Friday, December 20, 2019

ಅಟ್ಟಣಿಗೆ

ವಾಪಸು ಬರುವಾಗ ಪ್ರಶಾಂತ ಅನ್ಯಮನಸ್ಕನಾಗಿದ್ದ. ಯಾವುದೋ ಎಫ್ಫೆಮ್ ಛಾನೆಲ್ಲಿನಲ್ಲಿ ಆರ್ಜೆಯೊಬ್ಬಳು ‘ಡು ಯು ಥಿಂಕ್ ವಿ ನೀಡ್ ಟು ಛೇಂಜ್ ಅವರ್ ಲೈಫ್‌ಸ್ಟೈಲ್?  ಮೆಸೇಜ್ ಮಿ ಆನ್.....’ ಅಂತೇನೋ ಉಲಿಯುತ್ತಿದ್ದಳು. ಸಿಟ್ಟು ಬಂದು ಎಫ್ಫೆಮ್ ಆಫ್ ಮಾಡಿದ. ಕಾರಿನ ತುಂಬ ಮೌನ ಆವರಿಸಿತು. ಆದರೂ ಆ ಆರ್ಜೆ ಕೇಳಿದ ಪ್ರಶ್ನೆ ಕಿವಿಯಲ್ಲಿ ಕೊರೆಯತೊಡಗಿತು. ಜೀವನಶೈಲಿ ಬದಲಾಯಿಸೋದು ಅಂದ್ರೆ ಏನು? ಈಗ ನಾನು ಬದುಕ್ತಿರೋ ಶೈಲಿ ಸರಿಯಿಲ್ವಾ? ಹೇಗೆ ಬದುಕೋದು ಸರಿ?

ಮನೆ ಮುಟ್ಟಿದರೆ ಮೊಬೈಲ್ ಹಿಡಿದಿದ್ದ ರೇಖಾ ಯಾವುದೋ ಶಾಪಿಂಗ್ ಸೈಟಿನಲ್ಲಿ ಒಂದಷ್ಟು ವಸ್ತುಗಳನ್ನು ಕಾರ್ಟಿಗೆ ಹಾಕಿಕೊಂಡು ‘ನೋಡು ಪ್ರಶ್, ಈ ಕಲರ್ ಟಾಪ್ ನಂಗೆ ಒಪ್ಪುತ್ತಾ?’ ಅಂದಳು. ‘ಏ.. ಹೊತ್ತುಗೊತ್ತು ಇಲ್ವಾ ನಿಂಗೆ? ಯಾವಾಗ ನೋಡಿದ್ರೂ ಶಾಪಿಂಗು. ತಗೊಂಡಾದ್ರೂ ತಗೊಳ್ತೀಯಾ? ಅದೂ ಇಲ್ಲ. ಕಾರ್ಟಿಗೆ ಹಾಕೋದು, ಕೊನೆಗೆ ರಿಮೋವ್ ಮಾಡೋದು.. ಇಪ್ಪತ್ನಾಲ್ಕು ಗಂಟೆ ಆ ಮೊಬೈಲ್ ಹಿಡ್ಕಂಡಿರ್ತೀಯ.  ಮೊದ್ಲು ತೆಗ್ದು ಪಕ್ಕಕ್ಕಿಡು ಅದನ್ನ’ ರೇಗಿದ.  ಗಂಡನ ಮೂಡು ಸರಿಯಿಲ್ಲ ಎಂಬುದು ಹೆಂಡತಿಗೆ ಅರ್ಥವಾಯಿತು.  ಜತೆಗೇ ಬೆಳಿಗ್ಗೆ ನಡೆದ ಘಟನೆಯೂ ನೆನಪಾಯಿತು.  ‘ಸಾರಿ, ಹೋದ ಕೆಲಸ ಏನಾಯ್ತು? ಅಡ್ಮಿಟ್ ಮಾಡ್ಕೊಂಡ್ರಾ? ಹೆಚ್ಚಿಗೆ ಏನೂ ಪೆಟ್ಟು ಆಗಿಲ್ವಂತಾ?’ ಕೇಳಿದಳು. ‘ಮಾಡ್ಕೊಂಡ್ರು. ತುಂಬಾ ನೋವು ಅನುಭವಿಸ್ತಿರೋದು ನೋಡಿದ್ರೆ ಸ್ಪೈನಲ್ ಕಾರ್ಡಿಗೆ ಏಟು ಬಿದ್ದಿದೆಯಾ ಟೆಸ್ಟ್ ಮಾಡ್ಬೇಕು. ಮೊದಲು ಇಷ್ಟು ಟೆಸ್ಟ್ ಮಾಡಿಸಿ ಅಂತ ಎಕ್ಸರೇ, ಸ್ಕಾನಿಂಗ್, ಬ್ಲಡ್ ಟೆಸ್ಟ್ ಅಂತ ಸುಮಾರೆಲ್ಲ ಪಟ್ಟಿ ಬರ್ಕೊಟ್ರು. ಮೊದಲಿಗೆ ಹತ್ತು ಸಾವಿರ ರೂಪಾಯಿ ಕಟ್ಟಬೇಕು ಅಂದ್ರು. ಅಷ್ಟರಲ್ಲಿ ಅವನ ಸಂಬಂಧಿಕರೋ-ಊರವರೋ ಯಾರೋ ಮೂರ್ನಾಲ್ಕು ಜನ ಬಂದ್ರು. ಅವರೆಲ್ಲ ಹೊಂಚಿ ಕಲೆ ಹಾಕಿದರೂ ಒಟ್ಟು ಆರು ಸಾವಿರ ಇತ್ತು ಅವರ ಬಳಿ. ಅವನ ಹೆಂಡತಿ ಒಂದೇ ಸಮನೆ ಅಳ್ತಾ ಇದ್ಲು. ಪಾಪ ಅನ್ನಿಸ್ತು. ಮತ್ತೇನ್ ಮಾಡೋದು? ನಾನೇ ಇನ್ನು ನಾಲ್ಕು ಸಾವಿರಕ್ಕೆ ಕಾರ್ಡ್ ಸ್ವೈಪ್ ಮಾಡಿ ಬಂದೆ’ ಅಂತ ಹೇಳಿದ. ‘ನಾಲ್ಕು ಸಾವಿರ ಕೊಟ್ಯಾ? ಇಟ್ಸ್ ಅ ಬಿಗ್ ಅಮೌಂಟ್!’ ಅಂದ ರೇಖಾಗೆ, ‘ಆ ಪಕ್ಕದಮನೆ ಓನರ್ ಬರ್ಲಿ ಬಡ್ಡಿಮಗ, ಜಬರದಸ್ತಿ ಮಾಡಿಯಾದ್ರೂ ವಸೂಲಿ ಮಾಡ್ತೀನಿ’ ಅಂದ.  

ಹಣ ಹಾಗೆ ಖರ್ಚಾದುದಕ್ಕೆ ತಲೆಬಿಸಿಯಾಗಿದ್ದಕ್ಕಿಂತಲೂ ಪ್ರಶಾಂತನಿಗೆ ಬೆಳಗಿನ ಆ ಘಟನೆಯ ಶಾಕ್‌ನಿಂದ ಹೊರಬರಲು ಆಗಲೇ ಇಲ್ಲ. ರೂಮಿಗೆ ಹೋಗಿ ಬಟ್ಟೆ ಬದಲಿಸಿದ. ಆಫೀಸಿಗೆ ಬರೋದಿಲ್ಲ ಅಂತ ಮ್ಯಾನೇಜರಿಗೆ ಮೆಸೇಜು ಮಾಡಿದ. ರೇಖಾ ತಿಂಡಿ ಕೊಡಲು ಬಂದರೆ ಹಸಿವಿಲ್ಲ ಅಂತ ತಟ್ಟೆಯನ್ನು ದೂರ ತಳ್ಳಿದ. ‘ಕಮಾನ್ ಪ್ರಶ್.. ಎವೆರಿಥಿಂಗ್ ವಿಲ್ ಬಿ ಆಲ್ರೈಟ್.. ಅವನು ಹುಷಾರಾಗಿ ವಾಪಸ್ ಬರ್ತಾನೆ. ಯಾರೋ ನಮಗೆ ಸಂಬಂಧವಿಲ್ಲದವರಿಗೆ ಏನೋ ಆಗಿದ್ದಕ್ಕೆ ಇಷ್ಟೊಂದು ತಲೆ ಹಾಳು ಮಾಡ್ಕೊಂಡಿದೀಯಲ್ಲ.. ಆ ಸಮಯದಲ್ಲಿ ಏನು ಮಾಡಬಹುದಿತ್ತೋ ಅದನ್ನ ನಾವು ಮಾಡಿದೀವಿ. ಹೌದು, ಅದು ಕರ್ತವ್ಯ, ಮಾನವೀಯತೆ.  ಸಹಾಯ ಮಾಡಿದ್ವಿ. ಅದಕ್ಕಿಂತ ಜಾಸ್ತಿ ನಾವು ಇನ್ನೇನೂ ಮಾಡೋಕೆ ಸಾಧ್ಯ ಇರ್ಲಿಲ್ಲ..’ ಅಂತೆಲ್ಲ ರೇಖಾ ಸಮಾಧಾನ ಮಾಡಿದರೂ, ಬೆಳಿಗ್ಗೆ ಕೇಳಿದ ಆ ‘ಧಡಾರ್’ ಶಬ್ದ ಪ್ರಶಾಂತನ ತಲೆಯಿಂದ ಇಳಿಯಲಿಲ್ಲ. 

ಆದದ್ದಿಷ್ಟು: ಎಂದಿನಂತೆ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಆಫೀಸಿಗೆ ಹೊರಡಲು ತಯಾರಾದ ಪ್ರಶಾಂತನಿಗೆ ಹೆಂಡತಿ ತಟ್ಟೆಯಲ್ಲಿ ಪಾಸ್ತಾ ತಂದುಕೊಟ್ಟಳು. ತಟ್ಟೆಯನ್ನು ಟೇಬಲ್ಲಿನ ಮೇಲಿಟ್ಟುಕೊಂಡು, ಒಂದು ಕೈಯಲ್ಲಿ ಮೊಬೈಲು ಇನ್ನೊಂದು ಕೈಯಲ್ಲಿ ಚಮಚ ಹಿಡಿದು ತಿಂಡಿಯ ಶಾಸ್ತ್ರ ನಡೆಸುತ್ತಿದ್ದಾಗ ಹೊರಗಿನಿಂದ ಧಡಾರನೆ ಶಬ್ದ ಕೇಳಿಸಿತು. ಇಬ್ಬರೂ ಹೊರಹೋಗಿ ಬಗ್ಗಿ ಕೆಳಗೆ ನೋಡಿದರೆ, ವ್ಯಕ್ತಿಯೊಬ್ಬ ಹೋ ಅಂತ ನರಳುತ್ತಿದ್ದ.  ಪಕ್ಕದ ಸೈಟಿನಲ್ಲಿ ಮನೆ ಕಟ್ಟುತ್ತಿದ್ದ ಮೇಸ್ತ್ರಿಗಳು ಎರಡನೇ ಫ್ಲೋರಿನ ಸೆಂಟ್ರಿಂಗ್ ಹಾಕಲು ಅಟ್ಟಣಿಗೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದರು. ತಮಿಳಿನಲ್ಲಿ ದೊಡ್ಡ ದನಿಯಲ್ಲಿ ಮಾತಾಡಿಕೊಳ್ಳುತ್ತಾ, ಕರಣೆ-ಬಾಣಲಿ-ಇನ್ನಿತರ ಸಲಕರಣೆಗಳಿಂದ ಸದ್ದು ಮಾಡುತ್ತಾ, ಎರಡು ತಿಂಗಳಿನಿಂದ ಅಲ್ಲೇ ಕೆಳಗಡೆ ಹಾಕಿಕೊಂಡಿದ್ದ ಸಣ್ಣದೊಂದು ಬಿಡಾರದಲ್ಲಿ ಮೂರ್ನಾಲ್ಕು ಜನರ ಸಂಸಾರ ವಾಸವಾಗಿತ್ತು. ‘ಬೆಳಗಾದರೆ ಇವರದ್ದೊಂದು ರಗಳೆ’ ಅಂತ ಎಷ್ಟೋ ದಿನ ರೇಖಾ ಸಿಡಿಮಿಡಿ ಮಾಡುವುದೂ ಇತ್ತು.  ಇಷ್ಟೇ ಸಣ್ಣ ಜಾಗದಲ್ಲಿ ಮರಳು-ಸಿಮೆಂಟು-ಇಟ್ಟಿಗೆಗಳನ್ನು ಸಾಗಿಸುತ್ತಾ, ಅಷ್ಟೆತ್ತರದಲ್ಲಿ ಅಟ್ಟಣಿಗೆಗಳನ್ನು ಹಾಕಿಕೊಂಡು ಅವರು ಕಟ್ಟಡ ಕಟ್ಟಲು ಮಾಡುವ ಸಾಹಸ ಯಾವ ಸರ್ಕಸ್ಸಿಗೂ ಕಮ್ಮಿಯಿರಲಿಲ್ಲ.  ಆದರೆ ಈ ದಿನ ಬೆಳಗ್ಗೆ ಅದು ಹೇಗೋ ಅಟ್ಟಣಿಗೆಯ ಕಂಬವೊಂದು ಮುರಿದುಕೊಂಡು, ಅಷ್ಟು ಎತ್ತರದಿಂದ ಆ ಮೇಸ್ತ್ರಿ ಆಯ ತಪ್ಪಿ ಬಿದ್ದಿದ್ದಾನೆ. ಹೊರಗೋಡಿ ಬಂದ ರೇಖಾ-ಪ್ರಶಾಂತರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ಬಿದ್ದವನು ಒಂದೇ ಸಮನೆ ಹೊಯ್ದುಕೊಳ್ಳುತ್ತಿದ್ದ. ಅವನ ಹೆಂಡತಿಯೂ-ಸಹಕೆಲಸಗಾರರು ಅಯ್ಯಯ್ಯೋ ಅಂತ ಬಾಯಿ ಬಡಿದುಕೊಂಡು ಅಳತೊಡಗಿದರು. ಕೆಳಗಡೆ ಒಂದಷ್ಟು ಜನ ಸೇರಿದರು. ರೇಖಾ-ಪ್ರಶಾಂತರೂ ಕೆಳಗಿಳಿದು ಹೋದರು.  ಯಾರೋ ‘ಆಂಬುಲೆನ್ಸಿಗೆ ಫೋನ್ ಮಾಡ್ರೀ ಆಂಬುಲೆನ್ಸಿಗೆ ಫೋನ್ ಮಾಡ್ರೀ’ ಅಂದರು. ಎಲ್ಲರೂ ಮುಖಮುಖ ನೋಡಿಕೊಂಡರು. ‘ವನ್ ಜೀರೋ ಏಟ್ ಕಣ್ರೀ.. ಬೇಗ ಮಾಡ್ರೀ’ ಅಂದರು ಮತ್ಯಾರೋ. ‘ಓನರ್ ಕರೆಸ್ರೀ.. ನಂಬರ್ ಇದೆಯೇನ್ರೀ ಯಾರ ಹತ್ರನಾದ್ರೂ.. ಕಾಂಟ್ರಾಕ್ಟರ್‌ಗೆ ಹೇಳ್ಬೇಕು’ ಅಂತೆಲ್ಲ ಕೆಲವರು ಬಡಬಡಿಸುತ್ತಿದ್ದರು.  ಪ್ರಶಾಂತ ತನ್ನ ಮೊಬೈಲಿನಿಂದ ಆಂಬುಲೆನ್ಸಿಗೆ ಫೋನು ಮಾಡಿದ.  ಅವರು ಯಾವ ಏರಿಯಾ ಅಂತ ಕೇಳಿಕೊಂಡು ‘ಹತ್ತಿರದ ಆಂಬುಲೆನ್ಸಿಗೆ ಕನೆಕ್ಟ್ ಮಾಡ್ತೀವಿ, ಲೈನಿನಲ್ಲೇ ಇರಿ’ ಅಂದರು.  ಮೂರ್ನಾಲ್ಕು ನಿಮಿಷ ಆದರೂ ಕನೆಕ್ಟ್ ಆದಹಾಗೆ ಕಾಣಲಿಲ್ಲ.  'ಆಂಬುಲೆನ್ಸ್ ಬರೋತನಕ ಕಾಯಕ್ಕಾಗತ್ತೇನ್ರೀ? ಯಾವುದಾದ್ರೂ ಆಟೋ ಬಂದ್ರೆ ಹತ್ತಿರದ ಆಸ್ಪತ್ರೆಗೆ ಒಯ್ದು ಬಿಡೋಕೆ ಹೇಳ್ಬಹುದಿತ್ತು’ ಅಂದರು ಮತ್ಯಾರೋ. ಅಲ್ಲಿದ್ದವರ್ಯಾರೂ ಜವಾಬ್ದಾರಿ ತೆಗೆದುಕೊಳ್ಳಲು ಮುಂದೆ ಬರುವಂತೆ ಕಾಣಲಿಲ್ಲ. ತಮಗ್ಯಾಕೆ ಇಲ್ಲದ ಉಸಾಬರಿ ಅಂತ ಎಲ್ಲರೂ ಹೆದರಿಕೊಂಡಂತೆ ಕಂಡರು.  ಪ್ರಶಾಂತನ ತಾಳ್ಮೆ ಮೀರುತ್ತಿತ್ತು. ರೇಖಾಳ ಬಳಿ ‘ಮೇಲೆ ಹೋಗಿ ಕಾರ್ ಕೀ ಬೀಸಾಕು’ ಅಂದವನೇ, ಅಲ್ಲಿದ್ದವರೊಂದಿಗೆ ಕೈ ಜೋಡಿಸಿ, ಒದ್ದಾಡುತ್ತಿದ್ದ ವ್ಯಕ್ತಿಯನ್ನು ಹೊತ್ತುತಂದು ತನ್ನ ಕಾರಿನ ಹಿಂದಿನ ಸೀಟಲ್ಲಿ ಮಲಗಿಸಿದ.  ಮೇಸ್ತ್ರಿಯ ಹೆಂಡತಿಯೂ ಮತ್ತೊಂದಿಬ್ಬರು ಕೆಲಸಗಾರರೂ ಕಾರು ಹತ್ತಿ ಮುದುಡಿ ಕುಳಿತುಕೊಂಡರು. ವ್ಯಕ್ತಿ ನರಳುತ್ತಲೇ ಇದ್ದ. ಹತ್ತಿರದ ಆಸ್ಪತ್ರೆಗೆ ಕರೆತಂದು, ಅಲ್ಲಿನ ಸಿಬ್ಬಂದಿಯ ಸಹಾಯದಿಂದ ಸ್ಟ್ರೆಚರಿನಲ್ಲಿ ಎಮರ್ಜೆನ್ಸಿ ವಾರ್ಡಿಗೆ ಸೇರಿಸುವಷ್ಟರಲ್ಲಿ ಪ್ರಶಾಂತ ಪೂರ್ತಿ ಬೆವರಿಹೋಗಿದ್ದ.

