Monday, January 23, 2023

ಬಾಕಿ ಮೊಕ್ತಾ

ಆಮೇಲೆ ಚಿಲ್ಲರೆ ಕೊಡುತ್ತೇನೆ ಎಂದು ಕಂಡಕ್ಟರು
ಟಿಕೇಟಿನ ಹಿಂದೆ ಬರೆದುಕೊಟ್ಟಿದ್ದ ಮೊತ್ತ
ಪಡೆವುದ ಮರೆತು ಬಸ್ ಇಳಿದ ದಿನ
ಎಷ್ಟೋ ಹೊತ್ತಿನವರೆಗೆ ಕಾಡಿತ್ತು ಅದೇ ಕೊರಗು
ಕಾಡಿರಬಹುದೇ ಆ ಕಂಡಕ್ಟರಿಗೂ ಮರಳಿಸದೆ ಉಳಿದ ಚಿಲ್ಲರೆ?
ಅಥವಾ ನೂರಾರು ಚಿಲ್ಲರೆ ವಿಷಯಗಳ ನಡುವೆ
ಅವನಿಗೆ ಮರೆತೂ ಹೋಗಿರಬಹುದು

ಹಾಗೆ ಮರೆತು ಬಂದುದು ಹಲವು ವಿಷಯ
ದಿನಸಿ ಅಂಗಡಿಯಲ್ಲಿ ತೂಗಿಟ್ಟಿದ್ದ ಸಕ್ಕರೆ
ತರಕಾರಿ ಅಂಗಡಿಯಲ್ಲಿ ಮಡಚಿಟ್ಟಿದ್ದ ಕೊಡೆ
ಮದುವೆಮನೆಯಲ್ಲಿ ಮಾತಾಡಿಸಲೇಬೇಕಿದ್ದ ನೆಂಟ
ಭಾಷಣದ ನಡುವೆ ಮಾಡಬೇಕೆಂದಿದ್ದ ಪ್ರಸ್ತಾಪ
ವಿದಾಯದ ಮೊದಲು ಕೊಡಬೇಕಿದ್ದೊಂದು ಅಪ್ಪುಗೆ

ಮರೆಯುತ್ತವೆ ಮರೆತ ವಿಷಯಗಳೂ ಕಾಲಕ್ರಮೇಣ
ಬಿಡುತ್ತವೆ ಕಾಡುವುದ ಹೊಸಹೊಸ ಕ್ಷಣಪ್ರವಾಹದಲ್ಲಿ
ಕೆಲವು ಪ್ರಮಾದಗಳ ಸರಿಪಡಿಸಲೂ ಬಹುದು

ಏನೆಂದರೆ, ಕೊಂಡಿ ಕಡಿಯಬಾರದಷ್ಟೇ
ಉಸಿರು ಉಳಿದಿರಬೇಕಷ್ಟೇ
ಅಷ್ಟಿದ್ದರೆ ಏನೋ ಭರವಸೆ:
ಮುಂದಿನ ಸಲ ಹೋದಾಗ ಸಿಗಬಹುದು ಮರೆತುದು
ದಿನವೂ ಹೋಗುವ ಅಂಗಡಿಯಲ್ಲವೇ, ಎತ್ತಿಟ್ಟಿರುತ್ತಾನೆ ಸೇಟೂ,
ನಾಳೆ ಅತ್ತ ಹೋದಾಗ ಅವನೇ ಕರೆದು ಕೊಡಬಹುದು
ಸಂತೆಯಲ್ಲಿ ತರಕಾರಿ ಕೊಳ್ಳುವಾಗ ಸಿಗಬಹುದು ಅದೇ ನೆಂಟ
ಅಯ್ಯೋ ಆವತ್ತು ಮಾತಾಡಿಸಬೇಕೆಂದಿದ್ದೆ,
ಊಟವಾದುದೇ ಊರಿಗೆ ಹೋಗುವರಾರೋ ಸಿಕ್ಕರು,
ಕಾರಲ್ಲಿ ನೇರ ಮನೆಗೇ ಹೊಗಬಹುದಲ್ಲಾಂತ ಹೊರಟುಬಿಟ್ಟೆ
ಏನೋ ಒಂದು ಕುಂಟುನೆಪ,
ಹೊರತಳ್ಳಬಹುದು ಜೇಬಿನಿಂದ ನೋಟು ತೆಗೆಯುತ್ತಾ

