Tuesday, January 23, 2007

ಮಗುವಿನ ನಗು

ನಿನ್ನೆ ಸಂಜೆ ಹೀಗೇ.

ರಜಾದಿನವಾದ್ದರಿಂದ ರೂಮಿನಲ್ಲೇ ಇದ್ದೆ. ಕವಿತೆಯೊಂದು ಕೈಕೊಟ್ಟು ಕೂತಿತ್ತು. ಮೊದಲೆರಡು ಸಾಲುಗಳನ್ನೇನೋ ಸರಾಗವಾಗಿ ಬರೆದಿಟ್ಟಿದ್ದೆ. ಆದರೆ ಮುಂದಿನ ಸಾಲುಗಳು ಮಾತ್ರ ಅದೇನೇ ಕಸರತ್ತು ಮಾಡಿದರೂ ಮೂಡಿಬರದೇ ನನ್ನನ್ನು ಚಡಪಡಿಸುವಂತೆ ಮಾಡಿದ್ದವು. ಏನು ಬರೆಯಬೇಕೂಂತ ಗೊತ್ತು; ಆದರೆ ಅವು ಶಬ್ದಗಳಾಗಿ ಪಡಿಮೂಡುತ್ತಿರಲಿಲ್ಲ. ವಿಪರೀತ ಟೆನ್ಶನ್ನಿಗೆ ಒಳಗಾಗಿ, ತಲೆಬಿಸಿಯಾಗಿ, ರೂಮಿನಿಂದ ಹೊರಬಂದೆ.

ಟೆರೇಸು ಆಕಾಶಕ್ಕೆ ಮುಖ ಮಾಡಿ ನಕ್ಷತ್ರಗಳಿಗಾಗಿ ಕಾಯುತ್ತಿದ್ದಂತಿತ್ತು. ಸುಮ್ಮನೇ ಅದರ ಮೇಲೆ ಓಡಾಡಿದೆ. ನನ್ನ ಟೆನ್ಶನ್ನನ್ನು ಕಡಿಮೆ ಮಾಡುವಲ್ಲಿ ಆ ಟೆರೇಸಾಗಲೀ, ಆಗಸದ ಕೆಂಬಣ್ಣವಾಗಲೀ, ಆಗ ತಾನೇ ಹೊತ್ತಿಕೊಳ್ಳುತ್ತಿದ್ದ ಬೆಂಗಳೂರಿನ ಬೀದಿದೀಪಗಳಾಗಲೀ, ಪಕ್ಕದ ದೇವಸ್ಥಾನದ ಗಂಟೆಯ ನಿನಾದವಾಗಲೀ ಸಫಲವಾಗುವಂತೆ ಕಾಣಲಿಲ್ಲ. ಅಷ್ಟರಲ್ಲಿ ಪಕ್ಕದ ಮನೆಯ ಸ್ಟೇರ್‌ಕೇಸಿನಲ್ಲಿ ಬೀದಿನಾಯಿಯೊಂದು ಹತ್ತಿ ಬರುತ್ತಿರುವುದು ಕಾಣಿಸಿತು. ದುಡುದುಡನೆ ಹತ್ತುತ್ತಾ ಟೆರೇಸಿಗೆ ಬಂತು ನಾಯಿ. ನನಗೇಕೋ ಆ ನಾಯಿಯೂ ಟೆನ್ಶನ್ನಿನ್ನಲ್ಲಿರುವಂತೆ ಕಂಡಿತು. ಕೇಳಿದೆ ಅದರ ಬಳಿ: "ಏನಯ್ಯಾ, ಟೆನ್ಶನ್ನಿನಲ್ಲಿದ್ದಂಗಿದೆ?" ಅಂತ. ಅದಕ್ಕೆ ನಾಯಿ, "ಹೂಂ ಕಣಣ್ಣ, ದೊಡ್ಡ ತಲೆಬಿಸಿ ಆಗ್‍ಹೋಗಿದೆ. ಅದೆಲ್ಲೋ ವಿಜಯನಗರದಲ್ಲಿ ನಮ್ಮ ಕುಲಬಾಂಧವರು ಯಾವನೋ ಒಬ್ಬ ಮನುಷ್ಯನಿಗೆ ಕಚ್ಚಿ ಅವನು ಸತ್ತೇ ಹೋದನಂತಲ್ಲಾ? ಅವತ್ತಿಂದ ಈ ಮನುಷ್ಯರೆಲ್ಲರೂ ನಮ್ಮ ಮೇಲೆ ಕೆಂಡ ಕಾರಲಿಕ್ಕೆ ಶುರು ಮಾಡಿದಾರೆ. ಕಾರ್ಪೋರೇಶನ್ನಿನವರು ನಮ್ಮನ್ನೆಲ್ಲಾ ಕಿಡ್ನಾಪ್ ಮಾಡಲಿಕ್ಕೆ ಪ್ಲಾನ್ ಮಾಡಿದಾರಂತೆ. ಲಾರಿಯಲ್ಲಿ ಹೇರ್ಕೊಂಡು ಹೋಗ್ತಾರಂತೆ. ನಂಗಂತೂ ಅದೇ ಟೆನ್ಶನ್ನು. ಯಾವ ಲಾರಿ ಕಂಡರೂ ಯಮರಾಯನ ಮುಖದರ್ಶನ ಮಾಡಿದಂಗೆ ಆಗೊತ್ತೆ. ಈಗ್ಲೂ ಹಾಗೇ: ಯಾವುದೋ ಲಾರಿ ದೂರದಲ್ಲಿ ಬರ್ತಿರೋದು ಕಾಣಿಸ್ತು; ತಕ್ಷಣ ಓಡಿ ಟೆರೇಸಿಗೆ ಬಂದ್ಬಿಟ್ಟೆ!" ಅಂತು. ಮನುಷ್ಯನಿಗಷ್ಟೇ ಅಲ್ಲ, ನಾಯಿಗಳಿಗೂ ಇರೊತ್ತೆ ಟೆನ್ಷನ್ನು ಅನ್ನುವ ಹೊಸ ಜ್ಞಾನೋದಯದೊಂದಿಗೆ ನಗುತ್ತಾ ರೂಮಿನೊಳಬಂದೆ.

ಮತ್ತೆ ಬರೆಯಲು ಕುಳಿತೆ. ಆದರೆ ಅಕ್ಷರಗಳೇಕೋ ನನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದವು ಅನ್ನಿಸೊತ್ತೆ. ಏನಂದರೂ ಕವಿತೆ ಮುಂದುವರಿಯುವ ಲಕ್ಷಣ ಕಾಣಲಿಲ್ಲ. ಮತ್ತೇನು ಮಾಡುವುದು ಎಂದು ಯೋಚಿಸಿದೆ. ನನ್ನ ನೆಂಟರೊಬ್ಬರ ಮನೆಗೆ ಹೋಗದೇ ಬಹಳ ದಿನಗಳಾದವು ಎಂದು ನೆನಪಾಯಿತು. ಅವರಿಗೆ ಒಂದು ಗಂಡು ಮಗು ಹುಟ್ಟಿದ್ದ ಸುದ್ದಿ ನನಗೆ ತಿಳಿದಿದ್ದುದೇ ಆಗಿತ್ತು. ಫೋನ್ ಮಾಡಿ ವಿಶ್ ಮಾಡಿದ್ದೆ. ಪಾಪುವನ್ನು ನೋಡಲು ಬರುವುದಾಗಿ ಹೇಳಿದ್ದೆನಾದರೂ, ಹಾಗೆ ಹೇಳಿ ಈಗ ಆರು ತಿಂಗಳಿಗೆ ಬಂದಿದ್ದರೂ ಇನ್ನೂ ನನಗೆ ಹೋಗಲಿಕ್ಕೆ ಆಗಿರಲಿಲ್ಲ. ಈಗ ಹೀಗೆ ಸಡನ್ನಾಗಿ ನೆನಪಾದ್ದರಿಂದ, ಬೇರೆ ಏನೂ ಕೆಲಸವೂ ಇಲ್ಲದ್ದರಿಂದ, ಅಲ್ಲಿಗೇ ಹೋಗೋಣವೆಂದು ತೀರ್ಮಾನಿಸಿದೆ. ಫೋನಾಯಿಸಿ ವಿಚಾರಿಸಿದಾಗ ಅವರು ಮನೆಯಲ್ಲೇ ಇರುವುದು ತಿಳಿಯಿತು. ರಾತ್ರಿ ಊಟಕ್ಕೆ ಬರುತ್ತಿರುವುದಾಗಿ ತಿಳಿಸಿದೆ.

ಪ್ಯಾಂಟೇರಿಸಿ, ಕೆಳಗಿಳಿದು ಬಂದು, ನೆಂಟರ ಮನೆ ಕಡೆ ಹೋಗುವ ಬಸ್ಸು ಹತ್ತಿದೆ. ಬಸ್ಸಿನಲ್ಲಿ ಹಿಂದಿನ, ಗಂಡಸರ ಸೀಟುಗಳ್ಯಾವೂ ಖಾಲಿಯಿರಲಿಲ್ಲ. ಮುಂದಿನ, ಹೆಂಗಸರ ಸೀಟುಗಳಲ್ಲಿ ಒಂದೆರಡು ಸೀಟುಗಳು ಖಾಲಿಯಿದ್ದವು. ಸರಿ, ಮುಂದೆ ಯಾರಾದರೂ ಹೆಂಗಸರು ಹತ್ತಿದರೆ ಬಿಟ್ಟುಕೊಟ್ಟರಾಯಿತು ಅಂದುಕೊಂಡು ಅವುಗಳಲ್ಲೇ ಒಂದರಲ್ಲಿ ಆಸೀನನಾದೆ. ಕೂತದ್ದೇ ತಪ್ಪಾಗಿಹೋಯಿತು: ಮತ್ತೆ ಟೆನ್ಶನ್ ಶುರುವಾಯಿತು! ಸ್ಟಾಪ್ ಬಂದಾಗಲೆಲ್ಲಾ ಯಾರಾದರೂ ಹೆಂಗಸರು ಹತ್ತಿಬಿಡುತ್ತಾರೇನೋ, ಸೀಟ್ ಬಿಟ್ಟುಕೊಡಬೇಕಾಗುತ್ತದೇನೋ ಎಂದು ಚಡಪಡಿಸತೊಡಗಿದೆ. ಪ್ರತಿ ಸ್ಟಾಪಿನಲ್ಲಿ ಬಸ್ಸು ನಿಂತಾಗಲೂ ನಾನು ಕೂತಲ್ಲೇ ಬಗ್ಗಿ, ತಲೆ ಎತ್ತಿ, ಮಿಸುಕಾಡಿ, ಬಾಗಿಲ ಕಡೆ ನೋಡುವುದಾಯಿತು. ಸಾಯಲಿ, ಈ ಟೆನ್ಶನ್ನೇ ಬೇಡ, ಶಿಸ್ತಾಗಿ ಎದ್ದುನಿಂತುಬಿಡೋಣ ಅನ್ನಿಸಿತಾದರೂ ಹಿಂದಿನ ಸೀಟಿನವರು ಏನೆಂದುಕೊಂಡಾರೆಂದು ಭಾವಿಸಿ ಮತ್ತೆ ಸೀಟಿಗೊರಗಿದೆ. ಅಂತೂ ಮುಂದಿನ ಸ್ಟಾಪಿನಲ್ಲಿ ಐದಾರು ಮಹಿಳೆಯರು ಬಸ್ಸು ಹತ್ತಿ ನನ್ನ ಸೀಟಿಗೆ ಸಂಚಕಾರ ತಂದರು. ಅವರಿಗೆ ಸೀಟು ಬಿಟ್ಟುಕೊಟ್ಟು ನಾನು ಟೆನ್ಶನ್ನಿನಿಂದ ಅಷ್ಟರ ಮಟ್ಟಿಗೆ ಹೊರಬಂದೆನಾದರೂ, ಸೀಟು ಬಿಟ್ಟುಕೊಡುವಾಗ ಮಾತ್ರ ಒಬ್ಬ ರಾಜಕಾರಣಿಗೆ ಎಷ್ಟು ಬೇಸರ, ಅಪಮಾನಗಳು ಆಗಬಹುದೋ ಅವೆಲ್ಲವನ್ನೂ ನಾನು ಅನುಭವಿಸಿದ್ದೆ. ನಾನು ಎದ್ದು ನಿಂತು ಅವರಿಗೆ ಸೀಟು ಬಿಟ್ಟುಕೊಟ್ಟದ್ದೇ ನನ್ನ ಹಿಂದಿನ ಸೀಟಿನವರ ಮುಖಗಳನ್ನು ನೋಡದಾದೆ. ಅವರೆಲ್ಲಾ ನನ್ನನ್ನು ಅಪಹಾಸ್ಯದ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ನನಗೆ ಭಾಸವಾಗಲಾರಂಭಿಸಿತು.