ಹಾಗೆ ಸೇರಿಸುವಾಗ ಅದೊಂದು ದುಬಾರಿ ಆಸ್ಪತ್ರೆ ಎಂಬುದೂ, ಅಲ್ಲಿಗೆ ಸೇರಿಸಿದರೆ ಅಲ್ಲಾಗುವ ವೆಚ್ಛವನ್ನು ಈ ಬಡ ಕೂಲಿ ಕಾರ್ಮಿಕರಿಗೆ ಭರಿಸಲು ಆಗುತ್ತದಾ ಎಂಬುದೂ ಪ್ರಶಾಂತನಿಗೆ ಹೊಳೆಯಲಿಲ್ಲ.  ಹೊಳೆದಿದ್ದರೂ ಆ ಸಂದರ್ಭದಲ್ಲಿ ಬೇರೆ ಆಸ್ಪತ್ರೆ ಹುಡುಕಿಕೊಂಡು ಅಲೆಯುವುದೂ ಸಾಧ್ಯವಿರಲಿಲ್ಲ. ಹೀಗಾಗಿ ಅವರ ಬಳಿ ಹಣ ಕಮ್ಮಿ ಬಿದ್ದಾಗ ಇದು ತನ್ನದೇ ಜವಾಬ್ದಾರಿಯೇನೋ ಎಂಬಂತೆ ಹಿಂದೆಮುಂದೆ ನೋಡದೇ ಕಾರ್ಡ್ ಉಜ್ಜಿ ಬಂದಿದ್ದ.

ಪ್ರಶಾಂತನಿಗೆ ಬೆಳಗಾಮುಂಚೆ ನಡೆದ ಆ ಘಟನೆಯಿಂದ ಅದೆಷ್ಟು ಆಘಾತವಾಯಿತು ಎಂದರೆ, ದಿನವಿಡೀ ಹುಚ್ಚುಚ್ಚಾಗಿ ಮನೆಯಿಡೀ ಓಡಾಡುತ್ತಾ ಇದ್ದುಬಿಟ್ಟ. ತಾನು, ತನ್ನ ಸಂಸಾರ, ಕೈತುಂಬ ಸಂಬಳ ಬರುವ ಕೆಲಸ, ವೀಕೆಂಡು ಬಂತೆಂದರೆ ಪಾರ್ಟಿ-ಸಿನೆಮಾ-ಶಾಪಿಂಗ್ ಎಂದು ನಗರವನ್ನು ಸುತ್ತುವ ಚಾಳಿ, ಬಿಡುಗಡೆಯಾದ ಹೊಸ ಫೋನುಗಳನ್ನು ಕೊಳ್ಳುವ ರೀತಿ, ನೆಟ್ಫ್ಲಿಕ್ಸು-ಹಾಟ್ಸ್ಟಾರ್ ಅಂತ ಇದ್ದಬದ್ದ ಪ್ಯಾಕೇಜುಗಳನ್ನು ಹಾಕಿಕೊಂಡು ದಿನಕ್ಕೊಂದು ಸಿನೆಮಾ ನೋಡುವ ಸೌಲಭ್ಯ, ಬೇಕಾದ ಪುಸ್ತಕಗಳನ್ನು ಖರೀದಿಸಿಯೇ ಓದುವ ಗತ್ತು... ಹೀಗೆ ಹಣದಿಂದ ಕೊಳ್ಳಲಾಗುವ ಸುಖವನ್ನೆಲ್ಲ ಖರೀದಿಸಿ ಅನುಭವಿಸುತ್ತಿರುವ ತಾನು ಮತ್ತು ಒಪ್ಪೊತ್ತಿನ ಊಟಕ್ಕಾಗಿ ಮುಗಿಲೆತ್ತರದ ಅಟ್ಟಣಿಗೆಯ ಮೇಲೆ ಸರ್ಕಸ್ ಮಾಡುವ ಆ ಮೇಸ್ತ್ರಿ –ಎಷ್ಟೊಂದು ವ್ಯತ್ಯಾಸ ನಮ್ಮ ನಡುವೆ! ನನಗೆ ಇಂತಹದ್ದೇನಾದರೂ ಅಪಘಾತವಾಗಿ ಆಸ್ಪತ್ರೆ ಸೇರಿದ್ದರೆ ಕಂಪನಿ ಆಸ್ಪತ್ರೆಯ ಅಷ್ಟೂ ವೆಚ್ಛವನ್ನು ಭರಿಸುತ್ತಿತ್ತು. ಅಷ್ಟರ ಮಟ್ಟಿನ ಲೈಫ್ ಸೆಕ್ಯುರಿಟಿ ತನಗಿದೆ. ಆದರೆ ಆ ಮೇಸ್ತ್ರಿಗೆ?

ಪ್ರಶಾಂತನಿಗೆ ತಾನು ಬದುಕುತ್ತಿರುವ ರೀತಿಯೇ ಸರಿಯಿಲ್ಲ ಎನ್ನಿಸಿಬಿಟ್ಟಿತು. ಆಸ್ಪತ್ರೆಯ ವೆಚ್ಛವನ್ನೂ ಭರಿಸಲಾಗದ ಆ ಮೇಸ್ತ್ರಿಯ ಕುಟುಂಬಕ್ಕೆ ತನ್ನ ಆಡಂಬರದ ಜೀವನಶೈಲಿಯಿಂದ ಅವಮಾನ ಮಾಡುತ್ತಿದ್ದೇನೆ ಅನ್ನಿಸಿತು. ಥಳಥಳ ಹೊಳೆವ ನೆಲದ ಡಬಲ್ ಬೆಡ್ರೂಮ್ ಫ್ಲಾಟಿನ ತನ್ನ ಮನೆಯ ಪಕ್ಕದಲ್ಲಿ ಇಷ್ಟೇ ಸಣ್ಣ ಗೂಡಿನಲ್ಲಿ ಮತ್ತೊಂದು ಕುಟುಂಬವೂ ಬಾಳುತ್ತಿರುವುದು ಈ ಮಹಾನಗರದ ವ್ಯಂಗ್ಯದಂತೆ ಭಾಸವಾಯಿತು. ಎಫ್ಫೆಮ್ಮಿನ ಆರ್ಜೆ ಹೇಳುತ್ತಿದ್ದುದು ನೆನಪಾಯ್ತು: ನನ್ನ ಜೀವನಶೈಲಿ ಬದಲಿಸಿಕೊಳ್ಳಬೇಕಾ ಹಾಗಾದರೇ?

ಮರುದಿನ ಬೆಳಗಾಗುವುದನ್ನೇ ಕಾಯುತ್ತಿದ್ದ ಪ್ರಶಾಂತ, ಕಾರು ಹತ್ತಿ ನೇರ ಆಸ್ಪತ್ರೆಯೆಡೆಗೆ ಧಾವಿಸಿದ. ಯಾವ ವಾರ್ಡಿನಲ್ಲಿದ್ದಾರೆಂದು ವಿಚಾರಿಸೋಣವೆಂದರೆ ಆ ಮೇಸ್ತ್ರಿಯ ಹೆಸರೂ ಕೇಳಿಕೊಂಡಿರಲಿಲ್ಲ. ರಿಸೆಪ್ಷನ್ನಿನಲ್ಲಿ ಹೀಗೆ ನಿನ್ನೆ ಎಮರ್ಜನ್ಸಿಯೆಂದು ತಾನು ಒಬ್ಬನನ್ನು ತಂದು ಸೇರಿಸಿದ್ದಾಗಿ ಹೇಳಿಕೊಂಡಾಗ ಆ ರಿಸೆಪ್ಷನಿಸ್ಟ್, ‘ಓಹ್ ಅವರಾ? ಅವರು ನಿನ್ನೆಯೇ ಡಿಸ್ಚಾರ್ಜ್ ಮಾಡಿಸ್ಕೊಂಡು ಹೋದ್ರಲ್ಲಾ.. ಇಲ್ಲಿ ನಮಗೆ ಆಗಲ್ಲ, ಸರ್ಕಾರಿ ಆಸ್ಪತ್ರೆಗೆ ಹೋಗ್ತೇವೆ ಅಂತ ಹೇಳಿ ಸಂಜೆಯೇ ಹೊರಟುಹೋದರು’ ಅಂದಳು. ಪ್ರಶಾಂತನಿಗೆ ನಿರಾಶೆಯಾಯಿತು. ಯಾವ ಆಸ್ಪತ್ರೆಗೆ ಹೋದರೋ ಏನೋ, ಹುಡುಕಿಕೊಂಡು ಹೋಗುವುದಂತೂ ಸಾಧ್ಯವಿರಲಿಲ್ಲ. ಸುಮ್ಮನೆ ಮನೆಗೆ ಮರಳಿದ.

ಇಷ್ಟೆಲ್ಲ ಆದರೂ ಆ ಪಕ್ಕದ ಮನೆಯ ಮಾಲೀಕನಾಗಲೀ, ಗುತ್ತಿಗೆದಾರನಾಗಲೀ ಈ ಕಡೆ ಸುಳಿದಿರಲಿಲ್ಲ. ತನ್ನೆದುರೇ ಅಪಘಾತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬ ಈಗ ಎಲ್ಲಿದ್ದಾನೆಂಬುದೂ ತಿಳಿಯುವಂತಿರಲಿಲ್ಲ.  ಪ್ರಶಾಂತನಿಗೆ ಎಲ್ಲವೂ ಖಾಲಿಖಾಲಿ, ಯಾವುದಕ್ಕೂ ಅರ್ಥವಿಲ್ಲ ಎನಿಸಿತು. ರೇಖಾ ಎಷ್ಟೇ ಸಮಾಧಾನ ಮಾಡಲು ಯತ್ನಿಸಿದರೂ ಪ್ರಶಾಂತ ಸರಿಯಾಗಲಿಲ್ಲ.

ಸುಮಾರು ಹದಿನೈದು ದಿನ ಕಳೆದಮೇಲೆ, ಸ್ಥಗಿತವಾಗಿದ್ದ ಪಕ್ಕದ ಕಟ್ಟಡದ ಕೆಲಸಗಳು ಮತ್ತೆ ಶುರುವಾದ ಸೂಚನೆಯಂತೆ ಟಣಟಣ ಸದ್ದುಗಳು ಬೆಳಗ್ಗೆಯೇ ತೇಲಿಬರತೊಡಗಿದವು. ಲಘುಬಗೆಯಿಂದ ಎದ್ದ ಪ್ರಶಾಂತ ಹೊರಹೋಗಿ ನೋಡಿದ. ಮೇಸ್ತ್ರಿಗಳು ಮುರಿದುಬಿದ್ದಿದ್ದ ಅಟ್ಟಣಿಗೆಯನ್ನು ಮತ್ತೆ ಜೋಡಿಸುತ್ತಿದ್ದರು.  ಅಂದು ಬಿದ್ದು ಪೆಟ್ಟುಮಾಡಿಕೊಂಡಿದ್ದ ಆ ಮೇಸ್ತ್ರಿಯೂ ಅಲ್ಲಿದ್ದ. ಅವನ ಬಲಗೈಗೆ ಬೆಳ್ಳನೆ ಬ್ಯಾಂಡೇಜ್ ಇತ್ತು. ಇವನನ್ನು ಕಂಡವನೇ, ‘ಸಾರ್.. ನಮಸ್ಕಾರ ಸಾರ್.. ನೀವು ಅವತ್ತು ಎಂಥಾ ಉಪಕಾರ ಮಾಡಿದ್ರಿ ಸಾರ್.. ನೀವು ಟೇಮಿಗೆ ಸರಿಯಾಗಿ ಕಾರಲ್ಲಿ ಕರ್ಕಂಡ್ ಹೋಗದಿದ್ರೆ ನನ್ ಕಥೆ ಏನಾಗ್ತಿತ್ತೋ ಏನೋ.. ತುಂಬಾ ಹೆಲ್ಪ್ ಆಯ್ತು ಸಾರ್.. ತುಂಬಾ ಥ್ಯಾಕ್ಸ್ ಸಾರ್’ ಅಂತ ಒಂದೇ ಸಮನೆ ಹೇಳಿದ. ಅವನ ಹೆಂಡತಿಯೂ ಕಣ್ಣೀರು ಸುರಿಸುತ್ತಾ ತಮಿಳಿನಲ್ಲಿ ಏನೇನೋ ಹೇಳಿದಳು.  ‘ಅಲ್ಲಪ್ಪಾ, ನಾನು ಅಷ್ಟೆಲ್ಲಾ ಮಾಡಿ ಆ ಆಸ್ಪತ್ರೆಗೆ ಸೇರಿಸಿದ್ರೆ ನೀವು ಹೇಳದೇಕೇಳದೇ ಡಿಸ್ಚಾರ್ಜ್ ಮಾಡಿಸ್ಕೊಂಡು ಹೋಗಿಬಿಟ್ಟಿದೀರಲ್ಲಪ್ಪಾ.. ನಾನು ಮರುದಿನ ಹೋಗಿ ವಿಚಾರಿಸಿದ್ರೆ ನೀವು ಅಲ್ಲಿಲ್ಲ’ ಕೇಳಿದ ಪ್ರಶಾಂತ. ‘ಅಯ್ಯೋ ಅಂಥಾ ಆಸ್ಪತ್ರೆಲೆಲ್ಲಾ ನಮ್ಮಂತೋರು ಇರಕ್ಕಾಯ್ತದಾ ಸಾರ್.. ಅದುಕ್ಕೇ ಸರ್ಕಾರಿ ಆಸ್ಪತ್ರೆಗೆ ಹೋಗಿ ಸೇರ್ಕಂಡ್ವಿ. ಅಲ್ಲಿ ಎಲ್ಲಾ ಫ್ರೀ ಸಾರ್.. ನಮ್ದು ಕಾರ್ಡ್ ಇರ್ತದಲ್ಲಾ, ಪಿ‌ಎಂದು ಅದೆಂಥದೋ ಸ್ಕೀಮಿಂದು, ಅದ್ರಲ್ಲಿ ಎಲ್ಲಾ ಫ್ರೀಯಾಗಿ ಆಯ್ತು ಸಾರ್. ದೇವ್ರು ದೊಡ್ಡೋನು ಸಾರ್.. ಅಷ್ಟು ಎತ್ರದಿಂದ ಬಿದ್ರೂ ಕೈ ಒಂದು ಮುರ್ದಿದ್ದು ಬಿಟ್ರೆ ಮತ್ತೇನೂ ಆಗ್ಲಿಲ್ಲ’ ಅಂದ ಮೇಸ್ತ್ರಿ.

ಪ್ರಶಾಂತನಿಗೆ ಸ್ವಲ್ಪ ನಿರಾಳವಾಯಿತು. ಅಟ್ಟಣಿಗೆಯ ಅಡ್ಡಗಂಬಗಳ ನಡುವಿಂದ ತಂಗಾಳಿ ತೇಲಿಬಂತು. ಮನೆಯೊಳಗೆ ಬಂದು ಉಲ್ಲಾಸದಿಂದ ಅತ್ತಿತ್ತ ಓಡಾಡಿದ. ಸುಮಾರು ದಿನಗಳ ನಂತರ ಪಾಸ್ತಾ ರುಚಿಯೆನಿಸಿತು. ರೇಖಾ ಅವನ ಭುಜ ತಟ್ಟಿ, ಕಿಟಕಿಯಿಂದ ಹೊರಗಡೆ ನೋಡು ಅಂತ ಸೂಚಿಸಿದಳು. ಅಲ್ಲಿ ಆ ಮೇಸ್ತ್ರಿ ಅಟ್ಟಣಿಗೆಯ ಮೇಲೆ ನಿಂತುಕೊಂಡು, ಬ್ಯಾಂಡೇಜು ಸುತ್ತಿದ ಒಂದು ಕೈಯನ್ನು ಗೋಡೆಗೆ ಆನಿಸಿಕೊಂಡು, ಇನ್ನೊಂದು ಕೈಯಲ್ಲಿ ಫೋನು ಹಿಡಕೊಂಡು ಯಾವುದೋ ವೀಡಿಯೋ ನೋಡುತ್ತಿದ್ದ. ಗಮನಿಸಿದರೆ ಅದೊಂದು ಒಳ್ಳೆಯ ಹೊಸ ಸ್ಮಾರ್ಟ್‌ಫೋನ್ ಹಾಗೆ ಕಾಣುತ್ತಿತ್ತು. ಪ್ರಶಾಂತನಿಗೆ ಕುತೂಹಲ ತಡೆಯಲಾಗದೆ ಹೊರಗಡೆ ಹೋಗಿ, ‘ಏನಪ್ಪಾ, ಹೊಸ ಫೋನ್ ತಗಂಡಂಗಿದೆ?’ ಅಂತ ಕೇಳಿದ. ‘ಹೌದೂ ಸಾರ್. ಆಸ್ಪತ್ರೆಗೆ ನೋಡಕ್ಕೆ ಬರ್ತಾರಲ್ಲ ಸಾರ್ ತುಂಬಾ ಜನ, ಅವ್ರೆಲ್ಲ ಅಷ್ಟಿಷ್ಟು ಕಾಸು ಕೊಡ್ತಾರೆ ಸಾರ್.. ನಾನು ಅಡ್ಮಿಟ್ ಆಗಿದ್ದಾಗ ಯಾರೋ ದೊಡ್ ಮನುಸ್ರು ಬಂದು ಐದು ಸಾವ್ರ ಕೊಟ್ರು ಸಾರ್.. ಎಲ್ಲಾ ಸೇರಿ ಹತ್ತನ್ನೆರ್ಡ್ ಸಾವ್ರ ಆಯ್ತು ಸಾರ್.. ಈಗ ಕೈಗೆ ಸುತ್ತಿರೋ ಬ್ಯಾಂಡೇಜ್ ಬಿಚ್ಚಗಂಟ ಕೆಲ್ಸ ಮಾಡ್ದೇ ಸುಮ್ನೇ ಕೂತಿರ್ಬೇಕಲ್ಲ ಸಾರ್, ಅದ್ಕೇ ಮೊಬೈಲಾಗೆ ವೀಡ್ಯ ಆದ್ರೂ ನೋಡನ ಅಂತ ತಗಂಡೆ ಸಾರ್.. ನಮ್ ಹೆಂಗುಸ್ರು ಬೈದ್ರು ಸಾರ್, ಆದ್ರೂ ನಾನು ತಗಂಡೆ ಸಾರ್’ ಅಂದ. ಪ್ರಶಾಂತ ಮನಸಿನಲ್ಲೇ ‘ಎಲಾ ಇವನಾ!’ ಅಂದುಕೊಂಡ. ತಾನು ಆವತ್ತು ಇವನ ಹೆಸರಲ್ಲಿ ಹಣ ಕಟ್ಟಿದ್ದು ತಪ್ಪಾಯಿತಾ, ಇವನು ಅದರ ಬಗ್ಗೆ ಪ್ರಸ್ತಾಪವನ್ನೇ ಮಾಡುತ್ತಿಲ್ಲವಲ್ಲ, ಅಥವಾ ಇವನಿಗೆ ಅದು ಗೊತ್ತೇ ಇಲ್ಲವಾ.. ಏನಾದರಾಗಲಿ, ನಾನಾಗೇ ಕೇಳಿ ಸಣ್ಣವನಾಗುವುದು ಬೇಡ ಅಂತ ಪ್ರಶಾಂತ ಸುಮ್ಮನಾದ.

