Showing posts with label ದೀಪಾವಳಿ. Show all posts
Showing posts with label ದೀಪಾವಳಿ. Show all posts

Monday, November 09, 2015

ಕಾಗದದ ಸುರುಳಿಯೊಳಗೆ ಸದ್ದಿನ ಮದ್ದು ತುಂಬುವ ಕೈಗಳಿಗೊಂದು ಹೂಗುಚ್ಛ ಕೊಟ್ಟು...

ನಾವೆಲ್ಲ ಪಟಾಕಿಯನ್ನು ಹೆದರುತ್ತಲೇ ಒಪ್ಪಿಕೊಂಡಿದ್ದು. ಚಿಕ್ಕವರಿದ್ದಾಗ ಪಟಾಕಿ ಮಾಡುವ ಭಾರೀ ಸದ್ದಿಗೆ, ಧಿಗ್ಗನೆ ಸಿಡಿಯುವ ಅದರ ರೀತಿಗೆ, ಹೊಮ್ಮಿಸುವ ಬೆಂಕಿಗೆ ನಾವೆಲ್ಲ ಹೆದರಿದವರೇ. ಪಟಾಕಿಯೇನು, ಸುರುಸುರುಬತ್ತಿ ಹಿಡಕೊಳ್ಳಲಿಕ್ಕೂ ನಮಗೆ ಭಯವಿತ್ತು. ಅದರ ಚಿಮ್ಮುಕಿಡಿಗಳು ಎಲ್ಲಿ ಕೈಗೆ ತಾಕುತ್ತವೋ ಎಂಬ ಅಂಜಿಕೆಯೊಂದಿಗೇ ನಾವದನ್ನು ನಮ್ಮ ಪುಟ್ಟ ಕೈಗಳಲ್ಲಿ ಹಿಡಿದು ಆರತಿ ಬೆಳಗಿದ್ದು. ಈ ನಮ್ಮ ಭಯವನ್ನು ಸ್ವಲ್ಪ ಹೋಗಲಾಡಿಸಿದ್ದು ನೆಲಗುಮ್ಮ. ಇದನ್ನು ಪಟಾಕಿಯ ಪಟ್ಟಿಗೇ ಸೇರಿಸಬೇಕೋ ಬಾಂಬಿನ ಗುಂಪಿಗೆ ತಳ್ಳಬೇಕೋ ಗೊತ್ತಿಲ್ಲ.  ಹೆಚ್ಚುಕಮ್ಮಿ ಆಟಂಬಾಂಬಿನ ಸೈಜೇ ಇರುತ್ತಿದ್ದ ಇದನ್ನು ಬೀಸಿ ನೆಲಕ್ಕೋ ಗೋಡೆಗೋ ಒಗೆದರೆ ಸಾಕು, ‘ಢಂ’ ಎಂದು ಸಿಡಿಯುತ್ತಿತ್ತು.  ಸಿನೆಮಾಗಳಲ್ಲಿ ಬಾಂಬನ್ನು ವಿಲನ್ನುಗಳು ಹಲ್ಲಲ್ಲಿ ಕಚ್ಚಿ ಎಸೆದಾಗ ಅದು ದೂರ ಹೋಗಿ ಸಿಡಿದು ಭರ್ಜರಿ ಹೊಗೆಯೂ ಧೂಳೂ ಎದ್ದು ಅಲ್ಲಿದ್ದವರೆಲ್ಲಾ ಮಟಾಶ್ ಆಗುವುದನ್ನು ನೋಡಿದ್ದರಿಂದ, ನೆಲಗುಮ್ಮವನ್ನು ಪ್ರಯೋಗಿಸಿದ ನಾವೂ ವಿಲನ್ ಆದಂತೆ ಭಾವಿಸಿದೆವು. 

ಸ್ವಲ್ಪ ದೊಡ್ಡವರಾದಂತೆ ನಮ್ಮ ಧೈರ್ಯ ಇನ್ನೂ ಹೆಚ್ಚಿತು. ನೆಲಗುಮ್ಮದಿಂದ ನಿಧಾನಕ್ಕೆ ಪಿಸ್ತೂಲಿಗೆ ಭಡ್ತಿ ಪಡೆದೆವು. ಸಣ್ಸಣ್ಣ ಮದ್ದಿನ ರೋಲನ್ನು ಪಿಸ್ತೂಲಿನೊಳಗೆ ಸಿಕ್ಕಿಸಿ, ಟ್ರಿಗರ್ ಎಳೆದು ‘ಚಟಾರ್’ ಎನಿಸುವುದನ್ನು ಕಲಿತೆವು. ಈ ಮದ್ದಿನ ರೋಲು ನಮ್ಮನ್ನು ವಿಲನ್ ರೋಲಿನಿಂದ ಹೀರೋ ರೋಲಿಗೆ ಕರೆದೊಯ್ಯಿತು. ಹೀರೋ ಆದಮೇಲೆ ಕೇಳಬೇಕೇ?  ಈಗ ನಮಗಿಂತ ಚಿಕ್ಕ ಮಕ್ಕಳು ಪಿಸ್ತೂಲು ಹಿಡಿದ ನಮ್ಮನ್ನು ನೋಡಿ ಹೆದರುತ್ತಿದ್ದರು.  ನಾವೀಗ ಸರಪಟಾಕಿಗಳನ್ನು ಹೊಡೆಯುವಷ್ಟು ಜೋರಾದೆವು. ಮೊದಲೇ ಡೇಂಜರಿನ ಸಂಕೇತವೆಂಬಂತೆ ಕೆಂಬಣ್ಣವನ್ನು ಹೊಂದಿರುತ್ತಿದ್ದ, ಉದ್ದ ಹೊಟ್ಟೆಯ, ಅಷ್ಟೇ ಉದ್ದದ ಬತ್ತಿಯನ್ನು ಹೊಂದಿರುತ್ತಿದ್ದ ಈ ಪಟಾಕಿಗಳನ್ನು ಸರದಿಂದ ಬಿಡಿಸಿ, ಬತ್ತಿಯ ತುದಿಯ ಹೊದಿಕೆಯನ್ನು ಚೂರೇ ಕಿತ್ತು ತೆಗೆದು, ಮನೆಯಿಂದ ದೂರ ಅದನ್ನು ಪ್ರತಿಷ್ಟಾಪಿಸಿ, ಸುರಕ್ಷಿತ ಅಂತರದಲ್ಲಿ ನಿಂತು, ಊದಿನಕಡ್ಡಿಯಿಂದ ಬತ್ತಿಗೆ ಕಿಡಿ ತಾಕಿಸಿ, ಓಡಿ ಬಂದು ಕಿವಿ ಮುಚ್ಚಿ ನಿಲ್ಲುವುದು. ಇದರಲ್ಲಿ ಢಂ ಅನ್ನುವವೆಷ್ಟೋ, ಟುಸ್ ಅನ್ನುವವೆಷ್ಟೋ.

ಹೀರೋ ಇಮೇಜು ಜಾಸ್ತಿಯಾಗುತ್ತ ಹೋದಂತೆ ನಾವು ಹೊಡೆಯುವ ಪಟಾಕಿಗಳ ಗಾತ್ರವೂ ದೊಡ್ಡದಾಗುತ್ತಾ ಹೋಯ್ತು. ಆನೆ ಪಟಾಕಿಗಳೂ, ಲಕ್ಷ್ಮೀ ದಡಾಕಿಗಳೂ, ಆಟಂಬಾಂಬುಗಳೂ ನಮ್ಮಿಂದ ಸಿಡಿಯಲ್ಪಟ್ಟವು. ಬಿರುಸಿನ ಕುಡಿಕೆಗಳು ಮನೆಯೆದುರು ಕಾರಂಜಿ ಸೃಷ್ಟಿಸಿದರೆ, ರಾಕೆಟ್ಟುಗಳು ಆಕಾಶದಲ್ಲಿ ಪರ್ಯಾಯ ನಕ್ಷತ್ರಗಳ ಹೊಮ್ಮಿಸಿದವು. ನೆಲಚಕ್ರಗಳು ಮನೆಯೊಳಗೆಲ್ಲ ತಿರುಗಿದವು. ಗೆಳೆಯರೆಲ್ಲ ಸೇರಿ ಪಟಾಕಿಯಿಂದ ಪ್ರಯೋಗಗಳನ್ನೂ ಮಾಡಿದೆವು. ಬೀದಿನಾಯಿಯ ಬಾಲಕ್ಕೆ ಪಟಾಕಿ ಕಟ್ಟಿ ಹಚ್ಚಿ ಓಡಿಸುವುದೂ, ಪಟಾಕಿಯನ್ನು ಸಗಣಿಯಲ್ಲಿಟ್ಟು ಸಿಡಿಸಿ ಸುತ್ತಮುತ್ತೆಲ್ಲ ಸಗಣಿಮಯವಾಗುವುದು ನೋಡಿ ಖುಷಿ ಪಡುವುದೂ, ಲಕ್ಷ್ಮೀ ದಡಾಕಿಗೆ ಬೆಂಕಿ ತಾಗಿಸಿ ಅದರ ಮೇಲೊಂದು ಡಬ್ಬಿ ಕವುಚಿ ಓಡಿ ಬಂದು ಪಟಾಕಿ ಸಿಡಿದಾಗ ಡಬ್ಬಿ ಆಕಾಶಕ್ಕೆ ಹಾರುವುದು ನೋಡಿ ಚಪ್ಪಾಳೆ ತಟ್ಟುವುದೂ, ಸಿಡಿಯದೇ ಉಳಿದ ಟುಸ್-ಪಟಾಕಿಗಳನ್ನೆಲ್ಲ ಬಿಡಿಸಿ ಅದರ ಮದ್ದನ್ನೆಲ್ಲಾ ಸೇರಿಸಿ ದೊಡ್ಡ ಪಟಾಕಿ ಮಾಡಿ ಉಡಾಯಿಸುವುದೂ –ಹೀಗೆ ನಾನಾ ರೀತಿಯ ಕ್ರಿಯಾಶೀಲ ಕಿತಾಪತಿಗಳನ್ನು ಮಾಡಿ ಹಿರಿಯರಿಂದ ಬೈಗುಳ-ಒದೆತಗಳನ್ನು ಹಬ್ಬದುಡುಗುರೆಯಾಗಿ ಪಡೆದೆವು.

ಉರಿದದ್ದೆಲ್ಲಾ ತಣ್ಣಗಾಗುತ್ತವೆ ಎಂಬಂತೆ ಪಟಾಕಿಯ ಬಗೆಗಿದ್ದ ನಮ್ಮ ವ್ಯಾಮೋಹವೂ ನಿಧಾನಕ್ಕೆ ಕಮ್ಮಿಯಾಯಿತು. ಮುಂಚೆ ಒಂದೊಂದೇ ಪಟಾಕಿ ಹಚ್ಚುತ್ತಿದ್ದವರು ಈಗ ಸರಕ್ಕೇ ಬೆಂಕಿಯಿಡತೊಡಗಿದೆವು. ಹಿಂದೆ ಸಾವಿರಾರು ರೂಪಾಯಿ ಖರ್ಚು ಮಾಡಿ ಪಟಾಕಿ ಕೊಳ್ಳುತ್ತಿದ್ದವರು, ಈಗ ‘ಒಂದು ಪ್ಯಾಕು ಗರ್ನಾಲು ಹೊಡೆದ್ರೆ ಸಾಕು ಬಿಡೋ ಈ ಹಬ್ಬಕ್ಕೆ’ ಅನ್ನೋ ಹಂತಕ್ಕೆ ಬಂದೆವು. ಮಕ್ಕಳ್ಯಾರಾದರೂ ಸಿಕ್ಕಾಪಟ್ಟೆ ಪಟಾಕಿ ಹೊಡೆಯುತ್ತಿದ್ದರೆ ‘ಥೂ, ಡಿಸ್ಟರ್ಬೆನ್ಸು’ ಅಂತ ಹಲ್ಲು ಕಿವುಚಿದೆವು. ನಮ್ಮ ಮನೆ ಮಕ್ಕಳೇ ಪಟಾಕಿ ಬೇಕೆಂದು ಹಟ ಮಾಡಿದಾಗ ಅದನ್ನು ತಪ್ಪಿಸುವ, ಮನವೊಲಿಸುವ ಪ್ರಯತ್ನ ಮಾಡಿದೆವು.

ಇದಕ್ಕೆಲ್ಲ ಪೂರಕವೆಂಬಂತೆ ಈಗ ದೀಪಾವಳಿಯಲ್ಲಿ ಪಟಾಕಿ ಸುಡುವುದಕ್ಕೆ ನಿರ್ಬಂಧ ಹೇರಬೇಕು ಎಂಬ ಕೂಗು ಜೋರಾಗಿದೆ. ಜನ ಕೋರ್ಟ್ ಮೆಟ್ಟಿಲೇರಿದ್ದಾರೆ. ಏನು ಈ ವರ್ಷದ ದೀಪಾವಳಿಗೆ ಪಟಾಕಿ ನಿಷೇಧ ಜಾರಿಯಾಗಿಯೇಬಿಡುತ್ತದೇನೋ ಎಂಬ ಹಂತ ತಲುಪಿದ್ದ ಕೇಸು, ಈಗ ಸ್ವಲ್ಪ ಸಡಿಲಾದಂತಿದೆ. ಆದರೆ ಹಿಂದೆಂದಿಗಿಂತಲೂ ಈಗ ಪಟಾಕಿಯೆಡೆಗಿನ ಅಸಮಾಧಾನ ಜಾಸ್ತಿಯಾಗಿದೆ.

