Thursday, January 15, 2009

ಸೂತ್ರ ತಪ್ಪಿದೆ

ಸುಗ್ಗಿಯ ಬಿಡುವಿನಲ್ಲಿ
ಅಣ್ಣನು ಮಾಡಿಕೊಟ್ಟ ಬಣ್ಣದ ಹಾಳೆಯ
ಬಾಲಂಗೋಚಿಯ ತನ್ನಯ ಪಟವನ್ನು
ಹಾರಿಸುತ್ತಿದ್ದಾಗ ಆ ತಮ್ಮ, ಕಣ್ಣಲ್ಲಷ್ಟೇ ಅಲ್ಲ;
ಎದೆಯಲ್ಲೂ ನೀಲಿ ಬಾನು, ಸಂಭ್ರಮ.

ಎಷ್ಟೋ ಸಲ ಆ ಬಾನ ಕಕ್ಷೆಯಲ್ಲಿ ಬಣ್ಣಬಿಲ್ಲು ಮೂಡುತಿತ್ತು..
ಸಾಲಲಿ ಸಾಗುವ ಬಿಳಿಹಕ್ಕಿಗಳು,
ಥಳಥಳ ಹೊಳೆಯುವ ಬಾಲದ ವಿಮಾನ,
ಕನಸಿನಲ್ಲೋ, ಕೆಲವೊಮ್ಮೆ ಸಾಕ್ಷಾತ್ ದೇವರು!

ನೋಡನೋಡುತ್ತಲೇ ಚದುರಿ ಹೋಯಿತಲ್ಲ ಆ ಚಿತ್ರ..
ನಗರಕ್ಕೆಂದು ರಾತ್ರಿಬಸ್ಸು ಹತ್ತಿ ಹೊರಟುಬಿಟ್ಟನಲ್ಲ ಹುಡುಗ-
ಹರಿದು ಆ ಪಟದ ಸೂತ್ರ..

ಲಿಫ್ಟಿನ ಗುಂಡಿಯೊತ್ತಿ ಮೇಲೇರಿ ಸೇರಿಬಿಟ್ಟನಲ್ಲ
ಗಾಜು ಹೊದಿಸಿದ ಬೃಹತ್ ಕಟ್ಟದ
ಎಂಟನೇ ಮಹಡಿಯಲ್ಲಿನ ತನ್ನ ಕಛೇರಿ..
ಮೊಬೈಲಿನ ಮಾತಾಗಿ, ತಾಕಿಯೇಬಿಟ್ಟನಲ್ಲ
ಎತ್ತರದ ಟವರ್ರಿನ ಆಂಟೆನಾ ಕಡ್ಡಿ..
ಆಗಸಮುಖಿಯಾಗಿ ಹಾರಿಯೇಬಿಟ್ಟನಲ್ಲ
ಕಂಡು ಕೇಳರಿಯದ ದೇಶಕ್ಕೆ ವಿಮಾನದಲ್ಲಿ..
ಕೊನೆಗೆ ಯಾರಿಗೂ ಸಿಗದವನಾಗಿ..
ಅದೇ ಪಟದಂತೆ.. ಎತ್ತರದಲ್ಲಿ..
ತೇಲಿಸಿದ ಯಾವುದೋ ಗಾಳಿಯಲ್ಲಿ.. ಏರಿ ಏರಿ..
ಏರಿ.. ಅವನು.. ಬಿತ್ತರದಲ್ಲಿ..

ನೋಡನೋಡುತ್ತಲೇ ಚದುರಿ ಹೋಯಿತಲ್ಲ ಆ ಚಿತ್ರ..
ಹರಿದಿದ್ದು ಹೇಗೆ ಈ ಪಟದ ಸೂತ್ರ?

ಕಾಯುತ್ತಿದ್ದಾನೆ ಹುಡುಗ, ಕನಸು ಕಾಣುತ್ತಿದ್ದಾನೆ..
ಬೀಸಿ ಬಂದೀತೇ ಮತ್ತೆ ಮಾಯೆಯ ಗಾಳಿ?
ತೇಲಿಸೀತೇ, ನೆಲ ಬಿಟ್ಟು ಹಾರಿಸೀತೇ ಕರುಣಾಮಯಿ?
ಕೂಡೀತೆ ಹರಿದ ದಾರ? ಸಿಕ್ಕೀತೆ ಸೂತ್ರ?

ಮಳೆಬಿಲ್ಲಿಲ್ಲದ ಬಾನಬಯಲಲ್ಲೀಗ ಹಕ್ಕಿಯಿಲ್ಲ,
ವಿಮಾನಬಾಲವಿಲ್ಲ, ದೇವರಂತೂ ಸುಳಿವಿಗೇ ಇಲ್ಲ;
ಇಲ್ಲಿ ಸೂತ್ರ ತಪ್ಪಿದೆ ಮತ್ತು-
ಹಳೆಯ ಬಾನಿನ ವಿಳಾಸ ಮರೆತು ಹೋಗಿದೆ!

Friday, January 09, 2009

ನವರಂಗ್ ಟು ಶಿವಾನಂದ

ಇದನ್ನು ಬರೀಲಿಕ್ಕೆ ಕಾರಣ: (೧) ಶ್ರೀನಿಧಿ ಅವತ್ತೆಲ್ಲೋ ಮೆಸೇಜು ಮಾಡಿ 'ನೀನು ನಾರ್ತ್ ಬೆಂಗಳೂರಿನ ಹೋಟೆಲುಗಳ ಯಾಕೆ ಬರೀಬಾರ್ದು? ನಾನು ಸೌತ್ಸ್ ಬಗ್ಗೆ ಬರೀತೀನಿ' ಅಂತ ಹೇಳಿದ್ದು; (೨) ಸಾಮಾನ್ಯವಾಗಿ ಕರ್ತವ್ಯಲೋಪ ಮಾಡುವ ಅವನು, ಸೌತ್ ಬೆಂಗಳೂರಿನ ಹೋಟೆಲುಗಳ ಬಗ್ಗೆ ಮೊನ್ನೆ ಬರೆದೇಬಿಟ್ಟಿದ್ದು.

