Tuesday, February 21, 2012

ನಿಲ್ಲುವುದು ಎಂದರೆ...

ಯೋಜನ ಯೋಜನ ನಡೆದರು ಮುಗಿಯದ
ಈ ಕಾಡ ನಡುವೆಯೂ ಒಂದು ಹೆದ್ದಾರಿ.
ಆಳುವರಸ ಹೊರಡಿಸಿದ್ದಾನಂತೆ ಆಜ್ಞೆ:
ಹಿಡಿದು ತನ್ನಿ ಅವನನ್ನು; ಸೆರೆಮುಡಿ ಕಟ್ಟಿ ತನ್ನಿ.
ಹೊರಡುವ ಮುನ್ನ ಮನೆಯಲ್ಲಿ ಹೇಳಿ
ಬರಬೇಕು ಹೆಂಡತಿ ಮಕ್ಕಳ ಬಳಿ ಸೈನಿಕರು:
ಹೋಗುತ್ತಿರುವುದು ಇಂತಹ ಕಾಡಿಗೆ.

ಒಂದಲ್ಲ ಎರಡಲ್ಲ, ಸಂಗ್ರಹಿಸಿದ್ದಾನೆ ತಡೆತಡೆದು
ದಾರಿಹೋಕರ ಬಡಜನರ ಹೆಂಗಳೆಯರ
ಉಸಿರು ಸಿಕ್ಕವರ ಬಸಿರು ಇಳಿದವರ ಹೆಸರು ಮರೆತವರ
ನಿಲ್ಲಿಸಿ ಬೆದರಿಸಿ ಹೊಡೆದು ಕೆಳಗುರುಳಿಸಿ
ಪೂರ್ತಿ ಒಂಬೈನೂರಾ ತೊಂಬತ್ತೊಂಬತ್ತು
ಇನ್ಯಾವ ಸೈನ್ಯದ ಭಯ, ಇನ್ನೆಲ್ಲಿಯ ಆಪತ್ತು!

ಇನ್ನೊಂದೆ ಬೇಕು, ಇನ್ನೊಂದೇ ಸಾಕು. ಅಕೋ,
ಯಾರವನು ಕಾವಿ ಬಟ್ಟೆಯುಟ್ಟು ಸಾವಧಾನ ಹೆಜ್ಜೆಯಿಟ್ಟು
ಬಲಿಯಾಗಲೆಂದೆ ಬರುತಿರುವವನು
ಅರಸನಣತಿಯಾಲಿಸಿ ಬಂದ ಗುಪ್ತಚರನೆ?
ಭೀತಿ ಹೊಸಕಿದ ರೀತಿ ಮಂದಚಲನೆ..
ಇರುವರಣ್ಯದ ಪರಿಯರಿಯದ ಹೊಸಬನೆ?
ಯಾರಾದರೇನು? ಹಸಿದ ಅಸಿಗಾಹುತಿಯಾಗುವ
ದೆಸೆಯವನ ನೊಸಲಿನಲ್ಲಿರೆ, ಯಾರಾದರೇನು?

ಸವರಿದನು ಕತ್ತಿ. ಕೊರಳ ಹಾರಕ್ಕೊಂದೆ ಮಣಿ ಬಾಕಿ.
ನಡೆದನು ಬಿರಬಿರನೆ ಸಾಧುವೆಡೆಗೆ
ಹಿಂಬಾಲಿಸಿದನು ದಿಟ್ಟಿ ಕದಲಿಸದೆ
ಓಡಿದನು ಮಂದಗಮನನ ಹಿಂದೆ ಕಚ್ಚಿಯೊಸಡು
ನಿಂದನು ಬಳಲಿ ಬೆವರೊಡೆದು, ಬಿಟ್ಟು ಏದುಸಿರು

ಎಂಥ ದುರ್ಗಮ ಗಿರಿಶ್ರೇಣಿಗಳಲೋಡಿದವನು ತಾನು!
ಆನೆ ಜಿಂಕೆ ಚಿರತೆಗಳ ವೇಗ ಹಿಮ್ಮೆಟ್ಟಿ
ಹಾರುವಕ್ಕಿಗಳ ಬೆನ್ನಟ್ಟಿ, ಲೆಕ್ಕಿಸದೆ ಮುಳ್ಳುಕಂಟಿ
ಆದರಿದೇನಿದು ಇಂದು? ನಡೆವ ಸನ್ಯಾಸಿಯ
ಹಿಡಿಯಲಾಗದೆ ದೌಡಾಯಿಸಿದರು ಜೋರು?

ನಿಂತು ಕಿರುಚಿದನು ಹಿಂಸ್ರನುತ್ಕಂಠದಿ:
ನಿಲ್ಲಲ್ಲಿ, ಹೇ ಸನ್ಯಾಸಿ, ನಿಲ್ಲಲ್ಲಿ.