ಇಷ್ಟಕ್ಕೂ ಮನುಷ್ಯ ಈ ಪಟಾಕಿಯಂತಹ ಒಂದು ವಸ್ತುವನ್ನು ಯಾಕಾದರೂ ತಯಾರಿಸಿದ ಎಂಬುದು ಕುತೂಹಲದ ವಿಷಯ. ದೊಡ್ಡದಾಗಿ ಶಬ್ದ ಮಾಡುವ ವಸ್ತುವೊಂದು ಮನುಷ್ಯನಿಗೆ ಖುಷಿ ಕೊಡುವಂತಾದದ್ದು ಹೇಗೆ? ಹಬ್ಬಗಳಲ್ಲಿ, ವಿಜಯೋತ್ಸವಗಳಲ್ಲಿ ಭಾರೀ ಶಬ್ದವನ್ನುಂಟುಮಾಡಿದಾಗ ಅದು ಮಜ ನೀಡುತ್ತದೆ ಎಂಬ ಕಲ್ಪನೆ ನಮ್ಮ ಮನಸ್ಸುಗಳಲ್ಲಿ ನೆಲೆಯಾಗಿದ್ದಾದರೂ ಹೇಗೆ? ಫ್ಲವರ್ ಪಾಟ್, ರಾಕೆಟ್, ಭೂಚಕ್ರದಂತಹ ಸಿಡಿಮದ್ದುಗಳು ಕಣ್ಣಿಗೆ ಸಂಭ್ರಮವನ್ನಾದರೂ ತರುತ್ತವೆ; ಆದರೆ ಸದ್ದು ಮಾಡುವ ಪಟಾಕಿ? ಅದು ಬೆಚ್ಚಿಬೀಳಿಸುವುದೇ ಹೆಚ್ಚು! ಬಹುಶಃ ಈ ಬೆಚ್ಚಿಬೀಳುವ, ಭಯಕ್ಕೊಳಗಾಗುವ, ಬೇರೆಯವರನ್ನು ಭಯಕ್ಕೊಳಪಡಿಸುವ ‘ಥ್ರಿಲ್’ಗಾಗಿಯೇ ಈ ಪಟಾಕಿಗಳ ಸೃಷ್ಟಿಯಾಗಿರಬೇಕು. ಆಮೇಲೆ ಅದೊಂದು ಸಂಪ್ರದಾಯವೇ ಆಗಿಹೋಯಿತು. ಹಬ್ಬ ಬಂತೆಂದರೆ ಪಟಾಕಿ, ಕ್ರಿಕೆಟ್ ಮ್ಯಾಚಿನಲ್ಲಿ ಇಂಡಿಯಾ ಗೆದ್ದಿತೆಂದರೆ ಪಟಾಕಿ, ಚುನಾವಣೆಯಲ್ಲಿ ನಮ್ಮ ಸ್ಫರ್ಧಿ ಗೆದ್ದನೆಂದರೆ ಪಟಾಕಿ... ಎಲ್ಲೆಲ್ಲೂ ಸರಣಿ ಸದ್ದುಗಳದೇ ಮೇಲುಗೈ.

ಹೀಗೆ ನಮ್ಮ ಸಂಭ್ರಮಗಳಲ್ಲಿ ಹಾಸುಹೊಕ್ಕಾಗಿರುವ ಪಟಾಕಿಯನ್ನೇ ಈಗ ನಿಷೇಧಿಸಿಬಿಟ್ಟರೆ? ನಿಜ, ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಹೊಡೆಯಲ್ಪಡುವ ಪಟಾಕಿಯಿಂದಾಗಿ ಸೃಷ್ಟಿಯಾಗುವ ವಾಯುಮಾಲಿನ್ಯ, ಶಬ್ದಮಾಲಿನ್ಯ, ಪಟಾಕಿಯಿಂದಾಗಿ ಮೈಕೈ ಸುಟ್ಟುಕೊಳ್ಳುವ ಅದೆಷ್ಟೋ ಚಿಣ್ಣರು, ಕಣ್ಣು-ಕಿವಿಗಳಿಗೆ ಹಾನಿ ಮಾಡಿಕೊಳ್ಳುವವರು, ವಯೋವೃದ್ಧರಿಗೆ-ಉಸಿರಾಟದ ತೊಂದರೆಯಿರುವವರಿಗೆ ಪಟಾಕಿಗಳಿಂದಾಗಿ ಆಗುವ ತೊಂದರೆ, ಬೀದೆಯಲ್ಲ ತುಂಬುವ ಕಸ... ಎಲ್ಲವನ್ನೂ ಗಣನೆಗೆ ತೆಗೆದುಕೊಂಡಾಗ ಪಟಾಕಿಯಿಲ್ಲದ ದೀಪಾವಳಿಯೇ ಸರಳ-ಸುಂದರ ಎನಿಸುತ್ತದೆ. ಆದರೆ ಅದನ್ನು ಸಂಪೂರ್ಣ ಬ್ಯಾನ್ ಮಾಡಿಬಿಟ್ಟರೆ ಹಬ್ಬದ ಕಳೆಯೇ ಹೊರಟುಹೋಗುತ್ತದೆಯೇ? ನಾವನುಭವಿಸಿದ ಮೋಜು-ಮಸ್ತಿಗಳನ್ನು ಮಕ್ಕಳು ಅನುಭವಿಸುವುದು ಬೇಡವೇ?

ಹಳ್ಳಿಗಳಲ್ಲಾದರೆ ದೀಪಾವಳಿ ಹಬ್ಬದಂದು, ಹಬ್ಬದ ಹಿಂದೆ-ಮುಂದೆ ಅನೇಕ ಕಾರ್ಯ ಚಟುವಟಿಕೆಗಳಿರುತ್ತವೆ. ಭೂರೆಹಬ್ಬ, ಗಂಗಾಪೂಜೆ, ಅಭ್ಯಂಜನ ಸ್ನಾನ, ಗೋಪೂಜೆ, ಲಕ್ಷ್ಮೀ ಪೂಜೆ, ದನ ಬೆದರಿಸುವ ಆಟ, ಬಲೀಂದ್ರನಿಗೆ ನೈವೇದ್ಯ, ಊರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹಬ್ಬದ ಪಾಡ್ಯ, ಭರ್ಜರಿ ಹಬ್ಬದೂಟ, ಗುರಿಗಾಯಿ ಆಟ, ಹಬ್ಬ ಕಳುಹಿಸುವ ಕೆಲಸ, ಕಾರ್ತೀಕ ದೀಪೋತ್ಸವ, ಅಂಟಿಗೆ ಪಿಂಟಿಗೆ... ಹೀಗೆ ಪಟಾಕಿ ಹೊಡೆಯಲೂ ಸಮಯವಿಲ್ಲದಷ್ಟು ಸಂಪ್ರದಾಯಗಳೂ, ಸಂಭ್ರಮಗಳೂ, ಕೆಲಸಗಳೂ ಇರುತ್ತವೆ.  ಆದರೆ ನಗರಗಳಲ್ಲಿ ದೀಪಾವಳಿ ಎಂದರೆ ಬಹುತೇಕ ಪಟಾಕಿ ಹೊಡೆಯುವುದೇ ಆಗಿಹೋಗಿದೆ.  ಮನೆಯ ದೇವರಿಗೆ ಪೂಜೆ ಮಾಡಿ, ದೇವಸ್ಥಾನಕ್ಕೆ ಹೋಗಿಬಂದು, ನೆಂಟರೋ-ಅಕ್ಕಪಕ್ಕದ ಮನೆಯವರೋ ಬಂದರೆ ಅವರನ್ನು ಉಪಚರಿಸಿ, ಊಟ ಮಾಡುವುದು ಬಿಟ್ಟರೆ ಆಮೇಲೆಲ್ಲಾ ಪಟಾಕಿ ಸುಡುವುದೇ ಹಬ್ಬ. ಹೀಗಾಗಿ, ಹಳ್ಳಿಗಳಲ್ಲಾದರೂ ಪಟಾಕಿಯಿಲ್ಲದ ದೀಪಾವಳಿಯನ್ನು ಕಲ್ಪಿಸಿಕೊಳ್ಳಬಹುದು, ಆದರೆ ನಗರಗಳಲ್ಲಿ ಮಾತ್ರ ಅದು ತುಂಬಾ ಕಷ್ಟ.

ಇಷ್ಟಲ್ಲದೇ, ಪಟಾಕಿಗೆ ನಿರ್ಬಂಧ ಹೇರಿದ್ದೇ ಹೌದಾದರೆ ಪಟಾಕಿ ಉದ್ಯಮಗಳ ಕಥೆ ಏನು? ಅವರಿಗಾಗುವ ನಷ್ಟವನ್ನು ತುಂಬಿಕೊಡುವವರು ಯಾರು?  ಆ ಉದ್ಯಮದಲ್ಲಿ ಕೆಲಸ ಮಾಡುವ ಸಾವಿರಾರು ಜನರ ಕಥೆಯೇನು? –ಎಂಬಂತಹ ವಾದಗಳೂ ಕೇಳಿಬರುತ್ತಿವೆ.  ಹೀಗಾಗಿ ಪಟಾಕಿಯನ್ನು ಬ್ಯಾನ್ ಮಾಡುವುದು ಸರ್ಕಾರಗಳಿಗೂ ಅಷ್ಟು ಸುಲಭದ ವಿಷಯವಾಗಿ ಉಳಿದಿಲ್ಲ.

ಸಂಪೂರ್ಣ ಕಡಿವಾಣ ಸಾಧ್ಯವಾಗದೇ ಹೋದರೂ, ಪಟಾಕಿ ಸುಡುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಮ್ಮಲ್ಲಿ ಜಾಗೃತಿ ಮೂಡುವ ಅವಶ್ಯಕತೆ ಇದೆಯೆಂದೆನಿಸುತ್ತದೆ. ಈ ವರ್ಷದ ದೀಪಾವಳಿ ಅಂಥದೊಂದು ನಿಲುವಿಗೆ ನಾಂದಿಯಾಗಬಲ್ಲುದೇ? ಪಕ್ಕದ ಮನೆಯ ತಾತ ಬಂದು, ‘ಪಟಾಕಿ ಹೊಡೀಬೇಡ್ರಪ್ಪಾ, ತೊಂದ್ರೆ ಆಗುತ್ತೆ’ ಅಂತ ಕೇಳಿಕೊಂಡರೆ, ಅವರ ಕೋರಿಕೆಯನ್ನು ಮನ್ನಿಸುವಷ್ಟಾದರೂ ಸಹಿಷ್ಣುತೆ ನಮ್ಮಲ್ಲಿ ಮೂಡಬಹುದೇ? ಇಷ್ಟಕ್ಕೂ ದೀಪಾವಳಿ ದೀಪಗಳ ಹಬ್ಬವೇ ಹೊರತು ಪಟಾಕಿಗಳ ಹಬ್ಬ ಅಲ್ಲ.  ಹೀಗಾಗಿ, ಈ ವರ್ಷದ ದೀಪಾವಳಿಯನ್ನು ಸಿಡಿಮದ್ದಿಲ್ಲದೆ ಆಚರಿಸಲು ಸಾಧ್ಯವಾ?


ಹಾಗಾದರೆ ಏನು ಮಾಡಬಹುದು? ಪಟಾಕಿ ಬೇಕೇಬೇಕು ಅಂತ ಹಟ ಮಾಡುವ ಮಕ್ಕಳನ್ನು ಹೇಗೆ ಸುಮ್ಮನಿರಿಸುವುದು?  ಈ ವರ್ಷ ದೀಪಾವಳಿಯಂದು, ಮಕ್ಕಳನ್ನೆಲ್ಲ ಕೂರಿಸಿಕೊಂಡು, ಜೇಡಿಮಣ್ಣು, ಬಾಟಲಿನ ಮುಚ್ಚಳ, ಹಿಂಡಿದ ನಿಂಬೆಯ ಸಿಪ್ಪೆ ಮುಂತಾದವುಗಳಿಂದ ದೀಪಗಳನ್ನು ನಾವೇ ತಯಾರಿಸಿ ಮನೆ ಮುಂದೆ ಸಾಲುಸಾಲು ದೀಪ ಹಚ್ಚೋಣ.  ಬಣ್ಣದ ಕಾಗದಗಳನ್ನು ತಂದು ವಿವಿಧ ಆಕಾರದ ಆಕಾಶಬುಟ್ಟಿಗಳನ್ನು ತಯಾರಿಸಿ ಮನೆ ಮುಂದೆ ತೂಗಿಬಿಡೋಣ.  ಹೂವು-ತೋರಣ-ಬಣ್ಣದ ಕಾಗದಗಳಿಂದ ಮನೆಯನ್ನು ಸಿಂಗರಿಸೋಣ.  ರಸ್ತೆಯಲ್ಲಿ ದೊಡ್ಡದಾಗಿ ರಂಗೋಲಿ ಹಾಕಿ ಬಣ್ಣ ತುಂಬೋಣ. ಮಾರುಕಟ್ಟೆಯಲ್ಲಿ ಕೆಲವೆಡೆ ಬಣ್ಣದ ಪಟಾಕಿ ಸಿಗುತ್ತದೆ: ಇದನ್ನು ಸಿಡಿಸಿದಾಗ ಬೆಂಕಿ ಮತ್ತು ಶಬ್ದದ ಬದಲು ಬಣ್ಣದ ಬುಗ್ಗೆ ಏಳುತ್ತದೆ. ಇಂಥದನ್ನು ಬಳಸಲು ಯತ್ನಿಸೋಣ.  ಹಳ್ಳಿಗಳಲ್ಲಿ ನಡೆಯುವ ಆಚರಣೆಗಳಲ್ಲಿ ಕೆಲವನ್ನಾದರೂ ನಗರಗಳಲ್ಲಿ ಸಾಕಾರಗೊಳಿಸಲಾದೀತೇ ಅಂತ ಯೋಚಿಸೋಣ. ಬೀದಿಯ ಮಕ್ಕಳನ್ನೆಲ್ಲ ಕೂಡಿಸಿ ಸಣ್ಣ ಮನರಂಜನೆ ಕಾರ್ಯಕ್ರಮ ಏರ್ಪಡಿಸೋಣ, ಆಟ ಆಡಿಸೋಣ. ಆಪ್ತೇಷ್ಟರೆಲ್ಲ ಸೇರಿ ಹಾಡಿ ನಲಿಯೋಣ. ಎದುರಿಗೆ ಸಿಕ್ಕವರಿಗೆ ಶುಭಾಶಯ ಕೋರೋಣ.  ನಾವೆಲ್ಲ ಇಷ್ಟೆಲ್ಲ ಸಂಭ್ರಮಿಸುವಾಗ ಬೆಳಕನ್ನು ನೋಡುವ ಭಾಗ್ಯವೇ ಇಲ್ಲದ ಅಂಧರು ಇರುವ ಶಾಲೆ-ವಸತಿ ನಿಲಯಗಳಿಗೆ ಭೇಟಿ ಕೊಟ್ಟು, ಅವರೊಂದಿಗೆ ಸ್ವಲ್ಪ ಕಾಲ ಕಳೆದು ರಂಜಿಸಿ ಬಂದರೆ ಬೆಳಕಿನ ಹಬ್ಬಕ್ಕೊಂದು ಸಾರ್ಥಕ್ಯವೂ ಸಿಕ್ಕೀತು.  ಕಾಗದದ ಸುರುಳಿಯೊಳಗೆ ಸದ್ದಿನ ಮದ್ದು ತುಂಬುವ ಕೈಗಳಿಗೆ ಹೊಸ ಬದುಕಿನ ಭರವಸೆಯ ಹೂಗುಚ್ಛವನ್ನೂ, ಸಿಹಿಯ ಹೋಳಿಗೆಯನ್ನೂ ಕೊಡುವ ನಿಟ್ಟಿನಲ್ಲಿ ಯೋಚಿಸೋಣ. ದೀಪಾವಳಿ ಎಲ್ಲರ ಬಾಳಿಗೂ ಹೊಸ ಬೆಳಕು ತರುವಂತಾಗಲಿ. ಶುಭಾಶಯಗಳು.

