ಈಗಷ್ಟೆ ಕವರಿನಿಂದ ಹೊರತೆಗೆದು
ಧರಿಸಿದ ಹೊಸ ಅಂಗಿಯಂತಿದೆ ಎರಡು ಸಾವಿರದ ಹದಿನಾರು. ಇನ್ನೂ ಒಂದೂ ನೆರಿಗೆ ಬಿದ್ದಿಲ್ಲ. ಗರಿಗರಿಯಿದೆ.
ಕಮ್ಮಗೆ ಪರಿಮಳ ಬೀರುತ್ತಿದೆ. ಫಳಫಳ ಹೊಳೆಯುತ್ತಿದೆ. ಹೊಸ ಅಂಗಿ ಅಂತ ನೋಡಿದಾಕ್ಷಣ ಗೊತ್ತಾಗುವಂತಿದೆ.
ಗೋಡೆಯ ಮೇಲಿನ ಹೊಸ ಕ್ಯಾಲೆಂಡರಿನಂತೆ ಈ ಅಂಗಿಯಲ್ಲೂ ಚೌಕಳಿಗಳು. ಎಷ್ಟಿವೆ ಚೌಕಳಿಗಳು? ಮುನ್ನೂರರವತ್ತೈದಿದೆಯಾ?
ಅಥವಾ ಒಂದು ಜಾಸ್ತಿಯಿದೆಯಾ? ಎಣಿಸಲಿಕ್ಕೆ ಯಾರಿಗೂ ಪುರುಸೊತ್ತಿಲ್ಲ. ಹೊಸ ಅಂಗಿ ಧರಿಸಿದ ಖುಷಿಯಲ್ಲಿ,
ಹಮ್ಮಿನಲ್ಲಿ, ಭಿಮ್ಮಿನಲ್ಲಿ, ಹೊಸ ಉತ್ಸಾಹದಲ್ಲಿ ಹೊರಟಿದ್ದೇವೆ ನಡೆದು.
ಹಳೆಯ ಅಂಗಿ ಅಗೋ ಅಲ್ಲಿ ಮೂಲೆ ಸೇರಿದೆ.
ಬಳಸಿ ಬಳಸಿ ಅದು ಪೂರ್ತಿ ಮಾಸಲಾಗಿದೆ. ಅದನ್ನಿನ್ನು ಧರಿಸಲಾಗದು. ಹಳೆಯ ಕ್ಯಾಲೆಂಡರಿನಂತೆ, ತನ್ನ
ಕೆಲಸ ಇಲ್ಲಿಗೆ ಮುಗಿಯಿತೆಂಬಂತೆ, ವಿನಮ್ರವಾಗಿ ಪುಟ್ಟಗೆ ಮುರುಟಿಕೊಂಡು ನಿಶ್ಶಬ್ದಕ್ಕದು ಮೊರೆ ಹೋಗಿದೆ.
ಹಾಗಂತ ಅದನ್ನು ಇಷ್ಟು ಬೇಗ ಮರೆಯಲಾದೀತೇ? ಅದರ ಚೌಕಳಿಗಳಲ್ಲಿ ಪೂರ್ತಿ ಒಂದು ವರ್ಷದ ಅಸಂಖ್ಯ ನೆನಪುಗಳಿವೆ,
ಅಲ್ಲಲ್ಲಿ ಕಲೆಯ ಗುರುತಿದೆ, ಕೆಲವೆಡೆ ನೂಲು ಕಿತ್ತುಬಂದಿದೆ, ಒಗೆದು ಗಟ್ಟಿ ಹಿಂಡಿದ ನೋವಿದೆ, ಎಂದೋ
ಹೊಡೆದ ಪರ್ಫ್ಯೂಮಿನ ಘಮ ಇನ್ನೂ ಅದರ ಕಂಕುಳಲ್ಲಿ ಉಳಿದುಕೊಂಡಿದೆ. ಸರಿಯಾಗಿ ಪರಿಶೀಲಿಸಿದರೆ, ಆ ಅಂಗಿಯ
ಜೇಬಲ್ಲಿ ಒಂದೆರಡು ಹರಕಲು ನೋಟುಗಳೂ ಸಿಕ್ಕಾವು. ಸಿಹಿಸುದ್ದಿ ಬಂದ ದಿನ ಕೊಂಡ ಚಾಕಲೇಟಿನ ಜರಿ ಇನ್ನೂ
ಉಳಕೊಂಡಿರಬಹುದು. ಒಮ್ಮೆ ಹಿಂತಿರುಗಿ ನೋಡೋಣ. ಎರಡು ಹೆಜ್ಜೆ ಹಿಂದಿಟ್ಟು, ಆ ಅಂಗಿಯನ್ನೊಮ್ಮೆ ಕೈಯಲ್ಲಿ
ಹಿಡಿದು ಕಣ್ಣಗಲಿಸಿ ನೋಡೋಣ. ಮೂಗಿನ ಬಳಿ ತಂದು ಉಸಿರೆಳೆದು ನೋಡೋಣ. ಮೈಗೊತ್ತಿಕೊಂಡು ಹಳೆಯ ನೆನಪುಗಳನ್ನು
ಆಹ್ವಾನಿಸಿಕೊಡು ಆಸ್ವಾದಿಸಲಾದೀತೇ ನೋಡೋಣ.
