Wednesday, January 13, 2010

ಮಲ್ಲೇಶ್ವರಂ -ಭಾಗ ೧

ನನ್ನ ಅತ್ತಿಗೆ ಭಾಗ್ಯ ಮೊನ್ನೆ ಕ್ರಿಸ್‌ಮಸ್ ರಜೆಗೆಂದು ಗಂಡ-ಮಗನೊಂದಿಗೆ ಬೆಂಗಳೂರಿಗೆ ಬಂದವಳು ನನ್ನ ಮನೆಯಲ್ಲೇ ಉಳಿದುಕೊಂಡಿದ್ದಳು. ಅವರಿಗೆ ಸುಮಾರೆಲ್ಲ ಬೆಂಗಳೂರು ಸುತ್ತಿಸಿ, ಮೂರು ದಿನದ ನಂತರ ವಾಪಸು ಕಳುಹಿಸಿಕೊಡಲು ಮಲ್ಲೇಶ್ವರಂ ರೈಲ್ವೇ ಸ್ಟೇಶನ್ನಿಗೆ ಬಂದಿದ್ದೆ ರಾತ್ರಿ. ರೈಲು ಬರುವುದು ತಡವಿತ್ತು, ಹಾಗೇ ಅತ್ತಿಗೆಯ ಬಳಿ ಹೇಳಿದೆ: "ಈ ಮಲ್ಲೇಶ್ವರಂ ರೈಲ್ವೇ ಸ್ಟೇಶನ್ನಿಗೂ ನಂಗೂ ಸುಮಾರೆಲ್ಲ ನೆನಪಿನ ತಳುಕು ಇದೆ.. ನಾನು ಪೀಜಿಯಲ್ಲಿ ಇರ್ಬೇಕಾದ್ರೆ ಪ್ರತಿ ರಾತ್ರಿ ಇಲ್ಲಿಗೆ ಬಂದು ಒಬ್ಬನೇ ಕೂತಿರ್ತಿದ್ದೆ. ಶರವೇಗದಲ್ಲಿ ಹಾಯೋ ಎಕ್ಸ್‌ಪ್ರೆಸ್ ಟ್ರೇನುಗಳು, ಅವುಗಳ ಕಿಟಕಿಯಿಂದ ಕಾಣ್ತಿದ್ದ ತರಹೇವಾರಿ ಜನಜೀವನದ ಚಿತ್ರಗಳನ್ನ ನೋಡುತ್ತಿರುತ್ತಿದ್ದೆ. ರೈಲಿನಿಂದ ಇಳೀತಿದ್ದ ವಿವಿಧ ಪೋಷಾಕಿನ ಜನಗಳನ್ನ ಸುಮ್ಮನೆ ನೋಡ್ತಿರ್ತಿದ್ದೆ. ಒಂಥರಾ ಮಜಾ ಇರೋದು.." ಹಾಗೆ ಹೇಳುತ್ತಿರುವಾಗಲೇ ನನಗನ್ನಿಸಿತು, ಮಲ್ಲೇಶ್ವರಮ್ಮಿನಲ್ಲಿ ನನಗೆ ರೈಲ್ವೇ ಸ್ಟೇಶನ್ ಅಷ್ಟೇ ಅಲ್ಲ; ಇನ್ನೂ ಹಲವು ಅಚ್ಚಳಿಯದ ನೆನಪುಗಳಿವೆ ಅಂತ.. ಅವನ್ನೆಲ್ಲ ಯಾಕೋ ಬರೆಯಬೇಕು ಅನ್ನಿಸಿತು.

* * *

ಮಲ್ಲೇಶ್ವರಂ ಎಂದರೆ ಕೆಲವರಿಗೆ ಸಂಪಿಗೆ ರಸ್ತೆ, ಕೆಲವರಿಗೆ ಸರ್ಕಲ್, ಕೆಲವರಿಗೆ ಸ್ಯಾಂಕಿ ಟ್ಯಾಂಕ್, ಕೆಲವರಿಗೆ ಹಳ್ಳಿಮನೆ-ಜನತಾ-ಸಿಟಿಆರ್. ಇನ್ನು ನನ್ನಂಥ ಕೆಲವರಿಗೆ, ಮಲ್ಲೇಶ್ವರಂ ಎಂದರೆ ಏಯ್ಥ್ ಕ್ರಾಸ್!

