Tuesday, October 18, 2022

ವಾರಂಟಿ

ಪರಿಶೀಲಿಸಿ ನೋಡಬೇಕು
ಮರು
ಪರಿಶೀಲಿಸಿ ನೋಡಬೇಕು
ತಿಕ್ಕಿ ಒರೆಗೆ ಹಚ್ಚಿ
ಬೇಕಿದ್ದರೆ ಮತ್ತೊಂದಂಗಡಿಯಲ್ಲಿ ವಿಚಾರಿಸಿ
ಈಗೆಲ್ಲ ಯಾರನ್ನೂ ನಂಬುವಂತಿಲ್ಲ ಸ್ವಾಮೀ
ಹೊರಗೆ ಕಾಲಿಟ್ಟರೆ ಮೋಸ ದಗಾ ವಂಚನೆ
ಸುಳ್ಳೇ ಎಲ್ಲರಮನೆ ದೇವರು
ಅಷ್ಟು ದುಬಾರಿಯ ಒಡವೆ ಕೊಳ್ಳುವಾಗ
ಕಣ್ಮುಚ್ಚಿ ಕೂರಲಾಗುವುದೇ

ಅಯ್ಯೋ ನನ್ ಮೇಲೆ ನಂಬಿಕೆ ಇಲ್ವಾ ಸಾರ್
ದಿನಾ ನೋಡೋ ಮುಖ ಅಲ್ವಾ ಸಾರ್
-ದೊಡ್ಡ ದನಿಯಲ್ಲಿ ಕೇಳುತ್ತಾನೆ ಅಂಗಡಿಯವ
ಆತ್ಮೀಯತೆಯ ಸೋಗು ಹಾಕಿ
ಮುಖ ಅದೇ ಕಣಪ್ಪಾ, ಆದರದನು ಮುಚ್ಚಿರುವ
ಕಾಸ್ಮೆಟಿಕ್ಕುಗಳಿಗೆ ಬಿಡಿಸಿ ನೋಡಲಾಗದಷ್ಟು ಪದರ

ನಾನು ನಿನಗೆ ಮೋಸ ಮಾಡ್ತೀನಾ ಮಾರಾಯಾ
ಖೋಟಾ ಅಲ್ಲವೋ, ಈಗಷ್ಟೆ ಬ್ಯಾಂಕಿನಿಂದ ತಂದದ್ದು
-ಎಂದರೂ ಬೆಳಕಿಗೆ ಹಿಡಿದು ನೋಡುತ್ತಿದ್ದೇವೆ
ಗಾಂಧಿ ನಗುತ್ತಿದ್ದಾನೆ ಬೊಚ್ಚುಬಾಯಲ್ಲಿ
ಎಣಿಸಿ ಎಣಿಸಿ ಎಂಜಲು ಹಚ್ಚಿ ಮತ್ತೆ ಮತ್ತೆ
ಖಾತರಿಯಾಗುವವರೆಗೂ ಸರಿಯಂಕೆ

ಎರಡು ವರ್ಷ ವಾರಂಟಿ ಇದೆ ತಗೋಳಿ ಅಮ್ಮಾ
ಏನಾದ್ರೂ ಆದ್ರೆ ನಮ್ಮಲ್ಲಿಗೇ ತನ್ನಿ
ಫ್ರೀಯಾಗಿ ರಿಪೇರಿ ಮಾಡಿಸಿ ಕೊಡ್ತೀನಿ
ಆಂ, ಎರಡೇ ವರ್ಷವಾ? ವಾರಂಟಿ ಯಾಕೆ,
ಗ್ಯಾರಂಟಿ ಇಲ್ಲವಾ? ನೀವು ಇಲ್ಲೇ ಇರ್ತೀರಾ
ಅಂತ ಏನು ಗ್ಯಾರಂಟಿ?

ಹಗ್ಗದ ಮೇಲೆ ನಡೆಯುತ್ತಿದ್ದೇವೆ
ಕೈ ಹಿಡಿದ ಗೆಳತಿ ಕೇಳುತ್ತಿದ್ದಾಳೆ:
ನಿನ್ನನ್ನು ನಂಬಬಹುದು ಅಲ್ವಾ?
ಕೆಳಗೆ ಪ್ರಪಾತ ಎದುರಿಗೆ ಅನಂತ ದಿಗಂತ
ಡವಗುಡುವ ಎದೆ ನಡುಗುವ ಮೆದುಗೈ
ಹೇಳು ಹೇಳು -ಆತಂಕವಿದೆ ಅವಳ ದನಿಯಲ್ಲಿ

ಒರೆಗಲ್ಲು
ನೋಟೆಣಿಸುವ ಯಂತ್ರ
ನೋಟದರ್ಥದ ಹುಡುಕಾಟ
ಗಾಂಧಿಯ ನಗು
ವಾರಂಟಿ ಕಾರ್ಡು
ಎಲ್ಲ ಬರುತ್ತಿವೆ ಕಣ್ಮುಂದೆ
ಬಿದ್ದರೆ ಎಲುಗು ಸಹ ಸಿಗದಂತಹ ಗಹ್ವರದಿಂದ
ತೇಲಿಬರುತ್ತಿದೆ ಪ್ರತಿಧ್ವನಿ: ಏನ್ ಸಾರ್ ಗ್ಯಾರಂಟೀ?

 

Wednesday, August 17, 2022

ಹಾಗಂದುಕೊಂಡಿರುವಾಗ

 ಅಪ್ಪನ ಶರಟು ಧರಿಸಿದ ಮಗಳು ಹೇಳಿದಳು:
'ಅಪ್ಪಾ, ಈಗ ನಾನು ನೀನಾದೆ!'

ಅದು ಸುಲಭ ಮಗಳೆ:
ಇರಬಹುದು ಸ್ವಲ್ಪ ದೊಗಳೆ
ಮಡಚಬೇಕಾಗಬಹುದು ತೋಳು
ಕುತ್ತಿಗೆಯ ದಾಟುವ ಕಾಲರು
ಚಡ್ಡಿಯಿಲ್ಲದಿದ್ದರೂ ನಡೆಯುವುದು ದರಬಾರು
ಪರವಾಗಿಲ್ಲ: ಯಬಡಾ ತಬಡಾ ಅನಿಸಿದರೂ ಚೂರು

ಆದರೆ
ನಿನ್ನ ಅಂಗಿಯ ನಾನು ಧರಿಸಲಾರೆ
ಅಷ್ಟೇ ಏಕೆ,
ನಿನ್ನಂತೆ ಲಲ್ಲೆಗರೆಯಲಾರೆ
ನಿನ್ನಂತೆ ನಿದ್ರಿಸಲಾರೆ
ನಿನ್ನಂತೆ ಆಟವಾಡಲಾರೆ
ನಿನ್ನಂತೆ ಉಣಲಾರೆ

ಹೇಳುವುದುಂಟು ಜನ:
ನಾನು ಅಪ್ಪನ ಹಾಗೆಯೇ ಮಾತನಾಡುತ್ತೇನೆಂದು
ಅಮ್ಮನ ಹಾಗೆಯೇ ದ್ರೋಹಿಗಳ ಕ್ಷಮಿಸುತ್ತೇನೆಂದು
ಇನ್ಯಾರ ಹಾಗೋ ನಡೆಯುತ್ತೇನೆಂದು
ಮತ್ಯಾರ ಹಾಗೋ ಬರೆಯುತ್ತೇನೆಂದು
ಥೇಟು ಅವರ ಹಾಗೆಯೇ ಕಾಣುತ್ತೇನೆಂದು

ತಿಳಿದೂ ಅನುಕರಿಸಿದೆನೋ
ತಿಳಿಯದೆ ಅನುಸರಿಸಿದೆನೋ
ಅನಿವಾರ್ಯ ಅವತರಿಸಿದೆನೋ
ಕೊನೆಗೊಂದು ದಿನ
ನಾನು ಯಾರು ಎಂಬ ಪ್ರಶ್ನೆಗೆ
ಎಡವಿ ಬಿದ್ದು

ನನಗೆ ನನ್ನದೇ ದನಿ ಬೇಕೆಂದು
ತಪ್ಪೆನಿಸಿದ್ದನ್ನು ಥಟ್ಟನೇ ಉಸುರಿ ಖಂಡಿಸಬೇಕೆಂದು
ನನ್ನದೇ ಶೈಲಿಯಲ್ಲಿ ಬರೆಯಬೇಕೆಂದು
ಜಿಮ್ಮು ಗಿಮ್ಮು ಸೇರಿ
ಕ್ರೀಮು ಪೌಡರು ಹೇರ್‌ಸ್ಟೈಲು ಬದಲಿಸಿ
ಗಂಭೀರವದನನಾಗಿ ಲೋಕಚಿಂತನೆಗೈಯುತ್ತ
ಈಗ ನಾನು ನಾನಾದೆ ಎಂದುಕೊಂಡಿರುವಾಗ

ಮೊನ್ನೆ ರಾತ್ರಿ ತೀವ್ರ ಜ್ವರ
ತಾಪಕ್ಕೆ ರಾತ್ರಿಯಿಡೀ ನರಳುತ್ತಿದ್ದೆನಂತೆ
ಜತೆಗಿದ್ದ ಅಮ್ಮ ಬೆಳಿಗ್ಗೆ ಹಾಸಿಗೆಯ ಬಳಿ ಬಂದು:
'ಅಪ್ಪನೂ ಹೀಗೆಯೇ, ಜ್ವರ ಬಂದರೆ
ರಾತ್ರಿಪೂರ ನರಳುವರು'
-ಎನ್ನುತ್ತಾ ತಿಳಿಸಾರು ಕಲಸಿದ
ಮೆದುಅನ್ನದ ತಟ್ಟೆ ಕೊಟ್ಟಳು
ಅಜ್ಜಿ ಅಪ್ಪನಿಗೆ ಕೊಡುತ್ತಿದ್ದ ರೀತಿಯಲ್ಲಿ.

Friday, June 10, 2022

ಮಾವಿನ ರುಚಿಯ ಮಾಯೆ

ನಾವೆಲ್ಲ ನಮ್ಮ ಪಠ್ಯಪುಸ್ತಕದಲ್ಲಿ ಓದಿದ್ದೇ: ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು-ರತ್ನ-ವಜ್ರ-ವೈಢೂರ್ಯಗಳನ್ನು ಬಳ್ಳಗಳಲ್ಲಿಟ್ಟು ರಸ್ತೆಯ ಇಕ್ಕೆಲಗಳಲ್ಲೂ ಕೂತು ಮಾರುತ್ತಿದ್ದರು -ಎಂದು. ಅಂತಹ ವೈಭೋಗವನ್ನು ಕಣ್ಣಾರೆ ನೋಡುವ ಅದೃಷ್ಟವನ್ನಂತೂ ನಾವು ಪಡೆಯಲಿಲ್ಲ. ಚಿನ್ನ-ಬೆಳ್ಳಿ-ವಜ್ರಗಳೆಲ್ಲ ಅತ್ಯಮೂಲ್ಯ ದ್ರವ್ಯಗಳಾಗಿ ಮಾರ್ಪಟ್ಟು, ಗಾಜು ಹೊದಿಸಿದ ಹವಾನಿಯಂತ್ರಿತ ಜ್ಯುವೆಲರಿ ಅಂಗಡಿಗಳಲ್ಲಿ ಸ್ಥಾಪಿತವಾಗಿ, ರಸ್ತೆಯಲ್ಲಿ ನಡೆಯುವಾಗ ಅತ್ತ ನೋಡಲೂ ಭಯವಾಗುವಷ್ಟು ಬೆಲೆ ಹೊಂದಿರುವಾಗ, ಹಿಂದೊಮ್ಮೆ ಅವು ರಸ್ತೆ ಬದಿಗೆ ಮಾರಲ್ಪಡುತ್ತಿದ್ದ ಚಿತ್ರವನ್ನು ಕಲ್ಪಿಸಿಕೊಳ್ಳುವುದೂ ಕಷ್ಟದಾಯಕ ವಿಷಯ.  ಆದರೆ ಹೆಚ್ಚುಕಮ್ಮಿ ಚಿನ್ನದ ಬಣ್ಣವನ್ನೇ ಹೊಂದಿದ ಒಂದು ಬಗೆಯ ಹಣ್ಣುಗಳು ಏಪ್ರಿಲ್-ಮೇ-ಜೂನ್ ತಿಂಗಳಲ್ಲಿ ರಸ್ತೆ ಬದಿಯಲ್ಲಿ ವಿಕ್ರಯಗೊಳ್ಳುವುದನ್ನು ನೀವು ನೋಡಿರಬಹುದು. ತಳ್ಳುಗಾಡಿಗಳಲ್ಲೂ, ಹಣ್ಣಿನಂಗಡಿಗಳಲ್ಲೂ, ಸಂತೆಬುಟ್ಟಿಗಳಲ್ಲೂ, ಇವನ್ನು ಮಾರಲೆಂದೇ ಶುರುವಾದ ಮೇಳಗಳಲ್ಲೂ ಈ ಹಣ್ಣುಗಳು ರಾಶಿರಾಶಿ ಸಂಖ್ಯೆಯಲ್ಲಿ ಜಮೆಯಾಗಿ ಪಾದಚಾರಿಗಳ-ದಾರಿಹೋಕರ ಕಣ್ಮನಗಳನ್ನು ಸೆಳೆಯುವವು. ಅದೆಷ್ಟೇ ಗತ್ತಿನಿಂದ ಯಾವುದೋ ಯೋಚನೆಯಲ್ಲಿ ನೇರಮುಖಿಯಾಗಿ ನೀವು ಸಾಗುತ್ತಿದ್ದರೂ ಈ ಹಣ್ಣುಗಳು ತಮ್ಮ ಪರಿಮಳಮಾತ್ರದಿಂದ ನಿಮ್ಮ ಗಮನವನ್ನು ಸೆಳೆಯದೇ ಇರಲಾರವು. ಚಿನ್ನ-ಬೆಳ್ಳಿಗಳಂತಲ್ಲದೆ ಜನಸಾಮಾನ್ಯರೂ ಕೊಳ್ಳಬಹುದಾದ ಬೆಲೆಯನ್ನು ಹೊಂದಿದ್ದು, ಕೊಂಡು ತಿಂದರೆ ಯಾವ ಆಭರಣ ಧರಿಸಿದರೂ ಸಿಗಲಾರದಷ್ಟು ಆನಂದವನ್ನು ಜಿಹ್ವೆಯ ಮೂಲಕ ತನುಮನಗಳಿಗೆ ಕೊಡುವವು ಈ ಹಣ್ಣುಗಳು. ಇಷ್ಟೆಲ್ಲ ಹೇಳಿದಮೇಲೆ ಈ ಹಣ್ಣುಗಳು ಯಾವುವು ಎಂದು ರಸಪ್ರಜ್ಞೆ ಹೊಂದಿದ ಬುದ್ಧಿವಂತರಾದ ನಿಮಗೆ ತಿಳಿದೇಹೋಗಿರುತ್ತದೆ: ನೀವು ಊಹಿಸಿದಂತೆ, ನಾವು ಈಗ ಸವಿಯಲು ಹೊರಟಿರುವುದು ಹಣ್ಣುಗಳ ರಾಜ, ರಾಜಾಧಿರಾಜ, ರಾಜಮಾರ್ತಾಂಡ ಶ್ರೀಶ್ರೀಶ್ರೀ ಮಾವಿನಹಣ್ಣನ್ನು!

