Thursday, July 08, 2021

‘ಲೀವ್ ಕ್ವೈಟ್ಲೀ’

ಹಾಗೆ ಸದ್ದಾಗದಂತೆ ನಿರ್ಗಮಿಸುವುದು ಸುಲಭದ ಮಾತಲ್ಲ
ಬುದ್ಧನಿಗದು ಸಾಧ್ಯವಾಗಿರಬಹುದು
ಆದರೆ ನಮಗೆ? ಕೊನೆಗೆ ಬಾಗಿಲಾದರೂ ಕಿರುಗುಡುವುದು

ಹತ್ತು ಸಮಸ್ತರು ಸೇರಿದ ಸಭೆ

ಏನಿರಬಹುದೆಂದು ಕುತೂಹಲದಿಂದ ಇಣುಕಿದ್ದೇ ಸೈ
ನೂರಾರು ಗಮನಿಸುವ ಕಣ್ಣುಗಳು ಇತ್ತಲೇ ನೋಡಿ
‘ಓಹೋ, ಇವರು ಬಂದರು’ ಎಂದು
ಜೈಕಾರ ಹಾಕಿ ಸ್ವಾಗತಿಸಿ

ಒಮ್ಮೆ ಒಳಗೆ ಹೆಜ್ಜೆಯಿಟ್ಟಮೇಲೆ
ಸ್ವಲ್ಪ ಹೊತ್ತಾದರೂ ಆಸೀನರಾಗಿರಲೇಬೇಕು
ಮೂಲೆಯಲ್ಲೊಂದು ಕುರ್ಚಿ ಹಿಡಿದು.
ಎಲ್ಲರೂ ಘನಗಾಂಭೀರ್ಯದಿಂದ ಕುಳಿತಿರುವಾಗ
ಥಟ್ಟನೆ ಎದ್ದು ಹೊರಡುವುದು ಸಭ್ಯತೆಯೇ?
ಸಭೆಯ ಗೌರವದ ಗತಿಯೇನಾಗಬೇಕು

ಸುಮ್ಮನೆ ಆಲಿಸುತ್ತ ತೂಕಡಿಸುತ್ತ ಕೂತಿರಲೂ ಆಗದು
‘ಬನ್ನಿ ಬನ್ನಿ, ನಾಲ್ಕು ಮಾತಾಡಿ’ ಅಂತ ಆಹ್ವಾನಿಸುವರು.
ಕೈ ಎತ್ತಿ ನಾ ಮುಂದು ತಾ ಮುಂದು ಎಂದು
ಮುನ್ನುಗ್ಗುತ್ತಿರುವ ಮಲ್ಲರ ನಡುವೆ ಈ ಪರದೇಸಿ
ಮತ್ತಷ್ಟು ಮುಜುಗರದ ಮುದ್ದೆಯಾಗಿ
ಏನೋ ಹೇಳಲು ಹೋಗಿ ಏನೋ ಆಗಿ
ಎಬ್ಬೆಬ್ಬೆ ಬೆಬ್ಬೆಬ್ಬೆ ತೊದಲಿ ಗಂಟಲು ಕಟ್ಟಿ

ಸ್ವಾಮೀ ಇದು ನಮಗಲ್ಲ ಬಿಟ್ಟುಬಿಡಿ
ಮಾತಿನರಮನೆಯಲ್ಲಿ ಮೌನಿಗೇನು ಕೆಲಸ
ಅಕೋ ಆ ಕೊಳದ ಬದಿಯ ನೀರವದಲ್ಲಿ
ಕವಿತೆಯೊಂದು ಕಾಯುತ್ತಿದೆ
ಭೆಟ್ಟಿಯಾಗಲು ಹೋಗಬೇಕಿದೆ
ಬಿಟ್ಟುಬಿಡಿ ನನ್ನನ್ನು, ದಯವಿಟ್ಟು ಬಿಟ್ಟುಬಿಡಿ

-ಎಂದರೂ ಕೇಳದೇ ಕಟ್ಟಿಹಾಕಿ ಕೂರಿಸಿದ್ದಾರೆ
ಅಂಟಿಸಿಕೊಂಡದ್ದಾವುದನ್ನೂ ಅಷ್ಟು ಸುಲಭಕ್ಕೆ
ಬಿಟ್ಟುಹೋಗಲಾಗದು ಕಣಾ...
ಸಂಬಂಧ ಸಂಸಾರ ಹವ್ಯಾಸ ವ್ಯಸನ
ಯಾವುದೂ ಅಲ್ಲದಿದ್ದರೆ ಹಾಳು ಕುತೂಹಲ:
ಹಿಡಿದಿಡುವವು ವ್ಯಾಮೋಹದ ಸಂಕೋಲೆ ಹಾಕಿ
ಒಂದಡಿ ಆಚೆಯಿಟ್ಟರೂ ಹೆಜ್ಜೆ ಸಪ್ಪಳ ಕೇಳಿ
ಎಲ್ಲರೂ ನಮ್ಮತ್ತಲೇ ನೋಡುತ್ತಿರುವಂತೆನಿಸಿ
ಹಿಂಜರಿದು ಮತ್ತದೇ ಕುರ್ಚಿಗೊರಗಿ ಕೂತು
ಇದೇ ಸುಖವೆನ್ನುತ್ತ ಇದೇ ಸರಿಯೆನ್ನುತ್ತ.

