Thursday, April 26, 2012

ಮದುವೆಗೆ ಬನ್ನಿ!


ಚಿಕ್ಕಂದಿನಲ್ಲಿ ಬೇಸಿಗೆ-ದಸರಾ ರಜೆಗೆಂದು ತನ್ನ ಅಜ್ಜನ ಮನೆಗೆ ಬರುತ್ತಿದ್ದ ನಮ್ರತಾ ಎಂಬ ಹುಡುಗಿಯ ಜತೆ ಬುಕ್ಕೆಹಣ್ಣಿಗೆ ಬ್ಯಾಣ ಸುತ್ತಿದ್ದು, ಆಡುಮುಟ್ಟದ ಸೊಪ್ಪಿನ ಗಂಪಿನಿಂದ ಇಡ್ಲಿ ಮಾಡಿದ್ದು, ಮರಳಿನಿಂದ ಮನೆ ಕಟ್ಟಿದ್ದು, ಸಿಐಡಿ ಆಟ ಆಡಿದ್ದು..

ಬಾಲಮಂಗಳ, ಚಂದಮಾಮ, ಸಿನೆಮಾಗಳಿಂದ ಪ್ರಭಾವಿತರಾಗಿ, ಭಕ್ತಿ-ಭಾವದಿಂದ ಪ್ರಾರ್ಥಿಸಿದರೆ ದೇವರು ಕಾಣಿಸುತ್ತಾನೆ ಎಂಬ ಫ್ಯಾಂಟಸಿಗೊಳಗಾಗಿ, ನಾನು-ಮಧು-ಗುಂಡ ಗಣಪೆ ಮಟ್ಟಿಯಲ್ಲಿ ಕೂತು ಚಿಗಟೆ ಗಿಡದ ಎಲೆಗಳನ್ನು ತರೆಯುತ್ತ ತಪಸ್ಸು ಮಾಡುತ್ತ ದೇವರು ಇನ್ನೇನು ಪ್ರತ್ಯಕ್ಷವಾಗಿಯೇ ಬಿಡುತ್ತಾನೆ ಎಂದು ಕಾದಿದ್ದು..

"ಲವ್ವಾ? ಮಾಡ್ಬಿಡ್ಬೋದು ಕಣೋ.. ಆದ್ರೆ ಮನೇಲಿ ಗೊತ್ತಾದ್ರೆ ಕಷ್ಟ!" ಅಂತ, ಒಂಬತ್ತನೇ ಕ್ಲಾಸಿನ ನನ್ನ ಬೆಂಚ್-ಮೇಟ್ ದುರ್ಗಪ್ಪನಿಗೆ, ಅವನು ನಮ್ಮದೇ ಕ್ಲಾಸಿನ ಹುಡುಗಿಯೊಬ್ಬಳನ್ನು ತೋರಿಸುತ್ತ "ನೀ ಇವ್ಳುನ್ ಲವ್ ಮಾಡು, ನಾನು -ಅಕಾ- ಆ ಹುಡ್ಗೀನ ಮಾಡ್ತೀನಿ!" ಅಂದಾಗ ಹೇಳಿದ್ದು..

ಸೊರಬದ ಸುರಭಿ ಕಾಂಪ್ಲೆಕ್ಸಿನ ತುತ್ತತುದಿಯನ್ನೇರಿ ನಾನು-ರಾಘು ಅಲ್ಫೆನ್ಲೀಬೆ ಚಾಕ್ಲೇಟು ತಿನ್ನುತ್ತಾ ಪರೀಕ್ಷೆ, ರಿಸಲ್ಟ್ಸು, ಬಿಡಬೇಕಿರುವ ಊರು, ಸೇರಬೇಕಿರುವ ಪೇಟೆ, ಗುರಿ, ಕನಸು, ಜಾಬ್ ಅಪಾರ್ಚುನಿಟೀಸ್, ಹಣ, ಹುಡುಗಿಯರು, ಪ್ರೀತಿ, ಬದುಕುಗಳ ಬಗ್ಗೆ ಮಾತಾಡುತ್ತಿದ್ದುದು..