ಎಲ್ಲ ಬಹುಪರಾಕುಗಳಿಗೂ ಯೋಗ್ಯ ಈ ಮಾವಿನಹಣ್ಣು. ಜಗತ್ತಿನಲ್ಲಿ ಬೆಣ್ಣೆಹಣ್ಣು ಇಷ್ಟವಿಲ್ಲ ಎನ್ನುವವರು ಸಿಗಬಹುದು, ಹಲಸಿನಹಣ್ಣಿನ ಮೇಣಕ್ಕೆ ಅಂಜಿ ದೂರ ನಿಲ್ಲುವವರು ಕಾಣಬಹುದು, ಅನಾನಸ್ ತಿಂದರೆ ಉಷ್ಣ ಎಂದು ವರ್ಜಿಸಿದವರು ಇರಬಹುದು, ಆದರೆ ಮಾವಿನಹಣ್ಣು ಇಷ್ಟವಿಲ್ಲ ಎನ್ನುವವರು ವಿರಳ. ಅದರ ರುಚಿಯೇ ಹಾಗೆ! ಸುಮಾರು ಮೂವತ್ತಕ್ಕೂ ಹೆಚ್ಚಿನ ತಳಿಗಳಲ್ಲಿ ಲಭ್ಯವಿರುವ ಈ ಹಣ್ಣು ತನ್ನ ವಿಶಿಷ್ಟ ಒನಪು, ಕಂಪು ಮತ್ತು ಸ್ವಾದದಿಂದ ಹೆಸರು ಮಾಡಿದೆ. ನೀಳ ಅಥವಾ ಗುಂಡು ಮುಖ ಹೊಂದಿದ್ದು, ಗಲ್ಲದ ಬಳಿ ತುಸು ವಾರೆಯಾಗಿ ಚೂಪನೆ ಮೂತಿ ಹೊಂದಿರುವ, ಹಸಿರು-ಹಳದಿ-ಕೆಂಪು ಬಣ್ಣಗಳ ಮಿಶ್ರಣದಲ್ಲಿ ನಳನಳಿಸುವ ಈ ಹಣ್ಣನ್ನು ನೋಡಿದರೇ ಒಲವಾಗುವುದು; ಇನ್ನು ತಿಂದರೆ?

ಹಸಿದು ಹಲಸು, ಉಂಡು ಮಾವುಎಂಬ ನಾಣ್ಣುಡಿಯಂತೆ ಮಾವಿನ ಹಣ್ಣನ್ನು ಊಟವಾದ ಬಳಿಕ ತಿನ್ನುವವರೇ ಹೆಚ್ಚು. ಮೊದಲೇ ತುಂಬಿರುವ ಹೊಟ್ಟೆ; ಇನ್ನು ಈ ಹಣ್ಣಿಗೆಲ್ಲಿ ಜಾಗ? –ಎಂಬುದೆಲ್ಲಾ ಸೌಜನ್ಯಕ್ಕೆ ಆಡುವ ಮಾತುಗಳು.  ಮಾವಿನಹಣ್ಣನ್ನು ಸೇರಿಸಲು ಹೊಟ್ಟೆಯಲ್ಲಿ ಜಾಗ ಸದಾ ಇದ್ದೇ ಇರುತ್ತದೆ. ಅದಕ್ಕೆಂದೇ ದೇವರು ಜಟರದಲ್ಲಿ ಸೆಪರೇಟ್ ಕಂಪಾರ್ಟ್‌ಮೆಂಟ್ ಸೃಷ್ಟಿಸಿರುತ್ತಾನೆ. ಮತ್ತದು ಮಾವಿನ ಹಣ್ಣಿನ ಸೀಸನ್ನಿನಲ್ಲಿ ತೆರೆಯಲ್ಪಡುತ್ತದೆ. ನಿಮ್ಮ ಹಲ್ಲು, ನಾಲಿಗೆ, ಅನ್ನನಾಳ, ಜೀರ್ಣಾಂಗವ್ಯೂಹಗಳೆಲ್ಲ ಮಾವಿನಹಣ್ಣನ್ನು ಸೇವಿಸಲೆಂದೇ ತಯಾರಾಗುತ್ತವೆ. ಹೀಗಾಗಿ ಟೇಬಲ್ಲಿನ ಮೇಲಿನ ಬಾಸ್ಕೆಟ್ಟಿನಲ್ಲಿ ಕಮ್ಮಗೆ ಕುಳಿತಿರುವ ಮಾವಿನಹಣ್ಣನ್ನು ತಿನ್ನಲೊಲ್ಲೆ ಎಂದು ನಿರಾಕರಿಸಿವುದು ಎಂದಿಗೂ ಸಲ್ಲದು.

ಮಾವಿನಹಣ್ಣನ್ನು ತಿನ್ನುವ ಬಗೆ ಸಾಮಾನ್ಯವಾಗಿ ಅದರ ಗಾತ್ರ ಮತ್ತು ತಿನ್ನುವವರ ಫಲಪ್ರೀತಿಯನ್ನು ಅವಲಂಭಿಸಿರುತ್ತದೆ. ಗಾತ್ರ ಬಹಳ ದೊಡ್ಡದಿದೆಯೋ, ಅದನ್ನು ಕತ್ತರಿಸಿ ಹೋಳುಗಳನ್ನಾಗಿ ಮಾಡಿ ತಿನ್ನುತ್ತಾರೆ. ಗಾತ್ರ ಚಿಕ್ಕದಿದೆಯೋ, ‘, ಇಡೀ ಹಣ್ಣೇ ತಿನ್ನೋ ಮಾರಾಯಾಅಂತ ಪುಸಲಾಯಿಸುವವರು ಪಕ್ಕದಲ್ಲಿದ್ದಾರೋ, ಮತ್ತೆ ಯೋಚಿಸುವ ಗೊಡವೆಯೇ ಇಲ್ಲ. ಹಾಗೆ ಹಣ್ಣನ್ನು ಇಡಿಯಾಗಿ ತಿನ್ನುವುದರಲ್ಲೂ ಹಲವು ಬಗೆಯಿದೆ: ಕೆಲವರು ಒಂದು ಕಡೆಯಿಂದ ಶುರು ಮಾಡಿ ಸಿಪ್ಪೆ ಸಮೇತ ತಿನ್ನುತ್ತಾರೆ. ಇನ್ನು ಕೆಲವರು ಮೊದಲು ಸಿಪ್ಪೆಯನ್ನೆಲ್ಲ ಹಲ್ಲಿನಿಂದ ಕಚ್ಚಿ ಎಳೆದು ತೆಗೆದು, ಸಿಪ್ಪೆಗಂಟಿದ ಹಣ್ಣನ್ನು ಕೆರಚಿ ತಿಂದು, ನಂತರ ಸಿಪ್ಪೆರಹಿತ ಹಣ್ಣಿನ ಗುಳವನ್ನು ಆಸ್ವಾದಿಸಿ, ಕೊನೆಯಲ್ಲಿ ಓಟೆಯನ್ನು ಸೀಪುತ್ತಾರೆ. ಮತ್ತೆ ಕೆಲವರು ಹಣ್ಣಿನ ತಳದಲ್ಲಿ ಕಚ್ಚಿ ಸಣ್ಣ ರಂದ್ರ ಮಾಡಿ ಹಣ್ಣಿನೊಳಗಿನ ಸಾರಸತ್ವವನ್ನೆಲ್ಲ ಅಲ್ಲಿಂದಲೇ ಸೀಪಿ ಎಳೆದುಕೊಂಡು ಮುಗಿಸುತ್ತಾರೆ. ಹಣ್ಣಿನೊಳಗೆ ಹುಳಗಳಿದ್ದರೆ ಎಂಬ ಭಯವಿರುವ ಕೆಲವರು, ಹಣ್ಣನ್ನು ಎರಡ್ಮೂರು ಭಾಗವನ್ನಾಗಿ ಕತ್ತರಿಸಿ ಪರೀಕ್ಷಿಸಿ ನಂತರ ಎಲ್ಲವನ್ನೂ ತಿನ್ನುತ್ತಾರೆ.

ಮಾವಿನಹಣ್ಣನ್ನು ಇಡಿಯಾಗಿ ತಿನ್ನಲು ಎಂದಿಗೂ ಮುಜುಗರ ಪಟ್ಟುಕೊಳ್ಳಬಾರದು. ಅವರಿವರು ನೋಡುತ್ತಿದ್ದಾರೆ, ಸಿಪ್ಪೆಯನ್ನು ಹಲ್ಲಿನಿಂದ ಕಚ್ಚಿ ಎಳೆದರೆ ಚೆನ್ನಾಗಿ ಕಾಣುವುದಿಲ್ಲವೇನೋ, ಇಡೀ ಹಸ್ತ ರಸಮಯವಾಗುತ್ತದೆ, ಒಳಗೆ ಹುಳ ಇರಬಹುದೇನೋ, ತಿನ್ನುವಾಗ ರಸ ಮೊಣಕೈವರೆಗೂ ಇಳಿಯಬಹುದು, ಅದನ್ನು ನೆಕ್ಕಬೇಕಾಗಬಹುದು, ಒಂದೆರಡು ಹನಿ ನೆಲದ ಮೇಲೂ ಬೀಳಬಹುದು, ಧರಿಸಿದ ಬಟ್ಟೆ ಚೂರು ಕಲೆಯಾಗಬಹುದು, ಓಟೆಯನ್ನು ಚೀಪುತ್ತಾ ಕೂರುವುದು ಚೀಪ್ಆಗತ್ತೋ... ಅಯ್ಯೋ, ಯೋಚಿಸುತ್ತಾ ಕುಳಿತರೆ ನೂರಾರು ತಲೆಬಿಸಿಗಳು!  ಆದರೆ ಮಾವುಪ್ರಿಯರಾದ ನೀವು ಈ ಯಾವುದಕ್ಕೂ ಅಂಜಬಾರದು: ಊಟ ತನ್ನಿಚ್ಚೆ, ನೋಟ ಪರರಿಚ್ಚೆಎಂಬ ಉಕ್ತಿಯೇ ಇದೆ. ಆ ಮಾತಿನಲ್ಲಿ ಗಟ್ಟಿಯಾದ ನಂಬಿಕೆಯಿಡಬೇಕು. ಹಣ್ಣುಗಳ ರಾಜನನ್ನೇ ಕೈಯಲ್ಲಿ ಹಿಡಿದಿದ್ದೀರಿ ಎಂಬುದನ್ನು ಮನಸಿಗೆ ತಂದುಕೊಳ್ಳಬೇಕು. ಹೊರಗೆ ನಡೆಯುತ್ತಿರುವ ನಾನಾ ಕ್ಷುದ್ರ ಸಂಗತಿಗಳನ್ನು ಮರೆಯಬೇಕು. ನೀವು ಮತ್ತು ಮಾವು ಇಬ್ಬರೇ ಇರುವ ಈ ಲೋಕದಲ್ಲಿ ಕಣ್ಮುಚ್ಚಿ ಈ ಹಣ್ಣನ್ನು ಆಸ್ವಾದಿಸಬೇಕು: ಮಹದಾನಂದವು ನಿಮ್ಮದಾಗುವ ಪರಿಯನ್ನು ಅನುಭವಿಸಬೇಕು.

ಮಾವಿನಹಣ್ಣಿನ ಸೀಸನ್ನಿನಲ್ಲಿ ಒಂದಷ್ಟಾದರೂ ಹಣ್ಣುಗಳನ್ನು ತಿನ್ನದಿರುವುದು ಮಹಾಪರಾಧ. ಆಲ್ಫೋನ್ಸೋ, ರಸಪುರಿ, ಬಾದಾಮಿ, ಸಿಂಧೂರ, ಮಲಗೋವ, ಬೈಗನಪಲ್ಲಿ, ನೀಲಂ, ಮಲ್ಲಿಕಾ... ಹೀಗೆ ಹತ್ತಾರು ತಳಿಯ ಬೇರೆಬೇರೆ ಸ್ವಾದದ ಹಣ್ಣುಗಳು ಮಾರುಕಟ್ಟೆಯಲ್ಲಿ ಪ್ರತಿವರ್ಷವೂ ಸುಲಭವಾಗಿ ದೊರಕುತ್ತವೆ.  ಈ ಕಾಲದಲ್ಲಿ ಏರ್ಪಡಿಸಲಾಗುವ ಮಾವುಮೇಳಗಳಿಗೆ ಹೋದರಂತೂ ಇನ್ನೂ ಹಲವು ವಿಧದ ಮಾವು ದೊರೆಯುವುದು. ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕ ವಿಧಾನದಲ್ಲಿ ಬೆಳೆದ ಹಣ್ಣುಗಳೆಂಬ ಲೇಬಲ್ಲೂ ಇಲ್ಲಿ ಕಾಣುವುದು. ನಿಮ್ಮ ಅಭಿರುಚಿ ಮತ್ತು ಹಣ ತೆರುವ ಸಾಮರ್ಥ್ಯಕ್ಕನುಗುಣವಾಗಿ ಹಣ್ಣುಗಳನ್ನು ಕೊಳ್ಳಬಹುದು. ಇನ್ನು ನಿಮ್ಮದೇ ತೋಪಿನಲ್ಲಿ ಬೆಳೆದ ಹಣ್ಣೋ: ಕೇಳುವುದೇ ಬೇಡ, ಮನಸೋ ಇಚ್ಛೆ ತಿನ್ನಬಹುದು. ನಿಮ್ಮ ನೆಂಟರಿಷ್ಟರೋ ಕಲೀಗುಗಳೋ ತಮ್ಮ ತೋಟದಲ್ಲಿ ಬೆಳೆದ ಹಣ್ಣನ್ನು ತಂದುಕೊಟ್ಟರೆ ಬೇಡ ಎನ್ನಬೇಡಿ. ಒಳ್ಳೆಯದು ಎಲ್ಲಿಂದ ಬಂದರೂ ಪಡೆದುಕೋ ಅಂತ ಮಹಾಗ್ರಂಥಗಳಲ್ಲೇ ಹೇಳಿಬಿಟ್ಟಿದ್ದಾರೆ: ನಿಸ್ಸಂಕೋಚವಾಗಿ ಸ್ವೀಕರಿಸಿ.