ಹೀಗೇ ಒಂದು ವರ್ಷದ ಹಿಂದೆ, ಡಿಸೆಂಬರ್
ಮೂವತ್ತೊಂದರ ಮಧ್ಯರಾತ್ರಿ, ಜನಗಳೆಲ್ಲಾ ಹೊಸ ವರ್ಷ ಬಂತೆಂದು ಸಂಭ್ರಮಿಸಿ ಪಟಾಕಿ ಹೊಡೆದು ಕುಣಿದಾಡುವಾಗ
ಧರಿಸಿದ ಶರ್ಟು ಅದು. ಹೀಗೇ ಚಳಿಯಿತ್ತು. ಚೂರು ನಶೆಯಿತ್ತು. ಅವರೆಕಾಳಿನ ಸಿಪ್ಪೆ ಬೀದಿಯಲ್ಲೆಲ್ಲ
ಹಾಸಿತ್ತು. ನಾವು ಹೊಸ ವರ್ಷವನ್ನು ತೋಳ್ಬಿಚ್ಚಿ ಸ್ವಾಗತಿಸಿದ್ದೆವು. ಸಂತಸದಿಂದ ಎರಡು ಸಾವಿರದ ಹದಿನೈದರಲ್ಲಿ
ಅಡಿಯಿಟ್ಟಿದ್ದೆವು. ಮುಂದಿನ ಹೆಜ್ಜೆಗಳಲ್ಲಿ ಅದೆಷ್ಟೋ
ಸಂತೋಷ-ದುಃಖದ, ನಲಿವು-ಬಿಕ್ಕಳಿಕೆಯ, ಗೆಲುವು-ಸೋಲಿನ, ಆತಂಕ-ನಿರಾಳದ ದಿನಗಳನ್ನು ನಾವು ಅನುಭವಿಸಿದೆವು.
ನಮ್ಮ ವೈಯಕ್ತಿಕ ಹರುಷ-ದುಗುಡಗಳೊಡನೆ ಎದುರಿನವರ ನಗು-ಅಳುಗಳಿಗೂ ಸ್ಫಂದಿಸಿದೆವು. ಪ್ರಪಂಚದ ಆಗುಹೋಗುಗಳಿಗೆ
ನಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದೆವು.
ಅಲ್ಲೆಲ್ಲೋ ಬಿಹಾರದಲ್ಲಿ ನಡೆದ
ಚುನಾವಣೆಯ ದೃಶ್ಯಗಳನ್ನು ನಾವಿಲ್ಲಿ ಕೂತು ಟೀವಿಯಲ್ಲಿ ನೋಡಿ ಚರ್ಚಿಸಿದೆವು. ದೆಹಲಿಯಲ್ಲಿ ಆಪ್ ಗೆಲ್ತು
ಅಂದಾಗ ’ಅರೇ!’ ಎಂದುದ್ಘರಿಸಿದೆವು.
