Monday, January 31, 2022

ತಾರಸಿಯಿಂದ ಕಂಡ ಮಹಾನಗರ


ಮಲೆನಾಡಿನ ಪುಟ್ಟ ಹಳ್ಳಿಯಿಂದ ಬಂದ ನಮಗೆ ಇಡೀ ಬೆಂಗಳೂರು ಸುತ್ತಿದರೂ ಒಂದೇ ಒಂದು ಸೋಗೆಯ ಮನೆ ಅಥವಾ ಹೆಂಚಿನ ಮನೆ ಕಾಣದಿದ್ದುದು ಸೋಜಿಗದ ಸಂಗತಿಯಾಗಿತ್ತು. ಬೆಂಗಳೂರನ್ನು ನೋಡಲೆಂದು ನಾನು ಮೊದಲ ಸಲ ಇಲ್ಲಿಗೆ ಹೊರಟಾಗ ಅಪ್ಪ, ‘ಎಂಜಿ ರೋಡು ನೋಡೋದಕ್ಕೆ ಮರೀಬೇಡ. ಅಲ್ಲಿಗೆ ಹೋದರೆ ಬೇರೆಯದೇ ಲೋಕಕ್ಕೆ ಹೋದಹಾಗೆ ಆಗುತ್ತೆ. ಪೆಟ್ಟಿಗೆ-ಪೆಟ್ಟಿಗೆಗಳ ಹಾಗೆ ಪಕ್ಕಪಕ್ಕದಲ್ಲಿ ಅಚ್ಚುಕಟ್ಟಾಗಿ ಕಟ್ಟಿರುವ ಆರ್‌ಸಿಸಿ ಕಟ್ಟಡಗಳು, ಎಲ್ಲಾ ನೀಟಾಗಿ ತುಂಬಾ ಚೆನ್ನಾಗಿದೆ’ ಅಂತ ಹೇಳಿದ್ದ. ಅವನಾದರೋ ಎಷ್ಟೋ ವರ್ಷಗಳ ಹಿಂದೆ ನೋಡಿದ್ದ ಬೆಂಗಳೂರಿನ ಚಿತ್ರವನ್ನು ಕಣ್ಮುಂದೆ ಇಟ್ಟುಕೊಂಡು ಹೇಳಿದ್ದು; ಆದರೆ ನಾನು ಬೆಂಗಳೂರಿಗೆ ಬರುವ ಹೊತ್ತಿಗೆ ಇಡೀ ಬೆಂಗಳೂರೇ ಎಂಜಿ ರೋಡಿನ ಹಾಗೆ ಆಗಿತ್ತು. ಎಲ್ಲ ಏರಿಯಾಗಳಲ್ಲೂ ಎಂಜಿ ರೋಡಿನ ಹಾಗೆ ಚಂದದ ಥಳಥಳ ಕಟ್ಟಡಗಳು, ಅಲ್ಲಲ್ಲಿ ತಲೆಯೆತ್ತತೊಡಗಿದ್ದ ಮಾಲುಗಳು, ಸಂಜೆಯಾಯಿತೆಂದರೆ ಝಗಮಗ ದೀಪಗಳು, ತಳುಕುಬಳುಕು ತುಂಬಿ ತುಳುಕುವ ಬೀದಿಯಲ್ಲಿ ಜನರು ‘ಶಾಪಿಂಗ್’ ಹೆಸರಿನಲ್ಲಿ ಚೆಂದನೆಯ ಬ್ಯಾಗು ಹಿಡಿದು ಓಡಾಡುವರು. ಹೀಗಾಗಿ ಎಂಜಿ ರೋಡು ಬಹಳ ಭಿನ್ನವಾಗಿಯೇನು ಕಾಣಲಿಲ್ಲ.

