Saturday, March 26, 2011

ಪ್ರತೀಕ್ಷೆ

ಕಾಯುವುದು ಎಂದರೆ ಹೀಗೇ ಮತ್ತೆ
ದರೋಜಿ ಕರಡಿಧಾಮದಲ್ಲಿ
ಒಣತರುಗಳ ನಡುವಿನ ಕಾದಬಂಡೆಗಳಿಗೆ
ಕಾಕಂಬಿ ಸವರಿ ಬಂದು
ಕೆಮೆರಾದ ಮೂತಿಗೆ ಜೂಮ್‌ಲೆನ್ಸ್ ಇಟ್ಟು
ಕಣ್ಣು ನೆಟ್ಟು ಕೂರುವುದು

ಸದ್ದು ಮಾಡಬೇಡಿ ಅಂತ ಎಚ್ಚರಿಸುತ್ತಾನೆ ಕಾವಲುಗಾರ..
ನವಿಲುಗಳು ದಾಹದಿಂದ ಕೇಕೆ ಹಾಕುವಾಗ
ನರ್ತನದ ಭಂಗಿಗಳ ಉನ್ಮತ್ತ ಮೆಲುಕು
ರೆಂಬಿಯಿಂದಿಳಿದೋಡೋಡಿ ಬರುತ್ತಿರುವ ಅಳಿಲೇ,
ನಿನ್ನ ಚುರುಕು ಕಣ್ಗಳಿಗೆ ಏನಾಹಾರ ಕಂಡಿತು?

ಅಕೋ, ಆ ಅಲ್ಲಿ ಒಂದಷ್ಟು ದೊಡ್ಡಕಲ್ಲುಗಳಿವೆಯಲ್ಲ,
ಅದರ ಹಿಂದೆಯೇ ಇದೆ ಮರಿಗಳಿಗೆ ಹಾಲೂಡಿಸುತ್ತಿರುವ
ಅಮ್ಮ ಕರಡಿ. ಸ್ವಲ್ಪ ತಡಿ, ಕಂದಮ್ಮನಿಗೆ ಕಣ್ಣು ಹತ್ತಲಿ.
ಆಮೇಲೆ ನೋಡಿ ಮಜ - ಮಜಲು

ಹೌದಲ್ಲಾ, ಉಬ್ಬೆಯಲ್ಲಿಟ್ಟು ಬಂದಿದ್ದ ಆ
ಕಾಯಿಗಳು ಹಣ್ಣಾದವೇ?
ಒಲೆಯ ಮೇಲಿಟ್ಟ ಹಾಲು
ಇತ್ತ ಬಂದಾಕ್ಷಣ ಉಕ್ಕಿತೇ?
ಬರುತ್ತೇನೆ ಎಂದು ಕೈಕೊಟ್ಟ ನಿನಗೇನು ಗೊತ್ತು
ಎರಡು ಮೆಟ್ಟಿಲು ಹತ್ತಿದರೂ ಸುಸ್ತಾಗುತ್ತ,
ಬಿಸಿಲ ಬೀದಿಯಲ್ಲಿ ಕಣ್ಕತ್ತಲಾಗಿ ಕೂರುತ್ತ,
ಹೊರುವ ಕಷ್ಟ ಒಂಭತ್ತು ತಿಂಗಳು ಹಾಳುಹೊಟ್ಟೆ?

ಕಾಯುವುದು ಎಂದಾಗಲೆಲ್ಲ ಅದ್ಯಾಕೋ
ಶಬರಿಯ ನೆನಪು..
ಇದ್ಯಾವ ಹಾಳು ಭಲ್ಲೂಕ-
ಹೊರಬರಲು ಎಷ್ಟು ಹೊತ್ತು?

