Monday, October 06, 2014

ರೋಟೀರೋಬೋ

‘ಮದುವೆಯಾದಮೇಲೆ ಹೆಂಗಸರಾಗುತ್ತಾರೆ ದಪ್ಪ, ಗಂಡಸರಾಗುತ್ತಾರೆ ಬರೀ ಹೌದಪ್ಪ’ ಎಂಬ ಡುಂಡೀರಾಜರ ಕವನ ಓದಿದಾಗ ನಾನೇನು ಅದನ್ನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಹನಿಗವನ ಓದಿ ಯಾರಾದರೂ ತಲೆಬಿಸಿ ಮಾಡಿಕೊಳ್ತಾರೆಯೇ? ಎಲ್ಲರ ಹಾಗೆ ನಾನೂ ನಕ್ಕು ಸುಮ್ಮನಾಗಿದ್ದೆ.  ಹಾಗಂತ ನಾನು ಪ್ರೀತಿಸುವ ಹುಡುಗಿ ‘ನಮ್ ಫ್ಯಾಮಿಲೀಲಿ ಕೆಲವರು ಸ್ವಲ್ಪ ದಪ್ಪ ಇರೋದುಂಟು. ನಾನೂ ಮದುವೆ ಆದಮೇಲೆ ಸ್ವಲ್ಪ ದಪ್ಪಗಾದ್ರೆ ನಿಂಗೆ ತೊಂದ್ರೆ ಇಲ್ಲ ಅಲ್ವಾ?’ ಅಂತ ಕೇಳಿದಾಗ ಸ್ವಲ್ಪ ಸೀರಿಯಸ್ಸಾಗಿದ್ದೆ. ‘ದಪ್ಪಗಾಗೋದಾ? ನೋವೇ ನೋವೇ! ಈಗ ಇರೋದು ಸರೀ ಇದೀಯಾ. ಮದುವೆ ಆದ್ಮೇಲೂ ಹಿಂಗೇ ಮೇಂಟೇನ್ ಮಾಡ್ಬೇಕು’ ಅಂತ ಹೇಳಿದ್ದಿದ್ದೆ. ಹೌದು ಮತ್ತೆ, ನಾನಿರೋದು ಹೀಗೆ ತೆಳ್ಳಗೆ, ಅವಳು ಫುಲ್ ದಪ್ಪಗೆ ಡ್ರಮ್ಮಿನಂತಾಗಿ, ಆಮೇಲೆ ನಾವು ಒಟ್ಟಿಗೆ ತಿರುಗಾಡುವುದಾದರೂ ಹೇಗೆ? ನೋಡಿದವರು ಇದೆಂಥಾ ಜೋಡಿ ಅಂತ ನಗೋದಿಲ್ಲವೇ? ಅದಕ್ಕೇ ನಾನು ಈ ವಿಷಯದಲ್ಲಿ ತುಂಬಾ ಸ್ಟ್ರಿಕ್ಟ್ ಎಂಬಂತೆ ವರ್ತಿಸಿದ್ದೆ. ಆದರೆ ಅವಳು ಅಷ್ಟು ಕೇಳಿಕೊಂಡು ಸುಮ್ಮನಾಗಲಿಲ್ಲ: ‘ಹಾಗಲ್ಲ, ಈ ದಪ್ಪಗಾಗೋದು-ತೆಳ್ಳಗಾಗೋದು ನಮ್ಮ ಕೈಲಿಲ್ಲ ಅಲ್ವಾ? ಕೆಲವೊಬ್ರು ಮದುವೆ ಆದ್ಮೇಲೆ ತಮಗೆ ಗೊತ್ತಿಲ್ದೇನೇ ದಪ್ಪಗಾಗ್ತಾರಂತೆ’ ಅಂತ, ಮನುಷ್ಯನ ದೇಹದ ಗಾತ್ರ ಹೆಚ್ಚು-ಕಮ್ಮಿಯಾಗೋದು ಒಂದು ವಿಧಿಯ ಆಟ, ಅದೊಂದು ಆಟೋಮ್ಯಾಟಿಕ್ ನೈಸರ್ಗಿಕ ಕ್ರಿಯೆ ಎಂಬಂತೆ ಹೇಳಿದಳು. ನಾನೇನು ಅದನ್ನು ಒಪ್ಪಲಿಲ್ಲ: ‘ಏಯ್, ಅವೆಲ್ಲ ಸುಳ್ಳು. ಈ ಸಿನೆಮಾ ನಟಿಯರೆಲ್ಲ ಎಷ್ಟು ವಯಸ್ಸಾದ್ರೂ ಹೆಂಗೆ ಬಳುಕೋ ಬಳ್ಳಿ ಥರ ಇರಲ್ವೇನೇ? ನೀನೂ ಅವರ ಹಾಗೇ ಇರ್ಬೇಕಪ್ಪ’ ಅಂತ ವಾದಿಸಿದೆ. ಇದಕ್ಕೆ ಸ್ವಲ್ಪ ಮಣಿದಂತೆ ಕಂಡ ಅವಳು, ‘ಹೋಗ್ಲಿ, ಅಕಸ್ಮಾತ್ ನಾನು ಮದುವೆ ಆದ್ಮೇಲೆ ದಪ್ಪ ಆಗ್ಬಿಟ್ಟೆ ಅಂತ ಇಟ್ಕೋ. ಆಗ ಏನ್ಮಾಡ್ತೀಯ?’ ಅಂತ ಕೇಳಿದಳು. ‘ಏನ್ ಮಾಡ್ತೀನಾ? ವಾಕಿಂಗು, ಜಾಗಿಂಗು, ಎಕ್ಸರ್ಸೈಸು, ಡಯಟ್ಟು ಅಂತೆಲ್ಲ ಏನಾದ್ರೂ ಮಾಡ್ಸಿ, ನೀನು ತೆಳ್ಳಗಾಗೋ ಹಂಗೆ ಮಾಡ್ತೀನಿ’ ಎಂದಿದ್ದೆ ಗಟ್ಟಿಯಾಗಿ. ಹಾಗೆ ಹೇಳುವಾಗ ನನಗೆ ಡುಂಡೀರಾಜರ ಕವನದ ಮೊದಲರ್ಧ ಮಾತ್ರ ನೆನಪಿತ್ತೇ ಹೊರತು ದ್ವಿತೀಯಾರ್ಧ ಮರೆತೇ ಹೋಗಿತ್ತು.