ನಾನಿದನ್ನು ಬರೆಯಲಿಕ್ಕೆ ಸಾಧ್ಯವಾಗುತ್ತಿರುವುದು: (೧) ನಾನಿರುವುದು ರಾಜಾಜಿನಗರದಲ್ಲಿ ಮತ್ತು ಆಫೀಸಿರುವುದು ಕುಮಾರ ಪಾರ್ಕ್ ಬಳಿ; (೨) ನನಗಿನ್ನೂ ಮದುವೆಯಾಗಿಲ್ಲ ಮತ್ತು ನಾನಿನ್ನೂ ಬ್ಯಾಚುಲರ್ರು (ಅಥವಾ ವೈಸಾ ವರ್ಸಾ); (೩) ನಾನು ಮನೆಯಲ್ಲಿ ಅಡುಗೆ ಮಾಡಬೇಕೆಂದರೆ ಅದಕ್ಕೆ ಸಿಕ್ಕಾಪಟ್ಟೆ ಫ್ರೀ ಟೈಮ್ ಇರಬೇಕು, ರೂಮ್‍ಮೇಟ್ ಇರಬೇಕು ಮತ್ತು ಮುಖ್ಯವಾಗಿ ಮೂಡ್ ಇರಬೇಕು -ಇವು ಪ್ರತಿದಿನ ಕೂಡಿಬರುವುದಿಲ್ಲ; (೪) ಹೋಟೆಲುಗಳಲ್ಲಿ ತಿನ್ನುವುದು ನನ್ನ ಸೋಮಾರಿತನಕ್ಕೆ ಒಳ್ಳೆಯ ಔಷಧಿ.

ರಾಜಾಜಿನಗರದ ನವರಂಗ್ ಸರ್ಕಲ್ಲಿನಿಂದ ಕುಮಾರ ಪಾರ್ಕ್‌ನ ಶಿವಾನಂದ ಸರ್ಕಲ್‌ವರೆಗಿನ ನನ್ನ ಇಷ್ಟದ ಹೋಟೆಲ್ಲುಗಳು ಅಥವಾ ಎಲ್ಲ ಹೋಟೆಲುಗಳಿಗಿಂತ ಸ್ವಲ್ಪ ಭಿನ್ನ/ವಿಶೇಷ ಉಪಹಾರ ಸಿಗುವ ಹೋಟೆಲುಗಳು ಹೀಗಿವೆ:

ಹೋಟೆಲ್ ನಳಪಾಕ, ನವರಂಗ್: ನವರಂಗ್ ಟಾಕೀಸಿನಿಂದ ಮೋದಿ ಆಸ್ಪತ್ರೆ ಕಡೆ ನಾಲ್ಕೇ ನಾಲ್ಕು ಹೆಜ್ಜೆ ಇಟ್ಟರೆ ಎಡಗಡೆಗೆ ತನ್ನ ಆಕಾಶನೀಲಿ ಬಣ್ಣದ ಬೋರ್ಡಿನೊಂದಿಗೆ ನಳನಳಿಸುವ ಈ 'ಈಟ್ ನ್ ಔಟ್' ಹೋಟೆಲ್ಲಿನಲ್ಲಿ ಸಿಗುವ ಸ್ಪೆಶಲ್ ಫುಡ್ಡುಗಳೆಂದರೆ: ಅವಲಕ್ಕಿ, ಪಡ್ಡು (ಗುಳಿಯಪ್ಪ ಅಥವಾ ಕುಣಿ-ಕುಣಿ-ದೋಸೆ), ಮಿರ್ಚಿ, ಗಿರ್‌ಮಿಟ್ಟಿ. ಬೆಣ್ಣೆದೋಸೆ ಸಹ ಚೆನ್ನಾಗಿರುತ್ತೆ.

ಹಳ್ಳಿಮನೆ, ಮಲ್ಲೇಶ್ವರಂ: 'ಆರೋಗ್ಯಕರ ಆಹಾರ' ಎಂಬ ಹಣೆಪಟ್ಟಿ ಇಲ್ಲಿಯ ಎಲ್ಲ ಐಟೆಮ್ಮುಗಳಿಗೆ ಇದೆ. ರವೆ ಇಡ್ಲಿ, ಪೂರಿ-ಪಲ್ಯ ಸೂಪರ್ರು. ಟೊಮ್ಯಾಟೋ ದೋಸೆ, ಅನಾನಸ್ ದೋಸೆ, ಪುದಿನಾ ದೋಸೆ, ಕ್ಯಾರೇಟ್ ದೋಸೆ ಅಂತೆಲ್ಲ ಸ್ಪೆಶಲ್ ದೋಸೆಗಳನ್ನು ಮಾಡುತ್ತಾರೆ. ಇಲ್ಲಿ ದೋಸೆ ಬೇಯಿಸಲಿಕ್ಕೆ ಎಣ್ಣೆ ಬಳಸುವುದಿಲ್ಲ. ಶುದ್ಧ ತುಪ್ಪ ಬಳಸುತ್ತಾರೆ. ಸೊಗದೆ ಬೇರು, ಕೋಕಮ್, ಗಸಗಸೆ -ಮುಂತಾದ ತಂಪು ಪಾನೀಯಗಳು ಲಭ್ಯ. ಕಾಫಿಯಂತೂ ನನ್ನಂತ 'ಕಾಫೀ-ಕುಡುಕ'ರಿಗೆ ಕಿಕ್ಕು!

