Friday, June 20, 2014

ಅಕ್ಷತಾ

ಅಲ್ಲಿ ಅಕ್ಷತಾ ಹಾಗೆ ತಲೆಕೆಳಗಾಗಿ
ಕೊಳವೆ ಬಾವಿಯೊಳಗೆ ಬೀಳುವಾಗ
ನಾನು ಬೆಂಗಳೂರು ಟ್ರಾಫಿಕ್ಕನ್ನು ಬೈದುಕೊಳ್ಳುತ್ತ
ಮನೆಯತ್ತ ಧಾವಿಸುತ್ತಿದ್ದೆ.
ಟೀವಿ ಹಚ್ಚಿದರೆ ಅದಾಗಲೇ ನ್ಯೂಸು ಬ್ರೇಕಾಗಿತ್ತು.
ಛಾನೆಲ್ ತನ್ನ ವರದಿಗಾರರನ್ನು ಟ್ರೈಪಾಡ್ ಸಮೇತ
ಸ್ಥಳಕ್ಕೆ ಕಳುಹಿಸುತ್ತಿರುವಾಗಿ ಹೇಳುತ್ತಿತ್ತು.
ನಾನು ಊಟದ ಸಿದ್ಧತೆ ನಡೆಸುವ ಹೊತ್ತಿಗೆ
ವರದಿಗಾರರು ಅಲ್ಲಿಗೆ ತಲುಪಿ ವರದಿ ನೀಡಲಾರಂಭಿಸಿದ್ದರು
ಝಗಮಗ ದೀಪಗಳ ಬೆಳಕಲ್ಲಿ ರಕ್ಷಣಾ ಕಾರ್ಯಕರ್ತರ
ಹೆಲ್ಮೆಟ್ಟುಗಳು ಹೊಳೆಯುತ್ತಿದ್ದವು. ದೈತ್ಯ ಜೆಸಿಬಿ ಯಂತ್ರಗಳು
ಮಣ್ಣು ಕೆದಕುತ್ತಿದ್ದವು. ನಾನೂ ಹೆಂಡತಿಯೂ
ಅಕ್ಷತಾಳ ತಂದೆ ತಾಯಿಯರ ಆಕ್ರಂದನ ನೋಡುತ್ತಾ
ರೋಚಕವಾಗಿ ಊಟ ಮಾಡಿದೆವು. ದಿನವಿಡೀ ದುಡಿಯುವ ನಮಗೆ
ಅದೆಷ್ಟು ಸುಸ್ತೆಂದರೆ ದಿಂಬಿಗೆ ತಲೆ ಹಚ್ಚಿದರೆ ನಿದ್ರೆ ಬರುತ್ತದೆ.

ಕೊಳವೆಬಾವಿಯೊಳಗೆ ತಲೆಕೆಳಗಾಗಿ ಬೀಳುವುದು ಎಂದರೇನು
ಕೈಕಾಲಾಡಿಸಲಾಗದಂತೆ ಬಂಧಿಯಾಗುಗುವುದು ಎಂದರೇನು
ನಿಧನಿಧಾನವಾಗಿ ಇಂಚಿಂಚಾಗಿ ಕೆಳಗಿಳಿಯುವುದು ಎಂದರೇನು
ಕೂಗಿಕೊಂಡರೆ ನನ್ನ ದನಿಯೇ ನನಗೆ ಕೇಳುವುದು ಎಂದರೇನು
ಗಾಳಿಯಿಲ್ಲದೇ ಉಸಿರು ಕಟ್ಟುವುದು ಎಂದರೇನು
ಅಂತೆಲ್ಲ ನನಗೆ ಗೊತ್ತೇ ಇಲ್ಲ.
ನಾನ್ಯಾವತ್ತೂ ಕೊಳವೆಬಾವಿಯೊಳಗೆ ಬಿದ್ದಿಲ್ಲ.

* *

ಮರುದಿನ ಬೆಳಗ್ಗೆ ನ್ಯೂಸ್‌ಪೇಪರಿನಲ್ಲಿ
ಅಕ್ಷತಾಳ ಪುಟ್ಟ ಫೋಟೋ ಮುಖಪುಟದಲ್ಲೇ ಇತ್ತು
ಫೇಸ್‌ಬುಕ್ಕಿನ ಗೋಡೆಯಲ್ಲಿ ಅಲ್ಲಲ್ಲಿ ಪ್ರಾರ್ಥನೆಗಳಿದ್ದವು
ಆಫೀಸಿನಲ್ಲಿ ಅವತ್ತು ಕೆಲಸವೋ ಕೆಲಸ.

