Monday, May 31, 2010

ಮಾವಿನ್‌ಕಾಯ್ ನೀರ್ಗೊಜ್ಜು ಎಂಬ ಅಮೃತಪಾನವು...

ಸುಖಗಳಲ್ಲಿ ಉತ್ಕೃಷ್ಟವಾದ ಸುಖಕ್ಕೆ ಪರಮಸುಖ ಅಂತಲೂ ರುಚಿಗಳಲ್ಲಿ ಶ್ರೇಷ್ಠವಾದ ರುಚಿಗೆ ಪರಮರುಚಿ ಅಂತಲೂ ಹೆಸರು. ಈ ಪರಮಸುಖ ಎಂಬುದು ಅತ್ಯಂತ ಕಾಸ್ಟ್ಲೀ ಐಟಮ್ ಆಗಿದ್ದು, ಇದನ್ನು ಪಡೆಯಲು ಕಠಿಣ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎಂಬುದು ವಿದಿತ. ಅಂದರೆ ಸಾಮಾನ್ಯ ಮನುಷ್ಯರಾದ ನಮಗೆ ಪರಮಸುಖವನ್ನು ಅನುಭವಿಸುವ ಯೋಗವಿಲ್ಲ ಎಂದಾಯಿತು. ಹಾಗೆಂದಾಗ, ಇದಕ್ಕೊಂದು ಶಾರ್ಟ್‌ಕಟ್ ಇರಬೇಕಲ್ಲವೇ? ತನಗೆ ದುರ್ಗಮವಾದ ಎಲ್ಲವಕ್ಕೂ ಶಾರ್ಟ್‌ಕಟ್ ಕಂಡುಹಿಡಿದಿರುವ ಮನುಷ್ಯ, ಇದಕ್ಕೂ ಒಂದು ಮಾರ್ಗವನ್ನು ಶೋಧಿಸಿದ್ದಾನೆ. ನನ್ನ ಪ್ರಕಾರ, ಪರಮಸುಖವನ್ನು ಪಡೆಯಲಿಕ್ಕಿರುವ ಸರಳವಾದ ಮಾರ್ಗ ಪರಮರುಚಿಯಾದ ಆಹಾರವನ್ನು ಸೇವಿಸುವುದು! ಇನ್ನೂ ನೇರವಾಗಿ ಹೇಳಬೇಕೆಂದರೆ, ಮಾವಿನ್‌ಕಾಯ್ ನೀರ್ಗೊಜ್ಜನ್ನು ನಿಧನಿಧನಿಧಾನವಾಗಿ ಕುಡಿಯುವುದು!

ನಾನೀಗ ಹೇಳುತ್ತಿರುವ ಮಾವಿನಕಾಯಿ ನೀರುಗೊಜ್ಜು ಎಂಬ ಪೇಯವನ್ನು ಇಷ್ಟರೊಳಗೆ ಸೇವಿಸಿಲ್ಲ ಎಂದಾದರೆ ಜಗತ್ತಿನ ಅತಿ ನತದೃಷ್ಟ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಎಳನೀರು, ಕಬ್ಬಿನಹಾಲು, ಕಾಫಿ, ಟೀ, ಜ್ಯೂಸು, ಕೋಕು -ಗಳಂತಹ ಪದಾರ್ಥಗಳನ್ನು ಕುಡಿಯುತ್ತಾ ಮೈಮರೆತಿರುವ ನೀವು, ಭಗವದ್ದರ್ಶನಕ್ಕೊಳಗಾಗಬಹುದಾದ ನೀರ್ಗೊಜ್ಜಿನಂತಹ ಪೇಯದ ರುಚಿಯಿಂದ ವಂಚಿತರಾಗಿದ್ದೀರಿ. ಬಿಯರು, ವಿಸ್ಕಿ, ರಮ್ಮು, ವೈನುಗಳೇ ಮೊದಲಾದ ಮಾದಕ ದ್ರವ್ಯಗಳಿಗೂ ಸಡ್ಡು ಹೊಡೆಯಬಲ್ಲಂತಹ ಕಿಕ್ಕು ನಮ್ಮ ಮಾವಿನಕಾಯಿ ನೀರ್ಗೊಜ್ಜು ಸೇವಿಸುವುದರಿಂದ ಸಿಗುತ್ತದೆ ಎಂದರೆ ನೀವು ನಂಬಲಾರಿರಿ.