ಶಕ್ತಿ ವೆಜಿಟೇರಿಯನ್, ಮಲ್ಲೇಶ್ವರಂ: ಸಂಪಿಗೆ ರಸ್ತೆಯಲ್ಲಿ, ಹಳ್ಳಿಮನೆ ಹೋಟೆಲ್ಲಿಗಿಂತ ಎರಡು ಕ್ರಾಸು ಹಿಂದೆ ಇದೆ. ಮೊದಲ ಮಹಡಿಯಲ್ಲಿರುವುದರಿಂದ ಕಣ್ಣು ತಪ್ಪಿಹೋಗುವ ಸಾಧ್ಯತೆ ಹೆಚ್ಚು. ಇಲ್ಲಿಯ ಮೃದು ಚಪಾತಿ, ಅದನ್ನು ಮುರಿಯುವಾಗಲೇ ಅದರಲ್ಲಿನ ಸ್ವಾದಿಷ್ಟತೆಯ ಅನುಭವ ಆಗುತ್ತದೆ. ಹಚ್ಚಿಕೊಳ್ಳಲಿಕ್ಕೆ ಸಬ್ಜಿಗಳೂ ಚೆನ್ನಾಗಿರುತ್ತವೆ. 'ಇಲ್ಲಿ ಎಷ್ಟು ಚಪಾತಿ ತಿಂದರೂ ತಿಂದದ್ದೇ ಗೊತ್ತಾಗೊಲ್ಲ ಮಾರಾಯಾ!' ಎನ್ನುವುದು ಇಲ್ಲಿ ತಿನ್ನುವಾಗಿನ ಪ್ರಶಂಸೆ ಮತ್ತು ಬಿಲ್ ಕೊಡುವಾಗಿನ ಆರೋಪ.

ಸಹ್ಯಾದ್ರಿ ದರ್ಶಿನಿ, ಮಲ್ಲೇಶ್ವರಂ: ಬೆಂಗಳೂರಿನ ಹೋಟೆಲ್ಲುಗಳಲ್ಲಿ ವಿರಳವಾಗಿ ಸಿಗುವ ಖಾಲಿ ದೋಸೆ ಮತ್ತು ಶ್ಯಾವಿಗೆ ಉಪ್ಪಿಟ್ಟು -ಇಲ್ಲಿ ಸಿಗುತ್ತೆ ಮತ್ತು ಸಖತ್ತಾಗಿರುತ್ತೆ. ವಿಳಾಸ: ಮಾರ್ಗೋಸಾ ರೋಡ್, ಹತ್ತನೇ ಕ್ರಾಸ್ ಹತ್ತಿರ.

ಹೋಟೆಲ್ ಜನತಾ, ಮಲ್ಲೇಶ್ವರಂ: ಜನನಿಭಿಡ ಏಯ್ಥ್ ಕ್ರಾಸಿನಲ್ಲಿದೆ. ಮಸಾಲೆ ದೋಸೆಗೆ 'ಕ್ಯೂ-ಫೇಮಸ್ಸು'. ವಡೆ-ಸಾಂಬಾರ್, ಕಾಫಿ ಸಖತ್. ಪಂಚೆ ಉಟ್ಟುಕೊಂಡ ಸರ್ವರುಗಳು ಊರ ಕಡೆ ಹೋಟೆಲು ನೆನಪಿಸಿ ಅರೆಕ್ಷಣ ಮೈಮರೆಸಿದರೆ ಅಚ್ಚರಿಯೇನಲ್ಲ.

ರಸ, ಮಲ್ಲೇಶ್ವರಂ: ಸಂಪಿಗೆ ರಸ್ತೆಯಲ್ಲಿ, ಶಕ್ತಿ ವೆಜಿಟೇರಿಯನ್‌ನ ಹಿಂದಿನ ಕ್ರಾಸಿನಲ್ಲಿದೆ. ದುಬಾರಿ ರೆಸ್ಟುರೆಂಟು, ಹೀಗಾಗಿ ಬಿಲ್ಲು ಪಾವತಿಸುವವರು ಬೇರೆಯವರು ಅಂತಾದರೆ ಕರೆದುಕೊಂಡು ಹೋಗಬಹುದು! ಮೂರು ಫ್ಲೋರುಗಳಲ್ಲಿದೆ. ಒಂದು ಫ್ಲೋರಿಗೆ 'ರಸ', ಇನ್ನೊಂದಕ್ಕೆ 'ಹೆಜ್ಜೆ', ಮತ್ತೊಂದಕ್ಕೆ 'ಶೀಶ' ಎಂಬುದಾಗಿ ಹೆಸರಿಡಲಾಗಿದೆ. ಇದು ಬಾರ್-ಕಮ್-ರೆಸ್ಟುರೆಂಟು ಮತ್ತೆ ವೆಜ್ ಅಂಡ್ ನಾನ್‌ವೆಜ್. ಇದರ ಬಗ್ಗೆ ಬರೆಯಲು ಕಾರಣ, ಇಲ್ಲಿ ಏನು ಬೇಕಾದರೂ ಸಿಗುತ್ತದೆ! ಬೆಂಗಳೂರು, ಮಂಗಳೂರು, ಮಲೆನಾಡು, ಚೈನೀಸು, ನಾರ್ತ್ ಇಂಡಿಯನ್ನು -ಹೀಗೆ ಎಲ್ಲಾ ಕಡೆಯ ತಿನಿಸುಗಳು ಸಿಗುತ್ತವೆ. ಅಂಬೊಡೆ, ಪತ್ರೊಡೆ, ಶಾವಿಗೆ-ಕಾಯಿಹಾಲು, ಪಕೋಡ -ಎಲ್ಲವೂ ತಿನ್ನುವಾಗ ರುಚಿಗೆ ಮತ್ತೊಂದು ಹೆಸರೇನೋ ಅನ್ನಿಸೊತ್ತೆ. 'ನಾನ್‍ವೆಜ್ ಐಟೆಮ್ಮುಗಳೂ ಅದ್ಭುತ' -ನನ್ನ ಕಲೀಗುಗಳ ಹೇಳಿಕೆ.

