Friday, October 31, 2008

ಎಲ್ಲಾದರೂ ಇರು...

ರಚನೆ: ಕುವೆಂಪು; ರಾಗ ಸಂಯೋಜನೆ: ಸಿ. ಅಶ್ವತ್ಥ್; ಗಾಯಕ: ಡಾ| ರಾಜ್‍ಕುಮಾರ್; ನಿರ್ದೇಶನ ಮತ್ತು ಚಿತ್ರೀಕರಣ: ಟಿ.ಎಸ್. ನಾಗಾಭರಣ





ನನ್ನಿಷ್ಟದ ವೀಡಿಯೋ ಇದು. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Thursday, October 23, 2008

ಆಕಾಶಬುಟ್ಟಿ

ವರುಷವಿಡೀ ವಯಸ್ಸಾದ ಅಮ್ಮಮ್ಮನ ಹಾಗೆ ನಾಗಂದಿಗೆಯ ಮೇಲೆ ಮುದುಡಿ ಮಲಗಿಕೊಂಡಿದ್ದ ಅದನ್ನು ಅಪ್ಪ ಕೆಳಗಿಳಿಸಿ ಧೂಳು ಹೊಡೆದನೆಂದರೆ ಅದು ದೀಪಾವಳಿಯ ಹಿಂದಿನ ದಿನ ಎಂದರ್ಥ. ಬಣ್ಣದ ಕಾಗದ ಮುಚ್ಚಿದ ಬಿದಿರು ಕಡ್ಡಿಯ ದೇಹದ ಈ ಮಡಿಕೆ-ಮಡಿಕೆಯ ಛತ್ರಿಯಂತಹ ವಸ್ತುವನ್ನು ಅಪ್ಪ ಹುಶಾರಾಗಿ ಬಿಚ್ಚುತ್ತಾ ಹೋಗುವಾಗ ಎದುರಿಗೆ ಕುಕ್ಕರಗಾಲಲ್ಲಿ ಕೂತ ಪುಟ್ಟ ಕಣ್ಮಿಟುಕಿಸದೇ ನೋಡುತ್ತಿರುತ್ತಾನೆ.. ಏನಿದು? ಏನಿರಬಹುದು ಒಳಗೆ? ಮ್ಯಾಜಿಕ್ ಮಾಡುವವನಂತೆ ಅಪ್ಪ ಅದರ ಪದರಗಳನ್ನು ಪೂರ್ತಿಯಾಗಿ ಬಿಚ್ಚಿ ಎತ್ತಿ ಹಿಡಿದರೆ ಅದೊಂದು ನಕ್ಷತ್ರವಾಗಿಬಿಟ್ಟಿದೆ! 'ಹೇ..! ಆಕಾಶಬುಟ್ಟಿ..!' ಪುಟ್ಟ ಖುಶಿಯಲ್ಲಿ ಚಪ್ಪಾಳೆ ತಟ್ಟುತ್ತಾನೆ ಕುಣಿಯುತ್ತಾ.

ಆಮೇಲೆ ಊದ್ದದೊಂದು ವೈರು ಹುಡುಕಬೇಕು. ಅದರ ಒಂದು ತುದಿಗೆ ಪಿನ್ನು. ಇನ್ನೊಂದು ತುದಿಗೆ ಬಲ್ಬ್-ಹೋಲ್ಡರು. ಜಗುಲಿಯಲ್ಲಿರುವ ಪ್ಲಗ್ಗಿಗೆ ಈ ಪಿನ್ನು ಹಾಕಿ ವೈರನ್ನು ಕಿಟಕಿಯ ಕಂಡಿಯಲ್ಲಿ ತೂರಿಸಿ ಮನೆಯ ಹೊರತಂದು ಎದೂರಿಗೆ - ಸೂರಿನ ತುದಿಗೆ ಸುತ್ತಿ ನೇತು ಹಾಕಬೇಕು ಹೋಲ್ಡರನ್ನು. ಈಗ ಒಂದು ಬಲ್ಬು ಬೇಕಲ್ಲಾ..? ಹೊಸದು ತಂದಿಟ್ಟದ್ದು ಇಲ್ಲ. ಬಚ್ಚಲು ಮನೆಗೆ ಹೋಗುವ ದಾರಿಯಲ್ಲಿ ಹಾಕಿರುವ ಬಲ್ಬು ಸ್ವಲ್ಪ ದಿನಕ್ಕೆ ಇಲ್ಲದಿದ್ದರೂ ನಡೆಯುತ್ತೆ. ಒಂದು ತಿಂಗಳು ಅಷ್ಟೇ ತಾನೇ? ಅದನ್ನೇ ತಂದು ಇಲ್ಲಿ ಹಾಕೋದು.