ಹಾಗೆ ನೋಡಿದರೆ ಮಾವಿನಕಾಯಿ ನೀರುಗೊಜ್ಜು ಒಂದು ಪೇಯವಲ್ಲ. ಮೂಲತಃ ಇದು ಅನ್ನಕ್ಕೆ ಬೆರೆಸಿಕೊಂಡು ಉಣ್ಣಬೇಕಾದ ಪದಾರ್ಥ. ಬಿರುಬೇಸಗೆಯ ಮಧ್ಯಾಹ್ನಗಳಲ್ಲಿ, ಸಾಂಬಾರು-ಸಾರುಗಳಂತಹ ಬಿಸಿ ಪದಾರ್ಥಗಳನ್ನು ಉಣ್ಣಲು ನಿರಾಕರಿಸುವ ಬಾಯಿಗೆ, ಹಿತವೆನಿಸುವಂತಹ ತಣ್ಣನೆಯ ನೀರು-ನೀರು ಅಡುಗೆ ಇದು. ಚೂರೇ ಅನ್ನವಿದ್ದರೂ ತಟ್ಟೆತುಂಬ ಗೊಜ್ಜು ಹೊಯ್ದುಕೊಂಡು ಸುರಿಯುವುದು ಮಲೆನಾಡ ಮನೆಗಳ ಊಟದ ಸರ್ವೇಸಾಮಾನ್ಯ ದೃಶ್ಯ.

ವಸಂತ ಮಾಸ ಪ್ರಕೃತಿಗೆ ತರುವ ಸಿರಿಗಳಲ್ಲೊಂದು ಚಿಗುರಿದ ಮಾವು ಎನ್ನಬೇಕೋ ಅಥವಾ ಚಿಗುರಿದ ಮಾವಿನ ತರುವಿನ ಸಿರಿಯೇ ವಸಂತ ಮಾಸ ಎನ್ನಬೇಕೋ ಎಂಬ ಗೊಂದಲ ಕವನ ಬರೆಯಲು ಕುಳಿತ ಕವಿಗಳನ್ನು ಅದೆಷ್ಟೋ ವರ್ಷಗಳಿಂದ ಕಾಡುತ್ತ ಬಂದಿದೆ. ಆದರೆ, ಈ ಹಚ್ಚನೆ ಹಸುರಿನ ಮಾಮರದೆಲೆಗಳ ಮರೆಯಲಿ ಜೋತುಕೊಳ್ಳತೊಡಗುವ ಪುಟ್ಟಪುಟ್ಟ ಮಾವಿನ ಮಿಡಿಗಳು ಕೋಗಿಲೆ ಕೂಗಿಗೆ ಹುಳಿ ತುಂಬಿಕೊಳ್ಳುತ್ತಾ ಹಿಗ್ಗಿ ಹಿಗ್ಗಿ ಕಾಯಿಯಾಗುವ ಪರಿಯಿದೆಯಲ್ಲ, ಅದು ಈ ಕವಿಗಳ ಉಪಮೆ-ರೂಪಕ ಅಲಂಕಾರಗಳ ಮೇರೆ ಮೀರಿದ ಅದ್ಭುತ.