ತಿರುಗಿದನು ಯತಿ, ಮಂದಸ್ಮಿತ ಮುಖಿ
ಅರುಹಿದನು: ನಿಂತೆ ಇರುವೆನು ನಾನು,
ನೀನು ನಿಲ್ಲುವುದೆಂದು?

ಇದೆಲ್ಲಿಯ ಮರುಳು ಸನ್ಯಾಸಿ!
ಹೆಜ್ಜೆಯೆತ್ತಿಡುತಿದ್ದರು ತಾ ನಿಂತಿರುವೆನೆನುವ!
ಹೇ ಸನ್ಯಾಸಿ, ನಾ ನಿಂತಿರುವೆ, ನೀ ನಿಲ್ಲು

ಯತಿಯ ವದನದಲದೆಂತ ಚಿರಕಾಂತಿ!
ನಾನು ನಿಂತು ಸಂದಿದೆ ಕಾಲ
ಕ್ರೂರತೆಯ ತ್ಯಜಿಸಿ, ಕೊಲ್ಲುವುದ ಬಿಟ್ಟು.
ಪ್ರೀತಿ ಅಹಿಂಸೆ ಸಂಯಮದ ಪಾಲನೆಗೆ ತೊಡಗಿ.
ನಿಂತಿಲ್ಲದಿರುವುದಿನ್ನೂ ನೀನು; ನೀನು.

ಸಾವಿರದ ಬೆರಳು ಕೈಯಲ್ಲೆ ಉಳಿಯಿತು
ಕರವಾಳಕಂಟಿದ ರಕ್ತ ಮಂಕನ್ನು ತೊಳೆಯಿತು
ಸಾಕಾಯ್ತು ಶಾಂತಯೋಗಿಯ ಒಂದೆ ನುಡಿಮುತ್ತು
ಕಿತ್ತೆಸೆದು ಕೊರಳ ಮಾಲೆ, ನಡೆದ ಬುದ್ಧನ ಹಿಂದೆ ಬಿಕ್ಕು.

Wednesday, February 15, 2012

ಯೋಧ ಮತ್ತು ಒಂದು ಮಗು

ಈ ಊರೂ ಮುಂಚೆ ಎಲ್ಲ ಊರಿನಂತೆಯೇ ಇತ್ತು.
ಮನೆಯೆದುರಿಗೇ ಬಸ್ಸುಗಳು ಓಡಾಡುತ್ತಿದ್ದವು.
ಇನ್ನೂ ಸೈಕಲ್ಲೋಡಿಸಲು ಬರದ ಹುಡುಗರು
ಟಯರುಗಳ ಹಿಂದೆ ಕೋಲು ಹಿಡಿದು ಓಡುತ್ತಿದ್ದರು.
ಕಾಯಿನ್ ಫೋನಿನ ಸಣ್ಣ ತೆರೆಯಲ್ಲಿ ಕಳೆಯುತ್ತಿರುವ
ಸಮಯ ಗಮನಿಸುತ್ತ ಜನ ಮಾತಾಡುತ್ತಿದ್ದರು.
ಕಾಲಿಂಗ್ ಬೆಲ್ ಇಲ್ಲದ ಮನೆಗಳ ಬಾಗಿಲ ಚಿಲಕವನ್ನೇ
ಟಕ್ಕಟಕ್ಕೆಂದು ಬಡಿದು, ಇಲ್ಲವೇ ಪ್ರೀತಿಸುವವರ ಪ್ರೀತಿಯ
ಹೆಸರು ಕೂಗಿ ಕರೆದು ಒಳಗೆ ಸೇರಿಕೊಳ್ಳುತ್ತಿದ್ದರು.
ಸಂಜೆಯ ಹೊತ್ತಿಗೆ ಊರವರೆಲ್ಲ ಮೊಂಬತ್ತಿ ಹಿಡಿದು
ಪ್ರಾರ್ಥನೆಗೆಂದು ದೇವಾಲಯದ ಕಡೆಗೆ ಹೆಜ್ಜೆ ಹಾಕುತ್ತಿದ್ದರು.

