Friday, November 13, 2020

ಉರಿದು ಮುಗಿದ ರವಿಯು


 ಬಹುಶಃ 1998-99ನೇ ಸಾಲು. ನಾನು ಒಂಬತ್ತನೇ ತರಗತಿಯಲ್ಲಿದ್ದೆ. ಗಂಟಲು ಒಡೆಯುವ ವಯಸ್ಸು. ಆಗ ನಮ್ಮೂರ ಭಾಗದಲ್ಲಿ ಬಹಳವಾಗಿ ಚಾಲ್ತಿಯಲ್ಲಿದ್ದ ಸ್ವಾಮೀಜಿಯೊಬ್ಬರ ಬಗ್ಗೆ 'ಹಾಯ್ ಬೆಂಗಳೂರ್'ನಲ್ಲಿ ತನಿಖಾ ವರದಿ ಬಂದಿತ್ತು. ಸಹಜವಾಗಿಯೇ ಅಪ್ಪ ಸಾಗರದಿಂದ ಬರುವಾಗ ಪತ್ರಿಕೆಯನ್ನು ತಂದಿದ್ದ. ಆಗ ಆ ಸ್ವಾಮೀಜಿಗಳಿಗೆ ಎಷ್ಟು ಅನುಯಾಯಿಗಳಿದ್ದರೆಂದರೆ, ಮನೆಗೆ ಬಂದ ಪತ್ರಿಕೆಯನ್ನು ನಾವು ಮುಚ್ಚಿಟ್ಟುಕೊಂಡು ಓದಿದ್ದೆವು. ಅದನ್ನು ಓದಿದರೆ 12 ಸಲ ಸ್ನಾನ ಮಾಡಬೇಕಂತೆ‌ ಅಂತ‌ ಬೇರೆ‌ ಅವರ ಭಕ್ತರು ಹಬ್ಬಿಸಿಬಿಟ್ಟಿದ್ದರು! ಆದರೂ ನಮ್ಮ ಮನೆಗೆ‌ ಪತ್ರಿಕೆ ಬಂದಿರುವ ಸುದ್ದಿ ತಿಳಿದು, ಆ ಸ್ವಾಮೀಜಿಯ ಬಗ್ಗೆ ಅಷ್ಟಿಷ್ಟು ಆಕ್ಷೇಪಗಳಿದ್ದ ಊರ ಕೆಲವರು, ಕದ್ದುಮುಚ್ಚಿ ಬಂದು ಓದಿ ಹೋಗಿದ್ದರು. ಆಗಷ್ಟೆ ಬಾಲಮಂಗಳದಿಂದ ಕ್ರೈಂ, ಸ್ಪ್ರೈ, ಡಿಟೆಕ್ಟಿವ್ ಥ್ರಿಲ್ಲರ್‌ಗಳಿಗೆ ಶಿಫ್ಟಾಗುತ್ತಿದ್ದ ನಾನು 'ಹಾಯ್'ನ ಒಂದೇ‌ ಒಂದು ವರದಿಗೆ ಬಿದ್ದುಹೋಗಿದ್ದೆ. ಆ ಆರ್ಟಿಕಲ್, ಆ ಬರಹದ ಶೈಲಿ, ಆ ದಿಟ್ಟತನ, ಆ ಖದರ್ -ಒಂದೇ ಹೊಡೆತಕ್ಕೆ ನನ್ನನ್ನು ಸೆಳೆದುಕೊಂಡಿದ್ದವು. ವರದಿಯೊಂದನ್ನು ಓದಲೆಂದು ತಂದುಕೊಂಡಿದ್ದ ಪತ್ರಿಕೆಯಲ್ಲಿದ್ದ ಉಳಿದ ಕಾಲಮ್ಮುಗಳಾದ 'ಹಲೋ', 'ಖಾಸ್‌ಬಾತ್', 'ಬಾಟಮ್ ಐಟಮ್', 'ಲವ್‌ಲವಿಕೆ'ಗಳನ್ನು ಮರುದಿನ ಓದಿದೆ. ಅಷ್ಟೇ: ರವಿ ಬೆಳಗೆರೆ ಎಂಬ ಮಾಂತ್ರಿಕ ಶಕ್ತಿಗೆ ನಾನು ಶರಣಾಗಿ ಹೋಗಿದ್ದೆ!