2003, ಜುಲೈ 12ರ ಜುಮುರುಮಳೆಯ ಮುಂಜಾನೆ ಬೆಂಗಳೂರಿಗೆ ಬಂದಿಳಿದು, ಸಿಟಿ ಬಸ್‌ಸ್ಟಾಂಡಿನ ದಾರಿ ಕೇಳಿಕೊಂಡು ಹೆಗಲ ಚೀಲದೊಂದಿಗೆ ಹೆಜ್ಜೆ ಹಾಕುತ್ತಿದ್ದಾಗ ನನ್ನ ಜತೆಗೇ ಬಂದಿದ್ದ ಗೆಳೆಯ ದಿನೇಶ ನನ್ನನ್ನು ತಡೆದು ಆಕಾಶದತ್ತ ಬೆರಳು ಮಾಡಿ ತೋರಿಸುತ್ತ "ಅದೇ, ವಿಮಾನ! ಎಷ್ಟ್ ಹತ್ರಕ್ ಹೋಗತ್ತಲ್ಲಾ ಮಾರಾಯಾ ಬೆಂಗ್ಳೂರಲ್ಲಿ!" ಎಂದಿದ್ದು..

ಕೆಲಸ ಹಿಡಿದು, ರೂಮ್ ಮಾಡಿ, ಬೆಂಗಳೂರು ಮತ್ತು ಬದುಕು ಎಂದರೆ ಏನು ಅಂತ ಕಣ್ಬಿಟ್ಟು ನೋಡುತ್ತ, ತಿಳಿಯದೆಲೆ ಕಳೆಯುತ್ತಿರುವ ದಿನಗಳು, ಅರ್ಥವಾಗದೆ ಮುಗಿಯುತ್ತಿರುವ ಘಟನೆಗಳು, ಮುಂದೇನಿದೆಯೆಂದು ತೋರಗೊಡದ ನಾಳೆಗಳೆಂಬ ಬ್ಲೈಂಡ್ ಕರ್ವ್‌ಗಳ ಬಗ್ಗೆ ರಾತ್ರಿ ಎರಡರವರೆಗೆ ಚಿಂತನಾಭಾವದಲ್ಲಿ ಮಾತಾಡುತ್ತಿದ್ದ ರೂಮ್‌ಮೇಟ್ ವಿನಾಯಕ, ಕೊನೆಗೊಂದು ದಿನ "ಇಲ್ಲಲೇ ಭಟ್ಟಾ.. ನಾನು ಬೆಂಗಳೂರು ಬಿಟ್ಟು ವಾಪಾಸ್ ಊರಿಗೆ ಹೋಗ್ತಿದ್ದೀನಿ" ಅಂತ ಪ್ರಕಟಿಸಿದಾಗ ಅವನನ್ನು ತಬ್ಬಿ ಬೀಳ್ಕೊಟ್ಟದ್ದು...

...ಎಲ್ಲಾ ನಿನ್ನೆ-ಮೊನ್ನೆಯೇ ಆಗಿದ್ದಿರಬೇಕು. ಇನ್ನು ಹದಿನೈದು ದಿನದೊಳಗೆ ನನ್ನ ಮದುವೆ! 

"ಡೇಟ್ ಫಿಕ್ಸ್ ಆಯ್ತಲೇ.. ಮೇ 9" ಅಂತ ಫೋನಿಸಿದರೆ, "ತಡಿಯೋ, ನಿಂದಕ್ಕಿಂತ ಮುಂಚೆ ನಂದೇ ಆಗೋ ಛಾನ್ಸ್ ಇದ್ದು!" ಅಂತಂದು, ಹಾಗೇ ನನಗಿಂತ ನಾಲ್ಕು ದಿನ ಮೊದಲೇ ಮದುವೆಯಾಗುತ್ತಿರುವ ವಿನಾಯಕ; "ಏನಪ್ಪ.. ಸುಶ್ರುತ ಮದ್ವೆ ಆಗ್ತಿದಾನೆ ಇಷ್ಟ್ ಬೇಗ ಅಂದ್ರೆ ನಂಗೆ ನಂಬಕ್ಕೇ ಆಗ್ತಾ ಇಲ್ಲ" ಎಂದ ದಿನೇಶ; "ಮಗನೇ, ಏಪ್ರಿಲ್ 29ಕ್ಕೇ ನನ್ ಮದ್ವೆ. ನಿನ್ ಮದುವೆಗೆ ಹೆಂಡತಿ ಸಮೇತ ಬರ್ತೀನಿ ನಾನು" ಎನ್ನುವ ರಾಘು; ಕಳೆದ ವರ್ಷ ಉಳವಿಯಲ್ಲಿ ಸಿಕ್ಕು, ತಾನು ಇಟ್ಟುಕೊಂಡಿರುವ ಪುಟ್ಟ ಕ್ಯಾಂಟೀನಿನೊಳಗೆ ಕರಕೊಂಡು ಹೋಗಿ, ಅಲ್ಲೇ ಗೂಡೊಂದರಲ್ಲಿಟ್ಟುಕೊಂಡಿದ್ದ ಎನ್ವಲಪ್‌ನಿಂದ ಫೋಟೋ ಒಂದನ್ನು ಜೋಪಾನವಾಗಿ ಹೊರತೆಗೆದು ತೋರಿಸುತ್ತ, "ಮುಂದಿನ್ ತಿಂಗ್ಳೇ ಲಗ್ನ. ಚನಾಗೈದಾಳನಲೇ?" ಅಂತ ಕೇಳಿದ್ದ ದುರ್ಗಪ್ಪ; ಮೊನ್ನೆಮೊನ್ನೆಯವರೆಗೂ "ಮದುವೆ ಆಗು ಫಾಲೀ.. ಸಖತ್ ಮಜಾ ಇರ್ತು ಲೈಫು" ಅಂತ ಹೇಳುತ್ತಿದ್ದವ, ಈಗ 'ಹ್ಮ್, ಇನ್ನು ಶುರು ನಿನ್ನ ಗ್ರಹಚಾರದ ದಿನಗಳು' ಅನ್ನೋ ಧಾಟಿಯಲ್ಲಿ ಮಾತಾಡ್ತಿರೋ ಮಧು; ಮದುವೆಯಾಗಿ ಬೆಂಗಳೂರಿಗೇ ಬಂದಿದ್ದಾಳೆ ಅಂತ ಗೊತ್ತಿದ್ದೂ, ಕನಿಷ್ಟ ಫೋನಾದರೂ ಮಾಡಿ ಕರೀಬೇಕು ಅಂತ ನಾನು ಶತಾಯಗತಾಯ ಪ್ರಯತ್ನಿಸುತ್ತಿದ್ದರೂ ಇನ್ನೂ ಸಂಪರ್ಕಕ್ಕೆ ಸಿಗದ ನಮ್ರತಾ.

*
ಸೋ, ವಿಷಯ ಇಷ್ಟು. ಬರುವ ಮೇ 9ಕ್ಕೆ ನನ್ನ ಮದುವೆ. ದಿವ್ಯಾ ಎಂಬ ನಿಮಗೂ ಗೊತ್ತಿರೋ ಹುಡುಗಿ ಜತೆ. ನಮ್ಮೂರಲ್ಲಿ, ನಮ್ಮ ಮನೆಯಲ್ಲಿ. ನೀವು ಬರಲೇಬೇಕು, ಬಂದೇ ಬರ್ತೀರ.

ಇವತ್ತು 'ಮೌನಗಾಳ'ದ ಆರನೇ ಹುಟ್ಟುಹಬ್ಬವೂ. "ಅಂತೂ ಇಷ್ಟ್ ವರ್ಷ ಗಾಳ ಹಾಕಿದ್ದೂ ಸಾರ್ಥಕವಾಯ್ತು" ಅಂತ ಕಿಚಾಯಿಸಿದ್ರಾ? ;) ನಿಜ ಹೇಳಬೇಕೂಂದ್ರೆ, ಇದು ಗಾಳಕ್ಕೆ ಸಿಕ್ಕ ಮೀನಲ್ಲ. ಅಥವಾ, ನನಗೆ ಹಾಗೆ ಕರೀಲಿಕ್ಕೆ ಇಷ್ಟವಿಲ್ಲ. ಇವಳು ಗಾಳ ಹಾಕಿ ಕುಳಿತವನ ಪಕ್ಕ ಬಂದು ಕೂತ ಮತ್ಸ್ಯಗಂಧಿ. ಇನ್ನು ಒಂದೇ ಗಾಳದಲ್ಲಿ ನಮ್ಮ ಮೀನುಗಾರಿಕೆ. "ಯಾಕೆ ಪ್ರೀತಿಸ್ತೀಯ?" ಅಂತ ಇಷ್ಟರೊಳಗೆ ನೂರು ಸಲ ಕೇಳಿದ್ದೇನೆ; ಒಂದು ಸಲವೂ ಉತ್ತರಿಸಿಲ್ಲ ಹುಡುಗಿ.