ಆದರೆ ಅಪ್ಪ ನೋಡಲು ಹೇಳಿದ್ದ ಪಟ್ಟಿಯಲ್ಲಿದ್ದ ಯುಟಿಲಿಟಿ ಬಿಲ್ಡಿಂಗಿನ ಮೇಲೇರಿದಾಗ ಮಾತ್ರ ನಾನು ದಂಗಾಗಿಬಿಟ್ಟೆ. ಇಪ್ಪತ್ತೈದು ಮಹಡಿಗಳ ಕಟ್ಟಡವನ್ನು ಹೊಕ್ಕು ಲಿಫ್ಟಿನ ಗುಂಡಿಯದುಮಿದ್ದೇ ಆಕಾಶಕ್ಕೆ ನೆಗೆಯುವ ರಾಕೆಟ್ಟಿನಂತೆ ಅದು ನನ್ನನ್ನು ಮೇಲಕ್ಕೊಯ್ದಿತು. ಹೆದರಿ ಎರಡೂ ಕೈಗಳನ್ನು ಲಿಫ್ಟಿನ ಕವಚಗಳಿಗೆ ಒತ್ತಿ ಹಿಡಿದೆ.  ಎದೆಯ ಡವಡವ ಕಿವಿಗೆ ಕೇಳುವಷ್ಟು ಜೋರಾಗಿತ್ತು. ಕೊನೆಯ ಮಹಡಿಯಲ್ಲಿ ಲಿಫ್ಟು ನಿಂತು, ನಾನು ಸಾವರಿಸಿಕೊಳ್ಳುತ್ತಾ ನಿಧಾನಕ್ಕೆ ಹೊರಗೆ ಹೆಜ್ಜೆಯಿಟ್ಟರೆ, ಆಕಾಶದಲ್ಲಿ ತೇಲುತ್ತಿರುವಂತೆ ಭಾಸ. ಮೂರು ವರ್ಷಕ್ಕೊಮ್ಮೆ ಮಾರಿಜಾತ್ರೆಗೆ ಬರುವ ತೊಟ್ಟಿಲಲ್ಲಿ ಕುಳಿತು ನೋಡಿದ್ದು ಬಿಟ್ಟರೆ ಇಷ್ಟು ಎತ್ತರದಿಂದ ಜಗತ್ತನ್ನು ನೋಡುತ್ತಿದ್ದುದು ಇದೇ ಮೊದಲ ಸಲವಾಗಿತ್ತು. ಎದೆ ಇನ್ನೂ ತಾರಕದಲ್ಲಿ ಬಡಿದುಕೊಳ್ಳುತ್ತಲೇ ಇತ್ತು. ನಿಧಾನಕ್ಕೆ ಪ್ಯಾರಾಪಿಟ್ಟಿನ ಅಂಚಿಗೆ ಬಂದೆ. ಮುಂದೆ ನೋಡಿದರೆ, ಬೆಂಗಳೂರಿಗೆ ಬೆಂಗಳೂರೇ ಕಾಣುತ್ತಿದೆಯೇನೋ ಎಂಬಂತೆ ಇಡೀ ನಗರ ಕಣ್ಮುಂದೆ ಹರಡಿಕೊಂಡಿತ್ತು. ಹಸಿರು ಮರಗಳು, ಕೆಂಪು ಹೂಗಳು, ಬಿಳಿಯ ಕಟ್ಟಡಗಳು, ಅಲ್ಲಲ್ಲೇಳುತ್ತಿರುವ ಹೊಗೆ, ದೂರದಲ್ಲಿ ಹಾರುತ್ತಿರುವ ಹಕ್ಕಿಗಳು.... ಆಹಾ! ರುದ್ರಭಯಂಕರವಾಗಿದ್ದ ಆ ದೃಶ್ಯ ಮೈ ನವಿರೇಳಿಸುವ ಹಾಗಿತ್ತು. ಇನ್ನೂ ಧೈರ್ಯ ಮಾಡಿ, ಪ್ಯಾರಾಪಿಟ್ಟಿನ ಅಂಚನ್ನು ಕೈಯಲ್ಲಿ ಹಿಡಿದು, ಬಗ್ಗಿ ನೋಡಿದೆ: ಓಹೋ! ಇರುವೆಗಳ ಹಾಗೆ ಚಲಿಸುತ್ತಿರುವ ವಾಹನಗಳು, ಕುಬ್ಜ ಕೀಟಗಳಂತೆ ಕಾಣುತ್ತಿರುವ ಮನುಷ್ಯರು, ಅಕ್ಕಪಕ್ಕದ ಚಿಕ್ಕ ಕಟ್ಟಡಗಳ ಟೆರೇಸಿನಲ್ಲಿ ಒಣಗಿಸಿರುವ ಬಟ್ಟೆಗಳು... ಅಬ್ಬಬ್ಬಾ ಅಂತ ನಾನು ಆಶ್ಚರ್ಯ ಪಡುತ್ತಿರುವಾಗಲೇ, ಯಾರೋ ಸಿಬ್ಬಂದಿ ಹಿಂದಿನಿಂದ ಕೂಗುತ್ತ ಬಂದರು: “ರೀ ಯಾರ್ರೀ ನೀವು? ಯಾರ್ರೀ ನಿಮ್ಮನ್ನ ಇಲ್ಲಿಗೆ ಬರೋಕೆ ಬಿಟ್ಟಿದ್ದು? ಟೆರೇಸಿಗೆ ಯಾರಿಗೂ ಎಂಟ್ರೀನೇ ಇಲ್ಲ, ಹ್ಯಾಗ್ರೀ ಬಂದ್ರಿ?” ಅಂತ ಬೈಯುತ್ತ, ನನ್ನ ಕೈ ಹಿಡಿದು ಲಿಫ್ಟಿನ ಬಳಿಗೆ ಕರೆದೊಯ್ದ. ಅಂದು ಭಾನುವಾರವಾದ್ದರಿಂದ, ನಾನು ಹೋದ ಸಮಯದಲ್ಲಿ ಅಲ್ಲಿ ಸೆಕ್ಯುರಿಟಿಯವರಾಗಲೀ ಬೇರೆ ಕೆಲಸದವರಾಗಲೀ ಯಾರೂ ಇರಲಿಲ್ಲವಾದ್ದರಿಂದ, ಅದು ಹೇಗೋ ನಾನು ತಿಳಿಯದೇ ಬೆಂಗಳೂರಿನ ಅಂದಿನ ಅತಿ ಎತ್ತರದ ಕಟ್ಟಡದ ಟೆರೇಸಿಗೆ ಬಂದುಬಿಟ್ಟಿದ್ದೆ. ಹಾಗೆ ಬರುವಂತಿಲ್ಲ ಅಂತ ನನಗೆ ಗೊತ್ತೂ ಇರಲಿಲ್ಲ. ಆದರೆ ಅಂದು ಆ ಟೆರೇಸಿನ ಮೇಲಿಂದ ನೋಡಿದ ಆ ದೃಶ್ಯ ಮಾತ್ರ ಎಂದೂ ಮರೆಯುವುದಿಲ್ಲ.

ಬೆಂಗಳೂರಿನಲ್ಲೇ ನನ್ನ ಮುಂದಿನ ಬದುಕು ಎಂಬುದು ನಿಶ್ಚಯವಾದಮೇಲೆ ನಾನೂ ಒಂದು ಬಾಡಿಗೆ ಮನೆ ಹುಡುಕುವುದು ಅನಿವಾರ್ಯವಾಯಿತು. ಬ್ಯಾಚುಲರುಗಳು ದುಬಾರಿ ಬಾಡಿಗೆಯ ದೊಡ್ಡ ಮನೆಗೆ ಹೋಗಲಾದೀತೇ? ಸಣ್ಣ ರೂಮೊಂದನ್ನು ಹುಡುಕತೊಡಗಿದೆ. ಕಿಷ್ಕಿಂದೆಯಂತಹ ನಗರದ ಲಕ್ಷೋಪಲಕ್ಷ ಮನೆಗಳಲ್ಲಿ ನನಗೊಂದು ಕೋಣೆ ಸಿಗುವುದು ಕಷ್ಟವಾಗಲಿಲ್ಲ. ಈ ನಗರದಲ್ಲಿ ಹೆಂಚಿನ ಮನೆಗಳೇ ಇಲ್ಲವೆಂದೆನಷ್ಟೇ? ಇಂತಹ ಮನೆಗಳಲ್ಲಿ ಟೆರೇಸಿನ ಮೇಲೆ ನೀರಿನ ಟ್ಯಾಂಕು ಇಡಲು ಸ್ವಲ್ಪ ಎತ್ತರದ ಕಟ್ಟಣೆಯನ್ನು ಕಟ್ಟುತ್ತಾರೆ. ಅಂತಹ ಕಟ್ಟಣೆಯನ್ನೇ ಕೆಲವರು ಸಣ್ಣ ರೂಮಾಗಿ ಪರಿವರ್ತಿಸಿ ನನ್ನಂತಹ ಅಬ್ಬೇಪಾರಿ ಬ್ಯಾಚುಲರುಗಳಿಗೆ ಬಾಡಿಗೆಗೆ ಕೊಟ್ಟುಬಿಡುವರು. ಅಂತಹುದೊಂದು ರೂಮು ನನಗಾಗಿ ಬಾಗಿಲು ತೆರೆದು ಸ್ವಾಗತಿಸಿತು. ನಾಲ್ಕನೇ ಮಹಡಿಯಲ್ಲಿದ್ದ ಆ ರೂಮು ನಾಲ್ಕು ಜನ ಬಂದರೆ ಹಿಡಿಸುವಂತಿರಲಿಲ್ಲವಾದರೂ ಎದುರಿಗೆ ವಿಶಾಲವಾದ ಟೆರೇಸು ಇದ್ದುದರಿಂದ, ನಾನು ರೂಮಿಗಷ್ಟೇ ಬಾಡಿಗೆ ಕೊಡುವುದಾದರೂ ಇಡೀ ಟೆರೇಸನ್ನು ಬಳಸಿಕೊಳ್ಳುವ ಸ್ವಾತಂತ್ರ್ಯ ಸಿಕ್ಕಿತು. ಈ ಟೆರೇಸಿನಿಂದ ಮಹಾನಗರದ ಸೌಂದರ್ಯವನ್ನು ನೋಡುವುದು ಅಂದಿನಿಂದ ನಿತ್ಯಸುಖವಾಯಿತು.