ಹೀಗೆ ಬೆಳೆದ ಎರಡು ಮಾವಿನಕಾಗಳನ್ನು ನೀವೀಗ ಕತ್ತರಿಸಿ ತರುತ್ತೀರಿ. ಹುಷಾರು: ಅಲ್ಲೂ ನಿಯಮವಿದೆ. ಮಾವಿನಕಾಯಿಯನ್ನು ನೀವು ತೊಟ್ಟಿನ ಸಮೇತ ಕತ್ತರಿಸಬೇಕು. ಏಕೆಂದರೆ, ಮಾವಿನಕಾಯಿಯ ಪರಿಮಳ ಇರುವುದು ಅದರ ತೊಟ್ಟಿನ ಬುಡದಲ್ಲಿ ಶೇಖರವಾಗಿರುವ ಸೊನೆಯಲ್ಲಿ. ಈ ಸೊನೆಯನ್ನು ನಾವು ಮುಂದೆ ಮಾಡಲಿರುವ ಗೊಜ್ಜಿಗೆ ಬೆರಸಿದರೇನೇ ದೊರೆಯುವುದು ನೀರ್ಗೊಜ್ಜಿನ ನಿಜವಾದ ಸೊಗಸು. ಹೀಗಾಗಿ, ಕೊಯ್ಯುವಾಗ ಮಾವಿನಕಾಯಿಯನ್ನು ಒಂದರ್ಧ ಅಡಿಯಷ್ಟು ತೊಟ್ಟನ್ನು ಬಿಟ್ಟೇ ಕೊಯ್ಯಬೇಕು. ಈಗ, ಕೊಯ್ದು ತಂದ ಮಾವಿನಕಾಯಿಯನ್ನು ಪಾತ್ರೆಯ ಮೇಲೆ ಹಿಡಿದು ತೊಟ್ಟಿನ ಬುಡದಲ್ಲಿ ಮುರಿಯಿರಿ. ಸೊನೆಯಷ್ಟೂ ಪಾತ್ರೆಗೆ ಸುರಿಯಿತಾ? ಈಗ ಮಾವಿನ ಕಾಯಿಯನ್ನು ಸಣ್ಣ ಸಣ್ಣ ಸ್ಲೈಸುಗಳನ್ನಾಗಿ ಮಾಡಿ ಮಿಕ್ಸಿಗೆ ಹಾಕಿ. ಹಾಗೇ ಸ್ವಲ್ಪ ತೆಂಗಿನಕಾಯಿಯನ್ನೂ ತುರಿದು ಹಾಕಿ. ಬೀಸಿ. ಹಸಿಮೆಣಸು ನುರಿಯಿರಿ. ಉಪ್ಪು ಹಾಕಿ. ನೀರು ಬೆರೆಸಿ. ಕೊಬ್ಬರಿ ಎಣ್ಣೆ-ಹಿಂಗು-ಸಾಸಿವೆ ಕಾಳಿನ ಒಗ್ಗರಣೆ ಕೊಡಿ. ಅಷ್ಟೇ: ಅಪರೂಪದ, ಪರಿಮಳಭರಿತ, ಪರಮರುಚಿಯ ನೀರ್ಗೊಜ್ಜು ಇದೀಗ ರೆಡಿ!

ದೇವಾನುದೇವತೆಗಳ ಕಾಲದಿಂದಲೂ ಚಾಲ್ತಿಯಲ್ಲಿರುವ ಈ ಅಡುಗೆ ಮಲೆನಾಡಿನ ಪರಂಪರೆಗಳಲ್ಲಿ ಅತ್ಯುನ್ನತ ಸ್ಥಾನವನ್ನು ಗಳಿಸಿದೆ ಎಂದೆಲ್ಲ ನಾನು ಹೇಳುವುದಿಲ್ಲ. ಹಾಗೆ ಹೇಳಲಿಕ್ಕೆ ನನ್ನ ಬಳಿ ಯಾವುದೇ ಆಧಾರವಿಲ್ಲ. ರಿಸರ್ಚ್ ಮಾಡುವಷ್ಟೆಲ್ಲ ಸಮಯವಿಲ್ಲ. ನಾನು ಹೇಳುವುದಿಷ್ಟೇ: ಈ ನೀರ್ಗೊಜ್ಜನ್ನು ನೀವು ಒಂದು ಬಟ್ಟಲಿನಲ್ಲಿ ಹಾಕಿಕೊಂಡು ಚಕ್ಲುಪಟ್ಟೆ ಹೊಡೆದು ಕುಳಿತುಕೊಳ್ಳಿ. ಕಣ್ಣು ಮುಚ್ಚಿಕೊಳ್ಳಿ. ಚರಾಚರ ವಸ್ತುಗಳಿಂದ ಕೂಡಿದ ಇಹಲೋಕವನ್ನು ಕ್ಷಣಕಾಲ ಮರೆತುಬಿಡಿ. ದೇವರನ್ನು ಕಾಣುವ ಸಮಯ ಸನ್ನಿಹಿತವಾಗುತ್ತಿದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಬಟ್ಟಲನ್ನು ಬಾಯಿಯ ಬಳಿಗೆ ಒಯ್ಯಿರಿ. ಪರಿಮಳವನ್ನು ಆಘ್ರಾಣಿಸಿ. ಬಟ್ಟಲನ್ನು ತುಟಿಗೆ ತಾಗಿಸಿ. ಹಾಗೇ ಒಂದು ಸಿಪ್ ಗುಟುಕರಿಸಿ. ಯೆಸ್ಸ್ಸ್ಸ್!