ಮುತ್ತೂರ ತೇರಿನಲಿ ಸಿಕ್ಕ ಸಿರಿಯಲ್ಲ
ಮತ್ಸ್ಯಯಂತ್ರವನಂತು ಬೇಧಿಸಲೆ ಇಲ್ಲ
ಮತ್ಯಾರದೋ ಮದುವೆಯಲ್ಲಿ ಸಿಕ್ಕು ಸೆಳೆದವಳಲ್ಲ
ಮುತ್ತೊಂದ ಬೇಡಿ ನಿಂತಿರುವಳಲ್ಲ?

:)

ಮದುವೆಗೆ ಬನ್ನಿ.

ಪ್ರೀತಿಯಿಂದ,

-ಸುಶ್ರುತ

[ವಿವರಗಳು, ರೂಟ್‌ಮ್ಯಾಪ್, ಇನ್ವಿಟೇಶನ್‌ಗಾಗಿ ಈ ವೆಬ್‌ಸೈಟ್]

Tuesday, February 21, 2012

ನಿಲ್ಲುವುದು ಎಂದರೆ...

ಯೋಜನ ಯೋಜನ ನಡೆದರು ಮುಗಿಯದ
ಈ ಕಾಡ ನಡುವೆಯೂ ಒಂದು ಹೆದ್ದಾರಿ.
ಆಳುವರಸ ಹೊರಡಿಸಿದ್ದಾನಂತೆ ಆಜ್ಞೆ:
ಹಿಡಿದು ತನ್ನಿ ಅವನನ್ನು; ಸೆರೆಮುಡಿ ಕಟ್ಟಿ ತನ್ನಿ.
ಹೊರಡುವ ಮುನ್ನ ಮನೆಯಲ್ಲಿ ಹೇಳಿ
ಬರಬೇಕು ಹೆಂಡತಿ ಮಕ್ಕಳ ಬಳಿ ಸೈನಿಕರು:
ಹೋಗುತ್ತಿರುವುದು ಇಂತಹ ಕಾಡಿಗೆ.

ಒಂದಲ್ಲ ಎರಡಲ್ಲ, ಸಂಗ್ರಹಿಸಿದ್ದಾನೆ ತಡೆತಡೆದು
ದಾರಿಹೋಕರ ಬಡಜನರ ಹೆಂಗಳೆಯರ
ಉಸಿರು ಸಿಕ್ಕವರ ಬಸಿರು ಇಳಿದವರ ಹೆಸರು ಮರೆತವರ
ನಿಲ್ಲಿಸಿ ಬೆದರಿಸಿ ಹೊಡೆದು ಕೆಳಗುರುಳಿಸಿ
ಪೂರ್ತಿ ಒಂಬೈನೂರಾ ತೊಂಬತ್ತೊಂಬತ್ತು
ಇನ್ಯಾವ ಸೈನ್ಯದ ಭಯ, ಇನ್ನೆಲ್ಲಿಯ ಆಪತ್ತು!

ಇನ್ನೊಂದೆ ಬೇಕು, ಇನ್ನೊಂದೇ ಸಾಕು. ಅಕೋ,
ಯಾರವನು ಕಾವಿ ಬಟ್ಟೆಯುಟ್ಟು ಸಾವಧಾನ ಹೆಜ್ಜೆಯಿಟ್ಟು
ಬಲಿಯಾಗಲೆಂದೆ ಬರುತಿರುವವನು
ಅರಸನಣತಿಯಾಲಿಸಿ ಬಂದ ಗುಪ್ತಚರನೆ?
ಭೀತಿ ಹೊಸಕಿದ ರೀತಿ ಮಂದಚಲನೆ..
ಇರುವರಣ್ಯದ ಪರಿಯರಿಯದ ಹೊಸಬನೆ?
ಯಾರಾದರೇನು? ಹಸಿದ ಅಸಿಗಾಹುತಿಯಾಗುವ
ದೆಸೆಯವನ ನೊಸಲಿನಲ್ಲಿರೆ, ಯಾರಾದರೇನು?