[ವಿಜಯ ಕರ್ನಾಟಕ ಸಾಪ್ತಾಹಿಕಕ್ಕಾಗಿ ಬರೆದದ್ದು.]

Wednesday, November 03, 2010

ಚಳಿ, ದೀಪಾವಳಿ, ಪಿರೂತಿ, ಬ್ಲಾ ಬ್ಲಾ

‘ಕಿಲಾಡಿ ಮಾಡಿದರೆ ದೂತರು ಬರುತಾರೆ.. ಕಿನ್ನರಾ, ಹುಷಾರು’
‘ಏನ್ ಮಾಡ್ತಾರೆ ಅಮ್ಮಾ ದೂತರು? ಯಾರವರು?’
‘ದೂತರು ಇ‌ಇ‌ಇಷ್ಟು ದಪ್ಪಗಿರ್ತಾರೆ.. ಬಿಳೀ ಗಡ್ಡ.. ದೊಗಲೆ ದೊಗಲೆ ಅಂಗಿ.. ಕಪ್ಪು ಪೈಜಾಮ.. ತಲೆಗೊಂದು ಕೋನ್ ಟೊಪ್ಪಿ..’
‘ಹಾನ್! ಗೊತ್ತಾಯ್ತು.. ದೂತರು ಎಂದರೆ ಕ್ರಿಸ್‌ಮಸ್ ತಾತ ಅಲ್ವಾ ಅಮ್ಮಾ?’
‘ಅಲ್ಲ ಅಲ್ಲ.. ಕ್ರಿಸ್‌ಮಸ್ ತಾತ ಅಲ್ಲ.. ದೂತರ ಮುಖ ಕಪ್ಪ್ಪ್‌ಪಗಿರೊತ್ತೆ.. ಅಲ್ಲಲ್ಲಿ ಗುಳಿ ಬಿದ್ದಿರೊತ್ತೆ.. ಅವರು ಚೂರೂ ನಗೆಯಾಡುವುದಿಲ್ಲ.. ಚೇಷ್ಟೆ ಮಾಡಿದ ಪುಟ್ಟನನ್ನ ಎತ್ಕೊಂಡ್ ಹೋಗೀ...’
‘ಹೋಗೀ...?’
‘ಎತ್ಕೊಂಡ್ ಹೋಗಿ.. ತುಂಬಾ ಕಚಗುಳಿ ಇಟ್ಟು.. ಇಲ್ಲೆಲ್ಲ ಇಲ್ಲೆಲ್ಲ..’
‘ಹಿಹಿಹಿಹಿ... ಏಯ್ ಬಿಡಮ್ಮ.. ಬಿಡಮ್ಮಾ.. ಕಿಕಿಕಿಕಿ..’
‘..ಇಲ್ಲೆಲ್ಲ ಹೀಗೆಲ್ಲ ಕಚಗುಳಿ ಇಟ್ಟು ಪುಟ್ಟನನ್ನ ನಗಿಸ್ತಾರೆ..!’

* * *

ಹಕ್ಕಿಗಳೆಲ್ಲ ತಡವಾಗಿ ಏಳುತ್ತಿವೆ. ಈ ಚಳಿಯಲ್ಲಿ ಮುಂಜಾನೆಯೇ ಹೊರಹಾರಹೊರಟರೆ ರೆಕ್ಕೆಗಳೆಲ್ಲ ಮರಗಟ್ಟಿಹೋಗಲಾರವೇ? ಗೂಡಿನೊಳಗೆ ಬೆಚ್ಚಗೆ, ಹುಲ್ಲಿನೊಳಗೆ ಇನ್ನೂ ಇನ್ನೂ ಇನ್ನೂ ಮುದುಡಿಕೊಂಡು, ಅಮ್ಮನ ರೆಕ್ಕೆ ತೆಕ್ಕೆಯಡಿಯಲ್ಲಿ ಮುರುಟಿಕೊಂಡು ಮಲಗಿರಬೇಕು. ಉಹುಂ, ನಿದ್ದೆ ಮಾಡಬಾರದು; ಎಚ್ಚರಿರಬೇಕು.. ಅಮ್ಮನ ಬಿಸಿ ಉಸಿರು, ಅಪ್ಪನ ಗೊರಕೆ ಸದ್ದು, ದೂರ ಹೊರಳಿ ಹೋಗಿರುವ ತಮ್ಮನ ಬೇರ್ಪಡಿಕೆ, ಎಲ್ಲವನ್ನು ಮುಗುಳ್ನಗುತ್ತ ಅನುಭವಿಸುತ್ತ. ಇಷ್ಟು ಮುಂಚೆ ಹೊರಗೆ ಹಾರಿದರೆ ಈ ಇಬ್ಬನಿಯಲ್ಲಿ ಆಹಾರ ಕಂಡೀತಾದರೂ ಹೇಗೆ? ನಾಲ್ಕು ಮಾರಿನ ಮುಂದೆ ಮತ್ತೇನೂ ಕಾಣುವುದಿಲ್ಲ. ಎಲ್ಲಾ ಬಿಳಿ ಬಿಳಿ ಬೆಳ್ಳಗೆ. ಅಲಾರ್ಮಿಗೆ ಬೈದುಕೊಳ್ಳುತ್ತಾ ನೀನು ಏಳುತ್ತೀ ಹಾಸಿಗೆಯಿಂದ..

ದುಂಬಿಗಳೂ ತಡವಾಗಿ ಏಳುತ್ತಿವೆ.. ಹೂವು ಅರಳುವುದೇ ತಡ ಈಗ. ಸೂರ್ಯನ ಒಲೆಯಲ್ಲಿ ಶಾಖ ಹೆಚ್ಚಾಗಿ, ಮಂಜೆಲ್ಲ ಕರಗಿ, ಕಿರಣಗಳು ಹೂಮೇಲೆ ಬಿದ್ದು, ಅದು ಅರಳುವ ಹೊತ್ತಿಗೆ ಇನ್ನೊಂದು ಗುಕ್ಕು ನಿದ್ರೆ ತೆಗೆಯಬಹುದು. ದುಂಬಿಗಳಿಗಷ್ಟೇ ಗೊತ್ತು ಹೂವುಗಳ ಚಡಪಡಿಕೆ. ಬೇಗ ಅರಳಬೇಕೆಂಬ ತುಡಿತ. ತಮ್ಮೊಡಲಿನ ಕಂಪನ್ನು ಮೂಜಗಕೆಲ್ಲ ಹರಡಬೇಕೆಂಬ ತಪನೆ. ಸಹಾಯಕ್ಕೆ ಬಾರದ ಸೂರ್ಯನ ಬಗ್ಗೆ ಅಸಹನೆ. ನಿನ್ನ ಮುಡಿಯೇರಿ ನನ್ನ ಕಣ್ಸೆಳೆಯುವ ಚಪಲ.

ನೀರೂ ಕಾಯುವುದಿಲ್ಲ ಬೇಗ.. ಕಾಯಿಲ್ ಹಾಕಿಟ್ಟು ಎಷ್ಟೊತ್ತಾಯ್ತು? ಗಡಿಯಾರ ನೋಡಿದ್ದೇ ನೋಡಿದ್ದು. ಗಡಿಯಾರ ನಿಂತು ಹೋಗಿದೆಯೇ ಎಂದು ಪರಿಕಿಸಲು ವಾಚು ನೋಡಿದ್ದು. ಆದರೂ ನಂಬಿಕೆ ಬರದೇ ಮೊಬೈಲು ನೋಡಿದ್ದು. ಹೌದು, ಅರ್ಧ ಗಂಟೆ ಮೇಲಾಯ್ತು. ಇನ್ನೂ ಕಾದಿಲ್ಲ ನೀರು. ಮುಟ್ಟಿ ನೋಡಿದರೆ ಐಸ್ ಮುಟ್ಟಿದಂತೆ. ತಣ್ಣಗೆ. ಹಾಗೇ ತಣ್ಣೀರೇ ಹೊಯ್ದುಕೊಂಡರೆ ನಿನ್ನ ಬಂಗಾರು ಬಣ್ಣದ ಮೈತುಂಬ ಚಳಿಗುಳ್ಳೆಗಳೆದ್ದು, ಮೈಪುಳಕಗೊಂಡು, ನನ್ನ ನೆನಪಾಗಿ... ಬೇಡ ಬೇಡ, ನೀರು ಕಾಯಲಿ ಬಿಡು.

ಬಸ್ಸೂ ತಡವಾಗಿ ಬರುತ್ತದೆ.. ಡ್ರೈವರ್ ಎದ್ದರೂ ಮಂಕಿ ಕ್ಯಾಪ್ ಹಾಕಿದ ಕಂಡಕ್ಟರಿಗಿನ್ನೂ ನಿದ್ದೆ. ಅವನ ಚರ್ಮದ ಚೀಲದೊಳಗೆ ನಾಣ್ಯಗಳೊಂದಿಗೆ ನಿದ್ದೆ ಹೋಗಿರುವ ಪೀಪಳಿ. ನಾಲ್ಕು ಸಲ ಬಟನ್ ಒತ್ತಿದರೂ ಸ್ಟಾರ್ಟಾಗಲು ಒಲ್ಲದ ತಂಡಿ ಬಡಿದ ಎಂಜಿನ್. ಗಾಲಿಗಳಿಗೂ ಒದ್ದೆ ರಸ್ತೆಯ ಮೇಲೆ ಓಡಲು ಸೋಮಾರಿತನ. ನಿನಗೆ ಕಾದೂ ಕಾದೂ ಬೇಸರ. ಆಫೀಸಿನಲ್ಲಿ ಬಾಸ್ ಬೈಯುತ್ತಾರೇನೋ ಅಂತ ಟೆನ್ಷನ್.

ಎಲ್ಲರಿಗಿಂತ ನೀನೇ ಲೇಟೇನೋ ಅಂದುಕೊಂಡು ಆಫೀಸಿಗೆ ಕಾಲಿಟ್ಟರೆ ಅಂಗಣವೆಲ್ಲ ಬಿಕೋ ಬಿಕೋ.. ಪಾರ್ಕಿಗೆ ಜಾಗಿಂಗಿಗೆ ಹೋಗಿದ್ದ ಬಾಸ್ ಮುದ್ದು ಅಳಿಲಿನ ಮೀಸೆ ಮೇಲೆ ನಿಂತಿದ್ದ ಇಬ್ಬನಿಹನಿಯನ್ನು ನೋಡುತ್ತ ಮೈಮರೆತು ನಿಂತುಬಿಟ್ಟಿದ್ದರಂತೆ.. ಕಲೀಗುಗಳೆಲ್ಲ ಹೊಸದಾಗಿ ಮದುವೆಯಾದವರು: ಹೇಗೆ ತಾನೆ ಬಂದಾರು ಅಷ್ಟು ಮುಂಚೆ? ಸಿಸ್ಟಮ್ ಆನ್ ಮಾಡಿದರೆ ಕಿಂಗ್‌ಫಿಷರ್ ಹಕ್ಕಿಯ ಬ್ಯಾಕ್‌ಗ್ರೌಂಡಿನ ಮೇಲೆ ಪುಟ್ಟ ಪುಟ್ಟ ಐಕಾನುಗಳು. ನಿನ್ನ ಪುಟ್ಟ ಬೆರಳುಗಳಿಂದ ಅದುಮಿದರೆ ಮೌಸೂ ಉಲಿಯುತ್ತದೆ ಹಿತವಾಗಿ ಕ್ಲಿಕ್. ತೆರೆದುಕೊಂಡ ವಿಂಡೋದಲ್ಲಿ ನನ್ನದೇ ಮೇಯ್ಲ್: "ಚಿನಕುರುಳಿ ಹುಡುಗಿಗೆ ಗುಡ್ ಮಾರ್ನಿಂಗ್! ಪಿಂಕ್ ಡ್ರೆಸ್ಸಲ್ಲಿ ಚನಾಗ್ ಕಾಣ್ತಿದೀಯ. ಇನ್ನು ಆರು ದಿನ ನಾನಿರಲ್ಲ. ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗ್ತಿದೀನಿ. ಅಷ್ಟು ದಿನಕ್ಕೆ ಬೇಕಾದಷ್ಟು ಪ್ರೀತೀನ ಇಕೋ ಈ ಮೇಯ್ಲಲ್ಲೇ ಕೊಡ್ತಿದೀನಿ: ತುಂಬಿಸಿಕೋ. ಹ್ಯಾಪಿ ದಿವಾಲಿ. ಲವ್ಯೂ!"