ಮಲ್ಲೇಶ್ವರಂ ಬಳಿ ಬಾಡಿಗೆ ಮನೆ ಮಾಡಿಕೊಂಡಿರುವುದಕ್ಕೆ ಸೌತ್ ಬೆಂಗಳೂರಿನಲ್ಲಿರುವ ನನ್ನ ಗೆಳೆಯರನೇಕರು "ಅಲ್ಲೇನು ರಾಗಿ ಬೆಳೀತೀಯೇನಯ್ಯಾ? ಏನಿದೆ ಅಲ್ಲಿ? ಈ ಕಡೆ ಬಾ. ಗಾಂಧಿ ಬಜಾರು, ಬ್ಯೂಗಲ್ ರಾಕು, ಲಾಲ್‌ಭಾಗು, ರಂಗಶಂಕರ, ಅಂಕಿತ ಪುಸ್ತಕ, ಜಯನಗರ ಫೋರ್ತ್ ಬ್ಲಾಕು... ಏನ್ ಬೇಕು ನಿಂಗೆ? ಕಲಾಕ್ಷೇತ್ರ-ಟೌನ್‌ಹಾಲುಗಳಿಗೂ ಇಲ್ಲಿಂದ ಹತ್ತಿರ. ಆ ಹಾಳು ಮಲ್ಲೇಶ್ವರಮ್ಮಲ್ಲಿ ಏನಿದೆ?" ಅಂತ ಬೈಯುತ್ತಾರೆ. ಅವರ ಪ್ರಕಾರ ಯೋಚಿಸಿದರೆ ಅದು ಸತ್ಯವೂ ಹೌದು. ಇಷ್ಟು ವಿಶಾಲವಾಗಿರುವ ಬೆಂಗಳೂರಿನಲ್ಲಿ, ಸಾಹಿತ್ಯ-ಸಂಸ್ಕೃತಿಗಳ ಪರಿಮಳ ಹೆಚ್ಚಿಗೆ ಇರುವುದು ಸೌತ್ ಬೆಂಗಳೂರಿನಲ್ಲೇ. ಅತಿ ಹೆಚ್ಚು ಪುಸ್ತಕ ಬಿಡುಗಡೆ ಸಮಾರಂಭಗಳು ಆಗುವುದು ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯ ಐಐಡಬ್ಲೂಸಿ ಸಭಾಂಗಣದಲ್ಲಿ ಅಥವಾ ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಅಥವಾ ಕಾರ್ಪೋರೇಶನ್ ಸರ್ಕಲ್ ಬಳಿಯ ನಯನ ಸಭಾಂಗಣದಲ್ಲಿ. ಪ್ರತಿದಿನವೂ ನಾಟಕಗಳು ಪ್ರದರ್ಶಿತವಾಗುವುದು ಜೆ.ಪಿ. ನಗರದ ರಂಗಶಂಕರದಲ್ಲಿ. ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಯಕ್ಷಗಾನಗಳು ಜರುಗುವುದು ರವೀಂದ್ರ ಕಲಾಕ್ಷೇತ್ರ ಮತ್ತು ಎ.ಡಿ.ಎ. ರಂಗಮಂದಿರಗಳಲ್ಲಿ. ಸಂಗೀತ ಕಾರ್ಯಕ್ರಮಗಳು ನಡೆಯುವುದು ಕೆ.ಆರ್. ರಸ್ತೆಯ ಗಾಯನ ಸಮಾಜ, ಉಪನ್ಯಾಸಗಳು ನಡೆಯುವುದು ಬುಲ್ ಟೆಂಪಲ್ ರಸ್ತೆಯ ಡಿವಿಜಿ ಸಭಾಂಗಣದಲ್ಲಿ. ಮಲ್ಲೇಶ್ವರಂ - ರಾಜಾಜಿನಗರಗಳಲ್ಲಿ ನೆಲೆಸಿರುವ ನಾವು ಏನೇ ಒಳ್ಳೆಯದು ಬೇಕು ಎಂದರೂ ಅಲ್ಲಿಯ ತನಕ ಉದೋ ಅಂತ ಟ್ರಾಫಿಕ್ಕಿನಲ್ಲಿ ಹೋಗಬೇಕು.