ನೆಂಟರ ಮನೆಯ ಬೆಲ್ಲು ಒತ್ತಿ ಹೊರಗೆ ಕಾಯತೊಡಗಿದೆ. ಒಂದು ನಿಮಿಷವಾದರೂ ಬಾಗಿಲು ತೆರೆಯದಿದ್ದುದರಿಂದ ಮತ್ತೆ ಟೆನ್ಶನ್ ಶುರುವಾಯಿತು. ಮತ್ತೆರಡು ಬಾರಿ ಬೆಲ್ ಒತ್ತಿದೆ. ಸುಮಾರು ಎರಡು ನಿಮಿಷಗಳ ಬಳಿಕ ಅತ್ತಿಗೆ ಬಂದು ಬಾಗಿಲು ತೆರೆದಳು. "ಓ, ಬಾ, ಸಾರಿ, ಪಾಪೂನ ಮಲಗಿಸ್ತಾ ಇದ್ದೆ, ಅದ್ಕೇ ಲೇಟಾಯ್ತು ಡೋರ್ ಓಪನ್ ಮಾಡ್ಲಿಕ್ಕೆ. ಒಳಗೆ ಬಾ. ಎಷ್ಟು ದಿವಸ ಆಯ್ತೋ ಮಹಾನುಭಾವ ಈ ಕಡೆ ಬರದೇ...?" ಎನ್ನುತ್ತಾ ಅತ್ತಿಗೆ ನನ್ನನ್ನು ಆದರದಿಂದ ಸ್ವಾಗತಿಸಿದಳು. ಸೀದಾ ಕಿಚನ್ನಿಗೆ ಕರೆದೊಯ್ದಳು. ಅತ್ಮೀಯವಾಗಿ ಮಾತನಾಡುತ್ತಾ ಕಾಫಿ ಮಾಡಿಕೊಟ್ಟಳು. ಅಷ್ಟರಲ್ಲಿ ಜಗದೀಶಣ್ಣ ಕೂಡ ಬಂದ. ಅವನೊಂದಿಗೆ ಹಾಲ್‍ಗೆ ಬಂದು ಮಾತನಾಡುತ್ತಾ ಕುಳಿತೆವು. ಆಫೀಸು, ವರ್ಕ್‍ಲೋಡು, ಸ್ಯಾಲರಿ, ಟ್ರಾಫಿಕ್ಕು, ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಿದ್ದು, 'ಒಂದು ಗಾಡಿ ತಗೊಳ್ಳೋ ಮರಾಯಾ', ಇಂಡಿಯಾ-ಸೌತ್ ಆಫ್ರಿಕಾ ಮ್ಯಾಚು... ಹೀಗೆ ಅವ್ಯಾಹತವಾಗಿ ಮಾತಾಡಿದೆವು. ಅತ್ತಿಗೆ ಅಡುಗೆಯಲ್ಲಿ ತೊಡಗಿದ್ದಕ್ಕೆ ಸಾಕ್ಷಿಯಾಗಿ ಕಿಚನ್ನಿನಿಂದ ಮಿಕ್ಸಿ, ತುರಿಮಣೆ, ಸೌಟುಗಳ ಸದ್ದು ಕೇಳಿಬರುತ್ತಿತ್ತು. ವಗ್ಗರಣೆಯ ಶಬ್ದದೊಂದಿಗೇ ಪರಿಮಳವೂ ತೇಲಿಬಂತು.

ಅಷ್ಟೊತ್ತಿಗೆ ಮಲಗಿದ್ದ ಪಾಪುವಿಗೆ ಎಚ್ಚರವಾಗಿ ಕೋಣೆಯಿಂದ ಅಳು ಕೇಳಿಬಂತು. ಅತ್ತಿಗೆ 'ಹೂಂ ಬಂದೇ...' ಎನ್ನುತ್ತಾ ಕೋಣೆಗೆ ಹೋಗಿ ಮಗುವನ್ನು ಎತ್ತಿಕೊಂಡು ಬಂದಳು. ತಾಯಿಯ ತೋಳಿನಲ್ಲಿ ಕುಳಿತು ಮಿಕಮಿಕನೆ ನಮ್ಮನ್ನೇ ನೋಡುತ್ತಿದ್ದ ಮಗು ಮೊಲದ ಮರಿಯಂತೆ ಕಂಡಿತು. 'ಇಲ್ನೋಡು... ಇದು ಯಾರು ಗೊತ್ತಾ? ಮಾಮ.. ಮಾಮ ಇದು. ಹೋಗ್ತೀಯಾ ಮಾಮನ ಹತ್ರ?' ಅನ್ನುತ್ತಾ ಅತ್ತಿಗೆ ಪಾಪುವನ್ನು ನನ್ನ ಕೈಗೆ ವರ್ಗಾಯಿಸಿದಳು. ಆದರೆ ನನ್ನ ಕೈಗೆ ಬಂದದ್ದೇ ಪಾಪು ಅಳಲಿಕ್ಕೆ ಶುರುಮಾಡಿತು. 'ಏ.. ಸುಮ್ನಿರೂ... ಆ.. ವೂ..' ಎಂದು ಇತ್ಯಾದಿ ಏನೇನೋ ಬಡಬಡಿಸಿ ಮಗುವನ್ನು ಸುಮ್ಮನಿರಿಸಲು ನೋಡಿದೆನಾದರೂ ಅದು ಅಳುವನ್ನು ನಿಲ್ಲಿಸಲಿಲ್ಲ. ಒಂದು ಮುತ್ತು ಕೊಟ್ಟರೆ ಸಾಕು ಹಟ ನಿಲ್ಲಿಸುವ ನನ್ನ ಹುಡುಗಿ ಈ ಮಗುವಿಗಿಂತ ಸಾವಿರ ಪಾಲು ಬೆಟರು ಅನ್ನಿಸಿ ಮಗುವನ್ನು ಜಗದೀಶಣ್ಣನಿಗೆ ಒಪ್ಪಿಸಿದೆ. ಅವನು ನೆಲಕ್ಕೆ ಕುಳಿತುಕೊಂಡು, ಮಗವನ್ನು ತೊಡೆಯಮೇಲೆ ಕೂರಿಸಿಕೊಂಡು, 'ಆನೆ ಬಂತೊಂದಾನೆ' ಮಾಡತೊಡಗಿದ.

ಆನೆ ಬಂತೊಂದಾನೆ
ಯಾವೂರಾನೆ?
ಸಿದ್ದಾಪುರದಾನೆ
ಇಲ್ಲಿಗ್ಯಾಕ್ ಬಂತು?
ಹಾದಿ ತಪ್ಪಿ ಬಂತು
ಬೀದಿ ತಪ್ಪಿ ಬಂತು
ನಮ್ಮನೆ ಪಾಪಚ್ಚಿ ನೋಡಕ್ ಬಂತು..!

ಅಳು ನಿಲ್ಲಿಸಿ ಮಗು ಗಿಟಗಿಟನೆ ನಗಲಿಕ್ಕೆ ಶುರುಮಾಡಿತು. ಬೊಚ್ಚುಬಾಯಿ ಬಿಟ್ಟುಕೊಂಡು ನಿಷ್ಕಳಂಕವಾಗಿ ನಗುತ್ತಿದ್ದ ಈ ಮಗುವಿನ ಚೆಲುವಿಗೆ ನಾನು ಮಾರುಹೋದೆ. ಆ ನಗೆಯ ಶಬ್ದದ ಅಲೆಯಲ್ಲಿ ತೇಲಿಹೋದೆ.

ನಾನೂ ಜಗದೀಶಣ್ಣನ ಪಕ್ಕ ಹೋಗಿ ಕುಳಿತುಕೊಂಡೆ. ಪಕ್ಕದಲ್ಲೇ ಮಗುವನ್ನು ಆಡಿಸಲಿಕ್ಕೆಂದು ತಂದಿದ್ದ ಗಿಲಗಿಚ್ಚಿಯೊಂದಿತ್ತು. ಅದನ್ನು ಗಿಲಗಿಲನೆ ಅಲುಗಾಡಿಸುತ್ತಾ ನಾನು ಮಗುವಿನ ಸ್ನೇಹ ಸಂಪಾದಿಸಲು ನೋಡಿದೆ. ಸ್ವಲ್ಪ ಹೊತ್ತಿನ ನಂತರ ಮಗು ನನಗೆ ಹೊಂದಿಕೊಂಡಿತು. ಅದರ ಮುದ್ದು ಗಲ್ಲವನ್ನು ಚಿವುಟಿದೆ. 'ಛೀ ಕಳ್ಳ!' ಎಂದೆ. ಮಗು ಮತ್ತೆ ಗಿಟಗಿಟನೆ ನಕ್ಕಿತು.

ಯೋಚಿಸುತ್ತಿದ್ದೆ ನಾನು: ಯಾಕೆ ಹೀಗೆ ನಗುತ್ತದೆ ಮಗು? ನಾವು 'ಆನೆ ಬಂತೊಂದಾನೆ' ಮಾಡುವ ಮೊದಲು ಮಗುವಿಗೇನು ಆನೆಯನ್ನು ತೋರಿಸಿರುವುದಿಲ್ಲ. 'ಛೀ ಕಳ್ಳ' ಎನ್ನುವಾಗ ಕಳ್ಳ ಎಂದರೆ ಯಾರು ಎಂಬುದೇ ಗೊತ್ತಿರುವುದಿಲ್ಲ ಮಗುವಿಗೆ. ಆದರೂ ನಗುತ್ತದೆ. ಯಾಕೆ?

ಮಗುವಿನ ಕೈಗೆ ಗಿಲಗಿಚ್ಚಿಯನ್ನು ಕೊಟ್ಟು ಕೇಳಿದೆ ನಾನು: "ನಾವು 'ಆನೆ ಬಂತೊಂದಾನೆ' ಎನ್ನುತ್ತಾ ಬಾಗಿದರೆ-ತೂಗಿದರೆ, ಅಥವಾ 'ಛೀ ಕಳ್ಳ!' ಎಂದು ಗೋಣು ಕೊಡವಿದರೆ ನಿನಗೆ ಏನು ಕಾಣಿಸುತ್ತದೆ ಮಗುವೇ? ಅದರಲ್ಲಿ ಅಷ್ಟೆಲ್ಲಾ ನಗುವಂತದ್ದು ಏನಿದೆ? ನಾವೆಲ್ಲಾ ಚಿತ್ರಗಳೇ ನಿನ್ನ ಪಾಲಿಗೆ?"

ಕೈಯಲ್ಲಿ ಹಿಡಿದಿದ್ದ ಗಿಲಗಿಚ್ಚಿಯಿಂದ ಕಿಂಕಿಣಿ ನಾದ ಹೊಮ್ಮಿಸುತ್ತಾ ಹೇಳಿತು ಮಗು, "ಎಲ್ಲದಕ್ಕೂ ಕಾರಣ ಕೇಳಬೇಡವೋ ದಡ್ಡ ಮಾಮ! ಕಾರಣಗಳನ್ನೆಲ್ಲಾ ನೀನಿಟ್ಟುಕೋ. ಬೇಕಾದರೆ ಮತ್ತಷ್ಟು ಟೆನ್ಶನ್ ಮಾಡಿಕೋ. ಆನೆ ಎಂದರೆ ಏನು ಅಂತ ನನಗೆ ಬೇಕಿಲ್ಲ. ಆನೆ ಹೇಗಿರುತ್ತದೋ ನನಗೆ ಗೊತ್ತಿಲ್ಲ. ಆದರೂ ನಗಲಿಕ್ಕೇನು! ಕಳ್ಳ ಎಂದರೆ ಯಾರಾದರೂ ಆಗಿರಲಿ. ಅವನು ಬೇಕಾದರೆ ನಿನ್ನ ನಗೆಯನ್ನು ಕೊಳ್ಳೆ ಹೊಡೆದವನೇ ಆಗಿರಲಿ. ಆದರೆ ಆತ ನನ್ನ ನಗೆಯನ್ನು ಕಸಿಯಲಾರ. ನಾನು ಸುಮ್ಮನೇ ನಗುತ್ತೇನೆ! ನಿನಗೆ ಹೀಗೆ ನಗಲಿಕ್ಕಾಗುತ್ತದಾ? 'ಆನೆ ಬಂತೊಂದಾನೆ' ಮಾಡಿದರೂ ನೀನು ನಗುವಂತಿಲ್ಲ; 'ಛೀ ಕಳ್ಳ' ಎಂದರೂ ನಗುವಂತಿಲ್ಲ. ಆನೆ ಬಂದರೂ ಕಳ್ಳ ಬಂದರೂ ಹೆದರಿಕೊಂಡು ಓಡಿಹೋಗುತ್ತೀ ನೀನು! ದಿನವಿಡೀ 'ಟೆನ್ಶನ್ ಟೆನ್ಶನ್' ಎನ್ನುತ್ತಾ ಓಡಾಡುವ ನೀನು ನಗುವಿಗೂ ಕಾರಣ ಕೇಳುತ್ತೀಯ, ಅಳುವಿಗೂ ಕಾರಣ ಕೇಳುತ್ತೀಯ, ಪ್ರೀತಿಗೂ ಕಾರಣ ಕೇಳುತ್ತೀಯ... ಏಯ್ ಸುಮ್ನಿರೋ ದಡ್ಡ ಮಾಮ!" ಅಷ್ಟಂದು ಮತ್ತೆ ನಗಲಾರಂಭಿಸಿತು. ನಾನು ತಿರುಗಿ ಮಾತಾಡಲು ಏನೂ ತೋಚದೇ ಸುಮ್ಮನೆ ಮಗುವಿನ ಮುಖವನ್ನೇ ನೋಡುತ್ತಿದ್ದೆ.