ವಿಧಾನಸಭೆಯೊಳಗೆ ಕೂತು ರಾಜಕಾರಣಿಗಳು ವಾಗ್ವಾದ ಮಾಡಿಕೊಳ್ಳುತ್ತಿದ್ದರೆ ನಾವು ಸಾಮಾಜಿಕ ಜಾಲತಾಣಗಳಲ್ಲಿ
ನಮ್ಮ ನಿಲುವುಗಳನ್ನು ಮಂಡಿಸಿದೆವು.’ಇನ್ನು
ಡಿಜಿಟಲ್ ಇಂಡಿಯಾ’ ಎಂದಾಗ ಅನುಮಾನದೊಂದಿಗೇ ಅದನ್ನು ಸ್ವಾಗತಿಸಿದೆವು.
ಕಳಂಕಿತ ಲೋಕಾಯುಕ್ತರು ಯಾವಾಗ ಕೆಳಗಿಳಿಯುತ್ತಾರೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿ ನಮ್ಮನ್ನು
ಕಾಡಿತು. ವಿಶ್ವವೇ ಯೋಗ ದಿನವನ್ನಾಚರಿಸುವಾಗ ಹೆಮ್ಮೆಯಿಂದ ಬೀಗಿದೆವು. ಪ್ರಧಾನಿಗಳ ವಿದೇಶ ಪ್ರವಾಸ-ಪಾಕಿಸ್ತಾನ
ಭೇಟಿಯನ್ನೂ, ಮುಖ್ಯಮಂತ್ರಿಗಳ ’ಭಾಗ್ಯ’ ಯೋಜನೆಗಳನ್ನು ಕೆಲವರು ಸ್ವಾಗತಿಸಿದರೆ ಕೆಲವರು ಗೇಲಿ ಮಾಡಿದ್ದಕ್ಕೆ ಸಾಕ್ಷಿಯಾದೆವು.
ಮಂಗಳ ಗ್ರಹವನ್ನು ಸುತ್ತುತ್ತಿರುವ
’ಮಾಮ್’ ವರ್ಷ
ಪೂರೈಸಿದ್ದಕ್ಕೆ ನಾವಿಲ್ಲಿ ಸಿಹಿ ಹಂಚಿಕೊಂಡೆವು. ಸೆನ್ಸೆಕ್ಸ್ ಮೇಲೇರಿದಾಗ ಕಾಲರ್ ಏರಿಸಿದ್ದೂ, ಪೆಟ್ರೋಲ್
ಬೆಲೆ ಇಳಿದಾಗ ಖುಷಿಯಾದದ್ದೂ ನಾವೇ. ರೈತರ ಆತ್ಮಹತ್ಯೆಗಳು ಸರ್ಕಾರಗಳನ್ನು ಕಂಗೆಡಿಸಿದ್ದಷ್ಟೇ ಅಲ್ಲ,
ಸಾರ್ವಜನಿಕರೆಲ್ಲ ಇದಕ್ಕೆ ಕಾರಣವನ್ನೂ ಪರಿಹಾರವನ್ನೂ ಯೋಚಿಸುವಂತಾಯಿತು. ಎತ್ತಿನಹೊಳೆ, ಕಳಸಾ-ಬಂಡೂರಿ
ಯೋಜನೆಗಳ ಬಗ್ಗೆ ನಡೆದ ಪ್ರತಿಭಟನೆಗಳಲ್ಲಿ ನಾವೂ ಘೋಷಣೆ ಕೂಗಿದೆವು.