ಸಾಹಿತ್ಯ ಲೋಕದ ಮಂದಿಯೂ ಹೆಚ್ಚಾಗಿ ತಳವೂರಿರುವುದು ಅತ್ತ ಕಡೆಯೇ. ಹಳೆಯ ಕಾಲದ ಕವಿವರೇಣ್ಯರಿಗಂತೂ ಗಾಂಧಿ ಬಜಾರು ಅಡ್ಡಾ ಆಗಿಹೋಗಿತ್ತು. ಗಾಂಧಿ ಬಜಾರಿನ ಬಾರಿನಲ್ಲಿ ಕೂತು ಹರಟಿದ್ದೇನು, ಹರಟಿದ್ದನ್ನೇ ಬರೆದಿದ್ದೇನು, ಗಾಂಧಿ ಬಜಾರಿನಲ್ಲಿ ಸುರಿದ ಮಳೆಯ ಬಗ್ಗೆ ಕವಿತೆ ಹೊಸೆದಿದ್ದೇನು, 'ಮನಸೆಂಬ ಗಾಂಧಿಬಜಾರು' ಅಂತೆಲ್ಲ ರೂಪಕಗಳನ್ನು ಹೆಣೆದಿದ್ದೇನು, ಕವನ ಸಂಕಲನಕ್ಕೂ ಗಾಂಧಿ ಬಜಾರಿನ ಹೆಸರನ್ನೇ ಬಳಸಿಕೊಂಡಿದ್ದೇನು..! ಆಹಾ, ಓದಿದವರಿಗೆ ಗಾಂಧಿ ಬಜಾರು ಎಂದರೆ ಸಾಲು ಮರಗಳ ಹೂವು ಹಾಸಿದ ಬರೀ ಲಲನೆಯರೇ ನಡೆದಾಡುವ (ಜತೆಗೆ ಕವಿಗಳು!) ಹಕ್ಕಿಗಳ ಕಲರವ ತುಂಬಿದ ರಸ್ತೆಯಿರಬೇಕು ಎನಿಸಬೇಕು!

ಹಾಗಾದರೆ ಇಷ್ಟು ಸುಂದರವಾಗಿರುವ ನಮ್ಮ ಮಲ್ಲೇಶ್ವರಂ ಯಾಕೆ ನಿರ್ಲಕ್ಷ್ಯಕ್ಕೆ ಗುರಿಯಾಯಿತು? ಮಲ್ಲೇಶ್ವ'ರಂ'ನಲ್ಲೇ ಸಿಗುತ್ತಿರುವಾಗ ರಂ, ಇಲ್ಲೇ ಕೂತು ಯಾಕಿವರು ಟೈಟಾಗಲಿಲ್ಲ? ಚೌಡಯ್ಯ, ಅನನ್ಯ, ಗಾಂಧಿ ಸ್ಮಾರಕ ಭವನಗಳಂತಹ ಸಭಾಂಗಣಗಳ್ಯಾಕೆ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ? ಈ ದೆಸೆಯಲ್ಲಿ ಚಿಂತಿಸುತ್ತಿದ್ದ ನನಗೆ, ಮೇ ಫ್ಲವರ್ ಮೀಡಿಯಾ ಹೌಸ್ ಮಲ್ಲೇಶ್ವರಂ ಬಳಿ ಬಂದುದು ಒಂಥರಾ ಒಳಗೊಳಗೇ ಹೆಮ್ಮೆ ತಂದಿದ್ದ ಸಂಗತಿ! ಬರೀ ಆ ಕಡೆಗೇ ಇದ್ದ ಸಾಹಿತ್ಯ-ಮೀಡಿಯಾ ಲೋಕದ ಮಂದಿ ಫಿಶ್ ಮಾರ್ಕೆಟ್ ಕಾರ್ಯಕ್ರಮಗಳಿಗೆ ನಮ್ಮಲ್ಲಿಗೆ ದಾರಿ ಹುಡುಕಿಕೊಂಡು ಬರುವಂತಾಯ್ತಲ್ಲ ಎಂದು!

ಅದೆಲ್ಲ ಇರಲಿ. ನಾನು ಬರೆಯಲಿಕ್ಕೆ ಹೊರಟದ್ದು ಮಲ್ಲೇಶ್ವರಂ ಬಗ್ಗೆ. ಅದರಲ್ಲೂ ಏಯ್ಥ್ ಕ್ರಾಸ್ ಬಗ್ಗೆ.