ಒಳಬಂದಾಗ ರೇಖಾ ಹೇಳಿದಳು: ‘ಗೊತ್ತಾಯ್ತಾ ಪ್ರಶ್, ಇಷ್ಟೇ ಲೈಫು. ನಾವು ಸುಮ್ಮನೇ ಏನೇನೋ ತಲೆಕೆಡಿಸ್ಕೊಂಡು ಕೂತ್ಕೋತೀವಿ. ನಮಗಿರೋದು ಅವರಿಗಿಲ್ಲ, ನಾವು ಹೀಗಿರೋದು ತಪ್ಪು ಅಂತೆಲ್ಲ. ಆದ್ರೆ ಎವೆರಿವನ್ ಎಂಜಾಯ್ಸ್ ಲಕ್ಷುರಿ ಇನ್ ದೇರ್ ಓನ್ ಲಿಮಿಟ್ಸ್.. ನಮಗೆ ಇದು ಲಕ್ಷುರಿ, ಅವರಿಗೆ ಅದು ಲಕ್ಷುರಿ. ಎಲ್ಲರದ್ದೂ ಜೀವನ ಹೇಗೋ ಸಾಗುತ್ತೆ. ಅವನು ಅಟ್ಟಣಿಗೆಯಲ್ಲಿ ನಿಂತು ಮೊಬೈಲು ನೋಡ್ತಾನೆ, ನಾವು ಸೋಫಾದಲ್ಲಿ ಕೂತು ನೋಡ್ತೀವಿ; ಅಷ್ಟೇ ವ್ಯತ್ಯಾಸ. ಎಲ್ಲರೂ ಒಂದು ಎತ್ತರದಲ್ಲಿ ಬದುಕ್ತಾರೆ. ನಾಳೆ ನಿನ್ನ ಕೆಲಸ ಹೋದ್ರೆ ನಾವೂ ಈ ಅಟ್ಟಣಿಗೆಯಿಂದ ಕೆಳಗೆ ಬೀಳ್ತೀವಿ. ಸೋ, ತುಂಬಾ ಯೋಚನೆ ಮಾಡೋಕೆ ಹೋಗಬಾರದು.’

ಯಾವಾಗ ನೋಡಿದರೂ ಶಾಪಿಂಗು, ಕಿಟ್ಟಿಪಾರ್ಟಿ, ನೇಲ್‌ಪಾಲೀಶಿನ ಶೇಡುಗಳಲ್ಲಿ ಮುಳುಗಿರುವ ರೇಖಾ ಇವತ್ತು ದೊಡ್ಡ ದಾರ್ಶನಿಕಳಂತೆ ಭಾಸವಾದಳು. ಪ್ರಶಾಂತ ಅವಳನ್ನು ಅಭಿಮಾನದಿಂದ ನೋಡಿದ. ಫೇಸ್‌ಬುಕ್ಕಿನ ಇವೆಂಟ್ ರಿಮೈಂಡರ್ ಇವತ್ತಿನಿಂದ ‘ಬೆಂಗಳೂರು ಪುಸ್ತಕ ಪರಿಷೆ ಶುರು’ ಅಂತ ತೋರಿಸುತ್ತಿತ್ತು.  ಒಬ್ಬನೇ ಡ್ರೈವ್ ಮಾಡಿಕೊಂಡು ಅರಮನೆ ಮೈದಾನಕ್ಕೆ ಬಂದ. ಸಾವಿರ ಸಾವಿರ ಪುಸ್ತಕಗಳು ಪ್ರದರ್ಶನದಲ್ಲಿದ್ದವು.  ಮಳಿಗೆಯೊಂದಕ್ಕೆ ನುಗ್ಗಿದವನೇ ಹೊಸದಾಗಿ ಬಂದ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು ಅತ್ಯಾದರದಿಂದ ಅದರ ಮುಖಪುಟವನ್ನು ಸವರಿ, ಹಣದ ಚೀಟಿಯತ್ತ ನೋಡದೇ ವ್ಯಾಲೆಟ್ಟಿಗೆ ಕೈ ಹಾಕಿದ.

[ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟಿತ]

Wednesday, December 18, 2019

ವಿಮಲ್ ಚೀಲ

ಎಲ್ಲ ಕೆಟ್ಟದ್ದರ ಹಿಂದೆಯೂ ಒಂಚೂರು ಒಳ್ಳೆಯದ್ದೂ ಇರುತ್ತದೆ ಎಂಬ ಮಾತಿದೆ. ನಮ್ಮ ಮಹಾಕಾವ್ಯಗಳ ವಿಲನ್ಸ್ ರಾವಣ - ದುರ್ಯೋಧನರಲ್ಲೂ ಒಳ್ಳೆಯ ಗುಣಗಳನ್ನು ಕಂಡವರಿದ್ದಾರೆ. ಕತ್ತಲೆಯ ಆಚೆಕಡೆ ಬೆಳಕಿದೆ.

ಹಾಗೆಯೇ ಈ ವಿಮಲ್ ಚೀಲ! ಗುಟ್ಕಾ - ಪಾನ್ ಮಸಾಲಾ ಕೆಟ್ಟದು, ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗೊಂದಿಷ್ಟು ವರ್ಷಗಳ ಹಿಂದೆ ಸರ್ಕಾರ ಗುಟ್ಕಾವನ್ನು ಬ್ಯಾನ್ ಮಾಡಿದರೂ, ಆ ಬ್ಯಾನ್‌ನ ನಿಯಮಾವಳಿಗಳಲ್ಲಿದ್ದ ದೋಷದ ಲಾಭ ಪಡೆದ ಗುಟ್ಕಾ ತಯಾರಿಕಾ ಕಂಪನಿಗಳು ಪಾನ್ ಮಸಾಲಾ ಮತ್ತು ತಂಬಾಕುಗಳನ್ನು ಬೇರೆಬೇರೆ ಪೊಟ್ಟಣಗಳಲ್ಲಿ ಮಾರತೊಡಗಿದವು. ಹೀಗಾಗಿ ಗುಟ್ಕಾ ಜಗಿಯುವವರಿಗೆ ಎರಡು ಸ್ಯಾಚೆಗಳನ್ನು ಒಡೆದು ಮಿಕ್ಸ್ ಮಾಡಿಕೊಳ್ಳುವ ಕಷ್ಟ ಬಿಟ್ಟರೆ ಮತ್ತಿನ್ಯಾವ ಹಿನ್ನಡೆಯೂ ಆಗಲಿಲ್ಲ. ನಾವು ಸಿನೆಮಾ ನೋಡಲು ಥಿಯೇಟರಿಗೆ ಹೋದಾಗಲೆಲ್ಲ ವಿಕಾರ ಮುಖ-ದವಡೆಗಳನ್ನು ತೋರಿಸುತ್ತ ರಾಹುಲ್ ದ್ರಾವಿಡ್ ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ವಿವರಿಸುವುದನ್ನು ನೋಡುವುದು ತಪ್ಪಲಿಲ್ಲ.

ಈ ವಿಮಲ್-ಸ್ಟಾರ್ ಮುಂತಾದ ಗುಟ್ಕಾ ಕಂಪನಿಗಳು ತಮ್ಮ ಪಾನ್ ಮಸಾಲಾ ಮತ್ತು ತಂಬಾಕುಗಳ ಸರಗಳ ಬಂಡಲುಗಳನ್ನು ಸಗಟು ವ್ಯಾಪಾರಿಗಳಿಂದ ಅಂಗಡಿಗಳಿಗೆ ತಲುಪಿಸಲು ಈ ಥರದ ದೊಡ್ಡದೊಡ್ಡ ಚೀಲಗಳಲ್ಲಿ ತುಂಬಿ ಕಳುಹಿಸುತ್ತವಷ್ಟೇ. ಹಾಗೆ ಅಂಗಡಿಗಳಿಗೆ ತಲುಪಿದ ಈ ಚೀಲಗಳ ಒಡಲ ವಸ್ತುಗಳು ಬರಿದಾದಮೇಲೆ ಖಾಲೀಚೀಲಗಳು ಮಾರಾಟಕ್ಕೊಳಗಾಗುತ್ತವೆ. ಸಾಗರ-ಸೊರಬದಂತಹ ಪೇಟೆಗಳ ಜನರಲ್ ಸ್ಟೋರುಗಳಲ್ಲೂ, ಸಿಗರೇಟ್-ಪಾನ್‌ಮಸಾಲಾಗಳ ಸಗಟು ವ್ಯಾಪಾರಿಗಳಲ್ಲೂ ಈ ಚೀಲಗಳು ಐವತ್ತು-ಅರವತ್ತು ರೂಪಾಯಿಗೆ ಸಿಗುತ್ತವೆ. ಗಟ್ಟಿ ಬಟ್ಟೆಯಿಂದ ಮಾಡಲ್ಪಟ್ಟ ಈ ಚೀಲಗಳು ಗಟ್ಟಿಮುಟ್ಟಾದ ಹಿಡಿಕೆಯನ್ನೂ ಹೊಂದಿ ಬಹುಪಯೋಗಿಯಾಗಿವೆ ಎಂಬುದು ಸತ್ಯ. ಕಣಕಣದಲ್ಲೂ ಕೇಸರಿಯ ಶಕ್ತಿ ಹೊಂದಿರುವ ಈ ಚೀಲಗಳು, ದಿನಸಿ ಸಾಮಾನು ಒಯ್ಯಲು, ಸಂತೆಗೆ ಹೋಗಲು, ಎಷ್ಟೇ ಭಾರವಾದ ವಸ್ತುಗಳನ್ನು ಸಾಗಿಸಲು ಮಹೋಪಕಾರಿಗಳು. ನೀವು ನಮ್ಮೂರ ಕಡೆ ಬಂದು ನೋಡಿದರೆ, ಪ್ರತಿ ಮನೆಯಲ್ಲೂ ಇಂತಹ ಒಂದೆರಡಾದರೂ ಚೀಲಗಳು ಕಾಣುತ್ತವೆ. ನಮ್ಮಂಥ 'ಹಳ್ಳೀಮೂಲ-ಪೇಟೆವಾಸಿ' ಹಣೆಪಟ್ಟಿಯ ಅಬ್ಬೇಪಾರಿಗಳು ಪ್ರತಿಸಲ ಊರಿನಿಂದ ಬರುವಾಗ ಬೆಲ್ಲ-ತುಪ್ಪ-ಉಪ್ಪಿನಕಾಯಿ-ತೆಂಗಿನಕಾಯಿ ಇತ್ಯಾದಿಗಳನ್ನು ತುಂಬಿ ತುಂಬಿ ಬಸ್ಸಿಗೇರಿಸಲು ಇವು ಮಾಡುವ ಸಹಾಯಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಊರಿನಿಂದ ಹೊರಡುವಾಗ ನಮ್ಮ ನಾಜೂಕಿನ ಏರ್‌ಬ್ಯಾಗುಗಳು ತುಂಬಿದವೋ, ಉಳಿದ ವಸ್ತುಗಳನ್ನು ತುಂಬಿಸಲು "ಏ, ವಿಮಲ್ ಚೀಲ ತಗಳಾ" ಅಂತ ಹೇಳುವುದು ಸಾಮಾನ್ಯ.

ನೋಡಿ, ಗುಟ್ಕಾ ಆರೋಗ್ಯಕ್ಕೆ ಎಷ್ಟೇ ಮಾರಕವಾಗಿರಬಹುದು, ಅದರ ಬಿಡಿಪೊಟ್ಟಣಗಳಿಂದ ಪರಿಸರ ನಾಶವಾಗುತ್ತಿರುವುದೂ ಸರಿ, ಆದರೆ ಗುಟ್ಕಾ ಚೀಲ ಮಾತ್ರ ಬಟ್ಟೆಯಿಂದ ತಯಾರಿಸಲ್ಪಟ್ಟು ಪರಿಸರಸ್ನೇಹಿಯಾಗಿದೆ! ಅಲ್ಲದೇ ಪ್ಲಾಸ್ಟಿಕ್ ಕೈಚೀಲಗಳ ನಿಷೇಧ ಭಾಗಶಃ ಜಾರಿಯಾಗಿರುವ ಈ ದಿನಗಳಲ್ಲಂತೂ ಇವು ಬಹು ಉಪಕಾರಿಯಾಗಿವೆ. ನಿನ್ನೆ ಬೆಂಗಳೂರಿನ ನಮ್ಮ ಮನೆ ಹತ್ತಿರದ ಒಂದು ಅಂಗಡಿಯಲ್ಲಿ ಸಂತೆಚೀಲ ನೇತಾಡುತ್ತಿರೋದು ನೋಡಿದೆ. ದಿನಸಿ-ತರಕಾರಿ ಕೊಳ್ಳಲು ಅನುಕೂಲವಾಗುತ್ತೆ, ಕೊಳ್ಳೋಣ ಅಂತ ಹೋಗಿ ಕೇಳಿದರೆ, ಅಂಗಡಿಯವ ಒಂದು ಚೀಲಕ್ಕೆ 150 ರೂಪಾಯಿ ಹೇಳೋದಾ! "ಏ ಹೋಗಯ್ಯಾ, ಮನೇಲಿ ಬೇಕಾದಷ್ಟು ವಿಮಲ್ ಚೀಲ ಇದಾವೆ, ನಿನ್ ಚೀಲ ಯಾವನಿಗ್ ಬೇಕು" ಅಂತ ಗೊಣಗಿಕೊಂಡು ಬಂದೆ.

Thursday, November 21, 2019

ಗಡ್‌ಬಡ್ ಡಿಲಕ್ಸ್

ತಾಜಾ ಹಣ್ಣುಗಳಿಂದ ಮಾಡಿದ ಅಸಲಿ ಸ್ವಾದದ ಜೆಲ್ಲಿ
ಏಳು ಭಿನ್ನ ಫ್ಲೇವರಿನ ಏಳು ಸ್ಕೂಪ್ ಐಸ್‌ಕ್ರೀಮುಗಳು
ಕಣ್ಣೆದುರೆ ಕತ್ತರಿಸಿದ ರುಚಿರುಚಿ ಹಣ್ಣುಗಳ ಚೂರುಗಳು
ಗೋಡಂಬಿ ದ್ರಾಕ್ಷಿ ಪಿಸ್ತಾ ಟುಟಿಫ್ರೂಟಿ ಇನ್ನೂ ಏನೇನೋ
ಮೇಲೆ ದೋಣಿಯ ಹಾಯಿಯಂತೆ ಸಿಕ್ಕಿಸಿದ ತೆಳುಬಿಸ್ಕತ್ತು
ಗಟ್ಟಿ ಕಾಗದದ ಕಪ್ಪಿನಲ್ಲಿ ಹಾಕಿ ಕಟ್ಟಿ ಕೊಟ್ಟಿದ್ದಾರೆ ಅನಾಮತ್ತು
ಒಂದೇ ಷರತ್ತೆಂದರೆ ಆದಷ್ಟು ಬೇಗ ಮನೆಯ ತಲುಪಬೇಕು

ಸ್ಪೂನು ಹಿಡಿದು ಕುಳಿತಿದ್ದಾಳಲ್ಲಿ ಕಾಯುತ್ತ ಮಡದಿ
ಅಪ್ಪ ತರುವ ಐಚೀಮಿಗಾಗಿ ಬಾಗಿಲ ಬುಡದಲ್ಲೇ ಮಗಳು
ಸೆಖೆಸೆಖೆಯ ಸಂಜೆ ರಸ್ತೆಯಂಚಲ್ಲಿ ಮುಳುಗುತ್ತಿರುವ ಸೂರ್ಯ
ಅಡ್ಡಡ್ಡ ನುಗ್ಗುವ ಅವಸರದ ವಾಹನಗಳು
ಉದ್ದಾರವೆಂದೂ ಆಗದ ನಗರದ ಉದ್ದುದ್ದ ಟ್ರಾಫಿಕ್ಕು
ಎಷ್ಟು ಬೇಗ ಹೆಜ್ಜೆ ಹಾಕಿದರೂ ಕಾಯಲೇಬೇಕು
ಸ್ಟ್ರಾಬೆರಿಯಂತೆನಿಸುತ್ತಿರುವ ಸಿಗ್ನಲ್ಲಿನ ಲೈಟು ಪಿಸ್ತಾ ಆಗಲು

ಇಂತಹ ಧರ್ಮಸಂಕಟದ ಘಳಿಗೆಯಲ್ಲೇ ಸಿಗುತ್ತಾನೆ ಅವನು
ಎದುರಾಗುತ್ತಾನೆ ನಾಲ್ಕು ದಾರಿ ಕೂಡುವ ತಿರುವಿನಲ್ಲಿ ಧುತ್ತನೆ
ಫೋನಿಗೂ ಸಿಗದವನು, ಅದೆಷ್ಟೋ ವರುಷಗಳ ನಂತರ
ಅರೇ ನೀನು ಇಲ್ಲಿ ಹೇಗೆ ಬಾ ಬಾ, ಬದಿಗೆ ಕೈ ಹಿಡಿದೆಳೆಯುತ್ತಾನೆ
ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದ ಇಕ್ಕಳದಲಿ ಸಿಲುಕಿಸಿ

ದೋಸ್ತಾ ನಿನ್ನ ಜತೆ ಮಾತನಾಡಬಾರದೆಂದಿಲ್ಲ
ನೀನು ಮತ್ತೆ ಸಿಕ್ಕಿದ್ದು ಖುಷಿಯೇ
ಆದರೀಗ ನಾನು ಗಡಿಬಿಡಿಯಲ್ಲಿರುವೆ
ಚೀಲದಲ್ಲಿ ಐಸ್‌ಕ್ರೀಮು ಕರಗುತ್ತಿದೆ
ಮನೆಯಲ್ಲಿ ಅಸಹನೆ ಹೆಚ್ಚಾಗುತ್ತಿದೆ
ಇದೊಂದು ಸಲ ಬಿಟ್ಟುಕೊಡು
ಇಕೋ ನನ್ನ ಮೊಬೈಲ್ ನಂಬರ್ ತಕೋ
ಯಾವಾಗ ಬೇಕಿದ್ದರೂ ಕಾಲ್ ಮಾಡು