['ಲೀವ್ ಕ್ವೈಟ್ಲೀ' ಎಂಬುದು ಇತ್ತೀಚಿಗೆ ಜನಪ್ರಿಯವಾಗಿರುವ 'ಕ್ಲಬ್‌ಹೌಸ್' ತಂತ್ರಾಂಶದ ಒಂದು ಫೀಚರ್]

Monday, June 28, 2021

ಪ್ರಸಾಧನ

ಎಲ್ಲಕ್ಕಿಂತ ಮೊದಲು ನೀರು ಹದಗೊಳ್ಳಬೇಕು
ಅಕೋ ಮೇಲೆ ಗೀಜರಿನೊಳಗೆ ಪರಿಮಳಪುಷ್ಪಗಳೊಡನೆ
ಕುದಿಯುತ್ತಿರುವ ನೀರು ಪನ್ನೀರಾಗಿ ನಳದಲಿಳಿದು
ಬಕೆಟ್ಟಿನಲಿ ಹಬೆಯಾಡುತ್ತ ತುಂಬಿಕೊಳ್ಳಲು

ಎಣ್ಣೆ ಸವರಿದ ಮೈಯ ಮಗಳು ಬಲಗಾಲಿಟ್ಟು
ಬಚ್ಚಲಿಗೆ ಕಾಲಿಡುವಾಗ ಮಲೆನಾಡ ನೆಲ
ಬರಮಾಡಿಕೊಳ್ಳುವುದು ಘಮಗುಡುವ ಸಾಬೂನು ಹಿಡಿದು
ದಿನಾ ಅಮ್ಮನಿಂದಲೇ ಸ್ನಾನಗೊಳುವ ಮಗಳಿಗೆ
ಭಾನುವಾರದ ಈ ದಿನ ಅಪ್ಪನ ಕೈಯ ಕಚಗುಳಿ
ಅನನುಭವಿ ಅಪ್ಪನಿಗೆ ಮಗಳೇ ಹೇಳಬೇಕು
ಕಣ್ಣುರಿಯದಂತೆ ಮುಖಕೆ‌ ಸೋಪು ಸವರುವ ರೀತಿ
ಸ್ವಲ್ಪ ಒತ್ತಿದರೂ ಜಾಸ್ತಿ ಕೈಗೆ ಬರುವ ಶಾಂಪೂ
ಏನು ಮಾಡುವುದೆಂದು ತಿಳಿಯದೆ ಕಕ್ಕಾಬಿಕ್ಕಿಯಾದ ಅಪ್ಪನಿಗೆ
ಅದನು ಕಮೋಡಿಗೆ ಸುರಿಯುವ ಟಿಪ್ ಮಗಳೇ ಕೊಡಬೇಕು

ಬಿಸಿ ಸ್ವಲ್ಪ ಜಾಸ್ತಿಯಾದರೆ ಕಿರುಚಾಡುವ
ಕಡಿಮೆಯಾದರೆ ಚಳಿಚಳಿಯೆಂದು ಕುಣಿದಾಡುವ
ಮಗಳ ಸಂಬಾಳಿಸಲಾಗದೆ ಒದ್ದಾಡುತ್ತಿರುವ ಅಪ್ಪ;
ಮಗಳಿಗೆ ಸ್ನಾನ ಮಾಡಿಸುವ ನೆಪದಲಿ ತಾನೂ
ಪೂರ್ತಿ ಒದ್ದೆಯಾಗಿ ಮಿಕಮಿಕ ನೋಡುವ ಬೆಪ್ಪ;
ಬಚ್ಚಲ ಈ ಪ್ರಹಸನಕೆ ಬ್ರಶ್ಶು ಪೇಸ್ಟು ಶಾಂಪೂಗಳೇ
ಮೊದಲಾದ ಪ್ರೇಕ್ಷಕರಿಗೆ ಇವತ್ತು ಪುಕ್ಕಟೆ ಮನರಂಜನೆ

ಮಜವೆಂದು ಗಂಟೆಗಟ್ಟಲೆ ಅಲ್ಲೆ ಇರಲಾದೀತೇ?
ನೀರಾಟ ಜಾಸ್ತಿಯಾಗಿ ತಂಡಿಯಾಗಿ ಜ್ವರ ಬಂದು
ಅಪ್ಪನಿಗೆ ಅಮ್ಮ ಬೈದು ಭಾರೀ ಗಂಡಾಂತರ!
ತಾನೇ ಹೊಯ್ದುಕೊಳ್ಳಲಿರುವ ಕೊನೆಯ
ಎರಡು ಬಿಂದಿಗೆಯೊಂದಿಗೆ ಸ್ನಾನ ಮುಗಿಸಿ
ಹಬೆಹಬೆ ಸೆಖೆಸೆಖೆಯಲ್ಲೇ ಹೊರಬಂದು
ಮೆತ್ತನೆ ಬಟ್ಟೆಯಲಿ ಮೈಯೊರೆಸಿ
ತಲೆಗೆ ಬಿಸಿಗಾಳಿ ಹರಿಸಿ

ಆಮೇಲೆ ಕ್ರೀಮು ಪೌಡರು ಕಾಡಿಗೆ ಕಾಕಾ ಅಂಗಿ
ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ-
ವ ಮನದಲ್ಲೆ ಗುನುಗಿ ಸಾಕಪ್ಪಾ ಸಾಕೆನಿಸಿ ಉಸ್ಸೆನ್ನುತ್ತ
ಕೋಣೆಯಿಂದ ಬೆವರುತ್ತ ಹೊರಬರುತ್ತಿರುವ
ಈ ಜಗದೇಕವೀರನ ಅಡುಗೆಮನೆಯ ಬಾಗಿಲಿಗೊರಗಿ
ನೋಡುತ್ತ ನಸುನಗುತ್ತಿರುವ ಅಮ್ಮ

ಮತ್ತು ತುಸುವೇ ವಾರೆಯಾಗಿರುವ ಹಣೆಯ ಬಿಂದಿಯೊಡನೆ
ಬೆಳಕಿನೆಡೆಗೆ ಹೆಜ್ಜೆಯಿಡುತ್ತಿರುವ ತಾಜಾ
ಸುರಾಸುಂದರಿಯ ನೋಡಿ ಕೈಲಟಿಕೆ ತೆಗೆದು
ದೃಷ್ಟಿ ಬಳಿಯುತ್ತಿರುವ ದೇವರಮನೆಯ ಮೂರುತಿಗಳು

ಹೀಗೆ ಭಾನುವಾರವೊಂದು ತನ್ನನು ತಾನೇ
ಸಿಂಗರಿಸಿಕೊಂಡು ಸಂಪನ್ನಗೊಳುವುದು:
ಮಗಳಿರುವ ಮನೆಗಳ ಸಿರಿಯ ನೋಡುತ್ತ.