ಕೃಷ್ಣಾ ಭವನ, ಮಲ್ಲೇಶ್ವರಂ: ಸಂಪಿಗೆ ರಸ್ತೆಯಲ್ಲಿ, ಸಂಪಿಗೆ ಟಾಕೀಸ್ ಬಳಿ ಇದೆ. ಮಂಗಳೂರು ಬನ್ಸ್, ಶ್ಯಾವಿಗೆ ಸಿಗುತ್ತೆ. ಮತ್ತೆ 'ಬಟನ್ ಇಡ್ಲಿ' ಅಂತ ಕೊಡ್ತಾರೆ.. ಗೋಲಿಯಂತಹ ಪುಟ್ಟ ಪುಟ್ಟ ಇಡ್ಲಿಗಳು ಸಾಂಬಾರಿನಲ್ಲಿ ತೇಲುತ್ತಿರುತ್ತವೆ. ಇಡಿ ಇಡೀ ಇಡ್ಲಿಗಳನ್ನು ಸ್ಪೂನಿನಿಂದ ಬಾಯಿಗಿಟ್ಟುಕೊಂಡು ಗುಳುಂ ಮಾಡುವಾಗ ಮಜಾ ಬರುತ್ತೆ.

ಭೀಮಾಸ್, ಶೇಷಾದ್ರಿಪುರಂ: ಮಂಗಳೂರಿನ ಕಡೆಯವರ ಹೋಟೆಲ್ಲು. ಮಂಗಳೂರು ಭಜ್ಜಿ (ಗೋಳಿಭಜ್ಜಿ), ಆಲೂ ಪರೋಟಾ, ನಾನ್-ರೋಟಿ ಚೆನ್ನಾಗಿರುತ್ತವೆ. ವಿಶಾಲವೆನಿಸುವಂತಹ ಹೊರ ಆವರಣದಲ್ಲಿ ಮರದ ನೆರಳಲ್ಲಿ ಹಾಕಿದ ಖುರ್ಚಿಯಲ್ಲಿ ಕೂತು ತಿನ್ನಬಹುದು. ಇಲ್ಲಿಯ ಊಟ ವರ್ಷಗಳಿಂದ ನನ್ನ ಮತ್ತು ನನ್ನ ಕಲೀಗುಗಳ ಮಧ್ಯಾಹ್ನದ ಹಸಿವನ್ನು ತಣಿಸುತ್ತಿದೆ.

ಜನಾರ್ಧನ ಹೋಟೆಲ್, ಶಿವಾನಂದ ಸರ್ಕಲ್: ಸಾಗು ದೋಸೆ, ಮಸಾಲೆ ದೋಸೆ ಮತ್ತು ಕಾಫಿ -ರುಚಿ ನೋಡಲೇಬೇಕಾದವು. ಟೈಮಿಂಗ್ಸ್ ಇದೆ, ನೋಡಿಕೊಂಡು ಹೋಗಬೇಕು. ಬಾಗಿಲು ತೆರೆಯುವುದನ್ನೇ ಕಾಯುತ್ತಾ ಹೊರಗೆ ಜನ ಕೂತಿರುತ್ತಾರೆ. ಸಂಜೆ ಐದು ಗಂಟೆಗೆ ಓಪನ್ನು ಎಂದರೆ, ೦೫:೦೫ಕ್ಕೆ ಹೋದರೆ ನೀವು ವೇಯ್ಟಿಂಗ್ ಲಿಸ್ಟ್ ಸೇರುತ್ತೀರಿ! ಅನಾದಿ ಕಾಲದಿಂದಲೂ 'ಜನಾರ್ಧನ' ದೋಸೆಗೆ ಹೆಸರುವಾಸಿ.

ಸಧ್ಯಕ್ಕೆ ನೆನಪಾಗುತ್ತಿರುವುದು ಇಷ್ಟು. ಅಥವಾ ನಾನು 'ಟ್ರೈ' ಮಾಡಿರುವ, 'ಟ್ರೈ' ಮಾಡಿದಾಗ ಇಷ್ಟವಾದ ಹೋಟೆಲುಗಳು ಇವು. ಇವನ್ನು ಬಿಟ್ಟು ಬೆಂಗಳೂರಿನ ತುಂಬ ಇರುವ ಶಾಂತಿಸಾಗರಗಳು, ಅಡಿಗಾಸ್‍ಗಳು ನಮ್ಮ ಏರಿಯಾದಲ್ಲೂ ಇವೆ. ಕಾಫಿ ಡೇ, ಪಿಜಾ ಹಟ್‌ಗಳೂ ಇವೆ. ಆಯ್ಕೆ ನಿಮ್ಮ ಪಾಕೀಟು, ಸಮಯ, ನಾಲಿಗೆ ಮತ್ತು ಬಹಳ ಸಲ, ಸಂಗಾತಿಗೆ ಬಿಟ್ಟಿದ್ದು. :-)