ಪ್ರಪಂಚದಾದ್ಯಂತದ ಉಗ್ರರ ಅಟ್ಟಹಾಸ
ಕಂಡು ನಾವೆಲ್ಲ ಕ್ರುದ್ಧರಾದದ್ದು ನಿಜ. ಇದ್ದಲ್ಲೇ ಚಡಬಡಿಸಿದ್ದು, ಶಾಪ ಹಾಕಿದ್ದು, ಅಸಹಾಯಕತೆಯಿಂದ
ಕುದ್ದಿದ್ದೂ ಸತ್ಯ. ಯಾಕೂಬನನ್ನು ಗಲ್ಲಿಗೇರಿಸುವ ಹಿಂದಿನ ಮಧ್ಯರಾತ್ರಿ ಕೋರ್ಟ್ ಕಲಾಪ ನಡೆಸಿದ್ದು
ತಿಳಿದಾಗ ’ಹೀಗೂ ಉಂಟೇ?’ ಎಂಬಂತೆ
ಕಣ್ಣರಳಿಸಿದ್ದೂ ನಿಜ. ಭಾರೀ ಭೂಕಂಪಕ್ಕೆ ನೇಪಾಳ ನಲುಗಿದಾಗ, ಮಹಾಮಳೆಗೆ ಚೆನ್ನೈ ತತ್ತರಿಸಿದಾಗ ನಮ್ಮ
ಹೃದಯ ಕರಗಿ, ಅತ್ತ ಸಹಾಯಹಸ್ತ ಚಾಚಿದೆವು.
ಇಷ್ಟದ ನಾಯಕ-ನಾಯಕಿಯರ, ಇಷ್ಟದ
ನಿರ್ದೇಶಕರ ಸಿನಿಮಾಗೆ ಕ್ಯೂನಲ್ಲಿ ನಿಂತು ಟಿಕೀಟು ಖರೀದಿಸಿ ಫಸ್ಟ್ ಡೇ ಫಸ್ಟ್ ಶೋ ನೋಡಿದೆವು. ಕಡಿಮೆ
ಸ್ಟಾರ್ ಸಿಕ್ಕ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಗೆದ್ದು, ನಾವು ಮೆಚ್ಚಿದ ಸಿನಿಮಾಗಳು ಎರಡು ವಾರವೂ
ಓಡದೇ ಇದ್ದಾಗ ಇದಕ್ಕೆಲ್ಲ ಯಾರು ಹೊಣೆ ಅಂತ ನಮಗೆ ತಿಳಿಯದಾಯಿತು. ಸಲ್ಮಾನ್ ಖಾನ್ ನಿರ್ದೋಷಿ ಅಂತ
ತೀರ್ಮಾನವಾದಾಗ ’ರಿಯಲೀ?’ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡದ್ದೇನು ’ಬಜರಂಗಿ ಬಾಯಿಜಾನ್’ ಚೆನ್ನಾಗಿದೆ
ಅಂತ ಪ್ರಶಂಸಿವುದಕ್ಕೆ ಅಡ್ಡಿಯಾಗಲಿಲ್ಲ.
ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ನಿನಲ್ಲಿ
ನಂ. ೧ ಸ್ಥಾನಕ್ಕೇರಿದಾಗ ನಮ್ಮ ಮನೆ ಮಗಳೇ ಗೆದ್ದಷ್ಟು ಖುಷಿ ಪಟ್ಟೆವು. ವಿರಾಟ್ ಕೊಹ್ಲಿ ಕಪ್ ಎತ್ತಿದಾಗ
ಆದಷ್ಟೇ ಸಂತೋಷ, ಡಿವಿಲಿಯರ್ಸ್ ಚಮತ್ಕಾರಿಕ ಹೊಡೆತಗಳ ಮೂಲಕ ದಾಖಲೆಗಳನ್ನು ಸೃಷ್ಟಿಸುವಾಗಲೂ ಆಗಿದ್ದು
ಸುಳ್ಳಲ್ಲ. ಸೆಹವಾಗ್-ಜಹೀರ್ ನಿವೃತ್ತರಾದಾಗ ಅವರ ವೈಭವದ ದಿನಗಳನ್ನು ನೆನೆದೆವು.