ಹಾಗೆಯೇ ಆ ರೂಟಿಗೆ ಮತ್ತೆ ಬಂದ ಕಂಡಕ್ಟರೂ
ಮಾತಾಡಲು ಸಿಕ್ಕ ಮತ್ತೊಂದು ವೇದಿಕೆಯೂ
ವಾಟ್ಸಾಪೋ ಈಮೇಲೋ ವೀಡಿಯೋ ಕಾಲೋ
ಹೇಗೋ ಸಾಧಿಸಬಹುದು ಮತ್ತೆ ಸಂಪರ್ಕ
ಸಪ್ತಸಾಗರದಾಚೆಯವರ ಜತೆಗೂ

ಸಿಗಲಾರದಂತೆ ಇಲ್ಲವಾದವರದ್ದೇ ಸಮಸ್ಯೆ
ಆಡಲು ಮರೆತ ಮಾತು ಗಂಟಲಲ್ಲೇ ಉಳಿದುಹೋಗಿ
ಎಷ್ಟು ತಣ್ಣನೆ ನೀರು ಹೊಯ್ದರೂ ಅಲ್ಲಾಡದವರ ನೋಡಿ
ತಡೆಹಿಡಿಯುವುದು ಕೈ ಚಿತೆಗೆ ಯಜ್ಞಕಾಷ್ಠ ಹಾಕುವಾಗ
ವಾಪಸು ಬರುವಾಗಿನ ಮೌನದಲಿ ಅನುರಣಿಸುವುದು
ಈಗ ಮರೆತದ್ದನ್ನು ಮರಳಿಸುವವರು ಯಾರು
ಮರಳಿಸಿದರೆ ಅದನ್ನು ಪಡೆಯುವವರು ಯಾರು

ಕೊನೆಯ ಪತ್ರದ ಕೊನೆಯಲ್ಲವರು ಬರೆದಿದ್ದರು:
ಬಾಕಿ ಮೊಕ್ತಾ.
ಹೊದಿಕೆ ಸರಿಸಿ ಮುಖವನ್ನೇನೋ ತೋರಿಸಿದರು;
ಆದರದು ಪೂರ್ತಿ ಕಪ್ಪುಗಟ್ಟಿತ್ತು.

Tuesday, January 10, 2023

ಐಡಿಯಲ್ ಬಾಯ್

ಬೆಳಕಿನ ಸೆಲೆಯ ಅರಸಿ ಹೊರಟ ಹುಡುಗ
ಕೊನೆಗೇನಾದ ಎಂದು ಅವರು ಹೇಳುವುದಿಲ್ಲ
ಆದರೆ ಅವನಿಗೆ ಒಳ್ಳೆಯದೇ ಆಗುತ್ತದೆ
ಚೆನ್ನಾಗಿ ಕಲಿತು ಮುಂದೆ ದೊಡ್ಡ ಸಿನೆಮಾ ಮಾಡುತ್ತಾನೆ

