Wednesday, May 30, 2007

ಹೊಸ ಹಕ್ಕಿ

ಅದೊಂದು ಮುಂಜಾನೆ ಆ ಹಕ್ಕಿ ಬಂದು
ನನ್ನ ಮನೆಯ ಕಿಟಕಿ ಸರಳ ಮೇಲೆ ಕೂತು
ಚಿಲಿಪಿಲಿಗುಡುತ್ತಿತ್ತು

ಗಿಣಿಯಂಥ ಮೂತಿ; ಆದರೆ ಗಿಣಿಯಲ್ಲ
ಗುಬ್ಬಿಯಂತೆ ಚಿಲಿಪಿಲಿ ದನಿ; ಆದರೆ ಗುಬ್ಬಿಯಲ್ಲ
ಹಾಡಲು ತೊಡಗಿದರೆ ಕೋಗಿಲೆಯೇ; ಆದರೆ... ಊಹುಂ, ಕೋಗಿಲೆಯಲ್ಲ
ಬಣ್ಣ ಮಾತ್ರ ಪಾರಿವಾಳ; ಆದರೆ ಗುಟುರಿಲ್ಲ...

ಹಾಗಾದರೆ ಇದ್ಯಾವ ಹಕ್ಕಿಯಿರಬಹುದೆಂದು
ನನಗೆ ಅಚ್ಚರಿ...
ಅಂಥದ್ದೊಂದು ಕುತೂಹಲವನ್ನು ನನ್ನಲಿ ಹುಟ್ಟಿಸಿ
ಹಕ್ಕಿ ತಾನು ಪುರ್ರನೆ ಹಾರಿ ಹೋಯಿತು

ಆಮೇಲೆ ದಿನವೂ ಬರತೊಡಗಿತು...
ಚಿಲಿಪಿಲಿಚಿಲಿಪಿಲಿಚಿಲಿಪಿಲಿ!
ಮಾತು ಮಾತು ಮಾತು!
ನನಗರ್ಥವಾಗದ ಭಾಷೆಯಲ್ಲಿ ಅದು ಏನೇನೋ ಹೇಳುತ್ತಿದ್ದರೂ
ನನ್ನ ಮನಸಿಗೇಕೋ ಅವೆಲ್ಲ ಇಷ್ಟವಾಗುತ್ತಿತ್ತು..

ಇಷ್ಟ ಪ್ರೀತಿಯಾಗಲು ಎಷ್ಟೊತ್ತು ಬೇಕು?

ನಿಜ ಹೇಳಬೇಕೆಂದರೆ, ಬೇಟೆ ನನಗೆ ವರ್ಜ್ಯ
ಹಕ್ಕಿಗಳನ್ನು ನೋಡುವುದರಲ್ಲೇ ನಾನು ಧನ್ಯ
ಬೇಕೆನಿಸಿದ್ದನ್ನು ಪಡೆದೇ ತೀರಬೇಕೆಂದು ಹೊರಡುವುದು ನನ್ನಿಂದ ಅಸಾಧ್ಯ
ಕಂಡ ಕನಸು ಮುರುಟಿಹೋದರೆ ಆಗುವ ಬೇಸರ ಸಹ ನನಗೆ ಸಹ್ಯ

ಆದರೂ ಈ ಹಕ್ಕಿಯ ಮೋಡಿ ಬಲು ದೊಡ್ಡದು!
ಇದರ ಹಾಡಿಗೆ ನಾನು ಮನಸೋತೆ
ಮೈಯ ಒನಪಿಗೆ ಮೈಸೋತೆ
ಮಾತ ಮಳೆಗೆ ಒದ್ದೆಯಾಗಿಹೋದೆ

ಅಂದು ಹಾರಿಹೊರಟ ಹಕ್ಕಿಯ ಬಳಿ ಹೇಳಿದೆ:
ನನಗೆ ನೀನು ಬೇಕು; ಇಲ್ಲೇ ಇರಬೇಕು
ನಾನೇನು ನಿನ್ನನ್ನು ಬಂಧಿಸಿಡುವುದಿಲ್ಲ
ನನ್ನ ಮನೆಯಲ್ಲಿ ಹಾರಾಡಿಕೊಂಡಿರು ಸಾಕು
ಎಲ್ಲಿ ಬೇಕಾದರೂ ಸುತ್ತಿಕೊಂಡು ಬಾ;
ಆದರೆ 'ನನ್ನ ಹಕ್ಕಿ'ಯಾಗಿರು ಅಷ್ಟೇ
-ಅಂತ.

ನನ್ನ ಬಿನ್ನಹ ಕೇಳಿದ ಮೇಲೆ ಹಕ್ಕಿ ಮೌನವಾಯಿತು..
ಅದರ ಪುಟ್ಟ ಕಣ್ಣಕೊಳ ತುಂಬಿಕೊಂಡಿತು..
ಏನೆಂದರೆ ಏನೂ ಹೇಳದೆ ರೆಕ್ಕೆ ಬೀಸಿ ಹಾರಿಹೋಗಿಬಿಟ್ಟಿತು..

ತಪ್ಪು ಮಾಡಿದೆನೇನೋ ಎನಿಸಿದರೂ
ನಾನು ಅದರ ಅನುಪಸ್ಥಿತಿ ಸಹಿಸದಾದೆ.
ಜಾಡು ಹಿಡಿದು ಕಾಡು ಹೊಕ್ಕೆ
ಬಿಸಿಲು ಮಳೆಯೆನ್ನದೆ ತಿರುಗಿದೆ, ಹುಡುಕಿದೆ
ಹಕ್ಕಿ ಸಿಗಲಿಲ್ಲ. ಆದರೆ ವರ್ತಮಾನ ಸಿಕ್ಕಿತು:

ಆ ಹಕ್ಕಿ ಅದಾಗಲೇ ಬೇರೆ ಬೇಟೆಗಾರನ ವಶದಲ್ಲಿದೆ ಅಂತ.
ತಿರುಗಾಡಿ ಹುಡುಕಾಡಿ ಬಳಲಿ ಸೋತುಹೋಗಿದ್ದ ನನಗೆ
ಈ ಮಾತು ಕೇಳಿ ಬೇಸರಕ್ಕಿಂತ ಹೆಚ್ಚು ಅಚ್ಚರಿಯೆನಿಸಿತು:
ಯಾರದೋ ಮನೆಯ ಹಕ್ಕಿ ಇಷ್ಟು ದಿನ ನನ್ನ ಮನೆಗೆ ಬಂದು
ನಿರುದ್ದೇಶ ಉಲ್ಲಾಸವನ್ನು ತನ್ನ ಉಲಿಯಿಂದ ತುಂಬುತ್ತಿತ್ತಲ್ಲ ಎಂದು...

ದಿಗ್ಭ್ರಮೆಯಿಂದ ಮನೆಗೆ ಮರಳಿದೆ.

ಅಚ್ಚರಿ ನೋಡಿ:
ಈ ಹುಚ್ಚಾಟಗಳ ಮಧ್ಯೆ ನನಗೆ ಗೊತ್ತೇ ಆಗದಂತೆ
ನನ್ನ ಮನದ ಮರದಲ್ಲಿ ಹೊಸ ಪ್ರೀತಿಹಕ್ಕಿಯೊಂದು ಬಂದು
ಬೀಡು ಬಿಟ್ಟು ಮೊಟ್ಟೆಯಿಟ್ಟು ಕಾವು ಕೊಡುತ್ತಿತ್ತು...!

Tuesday, May 22, 2007

ಒಂದು ಕೊಲೆ

Well, what to say about this sportive guy... He is really caring and loving guy... He is amazing, awesome and friendly. I neednot describe him as anyone close to him must surely be aware of his abilities. He is an all rounder.. Be it in the field of studies, sports or music. He is a champo...

ಕೌಶಂಭಿ ಎಂಬ ಹೆಸರಿನ ಇಪ್ಪತ್ನಾಲ್ಕು ವರ್ಷದ ಹುಡುಗಿ ತನ್ನ ಪ್ರಿಯಕರನನ್ನು describe ಮಾಡುವುದು ಹೀಗೆ. ಅವನ ಹೆಸರು ಮನೀಷ್. ಮನೀಷ್ ಠಾಕೂರ್. ಮೂಲತಃ ಕೋಲ್ಕತದವನು. ಗೋವಾದಲ್ಲಿ ಒಂದು ವೈಮಾನಿಕ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿರುವಾತ. ಶಾಲಾ ದಿನಗಳಿಂದಲೂ ಕೌಶಂಭಿ ಮತ್ತು ಮನೀಷ್ ಪರಿಚಿತರು. ಅವರು ಆರ್ಕುಟ್ ಕಮ್ಯುನಿಟಿಯಿಂದ ಮತ್ತೂ ಹತ್ತಿರಾಗಿದ್ದರು. ಪ್ರೀತಿಯಲ್ಲಿ ಬಿದ್ದಿದ್ದರು. ಜಾರ್ಖಂಡಿನವಳಾದ ಕೌಶಂಭಿಗೆ ಮುಂಬಯಿಯಲ್ಲಿ ಕೆಲಸ ಸಿಕ್ಕಿದ ನಂತರ ಮನೀಷ್ ಗೋವಾದಿಂದ ಪದೇಪದೇ ಇವಳನ್ನು ಕಾಣಲು ಬಂದುಹೋಗುತ್ತಿದ್ದನಂತೆ. ಏನಾಯಿತೋ ಏನೋ? ಮೊನ್ನೆ ಮೇ ಹದಿನಾಲ್ಕರಂದು ಅಂಧೇರಿಯ ಹೋಟೆಲ್ಲೊಂದರಲ್ಲಿ ಕೌಶಂಭಿ ಹೆಣವಾಗಿ ಬಿದ್ದಿದ್ದಾಳೆ. ಮನೀಷ್ ಅವಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಜತೆಯಲ್ಲೇ, ಅದು ಕೊಲೆಯಲ್ಲ; ಆತ್ಮಹತ್ಯೆ ಎಂಬ ಮಾತೂ ಕೇಳಿಬರುತ್ತಿದೆ.

ಇಂತಹ ಕೊಲೆಗಳು ದಿನವೂ ಆಗುತ್ತಿರುತ್ತವೆ. ಪ್ರೀತಿ ಮಾಡುವ ಜೀವಗಳು ಸ್ವಲ್ಪವೂ ಎಚ್ಚರದಿಂದಿರುವುದಿಲ್ಲ. ಆದರೆ ನನ್ನ ಗಮನ ಸೆಳೆದದ್ದು ಅವರ ಪ್ರೊಫೈಲುಗಳ ಲಿಂಕುಗಳು! ಇಲ್ಲಿ ನೋಡಿ, ಇದು ಕೌಶಂಭಿಯ ಆರ್ಕುಟ್ ಪ್ರೊಫೈಲಿನ ಲಿಂಕ್. ಅವಳ ಸ್ಕ್ರಾಪ್‍ಬುಕ್ಕಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಅವಳ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ. 'ಸ್ವರ್ಗದ ಬಾಗಿಲು ನಿನಗಾಗಿ ತೆರೆದಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಬರೆದಿದ್ದಾರೆ. ಕೆಲವರು 'How did he kill u?' ಅಂತ ಕೇಳಿದ್ದಾರೆ. 'Is this true?' ಅಂತ ಕೇಳಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಲಿಕ್ಕೆ ಅವಳೇ ಇಲ್ಲ. ಅವಳ ಪಾಸ್‍ವರ್ಡ್ ಬೇರೆ ಯಾರಿಗೂ ಗೊತ್ತಿಲ್ಲ. ಇನ್ನು ಅವಳ ಪ್ರೊಫೈಲಿಗೆ ಯಾರೂ log in ಆಗುವುದೇ ಇಲ್ಲ.

ಇತ್ತ ಮನೀಷ್‍ನ ಸ್ಕ್ರಾಪ್‍ಬುಕ್ಕಿನಲ್ಲಿ ಎಲ್ಲರೂ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವಾಚ್ಯ ಶಬ್ದಗಳನ್ನು ಬಳಸಿ ಬೈದಿದ್ದಾರೆ. 'ಸಾಯಿ ಮಗ್ನೇ' ಎಂದು ಶಪಿಸಿದ್ದಾರೆ. 'ನಿನಗೆ ಮರಣದಂಡನೆ ಆಗಲಿ' ಎಂದು ಚೀರಾಡಿದ್ದಾರೆ. 'ನೀನು ನಾಶವಾಗಿ ಹೋಗ್ತೀಯ ನೋಡ್ತಿರು' ಎಂದು ಎಗರಾಡಿದ್ದಾರೆ.