ಬಂಡೆಗೆ ಸವರಿದ ಕಾಕಂಬಿ ಒಣಗುತ್ತಿದೆ..
ಸಹನೆಯ ಗುಳ್ಳೆಗಳನ್ನು ಒಡೆಯುತ್ತಿರುವ
ಟಿಕ್ ಟಿಕ್ ಕ್ಷಣಗಳೇ, ಶ್..!
ಸದ್ದು ಮಾಡಬೇಡಿ.. ಇನ್ನೆರಡು ಗಳಿಗೆ ಕಾಯಿರಿ.
ತೆರೆ ಸರಿದರಾಯಿತು, ಮೂಡಿಬರುವುದು ಕರಿಕರಡಿ
ನಾಲಿಗೆ ಚಾಚಿ ಮೆಲ್ಲುವುದು ಕಲ್ಲ ಮೇಲಿನ ಸಿಹಿ

ತಯಾರಿರಿ, ಶಟರ್ ಗುಂಡಿಯ ಮೇಲೆ ಬೆರಳಿಟ್ಟು
ಕೊಡಲು ಭಂಗುರ ಚಿತ್ರಕೊಂದು ಶಾಶ್ವತ ಚೌಕಟ್ಟು

Wednesday, March 16, 2011

ಉದ್ಯೋಗ ಖಾತ್ರಿ ಎಂಬ ಯೋಜನೆಯೂ, ನೆಲಮಾವಿನ ಸೊಪ್ಪಿನ ಗೊಜ್ಜೂ..

ನಮ್ಮ ಸರ್ಕಾರಗಳು ಮಾಡುವ ಯೋಜನೆಗಳಿಂದ ಎಷ್ಟು ಲಾಭಗಳಿವೆಯೋ ಅಷ್ಟೇ ಅನನುಕೂಲಗಳೂ ಇವೆ ಎಂಬುದಕ್ಕೆ ಇದು ಒಂದು ಉದಾಹರಣೆ. ಈಗ ಕೆಲ ವರ್ಷಗಳ ಹಿಂದೆ ಅನುಷ್ಠಾನಗೊಂಡ ನಮ್ಮ ಕೇಂದ್ರ ಸರ್ಕಾರದ ಯೋಜನೆ ‘ಉದ್ಯೋಗ ಖಾತ್ರಿ ಯೋಜನೆ.’ ಇದು ಬಂದನಂತರ ನಮ್ಮ ಮನೆಗಳಿಗೆ ಕೆಲಸಕ್ಕೆ ಆಳುಮಕ್ಕಳು ಬರುವುದೇ ನಿಂತುಹೋಗಿದೆ! ನಾವು ಕೊಡುವ ಸಂಬಳದ ಮೂರರಷ್ಟು ಸಂಬಳವನ್ನು ಸರ್ಕಾರವೇ ಕೊಡುತ್ತಿದೆ. ಅದೂ ಕೇವಲ ಮೂರು ತಾಸು ಮಾಡುವ ಕೆಲಸಕ್ಕೆ! ಇನ್ನು ಅವರು ಯಾಕಾದರೂ ನಮ್ಮ ಮನೆಗಳಿಗೆ ಕೆಲಸಕ್ಕೆ ಬಂದಾರು? ಇದರಿಂದ ಅವರಿಗೆ ಖಂಡಿತ ಅನುಕೂಲವಾಗಿದೆ. ಮೂರು ತಾಸು ಈ ಕೆಲಸ ಮಾಡಿ, ನಂತರ ಉಳಿಯುವ ದಿನದಲ್ಲಿ ಏನು ಬೇಕೋ ಆ ಕೆಲಸ ಮಾಡಿಕೊಳ್ಳಬಹುದು. ಸೊಪ್ಪು ಕಡಿದು ತಂದು ಗೊಬ್ಬರ ಮಾಡಿ ಮಾರುವುದೋ, ಇಟ್ಟಿಗೆ ಬಿಡುವುದೋ, ಅಗರಬತ್ತಿ ಹೊಸೆಯುವುದೋ ಅಥವಾ ಮತ್ಯಾರದೋ ಮನೆಗೆ ಕೆಲಸಕ್ಕೆ ಹೋಗುವುದೋ -ಹೀಗೆ. ತಮ್ಮ ತಮ್ಮ ಮನೆ ಕೆಲಸವನ್ನು ಮಾಡಿಕೊಳ್ಳಲಿಕ್ಕೂ ಅವರಿಗೆ ಈಗ ಸಾಕಷ್ಟು ಸಮಯ ಸಿಗುತ್ತಿದೆ.