ಡ್ರೆಸ್ಸಿನ ಪಿಂಕನ್ನೂ ಮೀರಿ ಏರಿದ ಮುಖದ ಕೆಂಪಿಗೆ ತುಟಿಯಂಚ ಮುಗುಳ್ನಗೆ ಮ್ಯಾಚ್ ಆಗುತ್ತದೆ. ಟಕಟಕನೆ ಟೈಪಿಸುತ್ತೀಯ ಎಸ್ಸೆಮ್ಮೆಸ್ ಮೊಬೈಲಿನಲ್ಲಿ: "ಥ್ಯಾಂಕ್ಯೂ ಕಣೋ ಗೂಬೆ.. ನಿಂಗೂ ಹ್ಯಾಪಿ ದೀಪಾವಳಿ. ಊರಲ್ಲಿ ಮಜಾ ಮಾಡು. ಲವ್ಯೂ!" ಗಾವುದಗಳಾಚೆಗಿನ ನನ್ನೂರಲ್ಲಿ ಸಿಗ್ನಲ್ಲನ್ನೇರಿ ಬರುತ್ತದೆ ಸಂದೇಶ ಟಿಣ್ ಟಿಣ್. ನಾನು ಹೊದಿಕೆಯಡಿಯಿಂದ ಕೈತೆಗೆದು ಮೊಬೈಲಿಗಾಗಿ ತಡಕಾಡುತ್ತೇನೆ.

* * *

ವರುಷಗಳ ಹಿಂದೆ ಬರೆದು ಅರ್ಧಕ್ಕೇ ಬಿಟ್ಟಿದ್ದ ಲಹರಿ.  ಯಾಕೋ ಈಗ ಈ ಚಳಿಗೆ ಈ ಹವೆಗೆ ಈ ಇದಕ್ಕೆ ಮತ್ತು ಹೊಸದೇನನ್ನೂ ಬರೆಯಲಾಗದ ಬಿಜಿಗೆ, ಸ್ವಲ್ಪ ಸೋಮಾರಿತನಕ್ಕೆ ಸೂಟ್ ಆಗುತ್ತದೆ ಎನ್ನಿಸಿತು; ಕೊನೆಯಲ್ಲಿಷ್ಟು ತೀಡಿ ಪೋಸ್ಟ್ ಮಾಡಿದ್ದೇನೆ. ಈ ದೀಪಾವಳಿಗೆ ಇಷ್ಟೇ.

ಶುಭಾಶಯಗಳೂ..

Friday, October 16, 2009

ಗೊಂದಲದ ಮಬ್ಬು ತೊಡೆಯಲಿ ದೀಪಾವಳಿ

ರಾತ್ರಿ ಹೊತ್ತು ಈ ರಾಜಧಾನಿಯ ಗಗನಚುಂಬಿ ಕಟ್ಟಡವೊಂದರ ಟೆರೇಸಿನ ತುದಿಗೆ ಹೋಗಿ ಒಮ್ಮೆ ಗಟ್ಟಿ ಕಣ್ಮುಚ್ಚಿ ತೆರೆದರೆ, ಭೂಮ್ಯಾಕಾಶಗಳ ಕೂಡುರೇಖೆಯೇ ಕಾಣದಂತಹ ಎದುರಿನ ಸಾದ್ಯಂತ ಕಪ್ಪು ಅವಕಾಶವೆಂಬುದು ಕಾರ್ತೀಕ ಮಾಸದ ಲಕ್ಷದೀಪೋತ್ಸವದಂತೆ ಕಾಣಿಸುತ್ತದೆ. ಕೆಲವು ಪ್ರಶಾಂತ ಹಣತೆಗಳು, ಕೆಲವು ಮಿನುಗುತ್ತಿರುವ ಹಣತೆಗಳು, ಇನ್ನು ಕೆಲವು ಚಲಿಸುತ್ತಿರುವ ಹಣತೆಗಳು. ರಾತ್ರಿ ಆಗುತ್ತ ಆಗುತ್ತ ಹೋದಂತೆ ಒಂದೊಂದೇ ಹಣತೆಗಳು ಆರುತ್ತ ಆರುತ್ತ ಹೋಗುತ್ತವೆ. ಬೆಳಗಾಗುವಷ್ಟರಲ್ಲಿ ಅಷ್ಟೂ ಹಣತೆಗಳು ಆರಿ ಅಲ್ಲಿ ಬರೀ ಕಟ್ಟಡ ಸಮೂಹವೂ, ನೀಲಾಕಾಶವೂ, ಅಲ್ಲೇ ಎಲ್ಲೋ ಕಸರತ್ತು ಮಾಡಿ ಹಿಂದಿನಿಂದ ಹಣುಕುತ್ತಿರುವ ದಿನಕರನೂ ಕಾಣಿಸುತ್ತಾರೆ.

ನಿಧಾನಕ್ಕೆ ಕೆಳಗಿಳಿದು ಬಂದು, ಬಿಸಿ ಮತ್ತು ಬ್ಯುಸಿ ಆಗಲು ಅಣಿಯಾಗುತ್ತಿರುವ ರಸ್ತೆಯ ಮೇಲೆ ಬಿಡುಬೀಸಾಗಿ ನಡೆದು, ಗೂಡಂಗಡಿಯೊಂದರಲ್ಲಿ ನಾಲ್ಕು ಕಾಸು ಕೊಟ್ಟು ಒಂದು ದಿನಪತ್ರಿಕೆ ಕೊಂಡುಕೊಳ್ಳುತ್ತೇನೆ. ಜತೆಗೇ ಪ್ಲಾಸ್ಟಿಕ್ ಕಪ್ಪಿನ ಚಹಾ. ಬದಿಯ ಕಟ್ಟೆಯಲ್ಲಿ ಕೂತು ಬಿಸಿ ಚಹಾ ಹೀರುತ್ತಾ ದಿನಪತ್ರಿಕೆ ಬಿಚ್ಚಿದರೆ, ಉತ್ತರ ಕರ್ನಾಟಕದ ಮಂದಿಗೆ ನೆರೆ ಪರಿಹಾರದ ಹಂಚಿಕೆಯ ಬಗ್ಗೆ ಶುರುವಾಗಿರುವ ವಿವಾದಗಳು, ಮುಖ್ಯಮಂತ್ರಿಗಳು ಈ ವರ್ಷ ಅಲ್ಲಿಯೇ ದೀಪಾವಳಿ ಆಚರಿಸುತ್ತಿರುವ ಸುದ್ದಿಯೂ, ಒಬಾಮಾಗೆ ಕೊಟ್ಟ ನೊಬೆಲ್ ಕುರಿತ ಜಿಜ್ಞಾಸೆಗಳೂ, ಇನ್ನೂ ಹಂದಿಜ್ವರ ಹುಬ್ಬುತ್ತಲೇ ಇದೆ ಎಂಬ ಕಳವಳದ ವಾರ್ತೆಯೂ, ದ್ರಾವಿಡ್‌ಗೆ ಈ ಸಲವೂ ಅವಕಾಶ ಸಿಗಲಿಲ್ಲ ಎಂಬ ನಿರಾಶಾದಾಯಕ ಸಾಲೂ, ಬೀಟಿ ಬದನೇಕಾಯಿಯೂ ಕಾಣಿಸುತ್ತದೆ. ಚಹಾ ಮುಗಿಯುವಷ್ಟರಲ್ಲಿ ಸುದ್ದಿಪರ್ಯಟನೆಯೂ ಮುಗಿದು, ವಾಚು ನೋಡಿದ್ದೇ ಆಫೀಸಿಗೆ ತಡವಾಯ್ತೆಂಬ ಜ್ಞಾನೋದಯ ಆಗಿ ದಡಬಡನೆ ಓಡಲು ಶುರುವಿಡುತ್ತೇನೆ.

ಮೊನ್ನೆ ಗೆಳತಿಯೊಬ್ಬಳಿಗೆ ಫೋನಿಸಿ "ಹಬ್ಬಕ್ಕೆ ಯಾವತ್ತು ಊರಿಗೆ ಹೊರಡ್ತಿದೀಯಾ? ಶುಕ್ರವಾರಾನಾ?" ಅಂತ ಕೇಳಿದೆ. ಅವಳದಕ್ಕೆ "ಇಲ್ಲ, ಶನಿವಾರ ನಮ್ಗೆ ಆಫೀಸ್ ಇದೆ" ಅಂದಳು. "ಅರೆ, ಗೌರ್ಮೆಂಟ್ ಹಾಲಿಡೇ ಅಲ್ವೇನೇ?" ಅಂತ ಕೇಳಿದೆ. "ನಾವು ಒಂದು ದಿನದ ಸಂಬಳವನ್ನ ರಿಲೀಫ್ ಫಂಡ್‌ಗೆ ಕೊಡ್ತಿದೀವಿ.. ಅದಕ್ಕೇ ಒಂದು ದಿನ ಎಕ್ಸ್‌ಟ್ರಾ ಕೆಲಸ ಮಾಡ್ತಿದೀವಿ" ಅಂದಳು. ನನಗೆ ಅವಳ ತರ್ಕ ಅರ್ಥವಾಗಲಿಲ್ಲ: "ಅಲ್ಲಾ ಮಾರಾಯ್ತಿ, ರಿಲೀಫ್ ಫಂಡ್‌ಗೆ ಕೊಡಿ ಯಾರು ಬೇಡ ಅಂದ್ರು. ಒಂದು ದಿನದ ಸಂಬಳ ಕಟ್ ಮಾಡ್ಕೊಳ್ಳಲಿಕ್ಕೆ ಹೇಳು ನಿಮ್ ಬಾಸ್‌ಗೆ! ಆದ್ರೆ ಕೆಲಸ ಯಾಕೆ ಜಾಸ್ತಿ ಮಾಡ್ಬೇಕು?" ಅಂತ ಪ್ರಶ್ನಿಸಿದೆ. "ಕೆಲಸ ಮಾಡಿದ್ರೇನೆ ನಮ್ ದೇಶ ಮುಂದೆ ಬರೋದು ಕಣೋ" ಅಂದಳು. ಈಗಂತೂ ನಂಗೆ ಸ್ವಲ್ಪವೂ ಅರ್ಥ ಆಗಲಿಲ್ಲ. ನೆರೆ ಪರಿಹಾರಕ್ಕೂ, ಇವರು ರಜಾದಿನ ಕೆಲಸ ಮಾಡುವುದಕ್ಕೂ, ದೇಶ ಮುಂದುವರೆಯುವುದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂತ ಯೋಚಿಸಲೂ ಆಗಲಿಲ್ಲ. "ಸರಿ ಬಿಡು" ಅಂತ ಫೋನಿಟ್ಟೆ.

ಈಗ ಕೆಲ ದಿನಗಳಿಂದ ಫೇಸ್‌ಬುಕ್ಕಿನ ಫಾರ್ಮ್‌ವಿಲ್ಲೆಯಲ್ಲಿ ನಾನು ಕೃಷಿಕಾರ್ಯ ಕೈಗೊಂಡಿದ್ದೇನೆ. ಸ್ಟ್ರಾಬೆರಿ, ಗೋಧಿ, ಸೋಯಾಬೀನು, ಕುಂಬಳಕಾಯಿ, ಭತ್ತ, ಇತ್ಯಾದಿ ಬೆಳೆಗಳು ಒಳ್ಳೆಯ ಫಸಲು ಬಂದು ಲಾಭವಾಗಿದೆ. ಸುಮಾರು ಗೆಳೆಯರು ಚೆರ್ರಿ, ಅಂಜೂರ, ನಿಂಬೆ, ಇತ್ಯಾದಿ ಗಿಡಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಅವೂ ಫಲ ನೀಡುತ್ತಿವೆ. ಜಮೀನಿನ ಮೂಲೆಯಲ್ಲೊಂದು ರೆಸ್ಟ್‌ಟೆಂಟ್ ಹಾಕಿಕೊಂಡಿದ್ದೇನೆ. ಸಧ್ಯದಲ್ಲೇ ಟ್ರಾಕ್ಟರ್ ಕೊಳ್ಳುವ ಆಲೋಚನೆಯಿದೆ. ಬೀಟಿ ಬದನೆಕಾಯಿಯ ಬೀಜ ಸಿಕ್ಕರೆ ಬಿತ್ತೋಣ ಅಂತ ಇತ್ತು, ಮಾರ್ಕೆಟ್ಟಿನಲ್ಲೆಲ್ಲೂ ಕಾಣಿಸಲಿಲ್ಲ.

ಉತ್ತರ ಕರ್ನಾಟಕದ ನೆರೆ ನಿರಾಶ್ರಿತರ ಚಿತ್ರ ಕಣ್ಮುಂದಿದೆ. ಎಲ್ಲವನ್ನೂ ಎಂದರೆ ಎಲ್ಲವನ್ನೂ ಕಳೆದುಕೊಂಡಿರುವ ಆ ಜನಗಳು ಪಕ್ಕದಲ್ಲೇ ಇರುವಾಗ ನಾವು ಹೇಗೆ ಸಂಭ್ರಮದಿಂದ ಹಬ್ಬ ಆಚರಿಸುವುದು ಎಂಬ ಕೊರಗು ಮನದಲ್ಲಿದ್ದರೂ ಎಲ್ಲರೂ ಸಂಭ್ರಮದಿಂದಲೇ ದೀಪಾವಳಿಗೆ ತಯಾರಾಗುತ್ತಿದ್ದೇವೆ. ಸ್ಲೀಪರ್ ಕೋಚ್ ಸಿಗಲಿಲ್ಲವಲ್ಲ ಅಂತ ಕೈಕೈ ಹಿಸುಕಿಕೊಂಡಿದ್ದೇವೆ. ಡಿಸ್‌ಕೌಂಟ್ ಹಾಕಿರುವ ಅಂಗಡಿಗಳನ್ನು ಹೊಕ್ಕು ಬಟ್ಟೆ ಖರೀದಿಸಿದ್ದೇವೆ. ಗರಿಗರಿ ಪಟಾಕಿಗಳು ಬಾಕ್ಸಿನಲ್ಲಿ ಬೆಚ್ಚಗೆ ಕೂತಿವೆ. ಅವಕ್ಕೆ ಸುರುಳಿ ಸುತ್ತಲ್ಪಟ್ಟಿರುವ ಕಾಗದದಲ್ಲಿ ಕಳೆದ ವರ್ಷ ಪಟಾಕಿ ದುರಂತದಲ್ಲಿ ಸತ್ತ ಕುಟುಂಬದ ವರದಿಯಿದೆ.