ಸವರಿದನು ಕತ್ತಿ. ಕೊರಳ ಹಾರಕ್ಕೊಂದೆ ಮಣಿ ಬಾಕಿ.
ನಡೆದನು ಬಿರಬಿರನೆ ಸಾಧುವೆಡೆಗೆ
ಹಿಂಬಾಲಿಸಿದನು ದಿಟ್ಟಿ ಕದಲಿಸದೆ
ಓಡಿದನು ಮಂದಗಮನನ ಹಿಂದೆ ಕಚ್ಚಿಯೊಸಡು
ನಿಂದನು ಬಳಲಿ ಬೆವರೊಡೆದು, ಬಿಟ್ಟು ಏದುಸಿರು

ಎಂಥ ದುರ್ಗಮ ಗಿರಿಶ್ರೇಣಿಗಳಲೋಡಿದವನು ತಾನು!
ಆನೆ ಜಿಂಕೆ ಚಿರತೆಗಳ ವೇಗ ಹಿಮ್ಮೆಟ್ಟಿ
ಹಾರುವಕ್ಕಿಗಳ ಬೆನ್ನಟ್ಟಿ, ಲೆಕ್ಕಿಸದೆ ಮುಳ್ಳುಕಂಟಿ
ಆದರಿದೇನಿದು ಇಂದು? ನಡೆವ ಸನ್ಯಾಸಿಯ
ಹಿಡಿಯಲಾಗದೆ ದೌಡಾಯಿಸಿದರು ಜೋರು?

ನಿಂತು ಕಿರುಚಿದನು ಹಿಂಸ್ರನುತ್ಕಂಠದಿ:
ನಿಲ್ಲಲ್ಲಿ, ಹೇ ಸನ್ಯಾಸಿ, ನಿಲ್ಲಲ್ಲಿ.

ತಿರುಗಿದನು ಯತಿ, ಮಂದಸ್ಮಿತ ಮುಖಿ
ಅರುಹಿದನು: ನಿಂತೆ ಇರುವೆನು ನಾನು,
ನೀನು ನಿಲ್ಲುವುದೆಂದು?

ಇದೆಲ್ಲಿಯ ಮರುಳು ಸನ್ಯಾಸಿ!
ಹೆಜ್ಜೆಯೆತ್ತಿಡುತಿದ್ದರು ತಾ ನಿಂತಿರುವೆನೆನುವ!
ಹೇ ಸನ್ಯಾಸಿ, ನಾ ನಿಂತಿರುವೆ, ನೀ ನಿಲ್ಲು

ಯತಿಯ ವದನದಲದೆಂತ ಚಿರಕಾಂತಿ!
ನಾನು ನಿಂತು ಸಂದಿದೆ ಕಾಲ
ಕ್ರೂರತೆಯ ತ್ಯಜಿಸಿ, ಕೊಲ್ಲುವುದ ಬಿಟ್ಟು.
ಪ್ರೀತಿ ಅಹಿಂಸೆ ಸಂಯಮದ ಪಾಲನೆಗೆ ತೊಡಗಿ.
ನಿಂತಿಲ್ಲದಿರುವುದಿನ್ನೂ ನೀನು; ನೀನು.

ಸಾವಿರದ ಬೆರಳು ಕೈಯಲ್ಲೆ ಉಳಿಯಿತು
ಕರವಾಳಕಂಟಿದ ರಕ್ತ ಮಂಕನ್ನು ತೊಳೆಯಿತು
ಸಾಕಾಯ್ತು ಶಾಂತಯೋಗಿಯ ಒಂದೆ ನುಡಿಮುತ್ತು
ಕಿತ್ತೆಸೆದು ಕೊರಳ ಮಾಲೆ, ನಡೆದ ಬುದ್ಧನ ಹಿಂದೆ ಬಿಕ್ಕು.