ಆದರೆ ಇದರಿಂದಾಗಿ ಹೈರಾಣಾಗಿರುವವರು ಎಂದರೆ ಎಷ್ಟೋ ವರ್ಷಗಳಿಂದ ಅವರನ್ನೇ ನಂಬಿಕೊಂಡು ಆರಾಮಾಗಿದ್ದ ಜಮೀನ್ದಾರರುಗಳು. ತೋಟದ ಕೆಲಸಕ್ಕೆ, ಗದ್ದೆಯ ಕೆಲಸಕ್ಕೆ, ಹಿತ್ತಿಲಿನ ಬೇಲಿ ಕಟ್ಟುವುದಕ್ಕೆ, ಮಳೆಗಾಲಕ್ಕೆ ಕಟ್ಟಿಗೆ ಕಡಿದುಕೊಡುವುದಕ್ಕೆ, ಹುಲ್ಲು ಕೊಯ್ಯುವುದೇ ಮೊದಲಾದ ದೈನಂದಿನ ಕೆಲಸಗಳಿಗೆ -ಆಳುಗಳನ್ನೇ ಕಾಯುತ್ತಿದ್ದ ಮಂದಿಗೆ ಈಗ ಕೈ ಮುರಿದಂತಾಗಿದೆ. ಮತ್ತೆ ಈ ಉದ್ಯೋಗ ಖಾತ್ರಿ ಯೋಜನೆಯದು ಅದೇನು ವಿಚಿತ್ರ ನಿಯಮವೋ ಏನೋ (ಅಥವಾ ಅದು ನಮ್ಮಲ್ಲಿ ಊರ್ಜಿತವಾಗಿರುವ ಬಗೆ ಹೀಗಿರಬಹುದು), ಈ ಯೋಜನೆಯಡಿಯಲ್ಲಿ ಕೇವಲ ‘ಮಣ್ಣು’ ಅಥವಾ ‘ಭೂಮಿ’ಗೆ ಸಂಬಂಧಿಸಿದ ಕೆಲಸಗಳನ್ನು ಮಾತ್ರ ಮಾಡಬೇಕಂತೆ! ಅಂದರೆ, ಊರಿನ ರಸ್ತೆಗೆ ಮಣ್ಣು ಹಾಕಿ ಮಟ್ಟ ಮಾಡುವುದೋ, ನೀರು ಹರಿಯುವ ಕಾದಿಗೆ ಸರಿ ಮಾಡುವುದೋ, ಬಾವಿ ತೆಗೆಯುವುದೋ, ಶಾಲೆಯಂತಹ ಸಾರ್ವಜನಿಕ ಆವರಣದ ಬಯಲು ಹದಗೊಳಿಸುವುದೋ, ಕೆರೆಯ ಹೂಳೆತ್ತುವುದೋ, ಇತ್ಯಾದಿ. ಹೀಗಾಗಿ ನಮ್ಮೂರಿನ ಉದ್ಯೋಗ ಖಾತ್ರಿಯ ಅನುಭೋಗಿ ಕೆಲಸಗಾರರೂ ಉಪಯೋಗವಿದೆಯೋ ಇಲ್ಲವೋ, ಇಂಥದೇ ಕೆಲಸಗಳನ್ನು ಮಾಡುತ್ತಾ ಸಂಬಳ ಪಡೆದುಕೊಂಡು ಹಾಯಾಗಿದ್ದಾರೆ. ನಮ್ಮೂರ ಪ್ರಾಥಮಿಕ ಶಾಲೆಯ ಆವರಣವಂತೂ ಈಗ ಗುರುತೂ ಸಿಗದಂತೆ ಆಗಿಹೋಗಿದೆ. ಎದುರಿನ ಜಾರು ನೆಲವನ್ನೆಲ್ಲಾ ಮಣ್ಣು ಹಾಕಿ ಮಟ್ಟಸ ಮಾಡಿ, ಆವರಣದಲ್ಲೊಂದು ಬಾವಿ ತೆಗೆದು, ಇಡೀ ಶಾಲೆಯ ಆವರಣಕ್ಕೆ ಪಾಗಾರ ಹಾಕಿ, ಶಾಲೆಯ ಹಿಂಬಾಗದಲ್ಲೂ ಆಟದ ಬಯಲಿನಂತಹುದೇನನ್ನೋ ಮಾಡಿ, ವೇದಿಕೆಯೊಂದನ್ನು ನಿರ್ಮಿಸಿ... ಈಗ ಹೋಗಿ ನೋಡಿದರೆ ನಾವು ಹೋಗುತ್ತಿದ್ದ ಶಾಲೆ ಇದೇನಾ ಎಂಬಂತೆ ಬದಲಾಗಿಹೋಗಿದೆ! ಆದರೆ ಮಜಾ ಎಂದರೆ, ಇಡೀ ಶಾಲೆಯಲ್ಲಿ ಈಗ ಇರುವ ವಿದ್ಯಾರ್ಥಿಗಳ ಸಂಖ್ಯೆ ಹತ್ತಕ್ಕಿಂತ ಕಮ್ಮಿ ಇರುವುದು! ಇಂಗ್ಲೀಷ್ ಮೀಡಿಯಮ್ಮಿನ ಮೋಹಕ್ಕೆ ಬಿದ್ದಿರುವ ಊರ ಜನಗಳು ದೂರದೂರಿನ ಕಾನ್ವೆಂಟ್ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಾರಿನಲ್ಲಿ ಕಳುಹಿಸತೊಡಗಿರುವುದರಿಂದ, ನಮ್ಮೂರ ಕನ್ನಡ ಪ್ರಾಥಮಿಕ ಶಾಲೆ ಕೆಲ ವರ್ಷಗಳಲ್ಲಿ ಮುಚ್ಚಿಹೋಗಿಬಿಡುತ್ತದೋ ಅಂತ ನನ್ನ ಅನುಮಾನ. ಆದರೇನು ಮಾಡುವುದು? ಇದನ್ನು ತಡೆಯಲಿಕ್ಕಾಗಲೀ ಪ್ರಶ್ನಿಸಲಿಕ್ಕಾಗಲೀ ಬದಲಿಸಲಿಕ್ಕಾಗಲೀ ಯಾರಿಂದಲೂ ಸಾಧ್ಯವಿಲ್ಲದಾಗಿದೆ.