ಸಂಜೆ ಮನೆ ಮುಟ್ಟಿದರೆ ಟೀವಿಯಲ್ಲಿ ಇನ್ನೂ
ಜೆಸಿಬಿಗಳು ಮೊರೆಯುತ್ತಿದ್ದವು. ರಾಜ್ಯಾದ್ಯಂತ ಇರುವ
ತೆರೆದ ಕೊಳವೆ ಬಾವಿಗಳ ಬಗ್ಗೆ, ಅವುಗಳ ಮಾಲೀಕರ ಬಗ್ಗೆ,
ಅವನ್ನು ಕೊರೆದವರ ಬಗ್ಗೆ, ಹದಗೆಟ್ಟ ಜಿಲ್ಲಾಡಳಿತದ ಬಗ್ಗೆ
ಸಮೀಕ್ಷೆಗಳೂ ಚರ್ಚೆಗಳೂ ಆಕ್ರೋಶಗಳೂ ಇದ್ದವು.
ಅಕ್ಷತಾ ಎಷ್ಟು ಅಡಿ ಕೆಳಗಿರಬಹುದೆಂಬ ಲೆಕ್ಕಾಚಾರ ನಡೆದಿತ್ತು.
ಆಧುನಿಕ ರೋಬೋಗಳು ಅಕ್ಷತಾಳನ್ನು ಮೇಲೆತ್ತಲು ವಿಫಲವಾಗಿದ್ದವು.
ಪುಟ್ಟ ಪೈಪಿನಿಂದ ನಿರಂತರ ಆಮ್ಲಜನಕ ಪೂರೈಸುತ್ತಿರುವುದು
ಟೀವಿಯ ಪರದೆಯಲ್ಲಿ ಎಷ್ಟು ಚೆನ್ನಾಗಿ ಕಾಣುತ್ತಿತ್ತು.
ಪಾಲಕರ ಆರ್ತನಾದ ಮುಂದುವರೆದಿತ್ತು.
ಆ ಅಟ್ಟಿಸಿಕೊಂಡು ಬಂದ ನಾಯಿಯ ಬಗ್ಗೆ ಮುಂದೆ
ಚರ್ಚಿಸಬಹುದು ಅಂತ ಕಾದೆವು.

ಆಮೇಲೆ ನಮಗೆ ದೈನಂದಿನ ಧಾರಾವಾಹಿಗಳನ್ನು ನೋಡುವುದಿತ್ತು.
ರಾತ್ರಿ ಹತ್ತೂವರೆ ಮೇಲಂತೂ ಎಲ್ಲ ಛಾನೆಲ್ಲಿನಲ್ಲೂ
ಹಾಸ್ಯ ಧಾರಾವಾಹಿಗಳು. ನಕ್ಕು ನಕ್ಕು ಉಂಡಿದ್ದು ಜೀರ್ಣವಾದಮೇಲೇ
ಸುಖ ನಿದ್ರೆ.

ಕನಸಿನಲ್ಲಿ ನಾನು ಪುಟ್ಟ ಹುಡುಗನಾಗಿದ್ದೆ.
ಅದೇ ಕೊಳವೆಬಾವಿಯ ಪಕ್ಕ, ನುಣುಪಾದ ಮಣ್ಣಿನಲ್ಲಿ ಹುದುಗಿಕೊಂಡಿದ್ದ
ಗುಬ್ಬಚ್ಚಿ ಹುಳುವನ್ನು ಬಗೆದು ತೆಗೆಯುತ್ತಿದ್ದೆ.
ಆಗ ಪಾತಾಳದಿಂದ ಗಂಗಾಮಾತೆ ತಾನೇ
ಅಕ್ಷತಾಳನ್ನೆತ್ತಿಕೊಂಡು ಬಂದು ನನ್ನ ಪಕ್ಕ ಬಿಟ್ಟಳು.
ನಾನು-ಅಕ್ಷತಾ ಯಾವುದೋ ಆಟವಾಡಿದೆವು.
ಪುರಾಣ ಪುಣ್ಯಕಥೆಗಳೆಂದರೆ ನನಗೆ ಬಹಳ ಇಷ್ಟ.