'ಹಾಂ, ತಗಂಬಾ ಈಗ ಆಕಾಶಬುಟ್ಟಿ!' ಚಲಾವಣೆ ಕೊಡುತ್ತಾನೆ ಅಪ್ಪ ಪುಟ್ಟನಿಗೆ. ಪುಟ್ಟ ಓಡಿ ಹೋಗಿ ತರಾತುರಿಯಿಂದ ಅದರ ತಲೆಯ ಮೇಲೆ ಜುಟ್ಟಿನಂತಿರುವ ದಾರವನ್ನು ಹಿಡಿದು ತರುವ ವೇಳೆಯಲ್ಲೇ, ಬಾಗಿಲು ದಾಟುವಾಗ ಅದು ಕಾಲಿಗೆ ಸಿಕ್ಕಿ, ಆಕಾಶಬುಟ್ಟಿ ಹರಿದು, ಪುಟ್ಟ ಬಿದ್ದು... ಅಳಲು ಶುರುವಿಡುತ್ತಾನೆ!

'ಏ.. ಹೋತು.. ಹೋತು ಬಿಡು.. ಏನೂ ಆಗಲ್ಲೆ..' ಮಳ್ಳಂಡೆಯ ಗಾಯಕ್ಕೆ ಕೊಬ್ರಿ ಎಣ್ಣೆ ಹಚ್ಚುತ್ತಾ ಸಮಾಧಾನ ಮಾಡಿದಳು ಅಮ್ಮ. ಪುಟ್ಟನಿಗೆ ತನ್ನ ಕಾಲಿಗಾದ ಗಾಯಕ್ಕಿಂತ ಹೆಚ್ಚಿನ ನೋವಾದದ್ದು ಆಕಾಶಬುಟ್ಟಿ ಹರಿದುಹೋಯಿತಲ್ಲಾ ಎಂಬುದಕ್ಕೆ! ಆತ ಮತ್ತೂ ಜೋರಾಗಿ ಅಳತೊಡಗಿದ. ಮತ್ತೆ, ಆಗಲೇ ಉರಿಗಣ್ಣು ಮಾಡಿದ್ದ ಅಪ್ಪ, ತಾನು ಅಳು ನಿಲ್ಲಿಸಿದ್ದೇ ಬೈಯಲು ಶುರು ಮಾಡುತ್ತಾನೆ ಎಂಬ ಭಯ ಅವನಿಗೆ. ಅದಕ್ಕಾಗಿ ಅಂವ ಅಳು ನಿಲ್ಲಿಸುವುದೇ ಬೇಡವೆಂದು ತೀರ್ಮಾನಿಸಿದ..!