ಆಮೇಲೆ ಅದೇನಾಯಿತೋ, ದೇಶ ಧರ್ಮ ಸೇಡು ಹಣ ಶತ್ರು ಆಕ್ರಮಣ
ಅಥವಾ ಮತ್ತೇನೋ ಕಾರ್ಯಕಾರಣ, ಚಿರತೆಯ ತರಹದ ಬಟ್ಟೆ
ಧರಿಸಿದ ಮನುಷ್ಯರು ಬಂದೂಕುಗಳನ್ನು ಹಿಡಿದು ಇವರ
ಸೌಖ್ಯದ ನೆಲೆಗಳ ಮೇಲೆ ನುಗ್ಗಿದರು. ಚಾಕು ಚೂರಿ ಸುತ್ತಿಗೆ
ಹಗ್ಗ ದೊಡ್ಡ ಕಲ್ಲು ತಣ್ಣಗೆ ಕೊರೆವ ನೀರು ನಿರಾಹಾರ ಬಲಾತ್ಕಾರ
ಓಹೋ, ಬಂದೂಕೊಂದೇ ಏಕೆ, ಕೊಲ್ಲಲೂ ವಿಧವಿಧ ವಿಧಾನ.
ರುಧಿರದ ವರ್ಣ, ಸಾವಿನ ಚೀತ್ಕಾರ, ಭಯದಿಂದ ಕಂಪಿಸುವಕ್ಷಿ-
ಯೋಧನ ಹೃದಯಕ್ಕದೇ ಮುದ, ಮೆರೆದರೇನೆ ತೃಪ್ತಿ ಅಟ್ಟಹಾಸ.

ಇಲ್ಲೊಂದು ಪಾಪಕ್ಕೆ ಹುಟ್ಟಿದ ಶಿಶು. ಒಬ್ಬ ಯುದ್ಧ ಮರೆತ ಯೋಧ.
ತಾಯೀ ನಿನ್ನೆದೆಯಲ್ಲಿ ಹಾಲಿಲ್ಲವೇ? ನೀನಿದರ ಅಮ್ಮನಲ್ಲವೇ?
ಇದರಳು ನಿನಗೆ ಕೇಳಿಸುತ್ತಿಲ್ಲವೇ? ನಿನ್ನ ಕಣ್ಣೇಕೆ ಹಾಗೆ ಬಿಳುಚಿಕೊಂಡಿವೆ?
ಹೆಣ್ಣು ಹಾಗೆಲ್ಲ ನಿರ್ಭೀತಿಯಿಂದ ಒಬ್ಬಳೇ ನಡೆಯಬಾರದಮ್ಮಾ.
ಇಕೋ, ನಾನು ಬರುತ್ತೇನೆ ನಿನ್ನ ಸಂಗಡ. ಸುರಕ್ಷಿತ ಜಾಗ ತಲುಪಿಸುತ್ತೇನೆ.
ನಿನ್ನ ಮಗು ಮಾಡಿಕೊಂಡ ಹೊಲಸು ನಾನು ತೊಳೆಯುತ್ತೇನೆ.
ಹೊಸ ಬದುಕು ನಿರ್ಮಿಸಿಕೊಡುತ್ತೇನೆ. ಈ ಬೊಮ್ಮಟಿಗೆ ಹಾಲುಣಿಸು.

ಒಬ್ಬ ತಾಯಿಯ ಎದೆಯಲ್ಲಿ ಹಾಲೊಸರಲು ಎಷ್ಟು ಗಂಟೆ ಬೇಕು
ಒಬ್ಬ ತಾಯಿಯ ಹೃದಯದಲ್ಲಿ ಮಮಕಾರ ಮೂಡಲು ಎಷ್ಟು ಗಳಿಗೆ ಬೇಕು
ಒಬ್ಬ ತಾಯಿಯ ಬಾಯಲ್ಲಿ ಜೋಗುಳ ಮಿಡಿಯಲು ಎಷ್ಟು ಹೊತ್ತು ಬೇಕು
ಒಬ್ಬ ತಾಯಿ ತನ್ನ ಮಗುವನ್ನೆತ್ತಿ ಮುದ್ದು ಮಾಡಲು ಎಷ್ಟು ಕಾಲ ಬೇಕು
ಒಬ್ಬ ತಾಯಿಯ ನೋವು ಅರ್ಥ ಮಾಡಿಕೊಳ್ಳಲೆಷ್ಟು ಜನುಮ ಬೇಕು

ರಣರಂಗದಲ್ಲಿರುವವ ಆಡುವ ಮಾತುಗಳಲ್ಲ ಇವು. ಕನಸಿನಿಂದ ಬೆಚ್ಚಿ
ಎದ್ದೇಳುವವನು ಯೋಧನಾಗಿರಲು ಅರ್ಹನಲ್ಲ. ಬದುಕಿಸುವವರಿಗಲ್ಲ ಯುದ್ಧ;
ಕೊಲ್ಲುವವರಿಗೆ. ಎಸೆದಿದ್ದಾನೆ ಅದಕ್ಕೆಂದೇ ಬಂದೂಕು ನೀರಿಗೆ.
ಕುಡಿಸಿದ್ದಾನೆ ಗುಲಾಬಿ ತುಟಿಗಳ ಕಂದನಿಗೆ ಹಾಲು. ಆಗಿದ್ದಾನೆ ತಾನೇ ತಾಯಿ.

[Savior ಎಂಬ ಸಿನೆಮಾ ನೋಡಿ.]