* *

ಮರುದಿನ ಸಂಜೆಯ ಹೊತ್ತಿಗೆ
ಅಕ್ಷತಾ ಬದುಕಿರುವ ಬಗ್ಗೆ ಅನುಮಾನಗಳು
ಇನ್ನೇನು ಕೆಲವೇ ಕ್ಷಣದಲ್ಲಿ
ಅಕ್ಷತಾಳ ಬಳಿ ತಲುಪಲಿರುವ ರಕ್ಷಣಾ ಕಾರ್ಯಕರ್ತರು.
ಬಾವಿಯಿಂದ ಕೊಳೆತ ಹೆಣದ ವಾಸನೆ.
ಕ್ಷಣ ಎಂದದ್ದು ನಿಮಿಷಗಳಾದವು.
ನಿಮಿಷಗಳು ಗಂಟೆಗಳಾದವು.
ಯಾಕೋ ರಕ್ಷಣಾ ಕಾರ್ಯಾಚರಣೆ ತಡವಾಗುತ್ತಿತ್ತು.
ಟೀವಿಯಲ್ಲಿ ಲೈವ್ ಇತ್ತಲ್ಲ, ಏನೂ ತೊಂದರೆ ಇಲ್ಲ ಎಂದುಕೊಂಡೆ.
ಫೇಸ್‌ಬುಕ್ಕಿನಲ್ಲಿ ಪ್ರಾರ್ಥನೆಗಳು ವಿರಳವಾಗಿದ್ದವು.
ಯಾವುದೋ ಧಾರಾವಾಹಿಯ ಯಾವುದೋ ದೃಶ್ಯದ ಬಗ್ಗೆ ಚರ್ಚೆ ನಡೆಯುತ್ತಿತ್ತು.
ಟ್ವಿಟರಿನಲ್ಲಿ ಫುಟ್‌ಬಾಲ್ ಫೀವರ್.
ಹೆಂಡತಿ ಮನೆಗೆ ಬಂದವಳೇ ಅತ್ಯಂತ ಕುತೂಹಲಕಾರಿ ಘಟ್ಟದಲ್ಲಿರುವ
ಧಾರಾವಾಹಿಯನ್ನು ನೋಡಲು ಛಾನೆಲ್ ಬದಲಿಸಿದಳು.
ಆಮೇಲೆ ಕಾಮೆಡಿ ಶೋಗಳು. ನಗು. ನಿದ್ರೆ.

* *

ಮರುದಿನದ ಪತ್ರಿಕೆಯಲ್ಲಿ ಬದುಕಿ ಬಾರದ ಅಕ್ಷತಾ
ಬಗ್ಗೆ ವರದಿಯಿತ್ತು. ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ,
ಬಾವಿಯಿಂದ ನೀರೆತ್ತುವಂತೆಯೇ ಕುಣಿಕೆ ಹಾಕಿ ಜೀವವನ್ನೆತ್ತಿಕೊಂಡು
ಹೋಗಿದ್ದರು. ಪುಟ ತಿರುಗಿಸಿದರೆ ಮುಖಂಡರ ವಿಷಾದಗಳೂ,
ಯಾರ್ಯಾರು ಎಷ್ಟೆಷ್ಟು ಪರಿಹಾರ ಘೋಷಿಸಿದರೆಂಬ ಪಟ್ಟಿಯೂ ಇತ್ತಿರಬೇಕು.

ಚಿಕ್ಕವನಿದ್ದಾಗ ನನ್ನನ್ನೂ ಒಂದು ನಾಯಿ ಹೀಗೇ
ಅಟ್ಟಿಸಿಕೊಂಡು ಬಂದಿತ್ತು. ಓಡೋಡಿ ಬಂದು ತಪ್ಪಿಸಿಕೊಂಡಿದ್ದೆ.
ಪುಣ್ಯಕ್ಕೆ ಆಗ ಕೊಳವೆ ಬಾವಿಗಳಿರಲಿಲ್ಲ.