ಆ ಸಣ್ಣ ಊರಿನಲ್ಲಿ ಆಕಾಶಬುಟ್ಟಿ ಸಿಗುವ ಅಂಗಡಿಗಳಿರಲಿಲ್ಲ. ಇಪ್ಪತ್ತು ಕಿಲೋಮೀಟರ್ ದೂರದ ಪೇಟೆಗೆ ಹೋಗಿ ಹೊಸ ಆಕಾಶಬುಟ್ಟಿ ತಂದು, ಹೂಡಿ, ನೇತುಹಾಕಿ... ಇದೆಲ್ಲಾ ಈ ಗಡಿಬಿಡಿಯಲ್ಲಿ ಆಗುಹೋಗುವ ಕೆಲಸ ಅಲ್ಲವೆಂದು ತೀರ್ಮಾನಿಸಿದ ಅಪ್ಪ, ಮತ್ತೆ ರಿಪೇರಿ ಮಾಡಿ ಜೋಡಿಸಲಾಗದ ಸ್ಥಿತಿಯಲ್ಲಿದ್ದ ಹಳೇ ಆಕಾಶಬುಟ್ಟಿಯನ್ನು ನೋಡುತ್ತಾ 'ಹ್ಮ್.. ಒಟ್ನಲ್ಲಿ ಈ ವರ್ಷ ನಮ್ಮನೆ ಎದ್ರಿಗೆ ಆಕಾಶಬುಟ್ಟಿ ಇಲ್ದೇ ಹೋದಂಗೆ ಮಾಡ್ದೆ' ಎಂದು ಪುಟ್ಟನಿಗೆ ಬೈದಂತೆ ಹೇಳಿ ಒಳನಡೆದುಬಿಟ್ಟ. ಪುಟ್ಟನಿಗೆ ಮೊದಲಿಗಿಂತ ಜೋರಾಗಿ ಅಳು ಬಂತು.. ಪ್ರಣವನ ಮನೆಯಲ್ಲಿ ಹಾಕ್ತಾರೆ, ಪಲ್ಲವಿಯ ಮನೆಯಲ್ಲಂತೂ ನಿನ್ನೆಯೇ ಹಾಕಿಯಾಗಿದೆ, ಊರಲ್ಲೆಲ್ಲರ ಮನೆಯಲ್ಲೂ ಹಾಕ್ತಾರೆ. ನಮ್ಮ ಮನೆಯಲ್ಲಿ ಮಾತ್ರ ಇಲ್ಲ ಈ ವರ್ಷ.. ಶಾಲೆಗೆ ಹೋಗುವಾಗ ಅವರೆಲ್ಲರೂ ನಮ್ಮನೆಯೆಡೆಗೆ ನೋಡಿಯೇ ನೋಡುತ್ತಾರೆ.. ಆಗ ಇಲ್ಲಿ ಆಕಾಶಬುಟ್ಟಿ ಇಲ್ಲವೆಂದರೆ ಕೇಳಿಯೇ ಕೇಳುತ್ತಾರೆ: 'ಅಕ್ಷಯಾ, ನಿಮ್ಮನೇಲಿ ಮಾತ್ರ ಎಂಥಕ್ ಆಕಾಶಬುಟ್ಟಿ ಹಾಕಲ್ಲೆ?' ಅಂತ.. ಪುಟ್ಟನಿಗೆ ಅಳು ತಡೆಯಲಿಕ್ಕೇ ಆಗಲಿಲ್ಲ..

'ಥೋ.. ಇಷ್ಟ್ ಸಣ್ಣ ಗಾಯಕ್ಕೆ ಎಂಥಕ್ ಇಷ್ಟೆಲ್ಲಾ ಅಳ್ತಾ ಇದ್ಯಾ? ದಿನಾನೂ ಬಿದ್ದು ಗಾಯ ಮಾಡ್ಕ್ಯಂಡ್ ಬರ್ತೆ ನೀನು..' ಅಮ್ಮ ಗೊಣಗಿದಳು.
'ಅಮ್ಮಾ, ನಮ್ಮನೇಲೂ ಆಕಾಶಬುಟ್ಟಿ ಹಾಕವು.. ಎಲ್ಲಾರ್ ಮನೇಲೂ ಹಾಕ್ತ.. ಅಪ್ಪಂಗೆ ಪ್ಯಾಟಿಗ್ ಹೋಗಿ ಹೊಸಾದು ತಗಂಬರಕ್ ಹೇಳು.. ನಂಗೆ ಬೇಕೇ ಬೇಕು..' ಪುಟ್ಟ ಹಟಕ್ಕೆ ಬಿದ್ದ.
'ಅಷ್ಟೇ ಸೈಯಾ? ಅದ್ಕೇ ಇಷ್ಟೆಲ್ಲಾ ರಂಪಾಟಾನಾ? ನಾ ಹೇಳ್ತಿ ಬಿಡು ಅಪ್ಪನ್ ಹತ್ರ..' ಸಮಾಧಾನಿಸಿದಳು ಅಮ್ಮ.
'ಹೇ..' ಅಮ್ಮನಿಗೊಂದು ಮುತ್ತೊತ್ತಿ ಮಡಿಲಿಂದ ಜಿಗಿದೆದ್ದು ಓಡಿದ ಪುಟ್ಟ. ಅವನ ಕೆನ್ನೆಯ ಮೇಲಿಳಿದಿದ್ದ ಕಣ್ಣೀರು ತನ್ನ ತುಟಿಗೆ ತಾಗಿ ಉಪ್ಪುಪ್ಪೆನಿಸಿ 'ಶೀ! ಕೊಳಕು!' ಎಂದು ಒರೆಸಿಕೊಳ್ಳುತ್ತಾ ಒಳನಡೆದಳು ಅಮ್ಮ!