ನಮ್ಮ ನಡುವೆ ನಡೆದ ಒಂದು ಅಪರಾಧೀ ಕೃತ್ಯ, ಒಂದು ದುರ್ಘಟನೆ ಜನರನ್ನು ಹೇಗೆ ಪ್ರತಿಕ್ರಿಯಿಸುವಂತೆ ಮಾಡುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಕೌಶಂಭಿಯ ಸ್ಕ್ರಾಪ್‍ಬುಕ್ಕಿನಲ್ಲಿ ಕಾಣುವ ವಿಷಾಧ ಮತ್ತು ಮನೀಷನ ಸ್ಕ್ರಾಪ್‍ಬುಕ್ಕಿನಲ್ಲಿ ಕಾಣುವ ಆಕ್ರೋಶ... ಹಹ್! ನಾನೇನೂ ಹೇಳಬಯಸುವುದಿಲ್ಲ. ಬರೆಯಲಿಕ್ಕೆ ಮೂಡೂ ಇಲ್ಲ. ನೀವೇ ಒಮ್ಮೆ ಕಣ್ಣು ಹಾಯಿಸಿ.

[ಸುದ್ಧಿಯನ್ನು ತಲುಪಿಸಿದ ಸೋಮುಗೆ ಥ್ಯಾಂಕ್ಸ್.]

Wednesday, May 16, 2007

ಕೃಷ್ಣ ಮತ್ತು ಅಮ್ಮ

ಅಮ್ಮಾ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ... ಕೃಷ್ಣ ಗೋಗರೆಯುತ್ತಿದ್ದಾನೆ... ನೋಡಮ್ಮಾ, ಬೆಣ್ಣೆ ಗಡಿಗೆ ನೋಡಮ್ಮಾ: ಎಷ್ಟು ಮೇ...ಲೆ ಇದೆ. ನನ್ನ ಈ ಪುಟ್ಟ ಕೈಗಳು ಅಲ್ಲಿಗೆ ನಿಲುಕುತ್ತವೆಯೇ ಅಮ್ಮಾ...? ನಾನು ಕದ್ದಿಲ್ಲಮ್ಮ.. ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ...

ಮೊನ್ನೆ ಭಾನುವಾರ ಕಲಾಕ್ಷೇತ್ರದಲ್ಲಿ ಎಂ.ಡಿ. ಪಲ್ಲವಿ ಹಾಡುತ್ತಿದ್ದರೆ ನಾವೆಲ್ಲಾ ಮಂತ್ರಮುಗ್ಧರಂತೆ ಕುಳಿತಿದ್ದೆವು. ನಮ್ಮೆಲ್ಲರ ಕಣ್ಣ ಮುಂದೂ ಬೆಣ್ಣೆಯ ಮೆತ್ತಿದ ಬಾಯ ಮುದ್ದುಕೃಷ್ಣ ಓಡಾಡುತ್ತಿದ್ದ. ಅಮ್ಮ ಯಶೋಧೆ ಕೈಯಲ್ಲಿ ಬೆತ್ತ ಹಿಡಿದು ಕೃಷ್ಣನನ್ನು ಹೆದರಿಸುತ್ತಿದ್ದಳು. ಕೃಷ್ಣನ ಮುಗ್ಧ ಬೇಡಿಕೆಯ ಮುಂದೆ ಅವಳ ಕೋಪವೆಲ್ಲ ಇಳಿಯುತ್ತಿದ್ದುದು ನಮಗೆ ಕಾಣುತ್ತಿತ್ತು. ಕೊನೆಗೊಮ್ಮೆ ಅವಳು, ಇನ್ನೇನು ಅಳಲಿರುವ ಮುಖದ ಕಂದ ಕೃಷ್ಣನನ್ನು ನೋಡಲಾಗದೇ, ಬರಸೆಳೆದು ಅಪ್ಪಿ ಮುತ್ತಿಕ್ಕಿ ಎತ್ತಿಕೊಂಡಾಡುವಾಗ ನಾವೆಲ್ಲಾ ಚಪ್ಪಾಳೆ ತಟ್ಟುತ್ತಿದ್ದೆವು: ಹಾಡು ಮುಗಿದಿತ್ತು.

ಮಗು ಅಳುವುದನ್ನು ತಾಯಿ ಸಹಿಸಲಾರಳು. ತಡೆಹಿಡಿಯಲಾರದಷ್ಟು ಕೋಪ ಬಂದಾಗ ಒಂದೇಟು ಕೊಟ್ಟಾಳು: ಆದರೆ ಅದು ಅಳಲಾರಂಭಿಸಿದ ಮರುಕ್ಷಣ ಮತ್ತೆ ಅದನ್ನು ಎತ್ತಿ ಹೆಗಲ ಮೇಲೆ ಹಾಕಿಕೊಂಡು 'ಓಓಓ.. ಹೋಯ್ತು ಹೋಯ್ತು.. ಎಲ್ಲೀ..? ಎಲ್ಲಿ ಅಬ್ಬು ಆಗಿದ್ದು? ಇಲ್ಲಾ? ಏ.. ಹೋತು.. ಹುಸಿಕಳ್ಳ..!' ಎನ್ನುತ್ತಾಳೆ ಮತ್ತು ಮಗುವ ಅಳುವ ಕಡಲಲ್ಲಿ ನಗೆಯ ಹಾಯಿದೋಣಿ ತೇಲಿಬರುತ್ತದೆ. ಅಮ್ಮನ ಹೊಡೆತವನ್ನು ಅರೆಕ್ಷಣದಲ್ಲಿ ಮರೆತುಬಿಡುತ್ತದೆ ಮಗುವಿನ ಮುಗ್ದ ಮನಸು. ಅಮ್ಮನ ತೆಕ್ಕೆ ನೀಡುವಷ್ಟು ಸುಖವನ್ನು ಮತ್ತಿನ್ನೇನೂ ನೀಡಲಾರದೇನೋ?

ನನ್ನಮ್ಮನೂ ಹಾಗೇ. ನಮ್ಮನೆಯಲ್ಲಿ ನನಗೆ ಯಾರೂ ಹೊಡೆಯುತ್ತಿರಲಿಲ್ಲ. ಹೊಡೆತ ತಿನ್ನುವಂತಹ ತಪ್ಪನ್ನು ನಾನು ಮಾಡುತ್ತಲೇ ಇರಲಿಲ್ಲ! ನನ್ನ ಅಪ್ಪ-ಅಮ್ಮರಿಂದ ಇಷ್ಟರೊಳಗೆ ನಾನು ತಿಂದದ್ದು ಮ್ಯಾಕ್ಸಿಮಮ್ ಎಂದರೆ ಹದಿನೈದಿಪತ್ತು ಹೊಡೆತಗಳು. ಅದೂ ರಾಜನೆಲ್ಲಿ ಗಿಡದ ಸಣ್ಣ ಕೋಲಿನಿಂದ. ಹೊಡೆತ ತಿಂದದ್ದೂ ತಪ್ಪು ಮಾಡಿದ್ದಕ್ಕಲ್ಲ. ನಾನು ಚಿಕ್ಕವನಿದ್ದಾಗ ಊಟ ಸರಿಯಾಗಿ ಮಾಡುತ್ತಿರಲಿಲ್ಲ. ಅದಕ್ಕಾಗಿ ಅಮ್ಮ ಆ ಪುಟ್ಟ ಬರ್ಲು ಹಿಡಿದು ಎದುರು ನಿಂತು ಊಟ ಮಾಡಿಸುತ್ತಿದ್ದಳು. ನನ್ನ ಮುಖ ಸಿಕ್ಕಾಪಟೆ ಒಡೆಯುತ್ತಿತ್ತು. ಅದಕ್ಕೆ ಹಚ್ಚಿಕೋ ಅಂತ ಅಮ್ಮ ವ್ಯಾಸಲೀನ್ ಕೊಡುತ್ತಿದ್ದಳು. 'ಅದ್ನ ಹಚ್ಕೊಂಡ್ರೆ ಮುಂದೆ ಗಡ್ಡ-ಮೀಸೆ ಹುಟ್ಟೋದಿಲ್ವಂತೆ!' ಅಂತ ನನಗೆ ಯಾರೋ ಹೇಳಿಬಿಟ್ಟಿದ್ದನ್ನು ಬಲವಾಗಿ ನಂಬಿದ್ದರಿಂದ ನಾನು ಹಚ್ಚಿಕೊಳ್ಳುತ್ತಿರಲಿಲ್ಲ. ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ನನ್ನನ್ನು ಅಮ್ಮ ಹಿಡಿದು, ಎರಡು ಪೆಟ್ಟು ಕೊಟ್ಟು, ವ್ಯಾಸಲೀನ್ ಹಚ್ಚುತ್ತಿದ್ದಳು. ಈಗ ಕನ್ನಡಿಯ ಮುಂದೆ ನಿಂತರೆ ಒತ್ತಾಗಿ ಬಂದಿರುವ ಮೀಸೆ ಅಣಕಿಸುತ್ತದೆ: 'ಮಗನೇ ಶೇವ್ ಮಾಡ್ಕೋ' ಅಂತ!

ಮೊನ್ನೆ ಮಲ್ಲೇಶ್ವರಂನಲ್ಲಿ ಶಾಪಿಂಗಿನ ನೆಪದಲ್ಲಿ ಓಡಾಡುತ್ತಿದ್ದಾಗ ಚಂದ ಹುಡುಗಿಯರನ್ನು ನೋಡುತ್ತಾ ನನ್ನ ಗೆಳೆಯ 'ಕಣ್ಣಿಗೆ ತಂಪ್ ಆಗ್ತಾ ಇದೆ ಕಣಯ್ಯಾ..!' ಎಂದಾಗ ನನಗೆ ಹಳೆಯದೇನೋ ನೆನಪಾಯಿತು. ಚಿಕ್ಕವನಿದ್ದಾಗ ತಲೆಗೆ ಎಣ್ಣೆ ಹಾಕಿಕೊಳ್ಳಲಿಕ್ಕೆ ನನಗೆ ಅದೇಕೋ ತುಂಬಾ ಕಿರಿಕಿರಿಯಾಗುತ್ತಿತ್ತು. ಆದರೆ ಅಮ್ಮ ಬಿಡುತ್ತಿರಲಿಲ್ಲ. 'ಕಣ್ಣಿಗೆ ತಂಪು.. ದಿನಾನೂ ಹಾಕ್ಯಳವು..' ಎನ್ನುತ್ತಾ ಕೊಬ್ರಿ ಎಣ್ಣೆ ಗಿಂಡಿಯನ್ನು ಕೈಯಲ್ಲಿ ಹಿಡಿದು ಓಡಿಹೋಗುವ ನನ್ನನ್ನು ಅಟ್ಟಿಸಿಕೊಂಡು ಬರುತ್ತಿದ್ದಳು. ಕಟ್ಟೆಯ ಮೇಲೆ ಓಡುತ್ತೋಡುತ್ತಾ ಇಡೀ ಮನೆಯನ್ನು ಸುತ್ತು ಹೊಡೆಸುತ್ತಿದ್ದೆ ನಾನು. ಕೊನೆಗೆ ಸುಸ್ತಾಗುತ್ತಿದ್ದುದು ಅಮ್ಮನಿಗೇ. 'ಥೋ! ಎಂಥಾರು ಮಾಡ್ಕ್ಯ' ಎಂದು ಅಲ್ಲೇ ನಿಲ್ಲುತ್ತಿದ್ದಳು. ತಕ್ಷಣ ಅಮ್ಮನ ಬಳಿಗೆ ವಾಪಸು ಓಡಿ ನೆತ್ತಿಗೆ ಎಣ್ಣೆ ಹಾಕಿಸಿಕೊಂಡು ಬರುತ್ತಿದ್ದೆ. ಈಗ ಹುಡುಗಿಯರನ್ನು ನೋಡುವಾಗ ಸಿಗುವ ತಂಪಿಗಿಂತಲೂ ತಂಪು ಆ ಎಣ್ಣೆಯಲ್ಲಿರುತ್ತಿತ್ತು.