ಅಬ್ದುಲ್ ಕಲಾಮ್ ಇನ್ನಿಲ್ಲವೆಂದಾಗ
ಇಡೀ ದೇಶ ಕಣ್ಣೀರಾಯಿತು. ’ಸಾಹಿತಿ ಕಲ್ಬುರ್ಗಿ ಗುಂಟೇಗಿ ಬಲಿ’ ಎಂಬ ಸುದ್ದಿ ಬೆಳಗಾಮುಂಚೆ ಕೇಳಿ ಬೆಚ್ಚಿಬಿದ್ದೆವು. ವಿಚಾರವಾದಿಗಳ ಹತ್ಯೆ ವಿರೋಧಿಸಿ ನಡೆದ ಪ್ರಶಸ್ತಿ ವಾಪಸಾತಿ
ಅಭಿಯಾನ ಭರ್ಜರಿ ಚರ್ಚೆಗೆ ಘ್ರಾಸವಾಯಿತು. ಅಸಹಿಷ್ಣುತೆಯ ವಿವಾದ ಭುಗಿಲೆದ್ದಾಗ ’ಛೇ ಛೇ, ನಮ್ಮ ದೇಶದ ಬಗ್ಗೆ ನಾವೇ ಹೀಗೆ ಮಾತಾಡೋದಾ’ ಅಂತ ನಮ್ಮನಮ್ಮಲ್ಲಿ ಕೇಳಿಕೊಂಡೆವು.
ಗಣ್ಯ ವ್ಯಕ್ತಿಗಳು ಕಣ್ಮರೆಯಾದಾಗ
ಆಪ್ತರನ್ನು ಕಳೆದುಕೊಂಡ ಭಾವ ಅನುಭವಿಸಿದೆವು. ದೇಶವನ್ನು ಪ್ರತಿನಿಧಿಸುವವರು ಪ್ರಶಸ್ತಿ ಗೆದ್ದಾಗ
ಆನಂದಬಾಷ್ಪ ಸುರಿಸಿದೆವು. ಇಂಡಿಯಾ ಶೈನಿಂಗ್ ಎಂದಾಗ ನಮ್ಮ ಮೊಗದಲ್ಲೂ ಅದು ಪ್ರತಿಫಲಿಸಿತು. ಐಸಿಸ್ ಉಗ್ರರ ಉಪಟಳಕ್ಕೊಳಗಾದ ಸಿರಿಯಾದಲ್ಲಿ ಮಡಿದ ಪುಟ್ಟ
ಮಗುವಂದು ಮಕಾಡೆ ಮಲಗಿರುವ ಚಿತ್ರಕ್ಕೆ ಇಡೀ ವಿಶ್ವದ ಕಣ್ಣು ತೇವಗೊಳಿಸುವ ಶಕ್ತಿಯಿತ್ತು.
ನಮ್ಮೆಲ್ಲ ಅರಿವು, ಅಜ್ಞಾನ, ಗಡಿಬಿಡಿ,
ನಿಲುವು, ಪೂರ್ವಾಗ್ರಹ, ಹಿಂಜರಿಕೆ, ಬಲ, ಅಸಹಾಯಕತೆಗಳ ಜೊತೆಯಲ್ಲೇ ನಾವು ನಮ್ಮವರ, ನೆರೆಯವರ, ಊರವರ,
ನಾಗರೀಕರ, ರಾಜ್ಯದ, ದೇಶದ, ವಿಶ್ವದ ವಿದ್ಯಮಾನಗಳಿಗೆ ತುಡಿದೆವು. ಬಿತ್ತಿ ಬೆಳೆದದ್ದಕ್ಕೆ ಒಳ್ಳೆಯ
ಬೆಲೆ ಸಿಕ್ಕಾಗ ಸಂತೃಪ್ತಿಯಿಂದ ಉಂಡದ್ದೂ, ಬೇಕಾದ ವಸ್ತು ಕೊಳ್ಳಲು ದುಬಾರಿಯೆನಿಸಿದಾಗ ನಾಲಿಗೆ ಕಚ್ಚಿಕೊಂಡಿದ್ದೂ,
ಒಳ್ಳೆಯ ವ್ಯಾಪಾರವಾದ ದಿನ ಖುಷಿಯಿಂದ ಗುನುಗುತ್ತ ಮನೆಗೆ ಹೋದದ್ದು, ಸಂಬಳ ಬಂದ ದಿನ ಪಾರ್ಟಿ ಮಾಡಿದ್ದೂ,
ಟ್ರಾಫಿಕ್ಕನ್ನು ಬೈದುಕೊಳ್ಳುತ್ತಲೇ ಗಂಡಾಗುಂಡಿಯ ರಸ್ತೆಯಲ್ಲಿ ಓಡಾಡಿದ್ದೂ, ಕಂಡ ಕನಸು ನನಸಾದಾಗ
ಹಿಗ್ಗಲ್ಲಿ ಉಬ್ಬಿದ್ದೂ, ಒಡೆದ ಗಾಜು ನೋಡುತ್ತ ಮರುಗಿದ್ದೂ ನಾವೇ. ಬಿಸಿಲಲ್ಲಿ ಬಾಯಾರಿದಾಗ ಹದಮಜ್ಜಿಗೆ ಕುಡಿದು ತೇಗಿದೆವು,
ಮಳೆಯ ಹಾಡು ಕೇಳಿದಾಗ ಬಣ್ಣದ ಕೊಡೆ ಹಿಡಿದು ಅಂಗಳದಲ್ಲಿ ಕುಣಿದೆವು, ಚಳಿಗೆ ಹಿಮ್ಮಡಿ ಒಡೆದಾಗ ಮುಲಾಮು
ಹಚ್ಚಿ ಹಿತನೋವಲ್ಲಿ ನರಳಿದೆವು.