ಯಾವುದು ತಪ್ಪು ಯಾವುದು ಸರಿ ಎಂಬುದನ್ನು ವಿವೇಚಿಸುವ ಜಾಣ್ಮೆಯನ್ನೇ ಕಳೆದುಕೊಂಡಿರುವ, ಇಂದು ತೆಗೆದುಕೊಂಡ ತೀರ್ಮಾನಗಳು ನಾಳೆಯ ಹೊತ್ತಿಗೆ ಹಾಸ್ಯಾಸ್ಪದವೆನ್ನಿಸುವ, ಈಗ ತರ್ಕಿಸಿದ್ದ ರೀತಿ ಮರುದಿನದ ಹೊತ್ತಿಗೆ ನಮಗೇ ಸಣ್ಣತನವೆನ್ನಿಸುವ ವಿಚಿತ್ರ ಸಂಕಷ್ಟದಲ್ಲಿ ಸಿಲುಕಿರುವ ನಾವು ಇದೆಂತಹ ದಾರದ ಮೇಲೆ ನಡೆಯುತ್ತಿದ್ದೇವೆ? ಇದೆಂತಹ ಅಂಧಃಕಾರ ಕವಿದಿದೆ ನಮ್ಮನ್ನು? ಎತ್ತ ಹೋಗುತ್ತಿದ್ದೇವೆ? ರಾತ್ರಿ ಹಣತೆಯಂತೆ ಕಂಡ ದೀಪಗಳು ಸುಳ್ಳು, ಇಂಟರ್ನೆಟ್ಟಿನಲ್ಲಿ ಬೆಳೆದ ಭತ್ತ ಹುಸಿ, ಸಿಡಿದ ಮರುಕ್ಷಣ ಇಲ್ಲವಾಗುವ ಪಟಾಕಿಯ ಸದ್ದಿನಂತಹ ಮಾಧ್ಯಮದ ವರದಿಗಳು ಕೇವಲ ಮರುಳು, ನೆರೆ ಸಂತ್ರಸ್ತರೆಡೆಗೆ ನನ್ನ ಹೃದಯ ಮಿಡಿದಿದ್ದೂ ಡಾಂಬಿಕ. ಆದರೂ, ಇಲ್ಲ, ನಾನು ಹಣತೆಗಳನ್ನು ಕಂಡದ್ದು, ಚೆರ್ರಿ ಮರದಲ್ಲಿ ಹಣ್ಣು ಬಿಟ್ಟಾಗ ಖುಶಿಗೊಂಡದ್ದು, ಓದುತ್ತಿರುವಷ್ಟಾದರೂ ಹೊತ್ತು ನಾನೂ ಪತ್ರಿಕೆಯಲ್ಲಿ ಮುಳುಗಿದ್ದದ್ದು, ನೆರೆ ಹಾನಿಯ ಚಿತ್ರಗಳನ್ನು ನೋಡಿದಾಗ ಕರುಳು ಚುರುಕ್ ಎಂದದ್ದು ಸತ್ಯವಲ್ಲವಾ? ಊಹುಂ, ತಿಳಿಯುತ್ತಿಲ್ಲ.

ದೀಪಾವಳಿಯ ಬೆಳಕು ಈ ನಮ್ಮ ಗೊಂದಲದ ಮನಸ್ಥಿತಿಯನ್ನು ಕೊಂಚ ಮಟ್ಟಿಗಾದರೂ ತಿಳಿಗೊಳಿಸುತ್ತದೆ, ಮಬ್ಬಿನಲ್ಲೊಂದು ಪುಟ್ಟ ಬೆಳಕು ಮೂಡಿಸುತ್ತದೆ ಅಂತ ಹಾರೈಸೋಣ. ಶುಭಾಶಯಗಳು.

Thursday, October 23, 2008

ಆಕಾಶಬುಟ್ಟಿ

ವರುಷವಿಡೀ ವಯಸ್ಸಾದ ಅಮ್ಮಮ್ಮನ ಹಾಗೆ ನಾಗಂದಿಗೆಯ ಮೇಲೆ ಮುದುಡಿ ಮಲಗಿಕೊಂಡಿದ್ದ ಅದನ್ನು ಅಪ್ಪ ಕೆಳಗಿಳಿಸಿ ಧೂಳು ಹೊಡೆದನೆಂದರೆ ಅದು ದೀಪಾವಳಿಯ ಹಿಂದಿನ ದಿನ ಎಂದರ್ಥ. ಬಣ್ಣದ ಕಾಗದ ಮುಚ್ಚಿದ ಬಿದಿರು ಕಡ್ಡಿಯ ದೇಹದ ಈ ಮಡಿಕೆ-ಮಡಿಕೆಯ ಛತ್ರಿಯಂತಹ ವಸ್ತುವನ್ನು ಅಪ್ಪ ಹುಶಾರಾಗಿ ಬಿಚ್ಚುತ್ತಾ ಹೋಗುವಾಗ ಎದುರಿಗೆ ಕುಕ್ಕರಗಾಲಲ್ಲಿ ಕೂತ ಪುಟ್ಟ ಕಣ್ಮಿಟುಕಿಸದೇ ನೋಡುತ್ತಿರುತ್ತಾನೆ.. ಏನಿದು? ಏನಿರಬಹುದು ಒಳಗೆ? ಮ್ಯಾಜಿಕ್ ಮಾಡುವವನಂತೆ ಅಪ್ಪ ಅದರ ಪದರಗಳನ್ನು ಪೂರ್ತಿಯಾಗಿ ಬಿಚ್ಚಿ ಎತ್ತಿ ಹಿಡಿದರೆ ಅದೊಂದು ನಕ್ಷತ್ರವಾಗಿಬಿಟ್ಟಿದೆ! 'ಹೇ..! ಆಕಾಶಬುಟ್ಟಿ..!' ಪುಟ್ಟ ಖುಶಿಯಲ್ಲಿ ಚಪ್ಪಾಳೆ ತಟ್ಟುತ್ತಾನೆ ಕುಣಿಯುತ್ತಾ.

ಆಮೇಲೆ ಊದ್ದದೊಂದು ವೈರು ಹುಡುಕಬೇಕು. ಅದರ ಒಂದು ತುದಿಗೆ ಪಿನ್ನು. ಇನ್ನೊಂದು ತುದಿಗೆ ಬಲ್ಬ್-ಹೋಲ್ಡರು. ಜಗುಲಿಯಲ್ಲಿರುವ ಪ್ಲಗ್ಗಿಗೆ ಈ ಪಿನ್ನು ಹಾಕಿ ವೈರನ್ನು ಕಿಟಕಿಯ ಕಂಡಿಯಲ್ಲಿ ತೂರಿಸಿ ಮನೆಯ ಹೊರತಂದು ಎದೂರಿಗೆ - ಸೂರಿನ ತುದಿಗೆ ಸುತ್ತಿ ನೇತು ಹಾಕಬೇಕು ಹೋಲ್ಡರನ್ನು. ಈಗ ಒಂದು ಬಲ್ಬು ಬೇಕಲ್ಲಾ..? ಹೊಸದು ತಂದಿಟ್ಟದ್ದು ಇಲ್ಲ. ಬಚ್ಚಲು ಮನೆಗೆ ಹೋಗುವ ದಾರಿಯಲ್ಲಿ ಹಾಕಿರುವ ಬಲ್ಬು ಸ್ವಲ್ಪ ದಿನಕ್ಕೆ ಇಲ್ಲದಿದ್ದರೂ ನಡೆಯುತ್ತೆ. ಒಂದು ತಿಂಗಳು ಅಷ್ಟೇ ತಾನೇ? ಅದನ್ನೇ ತಂದು ಇಲ್ಲಿ ಹಾಕೋದು.

'ಹಾಂ, ತಗಂಬಾ ಈಗ ಆಕಾಶಬುಟ್ಟಿ!' ಚಲಾವಣೆ ಕೊಡುತ್ತಾನೆ ಅಪ್ಪ ಪುಟ್ಟನಿಗೆ. ಪುಟ್ಟ ಓಡಿ ಹೋಗಿ ತರಾತುರಿಯಿಂದ ಅದರ ತಲೆಯ ಮೇಲೆ ಜುಟ್ಟಿನಂತಿರುವ ದಾರವನ್ನು ಹಿಡಿದು ತರುವ ವೇಳೆಯಲ್ಲೇ, ಬಾಗಿಲು ದಾಟುವಾಗ ಅದು ಕಾಲಿಗೆ ಸಿಕ್ಕಿ, ಆಕಾಶಬುಟ್ಟಿ ಹರಿದು, ಪುಟ್ಟ ಬಿದ್ದು... ಅಳಲು ಶುರುವಿಡುತ್ತಾನೆ!

'ಏ.. ಹೋತು.. ಹೋತು ಬಿಡು.. ಏನೂ ಆಗಲ್ಲೆ..' ಮಳ್ಳಂಡೆಯ ಗಾಯಕ್ಕೆ ಕೊಬ್ರಿ ಎಣ್ಣೆ ಹಚ್ಚುತ್ತಾ ಸಮಾಧಾನ ಮಾಡಿದಳು ಅಮ್ಮ. ಪುಟ್ಟನಿಗೆ ತನ್ನ ಕಾಲಿಗಾದ ಗಾಯಕ್ಕಿಂತ ಹೆಚ್ಚಿನ ನೋವಾದದ್ದು ಆಕಾಶಬುಟ್ಟಿ ಹರಿದುಹೋಯಿತಲ್ಲಾ ಎಂಬುದಕ್ಕೆ! ಆತ ಮತ್ತೂ ಜೋರಾಗಿ ಅಳತೊಡಗಿದ. ಮತ್ತೆ, ಆಗಲೇ ಉರಿಗಣ್ಣು ಮಾಡಿದ್ದ ಅಪ್ಪ, ತಾನು ಅಳು ನಿಲ್ಲಿಸಿದ್ದೇ ಬೈಯಲು ಶುರು ಮಾಡುತ್ತಾನೆ ಎಂಬ ಭಯ ಅವನಿಗೆ. ಅದಕ್ಕಾಗಿ ಅಂವ ಅಳು ನಿಲ್ಲಿಸುವುದೇ ಬೇಡವೆಂದು ತೀರ್ಮಾನಿಸಿದ..!

ಆ ಸಣ್ಣ ಊರಿನಲ್ಲಿ ಆಕಾಶಬುಟ್ಟಿ ಸಿಗುವ ಅಂಗಡಿಗಳಿರಲಿಲ್ಲ. ಇಪ್ಪತ್ತು ಕಿಲೋಮೀಟರ್ ದೂರದ ಪೇಟೆಗೆ ಹೋಗಿ ಹೊಸ ಆಕಾಶಬುಟ್ಟಿ ತಂದು, ಹೂಡಿ, ನೇತುಹಾಕಿ... ಇದೆಲ್ಲಾ ಈ ಗಡಿಬಿಡಿಯಲ್ಲಿ ಆಗುಹೋಗುವ ಕೆಲಸ ಅಲ್ಲವೆಂದು ತೀರ್ಮಾನಿಸಿದ ಅಪ್ಪ, ಮತ್ತೆ ರಿಪೇರಿ ಮಾಡಿ ಜೋಡಿಸಲಾಗದ ಸ್ಥಿತಿಯಲ್ಲಿದ್ದ ಹಳೇ ಆಕಾಶಬುಟ್ಟಿಯನ್ನು ನೋಡುತ್ತಾ 'ಹ್ಮ್.. ಒಟ್ನಲ್ಲಿ ಈ ವರ್ಷ ನಮ್ಮನೆ ಎದ್ರಿಗೆ ಆಕಾಶಬುಟ್ಟಿ ಇಲ್ದೇ ಹೋದಂಗೆ ಮಾಡ್ದೆ' ಎಂದು ಪುಟ್ಟನಿಗೆ ಬೈದಂತೆ ಹೇಳಿ ಒಳನಡೆದುಬಿಟ್ಟ. ಪುಟ್ಟನಿಗೆ ಮೊದಲಿಗಿಂತ ಜೋರಾಗಿ ಅಳು ಬಂತು.. ಪ್ರಣವನ ಮನೆಯಲ್ಲಿ ಹಾಕ್ತಾರೆ, ಪಲ್ಲವಿಯ ಮನೆಯಲ್ಲಂತೂ ನಿನ್ನೆಯೇ ಹಾಕಿಯಾಗಿದೆ, ಊರಲ್ಲೆಲ್ಲರ ಮನೆಯಲ್ಲೂ ಹಾಕ್ತಾರೆ. ನಮ್ಮ ಮನೆಯಲ್ಲಿ ಮಾತ್ರ ಇಲ್ಲ ಈ ವರ್ಷ.. ಶಾಲೆಗೆ ಹೋಗುವಾಗ ಅವರೆಲ್ಲರೂ ನಮ್ಮನೆಯೆಡೆಗೆ ನೋಡಿಯೇ ನೋಡುತ್ತಾರೆ.. ಆಗ ಇಲ್ಲಿ ಆಕಾಶಬುಟ್ಟಿ ಇಲ್ಲವೆಂದರೆ ಕೇಳಿಯೇ ಕೇಳುತ್ತಾರೆ: 'ಅಕ್ಷಯಾ, ನಿಮ್ಮನೇಲಿ ಮಾತ್ರ ಎಂಥಕ್ ಆಕಾಶಬುಟ್ಟಿ ಹಾಕಲ್ಲೆ?' ಅಂತ.. ಪುಟ್ಟನಿಗೆ ಅಳು ತಡೆಯಲಿಕ್ಕೇ ಆಗಲಿಲ್ಲ..