ಅಪ್ಪ ಅದಾಗಲೇ‌ ರವಿಯ ಹಲವು ಕಥೆಗಳನ್ನು ಓದಿದ್ದನಾದರೂ ನಾನು ಅವನ ಹೆಸರೂ ಕೇಳಿರಲಿಲ್ಲ. ಅಪ್ಪನಿಗೂ ಹಾಯ್ ಇಷ್ಡವಾಯಿತು ಅನ್ನಿಸುತ್ತೆ, ಆಗ ನಮ್ಮ ಮನೆಗೆ 'ಮಂಗಳ' ಬರುತ್ತಿತ್ತು, ಅದನ್ನು ನಿಲ್ಲಿಸಿ ಮುಂದಿನ ವಾರದಿಂದ ಈ ಕಪ್ಪು ಸುಂದರಿಯನ್ನು ಹಾಕಲು ಹೇಳಲಾಯಿತು. ಪತ್ರಿಕೆಯಲ್ಲಾಗ 'ಹೇಳಿ ಹೋಗು ಕಾರಣ'ದ ಹದಿನೈದನೆಯದೋ ಇಪ್ಪತ್ತನ್ನೆಯದೋ ಕಂತು ಬರುತ್ತಿತ್ತು. ಅದನ್ನೋದಿ ನಾನೇ ಹಿಮವಂತನಾದಂತೆ, ಕನಸಿನ ಹುಡುಗಿ ಪ್ರಾರ್ಥನಾ ಆದಂತೆ, ದೇಬಶಿಶು, ಊರ್ಮಿಳಾ, ರಸೂಲ್ ಜಮಾದಾರರೆಲ್ಲ ಎದುರಿಗೇ ಓಡಾಡಿದಂತೆಲ್ಲ ಪರಿಭಾವಿಸಿ, ಪ್ರತಿ ಬುಧವಾರಕ್ಕೆ ಪತ್ರಿಕೆ ಬರುವುದನ್ನು ತುದಿಗಾಲಲ್ಲಿ ನಿಂತು ಕಾದು... ಕಾಲೇಜಿಗೆ ಹೋಗುವ ಹೊತ್ತಿಗೆ ಅಲ್ಲೂ ಕೆಲ ಬೆಳಗೆರೆ ಅಭಿಮಾನಿಗಳು ಸಿಕ್ಕು, ಆ ಧಾರಾವಾಹಿ ಮುಂದೇನಾಗಬಹುದು ಅಂತೆಲ್ಲ ಚರ್ಚಿಸುತ್ತಾ, ಲವ್‌ಲವಿಕೆಯನ್ನು ನಕಲು ಮಾಡಿ ನಾನೂ ಪ್ರೇಮಪತ್ರಗಳ ಬರೆಯಲೆತ್ನಿಸುತ್ತಾ, ಖಾಸ್‌ಬಾತ್ ಓದಿ ನಾನೂ ಕಷ್ಟಗಳನ್ನೆಲ್ಲ ದಾಟಿ ಗೆದ್ದು ಸಾಧಿಸುವ ಕನಸು ಕಾಣುತ್ತಾ, ಬಾಟಮ್ ಐಟೆಮ್‌ನ ಹಿತವಚನಗಳನೋದಿ ಆಹಾ ಈ ರವಿಯೆಂಬ ಬೆಳಗೆರೆ ಎಷ್ಟೊಳ್ಳೆಯವನು ಎಂದುಕೊಳ್ಳುತ್ತಾ, ಹಲೋ ಓದಿ ನಾನೂ ರಾಜಕೀಯ-ಪ್ರಸ್ತುತ-ವರ್ತಮಾನಗಳನೆಲ್ಲ ತಿಳಿದುಕೊಳ್ಳುತ್ತಾ, ಇವನಷ್ಟು ಚೆನ್ನಾಗಿ ಮತ್ಯಾರೂ ಬರೆಯಲಿಕ್ಕೆ ಸಾಧ್ಯವೇ ಇಲ್ಲ ಅಂತೆಲ್ಲ ಬೇರೆಯವರ ಬಳಿ ವಾದಿಸುತ್ತಾ...  'ರವಿ ಬೆಳಗೆರೆ ಅಂದ್ರೆ ಹೆಂಗೆ ಕೇಜಿ?' ಅಂತಿದ್ದ‌ ಕಾಲದಿಂದ ಎಂತಹ ದೊಡ್ಡ ವ್ಯಕ್ತಿಯಾಗಿ ಬೆಳೆದ ಬೆಳಗೆರೆಯ ಬಗ್ಗೆ ಅಗಾಧ ಅಭಿಮಾನವೂ, ಆರಾಧನೆಯೂ ಬೆಳೆದುಬಿಟ್ಟಿತ್ತು. ಆರ್.ಬಿ., ರವೀ, ರವಿ ಬೆಳಗೆರೆ, ಬರೀ ಬೆಳಗೆರೆ, ವೀ -ಎಲ್ಲರೂ ಅಂದರೆ ಎಲ್ಲರೂ ಇಷ್ಟವೋ ಇಷ್ಟವಾಗಿದ್ದರು.