ಊಹುಂ, ಪುಣ್ಯಕೋಟಿಗೆ ಮಾತೇ ಹೊರಡುವುದಿಲ್ಲ
ನಮ್ಮ ದೋಸ್ತಿಗಿಂತ ಐಸ್‌ಕ್ರೀಮು ಹೆಚ್ಚಾ ಎಂದಾನು
ಹೆಂಡತಿ-ಮಕ್ಕಳ ಜೊತೆ ತಿನ್ನೋದು ಇದ್ದಿದ್ದೇ,
ಈಗ ನಾವೇ ತಿನ್ನೋಣ ಬಾ ಎಂದಾನು
ಧಿಕ್ಕರಿಸಿ ಹೊರಟರೆ ತಪ್ಪಿಹೋಗಬಹುದು
ಮತ್ತೆ ಸ್ನೇಹವ ಗಟ್ಟಿಯಾಗಿಸಲಿರುವ ಅವಕಾಶ
ಸಿಕ್ಕವನ ಜತೆ ನಿಂತಿರೋ, ಕರಗಿಹೋಗುವುದು
ಗಟ್ಟಿಯಿದ್ದಾಗಲೇ ಮುಗಿಸಬೇಕಿರುವ ರಸಭಕ್ಷ್ಯ

ಕೈಯಲ್ಲಿದ್ದುದು ಬಾಯಿಗೆ ಸೇರಲೂ ಅದೃಷ್ಟ ಬೇಕೋ ಹರಿ
ಆರಂಗುಲ ದೂರ; ಇನ್ನೇನು ದಕ್ಕಿತೆಂದು ಬೀಗಿದರೆ
ಅತ್ಯಾಪ್ತ ಗೆಳೆಯನೇ ಎದುರಾಗುವನು ಅರ್ಬುತನಾಗಿ
ಕರಗಿ ಪಾಯಸವಾದ ಐಸ್‌‍ಕ್ರೀಮ್ ಅಣಕಿಸುವುದು
ಬಣ್ಣರಸದಲ್ಲಿ ತೇಲುವ ಒಣಹಣ್ಣಕಣ್ಣುಗಳಿಂದ
ಬಿಟ್ಟೂಬಿಡದೆ ರಿಂಗಾಗುತ್ತಿರುವ ಫೋನು
ಸಾರುವುದು ಮನೆಯಲ್ಲಿನ ಕಾತರದುರಿಶಾಖವ
ಬಾನಲ್ಲಿ ಹಲವು ಫ್ಲೇವರಿನ ಕಿರಣಗಳನುಂಡ ಚಂದ್ರ
ತಣ್ಣಗೆ ನಗುವನು ಶ್ಯಮಂತಕಮಣಿಯ ಹೊಳಪಿನಲ್ಲಿ.

Friday, November 08, 2019

ನೂರು ಫ್ರಿಲ್ಲಿನ ಫ್ರಾಕು

ಹಬ್ಬಕ್ಕೆಂದು ನಿನಗೆ ಹೊಸಬಟ್ಟೆ ಕೊಳ್ಳುವಾಗ
ಕೇಳಿದರೊಬ್ಬರು ಅಂಕಲ್ಲು: ಒಂದು ಫ್ರಾಕಿಗೆ ಅಷ್ಟೆಲ್ಲ
ಫ್ರಿಲ್ಸು ಯಾಕೆ? ಸಾಕು ಒಂದೋ ಎರಡೋ ಮೂರೋ.

ಅವರು ಎಂದಾದರೂ ಬಯಲಲ್ಲಿ ನಿಂತು
ಬಿಸಿಲುಮಳೆಯಲ್ಲಿ ತೋಯುತ್ತ
ಕಾಮನಬಿಲ್ಲನ್ನು ನೋಡಿದ್ದರೆ ಕೇಳುತ್ತಿರಲಿಲ್ಲ ಇಂತಹ ಪ್ರಶ್ನೆ
ಅಥವಾ ಆ ಮಳೆಗೂ ಮುಂಚಿನ ಮೇಘಾವೃತ ಸಂಜೆ
ಗರಿಬಿಚ್ಚಿದ ನವಿಲನ್ನು ನೋಡಿದ್ದರೂ ಸಾಕಿತ್ತು
ಬೇಡ, ಸಂಸಾರದೊಂದಿಗೆ ಥಿಯೇಟರಿಗೆ ಹೋಗಿ
ಚಂದದೊಂದು ಸಿನೆಮಾದ ಚಂದದೊಂದು ನಾಯಕಿಯ
ಪ್ರವೇಶವನ್ನಾದರೂ ನೋಡಬಹುದಿತ್ತು
ಅದೂ ಸಾಧ್ಯವಿಲ್ಲವಾದರೆ ಕಣ್ಮುಚ್ಚಿ ನಿದ್ರಿಸಿ
ಕನಸುಗಳಿಗೆ ಮುಕ್ತಾಹ್ವಾನ ನೀಡಿದ್ದರೂ
ಹೀಗೆ ಅಂಗಡಿಕಟ್ಟೆ ಮೇಲಿನ ಕಾಲಹರಣ ತಪ್ಪುತ್ತಿತ್ತು

ಹೆಚ್ಚು ಮಾತಾಡದೇ ಅವರಿಂದ ತಪ್ಪಿಸಿಕೊಂಡು ಬಂದಿರುವೆ
ಮಗಳೇ ನೀನೀಗ ಈ ಫ್ರಾಕು ಧರಿಸುವೆ
ಇದರ ನೂರು ಫ್ರಿಲ್ಲುಗಳ ನೀ ನಿನ್ನ
ಮೊಣಕಾಲಿಂದೊದ್ದು ಚಿಮ್ಮಿಸಿ ನಡೆವೆ
ನಾನದರ ವೀಡಿಯೋ ಮಾಡುವೆ

ಮುಂದೊಂದು ದಿನ ನೀನು ಫ್ರಾಕುಗಳಿಗೆ ಗುಡ್‌ಬೈ ಹೇಳಿ
ಜೀನ್ಸು ಚೂಡಿ ಗಾಗ್ರಾ ಇನ್ನೂ ನನಗೆ ಗೊತ್ತಿಲ್ಲದ ಹಲವು
ನಮೂನೆಯ ಬಟ್ಟೆಗಳ ತೊಡುವೆ
ಕೊನೆಗೊಮ್ಮೆ ಸೀರೆಯುಟ್ಟು ನೆರಿಗೆ ಚಿಮ್ಮಿಸುತ್ತ ಬಂದಾಗ,
ನಾನು ಈ ವೀಡಿಯೋ ತೋರಿಸಿ, ನೀನು ಚಿಕ್ಕವಳಿದ್ದಾಗ
ಕಾಮನಬಿಲ್ಲಿಗೆ ನೂರು ಬಣ್ಣಗಳಿದ್ದವು ಎಂದೂ
ಅವು ಗೆಜ್ಜೆಸದ್ದಿನೊಡನೆ ಹೆಜ್ಜೆಯಿಡುತ್ತಿದ್ದವು ಎಂದೂ ಹೇಳಿ
ನಿನ್ನನ್ನು ನಂಬಿಸಲು ಯತ್ನಿಸುವೆ. ಮತ್ತಾಗ ನಿನ್ನ ಅರೆನಂಬುಗೆ
ಮೊಗದಲಿ ಚಿಮ್ಮುವ ಕಾಂತಿಯಲಿ ಕಳೆದುಹೋಗುವೆ.

Saturday, September 28, 2019

ನಾನು ಹೇಳುವುದು ಹೇಳುತ್ತೇನೆ

ಇಂತಹ ಸಂಜೆಮಳೆಯ ದಿನಗಳಲ್ಲಿ
ಹಲಸಿನ ಹಪ್ಪಳ ತಿನ್ನಬೇಕು
ಅಂಗಡಿಯಿಂದ ಉದ್ದಿನ ಹಪ್ಪಳ ತಂದು ತಿನ್ನುವೆ
ಎನ್ನುವ ಅರಸಿಕರ ಸಂಗ ಬಿಟ್ಟುಬಿಡಿ

ಸೂಚನೆ ಕೊಡದೆ ಬರುವ ಮಳೆ
ಗಾಳಿ ನುಸುಳದ ಡಬ್ಬಿಯಲ್ಲಿ ದಾಸ್ತಾನಿರುವ
ಊರಿಂದ ಕಳುಹಿಸಿದ ಹಪ್ಪಳ
ಕಾದೆಣ್ಣೆ, ಎಣ್ಣೆಜಿಡ್ಡಿನ ಚಿಮ್ಮಟಿಗೆ
ಮತ್ತು ಇಳಿಸಂಜೆ

ಕೇಳಬಹುದು ನೀವು- ಏನು ಮಹಾ ವ್ಯತ್ಯಾಸ?

ವ್ಯತ್ಯಾಸವಿದೆ ಮಹಾಜನಗಳೇ-
ಆ ಹಪ್ಪಳಕ್ಕಾಗಿ, ಬೆಳೆದ ಕಾಯಿಯ ಬಿಟ್ಟುಕೊಟ್ಟ
ಹಿತ್ತಿಲ ಮರ ಬೆಳ್ಳಗೆ ಕಣ್ಣೀರು ಸುರಿಸಿದೆ
ತೊಳೆ ಬಿಡಿಸಿದ ಅಪ್ಪನ ಕೈಗಂಟಿದಂಟು
ತೊಡೆಯಲು ಅಜ್ಜಿ ಕೊಬ್ರಿ ಎಣ್ಣೆ ಹನಿಸಿದ್ದಾಳೆ
ಬಿಡಿಸಿದ ತೊಳೆಗಳ ನುಣ್ಣಗಾಗಿಸಲು
ತೊಳೆದೊರಳು ಗುಡುಗುಡುಗುಟ್ಟಿದೆ
ಬೆರೆಸಲು ಬೀಸಿದ ಮಸಾಲೆಯ ಖಾರಕ್ಕೆ
ಅಮ್ಮನ ಕೈ ಎರಡು ದಿನ ಭುಗುಗುಟ್ಟಿದೆ

ಆ ಹಪ್ಪಳದಲ್ಲಿ, ಮನೆಯವರೆಲ್ಲ ರಾತ್ರಿಯಿಡೀ ಕೂತು
ಬಾಳೆಯೆಲೆ ನುಣ್ಣನೆ ಪ್ಲಾಸ್ಟಿಕ್ ಕವರು ಹಳೆಸೀರೆಗಳ
ಮೇಲೆ ಒತ್ತೊತ್ತಿ ಹಚ್ಚಚ್ಚಿ ತಟ್ಟಿದ ಬೆರಳುಗಳ ಅಚ್ಚಿದೆ
ಅಂಗಳದ ಬಿಸಿಲಿನಲಿ ಸಪಾಟುಗೋಲಗಳ
ಕಾಗೆ ಗುಬ್ಬಿ ನಾಯಿ ಬೆಕ್ಕುಗಳಿಂದ ಕಾದು
ರಕ್ಷಿಸಿದ ಮಕ್ಕಳ ಸೈನ್ಯವಿದೆ
ರುಚಿಹಿಟ್ಟನ್ನೇ ಕದ್ದು ಮೆದ್ದು ಖಾಲಿವೃತ್ತಗಳ
ಸೃಷ್ಟಿಸಿದ ತುಂಟಕೃಷ್ಣರ ಪಡೆಯಿದೆ

ಮತ್ತಾ ಹಪ್ಪಳಗಳಲ್ಲಿ ಊರ ಬಿಸಿಲಿದೆ
ತೆಂಗಿನಮರದ ನೆರಳಿದೆ
ಬಾಳೆಯೆಲೆಯ ಕಂಪಿದೆ
ಹಿಟ್ಟು ಹಚ್ಚಿದ ರಾತ್ರಿ ಧ್ವನಿಸಿದ ನಾನಾ ಕಥೆಗಳಿವೆ

ನಾನು ಹೇಳುವುದು ಕೇಳಿ
ಅರಸಿಕರ ಸಂಗ ಬಿಡಿ
ಈ ಇಳಿಸಂಜೆ, ಕಾದೆಣ್ಣೆ, ಎಣ್ಣೆಜಿಡ್ಡಿನ ಚಿಮ್ಮಟಿಗೆ,
ಸುರಿಮಳೆ, ಕಟ್ಟೊಡೆದ ಹಲಸಿನ ಹಪ್ಪಳ

ಇನ್ನು ನಿಮಗೆ ಬಿಟ್ಟಿದ್ದು.

Sunday, September 01, 2019

ಗಣೇಶನಿಗೊಂದು ಮುಖ


ಆಗಷ್ಟೆ ಕೊಯ್ದು ತಂದ ಕಳಿತ ಮಿದು
ಹಣ್ಣನೊತ್ತಿ ಕತ್ತರಿಸಿದಾಗ ಚಿಮ್ಮಿದ ರಸದಂತೆ
ಚೆಲ್ಲಿದೆ ರಕ್ತ ಹೊಸ್ತಿಲ ಅಕ್ಕಪಕ್ಕ
ಚೀರಿಕೊಂಡಿದ್ದಾಳೆ ಪಾರ್ವತಿ ಕಮರಿ ಬಿದ್ದಿದ್ದಾಳೆ
ಮತ್ತೆ ಎದ್ದಿದ್ದಾಳೆ ಕಣ್ಣೀರು ಕೆನ್ನೆಗೆ ತಾಕಿ ಎಚ್ಚರಾಗಿ
ನೀರಾರಿದ ಕಣ್ಣೀಗ ಕೆಂಪಾಗಿದೆ
ಏರೇರಿಳಿವ ಎದೆ ಬಿಗಿಮುಷ್ಟಿ ಕಂಪಿಸುತಿದೆ ಕೈಕಾಲು
ಅದುರುತುಟಿಗಳ ನಡುವಿಂದುಕ್ಕಿ ಬರುತ್ತಿದೆ ಜ್ವಾಲಾಮುಖಿ
ತತ್ತರಗುಟ್ಟುತಿದೆ ಇಡೀ ಕೈಲಾಸ
ಅಲ್ಲೋಲಕಲ್ಲೋಲವಾಗುತಿದೆ ಸೃಷ್ಟಿ ಚಂಡಿಕಾವತಾರಕೆ

ಮಣಿದಿಹನು ಶಿವ ಆಜ್ಞಾಪಿಸಿಹನು
ಉತ್ತರಕೆ ಮುಖ ಮಾಡಿ ಮಲಗಿದ
ಯಾವುದೇ ಜೀವಿಯ ರುಂಡವನು
ಕತ್ತರಿಸಿ ತನ್ನಿ ದಿನವುರುಳುವುದರೊಳಗೆ

ಹೊರಟಿದ್ದಾರೆ ಆಜ್ಞಾಪಾಲಾಕರು ದಂಡಿಯಾಗಿ
ಹರಿತ ಕತ್ತಿ ಹಿಡಿದು ಸೇನೆಯಂತೆ
ನುಗ್ಗಿದ್ದಾರೆ ಗುಡ್ಡವೇರಿಳಿದು ಮಹಾಕಾನು
ಎಲ್ಲಿದೆ ತಲೆ ಎಲ್ಲಿದೆ ತಲೆ ಎಲ್ಲಿದೆ ತಲೆ
ನಮ್ಮ ಗಣಾಧಿಪನಾಪನಿಗೆ ಒಂದು ಚಂದದ ತಲೆ

ಇಟ್ಟು ಜೋಡಿಸಬರಬೇಕು ಪೂಜಿಸಿದ ಹೂಗಳ
ಹಾಗೂ ಕೂರಿಸಲು ಬರಬೇಕೊಂದು ವಜ್ರಖಚಿತ ಕಿರೀಟ
ಮೊರದಗಲ ಕಿವಿಯಿರಲಿ ಕೇಳಲು ಎಲ್ಲರಹವಾಲು
ಸಿಕ್ಕಿಸುವಂತಿರಬೇಕಲ್ಲಿ ಚಿಗುರಿದ ದೂರ್ವೆಕಟ್ಟು
ದೊಡ್ಡ ನಾಮವ ಬಳಿದರೆ ಚಂದವೆನಿಸಬೇಕು ಹಣೆಯಗಲ
ಸನ್ನೆಯಲೆ ಎಲ್ಲವನು ಸೂಚಿಸುವ ಸೂಕ್ಷ್ಮ ಕಣ್ಣು
ಲೋಕಗಳ ದೂರವನಿಲ್ಲಿಂದಲೆ ಅಳೆವ ತೀಕ್ಷ್ಣ ಕಣ್ಣು
ಉದ್ದ ಮೂಗಿರಬೇಕು ಅವನಿಗೆ
ದೂರದಿಂದಲೆ ಗ್ರಹಿಸುವಂತೆ ಅಡುಗೆಮನೆಯ
ನಾಗಂದಿಗೆಯ ಮೇಲಿಟ್ಟ ಮೋದಕದ ಘಮ
ಮರುಳಾಗಬೇಕೀ ಚೆಲ್ವನಿಗೆ
ಭಾದೃಪದಕೆ ಹೊಸ ಸೀರೆಯುಟ್ಟ ಸಖಿಯರೆಲ್ಲ
ಎಲ್ಲ ಮುತ್ತಿಟ್ಟು ಮುದ್ದಿಸುವಂತೆ ಉಬ್ಬುಕೆನ್ನೆ
ನೈವೇದ್ಯಕಿಟ್ಟ ಸಕಲ ಭಕ್ಷ್ಯಗಳ ಅಗಿದು
ಪುಡಿ ಮಾಡಬಲ್ಲ ಗಟ್ಟಿ ದಂತಪಂಕ್ತಿ
ಇರಲಿ ಬೆದರಿಸಲು ದರ್ಪಿಷ್ಟರ ಒಂದುದ್ದ ಕೋರೆ
ಇರಲಿ ಬಿಚ್ಚುಗುರುಳು ಪೊಗುವಂತೆ ಮನಸೂರೆ
ಕಟ್ಟಲು ಬರಲಿ ಜುಟ್ಟು ಓಡಲೆಣಿಸುವ ತುಂಟನ ಹಿಡಿದು ಅಮ್ಮ
ಹರಸುವಂತಿರಲವನ ಮೊಗ, ಮೊಗದಿಂದಲೇ ನಮ್ಮ

ಮಲಗಿದ್ದಾನಲ್ಲಿ ಮೋಕ್ಷಕ್ಕೆ ಕಾಯುತಿರುವ ಗಜಾಸುರ
ಹಾದಿಗಡ್ಡವಾಗಿ ಹುಲ್ಲಹಾಸಮೇಲೆ ಉತ್ತರಾಭಿಮುಖಿ
ಸುತ್ತ ನೆರೆದ ಕರವಾಳಖಚಿತರಿಗೆ ನಿಬ್ಬೆರಗಾಗುವಂತೆ
ಸ್ವಯಂ ನೆರವಾಗಿ ತ್ಯಜಿಸಿ ಮಹಾಮಹಿಮ ತನ್ನ ಶಿರ

ಜೀವ ತಳೆದಿಹನಿಲ್ಲಿ ಕೈಲಾಸದಲ್ಲಿ ಗಜಾನನ
ನಿಟ್ಟುಸಿರಿಟ್ಟು ಹೆಮ್ಮೆಯಲಿ ನೋಡುತಿಹ ತಂದೆ
ಖುಷಿಯಲಿ ಕಣ್ಣೀರ್ಗರೆವ ತಾಯಿ
ಕುಣಿದಿಹುದು ಗಣಕೋಟಿ ಪುಷ್ಪವರ್ಷಕೆ ತೋಯುತ
ಸುಂದರವದನನ ಹಿಡಿದೆತ್ತಿ ಕೊಂಡಾಡುತ
ಜೈಕಾರಗೈದು ಒಕ್ಕೊರಲಿನಲಿ:
ನೀನೆ ನಮ್ಮ ನಾಯಕ ನೀನೆ ನಮ್ಮ ಪಾಲಕ
ನೀನೆ ಪ್ರಥಮಪೂಜಿತ ಸಕಲ ವಿಘ್ನನಿವಾರಕ.