Tuesday, March 16, 2021

ಅಜ್ಜ-ಅಜ್ಜಿ ಬಂದ ದಿನ

ಊರಿಂದ ಅಜ್ಜ-ಅಜ್ಜಿ ಬಂದ ಮುಂಜಾನೆ 
ಮೊಮ್ಮಗಳಿಗೆ ಬೇಗನೆ ಎಚ್ಚರ 
ರಾತ್ರಿ ನಿದ್ರೆಯಾವರಿಸುವವರೆಗೂ ಮಾಡಿದ 
ಅವರದೇ ಧ್ಯಾನ - ಬೆಳಗ್ಗೆ ಎದುರಿಗೇ ಪ್ರತ್ಯಕ್ಷವಾದಾಗ
ಮಾತು ಹೊರಡದೇ ಹಾಸಿಗೆಯಲ್ಲಿ ಕಕ್ಕಾಬಿಕ್ಕಿ 

ಎತ್ತಿ ಇಳಿಸಿ ಮುದ್ದು ಮಾಡಿ 
ಬ್ಯಾಗಿನ ಬಳಿಗೆ ಕರೆದೊಯ್ದು 
ಉದ್ದನೆಯ ಜಿಪ್ಪನು ಎಳೆದು ತೆಗೆವಾಗ 
ಹಕ್ಕಿಯೊಂದು ನಿಧಾನಕೆ ರೆಕ್ಕೆ ಬಿಚ್ಚುವ ಪವಾಡವ 
ರೆಪ್ಪೆ ಬಡಿಯದೆ ನೋಡುವೆರಡು ಕಣ್ಣುಗಳು  
ಮತ್ತು ಅಲ್ಲೀಗ ಮೊಮ್ಮಗಳಿಗೆಂದೇ ಅನಾವರಣಗೊಳ್ಳುವ 
ವಿಧವಿಧ ವಸ್ತುಗಳ ಮಾಯಾಲೋಕ: 
ಕಾಕಾ ಅಂಗಿ, ಜಾತ್ರೆಯ ಕಾರು, 
ಹೊಸ ಬಳೆ, ಕಾಯಿಹೋಳಿಗೆ, 
ಬಸ್ಸಿನ ನುಗ್ಗಿಗೆ ಸ್ವಲ್ಪವೇ ಗುಳುಚಲಾದ ಹಿತ್ತಿಲ ಹಣ್ಣು, 
ಯಾರೋ ತಂದುಕೊಟ್ಟಿದ್ದ ಹಳೆಯ ಬಿಸ್ಕತ್ತಿನ ಪೊಟ್ಟಣ... 

ಅಜ್ಜಿ ಬಂದಿರುವ ಸಂಭ್ರಮಕೆ ಈಗ ಎಲ್ಲಕೂ ಅಜ್ಜಿಯೇ ಬೇಕು 
ಹಲ್ಲು ಉಜ್ಜಿಸಲು ಸ್ನಾನ ಮಾಡಿಸಲು 
ಊಟ ಮಾಡಿಸಲು ಹಾಲು ಕುಡಿಸಲು 
ಜೋಜಿ ಮಾಡಿಸಲು ಕುಂಡೆ ತೊಳೆಸಲು 

ಮ್ಯಾಟಿನಿ ಶೋದಲ್ಲಿ ಅಜ್ಜನಿಗಾಗಿ ಏರ್ಪಾಟಾಗಿದೆ 
ವಿವಿಧ ಮನೋರಂಜನೆಗಳ ಪ್ರದರ್ಶನ 
ಡಬ್ಬಿಯ ತುಂಬ ಇರುವ ಆಟಿಕೆಗಳ ಪರಿಚಯ 
ಕಲಿತಿರುವ ಇಪ್ಪತ್ತಕ್ಷರಗಳ ಬರೆದು ತೋರಿಸುವ ಖುಷಿ
ಬಣ್ಣಚಿತ್ತಾರ ಪುಸ್ತಕದಲಿ ಬೆರೆಯುವ ಕೆಂಪು ಹಸಿರು ನೀಲಿ 
ಹೊಸ ಹಾಡು ಹೊಸ ಡಾನ್ಸು ಹೊಸ ಕಥೆ ವರ್ಣಮಾಲೆ 

ಪೇಟೆಗೆ ಹೊತ್ತೊಯ್ದು ಬೇಕಿದ್ದ ಕೊಡಿಸುವ ಸದರದ ಅಜ್ಜ 
ಸಂಜೆ ಕೈಕಾಲು ತೊಳೆಸಿ ದೇವರ ಮುಂದೆ ಭಜನೆ ಮಾಡಿಸುವ ಅಜ್ಜಿ 
ಈ ನಡುವೆ ಎಲ್ಲಿ ಹೋದರು ಅಪ್ಪ-ಅಮ್ಮ? 

ಅಜ್ಜ-ಅಜ್ಜಿ ವಾಪಸು ಹೊರಟ ದಿನ 
ಇಷ್ಟು ಸಣ್ಣಗಾದ ಮುಖ 
ಅವರಿಲ್ಲೇ ಇರಬೇಕೆಂದು ಹಟ 
ಕಣ್ಣಿಂದುದುರುವ ಹನಿಗಳು 
ಬಸ್ಸು ಹೋದಮೇಲೆ ಮುಖ ಊದಿಸಿಕೊಂಡು 
ಮನೆಗೆ ಬಂದು ಅದೇ ಮುನಿಸಲ್ಲಿ ನಿದ್ದೆ ಹೋಗಿ 

ಇತ್ತ, 
ಒಂದು ವಾರದಿಂದ ಮೊಮ್ಮಗಳಿಗಾಗಿ ಅಜ್ಜಿ ಹಾಡುತ್ತಿದ್ದ 
ಲಾಲಿಯ ಕಂಪಲ್ಲಿ ತಾನೂ ನಿದ್ರೆ ಹೋಗುತ್ತಿದ್ದ 
ಅಜ್ಜಿಯ ಮಗನಿಗೆ ಈ ರಾತ್ರಿ ನಿದ್ರೆಯೇ ಬರುತ್ತಿಲ್ಲ. 

