Monday, February 11, 2019

ಸಾಲು ಬಿಟ್ಟು

ಇರುವೆ ನಿದ್ರಿಸುವುದನ್ನು ನೋಡಿಯೇ ಇಲ್ಲ
ಅದು ಸದಾ ನಡೆಯುತ್ತಲೇ ಇರುತ್ತದೆ ಭೂಮಿಯನ್ನೇ ಸುತ್ತವಂತೆ
ಕೆಲವೊಂದು ದೀರ್ಘಾಯಸ್ಸು ಪಡೆದ ಇರುವೆಗಳು
ಸುತ್ತಿ ಮುಗಿಸಿರಲೂಬಹುದು, ಯಾರಿಗೆ ಗೊತ್ತು?
ಇರುವೆಯ ನಡೆಯೆಡೆ ಗಮನ ಹರಿಸಲು ಯಾರಿಗೂ ಪುರುಸೊತ್ತಿಲ್ಲ

ಒಮ್ಮೆ ಪುಸ್ಸಿ ಕ್ಯಾಟಿಗೆ ಎಲ್ಲಿಗೆ ಹೋಗಿದ್ದೆ ಅಂತ ಕೇಳಿದರೆ
ಲಂಡನ್ ಮಹಾರಾಣಿಯನ್ನು ನೋಡಲು ಹೋಗಿದ್ದೆ ಎಂದಿತ್ತಂತೆ
ಬೆಕ್ಕಿಗೆ ಇರುವಷ್ಟು ಅಹಂಕಾರ ಇರುವೆಗಿಲ್ಲ
ನಿರ್ಭಾರ ಶರೀರೆಗೆ ತಾನಾಯಿತು ತನ್ನ ಹೊಟ್ಟೆಪಾಡಾಯಿತು
ಇಷ್ಟಗಲ ಮೂತಿ ಮುಚ್ಚುವಂತೆ ಆಹಾರ ಹೊತ್ತು
ಸಾಲುಗಟ್ಟಿ ಹೊರಟರಾಯಿತು ಪ್ರಭಾತ್‌ಫೇರಿ
ಎದುರು ಸಿಕ್ಕವರೆಲ್ಲ ಮುತ್ತಿಕ್ಕಿದರೂ ರೋಮಾಂಚವಿಲ್ಲ
ಕ್ಷಣ ನಿಂತು ಆಲೋಚಿಸುವ ವಿವೇಚನೆಯಿಲ್ಲ
ತರಾತುರಿಯೇ ಹುಟ್ಟುಗುಣವೆಂಬಂತೆ
ಕಾಯಕವೇ ಕೈಲಾಸವೆಂಬಂತೆ
ನಡೆಯುವವು ಒಂದೇ ಸಮನೆ ನೇರ

ಆದರಿಲ್ಲೊಂದು ಇರುವೆ ಸಾಲಿನಿಂದ ಬೇರ್ಪಟ್ಟಿದೆ
ಹೆಜ್ಜೆ ತಪ್ಪಿತೋ ಕಣ್ಣು ಮಂಜಾಯಿತೋ
ರೊಟೀನು ಬೇಜಾರಾಯಿತೋ ಮನಸು ಬದಲಾಯಿತೋ
ಸವೆದ ಹಾದಿ ಬಿಟ್ಟು ಹೊಸ ಹಾದಿ ಹುಡುಕಲು ಬಯಸಿತೋ-
ಗೋಡೆಯ ಮೇಲೀಗ ಅದೋ ಏಕಾಂಗಿ ಸಂಚಾರಿ
ಒಂಟಿ ಇರುವೆಯಷ್ಟು ಕ್ಯೂಟು ಜೀವಿ ಮತ್ತೊಂದಿಲ್ಲ
ದಿಕ್ಕೆಟ್ಟ ಶಕುಂತಲೆಯ ದುಃಖ ಪ್ರತಿ ಬಳುಕಲ್ಲೂ ಸ್ಪಷ್ಟ
ಮರಳಿ ಸಾಲು ಸೇರಿಕೊಳ್ಳುವವರೆಗೆ ಯಾರಿಗಿದೆ ಸಮಾಧಾನ?

ತಿಂಗಳ ಲೆಕ್ಕಾಚಾರ ಹೇಳುವ ಗೂಗಲ್ ನಕ್ಷೆ
ನಾನು ಇನ್ನು ಇಷ್ಟು ಮೈಲಿ ನಡೆದರೆ
ಚಂದ್ರನನ್ನೇ ಮುಟ್ಟಬಹುದು ಅಂತ ತೋರಿಸುತ್ತಿದೆ...
ಗುರುತರ ಜವಾಬ್ದಾರಿಗಳನೆಲ್ಲ ಬದಿಗಿಟ್ಟು
ಇರುವ ಕೆಲಸಗಳನೆಲ್ಲ ಮರೆತವನಂತೆ
ಈ ಒಂಟಿ ಇರುವೆಯ ಹಿಂದೆ ಬಿದ್ದಿದ್ದೇನೆ ಬೆಳಗಿನಿಂದ
ಹೀಗೇ ಹೋಗುತ್ತಿದ್ದರೆ ಬರುವ ಹುಣ್ಣಿಮೆಯೊಳಗೆ
ತಲುಪಬಹುದೇನೋ ಚಂದ್ರನನ್ನು.