ಆದರೆ ಈ ದಪ್ಪಗಾಗೋದು-ತೆಳ್ಳಗಾಗೋದು ವಿಧಿಯ ಕೈವಾಡವೇ ಇರಬೇಕು. ಯಾಕೆಂದರೆ, ಮದುವೆಯಾದಮೇಲೆ ಹೆಂಡತಿಯ ಜೊತೆ ನಾನೂ ದಪ್ಪಗಾಗಲು ಶುರುವಾಗಿದ್ದು! ನನ್ನ ಭಾವೀ ಪತ್ನಿಯ ದೇಹಸೌಷ್ಠವದ ಬಗ್ಗೆ ರಿಸ್ಟ್ರಿಕ್ಷನ್ನು ಹಾಕುವಾಗ ನಾನು ನನ್ನ ಗಾತ್ರದ ಬಗ್ಗೆ ಯೋಚಿಸಿರಲೇ ಇಲ್ಲ. ನಾನು ದಪ್ಪಗಾಗೋದು ಸಾಧ್ಯವೇ ಇಲ್ಲ ಅನ್ನುವುದು ನನ್ನ ನಂಬಿಕೆ. ಕಡ್ಡಿ ಪೈಲ್ವಾನ್ ಎಂದೇ ಕರೆಯಲ್ಪಡುತ್ತಿದ್ದ ನಾನು, ಆ ನಾಮಾಂಕಿತದಿಂದ ಹೊರಬರಲೋಸುಗ ಸುಮಾರು ಪ್ರಯೋಗಗಳನ್ನು ಮಾಡಿದ್ದೆ. ‘ಪ್ರತಿ ರಾತ್ರಿ ಊಟ ಆದ್ಮೇಲೆ ಎರಡು ಪಚ್ಚಬಾಳೆ ಹಣ್ಣು ತಿನ್ನು’, ‘ನಾನ್ವೆಜ್! ನಾನ್ವೆಜ್ ತಿನ್ರೀ’, ‘ಬೇಕರಿ ಫುಡ್ ತಿನ್-ಬೇಕ್ರೀ’, ‘ದಿನಾ ಒಂದು ಬಿಯರ್ ಕುಡಿಯಪ್ಪಾ, ಅದು ಹೆಂಗ್ ದಪ್ಪಗಾಗಲ್ವೋ ನೋಡ್ತೀನಿ’, ‘ಜಿಮ್ಮಿಗೆ ಸೇರ್ಕೋ ಗುರೂ.. ನಿನ್ ಬಾಡಿ ಹೆಂಗ್ ಬೇಕೋ ಹಂಗೆ ತಯಾರಾಗತ್ತೆ’ ಅಂತೆಲ್ಲ ನೂರಾರು ಸಲಹೆಗಳನ್ನು ನಾನು ಸ್ವೀಕರಿಸೀ ಸ್ವೀಕರಿಸಿ, ಅವುಗಳಲ್ಲಿ ಕೆಲವನ್ನು ಪ್ರಯೋಗಿಸಿಯೂ ನೋಡಿ, ಯಾವುದೂ ವರ್ಕೌಟ್ ಆಗದೇ ಬಸವಳಿದು ಹೋಗಿದ್ದೆ. ಇದು ದಪ್ಪಗಾಗೋ ದೇಹವೇ ಅಲ್ಲ ಬಿಡು ಅನ್ನೋ ತೀರ್ಮಾನಕ್ಕೆ ಬಂದಿದ್ದೆ.

ಆದರೆ ಮದುವೆಯಾದಮೇಲೆ ಅದೇನು ಕಮಾಲ್ ನಡೆಯಿತೋ, ಐವತ್ತೆಂಟು ಕಿಲೊ ಇದ್ದ ನಾನು ಅರವತ್ತೆರಡಾಗಿ, ಅರವತ್ತೈದಾಗಿ, ಅರವತ್ತೆಂಟಾಗಿ, ಎಪ್ಪತ್ತೆರಡಾಗಿ... ರೂಪಾಯಿ ಮೌಲ್ಯ ಡಾಲರಿನ ಮುಂದೆ ಕುಸಿದಿದ್ದರೇನಂತೆ? ನಾನು ಪ್ರತಿ ಸಲ ತೂಕ ನೋಡಲೆಂದು ಮಶಿನ್ನಿನ ಮೇಲೆ ನಿಂತು ಒಂದು ರೂಪಾಯಿ ನಾಣ್ಯ ಹಾಕಿದಾಗಲೂ ಅದು ಹೆಚ್ಚೆಚ್ಚೇ ತೋರಿಸತೊಡಗಿತು. ಈಗ, ಹಿಂದೆಲ್ಲ ನೋಡಿ ಉಪೇಕ್ಷಿಸುತ್ತಿದ್ದ, ಅದೇ ಮಶಿನ್ನಿನ ಮೇಲೆ ಬರೆದಿರುತ್ತಿದ್ದ ಎಷ್ಟು ಎತ್ತರಕ್ಕೆ ಎಷ್ಟು ತೂಕವಿರಬೇಕು ಎಂಬ ಲೆಕ್ಕಾಚಾರದ ಪಟ್ಟಿಯನ್ನು ಸ್ವಲ್ಪ ಹುಬ್ಬೇರಿಸಿ ನೋಡಬೇಕಾಯಿತು. ದಪ್ಪಗಾಗಬೇಕು ಅಂತ ಹಿಂದೆ ಮಾಡಿದ್ದ ಅಷ್ಟೆಲ್ಲ ಸಾಹಸಗಳು ವಿಫಲವಾದಮೇಲೆ, ಈಗ ಸಾಹಸವನ್ನೇ ಮಾಡದೇ ದಪ್ಪಗಾಗುತ್ತಿರುವ ನನ್ನೀ ದೇಹದ ಪರಿ ಕಂಡು ಆಶ್ಚರ್ಯವಾಯಿತು. ಇನ್ನು ಯಾರಾದರೂ ಕಡ್ಡಿ ಪೈಲ್ವಾನರು ಸಿಕ್ಕರೆ ಮದುವೆಯಾಗುವ ಸಲಹೆ ಕೊಡಬೇಕು ಅಂತ ತೀರ್ಮಾನಿಸಿದೆ. ಸ್ವಲ್ಪ ದುಬಾರಿ ಪ್ರಯೋಗವಾದರೂ, ಫಲಿತಾಂಶದಲ್ಲಿ ಗೆಲುವು ನಿಗದಿಯಿದೆಯಲ್ಲ!

ಹಾಗಂತ ನಾನೇನು ಹೀಗೆ ದಪ್ಪಗಾಗುತ್ತಿರುವುದನ್ನು ಕಂಡು ಎದೆಗುಂದಲಿಲ್ಲ. ನನ್ನ ಎತ್ತರಕ್ಕೆ ಸರಿಯಾದ ತೂಕಕ್ಕೆ ಬರುತ್ತಿರುವುದಕ್ಕೆ ಖುಶಿ ಪಟ್ಟೆ. ಯಾರೋ ಒಂದಿಬ್ಬರು ಸಿಕ್ಕು, ‘ಹಾಂ, ಈಗ ನೀನು ಸರಿಯಾದ ಅಳತೆಗೆ ಬರ್ತಿದೀಯ ನೋಡು. ಹ್ಯಾಂಡ್‌ಸಮ್ ಕಾಣ್ತಿದೀಯ’ ಅಂತ ಹೇಳಿದಾಗ ಮೀಸೆ ತಿರುವಿದೆ. ಮುಂಚೆ ಕಣ್ಣೆತ್ತಿಯೂ ನೋಡದಿದ್ದ ಹುಡುಗಿಯರು ಈಗ ನನ್ನೆಡೆಗೆ ದೃಷ್ಟಿ ಹಾಯಿಸುವುದು ಕಂಡು ಎಂಜಲು ನುಂಗಿಕೊಂಡೆ. ಮದುವೆಯಾಗದೇ ಸ್ಮಾರ್ಟ್ ಆಗೋದಿಲ್ಲ, ಸ್ಮಾರ್ಟ್ ಆಗದೇ ಹುಡುಗಿಯರು ನೋಡೋದಿಲ್ಲ, ಮದುವೆಯಾದಮೇಲೆ ಸ್ಮಾರ್ಟ್ ಆದರೆ ಅವರು ನೋಡಿಯೂ ಉಪಯೋಗವಿಲ್ಲ! ಇದೇನು ಜಗತ್ತಪ್ಪಾ, ಏನಯ್ಯಾ ನಿನ್ನ ಲೀಲೆ ಅಂತೆಲ್ಲ ಸಿನೆಮಾ ಹೀರೋಗಳ ಶೈಲಿಯಲ್ಲಿ ನನಗೆ ನಾನೇ ಹೇಳಿಕೊಂಡೆ. ಹಾಗೆಯೇ ಹೆಂಡತಿಯೆಡೆಗೆ ಈಗ ಸ್ವಲ್ಪ ಗಮನ ಹರಿಸಿದೆ. ಅಪ್ಪ ಚೇನ್ ಸ್ಮೋಕರ್ ಆಗಿದ್ದರೇನು- ಮಗ ಮೋಟುಬೀಡಿ ಸೇದಿ ಸಿಕ್ಕುಬಿದ್ದಾಗ ಹಿಡಿದು ಸರಿಯಾಗಿ ಜಾಡಿಸುವುದಿಲ್ಲವೇ? ಹಾಗೆಯೇ ನಾನೂ ಹೆಂಡತಿ ದಪ್ಪಗಾಗುತ್ತಿರುವುದಕ್ಕೆ ಆಕ್ಷೇಪಿಸಿದೆ. ಆದರೆ ಅವಳು ಅದಕ್ಕೆ ಕ್ಯಾರೇ ಎನ್ನಲಿಲ್ಲ. ಮೂಗು ಮುರಿದು ಮುನ್ನಡೆದಳು. ನಾನೂ ಜೋರಾಗಿ ಮಾತನಾಡುವ ಧೈರ್ಯ ಮಾಡಲಿಲ್ಲ. ಯಾಕೆಂದರೆ ನಾನಾಗಲೇ ಡುಂಡೀರಾಜರ ಕವನದ ಗಂಡನಾಗಿದ್ದೆನಲ್ಲ!