'ಥೋ.. ಇಷ್ಟ್ ಸಣ್ಣ ಗಾಯಕ್ಕೆ ಎಂಥಕ್ ಇಷ್ಟೆಲ್ಲಾ ಅಳ್ತಾ ಇದ್ಯಾ? ದಿನಾನೂ ಬಿದ್ದು ಗಾಯ ಮಾಡ್ಕ್ಯಂಡ್ ಬರ್ತೆ ನೀನು..' ಅಮ್ಮ ಗೊಣಗಿದಳು.
'ಅಮ್ಮಾ, ನಮ್ಮನೇಲೂ ಆಕಾಶಬುಟ್ಟಿ ಹಾಕವು.. ಎಲ್ಲಾರ್ ಮನೇಲೂ ಹಾಕ್ತ.. ಅಪ್ಪಂಗೆ ಪ್ಯಾಟಿಗ್ ಹೋಗಿ ಹೊಸಾದು ತಗಂಬರಕ್ ಹೇಳು.. ನಂಗೆ ಬೇಕೇ ಬೇಕು..' ಪುಟ್ಟ ಹಟಕ್ಕೆ ಬಿದ್ದ.
'ಅಷ್ಟೇ ಸೈಯಾ? ಅದ್ಕೇ ಇಷ್ಟೆಲ್ಲಾ ರಂಪಾಟಾನಾ? ನಾ ಹೇಳ್ತಿ ಬಿಡು ಅಪ್ಪನ್ ಹತ್ರ..' ಸಮಾಧಾನಿಸಿದಳು ಅಮ್ಮ.
'ಹೇ..' ಅಮ್ಮನಿಗೊಂದು ಮುತ್ತೊತ್ತಿ ಮಡಿಲಿಂದ ಜಿಗಿದೆದ್ದು ಓಡಿದ ಪುಟ್ಟ. ಅವನ ಕೆನ್ನೆಯ ಮೇಲಿಳಿದಿದ್ದ ಕಣ್ಣೀರು ತನ್ನ ತುಟಿಗೆ ತಾಗಿ ಉಪ್ಪುಪ್ಪೆನಿಸಿ 'ಶೀ! ಕೊಳಕು!' ಎಂದು ಒರೆಸಿಕೊಳ್ಳುತ್ತಾ ಒಳನಡೆದಳು ಅಮ್ಮ!

ಅವತ್ತು ರಾತ್ರಿಯ ನಿದ್ರೆಯಲ್ಲಿ ಪುಟ್ಟನಿಗೆ ಕನಸೋ ಕನಸು.. ಕನಸಿನಲ್ಲಿ ಅವನ ಮನೆ ಮುಂದೆ ನೂರಾರು ಆಕಾಶಬುಟ್ಟಿಗಳನ್ನು ನೇತುಹಾಕಲಾಗಿದೆ.. ಒಂದೊಂದೂ ಒಂದೊಂದು ಬಗೆಯ ಬಣ್ಣದ ಬೆಳಕನ್ನು ಬೀರುತ್ತಿದೆ.. ನಕ್ಷತ್ರಲೋಕದಲ್ಲಿರುವವನಂತೆ ಅವನ್ನೆಲ್ಲಾ ಬಾಯ್ಕಳೆದುಕೊಂಡು ನೋಡುತ್ತಾ ಸಂಚರಿಸುತ್ತಿದ್ದಾನೆ ಪುಟ್ಟ..

ಬೆಳಗಾಗಿದೆ. ಇವತ್ತೇ ಹಬ್ಬ! ಇವತ್ತು ಸಂಜೆಯೊಳಗೆ ಮನೆಯೆದುರು ಆಕಾಶಬುಟ್ಟಿ ನೇತಾಡುತ್ತಿರಬೇಕು..! ಅಪ್ಪ ಇನ್ನೇನು ಪೇಟೆಗೆ ಹೊರಡುತ್ತಾನೆ ಹೊಸ ಆಕಾಶಬುಟ್ಟಿ ತರುವುದಕ್ಕೆ ಅಂತ ಒಳಹೊರಗೆ ಓಡಾಡುತ್ತಾ ಕಾಯುತ್ತಿದ್ದಾನೆ ಪುಟ್ಟ. ಊಹುಂ, ಅಪ್ಪ ಹೊರಡುವ ಲಕ್ಷಣವೇ ಕಾಣುತ್ತಿಲ್ಲ. ಕೊಟ್ಟಿಗೆ ತೊಳೆಯುವುದು, ದನಕರುಗಳಿಗೆ ಸಿಂಗಾರ ಮಾಡುವುದು, ತೋರಣ ಕಟ್ಟುವುದು, ಇತ್ಯಾದಿ ಅವನದೇ ಕೆಲಸಗಳಲ್ಲಿ ಮಗ್ನನಾಗಿದ್ದಾನೆ ಅಪ್ಪ. ಹಾಗಾದರೆ ಅಮ್ಮ ಅಪ್ಪನಿಗೆ ಹೇಳಲೇ ಇಲ್ಲವೇ? ಮರೆತುಬಿಟ್ಟಳೇ? ಕೇಳೋಣವೆಂದರೆ ಅಮ್ಮ ಅಡುಗೆಮನೆಯಲ್ಲಿ ಬ್ಯುಸಿ! 'ಮಡಿ..! ಇಲ್ಲೆಲ್ಲಾ ಬರಡ ನೀನು' ಗುರುಗುಡುತ್ತಿದ್ದಾಳೆ ಒಳಗಿಂದಲೇ. ಪುಟ್ಟನಿಗೆ ಆಕಾಶಬುಟ್ಟಿಯದೇ ಚಿಂತೆ..

ಪುಟ್ಟನ ಮನೆಯ ಪಕ್ಕದಲ್ಲಿರುವುದು 'ಮೇಷ್ಟ್ರಂಕಲ್' ಮನೆ. ರಮೇಶ್ ಸೆಬಾಸ್ಟಿಯನ್ ಅವರ ಹೆಸರು. ಸುಮಾರು ವರ್ಷಗಳ ಹಿಂದೆಯೇ ಪಕ್ಕದೂರಿನ ಶಾಲೆಗೆ ಮೇಷ್ಟ್ರಾಗಿ ಬಂದ ಅವರು ಇಲ್ಲಿ ಮನೆ ಮಾಡಿಕೊಂಡು, ರಿಟೈರ್ ಆದಮೇಲೂ ಇಲ್ಲೇ ನೆಲೆಯೂರಿರುವವರು. ಊರವರೆಲ್ಲರ ಜೊತೆ ಚೆನ್ನಾಗಿದ್ದ ಅವರು, ಹಾಗಂತ ಯಾರನ್ನೂ ಅಷ್ಟಾಗಿ ಹಚ್ಚಿಕೊಂಡವರೂ ಅಲ್ಲ. ತಾವಾಯಿತು ತಮ್ಮ ಪಾಡಾಯಿತು ಎಂಬಂತೆ ಇರುವವರು. ಮದುವೆ - ಹಬ್ಬ - ವಿಶೇಷ ದಿನಗಳಂದು ಯಾರ ಮನೆಯಲ್ಲಾದರೂ ಕರೆದರೆ ಹೋಗಿ ಬರುತ್ತಿದ್ದರು. ಹಾಗೆಯೇ ಕ್ರಿಸ್‍ಮಸ್ ದಿನ ಊರವರೆಲ್ಲರೂ ಅವರ ಮನೆಗೆ ಹೋಗಿ, ಮಾಡಿದ್ದ ಅಲಂಕಾರವನ್ನೆಲ್ಲಾ ಹೊಗಳಿ, ಸೆಬಾಸ್ಟಿಯನ್ನರ ಹೆಂಡತಿ ಹಾಕಿಕೊಂಡ ಒಡವೆಗಳನ್ನೂ ಒಮ್ಮೆ ಪರಿಶೀಲಿಸಿ ನೋಡಿ, ಕೇಕು-ಸ್ವೀಟು ತಿಂದು ಬರುತ್ತಿದ್ದರು. ಹಿರಿಯರೂ ನಿವೃತ್ತ ಮಾಸ್ತರರೂ ಆಗಿದ್ದರಿಂದ ಅವರಿಗೆ ಊರಲ್ಲೊಂದು ಗೌರವವಿತ್ತು. ಮತ್ತೆ ಇಡೀ ಊರಲ್ಲಿ ಹುಡುಗರು ಹೀಗೆ ಇಂಗ್ಲೀಷಿನಲ್ಲಿ 'ಅಂಕಲ್' ಅಥವಾ 'ಮೇಷ್ಟ್ರಂಕಲ್' ಅಂತ ಕರೆಯುವುದು ಅವರೊಬ್ಬರನ್ನೇ.

ಅಳುಮುಖ ಮಾಡಿಕೊಂಡು ಹೊರಗಡೆ ಕಟ್ಟೆಯ ಮೇಲೆ ಕೂತಿದ್ದ ಪುಟ್ಟನನ್ನು ಕಂಡು ಅವರು ಮಾತಾಡಿಸಿದರು: 'ಯಾಕ್ ಪುಟ್ಟಾ..? ಹಬ್ಬದ ದಿನ ಖುಶ್‍ಖುಶಿಯಾಗಿರೋದು ಬಿಟ್ಟು ಹೀಗೆ ಕೂತಿದೀಯಾ?' ಅಂತ. ಪುಟ್ಟ ಹೀಗ್ ಹೀಗಾಯ್ತು, ಈ ವರ್ಷ ನಮ್ಮನೇಲಿ ಆಕಾಶಬುಟ್ಟೀನೇ ಇಲ್ಲ ಅಂತ ಹೇಳಿದ. ಮಕ್ಕಳಿಲ್ಲದ ಸೆಬಾಸ್ಟಿಯನ್ ಅಂಕಲ್‍ಗೆ ಪುಟ್ಟನನ್ನ ಕಂಡ್ರೆ ಯಾವಾಗಲೂ ಅಕ್ಕರೆ. ತಕ್ಷಣ ಪುಟ್ಟನನ್ನ ಎತ್ತಿಕೊಂಡ ಅವರು, 'ಅಯ್ಯೋ.. ಅದಕ್ಯಾಕೆ ಇಷ್ಟೆಲ್ಲಾ ಬೇಜಾರ್ ಮಾಡ್ಕೊಂಡಿದೀಯಾ..? ನಮ್ಮನೇಲಿ ಕ್ರಿಸ್‍ಮಸ್ ಟೈಮಲ್ಲಿ ಹಾಕೋ ಆಕಾಶಬುಟ್ಟಿ ಇದೆಯಲ್ಲಾ..? ಅದನ್ನೇ ಕೊಡ್ತೀನಿ. ನಿಮ್ಮನೇಲಿ ಹಾಕಿ. ಹಬ್ಬ ಮುಗಿದ ಮೇಲೆ ವಾಪಸು ಕೊಡಿ.. ಸಿಂಪಲ್..!' ಎಂದವರೇ ಪುಟ್ಟನನ್ನ ತಮ್ಮನೆ ಒಳಗೆ ಕರೆದುಕೊಂಡು ಹೋಗಿ, ಗಾಡ್ರೇಜಿನಲ್ಲಿದ್ದ ಬಣ್ಣಬಣ್ಣದ ಝರಿಯ, ಫಳಫಳನೆ ಹೊಳೆಯುವ, ಹೊಸದರ ಹಾಗೆ ಕಾಣುವ ಆಕಾಶಬುಟ್ಟಿಯನ್ನು ತೆಗೆದುಕೊಟ್ಟರು.. ಪುಟ್ಟನ ಕಣ್ಣಲ್ಲೀಗ ನಕ್ಷತ್ರ ಕಾರಂಜಿ..!

ಅಷ್ಟೊತ್ತಿಗೆ ಗೋಪೂಜೆಗೆ ಕರೆಯಲೆಂದು ಅಲ್ಲಿಗೆ ಬಂದ ಅಮ್ಮನಿಗೆ ಪುಟ್ಟ ಮೇಷ್ಟ್ರಂಕಲ್ ಕೊಟ್ಟ ಆಕಾಶಬುಟ್ಟಿ ತೋರಿಸಿದ. 'ಓಹ್, ಸಿಗ್ತಲ್ಲಪ್ಪಾ ಅಂತೂ ನಿಂಗೆ ಆಕಾಶಬುಟ್ಟಿ..? ಮೇಷ್ಟ್ರ್‍ಏ, ಇವನಿಗೆ ಇವತ್ತು ಹೆಂಗೆ ಸಮಾಧಾನ ಮಾಡೋದು ಅಂತ್ಲೇ ನಂಗೆ ಗೊತ್ತಾಗ್ದೇ ಸುಮ್ನಾಗ್ಬಿಟ್ಟಿದ್ದೆ.. ಅಂತೂ ನೀವು ಇದನ್ನ ಕೊಟ್ಟು ಒಳ್ಳೇ ಕೆಲಸ ಮಾಡಿದ್ರಿ ನೋಡಿ!' ಎಂದು, ಅವರನ್ನು ಮಡದಿ ಸಮೇತ ಪೂಜೆಗೆ - ಊಟಕ್ಕೆ ಬರುವಂತೆ ಕರೆದು ಹೋದಳು.

ಆಕಾಶಬುಟ್ಟಿಯನ್ನು ಹುಶಾರಾಗಿ ಮನೆಗೆ ತಂದ ಪುಟ್ಟ. ಅವನಿಗೆ ಅದನ್ನು ಮನೆಯೆದುರು ನೇತು ಹಾಕಿ, ಒಮ್ಮೆ ಸ್ವಿಚ್ ಹಾಕಿ ನೋಡುವವರೆಗೆ ಸಮಾಧಾನವಿಲ್ಲ.. ಅಪ್ಪನ ಬಳಿ ಕೇಳಿದರೆ 'ಈಗ ಆಗಲ್ಲೆ ಅಪ್ಪೀ.. ಮಧ್ಯಾಹ್ನದ್ ಮೇಲೆ ನೋಡನ.. ಈಗ ಸ್ನಾನಕ್ಕೆ ಹೋಗವು, ಗೋಪೂಜೆ ಮಾಡವು, ದೇವಸ್ಥಾನಕ್ ಹೋಗವು..' ಎನ್ನುತ್ತಾ ಗಡಿಬಿಡಿಯಲ್ಲಿ ಟವೆಲ್ ಎತ್ತಿಕೊಂಡು ಬಚ್ಚಲಿನೆಡೆಗೆ ನಡೆದೇಬಿಟ್ಟ. ಪುಟ್ಟ ಚಡಪಡಿಸುತ್ತಾ ಮನೆಯ ಒಳಗೂ ಹೊರಗೂ ಓಡಾಡತೊಡಗಿದ. ಅಪ್ಪ ಸ್ನಾನ ಮಾಡಿ ಬಂದು, ಮಡಿ ಉಟ್ಟು, ಪೂಜೆ ಸಾಮಾನನ್ನೆಲ್ಲಾ ಎತ್ತಿಕೊಂಡು ಕೊಟ್ಟಿಗೆ ಕಡೆ ಹೊರಟ. ಅಮ್ಮನೂ ಅಪ್ಪನ ಹಿಂದೆಯೇ ನೈವೇದ್ಯಕ್ಕೆ ಭಕ್ಷ್ಯಗಳನ್ನು ಹಿಡಿದು ಹೊರಟಳು. 'ಝಾಂಗ್ಟೆ ಹೊಡಿಲಕ್ಕು ಬಾರಾ' ಎಂದು ಕೂಗಿದರೆ ಪುಟ್ಟ ಸಿಟ್ಟು ಮಾಡಿಕೊಂಡು ಕೊಟ್ಟಿಗೆಗೆ ಹೋಗಲೇ ಇಲ್ಲ.