ಹಳ್ಳಿಯಲ್ಲಿ ಹುಟ್ಟಿ ಬೆಳೆದವರಿಗೆ, ಕಾಡು-ಮೇಡು ಅಲೆದು ಗೊತ್ತಿದ್ದವರಿಗೆ, ಸ್ವಂತ ಮಾವಿನ ತೋಟ ಇರುವವರಿಗೆ ತಾಜಾ ಮಾವಿನಹಣ್ಣು ತಿನ್ನುವ ಅಭಿಯೋಗ ದೊರಕುವುದು. ಮರದಲ್ಲೇ ಬೆಳೆದು ಹಣ್ಣಾದ ಮಾವನ್ನು ಅಲ್ಲೇ ಕೊಯ್ದು ತಿನ್ನುವ ಮಜವೇ ಬೇರೆ. ಎತ್ತರದ ಮರವಾಗಿದ್ದರೆ, ಕಳಿತು ನೆಲಕ್ಕುದುರಿದ ಅಥವಾ ಬಡಿಗೆ ಎಸೆದು ಬೀಳಿಸಿದ ಅಥವಾ ದೋಟಿಯಿಂದೆಳೆದ ಅಥವಾ ಮರ ಹತ್ತಿ ಇಳಿಸಿದ ಹಣ್ಣನ್ನು ಅದೇ ಮರದ ನೆರಳಲ್ಲಿ ಕುಳಿತು ಸವಿಯುವುದು ಬೇರೆಯದೇ ಅನುಭೂತಿ.  ಪುಟ್ಟಪುಟ್ಟ ಕಾಟುಮಾವಿನ ಹಣ್ಣುಗಳನ್ನು ಇಡಿಯಾಗಿ ಬಾಯಲ್ಲಿಟ್ಟು ಹುಳಿ-ಸಿಹಿ ರಸವನ್ನು ನುಂಗಿ ಓಟೆಯನ್ನು ಉಗುಳುವ ಖುಷಿ ಅನುಭವಿಸಿದವರಿಗಷ್ಟೇ ಗೊತ್ತು. ಕೆಲವು ಗಡ್ಡವಿರುವ ಕಸಿಮಾವಿನ ಹಣ್ಣುಗಳ ಓಟೆಯನ್ನು ಅದರ ಸಿಹಿಯಂಶ ಹೋಗುವವರೆಗೂ ಗಂಟೆಗಟ್ಟಲೆ ಸೀಪುತ್ತಾ ಕೂರುವುದು ಚಿಕ್ಕಮಕ್ಕಳಿಗೆ ಇಷ್ಟದ ಕೆಲಸ.

ಹಾಗಂತ ಮಾವಿನಹಣ್ಣನ್ನು ಕತ್ತರಿಸಿ ತಿನ್ನುವುದು ತಪ್ಪೇನಲ್ಲ. ಅದರಿಂದಲೂ ಹಲವು ಪ್ರಯೋಜನಗಳಿವೆ. ಬಹಳ ಮುಖ್ಯವಾಗಿ, ಹಣ್ಣಿನೊಳಗೆ ಹುಳುಗಳಿದ್ದರೆ ಅಥವಾ ಹಣ್ಣು ಒಳಗೊಳಗೇ ಕೊಳೆತಿದ್ದರೆ ಕತ್ತರಿಸಿದಾಗ ಕಣ್ಣಿಗೆ ಬೀಳುತ್ತದೆ. ಆಗ ಅದನ್ನು ಸುಮ್ನೇ ದುಡ್ ದಂಡಅಂತ ಬೈದುಕೊಂಡು ಬೀಸಾಡಬಹುದು. ಮಲಗೋವಾದಂತಹ ದೊಡ್ಡಗಾತ್ರದ ಹಣ್ಣುಗಳನ್ನು ಕತ್ತರಿಸಿ, ಸಿಪ್ಪೆ ತೆಗೆದು, ಸಣ್ಣಸಣ್ಣ ಹೋಳುಗಳನ್ನಾಗಿ ಮಾಡಿ ತಟ್ಟೆಯಲ್ಲಿಟ್ಟುಕೊಂಡು, ಬೆಳದಿಂಗಳ ಟೆರೇಸಿನಲ್ಲಿ ಮೂರ್ನಾಲ್ಕು ಜನ ಸುತ್ತ ಕೂತು ಚಮಚದಲ್ಲೋ ಫೋರ್ಕಿನಲ್ಲೋ ತಿನ್ನುವುದು ಯಾವ ಪಾರ್ಟಿಗೂ ಕಮ್ಮಿಯಲ್ಲ. ಹಾಗೆ ಹೆಚ್ಚಿದಾಗ ಉಳಿದ ಓಟೆಗಂಟಿದ ಗುಳವನ್ನು ತಿನ್ನಲು ಮಕ್ಕಳಿಗೆ ಕೊಡಬಹುದು. ಉಳಿದ ಹೋಳುಗಳನ್ನು ಫ್ರಿಜ್ಜಿನಲ್ಲಿಟ್ಟು ಮರುದಿನ ಟಿಫಿನ್ ಬಾಕ್ಸಿನಲ್ಲಿ ಆಫೀಸಿಗೆ ಒಯ್ದು ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು.

ಮಾವಿನಹಣ್ಣು ಬಳಸಿ ಹಲವು ಖಾದ್ಯಗಳನ್ನು ತಯಾರಿಸುವುದು ಸಾಮಾನ್ಯ. ಹೀಗೆ ತಯಾರಿಸುವಾಗ, ಒಂದೆರಡು ಹೋಳುಗಳು, ಕೊನೆಯಲ್ಲಿನ ಓಟೆ ತಮಗೆ ಸಿಕ್ಕೇ ಸಿಗುತ್ತದೆ ಎಂಬ ಅರಿವಿರುವ ಮಕ್ಕಳು, ಅಡುಗೆಮನೆಯಲ್ಲೇ ಸುಳಿಯುತ್ತಿರುತ್ತಾರೆ. ಮಾವಿನಹಣ್ಣಿನ ಕಾಲ ಮಕ್ಕಳಿಗೂ ಖುಷಿಯ ಕಾಲ.

ಮಾವಿನ ಮರವೊಂದು ತನ್ನ ಎಲೆ, ಚಿಗುರು, ಹೂವು, ನೆರಳು, ಕೋಗಿಲೆಯುಲಿ, ಮಿಡಿ, ಕಾಯಿ, ಹಣ್ಣು ಎಲ್ಲವುಗಳಿಂದ ಸಂಭ್ರಮವನ್ನು ಪಸರಿಸುವ ಪರಿಯೇ ಅದ್ಭುತ. ಎಲ್ಲ ಹಣ್ಣುಗಳನ್ನೂ ಅವುಗಳು ದೊರಕುವ ಕಾಲದಲ್ಲಿ ತಿಂದುಬಿಡಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಇದು ಮಾವಿನಹಣ್ಣಿನ ಕಾಲ. ನೀವಿನ್ನು ತಡ ಮಾಡಬೇಡಿ. ಒಂದು ಕೈಚೀಲ ಹಿಡಿದು ಸಂತೆಗೋ ಮಾರುಕಟ್ಟೆಗೋ ಮಾವಿನತೋಪಿಗೋ ಧಾವಿಸಿ. ತಾಜಾ ಹಣ್ಣುಗಳನ್ನು ಕೈಯಲ್ಲಿ ಹಿಡಿಯಿರಿ. ಇಡಿಯಾಗಿ ತಿನ್ನಿ. ಓಟೆಯನ್ನು ಮಣ್ಣಿಗೆಸಿಯಿರಿ. ಬರುವ ಮಳೆಗಾಲದಲ್ಲಿ ಆ ಓಟೆ ಅಲ್ಲೇ ಬೇರು ಬಿಟ್ಟು ಮೇಲೆ ಹಸಿರಾಗಿ ಕುಡಿಯೊಡೆಯುವುದು. ಅದೇ ಮುಂದೆ ಗಿಡವಾಗಿ ಮರವಾಗಿ ಹೂಬಿಟ್ಟು ಕಾಯಾಗಿ ಹಣ್ಣಾಗಿ ನಿಮ್ಮ ಮೊಮ್ಮಕ್ಕಳು ಆ ಹಣ್ಣನ್ನು ಆಹಾಎಂದು ತಿಂದು ಚಪ್ಪರಿಸುವರು. ಸಿಹಿಯ ಸಡಗರವು ಮುಂದಿನ ತಲೆಮಾರಿಗೆ ಹಾಗೆಯೇ ವರ್ಗವಾಗುವುದು. 

[ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ]

Thursday, May 26, 2022

ರೆಕ್ಕೆ

 

ಹಕ್ಕಿಗೆ ರೆಕ್ಕೆಗಳು ಅದ್ಯಾವಾಗ ಮೂಡುವವೋ
ಗೊತ್ತೇ ಆಗುವುದಿಲ್ಲ
ಅಥವಾ ಅವು ಹುಟ್ಟುವಾಗಲೇ ಇರುತ್ತವೋ?
ಪಾರದರ್ಶಕ ರೆಕ್ಕೆಗಳು ಬಹಳ ಮೋಸ
 
ಹಸಿವೆಂದು ಕೀರುವಾಗ ಗುಟುಕು ಕೊಡುವವರೆಗೆ
ಹರೆಯಲೂ ಬರದ ಅವಸ್ಥೆಯಲಿ ಎತ್ತಿಕೊಂಡಾಡಿಸುವವರೆಗೆ
ಕೂರಲು ನಿಲ್ಲಲು ನಡೆಯಲು ಮೈ ತೊಳೆಸಲು
ಎಲ್ಲಕೂ ತಂದೆತಾಯಿಯೂರುಗೈ ಬೇಕೆಂದಿದ್ದ ಕಾಲವೊಂದಿತ್ತು
ನಿಂತು ನಡೆಯುವಂತಾದರೂ ನೆರವಿಗೊಬ್ಬರು ಬೇಕಿತ್ತು-
ಕತ್ತಲೆ ಕೋಣೆಯೊಳಗೆ ಹೆಜ್ಜೆಯಿಡಲು
ರಾತ್ರಿ ಪಕ್ಕದಲಿ ಮಲಗಲು
ಮನೆಯಿಂದ ಹೊರಗಡಿಯಿಡಲು
ಅಪರಿಚಿತರೆದುರು ಸುಳಿಯಲು
ಗುಮ್ಮನ ಭಯ ಕಳೆಯಲು
 
ಆದರೆ ಅವೆಲ್ಲ ಹೇಗೆ ಯಾವಾಗ ಹಾರಿ ಹೋದವು?
ಒಂದು ದಿನ ಎದ್ದು ತಾನೇ ಶುಭ್ರವಾಗಿ
ತಾನೇ ಬಟ್ಟೆ ಧರಿಸಿ ತಾನೇ ಅಲಂಕರಿಸಿಕೊಂಡು
ಬಿರಬಿರನೆ ನಡೆದು ಬಂದು ಜಗಲಿಗೆ ದಿಟ್ಟವಾಗಿ ನಿಂತು
ಒಬ್ಬಳೇ ಗೂಡಿನಿಂದ ಹೊರಹೋಗುವ ಚಿತ್ತ-
ಪಕ್ಕದಮನೆ ಗೆಳೆಯರೊಡನೆ ಆಡಲು
ಶಾಲೆಗೂ ಒಬ್ಬಳೇ ನಡೆಯಲು
ಟೆರೇಸಿನಲ್ಲಿ ಸ್ವತಃ ಸೈಕಲ್ ಬ್ಯಾಲೆನ್ಸ್ ಮಾಡಲು
ಅಂಗಡಿಯವರಲಿ ತನಗೆ ಬೇಕಿದ್ದ ಕೇಳಲು
 
ಮರಿಗೆ ರೆಕ್ಕೆ ಬಲಿತದ್ದು ಗೊತ್ತೇ ಆಗುವುದಿಲ್ಲ
ಅಪ್ಪ-ಅಮ್ಮ ಇನ್ನೂ ಗುಟುಕು ಕೊಡುವ ನೆಪದಲ್ಲಿ
ತಟ್ಟೆಗೆ ಮೊಸರನ್ನ ಹಾಕಿಕೊಂಡು ಬಂದು
ಗೂಡಿನ ಬಾಗಿಲಲ್ಲಿ ನಿಂತು ಕೂಗಿ ಕೂಗಿ ಕರೆದರೆ
 
ಮರಿ ವೀಡಿಯೋಕಾಲ್ ಮಾಡಿ
ನಾನು ಚಿಕ್ಕಮ್ಮನ ಮನೇಲಿದೀನಮ್ಮಾ
ಇಲ್ಲೇ ತಂಗಿಯ ಜೊತೆ ಆಡುವೆ
ಇಲ್ಲೇ ಊಟ ಮಾಡುವೆ
ಇಲ್ಲೇ ರಾತ್ರಿಯ ಕಳೆಯುವೆ
ಇಲ್ಲೇ...
ಉಲಿಯುತ್ತಿದೆ ವಿಶ್ವಾಸದ ನಗೆಯ ಜತೆ
 
ತಟ್ಟೆ ಹಿಡಿದ ಅಪ್ಪ-ಅಮ್ಮ
ಈ ಹಕ್ಕಿಗೆ ರೆಕ್ಕೆ ಮೂಡಿದ್ದು ಯಾವಾಗ ಅಂತ
ಹುಡುಕುತ್ತಲೇ ಇದ್ದಾರೆ
ಮೊಬೈಲು ಸೂಸುವ ಬೆಳಕಲ್ಲಿ. 