ಅತ್ತಿಗೆ ಊಟಕ್ಕೆ ಕರೆಯುವವರೆಗೂ ನಾನು ಮಗುವನ್ನು ಆಡಿಸುತ್ತಲೇ ಇದ್ದೆ. ಊಹೂಂ, ಹಾಗನ್ನುವುದಕ್ಕಿಂತ 'ನಾನೇ ಮಗುವಾಗಿದ್ದೆ ಮಗುವಿನ ಜೊತೆ' ಎಂದರೆ ಹೆಚ್ಚು ಸರಿಯಾಗುತ್ತದೆ. ಒಳ್ಳೆಯದೊಂದು ಊಟ ಮಾಡಿ, ಸಾದಾ ಕವಳ ಹಾಕಿ ನಾನು ನೆಂಟರ ಮನೆಯಿಂದ ಹೊರಟೆ. ಅಷ್ಟೊತ್ತಿಗಾಗಲೇ ಮಗು ತೊಟ್ಟಿಲಿನ ಮೆತ್ತೆಯಲ್ಲಿ ಬೆಚ್ಚಗೆ ನಿದ್ದೆ ಹೋಗಿತ್ತು.

ರೂಮಿಗೆ ಮರಳುವ ಹಾದಿಯಲ್ಲಿ ಹೊಸದೇ ಆದ ಉಲ್ಲಾಸವೊಂದು ನನ್ನಲ್ಲಿ ತುಂಬಿಕೊಂಡಿರುವ ಭಾವವನ್ನು ಅನುಭವಿಸಿದೆ. ಅರ್ಧ ಬರೆದಿಟ್ಟು ಬಂದಿದ್ದ ಕವಿತೆಯ ಮುಂದಿನ ಸಾಲುಗಳು ಅದಾಗಲೇ ಕಣ್ಣ ಮುಂದೆ ನಿಲ್ಲತೊಡಗಿದ್ದವು. ಆ ಸಾಲುಗಳ ಹಿಂದೆ ಅದೇ ಮಗುವಿನ ಬೊಚ್ಚು ಬಾಯಿಯ ನಗುವಿನ ಚಿತ್ರ ಅಚ್ಚೊತ್ತಿತ್ತು.

Thursday, January 18, 2007

ಕಾಲೇಜು ಕಾವ್ಯ

[ನನ್ನ ಹೈಸ್ಕೂಲು-ಕಾಲೇಜು ದಿನಗಳಲ್ಲಿ ಬರೆದು ಬೆಚ್ಚಗೆ ಬಚ್ಚಿಟ್ಟಿದ್ದ ಒಂದಷ್ಟು ಹನಿ, ಹಾಯಿಕು, ಲಹರಿಗಳು: ನಿಮ್ಮ ಖುಷಿಗೆ. ಊಹೂಂ, ನನ್ನ ಖುಷಿಗೆ!]

ಅವಳ ಮುಗುಳ್ನಗೆ

ನನ್ನನ್ನು ತನ್ನೆದುರು ಪಲ್ಟಿ
ಹೊಡೆಸಿಕೊಂಡ ಉಲ್ಟಾ
ಕಾಮನಬಿಲ್ಲು!

* * *

ಗುಟ್ಟು

ಗೊತ್ತಾಯ್ತೇನೇ?
ಅಂಕಿ ಅಂಶಗಳ ಪ್ರಕಾರ ಈಗ
ಹುಡುಗಿಯರ ಸಂಖ್ಯೆ ಕಡಿಮೆ ಇದೆಯಂತೆ.
ಅಂದರೆ, ನೂರಕ್ಕೆ ಐದು ಹುಡುಗರಿಗೆ ಮದುವೆಯಿಲ್ಲವಂತೆ!
ಆದರೂ ನಾನು ಮಾತ್ರ ಇಷ್ಟೊಂದು
ತಲೆಬಿಸಿಯಿಲ್ಲದವನಂತಿರುವುದಕ್ಕೆ ಕಾರಣ
ನನಗೆ ಗೊತ್ತು - ನಿನಗೆ ಗೊತ್ತು; ಅಲ್ಲವಾ?

* * *

ಅವಳ ಕೆನ್ನೆ

ಅವಳ ಕೆನ್ನೆ 'ಹೊಳೆ'ಯಂತೆ.
ದಡದಲ್ಲಿ ನಿಂತವರು ಎಸೆಯುವ
ಜೋಕಿನ ಕಲ್ಲುಗಳಿಗೆ
ಬೀಳುವುದಲ್ಲಿ 'ಕುಳಿ'.

* * *

ಮದರಂಗಿ

ನಾಗರ ಪಂಚಮಿಯ ಮರುದಿನ
ಅವಳ ಕೈಯ ಮದರಂಗಿಯಲ್ಲಿ
ನನ್ನ ಇನಿಶಿಯಲ್ಲು ಹುಡುಕಿ
ಸುಸ್ತಾದೆ!

* * *

ಚಳಿ ಮತ್ತು ಅವಳು

ಮಾಘ ಮಾಸ ಜಾರಿಯಲ್ಲಿದೆ.
ಹುಡುಗಿಗೀಗ ಚಳಿಯೋ ಚಳಿ.
ಅವಳು ದಿನವೂ ಸ್ವೆಟರ್ ಹಾಕಿಕೊಂಡು ಬರುತ್ತಿದ್ದಾಳೆ.
'ಚಳಿ ಓಡಿಸಲಿಕ್ಕೆ ಇನ್ನೂ ಅನೇಕ ವಿಧಾನಗಳಿವೆ ಕಣೆ'
ಅಂತ ಹೇಳೋಣವೆಂದುಕೊಳ್ಳುತ್ತೇನೆ;
ಆದರೆ ಹಾಗೆ ಹೇಳಿದರೆ
ನಾನು ಪೋಲಿ ಹುಡುಗನಾಗಿಬಿಡುತ್ತೇನೆ.
ಛೇಛೆ! ಹಾಗಾಗಬಾರದು..!

* * *

ಕಾವ್ಯ

ಅವನು ಒಬ್ಬ ಕವಿ. ಕಾಲೇಜೊಂದರಲ್ಲಿ ಲೆಕ್ಚರರ್ ಕೂಡ.
ಅವತ್ತಿನ ಕ್ಲಾಸಿನಲ್ಲಿ ಅದೇಕೋ ಕಾವ್ಯದ ಬಗ್ಗೆ ಹೇಳುತ್ತಿದ್ದ:

"ಮನಸ್ಸಿಗೆ ತುಂಬಾ ದುಃಖ ಆಬೇಕು; ಅಥವಾ ತುಂಬಾ ಸಂತೋಷ ಆಗ್ಬೇಕು. ಅನೇಕರ ಕಷ್ಟಗಳನ್ನು ನೋಡ್ಬೇಕು; ಜೊತೆಗೇ ತುಂಬಾ ಸುಖದಲ್ಲಿರುವವರನ್ನೂ ನೋಡ್ಬೇಕು.... ಅವಾಗ್ಲೇ ಕಾವ್ಯ ಹುಟ್ಟೋದು.."

ಹಿಂದಿನ ಬೆಂಚಿನ ಕೆಲ ಪಡ್ಡೆ ಹುಡುಗರು ಕಿಸಕ್ಕನೆ ನಕ್ಕುಬಿಟ್ಟರು.
ಫಸ್ಟ್ ಬೆಂಚಿನಲ್ಲಿ ಕುಳಿತಿದ್ದ ಹುಡುಗಿ ಕಾವ್ಯ ತಲೆ ತಗ್ಗಿಸಿದಳು.

* * *

ಒಂದು ಓಲೆ

ದೀಪಾ,

ನಿಜಕ್ಕೂ ನೀನು ಗ್ರೇಟ್ ಕಣೇ. ಒಂದೇ ಒಂದರೆಕ್ಷಣ ನೀನಿರದಿದ್ದರೆ ನನ್ನ ಬಾಳು ಶೂನ್ಯ. ಅಂಧಃಕಾರದಲ್ಲಿ ಬದುಕುವುದು ಯಾವ ಮನುಷ್ಯನಿಂದಲೂ ಸಾಧ್ಯವಿಲ್ಲ. ಮನುಷ್ಯನಷ್ಟೇ ಏಕೆ? ಮತ್ಯಾವ ಜೀವಿಗೂ ಸಾಧ್ಯವಿಲ್ಲ. ಅಂದ್ಮೇಲೆ ನೀನಿಲ್ಲದೇ ಜಗವಿಲ್ಲ!

ನೀನು ನಿನ್ನನ್ನೇ ಸುಟ್ಟುಕೊಂಡು ಪರರಿಗೆ ಬೆಳಕು ನೀಡುವ ಕ್ರಿಯೆ ಅದ್ಭುತ. ಕೆಲವು ಮನುಷ್ಯರೂ ಹಾಗೇ ಇರುತ್ತಾರಲ್ಲವೇ? ಅವರು ತಮಗಾಗಿ ಜೀವಿಸುವುದೇ ಇಲ್ಲ. ದುಡ್ಡು, ಆಸ್ತಿ, ಸಂಪತ್ತನ್ನೆಲ್ಲಾ ಮಾಡಿ, ಅವನ್ನು ಸ್ವಲ್ಪವೂ ಅನುಭವಿಸದೇ ಮಣ್ಣಾಗುತ್ತಾರೆ. ಅವೆಲ್ಲವನ್ನೂ ಅನುಭವಿಸುವವರು ಅವರ ಮಕ್ಕಳು.

ಇಲ್ಲ, ಇದು ತಪ್ಪು ಕಣೇ. ಈಗಿನ ಕಾಲದಲ್ಲೂ ಹೀಗೆ ಬದುಕುವುದು ಸ್ವಲ್ಪವೂ ಸರಿಯಿಲ್ಲ. ಮೊದಲು ನೀನು ನಿನ್ನ ಜೀವನವನ್ನು ಬೆಳಗಿಕೋ. ನಿನ್ನ ಬುಡದ ಕತ್ತಲೆಯನ್ನು ನೀಗಿಕೋ. ಅದರೆಡೆಗೆ ಬೆಳಕು ಚೆಲ್ಲು. ಆ ನಂತರ ಪರರ ಚಿಂತೆ. ಅವರು ತನ್ತಾನೇ ನಿನ್ನನ್ನು ಬಯಸಿ ಬರುತ್ತಾರೆ. ನಿನ್ನ ಬೆಳಕನ್ನರಸಿ ಬರುತ್ತಾರೆ.

ಬೆಳಗು ದೀಪಾ.. ಬೆಳಗು. ಜಗವನ್ನೇ ಬೆಳಗು. ಗಾಳಿ ಬರುತ್ತದೆ; ಸಹಿಸಿಕೋ. ಅಸಾಧ್ಯವಾದದ್ದು ಯಾವುದೂ ಇಲ್ಲ ಈ ಜಗದಲ್ಲಿ. ನಿನಗೆ ಪ್ರೋತ್ಸಾಹಿಗಳು ಇದ್ದೇ ಇರುತ್ತಾರೆ. ಸೂರ್ಯನಂತೆ, ಚಂದ್ರನಂತೆ ವಿಖ್ಯಾತಳಾಗು. ಲಕ್ಷನಕ್ಷತ್ರಗಳ ಕೇಂದ್ರಬಿಂದುವಾಗು.