ಶಾಲೆಗೆ ಹೊರಟ ನನ್ನ ಯುನಿಫಾರಂನ್ನು ಅಮ್ಮ ಚಡ್ಡಿಯೊಳಗೆ ಸಿಕ್ಕಿಸಿ 'ಇನ್' ಮಾಡುತ್ತಿದ್ದಳು. ನಂಗೆ ಕಚಗುಳಿಯಾಗಿ 'ಅಯ್ಯೋ ಸಾಕು ಬಿಡಮ್ಮ' ಅನ್ನುತ್ತಿದ್ದೆ. ಅಮ್ಮ ಬಿಡುತ್ತಿರಲಿಲ್ಲ. ಕ್ರಾಪು ತಿದ್ದಿ ತಲೆ ಬಾಚಿ ಮುಖಕ್ಕೆ ಪೌಡರು ಬಳಿದು ಕೋತಿಮರಿಗೆ ಸಿಂಗಾರ ಮಾಡಿ ಕಳುಹಿಸುತ್ತಿದ್ದಳು. ಶಾಲೆಯಿಂದ ವಾಪಸು ಬಂದಕೂಡಲೇ ನನಗೆ ಅವಲಕ್ಕಿ-ಮೊಸರು ಕೊಡುತ್ತಿದ್ದಳು.

ಹಂಡೆಯಲ್ಲಿನ ಬಿಸಿನೀರನ್ನು ಚೊಂಬಿನಲ್ಲಿ ಮೊಗೆದುಕೊಳ್ಳಲು ನನಗೆ ಕೈ ಎಟುಕುತ್ತಿರಲಿಲ್ಲವಾದ್ದರಿಂದ ಅಮ್ಮನೇ ದಿನಾನೂ ಸ್ನಾನ ಮಾಡಿಸುತ್ತಿದ್ದುದು. ಅವಳು ಹಂಡೆಯ ಬಿಸಿನೀರನ್ನು ಮೊದಲು ಒಂದು ಬಕೆಟ್ಟಿಗೆ ಹಾಕಿ, ಅದಕ್ಕೆ ತಣ್ಣೀರು ಬೆರೆಸಿ, ಹೂಬೆಚ್ಚಗಿನ ನೀರು ಮಾಡಿ ನನಗೆ ಸ್ನಾನ ಮಾಡಿಸುತ್ತಿದ್ದಳು. ಮೈಮುಖಕ್ಕೆಲ್ಲಾ ಸೋಪು ಹಚ್ಚಿ, ಕಣ್ಣು ಮುಚ್ಚಿಕೊಂಡ ನನಗೆ ಏನೇನೂ ಕಾಣುತ್ತಿರಲಿಲ್ಲವಾಗಿರಲು, ಅಮ್ಮ ಎಲ್ಲೆಲ್ಲೆಲ್ಲ ತಿಕ್ಕಿ, 'ಸಾಕು ಅಮ್ಮಾ.. ಕಣ್ಣು ಉರಿತು.. ನೀರು ಹಾಕು...' ಎಂದು ನಾನು ಕೂಗಿಕೊಂಡಾಗ ಹೂಬೆಚ್ಚಗಿನ ನೀರನ್ನು ಹೊಯ್ಯುತ್ತಿದ್ದಳು. ಆ ಬಿಸಿಬಿಸಿ ಹಬೆಯಾಡುವ ಚೊಂಬ ನೀರುಗಳ ಮಧ್ಯೆ ಒಂದೇ ಒಂದೇ ಚೊಂಬು ತಣ್ಣೀರು ಹೊಯ್ದುಬಿಡುತ್ತಿದ್ದಳು ತುಂಟಿ ಅಮ್ಮ... ನನಗೆ ಆಗ ಮೈಯೆಲ್ಲಾ ರೋಮಾಂಚನವಾಗಿ, ಚಳಿಯಾಗಿ ನಡುಗಿ, ಮೈಪುಳಕದ ಖುಷಿಗೆ 'ಏ.... ಅಮ್ಮಾ.....' ಎನ್ನುತ್ತಾ ಬಚ್ಚಲ ತುಂಬಾ ತೈತೈ ಎಂದು ಕುಣಿದಾಡುತ್ತಿದ್ದೆ. ಅಮ್ಮನ ಸೀರೆಯೆಲ್ಲಾ ಒದ್ದೆಯಾಗುತ್ತಿತ್ತು. ತುಂಬಾ ಚಿಕ್ಕವನಿದ್ದಾಗ ದುಂಡಗೆ ನಿಂತು ಅಮ್ಮನ ಬಳಿ ಸ್ನಾನ ಮಾಡಿಸಿಕೊಳ್ಳುತ್ತಿದ್ದ ನಾನು ಆಮೇಲಾಮೇಲೆ ಅಂಡರ್‌ವೇರ್ ಬಿಚ್ಚಲಿಕ್ಕೆ ನಾಚಿಕೆ ಪಟ್ಟುಕೊಳ್ಳತೊಡಗಿದೆ. ಅಮ್ಮ, ತಲೆ, ಮೈ, ಕೈ, ಕಾಲು -ಎಲ್ಲಾ ತಿಕ್ಕಿ ಸ್ನಾನ ಮಾಡಿಸಿ, ಬಕೆಟ್ಟಿನಲ್ಲಿ ಕೊನೆಯ ನಾಲ್ಕು ಚೊಂಬು ನೀರು ಉಳಿಸಿ, 'ಚಡ್ಡಿ ಬಿಚ್ಚಿ ಅಲ್ಲೆಲ್ಲಾ ತೊಳ್ಕ ನೀನೇ' ಎಂದು ಬಾಗಿಲು ವಾರೆ ಮಾಡಿಕೊಂಡು ಹೋಗುತ್ತಿದ್ದಳು.

ಚಿಕ್ಕವನಿದ್ದಾಗ ನಾನು ಓದಿನಲ್ಲಿ ಚುರುಕಿದ್ದದ್ದರಿಂದ ನನಗೆ ಪಾಠ ಹೇಳಿಕೊಡುವ ಕಷ್ಟವೇನು ಅಮ್ಮ-ಅಪ್ಪ ಇಬ್ಬರಿಗೂ ಬರಲಿಲ್ಲ. ಆದರೂ ಮಗ್ಗಿ ಹೇಳುವಾಗ ತಪ್ಪಾದರೆ ಅಮ್ಮ ಎಚ್ಚರಿಸುತ್ತಿದ್ದಳು. ದಿನವೂ ಸಂಜೆ 'ಚೈತ್ರ ವೈಶಾಖ', 'ಪ್ರಭವ ವಿಭವ', 'ಮೇಷ ವೃಷಭ' ಇತ್ಯಾದಿ ಬಾಯಿಪಾಠ ಮಾಡಿಸುತ್ತಿದ್ದಳು. ತಪ್ಪದೇ ದೇವರಿಗೆ ನಮಸ್ಕಾರ ಮಾಡಿಸುತ್ತಿದ್ದಳು. ಊಟಕ್ಕೆ ಮುನ್ನ 'ಅನ್ನಪೂರ್ಣೆ ಸದಾಪೂರ್ಣೆ..' ಹೇಳಿಸುತ್ತಿದ್ದಳು. ಸಂಜೆ ದೀಪ ಹಚ್ಚಿದಾಕ್ಷಣ 'ದೀಪಂಜ್ಯೋತಿ ಪರಬ್ರಹ್ಮ..' ಹೇಳಿಸುತ್ತಿದ್ದಳು. ಬೆಳಗ್ಗೆ ಎದ್ದಕೂಡಲೇ 'ನಮಸ್ತೇ ನಾರಾಯಣಾಯ..' ಹೇಳಿಸುತ್ತಿದ್ದಳು. "ರಾತ್ರಿ ಮಲಗುವ ಮುನ್ನ 'ಹರೀ ಶಿವ ಮೃತ್ಯುಂಜಯ' ಹೇಳಿಕೊಂಡು ಮಲಗಿದರೆ ಕೆಟ್ಟ ಕನಸು ಬೀಳುವುದಿಲ್ಲ" ಎನ್ನುತ್ತಿದ್ದಳು. ಅವೆಲ್ಲವನ್ನೂ ನಾನು ಚಾಚೂ ತಪ್ಪದೇ ಮಾಡುತ್ತಿದ್ದೆ.

ಅದೊಂದು ರಾತ್ರಿ ನನಗೆ ನೂರಾಮೂರು ಡಿಗ್ರಿ ಜ್ವರ ಬಂದಿತ್ತು. ಅಪ್ಪ ಸೈಕಲ್ಲಲ್ಲಿ ಉಳವಿಗೆ ಹೋಗಿ ನಾರಾಯಣಮೂರ್ತಿ ಡಾಕ್ಟರನ್ನು ಎಬ್ಬಿಸಲು ನೋಡಿದರೆ ಅವರು ಬಾಗಿಲೇ ತೆರೆಯಲಿಲ್ಲವಂತೆ. ಕೊನೆಗೆ ಮೆಡಿಕಲ್ ಶಾಪಿನವರ ಮನೆಗೆ ಹೋಗಿ, ಅವರನ್ನು ಅಂಗಡಿಗೆ ಕರಕೊಂಡು ಬಂದು, ಎರಡು ಸ್ಟ್ರಾಂಗ್ ಮಾತ್ರೆ ಕೊಂಡುತಂದಿದ್ದ ಅಪ್ಪ. ಬೆಳಗಾಗುವ ವರೆಗೂ ಅಮ್ಮ ನಿದ್ರೆ ಮಾಡದೇ, ನನ್ನ ಬಳಿಯೇ ಕುಳಿತು, ವದ್ದಳ್ಳಿ ಶ್ರೀಧರ ಸ್ವಾಮಿಗಳಿಗೆ ಹರಕೆ ಹೊತ್ತುಕೊಂಡು, ನನ್ನ ಹಣೆಯ ಮೇಲೆ ಒದ್ದೆ ಬಟ್ಟೆ ಹಾಕುತ್ತಾ ಕುಳಿತಿದ್ದುದು ನನಗೆ ಆ ಮಂಪರಿನಲ್ಲೂ ಅರಿವಾಗುತ್ತಿತ್ತು. ಅಪ್ಪ ಉಳವಿಯಿಂದ ವಾಪಸ್ ಬಂದು ಸಮಾಧಾನ ಮಾಡುವವರೆಗೆ ಅಮ್ಮ ಸಣ್ಣಗೆ ಬಿಕ್ಕುತ್ತಿದ್ದುದು ನನ್ನ ಕಿವಿಯಲ್ಲಿ ಇನ್ನೂ ಇದೆ.

. . . . . . . .

ಹಾಗೇ ನೋಡುತ್ತಾ ಹೋದರೆ ಈ ಜಗದಲ್ಲಿ ಎಷ್ಟೊಂದು ತುಂಟ ಕೃಷ್ಣರು... ಅವರಿಗೆಲ್ಲಾ ಎಷ್ಟು ಒಳ್ಳೇ ಅಮ್ಮಂದಿರು... ಈಗ ನಾನು ಬೆಂಗಳೂರಿನಲ್ಲಿದ್ದೇನೆ. ಅಮ್ಮ ಊರಲ್ಲಿದ್ದಾಳೆ. ಕರುಳ ಬಳ್ಳಿಯ ಬಂಧ, ಹೌದು, ಬೆಸೆದುಕೊಂಡೇ ಇದೆ. ಆದರೆ ನಡುವೆ ಎಷ್ಟು ದೊಡ್ಡ ಶರಧಿಯಿದೆ..! ಈಗ ನನಗೆ ಅಮ್ಮ ಹೊಡೆಯುವುದಿಲ್ಲ, ಮುಖಕ್ಕೆ ವ್ಯಾಸಲೀನ್ ಹಚ್ಚುವುದಿಲ್ಲ, ತಲೆಗೆ ಎಣ್ಣೆ ಹಾಕುವುದಿಲ್ಲ, ಸ್ನಾನ ಮಾಡಿಸುವುದಿಲ್ಲ, ಬಾಯಿಪಾಠ ಮಾಡಿಸುವುದಿಲ್ಲ... ಈಗ ನಾನು ದೇವರಿಗೆ ನಮಸ್ಕಾರ ಮಾಡುವುದಿಲ್ಲ... ಈಗ ಜ್ವರ ಬಂದರೆ ನಾನೇ ಡಾಕ್ಟರ ಬಳಿಗೆ ಹೋಗಿ ಬರಬೇಕು... ಆದರೂ ದಿನವೂ ಫೋನ್ ಮಾಡಿ ನನ್ನ ಆರೋಗ್ಯ ವಿಚಾರಿಸಿಕೊಳ್ಳುತ್ತಾಳೆ, 'ಹೋಟೆಲ್ಲಿನಲ್ಲಿ ತಿನ್ನಬೇಡ, ಮನೆಯಲ್ಲೇ ಮಾಡ್ಕೊಳ್ಳಿ' ಅಂತಾಳೆ, 'ಸ್ಯಾಲರಿ ಜಾಸ್ತಿ ಮಾಡಿದ್ರಾ?' ಕೇಳ್ತಾಳೆ, 'ರೋಡ್ ಕ್ರಾಸ್ ಮಾಡ್ಬೇಕಾದ್ರೆ ಹುಷಾರಿ' ಎನ್ನುತ್ತಾಳೆ, 'ಯಾವಾಗ ಊರಿಗೆ ಬರ್ತೀಯಾ?' ಕೇಳ್ತಾಳೆ...