ಅಮ್ಮ ಹೇಳಿದಳು, ಸಧ್ಯಕ್ಕೆ ನಮ್ಮೂರಿನಲ್ಲಿ ಈ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕೆಲಸವೆಂದರೆ, ಲಚ್ಚಮ್ಮನ ಕೆರೆಯ ಶುದ್ಧೀಕರಣ. ಈ ಲಚ್ಚಮ್ಮನ ಕೆರೆ ಎಂಬುದು ನಮ್ಮೂರಿನ ಹಳೇ ರಸ್ತೆಯ ಆರಂಭದಲ್ಲಿ, ರಸ್ತೆಯಿಂದ ಅನತಿ ದೂರದಲ್ಲಿರುವ ಒಂದು ಪಾಳುಕೆರೆ. ಹಿಂದೊಂದು ಕಾಲದಲ್ಲಿ ಈ ಕೆರೆ, ಅದರ ಪಕ್ಕದಲ್ಲಿರುವ ಗದ್ದೆಗಳಿಗೆ ನೀರೊದಗಿಸುತ್ತಿತ್ತಂತೆ. ಆದರೆ ಈಗ ಅಲ್ಲಿ ಗದ್ದೆ ಮಾಡುವವರೇ ಇಲ್ಲ. ಎಕರೆಗಟ್ಟಲೆ ಜಾಗ ಸುಮ್ಮನೆ ಖಾಲಿ ಮಲಗಿಕೊಂಡಿದೆ. ಕೆರೆಯಲ್ಲಿ ಹೂಳು ತುಂಬಿಕೊಂಡು ಅಲ್ಲೊಂದು ಕೆರೆಯಿತ್ತು ಎಂಬುದನ್ನೇ ಗುರುತಿಸಲಾಗದಂತಾಗಿದೆ. ಒಂದಷ್ಟು ಕಾಲ ಇಲ್ಲಿಯ ಜೌಗು ಮಣ್ಣನ್ನು ಬಳಸಿಕೊಂಡು ಇಲ್ಲಿ ಇಟ್ಟಿಗೆ ತಯಾರಿಸುತ್ತಿದ್ದರು. ನಾವು ಶಾಲೆಗೆ ಹೋಗುವಾಗ ಈ ಇಟ್ಟಿಗೆ ಸುಡುವ ಗೂಡುಗಳಿಂದ ಸದಾ ಹೊಗೆ ಹೊಮ್ಮುತ್ತಿರುವುದನ್ನು ನೋಡುತ್ತಾ ಹೋಗುತ್ತಿದ್ದೆವು. ಹಾಗೆ ಸುಡಲಿಕ್ಕೆಂದು ಜೋಡಿಸಿದ ಇಟ್ಟಿಗೆಯ ಗೂಡುಗಳ ನಿರ್ಮಾಣ, ವರ್ಷಗಳವರೆಗೆ ಹಾಗೇ ಇರುತ್ತಿತ್ತು. ಕೆಂಪುಕೋಟೆಯ ಮೇಲೆ ಹಸಿರು ಹಸಿರಾಗಿ ಪಾಚಿ ಕಟ್ಟಿ ಆಕರ್ಷಕವಾಗಿ ಕಾಣುತ್ತಿತ್ತು.