ನಮ್ಮ ಮಲ್ಲೇಶ್ವರಮ್ಮಿನಲ್ಲಿ ಮೇನುಗಳಿಗಿಂತ ಕ್ರಾಸುಗಳೇ ಮೇನು. ಮೇನ್ ರೋಡುಗಳು ಇಲ್ಲಿ ಕೇವಲ ನೇಪಥ್ಯ (ಏಯ್ಥ್ ಮೇನ್ ಒಂದನ್ನು ಬಿಟ್ಟು). ವಿಳಾಸ ಹುಡುಕುವವರು, ದಿಕ್ಕು ತಪ್ಪಿದವರು 'ಫಿಫ್ತ್ ಮೇನ್ ಎಲ್ಲಿದೆ?' ಅಂತ ಯಾರನ್ನಾದರೂ ಕೇಳಿದರೆ ಅವರು ಮೇಲೆ-ಕೆಳಗೆ ನೋಡುವುದು ಖಂಡಿತ. ಅದೇ ಫಿಫ್ತ್ ಕ್ರಾಸ್ ಎಲ್ಲಿದೆ ಅಂತಲೋ, ಏಯ್ಥ್ ಕ್ರಾಸು, ಟೆನ್ತ್ ಕ್ರಾಸು, ಏಯ್‌ಟೀನ್ತ್ ಕ್ರಾಸು ಎಲ್ಲಿದೆ ಅಂತ ಯಾರನ್ನಾದರೂ ಕೇಳಿ ನೋಡಿ, ಕಣ್ಣು ಹೊಡೆಯುವುದರೊಳಗೆ ಹೇಳುತ್ತಾರೆ: 'ಹೀಂಗೆ ಸಂಪಿಗೆ ರೋಡಲ್ಲಿ ಸ್ಟ್ರೇಟಾಗಿ ಹೋಗಿ.. ಫಿಫ್‌ಟೀನ್ತು, ಸಿಕ್ಸ್‌ಟೀನ್ತು, ಸೆವೆಂಟೀನ್ತು ಆದ್ಮೇಲೆ ಏಯ್‌ಟೀನ್ತ್ ಕ್ರಾಸ್ ಸಿಗುತ್ತೆ' ಅಂತ!

ಮಲ್ಲೇಶ್ವರಂ ಸುಂದರಿಯರನ್ನಿಟ್ಟುಕೊಂಡು ಪರಮೇಶ್ವರ ಗುಂಡ್ಕಲ್ ಬಹಳ ಹಿಂದೆಯೇ ಒಂದು ಚಂದ ಕತೆ ಬರೆದಿದ್ದರು. ನಮ್ಮ ಮಲ್ಲೇಶ್ವರಂನ ಸುಂದರಿಯರು ಸೆಂಟ್ರಲ್, ಗರುಡ, ಫೋರಂ ಮಾಲ್‌ಗಳಲ್ಲಿ ಕಾಣಲ್ಪಡುವ ಸುಂದರಿಯರಂತಲ್ಲ. ಅಥವಾ ಜಯನಗರ ಫೋರ್ತ್ ಬ್ಲಾಕ್, ಬನಶಂಕರಿ ಕಾಂಪ್ಲೆಕ್ಸುಗಳಲ್ಲಿ ಕಾಣಸಿಗುವ ಹುಡುಗಿಯರಂತೆಯೂ ಅಲ್ಲ. ಎಂಜಿ ರೋಡು, ಬ್ರಿಗೇಡ್ ರೋಡು, ಕಮರ್ಶಿಯಲ್ ಸ್ಟ್ರೀಟುಗಳಲ್ಲಿ ಶಾಪಿಂಗ್ ಮಾಡುವ ಅರ್ಧಮರ್ಧ ಬಟ್ಟೆ ಧರಿಸಿದ ಹುಡುಗಿಯರ ಹಾಗಂತೂ ಅಲ್ಲವೇ ಅಲ್ಲ. ನೀವು ಫೋರಂ ಮಾಲ್, ಗರುಡ ಮಾಲ್, ಎಂಜಿ ರಸ್ತೆಗಳಲ್ಲಿ ಒಂದೇ ಒಂದು ಚೂಡಿದಾರ ಧರಿಸಿದ ಹುಡುಗಿಯನ್ನೋ ನೀಟಾಗಿ ಸೀರೆ ಉಟ್ಟುಕೊಂಡ ಗೃಹಿಣಿಯನ್ನೋ ಕಾಣುವುದು ಕಷ್ಟಸಾಧ್ಯ.