ನಾನು ಅರೆಬರೆ ಓದಿಕೊಂಡು ಬೆಂಗಳೂರಿಗೆ ಬರುವಾಗಲೂ ರವಿ ನಿಗಿನಿಗಿ ಉರಿಯುತ್ತಿದ್ದ: ಹೊರಗೂ, ನನ್ನೊಳಗೂ. ಎಷ್ಟರ ಮಟ್ಟಿಗೆ ಎಂದರೆ, ನಾನು ಊರಿಂದ ಹೊರಡುವಾಗ, "ನಿಂಗೆ ಎಲ್ಲೂ ಕೆಲಸ ಸಿಗಲ್ಲೆ ಅಂದ್ರೆ ರವಿ ಬೆಳಗೆರೆನ ಕಾಣ್ಲಕ್ಕೇನ, ಅಂವ ಎಂಥರು ಒಂದು ಕೆಲಸ ಕೊಡುಸ್ತ" ಅಂತ ಅಮ್ಮ ಹೇಳಿದ್ದಳು. ಮಜಾ ಎಂದರೆ, ನಾನಿಲ್ಲಿ ಮೊದಲಿಗೆ ಉಳಕೊಂಡಿದ್ದ ನಮ್ಮ ನೆಂಟರ ಮನೆಯವರೂ ಬೆಳಗೆರೆ ಅಭಿಮಾನಿಗಳೇ ಆಗಿದ್ದರು. ಹೀಗಾಗಿ, ಅವರ‌ ಮನೆಗೆ‌ ಪತ್ರಿಕೆ ಬಂದಾಕ್ಷಣ ನಾವೆಲ್ಲ 'ನಾ‌ ಮೊದಲು ನಾ ಮೊದಲು' ಅಂತ‌ ಕಿತ್ತಾಡಿಕೊಂಡು, ಪತ್ರಿಕೆಯ ಒಂದೊಂದು ಪುಟವನ್ನು ಒಬ್ಬೊಬ್ಬರು ಹಂಚಿಕೊಂಡು ಓದಿ, ಅದರ ಬಗ್ಗೆಯೇ ಮಾತಾಡಿ ಮಾತಾಡಿ ಮಾತಾಡಿ... ಆಮೇಲೆ ನಾನು ಅವರ ಮನೆ ಬಿಟ್ಟು ಒಂದಿಷ್ಟು ಸಮವಯಸ್ಕರೊಂದಿಗೆ ರೂಮು-ಗೀಮು ಮಾಡಿಕೊಂಡು ಇದ್ದಾಗ, ಬರುವ ಅಲ್ಪ ಸಂಬಳದಲ್ಲಿ ಪ್ರತಿ ವಾರ ಪತ್ರಿಕೆಯನ್ನು ಕೊಳ್ಳುವುದು ದುಬಾರಿಯೆನಿಸಿ ಪಬ್ಲಿಕ್ ಲೈಬ್ರರಿಗೆ ಹೋಗಿ ಸರತಿಯಲ್ಲಿ ಕಾದು ಕುಳಿತು ಓದಿದ್ದು... ಆಮೇಲೆ ಆರ್ಕುಟ್‌ನಲ್ಲಿ ರವಿ ಬೆಳಗೆರೆ ಅಭಿಮಾನಗಳ ಸಂಘದಲ್ಲಿ ನಡೆಯುತ್ತಿದ್ದ ಭಯಂಕರ ಚರ್ಚೆಗಳಲ್ಲಿ ನಾನೂ ಭಾಗವಹಿಸುತ್ತಿದ್ದುದು,  ಅಲ್ಲಿಂದಲೇ ಹಲವು ಗೆಳೆಯರನ್ನು ಪಡೆದುದು... 'ನೀ ಹಿಂಗ ನೋಡಬ್ಯಾಡ ನನ್ನ'ದ ಬಾಬ್‌ಕಟ್ ಹುಡುಗಿ ಅಲ್ಲೆಲ್ಲೋ ಸಿಗುತ್ತಾಳೆ ಅಂದುಕೊಂಡುದು... ಅವಳಿಗೆ ದೇವತೆಗಳು ಮಾತ್ರ ಕುಡಿಯುವಂತಹ ಕಾಫಿ ಕುಡಿಸಬೇಕು ಅಂದುಕೊಳ್ಳುತ್ತಿದ್ದುದು...

