Saturday, September 28, 2019

ನಾನು ಹೇಳುವುದು ಹೇಳುತ್ತೇನೆ

ಇಂತಹ ಸಂಜೆಮಳೆಯ ದಿನಗಳಲ್ಲಿ
ಹಲಸಿನ ಹಪ್ಪಳ ತಿನ್ನಬೇಕು
ಅಂಗಡಿಯಿಂದ ಉದ್ದಿನ ಹಪ್ಪಳ ತಂದು ತಿನ್ನುವೆ
ಎನ್ನುವ ಅರಸಿಕರ ಸಂಗ ಬಿಟ್ಟುಬಿಡಿ

ಸೂಚನೆ ಕೊಡದೆ ಬರುವ ಮಳೆ
ಗಾಳಿ ನುಸುಳದ ಡಬ್ಬಿಯಲ್ಲಿ ದಾಸ್ತಾನಿರುವ
ಊರಿಂದ ಕಳುಹಿಸಿದ ಹಪ್ಪಳ
ಕಾದೆಣ್ಣೆ, ಎಣ್ಣೆಜಿಡ್ಡಿನ ಚಿಮ್ಮಟಿಗೆ
ಮತ್ತು ಇಳಿಸಂಜೆ

ಕೇಳಬಹುದು ನೀವು- ಏನು ಮಹಾ ವ್ಯತ್ಯಾಸ?

ವ್ಯತ್ಯಾಸವಿದೆ ಮಹಾಜನಗಳೇ-
ಆ ಹಪ್ಪಳಕ್ಕಾಗಿ, ಬೆಳೆದ ಕಾಯಿಯ ಬಿಟ್ಟುಕೊಟ್ಟ
ಹಿತ್ತಿಲ ಮರ ಬೆಳ್ಳಗೆ ಕಣ್ಣೀರು ಸುರಿಸಿದೆ
ತೊಳೆ ಬಿಡಿಸಿದ ಅಪ್ಪನ ಕೈಗಂಟಿದಂಟು
ತೊಡೆಯಲು ಅಜ್ಜಿ ಕೊಬ್ರಿ ಎಣ್ಣೆ ಹನಿಸಿದ್ದಾಳೆ
ಬಿಡಿಸಿದ ತೊಳೆಗಳ ನುಣ್ಣಗಾಗಿಸಲು
ತೊಳೆದೊರಳು ಗುಡುಗುಡುಗುಟ್ಟಿದೆ
ಬೆರೆಸಲು ಬೀಸಿದ ಮಸಾಲೆಯ ಖಾರಕ್ಕೆ
ಅಮ್ಮನ ಕೈ ಎರಡು ದಿನ ಭುಗುಗುಟ್ಟಿದೆ

ಆ ಹಪ್ಪಳದಲ್ಲಿ, ಮನೆಯವರೆಲ್ಲ ರಾತ್ರಿಯಿಡೀ ಕೂತು
ಬಾಳೆಯೆಲೆ ನುಣ್ಣನೆ ಪ್ಲಾಸ್ಟಿಕ್ ಕವರು ಹಳೆಸೀರೆಗಳ
ಮೇಲೆ ಒತ್ತೊತ್ತಿ ಹಚ್ಚಚ್ಚಿ ತಟ್ಟಿದ ಬೆರಳುಗಳ ಅಚ್ಚಿದೆ
ಅಂಗಳದ ಬಿಸಿಲಿನಲಿ ಸಪಾಟುಗೋಲಗಳ
ಕಾಗೆ ಗುಬ್ಬಿ ನಾಯಿ ಬೆಕ್ಕುಗಳಿಂದ ಕಾದು
ರಕ್ಷಿಸಿದ ಮಕ್ಕಳ ಸೈನ್ಯವಿದೆ
ರುಚಿಹಿಟ್ಟನ್ನೇ ಕದ್ದು ಮೆದ್ದು ಖಾಲಿವೃತ್ತಗಳ
ಸೃಷ್ಟಿಸಿದ ತುಂಟಕೃಷ್ಣರ ಪಡೆಯಿದೆ

ಮತ್ತಾ ಹಪ್ಪಳಗಳಲ್ಲಿ ಊರ ಬಿಸಿಲಿದೆ
ತೆಂಗಿನಮರದ ನೆರಳಿದೆ
ಬಾಳೆಯೆಲೆಯ ಕಂಪಿದೆ
ಹಿಟ್ಟು ಹಚ್ಚಿದ ರಾತ್ರಿ ಧ್ವನಿಸಿದ ನಾನಾ ಕಥೆಗಳಿವೆ