ಈ ಲಚ್ಚಮ್ಮನ ಕೆರೆಯ ಪಕ್ಕದಲ್ಲಿರುವ ಜೌಗುನೆಲದಲ್ಲಿ ನೆಲಮಾವಿನ ಸೊಪ್ಪು ಬೆಳೆಯುತ್ತಿತ್ತು. ನಾನು ಮತ್ತು ಅಜ್ಜಿ ಈ ನೆಲಮಾವಿನ ಸೊಪ್ಪನ್ನು ಕೊಯ್ಯಲು ಹೋಗುತ್ತಿದ್ದೆವು. ಸಂಜೆಯಾಗಿ ಬಿಸಿಲು ಆರಿದಮೇಲೆ ಅಜ್ಜಿಯ ಜೊತೆ ನಾನು ಈ ಗದ್ದೆಯ ಕಡೆ ಹೋಗುತ್ತಿದ್ದುದು. ದಾರಿಯಲ್ಲಿ ಸಿಕ್ಕ ಸರೋಜಕ್ಕ-ಸುಜಾತಕ್ಕರು ‘ಓಹೋ, ಎಲ್ಲಿಗ್ ಹೊಂಡ್ಚು ಅಜ್ಜಿ-ಮೊಮ್ಮಗನ ಸವಾರಿ?’ ಅಂತ ಕೇಳಿದರೆ, ‘ಹಿಂಗೇ ವಾಕಿಂಗ್ ಹೊಂಟ್ವೇ’ ಎನ್ನುತ್ತಿದ್ದಳು ಅಜ್ಜಿ. ನಾವು ನೆಲಮಾವಿನ ಸೊಪ್ಪು ಕೊಯ್ಯಲು ಹೋಗುತ್ತಿದ್ದೇವೆಂದರೆ ಇವರು ತಮಗೂ ಸ್ವಲ್ಪ ತರಲು ಹೇಳುವುದಿಲ್ಲವೇ! ಹಾಗಾಗಿ ನಾವು ಸುಳ್ಳು ಹೇಳುವುದು ಅನಿವಾರ್ಯವಿತ್ತು. ಗದ್ದೆಬಯಲಿಗೆ ತಲುಪುವಷ್ಟರಲ್ಲೇ ಅಜ್ಜಿಗೆ ಸುಸ್ತಾಗಿ ಏದುಸಿರು ಬಿಡುತ್ತಿದ್ದಳು. ಪ್ರತಿಸಲವೂ ನನಗೆ ಅಜ್ಜಿ ಅಲ್ಲಿ ಬೆಳೆದಿರುವ ನಾನಾ ಸೊಪ್ಪುಗಳ ನಡುವೆ ಬರೀ ನೆಲಮಾವಿನ ಸೊಪ್ಪನ್ನೇ ಹೇಗೆ ಗುರುತಿಸಿ ಕೀಳಬೇಕೆಂದು ಹೇಳಿಕೊಡುತ್ತಿದ್ದಳು. ಆಮೇಲೆ ನಾವು ಕತ್ತಲಾವರಿಸುವವರೆಗೂ ಬಗ್ಗಿ ಬಗ್ಗಿ ಸೊಪ್ಪು ಕೊಯ್ಯುತ್ತಿದ್ದೆವು. ಕೊಯ್ದ ಸೊಪ್ಪನ್ನು ಅಜ್ಜಿ ತನ್ನ ಸೆರಗಿನಲ್ಲಿ ಕಟ್ಟಿಕೊಳ್ಳುತ್ತಿದ್ದಳು. ನಾನು ನನ್ನ ಅಂಗಿ-ಚಡ್ಡಿಗಳ ಜೇಬುಗಳಲ್ಲೂ ತುಂಬಿಕೊಳ್ಳುತ್ತಿದ್ದೆ. ನಂತರ, ಬೀದಿದೀಪದ ಬೆಳಕಿನೊಂದಿಗೆ ಬೆರೆಯುತ್ತಿದ್ದ ತಿಂಗಳ ಬೆಳಕಿನಲ್ಲಿ, ಸಾಲುಮನೆಯೊಳಗಿರುವ ಜನಗಳಿಗೆ ಕಾಣದಂತೆ, ಸದ್ದು ಮಾಡದಂತೆ, ಸರಸರನೆ ನಡೆದು ನಾವು ಮನೆ ಸೇರಿಕೊಳ್ಳುತ್ತಿದ್ದೆವು.