ಪ್ರೀತಿಯಿಂದ,

-ಸು

Wednesday, January 17, 2007

ಒಳ್ಳೆಯದೇ ಆಯಿತು

ಸಿಗುವುದಿಲ್ಲ ನೀನೀಗ ಆಗಿನಂತೆ-
ಕಾಲೇಜಿನ ಕಾರಿಡಾರಿನಲ್ಲಿ ಒಂಟಿ
ಸಾಲು ನೀಲಗಿರಿ ಮರಗಳ ನೆರಳಲ್ಲಿ ನನಗಂಟಿ
ಜೋರು ಮಳೆಯ ದಿನ ಸೇರಿಕೊಂಡಂತೆ ಬಂದು ನನ್ನ ಛತ್ರಿಯಲ್ಲಿ

ಸಿಗುತ್ತೀ ನೀನೀಗ-
ನಾಲ್ಕು ರಸ್ತೆ ಸೇರುವ ಗಡಿಯಾರ ಗೋಪುರದ ಬಳಿ
ವಿಧಾನಸೌಧದೆದುರಿನ ಜನ ಜಂಗುಳಿಯಲ್ಲಿ
ಪಿವಿಆರ್ ಥೇಟರಿನ ಟಿಕೇಟ್ ಕ್ಯೂನಲ್ಲಿ

ಒಳ್ಳೆಯದೇ ಆಯಿತು ನನಗೆ-
ನೀನು ಭಯಗ್ರಸ್ಥ ಕಣ್ಣುಗಳಲ್ಲಿ ನನ್ನನ್ನು ನೋಡುತ್ತಿರುವಾಗ
ಜೊತೆಯಲ್ಲಿ ನಿಂತ ನಿನ್ನ ಹೊಸ ಗೆಳೆಯ
ಅನುಮಾನದ ಕಣ್ಣುಗಳಲ್ಲಿ ನಿನ್ನನ್ನೇ ನೋಡುತ್ತಿರುವಾಗ

ತಪ್ಪಿಸಬಹುದು ನಾನು ನನ್ನ ಕಣ್ಣ-
ಗೋಪುರದ ದೊಡ್ಡ ಗಡಿಯಾರದ ಮುಳ್ಳನ್ನು ನೋಡುತ್ತಾ
ವಿಧಾನಸೌಧದ ಮೇಲಿನ ಸಿಂಹ ಪುತ್ಥಳಿಯನ್ನು ನೋಡುತ್ತಾ
ಪಿವಿಆರಿನ ಚಲಿಸುತ್ತಿರುವ ಎಸ್ಕಲೇಟರನ್ನು ನೋಡುತ್ತಾ.

(೨೭.೦೪.೨೦೦೬)

Tuesday, January 16, 2007

ಅವಳು ಹೇಳಿದ್ದು

ನಿನ್ನ ಬಗ್ಗೆ ಒಂದು ಚಿಕ್ಕ ಅನುಮಾನ ಕಾಡಿ
ಮುನಿಸಿಕೊಂಡೆ ನೋಡು?
ನೀನು ಪ್ರಾಮಾಣಿಕ ಎಂದು ತೋರಿಸಲೋಸುಗ
'ನಿನ್ನ ಹೆಸರೇ ನನ್ನ ಪಾಸ್‍ವರ್ಡ್‍ ಕಣೇ,
ಬೇಕಾದ್ರೆ ಚೆಕ್ ಮಾಡ್ಕೋ ಇನ್‍ಬಾಕ್ಸು' ಎಂದದ್ದೇ,
ನಿನ್ನ ಪ್ರಾಮಾಣಿಕತೆಯ ಪ್ರವಾಹದಲ್ಲಿ
ನನ್ನ ಅನುಮಾನವು ಕೊಚ್ಚಿಹೋಗಿ,
ಅರೆ! ನಿನ್ನ ಐಡಿಯೇ ಮರೆತುಹೋಯ್ತಲ್ಲೋ ಗೆಳೆಯಾ...!
ನಿನ್ನೆಡೆಗಿನ ಪ್ರೀತಿಯ ಧ್ಯಾನದಲ್ಲಿ ಮುಳುಗಿಹೋಗಿ,
ಅರೆ! ನನ್ನ ಹೆಸರೇ ನನಗೆ ಮರೆತುಹೋಯ್ತಲ್ಲೋ ಮಿತ್ರಾ...!
ಈಗ ಹೇಗೆ ಲಾಗಿನ್ ಆಗಲಿ...?

Saturday, January 06, 2007

ಭಯ, ತಳಮಳಗಳ ನಡುವೆ ಬಂದ ಹೊಸವರ್ಷ

ಜಾಲಾಟ
ಎರಡುಸಾವಿರದ ಐದನೇ ಇಸವಿಯ ಇಯರೆಂಡಿಗೆ ನಾವು ಹೊಗೆನಕ್ಕಲ್ ಫಾಲ್ಸ್‌ಗೆ ಹೋಗಿದ್ದೆವು. ಅಲ್ಲಿ ಹೋಗಿದ್ದಾಗ ಮಾತಾಡಿಕೊಂಡಿದ್ದೆವು: ಪ್ರತಿವರ್ಷವೂ ಇಯರೆಂಡಿನ ದಿನ ಬೆಂಗಳೂರಿನಿಂದ ಹೊರಗಡೆ ಎಲ್ಲಿಗಾದರೂ ಟೂರ್ ಹೋಗಬೇಕು ಅಂತ. ಹಾಗಾಗಿ ಈ ವರ್ಷ, ಅಂದರೆ ಎರಡುಸಾವಿರದ ಆರನೇ ಇಸವಿಯ ಡಿಸೆಂಬರ್ ಹತ್ತಿರಾಗುತ್ತಿದ್ದಂತೆಯೇ ನನ್ನಿಬ್ಬರೂ ಗೆಳೆಯರೂ ಒಂದೇ ಸಮನೆ ಪೀಡಿಸಹತ್ತಿದ್ದರು: 'ಎಲ್ಲಿಗೆ ಹೋಗೋಣ ಈ ವರ್ಷ?' ಅಂತ. ಈ ಇಬ್ಬರು ಗೆಳೆಯರು -ರಾಘವೇಂದ್ರ ಮತ್ತು ಸಂತೋಷ ಅಂತ- ನನ್ನ ಕಾಲೇಜ್ ಕ್ಲಾಸ್‌ಮೇಟುಗಳು. ಅದಕ್ಕಿಂತ ಹೆಚ್ಚಾಗಿ, ನನ್ನ ಜೀವದ ಗೆಳೆಯರು. ನಾವು ಮೂವರೇ ಪ್ರತಿವರ್ಷವೂ ವರ್ಷದ ಕೊನೆಯ ದಿನ ಎಲ್ಲಿಗಾದರೂ ಟ್ರಿಪ್ ಹೋಗಬೇಕು ಎಂದು ತೀರ್ಮಾನಿಸಿದ್ದೆವು.

ಅಂತರ್ಜಾಲದಲ್ಲಿ ಬೆಂಗಳೂರಿನ ಸುತ್ತಮುತ್ತಲ ಪ್ರವಾಸೀ ತಾಣಗಳಿಗಾಗಿ ಜಾಲಾಡಿದಾಗ ದೇವರಾಯನದುರ್ಗ ಸಿಕ್ಕಿತು. ವಿವರಗಳೂ ಸಿಕ್ಕವು. ಎಲ್ಲರಿಗೂ ಇಷ್ಟವೂ ಆಯಿತು. ನಾವು ಪಯಣಕ್ಕೆ ತಯಾರಾಗತೊಡಗಿದೆವು.

ತಯಾರಿ
ಮಲ್ಲೇಶ್ವರಂನಲ್ಲಿ ಒಂದು ಕಡೆ ಚಪಾತಿ ಮಾಡಿ ಕೊಡ್ತಾರೆ ಅಂತ ಗೊತ್ತಾಯ್ತು. ಹುಡುಕಿಕೊಂಡು ಹೋಗಿ ಆರ್ಡರ್ ಕೊಟ್ಟು ಬಂದೆವು. ದೇವರಾಯನದುರ್ಗದಲ್ಲಿರುವ ಹೋಟೆಲ್ಲು, ಗೆಸ್ಟ್‍ಹೌಸ್‍ಗಳಲ್ಲಿ ರೂಮ್ ಬುಕ್ ಮಾಡಲಿಕ್ಕೆ ಪ್ರಯತ್ನಿಸಿದೆವಾದರೂ ಸಫಲವಾಗಲಿಲ್ಲ. ಹಾಗಾಗಿ, ಅಲ್ಲಿಗೆ ಹೋಗಿಯೇ ನೋಡೋದು ಎಂದಾಯಿತು. ಅಕಸ್ಮಾತಾಗಿ ರೂಮ್ ಸಿಗಲಿಲ್ಲ ಅಂದ್ರೆ ಇಡೀ ರಾತ್ರಿ ಹೊರಗಡೆಯೇ ಇರಲಿಕ್ಕೂ ಸೈ ಎಂದಾಯಿತು. ಜೈ ಎಂದೆವು. ಕಾರು ಮಾಡಿಸಿಕೊಂಡು ಹೋಗೋಣ ಎಂದುಕೊಂಡೆವು. ಮತ್ತೆ ನಾವು ಮೂವರಿಗೆ ಏನಕ್ಕೆ ಕಾರು; ಬಸ್ಸಿಗೆ ಹೋಗೋಣ, ಮಜಾ ಇರೊತ್ತೆ ಅಂತ ತೀರ್ಮಾನಿಸಿದೆವು.

ಪಯಣ

ಮೆಜೆಸ್ಟಿಕ್ಕಿಗೆ ಹೋಗಿ ರೂಟು ವಿಚಾರಿಸಿ ಕೆ.ಎಸ್.ಆರ್.ಟಿ.ಸಿ. ಬಸ್ಸು ಹತ್ತಿದಾಗ ಮೂವತ್ತೊಂದನೇ ತಾರೀಖಿನ ಮಧ್ಯಾಹ್ನ ೩.೩೦. ಡಾಬಸ್‍ಪೇಟೆ (ದಬ್ಬಾಸ್‍ಪೇಟ್) ಎಂಬಲ್ಲಿಗೆ ಟಿಕೇಟ್ ತಗೊಂಡೆವು. ಕೊನೆಗೆ ಬಸ್ಸಿನಲ್ಲಿದ್ದವರಲ್ಲಿ ವಿಚಾರಿಸಿದಾಗ 'ಊರ್ಡಿಗೆರೆ'ಯಲ್ಲಿ ಇಳಕೊಂಡ್ರೆ ಹತ್ತಿರ ಅಂತ ಗೊತ್ತಾಯಿತು. ಹಾಗಾಗಿ ದಬ್ಬಾಸ್‍ಪೇಟೆಯಿಂದ ಮತ್ತೆ ಊರ್ಡಿಗೆರೆಗೆ ಟಿಕೀಟು ತಗೊಂಡೆವು. ಬಸ್ಸು ಊರ್ಡಿಗೆರೆ ತಲುಪಿದಾಗ ಐದೂ ವರೆಯಾಗಿತ್ತು. ಊರ್ಡಿಗೆರೆ ಒಂದಷ್ಟು ಅಂಗಡಿಗಳಿರುವ ಪುಟ್ಟ ಊರು. ಒಂದು ಮಿನಿ ಹೋಟೆಲಿತ್ತು. ಅಲ್ಲಿ ಮೂವರೂ ಕಾಫಿ ಕುಡಿದೆವು. 'ಇಲ್ಲಿಂದ ಐದು ಕಿಲೋಮೀಟರಾಗೊತ್ತೆ ದೇವರಾಯನದುರ್ಗದ ಬೆಟ್ಟ' ಎಂಬ ವಿವರ ಸಿಕ್ಕಿತು ಹೋಟಿಲಿನವನಿಂದ. ಬೆಟ್ಟ ಕಣ್ಣಿಗೆ ಹತ್ತಿರದಲ್ಲೇ ಇದ್ದಂತೆ ಕಾಣಿಸುತ್ತಿತ್ತಾದಾರೂ ನಡೆದುಕೊಂಡು ಹೋಗಲಿಕ್ಕೆ ದೂರ ಅನ್ನಿಸಿ, ಆಟೋ ಮಾಡಿಸಿಕೊಂಡು ಹೊರಟೆವು. ದೇವರಾಯನದುರ್ಗ ತಲುಪಿದಾಗ ಆರೂ ವರೆ. ಅದಾಗಲೇ ಕತ್ತಲಾಗುತ್ತಿತ್ತು.