ಈ ವರ್ಷದ 'ಮದರ್ಸ್ ಡೇ'ಗೆ ಸ್ವಲ್ಪ ವಿಶೇಷವಿತ್ತು. 'ಮದರ್ಸ್ ಡೇ'ಯ ಹಿಂದಿನ ದಿನವೇ ನನ್ನ ಬರ್ಥ್ ಡೇ! ಅಮ್ಮನ ಹೊಟ್ಟೆಯೊಳಗಿಂದ ನಾನು ಕೊಸರಾಡಿ ಗುದ್ದಾಡಿ ಹೊರಬಂದು 'ಅಮ್ಮನನ್ನು ಅಮ್ಮನನ್ನಾಗಿ' ಮಾಡಿದ್ದ ದಿನ! ಹಿಂದಿನ ದಿನ ಅಮ್ಮ ಫೋನ್ ಮಾಡಿ ನನಗೆ ವಿಶ್ ಮಾಡಿದ್ದಳು. ಮರುದಿನ ಬೆಳಗ್ಗೆ ನಾನು ಫೋನ್ ಮಾಡಿ ಅವಳಿಗೆ ವಿಶ್ ಮಾಡಿದೆ! ನಾನು 'ಹ್ಯಾಪಿ ಮದರ್ಸ್ ಡೇ' ಅನ್ನುವುದಕ್ಕಿಂತ ಮುಂಚೆ ಅವಳು 'ನೀನು ಅರಾಮಿದೀಯಾ? ತಿಂಡಿ ಆಯ್ತಾ?' ಅಂತ ಕೇಳ್ತಾಳೆ... ಅಮ್ಮನ ಈ ಪ್ರೀತಿಗೆ, ಕಾಳಜಿಗೆ ನನ್ನ ಕಣ್ಣು ತುಂಬಿಕೊಳ್ಳುತ್ತವೆ.. ಕೃಷ್ಣನನ್ನು ಅಮ್ಮ 'ಏಯ್.. ಏನಾಯ್ತೋ' ಎನ್ನುತ್ತಾ ಎತ್ತಿಕೊಳ್ಳುತ್ತಾಳೆ...

Wednesday, May 09, 2007

ಗೋಸಮ್ಮೇಳನದ ನಂತರ...

ಸ್ವಲ್ಪ ಮುಂಚೆಯೇ ಎಚ್ಚರಾಯಿತು. ಇನ್ನೂ ಪೂರ್ತಿ ಬೆಳಗಾಗಿಲ್ಲ. ಆದರೆ ಆಗಲೇ ಸಾಕಷ್ಟು ಬೆಳಕಿದೆ. ಮಂದಣ್ಣ ಮೈಮುರಿದೆದ್ದು ಇನ್ನೂ ಮಲಗಿದ್ದ ತನ್ನ ಸಹಕೆಲಸಗಾರರನ್ನು ದಾಟಿ ಆ ಕೊಠಡಿಯಿಂದ ಹೊರಬಂದ. ಯಾಕೋ ಏನೋ? ಮಂದಣ್ಣನಿಗೆ ಹೀಗೆ ಬೆಳಗಾ ಮುಂಚೆ ಎದ್ದಾಗಲೆಲ್ಲ ಇಬ್ಬನಿ ಬೀಳುತ್ತಿದೆ ಎಂದೆನಿಸುತ್ತದೆ. ಮುಂಜಾನೆಯ ಪರಿಸರವೇ ಹಾಗಿರುತ್ತದೆ. ಹಕ್ಕಿಗಳ ಕಲರವವೂ ನಿಶ್ಯಬ್ದದ ಭಾಗವೇ ಆಗಿರುತ್ತದೆ. ಮಂದಣ್ಣ ಬಹಿರ್ದೆಸೆಗೆಂದು ಹೊರಟ.

ಮಂದಣ್ಣನ ಹೆಂಡತಿ ಬಿಟ್ಟುಹೋಗಿ ಆಗಲೇ ವರ್ಷಕ್ಕೆ ಬಂದಿತ್ತು. ಕರ್ವಾಲೋ ಸಾಹೇಬರು ಕೊಡಿಸುತ್ತೀನಿ ಎಂದಿದ್ದ ಕೆಲಸ ಸಹ ಇನ್ನೂ ಆಗಿರಲಿಲ್ಲ. ಬೀಮ್ಯಾನ್ ಆಗಿ ತೆಗೆದುಕೊಳ್ಳಲಿಕ್ಕೆ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ, ಅಲ್ಲಿ ಇಲ್ಲಿ ಜೇನು ಕಿತ್ತುಕೊಂಡು, ಶಿಕಾರಿ ಮಾಡಿಕೊಂಡು ಓಡಾಡಿಕೊಂಡಿದ್ದ ಮಂದಣ್ಣ ತೇಜಸ್ವಿ ತೀರಿಕೊಂಡಮೇಲೆ ಇತ್ತೀಚಿಗೆ ತುಂಬಾ ಮಂಕಾಗಿಬಿಟ್ಟಿದ್ದ. ಯಾರಾದರೂ 'ಯಾಕೋ?' ಎಂದು ಕೇಳಿದರೆ 'ಏನಿಲ್ಲ.. ಸುಮ್ನೇ' ಎನ್ನುತ್ತಿದ್ದ. ಮೂಡಿಗೆರೆ ಬಸ್‍ಸ್ಟಾಂಡಿನಲ್ಲಿ ಏನೂ ಕೆಲಸವಿಲ್ಲದೇ ಅಲೆಯುತ್ತಿದ್ದ ಮಂದಣ್ಣನನ್ನು ಯಾರೋ ಕರೆದು ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಗೋಸಮ್ಮೇಳನದ ಬಗ್ಗೆ ಹೇಳಿದ್ದರು. 'ಹ್ಯಾಗೂ ಏನೂ ಕೆಲಸ ಇಲ್ಲ. ಮಠಕ್ಕಾದ್ರೂ ಹೋಗು. ಒಂದಷ್ಟು ಕೆಲಸ ಮಾಡಿಕೊಂಡು ಊಟ ಮಾಡ್ಕೊಂಡು ಹಾಯಾಗಿರು. ನಿನಗೆ ದನ ಕಾಯೋ ಕೆಲಸ ಏನು ಹೊಸದಲ್ವಲ್ಲ.. ನಿನ್ನ ಇಷ್ಟದ ಕೆಲಸಾನೇ.. ಹೋಗಿ ಅಲ್ಲಿ ಯಾರನ್ನಾದ್ರೂ ಕಂಡು ಗೋಶಾಲೆಯಲ್ಲಿ ಕೆಲಸ ಕೊಡಿ ಅಂತ ಕೇಳು. ಖಂಡಿತ ಕೊಡ್ತಾರೆ' ಎಂದಿದ್ದರು. ಜೇಬಿನಲ್ಲಿದ್ದ ಮೂವತ್ತು ರೂಪಾಯಿ ಖರ್ಚು ಮಾಡಿಕೊಂಡು ಉಟ್ಟಬಟ್ಟೆಯಲ್ಲೇ ಮಠಕ್ಕೆ ಬಸ್ಸು ಹತ್ತಿ ಬಂದಿದ್ದ ಮಂದಣ್ಣ.

ಇಲ್ಲಿಗೆ ಬಂದಮೇಲೆ ಎಲ್ಲವೂ ಸರಾಗವಾಯಿತು. ಮಾಡಲಿಕ್ಕೆ ಸಿಕ್ಕಾಪಟ್ಟೆ ಕೆಲಸವಿದ್ದುದರಿಂದ 'ಎಷ್ಟು ಜನ ಇದ್ರೂ ಬೇಕು ಬಾರಪ್ಪಾ. ಕೆಲಸ ಮಾಡು, ಊಟ ಮಾಡು, ಆಮೇಲೆ ಕೂಲೀನೂ ಕೊಡ್ತೀವಿ' ಅಂತಂದು ಮಠದ ಕಾರ್ಯಕರ್ತರು ಅವನನ್ನು ತಮ್ಮ ಜೊತೆ ಸೇರಿಸಿಕೊಂಡಿದ್ದರು. ಇನ್ನೂ ಗೋಸಮ್ಮೇಳನಕ್ಕೆ ಒಂದು ವಾರ ಇತ್ತು. ಚಪ್ಪರಕ್ಕೆ ಗುಂಡಿ ತೋಡುವುದು, ನೀರಿನ ಪೈಪು ಎಳೆಯುವುದು, ಅಲ್ಲೆಲ್ಲೋ ಕಟ್ಟೆ ಕಟ್ಟುವುದು, ಹೀಗೆ ಮಂದಣ್ಣ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡ. ತಾನು ಹಿಂದೆಲ್ಲೂ ಕಂಡಿರದಿದ್ದ ಅನೇಕ ಬಗೆಯ ಹೊಸ ಹಸುಗಳನ್ನು ಕಂಡು ಹಿರಿಹಿರಿ ಹಿಗ್ಗಿದ. ಅವುಗಳ ಮೈದಡವಿ ಹೊಸ ರೋಮಾಂಚನ ಅನುಭವಿಸಿದ.

ಒಂಭತ್ತು ದಿನಗಳ ಗೋಸಮ್ಮೇಳನ ಅದ್ಧೂರಿಯಾಗಿ ನಡೆಯಿತು. ದಿನವೂ ಬರುತ್ತಿದ್ದ ಲಕ್ಷಗಟ್ಟಲೆ ಜನಗಳ ಮಧ್ಯೆ ಮಂದಣ್ಣ ಕಳೆದುಹೋಗಿದ್ದ. ಅವನನ್ನು ತೋಟದಲ್ಲಿ ಕಟ್ಟಿಹಾಕಿದ್ದ ಮಲೆನಾಡು ಕಗ್ಗ ದನಗಳ ಉಸ್ತುವಾರಿ ನೋಡಿಕೊಳ್ಳಲಿಕ್ಕೆ ನಿಯಮಿಸಿದ್ದರು. ಅವುಗಳಿಗೆ ಹೊತ್ತುಹೊತ್ತಿಗೆ ಹಿಂಡಿ, ಹತ್ತಿಕಾಳು, ನೀರು, ಅಕ್ಕಚ್ಚು ಕೊಟ್ಟುಕೊಂಡು ಬರುವ ಜನಗಳನ್ನು ನೋಡುತ್ತಾ ಮಂದಣ್ಣ ಆರಾಮಾಗಿದ್ದ. ಆಗಲೇ ಬಂದು ಹದಿನೈದು ದಿನಗಳಾಗಿತ್ತಾದ್ದರಿಂದ ಅವನಿಗೆ ಇಲ್ಲಿನ ಕೆಲಸಗಾರರೆಲ್ಲರೂ ಹೆಚ್ಚೂಕಮ್ಮಿ ಪರಿಚಯವಾಗಿಬಿಟ್ಟಿದ್ದರು. ಕಾರ್ಗಡಿಯವಳೇ ಆದ ರಂಗಮ್ಮ ಎಂಬುವವಳು ಮಾತ್ರ 'ಮಂದಣ್ಣಾ ಮಂದಣ್ಣಾ' ಎಂದು ಕರೆಯುತ್ತಾ ಅದೇಕೋ ಇವನ ಹತ್ತಿರವೇ ಸುಳಿಯುತ್ತಿರುತ್ತಿದ್ದಳು. ದಪ್ಪ ಮೂಗುತಿಯ ರಂಗಮ್ಮ ಸುಮ್ಮನೇ ನಗುವಾಗ ಕಾಣುವ ಅವಳ ಹಳದಿ ಹಲ್ಲುಗಳ ನಡುವಿನ ಬಿರುಕುಗಳಲ್ಲಿ ಮಂದಣ್ಣನಿಗೆ ಹೊಸ ಆಸೆಗಳ ಬ್ರಹ್ಮಾಂಢ ಕಾಣಿಸುತಿತ್ತು.