ಆದರೆ ಮಲ್ಲೇಶ್ವರಂ ಹಾಗಲ್ಲ. ಇಲ್ಲಿ ಅತ್ಯಂತ ಲಕ್ಷಣವಾಗಿ ಗರಿಗರಿ ಸೀರೆ ಉಟ್ಟುಕೊಂಡ ಗೃಹಿಣಿ, ಪಿಂಕ್ ಕಲರ್ ಚೂಡಿಯ ಮೇಲೆ ಹಳದಿ ದುಪಟ್ಟಾ ಹೊದ್ದ ತರುಣಿ, ತನ್ನ ಲೋ-ಹೀಲ್ಡ್ ಚಪ್ಪಲಿ ಧರಿಸಿದ ಕಾಲನ್ನೇ ನೋಡುತ್ತ ನಡೆಯುತ್ತಿರುವ ಹುಡುಗಿ -ಕಣ್ಣಿಗೆ ಬೀಳುತ್ತಾರೆ. ಇವರು ಬಿಎಂಟಿಸಿ ಬಸ್ಸು ಅಥವಾ ಆಟೋದಲ್ಲಿ ಬಂದಿರುತ್ತಾರೆ. ಕೈಚೀಲ ಹಿಡಿದುಕೊಂಡಿರುತ್ತಾರೆ. ಅಂಗಡಿಗಳವರ ಬಳಿ ಚೌಕಾಶಿ ಮಾಡುತ್ತಾರೆ. ಒಮ್ಮೆ ಬಂದರೆಂದರೆ, ತರಕಾರಿ, ಹಣ್ಣು, ಪೂಜೆಯ ಸಾಮಗ್ರಿ, ಬಿಂದಿ, ಬ್ಲೌಸಿನ ಬಟ್ಟೆ ಎಲ್ಲವನ್ನೂ ಕೊಂಡು ಹೋಗುತ್ತಾರೆ. ನವದಂಪತಿಗಳು ಇಲ್ಲಿ ಕೈಕೈ ಹಿಡಿದು ನಡೆಯುತ್ತಾರೆ. ಫುಟ್‌ಪಾತಿನಲ್ಲಿ ದಾಳಿಂಬೆ ಇಟ್ಟುಕೊಂಡವನ ಬಳಿ ರೇಟ್ ಕೇಳಿ ಸುಮ್ಮನೆ ಮುನ್ನಡೆಯುತ್ತಾರೆ. ಇವರ ಪರ್ಸಿನಲ್ಲಿ ನೋಟುಗಳು, ಅದರಲ್ಲೂ ಹತ್ತು-ಇಪ್ಪತ್ತು ರೂಪಾಯಿಗಳ ಹಳೆಯ ನೋಟುಗಳು ಇರುತ್ತವೆ. ಪಕ್ಕದ ಮನೆಯವಳೊಂದಿಗೆ ಬಂದ ಗೃಹಿಣಿ, ಜನತಾದಲ್ಲಿ ಕಾಫಿ ಕುಡಿದ ಬಿಲ್ಲು ಕೊಡುವಾಗ 'ನಾನು ಕೊಡ್ತೇನೆ ನಾನು ಕೊಡ್ತೇನೆ' ಅಂತ ಕಿರುಚುತ್ತಾಳೆ.

ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ ಮಲ್ಲೇಶ್ವರಂ ಎಂದರೆ ಮಲ್ಲೇಶ್ವರಂ ಸರ್ಕಲ್ ಅಷ್ಟೇ ಆಗಿತ್ತು ನನಗೆ. ಮಹಾಲಕ್ಷ್ಮಿ ಲೇಔಟಿನಲ್ಲಿದ್ದ ಕಸಿನ್ನಿನ ಮನೆಯಲ್ಲಿ ತಂಗಿದ್ದ ನಾನು, ದಿನವೂ ಬಸ್ ಹತ್ತಿ ಬಂದು ಮಲ್ಲೇಶ್ವರಂ ಸರ್ಕಲ್ಲಿನಲ್ಲಿ ಇಳಿದುಕೊಂಡು, ಅಲ್ಲಿಂದ ಶಿವಾಜಿನಗರಕ್ಕೆ ಹೋಗುವ ಬಸ್ ಹತ್ತಿ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿದ್ದ ಆಫೀಸಿಗೆ ಹೋಗುತ್ತಿದ್ದೆ. ಆಗ ನನಗೆ ಮಲ್ಲೇಶ್ವರಂ ಸರ್ಕಲ್ ಎಂಬುದು ಒಂಥರಾ ಬಸ್ ಛೇಂಜ್ ಮಾಡುವ ಜಂಕ್ಷನ್ ಆಗಿತ್ತು. ನವರಂಗ್ ಕಡೆಯಿಂದ ಬರುವ ಬಸ್‌ಗಳು, ಮಾರ್ಗೋಸಾ ರೋಡಿನಲ್ಲಿ ಬಂದು ಸರ್ಕಲ್ ಕಡೆ ತಿರುಗಿಕೊಳ್ಳುತ್ತಿದ್ದ ಬಸ್‌ಗಳು -ಎರಡರ ಕಡೆಗಷ್ಟೇ ನನ್ನ ಗಮನ ಕೇಂದ್ರೀಕೃತವಾಗಿರುತ್ತಿತ್ತು. ಯಾವುದೇ ರಾಜಕೀಯ ಸಮಾರಂಭಕ್ಕೆ ಸಾಕಾಗುವಷ್ಟು ಜನರನ್ನು ಹೇರಿಕೊಂಡು ಬರುತ್ತಿದ್ದ ಈ ಬಸ್ಸುಗಳಲ್ಲಿ, 'ಶಿವಾಜಿನಗರ' ಎಂಬ ಬೋರ್ಡ್ ಇರುವ ಬಸ್ ಕಂಡರೆ ಸಾಕು, ಓಡಿ ಹೋಗಿ ಫುಟ್‌ಬೋರ್ಡ್‌ನಲ್ಲಿ ನೇತಾಡಲು ಹವಣಿಸುತ್ತಿದ್ದೆ. ಬರೀ ಅದೇ ಗಡಿಬಿಡಿಯಲ್ಲಿರುತ್ತಿದ್ದ ನನಗೆ, ನಾನು ನಿಂತಿರುತ್ತಿದ್ದ ಜಾಗದಿಂದ ಮೂರೇ ಕ್ರಾಸುಗಳ ಹಿಂದೆ ಏಯ್ಥ್ ಕ್ರಾಸ್ ಎಂಬ, ಸುಂದರಿಯರು ನಡೆದಾಡುವ ಹಾದಿ ಇದೆ ಎಂಬ ಕಲ್ಪನೆಯೂ ಇರಲಿಲ್ಲ.

ಒಂದ್ಯಾವುದೋ ಶುಭ ಭಾನುವಾರ ಸಂಜೆ, ನನ್ನ ಕಸಿನ್ನು "ಮಲ್ಲೇಶ್ವರಮ್ಮಿಗೆ ಹೋಗ್ಬರನ ಬಾರಲೇ" ಎಂದು ನನ್ನನ್ನೆಳೆದುಕೊಂಡು ಹೊರಟ ನೋಡಿ, ನನ್ನ ಕಣ್ಗಳ ಭಾಗ್ಯದ ರೆಪ್ಪೆಗಳು ತೆರೆದುಕೊಂಡೇ ಬಿಟ್ಟವು! ಏಯ್ಥ್ ಕ್ರಾಸಿನಲ್ಲಿ ನಡೆಯುತ್ತಿದ್ದರೆ ಒಂಥರಾ ಸ್ವರ್ಗದಲ್ಲಿ ನಡೆಯುತ್ತಿರುವ ಅನುಭವ.. ಎಲ್ಲಿ ನೋಡಿದರೂ ಬಣ್ಣಬಣ್ಣದ ಲೈಟುಗಳು, ಮೈಕೈಗೆ ಒಡಾಯುವ ಗಿಜಿಗಿಜಿ ಜನ, ರಸ್ತೆಯ ಇಕ್ಕೆಲಗಳಲ್ಲೂ ವಿವಿಧ ರೀತಿಯ ಚಿತ್ತಾಕರ್ಷಕ ವಸ್ತುಗಳನ್ನಿಟ್ಟುಕೊಂಡು ಮಾರುತ್ತಿರುವವರ ಕೂಗು, ಫಳಫಳ ಹೊಳೆಯುತ್ತ ಆಕಾಶಕ್ಕೆ ಚಿಮ್ಮಿ ಮತ್ತೆ ಕೆಳಗಿಳಿಯುವ ಯಾವುದೋ ಆಟಿಕೆ... ಓಹ್! ಥೇಟ್ ಸಾಗರದ ಜಾತ್ರೆಯೇ ಆವಿರ್ಭವಿಸಿದಂತೆ! ಹುಡುಗಿಯರಂತೂ ಅದೆಷ್ಟು ಚಂದ ಅಲಂಕಾರ ಮಾಡಿಕೊಂಡು ಓಡಾಡುತ್ತಿದ್ದರೆಂದರೆ, ವರ್ಷದೆಲ್ಲ ಹಬ್ಬಗಳೂ ಒಂದೇ ದಿನ ಜರುಗಿದಂತೆನಿಸಿ ನಾನಂತೂ ಏಯ್ಥ್ ಕ್ರಾಸಿಗೆ ಫಿದಾ ಆಗಿಹೋದೆ.