Monday, February 22, 2021

ಬೇಗ ಮನೆಗೆ ಹೋದರೆ

ಅಷ್ಟು ಬೇಗ ಮನೆಗೆ ಹೋಗಿ ಏನು ಮಾಡುವಿರಿ 
ಕೇಳಿದರು ಆಫೀಸಿನಲ್ಲಿ ಕಲೀಗುಗಳು. 
ಎಲ್ಲರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಬೇಕಂತಿಲ್ಲ;
ಆದರೆ ಬಾಯ್ಬಿಟ್ಟು ಹೇಳದೆಯೂ ಕೆಲವೊಮ್ಮೆ
ಉತ್ತರಗಳು ಹೊಳೆಯುತ್ತವೆ
ಕಿಟಕಿಯಿಂದ ಕಾಣುವ ಪುಕ್ಕಟೆ ಸಿನೆಮಾಗಳ ಹಾಗೆ

ಮುಂಚೆ ಮನೆಗೆ ಹೊರಟರೆ 
ಬೀದಿಬದಿಯ ಗಾಡಿಯವ 
ಸೂರ್ಯಾಸ್ತದ ಗುಲಾಬಿಯಿಂದ ಮಾಡಿದ
ಬಾಂಬೆಮಿಠಾಯಿಯ ಕಟ್ಟಿಸಿ ಒಯ್ಯಬಹುದು
ಬಾಯ್ಗಿಟ್ಟರೆ ಕರಗುವ ಸೋಜಿಗವು
ಮಗಳ ಕಣ್ಣಲಿ ಹೊಳೆಹೊಳೆವಾಗ  
ನಾನದನು ನೋಡಿ ಖುಷಿ ಪಡಬಹುದು 

ಆಮೇಲಾಕೆ ತಾನು ದಿನವಿಡೀ ಕೂತು ಬಿಡಿಸಿದ 
ಬಣ್ಣಚಿತ್ರಗಳ ತೋರಿಸುವಾಗ 
ಹಕ್ಕಿಯನು ಇಲಿಯೆಂದೂ 
ರೈಲನು ಬಾಳೆಹಣ್ಣೆಂದೂ 
ತಪ್ಪಾಗಿ ಗುರುತಿಸಿ 
ನಂತರ ಅವಳಿಂದ ನನ್ನನು ತಿದ್ದಿಸಿಕೊಳ್ಳಬಹುದು 

ನೋಯುವ ಬೆನ್ನನು ಬಾಗಿಸಿ 
ತಲೆಗೆ ತಾಕುವ ಮಂಚದಡಿಗೆ ನುಸುಳಿ ಬಚ್ಚಿಟ್ಟುಕೊಂಡು 
ಕಣ್ಣಾಮುಚ್ಚೇ ಕಾಡೇಗೂಡೇ 
ಮುಗಿಯುವುದ ಕಾದು 
ಉಸಿರು ಬಿಗಿಹಿಡಿದು ಕೂರಬಹುದು 

ಬೈದೋ ಬೆದರಿಸಿಯೋ ರಮಿಸಿಯೋ
ಬೇಡದ ಊಟವ ಹೇಗೋ ಉಣಿಸಿ 
ಅವಳೊಂದಿಗೆ ನಾನೂ ಉಂಡು 
ಇಡೀದಿನ ಕುಣಿದ ಕಾಲಿಗೆ ಎಣ್ಣೆ ಸವರಿ 
ಬಾರದ ನಿದ್ರೆಗೆ ಜೋಗುಳ ಹಾಡಿ 
ಅವಳಿಗಿಂತ ಮೊದಲು ನಾನು ನಿದ್ರೆ ಹೋಗಿ 

ಬೆಳಿಗ್ಗೆ ಮತ್ತೆ ಆಫೀಸಿಗೆ ಬರಲು 
ಹೇಗೆ ತ್ರಾಣ ಬರುವುದು ಅಂತ ಕೇಳಿದ 
ಕಲೀಗುಗಳಿಗೆ ಹೇಳಿದೆ: 

ನಿನ್ನೆ ಮಗಳು ತಿಂದ ಬಾಂಬೆಮಿಠಾಯಿ 
ಅವಳೇ ತಿದ್ದಿದ ನನ್ನ ತಪ್ಪುಗಳು 
ಮಂಚದಡಿಗಿನ ಪ್ರಾಣಾಯಾಮ 
ಕಾಲಿಗೆ ಸವರಿದ ಕೊಬ್ಬರಿ ಎಣ್ಣೆ 
ರೂಮಿನಲ್ಲಿ ಧ್ವನಿಸುತ್ತಿದ್ದ ಜೋಗುಳ 
ಮತ್ತೆ ಕಸುವು ತುಂಬಲು ಎಷ್ಟೊಂದು ಕಾರಣಗಳು... 

ಅವರೆಂದರು: 
ಅದಕ್ಕೇ ನಿಮ್ಮ ಕಣ್ಣಲ್ಲಿ ಇಷ್ಟೊಂದು ಹೊಳಪು.