ಇದು ಇಷ್ಟಕ್ಕೇ ನಿಂತಿದ್ದರೆ ಚೆನ್ನಿತ್ತು. ಆದರೆ ಸಮಸ್ಯೆಯಾದದ್ದು ನಮ್ಮ ದೇಹಗಳ ತೂಕವೇರುವಿಕೆ ಹಾಗೇ ಹೆಚ್ಚುತ್ತ ಹೋದಾಗ. ವೇಯಿಂಗ್ ಮಶಿನ್ನು ಒಂದೊಂದೇ ರೂಪಾಯಿಯಂತೆ ನುಂಗುತ್ತ ದುಡ್ಡು ಮಾಡತೊಡಗಿತು. ಅದರ ಜೊತೆಜೊತೆಗೇ ಗಾರ್ಮೆಂಟ್ ಇಂಡಸ್ಟ್ರಿಯವರೂ ಸಿರಿವಂತರಾಗತೊಡಗಿದರು. ಏಕೆಂದರೆ, ಇಪ್ಪತ್ತೆಂಟಿದ್ದ ನನ್ನ ಸೊಂಟದ ಸುತ್ತಳತೆ, ಮೂವತ್ತಾಗಿ, ಮೂವತ್ತೆರಡಾಗಿ, ಈಗ ಮೂವತ್ನಾಲ್ಕೂ ಯಾಕೋ ಟೈಟು ಅನ್ನೋ ಹಂತಕ್ಕೆ ತಲುಪಿತ್ತು. ಇರೋ ಪ್ಯಾಂಟೆಲ್ಲಾ ತುಂಬಾ ಬಿಗಿಯಾಯಿತು ಅಂತ ಕಳೆದ ತಿಂಗಳಷ್ಟೇ ತಂದುಕೊಂಡ ಹೊಸ ಪ್ಯಾಂಟುಗಳೂ ಹುಕ್ ಹಾಕಲು ಬರದಂತಾದವು. ಸರಿ ಅಂತ ಮತ್ತೆರಡು ಹೊಸ ಪ್ಯಾಂಟ್ ತಂದುಕೊಂಡರೆ ಮರು ತಿಂಗಳಿಗೆ ಅವೂ ಹಿಡಿಸದಾದವು. ನಮ್ಮ ಮನೆಯ ವಾರ್ಡ್‌ರೋಬಿನಲ್ಲಿ ಬಳಸಲಾಗದ ಬಟ್ಟೆಗಳ ರಾಶಿಯೇ ದೊಡ್ಡದಾಗುತ್ತ ಹೋದಾಗ ನಿಜಕ್ಕೂ ನಾವು ಯೋಚಿಸುವಂತಾಯಿತು. ‘ಸ್ಮಾರ್ಟಾಗಿ ಕಾಣ್ತಿದೀಯಾ’ ಅಂತಿದ್ದ ಗೆಳೆಯರು ಈಗ ‘ಯಾಕಲೇ ಮಗನೇ, ಪೂರಿ ಹಂಗೆ ಉಬ್ತಿದೀಯಾ’ ಅನ್ನಲು ಶುರು ಮಾಡಿದರು.  ಮೂರನೇ ಮಹಡಿಗೆ ಏರುವಾಗ ಏದುಸಿರು ಬಂದು ನಿಲ್ಲುವ ಹಾಗೆಲ್ಲ ಆದಾಗ ನಾವು ಇನ್ನು ತಡ ಮಾಡಿದರೆ ಆಗಲಿಲ್ಲ ಅನ್ನಿಸಿತು. ‘ಯು ಹ್ಯಾವ್ ಪುಟ್ಟಾನ್ ವೇಯ್ಟ್ ಯಾರ್’ ಅಂತ ನನ್ನ ಹೆಂಡತಿಗೆ ಅವಳ ಕಲೀಗುಗಳೂ ರಾಗವೆಳೆದು ಹೇಳಿದಮೇಲೆ ಅವಳೂ ಸೀರಿಯಸ್ಸಾದಳು. ಚೆನ್ನಾಗಿ ಕಾಣ್ತಾ ಇಲ್ಲ ಅಂತ ಯಾರಾದರೂ ಹೇಳಿಬಿಟ್ಟರೆ ಸಾಕು, ಹುಡುಗಿಯರು ಅಲರ್ಟ್ ಆಗುತ್ತಾರೆ.