ಕಾಲ ಹಾಳಾಗಿದೆ, ಮನುಷ್ಯ ಹಾಳಾಗಿದ್ದಾನೆ, ಬದುಕು ಬರಡಾಗಿದೆ, ಸ್ವಾರಸ್ಯವೆಲ್ಲ ಹೊರಟೋಗಿದೆ ...ಇತ್ಯಾದಿ ನಿಮ್ಮ ನಿರಾಶಾವಾದವನ್ನೆಲ್ಲ ಕಳೆದು ಮತ್ತೆ ಬದುಕಿನತ್ತ ಮುಖ ಮಾಡಿಸುವ ಅಮೃತ ಈ ಮಾವಿನಕಾಯಿ ಗೊಜ್ಜು. ಇದು ಹುಳಿಯಿದ್ದಷ್ಟೂ ರುಚಿ, ಖಾರವಿದ್ದಷ್ಟೂ ಬಾಯಿಸೆಳೆತ, ಪರಿಮಳವಿದ್ದಷ್ಟೂ ಮಜಾ ಮತ್ತು ಹೇರಳವಾಗಿದ್ದಷ್ಟೂ ಖರ್ಚು! ಮಾವಿನಕಾಯಿ ನೀರ್ಗೊಜ್ಜನ್ನು ಗುಟುಕು-ಗುಟುಕಾಗಿ ಕುಡಿಯಬೇಕು... ಒಂದು ಬಟ್ಟಲು ಮುಗಿಯುತ್ತಿದ್ದಂತೆ ಮತ್ತೊಂದು ಬಟ್ಟಲು. ಇದರ ಗಮ್ಮತ್ತೇ ಅಂಥದು: ಖಾರವೆನಿಸಿದರೂ ಬಿಡಲಾಗದು, ಹುಳಿಯೆನಿಸಿದರೂ ಮುಖ ಹಿಂಡಲಾಗದು!

ಹುಳಿಯಿರುವ ಯಾವುದೇ ಮಾವಿನಕಾಯಿಯಿಂದಲಾದರೂ ನೀರ್ಗೊಜ್ಜನ್ನು ಮಾಡಬಹುದಾದರೂ ಅಪ್ಪೆ, ಕಂಚಪ್ಪೆ, ಜೀರಿಗೆಗಳಂತಹ ಜಾತಿಯ ಕಾಯಿಗಳು ಹೆಚ್ಚು ಪ್ರಸಿದ್ಧ. ಅವು ತಮ್ಮ ವಿಶಿಷ್ಟ ರುಚಿ ಮತ್ತು ಪರಿಮಳವನ್ನು ಗೊಜ್ಜಿಗೆ ನೀಡುವುದರಿಂದ ಪೇಯದ ಸೊಗಡು ಹೆಚ್ಚುತ್ತದೆ.

ಮಾವಿನಕಾಯಿ ನೀರ್ಗೊಜ್ಜು ಕುಡಿಯಲು ಸ್ವಲ್ಪ ಮಟ್ಟಿನ ರಸಿಕತೆಯೂ ಬೇಕಾಗುತ್ತದೆ ಎಂದರೆ ತಪ್ಪಾಗಲಾರದು. ನಾನು ನೋಡಿದ ಹಾಗೆ, ಸಾಮಾನ್ಯವಾಗಿ ಹುಳಿಯನ್ನು ದ್ವೇಷಿಸುವ ಗಂಡಸರೇ ಮಾವಿನಕಾಯಿ ನೀರ್ಗೊಜ್ಜನ್ನು ಕುಡಿಯುವುದು ಹೆಚ್ಚು! ಹೆಂಗಸರು ಅದೇಕೋ ಇದನ್ನು ಅನ್ನಕ್ಕೆ ಬೆರೆಸಿ ಉಣ್ಣುವುದನ್ನೇ ಇಷ್ಟ ಪಡುತ್ತಾರೆ. ಆದರೆ ಗಂಡಸರು ಬಟ್ಟಲಿಗೆ ಹಾಕಿಕೊಂಡು ಕುಡಿಯುತ್ತಾರೆ. ಅದು ಸರಿಯೇ: ನೀರ್ಗೊಜ್ಜನ್ನು ಅನ್ನಕ್ಕೆ ಬೆರೆಸಿ ಉಣ್ಣುವುದರಲ್ಲಿ ಅಂತಹ ಮಜಾ ಏನೂ ಇಲ್ಲ. ಆದರೆ ಅದನ್ನು ಕುಡಿಯುವುದುದಿದೆಯಲ್ಲ, ಆಹ್! ಬ್ರಹ್ಮಾನಂದ ಓಂಕಾರ, ಆತ್ಮಾನಂದ ಸಾಕಾರ!