ಆಮೇಲಿನ ನನ್ನ ವೀಕೆಂಡುಗಳಿಗೆ ಏಯ್ಥ್ ಕ್ರಾಸು ಹಾಟ್‌ಸ್ಪಾಟ್ ಆಗಿಹೋಯಿತು. ಯಾವಾಗ ಬಂದರೂ ತನ್ನ ಇಕ್ಕೆಲದ ವೈಭವಗಳನ್ನು ತೆರೆದು ಸ್ವಾಗತಿಸುತ್ತಿತ್ತು. ನಾನು ಏಯ್ಥ್ ಕ್ರಾಸಿನ ಅಂಗಡಿಯಲ್ಲಿ ಬಟ್ಟೆ ಖರೀದಿಸಿದೆ, ಊರಿಗಿಂತ ಮೊದಲು ಬಂದ ಮಾವಿನಕಾಯಿ ಕೊಂಡೆ, ಜನತಾದಲ್ಲಿ ಮಸಾಲೆ ದೋಸೆ ತಿಂದೆ, ತಂಗಿ ಜೊತೆ ಕೋಲ್ಡ್ ಕಾಫಿ ಕುಡಿದೆ, ನಿರ್ಮಲ ಶೌಚಾಲಯದಲ್ಲಿ ಉಚ್ಚೆ ಹೊಯ್ದೆ.

ಊಹುಂ, ಅಸಂಖ್ಯ ಸಲ ಓಡಾಡಿದರೂ ಏಯ್ಥ್ ಕ್ರಾಸ್ ನನಗೆ ಬೇಸರ ತರಿಸಲಿಲ್ಲ. ಏನಾದರೊಂದು ಹೊಸತನ ಅಲ್ಲಿ ಇದ್ದೇ ಇರುತ್ತಿತ್ತು. ಮಲ್ಲೇಶ್ವರಂನ ಪಿಜಿಯೊಂದರಲ್ಲಿ ತಂಗಿದ್ದಾಗಲಂತೂ ಏಯ್ಥ್ ಕ್ರಾಸ್ ನನಗೆ ಸಂಜೆಯ ಹೊತ್ತಿನ ವಾಕಿಂಗ್ ವೇ ಆಗಿಬಿಟ್ಟಿತ್ತು. ಮಲ್ಲೇಶ್ವರಂ ನನಗೆ ಬೇಸರ ತರಿಸಿದ್ದು ಇಲ್ಲವೇ ಇಲ್ಲ. ಪ್ರತಿದಿನ ಅಲ್ಲಿಗೆ ನನ್ನ ಪಾದಸೇವೆ ನಡೆದೇ ಇರುತ್ತಿತ್ತು. ಅದೊಂದು ಘಟನೆ ಆಗುವ ತನಕ...

* * *

ಅತ್ತಿಗೆಯನ್ನು ಟ್ರೇನ್ ಹತ್ತಿಸಿ ಮನೆಗೆ ಬಂದು ಅಷ್ಟು ಬರೆದವನಿಗೆ ಆಮೇಲೆ ಸಿಕ್ಕಾಪಟ್ಟೆ ನಿದ್ದೆ ಬಂದು ಮಲಗಿಬಿಟ್ಟೆ. ಮರುದಿನ ಬೆಳಗ್ಗೆ ಇದನ್ನು ಮತ್ತೆ ಓದಿಕೊಂಡಾಗ, ಇದನ್ನು ಮುಂದುವರೆಸಬಾರದು, ಇಲ್ಲಿಗೇ ಬಿಟ್ಟುಬಿಡಬೇಕು, ಆ ಘಟನೆಯ ಬಗ್ಗೆ ಈಗಲೇ ಬರೆಯಬಾರದು ಅನ್ನಿಸಿತು. ಲ್ಯಾಪ್‌ಟಾಪ್ ಮುಚ್ಚಿ ಸುದೀರ್ಘ ನಿಟ್ಟುಸಿರು ಬಿಟ್ಟು ಮೇಲೆ ನೋಡಿದೆ. ತಿರುಗುತ್ತಿದ್ದ ಜೋರಿಗೆ ಫ್ಯಾನಿನ ಅಲಗುಗಳು ಮಾಯವಾಗಿದ್ದವು.