ಇಷ್ಟೆಲ್ಲ ಆದರೂ ನಾನು ರವಿಯನ್ನು ಮುಖತಃ ಕಾಣುವ, ಕನಿಷ್ಟ ಒಂದು ಪತ್ರ ಬರೆಯುವ ಧೈರ್ಯ ಮಾಡಲಿಲ್ಲ ಎಂದರೆ ಅದಕ್ಕೆ‌ ನನ್ನ ಸಂಕೋಚ-ಹಿಂಜರಿಕೆಗಳೇ ಕಾರಣ. ಮೊದಲ ಸಲ ರವಿಯನ್ನು ನಾನು ನೋಡಿದ್ದು ಪ್ರಾರ್ಥನಾ ಶಾಲೆಯ ಸ್ವಾತಂತ್ರೋತ್ಸವದ ಪೆರೇಡಿನಲ್ಲಿ. ಅವತ್ತು ಆತ ಒಂದು ಕಪ್ಪು ಗಾಗಲ್ ಧರಿಸಿ ನೂರಾರು ಜನರೊಂದಿಗೆ ನಡೆದು ಬರುತ್ತಿದ್ದ. ನಂತರ ಬೆಂಗಳೂರಿನ ಸುಮಾರು ಸಾಹಿತ್ಯ ಕಾರ್ಯಕ್ರಮಗಳಲ್ಲಿ ರವಿ ಎದುರಾದರೂ ಯಾಕೋ ಹೋಗಿ ಮಾತನಾಡಿಸಬೇಕು ಅಂತ ಅನಿಸಲೇ ಇಲ್ಲ. ಪತ್ರಿಕೆಯದೇ ಹಲವು ಕಾರ್ಯಕ್ರಮಗಳಿಗೆ ಹೋದರೂ ಅವರ ಸನಿಹಕ್ಕೆ ಹೋಗಲಿಲ್ಲ.

ಈ ನಡುವೆ ರವಿ ಕಾರ್ಗಿಲ್ಲಿಗೆ ಹೋದ, ಪಾಕಿಸ್ತಾನಕ್ಕೆ ಹೋದ, ಅಫಗನಿಸ್ತಾನಕ್ಕೆ ಹೋದ, ಗುಜರಾತ್ ಭೂಕಂಪಿತ ಪ್ರದೇಶಕ್ಕೆ ಹೋಗಿಬಂದ, ರಾಜ್‌ಕುಮಾರ್ ಅಪಹರಣವಾದಾಗ ಕಾಡಿಗೇ ನುಗ್ಗಿದ. ಪ್ರಾರ್ಥನಾ ಶಾಲೆ ಮಾಡಿದ, ಓ ಮನಸೇ ಶುರುವಾಯಿತು, ವೀಣಾ ಧರಿ ಎಂಬ ಎಚ್‌ಐವಿ ಪೀಡಿತ ಹೆಣ್ಣುಮಗಳನ್ನು ಸಾಕುತ್ತಿದ್ದೀನಿ ಅಂತ ಬರೆದುಕೊಂಡ, ಟೀವಿಯಲ್ಲಿ ಕ್ರೈಂ ಡೈರಿ - ಕ್ರೈಂ ಸ್ಟೋರಿ ಅಂತೆಲ್ಲ ಶುರುವಾಗಿ ಅವನ ಕಂಠಕ್ಕೆ, ಡೈಲಾಗ್ ಡೆಲಿವರಿ ಶೈಲಿಗೆ ಮರುಳಾದ ಹೊಸ ಅಭಿಮಾನಿಗಳು ಹುಟ್ಟಿಕೊಂಡರು.  ಹೆಚ್ಚುಕಮ್ಮಿ ಅಲ್ಲಿಯವರೆಗೂ ರವಿ ನನ್ನ ದೃಷ್ಟಿಯಲ್ಲಿ ಉನ್ನತ ಸ್ಥಾನದಲ್ಲೇ ಇದ್ದ.