ರೂಮಿಗಾಗಿ ಪರದಾಟ
ಹೋಗಿ ಮುಟ್ಟಿದಾಕ್ಷಣ ಅಲ್ಲಿದ್ದ ಪ್ರವಾಸಿ ಮಂದಿರಗಳಲ್ಲಿ ತಂಗಲು ರೂಮಿದೆಯಾ ಎಂದು ವಿಚಾರಿಸಿದೆವು. 'ಇಲ್ಲ' ಎಂಬ ಉತ್ತರ ರೆಡಿಮೇಡೇನೋ ಎಂಬಂತೆ ಬಂತು. 'ಬೆಟ್ಟದ ಮೇಲೂ ಒಂದು ಗೆಸ್ಟ್‍ಹೌಸ್‍ ಇದೆ; ಆದರೆ ಅಲ್ಲೂ ರೂಮು ಸಿಗುವುದು ಡೌಟು' ಎಂಬ ಮಾಹಿತಿ ಸಿಕ್ಕಿತು. ನಾವು ಹೊರಗಡೆ ತಂಗಲಿಕ್ಕೂ ತಯಾರಾಗಿಯೇ ಬಂದಿದ್ದರಿಂದ 'ಏನಾದರಾಗಲಿ' ಎಂದುಕೊಂಡು ಬೆಟ್ಟದ ಆರೋಹಣಕ್ಕೆ ಮುಂದಾದೆವು. ಹೊರಡುವಷ್ಟರಲ್ಲಿ ಯಾರನ್ನೋ ವಿಚಾರಿಸಿದಾಗ ಆ ಮೇಲ್ಗಡೆಯ ಗೆಸ್ಟ್‍ಹೌಸಿನವರೇ ಆದ ರಮೇಶ್ ಎಂಬುವವರೊಬ್ಬರ ಪರಿಚಯ ಆಯಿತು. ಅವರೆಂದರು, 'ನಿಮಗೆ ರೂಮ್ ಕೊಡಲಿಕ್ಕೆ ಆಗುವುದಿಲ್ಲ. ಆದರೆ ನಮ್ಮ ಆಫೀಸಿನಲ್ಲೇ ಬೇಕಾದರೆ ಮಲಗಿಕೊಳ್ಳಲಿಕ್ಕೆ ಅವಕಾಶ ಮಾಡಿಕೊಡಬಹುದು' ಅಂತ. ಅಷ್ಟಾದರೆ ಸಾಕಾಗಿತ್ತು ನಮಗೆ. 'ಥ್ಯಾಂಕ್ಯೂ ಸರ್!' ಎಂದೆವು.


ದೇವರಾಯನದುರ್ಗ
ದೇವರಾಯನದುರ್ಗ ತುಮಕೂರು-ಬೆಂಗಳೂರುಗಳ ನಡುವೆ ಇರುವ ಒಂದು ಬೆಟ್ಟ. ಬೆಂಗಳೂರಿನಿಂದ ಸುಮಾರು ೭೦ ಕಿಲೋಮೀಟರ್ ದೂರದಲ್ಲಿದೆ. ಈ ಬೆಟ್ಟ ಸುಮಾರು ೪೦೦೦ ಅಡಿಗಳ ಎತ್ತರವಿದೆ. ಇಲ್ಲಿ ಯೋಗನರಸಿಂಹ ಮತ್ತು ಭೋಗನರಸಿಂಹ ಎಂಬೆರಡು ದೇವಸ್ಥಾನಗಳು ಇವೆ. ಇಲ್ಲಿ ವಾಸವಾಗಿದ್ದ ಅಂಧಕ (ಲಿಂಗಕ) ಎಂಬ ಹೆಸರಿನ ದರೋಡೆಕೋರನನ್ನು ಮೈಸೂರಿನ ದೊರೆ ಹೇಮಚಂದ್ರನ ಪುತ್ರ ಸುಮತಿ ಕೊಂದುಹಾಕಿ ತಮ್ಮ ಅಧಿಕಾರವನ್ನು ಸ್ಥಾಪಿಸಿದರು ಎಂಬ ಪ್ರತೀತಿಯಿದೆ. ಹಳೆಯ ಕೋಟೆಯ ಅಳಿದುಳಿದ ಅವಶೇಷಗಳನ್ನೂ ಇಲ್ಲಿ ಕಾಣಬಹುದು. 'ನಾಮದ ಚಿಲುಮೆ' ಎಂಬ ಹೆಸರಿನ ಒಂದು ಪುಷ್ಕರಿಣಿ ಸಹ ಇಲ್ಲಿದೆ. ಶ್ರೀರಾಮ ಸೀತೆಯನ್ನು ಹುಡುಕಿಕೊಂಡು ಲಂಕೆಗೆ ತೆರಳುತ್ತಿದ್ದಾಗ ಇಲ್ಲಿಗೆ ಬಂದಿದ್ದ. ಆಗ ಅವನಿಗೆ 'ನಾಮ' ಹಚ್ಚಿಕೊಳ್ಳಲಿಕ್ಕೆ ಇಲ್ಲಿ ನೀರು ಸಿಗದಿದ್ದರಿಂದ, ನೆಲಕ್ಕೆ ಒಂದು ಬಾಣ ಬಿಟ್ಟು ನೀರು ತರಿಸಿದ ಎಂದು ನಂಬಲಾಗಿದೆ. ಆ ಕೊಳದ ಪಕ್ಕ ಇರುವ ಒಂದು ಪುಟ್ಟ ಗುಂಡಿಯೇ ರಾಮನ ಪಾದದ ಗುರುತು ಎಂದು ಸಹ ಗುರುತಿಸಿದ್ದಾರೆ ಜನ!

ದೇವರಾಯನದುರ್ಗದಲ್ಲಿ ಅರಣ್ಯ ಇಲಾಖೆ ನಡೆಸುವ ಒಂದು ವಸತಿ ಮಂದಿರವಿದೆ. ದೇವಸ್ಥಾನದವರ ಒಂದು ಪ್ರವಾಸೀ ಮಂದಿರವಿದೆ. ಬೆಟ್ಟದ ಮೇಲ್ಗಡೆ ಪೋಲೀಸ್ ಇಲಾಖೆಯವರ ಒಂದು ಗೆಸ್ಟ್‍ಹೌಸ್ ಇದೆ.

ಆ ಅಜ್ಜಿ..
ಬೆಟ್ಟ ಹತ್ತಲಿಕ್ಕೆ ಅಲ್ಲಲ್ಲಿ ಟಾರು - ಅಲ್ಲಲ್ಲಿ ಮಣ್ಣಿನ ಒಳ್ಳೆಯ ರಸ್ತೆಯೇ ಇತ್ತು. ತಿಂಗಳ ಬೆಳಕಂತೂ ಬೇಕಾದಷ್ಟಿತ್ತು. ಬ್ಯಾಗೇರಿಸಿ, ಶೇಂಗ ತಿನ್ನುತ್ತಾ ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಒಂದು ಅಜ್ಜಿ ನಡೆದುಬರುತ್ತಿರುವುದು ಕಾಣಿಸಿತು. ಅಜ್ಜಿ ನಮ್ಮ ಬಳಿ ಬಂದದ್ದೇ, "ಈಗ ಮೇಲಕ್ಕೆ ಹೊಂಟೀರೇನಪ್ಪ? ನಾನು ಹೇಳ್ತಿದೀನಿ, ಹೋಗಬ್ಯಾಡ್ರಿ ಮೇಲಕ್ಕೆ. ಅಲ್ಲಿ ನರಹುಳಾನೂ ಇಲ್ಲ. ಉಳಕೊಳ್ಳಲಿಕ್ಕೆ ಅಲ್ಲಿ ನಿಮಗೇನೂ ಇಲ್ಲ. ಕಳ್ಳರು-ಕಾಕರು ಇದಾರೆ. ನೀವು ಹೋದದ್ದೇ ಆದ್ರೆ, ನಾನು ಹೇಳ್ತಿದೀನಿ, ವಾಪಸು ಬರಂಗಿಲ್ಲ ನೋಡ್ರಿ!" ಅಂತು. ನಾವು ಕಕ್ಕಾಬಿಕ್ಕಿಯಾದೆವು. ಇದೇನು ಹೊಸ ವರಾತ ಬಂತಲ್ಲ ಅನ್ನಿಸಿತು. ಅಜ್ಜಿ ತಮಾಷೆಗೆ ಹೇಳುತ್ತಿದೆಯೇ ಅನ್ನಿಸಿತು. ಆದರೆ ಮತ್ತೆ ಅಜ್ಜಿ, "ನೋಡ್ರಿ, ನಾನು ಹೇಳ್ತಿದೀನಿ, ಈಗ ಮೇಲಕ್ಕೆ ಹೋಗಬ್ಯಾಡ್ರಿ. ಇಲ್ಲೇ ಕೆಳಗಡೆ ದೇವಸ್ಥಾನದಾಗೆ ಉಳಕೊಂಡು ಬೆಳಗ್ಗೆ ಬೇಕಾದ್ರೆ ಹೋಗ್ರಿ" ಅಂದಿತು. ನಮಗೆ ಅಷ್ಟೊಂದು ಭಯವೇನಿರಲಿಲ್ಲ. ಅಲ್ಲದೇ ತುಂಬಾ ಜನ, ವೆಹಿಕಲ್ಲುಗಳು ಬೆಟ್ಟದಿಂದ ಇಳಿದುಬರುತ್ತಿದ್ದುದರಿಂದ ಹೆದರಬೇಕಾದ ಅವಶ್ಯಕತೆಯಿಲ್ಲ ಅನ್ನಿಸಿತು. ಆದರೂ ಅಜ್ಜಿ ಹಾಗೆ ಹೇಳಿದಮೇಲೆ ಹುಂಬತನ ಮಾಡಿ ಮುನ್ನುಗ್ಗುವುದಕ್ಕೆ ಮನಸ್ಸಾಗಲಿಲ್ಲ. ಹಾಗಾಗಿ, ಅಜ್ಜಿಯ ಜೊತೆಯೇ ನಾಲ್ಕು ಹೆಜ್ಜೆ ವಾಪಸು ಬಂದೆವು. ಅಜ್ಜಿಯ ಬಳಿ ಅವಳ ಬಗ್ಗೆ ವಿಚಾರಿಸಿದೆವು. ಅಜ್ಜಿ ಭಿಕ್ಷೆ ಬೇಡಲಿಕ್ಕೆ ಅಲ್ಲಿಗೆ ಹೋಗಿದ್ದು ಅಂತ ಗೊತ್ತಾಯಿತು. ಹಾಗಾದರೆ ಈ ಅಜ್ಜಿಗೆ ಬುದ್ಧಿಭ್ರಮಣೆಯಾಗಿರಲಿಕ್ಕೂ ಸಾಕು ಅನ್ನಿಸಿ, 'ಏ.. ಏನಾಗಲ್ಲ ಬರ್ರೋ..' ಅಂದುಕೊಂಡು ಮತ್ತೆ ಬೆಟ್ಟದತ್ತ ಮುಖ ಮಾಡಿದೆವು.

ಬೆಟ್ಟವೆಂದರೆ...
ದೇವರಾಯನದುರ್ಗದ ಈ ಬೆಟ್ಟ ಚಾರಣಪ್ರಿಯರಿಗೇನು ಅಷ್ಟೊಂದು ಇಷ್ಟವಾಗಲಾರದು. ಏಕೆಂದರೆ ಇಲ್ಲಿ ಚಾರಣ ಮಾಡಲಿಕ್ಕೆ ಅವಕಾಶವೇ ಇಲ್ಲ. ಬೆಟ್ಟದ ಮೇಲ್ತುದಿಯವರೆಗೂ ಒಳ್ಳೆಯ ರಸ್ತೆಯೇ ಇದೆ. ಅಷ್ಟಷ್ಟು ಕಲ್ಲು, ಅಷ್ಟಷ್ಟು ಮಣ್ಣು, ಅಷ್ಟಷ್ಟು ಗಿಡ-ಮರ-ಪೊದೆ ಬೆಟ್ಟವನ್ನಾವರಿಸಿವೆ.

ನಾವು ಹೊರಡುವಷ್ಟರಲ್ಲೇ ಕತ್ತಲಾಗಿತ್ತಾದರೂ ಚೆನ್ನಾಗಿ ಬೆಳದಿಂಗಳಿತ್ತು. ಕೈಯಲ್ಲಿ ಟಾರ್ಚನ್ನೂ ಹಿಡಿದಿದ್ದೆವು. ಸಾಕಷ್ಟು ಹೋಗುವ-ಬರುವ ವಾಹನಗಳಿದ್ದವು. ಹೀಗಾಗಿ, ನಮ್ಮ ಚಾರಣಕ್ಕೆ ಯಾವ ತೊಂದರೆಯೂ ಆಗಲಿಲ್ಲ.