ಸ್ವಲ್ಪ ಸಮಯದಲ್ಲಿ ಹೊಸ ಬಟ್ಟೆ ಹಾಕಿಕೊಂಡು ಮೇಷ್ಟ್ರಂಕಲ್ ಪುಟ್ಟನ ಮನೆಗೆ ಬಂದರು. ಪುಟ್ಟನ ಚಡಪಡಿಕೆ ಅವರಿಗೆ ಅರ್ಥವಾಯಿತು. ಅದಾಗಲೇ ವೈರೆಳೆದು ತಯಾರಾಗಿದ್ದ ವ್ಯವಸ್ಥೆಗೆ ತಮ್ಮ ಮನೆಯ ಆಕಾಶಬುಟ್ಟಿಯನ್ನು ನೇತುಬಿಟ್ಟರು. ಪುಟ್ಟ ಒಳಗೋಡಿ ಸ್ವಿಚ್ ಹಾಕಿದ. ಕನಸಿನ ಲೋಕದಿಂದಲೇ ಇಳಿದು ಬಂದಂತಿದ್ದ ಆ ಆಕಾಶದೀಪ ಝಗ್ಗನೆ ಹೊತ್ತಿಕೊಳ್ಳುವುದಕ್ಕೂ, ಪುಟ್ಟನ ಮೊಗದಲ್ಲಿ ಖುಶಿಯ ಪಟಾಕಿ ಸಿಡಿದರಳುವುದಕ್ಕೂ, ಕೊಟ್ಟಿಗೆಯಿಂದ ಅಪ್ಪನ ಗೋಪೂಜೆಯ ಘಂಟೆ ಸದ್ದಾಗುವುದಕ್ಕೂ ಸರಿ ಹೋಯಿತು. 'ಹೇ..' ಎನ್ನುತ್ತಾ ಮೇಷ್ಟ್ರಂಕಲ್ಲನ್ನೂ ಎಳೆದುಕೊಂಡೇ ಕೊಟ್ಟಿಗೆಯೆಡೆಗೆ ಓಡಿದ ಪುಟ್ಟ.

* *

ಆಕಾಶಬುಟ್ಟಿಯ ಬೆಳಕು ಮೌಢ್ಯದ ಕತ್ತಲೆಯನ್ನು ತೊಡೆದು, ಸ್ನೇಹ-ಪ್ರೀತಿ-ಸಹಬಾಳ್ವೆಗಳೆಡೆಗೆ ಜನರನ್ನು ನಡೆಸುವಲ್ಲಿ ನೆರವಾಗಲಿ ಎಂದು ಹಾರೈಸೋಣ. ದೀಪಾವಳಿಯ ಶುಭಾಶಯಗಳು.

Tuesday, November 06, 2007

ದೀಪವಾಗಬೇಕಿದೆ...

ರಜನಿಯ ನೆರವಿಗೆ ಅದೆಷ್ಟೊಂದು ಚಿಕ್ಕೆಗಳು..! ದಿಟ್ಟಿ ಹಾಯಿಸಿದಷ್ಟೂ ವಿಸ್ತರಿಸಿರುವ, ದಿಗಂತದಂತೆ ಕಂಡರೂ ಅಂತ್ಯವಲ್ಲದ ಈ ಅಗಾಧ ನಭದ ಅಧಿಪತಿ ಚಂದಿರನ ಒಡ್ಡೋಲಗದಲ್ಲಿ ಅದೆಷ್ಟು ಕೋಟಿ ಕೋಟಿ ತಾರೆಗಳ ಒಟ್ಟಿಲು..! ಸುತ್ತ ಕವಿದಿರುವ ತಿಮಿರದ ಕಣಗಳ ಅಪ್ಪುಗೆಗೆ ಸಿಲುಕಿ ಕುಳಿತಿರುವ ನನ್ನ ನೆರವಿಗೆ ಬರುವ ಯಾವ ಕರುಣೆಯನ್ನೂ ತೋರದೇ ಅಲ್ಲಲ್ಲೇ ತಮ್ಮ ತಮ್ಮ ಗ್ರಹಗಳಿಗೆ ಬೆಳಕು ನೀಡುತ್ತಾ ನಿಶ್ಚಿಂತೆಯಿಂದಿರುವ ನಕ್ಷತ್ರಗಳು..! ಚಂದ ತುಂಬಿದ ಚಂದ್ರಮ, ಚಿಕ್ಕೆ ತುಂಬಿದ ಗಗನ, ಕನಸು ತುಂಬಿದ ನಿದ್ರೆ ...ಎಂದೇನೇನೋ ಸುಳ್ಳೇ ಭರವಸೆಗಳನಿತ್ತು ಸಂಜೆಯಾಗುತ್ತಿದ್ದಂತೆಯೇ ಮತ್ಯಾವುದೋ ದೇಶದವರಿಗೆ ಬೆಳಗು ಮಾಡಲು, ಅಲ್ಲಿಯ ಹಕ್ಕಿಗಳನ್ನು ಗೂಡಿನಿಂದ ಪುರ್ರನೆ ಹಾರಿಸಲು ಓಡಿ ಹೋದ ಸೂರ್ಯ... ಬೇಗ ಬಾ ಭೂಪಾ, ಈ ಅಂಧಃಕಾರವ ಕಳೆ...

ಹತ್ತಿರದಲ್ಲೊಂದು ಹಣತೆ... ಈ ನಿಶೆಯ ಮೌನದಲ್ಲಿ ಏನೋ ಗೊಣಗುತ್ತಿದೆಯಲ್ಲ.. ಏನದು..? ನಾನು ಕಿವಿಗೊಟ್ಟು ಕೇಳುತ್ತೇನೆ: ಸೂರ್ಯನಿಗಾಗಿ ಕಾಯಬೇಡ. ಅವನ ಬೆಳಕನ್ನೇ ಪ್ರತಿಫಲಿಸುತ್ತಾ, ನಾಲ್ಕು ದಿನ ನಿನ್ನ ಮನಸೂರೆಗೊಳ್ಳುವಂತೆ ಕಂಗೊಳಿಸುತ್ತಾ, ಕೊನೆಗೆ ಅಮಾವಾಸ್ಯೆಯ ನೆಪವೊಡ್ಡಿ ಮಾಯವಾಗಿಬಿಡುವ ಚಂದ್ರನನ್ನು ನಂಬಬೇಡ. ಮಿನುಗು ತಾರೆಗಳ ಕಣ್ಮಿಣುಕನ್ನು ದೃಷ್ಟಿಸುತ್ತಾ ಏನನ್ನೋ ಹುಡುಕುತ್ತಾ ಹಂಬಲಿಸಬೇಡ. ಬಾ, ನನ್ನೊಡಲಿಗೆ ಒಂದೇ ಒಂದು ಮಿಳ್ಳೆ ಎಣ್ಣೆಯೆರೆ.. ಬತ್ತಿಯ ತುದಿಗೆ ಬೆಂಕಿ ಸೋಕಿಸು ಸಾಕು.. ನಿನ್ನ ಸುತ್ತ ಕವಿದಿರುವ ಈ ತಮಕ್ಕೆ ನಾನು ಬುದ್ಧಿ ಹೇಳುತ್ತೇನೆ.. ರಾತ್ರಿಯಿಡೀ ನಿನ್ನ ಮನೆಯನ್ನು ಬೆಳಗುತ್ತೇನೆ.. ದಾರಿ ತೋರುತ್ತೇನೆ.. ನಾಳೆಯೆಂಬ ಹೊಸ ಜಗತ್ತಿಗೆ ಕರೆದೊಯ್ಯುತ್ತೇನೆ...

ದೀಪದ ಸ್ಪೂರ್ತಿಭರಿತ ಮಾತುಗಳು ನನ್ನಲ್ಲೊಂದು ಅಂತಃಶಕ್ತಿಯನ್ನು ತುಂಬುತ್ತವೆ... ನಾನು ಎದ್ದುಹೋಗಿ ಎಣ್ಣೆ ತಂದೆರೆದು, ಬತ್ತಿಯ ಕುಡಿಗೆ ಬೆಂಕಿ ತಾಕಿಸುತ್ತೇನೆ.. ಮಂದ್ರದ ಸ್ವರದಂತೆ ಕೋಣೆಯನ್ನೆಲ್ಲಾ ತುಂಬಿಕೊಳ್ಳುತ್ತದೆ ಬೆಳಕು... ನನ್ನ ಕಣ್ಗಳಲ್ಲಿ ಉಲ್ಲಾಸದ ಲಾಸ್ಯ ಮಿನುಗಿದ್ದು ದೀಪದ ಎಣ್ಣೆಯಲ್ಲಿ ಪ್ರತಿಫಲಿಸುತ್ತದೆ... ಧನ್ಯತಾ ಭಾವದಿಂದ ದೀಪದೆಡೆಗೊಂದು ಮುಗುಳ್ನಗೆಯನ್ನು ಚೆಲ್ಲುತ್ತೇನೆ.

ಥಟ್ಟನೆ ಹಣತೆಯ ಬುಡ ಕಣ್ಣಿಗೆ ಬಿದ್ದರೆ ಅಲ್ಲಿ ಕತ್ತಲೆ! "ಏನಿದು ದೀಪಾ, ನಿನ್ನ ಬುಡದಲ್ಲೇ ಕತ್ತಲೆ?!" ನಾನು ಆತಂಕಗೊಂಡು ಕೇಳುತ್ತೇನೆ. ದೀಪದ್ದು ನಿರುಮ್ಮಳ ಉತ್ತರ: "ಹ್ಮ್..! ಅದರ ಬಗ್ಗೆ ನನಗೆ ಕಾಳಜಿಯಿಲ್ಲ. ನನ್ನ ತಳದ ತಮದ ಬಗ್ಗೆ ಚಿಂತಿಸುತ್ತಾ ಕೂರುವುದು ನನ್ನ ಕೆಲಸವಲ್ಲ. ಒಡಲಿನ ಎಣ್ಣೆ ಬತ್ತುವವರೆಗೆ, ಬತ್ತಿ ಸುಟ್ಟು ಭಸ್ಮವಾಗುವವರೆಗೆ ಪರರ ಮನೆಯನ್ನು ಬೆಳಗುವುದಷ್ಟೇ ನನ್ನ ಕರ್ತವ್ಯ... ನನ್ನ ಬೆಳಕಿನ ದೆಸೆಯಿಂದ ಯಾರೋ ನಲಿದಾಡುವುದನ್ನು ನೋಡುವುದೇ ನನ್ನ ಜ್ವಾಲೆಯ ಬಳುಕಿಗೆ ಹಿತದ ಆಮ್ಲಜನಕದ ಸೇಚನ... ಅಷ್ಟು ಸಾಕು ನನಗೆ... ನನ್ನ ಬಗ್ಗೆ ನಿನಗೆ ಚಿಂತೆ ಬೇಡ. ಹೋಗು, ನಿನ್ನ ಕೆಲಸ ಮಾಡಿಕೋ."

ಅಲ್ಲಿಂದ ಕದಲದೇ ನನ್ನನ್ನೇ ನಾನು ನೋಡಿಕೊಳ್ಳುತ್ತೇನೆ: ಸದಾ ನನಗೆ ಯಾರಾದರೂ ಬೆಳಕು ನೀಡುತ್ತಿರಬೇಕು. ಹಗಲಿಡೀ ಬೆಳಕಾಗಿದ್ದರೂ ಸಂಜೆ ಹೊರಟು ನಿಂತಾಗ ಸೂರ್ಯನೆಡೆಗೆ ಕೋಪ.. ಆಗಾಗ ಮರೆಯಾಗುತ್ತಾನೆಂದು ಚಂದ್ರನ ಮೇಲೆ ಆರೋಪ.. ಬೆಳಕನ್ನೇ ಕೊಡುವುದಿಲ್ಲವೆಂದು ನಕ್ಷತ್ರಗಳ ಬಗ್ಗೆ ಅಸಮಾಧಾನ.. ಎಲ್ಲಾ ಮುಗಿದಮೇಲೆ ಹಣತೆಯೆದುರು ನನ್ನ ದುಮ್ಮಾನ.. ಹೌದೂ, ನಾನ್ಯಾರಿಗೆ ಬೆಳಕಾಗಿದ್ದೇನೆ?

