ಅಣ್ಣಮ್ಮನುತ್ಸವಕ್ಕೆಂದು ಬಂದಿರುವ ರಥರೂಪೀ ಲಾರಿ ದೇವಸ್ಥಾನದೆದುರು ಸಿಂಗರಗೊಂಡು ಕಾಯುತ್ತಿದೆ;
ಪವರ್ ಬ್ಯಾಂಕೊಂದು ಮೊಬೈಲನ್ನು ಮಗುವಂತೆ ಮಡಿಲಲ್ಲಿಟ್ಟುಕೊಂಡು ಚಾರ್ಜೂಡಿಸುತ್ತಿದೆ;
ನೇರ ರಸ್ತೆಯಲ್ಲಿ ಸಾಗುತ್ತಿರುವ ಬೈಕೊಂದರ ಆರಿಸಲು ಮರೆತ ಇಂಡಿಕೇಟರ್ ವಿಲಕ್ಷಣ ಮಿಂಚುತ್ತಿದೆ;
ನಿನ್ನೆ ಉದ್ಘಾಟಿಸಿದ ಹೊಸ ಟೂತ್‌ಬ್ರಶ್ಶು ಕೆದರಿದ ಕುಸುಮಗಳ ಹಳೇ ಬ್ರಶ್ಶನ್ನು ಬಾತ್ರೂಮಿನಲ್ಲಿ ಅಣಕಿಸುತ್ತಿದೆ;
ಬಿಗ್‌ಬಾಸ್ ಮನೆಯಲ್ಲಿ ಸಣ್ಣ ವಿಷಯಕ್ಕೆ ನಡೆದ ಜಗಳದಿಂದ ಎಲ್ಲರಿಗೂ ಮನಸ್ತಾಪವಾಗಿದೆ;
ಫೋರ್ಕಿಗೆ ಸಿಕ್ಕಿಕೊಂಡಿರುವ ಗೋಬಿ ಮಂಚೂರಿ ಟೊಮೆಟೋ ಸಾಸಿನಲ್ಲಿ ಮುಳುಗೆದ್ದು ಮತ್ತಷ್ಟು ಕೆಂಪಾಗಿದೆ;
ಕ್ಯಾಂಡಿಕ್ರಶ್ ಆಟದಲ್ಲಿ ಶತಪ್ರಯತ್ನ ಮಾಡಿದರೂ ಕೊನೆಯಲ್ಲೊಂದು ಜೆಲ್ಲಿ ಉಳಿದೇಹೋಗಿದೆ;
ಕಾಶೀಯಾತ್ರೆಗೆ ಹೋದವರ ಬೀಗ ಹಾಕಿದ ಮನೆಯ ದೇವರ ಗೂಡಿನಲ್ಲಿ ಜೇಡ ಬಲೆ ಕಟ್ಟಿದೆ;
ಸುರಿದ ಹಸಿಕಸದಲ್ಲಿ ಶ್ಯಾಂಪೂ ಸ್ಯಾಚೆಟ್ಟೊಂದು ಸಿಕ್ಕಿದ್ದಕ್ಕೇ ಕಸದವಳೊಂದಿಗೆ ನಡುಬೀದಿಯಲ್ಲಿ ರಂಪವಾಗಿದೆ;
ಕೊಯ್ಲಿನ ನಂತರ ಪೇರಿಸಿರುವ ಬಿಳಿಹುಲ್ಲಿನ ಗೊಣಬೆ ಗದ್ದೆಯಲ್ಲೆದ್ದ ಗುಮ್ಮಟದಂತೆ ಕಂಡಿದೆ;
ರಂಗನತಿಟ್ಟಿನ ಪಕ್ಷಿಧಾಮಕ್ಕೆ ವಲಸೆ ಬಂದಿರುವ ಪೆಲಿಕನ್ ಹಕ್ಕಿ ಅವಸರವಸರದಲ್ಲೊಂದು ಗೂಡು ಕಟ್ಟಿದೆ;
ನೆಚ್ಚಿನ ನಟನ ಸಿನೆಮಾಗೆ ಬಾಲ್ಕನಿ ಕ್ಯೂನಲ್ಲಿ ನಿಂತ ಕಟ್ಟಕಡೆಯ ವ್ಯಕ್ತಿಗೆ ಟಿಕೀಟು ಸಿಗದಿರುವ ಆತಂಕ ಕಾಡಿದೆ;
ಓಪನರಿನಿಕ್ಕಳದೆಳೆತಕ್ಕೆ ಮುಚ್ಚಳವಿತ್ತ ನೀಳ ಬಾಟಲಿಯೊಂದು ಪಬ್ಬಮಬ್ಬಲ್ಲಿ ನಶೆಯ ನೊರೆಯುಕ್ಕಿಸುತ್ತಿದೆ.
- - -
ನೀವಡಿಯಿಡುತ್ತಿರುವ ಹೊಸ ವರ್ಷದ ಹೊಸ ಕ್ಯಾಲೆಂಡರಿನ ಬಣ್ಣಬಣ್ಣದ ಖಾನೆಗಳಲ್ಲಿ ಹೂ ಹಾಸಿರಲಿ. ನಿಮ್ಮಿಷ್ಟದ ಹಾಡೇ ಕೇಳುತ್ತಿರಲಿ ಕಿವಿಯಲ್ಲಿ. ಸಿಹಿಯೇ ಸಿಗಲಿ ಬಾಯಾಡಲು. ನೆನೆದಾಗೆಲ್ಲ ಬರಲಿ ಕೊಡೆ ಹಿಡಿದು ನಿಮ್ಮೊಲವಿನವರು. ಬಿರುಗಾಳಿಯೆಂದುಕೊಂಡದ್ದು ತಂಗಾಳಿಯಾಗಲಿ. ಕಣ್ಮುಚ್ಚಿದಾಕ್ಷಣ ನಿದ್ರೆ ಬರುವಷ್ಟು ನೆಮ್ಮದಿ ವರುಷವಿಡೀ ಇರಲಿ. ಆ ನಿದ್ರೆಯಲ್ಲೂ ಚಂದಗನಸುಗಳೇ ಬೀಳಲಿ.
ಶುಭಾಶಯಗಳು.