ಈಗ ಗೋಸಮ್ಮೇಳನ ಮುಗಿದು ನಾಲ್ಕು ದಿನಗಳಾಗಿದ್ದರೂ ಮಂದಣ್ಣನಿಗೆ ವಾಪಸು ಊರಿಗೆ ಹೋಗುವ ಮನಸ್ಸಾಗದೇ ಇರುವುದಕ್ಕೆ ಕಾರಣ ರಂಗಮ್ಮನೆಡೆಗಿನ ಸೆಳೆತವಷ್ಟೇ ಆಗಿರದೆ ಈ ಮಠದ ಪರಿಸರವೂ ಆಗಿತ್ತು. ಈ ಪರಿಸರದಲ್ಲೇ ಏನೋ ಒಂದು ಆಕರ್ಷಣೆಯಿತ್ತು. ಅಲ್ಲದೇ ಊರಿಗೆ ಹೋಗಿ ಮಾಡಲಿಕ್ಕೆ ಕೆಲಸವೇನೂ ಇರಲಿಲ್ಲ. ಹೀಗಾಗಿ ಮಂದಣ್ಣ ನಿಶ್ಚಿಂತೆಯಿಂದ ಇಲ್ಲೇ ಉಳಿದುಬಿಟ್ಟಿದ್ದ. ಇವನಷ್ಟೇ ಅಲ್ಲದೇ ಇನ್ನೂ ಅನೇಕ ಕೆಲಸಗಾರರು ಇಲ್ಲಿಯೇ ತಂಗಿದ್ದರು. ಮಠದವರು ಇವರಿಗಾಗಿಯೇ ಗುರುಕುಲದ ಕೊಠಡಿಯೊಂದನ್ನು ಬಿಟ್ಟುಕೊಟ್ಟಿದ್ದರು. ಅಷ್ಟು ದೊಡ್ಡ ಸಮ್ಮೇಳನ ಮುಗಿದಿದೆ ಅಂದಮೇಲೆ ಅದು ಸೃಷ್ಟಿಸಿದ ತ್ಯಾಜ್ಯವೂ ಅಷ್ಟೇ ಇರುತ್ತದೆ. ಹಾಕಿರುವ ಚಪ್ಪರವನ್ನು ತೆಗೆಯಬೇಕು. ತಾತ್ಕಾಲಿಕ ವ್ಯವಸ್ಥೆಗಾಗಿ ಮಾಡಿದ್ದ ನಲ್ಲಿಗಳು, ಹಾಕಿದ್ದ ಶಾಮಿಯಾನಾಗಳು, ನಿರ್ಮಿಸಿದ್ದ ಜೋಪಡಿಗಳು, ಕಟ್ಟಿದ್ದ ಕಟ್ಟೆಗಳು, ನಿಲ್ಲಿಸಿದ್ದ ಕಂಬಗಳು ಎಲ್ಲವನ್ನೂ ಕಿತ್ತು ಮಟ್ಟ ಮಾಡಬೇಕಿತ್ತು. ಕಸ ವಿಲೇವಾರಿ ಮಾಡಬೇಕಿತ್ತು. ಜೋರು ಮಳೆ ಹಿಡಿಯುವುದರ ಒಳಗೆ ಸೋಗೆಯನ್ನೆಲ್ಲಾ ಸುರಕ್ಷಿತ ಜಾಗಕ್ಕೆ ಸಾಗಿಸಬೇಕು. ಇನ್ನೂ ಸಾಕಷ್ಟು ಕೆಲಸಗಳಿದ್ದವು. ಮಂದಣ್ಣ ಇತರೆ ಕೆಲಸಗಾರರೊಂದಿಗೆ ಈ ಕೆಲಸಗಳನ್ನು ಮಾಡಿಕೊಂಡು ಇದ್ದ.

ಬಹಿರ್ದೆಸೆಗೆಂದು ಮಂದಣ್ಣ ಟಾಯ್ಲೆಟ್ಟೊಂದನ್ನು ಹೊಕ್ಕ. ಈಗ ಮಠದ ಆವರಣದಲ್ಲಿ ಒಟ್ಟು ಮೂರು ಸಾವಿರ ಟಾಯ್ಲೆಟ್ಟುಗಳಿವೆ! ದಿನವೂ ಒಂದೊಂದಕ್ಕೆ ಹೋದರೂ ಎಲ್ಲಾ ಟಾಯ್ಲೆಟ್ಟುಗಳಿಗೆ ಹೋಗಲಿಕ್ಕೆ ಎಂಟು ವರ್ಷ ಬೇಕು! ಮಂದಣ್ಣನಿಗೆ ಈ ವಿಚಾರ ಹೊಳೆದು ನಗು ಬಂತು. ಇಷ್ಟಕ್ಕೂ ಎಂಟು ವರ್ಷ ತಾನು ಇಲ್ಲೇ ಇರುತ್ತೇನಾ? -ಕೇಳಿಕೊಂಡ ಮಂದಣ್ಣ. ಉತ್ತರ ಹೊಳೆಯಲಿಲ್ಲ. ಎಲ್ಲಕ್ಕೂ ಹೆಚ್ಚಾಗಿ ಆ ಬಿಂಕದ ಸಿಂಗಾರಿ ರಂಗಮ್ಮನ ನಡವಳಿಕೆಯೇ ಮಂದಣ್ಣನಿಗೆ ಅರ್ಥವಾಗದ ಪ್ರಶ್ನೆಯಾಗಿತ್ತು.

ಬಹಿರ್ದೆಸೆ ಮುಗಿಸಿದ ಮಂದಣ್ಣ ಈ ಮುಂಜಾನೆಯ ಪರಿಸರದಲ್ಲಿ ಒಂದು ಸುತ್ತು ಓಡಾಡಿಕೊಂಡು ಬಂದರೆ ಚೆನ್ನಾಗಿರುತ್ತದೆ ಎಂದೆನಿಸಿ 'ಪರಿಕ್ರಮ ಪಥ'ದಲ್ಲಿ ಚಲಿಸತೊಡಗಿದ. ಸಮ್ಮೇಳನಕ್ಕೆಂದೇ ನಿರ್ಮಿಸಿದ ಹಾದಿ ಇದು. ಮಠದ ಮುಖ್ಯದ್ವಾರದಿಂದ ಶುರುವಾಗುವ ಈ ಹಾದಿಯಲ್ಲೇ ಸಾಗಿದರೆ ಮೊದಲು ಸಿಗುವುದು ಭಜನಾ ಮಂದಿರ. ಅದು ಈಗ ಖಾಲಿ ಹೊಡೆಯುತ್ತಿದೆ. ರಾತ್ರಿ ಬಂದುಹೋದ ಮಳೆಗೆ ಕಟ್ಟೆಯೆಲ್ಲಾ ಕಿತ್ತುಹೋಗಿದೆ. ಮುಂದೆ ಸಾಗಿದರೆ ಸಿಗುವುದು ವೃಂದಾವನೀ. ಒಂಭತ್ತು ದಿನಗಳ ಕಾಲ ಎಡಬಿಡದೆ ತೇಲುತ್ತಿತ್ತು ಕೊಳಲ ಗಾನ ಇಲ್ಲಿ... ಹುಲ್ಲು ಚಪ್ಪರ ಹೊದಿಸಿದ ಆ ಗುಡಿಸಲಿನಂತ ಕಟ್ಟೆಯ ಮಧ್ಯದಲ್ಲಿರುವ ಮರ ಇನ್ನೂ ತೂಕಡಿಸುತ್ತಿತ್ತು. ಇವನು ಹೋಗಿ ಕೆಮ್ಮಿದ್ದೇ ಅದಕ್ಕೆ ಎಚ್ಚರವಾಗಿಬಿಟ್ಟಿತು. ಮಂದಣ್ಣನಿಗೆ ಅದರ ಕಷ್ಟ ಅರ್ಥವಾಯಿತು. ಪ್ರಕೃತಿಯ ಮಾತು ಅರ್ಥ ಮಾಡಿಕೊಳ್ಳುವುದರಲ್ಲಿ ಮಂದಣ್ಣನಿಗಿಂತ ನಿಷ್ಣಾತರು ಮತ್ಯಾರಿದ್ದಾರೆ ಹೇಳಿ? ಮರ ಹೇಳಿತು: 'ರಾತ್ರಿಯಿಡೀ ನಿದ್ರೆಯಿಲ್ಲ ಕಣೋ ಮಂದಣ್ಣಾ... ಒಂಭತ್ತು ದಿನ ಕೊಳಲ ದನಿ ಕೇಳೀ ಕೇಳೀ ನನಗೆ ಹುಚ್ಚೇ ಹಿಡಿದುಬಿಟ್ಟಿದೆ. ಆ ವೇಣುವಾದನ ಹರಿದು ಬರುತ್ತಿದ್ದಾಗ ಎಂಥಾ ನಿದ್ರೆ ಬರುತ್ತಿತ್ತು ಅಂತೀಯಾ..? ಈಗ ಆ ದನಿಯಿಲ್ಲ.. ತುಂಬಾ ಬೇಸರವಾಗುತ್ತಿದೆ ಮಂದಣ್ಣಾ..' ಮಂದಣ್ಣ ಸುಮ್ಮನೆ ಒಮ್ಮೆ ಆ ಮರದ ಕಾಂಡವನ್ನು ತಬ್ಬಿ, ಸವರಿ ಮುಂದೆ ನಡೆದ.

ವಸ್ತು ಸಂಗ್ರಹಾಲಯವನ್ನು ಆಗಲೇ ತೆರವುಗೊಳಿಸಲಾಗಿತ್ತು. ಅಲ್ಲಿ ಈಗ ಕೇವಲ ಕಂಬಗಳು ಇದ್ದವು. ಪಕ್ಕದಲ್ಲಿದ್ದ ಗೋಲೋಕದಲ್ಲಿ ದನಗಳು ಇನ್ನೂ ಅಲ್ಲೇ ಇದ್ದರೂ ಅವುಗಳ ಎದುರಿನ ಬೋರ್ಡುಗಳನ್ನು ಕಿತ್ತುಹಾಕಿದ್ದರು. ಪಕ್ಕದ ದೇವಸ್ಥಾನದ ದೇವರು ಮಾತ್ರ ಇನ್ನೂ ಬರಬೇಕಿರುವ ಅರ್ಚಕರಿಗಾಗಿ ಕಾಯುತ್ತಿದ್ದಂತಿದ್ದ. ಗರ್ಭಗುಡಿಯ ಕತ್ತಲೆಗೆ ಒಂದು ಕೈಮುಗಿದು ಮಂದಣ್ಣ ಗೋಶಾಲೆಯತ್ತ ನಡೆದ.