Wednesday, February 15, 2012

ಯೋಧ ಮತ್ತು ಒಂದು ಮಗು

ಈ ಊರೂ ಮುಂಚೆ ಎಲ್ಲ ಊರಿನಂತೆಯೇ ಇತ್ತು.
ಮನೆಯೆದುರಿಗೇ ಬಸ್ಸುಗಳು ಓಡಾಡುತ್ತಿದ್ದವು.
ಇನ್ನೂ ಸೈಕಲ್ಲೋಡಿಸಲು ಬರದ ಹುಡುಗರು
ಟಯರುಗಳ ಹಿಂದೆ ಕೋಲು ಹಿಡಿದು ಓಡುತ್ತಿದ್ದರು.
ಕಾಯಿನ್ ಫೋನಿನ ಸಣ್ಣ ತೆರೆಯಲ್ಲಿ ಕಳೆಯುತ್ತಿರುವ
ಸಮಯ ಗಮನಿಸುತ್ತ ಜನ ಮಾತಾಡುತ್ತಿದ್ದರು.
ಕಾಲಿಂಗ್ ಬೆಲ್ ಇಲ್ಲದ ಮನೆಗಳ ಬಾಗಿಲ ಚಿಲಕವನ್ನೇ
ಟಕ್ಕಟಕ್ಕೆಂದು ಬಡಿದು, ಇಲ್ಲವೇ ಪ್ರೀತಿಸುವವರ ಪ್ರೀತಿಯ
ಹೆಸರು ಕೂಗಿ ಕರೆದು ಒಳಗೆ ಸೇರಿಕೊಳ್ಳುತ್ತಿದ್ದರು.
ಸಂಜೆಯ ಹೊತ್ತಿಗೆ ಊರವರೆಲ್ಲ ಮೊಂಬತ್ತಿ ಹಿಡಿದು
ಪ್ರಾರ್ಥನೆಗೆಂದು ದೇವಾಲಯದ ಕಡೆಗೆ ಹೆಜ್ಜೆ ಹಾಕುತ್ತಿದ್ದರು.

ಆಮೇಲೆ ಅದೇನಾಯಿತೋ, ದೇಶ ಧರ್ಮ ಸೇಡು ಹಣ ಶತ್ರು ಆಕ್ರಮಣ
ಅಥವಾ ಮತ್ತೇನೋ ಕಾರ್ಯಕಾರಣ, ಚಿರತೆಯ ತರಹದ ಬಟ್ಟೆ
ಧರಿಸಿದ ಮನುಷ್ಯರು ಬಂದೂಕುಗಳನ್ನು ಹಿಡಿದು ಇವರ
ಸೌಖ್ಯದ ನೆಲೆಗಳ ಮೇಲೆ ನುಗ್ಗಿದರು. ಚಾಕು ಚೂರಿ ಸುತ್ತಿಗೆ
ಹಗ್ಗ ದೊಡ್ಡ ಕಲ್ಲು ತಣ್ಣಗೆ ಕೊರೆವ ನೀರು ನಿರಾಹಾರ ಬಲಾತ್ಕಾರ
ಓಹೋ, ಬಂದೂಕೊಂದೇ ಏಕೆ, ಕೊಲ್ಲಲೂ ವಿಧವಿಧ ವಿಧಾನ.
ರುಧಿರದ ವರ್ಣ, ಸಾವಿನ ಚೀತ್ಕಾರ, ಭಯದಿಂದ ಕಂಪಿಸುವಕ್ಷಿ-
ಯೋಧನ ಹೃದಯಕ್ಕದೇ ಮುದ, ಮೆರೆದರೇನೆ ತೃಪ್ತಿ ಅಟ್ಟಹಾಸ.