ಅವತ್ತು ರಾತ್ರಿಯ ನಿದ್ರೆಯಲ್ಲಿ ಪುಟ್ಟನಿಗೆ ಕನಸೋ ಕನಸು.. ಕನಸಿನಲ್ಲಿ ಅವನ ಮನೆ ಮುಂದೆ ನೂರಾರು ಆಕಾಶಬುಟ್ಟಿಗಳನ್ನು ನೇತುಹಾಕಲಾಗಿದೆ.. ಒಂದೊಂದೂ ಒಂದೊಂದು ಬಗೆಯ ಬಣ್ಣದ ಬೆಳಕನ್ನು ಬೀರುತ್ತಿದೆ.. ನಕ್ಷತ್ರಲೋಕದಲ್ಲಿರುವವನಂತೆ ಅವನ್ನೆಲ್ಲಾ ಬಾಯ್ಕಳೆದುಕೊಂಡು ನೋಡುತ್ತಾ ಸಂಚರಿಸುತ್ತಿದ್ದಾನೆ ಪುಟ್ಟ..

ಬೆಳಗಾಗಿದೆ. ಇವತ್ತೇ ಹಬ್ಬ! ಇವತ್ತು ಸಂಜೆಯೊಳಗೆ ಮನೆಯೆದುರು ಆಕಾಶಬುಟ್ಟಿ ನೇತಾಡುತ್ತಿರಬೇಕು..! ಅಪ್ಪ ಇನ್ನೇನು ಪೇಟೆಗೆ ಹೊರಡುತ್ತಾನೆ ಹೊಸ ಆಕಾಶಬುಟ್ಟಿ ತರುವುದಕ್ಕೆ ಅಂತ ಒಳಹೊರಗೆ ಓಡಾಡುತ್ತಾ ಕಾಯುತ್ತಿದ್ದಾನೆ ಪುಟ್ಟ. ಊಹುಂ, ಅಪ್ಪ ಹೊರಡುವ ಲಕ್ಷಣವೇ ಕಾಣುತ್ತಿಲ್ಲ. ಕೊಟ್ಟಿಗೆ ತೊಳೆಯುವುದು, ದನಕರುಗಳಿಗೆ ಸಿಂಗಾರ ಮಾಡುವುದು, ತೋರಣ ಕಟ್ಟುವುದು, ಇತ್ಯಾದಿ ಅವನದೇ ಕೆಲಸಗಳಲ್ಲಿ ಮಗ್ನನಾಗಿದ್ದಾನೆ ಅಪ್ಪ. ಹಾಗಾದರೆ ಅಮ್ಮ ಅಪ್ಪನಿಗೆ ಹೇಳಲೇ ಇಲ್ಲವೇ? ಮರೆತುಬಿಟ್ಟಳೇ? ಕೇಳೋಣವೆಂದರೆ ಅಮ್ಮ ಅಡುಗೆಮನೆಯಲ್ಲಿ ಬ್ಯುಸಿ! 'ಮಡಿ..! ಇಲ್ಲೆಲ್ಲಾ ಬರಡ ನೀನು' ಗುರುಗುಡುತ್ತಿದ್ದಾಳೆ ಒಳಗಿಂದಲೇ. ಪುಟ್ಟನಿಗೆ ಆಕಾಶಬುಟ್ಟಿಯದೇ ಚಿಂತೆ..