ಪಕ್ಕದ ಊರಿನ ರಮೇಶ ಎಂಬುವವನು ಎದುರಾದ. "ಏನ್ಲಾ ಇಷ್ಟು ಬೇಗ ಎದ್ದು ಎಲ್ಲಿಗಯ್ಯಾ ಹೊರಟಿದೀಯಾ?" ಕೇಳಿದ ಮಂದಣ್ಣ. "ಸಾಗರಕ್ಕೆ ಹೋಗೋದಿತ್ತು ಮಂದಣ್ಣ. ಸ್ವಲ್ಪ ಕೆಲ್ಸ ಐತೆ" ಎಂದ ರಮೇಶ, "ಅಲ್ಲಾ ಮಂದಣ್ಣಾ, ನಿಂಗೆ ಗೊತ್ತೈತಾ? ಮಠದ ಸ್ವಾಮಿಗಳು ದುಡ್ಡು ತಿಂದಿದಾರೆ ಅಂತೆಲ್ಲಾ ಪೇಪರ್ನಾಗೆ ಬರ್ದಿದಾರೆ ಕಣಣ್ಣಾ.. ನೀನೇ ನೋಡಿದ್ಯಲ್ಲ, ಎಷ್ಟೊಂದು ಜನ ಎಷ್ಟೊಂದು ಹಣ ಕೊಟ್ಟವರೆ.. ಇಲ್ಲಿ ಖರ್ಚು ಮಾಡಿರೋದಕ್ಕಿಂತ ಡಬ್ಬಲ್ ಹಣ ಬಂದೈತಂತೆ ಮಠಕ್ಕೆ.. ಏನು ಮಾಡ್ತಾರೋ ಏನೋ..? ಆಮೇಲೇ.." ಮಾತನ್ನು ಮಧ್ಯದಲ್ಲೇ ತುಂಡರಿಸಿದ ಮಂದಣ್ಣ, "ಏಯ್ ಸುಮ್ನಿರೋ ರಮೇಶಾ.. ಏನೇನೋ ಹೇಳ್ಬೇಡ.. ಅವ್ರು ಬರೆದ್ರಂತೆ, ಇವ್ನು ಓದಿದ್ನಂತೆ.. ಸುಮ್ನಿರು ಸಾಕು.. ಹಾಗೆಲ್ಲಾ ಎಲ್ಲಾ ಕಡೆ ಹೇಳ್ಕೋಂತಾ ಹೋಗ್ಬೇಡಾ" "ಅಯ್ಯೋ ನಂಗೇನ್ ಗೊತ್ತು ಮಂದಣ್ಣ.. ನಾನೇನು ಕಂಡಿದೀನಾ? ಪೇಪರ್‌ನವ್ರು ಬರ್ದಿದಾರೆ ಅಂತ ಹೇಳ್ದೆ ಅಷ್ಟೇ. ಅಲ್ದೇ ಅದೇನೋ ವೈಜ್ಞಾನಿಕ ಸಂಶೋಧನೆ ಮಾಡಿದ್ರಂತಲ್ಲ ಹಿಂದಿನ ವರ್ಷ, ಅದೆಲ್ಲ ಸುಳ್ಳು ಅಂತನೂ ಬರ್ದಿದಾರೆ..! ಅದಿರ್ಲೀ, ನೀನು ಯಾವಾಗ ವಾಪಸ್ ಊರಿಗೆ ಹೋಗ್ತಿದೀಯಾ?" "ಹೋಗ್ಬೇಕು ರಮೇಶಾ.. ನಮ್ ತೇಜಸ್ವಿ ಸರ್ ಇದ್ದಿದಿದ್ರೆ ನನ್ನನ್ನ ಇಲ್ಲಿಗೆಲ್ಲ ಬರ್ಲಿಕ್ಕೇ ಬಿಡ್ತಿರ್ಲಿಲ್ಲ.. 'ಅವ್ಕೆಲ್ಲಾ ಏನಕ್ ಹೋಗ್ತೀಯ ಮುಂಡೇಮಗ್ನೇ, ತೋಟದಲ್ಲಿ ಒಂದು ಜೇನು ಕಟ್ಟಿದೆ. ಪೆಟ್ಟಿಗೆಗೆ ತುಂಬ್ಕೊಡು ಬಾ' ಅಂತಿದ್ರು.. ಅಲ್ದೇ ಈಗ ಕರ್ವಾಲೋ ಸಾಯೇಬ್ರೂ ಅದೇನೋ ಕೆಲ್ಸ ಅಂತ ಫಾರಿನ್ನಿಗೆ ಹೋದ್ರಲ್ಲ.. ನಂಗೆ ಅಲ್ಲಿ ಏನೂ ಕೆಲ್ಸ ಇಲ್ಲ.. ಅವ್ರು ಇದ್ದಿದಿದ್ರೆ ನೀನು ಅದೇನೋ ಅಂದ್ಯಲ್ಲ, ವೈಜ್ಞಾನಿಕ ಅಂತ, ಅದರ ಬಗ್ಗೆ ಕರೆಕ್ಟಾಗಿ ಹೇಳಿರೋರು.. ಕರ್ವಾಲೋ ಸಾಯೇಬ್ರು ಅಂದ್ರೆ ಏನು ಸಾಮಾನ್ಯ ಅಲ್ಲಪ್ಪಾ... ಆವಾಗ ಒಂದ್ಸಲ ನಾನೂ, ತೇಜಸ್ವಿ ಸರ್ರೂ, ಕರ್ವಾಲೋ ಸಾಯೇಬ್ರೂ ಸೇರಿ ಒಂದು ಓತಿಕ್ಯಾತ ಹಿಡಿಲಿಕ್ಕೇಂತ...." ಮಂದಣ್ಣ ಶುರುಮಾಡಿದ್ದ. ಅಷ್ಟರಲ್ಲಿ ರಮೇಶ "ಮಂದಣ್ಣ, ನಂಗೆ ನಿನ್ ಕಥೆ ಎಲ್ಲಾ ಕೇಳ್ಲಿಕ್ಕೆ ಟೈಮಿಲ್ಲ. ಬಸ್ಸು ಹೊಂಟೋಯ್ತದೆ. ನಾಳೆ ಸಿಗ್ತೀನಿ.." ಎಂದವನೇ ಕಾರ್ಗಡಿಯ ದಾರಿ ಹಿಡಿದ.

ಮಂದಣ್ಣ ಗೋಶಾಲೆಗೆ ಹೋಗುತ್ತಿದ್ದಂತೆಯೇ ಎತ್ತುಗಳು, ದನಗಳು ಅವುಗಳ ಪುಟ್ಟ ಕರುಗಳು ಎದ್ದುನಿಂತವು. ಅಮೃತಮಹಲ್ ದನ ಅದೇಕೋ ತುಂಬಾ ಉಚ್ಚಿಕೊಂಡಿತ್ತು. ಎಲ್ಲಾ ಜಾನುವಾರುಗಳದ್ದೂ ಮೈತೊಳೆಯಬೇಕು ಎಂದುಕೊಂಡ ಮಂದಣ್ಣ. ಗೋಸಮ್ಮೇಳನ ಮುಗಿದ ಎರಡು ದಿನಗಳಿಗೆ ಹುಟ್ಟಿದ್ದ ಕರುವೊಂದು ತನ್ನ ತಾಯಿಯೆಡೆಗೆ ಓಡಲು ಕಣ್ಣಿ ಜಗ್ಗುತ್ತಿತ್ತು. 'ತನ್ನ ತಾಯ ಹಾಲನ್ನು ಕರು ಕುಡಿಯದಂತೆ ಮಾಡುತ್ತೇವೆ ನಾವು.. ನಮ್ಮಷ್ಟು ಕೃತಘ್ನರು ಬೇರೆ ಯಾರಾದರೂ ಇದ್ದಾರಾ..?' -ಗುರುಗಳು ಹೇಳಿದ್ದು ಮಂದಣ್ಣನಿಗೆ ನೆನಪಾಯಿತು. ತಕ್ಷಣ ಆ ಕರುವಿನತ್ತ ಧಾವಿಸಿದ ಅವನು ಅದರ ಕಣ್ಣಿ ಕಳಚಿದ. ನಾಲ್ಕೇ ಹೆಜ್ಜೆಗೆ ಓಡಿ ತಾಯಿಯನ್ನು ಸೇರಿದ ಕರು ಕೆಚ್ಚಲಿಗೆ ಬಾಯಿ ಹಾಕಿತು. ಕರುವ ಬಾಯ ಜೊಲ್ಲು ತಗುಲಿದ ರೋಮಾಂಚನಕ್ಕೆ ತಾಯಿ ತಕ್ಷಣ ಸೊರೆಯಿತು. ಕತ್ತು ಹಿಂದೆ ತಿರುಗಿಸಿ ಕರುವಿನ ಮೈಯನ್ನು ನೆಕ್ಕತೊಡಗಿತು. ಕರು ಬಾಲವನ್ನು ನಿಮಿರಿಸಿಕೊಂಡು ಹಾಲು ಕುಡಿಯುತ್ತಿತ್ತು.. 'ಕುಡಿ ಕುಡಿ.. ನಿನಗೆ ತೃಪ್ತಿಯಾಗುವವರೆಗೆ ಕುಡಿ..' ಮಂದಣ್ಣ ಮನಸಿನಲ್ಲೇ ಅಂದುಕೊಂಡ. ಮೊಲೆಯ ತೊಟ್ಟಿನಿಂದ ಹೊರಚಿಮ್ಮಿದ ಹಾಲಿನಲ್ಲಿ ಮಂದಣ್ಣನಿಗೆ ರಂಗಮ್ಮನ ಮುಖ ಕಾಣಿಸತೊಡಗಿತು...

Friday, May 04, 2007

||ವಂದೇ ಗೋಮಾತರಂ||

ಇದು, 2007 ಏಪ್ರಿಲ್ 21ರಿಂದ 29 ರ ವರೆಗೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದಲ್ಲಿ ನಡೆದ ವಿಶ್ವ ಗೋ ಸಮ್ಮೇಳನದ ಕೆಲ ಚಿತ್ರಗಳು. ಜಗತ್ತಿನಾದ್ಯಂತ ಗೋಹತ್ಯೆ ನಿಷೇಧಿಸಿ, ಗೋವಿನ ಉಪಯೋಗಗಳ ಬಗ್ಗೆ ಅರಿವು ಮೂಡಿಸುವ ಮಹಾನ್ ಕೈಂಕರ್ಯಕ್ಕೆ ಕೈ ಹಾಕಿದ್ದಾರೆ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು. ಅವರ ಸಂಕಲ್ಪದಂತೆ ನಡೆದ ಭರ್ಜರಿ ಸಮ್ಮೇಳನದ ಕೊನೆಂii ಎರಡು ದಿನಗಳ ಸಮಾರಂಭದಲ್ಲಿ ನಾನು ಭಾಗಿಯಾಗಿದ್ದೆ. ನನಗೆ ಕಂಡಂತೆ ಅದರ ವರದಿ:


“ಗೋಮಾತಾಕೀ”
“ಜೈ”
“ವಂದೇ”
“ಗೋಮಾತರಂ”
“ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಮದ್ರಾಘವೇಶ್ವರ ಭಾರತೀ ಸ್ವಾಮಿ ಮಹಾರಾಜ್ ಕೀ”
“ಜೈ”


ಅಲ್ಲೊಂದು ಹದವಾದ ಕತ್ತಲಿತ್ತು. ಅಲ್ಲಲ್ಲಿ ಚುಮುಕಿಸಿದಂತೆ ಹಿತವಾದ ಬೆಳಕಿತ್ತು. ತೆಂಗಿನ ಗರಿಯ ಮೇಲೆ ಮಲಗಿ, ಆಗಸಕ್ಕೆ ಮುಖ ಮಾಡಿ, ಮೋಡಗಳ ಮಧ್ಯೆ ಓಡುತ್ತಿದ್ದ ಚಂದ್ರನನ್ನು ನೋಡುತ್ತಾ ನಾವು ಮಲಗಿದ್ದೆವು. ಪಕ್ಕದಲ್ಲಿ ಶ್ರೀನಿಧಿ. ಅವನ ಪಕ್ಕ ವಿಕಾಸ. ಆಚೆ ಗಿರಿ. ಈಚೆ ಮಧು. ಅತ್ತ ಗುರು. ಇತ್ತ ಗಣೇಶ. ಈ ಆಚೆ, ಈಚೆ, ಅಕ್ಕ, ಪಕ್ಕ, ಅತ್ತ, ಇತ್ತಗಳೆಲ್ಲವನ್ನೂ ಒಂದು ಮಾಡುತ್ತಿದ್ದುದ್ದು ಮೆಲು ವೇಣು ನಿನಾದ. ಈ ಕೊಳಲ ಇಂಪು ತೇಲಿಬರುವಾಗ ತನ್ನೊಂದಿಗೆ ತಂಗಾಳಿಯ ತಂಪನ್ನೂ, ತಳಿರ ಕಂಪನ್ನೂ, ದೀಪದ ಬೆಳಕ ಕೆಂಪನ್ನೂ ಹೊತ್ತು ತಂದು ನಮ್ಮ ಮೇಲೆ ಸುರಿಯುತ್ತಿದ್ದರೆ ನಮಗೆ ಅಲ್ಲೇ ಸಣ್ಣಗೆ ಜೋಂಪು. ಅದಕ್ಕೆ ಸ್ವಲ್ಪ ಹೊತ್ತಿಗೆ ಮುಂಚೆ ಬಂದು ಹೋಗಿದ್ದ ಮಳೆಯ ನೀರು ಇನ್ನೂ ನಮ್ಮ ಕೆಳಗಿನ ಭೂಮಿಯಲ್ಲಿ ಇಂಗುತ್ತಿತ್ತು. ಮಳೆನೀರು ಕುಡಿದ ಧಾರಿಣಿ ಗಂಧವತಿಯಾಗಿ ಕೊಳಲ ಕೊರಳ ದನಿಗೆ ಕಿವಿಗೊಟ್ಟು ನಮ್ಮೊಂದಿಗೆ ತಾನೂ ತೂಕಡಿಸುತಿತ್ತು. ರಾತ್ರಿ ಹಗಲಿನೆಡೆಗೆ ನಿಧನಿಧಾನವಾಗಿ ಸರಿಯುತಿತ್ತು.