ಕೆಳಗಿನ ಮೂರು ಮಹಡಿಗಳಲ್ಲಿದ್ದ ಮನೆಗಳ ಸಂಸಾರಗಳ ಚೂರುಪಾರನ್ನು ಓರೆಗಣ್ಣಲ್ಲಿ ಕಿಟಕಿಯಿಂದ ನೋಡುತ್ತ, ನಾನ್ಯಾವಾಗ ಹೀಗಾಗುವುದೋ ಎಂದುಕೊಳ್ಳುತ್ತ, ಮೆಟ್ಟಿಲು ಹತ್ತಿ ಮೇಲೆ ಬಂದುಬಿಟ್ಟರೆ ಸಮತಲದೊಂದು ಸ್ವರ್ಗ ನನ್ನನ್ನೇ ಕಾಯುತ್ತಿರುತ್ತಿತ್ತು. ರೂಮಿನೊಳಗಿನ ಕೆಲಸಗಳನ್ನು ಮುಗಿಸಿದರೆ ಉಳಿದ ಸಮಯವನ್ನೆಲ್ಲ ಟೆರೇಸಿನಲ್ಲೇ ಕಳೆಯಬಹುದು. ಮೂಲೆಯಲ್ಲಿರುವ ಪಾಟುಗಳಲ್ಲಿ ನಳನಳಿಸುತ್ತಿರುವ ಒಂದಷ್ಟು ಗಿಡಗಳು, ಅಡ್ಡಾದಿಡ್ಡಿ ಎಳೆದ ತಂತಿಗಳಲ್ಲಿ ಒಣಗುತ್ತಿರುವ ಕೆಳಗಿನ ಮನೆಗಳವರ ಬಟ್ಟೆಗಳು, ಅಲ್ಲಲ್ಲಿ ಪ್ಯಾರಾಪಿಟ್ಟಿಗೆ ಬಡಿದಿದ್ದ ಡಿಶ್ಶುಗಳು, ಅಷ್ಟೆತ್ತರಕ್ಕೆ ಬೆಳೆದಿದ್ದ ಪಕ್ಕದ ಮನೆಯ ತೆಂಗಿನ ಮರದ ತಲೆ-ಗಳೆಲ್ಲ ಆ ಟೆರೇಸಿನ ಭಾಗವೇ ಆಗಿದ್ದವು. ಟೆರೇಸಿನ ಮೂಲೆಗೆ ನಿಂತು ಸುಂಯ್ಯನೆ ಬೀಸುವ ಗಾಳಿಗೆ ಮೈಯೊಡ್ಡಿ ಕೈ ಬಿಚ್ಚಿ ಕಣ್ಮುಚ್ಚಿ ನಿಂತರೆ ನಾನೇ ಟೈಟಾನಿಕ್ ಹೀರೋ ಆದಂತೆ, ಇಡೀ ಮನೆ ಹಡಗಿನಂತೆ ಚಲಿಸುತ್ತಿರುವಂತೆ ಭ್ರಮೆಯಾಗುತ್ತಿತ್ತು. ಕೇಟ್ ವಿನ್ಸ್‌ಲೆಟ್ ಒಬ್ಬಳು ಬಾಕಿಯಿದ್ದಳು ಅಷ್ಟೇ.