* *
ವಾರಣವದನ ಆಗಮನ ನಿಮ್ಮ ಮನೆಗೆ ಆನಂದ ತರಲಿ. ಶುಭಾಶಯಗಳು.

Tuesday, August 27, 2019

ಅಂಟೀಲಿಯಾ ಮತ್ತು ಗುಬ್ಬಿಗೂಡು

ಒಂದು ಮಹಡಿಯನ್ನಿನ್ನೊಂದು ಹೋಲದ
ಆ ಮನೆಯ ಹದಿಮೂರನೇ ಮಹಡಿಯ
ಮೂಲೆಯಲ್ಲೊಂದು ಗುಬ್ಬಿ ಗೂಡು ಕಟ್ಟಿದೆ
ಅಷ್ಟು ದೊಡ್ಡ ಮನೆಯಲ್ಲಿ ಗುಬ್ಬಿಗೆಷ್ಟು ಜಾಗ ಬೇಕು?
ಅಥವಾ ಅದು ಕಟ್ಟುವ ಗೂಡಿಗೆ
ಜಗದ್ವಿಖ್ಯಾತ ವಾಸ್ತುಶಿಲ್ಪಿ ವಿರಚಿತ ನಕ್ಷೆ
ಭೂಕಂಪಕ್ಕೂ ಅದುರದ ವಿನ್ಯಾಸ
ಭದ್ರ ತಳಪಾಯ ಗಟ್ಟಿ ಸರಳು ಶ್ರೇಷ್ಠ ಗುಣ-
ಮಟ್ಟದ ಸಿಮೆಂಟು ಸಾಣಿಸಿದ ಮರಳು ಬೇಕೇ?
ನಾಲ್ಕು ಬಿಳಿಹುಲ್ಲಿನ ಎಸಳುಗಳನ್ನು
ಕೊಕ್ಕಿನಲ್ಲಿ ಕಚ್ಚಿ ತಂದು ಹಾಸಿ ಒಪ್ಪ ಮಾಡಿದ
ತಾನು ಒಳಹೊಗುವಷ್ಟೇ ಪುಟ್ಟ ಜಾಗದ ಮನೆ

ಪೂಜೆ ಪುನಸ್ಕಾರ ಸಮಾರಂಭ ಸಮಾರಾಧನೆ-
ಗಳ್ಯಾವುದೂ ಇಲ್ಲದೆ ಗೂಡು ಹೊಕ್ಕ ಗುಬ್ಬಿ
ಅದು ಹೇಗೆ ಅಷ್ಟು ಕೆಮೆರಾಗಳ ಕಣ್ಣು ತಪ್ಪಿಸಿ ಇದೆ
ಮಾಳಿಗೆ ತೋಟದಲದಕೆ ಕಾಳು ತೂರಿದವರಾರು
ಇಟ್ಟ ಮೊಟ್ಟೆಯ ನೆರಳಾಗಿ ಕಾದ ಕಂಬವಾವುದು
ಬಾಳಂತಿಗೆಣ್ಣೆನೀರೆರೆದ ಸೋರುಕೊಳಾಯಿಯೆಲ್ಲಿ

ಇಂದು ಒಳಗೇನೋ ಬಹುದೊಡ್ಡ ಸಮಾರಂಭ
ದೀಪಗಳ ಸಡಗರ ರೇಶಿಮೆ ಸೀರೆಗಳ ಸರಭರ
ಮೆಹಂದಿ ನೃತ್ಯ ಹಾಡು ಫ್ಲಾಶು ವಿಧವಿಧ ಅಡುಗೆ

ಹವೆಗೆ ನಶೆಯೇರಿದ ಈ ಸಂಜೆ
ಭೂಪನೊಬ್ಬ ತನ್ನ ಸೂಟಿಗೆ ತಾಕಿದ
ಶಾಹಿ ಕೂರ್ಮವ ಒರೆಸಲು
ಕತ್ತಲ ಮೂಲೆಗೆ ಬಂದಿದ್ದಾನೆ
ಕೈ ಚಾಚಿದಾಗ ಸಿಕ್ಕ ಬಿಳಿಹುಲ್ಲಿನೆಳೆ ಹಿಡಿದೆಳೆದಿದ್ದಾನೆ...

ಉಸಿರು ಬಿಗಿಹಿಡಿದಿರುವವರೆಲ್ಲ ಬೇಡಿಕೊಳ್ಳಿರಿ:
"ಮನೆಯೊಳಗೇ ದೇವಸ್ಥಾನವಿರುವ
ಸುವರ್ಣಖಚಿತ ಮಂಟಪದಲಿ ವಿರಾಜಮಾನನಾಗಿಹ
ವಿವಿಧಾಲಂಕಾರಭೂಷಿತ ದೇವರೇ,
ಇನ್ನೂ ರೆಕ್ಕೆ ಬಲಿಯದ ಈ ಮರಿಗುಬ್ಬಿಗಳ ಕಾಪಾಡು
ಓಂ ಓಂ ಓಂ.."

Thursday, August 01, 2019

ಇರುಳು

ಹಗಲೊಂದು ಶುಷ್ಕ ಗದ್ಯ
ಅಲ್ಲಿ ಬರೀ ಓಡು ಗದ್ದಲ ಶೆಖೆ
ಕೆಂಪು ದೀಪಗಳು ದಮ್ ಬಿರಿಯಾನಿ
ನೂರು ಭಿನ್ನ ಚಿತ್ರಗಳ ತೋರುವ
ನೂರು ಭಿನ್ನ ಸದ್ದುಗಳ ಚೀರುವ
ನೂರು ಟೀವಿಗಳ ಶೋರೂಂ

ಇರುಳೊಂದು ನವಿರು ಕವಿತೆ
ನೀರವದ ಕೋಣೆಯಲಿ ಬಿಚ್ಚಿಟ್ಟ ಹಾಸಿಗೆ
ನಿದ್ದೆ ಸಮೀಪದಲ್ಲಿರುವ ಮಗಳು
ಲಾಲಿಯ ಕಂಠಕೆ ಮೆಲುದನಿಯ ನಂಟು
ತಟ್ಟುವ ಚುಕ್ಕಿಗೂ ಹದವರಿತ ಲಯ
ಅಂಗಡಿಯ ಶಟರ್ ಎಳೆಯುತ್ತಿರುವ ಶೆಟ್ಟಿಯೂ
ಹೆಚ್ಚು ಸದ್ದಾಗದಂತೆ ಎಚ್ಚರ ವಹಿಸುತ್ತಾನೆ
ದೋಸೆಗೆ ಅಕ್ಕಿ ನೆನೆಸಿಟ್ಟು ಮರೆತಿದ್ದ ಗೃಹಿಣಿ
ಈಗ ಮಿಕ್ಸರು ಹಚ್ಚಲು ಹಿಂಜರಿಯುತ್ತಾಳೆ
ಈಗಲೇ ನೋಡಬೇಕಿರುವ ವೈರಲ್ ವೀಡಿಯೋಗೆ
ಇಯರ್‌ಫೋನಿನ ಮೊರೆ ಹೋಗುತ್ತಾನೆ ತರುಣ
ಸೂರಿನೋಣಿಯೊಳಗಿಂದ ಜಾರಿದ ಅಳಿದುಳಿದ
ಮಳೆಹನಿಗಳು ನೆಲಕೆ ತಾಕುವಾಗ ನಿಧಾನಿಸುತ್ತವೆ

ಈಗ ಹಗಲಿನ ರಾಚುವ ಬೆಳಕಲಿ ಕಂಡ
ರಕ್ತಸಿಕ್ತ ಚಿತ್ರಗಳನ್ನೆಲ್ಲ ಮರೆಯುವ ಸಮಯ
ಕೇಳಿದ ಸಾವಿರ ಸದ್ದುಗಳನು ಜರಡಿಯಲಿ ಸಾಣಿಸಿ
ಹಿತವಾದ ಹಾಡನ್ನಷ್ಟೆ ಉಳಿಸಿಕೊಳ್ಳುವ ದರ್ದು
ಚುಚ್ಚಿದ ಮುಳ್ಳುಗಳನು ಚಿಮ್ಮಟದಿಂದೆತ್ತಿ
ಮುಲಾಮು ಹಚ್ಚಿ ಸರಿಪಡಿಸಿಕೊಳ್ಳಬೇಕು ಅಂಗಾಲು
ಶೂನ್ಯವೇಳೆಯಲಿ ಆದ ಗದ್ದಲಗಳ ಕೊಡವಿಕೊಂಡು
ತಯಾರಾಗಬೇಕು ನಾಳೆಯ ಕಲಾಪಕ್ಕೆ

ಇಳಿಯೆಣಿಕೆಯಲಿರುವ ಇರುಳಿನೀ ಕ್ಷಣಗಳಲಿ
ಮಗಳಿಗೆ ಹೇಳುವ ಕಥೆಯಲೂ ಕವಿತೆಯ ಲಯ
ಹಾಗೆಯೇ ಈ ಕವಿತೆಯಲಿ
ಮಗಳ ಸವಿನಿದ್ರೆ.

Thursday, June 20, 2019

ಕೊಡೆ ರಿಪೇರಿ


ಕಡಿದಿಟ್ಟ ಸೌದೆಗಳ ಸೂರಿನೊಳಗೆ ಸರಿದಾಗಿದೆ
ಇರುವೆಗಳು ಮೊಟ್ಟೆಗಳ ಸಮೇತ ಗೂಡು ಬದಲಾಯಿಸಿವೆ
ಜೇನುಗಳಿಗೆ ಬೇಕಾದಷ್ಟು ಮಧುಸಂಗ್ರಹ ಮುಗಿದಂತಿದೆ
ಹವಾಮಾನ ಇಲಾಖೆಯಲಿ ನಡೆದಿದೆ ಕೊನೇಕ್ಷಣದ ತಯಾರಿ
ಇನ್ನೇನು ಶುರುವಾಗಲಿರುವ ಪತ್ರಿಕಾಗೋಷ್ಠಿಯಲಿ ಘೋಷಿಸಲಾಗುತ್ತದೆ:
ಅಪ್ಪಳಿಸಿದೆ ಮುಂಗಾರು ಕರಾವಳಿಯ ತೀರ
ಇನ್ನೇನು ಬರಲಿದೆ ನಿಮ್ಮೂರಿನತ್ತ ಬೇಗ
ನೀವೀಗಲೇ ಓಡಿ ಹಿಡಿಯಿರೊಂದು ಸುರಕ್ಷಿತ ಜಾಗ

ದಟ್ಟೈಸುತ್ತಿರುವ ಮೋಡಗಳ ನೋಡುತ್ತ
ಬೆಳಗಿನಿಂದ ಒಂದೇ ಯೋಚನೆ:
ಅವ ಎತ್ತ ಹೋದ?
ಮಳೆಗಾಲದ ಶುರುಗಾಲಕೆ ಬರಬೇಕಿತ್ತಲ್ಲವೇ

ನಡುಮನೆಯ ನಾಗಂದಿಗೆಯಲಿದೆ ಆ ಕಪ್ಪು ಛತ್ರಿ
ಕತ್ತಲಲ್ಲಿ ಕತ್ತಲಾಗಿ ಇಷ್ಟುದ್ದ ಮೈಯ ಇಷ್ಟಕ್ಕೆ ಮುರುಟಿ
ಇದ್ದಲ್ಲೆ ಇದ್ದು ಮರಗಟ್ಟಿದ ಕಡ್ಡಿಯೆಲುಗುಗಳು
ಇಟ್ಟಲ್ಲೆ ಇಟ್ಟು ಲಡ್ಡಾದ ಮಾಸಲು ಬಟ್ಟೆ
ಮೂಲೆಗುಂಪಾಗಿದ್ದ ಹಿಡಿಗೈ ಬಂಟನಿಗೀಗ
ತಿಂಗಳುಗಳ ಅಜ್ಞಾತ ಮುಗಿಸುವ ಸಮಯ

ಆದರವ ಎಲ್ಲಿ ಹೋದ?
ಬಟನು ಒತ್ತಿ ಬಿಚ್ಚಿದರೆ ಕೈಗೆಟುಕುವ ಆಕಾಶ
ಕಮ್ಮನೆ ಪರಿಮಳದಲಿ ಹಳೆಯ ಮಳೆಗಾಲಗಳ ನೆನಪು
ಮಳೆಗೆಂದು ತಂದದ್ದು ಬಿಸಿಲಿಗೂ ಆದದ್ದು
ಚಂದದ ಫೋಟೋಪೋಸಿಗೂ ನೆರವಾದದ್ದು
ಮರೆತು ಬಿಟ್ಟುಹೋದ ದಿನವೇ ಮಳೆ ಬಂದದ್ದು

ಈಗ ಒಂದು ಕಡ್ಡಿ ಬಿಟ್ಟುಕೊಂಡಿದೆ
ಅವನು ಬರದೆ ವಿಧಿಯಿಲ್ಲ ಮುಂದಡಿಯಿಡಲಿಲ್ಲ
ವರುಷಕ್ಕೊಮ್ಮೆ ಬರುವವ
ಉಳಿದ ಋತುಗಳಲಿ ಏನು ಮಾಡುವ?
ವಲಸೆ ಹಕ್ಕಿಗಳಂತೆ ಮಳೆ ಬೀಳುವ ದೇಶಗಳ
ಹುಡುಕಿ ಹೊರಡುವನೆ?
ಪುಟ್ಟ ಪೆಟ್ಟಿಗೆಯ ತೂಗುತ್ತ ಬೀದಿಯಲಿ ನಡೆಯುವನೆ?
ಅಲ್ಲೂ ತನ್ನ ಏರುಕಂಠದಲಿ
ಕೊಡೆ ರಿಪೇರೀ ಎಂದು ಕೂಗುವನೆ?

ಕೇಳಬೇಕಿದೆ ಪ್ರಶ್ನೆಗಳ ಕೂರಿಸಿಕೊಂಡು
ಅವನ ಪೆಟ್ಟಿಗೆಯೊಳಗೆ ಹೇಳದ ಅದೆಷ್ಟು ಕತೆಗಳಿರಬಹುದು
ಎಂದೂ ಹೊಂದಿಸಲಾಗದ ಅದೆಷ್ಟು ಕಡ್ಡಿಗಳಿರಬಹುದು
ಸಣ್ಣ ಸುತ್ತಿಗೆ ಸಣ್ಣ ಉಳಿ ಸಣ್ಣ ಸೂಜಿ
ಎಷ್ಟು ಮಳೆಹನಿಗಳ ತಾಕಿ ಬಂದಿರಬಹುದು
ಎಷ್ಟು ಅಜ್ಜಂದಿರಿಗೆ ಊರುಗೋಲಾಗಿರಬಹುದು
ಇವನು ರಿಪೇರಿ ಮಾಡಿಕೊಟ್ಟ ಕೊಡೆಯ ಹಿಡಿ

ಒಮ್ಮೆ ಸವರಿ ನೋಡಬೇಕಿದೆ ಅವನ ಒರಟು ಕೈ
ನಿಮ್ಮ ಕಡೆ ಬಂದರೆ ದಯವಿಟ್ಟು ಕಳುಹಿಸಿಕೊಡಿ.

Tuesday, May 28, 2019

ಒದ್ದೆ ಆಸೆಗಳುಯಾಕೆ ಇತ್ತೀಚಿಗೆ ಕವಿತೆ ಬರೆದಿಲ್ಲ
ಅಂತ್ಯಾರೋ ಕೇಳಿದರು
ಅವರೋ ಭಯಂಕರ ಕಾವ್ಯಾಸಕ್ತರು
ಅಯ್ಯೋ ನನ್ನ ಕವಿತೆ ಯಾರಿಗೆ ಬೇಕು ಬಿಡಿ
ಗೆಳೆಯರೆಲ್ಲ ದೇಶ ಚುನಾವಣೆ ರಾಜಕೀಯ
ಪಕ್ಷ ಭವಿಷ್ಯ ಸೋಲು ಗೆಲುವುಗಳ ಬಗ್ಗೆ
ಅತಿ ಸೀರಿಯಸ್ಸಾಗಿ ಚರ್ಚಿಸುತ್ತಿರುವಾಗ
ನಾನು ಸಿಲ್ಲಿಯಾಗಿ ಕವನ ಬರೆಯುವುದೇ
ಎಂದು ತಪ್ಪಿಸಿಕೊಂಡೆ

ಆದರೆ ಈ ಗಾಳಿಮಳೆಗೆ ಮೇಫ್ಲವರುಗಳೆಲ್ಲ ಉದುರಿ
ಮರಗಳು ಬೋಳಾದುದನ್ನು ಯಾರಾದರೂ ಬರೆಯಬೇಕಲ್ಲ?
ಪುಟ್ಟಪೋರ ನುಣುಪು ಮಣ್ಣಿನಲ್ಲಿನ ಸಣ್ಣ ಕುಣಿಗೆ ಬೆರಳು ಹಾಕಿ
ಬೆದಕಿದಾಗ ಹೊರಬಂದ ಗುಬ್ಬಚ್ಚಿ ಹುಳುವ ನೋಡಿ ಚಕಿತನಾದುದನ್ನು?
ಗಿರಾಕಿಯಿಲ್ಲದ ಹೊತ್ತಲ್ಲಿ ಕಲ್ಲಂಗಡಿ ಹಣ್ಣಿನಂಗಡಿಯವ
ಒಂದು ಸಿಹಿಗೆಂಪು ಹೋಳನು ತಾನೇ ಚಂದ್ರಿಕೆಯೆತ್ತಿ ತಿಂದುದನು?
ಮೈಯೆಲ್ಲ ಒದ್ದೆ ಮಾಡಿಕೊಂಡಿರುವ ಮುದ್ದುಮಗಳು
ಐಸ್‌ಕ್ಯಾಂಡಿಯೊಳಗಿನ ಕಡ್ಡಿಯನ್ನು ಅದರ ಬೀಜ ಎಂದುದನು?