ಇಲ್ಲೊಂದು ಪಾಪಕ್ಕೆ ಹುಟ್ಟಿದ ಶಿಶು. ಒಬ್ಬ ಯುದ್ಧ ಮರೆತ ಯೋಧ.
ತಾಯೀ ನಿನ್ನೆದೆಯಲ್ಲಿ ಹಾಲಿಲ್ಲವೇ? ನೀನಿದರ ಅಮ್ಮನಲ್ಲವೇ?
ಇದರಳು ನಿನಗೆ ಕೇಳಿಸುತ್ತಿಲ್ಲವೇ? ನಿನ್ನ ಕಣ್ಣೇಕೆ ಹಾಗೆ ಬಿಳುಚಿಕೊಂಡಿವೆ?
ಹೆಣ್ಣು ಹಾಗೆಲ್ಲ ನಿರ್ಭೀತಿಯಿಂದ ಒಬ್ಬಳೇ ನಡೆಯಬಾರದಮ್ಮಾ.
ಇಕೋ, ನಾನು ಬರುತ್ತೇನೆ ನಿನ್ನ ಸಂಗಡ. ಸುರಕ್ಷಿತ ಜಾಗ ತಲುಪಿಸುತ್ತೇನೆ.
ನಿನ್ನ ಮಗು ಮಾಡಿಕೊಂಡ ಹೊಲಸು ನಾನು ತೊಳೆಯುತ್ತೇನೆ.
ಹೊಸ ಬದುಕು ನಿರ್ಮಿಸಿಕೊಡುತ್ತೇನೆ. ಈ ಬೊಮ್ಮಟಿಗೆ ಹಾಲುಣಿಸು.

ಒಬ್ಬ ತಾಯಿಯ ಎದೆಯಲ್ಲಿ ಹಾಲೊಸರಲು ಎಷ್ಟು ಗಂಟೆ ಬೇಕು
ಒಬ್ಬ ತಾಯಿಯ ಹೃದಯದಲ್ಲಿ ಮಮಕಾರ ಮೂಡಲು ಎಷ್ಟು ಗಳಿಗೆ ಬೇಕು
ಒಬ್ಬ ತಾಯಿಯ ಬಾಯಲ್ಲಿ ಜೋಗುಳ ಮಿಡಿಯಲು ಎಷ್ಟು ಹೊತ್ತು ಬೇಕು
ಒಬ್ಬ ತಾಯಿ ತನ್ನ ಮಗುವನ್ನೆತ್ತಿ ಮುದ್ದು ಮಾಡಲು ಎಷ್ಟು ಕಾಲ ಬೇಕು
ಒಬ್ಬ ತಾಯಿಯ ನೋವು ಅರ್ಥ ಮಾಡಿಕೊಳ್ಳಲೆಷ್ಟು ಜನುಮ ಬೇಕು

ರಣರಂಗದಲ್ಲಿರುವವ ಆಡುವ ಮಾತುಗಳಲ್ಲ ಇವು. ಕನಸಿನಿಂದ ಬೆಚ್ಚಿ
ಎದ್ದೇಳುವವನು ಯೋಧನಾಗಿರಲು ಅರ್ಹನಲ್ಲ. ಬದುಕಿಸುವವರಿಗಲ್ಲ ಯುದ್ಧ;
ಕೊಲ್ಲುವವರಿಗೆ. ಎಸೆದಿದ್ದಾನೆ ಅದಕ್ಕೆಂದೇ ಬಂದೂಕು ನೀರಿಗೆ.
ಕುಡಿಸಿದ್ದಾನೆ ಗುಲಾಬಿ ತುಟಿಗಳ ಕಂದನಿಗೆ ಹಾಲು. ಆಗಿದ್ದಾನೆ ತಾನೇ ತಾಯಿ.

[Savior ಎಂಬ ಸಿನೆಮಾ ನೋಡಿ.]