Thursday, January 01, 2009

ಕೀನ್ಯಾದ ಕಾಡಲ್ಲಿ ಹೊಸ ವರ್ಷ ಬಂದಂತೆ

ಅಗೋ ಅಲ್ಲಿ ಮತ್ತೆ ಬಂದು ನಿಂತಿದೆ ಹೊಸ ವರ್ಷ.. ನಾನೂ ನೋಡುತ್ತಿದ್ದೇನೆ ಇಪ್ಪತ್ಮೂರು ವರ್ಷಗಳಿಂದ, ಸ್ವಲ್ಪವೂ ನಾಚಿಕೆಯಿಲ್ಲ ಈ ಹೊಸ ವರ್ಷಕ್ಕೆ, ಪ್ರತೀ ವರ್ಷ ಬರುತ್ತದೆ.. ನನಗಂತೂ ಇದನ್ನು ಸ್ವಾಗತಿಸೀ ಸ್ವಾಗತಿಸಿ, ಇದು ಬಂತು ಅಂತ ಆಪ್ತರಿಗೆಲ್ಲಾ ಶುಭಾಶಯ ಕೋರಿ, ಇದೇ ಸಂದರ್ಭ ಅಂತ ಗ್ರೀಟಿಂಗು-ಪ್ರೀಟಿಂಗು ಪ್ರಿಪೇರು ಮಾಡಿ, ಬರೆದು-ಬಿಡಿಸಿ ಎಲ್ಲರಿಗೂ ಕಳಿಸಿ, ಅವರಿಂದಲೂ ತರಹೇವಾರಿ ಶುಭಾಶಯಗಳು ವಾಪಸು ಬಂದು, ಅವುಗಳ ವೈವಿಧ್ಯತೆಗೇ ಮಾರುಹೋಗಿ ಮೆಚ್ಚಿಕೊಂಡು ಸಂಭ್ರಮಿಸಿ ಸಂಭ್ರಮಿಸಿ.... ಥೂ, ಬೇಸರ ಬಂದುಬಿಟ್ಟಿದೆ. ಸರೀನಪ್ಪ, ಒಂದ್ ವರ್ಷ ಬಂತು ಆಯ್ತು ಹೋಯ್ತು ಅಂತ ಇಲ್ವಾ ಹಾಗಾದ್ರೆ? ಬಹುಶಃ ಈ ಹೊಸ ವರ್ಷಕ್ಕೆ ಒಂದು ತರಹದ ಹುಂಬ ಜಂಬ: ತಾನು ಬರ್ತಿದೀನಿ ಅಂದಕೂಡಲೇ ಈ ಜನಗಳೆಲ್ಲಾ ಖುಶಿಯಿಂದ ಸ್ವಾಗತಿಸಲಿಕ್ಕೆ ತಯಾರಾಗ್ತಾರೆ ಅಂತ.. ಅದಕ್ಕೇ, ನಾನು ಈ ವರ್ಷ ಏನೇನೂ ಸೆಲೆಬ್ರೇಟ್ ಮಾಡಬಾರ್ದು, ಬಂದ ಹೊಸ ವರ್ಷಕ್ಕೆ ಸ್ವಲ್ಪಾನೂ ಗೌರವ ತೋರಿಸದೇ ಅವಮಾನ ಮಾಡ್ಬೇಕು ಅಂತ ತೀರ್ಮಾನಿಸಿದೀನಿ!

ಆದರೆ ಹಾಗೆ ಸುಮ್ಮನೆ ಕುಳಿತಿರಲು ಆಗುತ್ತಾ? ಕನ್ವರ್ಷನ್ನು ಟೆರರಿಸಮ್ಮು ರಿಸಿಷನ್ನು ರೀ‌ಎಲೆಕ್ಷನ್ನು ವೋಟಿಂಗು ಕಾಸ್ಟ್ ಕಟಿಂಗು ಅಯ್ಯೋ ಬಿಟ್‌ಹಾಕಿ ಸಾರ್, ದಿನಾ ಇದ್ದದ್ದೇ ರಗಳೆ, ಹೊಸ ವರ್ಷ ಬಂದಿದೆ, ಪಾರ್ಟಿ ಮಾಡೋಣ ಬನ್ನಿ, ಎಂಜಾಯ್ ಮಾಡಿ, ಅದೇ ಲೈಫು -ಕೈ ಹಿಡಿದು ಎಳೆಯುತ್ತಿದ್ದಾರೆ ಗೆಳೆಯರು! ರೆಸಾರ್ಟುಗಳೆಲ್ಲಾ ಆಲ್ರೆಡೀ ಬುಕ್ಕುಡು, ಎಂಟ್ರಿ ಫಾರ್ ಕಪಲ್ಸ್ ಓನ್ಲೀ, ಇಡೀ ಫ್ಯಾಮಿಲಿನೇ ಹೋದ್ರೆ ಡಿಸ್ಕೌಂಟು, ಓನ್ಲೀ ಟೂ ಥೌಸಂಡ್ ಪರ್ ಹೆಡ್ಡು (ಫ್ರೀ ಬಿಯರ್ರು; ಫುಡ್ಡಿಗೆ ಎಕ್ಸ್‌ಟ್ರಾ ದುಡ್ಡು), ವರ್ಷಕ್ಕೊಂದೇ ಇಯರೆಂಡು, ರಾತ್ರಿಯಿಡೀ ಗ್ಲಾಸ್ ಎತ್ತು, ಬಾಟಮ್ಸ್ ಅಪ್ಪು, ಎಂಜಿ ರಸ್ತೆಗೆ ಹೋದರೆ ಡೈರೆಕ್ಟಾಗಿ ಯಾರನ್ನಾದ್ರೂ ಅಪ್ಪು, ಹೇಳೋರಿಲ್ಲಾ ಕೇಳೋರಿಲ್ಲ, ಮುಂಜಾನೆ ಹೊತ್ತಲ್ಲಿ-ಕಂಪ್ಲೀಟ್ ಮತ್ತಲ್ಲಿ ಡ್ರೈವ್ ಮಾಡ್ಕೊಂಡ್ ಹೊರಡು, ಯಾರಿಗಾದ್ರೂ ಗುದ್ದು, ನೋ ಪ್ರಾಬ್ಲಮ್ಮು, ಅವ್ರೂ ನಶೇನಲ್ಲೇ ಇರ್ತಾರೆ, ವಿಷ್ ಮಾಡು, ಕೈ ಕುಲುಕು, ಮುಂದೆ ಹೋಗ್ತಿರು. ಹೊಸ ವರ್ಷ, ನಮ್ದೇಯಾ ಅಂತ ತಿಳ್ಕೋ, ಮಸ್ತ್ ಮಜಾ ಮಾಡು. ಈ ವರ್ಷ ಬಿಟ್ಕೊಂಡ್ರೆ ಮತ್ತೆ ನೆಕ್‌ಸ್ಟಿಯರ್ರೇ ಬರೋದು, ಸೋ ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡ. ಹೊಸಬಟ್ಟೆ ಕೇಕು ಸ್ವೀಟು ಗಿಫ್ಟು ವೋಡ್ಕಾ ವ್ಹಿಸ್ಕಿ ಪಾರ್ಟಿ ಬೇಕಾಬಿಟ್ಟಿ ಕ್ರ್ಯಾಕರ್ರು ಬ್ಯಾನರ್ರು ಕ್ಯಾಲೆಂಡರು ಹ್ಯಾಪಿನಿವ್ವಿಯರ್ರು ಒಟ್ನಲ್ಲಿ ಖುಶ್ ಖುಶ್ ಆಗಿ ಇರು. ಜಸ್ಟ್ ಸೇ ಚಿಯರ್ಸ್.