ಎಷ್ಟೊತ್ತಿಗೂ ನನ್ನ ಬಗ್ಗೆಯೇ ಚಿಂತೆ ನನಗೆ. ಎಲ್ಲಿ ಯಾರು ಅಳುತ್ತಿದ್ದರೂ ನನ್ನ ಮನೆಯಲ್ಲಿ ನಗುವಿರಬೇಕು. ಎಲ್ಲಿ ಯಾರು ಹಸಿವಿನಿಂದ ಸಾಯುತ್ತಿದ್ದರೂ ನನ್ನ ಬಾಳೆಯಲ್ಲಿ ಮೃಷ್ಟಾನ್ನವಿರಬೇಕು. ಎಲ್ಲಿ ಚಂಡಮಾರುತ ಬೀಸಿ ಎಲ್ಲಾ ನಿರಾಶ್ರಿತರಾಗಿದ್ದರೂ ನನ್ನ ಮನೆಯ ಫ್ಯಾನು ತಿರುಗುತ್ತಿರಬೇಕು. ಎಲ್ಲಿ ಯಾರು ಸತ್ತು ಉಳಿದವರ ಬದುಕು ಅಂಧಃಕಾರದಲ್ಲಿ ನರಳುತ್ತಿದ್ದರೂ ನನ್ನ ಸುತ್ತ ಬೆಳಕಿರಬೇಕು... ನಾನು ನನ್ನ ಸ್ವಾರ್ಥ ಬಿಟ್ಟು ಈ ದೀಪದಂತೆ ಬೇರೆ ಯಾರಿಗಾಗಿಯೋ ಬೆಳಗುವುದು ಯಾವಾಗ? ಜೋಪಡಿಯ ಮಕ್ಕಳೆಯಲ್ಲ ಕತ್ತಲ ಬಾಗಿಲಲ್ಲಿ ನಿಂತು ಮಿಕಮಿಕನೆ ನೋಡುತ್ತಿರುವಾಗ ನಾನು ಸುರುಸುರುಬತ್ತಿಯಿಂದ ಬಿರುಸಿನಕುಡಿಕೆಗೆ ಬೆಂಕಿ ತಾಗಿಸಿ ಗೆಳೆಯರೊಟ್ಟಿಗೆ ಕೇಕೆ ಹಾಕುವುದು ಎಷ್ಟರ ಮಟ್ಟಿಗೆ ಸರಿ?

ದೀಪಾವಳಿಯ ಎದುರಿನಲ್ಲಿ ಒಂದು ಹೊಸ ಸಂಕಲ್ಪ ಮಾಡಬೇಕಿದೆ. ಆರಿಹೋದ ಮನೆಗಳ ದೀಪಗಳನ್ನು ಬೆಳಗಬೇಕಿದೆ. ಕತ್ತಲೆ ತುಂಬಿದ್ದಲ್ಲಿ ಹಣತೆ ಒಯ್ದು ಹಚ್ಚಿಡಬೇಕಿದೆ. ಯಾರದೋ ಬಾಳಿನ ಕತ್ತಲೆಗೆ ನಾನೇ ದೀಪವಾಗುವ ಪ್ರಯತ್ನ ಮಾಡಬೇಕಿದೆ. ಕನಿಷ್ಟ, ಆ ಜೋಪಡಿಯ ಮಗುವಿನ ಕೈಗೊಂದು ಸುರುಸುರುಬತ್ತಿ ಕೊಟ್ಟು ಅದರ ಕಂಗಳಲ್ಲಾಗುವ ಭೀತ-ಸಂಭ್ರಮದ ನಕ್ಷತ್ರಪಾತವನ್ನು ಕತ್ತಲಲ್ಲಿ ನಿಂತು ನೋಡುತ್ತಾ ನಾನು ಕಳೆದುಹೋಗಬೇಕಿದೆ...

ನಿಮಗೆಲ್ಲಾ ದೀಪಾವಳಿಯ ಹಾರ್ದಿಕ ಶುಭಾಷಯಗಳು...

Wednesday, October 18, 2006

ದೀಪಾವಳಿಗೆ ಒಂದಷ್ಟು ಪ್ರಣತಿಗಳು

ಗೋಪೂಜೆ ಮಾಡಬೇಕಿದೆ..

ಇದು ಈ ವರ್ಷ ತಂದ ಹೊಸ ದನ..
ಕಳೆದ ವರ್ಷ ಇತ್ತಲ್ಲ, ಆ ದನ
ಕೆಚ್ಚಲುಬಾವು ಬಂದು ಮಧ್ಯದಲ್ಲೇ ಹಾಲು
ಕೊಡುವುದನ್ನು ನಿಲ್ಲಿಸಿಬಿಟ್ಟಿತು.
ನಮಗ್ಯಾಕಿದ್ದೀತು ರಗಳೆ ಎಂದು ಆಲೋಚಿಸಿ
ಒಳ್ಳೆಯ ರೇಟು ನೋಡಿ ಮಾರಿಬಿಟ್ಟೆವು.

ಈಗ ಆ ದನ ಎಲ್ಲಿದೆಯೋ ಗೊತ್ತಿಲ್ಲ
ಅದಕ್ಕೆ ಸರಿಯಾಗಿ ಅಕ್ಕಚ್ಚು, ಹಿಂಡಿ
ಕೊಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ
ಮೇಯಲು ಹೊರಗೆ ಬಿಡುತ್ತಾರೊ
ಅಥವಾ ಅವರೇ ಹುಲ್ಲು ಕೊಯ್ದು
ತಂದು ಹಾಕುತ್ತಾರೋ ಗೊತ್ತಿಲ್ಲ
ಅಪ್ಪನನ್ನು ಕೇಳಿದರೆ
'ಕೊಟ್ಟ ದನ ಕೊಟ್ಟಿಗೆಗೆ ಹೊರಗೆ,
ಸುಮ್ಮನಿರು' ಅನ್ನುತ್ತಾನೆ.

ಗೋಪೂಜೆ ಮಾಡಬೇಕಿದೆ..
ಕಳೆದ ವರ್ಷದ ದೀಪಾವಳಿಯಲ್ಲಿ
ಕೆಂಪು-ಹಸಿರು ಬಣ್ಣಗಳನ್ನು ಕೊಂಬು,
ಮೈಗೆಲ್ಲ ಸವರುವಾಗ ಆ ದನ
ಸ್ವಲ್ಪವೂ ತಿರುಗಾಡದೆ, ಹಾಯದೆ, ಒದೆಯದೆ
ನಿಂತಿರುತ್ತಿತ್ತು. ಅದರ ಕರು ಮಾತ್ರ ಚಿಗರೆಮರಿ.
ನನ್ನ ಹುಡುಗಿಗಿಂಥಾ ಜೋರು ಹಾರಾಟ-ಕುಣಿದಾಟ
-ಗುದ್ದುಮುರಿಯಾಟಗಳಲ್ಲಿ.

ಗೋಪೂಜೆ ಮಾಡಬೇಕಿದೆ..
ನನಗೋ ಹಳೆಯ ಗೋವಿನದೇ ನೆನಪು
ಈ ವರ್ಷ ಅದನ್ನು ಹಿಡಿದು ಕಟ್ಟಿ,
ಎಣ್ಣೆ ಹಚ್ಚಿ, ಸ್ನಾನ ಮಾಡಿಸಿ, ಬಣ್ಣ ಹಚ್ಚಿ,
ಹೊಸ ಕಣ್ಣಿ ಕಟ್ಟಿ, ಪೂಜೆ ಮಾಡಿ,
ಗೋಗ್ರಾಸ ಕೊಟ್ಟು, ಕೊನೆಗೆ ಮರುದಿನ
ದೃಷ್ಟಿ ತೆಗೆದು... ಅದನ್ನೆಲ್ಲಾ ಮಾಡುವವರು ಯಾರು?

ಗೋಪೂಜೆ ಮಾಡಬೇಕಿದೆ..
ಅಪ್ಪನ ಬಳಿ ಹೇಳುತ್ತೇನೆ:
'ಅಪ್ಪಾ, ನಂಗ್ಯಾಕೋ ಆಗುತ್ತಿಲ್ಲ,
ನೀನೇ ಮಾಡು..'

***




ನನಗೆ ಹಾಗೇ, ಒಂಥರಾ ತಿಕ್ಕಲು.
ದೀಪ ಹಚ್ಚುವಾಗ
ಹಣತೆ ಮಾಡಿದ ಕೈಗಳು
ಬತ್ತಿ ಹೊಸೆಯುವಾಗ
ಹತ್ತಿಯನ್ನು ಬೀಜದಿಂದ ಬಿಡಿಸಿದ ಕೈಗಳು
ಹಣತೆಗೆ ಎಣ್ಣೆ ಎರೆಯುವಾಗ
ಆ ಎಣ್ಣೆಯನ್ನು ತಯಾರಿಸಿದ ಕೈಗಳು
ಹೋಳಿಗೆಗೆ ಉಂಡೆ ಕಟ್ಟಿಕೊಡುವಾಗ
ಬೇಳೆ ಬೆಳೆದವನ ಕೈಗಳು
ಹೊಸ ಕಣ್ಣಿಯನ್ನು ಕಟ್ಟುವಾಗ
ಅದನ್ನು ಹೊಸೆದ ಕೈಗಳು
ಪಟಾಕಿ ಹಚ್ಚುವಾಗ
ಅದರೊಳಗೆ ಮದ್ದು ತುಂಬಿದ ಕೈಗಳು
.....ಬಿಡದೇ ಕಾಡುತ್ತವೆ.
ಮಂದಿಯ ಪ್ರಕಾರ ನಾನು
ನಾಟ್ ಪ್ರಾಕ್ಟಿಕಲ್ಲು.
ನನಗೆ ಹಾಗೇ, ಒಂಥರಾ ತಿಕ್ಕಲು!

***

ಆದರೆ ಕತ್ತಲೆಯಲ್ಲಿ ದೀಪ ಹಚ್ಚುವುದು ಕಷ್ಟ ನೋಡಿ
ಹಣತೆ ಎಲ್ಲಿದೆ ಹುಡುಕಬೇಕು
ಬೆಂಕಿಪೊಟ್ಟಣವಂತೂ ಇಟ್ಟಲ್ಲಿ ಇರುವುದಿಲ್ಲ
ಹಣತೆಯಲ್ಲಿ ನಿನ್ನೆ ಸುರಿದಿಟ್ಟಿದ್ದ ಎಣ್ಣೆ ಆರಿಹೋಗಿದೆ
ಬತ್ತಿ ಕಟ್ಟು ಎಲ್ಲಿದೆ...?
ಓಹ್! ದೇವರ ಗೂಡಿನ ಮೇಲಿದೆ
ಎಲ್ಲವನ್ನೂ ಹುಡುಕಿ ತಂದು,
ಹಣತೆಗೆ ಎಣ್ಣೆ ಸುರಿದು,
ಬತ್ತಿಯನ್ನು ಎಣ್ಣೆಯಲ್ಲಿ ಅದ್ದಿ,
ಕಡ್ಡಿ ಗೀರಿ "ಚೊರ್ರ್"... ಬೆಳಕು.
ಹಾಗೆಲ್ಲಾ ಒಂದೇ ಕಡ್ಡಿಯಲ್ಲಿ ಹಚ್ಚಲಾಗುವುದಿಲ್ಲ
(ಇದೇನು ಸಿಗರೇಟಾ?)
ಮತ್ತೊಂದು ಕಡ್ಡಿ ಗೀರಬೇಕು.

ಕತ್ತಲೆಯಲ್ಲಿ ದೀಪ ಹಚ್ಚುವುದು ಕಷ್ಟ.
ಗಾಳಿಯಿದ್ದರಂತೂ ಮತ್ತೂ ಕಷ್ಟ.

***

ನಾನು ಚಿಕ್ಕವನಿದ್ದಾಗ
ಪಟಾಕಿ ಹಚ್ಚುವುದಕ್ಕೆ ಹೆದರುತ್ತಿದ್ದೆ.
ಈಗ ಏನಕ್ಕೂ ಹೆದರುವುದಿಲ್ಲ.

***

ದೀಪಾವಳಿಯೆಂದರೆ ದೀಪಗಳ ಹಬ್ಬ
ಅನ್ನುತ್ತಾರೆ.

ನಾನೀಗ ಕಷ್ಟ ಪಟ್ಟು
ಎರಡು ದೀಪಗಳನ್ನು ಹಚ್ಚಿಟ್ಟಿದ್ದೇನೆ.
ಅವು ಪರಸ್ಪರ ಮಾತಾಡಿಕೊಳ್ಳುತ್ತಿವೆ:
"ಹೇ, ನೀನು ಈಗ ಕಾಣಿಸುತ್ತಿದ್ದೀಯ"
"ಹೇ, ನೀನಿವತ್ತು ಚಂದ ಕಾಣಿಸುತ್ತಿದ್ದೀಯ".
"ಹೂಂ, ಇವತ್ತು ಹಬ್ಬ ಅಲ್ವಾ?"
"ಏನ್ ಹಬ್ಬ?"
"ದೀಪಾವಳಿ, ನಮ್ಮ ಹಬ್ಬ"

ಹಣತೆ ಹಣತೆಯನ್ನು ನೋಡುವುದಕ್ಕೂ
ಬೆಳಕು ಬೇಕು ನೋಡಿ.

***

ದೀಪದ ಬೆಳಕಿನಲ್ಲಿ ಕಂಡಷ್ಟು ಚಂದ
ಬೆಂಕಿಯ ಬೆಳಕಿನಲ್ಲಿ ಕಾಣುವುದಿಲ್ಲ
ನಲ್ಲೆಯ ಮುಖಾರವಿಂದ.

*** *** *** ***

ಎಲ್ಲೋ ಇರುವ ಆ ದನಕ್ಕೆ ಈ ವರ್ಷವೂ ಗೋಗ್ರಾಸ ಸಿಗಲಿ. ಎಲ್ಲೋ ಇದ್ದೂ ಇಲ್ಲಿ ನೆನಪಾಗುವ ಎಲ್ಲಾ ಕಷ್ಟಜೀವಿಗಳ ಅಗೋಚರ ಕೈಗಳು ಬೆಚ್ಚಗಿರಲಿ. ಕತ್ತಲೆಯಲ್ಲಿರುವವರಿಗೆ ದೀಪ ಬೇಗ ಸಿಗಲಿ. ಒಂದೇ ಬೆಂಕಿಕಡ್ಡಿಯಿಂದ ದೀಪ ಹತ್ತಿಕೊಳ್ಳಲಿ. ಪಟಾಕಿಯ ಸದ್ದಿಗೆ ಮಲಗಿದ ಮಗು ಎಚ್ಚರಗೊಳ್ಳದಿರಲಿ. ಹಣತೆಗಳು ಸದಾ ಮಾತಾಡಿಕೊಳ್ಳುತ್ತಿರಲಿ. ನಲ್ಲೆಯ ಮುಖದಲ್ಲಿ ದೀಪದ ಬೆಳಕು ಸದಾ ಲಾಸ್ಯವಾಡುತ್ತಿರಲಿ. ಮತ್ತು ದೀಪ ಎಂದೂ ಬೆಂಕಿಯಾಗದಿರಲಿ.

ಎಲ್ಲರಿಗೂ ದೀಪಾವಳಿಯ ಶುಭಾಷಯಗಳು.