ಹಾಗೂ ಬರೆಯದಿದ್ದರೆ ಏನಾಗುವುದು ಮಹಾ?
ಮತ್ತೊಂದು ಮೇಗೆ ಮರ ಹೂ ಬಿಡುವುದು
ಅಮ್ಮನ 'ಹೋಂವರ್ಕ್' ಕರೆಗೆ ಹೆದರಿ ಪುಟ್ಟ ಒಳಗೋಡುವನು
ಕಲ್ಲಂಗಡಿಯ ಸೀಸನ್ನು ಮುಗಿದು ಮಾವು ಮೇಳೈಸುವುದು
'ಬೀಜವಲ್ಲ, ಅದು ಕಡ್ಡಿ' ಎಂದು ತಿಳಿಸಿ ಮಗಳ ಮುಗ್ಧತೆ ಕಳೆಯಬಹುದು

ಬರೆಯದಿದ್ದರೆ ಒಂದು ಕಾಗದ ಒಂದಿಷ್ಟು ಇಂಕು
ಇಲ್ಲವೇ ಭೂಮಿಯ ಯಾವುದೋ ಮೂಲೆಯಲ್ಲಿರುವ ಸರ್ವರಿನಲ್ಲಿ
ಒಂದಿಷ್ಟು ಸ್ಪೇಸು ಉಳಿಯಬಹುದು
ಜತೆಗೆ ನಿಮ್ಮ ಟೈಮೂ

ಆದರೂ ಒಂದು ಆಸೆ:
ಬರೆದರೆ-
ನೀವು ಬೀದಿಬದಿಯ ಆ ಮರದತ್ತ ಒಮ್ಮೆ ಕಣ್ಣು ಹಾಯಿಸಬಹುದು
ಪೋರ ತನ್ನ ಗೆಳೆಯರನೂ ಕರೆದು ವಿಸ್ಮಯವ ಹಂಚಬಹುದು
ಮಾವಿನ ಹಣ್ಣು ಕೊಳ್ಳುವಾಗ 'ನೀವು ತಿಂದ್ರಾ?' ಅಂತ
ಅಂಗಡಿಯವನನ್ನು ವಿಚಾರಿಸಬಹುದು
ನನ್ನ ಮಗಳ ನೆನೆದು ನಿಮ್ಮ ಮಗಳ ತಣ್ಣನೆ ಕೆನ್ನೆಗೆ ಮುತ್ತಿಡಬಹುದು

ಕನಿಷ್ಟ, ಸಂಜೆಮಳೆಯಲಿ ಒದ್ದೆಯಾಗಿ ಬರುವ ಇಂತಹ ಆಸೆಗಳನು
ಮತ್ಯಾರೋ ಪೊರೆಯಬಹುದು ಟವೆಲಿನಲ್ಲಿ ತಲೆಯೊರೆಸಿ.

Wednesday, May 15, 2019

ಊರಲ್ಲಿನ ಶುಭಕಾರ್ಯಗಳೂ, ತಪ್ಪಿಸಿಕೊಳ್ಳಲು ಇರುವ ನೆಪಗಳೂ

ಇನ್ನೇನು ಫೆಬ್ರವರಿ-ಮಾರ್ಚ್ ತಿಂಗಳು ಮುಗಿಯಲು ಬಂತು ಎಂದರೆ ಊರಕಡೆ ಮದುವೆ-ಉಪನಯನ ಕಾರ್ಯಕ್ರಮಗಳು ಶುರುವಾದವು ಎಂದರ್ಥ. ನೆಂಟರು, ಊರವರು, ಸ್ನೇಹಿತರು –ಹೀಗೆ ಪಟ್ಟಿಯಲ್ಲಿ ಪೆಂಡಿಂಗ್ ಇದ್ದವರೆಲ್ಲ ಒಬ್ಬೊಬ್ಬರಾಗಿ ‘ಟಿಕ್’ ಆಗುತ್ತಾ ಹೋಗುತ್ತಾರೆ. ಹೈಸ್ಕೂಲಿನಲ್ಲಿ ಬೆಂಚ್‌ಮೇಟು, ಕಾಲೇಜಿಗೆ ಒಂದೇ ಬಸ್ಸಿಗೆ ಬರುತ್ತಿದ್ದ ಪಕ್ಕದೂರಿನ ಗೆಳೆಯ, ಸೀಸನ್ನಿನಲ್ಲಿ ಬುಕ್ಕೆಹಣ್ಣು ಹೆಕ್ಕಲು ಬ್ಯಾಣಕ್ಕೆ ಜೊತೆಯಾಗುತ್ತಿದ್ದ ಓರಗೆಯವ, ಅತ್ತೆಯ ಮಗ, ಹೆಂಡತಿಯ ದೊಡ್ಡಮ್ಮನ ಮಗಳು, ನಮ್ಮ ಮದುವೆಗೆ ಬಂದಿದ್ದ – ನಾವು ಹೋಗಲೇಬೇಕಾದ ನೆಂಟರು... ಹೀಗೆ ನಾವು ತಪ್ಪಿಸಲಾಗದಷ್ಟು ಆಪ್ತರಿಗೆ ಸಂಬಂಧಿಸಿದ ಶುಭಕಾರ್ಯಗಳು ಒಂದರ ಹಿಂದೊಂದು ನಿಶ್ಚಯವಾಗತೊಡಗುತ್ತವೆ. ಉರಿಬೇಸಿಗೆಯ ಈ ದಿನಗಳಲ್ಲಿ ಚಪ್ಪರದ ಕೆಳಗೋ ಶಾಮಿಯಾನಾದ ಕೆಳಗೋ ಕಲ್ಯಾಣಮಂಟಪದಲ್ಲೋ ಶೆಖೆಗೆ ಬೆವರುತ್ತಾ, ಗಿಜಿಗಿಜಿಯಲ್ಲಿ ತೊಳಲಾಡುತ್ತಾ, ಹೊಸ ಬಟ್ಟೆ ಧರಿಸಿ ಒಬ್ಬರಿಗೊಬ್ಬರು ಢಿಕ್ಕಿ ಹೊಡೆದುಕೊಳ್ಳುತ್ತಾ, ಉಡುಗೊರೆಯ ಸಾಲಿನಲ್ಲಿ ನಿಂತು ಆಕಳಿಸುತ್ತಾ, ಫೋಟೋಗೆ ಕೃತಕ ಪೋಸು ಕೊಡುತ್ತಾ, ಊಟಕ್ಕೆ ಸರತಿಯಲ್ಲಿ ಕಾಯುತ್ತಾ, ಹಾಕಿಸಿಕೊಂಡ ಐಟೆಮ್ಮುಗಳಲ್ಲಿ ಯಾವುದು ತಿನ್ನುವುದು ಯಾವುದು ಬಿಡುವುದು ತಿಳಿಯದೇ ಒದ್ದಾಡುತ್ತಾ, ಅರ್ಧ ಊಟ ಬಾಳೆಯಲ್ಲೇ ಬಿಟ್ಟು ಕೈ ತೊಳೆದುಕೊಂಡು ಪಾನ್ ಮೆಲ್ಲುತ್ತಾ ವಾಪಸ್ ಮನೆಗೆ ಬರುವುದು.

ಚಿಕ್ಕವರಿದ್ದಾಗ-ಊರಲ್ಲಿರುವಾಗ ಇವೆಲ್ಲ ನಮಗೆ ಖುಷಿ ಕೊಡುವ ಕಾರ್ಯಗಳೇ ಆಗಿದ್ದವು.  ಶಾಲೆಯ ರಜೆಗಳು ಆಗಷ್ಟೇ ಶುರುವಾಗಿರುತ್ತಿದ್ದವು. ಅಥವಾ ಶಾಲೆ ಇದ್ದ ದಿನಗಳೇ ಆದರೆ ರಜೆ ಹಾಕಲೊಂದು ನೆಪ ಸಿಗುತ್ತಿತ್ತು. ಹೀಗಾಗಿ ಲಗ್ನ-ಉಪನಯನಗಳ ಆಹ್ವಾನ ಪತ್ರಿಕೆಗಳನ್ನು ನಾವು ಸಂತೋಷದಿಂದಲೇ ಸ್ವಾಗತಿಸುತ್ತಿದ್ದೆವು. ಈ ಸೀಸನ್ನು ಬಂತು ಎಂದರೆ ಸಾಕು, ಮನೆಯ ಟೀಪಾಯಿಯ ಮೇಲೆ ಆಹ್ವಾನ ಪತ್ರಿಕೆಗಳ ಕಟ್ಟೇ ಸಿದ್ದವಾಗುತ್ತಿತ್ತು. ಪ್ರತಿದಿನ ಒಬ್ಬರಲ್ಲಾ ಒಬ್ಬರು ಮದುವೆಗೆ ಕರೆಯಲು ಬರುವವರೇ. ಕೆಲವೊಮ್ಮೆ ಒಂದೇ ದಿನ ಎರಡ್ಮೂರು ಹೋಗಲೇಬೇಕಾದ ಕಾರ್ಯಗಳು ಇರುತ್ತಿದ್ದವು. ಆಗ ಮನೆಯ ಜನರನ್ನು ಹಂಚಲಾಗುತ್ತಿತ್ತು: ಅಜ್ಜಿ-ನಾನು ಇಂತಹ ಕಡೆ, ಅಪ್ಪ ಪಕ್ಕದೂರ ಮದುವೆಗೆ, ಅಮ್ಮ ಮತ್ತೊಂದು ನೆಂಟರ ಮನೆಯಲ್ಲಿನ ಉಪನಯನಕ್ಕೆ.

ಅದರಲ್ಲೂ ಊರಮನೆಯ ಕಾರ್ಯ ಎಂದರಂತೂ ಸಂಭ್ರಮ ತುಸು ಹೆಚ್ಚೇ. ಏಕೆಂದರೆ ನಮ್ಮ ಕಡೆಯ ಹಳ್ಳಿಗಳಲ್ಲಿ ಯಾರ ಮನೆಯಲ್ಲಾದರೂ ಶುಭಕಾರ್ಯ ಎಂದರೆ ಅದು ಬರೀ ಅವರ ಮನೆಯ ಕಾರ್ಯಕ್ರಮ ಅಲ್ಲ; ಇಡೀ ಊರೇ ಸೇರಿ ಮಾಡುವ ಕಾರ್ಯ.  ಅಂಗಳ ಹದಮಾಡಿ ಚಪ್ಪರ ಏರಿಸುವುದರಿಂದ ಶುರುಮಾಡಿ, ಮನೆಗೆ ಬಣ್ಣ-ಬೇಗಡೆ ಸಿಂಗಾರ ಮಾಡುವುದಾಗಲಿ, ಮಂಟಪ ನಿರ್ಮಿಸುವುದಾಗಲಿ, ಪಟ್ಟಿಯಲ್ಲಿನ ದಿನಸಿ-ತರಕಾರಿ ತರುವುದಾಗಲಿ, ಅಡುಗೆಗೆ ತರಕಾರಿ ಹೆಚ್ಚುವುದಾಗಲಿ, ವಟುವಿಗೋ ಮದುಮಗನಿಗೋ ಅಲಂಕಾರ ಮಾಡುವುದಾಗಲಿ, ಊಟ ಬಡಿಸುವುದಾಗಲಿ –ಎಲ್ಲದರಲ್ಲೂ ಗ್ರಾಮಸ್ಥರು ಕೈ ಜೋಡಿಸುವರು. ಕಾರ್ಯಕ್ರಮಕ್ಕೆ ವಾರವಿದೆ ಎಂದಾಗಲೇ ಊರವರು ಆ ಮನೆಗೆ ಪದೇಪದೇ ಭೇಟಿಯಿತ್ತು ಸಂಭ್ರಮವನ್ನು ಹೆಚ್ಚಿಸುವರು. ಹೀಗೆ ಭೇಟಿಯಿಡುವಾಗ ದೊಡ್ಡವರ ಜೊತೆ ನಾವು ಚಿಕ್ಕವರೂ ಹೋಗಿ ಹೊಸದಾಗಿ ಹಾಕಿದ ಚಪ್ಪರದಡಿಯಲ್ಲಿ ಕಂಬ-ಕಂಬದಾಟ ಆಡುವುದೋ ಅಥವಾ ಮತ್ಯಾವುದೋ ಕಿತಾಪತಿ ಮಾಡುವುದರ ಜೊತೆ ಶುಭಕಾರ್ಯಕ್ಕೆ ನಮ್ಮ ಸೇವೆ ಸಲ್ಲಿಸುತ್ತಿದ್ದೆವು.  ಸಾಮಾನ್ಯವಾಗಿ ನಾಂದಿಯಿಂದ ಮರುವಾರಿ-ಬೀಗರೂಟದವರೆಗೆ ಅವರ ಮನೆಯಲ್ಲೇ ಊರವರೆಲ್ಲರ ಊಟ-ತಿಂಡಿಗಳು. ಮತ್ತು ನಾವು ಹಾಗೆ ಮಾಡುವುದಕ್ಕೆ ಯಾವ ಮುಜುಗರವೂ ಇರುವುತ್ತಿರಲಿಲ್ಲ ಯಾಕೆಂದರೆ ಕರೆ ಮಾಡುವಾಗಲೇ ಯಜಮಾನರು ಹೇಳಿಯಾಗಿರುತ್ತಿತ್ತು: ‘ನಾಕ್ ದಿನ ಮನೇಲಿ ಒಲೆ ಹಚ್ಚೋಹಂಗಿಲ್ಲ ಮತ್ತೆ’ ಅಂತ.

ಆದರೆ ಇವಕ್ಕೆಲ್ಲ ಸಂಚಕಾರ ಬಿದ್ದದ್ದು ನಾನು ಊರು ಬಿಟ್ಟು ನಗರ ಸೇರಿದಮೇಲೆ. ನಗರಗಳಲ್ಲೇ ಹುಟ್ಟಿ-ಬೆಳೆದು ಇಲ್ಲೇ ಬಂಧು-ಬಳಗ ಇರುವವರಿಗೂ, ಓದಿನ ನಿಮಿತ್ತವೋ ಕೆಲಸದ ನಿಮಿತ್ತವೋ ಪರವೂರಿಗೆ ಹೋಗಿ ನೆಲೆಸಿದವರಿಗೂ ಇರುವ ದೊಡ್ಡ ವ್ಯತ್ಯಾಸಗಳಲ್ಲಿ ಇದೂ ಒಂದು. ನಗರದಲ್ಲೇ ಬಂಧು-ಬಳಗ-ಸ್ನೇಹಿತರೆಲ್ಲ ಇರುವುದಾದರೆ ಮದುವೆಯ ದಿನ ಮುಹೂರ್ತದ ಹೊತ್ತಿಗೋ ಊಟದ ಹೊತ್ತಿಗೋ ರಿಸೆಪ್ಷನ್ನಿಗೋ ಹೋಗಿ ಕೈ ಕುಲುಕಿ ಫೋಟೋ ತೆಗೆಸಿಕೊಂಡು ಉಂಡು ಬಂದುಬಿಟ್ಟರೆ ಆಯಿತು.  ಆದರೆ ಬೇರು ಮತ್ತೆಲ್ಲೋ ಇರುವ ಸಧ್ಯದ ತಾವು ಮಾತ್ರ ಇಲ್ಲಿರುವ ನಮ್ಮಂಥವರಿಗೆ ಎಲ್ಲದಕ್ಕೂ ಊರಿಗೇ ಓಡಬೇಕು. ಹಾಗೆ ಹೋಗುವುದಾದರೂ ಸುಲಭವೇ? ಕಾರ್ಯಕ್ರಮದ ಬಗೆಗಿನ ಮಾಹಿತಿ ನಮಗೆ ತಿಂಗಳುಗಟ್ಟಲೆ ಮೊದಲೇ ತಲುಪಿರಬೇಕು, ನಾವು ರಜೆ ಹೊಂದಿಸಿಕೊಂಡು, ಬಸ್ಸಿಗೋ-ಟ್ರೇನಿಗೋ ಟಿಕೆಟ್ ಕಾಯ್ದಿರಿಸಿಕೊಂಡು, ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಆ ಕಾರ್ಯಕ್ರಮಕ್ಕೆ ಹೋಗಬೇಕು. ಮತ್ತು ಕಾರ್ಯಕ್ರಮ ಮುಗಿಯುತ್ತಿದ್ದಂತೆ ಪೆಟ್ಟಿಗೆ ಕಟ್ಟಿಕೊಂಡು ವಾಪಸು ಓಡಿಬಂದು ಇಲ್ಲಿಯ ಕೆಲಸದ ನೊಗಕ್ಕೆ ಹೆಗಲು ಕೊಡಬೇಕು.