ಎಂತಹ ಕಷ್ಟದ ಸಮಯದಲ್ಲೂ ಕೈ ಹಿಡಿಯುವವರೇ ನಿಜವಾದ ಗೆಳೆಯರು ಅಲ್ಲವೇ? ಆ ಮಾತನ್ನು ನಿಜ ಮಾಡಲೆಂದೇ ಕಾಯುತ್ತಿರುವ ನನ್ನ ಅದೆಷ್ಟೋ ಗೆಳೆಯರು ಈಗಲೂ ಆಪತ್ಭಾಂಧವರಂತೆ ಸಹಾಯಕ್ಕೆ ಧಾವಿಸಿದರು. ಮುಂಚೆ ದಪ್ಪಗಾಗಲು ನಾನಾ ಥರದ ಸಲಹೆ ಕೊಡುತ್ತಿದ್ದವರು ಈಗ ತೆಳ್ಳಗಾಗುವ ಟಿಪ್ಪುಗಳ ಪಟ್ಟಿ ಹಿಡಿದು ಬಂದರು. ಹಾಗೆ ನೋಡಿದರೆ, ದಪ್ಪಗಾಗಲು ಇರುವ ವಿಧಾನಗಳಿಗಿಂತ ತೆಳ್ಳಗಾಗುವ ಐಡಿಯಾಗಳು ಸುಲಭವಾಗಿ ಸಿಗುತ್ತವೆ. ಟೀವಿ, ಎಫ್ಫೆಮ್, ರಸ್ತೆ ಬದಿಯ ದೊಡ್ಡ ಫಲಕಗಳು, ಮೆಡಿಕಲ್ ಶಾಪಿನ ಬಾಗಿಲಿಗಂಟಿಸಿದ ಚೀಟಿಗಳು -ಎಲ್ಲೆಡೆ ಕಾಣುವ ವೇಯ್ಟ್ ಲಾಸ್ ಔಷಧಿ ಅಥವಾ ಶಿಬಿರಗಳ ಜಾಹೀರಾತುಗಳು ಒಂದು ತೂಕದವಾದರೆ, ಆಪತ್ಭಾಂಧವರು ಕೊಡುವ ಸಲಹೆಗಳು ಇನ್ನೊಂದೇ ವಜನಿನವು. ಬೆಳಗ್ಗೆ ಮುಂಚೆ ಎದ್ದು ಜಾಗಿಂಗ್ ಹೋಗುವುದು, ದಿನಾಲೂ ಎರಡು ಮೈಲಿ ಬಿರುಸಾದ ವಾಕ್ ಮಾಡುವುದು, ಜಿಮ್‌ಗೆ ಸೇರಿ ವ್ಯಾಯಾಮದಲ್ಲಿ ತೊಡಗುವುದು, ಜಂಕ್‌ಫುಡ್ ಕಮ್ಮಿ ಮಾಡುವುದು, ಗ್ರೀನ್ ಟೀ ಕುಡಿಯುವುದು... ಹೀಗೆ ನಮ್ಮ ದೇಹವನ್ನೂ ನಾಲಿಗೆಯನ್ನೂ ಕಷ್ಟಕ್ಕೆ ತಳ್ಳುವ ಸಲಹೆಗಳೇ ಎಲ್ಲಾ. ಈ ಗೆಳೆಯರೆಲ್ಲ ನಾವು ಕಷ್ಟ ಪಡುವುದನ್ನು ನೋಡಿ ಮಜಾ ತೆಗೆದುಕೊಳ್ಳಲು ತಂತ್ರ ಹೂಡುತ್ತಿರುವಂತೆ ಅನ್ನಿಸಿ ಅವರನ್ನೆಲ್ಲ ಮನಸಿನಲ್ಲೇ ಬೈದುಕೊಂಡೆ. ಈ ಸಂದರ್ಭದಲ್ಲೇ ಬಂದಿದ್ದು ನಾವು ಅನ್ನ ತಿನ್ನುವುದು ಬಿಟ್ಟು ಚಪಾತಿ ತಿನ್ನಬೇಕು ಎನ್ನುವ ಸಲಹೆ.

ಉಳಿದೆಲ್ಲ ಸಲಹೆಗಳಿಗಿಂತ ಇದು ಸುಲಭದ್ದು, ಸ್ವಲ್ಪವಾದರೂ ಮಾನವೀಯತೆ ಉಳ್ಳದ್ದು ಅಂತ ನಮಗನಿಸಿತು. ಪೂರಿಯಂತೆ ಉಬ್ಬಿದ್ದಕ್ಕೆ ಚಪಾತಿ ತಿನ್ನುವುದೇ ಪರಿಹಾರ, ಅನ್ನದಲ್ಲಿರುವ ಕೊಬ್ಬಿನ ಅಂಶ ನಾವು ರಾತ್ರಿ ಮಲಗಿದಾಗ ಕಾರ್ಯಾಚರಣೆ ಮಾಡಿ ದೇಹವನ್ನು ದಪ್ಪಗೆ ಮಾಡುವುದರಿಂದ, ರಾತ್ರಿಯೂಟಕ್ಕೆ ಚಪಾತಿಯೇ ಸೂಕ್ತ ಎಂಬುದು ಸರಳ ಸೂತ್ರ. ಸರಿ, ಇನ್ನು ಪ್ರತಿ ರಾತ್ರಿ ಅನ್ನದ ಬದಲು ಚಪಾತಿ ತಿನ್ನುವುದು ಅಂತ ತೀರ್ಮಾನಿಸಿದೆವು. ನಾನು ಮರುದಿನವೇ ಹೋಗಿ ಐದು ಕೆಜಿ ಗೋಧಿಹಿಟ್ಟು ಹೊತ್ತು ತಂದೆ. ಹೆಂಡತಿ ಹುಮ್ಮಸ್ಸಿನಿಂದ ಲಟ್ಟಿಸಿ ಚಪಾತಿ ಮಾಡಿದಳು. ಅದಕ್ಕೊಂದು ಪಲ್ಯವೂ ತಯಾರಾಯಿತು. ನಾವು ಅದನ್ನೇ ಹೊಟ್ಟೆ ತುಂಬಾ ತಿಂದೆವು. ಇನ್ನೇನು ಕೆಲವೇ ದಿನಗಳಲ್ಲಿ ತೆಳ್ಳಗಾಗುವ ಕನಸು ಕಾಣತೊಡಗಿದೆವು.