ಅವನಿಗೀಗ
ಬಳೆಗಳಿಗೆ ಬಣ್ಣ ಎಲ್ಲಿಂದ ಬರುತ್ತದೆ ಎಂಬುದು ಗೊತ್ತು
ಕುಳಿಯ ಚಮಚೆಗೆ ಅಷ್ಟುದ್ದ ಹಿಡಿಕೈ ಹಚ್ಚಿದ್ದು ಗೊತ್ತು
ಚಲನಚಿತ್ರವು ಹೇಗೆ ಮೂಡುತ್ತದೆಂಬುದು ಗೊತ್ತು
ನಿರುದ್ಯೋಗಿಗೆ ಕೆಲಸ ಕೊಡಿಸುವುದು ಗೊತ್ತು
ಐಡಿಯಲ್ ಬಾಯ್ ಹೇಗಿರಬೇಕೆಂಬುದು ಗೊತ್ತು

ಅಥವಾ ಅವನಿಗೆ ಈ ಮೊದಲೇ ಎಲ್ಲಾ ತಿಳಿದಿತ್ತು
ಓಡುವ ರೈಲಿನಲ್ಲಿ ಚಹಾ ಮಾರುವ ಚಾಕಚಕ್ಯತೆ
ಮೊಳೆಯ ಅಲಗನ್ನು ಚೂಪಾಗಿಸಿ ಬಾಣ ಮಾಡುವ ಕಲೆ
ಕನಸಿನ ಸಿನೆಮಾ ನೋಡಲು ಶಾಲೆ ತಪ್ಪಿಸಿ ಓಡುವ ಬಗೆ
ಹಸಿದ ಹೊಳಪುಕಣ್ಣಿನವನಿಗೆ ಬುತ್ತಿಯ ಬಿಟ್ಟುಕೊಡುವ ನಲ್ಮೆ
ಬಿಸಿಲಿಗೆ ಕುಳಿತ ಸಿಂಹಗಳನು ಸದ್ದಿಲ್ಲದೆ ನೋಡುವ ಜಾಣ್ಮೆ

ಇನ್ನು ಆ ನಿಲ್ದಾಣದಲ್ಲಿ ರೈಲು ನಿಲ್ಲುವುದಿಲ್ಲ

ಆದರೆ-
ಮಸೂರಗಳಿಂದ ಪರದೆಯ ಮೇಲೆ ಚಿತ್ರ ಮೂಡಿಸಬಲ್ಲ ಹುಡುಗ
ಕಂಬಿಗಳ ಮೇಲೆ ರೈಲಿಗಿಂತ ಜೋರಾಗಿ ಓಡಬಲ್ಲ ಹುಡುಗ
ಗೋಡೆಯ ಮೇಲೆ ತಾರಾಲೋಕವನಿಳಿಸಬಲ್ಲ ಹುಡುಗ
ಸತ್ಯಕ್ಕೆ ಸ್ಥಿರವಾಗಿ ನಿಂತು ಗೆಳೆಯರ ಬಿಟ್ಟುಕೊಡದ ಹುಡುಗ
ಅಮ್ಮನಿಗಾಗಿ ಬಣ್ಣದ ಕರಡಿಗೆ ತಂದುಕೊಡುವ ಹುಡುಗ-

-ಈಗ ಬೆಳಕಿನ ಮೂಲವನ್ನರಸಿ ಹೊರಟಿದ್ದಾನೆ...
ಆತ ಒಂದು ದಿನ ವಾಪಸಾಗಿಯೇ ಆಗುತ್ತಾನೆ:
ಅಪ್ಪನ ಕಷ್ಟಗಳಿಗೆ ಹೆಗಲಾಗಿ ನಿಲ್ಲಲು
ತಂಗಿಯ ಹೆರಳಿಗೆ ರಿಬ್ಬನ್ ತೊಡಿಸಲು
ಗೆಳೆಯರ ಕಣ್ಣಲಿ ಮಿಂಚರಳಿಸಲು
ಹಳಿಗಳ ಮೇಲಿನ ಮೌನವ ನೀಗಲು
ಕಥೆಗಳಿಗೆ ಚಿತ್ರದ ರೂಪವ ಕೊಡಲು.

['The Last Film Show' ಸಿನೆಮಾ ನೋಡಿ]