ಈ ಟೆರೇಸಿನ ಅಕ್ಕಪಕ್ಕದ ಮನೆಗಳು ಆಗೀಗ ತಮ್ಮ ಕಿಟಕಿ ತೆರೆದು ತಮ್ಮೊಡಲ ಸಂಸಾರದ ಪ್ರದರ್ಶನ ಮಾಡಿಸುತ್ತಿದ್ದವು. ಯಾರದೋ ಅಡುಗೆಮನೆಯೊಳಗೆ ತಯಾರಾಗುತ್ತಿರುವ ಬಿಸಿಬಿಸಿ ರೊಟ್ಟಿ, ಯಾರದೋ ಮನೆಯೊಳಗಿನ ದೊಡ್ಡ ಟಿವಿಯಲ್ಲಿ ಪ್ರದರ್ಶಿತವಾಗುತ್ತಿರುವ ಧಾರಾವಾಹಿ, ಮತ್ಯಾರೋ ಕರ್ಟನ್ ಸರಿಸಿದಾಗ ಕಂಡ ಬೆಡ್‌ರೂಮಿನ ದೃಶ್ಯ, ಇನ್ಯಾರೋ ಬಾತ್‌ರೂಮಿನ ಕಿಟಕಿಯನ್ನು ಸಿಟ್ಟಿನಿಂದ ಧಡ್ಡನೆ ಹಾಕಿಕೊಂಡ ಸದ್ದು ಎಲ್ಲವೂ ಟೆರೇಸಿನಿಂದ ನಿತ್ಯಕಾವ್ಯ. ನಾನು ನೋಡಬೇಕೆಂದು ನೋಡದಿದ್ದರೂ ಅವರುಗಳು ತಪ್ಪು ತಿಳಿದುಕೊಂಡು ಸಿಡಿಮಿಡಿಗೊಳ್ಳುತ್ತಿದ್ದರು.  ಆ ಟೆರೇಸಿನ ತುದಿಗೆ ಹೋಗಿ ಬಗ್ಗಿದರೆ, ನಮ್ಮ ಮನೆಯೆದುರಿನ ರಸ್ತೆಯಲ್ಲಿ ವಾಹನಗಳೂ ತರಕಾರಿ ಮಾರುವವರೂ ಜನಸಾಮಾನ್ಯರೂ ಚಲಿಸುತ್ತಿರುವ ವಿಹಂಗಮ ದೃಶ್ಯ ಕಾಣುತ್ತಿತ್ತು. ದೂರದಲ್ಲಿರುವ ತರಾತುರಿಯ ಮುಖ್ಯರಸ್ತೆಯಲ್ಲಿ ಸಾಗುವ ದೊಡ್ಡ ವಾಹನಗಳೂ, ಬಿ‌ಎಂಟಿಸಿ ಬಸ್ಸುಗಳೂ, ಕಸದ ಲಾರಿಗಳೂ, ಸೈರನ್ ಕೂಗುತ್ತ ಹೋಗುವ ವೇಗದ ಆಂಬುಲೆನ್ಸುಗಳೂ ಕಾಣುತ್ತಿದ್ದವು. ಸದ್ದು ಬಂತೆಂದು ತಲೆಯಿತ್ತಿದರೆ, ಚುಕ್ಕಿಯಂತಹ ವಿಮಾನಗಳು ನನ್ನ ಮೇಲೆ ಪುಷ್ಪವೃಷ್ಟಿಗೈಯುವ ಯಾವ ಕರುಣೆಯನ್ನೂ ತೋರದೇ ತಮ್ಮ ಪಾಡಿಗೆ ತಾವು ಸಾಗುತ್ತಿದ್ದವು.