‘ಏನಾಗ್ತಾ ಇದೆ ನಮ್ಮ ಸಂಸ್ಕೃತಿ? ಎಲ್ಲಾ ಪಾಶ್ಚಿಮಾತ್ಯ ದೇಶದವರನ್ನ ಅನುಕರಿಸ್ತಾ ಇದೀವಿ. ಇದು ಒಳ್ಳೇದಲ್ಲ..’ ರುದ್ರಾಕ್ಷಿ ಸರ ಹಿಡಿದ ವಿಭೂತಿ ಹಣೆಪಟ್ಟಿಯ ವೃದ್ಧ ಗೊಣಗುತ್ತಾನೆ. ‘ಛೇ ಅಜ್ಜಾ ನಿಂಗೆ ಅವೆಲ್ಲಾ ಗೊತ್ತಾಗಲ್ಲ. ಹೊಸವರ್ಷ ಹ್ಯಾಸ್ ಕಮ್ಮು, ವಿ ಹ್ಯಾವ್ ಟು ವೆಲ್‌ಕಮ್ಮು! ನೀನು ಸುಮ್ನೇ ಕೂತಿರು. ಈಗ ಅಯಾಮ್ ಗೋಯಿಂಗ್ ಫಾರ್ ಶಾಪಿಂಗು ವಿಥ್ ಮೈ ಗರ್ಲ್‌ಫ್ರೆಂಡು’ ಮೊಮ್ಮಗ ತಿರುಗಿ ಹೇಳುತ್ತಾನೆ.

ನಾನು ಮೂಕವೀಕ್ಷಕನಂತೆ ಕುಳಿತಿದ್ದೇನೆ ಎಂದಿನಂತೆ. ಛಂದ ಪುಸ್ತಕ ಮೊನ್ನೆ ಹೊರತಂದ ‘ಲೇರಿಯೊಂಕ’ ಎಂಬ ಕಾದಂಬರಿ ಹಿಡಿದು. ಪ್ರಶಾಂತ್ ಬೀಚಿ ಅನುವಾದಿಸಿರುವ ಹೆನ್ರಿ ಆರ್. ಓಲೆ ಕುಲೆಟ್‌ರವರ ಕಾದಂಬರಿ ‘ಲೇರಿಯೊಂಕ’. ಕೀನ್ಯಾ ದೇಶದ ಮಾಸಾಯಿ ಜನಾಂಗದ ದನಗಾಹಿ ಹುಡುಗನೊಬ್ಬ ಅಕ್ಷರ ಕಲಿಯಲು ಹೊರಡುವ ಕತೆ ಅದು. ಅದೆಷ್ಟು ರೋಚಕವಾಗಿದೆ ಕತೆ ಎಂದರೆ, ಇನ್ನೂರಾ ಮೂವತ್ತೆರಡು ಪುಟಗಳ ಕಾದಂಬರಿಯನ್ನು ನಾಳೆಗಿಟ್ಟುಕೊಳ್ಳಲೂ ಆಗದೇ ನಾನು ಒಂದೇ ಸಿಟ್ಟಿಂಗಿಗೆ ಓದಿ ಮುಗಿಸಿಬಿಟ್ಟೆ.

ದಟ್ಟ ಆಫ್ರಿಕನ್ ಕಾಡುಗಳಲ್ಲಿ ಅದು ನಡೆಯುವಾಗ ನಮಗೆ ಕುವೆಂಪುರವರ ‘ಮಲೆಗಳಲ್ಲಿ ಮದುಮಗಳು’ ನೆನಪಾಗುತ್ತದೆ. ಭರ್ಜಿ ಎಸೆದು ಪ್ರಾಣಿಗಳನ್ನು ಹೊಡೆದು ತಿನ್ನುವ ನಿರೂಪಣೆ ಓದುವಾಗ ಕೆದಂಬಾಡಿ ಜತ್ತಪ್ಪ ರೈರವರ ‘ಬೇಟೆಯ ನೆನಪುಗಳು’ ನೆನಪಾಗುತ್ತದೆ. ಲೇರಿಯೊಂಕ ಎಂಬ ಆ ಹುಡುಗ ತನ್ನ ಮುದ್ದು ಶೈಲಿಯಲ್ಲಿ ಕತೆ ಹೇಳುತ್ತಾ ಹೋಗುವಾಗ ಎಲ್ಲೋ ಒಂದು ಕಡೆ ‘ಆಲ್ಕೆಮಿಸ್ಟ್’ ನೆನಪಾಗುತ್ತದೆ. ನಿರಾಶ್ರಿತನಂತೆ ಕೇವಲ ಬದುಕುಳಿಯುವ ಛಲದಿಂದ ನಡೆಯುತ್ತ ನಡೆಯುತ್ತ ಹೋಗುವಾಗ ‘ಮಹಾಪಲಾಯನ’ ನೆನಪಾಗುತ್ತದೆ. ಕಲಿತು ಬಂದ ಹುಡುಗನನ್ನು ಊರು ಒಪ್ಪಲು ನಿರಾಕರಿಸುವ ದೃಶ್ಯ ಓದುವಾಗ ‘ಕಾನೂರು ಹೆಗ್ಗಡಿತಿ’ಯ ಹೂವಯ್ಯ ನೆನಪಾಗುತ್ತಾನೆ. ಹೀಗೆ ಓದಿನುದ್ದಕ್ಕೂ ಹಳೆಯ ಓದಿನ ಚಿತ್ರಗಳನ್ನು ಕೆದಕುತ್ತಾ ಹೋಗುವ ಇದು, ‘ಓದುವ ಸುಖ’ ಅಂತಾರಲ್ಲ, ಅದನ್ನನುಭವಿಸಲಿಕ್ಕೆ ಇರುವ ತಕ್ಕ ಉಪಕರ. ನಾವು ಆ ಹಳೆಯ ಕಾದಂಬರಿ-ಪುಸ್ತಕಗಳನ್ನೆಲ್ಲಾ ಎಷ್ಟು ಚೆನ್ನಾಗಿ ಓದಿಬಿಟ್ಟಿರುತ್ತೇವೆಂದರೆ, ಈ ಕಾದಂಬರಿ ಓದುವಾಗ ಆ ಕಾದಂಬರಿಯ ಚಿತ್ರಗಳೆಲ್ಲಾ ನಾವೇ ಈ ಹಿಂದೆ ಕಣ್ಣಾರೆ ಕಂಡವೇನೋ ಎಂಬಂತೆ ಬ್ಯಾಕ್‌ಗ್ರೌಂಡಿನಲ್ಲಿ ತೇಲುತ್ತಿರುತ್ತವೆ.