ಮನೆಗೆ ಬಂದನಂತರ ಅಜ್ಜಿ ತನ್ನ ಸೆರಗಿನಲ್ಲಿ ಕಟ್ಟಿಕೊಂಡಿದ್ದ ಸೊಪ್ಪನ್ನೆಲ್ಲ ಒಳಮನೆಯಲ್ಲೊಂದೆಡೆ ಸುರುವುತ್ತಿದ್ದಳು. ಆಮೇಲೆ ಅಮ್ಮ ಮತ್ತು ಅಜ್ಜಿ ಸೇರಿ ಈ ಸೊಪ್ಪನ್ನೆಲ್ಲ ಸೋಸುವರು. ಅದೆಷ್ಟೇ ಮುತುವರ್ಜಿಯಿಂದ ಕೊಯ್ದಿದ್ದರೂ ನೆಲಮಾವಲ್ಲದ ಕೆಲ ಅನ್ಯ ಸೊಪ್ಪುಗಳೂ ಇದರಲ್ಲಿ ಸೇರಿಕೊಂಡಿರುತ್ತಿದ್ದವು. ಅಜ್ಜಿಯ ಪ್ರಕಾರ ಅವೆಲ್ಲ ನಾನು ಕೊಯ್ದದ್ದು! ನಾನು ಎಷ್ಟೇ ವಾದಿಸಿದರೂ ‘ನಿಂಗೆ ತಿಳಿತಲ್ಲೆ. ಆನು ಎಷ್ಟ್ ವರ್ಷದಿಂದ ಕೊಯ್ತಿದ್ದಿ, ಯಂಗೆ ಗೊತ್ತಾಗ್ತಲ್ಯಾ?’ ಎಂದು ನನ್ನ ಬಾಯಿ ಮುಚ್ಚಿಸುತ್ತಿದ್ದಳು. ನಾನು ಸಿಟ್ಟು ಮಾಡಿಕೊಂಡು ಅಲ್ಲಿಂದ ಎದ್ದುಹೋಗುತ್ತಿದ್ದೆ.