ಮೇಲೆ
ತುದಿಯನ್ನು ಮುಟ್ಟಿದಮೇಲೆ ಅಲ್ಲಿನ ಗೆಸ್ಟ್‍ಹೌಸನ್ನು ಒಮ್ಮೆ ನೋಡಿ ಬಂದೆವು. ಸಣ್ಣದಾಗಿ ತೆರೆದಿದ್ದ ಬಾಗಿಲಿಂದ ಒಳಗಡೆ ಗುಂಡು ಹಾಕುತ್ತಾ ಕುಳಿತಿದ್ದ ಜನಗಳ ಪರಿವಾರ ಕಾಣಿಸಿತು. ಇಲ್ಲಿ ಪಬ್ಲಿಕ್‍ಗೆ ರೂಮುಗಳನ್ನು ಕೊಡುವುದೇ ಇಲ್ಲವಂತೆ. ಎಲ್ಲಾ ರೂಮುಗಳೂ ಪಿ.ಡಬ್ಲ್ಯೂ.ಡಿ. ಆಫೀಸರುಗಳಿಗೆ, ವಿ.ಐ.ಪಿ.ಗಳಿಗೆ, ಸರ್ಕಾರೀ ಅಧಿಕಾರಿಗಳಿಗೆ ಮೀಸಲಿರುತ್ತದೆ. ಅವರು ಹೀಗೆ ಆಗಾಗ ಬಂದು ಗುಂಡು ಹಾಕುತ್ತಾ, ಇಸ್ಪೀಟು ಆಡುತ್ತಾ ಕಾಲ ಕಳೆಯುತ್ತಾರೆ. ನಮಗಂತೂ ಅಲ್ಲಿನ ಆ ಗೆಸ್ಟ್‍ಹೌಸು ಅನೈತಿಕ ಚಟುವಟಿಕೆಗಳಿಗೆ ಆಶ್ರಯವಿತ್ತಂತೆಯೂ ಅನ್ನಿಸಿತು. ನಾವು ಅಲ್ಲಿ ತಂಗುವ ಆಸೆಯನ್ನು ಬಿಟ್ಟುಬಿಟ್ಟೆವು. ಹೊರಗಡೆಯೇ ಕಾಲ ಕಳೆಯೋಣ ಎಂದು ತೀರ್ಮಾನಿಸಿದೆವು.

ಫೈರ್‌ಕ್ಯಾಂಪ್!
ಇಯರೆಂಡಾದ್ದರಿಂದ, ಬೆಟ್ಟದ ಮೇಲೆ ಸಿಕ್ಕಾಪಟ್ಟೆ ಜನ ಇದ್ದರು. ಬೆಟ್ಟದಲ್ಲಿ ಅಲ್ಲಲ್ಲಿ ಒಲೆ ಹೂಡಿಕೊಂಡು, ಸಾಮಾನು-ಸರಂಜಾಮುಗಳನ್ನೆಲ್ಲಾ ತಂದುಕೊಂಡು, ಅಡುಗೆ ಮಾಡಿಕೊಂಡು, ಗುಂಡು ಹಾಕುತ್ತಾ ಕುಳಿತಿದ್ದ ಗುಂಪುಗಳಿದ್ದವು. ತುಂಬಾ ಗಲಾಟೆಯಿತ್ತು. ನಾವು ಇವರೆಲ್ಲರಿಂದ ಸ್ವಲ್ಪ ದೂರ ಇರಬೇಕು ಅನ್ನಿಸಿತು. ಪ್ರಶಾಂತ ಸ್ಥಳವನ್ನರಸಿ ಹೊರಟೆವು. ಒಂದು ಕಡೆ ಅಂತಹ ಜಾಗ ಸಿಕ್ಕಿತು. ಅಲ್ಲೇ ನಮ್ಮ ಬ್ಯಾಗುಗಳನ್ನು ಇಟ್ಟು, ಕಟ್ಟಿಗೆ ಒಟ್ಟುಮಾಡಿ ಬೆಂಕಿ ಹಚ್ಚಿ, ಫೈರ್‌ಕ್ಯಾಂಪ್ ಮಾಡಿದೆವು. ನಿಧಾನಕ್ಕೆ ಹೊತ್ತಿಕೊಂಡ ಬೆಂಕಿ ತನ್ನ ಶಾಖವನ್ನು ಸುತ್ತಲೂ ಸೂಸಲಾರಂಭಿಸಿತು. ಅದರ ಕೆಂಬಣ್ಣ ಬೆಳದಿಂಗಳ ಬಿಳುಪಿನೊಂದಿಗೆ ಗೊತ್ತೇ ಆಗದಂತೆ ಬೆರೆಯಲಾರಂಭಿಸಿತು. ಸುತ್ತಲೂ ಕುಳಿತು ಹರಟೆ ಶುರುಹಚ್ಚಿದೆವು.

ಹರಟೆ ಹರಟೆ ಹರಟೆ
ಪ್ಯಾಂಟು ಬಿಚ್ಚಿ, ಚಡ್ಡಿ ಧರಿಸಿ, ಮೈತುಂಬ ಕೋಟು/ಸ್ವೆಟರು ತೊಟ್ಟು, ಕಟ್ಟಿಕೊಂಡು ಹೋಗಿದ್ದ ಶೇಂಗ, ಬಟಾಣಿ, ಅದೂ-ಇದುಗಳನ್ನು ತಿನ್ನುತ್ತಾ ಕುಳಿತೆವು. ಉದ್ದುದ್ದ ಹರಟೆಯಲ್ಲಿ ತೊಡಗಿದೆವು. ಎರಡುಸಾವಿರದ ಆರು ಹೇಗಿತ್ತು? ಎರಡುಸಾವಿರದ ಏಳರಲ್ಲಿ ಸಾಧಿಸಬೇಕೆಂದಿರುವ ಗುರಿಗಳೇನು? -ಇತ್ಯಾದಿ ಚರ್ಚಿಸಬೇಕು ಎಂದುಕೊಂಡಿದ್ದೆವಾದರೂ ಅದು ಸಾಧ್ಯವಾಗಲಿಲ್ಲ. ಆ ವಿಷಯವನ್ನು ಎತ್ತಿಕೊಂಡಕೂಡಲೇ ಚರ್ಚೆ ಎತ್ತಲೋ ಸಾಗುತ್ತಿತ್ತು.

ಸಮಯ ಉರುಳುತ್ತಿತ್ತು. ಸುಮಾರು ಹತ್ತೂ ವರೆ ಆಗಿತ್ತು. ಬೆಳದಿಂಗಳ ಮಳೆ ಅವಿರತವಾಗಿ ಮುಂದುವರೆದಿತ್ತು. ಆಗಸದಲ್ಲಿ ಚಂದಿರ ತೇಲುತ್ತಿದ್ದ. ಇಬ್ಬನಿ ಬೀಳುತ್ತಿತ್ತು. ಬೆಂಕಿ ಉರಿಯುತ್ತಿತ್ತು. ಚರ್ಚೆ ಮುಂದುವರೆದಿತ್ತು.... ಆಗ ಬಂದ ಆತ!

ಮಂಜ ಬಂದ!
ಹರಟೆಯಲ್ಲೇ ಮುಳಿಗಿದ್ದ ನಮಗೆ ಹೊರಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದು ಬೇಕಿರಲಿಲ್ಲ. ಆದರೆ ನಾವು ಸಡನ್ನಾಗಿ ಎಚ್ಚರಾಗುವಂತೆ ಮಾಡುವಂತಹ ಘಟನೆ ಆಗ ನಡೆಯಿತು. ಕೈಯಲ್ಲಿ ಕತ್ತಿ ಹಿಡಿದಿದ್ದ ಒಬ್ಬ ವ್ಯಕ್ತಿ ನಮ್ಮೆದುರು ಪ್ರತ್ಯಕ್ಷನಾದ! 'ಏನಣ್ಣಾ.. ಎಲ್ಲಿಂದ ಬಂದಿದೀರಿ...? ಮೂವರೇನಾ..?' ಎನ್ನುತ್ತಾ ಬಂದವನು ತನ್ನ ಕತ್ತಿಯನ್ನು ನಮ್ಮ ಪಕ್ಕದಲ್ಲಿ ಬೀಳಿಸಿದಂತೆ ಇಟ್ಟು ತಾನೂ ಬೆಂಕಿ ಕಾಯಿಸಲಿಕ್ಕೆ ಕುಳಿತುಬಿಟ್ಟ! ಅವನ ರೂಪ, ಇದ್ದಕ್ಕಿದ್ದಂತೆ ಎರಗಿಬಂದ ಅವನ ರೀತಿ, ಕೈಯಲ್ಲಿದ್ದ ಕತ್ತಿ, ಕೇಳಿದ ಪ್ರಶ್ನೆ ಎಲ್ಲಾ ನೋಡಿದ ನಾವು ತಕ್ಷಣ ಅಲರ್ಟ್ ಆದೆವು. ಅಜ್ಜಿ ಹೇಳಿದ್ದು ಥಟ್ಟನೆ ನೆನಪಾಯಿತು.

ಸಣ್ಣಕೆ ಭಯವಾಗಲು ಶುರುವಾಯಿತು... ಆದರೂ ಧೃತಿಗೆಡಲಿಲ್ಲ. 'ಇಲ್ಲೇ ತುಮಕೂರಿನಿಂದ ಬಂದದ್ದು. ಮೂರಲ್ಲ; ಇನ್ನೂ ನಾಲ್ಕು ಜನ ಇದಾರೆ, ಇಲ್ಲೇ ಮೇಲ್ಗಡೆ ಹೋಗಿದಾರೆ...' ಎಂಬುದಾಗಿ ಸುಳ್ಳಿನ ಕಂತೆಯನ್ನು ಕಟ್ಟಲಾರಂಭಿಸಿದೆವು. 'ನಿಮ್ಮ ಹೆಸರೇನಣ್ಣ?' ಅಂದ ಅಂವ. 'ನನ್ನ ಹೆಸರು ಸುರೇಶ' 'ನಾನು ರಾಜು' 'ನಾನು ರಮೇಶ್' ಎಂಬುದಾಗಿ ಸುಳ್ಳು ಹೆಸರುಗಳನ್ನು ಹೇಳಿದೆವು. ಅವನ ಕಣ್ಣುಗಳು ನಮ್ಮೆಲ್ಲರನ್ನೂ ಗಮನಿಸುತ್ತಿದ್ದವು. 'ರೂಮ್ ಬುಕ್ ಮಾಡಿದೀರಾ ಸುರೇಶಣ್ಣ?' -ಕೇಳಿದ. ನಮ್ಮಲ್ಲಿ ಯಾರು ಸುರೇಶಣ್ಣ ಎಂಬುದು ಕನ್‍ಫ್ಯೂಸ್ ಆಯಿತು ಒಂದು ಕ್ಷಣ! ಆದರೂ ತಡವರಿಸದೆ, 'ಹೂಂ. ಮೇಲ್ಗಡೆ ಡಿ.ಐ.ಜಿ. ರಮೇಶ್ ಇದಾರಲ್ಲ, ಅವರು ನಮಗೆ ಪರಿಚಯ. ನಾವೂನೂ ಪೋಲೀಸ್ ಡಿಪಾರ್ಟ್‌ಮೆಂಟಿನವರೇ. ಹೀಗಾಗಿ ರೂಮ್ ಸಿಕ್ಕಿದೆ' ಎಂದೆವು -ಅವನಿಗೆ ಭಯ ಹುಟ್ಟಿಸಲೋಸುಗ.

ಆದರೆ ಅವನಿಗೆ ನಾವು ಅಲರ್ಟ್ ಆಗಿರುವುದು ಗೊತ್ತಾಗಿಹೋಯಿತು. ಇವರ ಹತ್ತಿರ ತನ್ನ ಆಟ ನಡೆಯಲಾರದು ಎನ್ನಿಸಿತೇನೋ. ಅವನು ಕೂಲ್ ಆಗತೊಡಗಿದ. ನಾವೂ ಅವನ ಬಳಿ ಅವನ ಬಗ್ಗೆ ವಿಚಾರಿಸಿದೆವು. ತನ್ನ ಹೆಸರು ಮಂಜು ಎಂದ. ಬೆಟ್ಟದ ಕೆಳಗಡೆ ತಾನೂ ಮತ್ತು ತನ್ನ ಅಣ್ಣನ ಅಂಗಡಿಯಿದೆ ಎಂದು ಹೇಳಿದ. 'ಎಣ್ಣೆ-ಗಿಣ್ಣೆ ಬೇಕಾ ಸಾರ್, ತಂದುಕೊಡ್ತೀನಿ' ಅಂದ. 'ಏನೂ ಬ್ಯಾಡಪ್ಪ' ಎಂದೆವು.