ಸಿಂಗಲ್ ಆಗಿದ್ದಾಗ ಹೇಗೋ ನಿಭಾಯಿಸಲ್ಪಡುತ್ತಿದ್ದ ಈ ಸಂಕಷ್ಟ ಮದುವೆಯಾದಮೇಲೆ ಜಾಸ್ತಿಯಾಯಿತು. ಏಕೆಂದರೆ ಮದುವೆಯ ತರುವಾಯ ನನ್ನ ಊರು-ಸ್ನೇಹ-ಬಂಧು-ಬಳಗದ ಜೊತೆ ಅವಳ ಊರು-ಸ್ನೇಹ-ಬಂಧು-ಬಳಗದವರೂ ಸೇರಿಕೊಂಡರು. ದಿನಾ ಒಂದೊಂದು ಮದುವೆ-ಕಾರ್ಯದ ಬಗ್ಗೆ ಕರೆಗಳು: “ಹೋಯ್, ಏಪ್ರಿಲ್ 22ಕ್ಕೆ. ನೀವು ಹೊರಗಡೆ ಇರೋವ್ರಿಗೆಲ್ಲಾ ಬರೋಕೆ ಅನುಕೂಲ ಆಗ್ಲಿ ಅಂತ ಭಾನುವಾರ ಇಡಿಸಿದೀವಿ ಮದುವೇನ. ತಪ್ಸೋಹಂಗೇ ಇಲ್ಲ” ಅಂತ ಎಚ್ಚರಿಸುವರು. ಇನ್ನು ಕೆಲವರು “ನಿಮ್ಮ ಮದುವೆಗೆ ನಮ್ಮನೆಯವರು ಎಲ್ಲರೂ ಬಂದಿದ್ವಿ ಗೊತ್ತಲ್ಲಾ? ಈಗ ನಮ್ ಮದುವೆಗೂ ಬರ್ಲೇಬೇಕು” ಅಂತ ನೆನಪಿಸಿ, ಇದೂ ಒಂದು ಕೊಡು-ಕೊಳ್ಳುವ ವ್ಯವಹಾರವೇನೋ ಎನಿಸುವಂತೆ ಮಾಡುವರು.  ಇವುಗಳಲ್ಲಿ ಭಾನುವಾರ-ರಜಾದಿನಗಳಂದು ಇರುವ ಶುಭಕಾರ್ಯಗಳನ್ನು ಹೇಗೋ ನಿಭಾಯಿಸಿಬಿಡಬಹುದು. ಅಥವಾ ಸೋಮವಾರವೋ ಶುಕ್ರವಾರವೋ ಇದ್ದರೂ ಒಂದು ದಿನ ರಜೆ ಹಾಕಿ ‘ಶನಿವಾರ-ಭಾನುವಾರ ಹೆಂಗಿದ್ರೂ ರಜೆ ಇದೆ, ಊರಿಗೆ ಹೋದಂಗೂ ಆಯ್ತು ಬಿಡು’ ಅಂತ ಹೊರಟುಬಿಡಬಹುದು. ಆದರೆ ವಾರದ ಮಧ್ಯದಲ್ಲಿ –ಬುಧವಾರ /ಗುರುವಾರ- ಇರುವ ಕಾರ್ಯಗಳಿಗೆ ಹೋಗುವುದಿದೆಯಲ್ಲಾ, ಅದು ಕಡುಕಷ್ಟ. ಒಂದೋ ಎರಡ್ಮೂರು ದಿನ ರಜೆ ಹಾಕಬೇಕು ಅಥವಾ ಒಂದೇ ದಿನದ ಮಟ್ಟಿಗೆ ಈ ತುದಿಯಿಂದ ಆ ತುದಿಗೆ ರಾತ್ರಿಯೆಲ್ಲ ಪಯಣಿಸಿ ಸುಸ್ತಾಗಬೇಕು. ಹಾಗಂತ ಹೊರಗಡೆ ಇರುವ ನಮಗಾಗಿ ಅವರು ಮುಹೂರ್ತ ಬದಲಿಸಲು ಆಗುವುದೇ? ಅವರಾದರೂ ಗತ್ಯಂತರವಿಲ್ಲದೇ ಪುರೋಹಿತರು ನಿಶ್ಚಯಿಸಿದ ದಿನಕ್ಕೆ ಮೊರೆಹೋದವರು.

ಹೇಗೆ ಹೊಂದಿಸಿಕೊಂಡರೂ ಕೆಲವೊಂದು ಶುಭಕಾರ್ಯಗಳಿಗೆ ಹೋಗಲಾಗುವುದೇ ಇಲ್ಲ. ಆಗ ಸುಳ್ಳಿನ ಮೊರೆಹೋಗುವುದು ಅನಿವಾರ್ಯವಾಗುತ್ತದೆ.  ‘ನೂರು ಸುಳ್ಳು ಹೇಳಿ ಒಂದು ಮದುವೆ ಮಾಡಿಸು’ ಎಂಬುದು ಹಳೆಯ ಗಾಧೆ; ‘ಮದುವೆಗೆ ಹೋಗಲಾಗದಿದ್ದುದಕೆ ನೂರು ಸುಳ್ಳಾದರೂ ಹೇಳಿ ತಪ್ಪಿಸಿಕೋ’ ಎಂಬುದು ಹೊಸ ಗಾಧೆ. “ಆಫೀಸಲ್ಲಿ ಸಿಕ್ಕಾಪಟ್ಟೆ ಕೆಲಸ ಮಾರಾಯಾ.. ರಜೆ ಕೇಳಿದ್ರೆ ಕೊಡೋದೇ ಇಲ್ಲ ಅಂದ್ರು” ಅಂತಲೋ, “ಬಸ್ಸು-ಟ್ರೇನು ಎಲ್ಲಾದ್ರಲ್ಲೂ ನೋಡಿದೆ ಕಣೋ, ಒಂದೇ ಒಂದು ಸೀಟು ಖಾಲಿ ಇಲ್ಲ” ಅಂತಲೋ, “ಇಯರೆಂಡ್ ಅಲ್ಲದೇ ಹೋಗಿದ್ರೆ ನಿನ್ ಮದುವೆಗೆ ಬರದೇ ಇರ್ತಿದ್ನಾ? ಪ್ರಾಜೆಕ್ಟ್ ಕಂಪ್ಲೀಟ್ ಮಾಡ್ಲೇಬೇಕು, ಅನಿವಾರ್ಯ” ಅಂತಲೋ, “ನಾಲ್ಕು ದಿನದಿಂದ ಹೊಟ್ಟೆನೋವು.  ಡಾಕ್ಟರು ಟ್ರಾವೆಲ್ ಮಾಡ್ಬೇಡಿ, ರೆಸ್ಟ್ ಮಾಡಿ ಅಂತ ಹೇಳಿದಾರೆ” ಅಂತಲೋ ಬಾಯಿಗೆ ಬಂದ ಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಕು. ಮತ್ತು ಇಲ್ಲಿ ಸತ್ಯಕ್ಕೂ ಸುಳ್ಳಿಗೂ ಹೆಚ್ಚಿಗೆ ವ್ಯತ್ಯಾಸವಿಲ್ಲ: ಏಕೆಂದರೆ ನಾವು ಸತ್ಯವನ್ನೇ ಹೇಳಿದರೂ ಆ ಕಡೆಯವರು ನಾವು ಸುಳ್ಳು ಹೇಳುತ್ತಿದ್ದೇವೆ ಅಂತಲೇ ಅಂದುಕೊಳ್ಳುತ್ತಾರೆ!

ಮದುವೆಯಾದಮೇಲೆ ಹೋಗಬೇಕಾದ ಶುಭಕಾರ್ಯಗಳ ಪಟ್ಟಿ ದೊಡ್ಡದಾದರೂ ಕೊಡಲು ನೆಪಗಳೂ ಜಾಸ್ತಿ ಸಿಗತೊಡಗಿದವು. “ಇವ್ಳಿಗೆ ‘ರಜದ ದಿನಗಳು’ ಮಾರಾಯಾ.. ದೇವಸ್ಥಾನದಲ್ಲಿ ಇಟ್ಕೊಂಡಿದೀರ ಕಾರ್ಯಕ್ರಮ, ಹೆಂಗೆ ಬರಕ್ಕಾಗತ್ತೆ?” ಎಂದರೆ ಎಂತವರಾದರೂ ‘ಛೇಛೇ’ ಅಂತ ತಲೆದೂಗುವರು.  ಅಲ್ಲದೇ ನನ್ನ ಹೆಂಡತಿಯೂ ಕೆಲಸಕ್ಕೆ ಹೋಗುವವಳಾದ್ದರಿಂದ, “ನನಗೆ ಆಫೀಸಲ್ಲಿ ರಜೆ ಕೊಟ್ರು, ಆದ್ರೆ ಇವ್ಳಿಗೆ ಸಿಗ್ಲೇ ಇಲ್ಲ. ಇವಳನ್ನ ಒಬ್ಬಳನ್ನೇ ಮನೇಲಿ ಬಿಟ್ಟು ಬರಕ್ಕೆ ಆಗಲ್ಲ ನೋಡು, ಅದಕ್ಕಾಗಿ ಇದೊಂದ್ಸಲ ಎಕ್ಸ್‌ಕ್ಯೂಸ್ ಕೊಡಿ” ಅಂತ ಹೇಳಿ ತಪ್ಪಿಸಿಕೊಳ್ಳಬಹುದು.

ಮಗಳು ಹುಟ್ಟಿದಮೇಲೆ ಶುಭಕಾರ್ಯಗಳನ್ನು ತಪ್ಪಿಸಿಕೊಳ್ಳಲು ಇನ್ನಷ್ಟು ನೆಪಗಳು ಸಿಕ್ಕವು.  “ನಾನು-ಹೆಂಡತಿ ಇಬ್ರೂ ಆಫೀಸಿಗೆ ರಜೆ ಹಾಕಿದ್ವಿ.  ಆದರೆ ಮಗಳಿಗೆ ಹುಷಾರಿಲ್ಲ. ಅಷ್ಟು ದೂರ ಪ್ರಯಾಣ ಮಾಡೋದು ಕಷ್ಟ” ಎಂದರೆ, “ಹೌದು ಹೌದು, ಸಣ್ಣ ಮಕ್ಕಳನ್ನ ಕರ್ಕೊಂಡು ಈ ಬೇಸಿಗೆಯಲ್ಲಿ ಓಡಾಡೋದು ಸುಲಭ ಅಲ್ಲ” ಅಂತ ಅವರೂ ಒಪ್ಪಿಕೊಳ್ಳುವರು.  ಅದು ಸತ್ಯವೂ ಆಗಿತ್ತು.  ಏಕೆಂದರೆ ಈ ಸೀಸನ್ನಿನಲ್ಲಿ ತಿಂಗಳಿಗೆ ನಾಲ್ಕರಂತೆ ಇರುವ ಮದುವೆಗಳಿಗೆ ನಾವು ಪ್ರತಿವಾರ ಇಲ್ಲಿಂದ ಮಗುವನ್ನು ಕರೆದುಕೊಂಡು ಹೋಗುವುದು ಬಹಳ ದುಸ್ತರದ ಸಾಹಸ. ಮಗುವಿಗೆ ಹಿಂಸೆ ಕೊಡುತ್ತಿದ್ದೀವೇನೋ ಅನ್ನಿಸುವುದು. ಅಲ್ಲದೇ ಹಾಗೆ ವಾರಕ್ಕೊಮ್ಮೆ ನೀರು-ಹವಾಮಾನ ಬದಲಾಗುತ್ತಿದ್ದರೆ ಮಗು ಖಾಯಿಲೆ ಬೀಳುವ ಸಂದರ್ಭ ಸಹ ಜಾಸ್ತಿ.  ಹೀಗಾಗಿ ಮಗುವಿನ ಕಾರಣವೊಡ್ಡಿ ನಾವು ಬರಲಾಗುವುದಿಲ್ಲವೆಂದರೆ ಯಾರೂ ಅಷ್ಟಾಗಿ ಆಕ್ಷೇಪಿಸುವುದಿಲ್ಲ. ಇನ್ನು ಬಹುಶಃ ಮಗಳು ಶಾಲೆಗೆ ಹೋಗಲು ಶುರುಮಾಡಿದರೆ, ‘ಮಗಳಿಗೆ ಸ್ಕೂಲ್ ಇರೋದ್ರಿಂದ ಬರಕ್ಕಾಗಲ್ಲ’ ಎನ್ನುವ ಕಾರಣವೂ ನೆಪಗಳ ಪಟ್ಟಿಗೆ ಸೇರ್ಪಡೆಯಾಗುವುದು.  ಆಗ ಶುಭಕಾರ್ಯಗಳಿಗೆ ಹೋಗಬೇಕೆಂದರೆ ಎಷ್ಟು ಕಷ್ಟ ನೋಡಿ: ನನ್ನ ಆಫೀಸಿನ ರಜೆ, ಹೆಂಡತಿಯ ಆಫೀಸಿನ ರಜೆ, ಹೆಂಡತಿಯ ತಿಂಗಳ ರಜೆ, ಮಗಳ ಶಾಲೆಯ ರಜೆ –ಹೀಗೆ ನಾವು ಹೊಂದಿಸಿಕೊಳ್ಳಲು ಸಾಕಷ್ಟು ಸಂಗತಿಗಳು, ಕೊಡಲು ಅವುಗಳಲ್ಲೇ ನೆಪಗಳೂ ವಿಫುಲವಾಗಿ ದೊರೆಯುತ್ತದೆ.

ಹಾಗಂತ ನಮಗೆ ನೆಂಟರಿಷ್ಟರ ಮದುವೆ-ಮುಂಜಿಗಳಿಗೆ ಹೋಗುವುದು ಇಷ್ಟವಿಲ್ಲವೆಂದಲ್ಲ. ಈ ನೆಪದಲ್ಲಿ ಅಪ್ಪ-ಅಮ್ಮರನ್ನು ನೋಡಬಹುದು, ಹಳೆಯ ಗೆಳೆಯರು ಸಿಗುವರು, ನೆಂಟರೆಲ್ಲ ಒಟ್ಟಿಗೇ ಸಿಗುವರು, ಒಳ್ಳೆಯ ಊಟ, ಸಂಭ್ರಮ, ನಗರದ ಝಂಜಡಗಳಿಂದ ಒಂದೆರಡು ದಿನ ಮುಕ್ತಿ... ಎಲ್ಲಾ ಸರಿ.  ಆದರೆ ಈ ಕಾರ್ಯಗಳಿಗೆ ನಾವು ಇಲ್ಲಿಂದ ಬಿಡುವು ಮಾಡಿಕೊಂಡು ಹೋಗಿ-ಬರುವುದೇ ದೊಡ್ಡ ಸಾಹಸ.  ಬಾಸ್ ಬಳಿ ರಜೆ ಕೇಳಿ ಪಡೆಯುವುದು, ಹೋಗುವ-ಬರುವ ಟಿಕೆಟ್ ಬುಕ್ ಮಾಡಿಕೊಳ್ಳುವುದು, ಕಾರಿನಲ್ಲಾದರೆ ಅಷ್ಟು ದೂರ ಡ್ರೈವ್ ಮಾಡುವುದು, ಸಾವಿರಾರು ರೂಪಾಯಿ ಖರ್ಚು ಮಾಡುವುದು ಹಾಗೂ ಅಲ್ಲಿ ಅಷ್ಟೆಲ್ಲ ಸಂಭ್ರಮ ಪಟ್ಟುಕೊಂಡು ವಾಪಸು ಬಂದು ಇಲ್ಲಿ ಮತ್ತೆ ಅದೇ ಕೆಲಸಕ್ಕೆ ಓಡುವುದು –ಇವೆಲ್ಲಾ ಭಯಂಕರ ಪ್ರಯಾಸದ ಸಂಗತಿಗಳಾಗಿ ಕಾಣುತ್ತವೆ. ಪದೇಪದೇ ರಜೆ ಕೇಳಿದ್ದಕ್ಕೆ ಬಾಸ್ ಬೈದರು: “ಮೊನ್ನೆಯಷ್ಟೇ ದೊಡ್ಡಮ್ಮನ ಮನೇಲಿ ಮದುವೆ ಅಂತ ಹೇಳ್ದೆ, ಈಗ ಮತ್ತೆ ಅದನ್ನೇ ಹೇಳ್ತಿದೀಯಲ್ಲಯ್ಯಾ?” ಅಂತ.  “ನನಗೆ ಮೂವರು ದೊಡ್ಡಮ್ಮಂದಿರು ಇದಾರೆ ಸಾರ್” ಅಂತ ಹೇಳಿ ತಪ್ಪಿಸಿಕೊಂಡೆ.   ಇತ್ತೀಚಿಗೆ ಮದುವೆಗೆ ಕರೆಯಲು ಬಂದ ಗೆಳೆಯನಿಗೆ ಹೇಳಿದೆ: “ನೀವು ಹುಡುಗ-ಹುಡುಗಿ ಇಬ್ರೂ ಬೆಂಗಳೂರಲ್ಲೇ ಇರೋದು. ಇಲ್ಲೇ ಮದುವೆ ಇಟ್ಕೋಬಹುದಿತ್ತಪ್ಪ” ಅಂತ. ಅದಕ್ಕೆ ಅವನು, “ನೆಂಟರಿಷ್ಟರೆಲ್ಲ ಊರಲ್ಲೇ ಇರೋದಲ್ವಾ ಮಾರಾಯಾ.. ಅಲ್ದೇ ಇಲ್ಲಿ ಛತ್ರಕ್ಕೆ ಕೊಡುವ ಬಾಡಿಗೆಯ ಹಣದಲ್ಲಿ ಊರಲ್ಲಿ ಮದುವೆಯೇ ಆಗುತ್ತೆ.  ನೋಡು, ನೀನು ಸ್ಪಾನ್ಸರ್ ಮಾಡೋಹಂಗಿದ್ರೆ ಇಲ್ಲೊಂದು ರಿಸೆಪ್ಷನ್ ಇಟ್ಕೋತೀನಿ” ಅಂದು ನಕ್ಕ.  ಇವನಿಗೆ ಸ್ಪಾನ್ಸರ್ ಮಾಡಲು ಬೇಕಾಗುವ ಹಣದಲ್ಲಿ ನಾನು ಊರಲ್ಲಿ ನಡೆಯೋ ನಾಲ್ಕು ಮದುವೆಗೆ ಹೋಗಿ ಬರಬಹುದು ಅಂದುಕೊಂಡೆ.

ನನ್ನ ಮದುವೆಯ ಸಂದರ್ಭದಲ್ಲಿ ನನ್ನ ಅತ್ತೆ-ಮಾವಂದಿರ ಆರೇಳು ಮಕ್ಕಳು ಮದುವೆಗೆ ಒಂದು ವಾರ ಮೊದಲೇ ನಮ್ಮ ಮನೆಗೆ ಬಂದು ಮದುವೆಯ ಎಲ್ಲ ಕೆಲಸ-ಕಾರ್ಯಗಳಲ್ಲಿ ನೆರವಾಗಿದ್ದರು. ಅವರಲ್ಲಿ ಹುಡುಗಿಯರೇ ಜಾಸ್ತಿಯಿದ್ದು, ಹೊಸ ಬಟ್ಟೆ ಧರಿಸಿ ಅತ್ತಿತ್ತ ಸರಭರ ಓಡಾಡುತ್ತಾ ಸಂಭ್ರಮ ಹೆಚ್ಚಿಸಿದ್ದರು.  ಮದುವೆಯಾದಮೇಲೆ ನಾವು ಅವರನ್ನೆಲ್ಲಾ ಮನಸಾ ಹೊಗಳಿದೆವು: “ನೀವೆಲ್ಲಾ ಮುಂಚೆಯೇ ಬಂದು ಸುಮಾರು ಕೆಲಸ ವಹಿಸ್ಕೊಂಡ್ರಿ.. ಅದು ನಮ್ಗೆ ತುಂಬಾ ಸಹಾಯ ಆಯ್ತು” ಅಂತ.  ಅದಕ್ಕೆ ಅವರೆಲ್ಲಾ ಒಕ್ಕೊರಲಿನಿಂದ ಹೇಳಿದ್ದೊಂದೇ: “ಅಯ್ಯೋ ಅದಕ್ಕೇನು, ನಮ್ಮ ಮದುವೆಯಲ್ಲಿ ನೀವೂ ಒಂದು ವಾರ ಮುಂಚೆ ಬಂದು ನಮ್ಮ ಅಪ್ಪ-ಅಮ್ಮಂಗೆ ಹೆಲ್ಪ್ ಮಾಡ್ಕೊಟ್ರೆ ಆಯ್ತು” ಅಂತ. ನಾನು ದಿಗಿಲಿಗೆ ಬಿದ್ದೆ: ಇವರೇನೋ ಎಲ್ಲರೂ ಸೇರಿ ನನ್ನ ಮದುವೆಗೆ ಅಂತ ಒಂದು ವಾರ ಈ ಕಡೆ ಇದ್ದರು.  ಈಗ ನಾನು ಇವರೆಲ್ಲರ ಮದುವೆಗೂ ವಾರ ಮೊದಲೇ ಹೋಗಬೇಕು ಅಂತಾದ್ರೆ, ಆರು ಇಂಟೂ ಏಳು = ನಲವತ್ತೆರಡು ದಿನ ರಜೆ ಹಾಕ್ಬೇಕಲ್ಲಾ ಆಫೀಸಿಗೆ! ನನ್ ಗತಿ ಏನು? ನನ್ನ ತಲೆಬಿಸಿ ಅರ್ಥ ಆದವರಂತೆ ಆ ತರಲೆಗಳು, “ಭಾವಯ್ಯಾ, ನೀನು ಈಗಿನಿಂದ್ಲೇ ಮಾನಸಿಕವಾಗಿ ತಯಾರಾಗು” ಅಂತ ಕಿಚಾಯಿಸಿ ನಕ್ಕಿದ್ದರು.