ಆದರೆ ಅದ್ಯಾವಾಗಲೋ ರವಿಯ ಫಾಲ್ ಶುರುವಾಯಿತು: ನನ್ನ ದೃಷ್ಟಿಯಲ್ಲೂ ಮತ್ತು ಬಹುಶಃ ಆ ಕಾಲದಲ್ಲಿ ನನ್ನಂತೆಯೇ ರವಿಗೆ‌ ಮರುಳಾಗಿದ್ದ ಹಲವರ ದೃಷ್ಟಿಯಲ್ಲೂ. ರವಿ ರಿಪಿಟಿಟೀವ್ ಅನ್ನಿಸತೊಡಗಿದ. ಅವಕಾಶವಾದಿ ಅನ್ನಿಸತೊಡಗಿದ. ತನ್ನ ಮಾತನ್ನು ತಾನೇ ಕಾಯ್ದುಕೊಳ್ಳಲಾಗದ ಚೀಟರ್ ಅನ್ನಿಸತೊಡಗಿದ. 'ಲಾರಿ ಟೈರ್ ಮಾರುವವನಿಗೆ ಪತ್ರಿಕೋದ್ಯಮದ ಬಗ್ಗೆ ಹೇಗೆ ಗೊತ್ತಾಗಬೇಕು?' ಅಂತೆಲ್ಲ‌ ಟೀಕಿಸಿ ಬರೆದಿದ್ದ ವಿಜಯ ಸಂಕೇಶ್ವರರನ್ನ ನಂತರ 'ನನ್ನ ಗುರು' ಅಂತ ಕರೆದ. ರವಿಯನ್ನು ನಂಬಿ ಯಾರದಾದರೂ ಬಗ್ಗೆ ಒಂದು ಅಭಿಪ್ರಾಯಕ್ಕೆ ಬಂದಿದ್ದ ನಮಗೆ‌ ಈತ ಉಲ್ಟಾ ಹೊಡೆದಾಗ ಏನು ಮಾಡಬೇಕು ತಿಳಿಯಲಿಲ್ಲ.  ಅನಾವಶ್ಯಕವಾಗಿ ಯಾರ್ಯಾರನ್ನೋ ಟಾರ್ಗೆಟ್ ಮಾಡಿ ಬರೀತಿದಾನೆ ಅನ್ನಿಸಲಿಕ್ಕೆ‌ ಶುರುವಾಯಿತು. ಕ್ರೈಂ-ಸೆಕ್ಸ್-ಆತ್ಮಪ್ರಶಂಸೆಗಳು ಬೇಸರ ತರಿಸಿದ್ದವು. ಅವನೀಗ ಅಂಡರ್‌ವರ್ಲ್ಡ್ ಡಾನುಗಳ ಬಗ್ಗೆ ಬರೆವುದು ಬಿಟ್ಟು ಸಣ್ಣಪುಟ್ಟ ರಾಜಕಾರಣಿಗಳು, ಸಿನೆಮಾ ರಂಗದವರು, ಮಠಾದೀಶರನ್ನು ಟಾರ್ಗೆಟ್ ಮಾಡಿ ಬರೆಯುತ್ತಿದ್ದ. "ಇವಳ ಲೈಫಲ್ಲಿ ಏನಾಯ್ತು ಗೊತ್ತೇ?", "ಇವನ ಅಪ್ಪ ಎಂತವ ಗೊತ್ತೇ?" ಮುಂತಾದ ಹೆಡ್ಡಿಂಗುಗಳಿಂದ ಬರುತ್ತಿದ್ದ ಹಾಯ್, ಪುಟಗಳನ್ನು ತೆರೆದು ನೋಡಿದರೆ ಆ ವರದಿಯಲ್ಲಿ ಹೂರಣವೇ ಇರುತ್ತಿರಲಿಲ್ಲ. ಅವು ಯಾರದೋ ಇಮೇಜ್ ಕೆಡಿಸಲೆಂದೇ ಬರೆದಹಾಗೆ‌ ಕಾಣತೊಡಗಿದವು.  ತನ್ನ ಬಗ್ಗೆ ಹೇಳಿಕೊಳ್ಳುವ ಮೂಲಕವೇ ಅಷ್ಟೊಂದು ಅಭಿಮಾನಿಗಳನ್ನು ಸಂಪಾದಿಸಿದ್ದ  ಬೆಳಗೆರೆಗೆ ಅದೇ ದೌರ್ಬಲ್ಯವೂ ಆಗಿತ್ತು. ಏನೇ ಬರೆದರೂ, ಏನೇ ಹೇಳಹೊರಟರೂ ಕೊನೆಗೆ 'ತಾನು ತಾನು ತಾನು' ಎಂಬ ಜಪದೊಂದಿಗೆ ಕೊನೆಯಾಗುತ್ತಿದ್ದ ರವಿಯ ಬರಹ-ಭಾಷಣಗಳು ರುಚಿ ಕಳೆದುಕೊಳ್ಳತೊಡಗಿದವು.  ಇಡೀ ರಾಜ್ಯವೇ ಹೇವರಿಕೆಯಿಂದ ನೋಡುತ್ತಿದ್ದ ಬಳ್ಳಾರಿ ಗಣಿಧಣಿಗಳ ಪರವಾಗಿ ಪ್ರಚಾರ ಮಾಡಿದ. ಇಂವ ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾನೆ ಅನ್ನಿಸುವ ಹಾಗೆ ಆಯಿತು.

ಎಲ್ಲಕ್ಕಿಂತ ಮುಖ್ಯವಾಗಿ, ನಾನೀಗ ಹೊರಗೆ ಕಣ್ಬಿಟ್ಟು ನೋಡತೊಡಗಿದ್ದೆ. ಕನ್ನಡದ ಹಲವು ಬರಹಗಾರರನ್ನು ಓದತೊಡಗಿದ್ದೆ.  ನೋಟ ವಿಶಾಲದಂತೆ, ಆಕಾಶ ದೊಡ್ಡದಾದಂತೆ ರವಿ ಚಿಕ್ಕವನೆನಿಸುತ್ತ ಹೋದ. 'ಬರೀ ಇವನನ್ನೇ ಓದುತ್ತ ಎಂತೆಂಥಾ ಸಾಹಿತ್ಯವನ್ನು ಬಿಟ್ಟುಬಿಟ್ಟಿದ್ದೆ' ಎನಿಸತೊಡಗಿತು. ಮತ್ತೆ ನಾನೂ ಈಗ ನಾಕಕ್ಷರ ಬರೆವವನಾಗಿ,‌ ವೃತ್ತಿ-ಜವಾಬ್ದಾರಿ-ಬದುಕು ಇತ್ಯಾದಿಗಳು ಶುರುವಾಗಿ, ನನ್ನದೆಂಬ ವ್ಯಕ್ತಿತ್ವವೂ ರೂಪುಗೊಳ್ಳತೊಡಗಿತ್ತಿರಬೇಕು.