ರಾತ್ರಿಯಾಯಿತೆಂದರೆ ನಗರವು ದೀಪಾವಳಿಯ ಲಕ್ಷದೀಪೋತ್ಸವಕ್ಕೆ ಹಚ್ಚಿಟ್ಟ ಹಣತೆಗಳಂತಾಗಿಬಿಡುತ್ತಿತ್ತು. ಎಷ್ಟು ಕತ್ತೆತ್ತಿ ನೋಡಿದರೂ ಮುಗಿಯದ ದೀಪಗಳು ಆಕಾಶದ ನಕ್ಷತ್ರಗಳೊಂದಿಗೆ ಪೈಪೋಟಿಗೆ ಬಿದ್ದವಂತೆ ಮಿನುಗುವವು. ಅಕ್ಷಯವಾದ ಈ ಹರಹಿನಲ್ಲಿ ಎಲ್ಲಿ ನನ್ನ ಮನೆ? ಎಲ್ಲಿ ಅವಳ ಮನೆ? ಎಲ್ಲಿ ನನ್ನ ಆಫೀಸು? ಒಂದು ಬೆಳಕಿನ ದಾರ ಹಿಡಿದು, ಸೂಜಿಯಿಂದ ಈ ಚುಕ್ಕಿಗಳನ್ನೆಲ್ಲ ಜೋಡಿಸಿ ಹೊಲಿದುಬಿಟ್ಟರೆ, ದೊಡ್ಡ ಬಲೆಯಂತಾಗುವ ರಚನೆಯಿಂದ ನಗರವನ್ನೇ ಸೆರೆಹಿಡಿದೆತ್ತಿ ಬೇರೆಡೆಗೆ ಒಯ್ಯಬಹುದು ಎಂಬ ಕಲ್ಪನೆ ಬಂದು ರೋಮಾಂಚಿತನಾದೆ. ಆಗಸದಲ್ಲಿ ವಯ್ಯಾರ ಮಾಡುತ್ತ ಚಲಿಸುತ್ತಿದ್ದ ಉಪಗ್ರಹವೊಂದು ನನ್ನ ಕಲ್ಪನೆಗೆ ಭೇಷ್ ಎಂದಿತು.

ಇಂತಹ ಟೆರೇಸುಗಳೇ ನಗರದ ಎಷ್ಟೋ ಪ್ರೇಮಾಂಕುರಗಳಿಗೆ ಹಾಟ್‌ಸ್ಪಾಟುಗಳು. ವೀಡಿಯೋ ಕಾಲ್ಸ್ ಬರುವ ಮೊದಲು, ಈ ಟೆರೇಸಿನಲ್ಲಿ ನಿಂತಿರುವ ಅವನೂ ಆ ಟೆರೇಸಿನಲ್ಲಿ ನಿಂತಿರುವ ಅವಳೂ ಪರಸ್ಪರ ನೋಡಿಕೊಳ್ಳುತ್ತಾ, ತಮ್ತಮ್ಮ ಮೊಬೈಲಿನಲ್ಲಿ ಮಾತಾಡಿಕೊಳ್ಳುತ್ತ, ಕೈಸನ್ನೆ-ಬಾಯ್ಸನ್ನೆಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರೆ, ನಡುವಿನ ಮನೆಗಳೂ ರಸ್ತೆಗಳೂ ಮರಗಳೂ ಕಣ್ಮುಚ್ಚಿಕೊಂಡು ಸಹಕರಿಸುವವು. ಅವಳು ಕಳುಹಿಸಿದ ಫ್ಲೈಯಿಂಗ್ ಕಿಸ್ಸನ್ನು ತೆಂಗಿನ ಮರದ ಗಾಳಿ ಸುರಕ್ಷಿತವಾಗಿ ಅವನಿಗೆ ತಲುಪಿಸುವುದು. ಅಪರೂಪಕ್ಕೆ ಅವನು ಬರೆದ ಪ್ರೇಮಪತ್ರವು ರಾಕೆಟ್ಟಾಗಿ ಸಾಗಿ ಅವಳ ಮನೆಯ ಟೆರೇಸು ತಲುಪುವುದು. ಹೃದಯಗಳ ಭಾಷೆಗೆ ನಗರವು ಎರಡು ಟೆರೇಸುಗಳ ನಡುವೆ ಅದೃಶ್ಯ ಸೇತುವೆಯ ಕಲ್ಪಿಸಿ ಪ್ರೇಮಿಗಳನ್ನು ಪೊರೆಯುವುದು.

