Friday, January 27, 2017

ಜೇನಹನಿ

ಸೌತೆಯ ಹೂವನ್ನು ನೀನು ಮುಡಿಯುವುದೇ ಇಲ್ಲ
ಸೌತೆಯಷ್ಟೇ ಏಕೆ- ಹಾಗಲ, ಕುಂಬಳ, ತೊಂಡೆ, ಚೀನಿ
ಚಪ್ಪರ - ಅಂಗಳಗಳ ಹಬ್ಬಿ ತುಂಬಿದ ಬಳ್ಳಿಗಳಲ್ಲರಳಿದ
ಹೂರಾಶಿ ಅಲಂಕಾರಕ್ಕೆಂದೆಂದೂ ಅನಿಸಿದ್ದಿಲ್ಲ ನಿನಗೆ.
ನಿರೀಕ್ಷೆಯೇನಿದ್ದರೂ ಅವುಗಳಡಿಯಿಂದ ಮೂಡುವ ಮಿಡಿಗಳೆಡೆಗೆ
ಮಿಡಿ ಬೆಳೆದು ಮೈದುಂಬಿ ಎಳೆಕಾಯಾಗಿ ಜೋತಾಡಿ
ಯಾವುದೋ ಕಾದಂಬರಿಯೋದುತ್ತ ಕಟ್ಟೆಯ ಮೇಲೆ ಕೂತ
ನಿನ್ನರಳುಕಂಗಳ ಸೆಳೆದು ಕೊಯ್ದು ಕತ್ತರಿಸಲ್ಪಟ್ಟು
ಉಪ್ಪು-ಖಾರದೊಂದಿಗೆ ಬೆರೆತು ರುಚಿರುಚಿಯಾಗಿ
ಹಸಿಹಸಿಯಾಗಿ ತಿನ್ನಲ್ಪಟ್ಟು ಭಲೇ ಭಲೇ ಎಂದು
ನಿನ್ನಿಂದ ಹೊಗಳಿಸಿಕೊಂಡು ಚಪ್ಪರಿಸಿದ ನಾಲಿಗೆಯಿಂದ

ಈ ನಡುವೆ ಆ ಸೌತೆಹೂ ಬಾಡಿ ಮುದುರಿ ಉದುರಿದ್ದು
ನಿನಗೆ ತಿಳಿಯಲೇ ಇಲ್ಲ. ನಿಲ್ಲಿಸಿದ್ದ ಪುಟವನ್ನು
ಬುಕ್‌ಮಾರ್ಕ್ ಮೂಲಕ ಗುರುತಿಸಿ ಕಾದಂಬರಿ ಮುಂದುವರೆಸಿದೆ.
ಈಗ ಕೆದಕಿದರೆ ಮಣ್ಣೊಳಗೆ ಮಣ್ಣಾಗಿರುವ ಪಕಳೆಗಳ ಗುರುತೂ ಸಿಗದು.
ಆ ಹೂವೊಳಗಿದ್ದ ಬಂಡು ಹೀರಿ ಮತ್ತೊಂದು ಹೂವಿಗೆ ಹಾರಿದ್ದ
ದುಂಬಿಯೂ ಈಗ ಕಾಣಸಿಗದು:
ಪುಟದಿಂದ ಪುಟಕ್ಕೆ ಚಲಿಸುವ ಬುಕ್‌ಮಾರ್ಕಿನಂತೆ
ಅದೀಗ ಮತ್ಯಾವುದೋ ಹೂದೋಟದಲ್ಲಿರಬಹುದು.
ಅಥವಾ ಈ ಪ್ರದೇಶವನ್ನೇ ತೊರೆದಿರಬಹುದು:
ತನ್ನಿಂದಲೇ ಆದ ಪರಾಗಸ್ಪರ್ಶದ ಅರಿವೇ ಇಲ್ಲದೆ.
ಕಾದಂಬರಿ ಮುಗಿದ ಮೇಲಿನ ಅನಗತ್ಯ ಬುಕ್‌ಮಾರ್ಕಿನಂತೆ.