ನಮಗೆ ತುಂಬಾ ಭಯವೇನೂ ಆಗುತ್ತಿರಲಿಲ್ಲ. ಆದರೆ ಇವನನ್ನು ಹೀಗೆ ನಮ್ಮ ಜೊತೆ ಕೂರಿಸಿಕೊಂಡಿರುವುದು ಕ್ಷೇಮವಲ್ಲ ಅಂತ ಮಾತ್ರ ಅನ್ನಿಸುತಿತ್ತು. 'ಏನು ತಾನೇ ಮಾಡಿಯಾನು? ನಾವು ಮೂವರಿದ್ದೇವೆ, ಇವನು ಒಬ್ಬನೇ' ಎಂಬ ಧೈರ್ಯದ ಜೊತೆಗೇ 'ಇವನ ಜೊತೆ ಇನ್ನೂ ಎಷ್ಟು ಜನ ಇದ್ದಾರೋ ಏನೋ' ಅಂತಲೂ ಯೋಚನೆಯಾಯಿತು. ಹೇಗಾದರೂ ಮಾಡಿ ಇವನನ್ನು ಸಾಗಹಾಕಬೇಕು ಎಂದಾಲಾಚೋಸಿದೆವು.

'ಸರಿ, ಮೇಲ್ಗಡೆ ಹೋಗಿ ಊಟ ಮಾಡ್ಕೊಂಡು ಆಮೇಲೆ ಬರೋಣ ಬನ್ರೋ' ಅಂತ ನಮನಮಗೇ ಹೇಳಿಕೊಂಡು ಎದ್ದುನಿಂತೆವು. ನಮ್ಮ ಬ್ಯಾಗುಗಳನ್ನೆತ್ತಿಕೊಂಡು ಹೊರಟೇಬಿಟ್ಟೆವು. ಅವನನ್ನು ಪರಿಕಿಸಲೋಸುಗ, 'ನೀವೂ ಬನ್ನಿ ಮಂಜು, ನಮ್ಮ ಜೊತೇನೇ ಊಟ ಮಾಡುವಂತ್ರಿ' ಅಂತ ಕರೆದೆವು. ಆದರೆ ಆತ ಬರಲಿಕ್ಕೆ ಒಪ್ಪಲಿಲ್ಲ. 'ಇಲ್ಲ ಸುರೇಶಣ್ಣ, ನಾನು ಹೋಗ್ತೀನಿ ಸುರೇಶಣ್ಣ. ಕೆಳಗಡೆ ನಮ್ಮನೆ ಐತಣ್ಣ. ನಾನು ಹೋಗ್ತೀನಣ್ಣ' ಎಂದವನೇ ಅಲ್ಲಿಂದ ಕಾಲ್ಕಿತ್ತ.

ಕಳ್ಳನಿಗೇ ಚಳ್ಳೆಹಣ್ಣು!
ನಾವು ಕುಳಿತಿದ್ದ ಜಾಗ ಎಂಥದಿತ್ತೆಂದರೆ ಅವನೇನಾದರೂ ನಮ್ಮ ಮೇಲೆ ಎರಗಿ ಬಂದಿದ್ದರೆ ನಾವು ಓಡಿ ತಪ್ಪಿಸಿಕೊಳ್ಳಲಿಕ್ಕೂ ಆಗುತ್ತಿರಲಿಲ್ಲ. ಜನರ ಗೌಜಿನಿಂದ ದೂರವಿರಬೇಕು ಎಂದುಕೊಂಡು ನಾವು ಅರಸಿ ಆರಿಸಿದ್ದ ಈ ಸ್ಥಳ ನಮಗೇ ಕಂಟಕಕಾರಿಯಾಗಿತ್ತು. ಅವನು ಅತ್ತ ಹೋದದ್ದೇ ನಾವು ಜನಗಳು ಜಾಸ್ತಿ ಇರುವ ಕಡೆಗೆ ಧಾವಿಸಿದೆವು.

ನಾವು ಕೇಳಿದ ಪ್ರಶ್ನೆಗಳಿಗೆ ಅವನು ಹೇಳುತ್ತಿದ್ದ ಉತ್ತರಗಳು ಒಂದಕ್ಕೊಂದಕ್ಕೆ ಸಂಭಂದವಿರುತ್ತಿರಲಿಲ್ಲ. ಅಲ್ಲದೇ ಅವನ ಚಲನವಲನಗಳು, ಓರೆಗಣ್ಣಿನಿಂದ ನಮ್ಮನ್ನು ಗಮನಿಸುತ್ತಿದ್ದ ರೀತಿ, ಅವನ ಕತ್ತಿ... ಎಲ್ಲಾ ಕಂಡಿದ್ದ ನಾವು ನಿಸ್ಸಂಶಯವಾಗಿ ಅವನೊಬ್ಬ ದರೋಡೆಕೋರ ಎಂಬ ತೀರ್ಮಾನಕ್ಕೆ ಬಂದಿದ್ದೆವು. ಕಳ್ಳನಿಗೇ ಚಳ್ಳೆಹಣ್ಣು ತಿನ್ನಿಸಿದ ಖುಷಿಯಲ್ಲಿ ಹಿಗ್ಗಿದೆವು. ಆದರೆ 'ಅವನು ತನ್ನ ಮತ್ತಷ್ಟು ಸಂಗಡಿಗರನ್ನು ಕಟ್ಟಿಕೊಂಡು ಮತ್ತೆ ಬಂದುಬಿಟ್ಟರೆ?' ಎಂಬ ಭಯ ಮಾತ್ರ ಹಾಗೆಯೇ ಇತ್ತು.

ಮುಗಿಯದ ರಾತ್ರಿ
ಹೊಸ ವರ್ಷವನ್ನು ಹೊಸ ರೀತಿಯಲ್ಲಿ, ಸಂಭ್ರಮದಿಂದ ಸ್ವಾಗತಿಸಬೇಕೆಂದುಕೊಂಡು ಇಲ್ಲಿಗೆ ಬಂದಿದ್ದ ನಾವು ಭಯ, ತಳಮಳಗಳಲ್ಲಿ ತೊಳಲಾಡುವಂತಾಯಿತು. ಇನ್ನೂ ರಾತ್ರಿ ಹನ್ನೊಂದಾಗಿತ್ತು. ಹೊಸ ವರ್ಷ ಬರುವುದಕ್ಕೆ ಇನ್ನೂ ಒಂದು ಗಂಟೆ ಕಾಯಬೇಕಿತ್ತು. ಆದಷ್ಟು ಬೇಗ ಗಂಟೆ ಹನ್ನೆರಡಾಗಿ, ಹೊಸ ವರ್ಷ ಬಂದು, ಈ ಕಾವಳದ ರಾತ್ರಿ ಮುಗಿದು, ನಿಚ್ಛಳ ಬೆಳಕಿನ ಬೆಳಗು ಬಂದರೆ ಸಾಕಿತ್ತು. ನಾವು ಅಲ್ಲೇ ಬದಿಯಲ್ಲಿ ಕುಂತು, ಕಟ್ಟಿಕೊಂಡು ಹೋಗಿದ್ದ ಚಪಾತಿಯನ್ನು ತಿಂದು ಮುಗಿಸಿದೆವು. ಮತ್ತೆ ಒಂದಷ್ಟು ಕಟ್ಟಿಗೆಯನ್ನು ಒಟ್ಟುಹಾಕಿ ಸಮೀಪದಲ್ಲೇ ಬೆಂಕಿ ಮಾಡಿದೆವು. ಬೆಂಕಿ ಇಲ್ಲದೇ ಆ ಚಳಿಯ ರಾತ್ರಿಯನ್ನು ನಾವು ಕಳೆಯುವುದೂ ಕಷ್ಟವಿತ್ತು. ಅದೂ ಇದೂ ಮಾತನಾಡುತ್ತಾ ಹೊಸವರುಷದ ಆಗಮನಕ್ಕೆ ಚಾತಕದಂತೆ ಕಾಯತೊಡಗಿದೆವು.

ಬಂತು ೨೦೦೭
ವಾಚಿನ ಮುಳ್ಳು ಓಡುತ್ತೋಡುತ್ತ... ಹನ್ನೊಂದೂ ಕಾಲು..ಹನ್ನೊಂದೂ ವರೆ..ಹನ್ನೊಂದೂ ಮುಕ್ಕಾಲು.. ಹನ್ನೆರಡು.. ಹಾ! ಬಂದೇ ಬಿಟ್ಟಿತು ಹೊಸ ವರುಷ! ನೋಡನೋಡುತ್ತಿದ್ದಂತೆಯೇ ಗಂಟೆ ಹನ್ನೆರಡಾಗಿ ಎರಡು ಸಾವಿರದ ಆರನೇ ಇಸವಿಯಲ್ಲಿದ್ದ ನಮ್ಮನ್ನು ಎರಡು ಸಾವಿರದ ಏಳನೇ ಇಸವಿಯಲ್ಲಿ ಕೂರಿಸಿಬಿಟ್ಟಿತ್ತು. ಇಡೀ ಬೆಟ್ಟಕ್ಕೆ ಬೆಟ್ಟವೇ 'ಹೋ..' 'ಹ್ಯಾಪಿ ನ್ಯೂ ಇಯರ್..' ಎಂಬ ಚೀರಾಟದಿಂದ ತುಂಬಿಕೊಂಡಿತು. ಏನು ಮಾಡಬೇಕೆಂದು ತಿಳಿಯದೇ ನಾವೂ ಕೂಗಿಕೊಂಡೆವು. 'ಹ್ಯಾಪಿ ನಿವ್ವಿಯರ್.. ಹ್ಯಾಪಿ ನಿವ್ವಿಯರ್..!' ಒಬ್ಬರನ್ನೊಬ್ಬರು ಆಲಂಗಿಸಿಕೊಂಡೆವು, ಶೇಕ್-ಹ್ಯಾಂಡ್ ಮಾಡಿಕೊಂಡೆವು, ಸಿಗುತ್ತಿದ್ದ ಚೂರುಪಾರು ನೆಟ್‍ವರ್ಕ್‍ ಬಳಸಿಯೇ ಗೆಳೆಯರಿಗೆ ಮೆಸೇಜು ಕಳಿಸಿದೆವು. ಕೆಲವರಿಗೆ ಕಾಲ್ ಮಾಡಿದೆವು. ಓಹೋ... ಹೊಸ ವರ್ಷ... ಎರಡ್ಸಾವ್ರದೇಳು ಬಂದೇ ಬಿಟ್ಟಿತ್ತು!

ಕೋಳಿ ನಿದ್ರೆ
ರಾತ್ರಿ ಸುಮಾರು ಎರಡೂ ವರೆಯ ವರೆಗೆ ಹಾಗೇ ಬೆಂಕಿ ಕಾಯಿಸುತ್ತಾ ಕುಳಿತಿದ್ದ ನಾವು ಆಮೇಲೆ, ನಮಗೆ ಮಲಗಿಕೊಳ್ಳಲಿಕ್ಕೆ ಜಾಗ ಕೊಡುತ್ತೀನಿ ಎಂದಿದ್ದ ಆಸಾಮಿಯನ್ನು ಹುಡುಕಿಕೊಂಡು ಅವನ ಆಫೀಸಿನ ಕಡೆಗೆ ಹೊರಟೆವು. ಕನಿಷ್ಟ ಮೂರು ತಾಸಾದರೂ ನಿದ್ರೆ ಮಾಡದಿದ್ದರೆ ನಾಳೆ ತೊಂದರೆಯಾಗುತ್ತದೆ ಎಂಬ ದೃಷ್ಟಿಯಿಂದ, ಒಂದು ಕೋಳಿ ನಿದ್ರೆ ತೆಗೆಯಲೇಬೇಕೆಂದು ತೀರ್ಮಾನಿಸಿದೆವು. ಅಲ್ಲದೇ ಬೆಳಗ್ಗೆ ಸೂರ್ಯೋದಯವನ್ನು ನೋಡಲು ಬೇಗನೆ ಏಳಬೇಕಿತ್ತು ನಾವು. ಆದರೆ ಆ ಮನುಷ್ಯ ತನ್ನ ಸ್ನೇಹಿತರೊಂದಿಗೆ ಕುಡಿಯುತ್ತಾ ಕುಳಿತಿರುವುದು ಕಾಣಿಸಿತು. ಅವನನ್ನು ಡಿಸ್ಟರ್ಬ್ ಮಾಡುವುದು ಬೇಡ ಅನ್ನಿಸಿತು. ಪಕ್ಕದಲ್ಲೇ ಇದ್ದ ಮತ್ತೊಂದು ಆಫೀಸಿಗೆ ವಿಶಾಲವಾದ ಕಟ್ಟೆಯಿತ್ತು. ಅನೇಕರು ಅಲ್ಲಿಯೇ ಮಲಗಿದ್ದರು. ನಾವೂ ಅಲ್ಲೇ, ನಮ್ಮ ಚಾಪೆ ಹಾಸಿ, ರಗ್ಗು ಬೆಡ್‍ಶೀಟುಗಳನ್ನು ಹೊದ್ದು ಮಲಗಿಬಿಟ್ಟೆವು. ಸುಸ್ತಿಗೆ ನಿದ್ರೆಯೂ ಬಂತು.