ಪುಟ್ಟನ ಮನೆಯ ಪಕ್ಕದಲ್ಲಿರುವುದು 'ಮೇಷ್ಟ್ರಂಕಲ್' ಮನೆ. ರಮೇಶ್ ಸೆಬಾಸ್ಟಿಯನ್ ಅವರ ಹೆಸರು. ಸುಮಾರು ವರ್ಷಗಳ ಹಿಂದೆಯೇ ಪಕ್ಕದೂರಿನ ಶಾಲೆಗೆ ಮೇಷ್ಟ್ರಾಗಿ ಬಂದ ಅವರು ಇಲ್ಲಿ ಮನೆ ಮಾಡಿಕೊಂಡು, ರಿಟೈರ್ ಆದಮೇಲೂ ಇಲ್ಲೇ ನೆಲೆಯೂರಿರುವವರು. ಊರವರೆಲ್ಲರ ಜೊತೆ ಚೆನ್ನಾಗಿದ್ದ ಅವರು, ಹಾಗಂತ ಯಾರನ್ನೂ ಅಷ್ಟಾಗಿ ಹಚ್ಚಿಕೊಂಡವರೂ ಅಲ್ಲ. ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ಇರುವವರು. ಮದುವೆ - ಹಬ್ಬ - ವಿಶೇಷ ದಿನಗಳಂದು ಯಾರ ಮನೆಯಲ್ಲಾದರೂ ಕರೆದರೆ ಹೋಗಿ ಬರುತ್ತಿದ್ದರು. ಹಾಗೆಯೇ ಕ್ರಿಸ್‍ಮಸ್ ದಿನ ಊರವರೆಲ್ಲರೂ ಅವರ ಮನೆಗೆ ಹೋಗಿ, ಮಾಡಿದ್ದ ಅಲಂಕಾರವನ್ನೆಲ್ಲಾ ಹೊಗಳಿ, ಸೆಬಾಸ್ಟಿಯನ್ನರ ಹೆಂಡತಿ ಹಾಕಿಕೊಂಡ ಒಡವೆಗಳನ್ನೂ ಒಮ್ಮೆ ಪರಿಶೀಲಿಸಿ ನೋಡಿ, ಕೇಕು-ಸ್ವೀಟು ತಿಂದು ಬರುತ್ತಿದ್ದರು. ಹಿರಿಯರೂ ನಿವೃತ್ತ ಮಾಸ್ತರರೂ ಆಗಿದ್ದರಿಂದ ಅವರಿಗೆ ಊರಲ್ಲೊಂದು ಗೌರವವಿತ್ತು. ಮತ್ತೆ ಇಡೀ ಊರಲ್ಲಿ ಹುಡುಗರು ಹೀಗೆ ಇಂಗ್ಲೀಷಿನಲ್ಲಿ 'ಅಂಕಲ್' ಅಥವಾ 'ಮೇಷ್ಟ್ರಂಕಲ್' ಅಂತ ಕರೆಯುವುದು ಅವರೊಬ್ಬರನ್ನೇ.

ಅಳುಮುಖ ಮಾಡಿಕೊಂಡು ಹೊರಗಡೆ ಕಟ್ಟೆಯ ಮೇಲೆ ಕೂತಿದ್ದ ಪುಟ್ಟನನ್ನು ಕಂಡು ಅವರು ಮಾತಾಡಿಸಿದರು: 'ಯಾಕ್ ಪುಟ್ಟಾ..? ಹಬ್ಬದ ದಿನ ಖುಶ್‍ಖುಶಿಯಾಗಿರೋದು ಬಿಟ್ಟು ಹೀಗೆ ಕೂತಿದೀಯಾ?' ಅಂತ. ಪುಟ್ಟ ಹೀಗ್ ಹೀಗಾಯ್ತು, ಈ ವರ್ಷ ನಮ್ಮನೇಲಿ ಆಕಾಶಬುಟ್ಟೀನೇ ಇಲ್ಲ ಅಂತ ಹೇಳಿದ. ಮಕ್ಕಳಿಲ್ಲದ ಸೆಬಾಸ್ಟಿಯನ್ ಅಂಕಲ್‍ಗೆ ಪುಟ್ಟನನ್ನ ಕಂಡ್ರೆ ಯಾವಾಗಲೂ ಅಕ್ಕರೆ. ತಕ್ಷಣ ಪುಟ್ಟನನ್ನ ಎತ್ತಿಕೊಂಡ ಅವರು, 'ಅಯ್ಯೋ.. ಅದಕ್ಯಾಕೆ ಇಷ್ಟೆಲ್ಲಾ ಬೇಜಾರ್ ಮಾಡ್ಕೊಂಡಿದೀಯಾ..? ನಮ್ಮನೇಲಿ ಕ್ರಿಸ್‍ಮಸ್ ಟೈಮಲ್ಲಿ ಹಾಕೋ ಆಕಾಶಬುಟ್ಟಿ ಇದೆಯಲ್ಲಾ..? ಅದನ್ನೇ ಕೊಡ್ತೀನಿ. ನಿಮ್ಮನೇಲಿ ಹಾಕಿ. ಹಬ್ಬ ಮುಗಿದ ಮೇಲೆ ವಾಪಸು ಕೊಡಿ.. ಸಿಂಪಲ್..!' ಎಂದವರೇ ಪುಟ್ಟನನ್ನ ತಮ್ಮನೆ ಒಳಗೆ ಕರೆದುಕೊಂಡು ಹೋಗಿ, ಗಾಡ್ರೇಜಿನಲ್ಲಿದ್ದ ಬಣ್ಣಬಣ್ಣದ ಝರಿಯ, ಫಳಫಳನೆ ಹೊಳೆಯುವ, ಹೊಸದರ ಹಾಗೆ ಕಾಣುವ ಆಕಾಶಬುಟ್ಟಿಯನ್ನು ತೆಗೆದುಕೊಟ್ಟರು.. ಪುಟ್ಟನ ಕಣ್ಣಲ್ಲೀಗ ನಕ್ಷತ್ರ ಕಾರಂಜಿ..!