ನಾನು ಹೇಳುವುದು ಕೇಳಿ
ಅರಸಿಕರ ಸಂಗ ಬಿಡಿ
ಈ ಇಳಿಸಂಜೆ, ಕಾದೆಣ್ಣೆ, ಎಣ್ಣೆಜಿಡ್ಡಿನ ಚಿಮ್ಮಟಿಗೆ,
ಸುರಿಮಳೆ, ಕಟ್ಟೊಡೆದ ಹಲಸಿನ ಹಪ್ಪಳ

ಇನ್ನು ನಿಮಗೆ ಬಿಟ್ಟಿದ್ದು.

Sunday, September 01, 2019

ಗಣೇಶನಿಗೊಂದು ಮುಖ


ಆಗಷ್ಟೆ ಕೊಯ್ದು ತಂದ ಕಳಿತ ಮಿದು
ಹಣ್ಣನೊತ್ತಿ ಕತ್ತರಿಸಿದಾಗ ಚಿಮ್ಮಿದ ರಸದಂತೆ
ಚೆಲ್ಲಿದೆ ರಕ್ತ ಹೊಸ್ತಿಲ ಅಕ್ಕಪಕ್ಕ
ಚೀರಿಕೊಂಡಿದ್ದಾಳೆ ಪಾರ್ವತಿ ಕಮರಿ ಬಿದ್ದಿದ್ದಾಳೆ
ಮತ್ತೆ ಎದ್ದಿದ್ದಾಳೆ ಕಣ್ಣೀರು ಕೆನ್ನೆಗೆ ತಾಕಿ ಎಚ್ಚರಾಗಿ
ನೀರಾರಿದ ಕಣ್ಣೀಗ ಕೆಂಪಾಗಿದೆ
ಏರೇರಿಳಿವ ಎದೆ ಬಿಗಿಮುಷ್ಟಿ ಕಂಪಿಸುತಿದೆ ಕೈಕಾಲು
ಅದುರುತುಟಿಗಳ ನಡುವಿಂದುಕ್ಕಿ ಬರುತ್ತಿದೆ ಜ್ವಾಲಾಮುಖಿ
ತತ್ತರಗುಟ್ಟುತಿದೆ ಇಡೀ ಕೈಲಾಸ
ಅಲ್ಲೋಲಕಲ್ಲೋಲವಾಗುತಿದೆ ಸೃಷ್ಟಿ ಚಂಡಿಕಾವತಾರಕೆ

ಮಣಿದಿಹನು ಶಿವ ಆಜ್ಞಾಪಿಸಿಹನು
ಉತ್ತರಕೆ ಮುಖ ಮಾಡಿ ಮಲಗಿದ
ಯಾವುದೇ ಜೀವಿಯ ರುಂಡವನು
ಕತ್ತರಿಸಿ ತನ್ನಿ ದಿನವುರುಳುವುದರೊಳಗೆ

ಹೊರಟಿದ್ದಾರೆ ಆಜ್ಞಾಪಾಲಾಕರು ದಂಡಿಯಾಗಿ
ಹರಿತ ಕತ್ತಿ ಹಿಡಿದು ಸೇನೆಯಂತೆ
ನುಗ್ಗಿದ್ದಾರೆ ಗುಡ್ಡವೇರಿಳಿದು ಮಹಾಕಾನು
ಎಲ್ಲಿದೆ ತಲೆ ಎಲ್ಲಿದೆ ತಲೆ ಎಲ್ಲಿದೆ ತಲೆ
ನಮ್ಮ ಗಣಾಧಿಪನಾಪನಿಗೆ ಒಂದು ಚಂದದ ತಲೆ