ಗುಡಿಸಲಿನಂತಹ ಮನೆಯಲ್ಲಿ ಪ್ರತಿದಿನವೂ ಭಜನೆ. ನಿರಂತರ ಭಜನೆ. ರಾಮಭಜನೆ. ಗೋಭಜನೆ. ತಾಳದ ಟಿಣ್‌ಟಿಣ್. ಹಾರ್ಮೋನಿಯಂನ ಗುಂಯ್. ಮಧ್ಯದಲ್ಲಿ ಸ್ಥಾಪಿತವಾಗಿದ್ದ ಬಣ್ಣದ ಗೋಮಾತೆಯ ಪ್ರತಿಮೆ. ಪರಿಕ್ರಮ ಪಥದಲ್ಲಿ ನಡೆದು ಬಂದ ಜನ ಹೊರಗೆ ಚಪ್ಪಲಿ ಬಿಟ್ಟು ಒಳಬಂದು ಅರೆನಿಮಿಷ ಇಲ್ಲಿ ನಿಂತು ಮುಂದೆ ಸಾಗುತ್ತಿದ್ದರು. ಹೊರಹೊರಟರೆ ಮತ್ತೆ ಪಾನಕವಿದೆ. ‘ಹರೇ ರಾಮ’ ಅಂದರಾಯಿತು. ಎಷ್ಟು ಬೇಕಿದ್ದರೂ ಕುಡಿಯಬಹುದು. ಬೆಲ್ಲದ ಪಾನಕ. ಎರಡು ಲೋಟ ಕುಡಿದರೆ ಸಾಕು: ದಣಿವೆಲ್ಲಾ ಮಾಯ. ಬಿಸಿಲಿನಲ್ಲೂ ತಂಪು. ‘ಹರೇ ರಾಮ’ ಅನ್ನಬೇಕು ಅಷ್ಟೇ.


ಶಾಮಿಯಾನದ ಕೆಳಗೆ ವೇದಿಕೆಯನ್ನೇ ನೋಡುತ್ತಾ ಕುಳಿತಿದ್ದ ಕೆಂಪು, ನೀಲಿ, ಬಿಳಿ, ಕಾಫಿ ಬಣ್ಣದ ಕುರ್ಚಿಗಳು. ಹಾದುಹೋಗುವ ಜನ ‘ರಾತ್ರಿ ಯಕ್ಷಗಾನ ನಡೆಯೋದು ಇಲ್ಲೇಯಂತೆ’ ಎಂದು ಮಾತಾಡಿಕೊಳ್ಳುವುದನ್ನು ಅವು ಕೇಳಿಸಿಕೊಳ್ಳುತ್ತಿದ್ದವು. ಹಿಂದಿನ ರಾತ್ರಿಯಿಡೀ ನಿದ್ರೆಗೆಟ್ಟು ಆಟ ನೋಡಿದ ಜನರನ್ನು ಕೂರಿಸಿಕೊಂಡಿದ್ದ ಸುಸ್ತು ಅವುಗಳ ಬೆನ್ನಲ್ಲಿತ್ತು. ಚಂಡೆ, ಮದ್ದಲೆ, ಜಾಗಟೆ, ಹಾರ್ಮೋನಿಯಂ ಶಬ್ದಗಳೊಂದಿಗೆ ಬೆರೆತು ಬರುತ್ತಿದ್ದ ಚಿಟ್ಟಾಣಿಯ ಗೆಜ್ಜೆಯ ಕಿರುದನಿ ಇನ್ನೂ ಈ ಕುರ್ಚಿಗಳ ಕಾಲಬುಡದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅರ್ಜುನ ಅಬ್ಬರಿಸಿದ ಸದ್ದಿಗೆ ಬೆಚ್ಚಿಬಿದ್ದ ನೀಲಿ ಕುರ್ಚಿ ಬಿಸಿಲಿಗೆ ಬಣ್ಣ ಕಳೆದುಕೊಳ್ಳುತಿತ್ತು. ರಾತ್ರಿ ಕುಳಿತಿದ್ದವನೊಬ್ಬ ತನ್ನ ಕೈಯಿಂದ ಒಂದೇ ಸಮನೆ ಬಡಿಯುತ್ತಲೇ ಇದ್ದ ಪರಿಣಾಮವಾಗಿ ಕೆಂಪು ಕುರ್ಚಿಯೊಂದರ ಕೈ ಇನ್ನೂ ನೋಯುತಿತ್ತು. ಈ ಕುರ್ಚಿಗಳಿಗೆ ಹೀಗೆ ಯಕ್ಷಗಾನ ನೋಡೀ ನೋಡೀ ಎಷ್ಟರಮಟ್ಟಿಗೆ ಅಭ್ಯಾಸವಾಗಿಬಿಟ್ಟಿತ್ತೆಂದರೆ ಅವುಗಳ ಮೇಲೆ ಸುಮ್ಮನೆ ಯಾರಾದರೂ ಕುಳಿತರೂ ಸಾಕು, ‘ಶ್ರೀ ಗುರುಗಣಾದಿಪತಯೇ ನಮಃ...’ ಎಂದು ಪದ್ಯವನ್ನು ಶುರುಹಚ್ಚಿಯೇಬಿಡುತ್ತಿದ್ದವು: ಕುಳಿತವರ ಮೆದುಳಿನಲ್ಲಿ.


‘ಹರೇ ರಾಮ.. ಎಲ್ಲರೂ ಸಾಲಾಗಿ ಬನ್ನಿ...’ ‘ತಟ್ಟೆ ತಗೋಳಿ..’ ‘ಬಡಿಸ್ತೇವೆ, ನಿಮ್ಮ ಹತ್ರಾನೇ ಬರ್ತೇವೆ..’ ಹತ್ತು ನಿಮಿಷಕ್ಕೆ ಇಪ್ಪತ್ತು ಸಾವಿರ ಜನಕ್ಕೆ ಊಟ! ಎಷ್ಟು ಜನಕ್ಕೆ? ಇಪ್ಪತ್ತು ಸಾವಿರ ಜನಕ್ಕೆ! ತಮಾಶೆಯಲ್ಲ; ಮೈಕಿನಲ್ಲಿ ಕೂಗುತಿದ್ದುದು. ನಾನೇ ಕಿವಿಯಾರೆ ಕೇಳಿಸಿಕೊಂಡದ್ದು. ಹತ್ತು ನಿಮಿಷಕ್ಕೆ ಇಪ್ಪತ್ತು ಸಾವಿರ ಜನಕ್ಕೆ ಊಟ. ಒಂದು ದಿನಕ್ಕೆ, ಅಲ್ಲಲ್ಲ, ಒಂದು ಹೊತ್ತಿಗೆ ನಾಲ್ಕು ಲಕ್ಷ ಜನಗಳಿಗೆ ಊಟ. ಅನ್ನ-ಹುಳಿ-ಮಜ್ಜಿಗೆ-ಉಪ್ಪಿನಕಾಯಿ-ಪಾಯಸ: ಸಾಕೇ ಸಾಕು, ಮೃಷ್ಠಾನ್ನ ಭೋಜನ. ‘ಇನ್ನೊಂದ್ ಸ್ವಲ್ಪ ಹಾಕ್ಕೊಳಿ’ -ಒತ್ತಾಯ. ಊಟ ಮುಗಿದಾಕ್ಷಣ ಬಂದುನಿಲ್ಲುವ ವ್ಯಾನು. ಸ್ಟೀಲ್ ತಟ್ಟೆಯನ್ನು ಒಯ್ದು ಅದರಲ್ಲಿಟ್ಟರಾಯಿತು. ಕೈ ತೊಳೆದುಕೊಂಡರಾಯಿತು.

ಬಹುಶಃ ಎಲ್ಲರೂ ಮಾಡಿದ್ದು ಅಷ್ಟೇ! ಆದರೆ ನಾವು ಸ್ವಲ್ಪ ಅಡುಗೆಮನೆಯ ಒಳಗಡೆ ಹೋದೆವು. ದಿಗ್ಭ್ರಮೆ ಕಾದಿತ್ತು ನಮಗಲ್ಲಿ... ತೊಳೆಯಲಿಕ್ಕೆಂದು ತಂದು ಹಾಕಿದ್ದ ರಾಶಿ ರಾಶಿ ತಟ್ಟೆಗಳು... ಆಟೋದಲ್ಲಿ ತಂದು ತಂದು ಸುರಿಯುತ್ತಿದ್ದರು. ಹೆಣ್ಣುಮಕ್ಕಳು ಕುಕ್ಕರಗಾಲಲ್ಲಿ ಕುಳಿತು ಒಂದೊಂದೇ ತಟ್ಟೆಯನ್ನು ತೊಳೆಯುತ್ತಿದ್ದರೆ ಇದು ಯಾವತ್ತಿಗಾದರೂ ತೊಳೆದು ಮುಗಿಯುತ್ತದೆಯೋ ಎಂದೆನಿಸುವಂತಿತ್ತು ಆ ರಾಶಿ. ಮುಂದೆ ನಡೆದರೆ ಅನ್ನದ ರಾಶಿ. ಆಲೆಮನೆಯಲ್ಲಿ ಹೂಡಿರುತ್ತಾರಲ್ಲ, ಅಷ್ಟು ದೊಡ್ಡ ಒಲೆಯ ಮೇಲೆ ಬೇಯುತ್ತಿರುವ ಅನ್ನ-ಹುಳಿ. ಸ್ಟೀಮಿನಿಂದ ಹೊರಬಿದ್ದ ನೀರು ಹರಿದು ಹೋಗಲು ಚರಂಡಿಯಷ್ಟು ದೊಡ್ಡ ಒಗದಿ. ಸರಸರನೆ ಏನೇನೋ ತಡಕಾಡುತ್ತಾ ಓಡಾಡುತ್ತಿರುವ ಕಾರ್ಯಕರ್ತರು. ಆ ವ್ಯವಸ್ಥೆಯನ್ನು ನೋಡಿ ನಾವು ದಂಗು. ಕೈಮುಗಿದುಬಿಟ್ಟೆವು.


ಟೀವಿಯ ಪರದೆಯಲ್ಲಿ ಹಿಡಿಯಲಾಗದಷ್ಟು ದೊಡ್ಡ ವೇದಿಕೆಯ ಮೇಲೆ ನಡೆಯುತ್ತಿದ್ದ ನಿರಂತರ ಕಾರ್ಯಕ್ರಮಗಳು. ಯಾವ್ಯಾವುದೋ ಊರು, ರಾಜ್ಯ, ದೇಶಗಳಿಂದ ಬಂದ ತರಹೇವಾರಿ ಸ್ವಾಮೀಜಿಗಳು; ಸ್ಥಳೀಯ, ರಾಜ್ಯ-ರಾಷ್ಟ್ರ ರಾಜಕೀಯದ ಪುಢಾರಿಗಳು; ಯಾವುದೋ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದವರು; ಸಾಧುಗಳು; ಸಂತರು; ಸಜ್ಜನರು.... ಮೈಕು ಹಿಡಿದು ರಾಘವೇಶ್ವರರನ್ನು ಹೊಗಳುವವರು ಒಂದಷ್ಟು ಜನ, ಗೋವಿನ ಬಗ್ಗೆ ಗುಣಗಾನ ಮಾಡುವವರು ಒಂದಷ್ಟು ಜನ, ‘ಗೋಹತ್ಯೆಯನ್ನು ಸರ್ಕಾರ ನಿಷೇಧಿಸಬೇಕು’ ಎಂದು ಕೂಗಾಡುವವರು ಒಂದಷ್ಟು ಜನ, ‘ರಾಮಚಂದ್ರಾಪುರ ಇಂದು ಗೋವರ್ಧನ ಗಿರಿಯಾಗಿದೆ’ ಎಂದು ಹೇಳಿ ಚಪ್ಪಾಳೆ ಗಿಟ್ಟಿಸುವವರು ಒಂದಷ್ಟು ಜನ... ಇವರೆಲ್ಲರಿಗೂ ಜಾಗ ಮಾಡಿಕೊಡುತ್ತಾ, ಕರೆದು ಕೂರಿಸುತ್ತಾ, ಉಪಚಾರ ಮಾಡುತ್ತಿದ್ದ ಹಳದಿ ಸಮವಸ್ತ್ರದ ಕಾರ್ಯಕರ್ತರು...