ಮಲೆನಾಡು ಹವ್ಯಕರ ಮದುವೆಮನೆ ಊಟಗಳಲ್ಲಿ ನೀರ್ಗೊಜ್ಜು ಒಂದು ಖಾಯಂ ಐಟಮ್ಮು. ಅದು ಮಾವಿನಕಾಯಿಯ ಸೀಸನ್ ಆಗಿರಬೇಕಷ್ಟೇ: ತಿಳಿಸಾರು, ಸಾಂಬಾರು, ಚಿತ್ರಾನ್ನಗಳು ಆದಮೇಲೆ ಬರುವ ಪದಾರ್ಥವೇ ನೀರ್ಗೊಜ್ಜು. ಈ ನೀರ್ಗೊಜ್ಜನ್ನು ದೊನ್ನೆಗೆ ಹಾಕಿಸಿಕೊಂಡು ಕುಡಿಯಬೇಕು. ನೀರ್ಗೊಜ್ಜನ್ನು ದೊನ್ನೆಯಲ್ಲಿ ಕುಡಿಯುವ ಅನುಭವವೇ ಬೇರೆ. ಹೊಂಬಾಳೆಯಿಂದ ಮಾಡಿದ ಈ ದೊನ್ನೆ ಅದಾಗಲೇ ತಿಳಿಸಾರು ಹಾಕಿಸಿಕೊಂಡಿದ್ದ ದೊನ್ನೆ. ಈಗ ಅದನ್ನೇ ಖಾಲಿಮಾಡಿ ನೀರ್ಗೊಜ್ಜು ತುಂಬಿಸಿಕೊಳ್ಳುವುದು. ನೀರ್ಗೊಜ್ಜಿನ ನಂತರ ಬರುವ ಖೀರಿಗೂ ಇದೇ ದೊನ್ನೆ! ನೀರ್ಗೊಜ್ಜು ಬಡಿಸುವವರು ಮತ್ತೊಂದು ರೌಂಡು ಬರಲೇಬೇಕು. ಅದಿಲ್ಲದಿದ್ದರೆ ಪಂಕ್ತಿಯಲ್ಲಿರುವ ಎಲ್ಲರೂ ಅವರಿಗೆ ಶಾಪ ಹಾಕುವುದು ಖಾಯಂ. ಉರಿಬಿಸಿಲ ದಗೆಯಲ್ಲಿ, ಚಪ್ಪರದ ಕೆಳಗೋ ಶಾಮಿಯಾನಾದ ಕೆಳಗೋ ಬೆವರುತ್ತ ಊಟಕ್ಕೆ ಕೂತಿರುವವರಿಗೆ ಈ ನೀರ್ಗೊಜ್ಜು ಕೊಡುವ ರಿಲೀಫು -ಅದು ಶಬ್ದಗಳಿಗೆ ಮೀರಿದ್ದು. ಗ್ರಂಥಗಳೇನಾದರೂ ಹೊಮ್ಮುವುದಿದ್ದರೆ ಆಮೇಲೇ ಅದು ಹೊಮ್ಮುವುದು! ಮತ್ತೀ ಬಡಿಸುತ್ತಿರುವವರಿದ್ದಾರಲ್ಲಾ, ಇವರೂ ಈಗಾಗಲೇ ಕನಿಷ್ಟ ಎರಡು ದೊನ್ನೆ ನೀರ್ಗೊಜ್ಜು ಕುಡಿದಿರುತ್ತಾರೆಂಬುದನ್ನು ನೀವು ಗಮನಿಸಬೇಕು. ಅಡುಗೆಮನೆಯಲ್ಲಿ ನೀರ್ಗೊಜ್ಜಿನ ದೊಡ್ಡ ಕೌಳಿಗೆಗೇ ‘ಡೈರೆಕ್ಟ್ ಅಕ್ಸೆಸ್’ ಇರುವ ಇವರು, ತಾವು ಮೂರನೆಯದೋ-ನಾಲ್ಕನೆಯದೋ ಪಂಕ್ತಿಗೆ ಕೂರುವಷ್ಟರಲ್ಲಿ ಖಾಲಿಯಾಗಿಬಿಟ್ಟಿದ್ದರೆ ಎಂಬ ಮುಂಜಾಗ್ರತೆಯಿಂದ, ಅಲ್ಲೇ ಇರುವ ದೊನ್ನೆಗಳಲ್ಲಿ ಗೊಜ್ಜನ್ನು ಬಗ್ಗಿಸಿ ಬಗ್ಗಿಸಿಕೊಂಡು ಕುಡಿದು ಬಾಯಿ ಚಪ್ಪರಿಸಿಕೊಂಡಿರುತ್ತಾರೆ.