ಆದರೆ ಆ ದುಂಬಿ ಹೀರಿದ ಜೇನಹನಿ ಅದೋ ಆ ಎತ್ತರದ ಮರದ
ಟೊಂಗೆಗೆ ಕಟ್ಟಿದ ಜೇನುತಟ್ಟಿಯಲ್ಲಿ ಇನ್ನೂ ಇದೆ ಬೆಚ್ಚಗೆ.
ಸಾವಿರ ಕಣ್ಗಳ ನೀರಲ್ಲಿ ನೀರಾಗಿ, ನೆನೆಯುತ್ತ ಅಮ್ಮನ ಮಡಿಲು:
ಹೂವಮ್ಮನ ಒಡಲು.

Wednesday, January 04, 2017

ನನ್ನೊಳಗಿನ ಶಿಮ್ಲಾ

ಶಿಮ್ಲಾದ ಮಾಲ್ ರೋಡಿನಲ್ಲಿದ್ದಾಗ
ಮಳೆ ಬರಬೇಕು ಎಂಬುದೊಂದು ವಿಲಕ್ಷಣ ಆಸೆ.
ಇಲ್ಲಿ ಹಾಗೆಲ್ಲ ಬೇಕೆಂದಾಗ ಮಳೆ ಬರುವುದಿಲ್ಲ,
ಬೇಕಿದ್ದರೆ ಹಿಮಪಾತದ ವ್ಯವಸ್ತೆ ಮಾಡಬಹುದು
ಎಂದರು ಸ್ಥಳೀಯರು. ವ್ಯವಸ್ತೆ ಮಾಡಬಹುದು
ಎಂತಲೇ ಅವರೆಂದರು ಅಂತಲ್ಲ, ಅರೆಬರೆ
ಹಿಂದಿ ಬಲ್ಲ ನಾನು ಹಾಗೆ ಅರ್ಥೈಸಿಕೊಂಡೆ. 

ಆದರೆ ವರುಷಗಳ ಹಿಂದೆ ನೋಡಿದ್ದ ಶಿಮ್ಲಾ
ಮತ್ತು ನನ್ನ ಮಳೆ ನೋಡುವ ಬಯಕೆ
ಮತ್ತೆ ನೆನಪಾಗಿದ್ದು ಧರ್ಮಸ್ಥಳ ದೇವಸ್ಥಾನದ ಎದುರಿನ
ವಿಶಾಲ ಅಂಗಣದ ಬದಿಯ ಗೂಡುಗೂಡು ಅಂಗಡಿಗಳ
ಜಂಗುಳಿಯಲ್ಲಿರುವಾಗ ದಿಢೀರ್ ಮಳೆ ಬಂದಾಗ.
ಕೊಂಡ ಗಿಲೀಟು ವಸ್ತುಗಳ ಪುಟ್ಟ ಕವರನ್ನು
ಈಗಷ್ಟೆ ಸಂಪಾದಿಸಿದ್ದ ಪುಣ್ಯದ ಸಮೇತ ಹಿಡಿದುಕೊಂಡು
ಪುಟ್ಟ ನೀಲಿ ತಗಡಿನ ಕೆಳಗಿನ ತಾತ್ಕಾಲಿಕ ಆಸರೆಯಲ್ಲಿ
ದೇಹವನ್ನಿನ್ನಷ್ಟು ಚಿಕ್ಕದು ಮಾಡಿಕೊಂಡು ನಿಂತಿದ್ದಾಗ.