ಅಷ್ಟೊತ್ತಿಗೆ ಗೋಪೂಜೆಗೆ ಕರೆಯಲೆಂದು ಅಲ್ಲಿಗೆ ಬಂದ ಅಮ್ಮನಿಗೆ ಪುಟ್ಟ ಮೇಷ್ಟ್ರಂಕಲ್ ಕೊಟ್ಟ ಆಕಾಶಬುಟ್ಟಿ ತೋರಿಸಿದ. 'ಓಹ್, ಸಿಗ್ತಲ್ಲಪ್ಪಾ ಅಂತೂ ನಿಂಗೆ ಆಕಾಶಬುಟ್ಟಿ..? ಮೇಷ್ಟ್ರ್‍ಏ, ಇವನಿಗೆ ಇವತ್ತು ಹೆಂಗೆ ಸಮಾಧಾನ ಮಾಡೋದು ಅಂತ್ಲೇ ನಂಗೆ ಗೊತ್ತಾಗ್ದೇ ಸುಮ್ನಾಗ್ಬಿಟ್ಟಿದ್ದೆ.. ಅಂತೂ ನೀವು ಇದನ್ನ ಕೊಟ್ಟು ಒಳ್ಳೇ ಕೆಲಸ ಮಾಡಿದ್ರಿ ನೋಡಿ!' ಎಂದು, ಅವರನ್ನು ಮಡದಿ ಸಮೇತ ಪೂಜೆಗೆ - ಊಟಕ್ಕೆ ಬರುವಂತೆ ಕರೆದು ಹೋದಳು.