Monday, February 08, 2021

ಆಲೆಮನೆ ಎಂಬ ಸಂಸ್ಕೃತಿ ಶಿಬಿರ

ಚಳಿಗಾಲ ಮುಗಿದು ಚುರುಕು ಬಿಸಿಲಿನ ದಿನಗಳು ಶುರುವಾಯಿತು ಎನ್ನುವಾಗ ಮಲೆನಾಡಿನಲ್ಲಿ ಒಂದೊಂದಾಗಿ ಆಲೆಮನೆಗಳು ತಲೆಯೆತ್ತತೊಡಗುತ್ತವೆ. ಸಾಲಾಗಿ ಒತ್ತೊತ್ತಾಗಿ, ರಸದುಂಬಿ ಪೊಗದಸ್ತಾಗಿ, ಘನಗಂಭೀರವಾಗಿ ನೆಟ್ಟಗೆ ಬೆಳೆದು, ಕೆಂಪು-ಕಪ್ಪು ಬಣ್ಣಗಳಿಂದ ಕಂಗೊಳಿಸುತ್ತಿರುವ ರಸ್ತೆ ಬದಿಯ ಕಬ್ಬಿನ ಗದ್ದೆಯಿಂದ ಬರುವ ಒಣಗಿದ ಪೈರಿನ ಸರಬರ ಸದ್ದು ದಾರಿಹೋಕರಿಗೆ ಇನ್ನೇನು ಇಲ್ಲಿ ಆಲೆಮನೆ ಶುರುವಾಗುತ್ತದೆ ಎಂಬ ಸೂಚನೆ ಕೊಡುತ್ತದೆ. ಗಾಣ, ಕಣೆ, ಕೊಪ್ಪರಿಗೆ ಇತ್ಯಾದಿಗಳನ್ನು ಹೊತ್ತ ಎತ್ತಿನ ಗಾಡಿ ಟ್ರಾಕ್ಟರುಗಳು ಊರ ರಸ್ತೆಯಲ್ಲಿ ಮೆರವಣಿಗೆ ಹೊರಡುತ್ತವೆ. ಕಬ್ಬು ಬೆಳೆದ ರೈತರು ಆಗಲೇ ಗದ್ದೆಯ ಅಂಕಣವೊಂದನ್ನು ಸಪಾಟು ಮಾಡಿ ಶುಭ್ರಗೊಳಿಸಿ, ಮೂಲೆಯಲ್ಲೊಂದು ಚಪ್ಪರ ಹಾಕಿ, ಸಂಭ್ರಮವನ್ನು ಬರಮಾಡಿಕೊಳ್ಳಲು ತಯಾರಾಗುತ್ತಾರೆ. ಬೆಲ್ಲ ಕಾಯಿಸಲು ಬಳಸುವ ಬೃಹತ್ ಕೊಪ್ಪರಿಗೆಯನ್ನಿಡಲು ಬೇಕಾದ ಒಲೆ ಹೂಡಲು ಮತ್ತೊಂದು ಮೂಲೆಯಲ್ಲಿ ನೆಲವನ್ನು ಅಗೆದು ದೊಡ್ಡದೊಡ್ಡ ಕುಂಟೆಗಳು ಹಿಡಿಯುವಂತಹ ದೊರಗನ್ನು ಸಿದ್ಧಪಡಿಸುತ್ತಾರೆ. ಗಾಣ ಎಲ್ಲಿ ಹೂಡಬೇಕು, ಕೋಣಗಳು ಸಿದ್ಧವಾಗಿವೆಯೇ, ಕಬ್ಬಿನ ಹಾಲು ಸಂಗ್ರಹಿಸಲು ಬಾನಿಗಳ ವ್ಯವಸ್ಥೆ, ಬೆಲ್ಲ ಸುರಿಯಲು ಬೇಕಾದ ಮರಿಗೆ, ತಡರಾತ್ರಿಯವರೆಗೆ ಕಬ್ಬು ಅರೆಯಲು ಜನ, ಇತ್ಯಾದಿಗಳ ಉಸ್ತುವಾರಿಯನ್ನು ಅನುಭವಸ್ಥರು ನೋಡುತ್ತಿರುತ್ತಾರೆ. ಯಾರ ಮನೆಯ ಆಲೆ ಮೊದಲು ಆಗಬೇಕು, ನಂತರ ಯಾರ ಬಾರಿ, ಬಾಡಿಗೆಗೆ ತಂದ ಕಣೆ ಮೊದಲಿಗೆ ಎಲ್ಲಿ ಹೂಡಬೇಕು ಇತ್ಯಾದಿಗಳನ್ನೆಲ್ಲ ಊರಿನ ಕಬ್ಬು ಬೆಳೆಗಾರರೆಲ್ಲ ಒಟ್ಟಿಗೆ ಕೂತು ತೀರ್ಮಾನಿಸಿ, ಒಂದು ಶುಭ ಮುಹೂರ್ತದಲ್ಲಿ ಕಣೆ ತರಿಸಿ ಹೂಡಿಯೇಬಿಡುತ್ತಾರೆ.
 
ಈಗ ಇಡೀ ಊರಿಗೇ ಆಲೆಮನೆಯ ಸಂಭ್ರಮ. ಸೈಕಲ್ಲೇರಿ ಗದ್ದೆಯ ಕಡೆ ಹೊರಟ ಹುಡುಗರ ದಂಡು, ಕಬ್ಬಿನ ಹಾಲು ತರಲು ಉಗ್ಗ ಹಿಡಿದು ಹೊರಟ ಶಾಂತಕ್ಕ, ಬಿಸಿಬೆಲ್ಲ ತಿನ್ನುವ ಆಸೆಯಿಂದ ಬೀಡಿಯನ್ನು ಅರ್ಧಕ್ಕೇ ಮೊಟಕುಗೊಳಿಸಿ ಪಂಚೆ ಏರಿಸಿ ಹೊರಟ ಕಿಟ್ಟೂಭಟ್ರು, ಎರಡು ಡಬ್ಬಿ ಒಳ್ಳೇ ಬೆಲ್ಲ ಬುಕ್ ಮಾಡಿ ಬರಬೇಕೆಂದು ಹೊರಟ ಕೆಳಗಿನಮನೆ ಶಂಕರ... ಹೀಗೆ ಎಲ್ಲರೂ ಆಲೆಮನೆಯೆಡೆ ದೌಡಾಯಿಸುತ್ತಾರೆ. ರಸ್ತೆಯಿಂದ ಅನತಿದೂರದಲ್ಲಿ ಆಗಲೇ ಒಲೆ ಹೂಡಿ, ಬೆಂಕಿ ಹೊತ್ತಿಸಿದ್ದಾಗಿ ಎದ್ದ ಹೊಗೆ ಆಲೆಮನೆ ಇಲ್ಲೇ ಇದೆ ಅಂತ ಗುರುತು ಹೇಳುತ್ತಿದೆ. ರಸ್ತೆ ಬದಿ ಬೇಲಿಯ ಸಣ್ಣ ದಣಪೆ ದಾಟಿ ಬದುವಿನ ಮೇಲೆ ನಡೆದು ಜೋನಿಬೆಲ್ಲದ ಕಂಪಿನ ಜಾಡು ಹಿಡಿದು ಆಲೆಮನೆಯೆಡೆ ನಡೆಯುತ್ತಿದ್ದರೆ ಅಕೋ ಆಗಲೇ ಕೇಳಿಬರುತ್ತಿದೆ ಕೋಣ ಹೊಡೆಯುವವನ ರಾಗಬದ್ಧ ಹಾಡು: “ನೆಡೀ ಕ್ವಾಣಾ... ಓಓಓ... ಅರೀ ಕಣಾ.. ಓಓಓ.. ನೆಡೀ ಬ್ಯಾಗಾ...  ಹೈ.. ಹ್ವಾಯ್.”  
 