ಹೀಗೇ ಒಂದು ವಾರ ಕಳೆಯಿತು. ಅಷ್ಟರಲ್ಲಿ ಹೆಂಡತಿಯ ಆಫೀಸಿನ ಸಮಯ ಬದಲಾದ್ದರಿಂದ ಆಕೆ ಮನೆಗೆ ಬರುವುದು ತಡವಾಗತೊಡಗಿತು. ಈಗ ಅಡುಗೆ ಮಾಡುವ ಜವಾಬ್ದಾರಿ ನನ್ನ ಮೇಲೆ ಬಂತು. ಬ್ಯಾಚುಲರ್ ಆಗಿದ್ದಾಗ ಸಂಪಾದಿಸಿದ್ದ ಪಾಕಪ್ರಾವೀಣ್ಯತೆಯನ್ನೆಲ್ಲ ಮತ್ತೆ ಪ್ರಯೋಗಿಸುವ ಸಮಯ ಬಂದಿದ್ದರಿಂದ ನಾನದನ್ನು ಉತ್ಸಾಹದಿಂದಲೇ ಸ್ವಾಗತಿಸಿದೆ. ಆದರೆ, ಅಡುಗೆ ಮಾಡುವುದರಲ್ಲಿ ನಾನು ಅದೆಷ್ಟೇ ಅನುಭವ ಹೊಂದಿದ್ದರೂ ಚಪಾತಿ ಒರೆಯುವುದು ಮಾತ್ರ ನನಗೆ ಕರಗತವಾಗಿರಲಿಲ್ಲ. ಹಾಗೂ ಏನಾದರಾಗಲಿ ಅಂತ ಲಟ್ಟಿಸಲು ಕುಳಿತರೆ, ಎರಡು ತಾಸು ಪ್ರಯತ್ನಿಸಿದರೂ ಒಂದು ಚಪಾತಿಯನ್ನೂ ಗೋಲಾಕಾರಕ್ಕೆ ತರಲು ಆಗಲಿಲ್ಲ. ಈ ವ್ಯರ್ಥ ಪ್ರಯತ್ನವನ್ನು ಇಲ್ಲಿಗೇ ಬಿಟ್ಟು, ಹೆಂಡತಿ ಬರುವವರೆಗೆ ಕಾಯೋಣವೇ ಅಂತ ಯೋಚಿಸಿದೆ. ಆದರೆ ಮೊದಲೇ ಆಫೀಸಿನಿಂದ ಸುಸ್ತಾಗಿ ಬರುವ ಅವಳಿಗೆ ಆ ಮಧ್ಯರಾತ್ರಿಯಲ್ಲಿ ಲಟ್ಟಣಿಗೆ ಕೊಟ್ಟು ಲಟ್ಟಿಸು ಎನ್ನುವುದು ಸರಿ ಕಾಣಲಿಲ್ಲ. ಲಟ್ಟಣಿಗೆ ಹಿಡಿದ ಹೆಂಡತಿ-ತಲೆ ಮೇಲೆ ಉಬ್ಬಿರುವ ಗಂಡಂದಿರ ನೂರಾರು ವ್ಯಂಗ್ಯಚಿತ್ರಗಳನ್ನು ನೋಡಿದ್ದ ನನಗೆ ಈ ರಿಸ್ಕು ತೆಗೆದುಕೊಳ್ಳಲು ಇಷ್ಟವಿರಲಿಲ್ಲ.  ಹೇಗೋ ಕಷ್ಟ ಪಟ್ಟು ಎಂಟ್ಹತ್ತು ಚಪಾತಿ ಒರೆದೆನಾದರೂ ಅವು ಒಂದೊಂದೂ ಒಂದೊಂದು ಆಕಾರದಲ್ಲಿದ್ದವು. ಅಷ್ಟೆಲ್ಲ ಸಲ ಲಟ್ಟಿಸಿದ್ದರಿಂದ ಕೈ ಬೇರೆ ನೋವು ಬಂದಿತ್ತು. ಬಹುಶಃ ಈ ತೆಳ್ಳಗಾಗುವುದು ಎಂಬುದು ಚಪಾತಿಯನ್ನು ತಿನ್ನುವುದರಿಂದ ಅಲ್ಲ, ಚಪಾತಿ ತಯಾರಿಸುವ ಕ್ರಿಯೆಯಲ್ಲಿ ನಮ್ಮ ದೇಹಕ್ಕಾಗುವ ವ್ಯಾಯಾಮದಿಂದಲೇ ನಾವು ತೆಳ್ಳಗಾಗುತ್ತೇವೇನೋ ಅಂತ ನನಗನಿಸಿತು. ಹೌದು ಮತ್ತೆ, ಹಿಟ್ಟನ್ನು ದಬರಿಗೆ ಹಾಕಿಕೊಂಡು, ಅದಕ್ಕೆ ನೀರು ಹಾಕಿ ಕಲಸುತ್ತ ಕಲಸುತ್ತ ಹದಕ್ಕೆ ತಂದು, ಉಂಡೆ ಕಟ್ಟಿ, ಆಮೇಲದನ್ನು ಮಣೆಯ ಮೇಲಿಟ್ಟು ಲಟ್ಟಿಸುತ್ತ, ತೆಳ್ಳಗೂ ದುಂಡಗೂ ಮಾಡಲು ಹೆಣಗಾಡುತ್ತ, ನಂತರ ಅದನ್ನಲ್ಲಿಂದ ಎತ್ತಿ ಕಾವಲಿಯ ಮೇಲೆ ಹಾಕಿ, ಸೀದು ಹೋಗದಂತೆ ತಿರುವಿ ಹಾಕುತ್ತ ಬೇಯಿಸಿ... ಇಷ್ಟೆಲ್ಲ ಮಾಡುವುದೂ ಒಂದೇ ಪಾರ್ಕಿನಲ್ಲಿ ನಾಲ್ಕು ರೌಂಡು ವಾಕ್ ಮಾಡುವುದೂ ಒಂದೇ! ಆಫೀಸಿನಿಂದ ಬಂದ ಹೆಂಡತಿ ‘ಆಕಾರ ಹೆಂಗಿದ್ರೆ ಏನು, ನಾವಿಬ್ರೇ ತಾನೇ, ಮುರಕೊಂಡೇ ತಿನ್ನೋದು ತಾನೆ’ ಅಂತೆಲ್ಲ ಹೇಳಿ ನನಗೆ ಸಮಾಧಾನ ಮಾಡಿ, ನನ್ನ ಪ್ರಯತ್ನವನ್ನು ಶ್ಲಾಘಿಸಿದಳಾದರೂ ನನಗೇಕೋ ಈ ಚಪಾತಿ ಮಾಡುವ ಪ್ರಕ್ರಿಯೆ ಬಹಳ ಉದ್ದ ಮತ್ತು ಕಠಿಣ ಎನಿಸಿತು.

ಮರುದಿನ ಗೆಳೆಯರ ಬಳಿ ನನ್ನೀ ಸಮಸ್ಯೆಯನ್ನು ಹೇಳಿಕೊಂಡೆ. ಅವರ ಬಳಿ ಇದಕ್ಕೇನಾದರೂ ಒಂದು ಪರಿಹಾರ ಇದ್ದೇ ಇರುತ್ತದೆ ಎಂಬುದು ನನ್ನ ನಂಬಿಕೆ.  ನನ್ನ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ ಅವರು: ‘ಅಷ್ಟೇನಾ, ಒಂದು ಚಪಾತಿ ಮೇಕರ್ ತಗೊಂಡ್ಬಿಡ್ರೀ’ ಅಂದರು. ‘ಚಪಾತಿ ಮೇಕರ್ರಾ? ಏನ್ರೀ ಅದು?’ -ಕೇಳಿದೆ. ‘ಅಯ್ಯೋ, ಗೊತ್ತಿಲ್ವಾ? ಚಪಾತಿ ಮೇಕರ್ರು.. ಮಶಿನ್ನು.. ಹಿಟ್ಟು ಕಲಸಿದ್ರೆ ಆಯ್ತು, ಅದ್ರಲ್ಲಿ ಇಟ್ರೆ ಆಯ್ತು, ಚಪಾತಿ ರೆಡಿ!’ -ಅಂದರು. ಚಪಾತಿ ಮಾಡುವುದು ಇಷ್ಟು ಸರಳವಾದದ್ದು ನನಗೆ ಖುಷಿಯಾಯಿತು. ಹಿಟ್ಟು ಕಲಸಿಟ್ಟರೆ ಸಾಕು, ಚಪಾತಿಯೇ ತಯಾರಾಗಿ ಬೀಳುತ್ತದೆ ಎಂದರೆ ಇನ್ನೇನು ಕೆಲಸ ಉಳಿಯಿತು? ತಿನ್ನುವುದು, ತೆಳ್ಳಗಾಗುವುದು, ಅಷ್ಟೇ!