ಈ ಅನಕ್ಷರಸ್ಥ ಕಾಡುಜನಗಳ ದುನಿಯಾ, ಅವರ ಬದುಕುವ ರೀತಿ, ಮುಗ್ಧತೆ, ನಂಬಿಕೆಗಳು ಅದೆಷ್ಟು ಬೇರೆಯೇ ಆಗಿವೆ ಎಂದರೆ, ನಮ್ಮ ಮುಂದುವರೆದ ಜಗತ್ತಿನೊಂದಿಗೆ ಅವು ಯಾವ ರೀತಿಯಲ್ಲೂ ಬೆರೆಯಲಾರವು. ಆದರೆ ಅದನ್ನು ಬೆರೆಸಲಿಕ್ಕಿರುವ ‘ಕಲಬಶ’ದಂತೆ ಭಾಸವಾಗುತ್ತದೆ ಶಿಕ್ಷಣ. ತಮ್ಮ ಜನಾಂಗದ ಹುಡುಗನೊಬ್ಬ ಸುಶಿಕ್ಷಿತನಾಗಲು ಹೊರಟನೆಂದರೆ ಆತ ವಾಪಸು ಬರುವುದಿಲ್ಲ, ಬಂದರೂ ಆತ ನಮ್ಮವನಾಗಿ ಉಳಿಯುವುದಿಲ್ಲ ಎಂದು ನಂಬಿದ್ದ ಮಾಸಾಯಿಗಳು, ಕೊನೆಗೆ ‘ಒಂದು ಕೈಯಲ್ಲಿ ಭರ್ಜಿ, ಇನ್ನೊಂದು ಕೈಯಲ್ಲಿ ಪುಸ್ತಕ ಹಿಡಿಯಲು ಸಾಧ್ಯ’ ಎಂಬ ತೀರ್ಮಾನಕ್ಕೆ ಬರುತ್ತಾರೆ. ಅದಕ್ಕೆ ಆಗ ಆಫ್ರಿಕಾದಲ್ಲಿದ್ದ ಸ್ವಾತಂತ್ರ್ಯ ಚಳುವಳಿಯೂ ಇಂಬು ಕೊಡುತ್ತದೆ. ನಗರ, ಶಾಲೆ, ಓದು, ವಿದ್ಯೆ, ಅಕ್ಷರ -ಇತ್ಯಾದಿ ಶಬ್ದಗಳ ಪರಿಚಯವೇ ಇಲ್ಲದಿದ್ದ ಲೇರಿಯೊಂಕ ವಿದ್ಯಾವಂತನಾಗಿ ಮರಳಿ ಬರುವಾಗ -ಕಾದಂಬರಿ ಓದುತ್ತಿರುವ ನಮ್ಮ ಮೈಯೂ ಒಮ್ಮೆ ಜುಮ್ಮೆನ್ನುತ್ತದೆ; ಉತ್ಸಾಹದಿಂದ ನರನಾಡಿಗಳಲ್ಲಿ ರಕ್ತದ ಚಲನೆ ವೇಗಗೊಳ್ಳುತ್ತದೆ.