Friday, January 01, 2010

ಕುಂಟಾಬಿಲ್ಲೆ ಪಟ

ಆ ಕ್ಯಾಲೆಂಡರನ್ನು ಮೊಳೆಯಿಂದ ಕಳಚಿ ಕೆಳಗಿಳಿಸಿ
ಸುರುಳಿ ಸುತ್ತಿ ರಬ್ಬರ್ ಬ್ಯಾಂಡ್ ಹಾಕಿ
ನಾಗಂದಿಗೆಯ ಮೇಲೆ ಬೀಸಾಡುವ ಮುನ್ನ
ಯಾಕೋ ಏನೋ ಅನ್ನಿಸಿ ಕೊಳವೆಯನ್ನು ಕಿವಿಗೆ ಹಿಡಿದರೆ
ನೂರಾರು ರಾಗಗಳ ಮಿಶ್ರ ಕಲರವ..

ಕುತೂಹಲ ಕೆರಳಿ ಸುರುಳಿಯನ್ನು ಬಿಚ್ಚಿ
ಒಂದೊಂದು ಪುಟದ ಒಂದೊಂದೆ ಮನೆಯ ದಿಟ್ಟಿಸಿದರೆ

ಕುಂಟಾಬಿಲ್ಲೆ ಆಟದಂತೆ ಈ ಮನೆಯಿಂದ ಮುಂದಿನ ಮನೆಗೆ
ಹಾರುತ್ತ ಹಾರುತ್ತ ನಡೆದ ನನ್ನ ಹೆಜ್ಜೆಯಚ್ಚು,
ಅದರಲ್ಲಿ ತುಂಬಿ ನಿಂತಿರುವ ಏನೇನೋ ಸದ್ದು:

ಬಿಡದೇ ನಕ್ಕ ದನಿ, ಸೆರೆಯುಬ್ಬಿ ಅತ್ತ ಬಿಕ್ಕು,
ಯಾರೋ ಬೈದ ಸದ್ದು, ನರಳಿದ ಮರ್ಮರ,
ಖುಶಿಯಲ್ಲಿ ಕಿರುಚಿದ ಪ್ರತಿಧ್ವನಿ, ಬಿಟ್ಟ ನಿಟ್ಟುಸಿರು..

ಬ್ಯಾಲೆನ್ಸ್ ಮಾಡುವುದರಲ್ಲೇ ದಿನ ಮುಗಿಯುತ್ತಿದ್ದ,
ದೆಸೆಯೇ ಗೊತ್ತಿಲ್ಲದೆ ಸುಮ್ಮನೆ ಮನೆಯಿಂದ ಮನೆಗೆ
ಹಾರುತ್ತ ನಡೆದಿದ್ದ ನನ್ನ ಒಂಟಿಹೆಜ್ಜೆ ಗುರುತುಗಳು
ತೀರ ಅಪೂರ್ಣ ಎನ್ನಿಸಿ, ಮತ್ತೊಮ್ಮೆ ಇದೇ ಮನೆಗಳಲ್ಲಿ
ನಡೆದು ಅಲ್ಲೇ ಉಳಿದ ಕನಸುಗಳ ನನಸಾಗಿಸಲೇ
ಅರ್ಧಕ್ಕೆ ಬಿಟ್ಟ ವ್ರತಗಳ ಪೂರ್ತಿ ಮಾಡಲೇ
ದಾಟಲಾಗದ ಮೈಲಿಗಲ್ಲುಗಳ ದಾಟಲೇ
ಪೂರೈಸದ ಕೆಲಸಗಳ ಕೈಂಕರ್ಯದಲ್ಲಿ ತೊಡಗಲೇ
ಎಂದು ಯೋಚಿಸುತ್ತಿದ್ದವನನ್ನು ನೋಡಿ

ಎರಡುಸಾವಿರದ ಹತ್ತರ ಕುಂಟಾಬಿಲ್ಲೆ ಪಟ
ಕೇಕೆ ಹಾಕಿ ನಕ್ಕು ಹೊಸ ಆಟಕ್ಕೆ ಕರೆಯಿತು.

[ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.]