ಆಲೆಮನೆಯಲ್ಲಾಗಲೇ ತುರುಸಿನ ಚಟುವಟಿಕೆಗಳು ಶುರುವಾಗಿವೆ. ಜನವೆಲ್ಲ ಲಗುಬಗೆಯಿಂದ ಓಡಾಡುತ್ತಿದ್ದಾರೆ. ದೂರದಲ್ಲಿ ಕಾಣುವ ಗದ್ದೆಯಲ್ಲಿ ಕಬ್ಬಿನ ಕಟಾವು ನಡೆಯುತ್ತಿದೆ. ಕಡಿದ ಕಬ್ಬನ್ನು ಹೊರೆ ಕಟ್ಟಿ ಹೊತ್ತು ತಂದು ಆಲೆಮನೆಯ ಬಳಿ ರಾಶಿ ಹಾಕುತ್ತಿದ್ದಾರೆ.  ಕಣೆಯ ಬಳಿ ಕೂತ ಯುವಕನೊಬ್ಬ ಒಳ್ಳೊಳ್ಳೆಯ ಕಬ್ಬುಗಳನ್ನು ರಾಶಿಯಿಂದ ಎಳೆದೆಳೆದು ಗಾಣಕ್ಕೆ ಕೊಡುತ್ತಿದ್ದಾನೆ. ಮತ್ತೊಬ್ಬ ಆ ಕಡೆ ಸಂಗ್ರಹವಾಗುತ್ತಿರುವ ಚರಟವನ್ನು ಬುಟ್ಟಿಯಲ್ಲಿ ತುಂಬಿಕೊಂಡು ಗದ್ದೆಯ ಮತ್ತೊಂದೆಡೆ ಸುರಿಯುತ್ತಿದ್ದಾನೆ. ಯಂತ್ರದಿಂದ ಹೊರಬಿದ್ದ ಕಬ್ಬಿನರಸ ಪೈಪಿನಲ್ಲಿ ಸಾಗಿ ಸ್ವಲ್ಪ ದೂರದಲ್ಲಿರುವ ಬಾನಿಗೆ ಬೀಳುತ್ತಿದೆ. ಆ ಬಾನಿಗೆ ಒಂದು ಸಾಟಿಪಂಚೆಯನ್ನು ಜರಡಿಯಂತೆ ಮುಚ್ಚಲಾಗಿದೆ. ಮತ್ತೊಂದೆಡೆ ಹೊತ್ತಿ ಉರಿಯುತ್ತಿರುವ ಬೃಹತ್ ಒಲೆಯಿಂದ ಭಾರೀ ಶಾಕ ಹೊಮ್ಮುತ್ತಿದೆ.  ಮಕ್ಳು-ಮರೀನ ದೂರ ಕರ್ಕಂಡ್ ಹೋಗೀ.. ಒಲೆ ಹತ್ರ ಬರ್ಬೇಡೀ ಅಂತ ಹಿರಿಯರು ಎಚ್ಚರಿಸುತ್ತಿದ್ದಾರೆ.  ಭಾರದ ಕೊಪ್ಪರಿಗೆಯ ಹಿಡಿಕೈಗಳಿಗೆ ಎರಡು ಗಟ್ಟಿ ಬಿದಿರಿನಗಳ ತೂರಿಸಿ, ಆ ಗಳದ ಸಹಾಯದಿಂದ ನಾಲ್ಕು ಜನ ಕೊಪ್ಪರಿಗೆಯನ್ನು ತಂದು ಒಲೆಯ ಮೇಲೆ ಇಡುತ್ತಿದ್ದಾರೆ. ಹಾಗೆ ಇಟ್ಟ ಕೊಪ್ಪರಿಗೆಗೆ ಬಾನಿಯಲ್ಲಿ ಸಂಗ್ರಹವಾದ ಕಬ್ಬಿನ ಹಾಲನ್ನು ತಂದು ಸುರಿಯುತ್ತಿದ್ದಾರೆ. ಮತ್ಯಾರೋ ಊದ್ದದೊಂದು ಕೋಲಿನಿಂದ ಒಲೆಯ ಬೆಂಕಿಯನ್ನು ಸರಿ ಮಾಡುತ್ತಿದ್ದಾರೆ. ಕೆನ್ನಾಲಿಗೆ ಚಾಚುತ್ತ ನಿಗಿನಿಗಿ ಉರಿಯುತ್ತಿರುವ ಬೆಂಕಿಯ ಕಾವಿಗೆ ಕಬ್ಬಿನ ಹಾಲು ಕೊತಕೊತ ಕುದಿಯುತ್ತಿದೆ. ಇನ್ನೊಬ್ಬರು ಉದ್ದ ಹಿಡಿಕೆಯ ಜರಡಿ ಬಳಸಿ ಕುದಿವ ಹಾಲು ಹೊರಹಾಕುವ ಜೊಂಡು ತೆಗೆಯುತ್ತಿದ್ದಾರೆ. ಪಾಕ ಬಂತಾ ನೋಡ್ರೋ ಅಂತ ಮತ್ಯಾರೋ ಕೂಗುತ್ತಾರೆ. ಕಬ್ಬಿನ ರಸ ಕುದ್ದು ಪಾಕಗಟ್ಟಿದ ಹದ ತಿಳಿಯಲು ಅನುಭವಸ್ಥರೇ ಬೇಕು. ಎಳೇಪಾಕಕ್ಕೆ ಕೊಪ್ಪರಿಗೆಯನ್ನು ಒಲೆಯಿಂದ ಎತ್ತಿಬಿಟ್ಟರೆ, ಅಥವಾ ಏರುಪಾಕವಾಗಲು ಬಿಟ್ಟರೆ ಬೆಲ್ಲ ಚೆನ್ನಾಗಿ ಆಗುವುದಿಲ್ಲ. ವರ್ಷಪೂರ್ತಿ ಬಾಳಿಕೆ ಬರುವುದಿಲ್ಲ. ಒಂದೆರಡು ತಿಂಗಳಲ್ಲೇ ಹುಳಿ ಬಂದುಬಿಡುತ್ತದೆ. ಹೀಗಾಗಿ ಬಹಳ ವರ್ಷಗಳಿಂದ ಆಲೆ ಮಾಡಿ ಅನುಭವವಿರುವವರು ಕೊಪ್ಪರಿಗೆಯನ್ನು ಇಳಿಸುವ ಸಮಯಕ್ಕೆ ಹಾಜರಿರುತ್ತಾರೆ. ಅವರು ನೋಡಿ ಸಮ್ಮತಿ ಕೊಟ್ಟಮೇಲಷ್ಟೇ ಕೊಪ್ಪರಿಗೆಯನ್ನು ಒಲೆಯ ಮೇಲಿಂದ ಇಳಿಸುವುದು ಮತ್ತು ತಂದು ಮರಿಗೆಗೆ ಸುರಿಯುವುದು. 
 