ಈ ನನ್ನ ಮುನಿಸು ಹಾರಿಹೋಗುತ್ತಿದ್ದುದು ಅಡುಗೆಮನೆಯಿಂದ ತೇಲಿಬರುತ್ತಿದ್ದ ಅಮ್ಮನ ‘ಊಟಕ್ ಬಾರೋ’ ಕೂಗು ಕೇಳಿದಾಗಲೇ. ಅಂದು ರಾತ್ರಿಯ ಊಟಕ್ಕೆ ನೆಲಮಾವಿನ ಸೊಪ್ಪಿನ ಬೀಸ್ಗೊಜ್ಜು ತಯಾರಾಗಿರುತ್ತಿತ್ತು. ವಿಶಿಷ್ಟ ಪರಿಮಳವನ್ನು ಹೊಂದಿದ ಈ ಸೊಪ್ಪಿನ ಗೊಜ್ಜು ಸೂಜಿಮೆಣಸಿನಕಾಯಿಯ ಖಾರವೂ ಸೇರಿ ಬಾಯಿ ಚಪ್ಪರಿಸುವಷ್ಟು ರುಚಿಯಾಗಿರುತ್ತಿತ್ತು. ಅನ್ನಕ್ಕೆ ಕಲಸಿಕೊಂಡು ಊಟ ಶುರು ಮಾಡಿದರೆ, ಜೊತೆಗೆ ಕರಿದ ಹಲಸಿನ ಹಪ್ಪಳವೂ ಇದ್ದುಬಿಟ್ಟರೆ, ಅವತ್ತು ಎಲ್ಲರಿಗೂ ಒಂದು ತೂಕ ಜಾಸ್ತಿಯೇ ಇಳಿಯುತ್ತಿತ್ತು. ಅಜ್ಜನಂತೂ ಈ ಬೀಸ್ಗೊಜ್ಜನ್ನು ಗಟ್ಟಿಯಾಗಿ ಕಲಸಿಕೊಂಡು, ತಟ್ಟೆಯಲ್ಲೊಂದು ರಿಂಗಿನಂತಹ ಕಟ್ಟೆ ಮಾಡಿ, ಅದರೊಳಗೆ ಕಡಮಜ್ಜಿಗೆ ಸುರುವಿಕೊಂಡು ತನ್ನದೇ ಶೈಲಿಯಲ್ಲಿ ಕತ್ತರಿಸುತ್ತಿದ್ದ.

ಅಜ್ಜಿಗೆ ದಮ್ಮಿನ ಕಾಯಿಲೆ ಶುರುವಾದಮೇಲೆ ಈ ಗದ್ದೆಬಯಲಿಗೆ ನೆಲಮಾವಿನ ಸೊಪ್ಪು ಕೊಯ್ಯಲು ಹೋಗುವ ಕಾರ್ಯ ನಿಂತೇಹೋಯಿತು. ಎಲ್ಲಾದರೂ ಅಪರೂಪಕ್ಕೆ ಯಾರಾದರೂ ರೈತರು ತಂದುಕೊಟ್ಟರೆ ಬೀಸ್ಗೊಜ್ಜು ಸವಿಯುವ ಅಭಿಯೋಗ ಸಿಗುತ್ತಿತ್ತು. ಅಜ್ಜಿ ತೀರಿಕೊಂಡಮೇಲಂತೂ ನನಗೆ ನೆಲಮಾವಿನ ಸೊಪ್ಪಿನ ಗೊಜ್ಜಿನ ಊಟ ಮಾಡಿದ ನೆನಪೇ ಇಲ್ಲ. ಅಲ್ಲಿ ಆ ಸೊಪ್ಪು ಈಗಲೂ ಬೆಳೆಯುತ್ತಿದೆಯೋ ಇಲ್ಲವೋ ಹೋಗಿ ನೋಡಿದವರೂ ಯಾರೂ ಇರಲಿಕ್ಕಿಲ್ಲ.

ಈಗ ಅಮ್ಮ ಫೋನಿನಲ್ಲಿ ಲಚ್ಚಮ್ಮನ ಕೆರೆಯ ಪ್ರಸ್ತಾಪವೆತ್ತಿದ್ದೇ ಇದೆಲ್ಲ ನೆನಪಾಗಿ, ನೆಲಮಾವಿನ ಸೊಪ್ಪಿನ ರುಚಿಯೂ ಪರಿಮಳವೂ ಕಾಡತೊಡಗಿ ನಾನು ವ್ಯಸ್ತನಾಗಿ ಕುಳಿತಿದ್ದೇನೆ. ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಲಚ್ಚಮ್ಮನ ಕೆರೆಯಲ್ಲಿ ಮತ್ತೆ ನೀರು ಜಿನುಗಿ, ಪಕ್ಕದ ನೆಲವೆಲ್ಲ ಜೌಗಾಗಿ, ಅಲ್ಲಿ ಎಕರೆಗಟ್ಟಲೆ ನೆಲಮಾವಿನ ಸೊಪ್ಪು ಬೆಳೆದು, ನಾನು ಮುಂದಿನ ಸಲ ಊರಿಗೆ ಹೋದಾಗ ಇರುವಷ್ಟೂ ದಿನ ಅದರದೇ ಅಡುಗೆ ಮಾಡಿಸಿಕೊಂಡು ಉಂಡು, ಆಮೇಲೆ ಬೆಂಗಳೂರಿಗೆ ಬರುವಾಗಲೂ ಒಂದಷ್ಟು ಸೊಪ್ಪು ಕಟ್ಟಿಕೊಂಡು ಬಂದು, ಇಲ್ಲಿನ ನನ್ನ ರೂಮಿನಲ್ಲಿ ಬೀಸ್ಗೊಜ್ಜು ಮಾಡಿಕೊಂಡು ಗಮ್ಮತ್ತಾಗಿ ಉಣ್ಣುವ ಕನಸು ಕಾಣುತ್ತಿದ್ದೇನೆ.