ಹಳೆಯ ಅಂಗಿ ಹಿಡಿದು ನಿಧಾನಕ್ಕದರ
ಮೇಲೆ ಕೈಯಾಡಿಸುತ್ತಿದ್ದರೆ ಅದೆಷ್ಟು ನೆನಪುಗಳು... ಅದೆಷ್ಟು ಚಿತ್ರಗಳು ಒಂದು ಕೊಲಾಜಿನಲ್ಲಿ...
ಅದೆಷ್ಟು ಭಾವಗಳನುದ್ಧೀಪಿಸುವ ಶಕ್ತಿ ಈ ಪುಟ್ಟ ಅರಿವೆಗೆ... ಈಗ ಅಂಥದೇ ಮತ್ತೊಂದು ಅಂಗಿ ಧರಿಸಿ ನಿಂತಿದ್ದೇವೆ.
ಗೊತ್ತು ನಮಗೆ: ಇದೂ ಹಾಗೇ ನೀರು-ಗಾಳಿ-ಬೆಳಕುಗಳಿಗೆ ಒಡ್ಡಲ್ಪಡುತ್ತದೆ. ಇದನ್ನೂ ನೆನೆ ಹಾಕಬೇಕು,
ಒಗೆಯಬೇಕು, ಹಿಂಡಬೇಕು, ಒಣಹಾಕಬೇಕು, ಇಸ್ತ್ರಿ ಮಾಡಬೇಕು. ಇದೂ ಸ್ವಲ್ಪ ಕಾಲಕ್ಕೆ ಮಾಸಲಾಗುತ್ತದೆ.
ಆಶಯವಿಷ್ಟೇ: ಇದರ ಚೌಕಳಿಗಳಲ್ಲಿ ನಲಿವುಗಳಿಗೆ, ಗೆಲುವುಗಳಿಗೆ, ಸಿಹಿಘಳಿಗೆಗಳಿಗೆ, ನೆಮ್ಮದಿಯ ನಿಟ್ಟುಸಿರುಗಳಿಗೆ
ಹೆಚ್ಚಿನ ಜಾಗವಿರಲಿ. ತೊಟ್ಟಷ್ಟು ದಿನ ನಮ್ಮನ್ನು ಬೆಚ್ಚಗಿಟ್ಟಿರಲಿ. ನಂತರವೂ ಸವಿನೆನಪಾಗಿ ನಮ್ಮೊಂದಿಗೆ
ಇರಿಸಿಕೊಳ್ಳುವಂತಿರಲಿ. ಹೊಸ ವರುಷ ನಮಗೆಲ್ಲಾ ಶುಭಪ್ರದವಾಗಿರಲಿ.
['ವಿಶ್ವವಾಣಿ'ಗಾಗಿ ಬರೆದುಕೊಟ್ಟಿದ್ದು. 17.01.2016ರ ಭಾನುವಾರದ ಸಂಚಿಕೆಯಲ್ಲಿ ಪ್ರಕಟಿತ.]