ಈಗ ಆ ಹುಡುಗ-ಹುಡುಗಿಯರ ಮದುವೆಗಳು ಒಂದೊಂದಾಗಿ ಶುರುವಾಗಿವೆ. “ಭಾವಯ್ಯಾ, ನೆನಪಿದೆಯಲ್ಲಾ? ನಿನ್ ಮದುವೆಗೆ ನಾವು ಒಂದು ವಾರ ಮುಂಚೇನೇ ಬಂದಿದ್ವಿ. ನೀವು ನಾಲ್ಕು ದಿನ ಮೊದಲಾದ್ರೂ ಬರ್ಬೇಕು” ಅಂತ ಫೋನ್ ಮಾಡಿ ಎಚ್ಚರಿಸ್ತಿದ್ದಾರೆ. ನನಗೆ ಈಗಲೇ ಯೋಚನೆ ಶುರುವಾಗಿದೆ. ಇವರ ಮದುವೆಗಳಿಗೆ ಹೋಗಲು ತೆಗೆದುಕೊಳ್ಳಬೇಕಾದ ರಜೆಗಳು, ಅದಕ್ಕೆ ಮಾಡಿಕೊಳ್ಳಬೇಕಾದ ತಯಾರಿ, ಉಡುಗೊರೆ ಕೊಡಲು ಕೊಳ್ಳಬೇಕಾದ ವಸ್ತುಗಳು, ನಮಗೆ ಕೊಳ್ಳಬೇಕಾದ ಹೊಸ ಬಟ್ಟೆ, ಜೊತೆಗಿರುವ ಮಗಳಿಗೆ ಬೇಕಾದ ತುರ್ತು ಔಷಧಿಗಳು, ಅಕಸ್ಮಾತ್ ಏನಾದರೂ ತೊಂದರೆಯಾಗಿ ಯಾವುದಾದರೂ ಕಾರ್ಯಕ್ಕೆ ಹೋಗಲಾಗದಿದ್ದರೆ ಅದಕ್ಕೆ ಕೊಡಬಹುದಾದ ನೆಪಗಳು...

“ಎಂಗೇಜ್‌ಮೆಂಟಿಗೆ ಏನೋ ಸುಳ್ಳು ಹೇಳಿ ತಪ್ಪಿಸಿದಹಾಗೆ ಮದುವೆಗೂ ತಪ್ಪಿಸಿದ್ರೆ ಆಮೇಲೆ ನಿನ್ನ ಮಾತೇ ಆಡ್ಸಲ್ಲ ನೋಡು” ಅಂತ ಮೊನ್ನೆ ಗೆಳೆಯನೊಬ್ಬ ಆಹ್ವಾನ ಪತ್ರಿಕೆಯೊಂದಿಗೆ ಬೆದರಿಕೆಯನ್ನೂ ಇಟ್ಟು ಹೋಗಿದ್ದಾನೆ. ಆದರೆ ಅವನ ಮದುವೆಯ ದಿನವೇ ನನ್ನ ಅತಿ ಹತ್ತಿರದ ನೆಂಟರು ಕಟ್ಟಿಸಿರುವ ಹೊಸ ಮನೆಯ ಪ್ರವೇಶ ಕಾರ್ಯವೂ ನಿಶ್ಚಯವಾಗಿದೆ. ಈಗ ಯಾರಾದರೂ ಒಬ್ಬರಿಗೆ ನೆಪ ಹೇಳಲೇಬೇಕು. ಏನು ಹೇಳುವುದಪ್ಪಾ ಅಂತ ತಲೆ ಕೆರೆದುಕೊಂಡು ಕುಳಿತಿದ್ದಾಗಲೇ ಹೆಂಡತಿ ಕರೆದು, “ರೀ, ನನ್ನ ಅತ್ತಿಗೆ ಫೋನ್ ಮಾಡಿದ್ರು. ಅವರ ಮಗನ ಚೌಲವೂ ಮೂವತ್ತನೇ ತಾರೀಖೇ ಅಂತೆ. ಏನ್ ಮಾಡೋದು ಈಗ?” ಅಂದಳು.  “ಒಂದೇ ದಿನ ಮೂರ್ಮೂರ್ ಕಡೆ ಹ್ಯಾಗೇ ಮ್ಯಾನೇಜ್ ಮಾಡೋದು? ಕನಿಷ್ಟ ಈ ಶುಭಕಾರ್ಯಗಳ ಸೀಸನ್ನಲ್ಲಾದ್ರೂ ನಮಗೆ ಅವತಾರಗಳನ್ನು ಎತ್ತಲು ಬರೋ ಹಾಗಿರ್ಬೇಕಿತ್ತು ನೋಡು.  ಒಂದೊಂದು ಅವತಾರವನ್ನ ಒಂದೊಂದು ದಿಕ್ಕಿಗೆ ಕಳಿಸಿ ಎಲ್ಲಾ ಕಡೆ ಉಂಡು ಬರಬಹುದಿತ್ತು” ಎಂದೆ. ನನ್ನ ಸಿಲ್ಲಿ ಜೋಕಿಗೆ ನಗುವ ಗೋಜಿಗೆ ಹೋಗದೇ ಅವಳು ಅತ್ತಿಗೆ ಮಗನ ಚೌಲಕ್ಕೆ ಹೊಸ ಸೀರೆ ಆರ್ಡರ್ ಮಾಡಲು ಮೊಬೈಲ್ ಕೈಗೆತ್ತಿಕೊಂಡಳು. ಕಾರ್ಡ್ ನಂಬರ್ ಕೊಡಲು ನಾನು ಪೆಚ್ಚುಮೋರೆಯೊಂದಿಗೆ ತಯಾರಾದೆ.

[ತರಂಗ ಯುಗಾದಿ ವಿಶೇಷಾಂಕ - 2019ರಲ್ಲಿ ಪ್ರಕಟಿತ]

Saturday, April 13, 2019

ಹಿಟ್

ಹಿಟ್ ಹೊಡೆದುಬಿಡಬಹುದು
ಅದಕೆಷ್ಟು ಹೊತ್ತು?
ಇಲ್ಲೇ ರೂಮಿನ ಕಪಾಟಿನ ಬಾಗಿಲು ತೆಗೆದು
ಕೈ ಹಾಕಿ ಸ್ವಲ್ಪ ತಡಕಾಡಿದರೆ ಸಿಗುವುದು
ಕೆಂಪು ಬಾಟಲಿ ಬಾಂಬಿನ ಹಾಗೆ
ಅದಕೊಂದು ಊದ್ದ ಕಡ್ಡಿಮೂತಿ-
ಆನೆಯ ಸೊಂಡಿಲಿನ ಹಾಗೆ
ಒಮ್ಮೆ ಕುಲುಕಿ ಮನಸಲ್ಲೆ ಹೇಷಾರವಗೈದು
ಗಂಡು ಮೆಟ್ಟಿದ ನಾಡಲ್ಲಿ ನಡೆವವನಂತೆ ಠೇಂಕರಿಸಿ
ಠೀವಿಯಲ್ಲಿ ಕತ್ತಲ ಕೋಣೆಯ ಕತ್ತಲೆ ಮೂಲೆಗೆ ಸರಿದು

ಅಕೋ ಅಲ್ಲೇ ಇದೆ ಸಿಂಕಿನ ಕಟ್ಟೆಮೇಲೆ
ಮೀಸೆಯನ್ನತ್ತಿತ್ತ ಆಡಿಸುತ್ತ
ಎತ್ತ ಹೋಗಬೇಕೆಂದು ತಿಳಿಯದೆ ಮಿಸುಕಾಡುತ್ತ
ಆರೂ ಕಾಲುಗಳನೂರಿ ಮೇಲೆಕೆಳಗೆ ನೋಡುತ್ತ
ಒಂದು ದಷ್ಟಪುಷ್ಟ ಜಿರಲೆ
ರೆಕ್ಕೆ ಬಿಚ್ಚಿದರೆ ಹಾರಿಬಿಡಬಹುದು ತಿಳಿಯದ ಗಮ್ಯಕ್ಕೆ
ಗುರಿ ತಪ್ಪಿದರೆ ಬೀಳಲೂಬಹುದು
ಬಾಂಬು ಹಿಡಿದವನ ಮೈಮೇಲೇ
ಬಂದ ಉದ್ಧೇಶವನೇ ಮರೆತು ಗಲಿಬಿಲಿಯಲ್ಲಿ

ಹಿಟ್ ಹೊಡೆದುಬಿಡಬಹುದು
ಅದಕೇನು ಅರ್ಜುನಗುರಿ ಬೇಕಿಲ್ಲ
ಬಾಗಿಸಬಹುದು ಸೊಂಡಿಲನ್ನು ಬೇಕಾದತ್ತ
ಫಳಫಳ ಹೊಳೆವ ಮೈಯ ಕೀಟದತ್ತ ತಿರುಗಿಸಿ ಮೂತಿ
ಒಮ್ಮೆ ಚಶ್ಶ್ ಎನಿಸಿದರೆ ಆಯಿತು

ಶತ್ರು ನೆಲಕೆ ಬಿದ್ದು ಅಂಗಾತ
ಆರೂ ಕಾಲೂ ಮೇಲೆ ಮಾಡಿ ಬಡಿಯುತ
ವಿಲವಿಲ ಒದ್ದಾಡಿ ನಾಕು ಚಣ
ಆಮೇಲೆ ಎಲ್ಲಾ ನಿಶ್ಚೇಶ್ಟ
ಬೇಕಿದ್ದರೆ, ಮೌನವೇ ತುಂಬಿರುವ ಈ ನಡುರಾತ್ರಿ-
ಯಲಿ ಇನ್ನಷ್ಟು ಮೌನ: ಆತ್ಮಕೆ ಶಾಂತಿ ಸಿಗಲೆಂದು

ಹಿಟ್ ಹೊಡೆದುಬಿಡಬಹುದಿತ್ತು
ಹೆಂಡತಿ ಮನೆಯಲ್ಲಿಲ್ಲದ ಈ ನಟ್ಟಿರುಳು
ಹೀಗ ಸಿಂಕಿನ ಕಿಂಡಿಯಿಂದ ಸುಮ್ಮನೆ ಹೊರಬಂದು,
ನೀರು ಕುಡಿಯಲೆಂದು ಅಡುಗೆಮನೆಗೆ ಬಂದ ನನಗೆ
ಸಿಕ್ಕಿಬೀಳಬೇಕೆಂದು ಅದರ ಹಣೆಯಲ್ಲಿ
ಬರೆದಿದ್ದರೆ ಯಾರು ತಪ್ಪಿಸಲು ಸಾಧ್ಯ?
ಅವಳು ಇದ್ದಿದ್ದರೆ ಇದನ್ನವಳು ನೋಡಿದ್ದರೆ
ಕಿಟಾರನೆ ಕಿರುಚಿಕೊಂಡು ನಾನೋಡಿಬಂದು
ಕ್ಷಣಾರ್ಧದಲಿದನು ಕೊಂದು ಪೊರಕೆಯಲ್ಲೊತ್ತಿ
ಹೆಣ ಸಾಗಿಸಿ ದಫನು ಮಾಡಿ

ಆದರೀಗ ಅವಳು ಊರಿಗೆ ಹೋಗಿದ್ದಾಳೆ
ಜಿರಲೆ ದೈನೇತಿ ಭಾವದಿಂದ ನನ್ನನೇ ನೋಡುತಿದೆ
ಅದರ ನೋವು ನಲಿವು ಹಸಿವು ಕನಸು-
ಗಳೆಲ್ಲ ನನ್ನ ಕೈಲಿದೆ
ಕಪಾಟಿನೊಳಗೆ ದಾಸ್ತಾನಿದೆ ಕನಿಕರದರ್ಥ ಸಹ
ತಿಳಿದಿರದ ಕಾರ್ಕೋಟಕ ವಿಷ
ಕತ್ತಲೆಯಲ್ಲಿ ಸರಿಯುತಿದೆ ರಾತ್ರಿ-
ತನಗೆ ಮಾತ್ರ ತಿಳಿದಿರುವ ಪಥದಲ್ಲಿ
ಜಗ ಮಲಗಿದೆ-
ಎಂದೂ ಆಗಬಹುದಾದ ಪ್ರಳಯದರಿವಿರದೆ.

Monday, February 11, 2019

ಸಾಲು ಬಿಟ್ಟು

ಇರುವೆ ನಿದ್ರಿಸುವುದನ್ನು ನೋಡಿಯೇ ಇಲ್ಲ
ಅದು ಸದಾ ನಡೆಯುತ್ತಲೇ ಇರುತ್ತದೆ ಭೂಮಿಯನ್ನೇ ಸುತ್ತವಂತೆ
ಕೆಲವೊಂದು ದೀರ್ಘಾಯಸ್ಸು ಪಡೆದ ಇರುವೆಗಳು
ಸುತ್ತಿ ಮುಗಿಸಿರಲೂಬಹುದು, ಯಾರಿಗೆ ಗೊತ್ತು?
ಇರುವೆಯ ನಡೆಯೆಡೆ ಗಮನ ಹರಿಸಲು ಯಾರಿಗೂ ಪುರುಸೊತ್ತಿಲ್ಲ

ಒಮ್ಮೆ ಪುಸ್ಸಿ ಕ್ಯಾಟಿಗೆ ಎಲ್ಲಿಗೆ ಹೋಗಿದ್ದೆ ಅಂತ ಕೇಳಿದರೆ
ಲಂಡನ್ ಮಹಾರಾಣಿಯನ್ನು ನೋಡಲು ಹೋಗಿದ್ದೆ ಎಂದಿತ್ತಂತೆ
ಬೆಕ್ಕಿಗೆ ಇರುವಷ್ಟು ಅಹಂಕಾರ ಇರುವೆಗಿಲ್ಲ
ನಿರ್ಭಾರ ಶರೀರೆಗೆ ತಾನಾಯಿತು ತನ್ನ ಹೊಟ್ಟೆಪಾಡಾಯಿತು
ಇಷ್ಟಗಲ ಮೂತಿ ಮುಚ್ಚುವಂತೆ ಆಹಾರ ಹೊತ್ತು
ಸಾಲುಗಟ್ಟಿ ಹೊರಟರಾಯಿತು ಪ್ರಭಾತ್‌ಫೇರಿ
ಎದುರು ಸಿಕ್ಕವರೆಲ್ಲ ಮುತ್ತಿಕ್ಕಿದರೂ ರೋಮಾಂಚವಿಲ್ಲ
ಕ್ಷಣ ನಿಂತು ಆಲೋಚಿಸುವ ವಿವೇಚನೆಯಿಲ್ಲ
ತರಾತುರಿಯೇ ಹುಟ್ಟುಗುಣವೆಂಬಂತೆ
ಕಾಯಕವೇ ಕೈಲಾಸವೆಂಬಂತೆ
ನಡೆಯುವವು ಒಂದೇ ಸಮನೆ ನೇರ

ಆದರಿಲ್ಲೊಂದು ಇರುವೆ ಸಾಲಿನಿಂದ ಬೇರ್ಪಟ್ಟಿದೆ
ಹೆಜ್ಜೆ ತಪ್ಪಿತೋ ಕಣ್ಣು ಮಂಜಾಯಿತೋ
ರೊಟೀನು ಬೇಜಾರಾಯಿತೋ ಮನಸು ಬದಲಾಯಿತೋ
ಸವೆದ ಹಾದಿ ಬಿಟ್ಟು ಹೊಸ ಹಾದಿ ಹುಡುಕಲು ಬಯಸಿತೋ-
ಗೋಡೆಯ ಮೇಲೀಗ ಅದೋ ಏಕಾಂಗಿ ಸಂಚಾರಿ
ಒಂಟಿ ಇರುವೆಯಷ್ಟು ಕ್ಯೂಟು ಜೀವಿ ಮತ್ತೊಂದಿಲ್ಲ
ದಿಕ್ಕೆಟ್ಟ ಶಕುಂತಲೆಯ ದುಃಖ ಪ್ರತಿ ಬಳುಕಲ್ಲೂ ಸ್ಪಷ್ಟ
ಮರಳಿ ಸಾಲು ಸೇರಿಕೊಳ್ಳುವವರೆಗೆ ಯಾರಿಗಿದೆ ಸಮಾಧಾನ?

ತಿಂಗಳ ಲೆಕ್ಕಾಚಾರ ಹೇಳುವ ಗೂಗಲ್ ನಕ್ಷೆ
ನಾನು ಇನ್ನು ಇಷ್ಟು ಮೈಲಿ ನಡೆದರೆ
ಚಂದ್ರನನ್ನೇ ಮುಟ್ಟಬಹುದು ಅಂತ ತೋರಿಸುತ್ತಿದೆ...
ಗುರುತರ ಜವಾಬ್ದಾರಿಗಳನೆಲ್ಲ ಬದಿಗಿಟ್ಟು
ಇರುವ ಕೆಲಸಗಳನೆಲ್ಲ ಮರೆತವನಂತೆ
ಈ ಒಂಟಿ ಇರುವೆಯ ಹಿಂದೆ ಬಿದ್ದಿದ್ದೇನೆ ಬೆಳಗಿನಿಂದ
ಹೀಗೇ ಹೋಗುತ್ತಿದ್ದರೆ ಬರುವ ಹುಣ್ಣಿಮೆಯೊಳಗೆ
ತಲುಪಬಹುದೇನೋ ಚಂದ್ರನನ್ನು.