ಮಲೆನಾಡಿನ ಆಲೆಮನೆಗೆ ಬಂದ ಅತಿಥಿಗಳಿಗೆ ಯಾವಾಗಲೂ ಭರ್ಜರಿ ಸ್ವಾಗತವೇ ದೊರಕುವುದು.  ಬಾನಿಗೆ ಬೀಳುತ್ತಿರುವ ಕಬ್ಬಿನ ಹಾಲನ್ನು ಚೊಂಬಿನಿಂದ ಹಿಡಿದು, ಲೋಟಕ್ಕೆ ಬಗ್ಗಿಸಿ ಎಷ್ಟ್ ಕುಡೀತಿರೋ ಕುಡೀರಿ ಅಂತ ಹಂಚುತ್ತಾರೆ ಯಜಮಾನರು.  ಬೇಕಿದ್ರೆ ನಿಂಬೆ ಹಣ್ಣು ಹಿಂಡಿಕೊಳ್ಳಿ ಅಂತ ಉಪಚಾರ ಮಾಡುತ್ತಾರೆ. ತಂಪಾದ ಸಿಹಿಯಾದ ತಾಜಾ ಹಾಲನ್ನು ಕತ್ತೇರಿಸಿ ಗಟಗಟ ಕುಡಿಯುತ್ತಿದ್ದರೆ ಎಷ್ಟು ಕುಡಿದೆವೆಂಬ ಲೆಕ್ಕವೇ ಸಿಗುವುದಿಲ್ಲ. ಹೊಟ್ಟೆ ತುಂಬಿ ಕುಲುಕುಲುಗುಟ್ಟುವಾಗ ಅವರು, “ಬಿಸಿ ಬೆಲ್ಲ ತಿನ್ತೀರೇನು?” ಅಂತ ಕೇಳುತ್ತ, ಚಪ್ಪರದಡಿಗೆ ಕರೆದೊಯ್ದು, ಅಲ್ಲಿ ಮರಿಗೆಯಲ್ಲಿ ಆಗಷ್ಟೆ ಬಗ್ಗಿಸಿ ಆರಲು ಇಟ್ಟಿರುವ ಬೆಲ್ಲವನ್ನು ಬಾಳೆಯೆಲೆಗೆ ಹಾಕಿ, ಸಣ್ಣದೊಂದು ಕಬ್ಬಿನ ಸಿಪ್ಪೆಯನ್ನು ಚಮಚದಂತೆ ಮಾಡಿಕೊಡುತ್ತಾರೆ. ಮುಳುಗುತ್ತಿರುವ ಸೂರ್ಯ, ತಣ್ಣಗೆ ಬೀಸುತ್ತಿರುವ ಸಂಜೆಗಾಳಿ, ಓಡಾಡುವ ಜನರ ಸರಬರ, ಕೋಣ ಹೊಡೆಯುವವನ ಹಾಡುಎಲ್ಲ ಬೆರೆತ ಈ ಸಾಯಂಕಾಲ ಗದ್ದೆಬಯಲಿನಲ್ಲಿ ನಿಂತು ಬಿಸಿಬೆಲ್ಲ ತಿನ್ನುತ್ತಿದ್ದರೆ, ಈ ರುಚಿಗೆ ಸರಿಸಮನಾದ್ದು ಮತ್ತೊಂದಿಲ್ಲವೇ ಇಲ್ಲ ಎನಿಸಿಬಿಡುತ್ತದೆ. ಆಲೆಮನೆಯಿಂದ ವಾಪಸು ಬರುವಾಗ ಒಂದಷ್ಟು ಬೆಳೆದ ಕಬ್ಬುಗಳನ್ನು ಸೈಕಲ್ಲಿಗೆ ಕಟ್ಟಿಕೊಂಡು ಬಂದು ಮನೆಯಲ್ಲಿ ಎರಡ್ಮೂರು ದಿನ ಕಬ್ಬು ಸಿಗಿಯುವ ಹಬ್ಬ ಮಾಡುತ್ತವೆ ಮಕ್ಕಳು.
 
ಆಲೆಮನೆಯ ರೀತಿ-ರಿವಾಜುಗಳು ಇತ್ತೀಚಿನ ವರ್ಷಗಳಲ್ಲಿ ಬಹಳವೇ ಬದಲಾಗಿವೆ. ಕಬ್ಬು ಬೆಳೆಯುವುದು ಬೆಲ್ಲ ಮಾಡಿ ಮಾರುವುದು ಸಣ್ಣ ಜಮೀನುದಾರರಿಗೆ ಲಾಭದಾಯಕ ಉದ್ದಿಮೆಯೇನು ಅಲ್ಲ. ಸಾಮಾನ್ಯವಾಗಿ ಅವರೆಲ್ಲ ಗದ್ದೆಯ ಒಂದು ಭಾಗದಲ್ಲಿ ಕಬ್ಬು ಬೆಳೆದು ತಮ್ಮ ಮನೆಗೆ, ಅಕ್ಕ-ಪಕ್ಕದ ಮನೆಯವರಿಗೆ, ನೆಂಟರಿಷ್ಟರಿಗೆ ಆಗುವಷ್ಟು ಮಾತ್ರ ಬೆಲ್ಲ ಮಾಡಿಕೊಂಡು ಸುಮ್ಮನಾಗುತ್ತಾರೆ. ಕಬ್ಬಿನ ಬೆಳೆಗೆ ಬರುವ ರೋಗಗಳು, ಕಾಡುಪ್ರಾಣಿಗಳ ಕಾಟ, ಆಲೆಯ ಕಣೆಯ ಬಾಡಿಗೆ, ದುಬಾರಿ ಗುತ್ತಿಗೆದಾರರು, ಅಸ್ಥಿರವಾದ ಬೆಲ್ಲದ ಬೆಲೆ... ಇತ್ಯಾದಿ ಸಮಸ್ಯೆಗಳಿಂದ ಬೆಳೆಗಾರರು ಬೇಸತ್ತಿದ್ದಾರೆ. ಅಲ್ಲದೇ ಗಾಣ ಕಟ್ಟಿ ಕೋಣಗಳನ್ನು ಬಳಸಿ ಮಾಡುವ ಆಲೆಮನೆಗಳ ಸಂಖ್ಯೆಯೂ ವಿರಳವಾಗಿದೆ. ಪೆಟ್ರೋಲ್ ಅಥವಾ ಡೀಸಲ್ ಎಂಜಿನ್ನಿನ ದೊಡ್ಡ ಯಂತ್ರಗಳು ರಾಶಿಗಟ್ಟಲೆ ಕಬ್ಬನ್ನು ಒಂದು ದಿನದಲ್ಲಿ ಅರೆದುಬಿಡುತ್ತವೆ. ರಾತ್ರಿಯಿಡೀ ನಿದ್ರೆಗೆಟ್ಟು ಮೂರ್ನಾಲ್ಕು ದಿನ ಆಲೆ ಮಾಡುವ ಜರೂರತ್ತಿಲ್ಲ.  ಹೀಗಾಗಿ ಆಲೆಮನೆಗಳೂ ಆಧುನಿಕಗೊಂಡಿವೆ.
 