Monday, February 28, 2022

ಒಡೆದ ಹಿಮ್ಮಡಿ ಕಾಲಿನಂದದಿ

ತಿರುವುತ್ತ ತಿರುವುತ್ತ ಕ್ಯಾಲೆಂಡರಿನ ಪುಟಗಳು ಖಾಲಿಯಾಗಿ ಕೊನೆಯ ಎರಡು ಹಾಳೆಗಳು ಉಳಿಯಿತು ಎನ್ನುವಾಗ ಚಳಿಗಾಲ ಇಳೆಗೆ ಕಾಲಿಡುತ್ತದೆ. ಕಂಬಳಿ ಮಾರುವ ಅಂಗಡಿಗಳಲ್ಲಿ ಹೊಸ ಸ್ಟಾಕು ತರಿಸುತ್ತಾರೆ. ಬೀದಿಬದಿಗಳಲ್ಲಿ ಬೆಚ್ಚನೆಯ ಸ್ವೆಟರು-ಜಾಕೆಟ್ಟುಗಳ ಮಾರಾಟ ಶುರುವಾಗುತ್ತದೆ. ರಾತ್ರಿಯ ಸಮಯ ಅಲ್ಲಲ್ಲಿ ಹೊಡಚಲು ಹಾಕಿ ಬೆಂಕಿ ಕಾಯಿಸುವ ಜನಗಳು ಕಾಣತೊಡಗುತ್ತಾರೆ. ಫ್ಯಾನುಗಳು ಸಂಜೆಯ ಹೊತ್ತಿಗೇ ಆಫ್ ಆಗಿ ಪಂಕಗಳಿಂದ ಆಕಳಿಕೆಯ ಸದ್ದು ಕೇಳಿಬರುತ್ತದೆ. ಮಾಘಮಾಸ ಬಂತಯ್ಯಾ ಪ್ರೇಮಿಗಳಿಗಿನ್ನು ಹಬ್ಬವಯ್ಯಾ ಅಂತೆಲ್ಲ ಕವಿತೆ ಬರೆಯಬಹುದು ಎಂದು ಕಲ್ಪಿಸಿಕೊಂಡು ಕವಿಗಳು ರೋಮಾಂಚಿತರಾಗುತ್ತಾರೆ. ಬಾಟಲಿಯಲ್ಲಿನ ಕೊಬ್ರಿ ಎಣ್ಣೆ ಇಟ್ಟಲ್ಲೆ ಗಟ್ಟಿಯಾಗುತ್ತದೆ. ಐಸ್‌ಕ್ರೀಮ್ ಅಂಗಡಿಯವನು ಸಂಜೆಗೇ ಶಟರ್ ಎಳೆದು ಋತುವನ್ನು ಬೈದುಕೊಳ್ಳುತ್ತ ಮನೆಯತ್ತ ಧಾವಿಸುತ್ತಾನೆ. 
 
ಸರಿಸುಮಾರು ಇದೇ ಹೊತ್ತಿಗೆ ನನ್ನಂತಹ ನತದೃಷ್ಟ ಜನರ ಗುಂಪೊಂದು ಸಣ್ಣಗೆ ಕುಂಟುತ್ತಲೋ, ಕಾಲನ್ನು ವಕ್ರಪಕ್ರವಾಗಿ ಹಾಕುತ್ತಲೋ ನಡೆಯತೊಡಗುತ್ತದೆ. ಆಗಾಗ ಮೈಕೈಯನ್ನು ಕೆರೆದುಕೊಳ್ಳುವುದೋ, ಉರಿ ಉರಿ ಅಂತ ಗೊಣಗಿಕೊಳ್ಳುವುದೋ ಶುರುವಾಗುತ್ತದೆ. ಈ ಇಂತಹ ನಮ್ಮನ್ನು ನೋಡಿ ಇವರಿಗೇನೋ ಮಹತ್ತರ ಖಾಯಿಲೆಯಿದೆ ಎಂದು ನೀವು ಭಾವಿಸಬೇಕಿಲ್ಲ; ನಮಗಿರುವ ಸಮಸ್ಯೆ ಒಂದೇ: ಒಣ ಚರ್ಮ ಅಥವಾ ಡ್ರೈ ಸ್ಕಿನ್!
 
ಈ ಒಣ ಚರ್ಮ ಎಂಬುದು ಅಂತಹ ಗಂಡಾಂತರಕಾರಿ ಸಮಸ್ಯೆಯೇನೂ ಅಲ್ಲದಿರುವುದರಿಂದ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಎಲ್ಲೋ ಚಳಿಯ ದಿನಗಳಲ್ಲಿ ಅದು ಸ್ವಲ್ಪ ಗಂಭೀರ ಸ್ವರೂಪ ತಾಳುವುದಾದರೂ ಹೇಗೋ ಸಂಬಾಳಿಸಿಕೊಂಡು ಹೋಗಬಹುದು. ಹೀಗಾಗಿ ಜನ ಅದನ್ನು ಕಡೆಗಣಿಸುವುದೇ ಹೆಚ್ಚು.  
 
ಆದರೆ ನನ್ನಂತಹ ಕೆಲವರಿಗೆ ವರ್ಷಪೂರ್ತಿ ಈ ಸಮಸ್ಯೆ ಕಾಡುವುದರಿಂದ, ನಾವು ನೂರಾರು ಕ್ರೀಮು-ತೈಲ-ಲೋಷನ್ನುಗಳ ಮೊರೆ ಹೋಗುವುದು ಅನಿವಾರ್ಯ. ನನ್ನ ಅಮ್ಮ ಹೇಳುವ ಪ್ರಕಾರ, ನಾನು ಮಗುವಾಗಿದ್ದಾಗ ಕೆಂಪಿನ ಕಜ್ಜಿಎಂಬ ಹೆಸರಿನ ಸಮಸ್ಯೆಯಾಗಿ, ಸುಮಾರು ವೈದ್ಯರುಗಳ ಬಳಿಗೆ ನನ್ನನ್ನು ಕರೆದೊಯ್ದು, ಅವರು ಬೇರೆಬೇರೆ ಥರದ ಮುಲಾಮುಗಳನ್ನು ಕೊಟ್ಟು, ಅವನ್ನೆಲ್ಲಾ ಪ್ರಯೋಗಿಸೀ ಪ್ರಯೋಗಿಸೀ ನನ್ನ ಮೈ ಚರ್ಮ ಈಗ ಇಷ್ಟೊಂದು ಒರಟಾಗಿಹೋಗಿದೆ ಎಂಬುದು. ಆದರೆ ಅದೇನು ಪೂರ್ತಿ ಸತ್ಯದ ಮಾತಲ್ಲ. ಏಕೆಂದರೆ, ಹಾಗೆ ಹೇಳುವ ಅಮ್ಮನದೂ ಒಡಕು ಚರ್ಮವೇ! ಹೀಗಾಗಿ ನಮ್ಮ ಮನೆಯಲ್ಲಿ ಕೆಜಿಗಟ್ಟಲೆ ವ್ಯಾಸಲೀನು ಸದಾ ದಾಸ್ತಾನಿರುವುದು. ಅದನ್ನು ಪ್ರತಿ ರಾತ್ರಿ ಮಲಗುವಾಗ ಹಿಮ್ಮಡಿಗೆ ಸವರಿಕೊಂಡು ಮಲಗದಿದ್ದರೆ ಮರುದಿನ ಎದ್ದು ಓಡಾಡಲೂ ಆಗುವುದಿಲ್ಲ ಎನ್ನುವ ಪರಿಸ್ಥಿತಿ.  
 
ಈ ಒಣಚರ್ಮ ಎಂಬುದು ವಂಶಪಾರಂಪರ್ಯವಾಗಿ ಜೀನಿನಲ್ಲೇ ಹರಿದು ಬರುವ ಸಮಸ್ಯೆ ಎಂಬುದು ನನ್ನ ಭಾವನೆ. ನನ್ನ ಅಮ್ಮನ ತವರು ಮನೆಯಲ್ಲಿ, ಅವಳ ತಂದೆ, ಅಣ್ಣ-ತಮ್ಮಂದಿರೆಲ್ಲ ಒಣಚರ್ಮದವರೇ. ಅದು ಅಮ್ಮನಿಗೂ, ಅಮ್ಮನಿಂದ ನನಗೂ ಬಳುವಳಿಯಾಗಿ ಬಂದಿದೆ. ನಿಜ ಹೇಳಬೇಕೆಂದರೆ, ಮಲೆನಾಡಿನ ಕಡೆ ನೀವು ಬಂದು ನೋಡಿದರೆ, ಅರ್ಧದಷ್ಟು ಜನ ಈ ಸಮಸ್ಯೆಯಿಂದ ಒದ್ದಾಡುತ್ತಿರುವುದನ್ನು ನೋಡಬಹುದು. ಬರಗಾಲದ ಬಯಲುಗಳಲ್ಲಿ ಬಿರಿದ ಭೂಮಿಯ ಹಾಗೆ ಕಾಣುವ ಇವರ ಹಿಮ್ಮಡಿಯನ್ನು ನೋಡಿದರೆ ನೀವು ಬೆಚ್ಚಿಬೀಳುವಿರಿ.  
 
ಚಳಿಗಾಲಕ್ಕೆ ಸರಿಯಾಗಿ ಶುರುವಾಗುವ ಅಡಿಕೆ ಸುಗ್ಗಿ, ಹಸಿಯಡಿಕೆ ಸಿಪ್ಪೆಯ ವಿಲೇವಾರಿ, ತೋಟಕ್ಕೆ ಹೆಚ್ಚೆಚ್ಚು ಓಡಾಟ, ತೊಗರು ಅಡಿಕೆಯನ್ನು ಬೇಯಿಸಿ ಹರವಿ ಒಣಗಿಸುವ ಕೆಲಸಗಳಲ್ಲಿ ತೊಡಗಿಕೊಳ್ಳುವ ಮಲೆನಾಡ ಮಂದಿ, ಈ ಒಡೆದ ಹಿಮ್ಮಡಿಯಿಂದಾಗಿ ಅನುಭವಿಸುವ ಪಾಡು ಅಷ್ಟಿಷ್ಟಲ್ಲ. ಇದರ ಜತೆಗೆ ಗದ್ದೆಯ ಕೆಲಸ-ಕೊಟ್ಟಿಗೆ ಚಾಕರಿಯೂ ಇದ್ದುಬಿಟ್ಟರಂತೂ ಮುಗಿಯಿತು. ಕೆಸರು-ಸಗಣಿಗಳೆಲ್ಲ ಈ ಒಡಕಿನೊಳಗೆ ಸೇರಿಕೊಂಡು ಚಿತ್ರಹಿಂಸೆ ಕೊಡುವುದು.  
 
ನಾನು ಚಿಕ್ಕವನಿದ್ದಾಗ ಅಮ್ಮ ಈ ವ್ಯಾಸಲೀನು ಮುಂತಾದ ಮುಲಾಮುಗಳನ್ನು ದುಡ್ಡು ಕೊಟ್ಟು ತಂದು ಪೂರೈಸಲಾಗುವುದಿಲ್ಲ ಎಂದು ಮೇಣದ ಬತ್ತಿಗಳನ್ನು ಕೊಬ್ರಿ ಎಣ್ಣೆಯ ಜೊತೆ ಕರಗಿಸಿ ಮಿಶ್ರ ಮಾಡಿ ಇಟ್ಟಿರುತ್ತಿದ್ದಳು. ಪ್ರತಿ ರಾತ್ರಿ ನಾವು ಅದನ್ನೇ ಸವರಿಕೊಂಡು ಮಲಗುತ್ತಿದ್ದೆವು. ಒಮ್ಮೆ ಮೇಣದ ಬತ್ತಿಯೂ ದುಬಾರಿಯೆಂದೂ, ಅದೂ ಅಷ್ಟು ಪರಿಣಾಮಕಾರಿಯಾಗಿಲ್ಲವೆಂದೂ ತೀರ್ಮಾನಿಸಿ, ಅಪ್ಪ ನಮಗೆ ಈ ವಾಹನಗಳ ಕೀಲುಗಳಿಗೆ ಸವರುವ ಗ್ರೀಸ್ ತಂದುಕೊಟ್ಟಿದ್ದ. ಕೆಟ್ಟ ವಾಸನೆ, ಆದರೆ ಸಖತ್ ಸ್ಟ್ರಾಂಗ್ ಇದೆಅಂತ ಗೊಣಗಿಕೊಂಡು ನಾನು-ಅಮ್ಮ ಅದನ್ನೇ ಹಿಮ್ಮಡಿಗೆ ಸವರಿಕೊಂಡು ಮಲಗುತ್ತಿದ್ದೆವು.  ಹೀಗೆ ರಾತ್ರಿಯ ಹೊತ್ತು ಕೈಕಾಲುಗಳಿಗೆ ಔಷಧಿ ಹಚ್ಚಿಕೊಂಡು ಮಲಗುವ ಸಮಸ್ಯೆ ಎಂದರೆ ಹಾಸಿಗೆ-ವಸ್ತ್ರವೆಲ್ಲ ವಾಸನೆಯಾಗಿ-ಜಿಡ್ಡಾಗಿ ಗಬ್ಬೆದ್ದು ಹೋಗುವುದು. ಅದಕ್ಕೂ ಒಂದು ಉಪಾಯ ಕಂಡುಹಿಡಿದ ನಾವು, ಔಷಧಿ ಹಚ್ಚಿಕೊಂಡಾದಮೇಲೆ, ಹಳೆಯ ಪ್ಲಾಸ್ಟಿಕ್ ಕವರುಗಳನ್ನು ಸಾಕ್ಸಿನಂತೆ ಕಾಲಿಗೆ ಧರಿಸಿ ಮಲಗಿಕೊಳ್ಳುತ್ತಿದ್ದೆವು. ಈ ಪ್ಲಾಸ್ಟಿಕ್ ಸಾಕ್ಸು ಚರಪರ ಸದ್ದು ಮಾಡುತ್ತಾ ಎಷ್ಟೋ ರಾತ್ರಿ ನಿದ್ರೆಯೇ ಬರುತ್ತಿರಲಿಲ್ಲ.   
 