Sunday, January 29, 2012

ಮತ್ತೆ ಬರೆದ ಕವಿತೆ


ಬರೆಯದೇ ಹಾಗೇ ಇದ್ದುಬಿಟ್ಟರೆ ಏನಾಗುತ್ತದೆ?
ಏನೂ ಆಗುವುದಿಲ್ಲ. ಖಾಲಿ ಹಾಳೆ. ತುಂಬು ಇಂಕಿನ ಪೆನ್ನು
ಕ್ಷಣಗಳನ್ನಾಚೀಚೆ ತಳ್ಳುತ್ತ ನಡೆದ ಲೋಲಕದ ಹೆಜ್ಜೆ ಸದ್ದು
ತಂತಿ ಬಿಗಿಹಿಡಿದೆಳೆದಷ್ಟೂ ಪ್ರವಹಿಸುವ ಸಿತಾರಿನ ಝರಿ
ಔಷಧಿ ನಿಲ್ಲಿಸಿದ್ದೇ ಮತ್ತೆ ಶುರುವಾಗುವ ವಾತ ಕಸ
ಹೇಗಿದ್ದ ಚಿನ್ನಾರಿಮುತ್ತನೂ ಬೆಳೆದು ಹೇಗೋ ಆಗಿಬಿಡುತ್ತಾನೆ.

ಹಿಡಿಯದೇ ಬಿಟ್ಟ ಮೀನುಗಳಿಗೋ, ತಮ್ಮ ಹೆಜ್ಜೆಯನ್ನೇ ಪತ್ತೆ-
ಹಚ್ಚಲಾಗದು ಎಂಬ ಜಂಬ. ಕಿವಿರುಗಳಲಿ ತುಂಬಿದ
ಬೆಚ್ಚನೆ ಉಸಿರಿನಲಿ ಗರ್ಭದಲ್ಲಡಗಿದ ಸಾವಿರ ಮೊಟ್ಟೆಗಳ ಗುಟ್ಟು.
ಭಾರ ಹೊಟ್ಟೆಯೆಳೆದು ಈಜಿದ್ದೇನು! ಇನ್ನೇನು ಕೆಲವೇ ದಿನ:
ಸಾವಿರ ಮರಿಗಳ ಈಜು ಸೃಷ್ಟಿಸಲಿರುವ ಪ್ರವಾಹದ ಮುನ್ಸೂಚನೆ
ಬೆಸ್ತನ ರೇಡಿಯೋದ ಹವಾ ವರ್ತಮಾನದಲ್ಲಿ ಬಂದೇ ಇಲ್ಲ.

ಅಕ್ವೇರಿಯಮ್ಮಿನ ನಕ್ಷತ್ರ ಮೀನು ಮನೆಯೆದುರಿಗೆ ತೂಗಿ
ಬಿಟ್ಟ ಆಕಾಶಬುಟ್ಟಿಯಲಿ ತನ್ನನೇ ಕಂಡು ದಿಗ್ಭ್ರಾಂತಗೊಂಡಿದೆ.
ಸಂತಾಪ ಸೂಚಕ ಸಭೆಯಲ್ಲಿ ಬೆಕ್ಕೊಂದು ಮ್ಯಾಂವ್‌ಗುಟ್ಟಿ
ಒಂದು ನಿಮಿಷದ ಮೌನದಲ್ಲಪಶೃತಿಯಾಗಿದೆ.
ಹತ್ತಂಗಡಿ ಹತ್ತಿಳಿದರೂ ಸರಿಯಾದ ಸೈಜಿನ ಉಂಗುರ ಸಿಗದೇ
ನಿಶ್ಚಿತಾರ್ಥ ನಿಗದಿಯಾದ ಜೋಡಿಗೆ ಕಳವಳವಾಗಿದೆ.

ಎಲ್ಲೂ ಸುದ್ದಿಯಾಗದ ಸಂಗತಿಗಳೇ ಬೇಕಿದೆ ಕವನಕ್ಕೆ
ಇನ್ನೂ ಮುದ್ದು ಮಾಡದ ಟೆಡ್ಡಿಯೇ ಬೇಕಿದೆ ಉಡುಗೊರೆಗೆ
ಮಶಿಯ ನಿಬ್ಬಿನಿಂದಕ್ಷರಗಳರಳರಳಿ ಬರುತ್ತಿವೆ ಉಕ್ಕಿ
ಮಶೀನಿನುಬ್ಬೆಯಲಿ ಬೆಂದರಳಿ ಬಂದ ಪಾಪ್‌ಕಾರ್ನ್
ಕೋನ ಪಾಕೀಟಿನಲಿ ಸಿದ್ದ ಕವಿತೆಯಂತೆಯೇ ಇದೆ
ಹಿಡಿ ಬೊಗಸೆ: ನಿನಗೂ ನಾಲ್ಕು ಕೊಡುವೆ.