ನಗರದ ಮೋಹಕ್ಕೋ ಅನಿವಾರ್ಯತೆಗೋ ಸಿಲುಕಿ ಹಳ್ಳಿ ಬಿಟ್ಟು ಪೇಟೆ ಸೇರುತ್ತಿರುವ ಯುವ ಜನಾಂಗಕ್ಕೆ ಊರಿನ ಆಲೆಮನೆಯ ನೆನಪು ಆಗಾಗ ಧುತ್ತನೆ ಆವರಿಸಿಬಿಡುತ್ತದೆ. ಏಕೆಂದರೆ ಆಲೆಮನೆಯೆಂಬುದು ಕೇವಲ ಕಬ್ಬು ಬೆಳೆದು ಬೆಲ್ಲ ಮಾಡಿ ಮಾರುವ ಉದ್ಯಮವಲ್ಲ... ಅದೊಂದು ಸಂಸ್ಕೃತಿ ಶಿಬಿರ. ವರ್ಷವಿಡೀ ಜತನ ಮಾಡಿ ಬೆಳೆದ ಬೆಳೆ, ಆಲೆಮನೆಗೆ ಮಾಡುವ ತಯಾರಿ, ಅಹೋರಾತ್ರಿ ನಡೆವ ಆಲೆ, ಕಿಡಿಯೆಬ್ಬಿಸುತ್ತ ಉರಿವ ಬೆಂಕಿ, ತಿರುಗುವ ಕೋಣಗಳು, ಹಾಡು-ಹಾಸ್ಯಗಳ ನಡುವೆ ಗದ್ದೆಬಯಲಲ್ಲಿ ತಂಗುವ ದಿನಗಳು, ಗ್ರಾಮಸ್ಥರು-ನೆಂಟರಿಷ್ಟರ ಸಮಾಗಮ, ಕೊಡು-ಕೊಳ್ಳುವ, ಮತ್ತೊಬ್ಬರಿಗೆ ತೃಪ್ತಿಯಾಗುವಷ್ಟು ಉಣಿಸುವ ಖುಷಿಹೀಗೆ ಅದೊಂದು ಸಂಭ್ರಮದ ಹಬ್ಬ. ಅದಕ್ಕಾಗಿಯೇ ಇತ್ತೀಚೆಗೆ ಆಲೆಮನೆ ಉತ್ಸವಗಳನ್ನು ಆಯೋಜಿಸಲಾಗುತ್ತಿದೆ. ಹಳೆಯ ಸಂಸ್ಕೃತಿಯೊಂದನ್ನು ಉಳಿಸುವಲ್ಲಿ ಕನಿಷ್ಟ ನೆನಪಿಟ್ಟುಕೊಳ್ಳುವಲ್ಲಿ ಇಂತಹ ಉತ್ಸವಗಳು ಕಿಂಚಿತ್ತಾದರೂ ನೆರವಾಗುತ್ತವೆ. ಪಟ್ಟಣ-ನಗರವಾಸಿಗಳಿಗೆ ಆಲೆಮನೆಯನ್ನು ಪರಿಚಯಿಸಿದಂತೆಯೂ ಆಗುತ್ತದೆ.
 
ಎಷ್ಟೇ ಕಾಲ ಬದಲಾದರೂ ಪಾರಂಪರಿಕ ಆಲೆಮನೆಗಳು ಅಲ್ಲಲ್ಲಿ ನಡೆಯುತ್ತವೆ. ಗದ್ದೆಯ ಮೂಲೆಯಲ್ಲಿ ಕೊಪ್ಪರಿಗೆಗೆ ಹಾಕಿದ ಒಲೆಯಿಂದ ಹೊಗೆಯೇಳುತ್ತಿರುವುದು ಕಾಣುತ್ತದೆ. ಪಕ್ಕದಲ್ಲಿ ಹಾಕಿರುವ ಚಪ್ಪರ ದಾರಿಹೋಕರನ್ನು ಕರೆಯುತ್ತದೆ. ತಿರುಗುತ್ತಿರುವ ಕೋಣಗಳಿಗೆ ತಲೆಸುತ್ತು ಬಾರದಂತೆ ಆಗಾಗ ತಣ್ಣೀರು ಸೋಕುತ್ತ ಕೋಲು ಹಿಡಿದು ಅವುಗಳ ಹಿಂದೆ ಸುತ್ತುತ್ತಿರುವವ ತನ್ನ ಕೀರಲು ಕಂಠದಲ್ಲಿ ಹಾಡುತ್ತಿರುತ್ತಾನೆ: ಅರೆ ಕ್ವಾಣಾ.. ಓಓಓ.. ಕರಿ ಕ್ವಾಣಾ.. ಓಓಓ..

[ವಿಜಯ ಕರ್ನಾಟಕ ಸಾಪ್ತಾಹಿಕದಲ್ಲಿ ಪ್ರಕಟಿತ]