಿದಾರೆ.
ಮನೆಗೆ ಫೋನ್ ಮಾಡಿ ಅಪ್ಪ-ಅಮ್ಮ ಇಬ್ರೂ ಬನ್ನಿ ಅಂತ ಹೇಳಿದ್ರೆ "ಮಗನೇ ಮಳೇ ಅಂದ್ರೆ ಮಳೆ. ತ್ವಾಟಕ್ಕೆ ಕೊಳೆ ಔಷಧಿ ಹೊಡೆಸ್ತಾ ಇದ್ದಿ. ಅಲ್ದೇ ಅಜ್ಜನ್ನ ಒಬ್ಬವನ್ನೇ ಬಿಟ್ಟಿಕ್ ಬರಕ್ಕೆ ಆಗದಿಲ್ಲೆ. ಯಾರಾದ್ರೂ ಒಬ್ಬರಾದ್ರೂ ಬರಕ್ಕೆ ಟ್ರೈ ಮಾಡ್ತ್ಯ" ಅಂತ ಹೇಳಿದ್ದಾರೆ.
ಇನ್ನೇನು ಉಳೀತು? ಈ ಖುಶಿಯೆಲ್ಲ ಡಬಲ್ ಆಗಲಿಕ್ಕೆ ನೀವು ಬರಬೇಕು. ಈ ಅಕ್ಷರಗಳನ್ನೇ ಅಕ್ಷತೆ ಅಂದ್ಕೊಂಡು ಸ್ವೀಕರಿಸಿ. ನಾನು, ನಿಧಿ ಮತ್ತು ಪ್ರಣತಿಯ ಗೆಳೆಯರೆಲ್ಲ ನಿಮ್ಮನ್ನ ಎದುರುಗೊಳ್ಳಲಿಕ್ಕೆ ಕಾಫಿ ಸಮೇತ ಕಾಯ್ತಿರ್ತೀವಿ. ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿ ಹಾಲ್‌ನಲ್ಲಿ ಬರೋ ಭಾನುವಾರ, 9ನೇ ತಾರೀಖು ಬೆಳಗ್ಗೆ 10.30ಕ್ಕೆ. ಇನ್ವಿಟೇಶನ್ ಇಲ್ಲಿದೆ.
ತಪ್ಪಿಸಿದ್ರೆ ನಮಗೆ ಬೇಜಾರಾಗತ್ತೆ. ಹಾಗೆ ಮಾಡ್ಬೇಡಿ.
ಕಾಯುತ್ತಾ,
ಪ್ರೀತಿಯಿಂದ,
-ಸು