ಆಮೇಲೆ ಹಾಗೆ ತುಂಬಾ ಸಲ ಆಗಿದ್ದುಂಟು:
ದಾಂಡೇಲಪ್ಪನ ಜಾತ್ರೆಯಲ್ಲಿ, ಸಾಗರದ ತೇರಿನಲ್ಲಿ,
ಅಷ್ಟೇ ಏಕೆ, ಇಲ್ಲೇ ನಮ್ಮ ಗಾಂಧಿ ಬಜಾರಿನಲ್ಲಿ.
ಸಂಭ್ರಮ ತುಂಬಿದ ಬೀದಿಯಲ್ಲಿ
ಜನವೆಲ್ಲ ತಮ್ಮದೇ ಬಿಡಿಬಿಡಿ ಖುಷಿಯಲ್ಲಿ
ವ್ಯಾಪಾರಿಗಳು ಅಂಗಡಿಯೊಳಗಿನ ಧಗೆಯಲ್ಲಿ
ಮುಳುಗಿದ್ದಾಗ ಇದ್ದಕ್ಕಿದ್ದಂತೆ ಸುರಿಯತೊಡಗುವ ಮಳೆ
ನನಗೆ ಶಿಮ್ಲಾದ ಮಾಲ್ ರೋಡ್ ನೆನಪಿಸುವುದು;
ಪರ್ವತನಗರಿಯ ಅಂಚುರಸ್ತೆಗಳ ಇಕ್ಕೆಲದ
ಪೈನ್ ಮರಗಳು ಇನ್ನಷ್ಟು ಮುದುಡಿ
ಮಳೆಹನಿಗಳ ಜೋರಿಸುತ್ತ ನಿಂತಂತೆ ಭಾಸವಾಗುವುದು.

ಅದಕ್ಕೇ ನನಗೆ ಮತ್ತೊಮ್ಮೆ ಶಿಮ್ಲಾಕ್ಕೆ ಹೋಗಲು ಭಯ:
ಅಕಸ್ಮಾತ್ ನಾನು ಹೋದಾಗಲೇ ಅಲ್ಲಿ ಮಳೆ ಬಂದರೆ?
ನನ್ನೊಳಗಿನ ಈ ಬಯಕೆ ತೀರಿಹೋದರೆ?
ಮತ್ತೆ ಇಲ್ಲಿದ್ದಾಗ ಶಿಮ್ಲಾ ನೆನಪಾಗದಿದ್ದರೆ?

Sunday, January 01, 2017

ಒಡೆದ ಹಿಮ್ಮಡಿಯೊಂದಿಗೆ ಬಂದ ಹೊಸವರ್ಷಕ್ಕೆ...


ಗೂರಲು ಕೆಮ್ಮಿನ ಅಜ್ಜ ಚಳಿ ಕಾಯಿಸಲು ಒದ್ದೆ ಕಟ್ಟಿಗೆಗೆ ಸೀಮೆ‌ಎಣ್ಣೆ ಸುರುವಿ ಬೆಂಕಿ ಹಚ್ಚಲು ಒದ್ದಾಡುತ್ತಿರುವಾಗ, ಬೆಳ್ಳಂಬೆಳಗ್ಗೆ ಅರಳಬೇಕೆಂಬ ಬೇಸರದೊಂದಿಗೆ ಇಬ್ಬನಿ ಹನಿಗಳ ತಂಪಿಗೆ ಮೊಗ್ಗುಗಳು ನಡುಗುತ್ತಿರುವಾಗ, ಜಾಗಿಂಗ್ ಹೊರಟ ಹುರುಪಿನ ಶೂಗಳ ಬಿಗಿಯಲು ಲೇಸಿನ ದಾರದ ಅಂಚುಗಳು ತಯಾರಾಗುತ್ತಿರುವಾಗ, ಪ್ರತಿಸಲದಂತೆ ಚಳಿಗಾಲದಲ್ಲೇ ಬಂದಿದೆ ಹೊಸವರ್ಷ -ತನ್ನ ಒಡೆದ ಹಿಮ್ಮಡಿಯೊಂದಿಗೆ.. ಮೊದಲ ಹಾರಯಿಕೆ ಅದಕ್ಕೇ ಬೇಕಿದೆ; ಮೊದಲ ಆರಯಿಕೆ ಅದಕ್ಕೇ ಆಗಬೇಕಿದೆ.   ಸರಿಯಾದ ಮುಲಾಮು ಹಚ್ಚಿ ಮಾಲೀಶು ಮಾಡಬೇಕಿದೆ, ಖುಷಿಯ ಹಾಡು ಹೇಳಿ ನೋವ ತೊಲಗಿಸಬೇಕಿದೆ, ಅದರ ಹೆಜ್ಜೆಯೊಡನೆ ನಮ್ಮ ಹೆಜ್ಜೆ ಬೆರೆಸಿ ನಡೆಸಬೇಕಿದೆ ಮುನ್ನೂರರವತ್ತೈದು ದಿನಗಳ ದೂರದಾರಿ... ಅದಕೇ, ಗುನುಗಿಕೊಳ್ಳೋಣ ಒಂದಷ್ಟು ಆಶಯದ ನುಡಿ: ಹಾರೈಸಿಕೊಳ್ಳೋಣ ಒಳ್ಳೊಳ್ಳೆ ಚಿತ್ರಗಳ ದೃಶ್ಯಾವಳಿ:


ನಮ್ಮ ಬಟ್ಟಲಿಗೆ ಬಿದ್ದ ಪಾಯಸದಲ್ಲಿ ಇರಲೆಂದು ಯಥೇಚ್ಛ ಗೋಡಂಬಿ-ದ್ರಾಕ್ಷಿಗಳು
ಬೋರು ತರಿಸುವ ಮೊದಲೇ ಮುಗಿಯಲೆಂದು ಧಾರಾವಾಹಿಗಳು
ಮಳೆ ಬರುವ ಮೊದಲೇ ಒಣಗಲೆಂದು ತಂತಿಯ ಮೇಲಿನ ಬಟ್ಟೆಗಳು
ಸಂಜೆ ಸಂತೆಗೆ ಹೋದವರಿಗೂ ಸಿಗಲೆಂದು ತಾಜಾ ಟೊಮೆಟೊಗಳು
ಅಲಾರ್ಮಿನ ಸ್ನೂಸುಗಳ ನಡುವಿನ ಕಿರುನಿದ್ರೆಯಲೂ ಸಿಹಿಗನಸೇ ಇರಲೆಂದು
ಆಸ್ಪತ್ರೆಯ ಕಿಟಕಿ ಬಳಿ ಕೂತ ರೋಗಿಗೆ ಪುಟ್ಟಮಗು ಹಣ್ಣು ತಂದು ಕೊಡಲೆಂದು
ನಾವು ಹೊಕ್ಕ ಎಟಿ‌ಎಮ್ಮಿನಲಿ ಬೇಕಾದಷ್ಟು ದುಡ್ಡಿರಲೆಂದು
ಟ್ರಾಫಿಕ್ಕಿನಲಿ ಸಿಲುಕಿದ ಆಂಬುಲೆನ್ಸಿಗೆ ಸುಲಭ ದಾರಿ ಕಾಣಲೆಂದು
ಸರ್ಕಸ್ಸಿನ ಗಿಳಿ ಹೊಡೆದ ಪಟಾಕಿ ಡೇರೆಯೊಳಗಿನ ಮಗುವ ಎಚ್ಚರಗೊಳಿಸದಿರಲೆಂದು
ಮಚ್ಚು-ಲಾಂಗಿಲ್ಲದ ಸಿನೆಮಾಯುಗ ಬಂದರೂ ಕುಲುಮೆಗಳಿಗೆ ಆದಾಯವಿರಲೆಂದು
ಪೆಡಲು ತುಳಿಯದೆಯೆ ಲೂನಾ ಏರು ಹತ್ತಲೆಂದು
ಪ್ರೇಮಿಗಳೇ ತುಂಬಿದ ಪಾರ್ಕಿನಲ್ಲಿ ಸುಸ್ತಾದ ಅಜ್ಜನಿಗೊಂದು ಬೆಂಚಿರಲೆಂದು
ಳಕ್ಷಜ್ಞದೊಂದಿಗೆ ಮುಗಿದ ಅಕ್ಷರಮಾಲೆಯ ಪಠಣ ಮತ್ತೆ ಶುರುವಾಗಲೆಂದು-
ಅಕಾರದಿಂದ.

ನಿಮಗೆಲ್ಲಾ ಹೊಸ ವರ್ಷದ ಶುಭಾಶಯಗಳು.

-ಸುಶ್ರುತ ದೊಡ್ಡೇರಿ