ಹೆಚ್ಚುಕಮ್ಮಿ ಇದೇ ಹೊತ್ತಿಗೆ ರವಿಯ ಕಲರ್‌ಫುಲ್‌ ಜೀವನದ ಬಗ್ಗೆ, ಆತನ ಇನ್ನೊಂದು ಮುಖದ ಬಗ್ಗೆ, ವಿಚಿತ್ರ ಖಯಾಲಿಗಳ ಬಗ್ಗೆ, ಹುಚ್ಚುಚ್ಚು ವರ್ತನೆಗಳ ಬಗ್ಗೆ, ದುಷ್ಟತನಗಳ ಬಗ್ಗೆ, ದೌರ್ಬಲ್ಯಗಳ ಬಗ್ಗೆ, ಹೆಣ್ಣುಮಕ್ಕಳನ್ನು ಹೇಗ್ಹೇಗೋ ನಡೆಸಿಕೊಳ್ಳುತ್ತಾನಂತೆ ಎಂಬ ಗಂಭೀರ ಆರೋಪದ ಬಗ್ಗೆ, ವೈಯಕ್ತಿಕ ಜೀವನದ ಬಗ್ಗೆ - ಕೆಲವು ಪತ್ರಿಕೆಗಳು, ಅನಾಮಧೇಯ ವ್ಯಕ್ತಿಗಳು, ಪ್ರತ್ಯಕ್ಷವಾಗಿ ಕಂಡಿದ್ದೇನೆ ಅಂತ ಹೇಳಿಕೊಳ್ಳುವವರಿಂದ ಥರಹೇವಾರಿ ಮಾತುಗಳು, ಗಾಸಿಪ್ಪುಗಳು ಶುರುವಾಗಿದ್ದವು. ಇವನ್ನೆಲ್ಲಾ ಕೇಳಿ ಕೇಳಿ, ಅರೆ, ಇಷ್ಟು ಕಾಲ 'ಗುರುವಲ್ಲದ ಗುರು, ಅಪ್ಪನಲ್ಲದ ಅಪ್ಪ' ಅಂತೆಲ್ಲ ಅಂದುಕೊಂಡಿದ್ದು ಇವನ ಬಗ್ಗೆಯೇನಾ ಅಂತಂದುಕೊಳ್ಳುವ ಮಟ್ಟಿಗೆ ರವಿಯೆಡಿಗಿನ ನನ್ನ ಅಭಿಪ್ರಾಯ ಬದಲಾಗಿಹೋಯಿತು. ಕುಡಿತ-ಸಿಗರೇಟು ಎಲ್ಲಾ ಬಿಟ್ಟು ಬಹಳ ಕಾಲವಾಯ್ತು ಅಂತ ಅವನು ಬರಕೊಂಡ ಕೆಲವೇ ಕಾಲಕ್ಕೆ ಅದೆಲ್ಲ‌ ಸುಳ್ಳೇಸುಳ್ಳು ಅಂತ ಸಾಕ್ಷ್ಯ ಸಿಕ್ಕಿತು. ಗಳಸ್ಯ-ಕಂಠಸ್ಯ ಅಂತ ಕರೆದುಕೊಳ್ಳುತ್ತಿದ್ದ ವಿಶ್ವೇಶ್ವರ ಭಟ್ಟರ ವಿರುದ್ಧ ಬರೆದು, ಆಮೇಲೆ ಅವರೂ-ಅವರ ತಂಡದವರೂ ತಿರುಗಿ ಇವನ ಬಗ್ಗೆ ಬರೆದು, ಅವರೆಲ್ಲಾ ಬೀದಿಜಗಳ ಆಡಿದಾಗಲಂತೂ ಬೆಳಗೆರೆ ಬಹುಶಃ ಹಲವರ ದೃಷ್ಟಿಯಲ್ಲಿ ಸಣ್ಣವನಾದ. ಆಮೇಲೆ ಅದ್ಯಾರದೋ ಕೊಲೆಗೆ ಸುಪಾರಿ ಕೊಟ್ನಂತೆ ಅಂತ ಜೈಲಿಗೂ ಹೋಗಿ ಬಂದ.