ನೀರ್ಗೊಜ್ಜು ಕುಡಿದುಬಿಟ್ಟರೆ ಅಷ್ಟಕ್ಕೇ ಮುಗಿಯಲಿಲ್ಲ; ಕೈ ತೊಳೆದು ಬಂದು ಸಣ್ಣದೊಂದು ಕವಳ ಹಾಕಿ ಗೋಡೆಗೊರಗುತ್ತೀರಿ ನೋಡಿ, ಆಮೇಲೆ ಇರುವುದು ಮಜಾ! ತೂಕಡಿಸಿ ತೂಕಡಿಸಿ ಬರುವ ಜೋಂಪು ನಿಮ್ಮನ್ನು ನಿದ್ರಿಸದೇ ಇರಲು ಸಾಧ್ಯವೇ ಇಲ್ಲವೆಂಬಂತೆ ಮಾಡುತ್ತದೆ. ಅದಕ್ಕೇ ನಾನು ಮೊದಲೇ ಹೇಳಿದ್ದು: ಯಾವ ಮಾದಕ ದ್ರವ್ಯಕ್ಕಿಂತಲೂ ಕಮ್ಮಿಯೇನಲ್ಲ ಇದು ಎಂದು. ಮಾವಿನಕಾಯಿ ನೀರ್ಗೊಜ್ಜು ಕುಡಿದಮೇಲೆ ಮಲಗಲೇಬೇಕು. ಅದಕ್ಕೆ ತಯಾರಾಗಿಯೇ ನೀವು ಇದನ್ನು ಸೇವಿಸಬೇಕು. ಊಟದ ನಂತರ ಯಾವುದೋ ಕೆಲಸ ಇಟ್ಟುಕೊಂಡು ಇದನ್ನು ಕುಡಿಯುವುದು ತರವಲ್ಲ. ಮಲೆನಾಡ ಹವ್ಯಕರು ಮಧ್ಯಾಹ್ನವೂ ಸೊಂಪು ನಿದ್ರೆ ತೆಗೆಯುವುದಕ್ಕೆ ಬರೀ ಕೆಲಸವಿಲ್ಲದಿರುವ - ಸೋಮಾರಿತನವಷ್ಟೇ ಕಾರಣವಲ್ಲ; ಅದರ ಹಿಂದೆ ಮಾವಿನ್‌ಕಾಯ್ ನೀರ್ಗೊಜ್ಜಿನ ಕೈವಾಡವೂ ಇದೆ ಎಂಬುದು ಕೆಲವರಿಗಷ್ಟೇ ತಿಳಿದ ಗುಟ್ಟು.

ಒಮ್ಮೆ ಈ ಗೊಜ್ಜಿನ ಪಾನದಲ್ಲಿರುವ ಸ್ವರ್ಗಸುಖಕ್ಕೆ ಬಲಿಯಾದಿರೋ, ನೀವಿದರ ಫ್ಯಾನ್ ಆದಿರಿ ಅಂತಲೇ ಅರ್ಥ. ಇನ್ನು, ತರಕಾರಿ ಮಾರ್ಕೆಟ್ಟಿಗೆ ಹೋಗಿ ಮಾವಿನಕಾಯಿ ಕೊಂಡುತಂದು ಸ್ವತಃ ಗೊಜ್ಜು ತಯಾರಿಸುತ್ತೀರೋ ಅಥವಾ ಅಧಿಕಮಾಸ ಕಳೆದು ಇದೀಗ ಶುರುವಾಗಿರುವ ಸಾಲುಸಾಲು ಮಲೆನಾಡ ಮದುವೆಮನೆಗಳಿಗೆ ಲಗ್ಗೆ ಇಡುತ್ತೀರೋ, ನಿಮಗೆ ಬಿಟ್ಟಿದ್ದು.