ಒಮ್ಮೆ ಅಪ್ಪ, ಪಕ್ಕದೂರಿನ ಒಂದು ಮನೆಯವರು ತಮ್ಮ ಒಡೆದ ಹಿಮ್ಮಡಿಯ ಸುತ್ತ ಇರುವ ನಿಷ್ಪ್ರಯೋಜಕ ಒಣ ಚರ್ಮವನ್ನು ಬ್ರಶ್ಶಿನಂತರ ಸಾಧವೊಂದರಿಂದ ತಿಕ್ಕಿತಿಕ್ಕಿ ಕೆರೆದು ತೆಗೆದು ಸ್ವಚ್ಛ ಮಾಡಿಕೊಂಡು ನಂತರ ಔಷಧಿ ಸವರಿಕೊಳ್ಳುತ್ತಾರೆಂದೂ, ಅದರಿಂದ ಅವರಿಗೆ ಅನುಕೂಲವಾಗಿರುವಾಗಿ ಹೇಳಿದರೆಂದೂ, ಅಂತಹುದೇ ಒಂದು ಬ್ರಶ್ ಕೊಂಡು ತಂದಿದ್ದ. ಆಮೇಲೆ ನಾನು-ಅಮ್ಮ ಪ್ರತಿ ಸಂಜೆ ಹಿಮ್ಮಡಿಗೆ ಈ ಬ್ರಶ್ ಹಾಕಿ ತಿಕ್ಕತೊಡಗಿದೆವು. ತರಿತರಿಯಾದ ಮೇಲ್ಮೈ ಹೊಂದಿದ್ದ ಈ ಸ್ಟೀಲಿನ ಬ್ರಶ್ಶು ನಮ್ಮ ತಿಕ್ಕುವ ರಭಸಕ್ಕೆ ಒಣಚರ್ಮವನ್ನೆಲ್ಲ ಕಿತ್ತು ಹಾಕಿ ಹಿಮ್ಮಡಿಯನ್ನು ನುಣುಪಾಗಿಸುತ್ತಿತ್ತು.  ಅಕ್ಕಪಕ್ಕದ ಮನೆಯವರೋ ನೆಂಟರೋ ಆ ಸಮಯದಲ್ಲಿ ನಮ್ಮ ಮನೆಗೇನಾದರೂ ಬಂದರೆ ನಮ್ಮ ಈ ವಿಚಿತ್ರ ಪರಿಯನ್ನು ನೋಡಿ ಅವಾಕ್ಕಾಗುತ್ತಿದ್ದರು. ವಿಷಯ ಎಂದರೆ, ಮೃದು ಚರ್ಮದ ಜನಗಳಿಗೆ ನಮ್ಮ ಗೊಡ್ಡು ಚರ್ಮದ ಸಮಸ್ಯೆಯ ತೀವ್ರತೆಯ ಕಲ್ಪನೆಯೇ ಇಲ್ಲದಿರುವುದು. ಹೀಗಾಗಿ, ನಾವು ಮಾಡುವ ಚಿತ್ರವಿಚಿತ್ರ ಪ್ರಯೋಗಗಳು ಅವರಿಗೆ ಪರಿಹಾಸದಂತೆ ಕಂಡು, ನಮಗೆ ಮತಿಭ್ರಮಣೆಯಾಗಿದೆ ಎಂದು ಭಾವಿಸಿರಲಿಕ್ಕೂ ಸೈ.  
 
ಈ ಒಣ ಚರ್ಮದ ತೀವ್ರತೆಯ ಪರಾಕಾಷ್ಟೆ ನನಗೆ ಅರಿವಾದದ್ದು ನಾನು ಆಧಾರ್ ಕಾರ್ಡ್ ಮಾಡಿಸಲು ಆಧಾರ್ ಕೇಂದ್ರಕ್ಕೆ ಹೋದಾಗ. ಭಾರತ ಸರ್ಕಾರವು ದೇಶದ ಪ್ರತಿಯೊಬ್ಬ ನಾಗರೀಕನೂ ಆಧಾರ್ ಹೊಂದಿರುವುದು ಒಳ್ಳೆಯದು ಎನ್ನುವ ಘೋಷಣೆ ಮಾಡಿದಾಗ, ಅಲ್ಲಿಯವರೆಗೂ ಅಲಕ್ಷ್ಯ ತೋರಿದ್ದ ನಾನು ಆಧಾರ್ ಕೇಂದ್ರಕ್ಕೆ ನುಗ್ಗಿದೆ. ಹೆಸರು ನೋಂದಣಿ, ವಿಳಾಸ ಧೃಢೀಕರಣ, ಭಾವಚಿತ್ರ ತೆಗೆಯುವುದು ಇತ್ಯಾದಿಗಳೆಲ್ಲ ಮುಗಿದಮೇಲೆ, ಅಲ್ಲಿನ ಅಧಿಕಾರಿ ಫಿಂಗರ್‌ಪ್ರಿಂಟ್ ತಗೋಬೇಕು, ಕೈ ಇದದ ಮೇಲೆ ಇಡಿ ಸಾರ್ಅಂತ ಕೇಳಿದಾಗ, ಆ ಅಧಿಕಾರಿಯೇ ತಬ್ಬಿಬ್ಬಾಗುವ ಘಟನೆ ನಡೆಯಿತು. ಈ ಆಧಾರ್ ನೋಂದಣಿಗೆ ಹತ್ತೂ ಕೈಬೆರಳುಗಳ ಮೆಟ್ರಿಕ್ಸ್ ಕೊಡಬೇಕಷ್ಟೇ? ನಾನು ನನ್ನ ಬೆರಳುಗಳನ್ನು ಎತ್ತೆತ್ತಿ ಆ ಕಡೆ ಈ ಕಡೆ ತಿರುಗಿಸಿ ಮತ್ತೆಮತ್ತೆ ಆ ಪ್ಯಾಡಿನ ಮೇಲೆ ಇಟ್ಟರೂ ಆ ಯಂತ್ರಕ್ಕೆ ನನ್ನ ಬೆರಳಚ್ಚನ್ನು ಗುರುತಿಸಲು ಆಗಲೇ ಇಲ್ಲ. ನನ್ನ ಮುಖವನ್ನೂ, ವಯಸ್ಸನ್ನೂ ಮತ್ತೊಮ್ಮೆ ಪರಿಶೀಲಿಸಿದ ಆ ಅಧಿಕಾರಿ, ‘ಏನ್ ಸಾರ್, ಇಷ್ಟು ಚಿಕ್ಕ ಪ್ರಾಯಕ್ಕೇ ಹಿಂಗಾಗಿದೆ ನಿಮಗೆಅಂತ ಆಶ್ಚರ್ಯ ವ್ಯಕ್ತಪಡಿಸಿದ. ನಂತರ ಯಾವುದೋ ದ್ರಾವಣದಲ್ಲಿ ಕೈ ತೊಳೆಸಿ, ಹಲವು ಸಲ ಪ್ರಯತ್ನಿಸಿದರೂ ಕೊನೆಗೂ ನನ್ನ ಅಷ್ಟೂ ಬೆರಳುಗಳ ಅಚ್ಚು ಪಡೆಯುವುದಕ್ಕೆ ಸಾಧ್ಯವೇ ಆಗಲಿಲ್ಲ.  ಕ್ಯೂನಲ್ಲಿ ಕಾಯುತ್ತಿದ್ದ ಜನಗಳು ಬೇರೆ ಬೈಯಲು ಶುರು ಮಾಡಿದ್ದರು. ಅಂತೂ ಕಸರತ್ತು ಮಾಡಿ ಆರು ಬೆರಳುಗಳ ಅಚ್ಚನ್ನು ಪಡೆದುಕೊಂಡು, ಇನ್ನುಳಿದವಕ್ಕೆ ಅದೇನೋ ಷರಾ ಬರೆದುಕೊಂಡು ಆ ಅಧಿಕಾರಿ ನನ್ನನ್ನು ಬೀಳ್ಕೊಟ್ಟ. ಡ್ರೈ ಸ್ಕಿನ್ ಎಂಬ ತೊಡಕಿನಿಂದ ನಾನು ಭಾರತದ ಪ್ರಜೆಯಾಗಿರುವುದಕ್ಕೇ ಕುತ್ತು ಬಂದುಬಿಟ್ಟಿತ್ತಲ್ಲಪ್ಪಾ ಅಂತ ಬೆವರುತ್ತ ನಾನು ಆಧಾರ್ ಕೇಂದ್ರದಿಂದ ಹೊರಬಿದ್ದಿದ್ದೆ.  
 
ಕೆಲವೊಂದು ಚಳಿಗಾಲಗಳಲ್ಲಿ ಈ ಸಮಸ್ಯೆ ಎಷ್ಟರ ಮಟ್ಟಿಗೆ ಉಲ್ಬಣಿಸುತ್ತದೆ ಎಂದರೆ, ಕೈ-ಕಾಲು-ತುಟಿಗಳ ಒಡಕಿನಿಂದ ರಕ್ತವೇ ಒಸರತೊಡಗುತ್ತದೆ. ಅದಕ್ಕೆ ಸೂಕ್ತ ಔಷಧಿ ಹಚ್ಚಿ ಆರೈಕೆ ಮಾಡದಿದ್ದರೆ ಬೇರೆಯವರಿಗೆ ನಮ್ಮ ಮುಖ ನೋಡಲೂ ಭಯವಾಗುವ ಹಾಗಾಗುತ್ತದೆ. ಪ್ರತಿದಿನ ಸ್ನಾನದ ನಂತರ ಮೈಕೈಗೆಲ್ಲ ಸರಿಯಾದ ಲೋಷನ್ ಸವರಿಕೊಳ್ಳದಿದ್ದರೆ ಚರ್ಮವೇ ಪುಡಿಪುಡಿಯಾಗಿ ಉದುರತೊಡಗುತ್ತದೆ. ಮೈಕೈಯೆಲ್ಲ ಪಟ್ಟೆಪಟ್ಟೆಯಾಗಿ ಹಾವಿನ ಪೊರೆಯಂತೆ ಕಾಣತೊಡಗುತ್ತದೆ.  ನೀನು ಹುಡುಗ ಆಗಿದ್ದಕ್ಕೆ ಬಚಾವಾದೆ.  ಹುಡುಗಿ ಏನಾದ್ರೂ ಆಗಿದ್ದಿದ್ರೆ, ಈ ಒಡಕು ಮೈ ನೋಡಿ ನಿನ್ನನ್ನ ಯಾರು ಮದುವೆ ಆಗ್ತಿದ್ರು?’ ಅಂತ ಅಮ್ಮ ಕೆಲವೊಮ್ಮೆ ಉದ್ಘರಿಸಿದ್ದಿದೆ.  ಅದ್ಯಾಕೋ ಹುಡುಗರು ರಫ್ ಅಂಡ್ ಟಫ್ ಆಗಿದ್ದರೂ ಪರವಾಗಿಲ್ಲ, ಹುಡುಗಿಯರು ಮಾತ್ರ ಸುಕೋಮಲ ಸುಂದರಿಯರಾಗಿರಬೇಕು ಎಂಬುದು ನಮ್ಮ ಸಮಾಜದಲ್ಲಿನ ನಂಬುಗೆ. ನಾನು ಇದನ್ನು ಆಕ್ಷೇಪಿಸಿದ್ದಕ್ಕೆ, ‘ಹಾಗಲ್ಲ ಕಣೋ, ನೀವು ಹುಡುಗರು ಗಡ್ಡ ಬಿಟ್ರೆ ಸಾಕು, ಮುಖ ಒಡೆದಿದ್ದೂ ಗೊತ್ತಾಗಲ್ಲ; ಹುಡುಗಿಯರಿಗಾದ್ರೆ ಹಾಗಾಗತ್ತಾ?’ ಅಂತ ಸಮರ್ಥನೆ ಕೊಟ್ಟಳು ಅಮ್ಮ.  
 
ಮದುವೆಯಾದಮೇಲೆ ನನ್ನ ಹೆಂಡತಿ, ನಾವು ಆಯ್ಲೀ ಸ್ಕಿನ್ ಇರೋರಿಗೆ ಮೊಡವೆ ಆಗುತ್ತೆ, ಬಿಸಿಲಿಗೆ ಹೋದ್ರೆ ಮುಖ ಎಲ್ಲಾ ಎಣ್ಣೆಣ್ಣೆಯಾಗಿ ಕಪ್ಪಾಗುತ್ತೆ.  ಸೌಂದರ್ಯವರ್ದಕ ಅಂತ ಜಾಹೀರಾತಲ್ಲಿ ತೋರಿಸಿದಾರೆ ಅಂತ ಕ್ರೀಮು ಹಚ್ಕೊಂಡ್ರೆ ಮುಖ ಮತ್ತೂ ಡಲ್ಲಾಗಿ ಕಾಣುತ್ತೆ. ನೀವು ಡ್ರೈ ಸ್ಕಿನ್ ಇರೋರಿಗೇ ಆರಾಮುಅಂತ ಹೇಳಿ, ನನಗೂ ಈ ಭೂಮಿಯಲ್ಲಿ ಮೂರು ಕಾಸಿನ ಬೆಲೆ ಇದೆ ಎನಿಸುವಂತೆ ಮಾಡಿದಳು. ಕ್ರೀಮ್ ಏನು, ಕೊಬ್ರಿ ಎಣ್ಣೆಯ ಕೊಪ್ಪರಿಗೆಯಲ್ಲೇ ಮುಳುಗೆದ್ದರೂ ಕ್ಷಣಮಾತ್ರದಲ್ಲಿ ನನ್ನ ಚರ್ಮ ಎಣ್ಣೆಯನ್ನೆಲ್ಲ ಹೀರಿಕೊಂಡು ಮತ್ತೆ ಒಣಕಲಾಗುವುದು ಈಗ ಹೆಮ್ಮೆಯ ವಿಷಯವಾಗಿ ಕಂಡಿತು.  ಅದೇ ಹಿಗ್ಗಿನಲ್ಲಿ ಹೀರೇಕಾಯಿಯಾಗಿದ್ದವನಿಗೆ ಮರುಕ್ಷಣವೇ, ಆದರೆ ಮುಂದೆ ನಮ್ಮ ಮಗೂಗೆ ಮಾತ್ರ ಈ ಥರ ಡ್ರೈ ಸ್ಕಿನ್ ಇರದೇ ಇರ್ಲಪ್ಪಾಅಂತಂದು ತಣ್ಣೀರೂ ಎರಚಿದಳು.  
 