ಯಾರಾದರೂ ತೀರಿಕೊಂಡಾಗ ಅವರ ಬಗ್ಗೆ ಒಳ್ಳೆಯದಷ್ಟನ್ನೇ ಬರೆಯಬೇಕು ಎನ್ನುತ್ತಾರೆ. ಬರಹಗಾರನೇ ಬೇರೆ, ಅವನ ವೈಯಕ್ತಿಕ ಬದುಕೇ ಬೇರೆ - ಅವೆರಡನ್ನು ತಳುಕು ಹಾಕಬಾರದು ಎನ್ನುತ್ತಾರೆ. ಆದರೆ ಬೆಳಗೆರೆಯ ವಿಷಯದಲ್ಲಿ ಹಾಗೆ ಮಾಡುವುದು ಕಷ್ಟ ಎನಿಸುತ್ತದೆ ನನಗೆ. ಯಾಕೆಂದರೆ, ನಾವು ಬರೀ ರವಿಯ ಕಥೆ-ಕಾದಂಬರಿಗಳನ್ನು ಓದಲಿಲ್ಲ; ಅವನ‌ ಬಗ್ಗೆ ಅವನೇ ಬರೆದುಕೊಂಡುದನ್ನು ಓದಿದೆವು, ಅವನ್ನೆಲ್ಲ ನಿಜವೆಂದು ಭಾವಿಸಿದೆವು, ಅವನೊಬ್ಬ ಸಂಭಾವಿತ ಎಂದು ನಂಬಿದೆವು, ಪ್ರೀತಿಸಿದೆವು, ಆರಾಧಿಸಿದೆವು: ಆದರೆ ಮುಂದೊಂದು ದಿನ ಅವೆಲ್ಲ ಸುಳ್ಳು, ಆತ ಅಷ್ಟೆಲ್ಲ ಪ್ರೀತಿಗೆ, ಆರಾಧನೆಗೆ, ನಂಬುಗೆಗೆ ಅರ್ಹ ವ್ಯಕ್ತಿಯಾಗಿರಲಿಲ್ಲ ಅಂತ‌ ಗೊತ್ತಾದಾಗ ಆಗುವ ಆಘಾತ - ನಿರಾಶೆ ದೊಡ್ಡ ಮಟ್ಟದ್ದು. ರವಿಯ 'ಫಸ್ಟ್ ಹಾಫ್' ಮಾತ್ರ ಇಷ್ಟ, ಅಥವಾ ಅವನೇ ಅಫಿಡವಿಟ್ಟಿನಲ್ಲಿ ಬರೆದುಕೊಳ್ಳುತ್ತಿದ್ದಂತೆ ಅವನ ಬರಹ-ಸಾಹಿತ್ಯಪ್ರೀತಿ-ಭಾಷಣ-ನಿರೂಪಣೆ-ಶಾಲೆ ಇತ್ಯಾದಿ ಸಾಧನೆಗಳನ್ನು ಬಿಟ್ಟು ಉಳಿದ ವಿವರಗಳೆಲ್ಲ ಅನ್‌-ಇಂಟರೆಸ್ಟಿಂಗ್ ಅಂತ ಬಿಟ್ಟುಬಿಡುವುದು ಹೇಗೆ ಸಾಧ್ಯ?

ರವೀ, ಸುಮಾರು ಎಂಟ್ಹತ್ತು ವರ್ಷ ನಿಮ್ಮ ಬರಹದ ಮೋಡಿಗೆ‌ ಒಳಗಾಗಿದ್ದೆ, ಹೇಳಿ ಹೋಗು ಕಾರಣವನ್ನೂ - ಪತ್ರಿಕೆಯನ್ನೂ ಹುಚ್ಚು ಹಿಡಿಸಿಕೊಂಡು ಓದಿದ್ದೆ, ನಿಮ್ಮ ಕಥೆಗಳನ್ನು, ಕೆಲವು ಕಾದಂಬರಿಗಳನ್ನು, ಒಂದಷ್ಟು ಅನುವಾದಗಳನ್ನು ಇವತ್ತಿಗೂ ಅತ್ಯುತ್ತಮವೆಂದು ಒಪ್ಪುತ್ತೇನೆ. ನಿಮ್ಮ ಬರಹಗಳಿಂದ - ಮಾತುಗಳಿಂದ ಸ್ಫೂರ್ತಿ ಪಡೆದಿದ್ದೇನೆ. ಇವತ್ತು ನಾನೂ ಏನಾದರೂ ಬರೆಯುತ್ತಿದ್ದರೆ ಅದಕ್ಕೆ ನಿಮ್ಮನ್ನು ಓದಿದ್ದೂ ಒಂದು ಕಾರಣ ಅಂತ ನಿಸ್ಸಂಕೋಚವಾಗಿ ಒಪ್ಪಿಕೊಳ್ಳುತ್ತೇನೆ. ನಿಮ್ಮ ಪತ್ರಿಕೆ ಹಲವು ಒಳ್ಳೆಯ ಅಂಕಣಕಾರರನ್ನು - ಬರಹಗಾರರನ್ನೂ ಕನ್ನಡಕ್ಕೆ ಕೊಟ್ಟಿರುವುದೂ ನಿಜ. ಹಾಗೆಯೇ, ನಿಮ್ಮ ಪತ್ರಿಕೆಯೇ  ಹತ್ತು-ಹಲವು ಶ್ರೇಷ್ಠ ಸಾಹಿತಿಗಳನ್ನು ನಾನು ಓದಲು ಬೆಳಕಿಂಡಿಯಾಯಿತು ಅಂತಲೂ ಹೇಳುತ್ತೇನೆ.