ಆಕಾಶಬುಟ್ಟಿಯನ್ನು ಹುಶಾರಾಗಿ ಮನೆಗೆ ತಂದ ಪುಟ್ಟ. ಅವನಿಗೆ ಅದನ್ನು ಮನೆಯೆದುರು ನೇತು ಹಾಕಿ, ಒಮ್ಮೆ ಸ್ವಿಚ್ ಹಾಕಿ ನೋಡುವವರೆಗೆ ಸಮಾಧಾನವಿಲ್ಲ.. ಅಪ್ಪನ ಬಳಿ ಕೇಳಿದರೆ 'ಈಗ ಆಗಲ್ಲೆ ಅಪ್ಪೀ.. ಮಧ್ಯಾಹ್ನದ್ ಮೇಲೆ ನೋಡನ.. ಈಗ ಸ್ನಾನಕ್ಕೆ ಹೋಗವು, ಗೋಪೂಜೆ ಮಾಡವು, ದೇವಸ್ಥಾನಕ್ ಹೋಗವು..' ಎನ್ನುತ್ತಾ ಗಡಿಬಿಡಿಯಲ್ಲಿ ಟವೆಲ್ ಎತ್ತಿಕೊಂಡು ಬಚ್ಚಲಿನೆಡೆಗೆ ನಡೆದೇಬಿಟ್ಟ. ಪುಟ್ಟ ಚಡಪಡಿಸುತ್ತಾ ಮನೆಯ ಒಳಗೂ ಹೊರಗೂ ಓಡಾಡತೊಡಗಿದ. ಅಪ್ಪ ಸ್ನಾನ ಮಾಡಿ ಬಂದು, ಮಡಿ ಉಟ್ಟು, ಪೂಜೆ ಸಾಮಾನನ್ನೆಲ್ಲಾ ಎತ್ತಿಕೊಂಡು ಕೊಟ್ಟಿಗೆ ಕಡೆ ಹೊರಟ. ಅಮ್ಮನೂ ಅಪ್ಪನ ಹಿಂದೆಯೇ ನೈವೇದ್ಯಕ್ಕೆ ಭಕ್ಷ್ಯಗಳನ್ನು ಹಿಡಿದು ಹೊರಟಳು. 'ಝಾಂಗ್ಟೆ ಹೊಡಿಲಕ್ಕು ಬಾರಾ' ಎಂದು ಕೂಗಿದರೆ ಪುಟ್ಟ ಸಿಟ್ಟು ಮಾಡಿಕೊಂಡು ಕೊಟ್ಟಿಗೆಗೆ ಹೋಗಲೇ ಇಲ್ಲ.

ಸ್ವಲ್ಪ ಸಮಯದಲ್ಲಿ ಹೊಸ ಬಟ್ಟೆ ಹಾಕಿಕೊಂಡು ಮೇಷ್ಟ್ರಂಕಲ್ ಪುಟ್ಟನ ಮನೆಗೆ ಬಂದರು. ಪುಟ್ಟನ ಚಡಪಡಿಕೆ ಅವರಿಗೆ ಅರ್ಥವಾಯಿತು. ಅದಾಗಲೇ ವೈರೆಳೆದು ತಯಾರಾಗಿದ್ದ ವ್ಯವಸ್ಥೆಗೆ ತಮ್ಮ ಮನೆಯ ಆಕಾಶಬುಟ್ಟಿಯನ್ನು ನೇತುಬಿಟ್ಟರು. ಪುಟ್ಟ ಒಳಗೋಡಿ ಸ್ವಿಚ್ ಹಾಕಿದ. ಕನಸಿನ ಲೋಕದಿಂದಲೇ ಇಳಿದು ಬಂದಂತಿದ್ದ ಆ ಆಕಾಶದೀಪ ಝಗ್ಗನೆ ಹೊತ್ತಿಕೊಳ್ಳುವುದಕ್ಕೂ, ಪುಟ್ಟನ ಮೊಗದಲ್ಲಿ ಖುಶಿಯ ಪಟಾಕಿ ಸಿಡಿದರಳುವುದಕ್ಕೂ, ಕೊಟ್ಟಿಗೆಯಿಂದ ಅಪ್ಪನ ಗೋಪೂಜೆಯ ಘಂಟೆ ಸದ್ದಾಗುವುದಕ್ಕೂ ಸರಿ ಹೋಯಿತು. 'ಹೇ..' ಎನ್ನುತ್ತಾ ಮೇಷ್ಟ್ರಂಕಲ್ಲನ್ನೂ ಎಳೆದುಕೊಂಡೇ ಕೊಟ್ಟಿಗೆಯೆಡೆಗೆ ಓಡಿದ ಪುಟ್ಟ.

* *

ಆಕಾಶಬುಟ್ಟಿಯ ಬೆಳಕು ಮೌಢ್ಯದ ಕತ್ತಲೆಯನ್ನು ತೊಡೆದು, ಸ್ನೇಹ-ಪ್ರೀತಿ-ಸಹಬಾಳ್ವೆಗಳೆಡೆಗೆ ಜನರನ್ನು ನಡೆಸುವಲ್ಲಿ ನೆರವಾಗಲಿ ಎಂದು ಹಾರೈಸೋಣ. ದೀಪಾವಳಿಯ ಶುಭಾಶಯಗಳು.