ಈಗ ಕೊವಿಡ್ ಕಾಲ ಬಂದು ಎಲ್ಲರೂ ಆಗಾಗ ಕೈಗೆ ಸ್ಯಾನಿಟೈಸರ್ ಹಚ್ಚಿಕೊಳ್ಳುತ್ತಾ ಇರಬೇಕು ಅಂತ ಆದಮೇಲೆ ಒಣಚರ್ಮದ ನಾವು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿರುವುದು ನಿಜ. ಈ ಸ್ಯಾನಿಟೈಸರಿನಲ್ಲಿ ಇರುವ ಕೆಮಿಕಲ್ಲುಗಳು ನಮ್ಮ ಒಣ ಅಂಗೈಯನ್ನು ಮತ್ತಷ್ಟು ಒಣಗಿಸುವುದರಿಂದ, ಇತ್ತೀಚಿನ ದಿನಗಳಲ್ಲಿ ನನ್ನ ಮೊಬೈಲಿನ ಫಿಂಗರ್‌ಪ್ರಿಂಟ್ ಸೆನ್ಸಾರು ಸಹ ನನ್ನನ್ನು ಗುರುತಿಸುವುದನ್ನು ಬಿಟ್ಟುಬಿಟ್ಟಿದೆ. ಎಷ್ಟೇ ಸಲ ಸೆನ್ಸಾರಿನ ಮೇಲೆ ಬೆರಳಿಟ್ಟರೂ ನೀನು ಅವನಲ್ಲಎಂಬಂತೆ ಗರಗರ ವೈಬ್ರೇಟ್ ಆಗಿ, ನಾನು ಯಾರದೋ ಮೊಬೈಲ್ ಕಳ್ಳತನ ಮಾಡಿ ಹ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದೀನೇನೋ ಅಂತ ನನಗೇ ಅನುಮಾನ ಬರುವಂತೆ ಆಗಿದೆ. ಇದು ನನ್ನ ಮೊಬೈಲೇ ಹೌದಾ ಅಲ್ಲವಾ ಅಂತ ಕೆಲವೊಮ್ಮೆ ತಿರುಗಿಸಿ-ಮುರುಗಿಸಿ ಪರಿಶೀಲಿಸುವ ಹಾಗೆ ಆಗಿದೆ.  
 
ನಮ್ಮ ಒಣಗಿದ ತ್ವಚೆಯನ್ನೇ ಬಂಡವಾಳ ಮಾಡಿಕೊಂಡಿರುವ ಹಲವು ಕಂಪನಿಗಳು ಇದರ ಪರಿಹಾರಕ್ಕೆ ಔಷಧಗಳನ್ನೂ-ಕ್ರೀಮುಗಳನ್ನೂ-ಲೋಷನ್ನುಗಳನ್ನೂ ಮಾರುಕಟ್ಟೆಗೆ ಬಿಟ್ಟಿರುವುದು ನಿಜ. ನಾನು ಮೆಡಿಕಲ್ ಶಾಪುಗಳಿಗೆ ಸೂಪರ್ ಮಾರ್ಕೆಟ್ಟುಗಳಿಗೆ ಭೇಟಿಯಿತ್ತಾಗ ಇಂತಹ ಡಬ್ಬಿ-ಬಾಟಲಿಗಳು ನನ್ನನ್ನು ಕಂಡ ಕೂಡಲೇ ಗಿರಾಕಿ ಸಿಕ್ಕಿದಎಂದು ಹಲ್ಕಿರಿಯುವಂತೆ ಭಾಸವಾಗುತ್ತದೆ.  ಒಡೆದ ಹಿಮ್ಮಡಿಯನ್ನು ಕೆಲವೇ ದಿನಗಳಲ್ಲಿ ನಯವಾಗಿಸುವ ಕ್ರೀಮುಗಳ ಜಾಹೀರಾತುಗಳನ್ನು ನೋಡಿದರೆ ಸಾಕು, ನಾನು ಹಾಗೇ ಕುರ್ಚಿಗೊರಗಿ ಕನಸಿನ ಲೋಕಕ್ಕೆ ಹೋಗಿಬಿಡುತ್ತೇನೆ.  ಆ ಕ್ರೀಮು ಹಚ್ಚಿ ಇನ್ನೇನು ಮೈಕೈಯೆಲ್ಲ ನುಣುಪಾದಂತೆ ಕನಸು ಕಾಣುತ್ತಿರುವನನ್ನು ಹೆಂಡತಿ ಬಂದು ತಟ್ಟಿ ಎಬ್ಬಿಸುತ್ತಾಳೆ.  ವಾಸ್ತವಕ್ಕೆ ಬಂದು, ಎದ್ದು ಕನ್ನಡಿ ಮುಂದೆ ಹೋಗಿ ನಿಂತರೆ, ಸುಲಿದ ಚರ್ಮದ ಮೋರೆಯಂದದಿ, ಒಡೆದ ಹಿಮ್ಮಡಿ ಕಾಲಿನಂದದಿ, ಬಿರಿದ ಅಂಗೈ ಬೆರಳಿನಂದದಿ ಎದುರು ನಿಂತಿರ್ಪ ನನ್ನದೇ ಪ್ರತಿಬಿಂಬ ಇದು ಈ ಜನ್ಮದಲ್ಲಿ ಸರಿ ಹೋಗುವುದಲ್ಲ ಕಣಪ್ಪಾ, ಕನಸು ಕಾಣೋದು ನಿಲ್ಲಿಸಪ್ಪಾಎಂದು ಹೇಳಿ ಅಣಕಿಸುತ್ತದೆ. 
 
[ತರಂಗ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ] 

Thursday, February 17, 2022

ಕವಳತಬಕು

ಊಟಕ್ಕೆ ಯಾವ ತಟ್ಟೆಯಾದರೂ ಆದೀತು
ಬಂಗಾರದ ತಟ್ಟೆಯಲ್ಲುಣ್ಣುವ ಅತಿಸಿರಿವಂತರೂ
ಬೆಳ್ಳಿತಟ್ಟೆಯಲ್ಲುಣ್ಣುವ ಸಿರಿವಂತರೂ
ಹಿತ್ತಾಳೆಯ ತಟ್ಟೆಯೂಟ ಆರೋಗ್ಯಕ್ಕೊಳಿತೆನ್ನುವವರೂ
ಸ್ಟೀಲಿನ ತಟ್ಟೆ ಹಿಡಿದ ಮಧ್ಯಮವರ್ಗದವರೂ
ಪಿಂಗಾಣಿ ಬಳಸುವ ನಾಜೂಕುದಾರರೂ
ದರ್ಶಿನಿಯ ಹಾಳೆತಟ್ಟೆ ರಿಸೆಪ್ಷನ್ನಿನ ಪ್ಲಾಸ್ಟಿಕ್ ತಟ್ಟೆ
ಬಡತನದ ದಿನಗಳ ಸಿಲಾವರದ ತಟ್ಟೆ
ಕಾರ್ಯದ ಮನೆಯ ಬಾಳೆಯೆಲೆ ಊಟ
ಬಿಡಿ, ತಟ್ಟೆಯೇ ಇಲ್ಲದಿದ್ದರೆ ನೇರ ಅಮ್ಮನ ಕೈತುತ್ತು

ಆದರೆ ಕವಳತಬಕಿಗೆ ಚಿತ್ತಾರವಿರುವ ತಟ್ಟೆಯೇ ಆಗಬೇಕು
ಸುಗಂಧಿನೀ ನದಿಯ ತೀರದಲ್ಲಿ ಬೆಳೆದ ವೀಳ್ಯದೆಲೆ
ತಾ ಹಬ್ಬಿದ ಮರದಿಂದಿಳಿಸಿ ಬೇಯಿಸಿದ ಕೆಂಪಡಿಕೆ
ಕೊತಕೊತ ನೀರಲ್ಲಿ ಬೆಂದು ತಿಳಿಯಾದ ಬಿಳಿಸುಣ್ಣ
ಮತ್ತಾ ಕರಿಕರಿ ಎಸಳು ತಂಬಾಕು

ನೀವು ಗಮನಿಸದಿರಲು ಶಕ್ಯವೇ ಇಲ್ಲ:
ಈ ಎಲ್ಲದರಡಿಗೆ ಒಂದು ಹೂಬಳ್ಳಿಯಿದೆ
ಅದು ತನ್ನ ಉಬ್ಬು ಮೈಯಿಂದ ಹೊಮ್ಮಿಸುವ
ಜೀವನ್ಮುಖೀ ಹರಿತ್ತಿನ ಮೂಲಕ
ವೀಳ್ಯದೆಲೆ ಬಾಡದಂತೆ, ಸುಣ್ಣ ಒಣಗದಂತೆ,
ಅಡಕೆ ಮುಗ್ಗದಂತೆ, ತಂಬಾಕಿನಮಲು ಕಳೆಯದಂತೆ
ಕಾಪಾಡುತ್ತದೆ: ಅಡಕತ್ತರಿಯ ಹರಿತ ಅಲಗಿಗೂ ಬೆದರದೆ.

ಜಗಲಿಯ ಬೆಂಚಿನ ಮೇಲಿಂದ ಹಾಸುಗಂಬಳಿಯೆಡೆಗೆ,
ಹಿತ್ತಿಲ ಕಟ್ಟೆಯಿಂದ ಶಾಮಿಯಾನಾದಡಿಯ ಇಸಪೀಟು
ಮಂಡಲದೆಡೆಗೆ ಕೈಯಿಂದ ಕೈಗೆ ದಾಟುವಾಗ
ಈ ಬಳ್ಳಿಮೈಯ ಹರಿವಾಣ ಎಂದೂ ಜಾರಿ ಬಿದ್ದದ್ದಿಲ್ಲ
ಒಂದಿಡೀ ತಾಂಬೂಲಾಕಾಂಕ್ಷೆಯ ಜನರ ಉಮೇದಿನ
ಭಾರವನ್ನು ತನ್ನೊಡಲಲ್ಲಿಟ್ಟುಕೊಂಡು ರಕ್ಷಿಸುವ
ಸುಗಂಧಸಾಮ್ರಾಜ್ಯದಂತಹ ಈ ತಟ್ಟೆ-

ಕವಳ ತುಂಬಿದ ಬೊಚ್ಚುಬಾಯಿಯ ಅಜ್ಜನ ನಗೆಗೆ
ಮೊದಲ ಸಿಹಿಗವಳಕ್ಕೆ ಸೊಕ್ಕು ಹತ್ತಿ
ತ್ರಾಸು ಪಡುತ್ತಿರುವ ಪುಟ್ಟ ಬಾಲಕನ ಮುಗ್ದತೆಗೆ
ದಕ್ಷಿಣೆ ಗೌರವಕ್ಕೆಂದು ಎರಡೆಲೆ ಎರಡಡಿಕೆಯ
ಎತ್ತಿಕೊಟ್ಟುದಕ್ಕೆ ಸಾಕ್ಷಿಯಾಗಿದ್ದ ಈ ತಟ್ಟೆ-

ಅಜ್ಜ-ಅಜ್ಜಿಯರು ತಮ್ಮ ಸಂಚಿಯ ಸಮೇತ
ಸ್ವರ್ಗಲೋಕಕ್ಕೆ ಹೊರಟು ನಿಂತಾಗ
ಹೊಸ ಹುಡುಗ ಹುಡುಗಿಯರು ಹೊಸಹೊಸ
ಅಮಲುಗಳ ಹುಡುಕಿ ಹೊರನಡೆದಿರುವಾಗ

ಯಾರು ನೀರೆರೆಯುವರು ಈ ಕವಳತಬಕಿನ ಬಳ್ಳಿಗೆ?

ಕತ್ತಲೆಯ ಒಳಮನೆಯಲ್ಲಿ ಬಿದ್ದುಕೊಂಡಿರುವ
ಖಾಲಿತಟ್ಟೆಯಲಿ ಕೈಯಾಡಿಸಿದರೆ ಸಿಕ್ಕಿದ್ದು
ಒಂದು ಒಣಬಳ್ಳಿ ಮತ್ತೀ ಕವಿತೆ, ಅಷ್ಟೇ.