ಜಾಗತೀಕರಣ ಜಾಸ್ತಿಯಾದಂತೆ ನಗರದ ಕಟ್ಟಡಗಳ ಎತ್ತರವೂ ಜಾಸ್ತಿಯಾಗತೊಡಗಿದವು. ಒಂದೋ ಎರಡೋ ಇದ್ದ ಗಗನಚುಂಬಿ ಕಟ್ಟಡಗಳು ಈಗ ನಗರದಾದ್ಯಂತ ತಲೆಯೆತ್ತಿ ನಿಂತವು. ಆ ಕಟ್ಟಡಗಳಿಗೆ ಹೊಳೆವ ಗಾಜಿನ ಹೊದಿಕೆಗಳು. ಸೂರ್ಯನ ಬೆಳಕನ್ನು ಪ್ರತಿಫಲಿಸುವ ಈ ತಳುಕಿನ ಗಾಜುಗಳು ತಮ್ಮೊಳಗಿನದೇನನ್ನೂ ತೋರಗೊಡುವುದಿಲ್ಲ. ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸುಗಳಲ್ಲಿ ಮೇಲ್ಮಹಡಿಯ ಮನೆಗಳಿಗೇ ಹೆಚ್ಚಿನ ಬೆಲೆ. ದೀಪಾವಳಿಯ ದಿವಸ ಸಿಡಿಮದ್ದುಗಳ ಚಂದವನ್ನು ನೋಡಲು ಟೆರೇಸಿಗೇ ಬರಬೇಕು. ಆಕಾಶಕ್ಕೆ ನೆಗೆದು ಸಿಡಿದ ರಾಕೆಟ್ಟುಗಳು ಹಬ್ಬದ ಸಂಭ್ರಮವನ್ನು ಹೆಚ್ಚಿಸುವವು. ದೂರದಲ್ಲಿ ಸಾಗುತ್ತಿರುವ ಮೆಟ್ರೋ ರೈಲು ಕಿಟಕಿಕಿಟಕಿಗಳಿಂದ ಬೆಳಕನ್ನು ಸೂಸುತ್ತಾ ತನ್ನದೇ ರೀತಿಯಲ್ಲಿ ಹಬ್ಬವನ್ನಾಚರಿಸುವುದು.

ನಗರದ ರಸ್ತೆಯಲ್ಲಿ ಬೈಕುಗಳೂ, ಕಾರುಗಳೂ, ಬಸ್ಸುಗಳೂ, ಆಟೋಗಳೂ ತಮ್ಮದೇ ವೇಗದಲ್ಲಿ ಓಡುತ್ತಿವೆ. ಇಕ್ಕೆಲದ ಕಟ್ಟಡಗಳ ಟೆರೇಸಿನಲ್ಲಿ ನಿಂತ ಬಿಡುವಿರುವ ಜನ ತಮ್ಮನ್ನು ನೋಡುತ್ತಿದ್ದಾರೆಂಬ ಪರಿವೆಯೇ ಅವಕ್ಕಿಲ್ಲ. ಅವಸರವೇ ಮೈವೆತ್ತಿರುವ ವಾಹನಗಳು ರಸ್ತೆಯಲ್ಲಿ ನಿಲ್ಲುತ್ತಲೇ ಇಲ್ಲ. ಬಿಸಿಲಿದ್ದರೆ ಬೈದುಕೊಂಡೂ, ಮಳೆ ಬಂದರೆ ತೊಯ್ದುಕೊಂಡೂ, ಚಳಿಯಾದರೆ ನಡುಗಿಕೊಂಡೂ ಚಲಿಸುತ್ತಲೇ ಇವೆ. ಹೊಸಹೊಸ ಬಣ್ಣಗಳನ್ನು ಬಳಿದುಕೊಳ್ಳುತ್ತಾ ನಗರ ಬೆಳೆಯುತ್ತಲೇ ಇದೆ. ತಾರಸಿಯ ಮೇಲಿಂದ ವೀಕ್ಷಿಸುತ್ತಿರುವ ಸಾವಿರಾರು ಬೆರಗಿನ ಕಣ್ಣುಗಳಿಂದ ಹೊರಟ ಬೆಳಕು ಸರ್ಚ್‌ಲೈಟಿನಂತೆ ನಗರವನ್ನು ಕಾಯುತ್ತಿದೆ.

['ಉದಯವಾಣಿ' ಪತ್ರಿಕೆಗೆ 50 ವರ್ಷ ತುಂಬಿದ ಸಂಭ್ರಮದಲ್ಲಿ ಹೊರತಂದಿರುವ 'ಸುವರ್ಣ ಸಂಪದ' ವಿಶೇಷಾಂಕದಲ್ಲಿ ಪ್ರಕಟಿತ.]