ಇಟ್ಟು ಜೋಡಿಸಬರಬೇಕು ಪೂಜಿಸಿದ ಹೂಗಳ
ಹಾಗೂ ಕೂರಿಸಲು ಬರಬೇಕೊಂದು ವಜ್ರಖಚಿತ ಕಿರೀಟ
ಮೊರದಗಲ ಕಿವಿಯಿರಲಿ ಕೇಳಲು ಎಲ್ಲರಹವಾಲು
ಸಿಕ್ಕಿಸುವಂತಿರಬೇಕಲ್ಲಿ ಚಿಗುರಿದ ದೂರ್ವೆಕಟ್ಟು
ದೊಡ್ಡ ನಾಮವ ಬಳಿದರೆ ಚಂದವೆನಿಸಬೇಕು ಹಣೆಯಗಲ
ಸನ್ನೆಯಲೆ ಎಲ್ಲವನು ಸೂಚಿಸುವ ಸೂಕ್ಷ್ಮ ಕಣ್ಣು
ಲೋಕಗಳ ದೂರವನಿಲ್ಲಿಂದಲೆ ಅಳೆವ ತೀಕ್ಷ್ಣ ಕಣ್ಣು
ಉದ್ದ ಮೂಗಿರಬೇಕು ಅವನಿಗೆ
ದೂರದಿಂದಲೆ ಗ್ರಹಿಸುವಂತೆ ಅಡುಗೆಮನೆಯ
ನಾಗಂದಿಗೆಯ ಮೇಲಿಟ್ಟ ಮೋದಕದ ಘಮ
ಮರುಳಾಗಬೇಕೀ ಚೆಲ್ವನಿಗೆ
ಭಾದೃಪದಕೆ ಹೊಸ ಸೀರೆಯುಟ್ಟ ಸಖಿಯರೆಲ್ಲ
ಎಲ್ಲ ಮುತ್ತಿಟ್ಟು ಮುದ್ದಿಸುವಂತೆ ಉಬ್ಬುಕೆನ್ನೆ
ನೈವೇದ್ಯಕಿಟ್ಟ ಸಕಲ ಭಕ್ಷ್ಯಗಳ ಅಗಿದು
ಪುಡಿ ಮಾಡಬಲ್ಲ ಗಟ್ಟಿ ದಂತಪಂಕ್ತಿ
ಇರಲಿ ಬೆದರಿಸಲು ದರ್ಪಿಷ್ಟರ ಒಂದುದ್ದ ಕೋರೆ
ಇರಲಿ ಬಿಚ್ಚುಗುರುಳು ಪೊಗುವಂತೆ ಮನಸೂರೆ
ಕಟ್ಟಲು ಬರಲಿ ಜುಟ್ಟು ಓಡಲೆಣಿಸುವ ತುಂಟನ ಹಿಡಿದು ಅಮ್ಮ
ಹರಸುವಂತಿರಲವನ ಮೊಗ, ಮೊಗದಿಂದಲೇ ನಮ್ಮ

ಮಲಗಿದ್ದಾನಲ್ಲಿ ಮೋಕ್ಷಕ್ಕೆ ಕಾಯುತಿರುವ ಗಜಾಸುರ
ಹಾದಿಗಡ್ಡವಾಗಿ ಹುಲ್ಲಹಾಸಮೇಲೆ ಉತ್ತರಾಭಿಮುಖಿ
ಸುತ್ತ ನೆರೆದ ಕರವಾಳಖಚಿತರಿಗೆ ನಿಬ್ಬೆರಗಾಗುವಂತೆ
ಸ್ವಯಂ ನೆರವಾಗಿ ತ್ಯಜಿಸಿ ಮಹಾಮಹಿಮ ತನ್ನ ಶಿರ

ಜೀವ ತಳೆದಿಹನಿಲ್ಲಿ ಕೈಲಾಸದಲ್ಲಿ ಗಜಾನನ
ನಿಟ್ಟುಸಿರಿಟ್ಟು ಹೆಮ್ಮೆಯಲಿ ನೋಡುತಿಹ ತಂದೆ
ಖುಷಿಯಲಿ ಕಣ್ಣೀರ್ಗರೆವ ತಾಯಿ
ಕುಣಿದಿಹುದು ಗಣಕೋಟಿ ಪುಷ್ಪವರ್ಷಕೆ ತೋಯುತ
ಸುಂದರವದನನ ಹಿಡಿದೆತ್ತಿ ಕೊಂಡಾಡುತ
ಜೈಕಾರಗೈದು ಒಕ್ಕೊರಲಿನಲಿ:
ನೀನೆ ನಮ್ಮ ನಾಯಕ ನೀನೆ ನಮ್ಮ ಪಾಲಕ
ನೀನೆ ಪ್ರಥಮಪೂಜಿತ ಸಕಲ ವಿಘ್ನನಿವಾರಕ.

* *
ವಾರಣವದನ ಆಗಮನ ನಿಮ್ಮ ಮನೆಗೆ ಆನಂದ ತರಲಿ. ಶುಭಾಶಯಗಳು.