ನಾವು ಆ ವಾರಾಂತ್ಯವೇ ಅಂಗಡಿಗೆ ಹೋಗಿ, ಹೆಚ್ಚಿಗೆ ಚೌಕಾಶಿಯನ್ನೂ ಮಾಡದೇ ಒಂದು ಚಪಾತಿ ಮೇಕರ್ ಕೊಂಡುತಂದೆವು. ತಂದವರೇ ಪೆಟ್ಟಿಗೆಯನ್ನು ಬಿಚ್ಚಿ ಮಶಿನ್ನನ್ನು ಹೊರತೆಗೆದೆವು. ಕೈ-ಕಾಲು-ಹೊಟ್ಟೆ-ಕಣ್ಣನ್ನೂ ಹೊಂದಿದ್ದ ಇದು ನಮ್ಮನ್ನು ತೆಳ್ಳಗೆ ಮಾಡಲೆಂದೇ ಬಂದ ಯಂತ್ರಮಾನವನಂತೆ ಕಂಡಿತು. ಮಶಿನ್ನಿನ ಜೊತೆ ಅದನ್ನು ಬಳಸಿ ಚಪಾತಿ ಮಾಡುವ ಪ್ರಾತ್ಯಕ್ಷಿಕೆಯ ಒಂದು ಡಿವಿಡಿ ಸಹ ಇಟ್ಟಿದ್ದರು. ಲ್ಯಾಪ್‌ಟಾಪಿನಲ್ಲಿ ಅದನ್ನು ಪ್ಲೇ ಮಾಡುವಾಗಲಂತೂ ಇನ್ನೇನು ಒಳ್ಳೆಯ ದಿನಗಳು ಬಂದೇಬಿಟ್ಟವು ಅನ್ನುವಷ್ಟು ಆನಂದ ನಮಗೆ! ಆ ವೀಡಿಯೋದಲ್ಲಿದ್ದ ಹೆಣ್ಣುಮಗಳು ಚಿಟಿಕೆ ಹೊಡೆಯುವಷ್ಟರಲ್ಲಿ ಒಂದೊಂದು ಚಪಾತಿ ಮಾಡುತ್ತಿದ್ದಳು! ಜಗತ್ತು ಇಷ್ಟೆಲ್ಲ ಮುಂದುವರೆದಿರುವ ಬಗ್ಗೆ ತಿಳಿದುಕೊಳ್ಳದೇ ಇಷ್ಟು ದಿನ ಮೂರ್ಖರಂತೆ ಚಪಾತಿ ಲಟ್ಟಿಸುತ್ತಾ ಕೂತು ಎಂಥಾ ತಪ್ಪು ಮಾಡಿದೆವು ಅನ್ನಿಸಿತು. ಥಳಥಳನೆ ಹೊಳೆಯುವ ದೇಹವನ್ನು ಹೊಂದಿದ್ದ ಆ ಚಪಾತಿ ಮೇಕರ್ ಬಗ್ಗೆ ಪ್ರೀತಿಯೂ, ಅಭಿಮಾನವೂ ಬಂತು. ಅದಕ್ಕೊಂದು ಹೆಸರಿಡಬೇಕು ಎನಿಸಿತು. ಇಂಡಿಯನ್ ಸೂಪರ್‌ಮ್ಯಾನ್ ರಜನೀಕಾಂತರನ್ನು ನೆನೆಸಿಕೊಂಡು ‘ರೋಟೀರೋಬೋ’ ಅಂತ ನಾಮಕರಣ ಮಾಡಿದೆವು.

ಆದರೆ ಈ ರೋಟೀರೋಬೋ ಬಳಸಿ ಚಪಾತಿ ಮಾಡುವುದು ಆ ವೀಡಿಯೋದಲ್ಲಿ ತೋರಿಸಿದಷ್ಟು ಸುಲಭವಾಗಿರಲಿಲ್ಲ. ಹಿಟ್ಟು ಅವರು ಹೇಳಿದ ಹದದಲ್ಲೇ ಇರಬೇಕಿತ್ತು, ಮಶಿನ್ನು ಅವರು ಹೇಳಿದಷ್ಟೇ ಕಾದಿರಬೇಕಿತ್ತು, ಉಂಡೆ ನಿಗದಿತ ಗಾತ್ರದಲ್ಲಿರಬೇಕಿತ್ತು, ಅದನ್ನು ರೋಬೋನಲ್ಲಿಟ್ಟು ಒತ್ತುವಾಗ ಸರಿಯಾದ ಒತ್ತಡವನ್ನೇ ಹಾಕಬೇಕಿತ್ತು.... ಹೀಗೆಲ್ಲ ಆಗಿ ನಾವು ಮೊದಲ ದಿನ ಮಾಡಿದ ಚಪಾತಿಗಳಲ್ಲಿ ಮುಕ್ಕಾಲು ಪಾಲು ತಿನ್ನಲು ಬಾರದಾದವು. ನಾವು ಆ ವೀಡಿಯೋವನ್ನು ಮತ್ತೆ ಮತ್ತೆ ಹಾಕಿ ನೋಡಿದರೂ ಅವಳಷ್ಟು ಸಲೀಸಾಗಿ ಒಂದು ಚಪಾತಿಯನ್ನೂ ಮಾಡಲಾಗಲಿಲ್ಲ. ಒಂದೋ ಚಪಾತಿ ಪುಡಿಪುಡಿಯಾಗುತ್ತಿತ್ತು, ಇಲ್ಲವೇ ದಪ್ಪಗಾಗುತ್ತಿತ್ತು, ಇಲ್ಲವೇ ಸೀದುಹೋಗುತ್ತಿತ್ತು, ಇಲ್ಲವೇ ನಾವು ಒತ್ತುವಾಗ ಹಿಟ್ಟಿನುಂಡೆಯನ್ನೇ ರೋಬೋ ಹೊರಹಾಕಿಬಿಡುತ್ತಿತ್ತು. ‘ಅವಳು ಅಷ್ಟು ಈಜಿಯಾಗಿ ಮಾಡ್ತಾಳಲ್ಲೇ?’ ಅಂತ ಹೆಂಡತಿಗೆ ಹೇಳಿದರೆ, ‘ಅವಳನ್ನೇ ಸ್ವಲ್ಪ ಕರ್ಕೊಂಡ್ ಬನ್ನಿ ಇಲ್ಲಿಗೆ. ಮಾಡಿ ತೋರಿಸ್ಲಿ’ ಅಂತ ರೇಗಿದಳು.