 

Monday, January 31, 2022

ತಾರಸಿಯಿಂದ ಕಂಡ ಮಹಾನಗರ


ಮಲೆನಾಡಿನ ಪುಟ್ಟ ಹಳ್ಳಿಯಿಂದ ಬಂದ ನಮಗೆ ಇಡೀ ಬೆಂಗಳೂರು ಸುತ್ತಿದರೂ ಒಂದೇ ಒಂದು ಸೋಗೆಯ ಮನೆ ಅಥವಾ ಹೆಂಚಿನ ಮನೆ ಕಾಣದಿದ್ದುದು ಸೋಜಿಗದ ಸಂಗತಿಯಾಗಿತ್ತು. ಬೆಂಗಳೂರನ್ನು ನೋಡಲೆಂದು ನಾನು ಮೊದಲ ಸಲ ಇಲ್ಲಿಗೆ ಹೊರಟಾಗ ಅಪ್ಪ, ‘ಎಂಜಿ ರೋಡು ನೋಡೋದಕ್ಕೆ ಮರೀಬೇಡ. ಅಲ್ಲಿಗೆ ಹೋದರೆ ಬೇರೆಯದೇ ಲೋಕಕ್ಕೆ ಹೋದಹಾಗೆ ಆಗುತ್ತೆ. ಪೆಟ್ಟಿಗೆ-ಪೆಟ್ಟಿಗೆಗಳ ಹಾಗೆ ಪಕ್ಕಪಕ್ಕದಲ್ಲಿ ಅಚ್ಚುಕಟ್ಟಾಗಿ ಕಟ್ಟಿರುವ ಆರ್‌ಸಿಸಿ ಕಟ್ಟಡಗಳು, ಎಲ್ಲಾ ನೀಟಾಗಿ ತುಂಬಾ ಚೆನ್ನಾಗಿದೆ’ ಅಂತ ಹೇಳಿದ್ದ. ಅವನಾದರೋ ಎಷ್ಟೋ ವರ್ಷಗಳ ಹಿಂದೆ ನೋಡಿದ್ದ ಬೆಂಗಳೂರಿನ ಚಿತ್ರವನ್ನು ಕಣ್ಮುಂದೆ ಇಟ್ಟುಕೊಂಡು ಹೇಳಿದ್ದು; ಆದರೆ ನಾನು ಬೆಂಗಳೂರಿಗೆ ಬರುವ ಹೊತ್ತಿಗೆ ಇಡೀ ಬೆಂಗಳೂರೇ ಎಂಜಿ ರೋಡಿನ ಹಾಗೆ ಆಗಿತ್ತು. ಎಲ್ಲ ಏರಿಯಾಗಳಲ್ಲೂ ಎಂಜಿ ರೋಡಿನ ಹಾಗೆ ಚಂದದ ಥಳಥಳ ಕಟ್ಟಡಗಳು, ಅಲ್ಲಲ್ಲಿ ತಲೆಯೆತ್ತತೊಡಗಿದ್ದ ಮಾಲುಗಳು, ಸಂಜೆಯಾಯಿತೆಂದರೆ ಝಗಮಗ ದೀಪಗಳು, ತಳುಕುಬಳುಕು ತುಂಬಿ ತುಳುಕುವ ಬೀದಿಯಲ್ಲಿ ಜನರು ‘ಶಾಪಿಂಗ್’ ಹೆಸರಿನಲ್ಲಿ ಚೆಂದನೆಯ ಬ್ಯಾಗು ಹಿಡಿದು ಓಡಾಡುವರು. ಹೀಗಾಗಿ ಎಂಜಿ ರೋಡು ಬಹಳ ಭಿನ್ನವಾಗಿಯೇನು ಕಾಣಲಿಲ್ಲ.

ಆದರೆ ಅಪ್ಪ ನೋಡಲು ಹೇಳಿದ್ದ ಪಟ್ಟಿಯಲ್ಲಿದ್ದ ಯುಟಿಲಿಟಿ ಬಿಲ್ಡಿಂಗಿನ ಮೇಲೇರಿದಾಗ ಮಾತ್ರ ನಾನು ದಂಗಾಗಿಬಿಟ್ಟೆ. ಇಪ್ಪತ್ತೈದು ಮಹಡಿಗಳ ಕಟ್ಟಡವನ್ನು ಹೊಕ್ಕು ಲಿಫ್ಟಿನ ಗುಂಡಿಯದುಮಿದ್ದೇ ಆಕಾಶಕ್ಕೆ ನೆಗೆಯುವ ರಾಕೆಟ್ಟಿನಂತೆ ಅದು ನನ್ನನ್ನು ಮೇಲಕ್ಕೊಯ್ದಿತು. ಹೆದರಿ ಎರಡೂ ಕೈಗಳನ್ನು ಲಿಫ್ಟಿನ ಕವಚಗಳಿಗೆ ಒತ್ತಿ ಹಿಡಿದೆ.  ಎದೆಯ ಡವಡವ ಕಿವಿಗೆ ಕೇಳುವಷ್ಟು ಜೋರಾಗಿತ್ತು. ಕೊನೆಯ ಮಹಡಿಯಲ್ಲಿ ಲಿಫ್ಟು ನಿಂತು, ನಾನು ಸಾವರಿಸಿಕೊಳ್ಳುತ್ತಾ ನಿಧಾನಕ್ಕೆ ಹೊರಗೆ ಹೆಜ್ಜೆಯಿಟ್ಟರೆ, ಆಕಾಶದಲ್ಲಿ ತೇಲುತ್ತಿರುವಂತೆ ಭಾಸ. ಮೂರು ವರ್ಷಕ್ಕೊಮ್ಮೆ ಮಾರಿಜಾತ್ರೆಗೆ ಬರುವ ತೊಟ್ಟಿಲಲ್ಲಿ ಕುಳಿತು ನೋಡಿದ್ದು ಬಿಟ್ಟರೆ ಇಷ್ಟು ಎತ್ತರದಿಂದ ಜಗತ್ತನ್ನು ನೋಡುತ್ತಿದ್ದುದು ಇದೇ ಮೊದಲ ಸಲವಾಗಿತ್ತು. ಎದೆ ಇನ್ನೂ ತಾರಕದಲ್ಲಿ ಬಡಿದುಕೊಳ್ಳುತ್ತಲೇ ಇತ್ತು. ನಿಧಾನಕ್ಕೆ ಪ್ಯಾರಾಪಿಟ್ಟಿನ ಅಂಚಿಗೆ ಬಂದೆ. ಮುಂದೆ ನೋಡಿದರೆ, ಬೆಂಗಳೂರಿಗೆ ಬೆಂಗಳೂರೇ ಕಾಣುತ್ತಿದೆಯೇನೋ ಎಂಬಂತೆ ಇಡೀ ನಗರ ಕಣ್ಮುಂದೆ ಹರಡಿಕೊಂಡಿತ್ತು. ಹಸಿರು ಮರಗಳು, ಕೆಂಪು ಹೂಗಳು, ಬಿಳಿಯ ಕಟ್ಟಡಗಳು, ಅಲ್ಲಲ್ಲೇಳುತ್ತಿರುವ ಹೊಗೆ, ದೂರದಲ್ಲಿ ಹಾರುತ್ತಿರುವ ಹಕ್ಕಿಗಳು.... ಆಹಾ! ರುದ್ರಭಯಂಕರವಾಗಿದ್ದ ಆ ದೃಶ್ಯ ಮೈ ನವಿರೇಳಿಸುವ ಹಾಗಿತ್ತು. ಇನ್ನೂ ಧೈರ್ಯ ಮಾಡಿ, ಪ್ಯಾರಾಪಿಟ್ಟಿನ ಅಂಚನ್ನು ಕೈಯಲ್ಲಿ ಹಿಡಿದು, ಬಗ್ಗಿ ನೋಡಿದೆ: ಓಹೋ! ಇರುವೆಗಳ ಹಾಗೆ ಚಲಿಸುತ್ತಿರುವ ವಾಹನಗಳು, ಕುಬ್ಜ ಕೀಟಗಳಂತೆ ಕಾಣುತ್ತಿರುವ ಮನುಷ್ಯರು, ಅಕ್ಕಪಕ್ಕದ ಚಿಕ್ಕ ಕಟ್ಟಡಗಳ ಟೆರೇಸಿನಲ್ಲಿ ಒಣಗಿಸಿರುವ ಬಟ್ಟೆಗಳು... ಅಬ್ಬಬ್ಬಾ ಅಂತ ನಾನು ಆಶ್ಚರ್ಯ ಪಡುತ್ತಿರುವಾಗಲೇ, ಯಾರೋ ಸಿಬ್ಬಂದಿ ಹಿಂದಿನಿಂದ ಕೂಗುತ್ತ ಬಂದರು: “ರೀ ಯಾರ್ರೀ ನೀವು? ಯಾರ್ರೀ ನಿಮ್ಮನ್ನ ಇಲ್ಲಿಗೆ ಬರೋಕೆ ಬಿಟ್ಟಿದ್ದು? ಟೆರೇಸಿಗೆ ಯಾರಿಗೂ ಎಂಟ್ರೀನೇ ಇಲ್ಲ, ಹ್ಯಾಗ್ರೀ ಬಂದ್ರಿ?” ಅಂತ ಬೈಯುತ್ತ, ನನ್ನ ಕೈ ಹಿಡಿದು ಲಿಫ್ಟಿನ ಬಳಿಗೆ ಕರೆದೊಯ್ದ. ಅಂದು ಭಾನುವಾರವಾದ್ದರಿಂದ, ನಾನು ಹೋದ ಸಮಯದಲ್ಲಿ ಅಲ್ಲಿ ಸೆಕ್ಯುರಿಟಿಯವರಾಗಲೀ ಬೇರೆ ಕೆಲಸದವರಾಗಲೀ ಯಾರೂ ಇರಲಿಲ್ಲವಾದ್ದರಿಂದ, ಅದು ಹೇಗೋ ನಾನು ತಿಳಿಯದೇ ಬೆಂಗಳೂರಿನ ಅಂದಿನ ಅತಿ ಎತ್ತರದ ಕಟ್ಟಡದ ಟೆರೇಸಿಗೆ ಬಂದುಬಿಟ್ಟಿದ್ದೆ. ಹಾಗೆ ಬರುವಂತಿಲ್ಲ ಅಂತ ನನಗೆ ಗೊತ್ತೂ ಇರಲಿಲ್ಲ. ಆದರೆ ಅಂದು ಆ ಟೆರೇಸಿನ ಮೇಲಿಂದ ನೋಡಿದ ಆ ದೃಶ್ಯ ಮಾತ್ರ ಎಂದೂ ಮರೆಯುವುದಿಲ್ಲ.

ಬೆಂಗಳೂರಿನಲ್ಲೇ ನನ್ನ ಮುಂದಿನ ಬದುಕು ಎಂಬುದು ನಿಶ್ಚಯವಾದಮೇಲೆ ನಾನೂ ಒಂದು ಬಾಡಿಗೆ ಮನೆ ಹುಡುಕುವುದು ಅನಿವಾರ್ಯವಾಯಿತು. ಬ್ಯಾಚುಲರುಗಳು ದುಬಾರಿ ಬಾಡಿಗೆಯ ದೊಡ್ಡ ಮನೆಗೆ ಹೋಗಲಾದೀತೇ? ಸಣ್ಣ ರೂಮೊಂದನ್ನು ಹುಡುಕತೊಡಗಿದೆ. ಕಿಷ್ಕಿಂದೆಯಂತಹ ನಗರದ ಲಕ್ಷೋಪಲಕ್ಷ ಮನೆಗಳಲ್ಲಿ ನನಗೊಂದು ಕೋಣೆ ಸಿಗುವುದು ಕಷ್ಟವಾಗಲಿಲ್ಲ. ಈ ನಗರದಲ್ಲಿ ಹೆಂಚಿನ ಮನೆಗಳೇ ಇಲ್ಲವೆಂದೆನಷ್ಟೇ? ಇಂತಹ ಮನೆಗಳಲ್ಲಿ ಟೆರೇಸಿನ ಮೇಲೆ ನೀರಿನ ಟ್ಯಾಂಕು ಇಡಲು ಸ್ವಲ್ಪ ಎತ್ತರದ ಕಟ್ಟಣೆಯನ್ನು ಕಟ್ಟುತ್ತಾರೆ. ಅಂತಹ ಕಟ್ಟಣೆಯನ್ನೇ ಕೆಲವರು ಸಣ್ಣ ರೂಮಾಗಿ ಪರಿವರ್ತಿಸಿ ನನ್ನಂತಹ ಅಬ್ಬೇಪಾರಿ ಬ್ಯಾಚುಲರುಗಳಿಗೆ ಬಾಡಿಗೆಗೆ ಕೊಟ್ಟುಬಿಡುವರು. ಅಂತಹುದೊಂದು ರೂಮು ನನಗಾಗಿ ಬಾಗಿಲು ತೆರೆದು ಸ್ವಾಗತಿಸಿತು. ನಾಲ್ಕನೇ ಮಹಡಿಯಲ್ಲಿದ್ದ ಆ ರೂಮು ನಾಲ್ಕು ಜನ ಬಂದರೆ ಹಿಡಿಸುವಂತಿರಲಿಲ್ಲವಾದರೂ ಎದುರಿಗೆ ವಿಶಾಲವಾದ ಟೆರೇಸು ಇದ್ದುದರಿಂದ, ನಾನು ರೂಮಿಗಷ್ಟೇ ಬಾಡಿಗೆ ಕೊಡುವುದಾದರೂ ಇಡೀ ಟೆರೇಸನ್ನು ಬಳಸಿಕೊಳ್ಳುವ ಸ್ವಾತಂತ್ರ್ಯ ಸಿಕ್ಕಿತು. ಈ ಟೆರೇಸಿನಿಂದ ಮಹಾನಗರದ ಸೌಂದರ್ಯವನ್ನು ನೋಡುವುದು ಅಂದಿನಿಂದ ನಿತ್ಯಸುಖವಾಯಿತು.

