ಎಲ್ಲರೂ ಎಲ್ಲ ಕೆಲಸ ಮಾಡಲಾಗದು
ನಿರ್ದಿಷ್ಟ ಕಾರ್ಯಗಳಿಗೆ ನಿರ್ದಿಷ್ಟ ವ್ಯಕ್ತಿಗಳೇ ಬೇಕು
ಸ್ಯಾಂಡ್‌ವಿಚ್ಚನ್ನು ಹೆಂಡತಿಯೇ ಮಾಡಬೇಕು
ಹೋಳಿಗೆಯನ್ನು ಅಮ್ಮನೇ ಮಾಡಬೇಕು
ಹಾಗೆಯೇ ಉಪ್ಪಿನಕಾಯಿಯನ್ನು ಅಜ್ಜಿಯೇ ಮಾಡಬೇಕು
ಮಾವಿನಮಿಡಿಗಳನ್ನು ಚೂರೂ ಪೆಟ್ಟಾಗದಂತೆ ತೊಳೆದು
ಕೈಸಾಲೆಯ ಮೂಲೆಯಲ್ಲಿ ಅಜ್ಜನ ಮೃದು ಸಾಟಿಪಂಚೆ ಹಾಸಿ
ಮಿಡಿಗಳನ್ನು ಒಂದಕ್ಕೊಂದು ತಾಕದಂತೆ ಹರಡಬೇಕು
ಯಾವ ಬಾಣಲೆ ಎಷ್ಟು ಉಪ್ಪು ಯಾವ ಹುಟ್ಟು ಎಷ್ಟು ಬೆಂಕಿ:
ಉಪ್ಪು ಕಪ್ಪಾಗದಂತೆ ಹುರಿಯುವ ಗುಟ್ಟು ಅಜ್ಜಿಗೆ ಮಾತ್ರ ಗೊತ್ತು
ಒಣಗಬೇಕು ಮಿಡಿಗಳು ಬಾಡಬಾರದು, ತೊಟ್ಟು ಪೂರ ಮುರಿಯಬಾರದು
ಚಟ್ಟಬೇಕು ಮಿಡಿಗಳು ಬಾಯಿಗೆ ಬಟ್ಟೆ ಕಟ್ಟಿದ ಭರಣಿಯ ಕತ್ತಲೊಡಲಲ್ಲಿ
ಉಪ್ಪೆಲ್ಲ ಕರಗಿ ಹಣಿಯಾಗಿ
ಹಸಿರು ಮಿಡಿಗಳು ತಿರುಗಿದಾಗ ನಸುಹಳದಿಗೆ
ಕದ್ದು ತಿನ್ನಲು ಬರುವ ಮೊಮ್ಮಗಳ ಮೇಲೆ
ನಿಗಾ ಇಡಲು ಅಜ್ಜಿಯ ಕನ್ನಡಕದ ಕಣ್ಗಳೇ ಆಗಬೇಕು
ಅಮ್ಮನಾದರೆ ಗದರಬೇಕು, ಅಜ್ಜಿ 'ಕೂಸೇ' ಎಂದರೂ ಸಾಕು
ಮತ್ತು ಅಜ್ಜಿಯೇ ಎತ್ತಿಕೊಡಬೇಕು ಮೊಮ್ಮಗಳಿಗೆ ಹುಷಾರಾಗಿ
ಒಣಗಿದ ಸುಕ್ಕುಕೈಗಳಿಂದ ಚಟ್ಟಿದ ರುಚಿರುಚಿ ಮಿಡಿ
ಅಚ್ಛಖಾರದ ಪುಡಿಯ ಸ್ವಚ್ಛ ಹುಟ್ಟಿನಿಂದ ತೆಗೆದು
ಭರಣಿಯೊಡಲಿಗೆ ಹೊಯ್ಯುವಾಗ ಹೊಮ್ಮಿ ಬರುವ ಘಾಟಿಗೆ
ಜಾಸ್ತಿಯಾದರೂ ಅಸ್ತಮಾ, ಅಜ್ಜಿ ಹೆದರುವುದಿಲ್ಲ
ಕಾಳು-ಕಡಿಗಳ ಹುರಿದು ಬೀಸಿ ಸುರಿವಾಗ
ಸುಸ್ತಿಗೆ ಕಣ್ಕತ್ತಲು ಬಂದರೂ ಕೆಳಗೆ ಕೂರುವುದಿಲ್ಲ
ಕತ್ತಲೆ ನಡುಮನೆಯ ನಾಗಂದಿಗೆಗೆ ಜಾಡಿಯನ್ನೇರಿಸುವಾಗ
ಹರಿಯದಿದ್ದರೂ ಬೇರೆಯವರಿಗೆ ಬಿಟ್ಟುಕೊಡುವುದಿಲ್ಲ
ಅಮ್ಮನಿಗೆ ಉಪ್ಪಿನಕಾಯಿ ಮಾಡಲು ಬರುವುದಿಲ್ಲವೆಂದಲ್ಲ
ಹೆಂಡತಿಯೂ ಮಾಡಬಲ್ಲಳು ರೆಸಿಪಿಯೋದಿ
ಆದರೂ ಉಪ್ಪಿನಕಾಯಿಯನ್ನು ಅಜ್ಜಿಯೇ ಮಾಡಬೇಕು
ಕೆಲವೊಂದು ಕೆಲಸವನ್ನು ಅವರೇ ಮಾಡಿದರೆ ಚಂದ
ಕೆಲವೊಂದು ಮಾತನ್ನು ಅವರೇ ಆಡಿದರೆ ಚಂದ.