ಆದರೂ ನಾವು ಪ್ರಯತ್ನ ಕೈಬಿಡಲಿಲ್ಲ. ಎಷ್ಟಂದರೂ ದುಡ್ಡು ಕೊಟ್ಟು ತಂದ ವಸ್ತುವಲ್ಲವೇ! ಮರಳಿ ಯತ್ನವ ಮಾಡು ಅಂತ ಜಪಿಸಿಕೊಂಡು ಮರುದಿನ ನಾನು ಮತ್ತೆ ಹಿಟ್ಟು ಕಲಸಿ ರೋಬೋ ಜೊತೆ ಚಪಾತಿ ಮಾಡಲು ಯತ್ನಿಸಿದೆ. ಆದರೆ ಈ ಸಲವೂ ತಿನ್ನಲು ನಾಲ್ಕು ಚಪಾತಿಯೂ ಸಿಗಲಿಲ್ಲ. ನಮ್ಮ ಈ ಪ್ರಯತ್ನ ಎರಡ್ಮೂರು ವಾರದವರೆಗೂ ಮುಂದುವರೆಯಿತು. ಆದರೆ ಫಲಿತಾಂಶದಲ್ಲಿ ಹೇಳಿಕೊಳ್ಳುವಂತಹ ಸಫಲತೆ ಕಾಣಲಿಲ್ಲ. ನಮಗೆ ನಿಧಾನಕ್ಕೆ ಈ ಯಂತ್ರದ ಬಗ್ಗೆ, ದಿನಾಲೂ ಅರೆಬೆರೆ ಬೆಂದ ಅಥವಾ ಕರಕಲಾದ ಚಪಾತಿ ತಿನ್ನುವುದರ ಬಗ್ಗೆ, ಮತ್ತೆ ಈ ಡಯಟಿಂಗ್‌ನ ಬಗ್ಗೆಯೇ ಬೇಸರ ಬರಲು ಶುರುವಾಗಿತ್ತು. ನಾಲಿಗೆ ರುಚಿಯಾದ ಆಹಾರ ಬಯಸುತ್ತಿತ್ತು. ಅಷ್ಟರಲ್ಲಿ ಒಂದು ಬೆಳಗ್ಗೆ ನನ್ನ ಹೆಂಡತಿ ಅವಸರದಲ್ಲಿ ಈ ರೋಬೋನ ಕಾದ ಮೈಗೆ ಕೈ ತಾಕಿಸಿ ಸುಟ್ಟುಕೊಂಡಮೇಲಂತೂ ರೋಟೀರೋಬೋನ ಮೇಲೆ ಸಿಟ್ಟೇ ಬಂದುಬಿಟ್ಟಿತು. ಅಂದು ಹೀರೋ ಥರ ಕಂಡಿದ್ದ ರೋಬೋ ಇಂದು ವಿಲನ್ನಿನಂತೆ ಕಾಣತೊಡಗಿದ. ಊರಿಗೆ ಫೋನ್ ಮಾಡಿ ಹೇಳಿದಾಗ, ‘ಚಪಾತಿ ಮಾಡಕ್ಕೆಲ್ಲ ಎಂಥಾ ಮಶಿನ್ನು? ಒಂಚೂರು ಕಷ್ಟ ಪಟ್ಟು ಒರಕೊಂಡ್ರೆ ಆಯ್ತಪ್ಪ. ನೀವು ಎಲ್ಲಾದ್ರಲ್ಲೂ ಅರಾಂ ಹುಡುಕ್ತೀರಿ. ಅದಕ್ಕೇ ಮೈಯೂ ಬೆಳೀತಿದೆ. ಸ್ವಲ್ಪ ಮೈಕೈ ನುಗ್ಗುಮಾಡಿಕೊಂಡು ಕೆಲಸ ಮಾಡಿದರೆ ಸಣ್ಣಗೂ ಆಗ್ತೀರ, ಚಪಾತಿಯೂ ರುಚಿಯಾಗೊತ್ತೆ’ ಅಂತ ಬೈದರು. ಹೆಂಡತಿ ತಾನಿನ್ನು ಆ ಹಾಳು ರೋಬೋನ ಹತ್ತಿರಕ್ಕೂ ಹೋಗೋದಿಲ್ಲ ಅಂತ ಶಪಥ ಮಾಡಿದಳು. ನನಗೂ ರೋಬೋನ ಸಹವಾಸ ಸಾಕಾಗಿತ್ತು. ಇನ್ನೇನು ಮಾಡುವುದು? ಓ‌ಎಲ್ಲೆಕ್ಸಿನಲ್ಲಿ ಅದನ್ನು ಮಾರಿಬಿಡುವುದು ಅಂತ ತೀರ್ಮಾನಿಸಿದೆ.

ಓಲ್ಲೆಕ್ಸಿನಲ್ಲಿ ಮಾರುವುದು ‘ಫೋಟೋ ತೆಗೆಯಿರಿ, ಅಪ್‌ಲೋಡ್ ಮಾಡಿರಿ, ಮಾರಿಬಿಡಿ!’ ಅನ್ನುವ ಅವರ ಜಾಹೀರಾತಿನಷ್ಟೇನು ಸುಲಭವಾಗಿರಲಿಲ್ಲ. ನಾನು ಜಾಹೀರಾತು ಪ್ರಕಟಿಸಿದ ವಾರದಮೇಲೆ ಒಂದು ಫೋನ್ ಬಂತು. ಉತ್ತರ ಭಾರತದಿಂದ ಬಂದವನಾಗಿದ್ದ ಅವನು ನಾನು ಕೊಂಡಿದ್ದ ಬೆಲೆಯ ಅರ್ಧಕ್ಕೆ ಕೇಳಿದ. ಕೊಡೋದಿಲ್ಲ ಅಂತ ಫೋನಿಟ್ಟೆ. ಆಮೇಲೆ ಬಂದ ಮೂರ್ನಾಲ್ಕು ಕರೆಗಳೂ ಅಂಥವೇ. ನಾವು ಕೊಂಡು ತಿಂಗಳೂ ಆಗಿಲ್ಲಪ್ಪ, ಇನ್ನೂ ಹನ್ನೊಂದು ತಿಂಗಳು ವಾರಂಟಿ ಇದೆಯಪ್ಪಾ, ಸ್ವಲ್ಪವೂ ಹಾಳಾಗಿಲ್ಲಪ್ಪಾ ಅಂತೆಲ್ಲ ಅಂಗಲಾಚಿದರೂ ಯಾರೂ ಬಗ್ಗಲಿಲ್ಲ. ಕೊನೆಗೂ ಒಬ್ಬನಿಗೆ ನಾನದನ್ನು ಅರ್ಧ ಬೆಲೆಗೇ ಮಾರಲು ಒಪ್ಪಬೇಕಾಯಿತು. ಇಂಥಾ ಸ್ಥಳಕ್ಕೆ ಇಂಥಾ ಹೊತ್ತಿಗೆ ಬಂದು ತೆಗೆದುಕೊಂಡು ಹೋಗುವುದಾಗಿ ಹೇಳಿದ.