ಕೆಳಗಿನ ಮೂರು ಮಹಡಿಗಳಲ್ಲಿದ್ದ ಮನೆಗಳ ಸಂಸಾರಗಳ ಚೂರುಪಾರನ್ನು ಓರೆಗಣ್ಣಲ್ಲಿ ಕಿಟಕಿಯಿಂದ ನೋಡುತ್ತ, ನಾನ್ಯಾವಾಗ ಹೀಗಾಗುವುದೋ ಎಂದುಕೊಳ್ಳುತ್ತ, ಮೆಟ್ಟಿಲು ಹತ್ತಿ ಮೇಲೆ ಬಂದುಬಿಟ್ಟರೆ ಸಮತಲದೊಂದು ಸ್ವರ್ಗ ನನ್ನನ್ನೇ ಕಾಯುತ್ತಿರುತ್ತಿತ್ತು. ರೂಮಿನೊಳಗಿನ ಕೆಲಸಗಳನ್ನು ಮುಗಿಸಿದರೆ ಉಳಿದ ಸಮಯವನ್ನೆಲ್ಲ ಟೆರೇಸಿನಲ್ಲೇ ಕಳೆಯಬಹುದು. ಮೂಲೆಯಲ್ಲಿರುವ ಪಾಟುಗಳಲ್ಲಿ ನಳನಳಿಸುತ್ತಿರುವ ಒಂದಷ್ಟು ಗಿಡಗಳು, ಅಡ್ಡಾದಿಡ್ಡಿ ಎಳೆದ ತಂತಿಗಳಲ್ಲಿ ಒಣಗುತ್ತಿರುವ ಕೆಳಗಿನ ಮನೆಗಳವರ ಬಟ್ಟೆಗಳು, ಅಲ್ಲಲ್ಲಿ ಪ್ಯಾರಾಪಿಟ್ಟಿಗೆ ಬಡಿದಿದ್ದ ಡಿಶ್ಶುಗಳು, ಅಷ್ಟೆತ್ತರಕ್ಕೆ ಬೆಳೆದಿದ್ದ ಪಕ್ಕದ ಮನೆಯ ತೆಂಗಿನ ಮರದ ತಲೆ-ಗಳೆಲ್ಲ ಆ ಟೆರೇಸಿನ ಭಾಗವೇ ಆಗಿದ್ದವು. ಟೆರೇಸಿನ ಮೂಲೆಗೆ ನಿಂತು ಸುಂಯ್ಯನೆ ಬೀಸುವ ಗಾಳಿಗೆ ಮೈಯೊಡ್ಡಿ ಕೈ ಬಿಚ್ಚಿ ಕಣ್ಮುಚ್ಚಿ ನಿಂತರೆ ನಾನೇ ಟೈಟಾನಿಕ್ ಹೀರೋ ಆದಂತೆ, ಇಡೀ ಮನೆ ಹಡಗಿನಂತೆ ಚಲಿಸುತ್ತಿರುವಂತೆ ಭ್ರಮೆಯಾಗುತ್ತಿತ್ತು. ಕೇಟ್ ವಿನ್ಸ್‌ಲೆಟ್ ಒಬ್ಬಳು ಬಾಕಿಯಿದ್ದಳು ಅಷ್ಟೇ.

ಈ ಟೆರೇಸಿನ ಅಕ್ಕಪಕ್ಕದ ಮನೆಗಳು ಆಗೀಗ ತಮ್ಮ ಕಿಟಕಿ ತೆರೆದು ತಮ್ಮೊಡಲ ಸಂಸಾರದ ಪ್ರದರ್ಶನ ಮಾಡಿಸುತ್ತಿದ್ದವು. ಯಾರದೋ ಅಡುಗೆಮನೆಯೊಳಗೆ ತಯಾರಾಗುತ್ತಿರುವ ಬಿಸಿಬಿಸಿ ರೊಟ್ಟಿ, ಯಾರದೋ ಮನೆಯೊಳಗಿನ ದೊಡ್ಡ ಟಿವಿಯಲ್ಲಿ ಪ್ರದರ್ಶಿತವಾಗುತ್ತಿರುವ ಧಾರಾವಾಹಿ, ಮತ್ಯಾರೋ ಕರ್ಟನ್ ಸರಿಸಿದಾಗ ಕಂಡ ಬೆಡ್‌ರೂಮಿನ ದೃಶ್ಯ, ಇನ್ಯಾರೋ ಬಾತ್‌ರೂಮಿನ ಕಿಟಕಿಯನ್ನು ಸಿಟ್ಟಿನಿಂದ ಧಡ್ಡನೆ ಹಾಕಿಕೊಂಡ ಸದ್ದು ಎಲ್ಲವೂ ಟೆರೇಸಿನಿಂದ ನಿತ್ಯಕಾವ್ಯ. ನಾನು ನೋಡಬೇಕೆಂದು ನೋಡದಿದ್ದರೂ ಅವರುಗಳು ತಪ್ಪು ತಿಳಿದುಕೊಂಡು ಸಿಡಿಮಿಡಿಗೊಳ್ಳುತ್ತಿದ್ದರು.  ಆ ಟೆರೇಸಿನ ತುದಿಗೆ ಹೋಗಿ ಬಗ್ಗಿದರೆ, ನಮ್ಮ ಮನೆಯೆದುರಿನ ರಸ್ತೆಯಲ್ಲಿ ವಾಹನಗಳೂ ತರಕಾರಿ ಮಾರುವವರೂ ಜನಸಾಮಾನ್ಯರೂ ಚಲಿಸುತ್ತಿರುವ ವಿಹಂಗಮ ದೃಶ್ಯ ಕಾಣುತ್ತಿತ್ತು. ದೂರದಲ್ಲಿರುವ ತರಾತುರಿಯ ಮುಖ್ಯರಸ್ತೆಯಲ್ಲಿ ಸಾಗುವ ದೊಡ್ಡ ವಾಹನಗಳೂ, ಬಿ‌ಎಂಟಿಸಿ ಬಸ್ಸುಗಳೂ, ಕಸದ ಲಾರಿಗಳೂ, ಸೈರನ್ ಕೂಗುತ್ತ ಹೋಗುವ ವೇಗದ ಆಂಬುಲೆನ್ಸುಗಳೂ ಕಾಣುತ್ತಿದ್ದವು. ಸದ್ದು ಬಂತೆಂದು ತಲೆಯಿತ್ತಿದರೆ, ಚುಕ್ಕಿಯಂತಹ ವಿಮಾನಗಳು ನನ್ನ ಮೇಲೆ ಪುಷ್ಪವೃಷ್ಟಿಗೈಯುವ ಯಾವ ಕರುಣೆಯನ್ನೂ ತೋರದೇ ತಮ್ಮ ಪಾಡಿಗೆ ತಾವು ಸಾಗುತ್ತಿದ್ದವು.

ರಾತ್ರಿಯಾಯಿತೆಂದರೆ ನಗರವು ದೀಪಾವಳಿಯ ಲಕ್ಷದೀಪೋತ್ಸವಕ್ಕೆ ಹಚ್ಚಿಟ್ಟ ಹಣತೆಗಳಂತಾಗಿಬಿಡುತ್ತಿತ್ತು. ಎಷ್ಟು ಕತ್ತೆತ್ತಿ ನೋಡಿದರೂ ಮುಗಿಯದ ದೀಪಗಳು ಆಕಾಶದ ನಕ್ಷತ್ರಗಳೊಂದಿಗೆ ಪೈಪೋಟಿಗೆ ಬಿದ್ದವಂತೆ ಮಿನುಗುವವು. ಅಕ್ಷಯವಾದ ಈ ಹರಹಿನಲ್ಲಿ ಎಲ್ಲಿ ನನ್ನ ಮನೆ? ಎಲ್ಲಿ ಅವಳ ಮನೆ? ಎಲ್ಲಿ ನನ್ನ ಆಫೀಸು? ಒಂದು ಬೆಳಕಿನ ದಾರ ಹಿಡಿದು, ಸೂಜಿಯಿಂದ ಈ ಚುಕ್ಕಿಗಳನ್ನೆಲ್ಲ ಜೋಡಿಸಿ ಹೊಲಿದುಬಿಟ್ಟರೆ, ದೊಡ್ಡ ಬಲೆಯಂತಾಗುವ ರಚನೆಯಿಂದ ನಗರವನ್ನೇ ಸೆರೆಹಿಡಿದೆತ್ತಿ ಬೇರೆಡೆಗೆ ಒಯ್ಯಬಹುದು ಎಂಬ ಕಲ್ಪನೆ ಬಂದು ರೋಮಾಂಚಿತನಾದೆ. ಆಗಸದಲ್ಲಿ ವಯ್ಯಾರ ಮಾಡುತ್ತ ಚಲಿಸುತ್ತಿದ್ದ ಉಪಗ್ರಹವೊಂದು ನನ್ನ ಕಲ್ಪನೆಗೆ ಭೇಷ್ ಎಂದಿತು.

ಇಂತಹ ಟೆರೇಸುಗಳೇ ನಗರದ ಎಷ್ಟೋ ಪ್ರೇಮಾಂಕುರಗಳಿಗೆ ಹಾಟ್‌ಸ್ಪಾಟುಗಳು. ವೀಡಿಯೋ ಕಾಲ್ಸ್ ಬರುವ ಮೊದಲು, ಈ ಟೆರೇಸಿನಲ್ಲಿ ನಿಂತಿರುವ ಅವನೂ ಆ ಟೆರೇಸಿನಲ್ಲಿ ನಿಂತಿರುವ ಅವಳೂ ಪರಸ್ಪರ ನೋಡಿಕೊಳ್ಳುತ್ತಾ, ತಮ್ತಮ್ಮ ಮೊಬೈಲಿನಲ್ಲಿ ಮಾತಾಡಿಕೊಳ್ಳುತ್ತ, ಕೈಸನ್ನೆ-ಬಾಯ್ಸನ್ನೆಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರೆ, ನಡುವಿನ ಮನೆಗಳೂ ರಸ್ತೆಗಳೂ ಮರಗಳೂ ಕಣ್ಮುಚ್ಚಿಕೊಂಡು ಸಹಕರಿಸುವವು. ಅವಳು ಕಳುಹಿಸಿದ ಫ್ಲೈಯಿಂಗ್ ಕಿಸ್ಸನ್ನು ತೆಂಗಿನ ಮರದ ಗಾಳಿ ಸುರಕ್ಷಿತವಾಗಿ ಅವನಿಗೆ ತಲುಪಿಸುವುದು. ಅಪರೂಪಕ್ಕೆ ಅವನು ಬರೆದ ಪ್ರೇಮಪತ್ರವು ರಾಕೆಟ್ಟಾಗಿ ಸಾಗಿ ಅವಳ ಮನೆಯ ಟೆರೇಸು ತಲುಪುವುದು. ಹೃದಯಗಳ ಭಾಷೆಗೆ ನಗರವು ಎರಡು ಟೆರೇಸುಗಳ ನಡುವೆ ಅದೃಶ್ಯ ಸೇತುವೆಯ ಕಲ್ಪಿಸಿ ಪ್ರೇಮಿಗಳನ್ನು ಪೊರೆಯುವುದು.

ಜಾಗತೀಕರಣ ಜಾಸ್ತಿಯಾದಂತೆ ನಗರದ ಕಟ್ಟಡಗಳ ಎತ್ತರವೂ ಜಾಸ್ತಿಯಾಗತೊಡಗಿದವು. ಒಂದೋ ಎರಡೋ ಇದ್ದ ಗಗನಚುಂಬಿ ಕಟ್ಟಡಗಳು ಈಗ ನಗರದಾದ್ಯಂತ ತಲೆಯೆತ್ತಿ ನಿಂತವು. ಆ ಕಟ್ಟಡಗಳಿಗೆ ಹೊಳೆವ ಗಾಜಿನ ಹೊದಿಕೆಗಳು. ಸೂರ್ಯನ ಬೆಳಕನ್ನು ಪ್ರತಿಫಲಿಸುವ ಈ ತಳುಕಿನ ಗಾಜುಗಳು ತಮ್ಮೊಳಗಿನದೇನನ್ನೂ ತೋರಗೊಡುವುದಿಲ್ಲ. ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸುಗಳಲ್ಲಿ ಮೇಲ್ಮಹಡಿಯ ಮನೆಗಳಿಗೇ ಹೆಚ್ಚಿನ ಬೆಲೆ. ದೀಪಾವಳಿಯ ದಿವಸ ಸಿಡಿಮದ್ದುಗಳ ಚಂದವನ್ನು ನೋಡಲು ಟೆರೇಸಿಗೇ ಬರಬೇಕು. ಆಕಾಶಕ್ಕೆ ನೆಗೆದು ಸಿಡಿದ ರಾಕೆಟ್ಟುಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುವವು. ದೂರದಲ್ಲಿ ಸಾಗುತ್ತಿರುವ ಮೆಟ್ರೋ ರೈಲು ಕಿಟಕಿಕಿಟಕಿಗಳಿಂದ ಬೆಳಕನ್ನು ಸೂಸುತ್ತಾ ತನ್ನದೇ ರೀತಿಯಲ್ಲಿ ಹಬ್ಬವನ್ನಾಚರಿಸುವುದು.

ನಗರದ ರಸ್ತೆಯಲ್ಲಿ ಬೈಕುಗಳೂ, ಕಾರುಗಳೂ, ಬಸ್ಸುಗಳೂ, ಆಟೋಗಳೂ ತಮ್ಮದೇ ವೇಗದಲ್ಲಿ ಓಡುತ್ತಿವೆ. ಇಕ್ಕೆಲದ ಕಟ್ಟಡಗಳ ಟೆರೇಸಿನಲ್ಲಿ ನಿಂತ ಬಿಡುವಿರುವ ಜನ ತಮ್ಮನ್ನು ನೋಡುತ್ತಿದ್ದಾರೆಂಬ ಪರಿವೆಯೇ ಅವಕ್ಕಿಲ್ಲ. ಅವಸರವೇ ಮೈವೆತ್ತಿರುವ ವಾಹನಗಳು ರಸ್ತೆಯಲ್ಲಿ ನಿಲ್ಲುತ್ತಲೇ ಇಲ್ಲ. ಬಿಸಿಲಿದ್ದರೆ ಬೈದುಕೊಂಡೂ, ಮಳೆ ಬಂದರೆ ತೊಯ್ದುಕೊಂಡೂ, ಚಳಿಯಾದರೆ ನಡುಗಿಕೊಂಡೂ ಚಲಿಸುತ್ತಲೇ ಇವೆ. ಹೊಸಹೊಸ ಬಣ್ಣಗಳನ್ನು ಬಳಿದುಕೊಳ್ಳುತ್ತಾ ನಗರ ಬೆಳೆಯುತ್ತಲೇ ಇದೆ. ತಾರಸಿಯ ಮೇಲಿಂದ ವೀಕ್ಷಿಸುತ್ತಿರುವ ಸಾವಿರಾರು ಬೆರಗಿನ ಕಣ್ಣುಗಳಿಂದ ಹೊರಟ ಬೆಳಕು ಸರ್ಚ್‌ಲೈಟಿನಂತೆ ನಗರವನ್ನು ಕಾಯುತ್ತಿದೆ.

['ಉದಯವಾಣಿ' ಪತ್ರಿಕೆಗೆ 50 ವರ್ಷ ತುಂಬಿದ ಸಂಭ್ರಮದಲ್ಲಿ ಹೊರತಂದಿರುವ 'ಸುವರ್ಣ ಸಂಪದ' ವಿಶೇಷಾಂಕದಲ್ಲಿ ಪ್ರಕಟಿತ.]