ನಿಮ್ಮ ಬರಹದ ಚುಂಬಕ ಶೈಲಿಗೆ, ಅಗಾಧ ಬರಹಗಾರಿಕೆಗೆ, ನನ್ನನ್ನು ಓದಲು-ಬರೆಯಲು ಹಚ್ಚಿದ್ದಕ್ಕೆ ಧನ್ಯವಾದ, ನಮಸ್ಕಾರ.


Tuesday, November 03, 2020

ಗೀಚು

ತನ್ನ ಪುಟ್ಟ ಬೆರಳುಗಳಲ್ಲಿ ಪೆನ್ನು ಹಿಡಿದು
ಬರೆಯುತ್ತಿದ್ದಾಳೆ ಮಗಳು ಬಿಳಿಹಾಳೆಯಲ್ಲಿ

ಹೀಗೇ ಒಂದೊಂದಕ್ಷರ ಕಲಿತು
ಆಮೇಲವನ್ನು ಜೋಡಿಸಿ‌ ಪದಗಳಾಗಿಸಿ
ಪದಕೆ‌ ಪದ ಪೋಣಿಸಿ ವಾಕ್ಯ ರಚಿಸಿ
ವಾಕ್ಯದ ಮುಂದೆ ವಾಕ್ಯವನಿಟ್ಟು ಮಹಾಪ್ರಬಂಧ ಬರೆದು

ಈ ನಡುವೆ ಆಕೆಗೆ ಗೀಚುವುದು ಬಿಟ್ಟು ಹೋಗಿರುತ್ತೆ
ಇಷ್ಟು ದಿನ ಗೋಡೆ ನೆಲ ಟೇಬಲು ಅಪ್ಪನ ಪುಸ್ತಕ
ಅಮ್ಮನ ಬಿಳಿಯಂಗಿ ತನ್ನದೇ ಮೈಕೈ-
ಗಳ್ಯಾವುದರಲೂ ಭೇದವೆಣಿಸದೆ
ಮನಸಿಗೆ ಬಂದುದ ಗೀಚುತ್ತಿದ್ದ ಮಗಳು
ಈಗ ಅಕ್ಷರಗಳನರಿತು

ಬರೆವುದ ಕಲಿತ ಮೇಲೆ ಗೀಚುವ ಹಾಗಿಲ್ಲ
ನಡೆವುದ ಕಲಿತ ಮೇಲೆ ಬೀಳುವ ಹಾಗಿಲ್ಲ
ಮಾತು ಕಲಿತ ಮೇಲೆ ತೊದಲುವ ಹಾಗಿಲ್ಲ

ಮುಗ್ದತೆಯ ತೊಡೆಯಲೆಂದೇ ಇರುವ
ಈ ಜಗದ ರೀತಿಗೆ ಬಲಿಯಾದ ಮಗಳು
ಒಂದೊಂದಾಗಿ ಕಲಿಯುತ್ತ ಕಲಿಯುತ್ತ

ಆಮೇಲೆ ನಾವೂ ಈ ಮನೆ ಬದಲಿಸಿ
ಮಾಲೀಕರು ಗೋಡೆಗೆ ಹೊಸ ಬಣ್ಣ ಬಳಿಸಿ
ಇನ್ನೆಂದೂ ಕಾಣಿಸದಂತೆ ನನ್ನ ಮಗಳ ಗೀಚು

ಹಳೇ ಪರಿಚಯ ಹಳೇ ನೆನಪುಗಳ
ಮೆಲುಕು ಹಾಕೋಣವೆಂದು
ಮತ್ತೆ ಆ ಮನೆಗೆ ಬಂದರೆ ಮೊಂದೊಂದು ದಿನ

ಗೋಡೆಯ ಹೊಸ ಬಣ್ಣಪದರದ ಮೇಲೆ
ಹೊಸ ಬಾಡಿಗೆದಾರರ ಮಗುವಿನ ಮುದ್ದುಗೀಚು
ಈಗಾಗಲೇ ದೊಡ್ಡವಳಾಗಿಹೋಗಿರುವ ಮಗಳು
ತನಗಿಂತ ಸಣ್ಣ ವಯಸಿನ ಆ ಮಗುವಿಗೆ
ಗೋಡೆಯ ಮೇಲೆ ಗೀಚಬಾರದೆಂದು
ತಿಳಿ ಹೇಳುತ್ತಿದ್ದಾಳೆ.