ಸುಮಾರು ಹೊತ್ತಿನಿಂದ ಸುಮ್ಮನೆ ಕೂತಿರುವ ನನ್ನನ್ನು ಕಂಡು ರೂಂಮೇಟು ‘ಇವತ್ತಿನ ಅಡುಗೆ ಕತೆ ಏನೋ?’ ಅಂತ ಕೇಳಿದ್ದೇ ನಾನು ‘ನೆಲಮಾವಿನ ಸೊಪ್ಪಿನ ಗೊಜ್ಜು’ ಅಂತ ಹೇಳಿ, ಅದಕ್ಕವನು ಕಕ್ಕಾಬಿಕ್ಕಿಯಾಗಿ ‘ವ್ಹಾಟ್?’ ಅಂತ ದೊಡ್ಡ ದನಿಯಲ್ಲಿ ಕಿರುಚಿದ್ದಕ್ಕೆ ನನಗೆ ಎಚ್ಚರಾಗಿ, ‘ವ್ಹಾಟ್? ಸಾರಿ, ಏನ್ ಕೇಳ್ದೆ?’ ಅಂತ ಮರು ಪ್ರಶ್ನಿಸಿದೆ.

Thursday, March 03, 2011

ಪ್ರಣತಿ- ಪ್ರಬಂಧ ಸ್ಪರ್ಧೆ ಫಲಿತಾಂಶ

ನಮ್ಮ ಸಂಸ್ಥೆ ಪ್ರಣತಿ, 'ಪ್ರಕೃತಿ ನಿಯಮ ಮತ್ತು ಮನುಷ್ಯ ಜೀವನ' ಎಂಬ ವಿಷಯದ ಮೇಲೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗೆ ರಾಜ್ಯದ ನಾನಾ ಜಿಲ್ಲೆಗಳ ವಿದ್ಯಾರ್ಥಿಗಳಿಂದ ಪ್ರವೇಶಗಳು ಬಂದಿದ್ದವು. ಅಂತಿಮ ಫಲಿತಾಂಶ ಈ ರೀತಿ ಇದೆ:

ಪ್ರಥಮ ಬಹುಮಾನ: ವೀರನಗೌಡ ಪಾಟೀಲ, ಬೆಳಗಾವಿ (ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ)
ದ್ವಿತೀಯ ಬಹುಮಾನ: ಅಮೃತಾ ಜೆ., ಬೆಂಗಳೂರು (ಬೆಂಗಳೂರಿನ ನ್ಯೂ ಹಾರಿಜೋನ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿ)
ತೃತೀಯ ಬಹುಮಾನ: ಆನಂದ ಅಲಗುಂಡಗಿ, ಗದಗ (ಹುಬ್ಬಳ್ಳಿಯ ಜಗದ್ಗುರು ಗುರುಸಿದ್ದೇಶ್ವರ ಟೀಚರ್ಸ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿ)

ಮೂವರೂ ವಿಜೇತರಿಗೆ ಅಭಿನಂದನೆಗಳು. ಭಾಗವಹಿಸಿದ ಎಲ್ಲರಿಗೂ ನಮ್ಮ ಧನ್ಯವಾದಗಳು. ಬಹುಮಾನಗಳನ್ನು ಅಂಚೆಯ ಮೂಲಕ ತಲುಪಿಸಲಾಗುವುದು.