[ನೋಟ್: ವಿಜಯ ಕರ್ನಾಟಕ ಸಾಪ್ತಾಹಿಕ ಲವಲವಿಕೆಯಲ್ಲಿ ಪ್ರಕಟಿತ. ಬರೆಯುವ ಭರದಲ್ಲಿ ಮಾವಿನಮರ ಚಿಗುರಿದ ಮೇಲೆ ಕಾಯಿ ಬಿಡುತ್ತೆ ಅಂತೇನೋ ಆಗಿಬಿಟ್ಟಿತ್ತು; ಅದನ್ನಿಲ್ಲಿ ತಿದ್ದಿದ್ದೇನೆ. ಮತ್ತೆ ಕೆಲವರು "ತಮ್ಮ ಕಡೆ ನೀರ್ಗೊಜ್ಜಿಗೆ 'ಅಪ್ಪೆಹುಳಿ' ಅಂತ ಕರೀತಾರೆ, 'ಮಾವಿನ್‌ಕಾಯ್ ಟ್ರೊಂಯ್' ಅಂತ ಕರೀತಾರೆ, ನೀವದನ್ನ ಮೆನ್ಷನ್ನೇ ಮಾಡಿಲ್ಲ, ನಮ್ಗೆ ಸಖತ್ ಬೇಜಾರಾಯ್ತು" ಅಂತ ಆಕ್ಷೇಪವೆತ್ತಿದ್ದಾರೆ. ಅವರಿಗೆ ನಮ್ಮನೆಗೆ ಬಂದ್ರೆ ಒಂದೊಂದ್ ಲೋಟ ಗೊಜ್ಜು ಕುಡಿಸುವುದಾಗಿ ಹೇಳಿ ಸಮಾಧಾನ ಮಾಡಿದ್ದೇನೆ. ಥ್ಯಾಂಕ್ಯೂ. ;) ]

Thursday, May 13, 2010

ಪ್ರಶ್ನೆ -೨

ಮ್ಯಾಂಗೋ ಫ್ಲೇವರಿನ ಐಸ್‌ಕ್ರೀಂ
ತಿಂದು ಮಲಗಿದ ರಾತ್ರಿ
ಕನಸಲ್ಲಿ ರಸಪುರಿ ಹಣ್ಣು
ತೂಗುತ್ತಿರುವ ಮಾವಿನ ಮರ ಕಂಡಿತ್ತು,
ಹಸುರೆಲೆಗಳ ನಡುವೆ ಕೂತಿದ್ದ ಕಪ್ಪು
ಕೋಗಿಲೆ ಕೂಗಿದ್ದಕ್ಕೆ ಎಚ್ಚರಾಯ್ತು
ಎಂದು ನಾ ಹೇಳಿದರೆ ನೀನು ಕ್ಲೀಷೆಯೆಂದು
ಬದಿಗೆ ಸರಿಸಿಬಿಡಬೇಡ-
ನನ್ನ ಸತ್ಯ ನನಗೆ
ಯಾವ ಕನಸೂ ಸುಳ್ಳಲ್ಲ
ಎಲ್ಲ ವಿಸ್ಮಯಗಳಿಗೂ ಅರ್ಥ ಬೇಕೆಂದು
ಹಾತೊರೆಯುವುದಾದರೂ ಏಕೆ?
ಉತ್ತರ ಸಿಕ್ಕಮೇಲೆ ಪ್ರಶ್ನೆಗೆ ಬೆಲೆಯೆಲ್ಲಿ?