ಹೊಸ ಬೆಳಗು
ಆರು ಗಂಟೆಗೆ ಸರಿಯಾಗಿ ನಮ್ಮ ಮೊಬೈಲಿನ ಅಲಾರಾಂ ಹೊಡೆದುಕೊಂಡಿತು. ಕಣ್ಣುಬಿಟ್ಟು ನೋಡಿದರೆ ಇನ್ನೂ ಕತ್ತಲಿತ್ತು. ದಟ್ಟವಾಗಿ ಇಬ್ಬನಿ ಬೀಳುತ್ತಿತ್ತು. 'ಏಯ್, ಇಷ್ಟು ಮುಂಚೆ ಎದ್ದು ಏನ್ರೋ ಮಾಡೋದು? ಮಲಕ್ಕೊಳ್ರೋ' ಎಂದೆ ನಾನು ಗೆಳೆಯರ ಬಳಿ. ಆದರೆ ಅವರು ಬಿಡಲಿಲ್ಲ. ನಾನು ಹೊದ್ದಿದ್ದ ಬೆಡ್‍ಶೀಟನ್ನು ಕಿತ್ತುಹಾಕಿ 'ಏಳು ಸಾಕು, ಇನ್ನೇನು ಸ್ವಲ್ಪ ಹೊತ್ತಿಗೆ ಸೂರ್ಯ ಹುಟ್ಟುತ್ತಾನೆ. ಬೆಟ್ಟದ ತುದಿಗೆ ಹೋಗಬೇಕು. ಅಲ್ಲಿಗೆ ಹೋಗುವಷ್ಟರಲ್ಲಿ ಸರಿಯಾಗೊತ್ತೆ' ಅಂತಂದು ತಾವು ಬ್ಯಾಗು ರೆಡಿ ಮಾಡಲು ಶುರು ಮಾಡಿದರು. ನಿರುಪಾಯನಾಗಿ ನಾನೂ ಎದ್ದೆ. ಚಳಿಗೆ ಮೈ ಗಡಗುಟ್ಟುತ್ತಿತ್ತು. ತೊಟ್ಟಿದ್ದ ಜಾಕೀಟು ಏನಕ್ಕೂ ಸಾಲುತ್ತಿರಲಿಲ್ಲ. ಬೆಡ್‍ಶೀಟು, ರಗ್ಗುಗಳನ್ನು ಬ್ಯಾಗಿಗೆ ತುರುಕಿ ಅಲ್ಲಿಂದ ಹೊರಟೆವು.

ನಾವಿದ್ದ ಜಾಗದ ಪಕ್ಕದ ಬೆಟ್ಟದಲ್ಲಿ ಆ ದೇವಸ್ಥಾನವಿರುವುದು. ಪಕ್ಕದ ಬೆಟ್ಟವೆಂದರೆ ಇದೇ ಬೆಟ್ಟ; ಆದರೆ ಒಮ್ಮೆ ಇಳಿದು ಹತ್ತಬೇಕು. ಆ ದೇವಸ್ಥಾನದಿಂದಲೂ ಮೇಲೆ ಹೋದರೆ ಅಲ್ಲಿ 'ಸನ್‍ರೈಸ್‍ ವ್ಯೂ ಪಾಯಿಂಟ್' ಅಂತಲೇ ಇದೆ.

ನಾವು ಅಲ್ಲಿಗೆ ಮುಟ್ಟುವಷ್ಟರಲ್ಲೇ ಆಗಸದ ಪೂರ್ವ ದಿಗಂತದಲ್ಲಿ ಬಣ್ಣಗಳ ಓಕುಳಿ ಪ್ರಾರಂಭವಾಗಿತ್ತು. ಮೋಡಗಳ ಮೇಲಿನ ಕೆಂಬಣ್ಣ 'ದಿನಕರ ಸಧ್ಯದಲ್ಲೇ ಬರುತ್ತಿದ್ದಾನೆ' ಎನ್ನುತ್ತಿತ್ತು. ನಾವೆಲ್ಲಾ ಪೂರ್ವ ದಿಕ್ಕನ್ನೇ ನಿರುಕಿಸುತ್ತಾ ರವಿಯ ಆಗಮನಕ್ಕಾಗಿ ನಿರೀಕ್ಷಿಸತೊಡಗಿದೆವು. ಕೆಲವೇ ಕ್ಷಣಗಳಲ್ಲಿ ಸೂರ್ಯ ಮೂಡಿಬಂದ. ಇಷ್ಟಿಷ್ಟೇ ಇಷ್ಟಿಷ್ಟೇ ತನ್ನ ಮುಖವನ್ನು ತೋರಿಸುತ್ತಾ ಮೇಲೇರೇ ಬರುತ್ತಿದ್ದ. ಹೊಸ ವರುಷದ ಹೊಸ ಬೆಳಗಿನ ಹೊಸ ಸೂರ್ಯನ ಹೊಸ ಕಿರಣಗಳು ನಮ್ಮ ಮೈಮೇಲೆ ಬಿದ್ದು ಹೊಸದೇ ಆದ ಪುಳಕವುಂಟಾಯಿತು. ಮೊಬೈಲ್ ಕೆಮೆರಾದಿಂದ ಫೋಟೋ ಕ್ಲಿಕ್ಕಿಸಿಕೊಂಡೆವು. ಅದೆಷ್ಟೋ ಹೊತ್ತು ಅಲ್ಲೇ ಇದ್ದೆವು. ನಂತರ ನಿಧನಿಧಾನವಾಗಿ ಬೆಟ್ಟದಿಂದ ಕೆಳಗಿಳಿಯತೊಡಗಿದೆವು.

ಮತ್ತೆ ಮಂಜ!
ಭಕ್ತಿಯಿದ್ದವರು ಗುಡಿಗೆ ಹೋಗಿ ದೇವರ ದರುಶನ ಪಡೆದು ಬಂದರು. ಗುಡಿಯ ಎದುರಿನ ಪುಷ್ಕರಿಣಿಯಲ್ಲಿನ ನೀರು ಹಿಮದಷ್ಟು ತಣ್ಣಗಿತ್ತು. ಮಧ್ಯೆ ಒಂದು ಕಡೆ ನಲ್ಲಿ ಸಿಕ್ಕಿತು. ಮುಖ ತೊಳೆದು, ಹಲ್ಲುಜ್ಜಿ 'ಫ್ರೆಶ್' ಆದೆವು. ಮತ್ತೆ ಕೆಳಗಿಳಿಯತೊಡಗಿದೆವು. ಬೆಟ್ಟದ ತಪ್ಪಲನ್ನು ಮುಟ್ಟಿದೆವು. ಆಗ ಕಂಡ ಮಂಜ!

ಮತ್ತೆ ಮಂಜ! ಅದೇ ಮಂಜ! ನಿನ್ನೆ ರಾತ್ರಿ ನಮ್ಮನ್ನು ಭಯದ ಕೂಪದೊಳಕ್ಕೆ ನೂಕಿದ್ದ ಮಂಜ! ತನ್ನ ಅಣ್ಣನೊಂದಿಗೆ ಎಳನೀರಿನ ವ್ಯಾಪಾರದಲ್ಲಿ ತೊಡಗಿದ್ದ್. ನಮ್ಮನ್ನು ಕಂಡೊಡನೆ 'ಓ ಸುರೇಶಣ್ಣ... ಬನ್ನಿ ಸುರೇಶಣ್ಣ..' ಎಂದ. ನಮಗೋ ಪರಮಾಶ್ಚರ್ಯ! ಅದೇ ಮಂಜ, ರಾತ್ರಿ ನಮಗೆ ಅಷ್ಟೆಲ್ಲ ಟೆನ್ಶನ್ ಕೊಟ್ಟಿದ್ದ ಅದೇ ಮಂಜ, ಇಂದು ಈ ಮುಂಜಾವಿನಲ್ಲಿ ಹೊಸಬನೇ ಆಗಿ ಕಾಣುತ್ತಿದ್ದ. ಅವನ ಬಗ್ಗೆ ನಾವು ಕಲ್ಪಿಸಿಕೊಂಡಿದ್ದೆಲ್ಲವನ್ನೂ ನಮ್ಮ ಮನಸ್ಸು ಒಂದೇ ಕ್ಷಣದಲ್ಲಿ ತಳ್ಳಿಹಾಕಿಬಿಟ್ಟಿತು. 'ಎಳ್ನೀರು ಕುಡಿತೀರಾ ಅಣ್ಣಾ?' ಕೇಳಿದ. ಮಾತೇ ತೋಚದೆ ಬರೀ ಹೂಂಗುಟ್ಟಿದೆವು. ನಮಗೆ ತುಂಬಾ ಪ್ರೀತಿಯಿಂದ ಎಳನೀರು ಕೆತ್ತಿಕೊಟ್ಟ. ಕುಡಿಯುತ್ತಿದ್ದರೆ ಅಮೃತವನ್ನು ಕುಡಿದಂತೆನಿಸುತ್ತಿತ್ತು. ದುಡ್ಡುಕೊಟ್ಟು ಹೊರಟೆವು. 'ಮತ್ತೆ ಬನ್ರಣ್ಣ' ಎಂದು ಕೈಬೀಸಿದ ಮಂಜ.ಹೊಸ ಆಶಾವಾದದೊಂದಿಗೆ ವಾಪಸ್
'ಸುಮ್‍ಸುಮ್ನೇ ಏನೇನೋ ಅಂದ್ಕೋಂಡ್ವಲ್ರೋ ಅವನ ಬಗ್ಗೆ ರಾತ್ರಿ' ಎಂದೆ ಗೆಳೆಯರ ಬಳಿ. 'ನಿಂಗೊತ್ತಿಲ್ಲ, ಇವ್ರು ಬೆಳಗ್ಗೆ ಹಿಂಗೆ ವ್ಯಾಪಾರ ಮಾಡ್ತಾರೆ. ರಾತ್ರಿ ಆ ಕೆಲಸಾನೂ ಮಾಡ್ತಾರೆ!' ಎಂದ ಸಂತೋಷ. 'ಸುಮ್ನಿರಪ್ಪ, ಹಾಗೆಲ್ಲಾ ಗೊತ್ತಿಲ್ಲದವರ ಬಗ್ಗೆ ಸುಳ್ಳು ಅಪಾದನೆ ಮಾಡಬಾರದು' ಎಂದೆ. 'ಆದ್ರೂ ಅವನು ನಿನ್ನೆ ರಾತ್ರಿ....' ಗೆಳೆಯನ ಅನುಮಾನ ಇನ್ನೂ ಹೋಗಿರಲಿಲ್ಲ. ಅದಕ್ಕೆ ನಾನು, 'ಇರಲಿ ಬಿಡ್ರೋ, ಅವನು ನಿಜವಾಗಿಯೂ ಏನಾಗಿದ್ರೆ ನಮಗೇನು? ನಾವು ಅವನನ್ನು ಒಳ್ಳೆಯವನು ಅಂತಲೇ ತೀರ್ಮಾನಿಸೋಣ. ಹೊಸವರ್ಷದಲ್ಲಿ ಮತ್ತಷ್ಟು ಹೆಚ್ಚು ಆಶಾವಾದಿಗಳಾಗೋಣ' ಎಂದೆ.

ಸ್ವಲ್ಪ ಮುಂದೆ ಬರುತ್ತಿದ್ದಂತೆಯೇ ನಿನ್ನೆ ಕಂಡಿದ್ದ ಅಜ್ಜಿ ಕಾಣಿಸಿತು. ಅಜ್ಜಿ ನಮ್ಮನ್ನು ಕಂಡದ್ದೇ ಕೈ ಮುಗಿಯಿತು. ನಾವು ಅಜ್ಜಿಯ ಬಳಿ 'ನೀನ್ಯಾಕೆ ಕೈ ಮುಗಿತೀಯಾ ಅಜ್ಜಿ.. ನಾವು ಮುಗೀಬೇಕು ನಿಂಗೆ' ಎಂದೆವು. ಅಜ್ಜಿಗೆ ಒಂದಷ್ಟು ದುಡ್ಡು ಕೊಟ್ಟೆವು. ಹೊಸ ಆಶಾವಾದದೊಂದಿಗೆ, ಹೊಸ ಹುರುಪಿನೊಂದಿಗೆ ಬೆಂಗಳೂರಿನ ಬಸ್ಸು ಹತ್ತಿದೆವು.