ಮೂಕಪ್ಪ ಶಿವಾಚಾರ್ಯ ಸ್ವಾಮೀಜಿ! ಅದು ಎರಡು ಎತ್ತುಗಳ ಹೆಸರು. ಎರಡನ್ನೂ ಸೇರಿಸಿ ಒಂದು ಹೆಸರಿರಬೇಕು. ಅದ್ಯಾವುದೋ ಸ್ವಾಮೀಜಿ ದೇಶಸಂಚಾರಕ್ಕೆ ಹೊರಟಿದ್ದರಂತೆ. ಅವರು ಹಾಗೆ ಸಂಚಾರ ಮಾಡುತ್ತಾ ಮಾಡುತ್ತಾ ಹಾವೇರಿಯ ಗುಡ್ಡದ ಮಲ್ಲಾಪುರ ಎಂಬಲ್ಲಿಗೆ ಬಂದು ದೇಹತ್ಯಾಗ ಮಾಡಿದರಂತೆ. ದೇಹತ್ಯಾಗ ಮಾಡುವ ಮುನ್ನ ತಮ್ಮದೆಲ್ಲವನ್ನೂ ಒಂದು ಎತ್ತಿಗೆ ಧಾರೆಯೆರೆದು, ಆ ಎತ್ತನ್ನು ತಮ್ಮ ‘ಮರಿ’ ಯನ್ನಾಗಿ ಘೋಷಿಸಿದರಂತೆ. ಅಂದಿನಿಂದ ಆ ಎತ್ತಿನ ಸಂತತಿಯನ್ನೇ ಗುರುವೆಂದು ಪೂಜಿಸಿಕೊಂಡು ಪಾಲಿಸಿಕೊಂಡು ಬರುತ್ತಿದ್ದಾರೆ ಅಲ್ಲಿಯ ಜನ. ಒಬ್ಬ ಸ್ವಾಮೀಜಿಗೆ ಸಲ್ಲುವ ಯಾವತ್ತೂ ಗೌರವ, ಪೂಜೆ, ಪುನಸ್ಕಾರಗಳು ಆ ಜೋಡಿ ಎತ್ತಿಗೆ ಸಲ್ಲುತ್ತದೆ. ಈ ಮೂಕಪ್ಪ ಶಿವಾಚಾರ್ಯ ಸ್ವಾಮೀಜಿ ಆ ಸಾಲಿನಲ್ಲಿ ಮೂವತ್ತೈದನೇ ಗುರು. ಇಂತಹ ‘ವಿಚಿತ್ರ’ ಎಂದೆನಿಸುವ ಅದೆಷ್ಟೋ ಸಂಗತಿಗಳು ಅಲ್ಲಿ ದಿನವೂ ಕಾದಿದ್ದವು.


ಸಮಾರೋಪ ಸಮಾರಂಭದ ಕೊನೆಯಲ್ಲಿ ಇದ್ದುದು ಮೆರವಣಿಗೆ. ಮೊದಲು ಬಂದದ್ದು ಆರೇಳು ಗೋವುಗಳು. ಆಮೇಲೆ ಎಂಟು ಎತ್ತಿನ ಗಾಡಿಗಳು. ಆಮೇಲೆ ಎರಡು ಕುದುರೆಗಳು. ನಂತರ ವಿವಿಧ ಜನಪದ ತಂಡಗಳು. ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ನೂರಾರು ಜನಪದ ತಂಡಗಳು. ಮರಕಾಲುಗಳು, ಚಿತ್ರವಿಚಿತ್ರ ವೇಷಗಳು, ಛದ್ಮವೇಷಗಳು, ತಲೆಯ ಮೇಲಿನ ಕೊಡವನ್ನು ತಲೆಯಿಂದಲೇ ಬ್ಯಾಲೆನ್ಸ್ ಮಾಡುತ್ತಿದ್ದ ಕಲಾವಿದೆ ಮಹಿಳೆಯರು, ಸಾರೋಟುಗಳು, ಪ್ರತಿಮೆಗಳು.... ಓಹೋಹೋಹೋ..! ಕೊನೆಯಲ್ಲಿ ಕಾಮಧೇನುವನ್ನು ಹೊತ್ತ ರಥ. ಪಕ್ಕದಲ್ಲಿ ಆಸೀನರಾಗಿರುವ ರಾಘವೇಶ್ವರರ ಮುಖದಲ್ಲಿ ಎಂದೂ ಮಾಸದ ಮುಗುಳ್ನಗೆ. ತನ್ನ ಕರುವಿನೊಂದಿಗೆ ನಿಂತಿದ್ದ ಆ ಕಾಮಧೇನು ಬೆಳ್ಳಿ ಬೆಳಕಿನಲ್ಲಿ ಅದೆಷ್ಟು ಚೆನ್ನಾಗಿ ಕಾಣುತ್ತಿತ್ತೆಂದರೆ ಹಾಗೇ ನೋಡುತ್ತಿದ್ದರೆ ಎಲ್ಲಿ ಅದಕ್ಕೆ ದೃಷ್ಟಿಯಾಗಿಬಿಡುತ್ತದೋ ಎಂದೆನೆಸಿ ನಾವೇ ಕಣ್ಣು ಬೇರೆ ಕಡೆ ಹೊರಳಿಸಿದೆವು.


ಮಠದ ಮುಖ್ಯದ್ವಾರದಿಂದ ಶುರುವಾಗಿದ್ದ ಮೆರವಣಿಗೆ ಪರಿಕ್ರಮ ಪಥದಲ್ಲಿ ಸಾಗಿಬಂದು ಮುಖ್ಯ ವೇದಿಕೆಯನ್ನು ಸೇರಿದ ಮೇಲೆ ಮಹಿಳಾಮಣಿಯರಿಂದ ಲಕ್ಷ ದೀಪಾರತಿ. ಉರಿಯುತ್ತಿದ್ದ ಎಲ್ಲಾ ವಿದ್ಯುದ್ದೀಪಗಳನ್ನೂ ಆರಿಸಲಾಯಿತು. ಕೇವಲ ಈ ಪುಟ್ಟ, ಆದರೆ ಲಕ್ಷ ದೀಪಗಳ ಬೆಳಕು. ಆ ಬೆಳಕಿನಲ್ಲಿ ಗುರುಗಳು ಭಾವುಕರಾಗಿ ಹೇಳಿದ್ದಿಷ್ಟು: ‘ಎಲ್ಲಾ ಮೌಢ್ಯದ, ಕೃತಕ ಬೆಳಕೂ ಆರಿವೆ. ಇಲ್ಲಿ ಈಗ ಇರುವುದು ಕೇವಲ ಜ್ಞಾನದ, ಧರ್ಮದ ಬೆಳಕು. ಇದು ಗೋಮಾತೆಯೆಡೆಗಿನ ಪ್ರೀತಿಯ ಬೆಳಕು. ಈ ಬೆಳಕು ಈಗ ಬೆಳಗಲು ಶುರುವಾಗಿದೆ. ಇನ್ನು ಇದು ಗೋವನ್ನು ರಕ್ಷಿಸುವ ದಾರಿದೀಪವಾಗಲಿದೆ. ಧರ್ಮಕ್ಕಾಗಿ ಯುದ್ಧ ಶುರುವಾಗಿದೆ.’


ಹಾಗಾದರೆ ಅಲ್ಲಿದ್ದದ್ದು ಏನು? ಶ್ರದ್ಧೆಯೇ? ಗೌರವವೇ? ಭಕ್ತಿಯೇ? ಪೂಜೆಯೇ? ಆವೇಶವೇ? ಹುಚ್ಚೇ?

ನನ್ನ ಪ್ರಕಾರ ಇವೆಲ್ಲಕ್ಕಿಂತ ಹೆಚ್ಚಾಗಿ ಅಲ್ಲಿದ್ದದ್ದು ಪ್ರೀತಿ. ‘ಗೋಮಾತಾಕೀ ಜೈ’ ಎಂಬ ಮಾರ್ದವ ಉದ್ಘೋಷದಲ್ಲಿದ್ದುದು ಪ್ರೀತಿ. ಮುರಳಿಯ ನಾದದಲ್ಲಿದ್ದು ಗೋವುಗಳೆಡೆಗಿನ ಮಗ್ನ ಪ್ರೀತಿ. ಭಜನೆಯ ದನಿಯಲ್ಲಿದ್ದುದು ಭಕ್ತಿ ತುಂಬಿದ ಪ್ರೀತಿ. ಪಾನಕದಲ್ಲಿ ಕರಗಿದ್ದುದು ಬೆಲ್ಲದ ಪ್ರೀತಿ. ಬಡಿಸಿದ ಅನ್ನದ ಹಬೆಯಲ್ಲಿದ್ದುದು ಪ್ರೀತಿ. ಕಾರ್ಯಕರ್ತರ ನಿಷ್ಠೆಯಲ್ಲಿದ್ದುದು ಜನಗಳೆಡೆಗಿನ ಪ್ರೀತಿ. ಬಿಸಿಲಿಗೆ ಬಿದ್ದ ಬೆವರ ಉಪ್ಪಿನಲ್ಲಿದ್ದುದೂ ಪ್ರೀತಿ.

ಅಂಥದ್ದೊಂದು ದೊಡ್ಡ ಸಮಾರಂಭವನ್ನು ನಡೆಸಿದ್ದು ಪ್ರೀತಿ: ಗೋವಿನೆಡೆಗಿನ ಪ್ರೀತಿ. ಕೇವಲ ಭಕ್ತಿಯಿಂದ ಇವೆಲ್ಲಾ ಸಾಧ್ಯವಾಗುತ್ತಲೇ ಇರಲಿಲ್ಲ.

೧೦
ಇಷ್ಟಕ್ಕೂ ಗೋವು ಕೇಳುವುದು ಏನು? ಗುರುಗಳ ಪ್ರಕಾರ: ‘ನನ್ನನ್ನು ಸಹಜವಾಗಿ ಹುಟ್ಟಲು ಬಿಡಿ. ಸಹಜವಾಗಿ ಬದುಕಲು ಬಿಡಿ. ಸಹಜವಾಗಿ ಸಾಯಲು ಬಿಡಿ’. ಅಷ್ಟೇ. ಇಡೀ ಗೋಸಮ್ಮೇಳನದ ಉದ್ಧೇಶವೂ ಗೋವಿನ ಈ ಕೋರಿಕೆಯನ್ನು ಈಡೇರಿಸುವುದಕ್ಕೆ ಮೊದಲನೇ ಹೆಜ್ಜೆ ಇಡುವುದಷ್ಟೇ ಆಗಿತ್ತು. ಗೋಹತ್ಯೆಯ ನಿಷೇಧಕ್ಕೆ ಒಂದು ದೊಡ್ಡ ಕಹಳೆ ಮೊಳಗಿದೆ. ವಿಶ್ವ ಗೋ ಸಮ್ಮೇಳನ ಸಮಾರಂಭ ಯಶಸ್ವಿಯಾಗಿ ನೆರವೇರಿದೆ. ಇನ್ನು ಆಗಬೇಕಿರುವುದೇನಿದ್ದರೂ ಕ್ರಾಂತಿ. ಧರ್ಮಯುದ್ಧ. ನಮಗೆ ಏನೆಲ್ಲವನ್ನೂ ಕೊಡುವ ಗೋವಿಗೆ, ಪ್ರತಿಯಾಗಿ ನಾವು ಮಾಡಬೇಕಿರುವ ಕರ್ತವ್ಯಪಾಲನೆ. ವಿಶ್ವಾದ್ಯಂತ ಗೋವಿನ ಆರಾಧನೆ.

ಅಷ್ಟಾದರೆ ಇಷ್ಟು ಮಾಡಿದ್ದು ಸಾರ್ಥಕ. ವಂದೇ ಗೋಮಾತರಂ!