ರೋಬೋನನ್ನು ಮೊದಲಿನಂತೆಯೇ ಬಾಕ್ಸಿಗೆ ಹಾಕಿ ಪ್ಯಾಕ್ ಮಾಡಿ, ನಿಗದಿತ ಸ್ಥಳಕ್ಕೆ ನಿಗದಿತ ಸಮಯಕ್ಕೆ ಹೋಗಿ ನಾನು ಕಾದುನಿಂತೆ. ಯಾರೋ ಭಯಂಕರ ದಪ್ಪಗಿರುವ ವ್ಯಕ್ತಿಯನ್ನು ನಿರೀಕ್ಷಿಸುತ್ತಿದ್ದ ನನಗೆ ಒಬ್ಬ ಸಣಕಲ ಬಂದು ಕೈಕುಲುಕಿ ನಾನೇ ಅವನು ಅಂತ ಪರಿಚಯ ಮಾಡಿಕೊಂಡ. ಕೇವಲ ದಪ್ಪಗಿರುವವರೇ ಚಪಾತಿ ತಿನ್ನುವುದು ಅಂತ ಅಂದುಕೊಂಡಿದ್ದ ನನಗೆ, ಇಷ್ಟೊಂದು ಕೃಶದೇಹಿಯಾದ, ಸುಮಾರು ಇಪ್ಪತ್ತೈದು ವಯಸ್ಸಿನ ಆಸುಪಾಸಿನ ಇವನಿಗೇಕೆ ಚಪಾತಿ ಮೇಕರ್ ಬೇಕಪ್ಪಾ ಅಂತ ಆಶ್ಚರ್ಯವಾಯಿತು. ಬಹುಶಃ ಇವನ ಮನೆಯಲ್ಯಾರೋ ಬಹಳ ದಪ್ಪಗಿರುವವರು ಇರಬೇಕು ಅನ್ನಿಸಿತು. ಕುತೂಹಲ ತಡೆಯಲಾಗದೇ ಕೇಳಿಯೇಬಿಟ್ಟೆ. ಅವನು ಆ ಕಡೆ ಈ ಕಡೆ ನೋಡಿ, ಒಂದೆರಡು ನಿಮಿಷ ಬಿಟ್ಟು, ‘ನೋಡಿ ಸಾರ್, ನೀವು ಒಳ್ಳೆಯವರ ಹಾಗೆ ಕಾಣ್ತೀರಿ, ಅದಕ್ಕೇ ಹೇಳ್ತಿದೀನಿ. ನೀವು ಯಾರಿಗೂ ಹೇಳ್ಬಾರ್ದು. ನಾನು ಗೃಹಬಳಕೆ ವಸ್ತುಗಳನ್ನ ಡೋರ್ ಟು ಡೋರ್ ಮಾರಾಟ ಮಾಡುವವನು. ಮಿಕ್ಸರ್, ವೋವನ್, ಟೋಸ್ಟರ್, ಇಸ್ತ್ರಿ ಪೆಟ್ಟಿಗೆ, ರಿಛಾರ್ಜೆಬಲ್ ಲ್ಯಾಂಪ್.... ಹೀಗೆ. ಸ್ವಲ್ಪ ದಿನ ಮಾತ್ರ ಬಳಸಿರೋ, ಹೀಗೆ ಹಾಳಾಗದೇ ಇರೋ ವಸ್ತುಗಳನ್ನ ನಿಮ್ಮಂಥ ದೊಡ್ ಮನುಷ್ಯರ ಹತ್ರ ಕಡಿಮೆ ರೇಟಿಗೆ ತಗೊಂಡು, ಅದನ್ನ ಇನ್ನೂ ಸ್ವಲ್ಪ ಕ್ಲೀನ್ ಮಾಡಿ ಹೊಸದರಂತೆ ಕಾಣೋಹಾಗೆ ಮಾಡಿ, ನಾನು ಇನ್ನೂರು-ಮುನ್ನೂರು ರೂಪಾಯಿ ಲಾಭ ಬರೋಹಾಗೆ ಮಾರ್ತೀನಿ. ಮಿಡಲ್ ಕ್ಲಾಸ್ ಏರಿಯಾಗಳಲ್ಲಿ, ಹಗಲು ಹೊತ್ತು ಮನೇಲಿ ಲೇಡೀಸು ಒಬ್ರೇ ಇರ್ತಾರಲ್ಲ ಸಾರ್, ಅವರಿಗೆ ಹೊಸದಕ್ಕೂ ಸೆಕೆಂಡ್ ಹ್ಯಾಂಡ್‌ಗೂ ವ್ಯತ್ಯಾಸ ಅಷ್ಟಾಗಿ ಗೊತ್ತಾಗಲ್ಲ. ದೇಹ ದಪ್ಪಗಾಗಿರತ್ತೇ ಹೊರತು ಬುದ್ಧಿ ಬೆಳೆದಿರಲ್ಲ. ವಾರಂಟಿ ಕಾರ್ಡಲ್ಲಿ ಸ್ವಲ್ಪ ತಿದ್ದಿ ಕೊಟ್ರೆ ಗೊತ್ತಾಗಲ್ಲ. ಮರುಳಾಗಿ ತಗೋತಾರೆ. ಮುಂಚೆಯೆಲ್ಲಾ ಶ್ರೀಮಂತರ ಮನೆಗಳಿಗೆ ಹೋಗಿ ಇಂಥಾ ವಸ್ತು ಇದ್ರೆ ಕೇಳಿ ತಗೋತಿದ್ದೆ. ಕೆಲವರಂತೂ ಮಿಕ್ಸರ್ ಏನೋ ಸ್ವಲ್ಪ ಹಾಳಾಯ್ತು ಅಂದ್ರೆ ಮಾರಿಯೇಬಿಡ್ತಾರೆ. ರಿಪೇರಿ ಮಾಡಿಸ್ಲಿಕ್ಕೂ ನೋಡಲ್ಲ. ಅಂತವ್ರ ಹತ್ರ ನಾನು ತಗೋತಿದ್ದೆ. ಈಗ ಈ ಓ‌ಎಲ್ಲೆಕ್ಸ್ ಥರದ ವೆಬ್‌ಸೈಟ್ ಕಂಡುಕೊಂಡಿದೀನಿ’ ಅಂತ ಹೇಳಿದ.

ಎಲಾ ಇವನಾ ಎನ್ನಿಸಿ, ‘ಆದರೆ ಇದು ಚೀಟಿಂಗ್ ಅಲ್ವೇನಯ್ಯಾ? ನೋಡಿದ್ರೆ ಓದಿಕೊಂಡವನ ಥರ ಕಾಣ್ತೀಯಾ?’ ಅಂತ ಕೇಳಿದೆ. ‘ಹೌದು ಸಾರ್. ಓದಿಕೊಂಡಿದ್ದೇನೋ ಹೌದು. ಆದರೆ ಸರಿಯಾದ ಕೆಲಸ ಸಿಗಲಿಲ್ಲ. ಒಂದು ಬಸ್ ಟಿಕೆಟ್ ಬುಕ್ ಮಾಡೋ ಆಫೀಸಲ್ಲಿ ಕೆಲಸ ಮಾಡ್ಕೊಂಡಿದ್ದೆ. ಒಂದ್ಸಲ ಅದರ ಓನರ್ರು ತಾವು ಮನೆ ಶಿಫ್ಟ್ ಮಾಡ್ತಿದೀವಿ, ನಮ್ಮನೇಲಿರೋ ಫ್ರಿಜ್ಜು, ವಾಶಿಂಗ್ ಮಶಿನ್ನು, ಸೀಲಿಂಗ್ ಫ್ಯಾನು ಎಲ್ಲಾ ಇಲ್ಲೇ ಬಿಟ್ಟು ಹೋಗ್ತಿದೀವಿ. ನನಗೆ ಬೇಕಾದರೆ ತಗೋಬಹುದು ಅಂತ ಹೇಳಿದ. ನಾನು ಅದನ್ನ ಇಟ್ಕೊಂಡು ಏನ್ ಮಾಡ್ಲಿ? ತಗೊಂಡು ಎಲ್ಲಾನೂ ಯಾರಿಗೋ ಒಳ್ಳೇ ರೇಟಿಗೆ ಮಾರಿಬಿಟ್ಟೆ. ಆಮೇಲೆ ಇದನ್ನೇ ನನ್ನ ಬಿಜಿನೆಸ್ ಮಾಡಿಕೊಂಡ್ರೆ ಹೇಗೆ ಅನ್ನೋ ಐಡಿಯಾ ಬಂತು. ಚೀಟಿಂಗ್ ಇರಬಹುದು ಸಾರ್, ಆದರೆ ನಮಗೂ ದುಡ್ಡು ಮಾಡ್ಬೇಕು, ದಪ್ಪಗಾಗ್ಬೇಕು, ಹುಡುಗೀರು ನೋಡ್ಬೇಕು, ಮದುವೆ ಆಗ್ಬೇಕು ಅಂತೆಲ್ಲ ಆಸೆ ಇರಲ್ವಾ ಸಾರ್?’ ಅಂತ ಕೇಳಿದ.

[ಎಂಟನೇ 'ಅಕ್ಕ' ಸಮ್ಮೇಳನ (2014)ದಲ್ಲಿ ಬಿಡುಗಡೆಗೊಂಡ ‘ಹರಟೆ ಕಟ್ಟೆ’ ಕೃತಿಯಲ್ಲಿ ಸೇರಿಕೊಂಡಿರುವ ನನ್ನ ಪ್ರಬಂಧ.]