Friday, July 19, 2013

ಮತ್ತೆ ಕವಿತೆ ಬರೆಯಲು ಕುಳಿತರೆ

ಮತ್ತೆ ಕವಿತೆ ಬರೆಯಲು ಕುಳಿತರೆ
ಅಲ್ಲೇ ಕಾಡುವ ಬೆನ್ನುನೋವು
ಅಪ್ಪ ಗುನುಗುತ್ತಾನೆ: ಈ ವಯಸ್ಸಿಗೇ..?
ಅಮೃತಾಂಜನ ಹಚ್ಚಿ ತಿಕ್ಕಿಕೊಡಲು ಈಗ
ಹೆಂಡತಿಯಿದ್ದಾಳೆ. ಅವಳದೂ ಸಿಡಿಮಿಡಿ:
ಕವಿತೆ ಬರೆಯಲಾಗದ ನೆಪವೋ ಅಥವಾ
ನಾನು ತಿಕ್ಕಲಿ ಅಂತಲೋ?

ಎಲ್ಲ ಸರಿ ಮಾಡಿಕೊಂಡು-
ಪೆನ್ನು, ಪೆನ್ನಿಗೊಂದು ಹಾಳೆ, ಒತ್ತಿಗೊಂದು ಮೆತ್ತನೆ ಪುಸ್ತಕ
ಬೆನ್ನು, ಬೆನ್ನಿಗೊಂದು ಮದ್ದು, ಒತ್ತಿಗೊಂದು ಮೆತ್ತನೆ ದಿಂಬು
ಅಷ್ಟೊತ್ತಿಗೇ ಮಳೆಯು ಬಂದು ಎಲ್ಲ ನೆನಪಾಗಲು ಶುರುವಾಗಿ
ಆಹಾ, ಬೆಚ್ಚಗೆ ಶುಂಟಿ-ಜೀರಿಗೆ ಕಷಾಯ ಲೋಟದ ತುಂಬ
ಇನ್ನೇನು ಕವಿತೆ ಮೂಡಿಯೇಬಿಟ್ಟಿತು ಎಂದು ಲೇಖನಿಯನ್ನು
ಖಡ್ಗಕ್ಕಿಂತ ಹರಿತ ಎಂದು ಝಳಪಿಸಿ-
ನೋ ನೋ- ಅದೆಲ್ಲ ಪತ್ರಕರ್ತರ ಶೈಲಿ;
ಲೇಖನಿಯನ್ನು ಸುಕೋಮಲ ಬಳ್ಳಿಯಂತೆ ಸವರಿ ಮುದ್ದಿಸಿ,
ಹಾಳೆಯನ್ನು.. ಹಾಳೆಯನ್ನು.. ಯಾವುದೋ ಉಪಮೆಗೋ ರೂಪಕಕ್ಕೋ ಒಪ್ಪಿಸಿ
ಎಲ್ಲ ಸರಿ ಮಾಡಿಕೊಂಡು

ಕವಿತೆ ಬರೆಯಲು ಕುಳಿತರೆ-
ಸರಿಯಾದ ಸಮಯಕ್ಕೆ ಡಿಂಗ್ ಡಾಂಗ್ ಕಾಲಿಂಗ್ ಬೆಲ್ಲು
ಕಟ್ಟಿಲ್ಲವಂತೆ ಈ ತಿಂಗಳ ಪೇಪರ್ ಬಿಲ್ಲು
ಕಾಲಿಂಗ್ ಬೆಲ್ಲೂ ಸುಮಧುರವಾಗಿ ಕೇಳಿಸದೇಕೆ
ಮಳೆಯ ತಿಟಪಿಟ ಸದ್ದಿನ ಹಾಗೆ
ಎಷ್ಟು ಒಳ್ಳೆಯ ಹಾಡು ರಿಂಗ್‌ಟೋನಾಗಿದ್ದರೂ ಮೊಬೈಲು ಕಿರಿಕಿರಿಯೇ
ಭಾಗ್ ಮಿಲ್ಕಾ ಭಾಗ್ ಎಂದು ಓಡಿ ಬರುವ
ಪಕ್ಕದ ಮನೆಯ ಹುಡುಗ... ಕವಿತೆ ಬಿಡಿ,
ವಾಚಕರ ಅಂಕಣಕ್ಕೆ ಪತ್ರ ಬರೆಯಲೂ ಮೂಡು ಬಾರದು.

ಆದರೂ ಛಲ ಬಿಡದ ತ್ರಿವಿಕ್ರಮನಂತೆ
ಮತ್ತದೇ ಪೆನ್ನು ಮತ್ತದೇ ಹಾಳೆ ಮತ್ತದೇ ಬೆನ್ನು
ಹಿಡಿದು ಒತ್ತಿ ಒರಗಿ ಪಲ್ಲವಿಗೊಂದು ಸಾಲು ಹುಡುಕುವ ಹೊತ್ತಿಗೆ
ಮಳೆ ನಿಂತು ಪಕ್ಕದ ಮನೆಯಲ್ಲಿ ಹುರಿದ ಒಣ ಮೀನಿನ ವಾಸನೆ
ಮಣ್ಣಿನ ವಾಸನೆಯನ್ನೂ ಮೀರಿ ಬಂದೆರಗಿ
ಹೆಂಡತಿ ತನ್ನ ಮೂಗಿನೆರಡೂ ಹೊಳ್ಳೆಗಳನ್ನದುಮಿ ಹಿಡಿದು
ಇನ್ನೊಂದು ಕೈಯಿಂದ ಭಾರೀ ವಾಸನೆಯೆಂದು ಅಭಿನಯಿಸಿ ತೋರಿಸುತ್ತ...

ಏನು ಮಾಡಲಿ, ಕವಿತೆ ಬರೆಯಲಾಗದ್ದಕ್ಕೆ ಬರೀ ನೆಪ ಹೇಳುತ್ತೇನೆ
ಅಂತ ನೀವು ಆರೋಪಿಸುತ್ತೀರಿ.