೧೯೫೦ರ ದಶಕದಲ್ಲಿನ ಕೀನ್ಯಾದ ಚಿತ್ರಣ ಈ ಕಾದಂಬರಿಯಲ್ಲಿದೆ. ಜಾಗತೀಕರಣ, ಕ್ರಿಸ್ತೀಕರಣಗಳಂತಹ ವಿಷಯಗಳೂ ಇಲ್ಲಿ ಇರುವುದರಿಂದ ವಿಮರ್ಶಕರಿಗೆ ಕೆಲಸ ಸಿಕ್ಕಿದೆ. ಪಾಶ್ಚಿಮಾತ್ಯ ಅಂತಲ್ಲ; ಹೊರ ಜಗತ್ತಿನ ಗಾಳಿಯ ಸೋಂಕೇ ಇಲ್ಲದೆ ಇದ್ದ ಕೀನ್ಯಾ (ಅಥವಾ ಆ ಮಾಸಾಯಿ ಪ್ರದೇಶ) ಈಗ ಹೇಗಿರಬಹುದು? ಕಾದಂಬರಿಯ ಕೊನೆಯಲ್ಲೇ ಅದು ಬದಲಾಗುವ ಮುನ್ಸೂಚನೆಗಳನ್ನು ಕೊಟ್ಟಿದ್ದಾರೆ ಲೇಖಕರು. ಇನ್ನು ಭಾರತ ಬದಲಾದ ಬಗ್ಗೆ ಅಥವಾ ಬದಲಾಗುತ್ತಿರುವ ಬಗ್ಗೆ ಮಾತನಾಡದಿರುವುದೇ ಲೇಸು! ಕಾದಂಬರಿಯಲ್ಲಿ ಬರುವ ಒಂದು ಸನ್ನಿವೇಶ ಹೀಗಿದೆ: ಹಾದಿ ಮಧ್ಯದಲ್ಲಿ ಶಾಲೆಗೆ ಹೋಗಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದ ಲೇರಿಯೊಂಕನಿಗೆ ಲಿವಿಂಗ್‌ಸ್ಟೋನ್ ಎಂಬ, ಅದಾಗಲೇ ಓದಿ-ಕಲಿತು ಬಂದಿದ್ದ ತಮ್ಮದೇ ಜನಾಂಗದವನ ಪರಿಚಯವಾಗುತ್ತದೆ. ಲಿವಿಂಗ್‌ಸ್ಟೋನ್ ಬಳಿ ಲೇರಿಯೊಂಕ ಕೇಳುತ್ತಾನೆ: "ಒಬ್ಬ ಓದಿ, ವಿದ್ಯಾವಂತನಾಗಿ ಬಂದು ಮತ್ತೆ ಈ ಅನಾಗರೀಕರ ಮಧ್ಯೆ ಅವರಂತೆ ಇರುವುದು ಹೇಗೆ ಸಾಧ್ಯ?" ಅದಕ್ಕೆ ಲಿವಿಂಗ್‌ಸ್ಟೋನ್ ಕಣ್ಣಲ್ಲಿ ನೀರು ತಂದುಕೊಂಡು ಹೇಳುತ್ತಾನೆ: "ದಯವಿಟ್ಟು ಇವರನ್ನು ಅನಾಗರೀಕರು ಎಂದು ಕರೆಯಬೇಡ. ನಿಜ ಹೇಳಬೇಕೆಂದರೆ, ಶಾಲೆಗೆ ಹೋಗಿರುವ ಬಹಳಷ್ಟು ಮಂದಿಗಿಂತ ಇವರು ನಾಗರೀಕರು. ನಮ್ಮಲ್ಲಿ ದ್ವಂದ್ವ ಇದೆ, ನಾವು ನಮ್ಮದೂ ಅಲ್ಲದ ವಿದೇಶಿಯರದೂ ಅಲ್ಲದ ಒಂದು ಕಳೆದುಹೋದ ಸಂಸ್ಕೃತಿಯಲ್ಲಿ ಇದ್ದೇವೆ ಅಷ್ಟೇ."

ಇಷ್ಟು ಇಷ್ಟವಾಗುವಂತೆ ಕಾದಂಬರಿಯನ್ನು ಕನ್ನಡಕ್ಕೆ ತಂದ ಪ್ರಶಾಂತ್ ಬೀಚಿಗೂ, ಪ್ರಕಟಿಸಿದ ವಸುಧೇಂದ್ರರಿಗೂ ಥ್ಯಾಂಕ್ಸ್ ಹೇಳಿ ಒಂದು ಮೇಯ್ಲ್ ಮಾಡಬೇಕು ಎಂದುಕೊಂಡು ಖುರ್ಚಿಯಿಂದ ಏಳುತ್ತೇನೆ. ಹೊರಗಾಗಲೇ ಹೊಸ ವರ್ಷ ಬಂದುಬಿಟ್ಟಿದೆ. ಸೈಲೆಂಟ್ ಮೋಡಿನಲ್ಲಿದ್ದ ಮೊಬೈಲಿನ ತುಂಬಾ ‘ಹ್ಯಾಪಿ ನ್ಯೂ ಇಯರ್’ ಎಸ್ಸೆಮ್ಮೆಸ್ಸುಗಳು, ಮಿಸ್ಡ್ ಕಾಲುಗಳು. ಮೇಯ್ಲ್ ಬಾಕ್ಸ್ ತೆರೆದರೆ ಅಲ್ಲೂ ಶುಭಾಶಯಗಳು. ಹಾಸಿಗೆ ಬಿಚ್ಚಿಟ್ಟುಕೊಂಡು, ಆದಷ್ಟೂ ಮಂದಿಗೆ ಈಗಲೇ ರಿಪ್ಲೇ ಮಾಡಿ, ‘ನಮ್ಮ ಹೊಸವರ್ಷ ಯುಗಾದಿಗೆ ಶುರು ಆಗೋದು’ ಎಂದ ಗೆಳತಿಗೂ ಶುಭಾಶಯ ಕಳುಹಿಸಿ, ಇದೊಂದು ಬ್ಲಾಗ್‌ಪೋಸ್ಟ್ ಬರೆದು ಮಲಗುತ್ತಿದ್ದೇನೆ. ಕೀನ್ಯಾದ ಕಾಡಲ್ಲೂ ಬಂದಿರಬಹುದು ಹೊಸ ವರ್ಷ.. ಇನ್ನೇನು ನನಗೆ ಬೀಳಲಿರುವ ಕನಸಲ್ಲಿ ಲೇರಿಯೊಂಕ ಓಡುತ್ತಿರುತ್ತಾನೆ.. ಹಸುರಿನ ಹಳುವಿನಲ್ಲಿ ನುಸುಳಿ ಹಾರಿ ಓಡೋಡಿ ತನ್ನ ಗೆಳೆಯ ಲಿವಿಂಗ್‌ಸ್ಟೋನ್‌ನನ್ನು ಕಂಡು ಬಿಗಿದಪ್ಪಿ ಹೇಳುತ್ತಿರುತ್ತಾನೆ ‘ಹ್ಯಾಪಿ ನ್ಯೂ ಇಯರ್’.. ಸುತ್ತಲ ಹುಡುಗರೆಲ್ಲ ಅದನ್ನೇ ಪುನರುಚ್ಚರಿಸುತ್ತಾ ಕುಣಿದಾಡುತ್ತಾ ಕೈ ಕೈ ಹಿಡಿದು ಇವರನ್ನೇ ಸುತ್ತುತ್ತಾ...

ನಿಮಗೂ ಹೊಸ ವರುಷದಲ್ಲಿ ಒಳ್ಳೊಳ್ಳೇದೇ ಆಗಲಿ. ಶುಭಾಶಯಗಳು.