ಕೇಳದೇ ಉಳಿದ ಪ್ರಶ್ನೆಗಳನ್ನು
ಕೆಡದಂತೆ ಇಡಲು ಹಾಟ್‌ಬಾಕ್ಸು,
ಫ್ಲಾಸ್ಕು, ಫ್ರಿಜ್ಜು -ಏನೂ ಬೇಕಿಲ್ಲ;
ಮನದ ಮೂಲೆಗೆ ಬೀಸಾಡಿದರೂ ಸಾಕು
ಹಾಗೇ ಇರುತ್ತವೆ, ಪಾಪ.

ರಾತ್ರಿಯೆಲ್ಲ ಕೂತು ಉರು
ಹೊಡೆದುಕೊಂಡು ಬಂದ ಭಾಷಣ
ವೇದಿಕೆ ಹತ್ತುವವರೆಗೂ ಸರಿಯಾಗಿಯೇ ನೆನಪಿತ್ತು
ಗಂಟಲೊಣಗಿದ್ದು, ತಡವರಿಸಿದ್ದು
ಆಮೇಲೇ.
ಅತಿಥಿಗಳ ಬಗ್ಗೆ ಸಭಾಸದರಿಗೂ ಅನುಕಂಪ
ಇದೂ ಕನಸಾಗಿದ್ದರೆ ಅಂತ ಎಷ್ಟೇ ಬಯಸಿದರೂ

ಕೋಗಿಲೆ ಕೂಗುವುದೇ ಇಲ್ಲ.

Friday, May 07, 2010

ಪ್ರಶ್ನೆ -೧

ಕೇಳಬೇಕಾದ ಪ್ರಶ್ನೆಗಳನ್ನು
ಕೇಳಬೇಕಾದಾಗಲೇ ಕೇಳಬೇಕು
ಕಳುಹಿಸಬೇಕಾದ ಪತ್ರಗಳನ್ನು
ಕಳುಹಿಸಬೇಕಾದಾಗಲೇ ಕ....

ಶುಭ್ರ ಬಿಳಿ ಹಾಳೆಯಲ್ಲಿ
ಕಡುಗಪ್ಪು ಅಕ್ಷರಗಳಲ್ಲಿ ಬರೆದ ಪ್ರಶ್ನೆಗಳನ್ನು
ತುಸುಹಳದಿ ಬಣ್ಣದ ಕವರಿನೊಳಗೆ
ಮಡಿಚಿ ಮಡಿಚಿ ಹಾಕಿ
ಕೆಂಪು ಬಣ್ಣದ ಅಂಚೆಪೆಟ್ಟಿಗೆಯೊಳಗೆ
ಬೀಳಿಸಿದರೆ ಟಣ್ ಎಂಬ ಶಬ್ದ.
ಏಕೆ ಕೈ ತಡೆಯಬೇಕು?

ನೋಡಲ್ಲಿ, ನೀನು ನಂಬಬೇಕೆಂದಿಲ್ಲ-
ಕುರೂಪಿ ಕಾಗೆ ಹೇಗೆ ಕ್ರಾಗುಟ್ಟುತ್ತಿದೆ
ಅಪಶಕುನ! ಅಪಶಕುನ!!

ನಿಜಕ್ಕೂ ಬರೆದೆನಾ ಪತ್ರ?
ಇಲ್ಲ, ಕೈ ತಡೆದುದು ಪತ್ರ ಹಾಕುವಾಗಲ್ಲ;
ಬರೆಯುವಾಗಲೇ!
ಮತಿ ಹೇಳುತ್ತದೆ:
ಪ್ರತಿ ಮಾತನ್ನೂ ಯೋಚಿಸಿ ಆಡುವುದನ್ನು
ರೂಢಿಸಿಕೊಂಡ ದಿನದಿಂದಲೇ ಆದದ್ದು
ಈ ಹಿನ್ನಡೆ.
ನುಗ್ಗಿಬಿಟ್ಟಿದ್ದರೆ ಅಂದೇ,
ಇನ್ನೆಲ್ಲೋ ಇರುತ್ತಿದ್ದೆ.
ಇದೇ ನಿನ್ನ ಮಿತಿ.

ಇದ್ದೀತೇನೋ, ಸ್ಮೃತಿಯ ಕಡಲಲಿ
ಮುಳುಗಿದವ ಕ್ಷಮಾದಾಯಿಯ ಮುಂದೆ
ಸದಾ ಸ್ವಯಂ ಅಭ್ಯರ್ಥಿ;
ಪ್ರಶ್ನೆ ಪ್ರಚ್ಛನ್ನ.